ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಕೃಷ್ಣ ಜನ್ಮಾಷ್ಟಮಿಗಾಗಿ ಹೇಮಾ ಬರೆದ  ಕವಿತೆಗಳು.

ಕೃಷ್ಣಾರ್ಪಣೆ

ನನ್ನ ಕಷ್ಟಗಳನ್ನೆಲ್ಲಾ
ನಿನ್ನ ಕೊಳಲಿನಲ್ಲಿ
ನುಡಿಸಿಬಿಡು ಕೃಷ್ಣಾ
ಸುಖದ ಗಾನವಾಗಿಬಿಡಲಿ.

ನನ್ನ ಕಷ್ಟಗಳನ್ನೆಲ್ಲಾ ಹೆಣೆದು
ನಿನ್ನ ಕೊರಳಿನ ಹಾರ
ಮಾಡಿಕೊ ಕೃಷ್ಣಾ
ಎಂದಿಗೂ ಉರುಳಾಗದಿರಲಿ.

ನನ್ನ ಕಷ್ಟಗಳನ್ನೆಲ್ಲಾ ಸುರಿದು
ನಿನ್ನ ಕಾಲಿನ
ಗೆಜ್ಜೆ ಮಾಡಿಕೊ ಕೃಷ್ಣಾ
ಯಾರ ಕಾಲಿಗೂ ಮುಳ್ಳಾಗದಿರಲಿ.

ನನ್ನ ಕಷ್ಟಗಳನ್ನೆಲ್ಲಾ
ನಿನ್ನ ಒಡವೆಯ
ವಜ್ರವಾಗಿಸಿಕೊ ಕೃಷ್ಣಾ
ಕೂತುಬಿಡಲಿ ಅಲ್ಲೇ ಗಟ್ಟಿಯಾಗಿ.

ನನ್ನ ಕಷ್ಟಗಳನ್ನೆಲ್ಲಾ
ನಿನ್ನ ಕೊಳದ ನೀರಾಗಿಸಿಕೊ ಕೃಷ್ಣಾ
ನಿನ್ನ ಚೇಷ್ಟೆಗದು
ಇಂಗಿಹೋಗಲಿ.

ಕೊಳ

ಕೃಷ್ಣ ಕಾಲಾಡಿಸಿ ಹೋದ
ಕೊಳದಲ್ಲಿ
ನೂರಾರು ರಾಧೆಯರು

ಮೈ ತೊಳೆಯುತ್ತಾರೆ
ಕೃಷ್ಣನನ್ನು ಬೊಗಸೆ ತುಂಬಿ ಕುಡಿಯುತ್ತಾರೆ
ಎದೆಯ ಮೇಲೆ ಸುರಿಯುತ್ತಾರೆ
ಬೆತ್ತಲಾಗುತ್ತಾರೆ
ಕತ್ತಲಿಗೂ ಕಾಯದೆ !