ನನಗೆ ಆ ದಿನಗಳಲ್ಲಿ ಮಧ್ಯರಾತ್ರಿ ಹನ್ನೆರೆಡಕ್ಕೆ ಸರಿಯಾಗಿ ಎಚ್ಚರಾಗುತ್ತಿತ್ತು. ತಲೆ ತುಂಬ ರಗ್ಗು ಹೊದ್ದು ಕಣ್ಣು ಮುಚ್ಚಿಕೊಂಡರೂ ನಿದ್ರೆ ಬರುತ್ತಿರಲಿಲ್ಲ. ಸದಾ ಎಚ್ಚರವಾಗೆ ಇರುತ್ತಿದ್ದೆ. ಎದೆ ಕಂಪಿಸುತ್ತಿತ್ತು. ಅಲುಗಾಡದೆ ಮುದುರಿಕೊಂಡಿರುತ್ತಿದ್ದೆ. ವಿಶಲ್ ಊದುತ್ತಾ ಲಾಟಿ ಬಡಿಯುತ್ತ ಬರುವ ಗೂರ್ಖನ ಬೂಟುಗಾಲಿನ ಸದ್ದು ಕೇಳಿಸುತ್ತಿತ್ತು. ಸರಿಯಾಗಿ ಹನ್ನೆರೆಡು ಗಂಟೆಗೆ ರೈಲಿನ ಬೆಲ್ಲು ಢಣಗುಡುತ್ತಿತ್ತು. ರೈಲು ಬರುವ ಸದ್ದು ಕೇಳಿದ ತಕ್ಷಣ ನನ್ನ ಕಲ್ಪನೆಗಳು ಗರಿಗೆದರುತ್ತಿದ್ದವು. ರೈಲ್ ಇಳಿದ ಸೂಟುಕೇಸ್ ಧಾರಿ, ಹಿಂಬಾಲಕರು, ಚಾಕು, ಕೊಲೆ, ರಕ್ತ ಎಲ್ಲವೂ ಕಣ್ಣ ಮುಂದೆ ಚಿತ್ರಗೊಳ್ಳುತ್ತಿತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ನಾಲ್ಕನೆಯ ಕಂತು

ನುಣ್ಣಗೆ ಬೋಳಿಸುತ್ತಿದ್ದರು

ಹುಡುಗರು ರಾತ್ರಿಯಾದರೆ ಸಾಕು ಹಾಸ್ಟೆಲ್‍ನಲ್ಲಿ ದುಡ್ಡಿನಾಟ ಆಡುತ್ತಿದ್ದರು. ಸೋಮವಾರ ಊರಿಂದ ತರುತ್ತಿದ್ದ ನಾಲ್ಕೈದು ರೂಪಾಯಿ ಖಾಲಿ ಆಗುವವರೆಗೂ ಸರಿಬೆಸ ಆಡುತ್ತಿದ್ದರು. ಕಂಠಪ್ಪನೆಂಬ ಭಟ್ಟನಿದ್ದ. ಆತ ರಾತ್ರಿ ಹೊತ್ತು ಹಾಸ್ಟೆಲ್‌ಗೆ ಬಂದು ಹುಡುಗರನ್ನ ಗುಡ್ಡಾಕಿಕೊಂಡು ಸರಿಬೆಸ ಆಡಿಸಿ ಎಲ್ಲರನ್ನು ಸೋಲಿಸಿ ಜೇಬಿಗೆ ಚಿಲ್ಲರೆ ತುಂಬಿಕೊಂಡು ಹೋಗುತ್ತಿದ್ದ. ಮತ್ತೆ ಶನಿವಾರ ಬಂತೆಂದರೆ ಹುಡುಗರು ಊರಿಗೆ ಹೋಗಲು ಬಸ್‍ಚಾರ್ಜ್ ಇಲ್ಲದೆ ಪರದಾಡುತ್ತಿದ್ದರು. ಆಗ ಕಂಠಪ್ಪ ಹೆಸರನ್ನು ಬರೆದುಕೊಂಡು ಸಾಲಕೊಟ್ಟು ಕಳುಹಿಸುತ್ತಿದ್ದ. ಊರಿಂದ ಬಂದ ತಕ್ಷಣ ಆತನ ಸಾಲ ತೀರಿಸಬೇಕಾಗಿತ್ತು. ವಾರ್ಡನ್ ತಿಂಗಳಿಗೆ ಒಂದು ಸಾರಿ ಕಂಟಿಂಗ್ ಮಾಡಿಸಲೆಂದು ಮೂರು ರೂಪಾಯಿ ಕೊಡುತ್ತಿದ್ದರು. ನಾವು ಊರಿಂದ ಬರುವಾಗ ಕಟಿಂಗ್‌ಗೆ ಎಂದು ಅಪ್ಪನಿಂದ ದುಡ್ಡು ಪಡೆದುಕೊಂಡು ಬಂದು ಅದರಲ್ಲಿ ಪಿಚ್ಚರ್ ನೋಡುತ್ತಿದ್ದೆವು. ಕಟಿಂಗ್ ಮಾಡಿಸಿಕೊಂಡು ಬಂದ ನಂತರದಲ್ಲಿ ವಾರ್ಡನ್ ಜುಟ್ಟು ಹಿಡಿದು ನೋಡುತ್ತಿದ್ದರು. ಜುಟ್ಟು ಕೈಗೆ ಸಿಗುವಂತಿದ್ದರೆ ಹಿಡಿದು ಜುಮ್ಮಾಡಿಬಿಡುತ್ತಿದ್ದರು. ಕೆಲ ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ಹುಡುಗರು ಸ್ಟೈಲಾಗಿ ಕಾಣಲೆಂದು ಉದ್ದಕ್ಕೆ ಜುಟ್ಟು ಬಿಡಿಸಿಕೊಂಡು ಬರುತ್ತಿದ್ದರು. ಆ ಜುಟ್ಟು ಕಂಡ ವಾರ್ಡನ್ ದುಡ್ಡು ಕೊಡುವುದನ್ನ ನಿಲ್ಲಿಸಿ, ಸ್ಕೂಲ್ ಪಕ್ಕದಲ್ಲಿದ್ದ ಒಂದು ಪೆಟ್ಟಿಗೆ ಕಟಿಂಗ್‌ಶಾಪ್‌ಗೆ ನೇಮಿಸಿಬಿಟ್ಟರು. ಅದರ ಮಾಲೀಕ ರಾಜ್ ಅಭಿಮಾನಿಯಾಗಿದ್ದ. ನಮ್ಮ ಹೆಸರು ಬರೆದುಕೊಂಡು ನುಣ್ಣಗೆ ಬೋಳಿಸಿ ಕಳುಹಿಸುತ್ತಿದ್ದ. ನಮ್ಮ ತಲೆಗಳನ್ನು ನೋಡಿ ವಾರ್ಡನ್‌ಗೆ ಆನಂದವಾಗುತ್ತಿತ್ತು.

ಚಪ್ಪಲಿ ಏಟಿನ ಪ್ರಯೋಗ

ನಮ್ಮ ಟ್ರಂಕ್‌ಗಳ ಸಾಲಿನ ಕೊನೆಯಲ್ಲಿ ಕೆಲ ಹುಡುಗರ ಗುಂಪಿತ್ತು. ಮಿತಿ ಮೀರಿದ ತುಂಟತನದಿಂದ ಒದೆ ತಿಂದು ತಿಂದು ಅವರ ಕೈಯ್ಯು ಮಯ್ಯು ಜಡ್ಡುಗಟ್ಟಿ ಹೋಗಿತ್ತು. ಒಂದು ದಿನ ಅವರೆಲ್ಲ ಲಕ್ಷ್ಮೀನರಸಿಂಹನ ಮುಂದಾಳತ್ವದಲ್ಲಿ ಗುಂಪು ಕಟ್ಟಿಕೊಂಡು ವಾರ್ಡನ್‌ಗೆ ಎದಿರೇಟು ಕೊಡುವ ನಿರ್ಧಾರಕ್ಕೆ ಬಂದಿದ್ದರು. ವಾರ್ಡನ್ ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ಸರಿಯಾಗಿ ಮುಂಬಾಗಿಲಿನಿಂದ ಒಳ ಪ್ರವೇಶಿಸುವುದನ್ನ ಮನಗಂಡು, ಅದೆ ಸಮಯಕ್ಕೆ ಸರಿಯಾಗಿ ಬಾಗಿಲು ಮತ್ತು ನಿಲ ಸಂದಿಸುವ ಮೇಲ್ಭಾಗದ ಜಾಗದಲ್ಲಿ ಚಪ್ಪಲಿಯನ್ನು ಸಿಕ್ಕಿಸಿ, ವಾರ್ಡನ್ ಕದ ದೂಕಿದ ತಕ್ಷಣ ಮೇಲಿದ್ದ ಚಪ್ಪಲಿ ನಾಗರಾಜಪ್ಪನವರ ತಲೆ ಮೇಲೆ ಬೀಳುವಂತೆ ಯೋಜನೆ ರೂಪಿಸಿಲಾಗಿತ್ತು. ಅದು ಸರಿಯಾಗಿ ಮೇಲೆ ಬೀಳುವುದೊ ಇಲ್ಲವೊ ಎಂಬುದಕ್ಕಾಗಿ ಒಂದೆರೆಡು ಸರ್ತಿ ಅವರೇ ಬಾಗಿಲು ನೂಕಿಕೊಂಡು ಪ್ರವೇಶಿಸಿ ಚಪ್ಪಲಿಯನ್ನು ಮೇಲೆ ಕೆಡವಿಕೊಂಡಿದ್ದರು. ಅದು ಯಶಸ್ಸಾದ ನಂತರ ಅಂತಿಮವಾಗಿ ಸಿಕ್ಕಿಸಿ ಬಂದು ತಮ್ಮ ಪಾಡಿಗೆ ತಾವು ಟ್ರಂಕಿನ ಹಿಂದೆ ನಾಗರಾಜಪ್ಪನವರ ಆಗಮನಕ್ಕಾಗಿ ಕಾದು ಕುಳಿತಿದ್ದರು. ಅಂದುಕೊಂಡಂತೆಯೇ ನಾಗರಾಜಪ್ಪನವರು ಕದ ದೂಕಿ ಒಳ ಹೆಜ್ಜೆ ಇಟ್ಟ ತಕ್ಷಣ, ಚಪ್ಪಲಿ ತಲೆಯ ಬದಲಿಗೆ ಭುಜದ ಮೇಲೆ ಬಿದ್ದೇ ಬಿಟ್ಟಿತು. ಇದರಿಂದ ಕುಪಿತಗೊಂಡ ನಾಗರಾಜಪ್ಪನವರು ಕೃತ್ಯ ಎಸಗಿದವರನ್ನ ಕ್ಷಣ ಮಾತ್ರದಲ್ಲಿ ಕಂಡುಹಿಡಿದರು. ಲಕ್ಷ್ಮಿರಂಗನ ತಂಡವನ್ನು ಪತ್ತೆಹಚ್ಚಿ ಹಾಸ್ಟೆಲ್‌ನಿಂದ ಅವರನ್ನು ವಜಾಗೊಳಿಸುವ ಬೆದರಿಕೆ ಒಡ್ಡಿದರು. ಸಾಲದೆಂಬಂತೆ ಅವರು ಓದುತ್ತಿದ್ದ ಗಾಂಧಿ ವಿದ್ಯಾಪೀಠ ಶಾಲೆಗೆ ಹೋಗಿ ಅಲ್ಲಿನ ಶಿಕ್ಷಕರಿಂದ ಸಾಮೂಹಿಕವಾಗಿ ತದುಕಿಸಿ ಬಂದರು. ಲಕ್ಷ್ಮಿ ಮುಂತಾದವರು ಎಸಗಿದ ಪ್ರಮಾದದ ಗಾಂಭೀರ್ಯತೆಯಿಂದ ಹಾಸ್ಟೆಲ್‌ನ ಹುಡುಗರು ತಬ್ಬಿಬ್ಬಾಗಿಹೋದರು. ಮಾರನೆ ದಿನ ನಾಗರಾಜಪ್ಪನವರಿಗೆ ಎಲ್ಲಾ ಹುಡುಗರೂ ಇನ್ನೆಂದೂ ಈ ರೀತಿ ಮಾಡುವುದಿಲ್ಲವೆಂದು ಅಪಾಲಜಿ ಪತ್ರ ಬರೆದುಕೊಟ್ಟ ನಂತರ ಪರಿಸ್ಥಿತಿ ಸ್ವಲ್ಪ ತಿಳಿಗೊಂಡಿತು.

ನಾಗರಾಜಪ್ಪನವರ ಸ್ವಾತಂತ್ರ್ಯ ಸಂಭ್ರಮ

ನಾಗರಾಜಪ್ಪನವರಿಗೆ ಸ್ವಾತಂತ್ರ್ಯ ದಿನವೆಂದರೆ ಎಲ್ಲಿಲ್ಲದ ಸಂಭ್ರಮ, ಅವರ ಸಂಭ್ರಮವನ್ನು ನಮಗೆಲ್ಲರಿಗೂ ಹಂಚುತ್ತಿದ್ದರು. ಆ ದಿನ ಎಂದಿಗಿಂತ ಮುಂಚಿತವಾಗಿಯೇ ಸ್ನಾನ ಮಾಡಿ, ಶುಭ್ರ ಬಟ್ಟೆ ಧರಿಸಿ ನಗು ಮುಖದಿಂದ ಹಾಸ್ಟೆಲ್ ಪ್ರವೇಶಿಸುತ್ತಿದ್ದರು. ಎಲ್ಲರಿಗೂ ಶುಭಾಶಯ ತಿಳಿಸಿ ಶಾಲೆಗಳಿಗೆ ಹೋಗಿ ಬರಲು ಬೀಳ್ಕೊಡುತ್ತಿದ್ದರು. ನಾವು ಶಾಲೆಯಲ್ಲಿನ ದಿನಾಚರಣೆ ಮುಗಿಸಿಕೊಂಡು ವಾಪಾಸ್ಸಾಗುವಷ್ಟರಲ್ಲಿ, ಹಾಸ್ಟೆಲ್‌ನಲ್ಲಿ ಮಧ್ಯಾಹ್ನ ವಿಶೇಷ ಊಟ ಸಿದ್ಧಪಡಿಸಿಕೊಂಡು ನಮಗಾಗಿ ಕಾದಿರುತ್ತಿದ್ದರು.

ನಾವು ನಮ್ಮ ಮನೆಗಳಲ್ಲಿನ ಮದುವೆ ಮುಂತಾದ ಸಮಾರಂಭಗಳಲ್ಲೂ ತಿಂದಿರದಂತಹ ವಿಶೇಷ ಖಾದ್ಯಗಳು ಅಂದು ನಮ್ಮ ತಟ್ಟೆಗಳಲ್ಲಿ ಕಾಣಿಸುತ್ತಿದ್ದವು. ಬಾದ್‌ಷಾ, ಜಹಂಗೀರ್, ಕೇಸರಿಬಾತ್ ಇದನ್ನೆಲ್ಲ ಪರಿಚಯಿಸಿದ್ದು ನಾಗರಾಜಪ್ಪನವರ ಸ್ವಾತಂತ್ರ್ಯ ಸಂಭ್ರಮವೆ. ನಾವೆಲ್ಲ ಉಂಡು ಸಂತೃಪ್ತಗೊಳ್ಳುವವರೆಗೂ ಅವರು ಬಾಗಿಲಲ್ಲೆ ನಿಂತು ಭಟ್ಟರಿಗೆ ಹೇಳಿ ಸಮರ್ಪಕವಾಗಿ ಊಟ ಬಡಿಸಿಸುತ್ತಿದ್ದರು. ಆ ದಿನ ನಾವು ಏನೇ ತಪ್ಪು ಮಾಡಿದರೂ ಏಟು ಬೀಳುತ್ತಿರಲಿಲ್ಲ. ಸಂಜೆ ನಮ್ಮನ್ನೆಲ್ಲ ಉದ್ದೇಶಿಸಿ ವಿಶೇಷ ಭಾಷಣ ಮಾಡುತ್ತಿದ್ದರು. ನಾವು ಆ ದಿನವನ್ನ ಸಿನಿಮಾ ನೋಡಲು ಬಳಸಿಕೊಳ್ಳುತ್ತಿದ್ದೆವು. ಕೆಲ ಹುಡುಗರು ದಿನದ ನಾಲ್ಕು ಶೋಗಳಲ್ಲೂ ಸಿನಿಮಾ ನೋಡಿಕೊಂಡು ಬರುತ್ತಿದ್ದರು. ಅದನ್ನ ಮುಂದಿನ ಸ್ವಾತಂತ್ರ್ಯ ದಿನದ ವರೆವಿಗೂ ನೆನಪಿಟ್ಟುಕೊಂಡು ಹೇಳುತ್ತಿದ್ದರು.

ಮರ್ಮಾಂಗಕ್ಕೆ ಕಾರದ ಪುಡಿ

ಒಂದು ದಿನ ಸಂಜೆ ಶಾಲೆ ಮುಗಿಸಿಕೊಂಡು ಹಾಸ್ಟೆಲ್‌ಗೆ ಬಂದೆವು. ಎದುರಿಗಿದ್ದ ಸ್ಲಂನಲ್ಲಿ ಇಬ್ಬರು ಫ್ರೌಢಾವಸ್ಥೆಯ ಹುಡುಗರನ್ನ ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿಹಾಕಿದ್ದರು. ಅವರಿಬ್ಬರೂ ಅಷ್ಟೊತ್ತಿಗಾಗಲೇ ಪುಂಡಾಟಿಕೆಯಲ್ಲಿ ಹೆಸರು ಗಳಿಸುವುದರಲ್ಲಿ ಮುಂಚೂಣಿಯಲ್ಲಿದ್ದರು. ಕಳ್ಳತನದ್ದೊ ಅಥವಾ ಹುಡುಗಿಯರನ್ನು ಕೆಣಕಿದ ವಿಚಾರವೋ ಇರಬೇಕು, ನಾನೆಷ್ಟು ಸಾಚ ಎಂದು ತೋರಿಸಿಕೊಳ್ಳಲು ಆ ಹುಡುಗರ ಅಪ್ಪ, ಮಕ್ಕಳನ್ನು ಕಂಬಕ್ಕೆ ಕಟ್ಟಾಕಿ ಬೆತ್ತಲೆ ಗೊಳಿಸಿದ್ದ. ಹಾಸ್ಟೆಲ್ ಹುಡುಗರೆಲ್ಲ ಆ ದೃಶ್ಯವನ್ನು ತಂಡೋಪತಂಡವಾಗಿ ಹೋಗಿ ನೋಡಿಕೊಂಡು ಬರುತ್ತಿದ್ದೆವು. ನಮ್ಮಗಳ ಊಟ ಮುಗಿದು ರಾತ್ರಿ ಎಂಟು ಗಂಟೆಯಾದರೂ ಅವರು ಏಸುಕ್ರಿಸ್ತನಂತೆ ಕಂಬದಲ್ಲೇ ಇದ್ದರು. ಅಷ್ಟೊತ್ತಿಗಾಗಲೇ ಅವರಪ್ಪ ಇನ್ನಷ್ಟು ಎಣ್ಣೆ ಸುರಿದುಕೊಂಡು ತನ್ನ ಸಾಚಾತನವನ್ನು ಮತ್ತಷ್ಟು ಹೊಳಪುಗೊಳಿಸಿಕೊಳ್ಳುವ ಉಮೇದಿಗೆ ಬಿದ್ದು, ಒಂದು ತಟ್ಟೆಗೆ ಕಾರದ ಪುಡಿ ಕಲೆಸಿ ಹುಡುರ ಮರ್ಮಾಂಗಕ್ಕೆ ಎರಚುತ್ತಿದ್ದ. ಆ ಹುಡುಗರ ಚೀರಾಟ ಮುಗಿಲು ಮುಟ್ಟಿತ್ತು. ನಾವೆಲ್ಲಾ ಮತ್ತೊಮ್ಮೆ ಆ ದೃಶ್ಯವನ್ನು ನೋಡಿ ಬೆಪ್ಪಾಗಿ ನಿಂತೆವು. ಸ್ವಲ್ಪ ಹೊತ್ತಿನಲ್ಲೆ ಎಣ್ಣೆ ಮೇಲಿದ್ದ ಅವರಪ್ಪನಿಗೆ ಬರಿ ಕೈಲೆ ಕಾರದ ಪುಡಿ ಕಲೆಸಿದ ಪರಿಣಾಮವಾಗಿ, ಅವನ ಅಂಗೈ ಉರಿ ಹತ್ತಿ ಬಿಟ್ಟಿತ್ತು. ಅವನೂ ಕೂಡ ಚೀರಾಡುತ್ತಾ ಕೈಯನ್ನು ಕೊಡವಿಕೊಳ್ಳುತ್ತಿದ್ದ. ನಾವು ಮಧ್ಯ ರಾತ್ರಿ ಎದ್ದು ಬಂದು ನೋಡಿದರೂ ಆ ದಿಕ್ಕಿನಲ್ಲಿ ಗಲಾಟೆ ಮುಂದುವರೆದೇ ಇತ್ತು. ಬೆಳಗ್ಗೆ ಎಚ್ಚರವಾದಾಗ ಪೋಲಿಸರು ಬಂದು ಕುಡುಕ ತಂದೆಯನ್ನು ಹೊಡೆದು ಜೀಪಿಗೆ ಹಾಕಿಕೊಂಡು ಹೋದ ಸುದ್ದಿ ತಿಳಿಯಿತು.

ಎಸ್‍ಎಸ್‍ಎಲ್‍ಸಿ ಓದುತ್ತಿದ್ದ ಹುಡುಗರು ಸ್ಟೈಲಾಗಿ ಕಾಣಲೆಂದು ಉದ್ದಕ್ಕೆ ಜುಟ್ಟು ಬಿಡಿಸಿಕೊಂಡು ಬರುತ್ತಿದ್ದರು. ಆ ಜುಟ್ಟು ಕಂಡ ವಾರ್ಡನ್ ದುಡ್ಡು ಕೊಡುವುದನ್ನ ನಿಲ್ಲಿಸಿ, ಸ್ಕೂಲ್ ಪಕ್ಕದಲ್ಲಿದ್ದ ಒಂದು ಪೆಟ್ಟಿಗೆ ಕಟಿಂಗ್‌ಶಾಪ್‌ಗೆ ನೇಮಿಸಿಬಿಟ್ಟರು.

ನಿದ್ದೆಗೆಡಿಸಿದ ಕೊಲೆ

ರೈಲ್ವೆಸ್ಟೇಷನ್ ರೋಡಿನ ನಮ್ಮ ಶಾಲೆಯ ಮುಂದೆ ಒಂದು ಹಂಪ್ಸ್ ಇತ್ತು. ಒಂದು ದಿನ ಮುಂಜಾನೆ ಆ ಜಾಗದಲ್ಲಿ ರಕ್ತ ಚೆಲ್ಲಾಡಿತ್ತು. ಪೋಲಿಸರು ಬಂದಿದ್ದರು. ಸುತ್ತಮುತ್ತಲ ಜನರೆಲ್ಲಾ ಗುಂಪುಗಟ್ಟಿ ನೋಡಿಕೊಂಡು ಹೋಗುತ್ತಿದ್ದರು. ಮಾರನೇ ಬೆಳಗ್ಗೆ ಅದರ ಸುದ್ದಿ ಪತ್ರಿಕೆಯಲ್ಲೂ ಪ್ರಕಟವಾಗಿತ್ತು. ಮಧ್ಯರಾತ್ರಿ ಹನ್ನೆರೆಡು ಗಂಟೆಗೆ ಇಂಟರ್‌ಸಿಟಿ ಟ್ರೈನು ಬರುತ್ತಿತ್ತು. ಹಣವಿದ್ದ ಸೂಟ್‌ಕೇಸ್ ಧಾರಿ ವ್ಯಕ್ತಿಯೊಬ್ಬ ಟ್ರೈನ್ ಇಳಿದು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಆತನನ್ನು ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಮಾರ್ಗಮಧ್ಯದಲ್ಲಿ ಕೊಚ್ಚಿ ಕೊಂದು ಸೂಟುಕೇಸ್ ಕಿತ್ತುಕೊಂಡು ಪರಾರಿಯಾಗಿದ್ದರೆಂಬ ಸುದ್ದಿ ಹರಡಿತ್ತು. ನಾವು ಶಾಲೆಗೆ ಹೋಗುವಷ್ಟರಲ್ಲಿ ಪೋಲಿಸರು ಹೆಣವನ್ನು ಎತ್ತಿದ್ದರು. ರಕ್ತದ ಕಲೆ ಮಾತ್ರ ಹಾಗೇ ಇತ್ತು. ಈ ಘಟನೆ ಬಹಳ ದಿನಗಳವರೆಗೆ ಚರ್ಚೆಯಲ್ಲಿತ್ತು. ಹಾಸ್ಟೆಲ್‌ನ ಭಟ್ಟರು ಅದಕ್ಕೆ ಸುಣ್ಣ ಬಣ್ಣ ಕಟ್ಟಿ ಹೇಳಿ ಹೆದರಿಸುತ್ತಿದ್ದರು. ಈ ಘಟನೆಯಿಂದ ಹೆದರಿ ಹೈರಾಣಾಗಿದ್ದ ನನಗೆ ರಾತ್ರಿ ಹೊತ್ತು ನಿದ್ದೆ ಬಾರದಂತಾಗಿತ್ತು.

ಆ ದಿನಗಳಲ್ಲಿ ಮಧ್ಯರಾತ್ರಿ ಹನ್ನೆರೆಡಕ್ಕೆ ಸರಿಯಾಗಿ ಎಚ್ಚರಾಗುತ್ತಿತ್ತು. ತಲೆ ತುಂಬ ರಗ್ಗು ಹೊದ್ದು ಕಣ್ಣು ಮುಚ್ಚಿಕೊಂಡರೂ ನಿದ್ರೆ ಬರುತ್ತಿರಲಿಲ್ಲ. ಸದಾ ಎಚ್ಚರವಾಗೆ ಇರುತ್ತಿದ್ದೆ. ಎದೆ ಕಂಪಿಸುತ್ತಿತ್ತು. ಅಲುಗಾಡದೆ ಮುದುರಿಕೊಂಡಿರುತ್ತಿದ್ದೆ. ವಿಶಲ್ ಊದುತ್ತಾ ಲಾಟಿ ಬಡಿಯುತ್ತ ಬರುವ ಗೂರ್ಖನ ಬೂಟುಗಾಲಿನ ಸದ್ದು ಕೇಳಿಸುತ್ತಿತ್ತು. ಸರಿಯಾಗಿ ಹನ್ನೆರೆಡು ಗಂಟೆಗೆ ರೈಲಿನ ಬೆಲ್ಲು ಢಣಗುಡುತ್ತಿತ್ತು. ರೈಲು ಬರುವ ಸದ್ದು ಕೇಳಿದ ತಕ್ಷಣ ನನ್ನ ಕಲ್ಪನೆಗಳು ಗರಿಗೆದರುತ್ತಿದ್ದವು. ರೈಲ್ ಇಳಿದ ಸೂಟುಕೇಸ್ ಧಾರಿ, ಹಿಂಬಾಲಕರು, ಚಾಕು, ಕೊಲೆ, ರಕ್ತ ಎಲ್ಲವೂ ಕಣ್ಣ ಮುಂದೆ ಚಿತ್ರಗೊಳ್ಳುತ್ತಿತ್ತು. ಈ ಘಟನೆಯಿಂದ ಹೈರಾಣಾಗಿ ಹೋಗಿದ್ದೆ. ಯಾರ ಹತ್ತಿರವೂ ಹೇಳಿಕೊಳ್ಳಲಾಗುತ್ತಿರಲಿಲ್ಲ. ಪ್ರತಿದಿನ ರಾತ್ರಿ ಮಲಗುವಾಗ ಅಪ್ಪ ಹೇಳಿದ್ದ ದೇವರುಗಳ ಹೆಸರನ್ನೆಲ್ಲಾ ನೆನಪಿಸಿಕೊಂಡು ‘ಈ ದಿನ ಎಚ್ಚರವಾಗದಂತೆ ಮಾಡಪ್ಪ ದೇವರೆ’ ಎಂದು ಬೇಡಿಕೊಂಡು ಮಲಗುತ್ತಿದ್ದೆ. ಆದರೆ ಅದಾವುದೂ ಕೆಲಸಕ್ಕೆ ಬರುತ್ತಿರಲಿಲ್ಲ. ಎಚ್ಚರಾಗಿ ಬಿಡುತ್ತಿತ್ತು. ಈ ಸನ್ನಿಯಿಂದ ಹೊರಬರಲು ಬಹಳ ದಿನಗಳೇ ಹಿಡಿಯಿತು.

ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮಗಳು

ನಾವು ಕೂತೆಡೆಯಿಂದಲೇ ದೈತ್ಯವಾಗಿ ಬೆಳೆದಂತಿದ್ದ ಆಫೀಸ್ ರೂಮಿನ ಗೋಡೆಯ ಮೇಲೆ ಅಂಬೇಡ್ಕರ್ ಫೋಟೊ ಇತ್ತು. ಅದರ ಪಕ್ಕದಲ್ಲಿ ಹತ್ತನೇ ತರಗತಿಯಲ್ಲಿ ಫಸ್ಟ್‌ಕ್ಲಾಸ್ ಬಂದ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರು, ಇಸವಿ, ಪಡೆದ ಅಂಕಗಳನ್ನು ಬರೆಸಲಾಗಿತ್ತು. ಪ್ರತಿ ವರ್ಷ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಿದ್ದ ಒಂದಿಬ್ಬರು ಇದ್ದೇ ಇರುತ್ತಿದ್ದರು. ಅದರಲ್ಲಿ ಅತೀ ಹೆಚ್ಚು ಅಂಕ ಪಡೆದು ಪಾಸಾಗಿದ್ದ ದಾಖಲೆ ನಮ್ಮ ಚಿಕ್ಕಪ್ಪನ ಮಗ ಚೇತನ್ ಹೆಸರಿನಲ್ಲಿತ್ತು. ಪ್ರತಿ ಶುಕ್ರವಾರದಂದು ಶಾರದ ಪೂಜೆ ಮಾಡುತ್ತಿದ್ದರು. ಶಾರದಾ ಪೂಜೆಯ ವಿಶೇಷವೆಂದರೆ ವಿದ್ಯಾರ್ಥಿಗಳಿಂದ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮ. ಹುಡುಗರು ಚಿತ್ರಗೀತೆ, ಭಾವಗೀತೆ, ಜನಪದ ಗೀತೆಗಳನ್ನು ಹಾಡುತ್ತಿದ್ದರು. ಹುಚ್ಚುಚ್ಚನೆಂಬ ಸಣಕಲು ದೇಹದ ಹುಡುಗನಿದ್ದ. ಅವನು ಹೆಣ್ಣು ಧ್ವನಿಯಲ್ಲಿ ಹಾಡು ಹೇಳಿ ರಂಜಿಸುತ್ತಿದ್ದುದು ಎಲ್ಲರಿಗೂ ಇಷ್ಟವಾಗುತ್ತಿತ್ತು. ತಿಪಟೂರು ಗಣೇಶನಿಗೆ ಫೇಮಸ್. ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಅರಳಿಕಟ್ಟೆಯ ಗಣಪತಿ ಪೆಂಡಾಲ್‌ನಲ್ಲಿ ಪ್ರತಿನಿತ್ಯ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿದ್ದವು.

ತಿಂಗಳಾನುಗಟ್ಟಲೆ ನಡೆಯುತ್ತಿದ್ದ ಗಣೇಶನ ಆರಾಧನೆಯಲ್ಲಿ ನಿತ್ಯದ ವಿಶೇಷ ಕಾರ್ಯಕ್ರಮಗಳ ಪಟ್ಟಿಯನ್ನು ಪೆಂಡಾಲ್‌ನಲ್ಲಿ ಹಾಕಿರುತ್ತಿದ್ದರು. ಅದರಲ್ಲಿ ವಾರಕ್ಕೆ, ಹದಿನೈದಕ್ಕೆ ಆರ್ಕೆಸ್ಟ್ರಾ ಇರುತ್ತಿತ್ತು. ಆ ದಿನವನ್ನು ಗುರುತಾಕಿಕೊಂಡು ಬರುತ್ತಿದ್ದ ಹುಡುಗರು ರಾತ್ರಿ ಊಟ ಮಾಡುವುದೂ ತಡವೆಂಬಂತೆ ಹೋಗಿ ಅಲ್ಲಿ ಜಮಾಯಿಸುತ್ತಿದ್ದರು. ಅಲ್ಲಿನ ಹಾಡು ಕುಣಿತಗಳನ್ನೆಲ್ಲ ಮೈದುಂಬಿಕೊಂಡು ಬರುತ್ತಿದ್ದ ಹುಡುಗರು ಶುಕ್ರವಾರದ ಶಾರದಾ ಪೂಜೆಯಲ್ಲಿ ಅದನ್ನು ತಮ್ಮದೇ ಆದ ಬಗೆಯಲ್ಲಿ ಅಭಿವ್ಯಕ್ತಿಸುತ್ತಿದ್ದರು.

ರುದ್ರನೆಂಬ ವಯಸ್ಸು ಮೀರಿದ ಹುಡುಗನಿದ್ದನು. ಅವನು ಕೈಕಾಲುಗಳು ಬಲಿತು ಗಡ್ಡ ಮೀಸೆ ಬಂದಿದ್ದರೂ ಆಗಿನ್ನು ಎಂಟನೇ ಕ್ಲಾಸು ಓದುತ್ತಿದ್ದ. ಊರಲ್ಲಿ ಪಾಸಾಗದ ಅವನನ್ನು ಯಾರೊ ತಂದು ಹಾಸ್ಟೆಲ್‌ಗೆ ಹಾಕಿದ್ದರು. ಹಾಸ್ಟೆಲ್‌ಗೆ ಸೇರಿದ್ದೇ ಸೇರಿದ್ದು, ಊರ ದಾರಿ ಮರೆತುಬಿಟ್ಟಿದ್ದನು. ರಜೆ ಬಂದಾಗ ಅಲ್ಲಿ ಇಲ್ಲಿ ಕೆಲಸಕ್ಕೆ ಹೋಗುತ್ತಿದ್ದನು. ಅವನಿಗೆ ಹಾಸ್ಟೆಲ್‌ನಲ್ಲಿ ಕೊಡುತ್ತಿದ್ದ ಊಟ ಸಾಕಾಗುತ್ತಿರಲಿಲ್ಲ. ಅಡುಗೆ ಮನೆಗೆ ಹತ್ತಿರವಾಗುವಂತೆ ಟ್ರಂಕ್ ಇಟ್ಟುಕೊಂಡಿದ್ದು ಸದಾ ಅತ್ತಲೇ ನೋಡುತ್ತಿರುತ್ತಿದ್ದನು. ರುದ್ರ ಸ್ಕೂಲಿಗೆ ಹೋಗುತ್ತಿದ್ದುದು ಅಷ್ಟಕಷ್ಟೆ! ಆದರೆ ಶುಕ್ರವಾರದ ಶಾರದಾ ಪೂಜೆಯಲ್ಲಿ ಮಿಂಚುತ್ತಿದ್ದ. ಆಗಿನ ಕಾಲದ ಎಲ್ಲಾ ಸಿನಿಮಾ ನಟರ ಮಿಮಿಕ್ರಿಯನ್ನು, ಹಾವ ಭಾವದೊಂದಿಗೆ ಮಾಡಿ ತೋರಿಸಿ ನಮ್ಮನ್ನು ರಂಜಿಸುತ್ತಿದ್ದ. ವಾರ್ಡನ್ ನಾಗರಾಜಪ್ಪನವರೂ ಸಹ ಅವನ ಕಲೆಯನ್ನ ಮೆಚ್ಚಿಕೊಂಡವರಾಗಿದ್ದು, ಕೆಲವೊಮ್ಮೆ ಉದ್ದೀಪನಗೊಂಡು ತಕ್ಷಣವೇ ಅವನಿಗೊಂದು ಹೆಚ್ಚುವರಿ ಬಾಳೆಹಣ್ಣು ಕರುಣಿಸಿಬಿಡುತ್ತಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮ ಮುಗಿದ ನಂತರ ವಾರ್ಡನ್‌ನವರಿಂದ ಹಿತೋಪದೇಶ ಶುರುವಾಗುತ್ತಿತ್ತು ‘ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಒಂದು ಮನವಿ, ನೀವು ಎಲ್ಲಾ ಸರಿ, ಆದ್ರೆ ಪಿಚ್ಕುಟ್ರುಗಳು ಆಡಿದಂಗೆ ಆಡ್ತಿರ’ ಎಂದು ಪ್ರಾರಂಭಿಸಿ ‘ನಮ್ಮ ದೇಶಕ್ಕೆ ಡಚ್ಚರು, ಪೋರ್ಚುಗೀಸರು, ಇಂಗ್ಲೀಷರು, ಬಂದು ಐನೂರು ವರ್ಷ ತಿಗಹೊಡೆದರು. ಸಾಬರು ಬಂದು ಐನೂರು ವರ್ಷ ತಿಗಹೊಡೆದರು. ನೀವು ಹಿಂಗೆ ಆದ್ರೆ ತಿಗ ಹೊಡೆಸಿಕೊಳ್ಳೋದೆ ನಿಮ್ಮ ಕೆಲಸ ಆಗುತ್ತೆ. ಆದ್ದರಿಂದ ಚೆನ್ನಾಗಿ ಓದಿ, ಪಿಚ್ಕುಟ್ರುಗಳು ಆಡಿದಂಗೆ ಆಡಬೇಡಿ’ ಎಂದು ಮಾಮೂಲಿ ಕ್ಯಾಸೆಟ್ ಹಾಕಿ, ಗೋಡೆಯ ಮೇಲೆ ಬರೆಸಿದ್ದ ಪ್ರಥಮ ದರ್ಜೆಯಲ್ಲಿ ಪಾಸಾದವರ ಹೆಸರುಗಳನ್ನ ಉಲ್ಲೇಖಿಸಿ, ನೀವೂ ಕೂಡ ಅಲ್ಲಿ ಹೆಸರು ಬರೆಸಿಕೊಳ್ಳುವಂತಾಗಬೇಕೆಂಬ ಪ್ರೋತ್ಸಾಹಕರ ಮಾತುಗಳನ್ನಾಡುತ್ತಿದ್ದರು. ಒಂದೊಂದು ಪಚ್ಚಬಾಳೆಹಣ್ಣಿನೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಗುತ್ತಿತ್ತು.