ಇಂತಹ ಹತ್ತಾರು ನಿದರ್ಶನಗಳಿಂದ ಆಕೆಗೆ ಏನೂ ತಿಳಿಯುತ್ತಿರಲಿಲ್ಲ. ನಾನು ಬಿಡಿಸಿ ಹೇಳುವಂತಿರಲಿಲ್ಲ. ಬೆದರಿ ಹೋಗಿದ್ದಳು. ಇದನ್ನು ಹೇಗೆ ಇಂಗ್ಲೀಷಿನಲ್ಲಿ ಸರಳೀಕರಿಸಿ ತಿಳಿಸಬಹುದು ಎಂದು ಮನದಲ್ಲೆ ಯತ್ನಿಸಿ; ಥತ್; ಇಂತಾ ಅಲ್ಕಾ ಟ್ರಾನ್ಸ್‌ಲೇಶನ್‌ನಿಂದಾಗಿ ಆಕೆ ನನ್ನ ಬಗ್ಗೆ ಕೆಟ್ಟದಾಗಿ ಭಾವಿಸಿ; ಎಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸುವಳೊ ಎಂದು ಆದಷ್ಟು ಅಂತರ ಕಾಯ್ದುಕೊಳ್ಳುತಿದ್ದೆ. ಆಕೆಯೊ ಲೈಬ್ರರಿಗೆ ಹುಡುಕಿ ಬಂದು ವಿವರಿಸು ಎಂದು ಒತ್ತಾಯಿಸುತ್ತಿದ್ದಳು. ಇದೆಲ್ಲ ತರಲೆ ಆಯಿತಲ್ಲಾ ಎಂದು ನಿಷ್ಟೂರವಾಗಿ ಹೇಳಿಬಿಟ್ಟಿದ್ದೆ.
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಮೂವತ್ತೊಂದನೆಯ ಕಂತು

ಅತ್ಯಂತ ಕಠಿಣ ಎನಿಸಿದ್ದಾಗಲೆ ಯಾವುದೊ ಒಂದು ಬಾಗಿಲು ತೆರೆದುಕೊಂಡಿರುತ್ತದೆ. ಆ ತನಕ ಆ ಬಾಗಿಲು ಅಲ್ಲೆ ಇತ್ತು ಎಂಬುದೆ ನಮ್ಮ ಅರಿವಿಗೆ ಬಂದಿರುವುದಿಲ್ಲ. ಇದೇನು ಇಷ್ಟು ಸಲೀಸಾಯಿತಲ್ಲಾ ಎಂದು ಅಚ್ಚರಿಯಾಗಿರುತ್ತದೆ. ನ್ಯೂ ಬ್ಲಾಕಿನಲ್ಲೆ ಹಾಸ್ಟಲ್ ಸೀಟು ಸಿಕ್ಕಿತ್ತು. ಆ ಮಾರುಕಟ್ಟೆಯಲ್ಲಿ ಸಿದ್ದರಾಜಣ್ಣನ ಜೊತೆ ಕೂಲಿ ಮಾಡಿಟ್ಟುಕೊಂಡಿದ್ದ ಹಣ ಕೈ ಹಿಡಿದು ಕಾಪಾಡಿತ್ತು. ಯಾರ ಮುಂದೆಯು ಕೈ ಒಡ್ಡಿರಲಿಲ್ಲ. ಅಶ್ವಥ್ ಸಹಾಯ ಮಾಡಲು ಮುಂದಾಗಿದ್ದರು. ವಂದನೆ ಹೇಳಿದ್ದೆ. ಹೊಸ ಹುಡುಗ ಹುಡುಗಿಯರ ಮುಂದೆ ಗಂಭೀರನಾಗಿ ಕಾಣಿಸಿಕೊಂಡಿದ್ದೆ. ಸಾಕಷ್ಟು ಕೂದಲು ಉದುರಿದ್ದವು. ಅರ್ಥಶಾಸ್ತ್ರ ಓದಿ ಮುಗಿಸಿದ್ದ ನನಗೆ ಈ ಜಾನಪದ ತರಗತಿಗಳು ಹೇಗಿರುತ್ತವೆ ಎಂಬ ಕುತೂಹಲವಿತ್ತು. ಮುಂದಾಗಿಯೆ ಸಿಲಬಸ್ ನೋಡಿ ಪೂರಕ ಟಿಪ್ಪಣಿಗಳನ್ನು ಮಾಡಿಕೊಂಡಿದ್ದೆ. ಕನ್ನಡ ಜಾನಪದದ ಅಪಾರ ಸಂಗ್ರಹಗಳ ತೆರೆದು ನೋಡಿದ್ದೆ. ವಿದ್ವತ್ ಬರಹಗಳೆಲ್ಲ ಇಂಗ್ಲೀಷಿನಲ್ಲೇ ಇದ್ದವು. ವಶಾಹತುಶಾಹಿ ಅಧ್ಯಯನ ಕ್ರಮಗಳು ತಮಗೆ ಬೇಕಾದಂತೆ ಭಾರತೀಯ ಜಾನಪದವನ್ನು ಅರ್ಥೈಸಿಕೊಂಡಿರುವುದು ಎದ್ದುಕಾಣುತ್ತಿತ್ತು.

ಕೃಷ್ಣಪ್ಪ ಕೊಡಿಸಿದ್ದ ಜೀನ್ಸ್‌ಪ್ಯಾಂಟ್ ನೀಲಿ ಟೀಷರ್ಟ್ ಧರಿಸಿ ಕನ್ನಡ ಅಧ್ಯಯನ ಸಂಸ್ಥೆಯ ಜಾನಪದ ತರಗತಿಯ ಕೊಠಡಿಯ ಕಾರಿಡಾರಿನಲ್ಲಿ ಕಾಯುತ್ತ ನಿಂತಿದ್ದೆ. ಅಲ್ಲೇ ಒಂದು ಪಾರಿಜಾತ ಹೂವಿನ ಮರ ಘಮ್ಮೆಂದು ಸುಗಂಧ ಸೂಸುತ್ತಿತ್ತು. ಎಂ.ಎ. ಜಾನಪದಕ್ಕೆ ಗೋವಾದ ಒಬ್ಬ ಹುಡುಗಿ ಸೇರಿದ್ದಳು. ಇನ್ನೂ ತರಗತಿಗೆ ಬಂದಿರಲಿಲ್ಲ. ಅಡ್ಮಿಷನ್ ಆಗಿದ್ದು ಮಾತ್ರ ಗೊತ್ತಿತ್ತು. ಯಾವ ಚೆಲುವೆಯೊ… ಎಂದು ಬರುವಳೊ… ಹೇಗಿರುವಳೊ… ಕನ್ನಡ ಬರುತ್ತೊ ಇಲ್ಲವೊ… ಎಂದು ಬೇವಿನಕಟ್ಟೆಯ ಕೇಳಿದ್ದೆ. ಆತ ಆಸಕ್ತಿ ತೋರಲಿಲ್ಲ. ನಾವಿಬ್ಬರೂ ಈಗ ಕ್ಲಾಸ್‌ಮೇಟ್ ಆಗಿದ್ದೆವು. ಯಾವ ಹೋರಾಟದತ್ತಲೂ ಮುಖ ತೋರಿರಲಿಲ್ಲ. ಸದ್ಯ ಇನ್ನೊಂದು ಎಂ.ಎ.ಗೆ ಬಂದು ಹಾಸ್ಟಲಿನ ಊಟ ಸಿಕ್ಕಿ ಬದುಕಿ ಉಳಿದೆವಲ್ಲಾ ಎಂಬ ಧನ್ಯತೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಲಾಂಚನ `ನಹೀ ಜ್ಞಾನೇನ ಸದೃಶಂ’ಗೆ ನಮಸ್ಕರಿಸಿದ್ದೆ. ಜೀಶಂಪ ಅವರ ಕ್ಲಾಸಿತ್ತು. ಭಾರತದ ಜಾನಪದ ಅಧ್ಯಯನದಲ್ಲಿ ಅವರು ಒಂದು ಮೈಲಿಗಲ್ಲಾಗಿದ್ದರು. ನಾಗಮಂಗಲದ ಅಂಬಲಜೀರಹಳ್ಳಿಯ ಬಡ ವಕ್ಕಲಿಗರ ಮನೆಯಿಂದ ಬಂದವರೇ ಇವರು ಎಂಬ ದಟ್ಟ ಅನುಮಾನ ಉಂಟಾಗುತಿತ್ತು. ಬ್ರಿಟೀಷ್ ವಿದ್ವಾಂಸರಂತಿದ್ದರು. ಅಂತಹ ಬಣ್ಣ, ಎತ್ತರ, ವಿದ್ವತ್ತು ಅವರಲ್ಲಿದ್ದವು. ಅಪ್ಪಟ ಹಳ್ಳಿಗಾಡಿನ ತಳದ ಬೇರುಗಳಿಂದ ಮೇಲೆದ್ದು ಬಂದಿದ್ದವರಾಗಿದ್ದರು. ಅವರ ಬಗ್ಗೆ ಸಾಕಷ್ಟು ಓದಿ ತಿಳಿದುಕೊಂಡಿದ್ದೆ. ತರಗತಿಯಲ್ಲಿ ಇದ್ದಿದ್ದು ನಾಲ್ಕೆ ಮಂದಿ. ಮೋಹಿನಿ ಬಂದಿದ್ದಳು. ಮಲೆನಾಡಿನ ಸಾಂಪ್ರದಾಯಿಕ ಚೆಲುವೆ, ಮಂಜು ನನ್ನ ಜೊತೆಗೇ ಇದ್ದ. ಜೀಶಂಪ ಕನ್ನಡ ಮಹಾಕಾವ್ಯ ಪರಂಪರೆಗಳ ವಿವರಿಸಿ ನಂತರ ಜನಪದ ಕಾವ್ಯಗಳತ್ತ ಗಮನ ಸೆಳೆದರು. ಮೊದಲೇ ನನಗೆ ಮಾದೇಶ್ವರ ಮಂಟೆಸ್ವಾಮಿ ಕಾವ್ಯಗಳ ಹುಚ್ಚು ಇತ್ತು. ಆ ಇಬ್ಬರು ಸಾಂಸ್ಕೃತಿಕ ವೀರರು ದಲಿತ ಸಮಾಜದಿಂದ ಬಂದವರು ಎಂಬುದು ಹೆಮ್ಮೆ ಪಡತಕ್ಕ ವಿಚಾರ. ಜನಸಾಮಾನ್ಯ ದಮನಿತರು ಈ ಇಬ್ಬರ ಬಗ್ಗೆ ಅಪಾರ ವಿಶ್ವಾಸ ಮೆರೆದು ನಡೆದುಕೊಂಡಿದ್ದಾರೆ ಎಂದು ಆಳವಾದ ವಿಷಯಗಳ ಮೊದಲ ಬಾರಿಗೆ ಭಿನ್ನವಾಗಿ ಪಾಠ ಮಾಡಿದರು. ಒಂದೇ ಸಲಕ್ಕೆ ಸೆರೆ ಹಿಡಿದಿದ್ದರು.

ಅವರು ಭಾರತೀಯ ಜಾನಪದದ ಮೊಟ್ಟಮೊದಲ ಪ್ರಾಧ್ಯಾಪಕರಾಗಿದ್ದರು. ಪಶ್ಚಿಮದ ಸಮಾಜ ವಿಜ್ಞಾನಿಗಳ ವಿಚಾರಗಳ ನೆಪಕ್ಕೆ ತೆಗೆದುಕೊಂಡು ಉದಾರ ರಾಷ್ಟ್ರೀಯತೆಯಲ್ಲಿ ದೇಸಿ ಸಮುದಾಯಗಳ ಅಸ್ತಿತ್ವವನ್ನು ಮಾರ್ಗ ಸಾಹಿತ್ಯ ಪರಂಪರೆಗಳ ಎದಿರು; ಪರ್ಯಾಯವಾಗಿ ನಿಲ್ಲಿಸಿ ಹೇಳುವ ಅವರ ಶೈಲಿ ಪ್ರಾಂಜಲವಾಗಿತ್ತು. ಕೃತ್ರಿಮತೆ, ಒಣ ಪಾಂಡಿತ್ಯಕ್ಕೆ ಅವರಲ್ಲಿ ಅವಕಾಶವೆ ಇರಲಿಲ್ಲ.

ಮರುದಿನ ಒಬ್ಬ ಗಾದೆ ಪ್ರಾಧ್ಯಾಪಕರು ಆಸಕ್ತಿ ಕೆರಳಿಸಿದರು. ಎಲೆ ಅಡಿಕೆ ಕಡ್ಡಿಪುಡಿಯ ತಿಂದು ತಿಂದು ಅವರ ತುಟಿಗಳ ಎರಡೂ ತುದಿಗಳು ಸದಾ ಒದ್ದೆಯಾಗಿರುತ್ತಿದ್ದವು. ಒಮ್ಮೊಮ್ಮೆ ತಾಂಬೂಲವ ಬಾಯ ಕವಟೆ ಮರೆಗೆ ಒತ್ತರಿಸಿ ರಸ ಸೋರಿಸಿಕೊಂಡು ಪಾಠ ಮಾಡುವ ಅವರ ರೀತಿಯೊ ನನಗೆ ತಡೆಯಲಾರದಷ್ಟು ನಗುತರಿಸುತ್ತಿತ್ತು. ಅವತ್ತು ಆ ಗೋವಾದ ಹುಡುಗಿ ಬಂದು ಬಹಳ ನಿರಾಶೆ ತರಿಸಿದ್ದಳು. ಕಾರಿಡಾರಿನಲ್ಲಿ ನಾನು ಮಂಜ ನಿಂತಿದ್ದೆವು. ಕಾಸ್ಕರ್ ಅವಳ ಹೆಸರು, ಕೈ ಬೀಸಿಕೊಂಡು ಎರಡೂ ಕಾಲುಗಳ ನಡೆ ಬೇರೆ ಬೇರೆ ಕಡೆಗೆ ಎಂಬಂತೆ ಅತ್ತಿತ್ತ ಹೆಜ್ಜೆ ಇಟ್ಟು ಬಂದು; `ವೇರ್ ಈಸ್ ಫೋಕ್‌ಲೋರ್ ಕ್ಲಾಸ್ ರೂಂ’ ಎಂದು ಮಂಜನನ್ನು ಕೇಳಿದಳು. ಮಂಜ ಬೆಚ್ಚಿದ್ದ. ಖಡಕ್ಕಾಗಿ ಇಂಗ್ಲೀಷಿನಲ್ಲಿ ಆಕೆ ಕೇಳಿದ್ದ ರೀತಿಯಲ್ಲೇ ಒಹ್! ಇವಳೆನಾ ಗೋವಾ ಫಿಗರ್ ಎಂದು ಪೆಚ್ಚಾದೆ. ಇದೇ ಕ್ಲಾಸ್ ರೂಂ ಎಂದು ತೋರಿಸಿ ಪರಿಚಯ ಮಾಡಿಕೊಂಡೆ. ಕನ್ನಡವೆ ಬರುತ್ತಿರಲಿಲ್ಲ. ಮಂಜ ನನ್ನ ಮುಖ ನೋಡಿದ. ಮುಂದೆ ಆ ಇಬ್ಬರು ಹುಡುಗಿಯರು; ಅವರ ಹಿಂದೆ ನಾವಿಬ್ಬರು ಗಾದೆ ಗಾರುಡಿಗ ಪ್ರಾಧ್ಯಾಪಕರಿಗಾಗಿ ಕಾಯುತ್ತಿದ್ದೆವು. ಅವರು ಸಕಾಲಕ್ಕೆ ಬಂದರು. ಜಾನಪದ ಕಲಿಯಲು ಅನ್ಯ ರಾಜ್ಯದ ಭಾಷಿಕರು ಬಂದಾಗ ಮಾಧ್ಯಮ ತಂತಾನೆ ಬದಲಾಗುತ್ತಿತ್ತು. ಇಲ್ಲದಿದ್ದರೆ ಕನ್ನಡದಲ್ಲೆ ಎಲ್ಲ ಇರುತ್ತಿತ್ತು. ಆ ಗೋವಾದ ಹುಡುಗಿಯ ಬಗ್ಗೆ ತಕ್ಕ ಅಂದಾಜು ಆ ಗಾದೆ ಗಾರುಡಿಗ ಪ್ರಾಧ್ಯಾಪಕರಿಗೆ ಇರಲಿಲ್ಲ. ಹಳ್ಳಿಗಾಡಿನ ಮಾತಿನ ವರಸೆಗಳಲ್ಲಿ ಮೀರಿಸುವವರು ಯಾರೂ ಇರಲಿಲ್ಲ. ಅಂತಹ ಗ್ರಾಮ್ಯ ಪಾಠದಿಂದ ನನಗಂತು ಋಷಿಯೆ ಆಗುತ್ತಿತ್ತು. ಕಥೆಗಳನ್ನು ಬರೆದು ಕೂಡ ಹೆಸರಾಗಿದ್ದರು. ಪಾಠ ಮಾಡುತ್ತಲೇ ಆಗಾಗ ನಶ್ಯದ ಡಬ್ಬಿಯ ಜುಬ್ಬದ ಜೇಬಿಂದ ತೆಗೆದು ಮೂಗಿಗೆ ಏರಿಸಿಕೊಂಡು ಜೋರಾಗಿ ಸೀನುತ್ತ ಮುಂದೆ ಕೂತಿದ್ದ ಆ ಹುಡುಗಿಯರಿಗೆ ಸಿಂಚನ ಸಿಡಿಸುತ್ತಿದ್ದರು. ಅವರು ಚೋಟಾದ ಇಟ್ಲರನ ಮೀಸೆ ಬಿಟ್ಟಿದ್ದರು. ಬಿಳಿ ಮೀಸೆ ನಶ್ಯ ಏರಿಸಿ ಪೇರಿಸಿ ಎರಡೂ ಮೂಗಿನ ವಳ್ಳೆಗಳು ಕಂದು ಬಣ್ಣದಲ್ಲಿ ಕರೆಗಟ್ಟಿರುತ್ತಿದ್ದವು. ಇಷ್ಟೆಲ್ಲ ಕಲರ್‍ಫುಲ್ ಆಗಿರುವ ನಮ್ಮ ಹಳ್ಳಿ ಪ್ರಾಧ್ಯಾಪಕರ ನಾನ್ಯಾಕೆ ಗೇಲಿ ಮಾಡಲಿ ಎಂದು ಅವರ ಪಾಠಕ್ಕೆ ಘನಗಂಭೀರವಾಗಿ ತಲೆ ಆಡಿಸಿ ಟಿಪ್ಪಣಿ ಬರೆದುಕೊಳ್ಳುತ್ತಿದ್ದೆ.

ಗೋವಾದ ಆ ಹುಡುಗಿ ಅಡ್ಡ ಬಾಯಿ ಹಾಕಿ; `ಸರ್; ಕೆನ್ ಯು ಎಕ್ಸ್‌ಪ್ಲೇಯ್ನ್‌ ಮಿ ಇನ್ ಇಂಗ್ಲೀಷ್… ಐ ಕಾಂಟ್ ಫಾಲೊ ಕನ್ನಡ… ಪ್ಲೀಸ್ ಸರ್’ ಎಂದಳು. `ಓಕೇ; ನೋ ಪ್ರಾಬ್ಲಂ… ಐ ಕೆನ್ ಮ್ಯಾನೇಜ್ ಯೂ’ ಎಂದರು. ನಗು ತಡೆಯದೆ ಕಿಸಕ್ಕೆಂದೆ. `ಏನಾಯ್ತು ಏನಾಯ್ತೂ… ಎನಿ ಪ್ರಾಬ್ಲಂ…’ ಎಂದು ನನ್ನನ್ನು ಕೇಳಿದರು. ಏನಿಲ್ಲ ಎಂದು ಅಮಾಯಕನ ಅವತಾರ ತಾಳಿದೆ.

`ಪ್ರಂ ಟುಮಾರೊ ಐ ವಿಲ್ ಸ್ಟಾರ್ಟ್ ಇಂಗ್ಲೀಷ್ ಟೀಚಿಂಗ್
ಟು ಡೇ ಐ ಯಾವ್ ಫೀಲಿಂಗ್ ಕೋಲ್ಡ್…
ಟುಮಾರೊ ಐ ಕಮ್ ವಿತ್ ವಾರ್ಮ್‍ಂ… ದೆನ್ ಇಟ್ ವಿಲ್ ಬೀ ಈಜೀ;
ಓಕೇನಾ… ಅಂಡರ್ ಸ್ಟ್ಯಾಂಡ್…’

ನನಗೇ ತಲೆ ಕೆಟ್ಟಿತ್ತೇನೊ… ಏನೇನೊ ಮೀನಿಂಗ್ ಹೊಳೀತಿದ್ದವು ಅವರ ಇಂಗ್ಲೀಷ್‌ನಿಂದ. ಆಕೆ ಒಂಥರಾ ಕಸಿವಿಸಿಯಲ್ಲಿ `ಒಕೆಒಕೇ’ ಎಂದಳು. `ನಾನು ಇಂಗ್ಲೀಷಲ್ಲಿ ಪಾಠ ಮಾಡಿದ್ರೆ ನೀನೇನ್ಮಾಡ್ತಿಯಪ್ಪಾ… ಗೊತ್ತಾಗುತ್ತಾ ನಿನಗೆ ಇಂಗ್ಲೀಷೂ’ ಎಂದು ಆ ಪ್ರಾಧ್ಯಾಪಕರು ಮರುಕದಿಂದ ಮಂಜನನ್ನು ಕನಿಕರಿಸಿ ಕೇಳಿದರು. `ಆಗುತ್ತೆ ಸಾರ್… ನೋ ಪ್ರಾಬ್ಲಂ’ ಎಂದ.

`ಏನಾಗುತ್ತೊ ಹೋಗುತ್ತೊ… ಟ್ರೈ ಮಾಡೋಣ ತಾಳಪ್ಪ…’ ಎಂದು ಕ್ಲಾಸ್ ಮುಗಿಸಿದ್ದರು.

`ಬಿಡು ಬಿಡು ಚಿಂತೆಯಾ ಮರುಳೇ… ಈಸಬೇಕೂ ಯಿದ್ದೂ ಜೈಸಬೇಕು’ ಎಂದು ಹಳ್ಳಿಯಲ್ಲಿ ಹಾಡುತ್ತಿದ್ದ ನಾಟಕದ ಪದ ನೆನಪಾಗಿ ಮಂಜನ ಮುಂದೆ ಅಭಿನಯಿಸಿ ಟಾಯ್ಲೆಟ್ ರೂಮಲ್ಲಿ ಹಾಡಿದೆ. ಮುಂದೆಯೆ ರಸ್ತೆ ಬದಿಯಲ್ಲಿ ಒಂದು ನೀರಿನ ಟ್ಯಾಂಕ್ ಇತ್ತು. ಅದರ ಕೆಳಗೆ ಅಜ್ಜಿ ಒಬ್ಬಳು ಪುಟ್ಟ ಸ್ಟೇಷನರಿ ಅಂಗಡಿ ಇಟ್ಟುಕೊಂಡಿದ್ದಳು. ಅಲ್ಲಿಗೆ ಕರೆದೊಯ್ದು ಮಂಜ ಸಿಗರೇಟು ಖರೀದಿಸಿ ಸೇದಿದ. ಮುಖ ನೋಡಿದೆ. ಆಗ ನಾವಿಬ್ಬರು ಬೈಟು ಸಿಗರೇಟ್ ಮೇಟ್‌ಗಳಾಗಿದ್ದೆವು. ಬಾಯಿ ವಾಸನೆ ಬರುತ್ತದೆಂದು ಚಿಂಗಮ್ ಜಗಿದೆವು. ಒಂದೆರಡು ತಿಂಗಳಲ್ಲೆ ಏನೇನೊ ಬದಲಾವಣೆಗೆ ಒಳಗಾದೆ. ಗಾದೆ ಪ್ರಾಧ್ಯಾಪಕರು ಮರುದಿನದಿಂದಲೆ ಅತ್ಯಂತ ಉತ್ಸಾಹದಲ್ಲಿ ತಮ್ಮ ಇಂಗ್ಲೀಷ್ ಉಪನ್ಯಾಸವ ಆರಂಭಿಸಿದರು. ಎಲ್ಲ ಬರೀ ಡಬಲ್ ಮೀನಿಂಗ್ ಡೈಲಾಗುಗಳೆ. ಅವರೇನೊ ಸಭ್ಯತೆಯಲ್ಲೆ ಆ ಇಂಗ್ಲೀಷ್ ಪದಗಳ ಬಳಸುತ್ತಿದ್ದರು. ಆದರೆ ಅವು ಆಕೆಯ ಕಿವಿಗೆ ತಲುಪುತ್ತಿದ್ದಂತೆ ಅವಳ ಮುಖದ ಭಾವದಲ್ಲಾಗುತ್ತಿದ್ದ ಗೊಂದಲ ತಳಮಳವ ಗ್ರಹಿಸಬಹುದಾಗಿತ್ತು. ಆ ಮೋಹಿನಿ ಎಂಬ ಹುಡುಗಿಗೆ ಒಂದು ಪದವಿ ಬೇಕಿತ್ತು ಅಷ್ಟೇ. ತಲೆ ಕೆಡಿಸಿಕೊಂಡಿರಲಿಲ್ಲ. ನನಗೆ ಈ ತರಗತಿಗಳ ಸಹವಾಸವೆ ಬೇಡ ಎನಿಸಿತ್ತು. ಪಟ್ಟಾಗಿ ಲೈಬ್ರರಿಯಲ್ಲಿ ಕೂತು ಓದುವುದೆ ಯೋಗ್ಯ ಎನಿಸಿ ಕ್ಲಾಸಿಗೆ ಚಕ್ಕರ್ ಹೊಡೆಯುತಿದ್ದೆ. ಹುಡುಗಾಟಿಕೆ ಮಾಡಲು ಹೋಗಿ ಜಾರಿ ಬಿದ್ದು ನಡಾ ಮುರಿದುಕೊಳ್ಳುವುದು ಬೇಡ ಎಂದು ತೆಪ್ಪಗಿದ್ದೆ.

`ಯಾಕ್ರೀ ಕ್ಲಾಸಿಗೆ ಬರ್ತಾ ಇಲ್ಲಾ… ಹಾಸ್ಟೆಲಿನಲ್ಲಿ ಮಜವಾಗಿರೋಣ ಅಂತಾ ಬಂದು ಎಂ.ಎ. ಸೇರ್ಕೊಂಡು ಬಿಡ್ತೀರಿ. ಬೇರೆಯೋರಿಗೆ ಸಿಗೊ ಅವಕಾಶ ತಪ್ಪಿಸ್ತಿರಿ; ನೀವೂ ಅದ್ನ ಸದುಪಯೋಗ ಮಾಡ್ಕೋದಿಲ್ಲಾ’ ಎಂದು ರೇಗುತ್ತ ನಿಲ್ಲಿಸಿಕೊಂಡು ಕೇಳುತ್ತಿದ್ದಂತೆಯೆ; ಎಲೆ ಅಡಿಕೆ ರಸ ಹೆಚ್ಚುವರಿಯಾಗಿ ಹರಿದು ತೊಟ್ಟಿಕ್ಕಿ ಅವರ ಬಿಳಿಯ ಜುಬ್ಬದ ಕೆಳತುದಿಯ ಕರೆಗಟ್ಟಿಸಿತು. ನನ್ನ ಮೇಲಿನ ಕಾಳಜಿಯಿಂದ ಹಾಗೆ ಅವರು ವಿಚಾರಿಸಿರಲಿಲ್ಲ. ಕಾಸ್ಕರಳು ಕೂಡ ಅವರ ತರಗತಿಗೆ ಹೋಗುತ್ತಿರಲಿಲ್ಲ.

`ಅಲ್ಲಯ್ಯಾ… ಆ ಗೋವಾದವಳಿಗೆ ಏನಾಯ್ತಯ್ಯಾ… ಮ್ಯಾನೇಜ್ ಮಾಡ್ತಿನಿ ಅಂತಾ ಹೋಮ್ ವರ್ಕ್ ಮಾಡಿ ಇಂಗ್ಲೀಷ್ ಕೊಟೇಷನ್‌ಗಳ ಬರ್ಕಂಡು ಅವಳಿಗಾಗಿ ಬಂದ್ರೇ… ಅವುಳೇ ಇಲ್ಲಾ ಅಂದ್ರೆ ನಾನೇನಯ್ಯಾ ಮಾಡ್ಲೀ… ಗೋವಾದಿಂದ ಬಂದಿದ್ದಾಳೆ… ಎಲ್ಲ ಕಲಿಸೋಣ ಅನ್ಕಂಡು ರೆಡಿಯಾಗಿ ಬಂದ್ರೆ ಕೈಗೆ ಸಿಗೋದಿಲ್ಲವಲ್ಲಾ… ಹೇಳಯ್ಯ ಅವಳಿಗೆ ನನ್ನ ಬಗ್ಗೆ… ಕರ್ಕಂಡು ಬಾರಯ್ಯ’ ಎಂದು ಪ್ರೀತಿ ತೋರಿದರು. ಅಲಲಾ ಗಾದೆ ಪ್ರವೀಣ ಎಲೆ ಅಡಿಕೆ ಪುಟ್ಟರೇ ಎಂದುಕೊಂಡು ಆಯ್ತು ಸಾರ್ ಎಂದು ತಪ್ಪಿಸಿಕೊಂಡು ತಿರುಗಾಡಿದೆ. ಬಿಡಲಿಲ್ಲ ಅವರು. ಮಜಾ ತಕೊಳೊಣ ಬಿಡೂ ಎಂದು ಆ ಹುಡುಗಿಯ ಕರಕೊಂಡು ತರಗತಿಗೆ ಬಂದೆ. ಮಂಜನೂ ಇದ್ದ. ಪಾಠ ಶುರುವಾಯಿತು. ನಮ್ಮಿಬ್ಬರ ಮುಂದೆ ಆ ಇಬ್ಬರು ಹುಡುಗಿಯರು ಕೂತಿದ್ರು. ಯಾರು ಊಸುತ್ತಿದ್ದರೊ; ಕೆಟ್ಟ ವಾಸನೆ ಬರುತ್ತಲೇ ಇತ್ತು. ಈ ಮಂಜ ರಾತ್ರಿ ಎಲ್ಲೊ ನಂಬರ್ ಹತ್ತು ಮಾಂಸ ತಿಂದು ಬಂದು ಬಿಡ್ತಾ ಇದ್ದಾನೆ ಎಂದು ಅನುಮಾನವಾಯಿತು. ಆಗಾಗ ಅವರೂ ಮೂಗು ಮುರಿದುಕೊಳ್ಳುತ್ತಿದ್ದರು.

ಗಾದೆ ಗಾರುಡಿಗರು ತಮ್ಮ ಗಾರುಡಿಗ ಪ್ರದರ್ಶನದಲ್ಲಿ ಭಲೇ ಉತ್ಸಾಹದಲ್ಲಿ ಮುಂದಿದ್ದರು. ನಾಲ್ವರೂ ಅವರ ಕೈಗೆ ಸಿಕ್ಕಿಬಿದ್ದಿದ್ದೆವು. ಹಾಜರಾತಿ ಖಡ್ಡಾಯ ಎಂದಿದ್ದರು. ಅವರು ಕುದುರೆ ಬಾಲಕ್ಕೆ ದುಡ್ಡು ಕಟ್ಟುತ್ತಾರೆ ಎಂದು ಅವರ ಆಪ್ತರೊಬ್ಬರು ಹೇಳಿದ್ದರು. ಏನು ಮಾಡೋದು… ಒಬ್ಬೊಬ್ಬರಿಗೆ ಒಂದೊಂದು ಚಟವಿರುತ್ತದಂತೆ. ಅದು ಸಾಯಲಿ; ಸದ್ಯ ನಮಗೆ ಗಂಭೀರ ಪ್ರವಚನ ನೀಡುತ್ತಿದ್ದರು. ಗಾದೆಗಳು ವೇದಗಳಿಗೆ ಸಮ ಎಂದು ಮುಂದುವರಿಸಿದ್ದರು. ಆದರೆ ಉದಾಹರಣೆಗೆ ಕೊಡುತ್ತಿದ್ದ ಗಾದೆಗಳು ಸೊಂಟದ ಭಾಷೆಯಲ್ಲಿ ಇರುತ್ತಿದ್ದವು ಹಾಗೂ ಲೈಂಗಿಕ ಅಂಗಗಳ ಸೂಚಕವಾಗಿದ್ದವು. ವಾಚ್ಯಾರ್ಥವ ಸೂಚ್ಯವಾಗಿ ಹೇಳದೆ ಬಿಡಿಸಿ ಬಿಡಿಸಿ ವಿಸ್ತರಿಸಿ ಹೇಳುವುದರಲ್ಲೆ ಆ ಗಾದೆಯ ತೂಕವೆ ಕಳೆದು ಹೋಗುತಿತ್ತು. `ಪುಟ್ಟ ಹುಡುಗಿ ಪುಕುಳಿ ಮೇಲೆ ಗುದ್ದಿದ್ರೆ ಮನೆ ತುಂಬ ಮಕ್ಕಳು’ ಎಂಬ ಗಾದೆಯನ್ನು ಬಾಯಿ ತುಂಬ ಉದ್ಧರಿಸಿ ಅದರ ಮಹತ್ವವನ್ನೇ ಕೆಡಿಸುತ್ತಿದ್ದರು. ಈ ಗಾದೆಯನ್ನು ಇಂಗ್ಲೀಷಿಗೆ ಹೇಗೆ ಅನುವಾದ ಮಾಡುವುದು? ಅದೇ ಬಾರೀ ಕಷ್ಟವಾಗುತ್ತಿತ್ತು. ಗೋವಾದವಳಿಗೆ ಅರ್ಥಪಡಿಸಲು ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲ ಇಂಗ್ಲೀಷ್ ಪದಗಳ ಬಾಣಗಳ ಪ್ರಯೋಗಿಸಿ; ಕೊನೆಗೆ; `ಆಪ್ಟರ್ ದಿ ಕ್ಲಾಸ್, ಯೂ ಡಿಸ್ಕಸ್ ವಿತ್ ಇಷ್… ದೆನ್ ಈ ವಿಲ್ ಎಕ್ಸ್‍ಪ್ಲಯಿನ್ ಇನ್ ಡೀಟಯಲ್’ ಎಂದು ಆ ಗಾದೆ ವಿಚಾರವ ನನಗೆ ವಹಿಸಿ ನಶ್ಯದ ಡಬ್ಬಿಗೆ ಕೈ ಹಾಕುತಿದ್ದರು. ನನಗೊ; ತಲೆ ಚಿತ್ರಾನ್ನವಾಗುತ್ತಿತ್ತು. ಮಂಜ ಒಳಗೊಳಗೆ ನಗುತ್ತಿದ್ದ. ಸಾರ್ ಇದು ಗಾದೆನೊ ಒಗಟೊ ಎಂದು ಕೇಳಿದರೆ ಎರಡೂ ಆಗುತ್ತೆ; ಅವಳಿಗೆ ವಿವರಿಸಿಕೊಡು ಎನ್ನುತ್ತಿದ್ದರು.

ಇಂತಹ ಹತ್ತಾರು ನಿದರ್ಶನಗಳಿಂದ ಆಕೆಗೆ ಏನೂ ತಿಳಿಯುತ್ತಿರಲಿಲ್ಲ. ನಾನು ಬಿಡಿಸಿ ಹೇಳುವಂತಿರಲಿಲ್ಲ. ಬೆದರಿ ಹೋಗಿದ್ದಳು. ಇದನ್ನು ಹೇಗೆ ಇಂಗ್ಲೀಷಿನಲ್ಲಿ ಸರಳೀಕರಿಸಿ ತಿಳಿಸಬಹುದು ಎಂದು ಮನದಲ್ಲೆ ಯತ್ನಿಸಿ; ಥತ್; ಇಂತಾ ಅಲ್ಕಾ ಟ್ರಾನ್ಸ್‌ಲೇಶನ್‌ನಿಂದಾಗಿ ಆಕೆ ನನ್ನ ಬಗ್ಗೆ ಕೆಟ್ಟದಾಗಿ ಭಾವಿಸಿ; ಎಲ್ಲಿ ನನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸುವಳೊ ಎಂದು ಆದಷ್ಟು ಅಂತರ ಕಾಯ್ದುಕೊಳ್ಳುತಿದ್ದೆ. ಆಕೆಯೊ ಲೈಬ್ರರಿಗೆ ಹುಡುಕಿ ಬಂದು ವಿವರಿಸು ಎಂದು ಒತ್ತಾಯಿಸುತ್ತಿದ್ದಳು. ಇದೆಲ್ಲ ತರಲೆ ಆಯಿತಲ್ಲಾ ಎಂದು ನಿಷ್ಟೂರವಾಗಿ ಹೇಳಿಬಿಟ್ಟಿದ್ದೆ. ಆ ನಂತರವೂ ಆ ಗಾದೆ ಪ್ರವೀಣರು ಇಂಗ್ಲೀಷ್ ಪಾಠವನ್ನು ಬಿಟ್ಟಿರಲಿಲ್ಲ. ಅದಂತು ವಿಕೋಪವನ್ನೇ ಸೃಷ್ಟಿಸಿತ್ತು.

`ಸಸಿಲಾಡಿ ಕೊಮನ ತಲೆಗೆ ತಂತು’ ಎಂಬ ಈ ಗಾದೆಯನ್ನು ವಿವರಿಸಲು ಗುರುಗಳು ಬೋರ್ಡನ್ನು ಚೆನ್ನಾಗಿ ಬಳಸಿಕೊಂಡಿದ್ದರು. ಮೇಲೊಂದು ಕೊರಮ ಮೀನಿನ ಚಿತ್ರ; ಕೆಳಗೊಂದು ಸಸಿಲು ಮೀನಿನ ಚಿತ್ರ ಬರೆದು… ಸಸಿಲು ಕಮ್ಸ್ ಟು ಕೊರಮಾಸ್ ಹೆಡ್ ಎಂದು ತಾವೇ ಕಕ್ಕಾಬಿಕ್ಕಿಯಾಗಿ ಸೀಮೆಸುಣ್ಣದಿಂದ ಆ್ಯರೊ ಮಾರ್ಕ್ ಮಾಡಿ ವಿವರಿಸಲಾಗದೆ; ನನ್ನತ್ತ ಕೈ ತೋರಿ; ಹತ್ತಿರ ಬಂದು; ಹೆಗಲ ಮುಟ್ಟಿ; `ಈ ಈಸ್ ಎ ಕೊರಮ ಫಿಶ್… ಯೂ ಆರ್ ಎ ಸಾಫ್ಟ್ ಸಸಿಲು ಫೀಮೇಲ್ ಫಿಶ್…’ ಎಂದು ಆಕೆಯ ಹೆಗಲನ್ನೂ ಮುಟ್ಟಿದ್ದರು. ಆಕೆ ಮುಖ ಸಿಂಡರಿಸಿ ಹೆಗಲು ಕೊಡವಿದಳು. `ಯೂ ಆರ್ ಎ ಬ್ಯೂಟಿಪುಲ್ ಫಿಶ್ ಯೂ ನೊ… ಯೂ ಡಾನ್ಸ್ಡ್‌ ಇನ್ ದಿ ಹೆಡ್ ಆಫ್ ಕೊರಮಾ ಮೈಂಡ್… ಇನ್ ದಟ್ ವೇ ಯೂ ವೆಂಟು ಇಸ್ ಮೈಂಡ್’ ಎಂದು ನನ್ನ ಬೋಳು ತಲೆಯ ಮೇಲೆ ಕೈ ಇಟ್ಟರು. ನನಗೊ ತಲೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವಂತಾಯಿತು. ಛೇ ಈ ಗುರುಗಳ ಇಂಗ್ಲೀಷಿನಿಂದಾಗಿ ನನಗೆ ಎಂತಾ ಅಪಮಾನವಾಗುತ್ತಿದೆಯಲ್ಲಾ ಎಂದು ಅವರ ಕೈಯನ್ನು ಅತ್ತ ತಳ್ಳಿದೆ. ಆ ಗೋವಾದವಳಿಗೆ ನಾನು ಹಳ್ಳಿಯ ಹೆಸರಿಟ್ಟಿದ್ದೆ. ಕರಿಚೌಡಿ ಎಂದು. ಕಾಳಿಕಾದೇವಿಯಂತಿದ್ದಳು. ಸಿಟ್ಟಾಗಿ; `ನೋ ನೋ ನೋ! ಐ ಆ್ಯಮ್ ನಾಟ್ ಎ ಫಿಶ್. ಐ ಡೊಂಟ್ ವಾಂಟ್ ಎನಿ ಲವ್…’ ಎಂದು ಎದ್ದು ಹೊರ ನಡೆದಳು. ನಾನೂ ಅದನ್ನೇ ಮಾಡಿದ್ದೆ. ನನ್ನ ಕೂಗುತ್ತ `ಕಂ, ಕಂ ಕಾಲ್ ಅರ್… ಡೋಂಟ್ ಗೊ… ಐ ವಿಲ್ ಮ್ಯಾನೇಜ್ ಸಂಹೌ ಕಮಾನ್’ ಎನ್ನುತ್ತ ಕಾರಿಡಾರಿಗೆ ಬಂದರು. ಎಡವಟ್ಟಾಯಿತು ಎಂದು ಗಾಭರಿಗೊಂಡಿದ್ದರು. ಅದೇ ಹೊತ್ತಲ್ಲಿ ನಿಯಂತ್ರಿಸಲಾರದೆ ಜೋರಾಗಿಯೆ ಊಸಿದ್ದರು. ಗಾಳಿ ನಮ್ಮತ್ತಲೆ ಬೀಸುತಿತ್ತು. ಗತ ನಾತ. ಥತ್; ಇವರೆನಾ ಅಷ್ಟೊತ್ತಿಂದ ಊಸುತ್ತಿದ್ದುದು ಎಂದು ಅರಿವಾಯಿತು.

ವಯಸ್ಸಾದ ಮೇಲೆ ವಿನಾಕಾರಣ ಉತ್ಸಾಹ ಪ್ರಾಯ ತೋರಬಾರದು ಎನಿಸಿತು. ಅವರಿಗೆ ಹೇಳುವಂತಿರಲಿಲ್ಲ. ಕಾಸ್ಕರಳ ಕ್ಯಾಂಟೀನಿಗೆ ಕರೆತಂದು ಮಸಾಲೆ ದೋಸೆ ತಿನ್ನಿಸಿ ಬ್ರೂ ಕಾಫಿ ಕುಡಿಸಿ ಆ ಗುರುಗಳ ನಿಜವಾದ ವಿದ್ವತ್ತನ್ನು ವಿವರಿಸಿದ್ದೆ. ನಕ್ಕು ಬಿಟ್ಟಿದ್ದಳು. ಹೀಗೇ ಒಂದು ವರ್ಷ ಕಳೆದು ಹೋಗಿದ್ದೆ ಗೊತ್ತಾಗಲಿಲ್ಲ. ವಿಪರೀತ ಓದುತ್ತಿದ್ದೆ ತಡರಾತ್ರಿ ತನಕ. ತರಗತಿಯ ಪಾಠ ನನಗೆ ಬೇಕಿರಲಿಲ್ಲ. ಅಲ್ಲಿದ್ದ ಎಷ್ಟೋ ಜನ ಪ್ರಾಧ್ಯಾಪಕರನ್ನು ಪರಿಗಣಿಸಿಯೇ ಇರಲಿಲ್ಲ. ಕೊನೆ ಪಕ್ಷ ಮನುಷ್ಯತ್ವವಾದರೂ ತರಗತಿಯಲ್ಲಿ ಬಾಯಿ ಮಾತಿಗಾದರೂ ಬಂದು ಹೋಗಬೇಕಿರುತ್ತಿತ್ತು. ವಕ್ರ ಪಾಂಡಿತ್ಯದವರನ್ನು ಅತ್ತ ಬಿಸಾಡಿಬಿಟ್ಟಿದ್ದೆ. ಜೀಶಂಪ ಅವರೇ ಏಕಮಾತ್ರ ಶ್ರೇಷ್ಠ ಪ್ರಾಧ್ಯಾಪಕರಾಗಿದ್ದರು. ಕಾಳೇಗೌಡ ನಾಗವಾರ ಅವರನ್ನು ಯಾರಿಗೂ ಹೋಲಿಸುವಂತಿರಲಿಲ್ಲ. ಪ್ರತಿಭಾವಂತರ ಕಂಡರೆ ಎಲ್ಲಿಲ್ಲದ ಪ್ರೀತಿ ಅವರಿಗೆ. ಕುಡಿಸಿ ಕನ್ನೆಯ ಸ್ನೇಹದ ಕಡಲ ಅಲೆಗಳ ಮೋಹಕ ಲೋಕದ ಬಗ್ಗೆ ಉತ್ಸಾಹಭರಿತರಾಗಿ ಮಾತಾಡುತ್ತಿದ್ದರು. ಅಪ್ಪಟ ದಲಿತ ಕಾಳಜಿ ಅವರಲ್ಲೊಬ್ಬರಲ್ಲೆ ಆ ಸಂಸ್ಥೆಯಲ್ಲಿ ಇದ್ದಿದ್ದು. ಆರ್.ವಿ.ಎಸ್.ಸುಂದರಂ ಒಬ್ಬ ಓರಿಯಂಟಲಿಸ್ಟ್ ಪ್ರಾಧ್ಯಾಪಕರಾಗಿದ್ದರು. ದಿಗಂಬರ ಸಾಹಿತ್ಯದ ಮಹತ್ವವನ್ನು ಪಿಸುಮಾತಿನಷ್ಟು ತನ್ಮಯತೆಯಲ್ಲಿ ಹೇಳುತ್ತಿದ್ದರು. ಎಲ್ಲಿಯ ರಾಮಲಿಂಗಂ ಎಲ್ಲಿಯ ಆರ್ವಿಯಸ್ ಎಂಬ ಅಂತರ ಭಿನ್ನವಾಗಿ ಕಾಣುತಿತ್ತು. ಇಬ್ಬರನ್ನೂ ಗೌರವಿಸುತ್ತಿದ್ದೆ.

ಆದರೆ ನಾನಾಗ ರಕ್ತ ಕ್ರಾಂತಿಗೆ ಕೈಮುಗಿದಿದ್ದೆ. ಪ್ರಾಧ್ಯಾಪಕರ ಪ್ರಕಾರ `ಕೊರವ ಫಿಶ್’ ಆಗಿದ್ದೆ. ಸದ್ಯ ಡೆಡ್ ಫಿಶ್ ಆಗಿರಲಿಲ್ಲ. ಯಾರ್ಯಾರೊ ಹಂಗಿಸುತ್ತಿದ್ದರು. ಬಿಟ್ಟಿಕೂಳಿಗೆ ಬಂದು ಸೇರಿಕೊಂಡಿದ್ದಾರೆ ಎಂದು ಜರಿಯುತ್ತಿದ್ದರು. ಯಾರ ಯೋಗ್ಯತೆ ಯಾವ ತರದ್ದೋ; ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಎಲ್ಲವನ್ನು ವಿನೋದ ವಿಡಂಬನೆಯಲ್ಲಿ ಗಮನಿಸಿ ನಗುವುದನ್ನು ಬಿಟ್ಟಿರಲಿಲ್ಲ. ಅನೇಕರು ಪ್ರಾಚೀನ ಹಸ್ತಪ್ರತಿಗಳಲ್ಲಿ ಮುಳುಗಿ; ದಪ್ಪ ಕನ್ನಡಕ ಹಾಕಿ ಅದರ ಎದಿರು ದೊಡ್ಡ ಲೆನ್ಸ್ ಹಿಡಿದು ಓದುತ್ತಾ ಕವಿಕಾಲ ನಿರ್ಣಯದ ಸಂಶೋಧನೆಯಲ್ಲಿ ಕಳೆದು ಹೋಗಿದ್ದರು. ಶಾಸನ ತಜ್ಞರೊ ಗತಕಾಲದ ಬಂಡೆಗಳನ್ನೆ ಸೀಳಿ ಸತ್ಯ ಹೊರತೆಗೆಯುವೆ ಎಂದು ಉದ್ದ ನಾಮ ಹಾಕಿಕೊಂಡು ಮೂಲೆಯಲ್ಲಿ ಕೂತಿರುತ್ತಿದ್ದರು. ಒಬ್ಬ ಯಾವನೊ ಬೂಸಾ ಕವಿಯ ಕಾಲನಿರ್ಣಯ ಮಾಡಲಿಕ್ಕಾಗಿ ಇಡೀ ತಮ್ಮ ಜೀವನವನ್ನೆ ಮುಡುಪಾಗಿಟ್ಟು ಆರನೇ ಶತಮಾನದಲ್ಲಿ ಹುಟ್ಟಿದ್ದನೊ ಮೂರನೆ ಶತಮಾನದಲ್ಲಿ ಜನಿಸಿದ್ದನೊ ಎಂದು ಪ್ರತಿಪಾದಿಸಲು ಅಹಾ! ಎಂತೆಂತಹ ವಿದ್ವತ್ ನುಡಿ ಸಮರಗಳಲ್ಲಿ ತೊಡಗುತ್ತಿದ್ದರೊ… ದೇವರೇ ಅವರ ವಾದ ವಿವಾದಗಳಿಗೆ ತಲೆ ಚಿಟ್ಟು ಹಿಡಿದು ಮಾಯವಾದಂತಿತ್ತು. ಯಾವ ನಕ್ಷತ್ರದಲ್ಲಿ; ಯಾವ ಗಳಿಗೆಯಲ್ಲಿ ಅವನು ಆ ಕವಿ ಹುಟ್ಟಿ ಬಂದನೊ ಎಂದು ಇನ್ನೊಬ್ಬ ಪಂಚಾಂಗ ಪ್ರವೀಣ ಪಂಡಿತ ಜನ್ಮ ಕುಂಡಲಿ, ವೃಕ್ಷ ಪತ್ತೆ ಮಾಡಿ ತಂದು ಘನಘೋರ ವಿದ್ವತ್ ಶೌರ್ಯವನ್ನು ಮರೆಯುವುದನ್ನು ಕಂಡಾಗ ನನ್ನ ಹೊಕ್ಕುಳ ಕುಳಿಯಿಂದ ನಗುಕಿತ್ತು ಬಂದಂತಾಗಿ ರಕ್ತ ನೆತ್ತಿಗೇರಿ ಜುಂ ಎಂದು ಕಣ್ಣು ಮಂಜಾಗುತಿದ್ದವು. ಅದರಲ್ಲಿ ನಮ್ಮ ಜಾನಪದ ವಿದ್ವಾಂಸರಿಗೆ ಪ್ರವೇಶ ಇರಲಿಲ್ಲ. ಹೇ; ನಿಮ್ಮದು ಏನೂ ಇಲ್ಲ ಬಿಡ್ರೀ… ಬರೀ ಬಾಯಿ ಮಾತಿನ ಸಾಹಿತ್ಯ… ಸಾರಿ ಸಾರೀsss ಮೌಖಿಕ ಪರಂಪರೆ… ನಿಮ್ಮದೆಲ್ಲ ಅನಾಮಿಕ! ಅಪ್ಪ ಯಾರು ಅಮ್ಮ ಯಾರು ಎಂಬ ಹುಡುಕಾಟವೇ ಇಲ್ಲಾ… ಎಲ್ಲಾ ಗೋವಿಂದಾಯ ನಮಃ ಎಂದು ಬಾಯಿ ಮುಚ್ಚಿಸುತ್ತಿದ್ದರು. ಒಹೋ… ಅಂಗಾದ್ರೆ ಮಾರ್ಗ ಸಾಹಿತ್ಯ ಅಪ್ಪನಿಗೆ ಹುಟ್ಟಿದ್ದು… ದೇಸಿ ಸಾಹಿತ್ಯ ಯಾರಿಗೊ ಹುಟ್ಟಿದ್ದು ಅಂತಾ ಕೀಳು ಮಾಡ್ತಿದ್ದೀರಾ ಎಂದು ವಕ್ಕಲುತನದಿಂದ ಬಂದಿದ್ದ ಪ್ರಾಧ್ಯಾಪಕರೊಬ್ಬರು ಎದ್ದು ನಿಂತು ಧುರ್ಯೋದನನಂತೆ ತೊಡೆ ತಟ್ಟಿದ್ದರು. ಛೇ ಛೇ; ಅನ್ಯತಾ ಭಾವಿಸಬಾರದು. ಜನಪದ ಸಾಹಿತ್ಯ ತಾಯಿಗೆ ಹುಟ್ಟಿದ್ದು ಎಂಬುದು ನಮ್ಮ ಅಂಬೋಣ… ಪ್ರಮಾದವಾಗಿದ್ದರೆ ಕ್ಷಮಿಸಿ ಎಂದು ವಿಷಯಾಂತರ ಮಾಡಿ; ಆ ಕವಿ ಶೈವ ಪರಂಪರೆಗೆ ನಿಷ್ಟನೊ; ವೈಷ್ಣವ ತತ್ವಕ್ಕೆ ಬದ್ಧನೊ ಎಂದು ಬಾಲ ಬೆಳೆಸುತ್ತಿದ್ದರು. ನಾನಲ್ಲಿ ಹೆಚ್ಚು ಕೇಳಿಸಿಕೊಂಡದ್ದು ಬರೀ ಇಂತಹ ವ್ಯರ್ಥ ಪಾಂಡಿತ್ಯದ ಮಾತುಗಳನ್ನೇ… ಆದರೆ ಅವರು ತಮ್ಮ ಪಾಶಂಡಿ ಪಾಂಡಿತ್ಯದಿಂದ ವಿಮೋಚನೆಗೊಳ್ಳಲು ಯಾವತ್ತೂ ಸಿದ್ಧರಿರಲಿಲ್ಲ.

ಅವರೊಬ್ಬ ಸಭ್ಯರಿದ್ದರು. ವಾರಕ್ಕೆ ಎರಡು ಸರತಿ ಪಾಠ ಮಾಡುತಿದ್ದರು. ಅವರು ಮನುಷ್ಯರ ಮುಖವನ್ನೆ ನೋಡುತ್ತಿರಲಿಲ್ಲ ಎಂಬ ಅನುಮಾನ ವಿಪರೀತ ಕಾಡಿತ್ತು. ಅಯ್ಯೋ ಪಾಪ… ಕಣ್ಣು ಕಾಣುತ್ತವಲ್ಲಾ… ಯಾಕೆ ಮುಖಾ ನೋಡೋದಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದೆ. ಭಾಗಶಃ ಬಖೈರಿನಂತಹ ಒಂದು ಫೈಲ್ ಅವರ ಕೈಯಲ್ಲಿತ್ತು. ಅದರಲ್ಲಿ ಅವರೆ ಬರೆದುಕೊಂಡಿದ್ದ ಟಿಪ್ಪಣಿಗಳಿದ್ದವು, ಅವೊ; ಕೃಶವಾಗಿದ್ದವು. ಅವರ ಬೆರಳುಗಳು ಆ ನೋಟ್ಸ್‌ಗಳ ಮೇಲೆ ಆಡಿ ಸವೆದ ಹಾಳೆಗಳಾಗಿದ್ದವು. ಬಹಳ ಜೋಪಾನ ಮಾಡಿದ್ದರು. ನನಗಂತು ಸಾಕಾಗಿತ್ತು. ನಮ್ಮ ಮುಖ ನೋಡಿ ಪಾಠ ಮಾಡಲಿ ಎಂದು ಕಿರಿಕ್ ಮಾಡುತ್ತಿದ್ದೆ. ಕೊಠಡಿಯ ಎತ್ತರದ ಗೋಡೆಗಳನ್ನೆ ಹಿಮಾಲಯದ ತುತ್ತತುದಿ ಎಂದು ಭಾವಿಸಿದಂತೆ; ಗೋಡೆಗಳಿಗೆ ತದೇಕ ಚಿತ್ತದಿಂದ ಪಾಠ ಮಾಡುತಿದ್ದರು. ಮೋಡ ಕವುಚಿತ್ತು. ಸುತ್ತಣ ಲೋಕದಲ್ಲಿ ಏನಾಗುತ್ತಿದೆ ಎಂಬ ಪರಿವೆಯೆ ಅವರಿಗೆ ಇರಲಿಲ್ಲ. ದುತ್ತೆಂದು ಬಿರುಗಾಳಿ ಬೀಸಿ ಬಂತು. ಆ ಹಳೆ ಫೈಲನ್ನು ಪವಿತ್ರ ಭಗವದ್ಗೀತೆ ಹಿಡಿದಂತೆ ಪಾಠ ಮಾಡುತ್ತಿದ್ದಂತೆಯೆ ಗಾಳಿಯ ರಭಸಕ್ಕೆ ತೂರಿ ಹೋಗಿ ಅದರಲ್ಲಿದ್ದ ಹಳೆಯ ಹಾಳೆಗಳೆಲ್ಲ ವಿಮೋಚನೆಗೊಂಡಂತೆ ಹಾರಿ ಹಾರಿ ಚೆಲ್ಲಾಪಿಲ್ಲಿಯಾಗಿ ಎತ್ತೆತ್ತಲೊ ಚದುರಿ ಬಿದ್ದವು. ಭೋರೆಂದು ಮಳೆ ಸುರಿಯಿತು. ಹೋಗಲಿ ಈ ಮಳೆಯನ್ನಾದರೂ ಈ ಪ್ರಾಧ್ಯಾಪಕರು ನೋಡಲಿ ಎಂದು ಬಯಸಿ ಕರೆದರೂ ಅವರು ಹೊರ ಬರಲಿಲ್ಲ. ಇಲ್ಲಾ; ತರಗತಿಯ ಸಮಯ ಇನ್ನೂ ಮುಗಿದಿಲ್ಲ ಎಂದು ಗೋಡೆಗೆ ಮುಖ ಹಾಕಿ ಹೇಳುತ್ತ ಲೊಚಗರೆಯುತ್ತಿದ್ದರು. ಮಳೆಗಾಳಿಯ ಹಳಿಯುತ್ತಿದ್ದರು. ಅವರ ಟಿಪ್ಪಣಿಗಳು ಮಳೆಯಲ್ಲಿ ತೋಯ್ದು ಹೋಗಿದ್ದವು. ಸದ್ಯ; ಅವಕ್ಕೆ ಇವತ್ತು ವಿಮೋಚನೆ ಸಿಕ್ಕಿತು ಎಂದುಕೊಂಡೆ.

ಇಂತಹ ಮಂದಿಯಿಂದ ನಾನೇನು ಕಲಿತೆನೊ ನನಗೇ ಗೊತ್ತಿಲ್ಲ. ಆ ಟಿಪ್ಪಣಿ ನೋಡಿಯೇ ಅವರು ಪಾಠ ಮಾಡುತ್ತಿದ್ದರು. ಇಲ್ಲದಿದ್ದರೆ ಅವರು ಬಾಯಿ ತೆರೆಯಲು ಆಗುತ್ತಲೆ ಇರಲಿಲ್ಲ. ಸ್ವಂತ ಒಂದಾದರು ಒಳನೋಟವನ್ನು ನಾನೆಂದೂ ಅಲ್ಲಿನ ಅನೇಕರಲ್ಲಿ ಕಂಡಿರಲಿಲ್ಲ. ನಾನು ಅಹಂಕಾರಿ ಎನಿಸಿದರೆ ಕ್ಷಮಿಸಿ… ಅಲ್ಲಿನ ಕನ್ನಡ ಪ್ರಾಧ್ಯಾಪಕರು ಬಹಳ ಒಳ್ಳೆಯವರು! ಆದರೆ ತನ್ನ ತಾಯಿ ಭಾಷೆಯಾದ ಕನ್ನಡದಲ್ಲಿ ಅಚ್ಚುಕಟ್ಟಾಗಿ ಒಂದು ಹತ್ತು ನಿಮಿಷ ಮಾತಾಡಲು ಕೂಡ ಅವರು ಪರದಾಡುತಿದ್ದರು. ಪೂರ್ಣವಾಗದ ವಾಕ್ಯಗಳ ನಡುವೆ ಹಾಗೇ ಹೀಗೇ… ಮುಖ್ಯವಾಗಿ… ಹೀಗಾಗಿ ಹಾಗಾಗಿ; ಮತ್ತು ಹಾಗೆ ತಿಳಿಯೋದಾದರೆ… ಹೀಗೆ ನೋಡಬಹುದು ಎಂಬ ಅರೆ ಬರೆ ಮಾತುಗಳಿಂದ ಗಂಟೆಗಟ್ಟಲೆ ಕೊಯಕೊಯಾsss ಎನ್ನುತ್ತಿದ್ದರು. ವಿಚಾರಗಳೆ ಸ್ಪಷ್ಟವಿರಲಿಲ್ಲ. ಒಂದು ಮಾತಿಗೂ ಮತ್ತೊಂದು ಮಾತಿಗು ಸಂಬಂಧವೇ ಇರುತ್ತಿರಲಿಲ್ಲ. ಹಳೆ ಮೈಸೂರಿನ ಬೂಸಾ ವಿದ್ವಾಂಸರ ಮಾತಿನ ಶೈಲಿ ಅದಾಗಿತ್ತು. ವಿಪರೀತ ಸಂಸ್ಕೃತ ಭೂಯಿಷ್ಟವಾದ ಅವರ ಶಬ್ದ ಸಂಪತ್ತೊ; ಪುನರಪಿ ಜನನಂ ಪುನರಪಿ ಮರಣಂ ಎಂಬ ಹಾಗೆ… ಅಂತೇಳಿ ತಿಳಿಯೋದಾದ್ರೆ… ಎಂದು ಮಾತು ಎಲ್ಲೆಲ್ಲಿಗೊ ಹೋಗುತ್ತಿತ್ತು. ಹೀಗಾಗಿಯೇ ಪ್ರಾಚೀನ ಕನ್ನಡ ಸಾಹಿತ್ಯದ ಬಗ್ಗೆ ಪಾಠ ಮಾಡುವವರು ಯಾವ ಕಾಲದಲ್ಲಿ ಬದುಕಿದ್ದಾರೆ ಎಂಬುದೆ ತಿಳಿಯುತ್ತಿರಲಿಲ್ಲ.

ಆ ನನ್ನ ಬಂಡಾಯದ ಗುರುಗಳೋ; ಸಮಾಜವಾದಿ ರಾಜಕಾರಣದ ಬಗ್ಗೆ ಜೋರು ದನಿಯಲ್ಲಿ ಅಬ್ಬರಿಸಿ ಗುಡುಗಿ ಇಡೀ ಈ ಲೋಕಕ್ಕೇ ಸಾರಿ ಸಾರಿ ಹೇಳಬೇಕಾದ ವಿಚಾರಗಳು ಇವು ಎಂದು ಲೋಹಿಯಾವಾದವನ್ನು ಸಾಹಿತ್ಯ ಪಠ್ಯಕ್ಕೆ ಎಳೆದು ತಂದು ವಾದಿಸುತ್ತಿದ್ದರು. ಅವರ ಪ್ರಖ್ಯಾತ ಮಾತುಗಳಲ್ಲಿ ಒಂದಾದ… ಆ ಇಂದಿರಾಗಾಂಧಿಯನ್ನ ಹಕ್ಕಿ ಹಕ್ಕಿಯ ಕೊಂದಂತೆ ಅವಳ ಅಂಗರಕ್ಷಕರೇ ಕೊಂದುಬಿಟ್ಟರಲ್ಲಾರೀ ಈ ಪಾಪಿಗಳೂ… ನೋಡೀ ಹೆಣ್ಣಿಗೆ ಮಾತ್ರ ಈ ಲೋಕವನ್ನು ಭಿನ್ನವಾಗಿ ಕಾಣಲು ಸಾಧ್ಯ. ನೋಡೀ ಅದಕ್ಕಾಗಿಯೇ ಆ ಅರ್ಧನಾರೀಶ್ವರ ತನ್ನ ತಲೆಯ ಮೇಲೆ ಒಬ್ಬಳ ಕೂರಿಸಿಕೊಂಡ; ತೊಡೆಯ ಮೇಲೊಬ್ಬಳ ಕೂರಿಸಿಕೊಂಡ… ಸಾಲದು ಎಂಬಂತೆ ಪಕ್ಕದಲ್ಲಿ ಮಗದೊಬ್ಬಳ ಹೆಗಲ ಮೇಲೆ ಕೈ ಹಾಕಿ ಕೂರಿಸಿಕೊಂಡ… ಅವನ ಮೂರನೆ ಕಣ್ಣು ಅದು ಹೆಣ್ಣಕಣ್ಣು… ಎಂದು ನಿರಂತರವಾಗಿ ಹೆಣ್ಣಪಕ್ಷಪಾತಿಯಾಗಿ ಭಾಷಣ ಮಾಡುತ್ತಿದ್ದರು. ಪಂಚೇಂದ್ರಿಯಗಳು ಮಬ್ಬಾದ ಈ ಸಮಾಜಕ್ಕೆ ಈ ವಿಚಾರಗಳನ್ನು ಪ್ರಾಂಜಲ ಮನಸ್ಸಿನಿಂದ ನಾವು ಯಾವತ್ತು ಹೇಳುತ್ತಿರಬೇಕು ಎಂದು ವಕಾಲತ್ತು ಮಾಡುತ್ತಿದ್ದರು. ಕನ್ನೆಯ ಸ್ನೇಹದಲ್ಲಿ ಕಡಲು ದಾಟಬೇಕು ಎಂದು ಒತ್ತಿ ಒತ್ತಿ ಹೇಳುತ್ತಿದ್ದರು. ಅವರ ಎದುರಾಳಿ ಬೂಸಾಗಳು ಅವರ ಈ ನೀತಿಯನ್ನೆ ಖಂಡಿಸಿ ಮುಪ್ಪಾದ ಮಾತುಗಳಲ್ಲಿ ತೊದಲುತ್ತ ಹಳಿಯುತ್ತಿದ್ದರು.

ಯಾವ ನಕ್ಷತ್ರದಲ್ಲಿ; ಯಾವ ಗಳಿಗೆಯಲ್ಲಿ ಅವನು ಆ ಕವಿ ಹುಟ್ಟಿ ಬಂದನೊ ಎಂದು ಇನ್ನೊಬ್ಬ ಪಂಚಾಂಗ ಪ್ರವೀಣ ಪಂಡಿತ ಜನ್ಮ ಕುಂಡಲಿ, ವೃಕ್ಷ ಪತ್ತೆ ಮಾಡಿ ತಂದು ಘನಘೋರ ವಿದ್ವತ್ ಶೌರ್ಯವನ್ನು ಮರೆಯುವುದನ್ನು ಕಂಡಾಗ ನನ್ನ ಹೊಕ್ಕುಳ ಕುಳಿಯಿಂದ ನಗುಕಿತ್ತು ಬಂದಂತಾಗಿ ರಕ್ತ ನೆತ್ತಿಗೇರಿ ಜುಂ ಎಂದು ಕಣ್ಣು ಮಂಜಾಗುತಿದ್ದವು.

ನನ್ನ ಬರಹದ ದಾಹ ವಿಪರೀತವಾಗಿತ್ತು. ಲಂಕೇಶ್ ಪತ್ರಿಕೆಯೆ ನನಗೆ ಒಂದು ವಿಶ್ವವಿದ್ಯಾಲಯವಾಗಿತ್ತು. ಅಲ್ಲಿ ಸಿಕ್ಕ ಬಂಧು ಬಳಗ ನನ್ನನ್ನು ಹೀರೊ ಮಾಡಿತ್ತು. ಆಗಲೇ ನಾನೆಲ್ಲೊ ಎಡವಿ ಬಿದ್ದಿದೆ. ಅಮೇರಿಕದ ಹೊನಲುಲು ದ್ವೀಪದಿಂದ ಒಬ್ಬ ಸಂಶೋಧಕ ಕನ್ನಡ ಅಧ್ಯಯನ ಸಂಸ್ಥೆಗೆ ಬಂದಿದ್ದ. ಈಸ್ಟ್‌ವೆಸ್ಟ್ ಕಲ್ಚರಲ್ ಸೆಂಟರಿನಿಂದ ಫೆಲೋಷಿಪ್ ಪಡೆದು `ಗೊಂಬೆಯಾಟ’ದ ರಂಗ ಪ್ರಕಾರದಲ್ಲಿ ಸಂಶೋಧನೆ ಮಾಡಲು ಬಂದಿದ್ದ. ಭಾರತದ ಉದ್ದಕ್ಕೂ ಮರದ ಗೊಂಬೆಯಾಟದ ವಿವಿಧ ಪ್ರಕಾರಗಳ ಅಭ್ಯಾಸ ಮಾಡಿದ್ದ. ಅವನಿಗೆ ಕನ್ನಡ ಬರುತ್ತಿರಲಿಲ್ಲ. ಜೀಶಂಪ ಕರೆದರು. ಸೂಚಿಸಿದರು. ನೋಡು; ಈತನ ಕ್ಷೇತ್ರಕಾರ್ಯದ ದ್ವಿಭಾಷಿಯಾಗಿ ನೀನು ಕೆಲಸ ಮಾಡಬೇಕು… ತಿಂಗಳಿಗೆ ಐದು ಸಾವಿರ ಸಂಭಾವನೆ. ಊಟ ತಿಂಡಿ ಎಲ್ಲ ಖರ್ಚು ಇವರದೇ… ಜೊತೆಗೆ ಹೋಗು. ನಿನಗೂ ಇದರಿಂದ ಅಮೆರಿಕದ ದಾರಿ ಸಿಕ್ಕರೂ ಸಿಗಬಹುದು ಎಂದರು. ನೆತ್ತಿ ಜುಂ ಎಂದಿತು. ಅದಾಗಲೆ ಅಂತಹ ವಿದೇಶಿ ಫೆಲೋಷಿಪ್‌ಗಳ ಬಗ್ಗೆ ಕನಸು ಕಂಡಿದ್ದೆ. ಫುಲ್‌ಬ್ರೈಟ್ ಫೆಲೋ ಆಗಿ ನೀನು ಇಂಗ್ಲೆಂಡಿಗೆ ಹೋಗಬಹುದು… ಅರ್ಜಿ ಹಾಕು ಎಂದಿದ್ದರು ಗೆಳೆಯರು.

ಒಪ್ಪಿದ್ದೆ. ಆತ ಮೈಕೇಲ್ ಷೂಯಿಸ್ಜರ್… ಅವನ ಪೂರ್ವಿಕರು ಯಹೂದಿಗಳು. ಜರ್ಮನಿಯ ಗೆಟ್ಟೋಗಳಲ್ಲಿ, ಕಾನ್ಸಂಟ್ರೇಶನ್ ಕ್ಯಾಂಪುಗಳಲ್ಲಿ ನರಳಿ ನರಳಿ ಗ್ಯಾಸ್ ಛೇಂಬರಿನಲ್ಲಿ ಸತ್ತಿದ್ದವರು. ಪಶ್ಚಿಮದ ಕ್ರೂರ ಜನಾಂಗ ಭೇದದ ಕೆನ್ನಾಲಿಗೆಯಿಂದ ತಪ್ಪಿಸಿಕೊಂಡು ಬದುಕಿ ಉಳಿದಿದ್ದವರ ಪೈಕಿ ಅವನೂ ಒಬ್ಬನಾಗಿದ್ದ. ನೋಡಲು ಇರಾನಿಯನ್ ತರ ಇದ್ದ. ಪರಿಚಯಿಸಿದರು ಜೀಶಂಪ. ಹಗ್ ಮಾಡಿಕೊಂಡ. ಎಂತಹ ಸಬಂಧ! ಅದಾಗಲೆ ನನಗೆ ಇಟ್ಲರನ `ಮೇಯ್ನಕ್ಯಾಂಪ್’ ಗೊತ್ತಿತ್ತು. ಜೀಶಂಪ ಉದ್ದೇಶ ಪೂರ್ವಕವಾಗಿ ಒತ್ತಿ ಹೇಳಿದ್ದರು… ಈತ ಅಸ್ಪೃಷ್ಯ ಜನಾಂಗದಿಂದ ಬಂದವನು. ಭಾರತದಲ್ಲಿ ಇವರ ಜಾತಿಯ ಸ್ಥಿತಿ ಜರ್ಮನಿಯಲ್ಲಿ ಒಂದು ಕಾಲದಲ್ಲಿ ನಿಮ್ಮ ಯಹೂದಿಗಳ ಬಗ್ಗೆ ಹೇಗೆ ಇತ್ತೋ ಅದೇ ರೀತಿ ಹೆಚ್ಚುಕಡಿಮೆ ಇದೆ ಎಂದಿದ್ದರು. ಒಂದೇ ಗಳಿಗೆಯಲ್ಲಿ ನಾವಿಬ್ಬರು ಒಂದೇ ತಾಯಿಯ ಬಹಿಷ್ಕೃತ ಮಕ್ಕಳಂತೆ ಹತ್ತಿರ ಆದೆವು. ಸರಸ್ವತಿ ಪುರಂನಲ್ಲಿ ಒಂದು ಪುಟ್ಟ ಬಾಡಿಗೆ ಮನೆ ಮಾಡಿದ್ದ. ತರಾತುರಿಯಲ್ಲಿ ಕೆಲಸ ಮಾಡಬೇಕಿತ್ತು. ಎಲ್ಲ ಪೂರ್ವ ಸಿದ್ಧತೆಗಳ ಜೊತೆಗೆ ಬಂದಿದ್ದ.

ಅತ್ಯಾಧುನಿಕ ಆಡಿಯೊ ವಿಡೀಯೊ ಕ್ಯಾಮರಾಗಳು ಅವನ ದೊಡ್ಡ ಬ್ಯಾಗಲ್ಲಿ ಇದ್ದವು. ಮನೆಗೆ ಆ ದಿನವೆ ಕರೆದೊಯ್ದ. ಅಡ್ವಾನ್ಸ್ ಆಗಿ ಅಲ್ಲೇ ಕೈಗೆ ಎರಡು ಸಾವಿರ ರೂಗಳ ಇತ್ತ. ನನಗೆ ದುಡ್ಡು ಮುಖ್ಯ ಆಗಿರಲಿಲ್ಲ. ಅವನ ಹೆಂಡತಿ ರಷ್ಯನ್ನಳು. ಎತ್ತರದ ಸುಂದರಿ. ಎರಡು ಮಕ್ಕಳು. ಮೊದಲಿನವಳು ಆರು ವರ್ಷದವಳು. ಬ್ಯಾಲೆ ಕಲಿತಿದ್ದಳು. ಅವಳ ನೀಲಿ ಕಣ್ಣುಗಳ ನೋಡುವುದೇ ನನಗೆ ದೇವಾನಂದವಾಗುತಿತ್ತು. ಒಂದೂವರೆ ವರ್ಷದ ಗಂಡು ಮಗು. ಅವರು ಯಾರೋ ಹೊರಗಿನವರು ಎನಿಸಲಿಲ್ಲ. ಅವರ ಇಂಗ್ಲೀಷ್ ಉಚ್ಚಾರವ ತಕ್ಷಣ ಗ್ರಹಿಸಲು ಆಗುತ್ತಿರಲಿಲ್ಲ. ಮೈಕೇಲ್‌ನ ಹೆಂಡತಿ ರಷ್ಯನ್ ಭಾಷೆಯಂತೆ ಇಂಗ್ಲೀಷ್ ಉಚ್ಚಾರ ಮಾಡುತ್ತಿದ್ದಳು. ನಾನು ಆ ಕ್ಯಾಂಪಸ್ಸನ್ನೆ ಮರೆತು ಬಿಟ್ಟಿದ್ದೆ. ಈ ದೇಶವ ತೊರೆದು ಇವರ ಹಿಂದೆ ವಲಸೆ ಹೋಗಿ ಬಿಡುವ ಎನಿಸಿತ್ತು. ಅಲ್ಲೆ ಉಳಿದೆ. ರಾತ್ರಿಯೆಲ್ಲ ಮೈಕೇಲ್ ತಾವು ಕ್ಷೇತ್ರ ಕಾರ್ಯ ಮಾಡಬೇಕಿರುವ ಊರುಗಳ ವಿವರಗಳ ಕೇಳುತಿದ್ದ. ಜೀಶಂಪ ಒಂದು ತಿಂಗಳ ಕಾಲ ನನಗೆ ರಜೆ ವ್ಯವಸ್ಥೆ ಮಾಡಿಸಿದರು. ಹೊರಟೆ ಅವನ ಜೊತೆಗೆ ಕರೆದುಕೊಂಡು. ನಾಗಮಂಗಲದ ಹಲವು ಹಳ್ಳಿಗಳಲ್ಲಿ ವುಡನ್ ಪಪೆಟ್ ಥಿಯೇಟರಿನ ಪ್ರತಿ ಇಂಚಿಂಚು ಮಾಹಿತಿಯನ್ನು ಪಡೆದವು. ಆತ ನನಗೆ ಇಂಗ್ಲೀಷಿನಲ್ಲಿ ಪ್ರಶ್ನೆ ಕೇಳುವುದು; ನಾನದನ್ನು ಕನ್ನಡಿಸಿ ಕಲಾವಿದರಿಂದ ವಿವರ ಪಡೆದು ಹಿಂತಿರುಗಿ ಆ ಕೂಡಲೆ ಇಂಗ್ಲೀಷ್‌ನಲ್ಲಿ ಹೇಳುವುದು ಒಂದು ರೋಮಾಂಚನಕಾರಿ ಅನುಭವವಾಗಿ ಕಂಡಿತು. ಅರೇ! ಜೀವನದಲ್ಲಿ ನಾನು ಎರಡು ಭಾಷೆಗಳ ಒಟ್ಟೊಟ್ಟಿಗೆ ಮಾತಾಡಿ ಚಿಂತಿಸಿ ಮರುಸೃಷ್ಟಿಸಿ; ಅದರಲ್ಲಿ ನನ್ನ ತಿಳುವಳಿಕೆಯನ್ನೂ ಬೆರೆಸಿ ಸಂವಹನ ಮಾಡುವುದು ಎಂತಹ ಸುಖ ಅಲ್ಲವೇ… ಇಂಥದ್ದನ್ನು ನಾನು ಊಹಿಸಿಯೇ ಇರಲಿಲ್ಲವಲ್ಲಾ… ನನ್ನ ಬದುಕಿನಲ್ಲಿ ಇಂತದೊಂದು ಸಂಬಂಧ ಉಂಟಾಗುತ್ತದೆ ಎಂಬ ಯಾವ ಪೂರ್ವಾಪರವೂ ತಿಳಿದಿರಲಿಲ್ಲವಲ್ಲಾ ಎಂದು ಅಚ್ಚರಿಗೊಂಡೆ. ಅನುಸೃಷ್ಠಿಯು ನನಗೆ… ನಿಜ ಹೇಳುವೆ! ಒಂದು ಚೆಂದದ ಹುಡುಗಿಯ ಜೊತೆ ಅತ್ಯಾಕರ್ಷಕವಾಗಿ ಸೃಜನಶೀಲವಾಗಿ ಭಾವನಾತ್ಮಕವಾಗಿ ಮಲಗಿದಂತಾಗುತ್ತಿತ್ತು.

ಪೂರಕವಾಗಿ ಗುಬ್ಬಿ ತಾಲೂಕಿನ ಒಂದು ಹಳ್ಳಿಯಲ್ಲಿ ತೊಗಲುಗೊಂಬೆ ಆಟ ಆಡಿಸುವವರನ್ನು ಬೆಟ್ಟಿ ಮಾಡಿದೆವು. ಅವರ ಮಾಂತ್ರಿಕ ಮಾಯಾಜಾಲದ ತೊಗಲುಗೊಂಬೆಯಾಟವನ್ನು ರೆಕಾರ್ಡ್ ಮಾಡಿಕೊಂಡೆವು. ಅದೊಂದು ದುಬಾರಿ ಮೂವೀ ಕ್ಯಾಮರಾ… ಚಿತ್ರೀಕರಣ ಮಾಡಲು ತಜ್ಞತೆ ಬೇಕಿತ್ತು. ಕಲಾತ್ಮಕ ಸಿನಿಮಾಗಳ ಛಾಯಾಗ್ರಹಣದ ಕೌಶಲ್ಯದ ಅಲ್ಪ ತಿಳುವಳಿಕೆಯಿಂದಲೆ ಮೈಕೇಲ್‌ಗೆ ಸಹಕರಿಸಿ `ಡಾಕ್ಯೂಮೆಂಟರಿಯ’ ಶೂಟ್ ಮಾಡಿದೆ. ಸ್ವತಃ ಅಮೆರಿಕದ ಹೊನಲುಲು ದ್ವೀಪದ ಸಾಂಪ್ರದಾಯಿಕ ಸ್ಟ್ರಿಂಗ್ ಪಪಟ್ ಥಿಯೇಟರಿನ ಕಲಾವಿದನೂ ಆಗಿದ್ದ ಮೈಕೇಲ್. ಯಕ್ಷಗಾನವನ್ನೂ ಕೂಡ ಆಡಿ ತೋರಿಸಿದರು. ದಾಖಲಿಸಿಕೊಂಡೆವು. ಎಲ್ಲೂ ಬಿಡುವೆ ಸಿಗುತ್ತಿರಲಿಲ್ಲ. ಅದರ ಅವಶ್ಯಕತೆಯೂ ನಮಗೆ ಇರಲಿಲ್ಲ. ಆಯಾಯ ಹಳ್ಳಿಗಳ ಕಲಾವಿದರ ಮನೆಯಲ್ಲೆ ಉಳಿದುಕೊಳ್ಳುತಿದ್ದೆವು. ಅಲ್ಲೊಂದು ಪ್ರಸಂಗ ನಡೆಯಿತು. ಆ ಕಲಾವಿದನ ಪ್ರಾಯದ ಮಗಳೊಬ್ಬಳಿದ್ದಳು. ಹಳ್ಳಿ ಚೆಲುವೆ. ಹೈಸ್ಕೂಲಿನ ತನಕ ಓದಿ ಫೇಲಾಗಿ ಮದುವೆಗಾಗಿ ಕಾಯುತಿದ್ದಳು. ಮೈಕೇಲ್‌ನ ಜೊತೆ ಮಾತನಾಡಿಸಲು ಹಾತೊರೆಯುತಿದ್ದಳು. ಅವರ ಅಪ್ಪ `ಒಳಗೆ ಹೋಗಮ್ಮಾ’ ಎಂದು ಎಚ್ಚರಿಸುತಿದ್ದ. ನನ್ನ ಬಳಿ ಮೃದುವಾಗಿ ಕೇಳಿದಳು; `ಅಣ್ಣಾsss ಅವರನ್ನಾ ನಾನು ಮುಟ್ಟಿ ಮಾತಾಡಿಸ್ಬೇಕಲ್ಲಾ… ನನಗೆ ಇಂಗ್ಲೀಸು ಬರೋದಿಲ್ಲಾ… ಅವುರ್ಗೆ ಹೇಳಣ್ಣಾ ಯೀಕೆ ಮಾತಾಡಿಸುಕೆ ಇಷ್ಟ ಪಡ್ತಳೆ ಅಂತಾ… ಪ್ಲೀಸ್ ಅಣ್ಣಾ’ ಎಂದು ಕೋರಿದಳು. ಅವಳು ಎಷ್ಟು ತೀವ್ರತರವಾಗಿ ಮೈಕೇಲ್‌ನನ್ನು ತಿಂದು ಬಿಡುವಂತೆ ನೋಡುತ್ತಿದ್ದಳು ಎಂಬುದು ಆಗ ನನ್ನ ಗಮನಕ್ಕೆ ಬಂದಿತ್ತು. ಒಮ್ಮೆಯೂ ಮೈಕೇಲ್ ಅವಳತ್ತ ನೋಡುತ್ತಿರಲಿಲ್ಲ. ಹಲ್ಲೊ… `ಣಮಷ್ಕಾರ್’ ಎಂದಿದ್ದ ಅಷ್ಟೇ. ಐದಾರು ಕನ್ನಡ ಪದಗಳ ಹೇಳಿಸಿಕೊಂಡು ಕಲಿತಿದ್ದ. ಆ ಹುಡುಗಿ ಮೂರನೆ ಬಾರಿ ವ್ಯಥೆಯ ಬಿಸಿಯಿಂದ ಕೇಳಿದಾಗ; ಆಯ್ತು ಎಂದು ದಾರಿ ಮಾಡಿದೆ. ಅವರ ಅಪ್ಪ ಇರಲಿಲ್ಲ. ಅಜ್ಜಿ ಮೊಮ್ಮಗಳ ಪರ ಇದ್ದಳು. ನಮಗಾಗಿ ಸಿಹಿ ಅಡುಗೆ ಮಾಡಲು ಹುಡುಗಿ ತಾಯಿ ತಲ್ಲೀನಳಾಗಿದ್ದಳು.

ಒಳ ಬಂದಳು. ಅಹಾ! ಹಸನಾದ ಕನ್ನೆ. ಅವಳ ತುಟಿಗಳು ಅದುರುತ್ತಿದ್ದವು. ಬಟ್ಟಲುಗಣ್ಣುಗಳು ಜೋಡಿ ಬೆಳದಿಂಗಳಂತೆ ಹೊಳೆಯುತ್ತಿದ್ದವು. ಲಂಗದಾವಣಿಯ ಕುಮಾರಿ. ಮೈಕೇಲ್‌ಗೆ ಹೇಳಿರಲಿಲ್ಲ. ಆ ಗಳಿಗೆಯಲ್ಲಿ ಏನಾಗುತ್ತದೊ ಅದಾಗುತ್ತದೆ… ನಾನು ನೆಪ ಅಷ್ಟೇ ಎಂದು ಕ್ರಿಯೆ ಒಂದಕ್ಕೆ ಮಧ್ಯವರ್ತಿ ಆಗಿದ್ದೆ.

`ಬಾ ಕೂತುಕೊ… ನಿಮ್ಮಪ್ಪ ಇಲ್ಲ ಕೂತುಕೊ’ ಎಂದು ಅವನ ಪಕ್ಕವೇ ಕೂರಿಸಿದೆ. ಪಶ್ಚಿಮ ಸಮಾಜಿ ಅವನು. ನಮ್ಮಂತೆ ದಾಹಿಯಲ್ಲ… ಬರಗೆಟ್ಟವನಲ್ಲ… ಅನೀತಿಯವನಲ್ಲ. `ಹಾಯ್… ಏ… ಗೇ… ಗೇ ದ್ದೀರಿ…’ ಎಂದು ನನ್ನತ್ತ ನೋಡಿ; `ಷೀ ಈಸ್ ಸೋ ಬ್ಯೂಟಿ ಫುಲ್…’ ಎಂದ. `ನೀನು ಸುಂದರಿ’ ಎಂದು ಹೊಗಳುತ್ತಿದ್ದಾರೆ ಎಂದು ಹೇಳಿದೆ ಅವಳಿಗೆ… `ನಾನು ಕಪ್ಪಗಿದ್ದೀನಿ… ಹಳ್ಳಿಯವಳು… ನಾನೇನು ಚೆಂದ ಇದ್ದೀನಣ್ಣಾ… ಅವರು ಎಸ್ಟು ಚೆಂದ ಇದ್ದಾರೆ ನೋಡು ಬೆಳ್ಳಗೆ… ದೇವಲೋಕದಿಂದ ಬಂದವರಂಗೆ…’ ಅವಳ ಇಂಪಾದ ಪ್ರಾಯದ ದನಿಯನ್ನು ನಾನು ಅನುವಾದಿಸಲು ಆಗದೆ ತಡಕಾಡಿದೆ. ನಾನೇ ಮೈ ಮರೆತಂತಿದ್ದೆ. ನಾನೇ ಅವಳಾಗಲು ಯತ್ನಿಸಿದೆ. ಅವಳ ಕಂಪನ ನಾಚಿಕೆ, ಕಾಮನೆ, ಮಧುರ ತೀವ್ರತೆಗಳನ್ನು ಧ್ವನಿಸಲು ನನ್ನಿಂದ ಆಗಲಿಲ್ಲ. ಮೈಕೇಲ್‌ಗೆ ಅವಳ ಭಾವನೆಯನ್ನು ಅರುಹಿದೆ. ಶಾಕ್ ಆದ! `ನೋ… ನೋನೊ’ ಎಂದ. ಮತ್ತೆ ವಿವರಿಸಿದೆ. ಪ್ರೇಮ ಮೋಹ ಕಾಮನೆಗಳು ಅನುವಾದದ ಹಂಗಿನವಲ್ಲ. ಅದನ್ನು ಮೀರಿದ ಭಾವನೆಗಳನ್ನು ವಾಚ್ಯಗೊಳಿಸಬಾರದು ಎನಿಸಿತು. `ನಿನ್ನ ಕೈಗಳನ್ನು ಮುಟ್ಟುವುದಿಲ್ಲವಂತೆ… ನಿನ್ನ ಈ ಮೃದು ಸುಂದರ ಪಾದಗಳನ್ನು ಒಮ್ಮೆ ಮುಟ್ಟುವಳಂತೇ… ಅದಕ್ಕಾದರೂ ಒಪ್ಪಿಕೊ… ತಪ್ಪೇನು ಇಲ್ಲ. ನಮ್ಮ ಪದ್ಧತಿಗಳಲ್ಲಿ ಹಿರಿಯರಿಗೆ; ಬಹಳ ಪ್ರೀತಿ ಪಾತ್ರರಾದವರಿಗೆ ಕಾಲು ಮುಟ್ಟಿ ನಮಸ್ಕರಿಸುವ ಒಂದು ಗೌರವಾನ್ವಿತ ಪದ್ಧತಿ ಇದೆ… ಅದನ್ನಷ್ಟೆ ಮಾಡುತ್ತಾಳೆ ಎಂದೆ. ಏನು ಹೇಳಿದೆ; ಆತ ಏನೆಂದ ಎಂದು ಬಿಡಿಸಿ ಅವಳಿಗೆ ಹೇಳಲಿಲ್ಲ. ಎಲ್ಲಿ ನಮ್ಮಪ್ಪ ಬಂದು ಬಿಡುವನೊ ಎಂಬಂತೆ ಹೊರಗೆ ಏನೊ ಸದ್ದಾದ್ದಕ್ಕೆ ಬೆದರಿ ಅತ್ತ ನೋಡಿದ್ದಳು.

ನಾವು ಆ ಹಳೆ ಕಾಲದ ಉಪ್ಪರಿಗೆಯಲ್ಲಿದ್ದೆವು. ಆತ ಬಿಳಿ ಟೀಷರ್ಟ್ ತೆಳುಖಾಕಿ ಬಣ್ಣದ ಉದ್ದನೆ ಚಡ್ಡಿಯನ್ನು ಧರಿಸಿದ್ದ. ಗುಲಾಬಿ ಬಣ್ಣದ ಅವನ ತೊಡೆ ಕಣಕಾಲುಗಳು ಅವಳನ್ನು ಕಂಗೆಡಿಸಿದ್ದವು ಎನ್ನಿಸುತ್ತದೆ. ಕಾಲುಗಳ ಅರೆ ನೀಡಿ ಒರಗಿ ಕೂತಿದ್ದ. ಒಪ್ಪಿಸಿದೆ. ತನ್ನ ಜನ್ಮವನ್ನೆ ಅವನಿಗೆ ಅರ್ಪಿಸುವಂತೆ ಬಗ್ಗಿ ಅವನ ಪಾದಗಳ ಮನಸಾರೆ ಹಿಡಿದು; ಹಣೆಯ ಇಟ್ಟು ಚುಂಬಿಸಿ ಮಂಡಿಗಳ ಹಿಡಿದೆಳೆದಳು ತನಗೇ ಅರಿವಿಲ್ಲದಂತೆ. ಗಾಭರಿಯಾದ. ಅವನ ಸಪೂರ ತೊಡೆನಡುವೆ ಮುಖವಿಟ್ಟು ಭುಜಗಳ ಹಿಡಿದು ಮುತ್ತಿಟ್ಟು ಹೊರಟೇ ಹೋದಳು. ಈಗ ಈ ಈಗ ಇದು ನನ್ನ ಕಣ್ಣೆದುರೇ ಘಟಿಸಿತೇ ಎಂದು ನಾನೆ ನಂಬದಾದೆ. ಇಷ್ಟು ಆಗುತ್ತದೆ ಎಂದೆನಿಸಿರಲಿಲ್ಲ. ಅವರ ಅಪ್ಪನ ಸುಳಿವೇ ಇರಲಿಲ್ಲ. ಇಷ್ಟು ಸಾಕೆಂದು ಬೆದರಿ ಹೊರಟು ಹೋಗಿದ್ದಳು. ಮೈಕೇಲ್‌ಗೆ ಅದು ಏನೂ ಅನಿಸಿರಲಿಲ್ಲ. ಸ್ಪರ್ಷದ ಪಶ್ಚಿಮದ ಭಾವ ಅರ್ಥ ಅನುಭಾವವೇ ಬೇರೆ ಎನಿಸಿತು. ನಾವು ನಮ್ಮ ದೇಶದಲ್ಲಿ ಯಾರೂ ಯಾರನ್ನೂ ಮುಟ್ಟಿಸಿಕೊಳ್ಳುವುದೇ ಇಲ್ಲವೇ… ಹೆಣ್ಣನ್ನು ಮುಟ್ಟಲು ನಮಗೆ ಬರುವುದಿಲ್ಲ. ಹಿಡಿದೆಳೆಯುತ್ತೇವೆ. ಮುದುರಿ ಮಂದೆ ಮಾಡಿ ಹಿಂಡಿ ಹಿಪ್ಪೆ ಮಾಡಿ ಹೀರಿ ಕಚ್ಚಿ ಗೀರಿ ಗಾಯ ಮಾಡಿರುತ್ತೇವೆ! ಪಶ್ಚಿಮ ಹಾಗಾದರೆ ಹೆಣ್ಣನ್ನು ಮುಟ್ಟಿದೆಯೇ ಯೋಗ್ಯವಾಗೀ… ಇಲ್ಲಾ; ಅಲ್ಲಿ ಹೆಣ್ಣೇ ಗಂಡನ್ನು ಮುಟ್ಟುತ್ತಾಳೆ. ಆತ ಮುಟ್ಟಿಸಿಕೊಳ್ಳುತ್ತಾನೆ. ಶೀತವಲಯದ ಮನುಷ್ಯ ಅವನು! ಇವನೊ ಉಷ್ಣವಲಯದವನು. ಆ ಹುಡುಗಿ ಕೂಡ ಬೆದೆಯಲ್ಲಿ ಕಾದು ಬಂದಿದ್ದವಳು! ಅವರಿಬ್ಬರ ಮಧ್ಯೆ ನಾನು ಇರಬಾರದಿತ್ತು. ಭಾಷೆಯ ಅಗತ್ಯ ಇರಲಿಲ್ಲ. ಇದು ಮೊದಲೇ ಯಾಕೆ ನನಗೆ ಗೊತ್ತಾಗಲಿಲ್ಲ… ಬೇಸರವಾಯಿತು.

ಹೋಳಿಗೆಯ ಘಮ ಘಮ ಸುವಾಸನೆ ತೇಲಿ ಬರುತ್ತಿತ್ತು. ಹೊರಗೆ ಹೋಗಬೇಕು ಎನಿಸಿತು. ಮೈಕೇಲ್‌ನ ಕರೆದೆ. ಟಿಪ್ಪಣಿ ಮಾಡಿಕೊಳ್ಳುತ್ತಿದ್ದ. ಊರ ಮುಂದೆ ಕೆರೆ ಇತ್ತು. ತಾವರೆ ಕೆರೆ. ಹಿತ ಎನಿಸಲಿಲ್ಲ. ಆ ಹುಡುಗಿ ಕಾಣಲಿಲ್ಲ. ಹಿತ್ತಲಲ್ಲಿ ಒಬ್ಬಳೆ ಕೂತಿದ್ದಳೇನೊ. ವಾಪಸ್ಸು ಬಂದೆ. ಚಡಪಡಿಕೆ. ಅವರ ಅಪ್ಪ ಹಿರಿಯ ಕಲಾವಿದರ ಕರೆತಂದಿದ್ದ. ಆ ರಾತ್ರಿ ಇನ್ನೊಂದು `ಕರಿಭಂಟನ ಕಾಳಗ’ ಎಂಬ ಯಕ್ಷಗಾನವನ್ನು ನೋಡಿ ರೆಕಾರ್ಡ್ ಮಾಡಿಕೊಳ್ಳಬೇಕಿತ್ತು. ಅದನ್ನು ಮುಗಿಸಿ ಮರುದಿನ ನಾವು ನಾಗಮಂಗಲದ ನೆಲ್ಲಿಗೆರೆಯ ಗೆಸ್ಟ್‍ಹೌಸಿಗೆ ತಲುಪಿ ತಂಗಬೇಕಾಗಿತ್ತು. ಅಲ್ಲಿ ಹದಿನೈದು ದಿನ ವಾಸವಿದ್ದು ಯಕ್ಷಗಾನವನ್ನು ಕಲಿಯಬೇಕಿತ್ತು. ಅವನ ಜೊತಗೆ ಸಾಥ್ ನೀಡಲೆಬೇಕಿತ್ತು.

ಆ ಹುಡುಗಿಗೆ ಏನೊ ಪಾಪ ಪ್ರಜ್ಞೆ. ಭಾಗಶಃ ಇವನು ನನ್ನನ್ನು ಸ್ವೀಕರಿಸಲಿಲ್ಲ ಎಂಬ ನೋವು ತೀವ್ರವಾಗಿ ಇದ್ದಂತಿತ್ತು. ಊಟ ಬಿಡಿಸಿದಳು. ಒಂದಿಷ್ಟು ತಿಂದೆವು. ಹೋಳಿಗೆಯನ್ನು ಏನೆಂದು ಅನುವಾದಿಸುವುದು… ಕೇಳಿದ್ದ. ತಟ್ಟನೆ `ಸ್ವೀಟ್ ಬ್ರೇಡ್… ಲೈಕ್ ಬರ್ಗರ್’ ಎಂದಿದ್ದೆ. `ಸೋ ಟೇಸ್ಟಿ’ ಎಂದು ಎಂಜಾಯ್ ಮಾಡಿದ್ದ. ಆಕೆ ಅವನು ತಿನ್ನುವುದನ್ನೇ ಬಾಗಿಲ ಮರೆಯಲ್ಲಿ ನಿಂತು ನೋಡುತ್ತಿದ್ದಳು. ಒಹ್! ಈ ಲೋಕದಲ್ಲಿ ಹೆಣ್ಣಿಗಿಂತ ಸಿಹಿಯಾದದ್ದು ಯಾವುದು ಇದೆ ಎಂದು ಬಾಯಾಡಿಸಿದೆ. ಮನಸ್ಸು ಮೋಡದಂತೆ ಎಲ್ಲೆಲ್ಲಿಗೊ ತೇಲಿ ಹೋಗುತಿತ್ತು. ನಾಟಕ ಆರಂಭವಾಗಿತ್ತು. ನಿಜಕ್ಕೂ ಅವರು ಅಪ್ರತಿಮ ಕಲಾವಿದರು. ತಡ ರಾತ್ರಿ ಆಗುತಿತ್ತು. ಜನ ನೆರೆದಿದ್ದರು. ಮೈಕೇಲ್ ಆ ಯಕ್ಷಗಾನದ ಮಧ್ಯೆ ಪ್ರವೇಶಿಸಿ ಕಲಾವಿದರ ಜೊತೆ ಒಂದೆರಡು ಪ್ರಶ್ನೆ ಕೇಳುವುದಿತ್ತು. ಚಿತ್ರೀಕರಿಸಲು ಮುಂದಾದೆ. ಆಕೆ ಅಲ್ಲೇ ಮುಂದೆ ಕೂತಿದ್ದಳು. ಅವಳು ಮುಗ್ಧವಾಗಿ ಆ ರಂಗ ಪ್ರಸಂಗದಲ್ಲಿ ತಲ್ಲೀನಳಾಗಿದ್ದನ್ನು ಸೆರೆ ಹಿಡಿದುಕೊಂಡೆ. ಸಂಕ್ಷಿಪ್ತವಾಗಿ ಯಕ್ಷಗಾನವ ಮುಗಿಸಿದ್ದರು. ಹೊತ್ತಾಗಿತ್ತು. ಹಳೆ ಕಾಲದಂತೆ ಇಡೀ ರಾತ್ರಿ ಆಡುವಂತಿರಲಿಲ್ಲ. ಅದೇ ಉಪ್ಪರಿಗೆಯ ಏರಿದೆವು. ಎಲ್ಲರೂ ದಣಿದಿದ್ದರು. `ಅಣ್ಣಾ; ನೀರು ತಂದುಕೊಡಲೇ’ ಎಂದು ಕರೆದಳು. ಅವಳ ತುಡಿತ ಅರ್ಥವಾಗಿತ್ತು. ಬೇಡ ಎಂದಿದ್ದೆ. ಚಿತ್ರೀಕರಣ ಹೇಗೆ ಆಗಿದೆ ಎಂಬುದನ್ನು ಕ್ಯಾಮರಾದಿಂದಲೇ ಮೈಕೇಲ್ ಪರೀಕ್ಷೆ ಮಾಡುತ್ತಿದ್ದ. ಲಾಟೀನಿನ ಮಂದ ಬೆಳಕಲ್ಲಿ ಮಾಡಿನತ್ತ ನೋಡುತ್ತ; ನಾನೀಗ ಎಲ್ಲಿರುವೆ ಎಂದು ಕೇಳಿಕೊಳ್ಳುತ್ತಿದ್ದೆ. ಮೈಕೇಲ್ ನಿದ್ದೆಯ ಏರಿಳಿತದ ಉಸಿರಾಟದಲ್ಲಿದ್ದ. ಅಷ್ಟು ಕೂಡ ಬೆಳಕು ಬೇಡ ಎನಿಸಿ ತುಂಬಿದೆ. ಗಕುಂಗತ್ತಲು! ಆಕಾಶದ ರೆಕ್ಕೆ ಮೇಲೆ ಎಲ್ಲಿಗೊ ತೇಲಿ ಹೋಗುತ್ತಿರುವಂತೆ ಅನುಭವ.

ನಿದ್ದೆ ಉಯ್ಯಾಲೆಯಂತೆ ತೂಗಿ ತೂಗಿ ಬರುತ್ತಿತ್ತು. ಕೆಳಗೆ ಏನೊ ಆಗಾಗ ಬಳೆಯ ಸದ್ದು… ತಾಳಣ್ಣಾ; ಈಗಲೇ ಮಲಗಬೇಡಾ! ನಿನ್ನ ಗೆಳೆಯನ ಜೊತೆ ಮಾತನಾಡುತ್ತಿರು ಎಂಬಂತೆ ಧ್ವನಿಸುತ್ತಿತ್ತು. ನಿದ್ದೆಯ ತಡೆಯುತ್ತಿದ್ದೆ. ಉಪ್ಪರಿಗೆಯ ಹಲಗೆಯ ಮೆಟ್ಟಿಲುಗಳ ಯಾರೊ ಹೆಜ್ಜೆ ಸಪ್ಪಳ ಆಗದಿರಲಿ ಎಂಬಂತೆ ಮೆಲ್ಲ ಮೆಲ್ಲಗೆ ಮೇಲೇರಿ ಬರುತ್ತಿರುವಂತಾಗುತಿತ್ತು. ಆಗೋದೆಲ್ಲ ಆಗಿ ಬಿಡಲಿ… ನನಗೆ ನಿದ್ದೆ ಬಂದು ಬಿಡಲಿ… ಅವಳಿಲ್ಲಿ ಬಂದು ಇವನ ಕೂಡೆ ಮಲಗಿಬಿಡಲಿ; ನನಗದು ತಿಳಿಯದಾಗಲಿ ಎಂದುಕೊಂಡಂತೆಲ್ಲ ನಿದ್ದೆ ದೂರ ಜಾರಿ ಎದೆ ಬಡಿತ ಜೋರಾಗಿ ಚಡಪಡಿಕೆ ಆಗುತಿತ್ತು. ಅವಳು ಪಿಸು ಮಾತಲ್ಲಿ ಕರೆದಳೊ; ಗಾಳಿ ಹಾಗೆ ಬೀಸಿತೊ, ಗೊತ್ತಾಗುತ್ತಿರಲಿಲ್ಲ. ಯಾರದೊ ಆಕಳಿಕೆ, ನಿಟ್ಟುಸಿರು… ಮನೆ ಮುಂದೆ ಕಟ್ಟಿಹಾಕಿದ್ದ ಹಸುಗಳ ಕೊರಳಗಂಟೆಯ ಸದ್ದು… ಯಾವಾಗ ನಿದ್ದೆ ಬಂದಿತ್ತೊ; ಕೋಳಿ ಕೂಗಿದ್ದವೊ… ಮೈಕೇಲ್ ಎಬ್ಬಿಸಿದ್ದ. ಕೆರೆಗೆ ಹೋಗಿ ಬಂದೆವು. ಚೆನ್ನಾಗಿ ನಿದ್ದೆ ಬಂತೇ… ಒಳ್ಳೆಯ ಕನಸ ಕಂಡೆಯಾ ಎಂದು ಸೂಕ್ಷ್ಮವಾಗಿ ಕೇಳಿದ್ದೆ. ಗಡದ್ದಾಗಿ ನಿದ್ದೆ ಹೊಡೆದಿದ್ದ. ಅವನಲ್ಲೇನೊ ನಾಳಿನ ಗಡಿಬಿಡಿ. ಬೇಗ ಪ್ಯಾಕ್ ಮಾಡಿ ಮೇಯಿನ್ ರೋಡಿಗೆ ಎತ್ತಿನ ಬಂಡಿಯಲ್ಲಿ ಸಾಗಿ ನಾಗಮಂಗಲ ತಲುಪಬೇಕು ಎಂದು ಮ್ಯಾಪ್ ಹಿಡಿದು ದಾರಿಯ ಸೂಚಿಗಳ ಹುಡುಕುತ್ತಿದ್ದ. ಇಡ್ಲಿ ಚಟ್ನಿ ಮಾಡಿದ್ದರು. ತಿಂದೆವು. ಬಂಡಿ ರೆಡಿಯಾಗಿತ್ತು. ಹುಡುಗಿಯ ತಾಯಿ ಬಂದು `ನಾಳೆ ವೋಗುರಂತೇ ಇವತ್ತೊಂದಿನ ಇರಿ’ ಎಂದಿದ್ದಳು. ಹೊರಟಾಗ ಹಾಗೆ ತಡೆಯಬಾರದು ಎಂದ ಅವಳ ಗಂಡ. ಆಕೆ ಬೆಳಿಗ್ಗೆಯೆ ಎದ್ದು ಸ್ನಾನ ಮಾಡಿದ್ದಳು. `ಅಣ್ಣಾ; ಮತ್ತೆ ಯಾವಾಗ ಬರ್ತಿರಿ’ ಎಂದು ಹತಾಶೆಯಲ್ಲಿ ಕೇಳಿದ್ದಳು. `ನೋಡೋಣ… ಸಿಗಬೇಕೆಂದಿದ್ದರೆ; ಮತ್ತೆ ಬರುತ್ತೇವೆ’ ಎಂದಿದ್ದೆ. ಊರಾಚೆಗೆ ಬಂದಿತ್ತು ಬಂಡಿ. ಮನೆಯವರೆಲ್ಲ ಹಿಂಬಾಲಿಸಿ ಬಂದು ಬೀಳ್ಕೊಟ್ಟರು. ಆಕೆ ಆ ಊರ ಮುಂದಿನ ಅರಳಿ ಮರದ ಕೆಳಗೆ ನಿಂತು ಕಣ್ಣೀರ ಬಟ್ಟಾಡಿಸುತ್ತಿದ್ದಳು. ಬಂಡಿ ಮರೆಯಾಗುವ ತನಕ ಕೈ ಬೀಸುತ್ತಲೇ ಇದ್ದಳು. ಆ ಕಪ್ಪು ಚೆಲುವೆ ಈಗಲೂ ನನ್ನ ಮನಸ್ಸಿನ ಮರೆಯಲ್ಲಿ ನಿಂತು ಕೈ ಬೀಸುತ್ತಿರುವಂತೆಯೇ ಭಾಸವಾಗುತ್ತಿರುತ್ತದೆ. ಯಶಸ್ವಿಯಾಗಿ ಕ್ಷೇತ್ರಕಾರ್ಯ ಆಯಿತು ಎಂದು ಮೈಕೇಲ್ ಪ್ರವಾಸದ ಹುಮ್ಮಸ್ಸಿನಲ್ಲಿದ್ದ. ಭಾರವಾದ ತಲೆ; ಮಬ್ಬಾದ ಮನಸ್ಸು…

ಏನೊ ಹೊಳೆಯುತ್ತಿರಲಿಲ್ಲ. ಅಲ್ಲೊಂದು ಗುಬ್ಬಿ ತುಮಕೂರು ರಸ್ತೆ. ನಾಗಮಂಗಲ ಸಾಕಷ್ಟು ದೂರದಲ್ಲಿತ್ತು. ಬಸ್ಸು ಹತ್ತಿದೆವು. ನೂಕು ನುಗ್ಗಲು ಬಸ್ಸು ತಿರುವು ದಾರಿಗಳಲ್ಲಿ ಅತ್ತಿತ್ತ ಎಳೆದಾಡಿಸಿ ತೂಗಾಡಿಸುತ್ತಿತ್ತು. ಸದ್ಯ ಆ ನೆಲ್ಲಿಗೆರೆಯ ಗೆಸ್ಟ್‌ಹೌಸ್ ತಲುಪುವಷ್ಟರಲ್ಲಿ ಸುಸ್ತಾಗಿದ್ದೆವು. ಅದೊಂದು ಬ್ರಿಟಿಷರ ಕಾಲದ ಗೆಸ್ಟ್‌ಹೌಸ್ ಆಗಿತ್ತು. ವಿಶಾಲವಾಗಿತ್ತು. ಸುಂದರ ತಾಣ. ಬಿಸಿ ನೀರಲ್ಲಿ ಸ್ನಾನ ಮಾಡಿ ಹಗುರವಾದೆವು. ಆ ಹುಡುಗಿಯ ಬಗ್ಗೆ ಏನನಿಸಿತು ಎಂದು ಕೇಳಿದೆ. `ಸೋ ಪ್ರಿಟ್ಟೀ… ಇನ್ನೊಸೆಂಟ್’ ಎಂದ. ಅಂತಹ ವಿಷಯಗಳಲ್ಲಿ ಅವನಿಗೆ ಆಸಕ್ತಿಯೇ ಇರಲಿಲ್ಲ. ನಾನಂತು ಆ ರಾತ್ರಿ ಸಖತ್ತಾಗಿ ನಿದ್ದೆ ಮಾಡಿದೆ. ಆ ಗೆಸ್ಟ್‌ಹೌಸಿಗೂ ನೆಲ್ಲಿಗೆರೆಗೂ ಹತ್ತು ನಿಮಿಷದ ದಾರಿ. ಮೊದಲೆ ತಿಳಿಸಿದ್ದ ಮೈಕೇಲ್. ಅಲ್ಲೊಬ್ಬ ಯಕ್ಷಗಾನ ಕಲಿಸುವ ಕಲಾವಿದ ಇದ್ದ. ವಿಪರೀತ ಆಚಾರ ವಿಚಾರಗಳ ಮನುಷ್ಯ. ಆದರೆ ಅಲ್ಲಿಗೆಲ್ಲ ಅವನೊಬ್ಬನೆ ಪರಿಣಿತ. ಅವನ ಮನೆಗೂ ಕೊಟ್ಟಿಗೆಗೂ ಬಚ್ಚಲು ಮನೆಗೂ ಕುಲುಮೆಗೂ ಯಾವ ವ್ಯತ್ಯಾಸಗಳೂ ಇರಲಿಲ್ಲ. ಎಲ್ಲ ಒಂದರಲ್ಲೇ. ಅವನ ಬಳಿಯೆ ಯಕ್ಷಗಾನ ಕಲಿಯಬೇಕಿತ್ತು.

ಹೋದೆವು. ಪುಟ್ಟ ಹಜಾರ. ಅಲ್ಲೇ ಅವನ ಆಚಾರ ವಿಚಾರ ಪಂಚಾಂಗ ಕರ್ಮಗಳ ಕಛೇರಿ. ಜೀಶಂಪ ಮೊದಲೆ ವ್ಯವಸ್ಥೆ ಮಾಡಿದ್ದರು. ಈ ಸಂಜೆ ಆರರಿಂದ ಎಂಟುಗಂಟೆಗಳ ಅವಧಿಯಲ್ಲಿ ಪಾಠ ಶುರು ಮಾಡುವ ಎಂದ. ಆರಂಭಿಸಿದೆವು. ನೃತ್ಯ, ನಟೆ, ಹಾಡು ಸಂಭಾಷಣೆಗಳನೆಲ್ಲ ಒಟ್ಟಿಗೆ ಹೇಳಿಕೊಡುತ್ತಿದ್ದ. ಸದ್ಯ ಅಲ್ಲಿ ಯಾವ ಚೆಲುವೆಯರು ಇರಲಿಲ್ಲ. ಆತ ತನ್ನ ಮನೆಗೆ ಬೇರೆ ಯಾರನ್ನು ಸೇರಿಸುತ್ತಿರಲಿಲ್ಲ. ಕರ್ಮಟ ವ್ಯಕ್ತಿ. ನಿನ್ನ ಜಾತಿ ಯಾವುದು ಎಂದು ಕಪಾಳಕ್ಕೆ ಹೊಡೆದಂತೆ ಕೇಳಿದ್ದ. ಬ್ರಾಹ್ಮಣ ಎಂದಿದ್ದೆ. ನಾವು ವಿಶ್ವ ಬ್ರಾಹ್ಮಣರು ಎಂದು ತಿರುಗೇಟು ನೀಡಿದ್ದ. ಅವನ ಮನೆ ಗಬ್ಬಾಗಿ ನಾರುತಿತ್ತು. ಮೈ ತುಂಬ ವಿಭೂತಿ ಕುಂಕುಮ ಹರಿಶಿಣ ಮೆತ್ತಿಕೊಂಡಿದ್ದ. ಏನೊ ಒಂದಿಷ್ಟು ಕಲಿತೆವು. ಅವನು ಅಭಿನಯಿಸುವುದನ್ನು ನಾನು ಚಿತ್ರೀಕರಿಸಿಕೊಳ್ಳುತ್ತಿದ್ದೆ. ಒಹ್! ನಾನೊಬ್ಬ ಛಾಯಾಗ್ರಾಹಕ ಆಗಬಹುದು ಎನಿಸುತ್ತಿತ್ತು. ಅದು ಅಷ್ಟು ಸಲೀಸಿತ್ತು. ಆ ದುಬಾರಿ ಕ್ಯಾಮರವೇ ಬಹು ಆಯಾಮಗಳಲ್ಲಿ ತಂತಾನೆ ರೆಕಾರ್ಡ್ ಮಾಡಿಕೊಳ್ಳುತ್ತಿತ್ತು! ಅಮೆರಿಕಾದಿಂದ ನನ್ನನ್ನು ಹುಡುಕಿಕೊಂಡು ಬಂದಿದ್ದಾನೆ. ಈತ ಅವನ ಅಸಿಸ್ಟೆಂಟ್… ಮೈಸೂರು ಯೂನಿವರ್ಸಿಟಿಯವನು ಎಂದು ನನ್ನನ್ನು ಹಗುರವಾಗಿ ಪರಿಗಣಿಸುತಿದ್ದ. ಅವನು ಸನಾತನ ವಿಚಾರಗಳ ಹೇಳಿದಂತೆಲ್ಲ ನಾನು ಇಂಗ್ಲೀಷಿಗೆ ತರ್ಜುಮೆ ಮಾಡುವಾಗ ನನ್ನ ವಿಚಾರಗಳನ್ನೆ ಹೇಳಿ ದಾಖಲಾಗುವಂತೆ ಮಾಡುತ್ತಿದ್ದೆ. ಆ ಮೂಲಕ ಅವನ ವಿಚಾರಗಳ ಹುಳುಕನ್ನು ಬಿಟ್ಟು ಬಿಡುತ್ತಿದ್ದೆ. ಹದಿನೈದು ದಿನಗಳು ಮೂರು ನಾಲ್ಕು ದಿನದಂತೆ ಕಳೆದುಹೋಗಿದ್ದೆವು.

ಕರಿಬಂಟನ ಕಾಳಗ ಆ ಸೀಮೆಯಲ್ಲಿ ಪ್ರಸಿದ್ಧವಾದ ಒಂದು ಪ್ರಸಂಗ ನಾಟಕ. ಅದನ್ನು ಇಂಗ್ಲೀಷಿಗೆ ಅನುವಾದಿಸಬೇಕಾಯಿತು. ಹಳ್ಳಿಯ `ಮೂಡಲಪಾಯ’ ಹೆಸರಿನ ಪ್ರಸಂಗ ಪಠ್ಯ ಅದು. ಹೇಗೊ ಭಾಷಾಂತರಿಸಿದೆ. ಅದರಿಂದ ನನಗೆ ಬಹಳ ಅನುಕೂಲವಾಯಿತು. ನನ್ನ ಕನ್ನಡ ಭಾಷೆಯನ್ನು ಹೇಗೆ ಇಂಗ್ಲೀಷಿನಲ್ಲಿ ಪುನರ್ ಸೃಷ್ಟಿಸಬಹುದು ಎಂಬ ವಿಶ್ವಾಸ ಹೆಚ್ಚಾಯಿತು. ಮೈಸೂರಿಗೆ ಹಿಂತಿರುಗುವ ದಿನ ಬಂತು. ಗುರುಕಾಣಿಕೆ ನೀಡುವುದಿತ್ತು. ಅವತ್ತಿಗೆ ಮೈಕೇಲ್ ಹತ್ತು ಸಾವಿರ ರೂಗಳ ದಕ್ಷಿಣೆಯಾಗಿ ನೀಡಿ ಕಾಲಿಗೆ ನಮಸ್ಕರಿಸಿದ. ಅವನೇ ಕೇಳಿ ಹಾಗೆ ನಮಸ್ಕಾರ ಮಾಡಿಸಿಕೊಂಡಿದ್ದ. ನನ್ನತ್ತ ನೋಡಿದ. ತಿರಸ್ಕಾರದಿಂದ ಗುರಾಯಿಸಿದೆ. ಗುರುಹಿರಿಯರ ಬಗ್ಗೆ ನಿನಗೆ ಗೌರವ ಇರಲಿ ಎಂದು ಎಚ್ಚರಿಸಿದ. ನಾನೇನು ಮಾಡಲೀ… ನಾನೂ ಅವನಿಗೆ ಎಚ್ಚರಿಸಬೇಕಿತ್ತು.

`ಆಚಾರ್ಯರೇ; ನೀವು ವಿಶ್ವ ಬ್ರಾಹ್ಮಣರು ಎಂದಿರಿ. ಸರಿ. ಆದರೆ; ನಾನು ಬ್ರಾಹ್ಮಣ ಅಲ್ಲ. ಅಪ್ಪಟ ಹೊಲೆಯ… ಹೊಲೆಯಾ… ಗೊತ್ತಲ್ಲಾ; ಆ ಜಾತಿಯಿಂದ ಬಂದವನು ನಾನು’ ಎಂದು ಹೊರ ಬಂದೆ. `ಛೀ ಪಾಪೀ ಕುಲಗೆಡಿಸಿದೆಯೇನೊ’ ಎಂದು ಸಿಟ್ಟಾಗಿ ಬೈಯ್ಯತೊಡಗಿದರು. ಅತಿಥಿ ಗೃಹಕ್ಕೆ ಬಂದೆವು. ಏನಾಯಿತು ಎಂದು ಮೈಕೇಲ್ ಕೇಳಿದ. ತಿಳಿದು ವಿಷಾದ ಪಟ್ಟ. `ನಾನು ಹೊಲೆಯ… ಐ ಮೀನ್; ಸಬ್ ಹ್ಯೂಮನ್. ಯೂ ಆಲ್ಸೋ ಒನ್ಸ್ ಟ್ರೀಟೆಡ್ ಆ್ಯಸ್ ಸಬ್ ಹ್ಯೂಮನ್ ಇನ್ ವೆಸ್ಟ್; ಬಟ್ ವೀ ಬೋತ್ ಬಿಲಾಂಗ್ಸ್‌ಟು ಈಸ್ಟ್ ಅಂಡ್ ವೆಸ್ಟ್… ಸಂಹೌವ್; ವೀ ಕೆನ್ ಟಾಲರೇಟ್ ದಿಸ್ ವರ್ಲ್ಡ್‌’ ಎಂದೆ. ಬಂದೆವು ನಮ್ಮ ಹೊಂಟಾನಿಗೆ… ಗೆಳೆಯರೆಲ್ಲ ಬಯ್ದರು. ಎಲ್ಲಿಗೆ ಹಾಳಾಗಿ ಹೋಗಿದ್ದೆಯೊ ಮಾರಾಯಾ ಎಂದು ತಬ್ಬಿ ಹಿಡಿದುಕೊಂಡಿದ್ದ ಆರ್.ಎಂ.ಜಗದೀಶ್. ತೀರ್ಥಹಳ್ಳಿಯ ನನ್ನ ಜೂನಿಯರ್ ಆಗಿದ್ದವನು. ನೋಡಲು ಸಿನಿಮಾ ನಟನಂತಿದ್ದ. ಅಂತಹ ಗೆಳೆಯರ ದೊಡ್ಡ ಪಟ್ಟಿಯೇ ಇದೆ. ಕರ್ಕಿ ರಮೇಶ ಅತ್ಯಂತ ಸೂಕ್ಷ್ಮಸಂವೇದಿ ಪ್ರತಿಭಾವಂತ. ನಾವೆಲ್ಲ ಸೇರಿ ಗುಂಡು ಪಾರ್ಟಿ ಮಾಡಿದೆವು. ಆಗ ತಾನೆ ಹುಡುಗಿಯರು ನನ್ನತ್ತ ನೋಡತೊಡಗಿದ್ದರು. ಜೀಶಂಪ ಅವರಿಗೆ ವರದಿ ಒಪ್ಪಿಸಿದೆವು. ಮೈಕೇಲ್ ಅಮೆರಿಕೆಗೆ ಹಿಂತಿರುಗಬೇಕಿತ್ತು. ಮೈಕೇಲ್ ಜೀಶಂಪ ಅವರ ಮುಂದೆ ನನ್ನ ಗುಣಗಾನ ಮಾಡುತ್ತಿದ್ದ. ಇವನಿಂದ ಉಪಯೋಗ ಆಯಿತೇ ಎಂದು ಕೇಳಿದ್ದರು. `ಒಹ್! ಈ ಈಸ್ ಸೊ ಫ್ಯಾಬುಲಸ್… ಜೀನಿಯಸ್… ವೆರಿ ಕ್ರಿಯೇಟಿವ್; ಸೋ ಸ್ಪಾಂಟೇನಿಯಸ್. ಈ ಈಸ್… ನೋಡೌಟ್… ಮೋರ್ ದ್ಯೆನ್ ಎ ಪ್ರೊಪೇಸರ್… ಐ ಬಿಕಂ ಅಸ್ಟಾನಿಸ್ಡ್; ವೈಲ್ ಈ ಅಸಿಮಿಲೇಟಿಂಗ್ ಸೈಮಲ್ಟೇನಿಯಸಲೀ ಸೋಮನಿ ಮಲ್ಟಿಪಲ್ ಥಿಂಕ್ಸ್… ವೈ ಡೊಂಟ್ ಯೂ ಅಪಾಯಿಂಟ್ ಇವ್ ಆ್ಯಸ್ ಎ ಫುಲ್ ಟೈಂ ಪ್ರೊಪೇಸರ್’ ಎಂದು ನನ್ನ ಬಗ್ಗೆ ಒಂದು ಎಕ್ಸಲೆಂಟ್ ಕಾಂಪ್ಲಿಮೆಂಟ್ಸ್ ಅನ್ನೆ ನೀಡಿಬಿಟ್ಟಿದ್ದ. ಅವನು ಕೊಟ್ಟಿದ್ದ ದುಡ್ಡೆಲ್ಲವನ್ನು ಅತ್ತ ಪುಸ್ತಕಗಳ ಹಾಳೆ ಮರೆಗೆ ಬಿಸಾಡಿದ್ದೆ. ಆ ಎಕ್ಸಲೆನ್ಸಿ ಆ ಪುಸ್ತಕಗಳ ಹಾಳೆಗಳಿಂದಲೂ ನನಗೆ ಬಂದಿತ್ತು. ಮೈಕೇಲ್ ಜೊತೆ ಊಟ ಮಾಡಿದೆ. ಅವನ ಪುಟ್ಟ ಮಕ್ಕಳ ಮುದ್ದಿಸಿದೆ. ಕಳಿಸಿಕೊಟ್ಟೆ.

ಏನೊ ಕಳೆದುಕೊಂಡಂತೆ ವಾರವೆಲ್ಲ ಪರದಾಡಿದೆ. ಆ ಕಪ್ಪು ಚೆಲುವೆ ಒಂದೆರಡು ಸಲ ಕನಸಿಗೆ ಬಂದಿದ್ದಳು. ನನ್ನ ತಲೆಯಲ್ಲಿ ಯಾಕೆ ಬಂದು ಕೂತುಕೊಂಡಿದ್ದಾಳೆ ಎಂದು ಅನುಕಂಪಗೊಂಡೆ. ಸಂಸ್ಥೆಯ ವಿದ್ವನ್‌ಮಣಿಗಳು ತಿಳಿದುಕೊಂಡಿದ್ದೆ ಬೇರೆ. ಅವನು ಆ ಅಮೆರಿಕಾದವನ ತಿಕಾ ತೊಳೆಯಲು ಜೊತೆಗೆ ಹೋಗಿದ್ದನಂತೆ ಎಂದು ಆಡಿಕೊಂಡಿದ್ದರು. ನಾನು ಎಂದೊ ಹೇಸಿಗೆಯ ಗುಂಡಿಯ ಬಾಲ್ಯದಲ್ಲಿ ತೊಳೆದಿದ್ದು ನೆನಪಾಯಿತು. ಬೇಸರವಾಗಲಿಲ್ಲ. ಮೈಕೇಲ್ ಮೂಲಕ ತುಂಬ ಕಲಿತಿದ್ದೆ. ಯಾತನಾ ಶಿಬಿರಗಳ ಘೋರವಾದ ಕಥೆಗಳ ಆತ ಹೇಳುತ್ತಿದ್ದಂತೆಯೇ ನಾನೇ ಗ್ಯಾಸ್ ಛೇಂಬರಿನಲ್ಲಿ ವಿಷಗಾಳಿಗೆ ಹೀಡಾಗಿ ಕಿರುಚಾಡಿದಂತಾಗುತ್ತಿತ್ತು. ಆ ಎತ್ತರದ ಚಿಮಣಿಗಳಲ್ಲಿ ದಟ್ಟವಾಗಿ ತೇಲಿ ಹೋಗುತ್ತಿದ್ದ ಉರಿವ ಹೆಣಗಳ ಹೊಗೆಯ ವಾಸನೆಯನ್ನು ಮೈಕೇಲ್ ವಿವರಿಸುವಾಗ ತಾನೇ ಅಸ್ವಸ್ಥನಾಗಿ ಬಿಡುತ್ತಿದ್ದ. ಅದೆಲ್ಲ ನರಕವ ಉಂಡು ಬದುಕಿದ್ದವರ ಅನುಭವಗಳು ಅವನ ಆದ್ರತೆಯಲ್ಲಿ ಹೆಪ್ಪುಗಟ್ಟಿ ಬರುತ್ತಿದ್ದವು. ನನಗೆ ಈ ಇಡೀ ದೇಶವೇ ವಿಶ್ವದ ಅತ್ಯಂತ ದೊಡ್ಡ ಯಾತನಾ ಶಿಬಿರದಂತೆ ಗೋಚರಿಸುತಿತ್ತು. ಜಗತ್ತಿನ ಹಿಂಸೆಯ ಮೂಲಗಳನ್ನು ಹುಡುಕಾಡಿದ್ದೆ. ವ್ಯರ್ಥವಾದ ಯಾವುದೊ ಕ್ಷುಲ್ಲಕ ದೈನಂದಿನ ಉಸಾಬರಿಗಳಲ್ಲಿ ಕಳೆದು ಹೋಗಲು ನಾನು ತಯಾರಿಲಿಲ್ಲ. ಒಂಟಿಯಾಗಿರುವುದೇ ಹೆಚ್ಚು ಹಿತ ಎನಿಸುತಿತ್ತು. ನನ್ನ ಹಳ್ಳಿಯ ಬೇರುಗಳ ಬಗೆದು ಬಿಸಾಡಬೇಕು ಎಂದು ಸಿದ್ಧನಾಗಿದ್ದೆ. ಆದರೆ ಗಂಗೋತ್ರಿಯ ಬಗೆಗೂ ನನಗೆ ವಿಶ್ವಾಸ ಇರಲಿಲ್ಲ. ಉನ್ನತ ಶಿಕ್ಷಣದ ಈ ಪ್ರತಿಷ್ಠಿತ ಸಮಾಜವೇ ಅತ್ಯಂತ ಭಯಾನಕ ಎನಿಸಿತ್ತು. ಇಪ್ಪತ್ತನೇ ಶತಮಾನ ಎಲ್ಲ ರೀತಿಯಲ್ಲು ಉತ್ತುಂಗದ ಅವಸ್ಥೆಯನ್ನು ಕಂಡಿತ್ತಲ್ಲವೇ… ಆದರೆ ಆ ಯುಗದಲ್ಲೇ ಎರಡು ಮಹಾಯುದ್ಧಗಳು ಘಟಿಸಿದವು. ಅಪಾರ ಸಂಖ್ಯೆಯಲ್ಲಿ ಸಾವು ನೋವುಗಳಾದವು. ಜಿನೊಸೈಡ್ ಅಣುಬಾಂಬಿನಂತೆ ಸಿಡಿದಿತ್ತು. ಅದರ ಕರಿನೆರಳು ಈಗೀಗ ನಮ್ಮ ದೇಶದ ನೆತ್ತಿಯ ಮೇಲೆಯೇ ತೂಗುತ್ತಿದೆ ಎನಿಸಿ ಭಯವಾಗಿತ್ತು. ಆದರೂ ಭಂಡನಾಗಿದ್ದೆ. ನಾನೂ ಸಿಡಿಯುವಂತಿದ್ದೆ. ನನ್ನ ನಡತೆ ಬಗ್ಗೆ ಅಪಪ್ರಚಾರಗಳು ರೆಕ್ಕೆ ಪುಕ್ಕ ಬೆಳೆಸಿಕೊಳ್ಳುತ್ತಿದ್ದವು. ಅವನು ನಕ್ಸಲರ ಜೊತೆಗೆ ಇದ್ದವನು ಎಂದು ಮತ್ತೆ ಮತ್ತೆ ನೆನಪಿಸಿ; ಇಂತವನಿಂದ ವಿದ್ಯಾರ್ಥಿಗಳು ಬಂದೂಕಿನ ಪಾಠ ಕಲಿಯಬೇಕೆ ಎಂದು ಚಕಾರ ಎತ್ತಿದ್ದರು.

ಜೀಶಂಪ ಮತ್ತೆ ಕರೆಸಿ `ಇದೆಲ್ಲ ಏನು’ ಎಂದು ಕೇಳಿದ್ದರು. `ಗೊತ್ತಿಲ್ಲ’ ಎಂದಿದ್ದೆ. `ನಾಳೆ ಯಾರಾದರೂ ನಿನ್ನ ಪ್ರಾಣಕ್ಕೇ ಕುತ್ತು ತರುತ್ತಾರೆ ಎಂದುಕೊ… ಆಗಲೂ ಗೊತ್ತಿಲ್ಲ ಎನ್ನುವೆಯಾ’ ಎಂದು ರೇಗಿದರು. ತಲೆ ತಗ್ಗಿಸಿದೆ. ಉಗುಳು ನುಂಗಿಕೊಂಡೆ. `ನಾನೇನು ಮಾಡಬೇಕು ಹೇಳೂ’ ಎಂದರು. `ನಿಮಗೆ ಬೇಸರವಾದರೆ ಬಿಟ್ಟು ಹೋಗುವೆ ಸಾರ್.’ `ಎಲ್ಲಿಗೆ ಹೋಗ್ತೀಯೇ… ಏನ್ಮಾಡ್ತೀಯೆ… ಇದು ಒಂದು ವ್ಯವಸ್ಥೆ! ಕ್ರಾಂತಿಯ ಕಾರ್ಯಾಗಾರ ಅಲ್ಲ’ ಎಂದು ಸಿಟ್ಟಾದರು. ಹೋಗುವೆ ಎಂಬಂತೆ ಕೈ ಮುಗಿದೆ. ಇದ್ದೇ ಇದೆಯಲ್ಲಾ ಕೆ.ಆರ್.ಮಾರ್ಕೆಟ್… ಅಲ್ಲೊಬ್ಬ ಸಿದ್ದರಾಜಣ್ಣ ಇದ್ದಾನಲ್ಲಾ… ಅದೇ ಸುಖಾ, ಅದೇ ನಿಜಾ… ಇದೆಲ್ಲ ವಿದ್ಯಾವಂತರ ಕ್ರೂರ ಕಾಡು. ಇಲ್ಲಿರುವ ಬದಲು ಬದುಕಲು ಒಂದು ದಿನದ ಕೆಲವೇ ಗಂಟೆಗಳ ಕೂಲಿ ಸಾಕಲ್ಲವೇ ಎನಿಸಿ ವಿದಾಯದ ಮಾತುಗಳು ನಾಲಿಗೆಯ ತುದಿಗೆ ಬಂದವು. ಕೂತುಕೊ ಎಂದರು. ನಿಂತೇ ಇದ್ದೆ. `ಪರವಾಗಿಲ್ಲ ಕೂರು… ಮುಂದಿನ ವಾರ ನಾವು ಆದಿಚುಂಚನಗಿರಿ ಬೆಟ್ಟಕ್ಕೆ ಟ್ರಿಪ್ ಹೋಗುವುದಿದೆ. ಎಲ್ಲ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬೇಕು. ನಿನಗಲ್ಲಿ ಜವಾಬ್ದಾರಿ ಇದೆ. ಮೈಕೇಲ್ ಮೂರು ತಿಂಗಳು ಕಳೆದು ಮತ್ತೆ ಬರುತ್ತಾನೆ. ಭವಿಷ್ಯ ರೂಪಿಸಿಕೊ ಎಂದು ಚಹಾ ಕುಡಿಸಿ ಸಮಾಧಾನ ಹೇಳಿದ್ದರು. ನನ್ನ ದುಡುಕುತನ ಇನ್ನೂ ಹದ್ದುಬಸ್ತಿಗೆ ಬಂದಿರಲಿಲ್ಲ. ಆ ಟ್ರಿಪ್ ಪ್ರತಿ ವರ್ಷ ಇತ್ತು. ಅದು ಜೀಶಂಪ ಅವರ ಕಡ್ಡಾಯ ಪ್ರೀತಿ. ಅವರ ಸ್ವಂತ ಊರು ಬೆಟ್ಟದ ತಪ್ಪಲಲ್ಲೆ ಇತ್ತು. ಮೇಲೆ ಚುಂಚನಗಿರಿ ಮಠ ಇತ್ತು. ಅದೊಂದು ಸುಂದರ ನೆಲೆ. ಅಲ್ಲಿಗೆ ಈ ಹಿಂದೆ ಮೈಕೇಲ್ ಜೊತೆ ಹೋಗಿದ್ದೆ. ಮನಸ್ಸು ಹಗುರವಾಗಿತ್ತು. ಎಲ್ಲ ಸಿದ್ಧತೆಗಳು ಅವು ತಂತಾನೆ ಆಗಿದ್ದವು. ಯೂನಿವರ್ಸಿಟಿಯ ಮಿನಿಬಸ್ಸಲ್ಲಿ ಹೋಗುವ ದಿನ ಬಂದಿತ್ತು. ಮುಂಚಿತವಾಗಿ ಜೀಶಂಪ ತಮ್ಮ ಊರಿಗೆ ಕಾರಲ್ಲಿ ಹೋಗಿದ್ದರು. ಮುಂಜಾವಲ್ಲೆ ಹೊರಟಿದ್ದೆವು. ಹತ್ತು ಗಂಟೆಗೆಲ್ಲ ಬೆಟ್ಟದ ತಟದಲ್ಲಿ ಇದ್ದೆವು. ಬೆಟ್ಟ ಏರಲು ಎಲ್ಲರೂ ಮಂಗಗಳಂತೆ ತುದಿಗಾಲಲ್ಲಿ ನಿಂತಿದ್ದೆವು.