ಮೂರನೇ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻಫೋಟೋʼ ಚಿತ್ರದ್ದು ಬೇರೆಯದೇ ರೀತಿಯ ಛಾಪು. ಚಿತ್ರೋತ್ಸವದ ಎರಡನೇ ದಿನ 4ನೇ ಪರದೆಯಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿದು ತುಂಬಿದ್ದರು. ಆಸನಗಳು ಸಾಲದಕ್ಕೆ ಚಿತ್ರಮಂದಿರದ ನಿಯಮವನ್ನೂ ಮುರಿದು ಮೆಟ್ಟಿಲುಗಳ ಮೇಲೆ ಕುಳಿತು ಸಹ ಹಲವರು ಚಿತ್ತ ಬದಲಿಸದೇ ನೆಟ್ಟ ದೃಷ್ಟಿಯಲ್ಲೇ ಚಿತ್ರವನ್ನು ವೀಕ್ಷಿಸಿದರು. ಚಿತ್ರ ಪ್ರದರ್ಶನ ಮುಗಿಯುವವರೆಗೂ ಈ ಗಾಂಭಿರ್ಯ ಹಾಗೇ ಇತ್ತು. ಇನ್ನೇನು ಚಿತ್ರ ಮುಗಿಯಿತು ಎನ್ನುವಾಗ ಎಂಥ ಕಲ್ಲು ಮನದ ಪ್ರೇಕ್ಷಕನೂ ಕರಗಿ ಕಣ್ಣೀರಾಗಿಬಿಟ್ಟಿದ್ದ!
‘ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ನೋಡಿದ ಸಿನಿಮಾಗಳ ಕುರಿತು ಕುಮಾರ ಬೇಂದ್ರೆ ಬರಹ

ಚಿತ್ರ ರಸಿಕರ ನಿರೀಕ್ಷೆಯಂತೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 14ನೇ ಆವೃತ್ತಿ ಅತ್ಯಂತ ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿ ಅಸಂಖ್ಯ ಪ್ರಯೋಗಾತ್ಮಕ ಚಿತ್ರಗಳನ್ನು ಪ್ರೇಕ್ಷಕರಿಗೆ ಉಣಬಡಿಸಿತು. ಸದಭಿರುಚಿಯ ಚಿತ್ರಗಳ ಮೂಲಕ ಪ್ರೇಕ್ಷಕನಲ್ಲಿ ಸಾಮಾಜಿಕ ಕಾಳಜಿ ಪ್ರಜ್ಞೆಯನ್ನು ಕೂಡ ಹುಟ್ಟುಹಾಕಿತು.

ಈ ಹಿಂದೆ ನಡೆದ ಹಲವು ಆವೃತ್ತಿಗಳ ಚಿತ್ರೋತ್ಸವಗಳನ್ನು ಇದಕ್ಕೆ ತುಲನೆ ಮಾಡಿದಲ್ಲಿ ಮತ್ತು ಈ ಬಾರಿ ಆಯ್ಕೆ ಮಾಡಿದ ಉತ್ತಮ ಚಿತ್ರಗಳನ್ನು ಗಮನಿಸಿದಾಗ, 14ನೇ ಆವೃತ್ತಿಯ ಚಿತ್ರೋತ್ಸವ ಗುಣಾತ್ಮವೂ ಮೌಲ್ಯಯುತವೂ ಆದದ್ದು ಅನಿಸುತ್ತದೆ. ಈ ಯಶಸ್ಸಿನ ಹಿಂದೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಅಶೋಕ ಕಶ್ಯಪ್‌ಅವರ ಸಮತೋಲಿತ ದೃಷ್ಟಿ ಮತ್ತು ಪರಿಶ್ರಮ ಇರುವುದು ಗೋಚರಿಸುತ್ತದೆ. ಅವರೊಂದಿಗೆ ಅವರ ತಂಡದ ಕೆಲಸವೂ ಗಮನಾರ್ಹ. ಸರ್ಕಾರಿ ಉತ್ಸವವೊಂದನ್ನು ಹೀಗೆ ಶ್ರಮ, ಶ್ರದ್ಧೆಯಿಂದ ನಿರ್ವಹಿಸಿ ಅರ್ಥಪೂರ್ಣ ಮತ್ತು ಮೌಲ್ಯಯುತಗೊಳಿಸಬಹುದು ಎಂಬುದಕ್ಕೆ 2023ರ ಈ ಚಿತ್ರೋತ್ಸವ ನಿದರ್ಶನವಾಯಿತು.

ಮಾರ್ಚ್‌23ರಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ ನಡೆದ ಉದ್ಘಾಟನಾ ಸಮಾರಂಭ ವರ್ಣರಂಜಿತವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಿ, ಕನ್ನಡ ಚಿತ್ರರಂಗಕ್ಕೆ ಸರ್ಕಾರ ಹಲವು ರೀತಿಯಲ್ಲಿ ನೆರವಾಗುವ ಮಾತುಗಳನ್ನಾಡಿದರು. ಈ ಕಾರ್ಯಕ್ರಮ ಕೇವಲ ಭಾಷಣಕ್ಕೆ ಸೀಮಿತವಾಗಿರಲಿಲ್ಲ. ವಿವಿಧ ಕಲಾವಿದರು ತಮ್ಮ ಕಲಾಕೌಶಲ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು. ತಾರೆಗಳ ಉಪಸ್ಥಿತಿ ಕಾರ್ಯಕ್ರಮವನ್ನು ಮತ್ತಷ್ಟು ಸಮೃದ್ಧಗೊಳಿಸಿತು. ಹೀಗೆ ಆರಂಭವಾದ ಚಿತ್ರೋತ್ಸವದಲ್ಲಿ ಮಾರನೇ ದಿನದಿಂದ ಒರಾಯನ್‌ ಮಾಲ್‌ನ 11 ತೆರೆಗಳಿರುವ ಪಿವಿಆರ್‌ ಚಿತ್ರಮಂದಿರದಲ್ಲಿ ವಿಭಿನ್ನ ಹಾಗೂ ವೈವಿಧ್ಯಮಯ ಚಿತ್ರಗಳ ಪ್ರದರ್ಶನ ಆರಂಭಿಸಲಾಯಿತು. ಆಶ್ಚರ್ಯವೆಂದರೆ ಈ ಬಾರಿ ತಮ್ಮಿಷ್ಟದ ಚಿತ್ರಗಳನ್ನು ನೋಡಲು ಅಲ್ಲಿಗೆ ಲಗ್ಗೆ ಇಟ್ಟ ಚಿತ್ರಪ್ರೇಕ್ಷರ ದಟ್ಟಣೆ! ಬೆಳಗಿನಿಂದಲೇ ಎಲ್ಲ ಪರದೆಯ ದ್ವಾರಗಳ ಮುಂದೆ ಜನರ ಸಾಲು-ಸಾಲು! ಈ ಕುತೂಹಲ ರಾತ್ರಿಯಾದರೂ ಕಡಿಮೆಯಾಗುತ್ತಿರಲಿಲ್ಲ. ಕಡೆಗೆ ಚಿತ್ರಗೃಹ ಜನರಿಂದ ತುಂಬಿದಾಗ, ಕೆಲವು ಚಿತ್ರಗಳನ್ನು ನೋಡಲೇಬೇಕೆಂದು ಸಾಲಿನಲ್ಲಿ ನಿಂತವರಿಗೆ ನಿರಾಸೆಯೂ ಮೂಡಿದ್ದಿದೆ. ಇದು ಇಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳ ಮೌಲ್ಯ ಮತ್ತು ಪ್ರೇಕ್ಷರ ಅಭಿರುಚಿಯೊಂದಿಗೆ ಚಿತ್ರೋತ್ಸವದ ಗುಣಾತ್ಮಕ ಶಕ್ತಿಯನ್ನು ತಿಳಿಸುತ್ತದೆ. ಹೀಗೆ ಈ ಬಾರಿಯ ಚಿತ್ರೋತ್ಸವ ಪ್ರೇಕ್ಷರಿಗೆ ನಿಜವಾದ ಅರ್ಥದಲ್ಲಿ ಹಬ್ಬವೇ ಆಗಿತ್ತು! ಕನ್ನಡ ಚಿತ್ರಪರಂಪರೆಯ ಕೇಂದ್ರಬಿಂದುವಾದ ಬೆಂಗಳೂರಿನಲ್ಲಿ ಕರ್ನಾಟಕ ಸರ್ಕಾರದಿಂದ ನಡೆಯುವ ಇಂಥವೊಂದು ಪ್ರತಿಷ್ಠಿತ ಉತ್ಸವ ಹೀಗೆ ಕನ್ನಡ ಚಿತ್ರಪರಂಪರೆಯ ಬೆಳವಣಿಗೆಗೆ ಸಾಕ್ಷಿಪ್ರಜ್ಞೆಯಾಗಿ ಉಳಿಯಿತು.

ಗಮನ ಸೆಳೆದ ಕನ್ನಡ ಚಿತ್ರಗಳು:

ಉತ್ಸವದಲ್ಲಿ ಈ ಬಾರಿ ಕನ್ನಡದ ಕೆಲವು ಶ್ರೇಷ್ಠ ಚಿತ್ರಗಳು ಪಂಡಿತರಿಂದ ಪಾಮರರವರೆಗೂ ಗಮನ ಸೆಳೆದು ಅವುಗಳ ಬಗ್ಗೆ ಮಾತನಾಡಿಕೊಳ್ಳುವಂತೆ ಮಾಡಿದವು. ಇತರ ದೇಶಗಳ ಮತ್ತು ಬೇರೆ ಬೇರೆ ಭಾಷೆಗಳ ಉತ್ತಮ ಚಿತ್ರಗಳನ್ನು ವೀಕ್ಷಿಸಿ ಮೆಚ್ಚಿ ಮಾತನಾಡುತ್ತಿದ್ದ ಸದಭಿರುಚಿಯ ಪ್ರೇಕ್ಷಕರು ಈ ಬಾರಿ ಕನ್ನಡದ ಕೆಲವು ಚಿತ್ರಗಳನ್ನು ಅದೇ ಎತ್ತರದಲ್ಲಿಟ್ಟು ತೂಗಿ ನಿರ್ದೇಶಕರ ಕೌಶಲ, ಸಾಮರ್ಥ್ಯವನ್ನು ಕೂಡ ಕೊಂಡಾಡಿದರು. ಪ್ರಯೋಗಾತ್ಮಕ ಚಿತ್ರಗಳು ಪ್ರೇಕ್ಷರಲ್ಲಿ ಯಾವ ರೀತಿಯ ಭಾವವಿರೇಚನ ಮೂಡಿಸಿ, ಮನಸ್ಸು ತಟ್ಟಿವೆ ಎಂಬುದನ್ನು ಪರಸ್ಪರ ಮಾತನಾಡಿಕೊಳ್ಳುವುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮುಕ್ತ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಗಮನಿಸಬಹುದು. ಇಂತಹ ಮೌಲ್ಯಯುತ, ಸದಭಿರುಚಿಯ ಚಿತ್ರಗಳ ಸಾಲಿನಲ್ಲಿ ಕನ್ನಡದ ʻನಾನು ಕುಸುಮʼ, ʻಹದಿನೇಳೆಂಟುʼ, ʻಕೋಳಿ ಎಸ್ರುʼ, ʻಫೋಟೋʼ, ʻವಿರಾಟಪುರದ ವಿರಾಗಿʼ, ʻ19.20.21ʼ, ʻಕೊರಮ್ಮʼ ಚಿತ್ರಗಳು ನಿಂತಿವೆ. ಈ ಚಿತ್ರಗಳು ಈ ಬಾರಿಯ ಪ್ರಶಸ್ತಿಗೆ ಕೂಡ ಭಾಜನವಾಗಿವೆ. ಇಲ್ಲಿ ಆಯೋಜಿಸಲಾಗುವ ಮೂರು ವಿಭಾಗಗಳಾದ ಏಷಿಯನ್‌ ಚಿತ್ರಗಳ ಸ್ಪರ್ಧೆ, ಭಾರತೀಯ ಚಿತ್ರಗಳ ಸ್ಪರ್ಧೆ (ಚಿತ್ರಭಾರತಿ), ಕನ್ನಡ ಚಿತ್ರಗಳ ಸ್ಪರ್ಧೆಯಲ್ಲಿ ಈ ಚಿತ್ರಗಳು ಪ್ರಶಸ್ತಿ ಗೆದ್ದಿವೆ.

ಕನ್ನಡ ಚಿತ್ರಗಳ ಸ್ಪರ್ಧಾ ವಿಭಾಗ:

ಕನ್ನಡ ಚಿತ್ರಗಳ ಚಿತ್ರಸ್ಪರ್ಧಾ ವಿಭಾಗದಲ್ಲಿ ಕೃಷ್ಣೇಗೌಡ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿ, ನಿರ್ಮಾಣ ಮಾಡಿರುವ ʻನಾನು ಕುಸುಮʼ ಚಿತ್ರ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ಪೃಥ್ವಿ ಕೋಣನೂರು ನಿರ್ದೇಶಿಸಿ ನಿರ್ಮಾಣ ಮಾಡಿರುವ ʻಹದಿನೇಳೆಂಟುʼ ಚಿತ್ರ ದ್ವಿತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ಯುವ ನಿರ್ದೇಶಕ ಉತ್ಸವ್‌ ಗೋನವಾರ ನಿರ್ದೇಶನದ ʻಫೋಟೋʼ ಚಿತ್ರ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಅದೂ ಅಲ್ಲದೇ ತೀರ್ಪುಗಾರರ ಮೆಚ್ಚುಗೆ ಪಡೆದ ವಿಶೇಷ ಪ್ರಶಸ್ತಿಗೆ ಮನ್ಸೋರೆ ನಿರ್ದೇಶನದ ʻ19.20.21ʼ ಚಿತ್ರ ಹಾಗೂ ಶಿವಧ್ವಜ ಶೆಟ್ಟಿ ನಿರ್ದೇಶನದ ʻಕೊರಮ್ಮʼ ಚಿತ್ರ ಭಾಜನವಾಗಿವೆ.

ಭಾರತೀಯ ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಚಂಪಾ ಶೆಟ್ಟಿ ನಿರ್ದೇಶನದ ʻಕೋಳಿಎಸ್ರುʼ ಚಿತ್ರ ಪ್ರಥಮ ಅತ್ಯುತ್ತಮ ಪ್ರಶಸ್ತಿ ಗಳಿಸಿದೆ. ಏಷಿಯನ್‌ಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ಬಿ.ಎಸ್‌. ಲಿಂಗದೇವರು ನಿರ್ದೇಶನದ ʻವಿರಾಟಪುರದ ವಿರಾಗಿʼ ಚಿತ್ರ ಮೂರನೇ ಅತ್ಯುತ್ತಮ ಪ್ರಶಸ್ತಿ ಹಾಗೂ ಬಡಿಗೇರ ದೇವೆಂದ್ರ ನಿರ್ದೇಶನದ ʻಇನ್‌ʼ ಚಿತ್ರ ತೀರ್ಪುಗಾರರ ಮೆಚ್ಚುಗೆ ಪಡೆದ ವಿಶೇಷ ಪ್ರಶಸ್ತಿಗೆ ಭಾಜನವಾಗಿದೆ.

ಈ ಮೊದಲೇ ಗೆದ್ದಿದ್ದ ಚಿತ್ರಗಳು:

ಕನ್ನಡ ಚಿತ್ರಗಳ ಚಿತ್ರಸ್ಪರ್ಧಾ ವಿಭಾಗದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻನಾನು ಕುಸುಮʼ ದ್ವಿತೀಯ ಅತ್ಯುತ್ತಮಚಿತ್ರ ಪ್ರಶಸ್ತಿ ಪಡೆದಿರುವ ʻಹದಿನೇಳೆಂಟುʼ ಚಿತ್ರಗಳು ಈಗಾಗಲೇ ದೇಶ-ವಿದೇಶಗಳ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು, ಪ್ರಶಸ್ತಿಗೆ ಭಾಜನವಾಗಿ ದೇಶದ ಉದ್ದಗಲಕ್ಕೂ ತಮ್ಮ ಛಾಪು ಮೂಡಿಸಿದ್ದವು. ʻಹದಿನೇಳೆಂಟುʼ ಚಿತ್ರ ಕಳೆದ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾದ ಆರಂಭಿಕ ಚಿತ್ರವಾಗಿ ಪ್ರದರ್ಶನ ಕಂಡು ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿದಿತ್ತು. ಅದೇ ರೀತಿ ಗೋವಾ ಚಿತ್ರೋತ್ಸವದಲ್ಲಿ ಗಾಂಧಿ ಮೆಡಲ್‌ ಪುರಸ್ಕಾರಕ್ಕಾಗಿ ಸೆಣಸುವ ಸ್ಪರ್ಧೆಯಲ್ಲಿದ್ದ ಕನ್ನಡದ ಏಕೈಕ ಚಿತ್ರವಾಗಿ ʻನಾನು ಕುಸುಮʼ ಪ್ರದರ್ಶನವಾಗಿ ಕನ್ನಡ ಚಿತ್ರಗಳ ಸಾಮರ್ಥ್ಯಕ್ಕೆ ಮಾದರಿಯಾಗಿತ್ತು. ಈಗ ಈ ಎರಡೂ ಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರಥಮ, ದ್ವಿತೀಯ ಸ್ಥಾನದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಚಾರ.

ಕಣ್ಣು ಒದ್ದೆಯಾಗಿಸಿದ ʻಫೋಟೋʼ:

ಮೂರನೇ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ ʻಫೋಟೋʼ ಚಿತ್ರದ್ದು ಬೇರೆಯದೇ ರೀತಿಯ ಛಾಪು. ಚಿತ್ರೋತ್ಸವದ ಎರಡನೇ ದಿನ 4ನೇ ಪರದೆಯಲ್ಲಿ ಮೊದಲ ಪ್ರದರ್ಶನ ಕಂಡ ಈ ಚಿತ್ರ ನೋಡಲು ಪ್ರೇಕ್ಷಕರು ಕಿಕ್ಕಿದು ತುಂಬಿದ್ದರು. ಆಸನಗಳು ಸಾಲದಕ್ಕೆ ಚಿತ್ರಮಂದಿರದ ನಿಯಮವನ್ನೂ ಮುರಿದು ಮೆಟ್ಟಿಲುಗಳ ಮೇಲೆ ಕುಳಿತು ಸಹ ಹಲವರು ಚಿತ್ತ ಬದಲಿಸದೇ ನೆಟ್ಟ ದೃಷ್ಟಿಯಲ್ಲೇ ಚಿತ್ರವನ್ನು ವೀಕ್ಷಿಸಿದರು. ಚಿತ್ರ ಪ್ರದರ್ಶನ ಮುಗಿಯುವವರೆಗೂ ಈ ಗಾಂಭಿರ್ಯ ಹಾಗೇ ಇತ್ತು. ಇನ್ನೇನು ಚಿತ್ರ ಮುಗಿಯಿತು ಎನ್ನುವಾಗ ಎಂಥ ಕಲ್ಲು ಮನದ ಪ್ರೇಕ್ಷಕನೂ ಕರಗಿ ಕಣ್ಣೀರಾಗಿಬಿಟ್ಟಿದ್ದ! ಹೀಗೆ ಮೌನವಾಗಿಯೇ ಪ್ರೇಕ್ಷನ ಮನಗೆದ್ದಿದ್ದ ಈ ಚಿತ್ರದ ನಿರ್ದೇಶಕ ಉತ್ಸವ್‌ ಗೋನವಾರ ತಾನೂ ಒಬ್ಬ ಪ್ರೇಕ್ಷಕನಂತೆ ಎದ್ದು ನಿಂತಾಗ ಹಲವು ಪ್ರೇಕ್ಷಕರು ಅವರನ್ನು ಮುತ್ತಿಕೊಂಡು, ಅಪ್ಪಿ ಕೊಂಡಾಡಿದರು. ಪ್ರೇಕ್ಷಕರ ಪ್ರೀತಿ ಕಂಡು ಮೂಕರಾಗಿದ್ದ ಅವರೊಂದಿಗೆ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಒಟ್ಟಾರೆ ʻಫೋಟೋʼ ಚಿತ್ರ ಹೀಗೆ ಭಾವನಾತ್ಮಕವಾಗಿ ಪ್ರೇಕ್ಷನನ್ನು ಗೆದ್ದು ನಿರ್ದೇಶಕನನ್ನೇ ಹೀರೋವಾಗಿಸಿತ್ತು. ಹಾಗಾಗಿ ಕನ್ನಡ ಚಿತ್ರಗಳನ್ನು ಪ್ರೀತಿಸುವವರು ಇಲ್ಲ ಎಂದು ಕೊರಗುವವರು ಒಮ್ಮೆಯಾದರೂ ಬಂದು ಇಂಥ ಪ್ರೀತಿಯನ್ನು ಕಣ್ಣು ತುಂಬಿಕೊಳ್ಳಬೇಕು!

ಮೂರು ಪ್ರದರ್ಶನ ಕಂಡ ʻಬ್ರಹ್ಮ ಕಮಲʼ!:

ಸಿದ್ದು ಪೂರ್ಣಚಂದ್ರ ನಿರ್ದೇಶನದ ʻಬ್ರಹ್ಮ ಕಮಲʼ ಚಿತ್ರಕ್ಕೂ ಉತ್ಸವದಲ್ಲಿ ಇದೇ ರೀತಿಯ ಜನ ಮನ್ನಣೆ ದೊರೆಯಿತು. ವಿಶೇಷ ಪ್ರರ್ದಶನಕ್ಕಾಗಿ ಆಯ್ಕೆಯಾಗಿದ್ದ ಈ ಚಿತ್ರದ ಪ್ರದರ್ಶನವನ್ನು ಮಾ.29ರಂದು 11ನೇ ತೆರೆಯಲ್ಲಿ ಆಯೋಜಿಸಲಾಗಿತ್ತು. ಕಳೆದ ವರ್ಷ ಉತ್ಸವದ 13ನೇ ಆವೃತ್ತಿಯಲ್ಲಿ ದ್ವಿತೀಯ ಅತ್ತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದ್ದ ಇದೇ ನಿರ್ದೇಶಕರ ʻದಾರಿ ಯಾವುದಯ್ಯಾ ವೈಕುಂಠಕೆʼ ಚಿತ್ರ ತನ್ನದೇ ಆದ ಛಾಪು ಮೂಡಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ʻಬ್ರಹ್ಮ ಕಮಲʼ ನೋಡಲು 11ನೇ ತೆರೆಯ ಎದುರು ಜನ ಕಿಕ್ಕಿರಿದು ತುಂಬಿದ್ದರು. ಪ್ರದರ್ಶನ ಆರಂಭಕ್ಕೆ ಮುನ್ನವೇ ಚಿತ್ರಗೃಹ ಪೂರ್ಣ ತುಂಬಿ, ಇನ್ನೂ ಒಂದು ಪ್ರದರ್ಶನಕ್ಕಾಗುವಷ್ಟು ಜನ ಹೊರಗೆ ನಿಲ್ಲಬೇಕಾಯಿತು. ಈ ಚಿತ್ರ ನೋಡಲು ಇಷ್ಟೊಂದು ಪ್ರಮಾಣದ ಜನ ಸೇರಿದ್ದನ್ನು ಕಂಡ ಚಿತ್ರೋತ್ಸವದ ನಿರ್ದೇಶಕರೂ ಆದ ಅಶೋಕ ಕಶ್ಯಪ್‌ ಅವರು, ಪ್ರೇಕ್ಷರು ನಿರಾಶರಾಗದಿರಲೆಂದು ಹಿಂದೆಯೇ ಅದೇ ತೆರೆಯಲ್ಲಿ ಮತ್ತೊಂದು ಪ್ರದರ್ಶನಕ್ಕೆ ಅನುಮತಿ ಕೊಟ್ಟರು. ಹಾಗಾಗಿ ಮತ್ತೆ ಅದೇ ಚಿತ್ರದ ಮತ್ತೊಂದು ಪ್ರದರ್ಶನ ಮಾಡಲಾಯಿತು. ಇಷ್ಟಾಗಿಯೂ ಜನರ ಒತ್ತಡ ಅರಿತು ಮಾರನೇ ದಿನ ಮಾ.30ರಂದೂ ಕೂಡ ಬೆಳಗ್ಗೆ ಇದೇ ಚಿತ್ರದ ಮತ್ತೊಂದು ಪ್ರದರ್ಶನ ಮಾಡಲಾಯಿತು. ಹೀಗೆ ಸಿದ್ದು ಪೂರ್ಣಚಂದ್ರ ನಿರ್ದೇಶನದ ʻಬ್ರಹ್ಮ ಕಮಲʼ ಚಿತ್ರವನ್ನು ಪ್ರೇಕ್ಷಕರು ಬಿಡದೇ ಕಣ್ಣುತುಂಬಿಕೊಂಡರು. ಕನ್ನಡದ ಪ್ರಯೋಗಾತ್ಮಕ ಪರ್ಯಾಯ ಚಿತ್ರವೊಂದನ್ನು ಜನ ಮುಗಿಬಿದ್ದು ನೋಡುವುದನ್ನು ಗಮನಿಸಿದರೆ, ಚಿತ್ರಪ್ರೇಕ್ಷರ ಉತ್ತಮ ಅಭಿರುಚಿ ಮತ್ತು ನಿರ್ದೇಕರ ವಿಭಿನ್ನ ಛಾಪು ಗಮನಾರ್ಹ ಅನಿಸುತ್ತದೆ.

ಹೀಗೆ ಚಿತ್ರಜಗತ್ತಿನ ಬೇರೆ ಬೇರೆ ಮಜಲುಗಳನ್ನು ಬೆಂಗಳೂರಿನಲ್ಲಿ ಒಟ್ಟಿಗೇ ನೋಡುವಂತೆ ವ್ಯವಸ್ಥೆ ಮಾಡುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಹಿರಿಮೆ ದೊಡ್ಡದು. ಇದನ್ನು ಪೋಷಿಸಿಕೊಂಡು ಬೆಳೆಸುತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯ ಅಭಿನಂದನೀಯ. ಪ್ರತಿ ವರ್ಷ ಹೀಗೇ ನಮ್ಮ ಚಿತ್ರೋತ್ಸವ ಸಕಾಲಕ್ಕೆ ವೈಭವದಿಂದ ನಡೆಯುತ್ತಿರಲಿ ಎಂಬುದು ಚಿತ್ರರಸಿಕರ ಭಿನ್ನಹ.