“ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ’ ಎಂಬ ಉದ್ದ ಶೀರ್ಷಿಕೆಯ ಕನ್ನಡ ಚಲನಚಿತ್ರ ತೆರೆಕಂಡಿದೆ.ಕಾಸರಗೋಡಿನ ಒಂದು ಸರ್ಕಾರಿ ಕನ್ನಡ ಶಾಲೆಯ ಸ್ಥಿತಿಗತಿ,ಮಲಯಾಳಂ ಭಾಷೆಯ ಹೇರಿಕೆ ಇತ್ಯಾದಿಗಳ ಸುತ್ತಮುತ್ತ ಜರುಗುವ ವೃತ್ತಾಂತಗಳ ಹೂರಣವನ್ನು ಒಳಗೊಂಡಿದೆ.ಸಂಕೀರ್ಣ,ಬಹುಆಯಾಮಗಳುಳ್ಳ ಸಮಸ್ಯೆಗಳನ್ನು ಎದುರಿಸುತ್ತಿರುವ ಅಲ್ಲಿನ ಕನ್ನಡ ಶಾಲೆಗಳ ದುರಂತದ ಕಥೆಗೆ ನಾನಾ ಮುಖಗಳಿವೆ.ಆದರೆ ಚಲನಚಿತ್ರದಲ್ಲಿ ತೀರ ಸರಳೀಕರಣದ ಸೂತ್ರದ ಮೂಲಕ ಶಾಲೆಯ ಮುಚ್ಚುವಿಕೆಯ ವಿಷಯ ಪ್ರಸ್ತಾಪವಾಗಿದೆ.”
ಮುರಳಿ ಕೃಷ್ಣ ಬರೆದ ಶುಕ್ರವಾರದ ಸಿನೆಮಾ ಪುಟ.

ಗಡಿಯ ಕಲ್ಪನೆ ಮನಸ್ಸಿನಲ್ಲಿ ಮೂಡಿದಾಗ, ಒಂದು ದೇಶಕ್ಕೂ ಅದರ ಸನಿಹದ ದೇಶಕ್ಕೆ ತಾಗಿಕೊಂಡೆ ಇರುವ ಚಿತ್ರ ನಮ್ಮ ಮನಃಪಟಲದಲ್ಲಿ ತಕ್ಷಣ ಮೂಡುತ್ತದೆ. ಇತ್ತೀಚೆಗಂತೂ ಗಡಿ ಎನ್ನುವುದು ಮಡಿದ ಕೆಲವು ಯೋಧರ ಕುಟುಂಬಗಳಿಗೆ ದುಃಸ್ವಪ್ನವಾಗಿ ಕಾಡಿದ, ಉಗ್ರ ರಾಷ್ಟ್ರವಾದವನ್ನು ಪ್ರವಹಿಸುತ್ತ, ಅತಿಭಾವನಾತ್ಮಕ ಕಥನ ಕಟ್ಟುವ ಮಂದಿಗೆ ತಮ್ಮ ಕಾರ್ಯತಂತ್ರಗಳ ಅನುಷ್ಠಾನದ ಕಾಮನಬಿಲ್ಲು! ಭಾರತ-ಪಾಕ್ ಗಡಿಯಲ್ಲಿನ ಇತ್ತೀಚಿನ ವಿದ್ಯಮಾನಗಳು ಇವುಗಳಿಗೆ ಸಾಕ್ಷಿಯಾಗಿವೆ. ಆದರೆ ನಮ್ಮಂತಹ ದೇಶದೊಳಗೆ ರಾಜ್ಯಗಳ ನಡುವೆ ಗಡಿಗಳಿರುತ್ತವೆಯಲ್ಲ, ಅವುಗಳಿಗೆ ಭಿನ್ನ ಆಯಾಮಗಳಿರುತ್ತವೆ. ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರ ಸಮಸ್ಯೆಗಳು ಭಿನ್ನವಾಗಿರುತ್ತವೆ. ಅವುಗಳಲ್ಲಿ ಭಾಷೆಯೂ ಒಂದು. ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ಸ್ಥಾಪಿಸಬೇಕೆಂಬ ವಿಚಾರದಲ್ಲಿ 1950ರ ದಶಕದ ಆದಿಯಲ್ಲಿ ಹಲವು ಭಿನ್ನಾಭಿಪ್ರಾಯಗಳಿದ್ದವು. ಆದರೆ ಈ ವಿಚಾರದಲ್ಲಿ ಭೌಗೋಳಿಕ, ಚಾರಿತ್ರಿಕ ಆಧಾರಗಳ ಜೊತೆಗೆ ಭಾಷೆಯೂ ಒಂದು ಪ್ರಧಾನ ಅಂಶವಾದದ್ದು ನಿಜ.


ಹೀಗೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಉದಯದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಪ್ರದೇಶದಲ್ಲಿದ್ದ ಕಾಸರಗೋಡು ಕೇರಳ ರಾಜ್ಯಕ್ಕೆ ಸೇರ್ಪಡೆಯಾಯಿತು. ಅದು ಅಂದಿನ ಮೈಸೂರು ಹಾಗೂ ಇಂದಿನ ಕರ್ನಾಟಕದ ಭಾಗವಾಗಬೇಕೆಂಬ ವಿಷಯದಲ್ಲಿ ಅಲ್ಲಿನ ಕನ್ನಡಿಗರ ಚಳವಳಿ ಅವ್ಯಾಹತವಾಗಿ ಜರುಗಿದೆ. ಇದರಲ್ಲಿ, ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಅಗ್ರನಾಯಕರಾಗಿ, ಕಾಸರಗೋಡು ಹೋರಾಟದ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ ದುಡಿದ ನಾಡೋಜ ದಿವಂಗತ ಡಾ. ಕಯ್ಯಾರ ಕಿಂಜ್ಞಣ್ಣ ರೈ ರಂತಹವರ ಜೊತೆ ಇನ್ನು ಅನೇಕರು ದಾಖಲಾರ್ಹವಾದ ಕೊಡುಗೆಗಳನ್ನು ನೀಡಿದ್ದಾರೆ. ಪ್ರಥಮ ರಾಷ್ಟ್ರಕವಿ ಗೋವಿಂದ ಪೈಗಳು ಕೂಡ ಇದೇ ಭಾಗದವರಾಗಿದ್ದರು.

ಇತ್ತೀಚೆಗೆ ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು-ಕೊಡುಗೆ ರಾಮಣ್ಣ ರೈ’ ಎಂಬ ಉದ್ದ ಶೀರ್ಷಿಕೆಯ ಕನ್ನಡ ಚಲನಚಿತ್ರ ತೆರೆಕಂಡಿದೆ. ಕಾಸರಗೋಡಿನ ಒಂದು ಸರ್ಕಾರಿ ಕನ್ನಡ ಶಾಲೆಯ ಸ್ಥಿತಿ-ಗತಿ, ಮಲಯಾಳಂ ಭಾಷೆಯ ಹೇರಿಕೆ ಇತ್ಯಾದಿಗಳ ಸುತ್ತಮುತ್ತ ಜರುಗುವ ವೃತ್ತಾಂತಗಳ ಹೂರಣವನ್ನು ಒಳಗೊಂಡಿದೆ ಈ ಚಲನಚಿತ್ರದ ಕಥನ. ನಮ್ಮ ರಾಜ್ಯದಲ್ಲೇ ಸರ್ಕಾರಿ ಶಾಲೆಗಳು ಆತಂಕಕಾರಿ ಸ್ಥಿತಿಯಲ್ಲಿವೆ. ಪ್ರತಿವರ್ಷ ಸರ್ಕಾರಗಳು ನಾಡಿನಾದ್ಯಂತ ಹಲವು ಸರ್ಕಾರಿ ಶಾಲೆಗಳನ್ನು ಮುಚ್ಚುತ್ತೇವೆ ಎನ್ನುವುದು, ಇಂತಹ ನಿರ್ಧಾರದ ವಿರುದ್ಧ ಅಲ್ಲಲ್ಲಿ ವಿರೋಧದ ದನಿಗಳು ಏಳುವುದು, ನಂತರ ಈ ವಿಷಯ ತಣ್ಣಗಾಗುವುದು, ಇವು ನಡೆದುಕೊಂಡು ಬರುತ್ತಿರುವ ಸಾಮಾನ್ಯ ಸಂಗತಿಗಳಾಗಿವೆ. ಈ ಶಾಲೆಗಳಲ್ಲಿ ಸಿಬ್ಬಂದಿಯ, ಮೂಲಭೂತ ಸೌಕರ್ಯಗಳ ಕೊರತೆಗಳ ಜೊತೆಗೆ ಸರ್ಕಾರಗಳ ರೀತಿ-ನೀತಿಗಳೂ ಅವುಗಳ ಪಾಲಿಗೆ ಕಂಟಕಪ್ರಾಯವಾಗಿವೆ. ವಿಷಯ ಹೀಗಿರಬೇಕಾದರೆ, ಇನ್ನು ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳು ನಾಡು, ಕೇರಳ ರಾಜ್ಯಗಳ ಗಡಿಭಾಗದಲ್ಲಿರುವ ಸರ್ಕಾರಿ ಕನ್ನಡ ಶಾಲೆಗಳ ಪಾಡು ಹೇಗಿರಬೇಕು!

ಇರಲಿ.. ಈ ಚಲನಚಿತ್ರವನ್ನು ‘ಮಕ್ಕಳ ಚಲನಚಿತ್ರ’ವೆಂದು ನೇರವಾಗಿ ಪರಿಗಣಿಸಬಹುದಾದರೂ, ವಯಸ್ಕರಿಗೂ ಅನ್ವಯವಾಗುವಂತಹ ಅನೇಕ ವಿಷಯಗಳು ಇದರಲ್ಲಿವೆ. ಚಲನಚಿತ್ರದ ಪ್ರಾರಂಭದಲ್ಲೇ ತೀವ್ರ ಗತಿಯ ಕಟ್ ಗಳ ಮೂಲಕ ಕ್ರೆಡಿಟ್ಸ್ಗಳನ್ನು ತೋರಿಸಲಾಗಿದೆ. ಆದರೆ ಈ ಅನುಕ್ರಮ ವೀಕ್ಷಕರು ಅನುಭವಿಸುವ ಕ್ರಿಯೆಗೆ ಸವಾಲಾಗಿ ಪರಿಣಮಿಸಿದೆ! ಇದರ ಹಿಂದಿನ ಉದ್ದೇಶವೇನು ಎಂಬುದು ತಿಳಿಯುವುದಿಲ್ಲ. ಮುಂದೆ ಈ ಶಾಲೆಯ ಹಲವು ಮಕ್ಕಳ ಕಲಿಕೆಯ ಭಾಗಗಳು, ಆಟೋಟಗಳು, ಆ ಭಾಗದ ಸಾಂಸ್ಕೃತಿಕ ಪರಿಸರದ ಝಲಕ್ ಗಳು, ಅವರ ಕುಟುಂಬಗಳ ಸಾಮಜಿಕ/ಆರ್ಥಿಕ/ಮತಧಾರ್ಮಿಕ ಹಿನ್ನೆಲೆಗಳ ‘ಟಚ್ ಆಂಡ್ ಗೋ’ ವಿವರಗಳು, ಮುದಗೊಳಿಸುವ ಪ್ರಾಕೃತಿಕ ಚಿತ್ರಗಳು, ಕರಾವಳಿ ಕನ್ನಡದ ಸೊಗಡು, ಮಕ್ಕಳ ಲವಲವಿಕೆ ಮುಂತಾದ ರಂಜನೀಯ ಅಂಶಗಳು ಚಲನಚಿತ್ರದ ಮೊದಲಾರ್ಧದಲ್ಲಿ ಹಾಸ್ಯಲೇಪನದೊಡನೆ ವೀಕ್ಷಕರನ್ನು ತಲುಪುತ್ತವೆ. ವಾಸುಕಿ ವೈಭವ್ ಅವರ ಸಂಗೀತ ನಿರ್ದೇಶನದ, ಮತಧಾರ್ಮಿಕ ಸೌಹಾರ್ದತೆ ಸಾರುವಂತಿರುವ ‘ಕ್ರಾಪು ಕೂದಲು, ಕೂಲಿಂಗ್ ಗ್ಲಾಸು, ಹಳೆಯ ಫೇಸಿನ ಮೇಲೆ ಘಮ್ ಘಮ್ ಎನ್ನುವ ಟಾಲ್ಕಮ್ ಪೌಡರು…’ ಎಂಬ ‘ಬಲೂನ್’ ಹಾಡು ಹಾಗೂ ‘ಮೋಡ ಮುಸುಕಿದ ಬಾನು, ರೆಕ್ಕೆ ತಿರುಗದ ಫ್ಯಾನು…’ ಎಂಬ ‘ದಡ್ಡ ದಡ್ಡ’ ಗೀತೆಗಳು ಗುನುಗುನಿಸುವಂತಿವೆ. ಇವುಗಳ ಜೊತೆ ಇನ್ನು ಏಳು ಹಾಡುಗಳಿವೆ. ಹಿನ್ನಲೆ ಸಂಗೀತ ನೀಡಿರುವ ಅಜನೀಶ್ ಗಮನಾರ್ಹ ರೀತಿಯಲ್ಲಿ ತಮ್ಮ ಕಾರ್ಯವನ್ನು ಮಾಡಿದ್ದಾರೆ. ‘ದಡ್ಡ ದಡ್ಡ…’ ಹಾಡಿನ ರಮಣೀಯ ದೃಶ್ಯಗಳ ಸಂಯೋಜನೆಯಲ್ಲಿ ಹಾಗೂ ಇತರೆಡೆಗಳಲ್ಲಿ ಛಾಯಾಚಿತ್ರಗ್ರಾಹಕ ವೆಂಕಟೇಶ್ ಅಂಗುರಾಜ್ ರ ಪ್ರತಿಭೆ ಅನಾವರಣಗೊಂಡಿದೆ. ಕಥನ ಕಟ್ಟಿಕೊಡುವ ಶೈಲಿಯಲ್ಲಿ ‘ಲೈಟ್ ಹಾರ್ಟಡ್ ಮೊಮೆಂಟ್ಸು’ಗಳನ್ನು ಸೆರೆಹಿಡಿಯಲಾಗಿದೆ. ಇವುಗಳಲ್ಲಿ ಮೂರು ಬಾರಿ ನಪಾಸಾಗಿರುವ ಪ್ರವೀಣ ತನ್ನ ಸಹಪಾಠಿಯೊಬ್ಬಳ ಮೇಲಿನ ‘ಟೀನೇಜ್ ಕ್ರಶ್’ ಕೂಡ ಬಿಂಬಿತವಾಗಿದೆ.

(ರಿಷಬ್ ಶೆಟ್ಟಿ)

ಹೀಗೆ ದ್ವಿತೀಯಾರ್ಧದ ಬಗೆಗೆ ನಿರೀಕ್ಷೆಗಳನ್ನು ಹುಟ್ಟಿಸುವ ಈ ಚಲನಚಿತ್ರ ಮುಂದೆ ಮುಗ್ಗರಿಸುತ್ತದೆ! ಒಬ್ಬ ಶಿಕ್ಷಣದ ಇಲಾಖೆಯ ಮೇಲಾಧಿಕಾರಿ(ಈತ ಮಲಯಾಳಿ)ಯ ಕುಟಿಲತೆಯಿಂದ ಈ ಶಾಲೆ ಮುಚ್ಚುವ ಹಂತ ತಲುಪುತ್ತದೆ. ಈ ಹಿನ್ನೆಲೆಯಲ್ಲಿ ಸಂಕೀರ್ಣ, ಬಹುಆಯಾಮಗಳುಳ್ಳ ಸಮಸ್ಯೆಗಳನ್ನು ಎದುರಿಸುತ್ತಿರುವ ಅಲ್ಲಿನ ಕನ್ನಡ ಶಾಲೆಗಳ ದುರಂತದ ಕಥೆಗೆ ನಾನಾ ಮುಖಗಳಿವೆ. ಆದರೆ ಚಲನಚಿತ್ರದಲ್ಲಿ ತೀರ ಸರಳೀಕರಣದ ಸೂತ್ರದ ಮೂಲಕ ಶಾಲೆಯ ಮುಚ್ಚುವಿಕೆಯ ವಿಷಯ ಪ್ರಸ್ತಾಪವಾಗಿದೆ. ಶಾಲೆ ಕದಮುಚ್ಚುವ ಹಂತ ತಲುಪುವಾಗ, ಅಲ್ಲಿನ ಕನ್ನಡಿಗರ ಭಿನ್ನ ದನಿಗಳನ್ನು ಅನಾವರಣಗೊಳಿಸಲಾಗಿದೆ. “ಕನ್ನಡ ವಿಷಯಕ್ಕೆ ಬಂದರೆ ತಲೆ ಕಡೀತೇನೆ” ಎಂದು ಉಗ್ರರೂಪಿಯಾಗುವ ಶಾಂತಾರಾಮ ಈ ಸಂದರ್ಭದಲ್ಲಿ ತನ್ನ ಮಗಳನ್ನು ಮಂಗಳೂರಿನ ಶಾಲೆಗೆ ತನ್ನ ಮಗಳನ್ನು ಕಳುಹಿಸಲು ಸನ್ನದ್ಧನಾಗುತ್ತಾನೆ! ನಂತರ ಪುನಃ ಆತ ಗುಟುರು ಹಾಕುತ್ತಾನೆ!

ದ್ವಿತೀಯಾರ್ಧದಲ್ಲಿ ಪ್ರವೇಶ ಮಾಡುವ ಅನಂತಪದ್ಮನಾಭ(ನಟ ಅನಂತ್ ನಾಗ್)ನನ್ನು ಆ ಶಾಲೆಯ ಮಕ್ಕಳೇ ತಮ್ಮ ಶಾಲೆಯ ಮುಚ್ಚುವಿಕೆಯ ವಿರುದ್ಧ ಹೋರಾಟ ಮಾಡಲು ಪ್ರೇರೇಪಿಸಿ ದೂರದ ಊರಿನಿಂದ ಕರೆತರುತ್ತಾರೆ! ತುಂಬ ನಾಟಕೀಯವಾಗಿ ಕೆಲವು ಪ್ರಸಂಗಗಳನ್ನು ಹೆಣೆದು, ಆತ ಹೇಗೆ ವಿಜಯಶಾಲಿಯಾಗುತ್ತಾನೆ ಎಂಬುವುದರೊಂದಿಗೆ ಚಲನಚಿತ್ರ ಅಂತ್ಯ ಕಾಣುತ್ತದೆ. ಆದರೆ ಇಲ್ಲಿ ಅನಂತಪದ್ಮನಾಭನ ಪಾತ್ರ ಪೋಷಣೆ ತೀರಾ ಪೇಲವವಾಗಿದೆ! ಬರೀ ಹಾಸ್ಯದ ಮೂಲಕವೇ ಈ ವಸ್ತುವನ್ನು ವೀಕ್ಷಕರಿಗೆ ದಾಟಿಸಬೇಕೆಂಬ ಹಟ ನಿರ್ದೇಶಕರಿಗೆ ಇದೆಯೇನೋ ಎಂದು ಭಾಸವಾಗುತ್ತದೆ! ಗಲ್ಲಾಪೆಟ್ಟಿಗೆಯ ಲೆಕ್ಕಾಚಾರದಲ್ಲಿ ಹೀಗಾಗಿರಬಹುದು. ಕೋರ್ಟ್ ರೂಮಿನ ದೃಶ್ಯವಂತೂ ಜಾಳುಜಾಳಾಗಿದೆ. ಚಲನಚಿತ್ರದಲ್ಲಿ ಕೆಲವೆಡೆ ಲಿಪ್-ಸಿಂಕ್ ಆಗದಿರುವ ಅಂಶ ಕಂಡು ಬಂದಿತು. ಆದರೆ ಈ ಚಲನಚಿತ್ರದಲ್ಲಿ ಉಪದೇಶಸಾರಾಮೃತವಿಲ್ಲ! ಅನಂತ್ ನಾಗ್, ಮಕ್ಕಳ ಪಾತ್ರಧಾರಿಗಳು ಹಾಗೂ ಇತರರ ನಟನೆ ಸಮರ್ಪಕವಾಗಿದೆ.

ಇಷ್ಟಾಗಿಯೂ ಚಲನಚಿತ್ರವಾಗಿಸಲು ಇಂತಹ ವಸ್ತುವನ್ನು ಆಯ್ದುಕೊಂಡ ರಿಷಬ್ ಶೆಟ್ಟಿಯವರ ಪ್ರಯತ್ನ ಮೆಚ್ಚತಕ್ಕದ್ದೇ. ಸ್ವಲ್ಪ ಮೌನ ಹಾಗೂ ಗಹನತೆ ಇದಿದ್ದರೆ ಈ ಚಲನಚಿತ್ರಕ್ಕೆ ಮತ್ತೊಂದು ಭಿನ್ನ ಆಯಾಮ ದೊರಕುತ್ತಿತ್ತೇನೋ. ಆದರೆ ಈ ರಂಜನೀಯ ಚಲನಚಿತ್ರವನ್ನು ಮನೆಯ ಮಂದಿಯೆಲ್ಲ ಕುಳಿತು ವೀಕ್ಷಿಸಬಹುದು.