ಮಿಜುಸಾನನಿಗೆ ಒಬ್ಬ ಅದ್ಭುತ ಪ್ರತಿಭಾವಂತ ಸಹನಿರ್ದೇಶಕ ಇದ್ದ. ಅವನ ಹೆಸರು ಇನೊಯಿ ಶಿನ್. ಅವನು ನಿರ್ದೇಶಕನಾಗುವ ಮೊದಲೇ ಸತ್ತುಹೋದ. ಫಿಲಿಫೈನ್ಸ್ ನಲ್ಲಿ ಶೂಟಿಂಗ್ ಗೆ ಹೋಗಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸತ್ತುಹೋದ. ಆದರೆ ಫಿಲಿಫೈನ್ಸಿಗೆ ಹೋಗುವುದಕ್ಕೂ ಮುಂಚೆ ಅಲ್ಲಿಗೆ ಹೋಗುವುದೋ ಬೇಡವೋ ಎಂದು ನನ್ನ ಸಲಹೆ ಕೇಳಲು ಬಂದಿದ್ದ. ನನಗೇಕೋ ಏನೋ ಕೆಟ್ಟದಾಗುತ್ತದೆ ಎಂದು ಅನ್ನಿಸಿದ್ದರಿಂದ ಅವನು ಮನೆಯಲ್ಲೇ ಇರುವುದು ಒಳ್ಳೆಯದು ಅಂತ ಹೇಳಿದ್ದೆ. ಅವನು ಒಪ್ಪುವಂತೆ ಹೆಚ್ಚು ಅನುನಯದಿಂದ ತಿಳಿಹೇಳಬೇಕಿತ್ತೇನೋ! ಇನೊಯಿಯ ಸಾವಿನೊಂದಿಗೆ ಯಮಾ ಸಾನರ ಸಂಗೀತ ಚಿತ್ರಗಳ ಪರಂಪರೆಯ ಉತ್ತರಾಧಿಕಾರಿಗಳ ಕೊಂಡಿ ಕಳಚಿಹೋಯಿತು.
ಹೇಮಾ ಎಸ್ ಅನುವಾದಿಸಿರುವ ಅಕಿರ ಕುರಸೋವ ಆತ್ಮಕಥೆಯ ಮತ್ತೊಂದು ಕಂತು

 

ಯಾಮಾ ಸಾನರಿಗೆ ನನ್ನ ಈ ಮುಂಗೋಪ ಮತ್ತು ಹಠಮಾರಿತನದ ಬಗ್ಗೆ ಆತಂಕವಿತ್ತು. ಹಾಗಾಗಿ ಬೇರೆ ನಿರ್ದೇಶಕರೊಂದಿಗೆ ಕೆಲಸ ಮಾಡಲು ಹೋಗುವಾಗಲೆಲ್ಲ ನನ್ನನ್ನು ಕರೆದು ಎಂಥದೇ ಸಂದರ್ಭದಲ್ಲೂ ಕೋಪ ಮಾಡಿಕೊಳ್ಳುವುದಿಲ್ಲ, ಹಠ ಹಿಡಿಯುವುದಿಲ್ಲವೆಂದು ನನ್ನಿಂದ ಆಣೆಪ್ರಮಾಣ ಮಾಡಿಸಿಕೊಳ್ಳುತ್ತಿದ್ದರು. ನಿಜ ಹೇಳಬೇಕೆಂದರೆ ಬೇರೆ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು ಕಡಿಮೆ. ಎರಡು ಸಾರಿ ತಕಿಜಾವ ಎಸುಕೆ ಜೊತೆಯಲ್ಲಿ ಮತ್ತು ತಲಾ ಒಂದು ಸಾರಿ ಫುಶಿಮಿಜು ಶು ಹಾಗೂ ನರುಸೆ ಮಿಕಿಯೊರ ಜೊತೆಯಲ್ಲಿ ಕೆಲಸ ಮಾಡಿದ್ದೆ.

ಯಾಮಾಮೊಟೊ ತಂಡದಿಂದ ಹೊರಗೆ ಬೇರೆಯವರೊಂದಿಗೆ ಕೆಲಸ ಮಾಡಿದ ಅನುಭವದಲ್ಲಿ ನನ್ನನ್ನು ಬಹಳ ಪ್ರಭಾವಿಸಿದ್ದು ನರುಸೆ ಕಾರ್ಯವಿಧಾನ. ಆತನಲ್ಲಿ ಕೆಲಸದ ಪರಿಣಿತಿ ಇತ್ತು. ಒಸರಾಗಿ ಜಿರೊ ಕತೆಯನ್ನು ಆಧರಿಸಿದ Nadare (Avalanche, 1938) ಎನ್ನುವ ಚಿತ್ರದಲ್ಲಿ ಆತನಿಗೆ ಸಹಾಯಕನಾಗಿ ಕೆಲಸ ಮಾಡಿದ್ದೆ. ಆ ಕತೆಯ ವಸ್ತುವಿನ ಕುರಿತು ನಿರ್ದೇಶಕನಿಗೆ ತೃಪ್ತಿ ಇದ್ದಂತಿರಲಿಲ್ಲ. ಆದರೆ ಆ ಚಿತ್ರದಲ್ಲಿ ಕೆಲಸ ಮಾಡುವುದರೊಂದಿಗೆ ಹಲವು ವಿಷಯಗಳನ್ನು ಕಲಿಯುವ ಅವಕಾಶ ಸಿಕ್ಕಿತು.

(ಯಾಮಾಮೊಟೊ)

ನರುಸೆಯ ಶೈಲಿಯೆಂದರೆ ಚಿಕ್ಕ ಚಿಕ್ಕ ಶಾಟ್ ಗಳನ್ನು ಒಂದರಮೇಲೊಂದು ಪೇರಿಸುತ್ತಾ ಹೋಗುವುದು. ಕಡೆಯಲ್ಲಿ ಅವುಗಳನ್ನು ಒಟ್ಟಾಗಿ ನೋಡಿದಾಗ ಅವೆಲ್ಲ ಒಂದೇ ಲಾಂಗ್ ಶಾಟ್ ಇರಬೇಕು ಅನ್ನಿಸುತ್ತಿತ್ತು. ಆ ಶಾಟ್ ಗಳಲ್ಲಿನ ಓಘ ಎಷ್ಟು ಅದ್ಭುತವೆಂದರೆ ಅವು ಬೇರೆ ಬೇರೆ ಶಾಟ್ಗಳಂತೆ ಕಾಣುತ್ತಲೇ ಇರಲಿಲ್ಲ. ಮೊದಲಿಗೆ ನೋಡಿದಾಗ ಈ ಶಾಟ್ ಗಳು ಶಾಂತವಾದ ಸಾಮಾನ್ಯವಾದ ಶಾಟ್ ಗಳಂತೆ ತೋರುತ್ತಿದ್ದವು. ನೋಡನೋಡುತ್ತಾ ಅವು ಆಂತರ್ಯದ ಆಳವನ್ನು ವೇಗವನ್ನು ಅಡಗಿಸಿಟ್ಟುಕೊಂಡು ಮೇಲ್ನೋಟಕ್ಕೆ ಶಾಂತವಾಗಿ ಹರಿಯುತ್ತಿರುವ ನದಿಯಂತೆ ತೋರುತ್ತಿತ್ತು. ಆತನ ಈ ಕೌಶಲ್ಯ ಅಸಾಧಾರಣವಾದದ್ದು. ಈ ವಿಷಯದಲ್ಲಿ ಆತನಿಗೆ ಸರಿಸಾಟಿಗಳಾರು ಇರಲಿಲ್ಲ.

ನರುಸೆಗೆ ತಾನು ಚಿತ್ರೀಕರಿಸಬೇಕೆಂದುಕೊಂಡದ್ದರ ಬಗ್ಗೆ ಸ್ಪಷ್ಟತೆಯಿರುತ್ತಿತ್ತು. ಅನಾವಶ್ಯಕವಾದದ್ದೇನನ್ನೂ ಆತ ಮಾಡುತ್ತಿರಲಿಲ್ಲ. ಊಟಕ್ಕೆ ಸಹ ಸಾಕಷ್ಟು ಸಮಯವನ್ನು ನಿಗದಿಮಾಡಿರುತ್ತಿದ್ದ. ಆತನ ಬಗ್ಗೆ ನನಗಿದ್ದ ಒಂದೇ ತಕರಾರು ಸಹಾಯಕ ನಿರ್ದೇಶಕರಿಗೆ ಏನನ್ನೂ ಮಾಡಲು ಬಿಡದೆ ಆತನೇ ಎಲ್ಲ ಕೆಲಸಗಳನ್ನು ಮಾಡಿಬಿಡುತ್ತಿದ್ದ.

ಒಂದು ದಿನ ಹೀಗೆ ನನಗೆ ಮಾಡಲು ಏನೂ ಕೆಲಸವಿರಲಿಲ್ಲ. ಮೋಡಗಳನ್ನು ಚಿತ್ರಿಸಿದ್ದ ಪರದೆಯ ಹಿಂದೆ ಹೋದೆ. ಅಲ್ಲಿ ರಾತ್ರಿಯ ದೃಶ್ಯಗಳಿಗೆ ಬಳಸುತ್ತಿದ್ದ ದೊಡ್ಡ ವೆಲ್ವೆಟ್ ಪರದೆ ಕಾಣಿಸಿತು. ಪರದೆಯನ್ನು ನೀಟಾಗಿ ಮಡಚಿಟ್ಟಿದ್ದರು. ಮಲಗಲು ಅನುಕೂಲವಾಗಿತ್ತು. ಹೋಗಿ ಅದರ ಮೇಲೆ ನಿದ್ದೆಮಾಡಿಬಿಟ್ಟೆ. ಇದ್ದಕ್ಕಿದ್ದಂತೆ ಬೆಳಕಿನ ತಂಡದ ಸಹಾಯಕ ತಂತ್ರಜ್ಞನೊಬ್ಬ ನನ್ನನ್ನು ಎಬ್ಬಿಸಿ “ಓಡು ಓಡು! ನರುಸೆ ಸಿಟ್ಟಿನಲ್ಲಿ ಹುಚ್ಚನಾಗಿಬಿಟ್ಟಿದ್ದಾನೆ!” ಅಂತ ಹೇಳಿದ. ಏನಾಯಿತೊ ಎನ್ನುವ ಭಯದಲ್ಲಿ ವೇದಿಕೆಯ ಹಿಂಭಾಗದಲ್ಲಿದ್ದ ಕಿಟಕಿಯಲ್ಲಿ ತೂರಿಹೊರಬಂದೆ. ಅಲ್ಲಿ ನುಸುಳುತ್ತಿದ್ದಂತೆ ಆ ಸಹಾಯಕ “ಅವನು ಆ ಮೋಡಗಳ ಹಿಂದಿದ್ದಾನೆ!” ಅಂತ ಕೂಗಿದ್ದು ಕೇಳಿಸಿತು. ನಾನು ಮೌನವಾಗಿ ಮುಂಬಾಗಿಲಿನಿಂದ ಒಳಬಂದಾಗ ನರುಸೆ ವೇದಿಕೆಯ ಹಿಂಭಾಗದಿಂದ ಹೊರಬರುತ್ತಿದ್ದ. “ಏನಾಯಿತು?” ಅಂತ ಕೇಳಿದೆ. “ಯಾರೋ ಪರದೆಯ ಹಿಂದಿನಿಂದ ಗೊರಕೆ ಹೊಡೆಯುತ್ತಿದ್ದಾರೆ. ಥತ್ ಇಡೀ ದಿನ ಹಾಳಾಯಿತು. ನಾನು ಮನೆಗೆ ಹೋಗುತ್ತೇನೆ” ಅಂತ ಹೇಳಿದ. ಆ ಕೆಲಸ ಮಾಡಿದ್ದು ನಾನೇ ಎಂದು ಒಪ್ಪಿಕೊಳ್ಳಲು ನನಗೆ ಸಾಧ್ಯವಾಗಲಿಲ್ಲ. ಈ ಘಟನೆ ನಡೆದು ಹತ್ತು ವರ್ಷಗಳಾದರೂ ನನಗಿನ್ನೂ ಇದನ್ನು ನರುಸೆಗೆ ಹೇಳಲು ಸಾಧ್ಯವಾಗಿಲ್ಲ. ಅವನಿಗದೊಂದು ತಮಾಷೆ ಅನ್ನಿಸಿತು.

(ನರುಸೆ ಮಿಕಿಯೊ)

ತಕಿಜಾವ ಕುರಿತು ಹೇಳುವುದಾದರೆ ನಾವು ಹಕೊನೆ ಪರ್ವತಗಳಲ್ಲಿ ಮಾಡಿದ ಸೆನ್ಗೊಕು ಗುಂಟೊ ಡೆನ್ (The Saga of the Vagabonds, 1937) ಚಿತ್ರದ ಚಿತ್ರೀಕರಣವನ್ನು ಮರೆಯುವಂತಿಲ್ಲ. ಆ ಚಿತ್ರದಲ್ಲಿ ಮೂರನೇ ಸಹಾಯಕ ನಿರ್ದೇಶಕನಾಗಿದ್ದೆ. ಆಗಿನ್ನೂ ಕುಡಿಯುವುದನ್ನು ಕಲಿತಿರಲಿಲ್ಲ. ರಾತ್ರಿ ಟೆಂಟಿಗೆ ವಾಪಸ್ಸಾದಾಗ ಅಡುಗೆಯಾಕೆ ನನಗೆ ಟೀ ಮತ್ತು ಎರಡು ಸ್ವೀಟ್ ಬೀನ್ ಕೇಕ್ ಗಳನ್ನು ಕೊಡುತ್ತಿದ್ದಳು. ಜೊತೆಗೆ ತಕಿಜಾವ ಮತ್ತು ಮುಖ್ಯ ಸಹಾಯಕ ನಿರ್ದೇಶಕರ ಕೇಕುಗಳನ್ನು ನನ್ನ ಕೈಗೆ ಕೊಡುತ್ತಿದ್ದಳು. ದಿನಾಲೂ ಆರು ಕೇಕುಗಳನ್ನು ತಿನ್ನುತ್ತಿದ್ದೆ. ಅಂದಮೇಲೆ ಆಗ ಬಹಳ ಮುದ್ದಾಗಿದ್ದೆ ಅನ್ನಿಸುತ್ತೆ.

ಏಳು ವರ್ಷಗಳ ನಂತರ ನನ್ನ ಮೊದಲ ಚಿತ್ರ Sugata Sanshiroಗಾಗಿ ಅಲ್ಲೇ ಜಾಗಗಳನ್ನು ಹುಡುಕುತ್ತಿದ್ದೆ. ಆಗ ಆ ದಿನಾಲೂ ಕೇಕುಗಳನ್ನು ನೀಡುತ್ತಿದ್ದ ಅಡುಗೆಯಾಕೆಯನ್ನು ಭೇಟಿಮಾಡಿದೆ. ಆಕೆ ನನ್ನನ್ನು ಗುರುತುಹಿಡಿಯಲಿಲ್ಲ. ಆಕೆಯ ಪ್ರಕಾರ ಸಹಜವಾಗಿಯೇ ಏಳು ವರ್ಷಗಳ ಅವಧಿಯಲ್ಲಿ ನಾನು ಬಹಳಷ್ಟು ಬದಲಾಗಿದ್ದೆ. ಆರು ಬೀನ್ ಕೇಕುಗಳನ್ನು ದಿನಾಲೂ ತಿನ್ನುತ್ತಿದ್ದ ಆ ಕುರಸೋವ ಎಲ್ಲಿ ಮೀನಿನ ಹಾಗೆ ಹೆಂಡ ಕುಡಿಯುತ್ತಿರುವ ಈ ಕುರಸೋವ ಎಲ್ಲಿ? ನಾನು ರಾಕ್ಷಸನೇನೋ ಅನ್ನೋ ರೀತಿ ಬಾಗಿಲಿನ ಸಂದಿಯಿಂದ ಅವಳು ನನ್ನ ಚಲನವಲನಗಳನ್ನು
ನೋಡುತ್ತಿದ್ದನ್ನು ಆಮೇಲೆ ಗಮನಿಸಿದೆ.

ಆ ಶಾಟ್ ಗಳಲ್ಲಿನ ಓಘ ಎಷ್ಟು ಅದ್ಭುತವೆಂದರೆ ಅವು ಬೇರೆ ಬೇರೆ ಶಾಟ್ಗಳಂತೆ ಕಾಣುತ್ತಲೇ ಇರಲಿಲ್ಲ. ಮೊದಲಿಗೆ ನೋಡಿದಾಗ ಈ ಶಾಟ್ ಗಳು ಶಾಂತವಾದ ಸಾಮಾನ್ಯವಾದ ಶಾಟ್ ಗಳಂತೆ ತೋರುತ್ತಿದ್ದವು. ನೋಡನೋಡುತ್ತಾ ಅವು ಆಂತರ್ಯದ ಆಳವನ್ನು ವೇಗವನ್ನು ಅಡಗಿಸಿಟ್ಟುಕೊಂಡು ಮೇಲ್ನೋಟಕ್ಕೆ ಶಾಂತವಾಗಿ ಹರಿಯುತ್ತಿರುವ ನದಿಯಂತೆ ತೋರುತ್ತಿತ್ತು.

ಅಲೆಮಾರಿಗಳ ಸಾಹಸಗಾಥೆಯ (Saga of the Vagabonds) ಮೂಲ ಐಡಿಯಾ ನಿರ್ದೇಶಕ ಯಮನಾಕ ಸದಾಒ (Yamanaka Sadao) ಅವರದ್ದು. ನಾಟಕಕಾರ ಮಿಯೋಶಿ ಚಿತ್ರಕತೆಯನ್ನು ಬರೆದರು. ಅದರಲ್ಲಿ ಯಮನಾಕರ ಬುದ್ಧಿವಂತಿಕೆಯ ಹೊಳಹುಗಳು ಅದರಲ್ಲಿ ಸೇರಿತ್ತು. (ನಂತರ ಯಮನಾಕರ ಮೂಲವನ್ನು ಆಧರಿಸಿ ನನ್ನದೇ ಚಿತ್ರಕತೆಯನ್ನು ಬರೆದೆ. 1960ರಲ್ಲಿ ಅದನ್ನು ಸುಗಿಯೆ ತೊಶಿಯೋ ಚಿತ್ರೀಕರಿಸಿದರು). ವರ್ಷದ ಅತ್ಯಂತ ಚಳಿಗಾಲದ ತಿಂಗಳು ಫೆಬ್ರವರಿಯಲ್ಲಿ ನಾವು ಹಕೊನೆ ಪರ್ವತದಲ್ಲಿದ್ದೆವು. ಅಸಾಧ್ಯ ಥಂಡಿ ಗಾಳಿ ದಿನವಿಡಿ ಹಿಮಾಚ್ಛಾದಿತ ಮೌಂಟ್ ಫುಜಿಯ ತಪ್ಪಲಿನ ಬಯಲಿನಲ್ಲಿ ಬೀಸುತ್ತಿತ್ತು. ನಮ್ಮ ಕೈಗಳು, ಮುಖವೆಲ್ಲ ಬಿರುಕುಬಿಟ್ಟು ಮುದುರಿದ ರೇಷ್ಮೆ ಬಟ್ಟೆಯಂತಾಗಿಬಿಟ್ಟಿತ್ತು. ಇನ್ನೂ ಕತ್ತಲಿದ್ದಾಗಲೇ ಶೂಟಿಂಗ್ ಸ್ಥಳಕ್ಕೆ ಹೊರಡುತ್ತಿದ್ದೆವು. ಅಲ್ಲಿಗೆ ತಲುಪುವ ವೇಳೆಗೆ ಸೂರ್ಯ ಆಗಷ್ಟೇ ಪರ್ವತದ ತುದಿಯಲ್ಲಿ ಮೂಡುತ್ತಿದ್ದ. ಆ ಬೆಳಕಿನಲ್ಲಿ ಪರ್ವತವು ಗುಲಾಬಿ ಬಣ್ಣದಿಂದ ಹೊಳೆಯುತ್ತಿತ್ತು. ಪ್ರತಿದಿನ ಶೂಟಿಂಗ್ ಸ್ಥಳಕ್ಕೆ ಹೋಗುವ ದಾರಿಯಲ್ಲಿ, ಶೂಟಿಂಗ್ ನಡುವಿನ ಬಿಡುವಿನ ವೇಳೆಯಲ್ಲಿ, ಮರಳಿ ಬರುವ ಹಾದಿಯಲ್ಲಿ ನೋಡುತ್ತಿದ್ದ ಅಭೂತಪೂರ್ವ ಪ್ರಕೃತಿ ಸೌಂದರ್ಯವನ್ನು ಮರೆಯಲು ಸಾಧ್ಯವೇ ಇಲ್ಲ. ಹೀಗೆ ಹೇಳಿದರೆ ತಕಿಜಾವ ಅವರಿಗೆ ಅವಮಾನ ಮಾಡಿದಂತಾಗಬಹುದೇನೋ ಆದರೆ ಚಿತ್ರೀಕರೀಸುತ್ತಿದ್ದಂತಹ ಸಿನಿಮಾಗಿಂತ ನನ್ನನ್ನು ಹೆಚ್ಚು ಸೆಳೆದದ್ದು ಆ ಅದ್ಭುತ ಸ್ಥಳ.

ಮುಂಜಾನೆಯ ಮಬ್ಬುಬೆಳಕಿನಲ್ಲಿ ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆಯ ಇಕ್ಕೆಲಗಳಲ್ಲಿ ಹಳೆಯ ತೋಟದ ಮನೆಗಳನ್ನು ನೋಡಬಹುದಿತ್ತು. ಎಕ್ಸ್ಟ್ರಾ ನಟರಂತೆ ಅಲಂಕಾರ ಮಾಡಿಕೊಂಡಿರುತ್ತಿದ್ದ ರೈತರು ಕೂದಲನ್ನು ಮೇಲಕ್ಕೆತ್ತಿ ತುರುಬು ಕಟ್ಟಿ, ರಕ್ಷಾಕವಚಗಳನ್ನು ಧರಿಸಿಕೊಂಡು, ಕತ್ತಿಗಳನ್ನು ಹಿಡಿದುಕೊಂಡು ಈ ಮನೆಗಳಿಂದ ಹೊರಬರುತ್ತಿದ್ದರು. ತಮ್ಮ ಮನೆಗಳ ದೊಡ್ಡ ಬಾಗಿಲುಗಳನ್ನು ತೆರೆದಿಟ್ಟು ಕುದುರೆಯೊಂದಿಗೆ ಬರುತ್ತಿದ್ದರು. ಅವರು ನಮ್ಮ ಕಾರನ್ನು ಹಿಂಬಾಲಿಸಿ ಕುದುರೆಯ ಮೇಲೆ ಬರುತ್ತಿದ್ದರು. ದೈತ್ಯ ಕ್ರಿಪ್ಟೊಮೆರಿಯ ಮತ್ತು ಪೈನ್ ಮರಗಳ ನಡುವೆ ಹಾದು ಹೋಗುತ್ತಿರುವಾಗ ಇವೆಲ್ಲವೂ ಆ ಪುರಾತನ ಯುಗದ ಭಾಗವೇನೋ ಎಂದೆನಿಸುತ್ತಿತ್ತು.

ಶೂಟಿಂಗ್ ಸ್ಥಳವನ್ನು ತಲುಪಿದ ಮೇಲೆ ಆ ಎಕ್ಸ್ಟ್ರಾ ನಟರು ತಮ್ಮ ಕುದುರೆಗಳನ್ನು ಕಾಡೊಳಗಿನ ಮರಗಳಿಗೆ ಕಟ್ಟಿಹಾಕುತ್ತಿದ್ದರು. ಅಲ್ಲೇ ದೊಡ್ಡಬೆಂಕಿಯನ್ನು ಹಾಕಿ ಅದರ ಸುತ್ತ ನೆರೆಯುತ್ತಿದ್ದರು. ಆ ಮಬ್ಬುಬೆಳಕಿನ ಕಾಡಿನಲ್ಲಿ ಕೆನ್ನಾಲಿಗೆ ಚಾಚುತ್ತ ಉರಿಯುತ್ತಿದ್ದ ಬೆಂಕಿಯ ಬೆಳಕಲ್ಲಿ ಅವರ ರಕ್ಷಾಕವಚಗಳು ಹೊಳೆಯುತ್ತಿದ್ದವು. ಅದನ್ನು ನೋಡಿದಾಗ ಪರ್ವತದ ತಪ್ಪಲಿನ ಕಾಡಿನ ವೀರರ ಗುಂಪಿನ ನಡುವೆ ತಪ್ಪಿ ಬಂದುಬಿಟ್ಟಿರುವೆನೇನೋ ಎಂದೆನಿಸುತ್ತಿತ್ತು.

ಶೂಟಿಂಗ್ ಶುರುವಾಗುವುದನ್ನೇ ಕಾಯುತ್ತಾ ಆ ಜನರು ಮತ್ತು ಕುದುರೆಗಳು ಉತ್ತರದ ಗಾಳಿಗೆ ಬೆನ್ನುಹಾಕಿ ನಿಂತಿರುತ್ತಿದ್ದರು. ನಿಂತಿದ್ದ ಯೋಧರನ್ನು ಗಾಳಿ ನಡುಗಿಸಿಬಿಡುತ್ತಿತ್ತು. ಅವರ ತಲೆಯ ಮೇಲಿನ ತುರುಬನ್ನು, ಕುದುರೆಗಳ ಕೇಸರ ಮತ್ತು ಬಾಲವನ್ನು ಹಾರಿಸುತ್ತಿತ್ತು. ಮೋಡಗಳು ಆಕಾಶದುದ್ದಕ್ಕೂ ಚದುರಿಹೋಗುತ್ತಿದ್ದವು. ಪರ್ವತ ವೀರ ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಈ ದೃಶ್ಯದ ಭಾವವನ್ನು ಯಥಾವತ್ತಾಗಿ ಸೆರೆಹಿಡಿಯಲಾಗಿದೆ.

ದೂರದೂರಿನ ಮನೆಯ ನೆನಪಿನಲ್ಲಿ
ಈಟಿಯಂತೆ ಒರಗಿದೆಯಾ ಕಾಡಿನಲ್ಲಿ

ಅಲೆಮಾರಿಗಳ ಸಾಹಸಗಾಥೆಯ (Saga of the Vagabonds) ಕಾಲದಿಂದಲೂ ಗೊಟೆಂಬ ಪಟ್ಟಣ, ಮೌಂಟ್ ಫುಜಿಯ ತಪ್ಪಲಿನ ಬಯಲುಗಳು, ಅಲ್ಲಿನ ಜನ, ಕುದುರೆಗಳ ಬಗೆಗೆ ನನಗೆ ಇನ್ನಿಲ್ಲದ ಪ್ರೀತಿ. ಹಲವು ಐತಿಹಾಸಿಕ ಚಿತ್ರಗಳನ್ನು ನಾನಿಲ್ಲಿ ಚಿತ್ರೀಕರಿಸಿದೆ. ಈ ಚಿತ್ರದಲ್ಲಿ ಉತ್ಸಾಹದಿಂದ ಪುಟಿಯುವ ಕುದುರೆಗಳೊಂದಿಗೆ ಒಡನಾಡಿದ ಅನುಭವ ಮರೆಯಲಾಗದ್ದು. ಈ ಅನುಭವದ ಹಿನ್ನೆಲೆಯಲ್ಲಿ ಇವುಗಳನ್ನು ಸೆವನ್ ಸಮುರಾಯ್, ಥ್ರಾನ್ ಆಫ್ ಬ್ಲಡ್ ಮತ್ತು ಇತ್ತೀಚಿನ ಕಗೆಮುಶದಲ್ಲಿ ಬಳಸಿದೆ.

ಕಡೆಯದಾಗಿ ಫುಶಿಮಿಜು ಶು ಎನ್ನುವ ಹೃದಯವಂತನ ಬಗ್ಗೆ ಬರೆಯಲು ಇಚ್ಛಿಸುತ್ತೇನೆ. ಅವನು ಮತ್ತು ನಾನು ಹುಟ್ಟಿದ್ದು ಒಂದೇ ವರ್ಷದಲ್ಲಿ. ನನಗಿಂತ ಅವನು ಕೆಲವು ತಿಂಗಳು ಚಿಕ್ಕವನು. 1942ರಲ್ಲಿ ಅವನು ತೀರಿಕೊಂಡಾಗ ಅವನ ವಯಸ್ಸು ಮೂವತ್ತೊಂದು. ಸಂಗೀತ ಚಿತ್ರಗಳಲ್ಲಿನ ಯಮಾ ಸಾನರ ಪ್ರತಿಭೆಯನ್ನು ಈತ ಪಡೆದಂತೆ ಕಾಣುತ್ತಿತ್ತು. ಆದರೆ ಅಷ್ಟು ಚಿಕ್ಕ ವಯಸ್ಸಿಗೆ ತೀರಿಕೊಂಡದ್ದು ದುರಂತ. ನಾವೆಲ್ಲ ಅವನನ್ನು “ಮಿಜು ಸಾನ್” ಎಂದೇ ಕರೆಯುತ್ತಿದ್ದೆವು. ಮಿಜು ಸಾನ್ ಒಬ್ಬ ನಿರ್ದೇಶಕನ ಕುರಿತ ನಿಮ್ಮ ಕಲ್ಪನೆಗೆ ತಕ್ಕಂತೆ ಇದ್ದ. ನೋಡಲು ಬಹಳ ಚೆನ್ನಾಗಿದ್ದ. ಚೆನ್ನಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದ. ಯಮಾ ಸಾನ್ ಕೂಡ ನೋಡಲು ಬಹಳ ಸುಂದರವಾಗಿದ್ದರು ಮತ್ತು ಆಕರ್ಷಕವಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ಆದ್ದರಿಂದ ಮಿಜು ಸಾನ್ ಅವರಿಗೆ ಸೂಕ್ತ ಉತ್ತರಾಧಿಕಾರಿಯಂತಿದ್ದ. ಅವನು ಅಷ್ಟೊತ್ತಿಗಾಗಲೇ ನಿರ್ದೇಶಕನಾಗಿ ಬಡ್ತಿ ಪಡೆದಿದ್ದ. ತನಿಗುಚಿ ಸೆನ್ಕಿಚಿಗಾಗಲಿ ಹೊಂಡ ಇನೊಶಿರೊಗಾಗಲಿ ಅಥವ ನನಗಾಗಲಿ ಇನ್ನೂ ನಿರ್ದೇಶಕರಾಗಿ ಬಡ್ತಿ ಸಿಕ್ಕಿರಲಿಲ್ಲ. ಆದ್ದರಿಂದ ಮಿಜು ಸಾನ್ ಮುಂದೆ ನಾವೆಲ್ಲ ಅವನ ತಮ್ಮಂದಿರಂತೆ ಕಾಣುತ್ತಿದ್ದೆವು.

ಯಮಾ ಸಾನ್ “ನಮ್ಮಣ್ಣ” ಮಿಜುಸಾನನಿಗೆ ಬಹಳ ಹುಷಾರಿಲ್ಲ ಎಂದು ಹೇಳಿದರು. ಅವರು ಈ ವಿಷಯ ತಿಳಿಸಿದ ಎರಡು ಅಥವ ಮೂರು ದಿನಗಳ ನಂತರ ಟೊಕಿಯೊದ ತೊಹೊ ಸ್ಟುಡಿಯೋ ಬಳಿಯಿದ್ದ ಶಿಬುಯ ನಿಲ್ದಾಣದ ಹತ್ತಿರ ನಿಂತಿದ್ದೆ. ಇದ್ದಕ್ಕಿದ್ದಂತೆ ಮಿಜು ಸಾನ್ ಆ ನಿಲ್ದಾಣದಲ್ಲಿದ್ದ ಗುಂಪಿನ ನಡುವಿನಿಂದ ಬಂದ. ಅವನಾಗ ಕ್ಯೊಟೊ ಒಸ್ಕಾ ಭಾಗದಲ್ಲಿದ್ದ ಅವನ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಿತ್ತು. ಅವನನ್ನು ನಿಲ್ದಾಣದಲ್ಲಿ ನೋಡಿ ಆಶ್ಚರ್ಯವಾಯಿತು. ಒಂದು ವೇಳೆ ಅವನ ಅನಾರೋಗ್ಯದ ವಿಷಯ ಗೊತ್ತಿಲ್ಲದಿದ್ದರೂ ಅವನನ್ನು ಅಲ್ಲಿ ನೋಡಿ ಆಶ್ಚರ್ಯವಾಗಿರುತ್ತಿತ್ತು. ಅನಾರೋಗ್ಯದಿಂದ ನಿಶ್ಯಕ್ತನಾಗಿ ನೋಡಲು ದೆವ್ವದ ಹಾಗಿದ್ದ.

ಅವನತ್ತ ಓಡಿಹೋಗಿ “ನೀನು ಹುಷಾರಾಗಿದೀಯಾ? ಇಲ್ಲೇನು ಮಾಡುತ್ತಿದ್ದೀಯಾ?” ಅಂತ ಕೇಳಿದೆ. ಬಸವಳಿದ ಮುಖದಲ್ಲಿ ಸೋತಹೋದ ನಗುವನ್ನು ಬಲವಂತದಿಂದ ತಂದುಕೊಂಡು “ನಾನು ಸಿನಿಮಾ ತೆಗಿಯಬೇಕು. ಸಿನಿಮಾ ಮಾಡಬೇಕು” ಅಂತ ಹೇಳಿದ. ಇದಕ್ಕಿಂತ ಹೆಚ್ಚೇನು ಹೇಳಲಾರೆ. ಬಹುಶಃ ಅವನು “ನಾನು ಈಗಷ್ಟೇ ಆರಂಭಿಸಿದ್ದೀನಿ” ಅಂತಲೇ ಯೋಚಿಸುತ್ತಿದ್ದವನಿಗೆ ಮಲಗಲು ಸಾಧ್ಯವಾಗದೆ ಹೋಗಿರಬೇಕು. ಅದೇ ದಿನ ಯಮ ಸಾನ್ ಅವನನ್ನು ಹಕೊನೆ ಪರ್ವತದಲ್ಲಿನ ಗೊರಾ ಎನ್ನುವ ಹೋಟಲಿಗೆ ಕರೆದುಕೊಂಡು ಹೋಗಿ ಅಲ್ಲಿ ಅವನಿಗೆ ಅಗತ್ಯವಾದ ಶುಶ್ರೂಷೆ ವ್ಯವಸ್ಥೆ ಮಾಡಿದರು. ಆದರೆ ಆ ವೇಳೆಗೆ ತಡವಾಗಿತ್ತು.

ಮಿಜುಸಾನನಿಗೆ ಒಬ್ಬ ಅದ್ಭುತ ಪ್ರತಿಭಾವಂತ ಸಹನಿರ್ದೇಶಕ ಇದ್ದ. ಅವನ ಹೆಸರು ಇನೊಯಿ ಶಿನ್. ಅವನು ನಿರ್ದೇಶಕನಾಗುವ ಮೊದಲೇ ಸತ್ತುಹೋದ. ಫಿಲಿಫೈನ್ಸ್ನಲ್ಲಿ ಶೂಟಿಂಗ್ ಗೆ ಹೋಗಿದ್ದಾಗ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಸತ್ತುಹೋದ. ಆದರೆ ಫಿಲಿಫೈನ್ಸಿಗೆ ಹೋಗುವುದಕ್ಕೂ ಮುಂಚೆ ಅಲ್ಲಿಗೆ ಹೋಗುವುದೋ ಬೇಡವೋ ಎಂದು ನನ್ನ ಸಲಹೆ ಕೇಳಲು ಬಂದಿದ್ದ. ನನಗೇಕೋ ಏನೋ ಕೆಟ್ಟದಾಗುತ್ತದೆ ಎಂದು ಅನ್ನಿಸಿದ್ದರಿಂದ ಅವನು ಮನೆಯಲ್ಲೇ ಇರುವುದು ಒಳ್ಳೆಯದು ಅಂತ ಹೇಳಿದ್ದೆ. ಅವನು ಒಪ್ಪುವಂತೆ ಹೆಚ್ಚು ಅನುನಯದಿಂದ ತಿಳಿಹೇಳಬೇಕಿತ್ತೇನೋ!

ಇನೊಯಿಯ ಸಾವಿನೊಂದಿಗೆ ಯಮಾ ಸಾನರ ಸಂಗೀತ ಚಿತ್ರಗಳ ಪರಂಪರೆಯ ಉತ್ತರಾಧಿಕಾರಿಗಳ ಕೊಂಡಿ ಕಳಚಿಹೋಯಿತು. ಒಳ್ಳೆಯವರು ಹೆಚ್ಚು ದಿನ ಇರಲ್ಲ ಅನ್ನೋ ಗಾದೆ ಮಾತು ಇದೆಯಂತೆ. ಬಹುಶಃ ಒಳ್ಳೆಯವರ ಬದುಕಿನ ಅವಧಿ ಬಹಳ ಸಣ್ಣದು ಅನ್ನಿಸುತ್ತದೆ.

ನರೂಸೆ, ತಕಿಜಾವ, ಮಿಜು ಸಾನ್, ಇನೊಯಿ ಶಿನ್ ಎಲ್ಲರೂ ಚಿಕ್ಕವಯಸ್ಸಿನಲ್ಲೇ ಸತ್ತುಹೋದರು. ಮೊಜೊಗುಚಿ ಕೆಂಜಿ, ಓಜು ಯಾಸುಜಿರೊ, ಶಿಮಾಜು ಯಾಸುಜಿರೊ, ಯಮಾಂಕ ಸದಾಒ ಮತ್ತು ತೊಯೊದ ಶಿರೊ ಈ ನಿರ್ದೇಶಕರ ಬಗ್ಗೆ ಕೂಡ ಇದನ್ನೇ ಹೇಳಬೇಕು. ಅವರ ಬಗ್ಗೆ ಕೂಡ “ಒಳ್ಳೆಯ ವ್ಯಕ್ತಿ ಸಣ್ಣ ಅವಧಿಯ ಬದುಕು” ಎಂದೇ ಹೇಳಬೇಕು. ಬಹುಶಃ ನಾನು ಕಳೆದುಕೊಂಡವರ ಬಗೆಗೆ ಭಾವುಕನಾಗಿರಬಹುದು.