ನೀರೆದೆಯಲ್ಲೊಂದು ಸುಳಿ

ಅಲ್ಲೇನೋ ಒಂದು ಕಾಣಿಸಿತು
ನೋಡಿದೆ ಮತ್ತೆ ನೋಡಿದೆ
ಕಾಲುಗಳು ಓಡುತ್ತಿದ್ದವು
ರೋಮಗಳು ನಡಗುತ್ತಿದ್ದವು
ನೋಡಿದೆ ಮತ್ತೆ ಮತ್ತೆ ಕಾಣುತ್ತಲೇ ಇತ್ತು
ಗಾಳಿಯ ಮೈಲಿ ಭೀಕರ ಬಿರುಗಾಳಿ
ನೀರಿನ ಎದೆಯಲ್ಲಿ
ಅದೆಂಥದೋ ದೈತ್ಯಾಕಾರದ ಸುಳಿ
ಅಂಗಾಲಲ್ಲಿ ಮುಳ್ಳಿಗೆ ರಕ್ತದೋಕುಳಿ
ನೆತ್ತಿಯಲ್ಲಿ ಮೂಡಿತು ಕೆಂಪು ಚಿತ್ರ
ನೋಡಿದೆ.

ದಿಕ್ಕೆಟ್ಟು ನಿಂತ ಮರದಮೇಲೆ
ತಲೆಕೆಟ್ಟು ಕುಳಿತ ಕೋಗಿಲೆಯ
ಸಂಗೀತಶಾಲೆ
ಟೊಂಗೆ ಟೊಂಗೆಗೂ ಜೋತುಬಿದ್ದ
ಅಪಸ್ವರದ ಬಾವಲಿಗಳು
ಎತ್ತೆತ್ತಲು ಕತ್ತಲೇ ಕತ್ತಲು ಕತ್ತೆತ್ತಲು
ಸದ್ಧಿರದ ರಾತ್ರಿಯಲಿ ಕೇಳಿಬರುತ್ತದೆ
ಸದ್ಧು
ಎಲ್ಲಿಯದಿದು, ಯಾವುದರದ್ದಿದು,
ಎಂದೆಲ್ಲ ಕೂಗಾಡುವಾಗ
ಗಡಿಯಾರದ ಮುಳ್ಳು ಚಟ್ಟನೆ
ಚೀರಿತು.

ಗೋಡೆಮೇಲಿನ ಹಲ್ಲಿ
ಮೂಲೆಯಲ್ಲಿನ ಕಪ್ಪೆ
ಕೊಟ್ಟಿಗೆಯಲ್ಲಿನ ಕರು ನೆನಪಾದವು
ಮತ್ತೆನೋ ಕಾಣಿಸಿತು
ನೋಡಿದೆ ಮತ್ತೆ ನೋಡಿದೆ
ಓಡದೇ ನಿಂತುಕೊಂಡಿದ್ದೆ
ಸಾವಿನ ಚೂರೊಂದು
ಕೆನ್ನೆಗೆ ತಟ್ಟಿತು
ನೆನ್ನೆಯೇ ಮುಗಿದ ದಿನಕ್ಕೆ
ನಾಳೆಯ ಕಾಣದ ಕೋಪಕ್ಕೆ
ಹಾಳೆಯೊಂದೆ ಜೊತೆಯಾಗಿದ್ದನ್ನು
ನೋಡಿ ಓಡೋಡಿ ಹೋಗುವಾಗ
ಓಡುತ್ತಲೇ ನಿಂತೆ.

ಸುರೇಶ ಎಲ್.ರಾಜಮಾನೆ ಬಾಗಲಕೋಟ ಜಿಲ್ಲೆಯ ಮುಧೋಳ ತಾಲೂಕಿನ ರನ್ನಬೆಳಗಲಿಯವರು.
ಸಧ್ಯ ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ಪ್ರಾಥಮಿಕಶಾಲಾ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿತೆ ಕಥೆ ಗಜಲ್ ಬರವಣಿಗೆ ಇವರ ಹವ್ಯಾಸ.
‘ಸುಡುವ ಬೆಂಕಿಯ ನಗು’, ‘ಮೌನ ಯುದ್ಧ ಮಾತಿಗೂ ಮನಸಿಗೂ’ ಎಂಬ ಎರಡು ಕವನಸಂಕಲನಗಳು ಪ್ರಕಟವಾಗಿವೆ.

 

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)