ಚಂದ್ರಮತಿಯ ಪಾತ್ರಕ್ಕೆ ಆಯ್ಕೆಯಾದ ವ್ಯಕ್ತಿ ಸ್ತ್ರೀ ಪಾತ್ರಕ್ಕೋಸ್ಕರ ಮೀಸೆ ಮತ್ತು ಕೇಶಮುಂಡನ ಮಾಡಬೇಕೆಂದು ಫಾಲ್ಕೆ ಹೇಳಿದಾಗ ಮೊದಲು ಚಂದ್ರಮತಿ ಸ್ತ್ರೀ ಪಾತ್ರದಾರಿ ಇದನ್ನು ವಿರೋಧಿಸುವುದು ಹೀಗೆ, “ನನ್ನ ತಂದೆ ಇನ್ನೂ ಕೂಡ ಜೀವಂತ ಇದ್ದಾರೆ. ಹೀಗಿರುವಾಗ ಕೇಶಮುಂಡನ ಮಾಡುವುದು ಜಾತಿಯ ಕಟ್ಟುಪಾಡುಗಳನ್ನು ಮೀರಿದ ಹಾಗೆ”.
ಈ ಸಿನೆಮಾ ಫಾಲ್ಕೆಯ ಜೀವನ ಚರಿತ್ರೆಯನ್ನು ದಾಖಲಿಸುವುದಕ್ಕಿಂತ ಫಾಲ್ಕೆ ಹೇಗೆ ಹರಿಶ್ಚಂದ್ರಾಚೀ ಫ್ಯಾಕ್ಟ್ರೀ ನಿರ್ಮಾಣ ಮಾಡಿದರು ಎನ್ನುವ ಕುತೂಹಲ ಕಥನವನ್ನು ದಾಖಲಿಸುತ್ತದೆ.
ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಶುಕ್ರವಾರದ ಸಿನೆಮಾ ಪುಟ.

 

“Dundiraj Govind Phalke made the first Indian feature film in 1913. With it he launched the film industry in India. This is the amazing story of Phalke and his family pioneering adventure. This story begins in Girgawan, Mumbai…..year 1911.”

ಹೀಗೆ ಆರಂಭವಾದ ಸಿನಿಮಾವೇ ಹರಿಶ್ಷಂದ್ರಾಚೀ ಫ್ಯಾಕ್ಟರಿ. ಇಲ್ಲಿನ ಹರಿಶ್ಚಂದ್ರ ಮತ್ತು ತಾರಾಮತಿಯ ಕಥೆ ಭಾರತದಲ್ಲಿ ಇರುವ ಹರಿಶ್ಚಂದ್ರ ಕಥೆಯ ವೈವಿಧ್ಯವನ್ನು ತೋರಿಸುತ್ತದೆ. ಕನ್ನಡದಲ್ಲಿ ಇದು ಹರಿಶ್ಚಂದ್ರ ಮತ್ತು ಚಂದ್ರಮತಿಯ ಕಥೆ. ಆರಂಭದಲ್ಲಿ ಒಂದೇ ಕಥೆಯ ಬಹು ಕಥನ ಕ್ರಮವನ್ನು ಇದು ಸೂಚಿಸುತ್ತದೆ. ಸಿನಿಮಾ ವಿದ್ಯುಕ್ತವಾಗಿ ಆರಂಭವಾಗುವುದು ಈ ದೃಶ್ಯದ ಮುಖಾಂತರ, ಪೂನಾದ ಒಂದು ಪ್ರದೇಶದಲ್ಲಿ ವಿಜ್ಞಾನ ಮತ್ತು ವಿಜ್ಞಾನಿಗಳು ವಿಜ್ಞಾನವನ್ನು ತುಂಬಾ ಪ್ರೌಢವಾಗಿ ರೂಪಿಸದಿದ್ದ ಕಾಲದಲ್ಲಿ ಶಾಲೆಯ ಮಕ್ಕಳಿಗೆ ಆರಂಭದ ದಿನಗಳಲ್ಲಿ ಚಿತ್ರಪಟಗಳನ್ನು ತೋರಿಸಿ, ಮಕ್ಕಳಲ್ಲಿ ಇದು ಯಾರು? ಇದು ಯಾರು? ಎಂದು ಕೇಳಿದಾಗ, ಮರಾಠಿ ಸಂತರ ಹೆಸರನ್ನು ಹೇಳುತ್ತಾರೆಯೇ ಹೊರತು ಶಿಷ್ಟ ಪರಂಪರೆಯ ಆರ್ಯಭಟನನ್ನಾಗಲಿ ಅಥವಾ ಆಧುನಿಕ ತಂತ್ರಜ್ಞಾನದ ಪಿತಾಮಹ ಜಮ್ ಶೆಡ್ ಜೀ ಟಾಟಾರವರನ್ನಾಗಲಿ ತಿಳಿದುಕೊಂಡು ಅದನ್ನು ಹೇಳದೆ ಇರುವುದರ ಮೂಲಕ ಮೇಲೆ ಉಲ್ಲೇಖಿತ ಸಿನಿಮಾದ ಆರಂಭದ ದೃಶ್ಯಗಳು ಈ ಸಿನಿಮಾದ ಸಿಂಹಾವಲೋಕನ ಕ್ರಮದ ಸಂದರ್ಭದಲ್ಲಿ ಸಿನಿಮಾ ರೂಪಿತವಾದಂತಹ ಕಾಲ – ದೇಶ (space and time) ಸ್ವದೇಶಿ ಚಳುವಳಿಯ ರೂಪಕವನ್ನು ನಮಗೆ ಮನದಟ್ಟು ಮಾಡಿಕೊಡುತ್ತದೆ. ಆ ಸಂದರ್ಭದಲ್ಲಿ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ದೇಶೀ ಶಿಕ್ಷಣ ಪದ್ಧತಿಯನ್ನು ಕಡೆಗಣಿಸಿ, ಬರೀ ಆಂಗ್ಲ ಶಿಕ್ಷಣ ವ್ಯವಸ್ಥೆಯ ಆಧಾರದ ಮೇಲೆ ಗುಮಾಸ್ತರನ್ನು ನೇಮಕ ಮಾಡುವ ದೆಸೆಯಿಂದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಂಡ ಕ್ರಮವಾಗಿದ್ದಿತ್ತು ಎನ್ನುವ ತಾತ್ವಿಕತೆಯನ್ನು ಒಪ್ಪಿಕೊಂಡೇ ಸಿನಿಮಾ ಮುಂದೆ ಸಾಗುತ್ತದೆ.


ಇದೇ ದೃಶ್ಯದ ನಂತರದ ಸಂದರ್ಭದಲ್ಲಿ ಪೂನಾ ನಗರದಲ್ಲಿ ನಡೆದ ಪ್ರದರ್ಶನವೊಂದರಲ್ಲಿ (Exhibition) ಭಾರತಕ್ಕೆ ಸ್ವಾತಂತ್ರ್ಯ ಹೇಗೆ ಲಭಿಸುತ್ತದೆ? ಎನ್ನುವ ಚರ್ಚೆಯನ್ನು ಕೂಡ ಮಾಡಲಾಗುತ್ತದೆ. ಇದಕ್ಕೆ ಆಧುನಿಕತೆ, ವಿಜ್ಞಾನ ಒಂದೇ ಪರಿಹಾರ ಮಾರ್ಗವೆಂದು ಯೋಚಿಸಲಾಗುತ್ತದೆ. ಪ್ರದರ್ಶನದ ವೇಳೆ ಮರಾಠಿ ಬ್ರಾಹ್ಮಣರಿಗೂ ಮತ್ತು ಪ್ರದರ್ಶಕರಿಗೂ ವಾಗ್ವಾದ ಉಂಟಾದಾಗ ನಡುವೆ ಬಂದ ಬ್ರಿಟಿಷ್ ಅಧಿಕಾರಿ ಭಾರತೀಯತೆ ಮತ್ತು ಆಧುನೀಕತೆ ಎರಡರ ಸಂಯೋಜನೆಯನ್ನು ಒತ್ತಿಹೇಳುತ್ತಾ ಸಂಸ್ಕೃತ ಶ್ಲೋಕವೊಂದನ್ನು ಪಠಿಸುತ್ತಾನೆ. ಇಲ್ಲಿಂದ ಫಾಲ್ಕೆಯ ಕಥೆ ಆರಂಭವಾಗುತ್ತದೆ. ದುಂಡಿರಾಜ್ ಗೋವಿಂದ ಫಾಲ್ಕೆ ಸಿನಿಮಾ ಎನ್ನುವ ಯಕ್ಷ-ವಿದ್ಯೆ ಬೆನ್ನೇರಿ ಹೋಗಿ ಅದನ್ನು ಸಾಧಿಸಹೋಗುವ ದಾರಿಯಲ್ಲಿ ಏನೆಲ್ಲ ಸಮಸ್ಯೆಗಳು, ಸಂಕೀರ್ಣತೆಗಳು, ವಿರೋಧಗಳು, ಉಪಾದ್ವಾಪಗಳು ಉಂಟಾಗುತ್ತದೆ ಮತ್ತು ಇದರ ಜೊತೆ-ಜೊತೆಯಲ್ಲಿ ಈ ಸಂದರ್ಭದ ಸಮಾಜೋ-ರಾಜಕೀಯ ಪರಿಸ್ಥಿತಿ, ಬೌದ್ಧಿಕ ಪರಿಸ್ಥಿತಿ, ಹೇಗೆ ಈ ಸಿನಿಮಾ ನಿರ್ಮಾಣದ ಪ್ರಕ್ರಿಯೆಯನ್ನು ಪ್ರಭಾವಿಸಿತ್ತು ಎನ್ನುವುದು ‘ಹರಿಶ್ಚಂದ್ರ ಚೀ ಫ್ಯಾಕ್ಟರಿ’ಯ ಮುಖ್ಯ ತಿರುಳು.

ದುಂಡಿರಾಜ್ ಗೋವಿಂದ ಫಾಲ್ಕೆ ಬಹುಮಖ ಪ್ರತಿಭೆಯ ಸಾಧಕ. ಪ್ರಸಿದ್ಧ ಜಾದೂಗಾರ ಕೂಡ ಆಗಿದ್ದರು. ಸಂಗೀತ, ನಾಟಕ ಮುಂತಾದ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಭಿರುಚಿಯನ್ನು ಹೊಂದಿದ್ದರು. ವೃತ್ತಿಯಲ್ಲಿ ಪ್ರಿಂಟಿಂಗ್ ಪ್ರೆಸ್ ಉದ್ಯೋಗವನ್ನು ನಡೆಸಿ ಕೈಬಿಟ್ಟಿದ್ದರು. ಆದರೆ ಯಾವಾಗ ಸಿನಿಮಾದ ವೃತ್ತಿ – ಪ್ರವೃತ್ತಿಗಳೆರಡು ಅಂಟಿಕೊಂಡಾಗ ಬೇರೆ ವೃತ್ತಿಗಳನ್ನು ಕೂಡ ಬದಿಗೆ ಸರಿಸಿದರು. ಆಕಸ್ಮಾತ್ ಆಗಿ ಪಿಕ್ಚರ್ ಪ್ಯಾಲೇಸ್ (Picture Palace) ಎನ್ನುವ ಬ್ರಿಟನ್ನಿನ ಸಿನಿಮಾ ಕಂಪೆನಿಯು ಮುಂಬಯಿಯಲ್ಲಿ ಪ್ರದರ್ಶಿಸಿದ ಅಮ್ಯುಸಿಂಗ್ ಆ್ಯನಿಮಲ್ಸ್ (Amusing Animals) ಸಿನಿಮಾವನ್ನು ಎರಡಾಣೆಗೆ ನೋಡಿದ ಮೇಲೆ ಫಾಲ್ಕೆ ಬೆಲೆ ಕಟ್ಟಲಾಗದಂತಹ ಸಿನಿಮಾ ನಿರ್ಮಾಣದ ಕುತೂಹಲವನ್ನು ಪಡೆದರು. ಅಂದಿನಿಂದ ಫಾಲ್ಕೆಗೂ ಚಲನಚಿತ್ರ ನಿರ್ಮಿಸಬೇಕೆಂಬ ಮಹದಾಸೆ ಚಿಗುರಿತು. ಭಾರತದ ಕಲಾ ಮತ್ತು ಸಿನಿಮಾ ಜಗತ್ತಿನ ಒಬ್ಬ ಪ್ರವರ್ತಕನ ಜೈತ್ಯ್ರಯಾತ್ರೆ ಆರಂಭ ಆಗಿದ್ದು ಹೀಗೆ.

ಒಮ್ಮೆ ನೋಡಿದ ಸಿನಿಮಾ, ಸಿನಿಮಾ ಮಂದಿರವೂ ಆಯಸ್ಕಾಂತದಂತೆ ದಿನೇದಿನೇ ಕೂಡ ಫಾಲ್ಕೆಯನ್ನು ಎಳೆಯಿತು. ಆ ಇಡೀ ಸಂಸಾರವೇ ಮನಸ್ಸಿಲ್ಲದ ಮನಸ್ಸಿನಿಂದ ಫಾಲ್ಕೆಯ ಮನೋಭಿಲಾಷೆಗೆ ಪೂರಕವಾಗಿ ಹೊಂದಿಕೊಂಡಿತು. ಮೊದಲ ದಿನ ಸಿನಿಮಾ ನೋಡಿ ಮನೆಗೆ ಬಂದಾಗ ಫಾಲ್ಕೆಯ ಹೆಂಡತಿ ತರಕಾರಿ ತರಲು ಕೊಟ್ಟ ಹಣ ಎಲ್ಲಿ? ಎಂದು ಕೇಳಿದಾಗ ಫಾಲ್ಕೆ ತನ್ನ ಹಿರಿಯ ಮಗ ಬಾಬಾರಾಯ್ ಗೆ ಔಷಧಿ ಮಾಡಿದೆ ಎಂದು ಹೇಳುತ್ತಾನೆ. ಔಷಧದ ಬಾಟಲಿ ಎಲ್ಲಿ? ಎಂದು ಫಾಲ್ಕೆಯ ಹೆಂಡತಿ ಪಾಟೀಸವಾಲು ಹಾಕಿದಾಗ ಫಾಲ್ಕೆಗೆ ಸ್ವಲ್ಪ ಕಸಿವಿಸಿಯಾದರೂ ಕೂಡ ತಂದೆಯ ಜೊತೆಯಲ್ಲಿ ಸಿನಿಮಾವನ್ನು ಕಣ್ಣುಮುಚ್ಚದೇ ನೋಡಿದ ಫಾಲ್ಕೆಯ ಹಿರಿಯ ಮಗ ಬಾಬಾರಾಯ್ “ನಾನು ನಾಯಿಯ ಮೇಲೆ ಬಿದ್ದು ಔಷಧಿ ಬಾಟಲಿ ಒಡೆದು ಹೋಯಿತು” ಎನ್ನುತ್ತಾನೆ. ಇದು ಸಿನಿಮಾದ ಇಂದ್ರಜಾಲಿಕತೆ ಮತ್ತು ತಂದೆಯಂತೆ ಮಗನೂ ಕೂಡ ಸಿನಿಮಾದ ಇಂದ್ರಜಾಲಿಕತೆಗೆ ಸೋತ ಪರಿಯನ್ನು ಮತ್ತು ಮನಃಪೂರ್ವಕವಾಗಿ ತಂದೆಯನ್ನು ಪ್ರವರ್ತಿಸಿದ್ದನ್ನು ತಿಳಿಸುತ್ತದೆ. ಸರಕಾರಿ ನೌಕರಿಯನ್ನು ಬಿಟ್ಟು, ಪ್ರಿಂಟಿಂಗ್ ಪ್ರೆಸ್ ವಹಿವಾಟನ್ನು ಬಿಟ್ಟು, ಜಾದೂಗಾರನಾಗಿ ಊರೂರು ತಿರುಗುತ್ತಿದ್ದ ಫಾಲ್ಕೆಗೆ ಉದ್ಯೋಗದ ಹಲವು ಅವಕಾಶಗಳು ಬಂದಿದ್ದರೂ ಕೂಡ ಅದನ್ನು ತಿರಸ್ಕರಿಸಿದ್ದು ಫಾಲ್ಕೆಯ ಮನೋಗತ ಅಭಿಲಾಷೆಯಿಂದಲೇನೇ ಎಂದು ತಿಳಿಯಬಹುದು.

ಫಾಲ್ಕೆಯ ಸಿನಿಮಾ ಆಸಕ್ತಿಯ ಬೀಜ ಮೊಳೆತದ್ದು ತನ್ನ ಪತ್ನಿ ಸರಸ್ವತಿ ಮತ್ತು ಮಕ್ಕಳಿಬ್ಬರ ಜೊತೆ “Life passion of Jesus Christ” ಸಿನಿಮಾವನ್ನು ನೋಡಿದ ಮೇಲೆ, ಅದರಲ್ಲೂ ವಿಶೇಷವಾಗಿ ಪರೇಶ್ ಮೊಖಾಶಿಯಂತಹ ರಂಗಭೂಮಿ, ಚರಿತ್ರೆ, ಸಂಸ್ಕೃತಿಯ ಬಗ್ಗೆ ಅಪಾರ ತಿಳುವಳಿಕೆಯನ್ನು ಹೊಂದಿದ ನಿರ್ದೇಶಕನ ನಿರ್ದೇಶಕತ್ವ ಸಾಕಷ್ಟು ಕೆಲಸ ಮಾಡಿರುವುದನ್ನು ಗಮನಿಸಬಹುದು. ಮೊಖಾಶಿ, ಫಾಲ್ಕೆ ಮತ್ತು ಫಾಲ್ಕೆಯ ಸಿನಿಮಾ ಗೀಳು ಹುಟ್ಟಿದ್ದೇ ಸ್ವದೇಶಿ ಭೂಮಿಕೆಯಲ್ಲಿ ಎಂದು ಪ್ರತಿವಾದಿಸುತ್ತಾರೆ. ಎರಡು ಬಾರಿ ಸಿನಿಮಾ ನೋಡಿ ಸಮುದ್ರ ತೀರಕ್ಕೆ ಹೋದ ಗಂಡ- ಹೆಂಡತಿ ಮತ್ತು ಮಕ್ಕಳು, ಕಡಲೆ ಮಾರುವವ ಕಡಲೆ ಕಟ್ಟಿಕೊಟ್ಟ ತಿಲಕರ ಕೇಸರಿ ಪತ್ರಿಕೆಯಲ್ಲಿ ಬಂದ ಸ್ವದೇಶಿ ವಿಷಯದ ಮೇಲೆ ಕಣ್ಣು ಹಾಯಿಸುತ್ತ ಫಾಲ್ಕೆ ಹೆಂಡತಿಗೆ ಹೇಳುವ ಸಂದರ್ಭದಲ್ಲಿ ಸ್ವದೇಶಿ ಗ್ರಹಿಕೆ ಅತ್ಯಂತ ಸಹಜವೋ ಎಂಬಂತೆ ಫಾಲ್ಕೆಯು “ಅದು ಜೀಸಸ್ ಕ್ರಿಸ್ಟನ್ ಕಥೆ. ನಾನು ರಾಮ ಕೃಷ್ಣನ ಕಥೆಯನ್ನು ಮುದ್ರಿಸುತ್ತೇನೆ” ಎನ್ನುವ ವ್ಯಾಖ್ಯೆಯು ಫಾಲ್ಕೆಯ ಜೀವನವನ್ನಷ್ಟೇ ಅಲ್ಲದೇ ಭಾರತೀಯ ಸಿನಿಮಾದ ಚರಿತ್ರೆಯನ್ನು ಬರೆಯಿತು. ಅಂದಿನಿಂದ ಫಾಲ್ಕೆ ಸತತವಾಗಿ ಸಿನಿಮಾ ನೋಡಲು ಹೋಗುತ್ತಾರೆ. ಹೆಂಡತಿಯಿಂದ ಹಣ ಸಂಗ್ರಹಿಸಿಕೊಂಡು ಸಿನಿಮಾ ತಂತ್ರಗಳನ್ನು ತಿಳಿದುಕೊಳ್ಳಲು ಗ್ರಂಥಾಲಯಕ್ಕೆ ಹೋಗಿ ಆ ಕಾಲಕ್ಕೆ ಸಿನಿಮಾ ಅಧ್ಯಯನದ ಬೈಬಲ್ ಎನಿಸಿದ್ದ “ಬಯೋಸ್ಕೋಪ್” ನಂತಹ ಕೃತಿಯನ್ನೂ ಕೂಡ ಅಧ್ಯಯನ ಮಾಡುತ್ತಾನೆ. ಅನೇಕ ಕೃತಿಗೋಸ್ಕರ ಮನೆಯ ಒಂದೊಂದೇ ವಸ್ತುಗಳನ್ನು ಅದರಲ್ಲೂ ವಿಶೇಷವಾಗಿ ಕಬೋರ್ಡ್ನ್ನೂ ಕೂಡ ಮಾರುತ್ತಾನೆ.

ಪ್ರದರ್ಶನದ ವೇಳೆ ಮರಾಠಿ ಬ್ರಾಹ್ಮಣರಿಗೂ ಮತ್ತು ಪ್ರದರ್ಶಕರಿಗೂ ವಾಗ್ವಾದ ಉಂಟಾದಾಗ ನಡುವೆ ಬಂದ ಬ್ರಿಟಿಷ್ ಅಧಿಕಾರಿ ಭಾರತೀಯತೆ ಮತ್ತು ಆಧುನೀಕತೆ ಎರಡರ ಸಂಯೋಜನೆಯನ್ನು ಒತ್ತಿಹೇಳುತ್ತಾ ಸಂಸ್ಕೃತ ಶ್ಲೋಕವೊಂದನ್ನು ಪಠಿಸುತ್ತಾನೆ. ಇಲ್ಲಿಂದ ಫಾಲ್ಕೆಯ ಕಥೆ ಆರಂಭವಾಗುತ್ತದೆ.

ಕ್ರಮೇಣ ಸಿನಿಮಾ ಕಂಪೆನಿಯ ನಿರ್ವಾಹಕ ಮತ್ತು ತಂತ್ರಜ್ಞನಿಗೆ (Technician & Manager) ಹಣ, ಮದ್ಯವನ್ನು ಕೊಟ್ಟು ಅವನ ಸ್ನೇಹ ಸಂಪಾದಿಸಿ, ಕೆಲವು ಚಿಕ್ಕ-ಚಿಕ್ಕ ರೀಲಿನ ತುಂಡುಗಳನ್ನು ಸಂಪಾದಿಸಿ ಕುತೂಹಲದಲ್ಲಿ ಅವುಗಳನ್ನು ಪರಿಶೀಲಿಸುತ್ತಾನೆ. ಮರಾಠಿ ನಾಟಕಗಳನ್ನು ನೋಡುತ್ತಾ ಮಧ್ಯದಲ್ಲಿ ಡೈಲಾಗ್ ಗಳನ್ನು ಬರೆಯುತ್ತಾನೆ. ಕೊನೆಕೊನೆಗೆ ಎಲ್ಲದರಲ್ಲೂ ಕ್ಯಾಮರಾ, ರೀಲು, ಸಿನಿಮಾವನ್ನು ನೋಡತೊಡಗುತ್ತಾನೆ. ಇಬ್ಬರು ಸ್ನೇಹಿತರೊಂದಿಗೆ ಚಹಾ ಕುಡಿಯುವ ಸಂದರ್ಭದಲ್ಲಿ ಚಹಾ ಕಪ್ ನ ಹಿಡಿಕೆಯ ಮುಖಾಂತರವೇ ಒಂದೇಗಣ್ಣಿನಿಂದ ಅದನ್ನು ನೋಡಿ ಗಲಿಬಿಲಿಗೊಳಿಸುತ್ತಾನೆ. ಗಾಬರಿಗೊಂಡ ಸ್ನೇಹಿತರು ಏನೋ ಹುಚ್ಚು ಹಿಡಿದಿದೆ ಎಂದು ತಿಳಿದು ಥಾಣೆ ಮನೋರೋಗಿಗಳ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಫಾಲ್ಕೆ ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಾನೆ.

ಕೊನೆಗೆ ಫಾಲ್ಕೆ ಅನೇಕ ಪ್ರಯತ್ನಗಳಿಂದ ಬಯೋಸ್ಕೋಪ್ ಮುಖಾಂತರ ಸ್ಥಿರ ಫೋಟೋಗಳನ್ನು ಪ್ರದರ್ಶನ ಮಾಡಿದಾಗ ಅವನ ಪತ್ನಿ, ಮಕ್ಕಳು ಮತ್ತು ಓರಗೆಯ ಮಕ್ಕಳಿಗೆ ಆನಂದವೋ ಆನಂದ. ಆತನ ಕೆಲ ಸ್ನೇಹಿತರು ಇದು ಆತನ ಮೂರ್ಖತನ, ಆತನಿಗೆ ಹುಚ್ಚು ಎಂದು ಹೀಯಾಳಿಸುತ್ತಾರೆ. ನೆರೆಮನೆಯ ಅಜ್ಜಿಯಂತೂ ಆತನ ಕೆಲಸ ವಾಮಾಚಾರ ಎಂದು ಟೀಕಿಸುತ್ತಾಳೆ. ಇದರಿಂದ ಕಳೆಗುಂದದ ಫಾಲ್ಕೆ ನಾನೂ ಕೂಡ ಈ ಸ್ಥಿರದಿಂದ ಚಲನಚಿತ್ರವನ್ನು ಮಾಡುತ್ತೇನೆ. ಪರದೆಯಲ್ಲಿ ನಾಟಕವನ್ನು ಮಾಡುತ್ತೇನೆ ಎಂದು ಪ್ರಸ್ತಾವಿಸುತ್ತಾನೆ. ಅನೇಕರು ಇದು ನಿನಗೆ ಮಾದರಿ ಅಲ್ಲ ಎಂದು ನೀನು ತಿಲಕರ ಮಾದರಿಯನ್ನು ಅಂದರೆ ಸ್ವಾತಂತ್ರ್ಯ ಹೋರಾಟ, ಸ್ವದೇಶಿ ಸಂಗತಿಗಳು ಮಾದರಿಯನ್ನು ಅನುಸರಿಸಬೇಕು ಎಂದು ಹೇಳುತ್ತಾರೆ. ಆದರೆ ಪ್ರತಿ ಕಾಲಘಟ್ಟದಲ್ಲಿ ಒಬ್ಬ ವ್ಯಕ್ತಿ ಯಾವುದಾದರೂ ಹೊಸ ಕೆಲಸವನ್ನು ಮಾಡುವಾಗ ಕೆಲವರಾದರೂ ಸಹಾಯಕರಾಗುತ್ತಾರೆ ಎನ್ನುವ ರೀತಿಯಲ್ಲಿ, ಇಂಗ್ಲೀಷ್ ಬರಹಗಾರ Emerson ಮಾತಿನ ಹಾಗೇ “In your new venture 90% comment although 10% backs you”, ಕೆಲವು ಸ್ನೇಹಿತರು ಹಣ ಕೊಟ್ಟು ನೈತಿಕವಾಗಿ ಬೆಂಬಲಿಸಿ ಫಾಲ್ಕೆಯನ್ನು ಹುರಿದುಂಬಿಸುತ್ತಾರೆ. ನಂತರ ಫಾಲ್ಕೆ ಲಂಡನ್ ಗೆ ಹೋಗಿ ಸಿನಿಮಾ ತಂತ್ರವನ್ನು ಕಲಿತು ಬಹಳಷ್ಟು ನೈಪುಣ್ಯತೆಯನ್ನು ಸಾಧಿಸಿ ಭಾರತಕ್ಕೆ ವಾಪಾಸ್ ಬರುವ ಸಂದರ್ಭದಲ್ಲಿ ಫಾಲ್ಕೆಯ ಲಂಡನ್ ನ ಅತ್ಯಂತ ಆಪ್ತ ಸ್ನೇಹಿತ ಫಾಲ್ಕೆಯ ಬುದ್ದಿವಂತಿಕೆ, ಕುಶಲತೆಗೆ ಮಾರುಹೋಗಿ ಲಂಡನ್ ನಲ್ಲೇ ಇದ್ದು ಸಿನಿಮಾ ತಯಾರಿ ಮಾಡಬೇಕೆಂದು ಕೋರುತ್ತಾನೆ ಮತ್ತು ಆ ಕಾಲಕ್ಕೆ ಒಂದು ಸಾವಿರ ಪೌಂಡ್ನ ಸಹಾಯವನ್ನು ನೀಡುತ್ತಾನೆ. ಫಾಲ್ಕೆ ಖಡಾಖಂಡಿತವಾಗಿ ಸ್ನೇಹಿತನ ಮನವಿಯನ್ನು ನಿರಾಕರಿಸುತ್ತಾನೆ ಮತ್ತು ಭಾರತಕ್ಕೆ ಬಂದು ರಾಜಾಹರಿಶ್ಚಂದ್ರ ಸಿನಿಮಾವನ್ನು ಆರಂಭಿಸಿ ಸರಣಿ ಚಿತ್ರಗಳನ್ನೇ ನೀಡುತ್ತಾನೆ ಮತ್ತು ಎರಡೇ ವರ್ಷಗಳಲ್ಲಿ ಮೂರು ಸಿನಿಮಾಗಳನ್ನು ತಯಾರಿಸುತ್ತಾರೆ.

ಇಲ್ಲಿ ಒಂದು ರೀತಿ ಆರಂಭದಲ್ಲಿ ತಿಳಕರ ಕೇಸರಿ ಪತ್ರಿಕೆಯಲ್ಲಿ ಕಡ್ಲೆ ತಿನ್ನುತ್ತಿರುವಾಗ ಕ್ಯಾಮರಾ ಕ್ಲೋಸ್ ಅಪ್ ಮುಖಾಂತರ ಸ್ವದೇಶಿ ಬರಹವನ್ನು ತೋರಿಸಿದ್ದು ಮತ್ತು ಭಾರತದಲ್ಲಿ ಹೊಸ ರೀತಿಯ ಸಿನಿಮಾ ಉದ್ಯಮವನ್ನು ಆರಂಭಿಸಬೇಕು ಎನ್ನುವ ತಾತ್ವಿಕ ಬದ್ಧತೆ ಎರಡೂ ಕೂಡ ಅನುರೂಪವಾಗಿ ಸಾಗುವುದನ್ನು ನಾವು ನೋಡಬಹುದು. ಪರೇಶ್ ಮೊಖಾಶಿ ನಿರ್ದೇಶನದಲ್ಲಿ ಗೆಲ್ಲುವಂತಹ ಸಂಗತಿಗಳು ಇಂತಹುದೇ ಆಗಿದೆ. ನಿರ್ದೇಶನ ಸಮಗ್ರತೆ (Intergrity) ಸಾಕ್ಷ್ಯೀಕೃತಗೊಳ್ಳುವುದೂ ಕೂಡ ಇಂತಹ ಸಂದರ್ಭದಲ್ಲಿ. ಚಾರಿತ್ರಿಕ ವಸ್ತು ವಿಷಯವನ್ನು ಆಯ್ದುಕೊಂಡು ಸಿನಿಮಾ ಮಾಡುವಾಗ ಚಾರಿತ್ರಿಕ ಕಾಲಘಟ್ಟವನ್ನು ಆಹ್ವಾನಿಸಬೇಕಾಗುತ್ತದೆ. ಅತ್ಯಂತ ಸೃಷ್ಟಿಶೀಲವಾಗಿ ಆ ಕಾಲಘಟ್ಟದ ಪರಿಸರವನ್ನು ನಿರ್ಮಿಸಿ ಸಿನಿಮಾವನ್ನು ನಿರ್ದೇಶಿಸುವುದು ಸೂಕ್ಷ್ಮ ಸಂವೇದನೆಗಳುಳ್ಳ ನಿರ್ದೇಶಕನಿಗೆ ಮಾತ್ರ ಸಾಧ್ಯವಾಗುವಂತಹ ಸಂಗತಿ.


ಉದಾಹರಣೆಗೆ ಇತ್ತೀಚೆಗೆ ಕನ್ನಡದಲ್ಲಿ ಬಂದ ‘ಆ ದಿನಗಳು’ ಎಂಬ ಸಿನಿಮಾ ಕಥೆ 1980ರ ದಶಕದ್ದಾದರೂ ಕೂಡಾ ನಿರ್ದೇಶಕ ಆ ದಶಕದ ಚಾರಿತ್ರಿಕ ಕಾಲಘಟ್ಟವನ್ನು ಸೃಷ್ಟಿಸುವಲ್ಲಿ ಸೋತಿರುವುದನ್ನು ನೋಡಬಹುದು. ಅದೇ ರೀತಿ 2010ರಲ್ಲಿ ತಮಿಳು ಸಿನಿಮಾ “ಸುಬ್ರಹ್ಮಣ್ಯಂಪುರಂ”ನ ನಿರ್ದೇಶಕ, 80ರ ದಶಕದ ವಿಷಯವನ್ನು ಆಯ್ದು ಪೂರಕವಾಗಿ 80ರ ದಶಕದ ತಮಿಳು ಕಾಲಕಟ್ಟವನ್ನು ಕೂಡ ಸೃಷ್ಟಿಸಿ ಯಶಸ್ವಿಯಾದರು. ಹರಿಶ್ಚಂದ್ರಾಚೀ ಫ್ಯಾಕ್ಟರಿಯಲ್ಲಿ ಕೂಡ ಮೊಖಾಶಿ ಅತ್ಯಂತ ಮನೋಜ್ಞವಾಗಿ ಈ ಕೆಲಸವನ್ನು ಮಾಡಿದರು. ಸಿನಿಮಾ ಕಲರ್ ನಲ್ಲಿದ್ದರೂ ಕೂಡಾ ಎಲ್ಲಿಯೂ ಪ್ರ್ರೇಕ್ಷಕನಿಗೆ ಇದು ವರ್ತಮಾನವನ್ನು ಹೋಲುತ್ತದೆ ಅಥವಾ 1920ರ ದಶಕವನ್ನು ಪ್ರತಿನಿಧಿಸುವುದಿಲ್ಲ ಎಂದೆನಿಸುವುದಿಲ್ಲ ಮತ್ತು 20ನೇ ಶತಕದ ದ್ವಿತೀಯ ದಶಕದ ವಸ್ತು ಎನ್ನುವ ಕೂದಲೆಳೆಯ ಗುಮಾನಿ ಕೂಡ ಉಂಟಾಗುವುದಿಲ್ಲ. ಸಿನಿಮಾ ಚಿತ್ರೀಕರಣಗೊಂಡ ಪೂನಾ, ಗಿರ್ ಗಾವ್, ಮನೋರಿ ಬೀಚ್, ನಿತಿನ್ ದೇಸಾಯಿ ಸ್ಟುಡಿಯೋ ಮತ್ತು ಮುಂಬೈ ಪ್ರದೇಶಗಳ ಸ್ಥಿರ ಮತ್ತು ಚಲ ಚಿತ್ರಗಳು 1920ರ ದಶಕವನ್ನೇ ಪ್ರತಿನಿಧಿಸುತ್ತದೆ. ಮೊಖಾಶಿ ಆ ದಶಕದ ಬೌದ್ಧಿಕ ಪರಿಸರವನ್ನೇ Photocopyಯ ರೂಪದಲ್ಲಿ ನಮಗೆ ಯಥಾವತ್ ಒದಗಿಸಿಕೊಡುತ್ತಾರೆ.

ಸಿನೆಮಾ ತನ್ನ ಇಡೀ 97 ನಿಮಿಷಗಳ ಅವಧಿಯಲ್ಲಿ ಅತ್ಯಂತ ಜಾಗರೂಕತೆಯಿಂದ ಸಾಗುತ್ತದೆ. 1920ರ ದಶಕದ ಚಿತ್ರಕಥೆಯನ್ನು ಆಯ್ಕೆ ಮಾಡಿಕೊಂಡು ಎಲ್ಲಿಯೂ ಕೂಡ ಆ ಕಾಲಘಟ್ಟಕ್ಕೆ ಅತೀತವಾದ ದೃಶ್ಯಗಳನ್ನು, ಸಂಭಾಷಣೆಗಳನ್ನು ಮತ್ತು ಸಾಮಾಜಿಕ ಕಟ್ಟುಪಾಡುಗಳನ್ನು ವಿವರಿಸುವುದಿಲ್ಲ, ಎಲ್ಲವೂ ಕೂಡ 20ರ ದಶಕದ ಆ ಚೌಕಟ್ಟಿನಲ್ಲೇ ಸಾಗುತ್ತದೆ. ಮುಖ್ಯವಾಗಿ 20ರ ದಶಕದ ಪೂನಾ, ಗಿರ್ ಗಾವ್ ಪ್ರದೇಶದ ಮರಾಠೀ ಸಮುದಾಯದ, ವಿಶೇಷವಾಗಿ ಜಾತಿ ಆಧಾರಿತ ಮರಾಠವಾಡದ ಬ್ರಾಹ್ಮಣ ಸಮುದಾಯದ ವಿಧಿನಿಷೇಧಗಳನ್ನು ಮತ್ತು ಸಾಮಾಜಿಕ ಸಂರಚನೆಯಲ್ಲಿ ಬ್ರಾಹ್ಮಣ ವರ್ಣ ಸಂಬಂಧಿತ ಜಾತಿಗಳು ಮತ್ತು ಬ್ರಾಹ್ಮಣೇತರ ವರ್ಣಕ್ಕೆ ಸಂಬಂಧಿಸಿದ ಜಾತಿಗಳು ನಿರ್ವಹಿಸುತ್ತಿದ್ದ ಸಾಮಾಜಿಕ ಕಾರ್ಯ ((Social functions) ಗಳನ್ನು ಚೆನ್ನಾಗಿ ಕಟ್ಟಿಕೊಡುತ್ತದೆ. ಜಾತಿ, ಸಾಮಾಜಶಾಸ್ತ್ರೀಯ ಚಿಂತನೆಗೆ ಹೊರತಾಗಿ ಯಾವುದೇ ಮೌಲ್ಯ ನಿರ್ಣಯಗಳಿಗೆ ಒಳಗಾಗದೇ ಸಾಂಸ್ಥಿಕ ನೆಲೆಯಲ್ಲಿ (Institutional Base) ನಿರ್ವಹಿಸುತ್ತಿದ್ದ ಸಂರಚನೆಯ ಸ್ವರೂಪವನ್ನು ವಿವರಿಸುತ್ತದೆ. ಆ ಪ್ರದೇಶದ ಎಲ್ಲ ಜಾತಿಗಳಿಗೂ ಇದು ಅನ್ವಯವಾಗುತ್ತದೆ.

(ದಾದಾಸಾಹೇಬ್ ಫಾಲ್ಕೆ)

ಈ ಸಿನಿಮಾವು ಸಂಸ್ಕೃತಿ, ಸಮಾಜದ ಬಗೆಗಿನ ಸೋಶಿಯಾಲಾಜಿಕಲ್ ಆಯಾಮವನ್ನು ತೆರೆದಿಡುತ್ತದೆ. ಪಂಡರಾಪುರದ ವಿಠ್ಠಲ ಸಂಪ್ರದಾಯ ಮತ್ತು ಅದು ಸೃಷ್ಟಿಸಿದ ಭಕ್ತಿ, ಭಕ್ತಿಯ ಸಂಕೇತ ಪ್ರತಿಮೆಗಳೊಂದಿಗೆ ಆ ಕಾಲದ ಶಿಷ್ಟ ಬ್ರಾಹ್ಮಣ ಸಮುದಾಯದ ಸಂಸ್ಕೃತಿಯನ್ನು ಅನುಕರಿಸಿ ಅನುಸರಿಸುವ ಲಂಬಾನುಕರಣ (vertical imitiation)ವನ್ನೂ ಕೂಡಾ ಈ ಚಿತ್ರ ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಒಂದು ಸಮಾಜದ ಶಾಸ್ತ್ರೀಯ ಸಂಕಥನ (Discourse) ವನ್ನೂ ಕೂಡ ಮುಂದಿಡುತ್ತದೆ. ಕ್ಯಾಮರಾವನ್ನು ಪಡೆದು ಹರಿಶ್ಚಂದ್ರ ಕಥೆಯ ಸ್ಕ್ರಿಪ್ಟನ್ನು ರಚಿಸಿ ಪಾತ್ರಗಳ ಆಯ್ಕೆಗೆ ಫಾಲ್ಕೆ ತನ್ನ ಪರಿಸರದಲ್ಲಿ ಚಲಿಸತೊಡಗಿದಾಗ ಆ ಕಾಲದ ಜಾತೀಯ ವಿಧಿನಿಷೇಧಗಳು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ. ಚಂದ್ರಮತಿಯ ಪಾತ್ರಕ್ಕೆ ಆಯ್ಕೆಯಾದ ವ್ಯಕ್ತಿ ಸ್ತ್ರೀ ಪಾತ್ರಕ್ಕೋಸ್ಕರ ಮೀಸೆ ಮತ್ತು ಕೇಶಮುಂಡನ ಮಾಡಬೇಕೆಂದು ಫಾಲ್ಕೆ ಹೇಳಿದಾಗ ಮೊದಲು ಚಂದ್ರಮತಿ ಸ್ತ್ರೀ ಪಾತ್ರದಾರಿ ಇದನ್ನು ವಿರೋಧಿಸುವುದು ಹೀಗೆ, “ನನ್ನ ತಂದೆ ಇನ್ನೂ ಕೂಡ ಜೀವಂತ ಇದ್ದಾರೆ. ಹೀಗಿರುವಾಗ ಕೇಶಮುಂಡನ ಮಾಡುವುದು ಜಾತಿಯ ಕಟ್ಟುಪಾಡುಗಳನ್ನು ಮೀರಿದ ಹಾಗೆ”.

ಒಟ್ಟಾರೆ ಈ ಸಿನೆಮಾ ಫಾಲ್ಕೆಯ ಜೀವನ ಚರಿತ್ರೆಯನ್ನು ದಾಖಲಿಸುವುದಕ್ಕಿಂತ ಫಾಲ್ಕೆ ಹೇಗೆ ಹರಿಶ್ಚಂದ್ರಾಚೀ ಫ್ಯಾಕ್ಟ್ರೀ ನಿರ್ಮಾಣ ಮಾಡಿದರು ಎನ್ನುವ ಕುತೂಹಲ ಕಥನವನ್ನು ದಾಖಲಿಸುತ್ತದೆ. 2005ರಲ್ಲಿ ದಾದಾಸಾಹೇಬ್ ಫಾಲ್ಕೆಯ ಜೀವನ ಚರಿತ್ರೆಯನ್ನು ಬರೆದ ಬಾಪು ವಟ್ವೇ ಅವರ ಕೃತಿಯನ್ನು ಆಧರಿಸಿ ಮೊಖಾಶಿ ಸಿನಿಮಾವನ್ನು 60 ದಿನದ ನಿರಂತರ ಶೂಟಿಂಗ್ ದಿನಗಳ ಮೂಲಕ ತಮ್ಮ ಆಸ್ತಿಯನ್ನು ಅಡವಿಟ್ಟು ನಿರ್ಮಿಸಿದರು. ಸಾಕಷ್ಟು ರಂಗಭೂಮಿಯ ರಿಯಾಜ್ (ಅನುಭವ) ಹೊಂದಿದ್ದ ಫಾಲ್ಕೆ ಕೂಡಾ ಈ ಸಿನಿಮಾದ ಬಗ್ಗೆ ಹೀಗೆ ಹೇಳುತ್ತಾರೆ, “ಫಾಲ್ಕೆಯವರ ಸಿನೆಮಾ ನಿರ್ಮಾಣದ ತಾಹತಹ್ಯದ ರೂಪಕ ಮತ್ತು ಇಡೀ ಸಿನೆಮಾವು ಏಕಾಂಗಿ ಮಾನವನ ಸಿನೆಮಾ ಯಾತ್ರೆ”.

ಚಾರಿತ್ರಿಕ ವಸ್ತು ವಿಷಯವನ್ನು ಆಯ್ದುಕೊಂಡು ಸಿನಿಮಾ ಮಾಡುವಾಗ ಚಾರಿತ್ರಿಕ ಕಾಲಘಟ್ಟವನ್ನು ಆಹ್ವಾನಿಸಬೇಕಾಗುತ್ತದೆ. ಅತ್ಯಂತ ಸೃಷ್ಟಿಶೀಲವಾಗಿ ಆ ಕಾಲಘಟ್ಟದ ಪರಿಸರವನ್ನು ನಿರ್ಮಿಸಿ ಸಿನಿಮಾವನ್ನು ನಿರ್ದೇಶಿಸುವುದು ಸೂಕ್ಷ್ಮ ಸಂವೇದನೆಗಳುಳ್ಳ ನಿರ್ದೇಶಕನಿಗೆ ಮಾತ್ರ ಸಾಧ್ಯವಾಗುವಂತಹ ಸಂಗತಿ.

ಸಿನಿಮಾ ವಿಶಿಷ್ಠವಾಗುವುದು ಮೊಕಾಶಿಯೇ ಹೇಳಿದ ಹಾಗೆ, “ನಾಟಕೀಯತೆ ಮತ್ತು ಭಾವನಾತ್ಮಕ ಸಂಘರ್ಷಗಳಿಂದಲ್ಲ, ಬದಲಿಗೆ ಜೀವನವೇ ಸುಂದರ, ಸುಲಲಿತ ಎನ್ನುವ ಒಂದು ಧನಾತ್ಮಕ ರಸದ ಅಭಿವ್ಯಕ್ತಿಯ ಕಾರಣ.” ಇಡೀ ಸಿನಿಮಾದಲ್ಲಿ ಮೊಕಾಶಿ ಹಾಸ್ಯವನ್ನು ಬಳಸಿದರೂ ಕೂಡಾ ಅದರ ಏಕ ನೆಲೆಯ ಬಳಕೆ ಮಾತ್ರ ಅದರ ಉದ್ದೇಶವಲ್ಲ. ಹಾಸ್ಯ ಮನರಂಜನೆಯ ನಿಮಿತ್ತ ಮಾತ್ರವಲ್ಲ, ಬದಲಿಗೆ ಆ ಹಾಸ್ಯ ತನ್ನ ಮೂಲವನ್ನು ದುರಂತದಿಂದ ಪಡೆಯುತ್ತಾ ದುರಂತ ಹುಟ್ಟಿಸುವ ನೋವನ್ನು ಮರೆಸುವ ಟಾನಿಕ್ ಅಥವಾ ರಾಮಬಾಣದ ಗುಳಿಗೆಯ ಹಾಗೆ ಇಡೀ ಸಿನಿಮಾದಲ್ಲಿ ವ್ಯಕ್ತವಾಗುತ್ತಾ ಹೋಗುತ್ತದೆ. ಇದು ಒಂಥರಾ Life is Beautiful ಎನ್ನುವ ಇಟಾಲಿಯನ್ ಸಿನಿಮಾದಲ್ಲಿ ಅಭಿವ್ಯಕ್ತವಾಗುವ ಮಾದರಿಯ ರೀತಿ ಕೂಡಾ ಹೌದು. ಒಂದು ನೆಲೆಯಲ್ಲಿ ನಾವು ಚಾಪ್ಲಿನ್ ನ ಅನೇಕ ಸಿನಿಮಾಗಳನ್ನು ಕೂಡಾ ಈ ನೆಲೆಯಲ್ಲಿಯೇ ನೋಡಬಹುದು. ಕ್ಯಾಮರಾ ಕೂಡಾ ಈ ಸಾಧ್ಯತೆಗಳನ್ನು ಸಾಧಿಸುವ ಸಲುವಾಗಿ Still Frame ತಂತ್ರದಲ್ಲೇ ಹೆಚ್ಚು ಬಳಕೆಯಾಗಿದೆ.

ಸಿನಿಮಾದ ಹೆಸರು “ಹರಿಶ್ಚಂದ್ರಾಚೀ Factory” ಯ Factory ಶಬ್ಧ ಅತ್ಯಂತ ಮಹತ್ವದ್ದು. ಫಾಲ್ಕೆ ಏನು ಮಾಡ್ತಾ ಇದ್ದಾನೆ ಅಥವಾ ಸಿನಿಮಾ ಏನು ಎನ್ನುವುದನ್ನು ಸ್ಥಳೀಯರಿಗೆ ಸ್ಪಷ್ಟಪಡಿಸಲಿಕ್ಕೆ ಫಾಲ್ಕೆಗೆ ಕಷ್ಟವಾಗುತ್ತದೆ. ಮರಾಠಿಯಲ್ಲಿ ಚಲಿಸುವ ಚಿತ್ರಗಳು, ತೆರೆಯಲ್ಲಿ ಅಥವಾ ಪರದೆಯಲ್ಲಿ ಚಲಿಸುವ ಚಿತ್ರಗಳೆಂದರೂ ಕೂಡಾ ಅವರಿಗೆ ಅರ್ಥವಾಗದಿದ್ದಾಗ ಆ ಹೊತ್ತಿಗಾಗಲೇ ಪೂನಾ ಪ್ರದೇಶದ ಅನೇಕ ಆಧುನಿಕ ನೆಲೆಯ ಹತ್ತಿ Mill ಗಳನ್ನು ಹೊಂದಿದ್ದ ಕಾರಣ, ಆತ Factory ಎನ್ನುವ ಶಬ್ಧವನ್ನು ಬಳಸುತ್ತಾನೆ. ಇದಲ್ಲದೆ ರಂಗಭೂಮಿ, ಸಿನಿಮಾ ಕ್ಷೇತ್ರಗಳು ನಿಷಿದ್ಧ ಸಮಾಜದ ಕುಲೀನ ವರ್ಗಗಳು ಅವುಗಳನ್ನು ಹೊಂದುವಂತಿಲ್ಲ ಎಂಬ ಸಾಮಾಜಿಕ ಕಟ್ಟುಪಾಡುಗಳ ಸಂಕೀರ್ಣತೆಯನ್ನು ಮೀರುವ ಪ್ರಯತ್ನದಿಂದ ಕೂಡಾ ಫಾಲ್ಕೆ ಪಾರಾಗಬೇಕಿತ್ತು.

(ಪರೇಶ್ ಮೊಖಾಶಿ)

ಇಡೀ ಸಿನಿಮಾದಲ್ಲಿ ಫಾಲ್ಕೆಯ ವಿಕ್ಷಿಪ್ತ ಮತ್ತು ವೈಚಾರಿಕ ವ್ಯಕ್ತಿತ್ವ ಪ್ರಕಟವಾಗುತ್ತದೆ. ಸಾಮಾನ್ಯ ಮನುಷ್ಯ, ಅಸಾಮಾನ್ಯ ಸಂಗತಿಯನ್ನು ಸಾಧಿಸಿದ ಎನ್ನುವುದಕ್ಕಿಂತ ಇಡೀ ಸಿನಿಮಾದಲ್ಲಿ ಮೊಕಾಶಿ, ಫಾಲ್ಕೆಯ ವ್ಯಕ್ತಿತ್ವವನ್ನು “ಆರಾಮ್ಸೇ, Be Cool, ಎನ್ನುವ ಉಕ್ತಿಯ ವ್ಯಕ್ತಿತ್ವಕ್ಕೆ ಆರೋಪಿಸಿತ್ತಾರೆ. ಅತ್ಯಂತ ನೈಸರ್ಗಿಕವಾದ, “ಸಾಮಾನ್ಯ ಮಾಧ್ಯಮ ಗತಿಯ ಅಧಿಕಾರವಿಹಿತ ಜನರೂ ಕೂಡಾ ಅದ್ಭುತವನ್ನು ಸಾಧಿಸಬಹುದು” ಎನ್ನುವುದೇ ಇದರ ಸಂದೇಶ. ಇಷ್ಟು ಸರಳ ಸಹಜ, ಸಾವಯದ ಬಂಧವನ್ನು ತನ್ನ ಸಿನಿಮಾದಲ್ಲಿ ತುಂಬಿರುವ ಮೊಕಾಶಿಯ ಈ ಮನೋಭಾವ ರೂಪಿತವಾಗಿದ್ದು, “ಟಿಕೆಟ್ ತೆಗೆದುಕೊಂಡು ಥಿಯೇಟರ್ ನಲ್ಲಿ ಸಿನಿಮಾವನ್ನು ನೋಡುವುದೇ – ಸಿನಿಮಾ” ಎನ್ನುವ ದೃಷ್ಠಿಯಿಂದಾಗಿ.
ಆದರೂ ವೈಯಕ್ತಿಕವಾಗಿ ನನಗೆ ತುಂಬಾ ಖುಷಿಕೊಟ್ಟ ಒಂದು ವಿಷಯವನ್ನು ಪ್ರಸ್ತಾಪಿಸಿ ಈ ಚರ್ಚೆಯನ್ನು ಮುಗಿಸುತ್ತೇನೆ.

ಇಡೀ ಸಿನಿಮಾ ಹೊಸ ಸಾಧಕನೊಬ್ಬನಿಗೆ ಸ್ಫೂರ್ತಿಯ ಚಿಲುಮೆಯೆನ್ನುವುದೇ ನನ್ನ ಅಭಿಪ್ರಾಯ. ಬೌದ್ಧಿಕ ಕಾಲ – ದೇಶದ ಸಾಮಾಜಿಕ, ಆರ್ಥಿಕ, ನೈತಿಕ ಸಮಸ್ಯೆ ಸಂಕೀರ್ಣತೆಗಳನ್ನು ಅತ್ಯಂತ ಪ್ರಭಾವಿಯಾಗಿ ಎದುರಿಸಿ ಸಿನಿಮಾ ಮಾಡಬೇಕು ಎನ್ನುವ ನಿಶ್ಚಿತವಾದ ಉದ್ದೇಶದಿಂದ, ತುಡಿತದಿಂದ, ದುಡಿದ ಫಾಲ್ಕೆಯ ಕಾಯಕದ ಪ್ರತಿಮೆ ಇಡೀ ಚಿತ್ರವನ್ನು ವ್ಯಾಪಿಸಿ ಸಾಧನೆ ಮಾಡುವ ಎಲ್ಲಾ ಸಾಧಕರಿಗೂ ಕೂಡ ದಾರಿದೀಪವಾಗುತ್ತದೆ. ಫಾಲ್ಕೆ ಅದೃಷ್ಟವನ್ನು ನಂಬದೇ ಶ್ರಮವನ್ನೇ ಪೂಜಿಸಿ ಹರಿಶ್ಚಂದ್ರಾಚೀ ಫ್ಯಾಕ್ಟರಿಯನ್ನು ಕಡೆಯುತ್ತಾನೆ. ಜಗತ್ತಿನ ಎಲ್ಲಾ ಸಮಾಜ, ದೇಶಗಳೂ ಕೂಡ ಸಿನಿಮಾ ಆರಂಭವಾಗುವಾಗ ಈ ರೀತಿಯ ಅವಸ್ಥೆಯನ್ನು ಎದುರಿಸಿ ಬಂದವುಗಳೇ ಆಗಿವೆ. ಹರಿಶ್ಚಂದ್ರಾಚೀ ಫ್ಯಾಕ್ಟರಿಯ ಮಾದರಿಯಲ್ಲಿ ತೋರಿ ಬರುವ Guiseffee Tornatore ಯ ಇಟಾಲಿಯನ್ ಚಿತ್ರ Cinema Paradiso ಇಂತದ್ದೇ ಕಥಾ ಹಂದರವನ್ನು ಹೊಂದಿದೆ.


ಒಟ್ಟಾರೆ ಒಂದು ಹೊಸ ಕೆಲಸವನ್ನು ಮಾಡುವ ಸಂದರ್ಭದಲ್ಲಿ ನಿರ್ವಹಿಸುವ ಸುಸಂಧಿಯಲ್ಲಿ ಹೇಗೆ? ಯಾವ ರೀತಿಯಲ್ಲಿ ಮಾನಸಿಕತೆ ಮತ್ತು ಸಂತುಲಿತ ಮನೋಭಾವವನ್ನು ಹೊಂದಿರಬೇಕು? ಸಾಧನೆ ಹೂವು ಅಥವಾ ಹಣ್ಣು ಎನ್ನುವುದಾದರೆ ಸಾಧನೆಯ ಹಾದಿಯ ಕಲ್ಲು ಮುಳ್ಳುಗಳೇನು? ಹಾಗೂ ಆ ಹಾದಿಯಲ್ಲಿ ಹೇಗೆ ಕಾಲಿಡಬೇಕು, ನಿಲ್ಲಬೇಕು, ಸಹಿಸಬೇಕು, ಒಡೆಯಬೇಕು, ಮುರಿದು ಕಟ್ಟಬೇಕು ಮತ್ತು ಹೊಸತನ್ನು ಕಂಡುಕೊಂಡು ಸಾಧಕನಾಗಬೇಕು ಎನ್ನುವುದಕ್ಕೆ ಒಂದು ಕೈಪಿಡಿಯ ಹಾಗೇ ಹರಿಶ್ಚಂದ್ರಾಚೀ ಫ್ಯಾಕ್ಟರಿ ಸಿನೆಮಾ ನಮ್ಮ ಮುಂದಿದೆ.