ಇಂಥ ಗಣಪ ಇತ್ತೀಚೆಗೆ ನಾಗಿ ಬಳಿ ಪ್ರೀತಿಯಿಂದಿರಲಿಲ್ಲ. ಹಗಲೆಲ್ಲ ದುಡಿಯುತ್ತಿದ್ದರೂ ರಾತ್ರಿಹೊತ್ತು ಚೆನ್ನಾಗಿ ಹೊಡೆಯುತ್ತಿದ್ದ. ಅದೂ ಜಯಮಾಲಿನಿ ಸಿನಿಮಾ ನೋಡಿ ಬಂದಮೇಲಂತೂ ವಾರಗಟ್ಟಲೆ ಅವ ಸಮ ಇರುತ್ತಿರಲಿಲ್ಲ. ಒಂದೊಂದು ದಿನ ಒಂದೊಂದು ರೀತಿ ಇರುತ್ತಿದ್ದ. ಒಂದಿನ ನಾಗಿ ಹತ್ರ ಕವಳ ಹಾಕದ್ನ ಬುಡು ಇನ್ನು, ನೋಡಾಕಾಗಕಲ್ಲ ನಿನ್ನ ಮುಖಾನಾ..ಎಂದು ಜೋರು ಮಾಡಿದವನನ್ನು ಅಚ್ಚರಿಯಿಂದ ನೋಡಿದಳು ನಾಗಿ. ಅಲ್ಲಾಇಷ್ಟು ಮಕ್ಕಳು ಹುಟ್ಟೋಗಂಟ ನಿಂಗೆ ನನ್ನ ಕವಳ ಚೆಂದ ಐತಿ ಅನಿಸ್ತಿತ್ತುಈಗೆಂತಾಕೈತಾ ನಿಂಗೆ ಎಂದು ಕೇಳಬೇಕೆನಿಸಿದರೂ ಅವ ಕೊಡುವ ಪೆಟ್ಟುಗಳನ್ನು ನೆನೆದು ಏನನ್ನೂ ಕೇಳದೆ ಸುಮ್ಮನಾದಳು.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕಥೆಗಳ ಹದಿನಾರನೆಯ ಕಂತು.

 

ಈ ಜೋರು ಮಳೆ ನಿಂತು, ಸ್ವಲ್ಪಸ್ವಲ್ಪ ಬಿಸಿಲು ಬಂದು, ಭೂಮಿಯೊಳಗಿನ ಹುಳಹುಪ್ಪಟೆಗಳೆಲ್ಲ ಇನ್ನು ಒಳಗಿರಲಾರೆವೆಂಬಂತೆ ಬುಳುಬುಳು ಎಂದು ಹೊರಬಂದು ಪಟಪಟನೆ ರೆಕ್ಕೆ ಬಡಿದು ಸದ್ದು ಮಾಡುವಾಗಲೆಲ್ಲ, ಬಿಸಿಲಿಗಾಗಿಯೇ ಕಾದಿದ್ದವೆಂಬಂತೆ ಹಾವು, ಚೇಳುಗಳೆಲ್ಲ ಸರಸರನೆ ಹೊರಬಂದು ಕಟ್ಟಿಗೆ ಸಂದು, ಬಾಗಿಲು ಸಂದುಗಳಲ್ಲೆಲ್ಲ ಹೊಕ್ಕು ಬೆದರಿಸುವಾಗಲೆಲ್ಲ ಗಣಪ ನೆನಪಾಗುವುದಕ್ಕೆ ಕಾರಣವಿದೆ. ಹಾವುಗಳ ವಿಷಯ ಬಂದಾಗಲಂತೂ ಗಣಪ ನೆನಪಾಗದಿರಲು ಸಾಧ್ಯವೇ ಇಲ್ಲ.

ಈ ಸರ್ಪನಹಾವು(ನಾಗರಹಾವು), ಮರಹಾವು, ಕುದುರುಬೆಳ್ಳ ಹಾವು, ಕೊಳಕಮಂಡಲ ಹಾವು, ಕೇರೆ ಹಾವು, ಹಾಸುಂಬೆ ಹಾವು, ಹೆಬ್ಬಾವು, ಕಾಳಿಂಗಸರ್ಪ, ಹೀಗೆ ಭೂಮಿ ಮೇಲಿರುವ ಅಷ್ಟೂ ಹಾವುಗಳ ಕುರಿತೂ ಒಂದೊಂದು ಕತೆಗಳನ್ನು ಹೇಳುತ್ತ, ನಮ್ಮನ್ನೆಲ್ಲ ಚಕಿತಗೊಳಿಸುತ್ತಿದ್ದ ಗಣಪ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು, ಯಾಕೆಂದರೆ ಎಷ್ಟು ಕೆಲಸ ಹೇಳಿದರೂ ಇಲ್ಲ ಎನ್ನದೆ ಪ್ರೀತಿಯಿಂದ ಮಾಡಿಕೊಡುತ್ತಿದ್ದ ಎನ್ನುವ ಕಾರಣಕ್ಕಾಗಿಯಲ್ಲದೆ, ಬೇಕಾದಷ್ಟು ಕತೆಗಳನ್ನು ಹೇಳುತ್ತಿದ್ದನೆಂಬ ಕಾರಣಕ್ಕಾಗಿಯೂ.

ಈ ಗಣಪ ಸಿದ್ದಾಪುರ ಬಳಿಯ ಕೊಂಡ್ಲಿಕಡೆಯಿಂದ ದಿನಾ ಮೈಲುಗಟ್ಟಲೆ ನಡೆದುಕೊಂಡು ನನ್ನ ಮಾವನ ಮನೆಗೆ ಕೆಲಸಕ್ಕೆ ಬರುತ್ತಿದ್ದ. ಮೈಗೆಲ್ಲ ಎಣ್ಣೆ ಹಚ್ಚಿಕೊಂಡಿದ್ದಾನೇನೋ ಅನ್ನಿಸುವಷ್ಟು ಕಪ್ಪಗೆ ಫಳಫಳನೆ ಹೊಳೆಯುವಂತಿದ್ದ. ಆದರೆ ಅವನ ಹಲ್ಲು ಮಾತ್ರ ಬೆಳ್ಳಗೆ ಹೊಳೆಯುತ್ತಿದ್ದವು. ಅವ ನಕ್ಕರೆ ಕತ್ತಲ ರಾಶಿಯ ನಡುವೆ ಫಳ್ ಎಂಬ ಮಿಂಚೊಂದು ಬಂದಂತೆ ಎನಿಸುತ್ತಿತ್ತು. ಅಂಥ ಗಣಪ ಒಬ್ಬನೇ ಬೇಕಾದರೂ ಇಡೀ ತೋಟದ ಅಡಕೆಗೊನೆಗಳನ್ನೆಲ್ಲಾ ಕೊಯ್ದಾಕಿಬಿಡಬಲ್ಲ, ಇಡೀ ಗದ್ದೆಯ ಬತ್ತವನ್ನೆಲ್ಲ ಒಬ್ಬನೇ ಒಬ್ಬಳಿಸಿಬಿಡಬಲ್ಲ, (ಬಡಿಯುವುದು) ಹಾಗೆಯೇ ಎಲ್ಲೇ ಹಾವು, ಚೇಳುಗಳಿರಲಿ ಅವುಗಳನ್ನೆಲ್ಲ ಬರಿಗೈಯ್ಯಲ್ಲೇ ಹಿಡಿದು ಎತ್ತಿ ಬಿಸಾಕಿಬಿಡಬಲ್ಲ ಅನ್ನುವಷ್ಟು ಅವನ ಕುರಿತು ಕತೆಗಳಿದ್ದವು. ಚಿಕ್ಕಮಕ್ಕಳಿಗೆಲ್ಲ ಆದರೆ ಗಣಪನಂಥ ಧೈರ್ಯಸ್ಥನಾಗಬೇಕೆಂಬಷ್ಟು ಹೀರೋ ಆಗಿದ್ದ.

ಯಾವಾಗಲೂ ಸುಖದಲ್ಲಿಯೇ ಇದ್ದಾನೆಂಬಂತೆ ತನ್ನ ಬೆಳ್ಳನೆಯ ಹಲ್ಲುಗಳನ್ನು ತೋರಿಸುತ್ತ ನಗುವ ಗಣಪನಿಗೆ, ಇರಲು ನೆಟ್ಟಗೆ ಮನೆಯಿಲ್ಲ, ಈಗಲೋ ಆಗಲೋ ಹರಕಂಡು ಬಿದ್ದೇಬಿಡುತ್ತದೆ ಎಂಬಂಥ ಒಂದು ಗುಡಿಸಲು. ಅಷ್ಟೊತ್ತಿಗಾಗಲೇ ಕೈಗೊಂದು, ಕಾಲಿಗೊಂದು, ಸೊಂಟಕ್ಕೊಂದು ಎಂಬಂತೆ ಸಾಲಾಗಿ ನಾಲ್ಕೈದು ಮಕ್ಕಳು, ಅವುಗಳಲ್ಲಿ ಕೆಲವು ಸತ್ತು ಉಳಿದದ್ದು ಎರಡೋ… ಮೂರೋ… ಕೂಲಿಯಲ್ಲೇ ಬದುಕು ಸಾಗಿಸುವ ಇವನಿಗೆ ದುಃಖ, ಬೇಜಾರು ಎಂಬುದು ಕಾಡುವುದೇ ಇಲ್ಲವೇ… ಇದು ಸದಾ ನಮ್ಮನ್ನು ಕಾಡುವ ಪ್ರಶ್ನೆ? ಈ ಪ್ರಶ್ನೆ ಅವನ ಕುರಿತು ಮಾತ್ರವಲ್ಲ, ಗಣಪನ ಇಷ್ಟೆಲ್ಲ ಹುಚ್ಚಾಟಗಳನ್ನು ತಡೆದುಕೊಂಡು, ಇಷ್ಟೊಂದು ಮಕ್ಕಳನ್ನು ಹೆತ್ತು ಅವ ಹೋದಲ್ಲೆಲ್ಲ ಹಿಂಬಾಲಿಸಿ, ಹೆಚ್ಚೂಕಮ್ಮಿ ಅವನಷ್ಟೇ ಕೆಲಸ ಮಾಡುವ ಅವನೊಂದಿಗಿರುವ ಈ ನಾಗಿಯ ಕುರಿತೂ ಹೀಗೇ ಅನಿಸುತ್ತಿತ್ತು.

ಬಾಯಿತುಂಬ ಎಲೆ ಅಡಿಕೆ ಜಕ್ಕೊಂಡು ಮೈತುಂಬ ಕೆಲಸ ಮಾಡುವ ನಾಗಿಗೂ ಸುಖದ ಕಲ್ಪನೆ ಎಂದರೆ ಇದೇ ಏನು ಎಂದೆನಿಸಿಬಿಡುತ್ತದೆ. ಅವಳಿಗೆ ಎಲೆ, ಅಡಿಕೆ, ಒಂಚೂರು ಸುಣ್ಣ, ಹೊಗೆಸೊಪ್ಪು ಕೊಟ್ಟರಾತು, ಈ ಗಣಪನಿಗೆ ರಾತ್ರಿ ಕುಡಿಯಾಕೆ ಒಂದು ಬಾಟಲು ಕಳ್ಳು ಬಿದ್ರೆ ಸಾಕು, ಇಬ್ಬರಿಗೂ ಅವತ್ತಿನ ದಿನ ಕಳೀತು ಅನ್ನುವ ಹಾಗಿರ್ತಾರೆ.

ಹಾಗೆಲ್ಲ ಇರುವ ಈ ಜೋಡಿ ಜಗಳಾನೂ ಬೇಕಾದಷ್ಟು ಸಲ ಜಗಳವನ್ನೂ ಮಾಡಿಕೊಂಡಿವೆ. ಜಗಳವಾಡಿದಾಗಲೆಲ್ಲ ಬೆನ್ನು ಮೂಳೆ ಮುರಿಯುವಷ್ಟು ನಾಗಿಗೆ ಬಡಿದು, ಇನ್ನು ನಾಗಿ ಕತೆ ಮುಗೀತು, ಇನ್ನಿವರಿಬ್ಬರೂ ಸತ್ತರೂ ಒಟ್ಟಿಗೆ ಸೇರುವವರಲ್ಲ ಎಂದುಕೊಂಡರೆ ಮಾರನೇ ದಿನ ಎಂದಿನಂತೆ ಕೆಲಸದ ಮನೆಯ ಹಾದಿ ಹಿಡಿಯುತ್ತಾರೆ ಅದೇ ನಗುವಿನೊಂದಿಗೆ.

ಹೀಗೆ ಸದಾಕಾಲ ನಗುತ್ತಲೇ ಕೆಲಸ ಮಾಡುತ್ತಿದ್ದ ಗಣಪ ಪ್ರತಿದಿನವೂ ಹಾವಿನ ಕುರಿತೇ ಒಂದೊಂದು ರೋಚಕ ಕತೆ ಹೇಳುತ್ತಿದ್ದ. ಹಾಗಾಗಿ ಅವನಿಗೆ ಹಾವು ಗಣಪ ಎಂದೇ ಮೊದಲು ಕರೆಯುತ್ತಿದ್ದೆವು. “ಈ ಕಾಳಿಂಗ ಸರ್ಪ ಐತಲಾ… ಅದೂ ಮೊದ್ಲು ಜಡೆ ಬಿಟ್ಟು ನಮ್ಮನ್ನು ಹಿಡಿತೈತಿ, ಆಮೇಲೆ ಕಚ್ಚಿ ಸಾಯಿಸ್ತೈತಿ, ಹಾಸುಂಬೆ ಹಾವು ಕಣ್ಣಿಗೆ ಹಾರಿ ಕಣ್ಣಗುಡ್ಡೆಯನ್ನೇ ತಿಂದುಬಿಡತೈತಿ, ಕೇರೆ ಹಾವು ಬಾಲದಲ್ಲಿ ಫಟ್ ಎಂದು ಹೊಡೆದ್ರೆ ನಮ್ಮ ತೊಡೆಯೆಲ್ಲ ಚಪ್ಪಂಚೂರು ಆಗೋಕೈತಿ.. ಹೀಗೆಲ್ಲ ಕತೆ ಹೇಳುವ ಗಣಪ ಬೇಕಿದ್ದರೆ ಹಾವಿನ ಬಾಲ ಹಿಡಿದು ಗಿರಗಿರನೆ ತಿರುಗ್ಸಿ ಬಿಸಾಕಿ ಒಗೆಯಬಲ್ಲ. ಹಾಗಾಗಿ ಸುತ್ತಮುತ್ತ ಹಾವು ಹಿಡಿಬೇಕೆಂದರೆ ಗಣಪನನ್ನೇ ಕರೆಯುತ್ತಿದ್ದರು. ಹಾಗೆ ನೋಡಿದರೆ ಗಣಪ ವೃತ್ತಿಪರ ಹಾವು ಹಿಡಿಯುವವನೇನಾಗಿರಲಿಲ್ಲ. ಸುಮ್ಮನೆ ಖಯಾಲಿಗೆಂದು ಶುರುಮಾಡಿದ್ದು ಅದೇ ಅವನ ಕಸುಬು ಎನ್ನುವಷ್ಟರ ಮಟ್ಟಿಗೆ ಹಾವು ಹಿಡಿಯುವಲ್ಲಿ ನಿಷ್ಣಾತನಾಗಿದ್ದ. ಆದರೆ ಈ ಹಾವು ಹಿಡಿಯುವ ಚಟ ಬಿಡುವಂಥ ಪ್ರಸಂಗವೂ ಒಮ್ಮೆ ಎದುರಾಯಿತು ಅವನ ಪಾಲಿಗೆ.

ಹಗಲಿಡೀ ಹೀಗೆ ಸಿಕ್ಕಾಪಟ್ಟೆ ಕೆಲಸ ಮಾಡಿ ಸಂಜೆಯಾಗುತ್ತಿದ್ದ ಹಾಗೇ ಮೂಗಿನಮಟ್ಟ ಕಳ್ಳು ಕುಡಿಯದಿದ್ದರೆ ಅವತ್ತಿನ ದಿನವೇ ವ್ಯರ್ಥ ಎನ್ನುವ ಹಾಗಿದ್ದ ಗಣಪ ಒಂದುಸಲ ಹಗಲೇ ಚೆನ್ನಾಗಿ ಕುಡಿದುಬಿಟ್ಟಿದ್ದ. ಅದು ಸಿದ್ದಾಪುರದ ಸಂತೆ. ಜನ ನಿಬಿಡ ಆ ರಸ್ತೆಯಲ್ಲಿ ಅದ್ಹೇಗೋ ಬೀದಿಯ ಬದಿಯಲ್ಲೊಂದು ಹಾವು ಹರಿಯುತ್ತಿದ್ದಂತೆ ಎಲ್ಲರೂ ‘ಹಾವು..ಹಾವು..’ ಎಂದು ಕೂಗಿ ಅದಕ್ಕೆ ಕಲ್ಲು ಹೊಡೆಯತೊಡಗಿದರು. ಆ ಗುಂಪಿನಲ್ಲೇ ಜಾಗ ಮಾಡಿಕೊಂಡು ನುಗ್ಗಿದ ಗಣಪ, ಅವನನ್ನು ನೋಡಿದ ಕೂಡಲೇ ಇತರರೂ ‘ಏ.. ಗಣಪ ಬಂದ ಬಿಡಾ. ಇನ್ನು ಹಾವಿನ ಕತೆ ಮುಗಿದಂಗೇಯ..’ ಎಂದು ಮಾತು ಕೇಳಿದ್ದು, ಮೊದಲೇ ಕಳ್ಳು ಏರಿಸಿಕೊಂಡಿದ್ದ ಗಣಪನಿಗೆ ಈ ಮಾತುಗಳಿಂದ ಇನ್ನಷ್ಟು ಉಮೇದಿ ಹತ್ತಿ ಹೋಗಿ ಅದರ ಬಾಯಿಯನ್ನು ಗಪ್ಪೆಂದು ಹಿಡಿದುಕೊಂಡ. ಹಾಗೆ ಹಿಡಿಯುತ್ತಿದ್ದಂತೆ ಹಾವು ಒದ್ದಾಡಿಕೊಂಡು ಅವನ ಕೈ ತುಂಬ ಬಾಲದಿಂದ ಸುತ್ತಿಕೊಂಡಿತು. ಎಲ್ಲರೂ ಆಹಾ.. ಹೋ.. ಹೋ.. ಎಂದು ಕೂಗುತ್ತಿದ್ದರೆ, ಗಣಪನಿಗೆ ಅದನ್ನು ಬಿಸಾಕುವುದು ಹೇಗೆಂದು ತಿಳಿಯುತ್ತಿಲ್ಲ. ಬೇರೆಲ್ಲಿಯಾಗಿದ್ದರೆ ಅದರ ಬಾಲ ಹಿಡಿದು ಗಿರಗಿರನೆ ತಿರುಗಿಸಿ ಬಿಸಾಕಿಬಿಡುತ್ತಿದ್ದ. ಅಲ್ಲಿ ಜನವೂ ಇರದೆ ಯಾವುದೋ ಮರದ ಬುಡಕ್ಕೋ… ಕಲ್ಲಿನ ಬುಡಕ್ಕೋ ಹೋಗಿ ಬೀಳುತ್ತಿತ್ತು. ಆದರೆ ಇಲ್ಲಿ ಸುತ್ತ ಜನ ಇದ್ದಾರೆ. ಬಿಸಾಕುವ ಹಾಗಿಲ್ಲ. ಇದೇ ಹೊತ್ತಿಗೆ ಇವ ಮುಷ್ಟಿಯಲ್ಲಿ ಬಿಗಿ ಹಿಡಿದ ಹಾವಿನ ಹೆಡೆ ಕೊಸರಿ ಕೊಸರಿ ಚೂರುಚೂರೇ ಆಗಿ ಮೇಲಕ್ಕೆ ಬರುತ್ತಿತ್ತು. ಅದು ನಾಲಿಗೆ ಹೊರ ಚಾಚುತ್ತಲೇ ಮೇಲೆ ಬರುತ್ತಿದ್ದ ಹಾಗೆ ಇವನ ಬಿಗಿತ ಸಡಿಲವಾಗುತ್ತಿರುವಂತೆನಿಸುತ್ತಿತ್ತು. ಅದೀಗ ಇನ್ನೂ ಮೇಲಕ್ಕೆ ಮೂತಿಯನ್ನು ತರುತ್ತಿತ್ತು. ಈಗ ಗಣಪನಿಗೆ ಕಳ್ಳು ಕುಡಿದ ಅಮಲೆಲ್ಲಾ ಇಳಿದು ಬೆವರತೊಡಗಿದ.

ಕೈಯ್ಯನ್ನು ಸುತ್ತಿಕೊಂಡ ಹಾವು ಬಿಗಿಯುತ್ತ ಅವನ ಮುಷ್ಟಿಯಿಂದ ತಪ್ಪಿಸಿಕೊಂಡು ಹೊರ ನುಸುಳುತ್ತಿತ್ತು. ಉಳಿದವರೆಲ್ಲ, “ಏ.. ಗಣಪ ಬಿಡಾ… ಹಾವೆಂದರೆ ಅವನಿಗೆ ಆಟಿಕೆ ಇದ್ಹಂಗೆ, ಚಿಟಿಬಿಲ್ಲು ಹೊಡದ್ಹಂಗೆ ಹೊಡೆದುಬಿಡ್ತ ನೋಡು ಈಗ’ ಎನ್ನುತ್ತಿದ್ದರು. ಇನ್ನು ಒಂಚೂರು ಹೊರಬಂದರೆ ಅದು ಕಚ್ಚಿಯೇ ಸಿದ್ಧ ಎಂಬುದು ಇವನಿಗೆ ಮಾತ್ರ ತಿಳಿದು ಒಳಗೊಳಗೇ ಬೆವರುತ್ತಿದ್ದ. ಹೇಗೆ ಇದರಿಂದ ಹೊರಬರುವುದು ಎಂಬುದು ತಿಳಿಯದೇ ಒದ್ದಾಡತೊಡಗಿದ. ಆಗಲೇ ಅಲ್ಲಿಗೆ ಬಂದ ಇವನದ್ದೇ ಊರಿನ ಸಿದ್ಧನನ್ನ ಕರೆದು ಕಿವಿಯಲ್ಲಿ ಹೇಗಾದರೂ ಮಾಡಿ ಇದರ ಬಾಲ ಹಿಡಿದುಕೊಳ್ಳಲು ಹೇಳಿದ. ಸಿದ್ದ ಬಾಲ ಹಿಡಿದುಕೊಂಡಕೂಡಲೇ, ಅಲ್ಲಿರುವವರನ್ನೆಲ್ಲ ದೂರ ಹೋಗಿ ಎಂದು ಕಳಿಸಿ, ಸಿದ್ದ ನಿಧಾನಕ್ಕೆ ಬಾಲವನ್ನು ಅವನ ಕೈಯಿಂದ ಬಿಡಿಸಿ ಬಾಲವನ್ನು ಗಟ್ಟಿಯಾಗಿ ಹಿಡಿದುಕೊಂಡಕೂಡಲೇ ಫಟಕ್ಕೆಂದು ಹೆಡೆಯನ್ನು ಬಿಸಾಕಿಬಿಟ್ಟ, ಆಗ ತಕ್ಷಣ ಸಿದ್ದನೂ ಬಾಲವನ್ನು ಕೈಬಿಟ್ಟ. ಹೀಗೆ ಅದು ಆ ಕಡೆ ಬಿದ್ದ ಕೂಡಲೇ ಅದರ ಮೇಲೊಂದು ಕಲ್ಲು ಹೇರಿ ಸಾಯಿಸಿಯೇ ಬಿಟ್ಟರು. ಎಲ್ಲರೂ ಗಣಪ ಇದ್ದರೆ ಹಾವೇನು, ಹೆಬ್ಬಾವು ಬಂದರೂ ಭಯವಿಲ್ಲ ಎಂದೆಲ್ಲರೂ ಹೇಳಿದರೂ ಗಣಪ ಮಾತ್ರ ದೊಡ್ಡ ನಿಟ್ಟುಸಿರು ಬಿಟ್ಟ. ಸಿದ್ದನೂ ಇನ್ನು ಮುಂದೆ ಹೀಗೆಲ್ಲ ದುಡುಕೋಕೆ ಹೋಗಬ್ಯಾಡ ಎಂದು ಬುದ್ಧಿ ಹೇಳಿ ನಂತರ ಅಲ್ಲಿಂದ ಇಬ್ಬರೂ ಕಾಲ್ಕಿತ್ತರು.

ಅಷ್ಟರ ನಂತರ ಹಾವಿನ ಕುರಿತು ಕತೆಗಳನ್ನೂ, ಅದನ್ನು ಹಿಡಿಯುವುದನ್ನೂ ಅಷ್ಟಾಗಿ ಮಾಡುತ್ತಿರಲಿಲ್ಲ. ಇದೇ ಹೊತ್ತಲ್ಲೇ ಅವನೀಗ ಹಾವಿಗಿಂತಲೂ ಹೆಚ್ಚಿಗೆ ಕತೆ ಹೇಳುತ್ತಿದ್ದದ್ದು ಜಯಮಾಲಿನಿಯದ್ದು. ಒಂದುಸಲ ಸಿದ್ದಾಪುರದ ಸೆಂಟ್ರಲ್ ಟಾಕೀಸಿನಲ್ಲಿ ಅದ್ಯಾವುದೋ ಒಂದು ಸಿನಿಮಾ ನೋಡಿಬಿಟ್ಟಿದ್ದ. ಅದುವರೆಗೆ ಏನಿದ್ದರೂ ರಾಜ್ಕುಮಾರ್ ಸಿನಿಮಾಗಳಾದ ಸತ್ಯ ಹರಿಶ್ಚಂದ್ರ, ಕೃಷ್ಣದೇವರಾಯ ಮುಂತಾದ ಪೌರಾಣಿಕ, ಐತಿಹಾಸಿಕ, ದೇವರ ಸಿನಿಮಾಗಳೂ, ಬ್ಲಾಕ್ ಅಂಡ್ ವೈಟ್ ಸಿನಿಮಾಗಳನ್ನು ಮಾತ್ರ ನೋಡುತ್ತಿದ್ದ ಗಣಪನಿಗೆ ಇದ್ದಕ್ಕಿದ್ದ ಹಾಗೆ ಒಂದು ದಿನ ಆಗಷ್ಟೇ ಚಿಗುರು ಮೀಸೆ ಕುಡಿಯೊಡೆಯುತ್ತಿದ್ದ ಪಕ್ಕದ ಮನೆಯ ಲಕ್ಷ್ಮಣ ಹೊಸದೊಂದು ಸಿನಿಮಾಕ್ಕೆ ಕರೆದುಕೊಂಡು ಹೋಗಿದ್ದ. ಅದರಲ್ಲಿ ಜಯಮಾಲಿನಿದು ಒಂದು ಡ್ಯಾನ್ಸ್ ಇತ್ತು. ಅದುವರೆಗೆ ಅಂಥ ಸಿನಿಮಾಗಳನ್ನೇ ನೋಡದ ಗಣಪನಿಗೆ ಜಯಮಾಲಿನಿಯ ಡಾನ್ಸ್ ಸಿಕ್ಕಾಪಟ್ಟೆ ಇಷ್ಟವಾಗಿ, ಸುರಸುಂದರಿಯಾಗಿ ಕಂಡಿದ್ದಳು. ಎಷ್ಟು ಇಷ್ಟವಾಗಿದ್ದೆಂದರೆ… ‘ಅದೆಷ್ಟು ಚೊಲೊ ಡಾನ್ಸ್ ಮಾಡತೈತಿ ಮಾರಾಯಾ…’ ಡಾನ್ಸ್ ಎಂದರೆ ಜಯಮಾಲಿನಿದು, ಸಿನಿಮಾ ಅಂದ್ರೆ ಜಯಮಾಲಿನಿದು.. ಎಂಬಷ್ಟರ ಮಟ್ಟಿಗೆ ಬಂದು ಕಡೆಗೆ ಯಾವುದೇ ಸಿನಿಮಾ ಬಂದಿದೆ ಎಂದರೂ ಅದರಲ್ಲಿ ಜಯಮಾಲಿನಿ ಐತಾ… ಎಂದು ಕೇಳುತ್ತಿದ್ದ.

ಇದೆಲ್ಲ ಮಾವನ ಮಕ್ಕಳಾದ ರಾಜು, ಗಾಯತ್ರಿಗೆಲ್ಲ ಮಜಾ ಎನಿಸಿ, ‘ಏನಾ ಗಣಪ, ನಾಗಿ ಜೊತಿಗೆ ಜಯಮಾಲಿನೀನೂ ಮದುವೆ ಆಗ್ತೀಯನಾ…?’ ಎಂದು ಕಾಲೆಳೆಯುತ್ತಿದ್ದರು. ಏನೇ ನಿನ್ನ ಗಂಡ ಜಯಮಾಲಿನಿನ ಕಟ್ಟಿಕೊಳ್ತಾನಂತಲ್ಲೇ…? ಎಂದು ನಾಗಿನ ಕೇಳಿದರೆ, ಅವಳೂ ಹಾಗೆಯೇ ಬಾಯಲ್ಲಿರುವ ಕವಳದ ರಸವನ್ನು ಪಿಚಕ್ಕೆಂದು ಉಗಿದು, ‘ಆಯ್…ಹ್ವಾಗ್ಲಿ ಬುಡ್ರೀ… ಅದು ಇವನ್ನು ಮಾರಕಂಡ ತಿಂತೈತಿ..ಆಗ ಬುದ್ಧಿ ಬತ್ತದೆ..’ ಎನ್ನುತ್ತಿದ್ದಳು.

‘ಅಲ್ಲಾ. ಅದ್ರ ಡ್ರೆಸ್ ನೋಡಿದ್ರೆ ಸಾಕು ಗಣಪ, ಯಾವಾಗ ನೋಡಿದ್ರೂ ತುಂಡು ಲಂಗ ಹಾಕ್ಕೊಂಡು, ಎದೆ ಬಿಟ್ಗಂಡು, ತೊಡೆ ತೋರಿಸ್ಕಂಡು ಡಾನ್ಸ್ ಮಾಡ್ತದೆ. ಅವಳೆಂತಕ್ಕೆ ನಿಂಗೆ ಇಷ್ಟಾನಾ..’ ಎಂದು ಒಂದ್ಸಲ ರಾಜು ಕೇಳಿಯೇ ಬಿಟ್ಟಿದ್ದ.ಅದಕ್ಕೆ ಅವ ಹೇಳಿದ ಉತ್ತರ ಮಾತ್ರ ಬಾಳ ಸ್ವಾರಸ್ಯಕರವಾಗಿತ್ತು.

‘ಹೌದ್ರಾ…ಹಂಗೆಲ್ಲ ಡ್ರೆಸ್ ಹಾಕ್ಕೊಳ್ಳೋದು ನೋಡೋಕೆ ನಂಗೂ ಕಷ್ಟವೇಯ. ಆದರೆ ಅಷ್ಟೆಲ್ಲ ಜನರ ಮುಂದೆ ಅವಳು ಹೋಗಿ ಡಾನ್ಸ್ ಮಾಡತೈತಲ್ಲ, ಅದಕ್ಕೆಂತ ಕಮ್ಮಿ ಧೈರ್ಯ ಬೇಕನ್ರಾ? ಧೈರ್ಯ ಇಲ್ಲದಿದ್ರೆ ಹೀಂಗೆಲ್ಲ ಮಾಡೂಕಾಗ್ತಿತ್ತಾ? ಈಗಾ ನಮ್ ನಾಗೀನೇ ತಕಾ ನೀನು. ರಾತ್ರಿ ಒತ್ತು ಹಾಸಿಗೆಗೆ ಬಾ ಅಂತ ರಟ್ಟೆ ಹಿಡಿದು ಜಗ್ಗಿದ್ರೂ ಬರಕಲ್ಲ ಅಂತದೆ. ಯಾವಾಗಲೂ ಎಳದಾಡಬೇಕು ಅದುರ್ನ. ಆದ್ರೆ ಅಷ್ಟೆಲ್ಲ ಗಂಡಸರ ಮುಂದೆ ಡಾನ್ಸ್ ಮಾಡತೈತಿ ಇದು ಅಂದ್ರೆ ನೀನೇ ಯೋಚ್ನೆ ಮಾಡು, ಎಷ್ಟು ಧೈರ್ಯ ಇದೆ ಎಂದು.. ಆದ್ರೆ ನೀ ಯೇಳ್ದಾಂಗೆ ಮೈತುಂಬ ಸೀರೆ ಉಟ್ಗಂಡೇ ಡಾನ್ಸ್ ಮಾಡ್ಬೋದಿತ್ತೂ…’ ಎಂದು ಗೊಣಗಿಕೊಳ್ಳುತ್ತಿದ್ದ ಗಣಪನ ಮಾತು ಕೇಳಿ ಪಕಪಕನೆ ನಕ್ಕ ರಾಜು.

ಹೀಗೆ ಒಂದು ಕೆಲಸ ಹೇಳಿದರೆ ಹತ್ತು ಕೆಲಸ ಮಾಡಿಕೊಂಡು ಹೊಟ್ಟೆ ತುಂಬ ಉಂಡು, ಆಗಾಗ ಜೈಮಾಲಿನಿ ಸಿನಿಮಾ ನೋಡಿಕೊಂಡು ಇದ್ದ ಗಣಪನ ಕೈಗೆ ಕುದುರುಬೆಳ್ಳ ಹಾವು ಕಚ್ಚಿದ್ದು ದೊಡ್ಡ ಸುದ್ದಿಯಾಗಿತ್ತು. ಅದು ಸುದ್ದಿಯಾಗಿದ್ದು ಹಾವು ಕಚ್ಚಿದ್ದಕ್ಕಲ್ಲ, ಅದು ಕಚ್ಚಿದ್ದಕ್ಕೆ ಆ ಬೆರಳನ್ನೇ ತಾನೇ ಕತ್ತರಿಸಿಕೊಂಡುಬಿಟ್ಟಿದ್ದ.

ನಾಕು ದಿನ ಬಿಟ್ಟುಕೊಂಡು ಬಂದ ಗಣಪನ ಬಲಗೈನ ತೋರುಬೆರಳಿರುವ ಜಾಗದಲ್ಲಿ ದೊಡ್ಡ ಬ್ಯಾಂಡೇಜು ರೀತಿಯಲ್ಲಿ ಬಟ್ಟೆ ಕಟ್ಟಿಕೊಂಡು ಬಂದಿದ್ದ.

ಹೀಗೆಲ್ಲ ಕತೆ ಹೇಳುವ ಗಣಪ ಬೇಕಿದ್ದರೆ ಹಾವಿನ ಬಾಲ ಹಿಡಿದು ಗಿರಗಿರನೆ ತಿರುಗ್ಸಿ ಬಿಸಾಕಿ ಒಗೆಯಬಲ್ಲ. ಹಾಗಾಗಿ ಸುತ್ತಮುತ್ತ ಹಾವು ಹಿಡಿಬೇಕೆಂದರೆ ಗಣಪನನ್ನೇ ಕರೆಯುತ್ತಿದ್ದರು. ಹಾಗೆ ನೋಡಿದರೆ ಗಣಪ ವೃತ್ತಿಪರ ಹಾವು ಹಿಡಿಯುವವನೇನಾಗಿರಲಿಲ್ಲ.

“ಅರೆ, ಕೈ ಎಂತಾತ…ಅಷ್ಟು ದೊಡ್ಡ ಬಟ್ಟೆ ತುಂಡು ಕಟ್ಗಂಡಿದೀಯೆ..’ಎಂದು ಮಾವ ಕೇಳಿದ್ದಕ್ಕೆ, ‘ಅದೂ ಮೊನ್ನಿತ್ನಾಗೇ.. ಸೊಪ್ಪು ಕಡಿತಾ ಇದ್ನ್ಯೇ.. ಕುದುರುಬೆಳ್ಳ ಹಾವು ಕಚ್ಚಿಬುಡ್ತು. ಅದಕ್ಕೇಯ ಬೆರಳನ್ನೇ ಕಡ್ಕಂಡೆ’ ಎಂದ.

‘ಅಯ್ಯೋ ಮಾರಾಯ, ಅದ್ಹೆಂಗೆ… ಬೆರಳನ್ನೇ ಕಡ್ಕಂಡೆ..ಉರೀಲಿಲ್ಲನಾ’

“ಹೆಂಗೆ ಅಂದ್ರೆ.. ನಮ್ಮನೆ ಗೋಡೆ ಕಟ್ಟೆ ಐತಲ್ರಾ..ಅದ್ರ ಮ್ಯಾಲೆ ಕೈ ತೋರು ಬೆರಳು ಇಟ್ಗಂಡೆ..ಇನ್ನೊಂದು ಕೈಯಿಂದ ಮಚ್ಚು ತಗಂಡೆ, ಕಚಕ್ ಎಂದು ಕಡ್ಕಂಡೆ ಬಿಟ್ಟೆ’ ಎಂದ ತನ್ನ ಬೆಳ್ಳನೆಯ ಹಲ್ಲುಗಳನ್ನು ಕಿರಿದು. ರಾಜು, ಗಾಯತ್ರಿ, ಅತ್ತೆ ಎಲ್ಲರೂ ಬಿಟ್ಟಕಣ್ಣುಗಳಿಂದ ಪವಾಡ ಜರುಗಿದಂತೆ ಅವನ ಬಟ್ಟೆಸುತ್ತಿಕೊಂಡ ಕೈಯನ್ನೇ ನೋಡುತ್ತಿದ್ದರು.
‘ಈ ಕುದುರುಬೆಳ್ಳ ಹಾವು ಕಚ್ಚಿದ್ರೆ ಇಡೀ ಕೈ ಕೊಳತ ಹೋಗ್ತದಲ್ಲ. ಅದ್ರ ಬದ್ಲು ಈ ಬೆರಳು ಹೋಗೋದೇ ಒಳ್ಳೇದಲ್ಲನ್ರಾ… ಅದಕ್ಕೆ ಕಡ್ಕಂಡೆ..’ ಎಂದು ನಿರುಮ್ಮಳವಾಗಿ ಹೇಳಿದ ಆ ಗಣಪನೆಂಬ ಪುಣ್ಯಾತ್ಮನ ಕುರಿತು ಆ ಹೊತ್ತು ಏನು ಹೇಳಬೇಕೆಂದೇ ಹೊಳೆಯಲಿಲ್ಲ ಅವರಿಗೆಲ್ಲ.

‘ಒಂದು ಜೈಮಾಲಿನಿ ಸಿನಿಮಾ ನೋಡಿಬಿಡು. ನಿನ್ನ ನೋವೆಲ್ಲ ಮಾಯವಾಗಿಬಿಡ್ತದೆ’ ಎಂದು ಚುಡಾಯಿಸಿದರೆ ಸಿಕ್ಕಾಪಟ್ಟೆ ನಾಚಿಕೊಳ್ಳುತ್ತಿದ್ದ. ಮದುವೆಯಲ್ಲಿ ಬಹುಶಃ ಅವನ ಹೆಂಡತಿಯೂ ಇಷ್ಟೊಂದು ನಾಚಿಕೊಂಡಿರಲಿಕ್ಕಿಲ್ಲ.

ಈಗ ನಾಲ್ಕೇ ಬೆರಳುಗಳಲ್ಲಿ ಕೆಲಸ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಗಣಪನಿಗೆ ತುಂಬ ಹುಷಾರಿಲ್ಲ ಎಂಬುದು ಸುದ್ದಿಯಾಯಿತು. ಇತ್ತೀಚೆಗೆ ಕೆಲಸಕ್ಕೆ ಬರುವುದೇ ಕಡಿಮೆ ಮಾಡಿದ್ದ. ತುಂಬ ಸುಸ್ತು ಎನ್ನುತ್ತಿದ್ದ. ಹೆಜ್ಜೆ ಕಿತ್ತಿಡಲೂ ಕಷ್ಟ ಪಡುತ್ತಿದ್ದ. ಅರೆ, ಇಷ್ಟೆಲ್ಲ ಗಟ್ಟಿ ಇದ್ದ ಈ ಪುಣ್ಯಾತ್ಮನಿಗೇನಾಯ್ತು ಎಂದು ಎಲ್ಲರೂ ಕೇಳಿದರು. ಅವನಿಗೆ ದೃಷ್ಟಿಯಾಗಿರಬೇಕು, ಯಾರದ್ದೋ ಕೆಟ್ಟ ಕಣ್ಣು ಬಿದ್ದಿರಬೇಕು ಎಂದೆಲ್ಲ ಹೇಳಿದ್ದಕ್ಕೆ, ನಾಗಿ ಕಂಡಕಂಡ ದೈಯ್ಯ.. ಭೂತ, ಕಾಳಮ್ಮನ ಗುಡಿಗೆಲ್ಲ ಹೋಗಿ ಹರಕೆ ಹೊತ್ತಿದ್ದಳು. ಅಷ್ಟಲ್ಲದೇ ಹತ್ತಿರದ ನಾಟಿವೈದ್ಯರಿಗೂ ತೋರಿಸಿದಳು. ಯಾವುದೂ ಸರಿಹೋಗದಿದ್ದಾಗ ಗೌವರ್ನಮೆಂಟ್ ಆಸ್ಪತ್ರೆಗೆ ಕರೆದುಕೊಂಡು ಹೋದಳು. ಅಲ್ಲಿ ಡಾಕ್ಟರು ಮಲ, ಮೂತ್ರ ಟೆಸ್ಟ್ ಮಾಡಿಸ್ಬೇಕು, ಮೂತ್ರ ಇಲ್ಲಿಯೇ ಕೊಟ್ಟುಹೋಗಿ, ನಾಳೆ ಮಲ ತನ್ನಿ ಎಂದು ಹೇಳಿ ಕಳುಹಿಸಿದರು.. ಮಾರನೇ ದಿನ ಕೆಲಸಕ್ಕೆ ಬಂದ ನಾಗಿಯನ್ನು ಮಾವ ಗಣಪನಿಗೆ ಹ್ಯಾಂಗದೆ ಈಗ, ಡಾಕ್ಟ್ರು ಎಂತ ಹೇಳಿದ್ರೇ ನಾಗಿ’ ಎಂದು ಕೇಳಿದ. “ಮೂತ್ರ ಏನೋ ಕೊಟ್ಟಾಯ್ತು ಹೆಗಡೇರೆ. ಈ ಮೊಲ ಹೆಂಗ್ರಾ ಹಿಡಿಯೋದು…? ಹಿಡಿಯಾಕೆ ಹೋದ್ರೆ ಪುರ್… ಎಂದು ಹಾರಿ ಹೋಗ್ತದೆ. ಕೈಗೆ ಸಿಗಕಲ್ಲ ಅಂತದೆ..” ಎಂದು ಕವಳ ತುಂಬಿದ ಬಾಯಲ್ಲಿ ಹೇಳಿದಾಗ ಎಲ್ಲರಿಗೂ ನಗು ತಡೆಯಲಾಗಲಿಲ್ಲ. “ಅಯ್ಯೋ ಮಾರಾಯ್ತಿ, ಅದು ಮೊಲ ಅಲ್ವೇ..ಮಲ. ಅಂದ್ರೆ ಎರಡಕ್ಕೆ ಹೋಗದಿಲ್ಲನೇ..ಅದ್ನ ತಗಂಡು ಹೋಗಿ ಕೊಡ್ಬೇಕು’ ಎಂದು ರಾಜು ಎರಡು ಬೆರಳನ್ನು ಮೇಲಕ್ಕೆತ್ತಿ ತೋರಿಸಿ ಹೇಳಿದ. “ಇಶೀ…ಅದೆಂತಕ್ರಾ ಆ ಡಾಕ್ಟ್ರಿಗೆ..” ಎಂದು ಕೇಳಿದಳು. ‘ಅದೆಲ್ಲ ನಿಂಗೆ ಗೊತ್ತಾಗದಿಲ್ಲ. ಡಾಕ್ಟ್ರು ಹೇಳಿದ ಹಾಗೆ ಮಾಡು’ ಎಂದು ಮಾವ ಹೇಳಿ ಕಳುಹಿಸಿದ.

ಹೀಗೆ ಎಲ್ಲ ಟೆಸ್ಟ್ ಗಳೂ ಆದವು. ಆದ್ರೆ ಏನಾಗಿದೆ ಅವನಿಗೆ ಎಂಬುದು ಮಾತ್ರ ತಿಳಿಯಲಿಲ್ಲ. ಇದಾಗಿ ಒಂದೆರೆಡು ತಿಂಗಳು ಕಳೆದಿರಬಹುದು. ಇದ್ದಕ್ಕಿದ್ದ ಹಾಗೆ ಅವನಿಗೆ ಉಸಿರಾಟಕ್ಕೂ ಕಷ್ಟವಾಗತೊಡಗಿತು. ಬಹುಶಃ ಹಾರ್ಟ್ ಸಮಸ್ಯೆ ಇರಬಹುದು ಎಂದು ಯಾರೋ ಹೇಳಿದ್ದಕ್ಕೆ, ಅಲ್ಲಿಗೂ ಕರಕೊಂಡು ಹೋಗಿ ಹಾರ್ಟ್ ಟೆಸ್ಟ್ ಮಾಡಿಸಿದಳು ನಾಗಿ. ಅದು ನಾರ್ಮಲ್ ಆಗಿದೆ ಎಂದು ಬಂತು. ಉಸಿರಾಡಲು ತೊಂದ್ರೆ ಆಗ್ತಿದೆ ಎಂದ್ರೆ ಇ ಎನ್ ಟಿ ಸ್ಪೆಷಲಿಸ್ಟ್ ಹತ್ರ ಕರಕೊಂಡುಹೋಗಿ ಎಂದು ಸಲಹೆ ನೀಡಿದರು ಹಾರ್ಟ್ ಡಾಕ್ಟರ್.

ಮೂಗಲ್ಲಿ ಬಹುಶಃ ದುರ್ಮಾಂಸ ಬೆಳೆದಿರಬಹುದು..ಆಪರೇಷನ್ ಮಾಡಿ ತೆಗೆಯಬೇಕಾದೀತು ಎಂದ ಮೂಗಿನ ಡಾಕ್ಟರ್, ಮೊದಲು ಬ್ಯಾಟರಿ ಬಿಟ್ಟು ನೋಡಿದರು. ಮೂಗಲ್ಲಿ ಕಪ್ಪದು ಏನೋ ಒಂದು ಕಾಣಿಸುತ್ತಿತ್ತು. ಏನೆಂದು ಡಾಕ್ಟರಿಗೂ ಮೊದಲು ಹೊಳೆಯಲಿಲ್ಲ. ಕಡೆಗೆ ಬ್ಯಾಟರಿ ಬಿಟ್ಟು ಸರಿಯಾಗಿ ನೋಡಿದಾಗಲೇ ತಿಳಿದದ್ದು. ಉಂಬುಳವೊಂದು(ಜಿಗಣೆ) ಅವನ ಮೂಗಿನ ಒಳಗೆ ಹೇಗೋ ನುಸುಳಿ ಮೂಗಿನ ಮಧ್ಯಭಾಗದಲ್ಲಿ ಕಚ್ಚಿ ಹಿಡಿದುಬಿಟ್ಟಿತ್ತು. ಅಲ್ಲಿಂದಲೇ ಅದು ಇವನ ರಕ್ತ ಹೀರುತ್ತಿತ್ತು. ಅದಕ್ಕೆ ಅಷ್ಟೊಂದು ಸುಸ್ತಾಗುತ್ತಿತ್ತು ಎನಿಸುತ್ತದೆ. ಅದು ರಕ್ತ ಹೀರಿಹೀರಿ ಅಲ್ಲಿಯೇ ದೊಡ್ಡದಾಗಿ ಇವನಿಗೆ ಉಸಿರಾಟಕ್ಕೆ ತೊಂದರೆಯಾಗಿತ್ತು. ಈಗ ವೈದ್ಯರು ನಿಧಾನಕ್ಕೆ ಚಿಮಟಿಗೆ ಹಾಕಿ ಆ ಉಂಬಳವನ್ನು ಹೊರತೆಗೆದರು. ಅಬ್ಬಾ…ರಕ್ತ ಕುಡಿದು ಕುಡಿದು ಹಿಸುಕಿನಷ್ಟು ದೊಡ್ಡದಾಗಿತ್ತು ಆ ಉಂಬಳ. ಅದನ್ನು ಹೊರ ತೆಗೆಯುತ್ತಿದ್ದಂತೆಯೇ ಗಣಪನ ಮೂಗಿನಿಂದ ಬಳಬಳನೆ ರಕ್ತ ಸೋರತೊಡಗಿತು. ಅದಕ್ಕೆಲ್ಲ ಒಂದಷ್ಟು ಔಷಧಕೊಟ್ಟು ಕಳಿಸಿದ ಮೇಲೆ ಗಣಪ ಮೊದಲಿನಂತಾದ.

ಮಾರನೇ ದಿನ ಕೆಲಸಕ್ಕೆ ಬಂದ ಗಣಪನನ್ನು‘ಅಲ್ದಾ ಗಣಪ, ನಿನ್ನ ಮೂಗಿನೊಳಗೆ ಉಂಬಳ ಹೋಪವರೆಗೂ ಎಂತ ಮಾಡ್ತಾ ಇದ್ದಿದ್ಯಾ? ತಲೆ ಎಲ್ಲಿತ್ತಾ ನಿಂಗೆ’ ಎಂದ ರಾಜುವಿನ ಮಾತಿಗೆ ಏನೂ ಹೇಳದೇ ಅಂಗಳದಲ್ಲಿದ್ದ ಕಟ್ಟಿಗೆಯೊಂದನ್ನು ಕಡಿಯತೊಡಗಿದ. ‘ಜಯಮಾಲಿನಿ ಧ್ಯಾನದಾಗೇ ಇದ್ದಿದ್ದ ಕಾಣ್ತು, ಉಂಬಳೆಂತ… ಹಾವು ಒಳಗೆ ಹೋದ್ರೂ ಅವಂಗೆ ತಿಳೀತಿತ್ತಿಲ್ಲೆ…’ ಹೀಗೆ ಒಬ್ಬೊಬ್ಬರು ಒಂದೊಂದು ಹೇಳಿದ್ರೆ ನಾಗಿ ಮಾತ್ರ, ‘ಅಯ್ಯ.. ಒಳ್ಳೆದಾತು ಬುಡಿ..ಅದಿಲ್ದಿದ್ರೆ ಮೊದ್ಲೇ ಗೊತ್ತಾಗಿದ್ರೆ, ಅವ ಕುದುರುಬೆಳ್ಳ ಹಾವು ಕಚ್ಚಿತು ಹೇಳಿ ಬೆರಳು ಕತ್ತರಸಿಕ್ಯಂಡಹಾಗೇ ಮೂಗನ್ನೂ ಕತ್ತರಿಸಕ್ಯಂಡಿದ್ರೆ ಗತಿ ಎಂತದ್ರಾ…’ ಎಂದು ಕೇಳಿದಳು.
‘ಹೌದಲ್ವಾ… ನಾಗಿ ಹೇಳದ್ರಾಗೂ ಒಂದು ಪಾಯಿಂಟು ಇದೆ’ ಎಂದು ರಾಜು, ಗಾಯತ್ರಿ ಎಲ್ಲ ಮಾತಾಡಿಕೊಂಡು ನಕ್ಕರು.

ಆದರೆ ಅವ ಹುಶಾರು ತಪ್ಪಿದ ಘಳಿಗೆಯಿಂದ ನಾಗಿ ಪಟ್ಟ ಪಾಡು ಅಷ್ಟಿಷ್ಟಲ್ಲ. ಆ ಮಕ್ಕಳನ್ನು ಇಟ್ಟುಕೊಂಡು, ಗಣಪನನ್ನೂ ನೋಡಿಕೊಂಡು ಕೆಲಸಕ್ಕೂ ಹೋಗಿ ಇಡೀ ಮನೆಯನ್ನು ನಿಭಾಯಿಸಿಬಿಟ್ಟಳು. ಸ್ವಲ್ಪವೂ ಬೇಜಾರಿಲ್ಲದೆ ಗಣಪನನ್ನು ಅದೆಷ್ಟು ಡಾಕ್ಟ್ರ ಹತ್ರ ಕರಕೊಂಡುಹೋಗಿದ್ಲೋ ಏನೋ. ಅಷ್ಟೆಲ್ಲ ಸೇವೆ ಮಾಡಿ ಅಂತೂ ಗಂಡನನ್ನು ಉಳಿಸಿಕೊಂಡಳು ಎಂದು ಎಲ್ಲರೂ ನಾಗಿಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದರು.
ಆದರೆ ಗಣಪ ಹುಶಾರಾದ ಮೇಲೆ ಅವನ ಸಾಹಸಗಳು ಕಡಿಮೆಯಾಗಿದ್ದವು. ಮೊದಲಿಗಿಂತಲೂ ಹೆಚ್ಚಿಗೆ ಜಯಮಾಲಿನಿ ಸಿನಿಮಾ ನೋಡುತ್ತಿದ್ದ. ಒಂದು ಕೊಳೆಕೊಳೆಯಾದ ಅಂಗವಸ್ತ್ರ ಪಂಚೆಯನ್ನು ಮೊಳಕಾಲ ಮಟ ಕಚ್ಚೆ ಪಂಚೆ ಹಾಕಿ ಉಟ್ಟುಕೊಂಡು ಬರುತ್ತಿದ್ದ ಗಣಪ ಈಗೀಗ ಪ್ಯಾಂಟು, ಮೇಲೊಂದು ಟೀ ಶರ್ಟು ಹಾಕಿಕೊಂಡು ಸ್ವಲ್ಪ ಸ್ಟೈಲಾಗಿ ಬರುತ್ತಿದ್ದ. ಇವನ ಸ್ಟೈಲು ನೋಡಿ, ಏನೋ ಜಯಮಾಲಿನಿ ಪ್ರಭಾವವೇನೋ..ಎಂದು ತಮಾಶೆ ಮಾಡುತ್ತಿದ್ದರು. ಕರಿಕರಿ ಇದ್ದ ಈ ಗಣಪ ಬಿಳಿಯಾದ ಟೀಶರ್ಟ್ ತೊಟ್ಟು, ತಲೆಯನ್ನು ಕ್ರಾಪ್ ಬಾಚಿ, ಮುಖಕ್ಕೆ ಪೌಡರ್ ಮೆತ್ತಿಕೊಂಡು ರಸ್ತೆಯಲ್ಲಿ ಹೀರೋ ಥರ ಹೋಗುತ್ತಿದ್ದರೆ ನೋಡಲು ಬಲುಮಜಾ ಬರುತ್ತಿತ್ತು.

ಇಂಥ ಗಣಪ ಇತ್ತೀಚೆಗೆ ನಾಗಿ ಬಳಿ ಪ್ರೀತಿಯಿಂದಿರಲಿಲ್ಲ. ಹಗಲೆಲ್ಲ ದುಡಿಯುತ್ತಿದ್ದರೂ ರಾತ್ರಿಹೊತ್ತು ಚೆನ್ನಾಗಿ ಹೊಡೆಯುತ್ತಿದ್ದ. ಅದೂ ಜಯಮಾಲಿನಿ ಸಿನಿಮಾ ನೋಡಿ ಬಂದಮೇಲಂತೂ ವಾರಗಟ್ಟಲೆ ಅವ ಸಮ ಇರುತ್ತಿರಲಿಲ್ಲ. ಒಂದೊಂದು ದಿನ ಒಂದೊಂದು ರೀತಿ ಇರುತ್ತಿದ್ದ. ಒಂದಿನ ನಾಗಿ ಹತ್ರ ಈ ಕವಳ ಹಾಕದ್ನ ಬುಡು ಇನ್ನು, ನೋಡಾಕಾಗಕಲ್ಲ ನಿನ್ನ ಮುಖಾನಾ..ಎಂದು ಜೋರು ಮಾಡಿದವನನ್ನು ಅಚ್ಚರಿಯಿಂದ ನೋಡಿದಳು ನಾಗಿ. ಅಲ್ಲಾ…ಇಷ್ಟು ಮಕ್ಕಳು ಹುಟ್ಟೋಗಂಟ ನಿಂಗೆ ನನ್ನ ಕವಳ ಚೆಂದ ಐತಿ ಅನಿಸ್ತಿತ್ತು… ಈಗೆಂತಾಕೈತಾ ನಿಂಗೆ ಎಂದು ಕೇಳಬೇಕೆನಿಸಿದರೂ ಅವ ಕೊಡುವ ಪೆಟ್ಟುಗಳನ್ನು ನೆನೆದು ಏನನ್ನೂ ಕೇಳದೆ ಸುಮ್ಮನಾದಳು. ಆದರೆ ಗಣಪ ಒಂದು ದಿನ ಸಂತೆಯಿಂದ ಬಂದವ ಒಂದು ಪೌಡರ್ ಡಬ್ಬಿಯನ್ನು ತಂದು ಪೌಡರ್ ಹಚ್ಗ್ಯ, ಸ್ವಲ್ಪ ಬೆಳ್ಳಗಾದ್ರೂ ಕಾಣ್ತೀ… ಎಂದ. ಅವನ ಕರಿಮುಖ ನೋಡುತ್ತ ನಾಗಿಗೆ ಎಂತ ಮಾಡಬೇಕೆಂದು ತಿಳಿಯದೇ ಅವತ್ತು ಮಾವನ ಮನೆಗೆ ಬಂದವಳು, ‘ಹೆಗಡೇರಾ…ನನ್ನ ಗಣಪಗ ಆ ಜಯಮಾಲಿನಿ ದೆಯ್ಯ ಹೊಕೈತಿ ಅನಸ್ತೈತಿ. ಸ್ವಲ್ಪ ಭಟ್ರನ್ನು ಕೇಳ್ಕೊಡ್ರಾ..ಚೀಟು, ಬೂದಿ ಎಂತಾದ್ರೂ ಹಾಕ್ಸದೇಯ…’ ಎಂದು ಪೌಡರ್ ತಂದುಕೊಟ್ಟ ವಿಷಯ ಹೇಳಿದಳು. ಎಲ್ಲರೂ ಹೋ ಎಂದು ನಕ್ಕರು. ಆದರೆ ಅದು ಹುಚ್ಚೇ ಆಗಿತ್ತೋ ಏನೋ..ಒಟ್ಟಿನಲ್ಲಿ ಗಣಪ ಒಂದೊಂದು ದಿನ ಒಂದೊಂದು ರೀತಿ ಇರುತ್ತಿದ್ದ. ಕೆಲಸಕ್ಕೆ ಬಂದಾಗಲೂ ಅಷ್ಟೆ, ಮೊದಲಿನ ಹಾಗೆ ಕತೆಗಳನ್ನು ಹೇಳುತ್ತಿರಲಿಲ್ಲ. ಯಾವುದೋ ಯೋಚನೆಯಲ್ಲಿರುವವನ ಹಾಗಿರುತ್ತಿದ್ದ ಗಣಪನ ಕುರಿತು ಈಗೀಗ ಮಾವನ ಮಕ್ಕಳಿಗೆ ಅಷ್ಟೊಂದು ಅಕ್ಕರಾಸ್ತೆ ಇರುತ್ತಿರಲಿಲ್ಲ. ಯಾಕೆಂದರೆ ಅವ ಮೊದಲಿನ ಹಾಗೆ ಕತೆ ಹೇಳುತ್ತಿರಲಿಲ್ಲ. ಇದಾಗಿ ಒಂದು ವಾರದ ನಂತರ ನಾಗಿ ಹತ್ರ ‘ನೀನೂ ಅವಳ ಹಾಗೆ ಹೊಕ್ಕಳ ಕೆಳಗೆ ಸೀರೆ ಉಟ್ಗೋ, ಮೊಣಕಾಲವರೆಗೆ ಮಾತ್ರ ಸೀರೆ ನೆರಿಗೆ ಬಿಡುತ್ತಿದ್ದ ನಾಗಿಗೆ ಕಾಲು ಮುಚ್ಚುವ ಹಾಗೆ ಸೀರೆ ಉಡು, ಚೆನ್ನಾಗಿ ತಲೆ ಬಾಚಿಕೋ..ಎಂದೆಲ್ಲ ಹೇಳಲು ಶುರುಮಾಡಿದೆ. ಇವನಿಗೆ ಪೂರ್ತಿ ಹುಚ್ಚೇ ಹಿಡಿದಿದೆ ಎಂದು ನಾಗಿ ಕಣ್ಣೀರು ಹಾಕುತ್ತಿದ್ದಳು.
ಇಂತಿಪ್ಪ ಗಣಪ ಈಗ ನಾಲ್ಕು ವರ್ಷಗಳ ಹಿಂದೆ ತೀರಿಹೋದ. ಅದೂ ಹೊಳೆ ದಾಟಲು ಹೋದಾಗ ಹೊಳೆಯಲ್ಲಿ ತೇಲಿಹೋದ ಎಂದು ಮಾವನ ಮನೆಯವರು ಹೇಳಿದಾಗ ಯಾಕೋ ಅದನ್ನು ನಂಬಬೇಕು ಎನಿಸಲಿಲ್ಲ. ಆ ಥರ ಧೈರ್ಯವಂತ, ಹಾವನ್ನೇ ಹಿಡಿದು ಗಿರಗಿರನೆ ತಿರುಗಿಸಿ ಎಸೆಯಬಲ್ಲವ, ಎಂಥ ಎತ್ತರದ, ದೊಡ್ಡದಾದ ಮರವಿದ್ದರೂ ಸರಸರನೇ ಹತ್ತಿ ಇಳಿಯುವವ, ಎಂಥ ಸೆಳವಿರುವ ಹೊಳೆಯಾದರೂ, ಎಷ್ಟೇ ಜೋರಾದ ಮಳೆಬಂದು, ಹೊಳೆನೀರು ಉಕ್ಕಿ ಹರಿಯುತ್ತಿದ್ದರೂ, ಹೊಳೆ ಹಾಯುವಾಗ ಎದೆಮಟ್ಟಕ್ಕೆ ನೀರು ಬಂದರೂ ತನ್ನ ಮಕ್ಕಳನ್ನೂ, ನಾಗಿಯನ್ನೂ ಒಂದೇ ಏಟಿಗೆ ದಾಟಿಸಿಬಿಡುವಂಥ ಹರಸಾಹಸಿ ಗಣಪ ಹೊಳೆಯಲ್ಲಿ ತೇಲಿಹೋದನೆಂದರೆ, ಇಂಥ ಹರಸಾಹಸಿಗನಿಗೆ ಇಂಥ ಯಃಕಶ್ಚಿತ್ ಸಾವೆಂದರೆ ಯಾಕೋ ನಂಬುವುದು ತುಂಬ ಕಷ್ಟವೆನಿಸುತ್ತಿತ್ತು.

ಆದರೆ ಅದೇ ಸತ್ಯ ಎಂಬಂತೆ ನಾಗಿ ಅವನ ಒಂದಿಬ್ಬರು ಮಕ್ಕಳನ್ನು ಕರೆದುಕೊಂಡು ಕೆಲಸಕ್ಕೆ ಬರುತ್ತಿದ್ದಳು. ಅದೇ ಕವಳ ಹಾಕಿದ ಕೆಂಪು ರಸವನ್ನು ಆಗಾಗ ಪಿಚಕ್ಕೆಂದು ತುಪ್ಪುತ್ತಾ…

ನಾಗಿ..ನಿಜ ಹೇಳೇ..ಗಣಪ ಹ್ಯಾಂಗ್ ಸತ್ನೇ…ಎಂದು ಕೇಳಿದ್ರೆ ‘ಅದೆಂತ ಹೇಳದ್ರಾ ಬಿಡ್ರಾ… ಆ ನಟಿ ದೆಯ್ಯ ಹೊಕ್ಕಂಡಿತ್ತು ಕಾಣ್ತೈತಿ..’ ಎಂದು ಕಣ್ಣೀರು ತುಂಬಿಕೊಂಡು ಕತೆ ಹೇಳತೊಡಗಿದಳು ನಾಗಿ. ನಾಗಿಗೆ ಪೌಡರ್ ಹಚ್ಚಿ, ತಲೆ ಬಾಚಿ, ಬಣ್ಣದ ಸೀರೆಯನ್ನು ಫ್ಯಾಶನ್ ಸ್ಟೈಲ್ನಲ್ಲಿ ಉಡಿಸಿ ನೋಡಿದ ಗಣಪನಿಗೆ ಅದೇನೋ ಯಾವುದೂ ಬೇಕಿಲ್ಲದವನಂತೆ ಇರುತ್ತಿದ್ದ. ಕಡೆಕಡೆಗೆ ಎಲ್ಲರೊಂದಿಗೆ ಮಾತು ಕಡಿಮೆ ಮಾಡಿದ. ಇದ್ದಕ್ಕಿದ್ದ ಹಾಗೆ ಕೆಲವು ದಿನ ನಾಪತ್ತೆಯಾಗಿಬಿಡುತ್ತಿದ್ದ. ಇವ ಎಲ್ಲಿಹೋದ ಎಂದು ಮೊದಮೊದಲು ಕಾಳಮ್ಮನ ಗುಡಿಗೆ ಹರಕೆ ಹೊರುತ್ತಿದ್ದ ನಾಗಿ, ಕಡೆಕಡೆಗೆ ಅದನ್ನೂ ಕಡಿಮೆ ಮಾಡಿಬಿಟ್ಟು, ಈ ಗಣಪನ ಹುಚ್ಚಾಟ ಅವಳಿಗೆ ಮಾಮೂಲಾಗಿಬಿಟ್ಟಿತ್ತು. ಆದರೆ ಅದೊಂದು ದಿನ ಜೋರು ಮಳೆ ಬರುತ್ತಿತ್ತು. ಮನೆಯೊಳಗೆ ಕೂರೋಕೂ ಆಗದಷ್ಟು ಗಾಳಿ ಮಳೆ. ಮನೆಯೊಳಗೆಲ್ಲ ಸೋರುತ್ತಿತ್ತು. ಒಬ್ಬರು ಮಾತಾಡಿದ್ದು ಮತ್ತೊಬ್ಬರಿಗೆ ಕೇಳಿಸದಷ್ಟು ಮಳೆ ಅಬ್ಬರವಿತ್ತು. ಅಂಥಹೊತ್ತಲ್ಲಿ ಮೂಲೆಯಲ್ಲಿ ಮಲಗಿದ್ದ ಗಣಪ ಧಡಕ್ಕೆಂದು ಎದ್ದ. ಯಾರಿಗೂ ಹೇಳದೇ ಮನೆಬಿಟ್ಟು ಹೊಳೆದಂಡೆ ಬಳಿ ಹೋದ. ನಾಗಿಗೆ ಅನುಮಾನ ಬಂದು ಮಕ್ಕಳನ್ನು ಅವನ ಹಿಂದೆಯೇ ಕಳಿಸಿದ್ದಳು. ಆದರೆ ಗಣಪ ಹಿಂದೆ ಒಮ್ಮೆಯೂ ನೋಡದೇ ಯಾರೋ ಅವನನ್ನು ಕರೆದುಕೊಂಡು ಹೋಗುತ್ತಿದ್ದಾರೆಂಬಂತೆ ಸರಸರನೆ ನಡೆದು ಹೋದವ ಹೊಳೆಯೊಳಗೆ ಇಳಿದ. ಅಲ್ಲಿಯೂ ನಡೆದೇ ಹೋಗುತ್ತಿದ್ದ, ಹೊಳೆನೀರು ಅವನನ್ನು ಮುಳುಗಿಸುವವರೆಗೂ…ದೂರದಿಂದ ಅವನ ಮಕ್ಕಳು ಅಪ್ಪಾ…ಎಂದು ಕೂಗಿದ್ದೂ ಕೇಳಿಸದವನಂತೆ ನಡೆದು ಹೋದ…

ಕಣ್ಣೀರು ತುಂಬಿದ ನಾಗಿಯ ಕಣ್ಣುಗಳು, ಆಗಿನ ಭಯವಿನ್ನೂ ಮಾಸದ ಮಕ್ಕಳ ಮುಖಗಳ ಮುಂದೆ ಕುದುರಬೆಳ್ಳ ಹಾವು, ನಾಗರಹಾವು, ಜಯಮಾಲಿನಿಗಳೆಲ್ಲ ಚಿತ್ರಪಟಗಳಂತೆ ಹಾದುಹೋದಂತೆನಿಸುತ್ತಿತ್ತು.