ಅವರಿಗೆ ಸುಲಭವೆನಿಸಿದ ಲೆಕ್ಕವನ್ನು, ‘ಒಂದಲ್ಲ ನಾಲ್ಕು ಸಲ ಕೇಳಿ ಹೇಳಿ ಕೊಡ್ತಿನಿ’ ಎನ್ನುತ್ತಿದ್ದರು. ಅದೇ ಸಲುಗೆಯ ಮೇಲೆ ಹುಡುಗರೇನಾದರೂ ‘ಇದು ಅರ್ಥ ಆಗ್ಲಿಲ್ಲ ಯಂಗೆ ಸರ್’ ಎಂದು ಕೇಳಿದರೆ ಉಪಾಯವಾಗಿ ತಾವಿರುವಲ್ಲಿಯ ಬೋರ್ಡ್ ಹತ್ತಿರಕ್ಕೆ ಕರೆಸಿಕೊಂಡು. ‘ಇಂಥ ಸುಲಭದ್ದು ಅರ್ಥ ಆಗ್ಲಿಲ್ವ, ಹೇಳಿ ಕೊಡ್ಬೇಕಾದ್ರೆ ಯತ್ತಗೆ ನೋಡ್ತಿರ್ತಿರ, ಎಲ್ಲಾರ ದನ ಕಾಯದ ಬಿಟ್ಟು, ಸ್ಕೂಲಿಗೆ ಯಾಕೆ ಬತ್ತಿರ’ ಎಂದು ಒಂದೇ ಉಸಿರಿಗೆ ಬೈಯುತ್ತ ಕನಿಷ್ಠ ಎರೆಡು ಕೋಲು ಮುರಿಯುವವರೆಗೂ ಹೊಡೆಯುತ್ತಿದ್ದರು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ‘ಟ್ರಂಕು-ತಟ್ಟೆ’ ಸರಣಿಯ ಏಳನೆಯ ಕಂತು

 

ಶೌಚಾಲಯ ಉದ್ಘಾಟನೆ

ಅಂದುಕೊಂಡಂತೆಯೇ ಹೊಸ ಕಟ್ಟಡದಲ್ಲಿ ಆರೇಳು ರೂಮುಗಳಿದ್ದವು. ನಾವು ತಂಗುವ ರೂಮುಗಳಿಗಿಂತ ಕಕ್ಕಸ್ಸು ಹಾಗು ಸ್ನಾನದ ರೂಮುಗಳ ಬಗೆಗೆ ಹೆಚ್ಚಿನ ಆಸಕ್ತಿ ಹೊಂದಿದ್ದೆವು. ಅದುವರೆಗೂ ಅದನ್ನು ನೋಡಿರದ ನಾವು ಅವು ಹೇಗಿರುತ್ತವೆ, ಎಲ್ಲಿರುತ್ತವೆ ಎಂಬುದರ ಬಗ್ಗೆ ಕುತೂಹಲಿಗಳಾಗಿದ್ದೆವು. ಸಾಲಿನ ಕೊನೇ ರೂಮುಗಳೇ ಅವು ಎಂದು ತಿಳಿದು ಒಟ್ಟಿಗೆ ಅಲ್ಲಿಗೆ ಓಡಿದೆವು. ಕಂದು ಬಣ್ಣದ ದೊಡ್ಡ ಬಾಗಿಲನ್ನು ದೂಕಿ ಒಳ ನಡೆದಾಗ ಎದಿರು ಬದುರಿಗೆ ತಲಾ ಎರಡರಂತೆ ನಾಲ್ಕು ಸ್ನಾನದ ರೂಮುಗಳಿದ್ದವು. ಅಕ್ಕ ಪಕ್ಕದಲ್ಲಿದ್ದ ಎರೆಡು ಸ್ನಾನಗೃಹಗಳನ್ನು ಬೇರ್ಪಡಿಸಲಿಕ್ಕಿದ್ದ ಮಧ್ಯದ ಗೋಡೆ ಮೋಟಾಗಿದ್ದುದರಿಂದ ನಮ್ಮ ಹುಡುಗರು ಚಿಲಕದ ನೆರವಿನಿಂದ ಅದರ ಮೇಲತ್ತಿ ಕುಳಿತು ಕೋತಿಯಂತೆ ಕೆಳಕ್ಕೆ ಇಣುಕಿ ನೋಡಿ ಖುಷಿಪಟ್ಟರು. ಗೋಡೆಯಿಂದ ಉದ್ಭವವಾದಂತಿದ್ದ ನಲ್ಲಿಯನ್ನು ತಿರುಗಿಸಿ ನೋಡಿದರು. ನೀರು ಬರುತ್ತಿರಲಿಲ್ಲ, ನಿರಾಶರೂ ಆಗಲಿಲ್ಲ. ಅದನ್ನು ದಾಟಿ ಮುಂದೆ ಹೋದಾಗ ಸಾಲಾಗಿ ನಾಲ್ಕು ಹೊಚ್ಚ ಹೊಸ ಶೌಚಗೃಹಗಳಿದ್ದವು. ಬೆಳ್ಳಗೆ ಹೊಳೆಯುತ್ತಿದ್ದ ಬೇಸಿನ್‌ಗಳಿಗೆ ನೆಲ್ಲುಲ್ಲು ಮತ್ತು ನೀವ್ಸ್ ಪೇಪರ್‍ಗಳನ್ನು ತುಂಬಿದ್ದರು. ಯಾಕೆಂಬ ಕಾರಣವಾಗಲಿ ಅದರ ಬಳಕೆಯಾಗಲಿ ನಮಗೆ ಅರ್ಥವಾಗಲಿಲ್ಲ. ನಮ್ಮ ಜೊತೆಯೇ ಇದ್ದ ಹುಚ್ಚುಚ್ಚ (ಶಶಿಯ ಅಡ್ಡ ಹೆಸರು) ತಡ ಮಾಡದೆ ಚಡ್ಡಿಯಿಂದ ಹೊರ ತೆಗೆದು ಉಚ್ಚೆ ಬಿಡತೊಡಗಿದ. ಉಳಿದ ನಾವೂ ಆತನನ್ನು ಅನುಸರಿಸಲು ಸಿದ್ಧಗೊಳ್ಳುತ್ತಿರುವಾಗಲೇ ‘ಭಟ್ರು ಕೋಲು ತಗಂಡು ಓಡಿಸ್ಕಂಡು ಬರ್ತಾ ಅವ್ರೆ ತಪ್ಪಿಸ್ಕಳ್ರಿ’ ಎಂದು ಯಾರೊ ಕೂಗಿಕೊಂಡರು. ಅದನ್ನು ಕೇಳಿ ನಮ್ಮ ಉಚ್ಚೆಗಳು ಅರ್ಧಕ್ಕೆ ನಿಂತು ಕ್ಷಣಾರ್ಧದಲ್ಲಿ ಹೊರಕೋಗಲು ನೂಕು ನುಗ್ಗಲು ಏರ್ಪಟ್ಟಿತು. ಭಟ್ರು ಹುಡುಗರನ್ನು ಗದರಿಸಿ ನೀರಿಲ್ಲದ ಶೌಚಾಲಯದಿಂದ ಚದುರಿಸಿದರು. ಆರೇಳು ರೂಮುಗಳಿದ್ದರೂ ಮೊದಲ ದಿನವಾದ ಅಂದು ನಮ್ಮನ್ನೆಲ್ಲ ದೊಡ್ಡದಾದ ಒಂದೇ ರೂಮಿಗೆ ತುಂಬಿ ‘ನಾಳೆ ಬೆಳಗ್ಗೆ ನಿಮ್ಮನ್ನ ವರ್ಗೀಕರಿಸುವುದಾಗಿ’ ಹೇಳಿ ವಾರ್ಡನ್ ಹೊರಟು ಹೋದರು.

ಮರುದಿನ ಬೆಳಗ್ಗೆ ಎಂದಿಗಿಂತ ಮುಂಚೆ ಎದ್ದ ನಾವು ಸೀದ ಸ್ನಾನಗೃಹಗಳ ಕಡೆ ನಡೆದೆವು. ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ಕಂಡು ಹಿರಿ ಹಿರಿ ಹಿಗ್ಗಿದೆವು. ತಕ್ಷಣವೆ ಸೋಪು ಟವಲ್ ಹೊಂಚಿಕೊಂಡು ಸ್ನಾನಕ್ಕಿಳಿದು ಚಲ್ಲಾಟವಾಡತೊಡಗಿದೆವು. ಶತಮಾನದ ಬರವನ್ನು ನೀಗಿಸಿಕೊಳ್ಳುವಂತೆ ಅಂದು ಎಲ್ಲರದ್ದು ಸ್ನಾನವೋ ಸ್ನಾನ. ಎಂಟರ ಸುಮಾರಿಗೆ ವಾರ್ಡನ್ ಬಂದು, ಎಲ್ಲವನ್ನೂ ಒಮ್ಮೆ ಕಣ್ಣಾಡಿಸಲು ಶೌಚಾಲಯದ ಕಡೆ ನಡೆದರು. ಅಲ್ಲಿ ಅವರಿಗೆ ಆಘಾತ ಕಾದಿತ್ತು. ನಮ್ಮ ಹುಡುಗರು ಬಳಸುವ ಬಗೆ ತಿಳಿಯದೆಯೋ, ಅಥವ ಅನ್ಯ ಮಾರ್ಗವಿಲ್ಲದೆಯೋ ಬೇಸನ್ನಿನ ಬಾಯಿಗೆ ತುರುಕಿದ್ದ ನೆಲ್ಲುಲ್ಲನ್ನು ತೆಗೆಯದೆಯೇ ಅದರ ಮೇಲೆಯೇ ಕಕ್ಕ ಮಾಡಿದ್ದರು. ಕಕ್ಕದ ಮೇಲೆ ಕಕ್ಕ ಕೂತು ಕಕ್ಕೋತ್ಸವವೇರ್ಪಟ್ಟಿತ್ತು. ಕಾರಣಾಂತರದಿಂದ ನೀರು ಕೂಡ ಅಲ್ಲಿಗೆ ಹತ್ತದೆ ಒಣ ಶೌಚದಲ್ಲಿ ಹಸಿಕಕ್ಕ! ಕೆಂಡಾ ಮಂಡಲಾದ ವಾರ್ಡನ್ ಕೈಗೆ ಸಿಕ್ಕಿದವರನ್ನ ರುಬ್ಬಿ ಕೋಪವನ್ನು ಹತೋಟಿಗೆ ತಂದುಕೊಂಡರು. ಆ ನಂತರ ಅಲ್ಲಿಗೆ ನೀರು ಹರಿಯುವಂತೆ ಮಾಡಿ ನಮ್ಮಿಂದಲೇ ಶುದ್ಧಿಕಾರ್ಯ ಇಟ್ಟುಕೊಂಡರು.

ಸಂಜೆ ಶಾಲೆ ಮುಗಿಸಿಕೊಂಡು ಬಂದಾಗ ವಾರ್ಡನ್ ಮೊದಲು ಮಾಡಿದ ಕೆಲಸ ವಿದ್ಯಾರ್ಥಿಗಳನ್ನು ಎರಡು ರೂಮಿಗೆ ಹಂಚಿದುದೇ ಆಗಿತ್ತು. ಅದಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಸನಿಹವಾಗಿದ್ದು, ಅವರ ಓದಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಕಲ್ಪಿಸಲೋಸುಗ ಸುಮಾರು ಹತ್ತು ಜನರಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಒಂದು ಕೊಠಡಿಗೆ ಬಿಟ್ಟರು. ಅವರಷ್ಟೇ ಅಲ್ಲದೆ ವಿವಿಧ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಮ್ ತೆಗೆದುಕೊಂಡು ಓದುತ್ತಿದ್ದ ಕೆಲವರನ್ನೂ ಅವರೊಟ್ಟಿಗೆ ಸೇರಿಸಿದರು. ಈ ಕೋಟಾದಡಿಯಲ್ಲಿ ಅದೇ ವರ್ಷ ಎಂಟನೇ ತರಗತಿಗೆ ಎಸ್‌ವಿಪಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಮ್‌ಗೆ ಪ್ರವೇಶ ಪಡೆದಿದ್ದ ನಾನು ಕೂಡ ದೊಡ್ಡ ಹುಡುಗರ ಜೊತೆ ಸೇರಿಕೊಂಡೆ. ಹಲವು ಸೌಲಭ್ಯಗಳಿದ್ದ ಹೊಸ ಕಟ್ಟಡಕ್ಕೆ ಶಿಫ್ಟ್ ಆದದ್ದೇನೊ ಸರಿ, ಆದರೆ ಈಗ ಮತ್ತೊಂದು ಸಮಸ್ಯೆ ಎದುರಾಯಿತು. ಹಾಲ್ಕುರ್ಕೆ ರೋಡಿನಲ್ಲಿದ್ದ ಹೊಸ ಹಾಸ್ಟೆಲ್‌ಗೂ ನಾವು ಓದುತ್ತಿದ್ದ ಹಳೆ ಶಾಲೆಗಳಿಗೂ ಕಿಲೋಮೀಟರ್ ಗಟ್ಟಲೆ ಅಂತರವಾಯಿತು.

ಮೊದಲಿದ್ದ ಹಾಸ್ಟೆಲ್ ಆ ದಿಕ್ಕಿನಲ್ಲಿದ್ದುದರಿಂದ ನಮ್ಮ ಶಾಲೆಗಳು ಅದರ ಸುತ್ತ ಇರುತ್ತಿದ್ದವು. ಈಗ ಹಾಸ್ಟೆಲ್ ಇನ್ನೊಂದು ದಿಕ್ಕಿಗೆ ಬಂದಿತಾದರೂ ಶಾಲೆಗಳು ಅಲ್ಲೆ ಉಳಿದವು. ಬೇಗ ತಿಂಡಿ ಊಟವನ್ನೆಲ್ಲ ಮುಗಿಸಿಕೊಂಡು ಹಾಸ್ಟೆಲ್ ಬಿಟ್ಟರೆ ಮಾತ್ರ ಪ್ರೇಯರ್‍ಗೆ ಹೋಗಲು ಸಾಧ್ಯವಾಗುತ್ತಿತ್ತು. ಬೆಳಗ್ಗೆ ಸಂಜೆ ನಡೆದು ಬಸವಳಿಯುವ ಸ್ಥಿತಿ ಹುಡುಗರದ್ದಾಯಿತು. ತಕ್ಷಣದಲ್ಲೇ ಇದಕ್ಕೂ ಒಂದು ಪರಿಹಾರ ಕಂಡುಕೊಂಡೆವು. ಹಾಲ್ಕುರ್ಕೆ ಮಾರ್ಗವಾಗಿ ಹೇರಳವಾಗಿ ಖಾಸಗಿ ಬಸ್‍ಗಳು ತಿಪಟೂರು ಪ್ರವೇಶಿಸುತ್ತಿದ್ದವು. ಅದರಲ್ಲೂ ಶಾಲಾ ಸಮಯದಲ್ಲಿ ಅತಿಯಾಗೆ ಇದ್ದವು. ಬೇಗನೆ ತಿಂಡಿ ತಿಂದು ಐ.ಬಿ ಸರ್ಕಲ್ ಹತ್ತಿರ ನಿಂತು ಬಸ್ಸಿಗಾಗಿ ಕಾಯತೊಡಗಿದೆವು. ಆ ಸಮಯದಲ್ಲಿ ಬರುತ್ತಿದ್ದ ಪ್ರತೀ ಬಸ್ಸು ವಿಪರೀತ ರಷ್ ಆಗಿರುತ್ತಿದ್ದವು. ಬಸ್‌ನ ಟಾಪ್‌ನಲ್ಲೆಲ್ಲ ಜನವೋ ಜನ. ವೇಗವಾಗಿ ಬರುತ್ತಿದ್ದ ಬಸ್ಸುಗಳು ನಿಗದಿತ ಸ್ಥಳದಲ್ಲಿ ನಿಲ್ಲದೆ ಎಷ್ಟೋ ದೂರ ಮುಂದಕ್ಕೋಗಿ ನಿಲ್ಲುತ್ತಿದ್ದವು. ಕಾಯುತ್ತಿದ್ದ ನಾವು ಬಸ್ ಹಿಡಿಯಲು ಓಡುತ್ತಿದ್ದೆವು. ಆದರೂ ಅವು ನಮ್ಮ ಪುಟ್ಟ ಕೈಗಳಿಗೆ ಸಿಗುತ್ತಿರಲಿಲ್ಲ. ಎಲ್ಲೋ ಯಾವಾಗಲೋ ಒಮ್ಮೆ ಸಿಗುತ್ತಿದ್ದ ಬಸ್ಸಿನ ಒಳಕ್ಕೆ ನಮ್ಮನ್ನು ಹತ್ತಿಸಿಕೊಳ್ಳುತ್ತಿರಲಿಲ್ಲ. ಹಿಂದಿನಿಂದ ಕಂಬಿ ಹಿಡಿದುಕೊಂಡು ಮೇಲಕ್ಕತ್ತಬೇಕಿತ್ತು. ಮೇಲೂ ಕೂಡ ರಷ್ ಆಗಿರುತ್ತಿತ್ತು. ಹಲವು ಸಲ ಕಂಬಿ ಮೇಲೆ ನಿಂತೇ ಪ್ರಯಾಣಿಸುತ್ತಿದ್ದೆವು. ಕಂಡಕ್ಟರ್ ದುಡ್ಡು ಕೇಳಿದರೆ ಕೊಡಲು ಇರುತ್ತಿರಲಿಲ್ಲ. ಮೊದ ಮೊದಲು ಚಾರ್ಜ್ ಕೇಳುತ್ತಿದ್ದ ಕಂಡಕ್ಟರ್‍ಗಳು ಆನಂತರ ಸ್ಕೂಲ್ ಹುಡುಗರು ಎಂಬ ಕಾರಣಕ್ಕೊ ಏನೊ ಕೇಳುತ್ತಿರಲಿಲ್ಲ.

ಟು ಒನ್ ಜಾ ಟು

ನಮ್ಮ ಮೇಷ್ಟ್ರು ಚಿಕ್ಕಪ್ಪನ ಮಕ್ಕಳೆಲ್ಲರೂ ಎಂಟನೇ ತರಗತಿಗೆ ಇಂಗ್ಲಿಷ್ ಮೀಡಿಯಮ್‌ಗೆ ಸೇರಿಕೊಳ್ಳುತ್ತಿದ್ದುದರಿಂದ ಅವರನ್ನು ಅನುಕರಿಸುವುದಷ್ಟೇ ನಮ್ಮ ಕುಟುಂಬದವರ ಆಯ್ಕೆಯಾಗಿರುತ್ತಿತ್ತು. ನಿಮಿತ್ತ ನನ್ನನ್ನೂ ಕೂಡ ಒಂದು ದಿನ ಅಪ್ಪ ಬಂದು ಹರಳಿಕಟ್ಟೆ ಬಳಿ ಇದ್ದ ಎಸ್.ವಿ.ಪಿ ಸ್ಕೂಲ್‌ಗೆ ಇಂಗ್ಲಿಷ್ ಮೀಡಿಯಮ್‌ಗೆ ಸೇರಿಸಿತು. ನನ್ನ ತರಗತಿಯಲ್ಲಿದ್ದ ಬಹುತೇಕ ಹುಡುಗರು ಕಾನ್ವೆಂಟ್‌ನಿಂದ ಓದಿಕೊಂಡು ಬಂದವರಾಗಿದ್ದರು. ನೋಡಲಿಕ್ಕೂ ದುಂಡು ದುಂಡಾಗಿದ್ದ ಅವರು ಬಹುತೇಕ ಇಂಗ್ಲಿಷ್‌ನಲ್ಲೇ ಮಾತಾಡುತ್ತಿದ್ದರು. ಅಲ್ಲಿನ ಶಿಕ್ಷಕರುಗಳ ಭಾಷೆ ಇರಲಿ, ಸಹ ವಿದ್ಯಾರ್ಥಿಗಳ ಮಾತೂ ಕೂಡ ನನಗೆ ಅರ್ಥವಾಗುತ್ತಿರಲಿಲ್ಲ. ಮೊದಲ ದಿನದ ಮಧ್ಯಾಹ್ನದ ಅವಧಿಗೆ ಬಂದ ಗಣಿತದ ಮೇಷ್ಟ್ರು ಎಲ್ಲಾ ವಿದ್ಯಾರ್ಥಿಗಳನ್ನು ಕುರಿತು ಟೇಬಲ್ಸ್ ಹೇಳಿರಿ ಎಂದರು. ಒಬ್ಬೊಬ್ಬರಂತೆ ಎದ್ದ ವಿದ್ಯಾರ್ಥಿಗಳು ‘ಟು ಒನ್ ಜಾ ಟು, ಟು ಟು ಜಾ ಫೋರ್’ ಎಂದು ಶುರು ಮಾಡಿಕೊಂಡು ಕೊನೆ ಮುಟ್ಟುತ್ತಿದ್ದರು. ನನ್ನ ಸರದಿ ಬಂದಾಗ ಏನು ಹೇಳಬೇಕು ಇದುವರೆಗೂ ನಾನು ಇದನ್ನು ಕಲಿತೇ ಇಲ್ಲವಲ್ಲ ಎಂದು ಹಿಂಸೆ ಪಟ್ಟುಕೊಳ್ಳತೊಡಗಿದೆ. ಸರದಿ ಬಂದೇ ಬಿಟ್ಟಿತು.

ಹಿಂದಿನ ವಿದ್ಯಾರ್ಥಿಗಳ ತುಟಿ ಮತ್ತು ಧ್ವನಿ ಚಲನೆಯನ್ನು ಗ್ರಹಿಸಿ ‘ಟು ಒನ್ ಜಾ ಟು, ಟು ಟು ಜಾ ಫೋರ್’ಎಂದಷ್ಟೇ ಹೇಳಿದೆ. ಮುಂದಿನದು ಏನೂ ಕಾಣಲಿಲ್ಲ. ಸುಮ್ಮನೆ ನಿಂತುಕೊಂಡೆ. ಕುರ್ಚಿ ಮೇಲಿದ್ದ ಮೇಷ್ಟ್ರು ಉದ್ದದ ಕೋಲು ತೆಗೆದುಕೊಂಡು ಶರವೇಗದಲ್ಲಿ ಬಂದು ‘ರಾಸ್ಕಲ್, ಯೂಸ್ ಲೆಸ್ ಫೆಲೊ, ಎಂಟ್ನೇಕ್ಲಾಸಿಗೆ ಬಂದಿದಿಯ ಮಗ್ಗಿ ಕಲ್ತಿಲ್ಲ’ ಎಂದು ಕನ್ನಡದಲ್ಲೇ ಬೈದು ಕೆಚ್ಚಿದ ಮಕ್ಕೆ ಕೆಚ್ಚಿದರು. ಅವರು ಬೈಯ್ಯುವಾಗ ಮಗ್ಗಿ ಎಂದು ಬಳಸಿದಾಗಲೇ ನನಗೆ ಗೊತ್ತಾದದ್ದು ‘ಟು ಒನ್ ಜಾ ಟು’ ಎಂದರೆ ಮಗ್ಗಿ ಎಂದು. ಅಷ್ಟೊತ್ತಿಗಾಗಲೆ ತೀವ್ರ ದಾಳಿಗೆ ತುತ್ತಾಗಿದ್ದ ನಾನು ನಿರುತ್ತರನಾದೆ. ಆಶ್ಚರ್ಯವೆಂದರೆ ನಮ್ಮೂರ ಶಾಲೆಯಲ್ಲಿ ಎರಡನೇ ಕ್ಲಾಸ್ ಓದುವಾಗಲೇ ನಾನು ಇಪ್ಪತ್ತರವರೆಗೆ ಮಗ್ಗಿ ಕಲಿತಿದ್ದೆನೆಂಬ ಕಾರಣಕ್ಕೆ ಶಿಕ್ಷಕರಿಂದ ಪ್ರಶಂಸೆಗೊಳಗಾಗಿ, ನಾಲ್ಕನೇ ತರಗತಿ ವಿದ್ಯಾರ್ಥಿಗಳಿಗೆ ಮಗ್ಗಿ ಹೇಳಿಕೊಡಲು ಹೋಗುತ್ತಿದ್ದೆ.

ನಲ್ಲಿಯಲ್ಲಿ ಬರುತ್ತಿದ್ದ ನೀರನ್ನು ಕಂಡು ಹಿರಿ ಹಿರಿ ಹಿಗ್ಗಿದೆವು. ತಕ್ಷಣವೆ ಸೋಪು ಟವಲ್ ಹೊಂಚಿಕೊಂಡು ಸ್ನಾನಕ್ಕಿಳಿದು ಚಲ್ಲಾಟವಾಡತೊಡಗಿದೆವು. ಶತಮಾನದ ಬರವನ್ನು ನೀಗಿಸಿಕೊಳ್ಳುವಂತೆ ಅಂದು ಎಲ್ಲರದ್ದು ಸ್ನಾನವೋ ಸ್ನಾನ.

ಪ್ರತಿ ದಿನದ ಮೊದಲ ಅವಧಿಯನ್ನು ತರಗತಿ ಶಿಕ್ಷಕರಾಗಿದ್ದ ಎಸ್.ಸಿ.ಬಿ ಎಂಬುವರು ತೆಗೆದುಕೊಳ್ಳುತ್ತಿದ್ದರು. ಅವರು ಅಟೆಂಡೆನ್ಸ್ ಹಾಕಿ ಹುಡುಗರ ವ್ಯಾಜ್ಯಗಳನ್ನು ಬಗೆ ಹರಿಸುವಷ್ಟರಲ್ಲಿ ಪೀರಿಯಡ್ ಮುಗಿದು ಹೋಗುತ್ತಿತ್ತು. ತಂದಿದ್ದ ಮರದ ಜಾಮಿಟ್ರಿ ಬಾಕ್ಸ್‌ನ್ನು ಎತ್ತಿಕೊಂಡು ನಾಳೆ ಬರುವುದಾಗಿ ಹೇಳಿ ಹೋಗುತ್ತಿದ್ದರು. ನಾಳೆಯೂ ಇದೇ ಕತೆಯಾಗುತ್ತಿತ್ತು. ಹಾಗಾಗಿ ಎಸ್.ಸಿ.ಬಿ. ಕ್ಲಾಸ್ ಎಂದರೆ ನನಗೆ ಇದ್ದುದರಲ್ಲಿ ಇಷ್ಟವಾಗುತ್ತಿತ್ತು.

ಎರಡನೇ ಅವಧಿಗೆ ಬೀಜಗಣಿತದವರು ಬರುತ್ತಿದ್ದರು. ಅವರು ಕುರ್ಚಿಯಿಂದ ಮೇಲೇಳುವುದು ಅಪರೂಪವಾಗಿರುತ್ತಿತ್ತು. ಎದ್ದರೆಂದರೆ ಬಿತ್ತು ಎಂದೇ ಅರ್ಥ. ಬರುವಾಗಲೇ ಉದ್ದದ ಕೋಲಿನೊಂದಿಗೆ ಕೊಠಡಿ ಪ್ರವೇಶಿಸುತ್ತಿದ್ದರು. ಅವರಿಗೆ ಸುಲಭವೆನಿಸಿದ ಲೆಕ್ಕವನ್ನು ಒಂದಲ್ಲ ನಾಲ್ಕು ಸಲ ಕೇಳಿ ಹೇಳಿ ಕೊಡ್ತಿನಿ ಎನ್ನುತ್ತಿದ್ದರು. ಅದೇ ಸಲುಗೆಯ ಮೇಲೆ ಹುಡುಗರೇನಾದರೂ ‘ಇದು ಅರ್ಥ ಆಗ್ಲಿಲ್ಲ ಯಂಗೆ ಸರ್’ ಎಂದು ಕೇಳಿದರೆ ಉಪಾಯವಾಗಿ ತಾವಿರುವಲ್ಲಿಯ ಬೋರ್ಡ್ ಹತ್ತಿರಕ್ಕೆ ಕರೆಸಿಕೊಂಡು. ‘ಇಂಥ ಸುಲಭದ್ದು ಅರ್ಥ ಆಗ್ಲಿಲ್ವ, ಹೇಳಿ ಕೊಡ್ಬೇಕಾದ್ರೆ ಯತ್ತಗೆ ನೋಡ್ತಿರ್ತಿರ, ಎಲ್ಲಾರ ದನ ಕಾಯದ ಬಿಟ್ಟು, ಸ್ಕೂಲಿಗೆ ಯಾಕೆ ಬತ್ತಿರ’ ಎಂದು ಒಂದೇ ಉಸಿರಿಗೆ ಬೈಯುತ್ತ ಕನಿಷ್ಠ ಎರಡು ಕೋಲು ಮುರಿಯುವವರೆಗೂ ಹೊಡೆಯುತ್ತಿದ್ದರು. ಇದನ್ನು ಕಂಡು ನನ್ನಂಥ ಕೊನೆ ಹುಡುಗರಿರಲಿ ಚನ್ನಾಗಿ ಓದುವ ಹುಡುಗರೂ ಸಹ ಅವರಲ್ಲಿ ಅನುಮಾನ ಬಗೆಹರಿಸಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ.

ಅವರು ಪ್ರತಿ ದಿನ ಕ್ಲಬ್‌ಗೆ ಇಸ್ಪೀಟ್ ಆಡಲು ಹೋಗುತ್ತಾರೆ, ಅಲ್ಲಿ ದುಡ್ಡು ಕಳೆದುಕೊಂಡ ಸಿಟ್ಟನ್ನು ವಿದ್ಯಾರ್ಥಿಗಳ ಮೇಲೆ ತೀರಿಸಿಕೊಳ್ಳುತ್ತಾರೆ ಎಂದು ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ಮಾತಾಡಿಕೊಳ್ಳುತ್ತಿದ್ದರು. ಕನ್ನಡಕ್ಕೆ ಬರುತ್ತಿದ್ದ ಮೇಷ್ಟ್ರು ಆಗಿನ ಕಾಲದಲ್ಲೆ ಕಾರ್‍ನಲ್ಲಿ ಬರುತ್ತಿದ್ದರು. ಕನ್ನಡದ ಕಥೆಗಳನ್ನು ಅತ್ಯಂತ ಸ್ವಾರಸ್ಯಕರವಾಗಿ ಹೇಳುತ್ತಿದ್ದ ಅವರು, ಕನ್ನಡ ವಿಷಯವನ್ನು ವಿದ್ಯಾರ್ಥಿಗಳು ನೆಗ್ಲೆಕ್ಟ್ ಮಾಡದಂತೆ ಏಟಿನ ಭಯವಿಕ್ಕಿ ಹೇಳಿಕೊಡುತ್ತಿದ್ದರು. ಕನ್ನಡ ವ್ಯಾಕರಣಕ್ಕೆ ಹೆಚ್ಚು ಮಹತ್ವ ಕೊಟ್ಟು ಬೋಧಿಸುತ್ತಿದ್ದ ಅವರಿಗೆ ಸಾಬರ ಹುಡುಗರನ್ನ ಕಂಡರೆ ಎಲ್ಲಿಲ್ಲದ ಕೋಪ. ತುಂಬು ತರಗತಿಯಲ್ಲೆ ಸಾಬರ ಹುಡುಗರನ್ನ ‘ರೀ ಸಾಬ್ರೆ ಎದೇಳ್ರಿ, ಸಮಾಸ ಅಂದ್ರೆ ಏನ್ರಿ?’ ಎಂದು ಕೇಳಿ ‘ತಿನ್ನ ಸಮೋಸ ಅಲ್ಲ’ ಎಂದು ಅವರ ಆಹಾರ ಪದ್ಧತಿಯನ್ನ ಕೆಣಕಿ, ಬಗ್ಗಿಸಿಕೊಂಡು ಕುಂಡಿ ಮೇಲೆ ಬರೆ ಬೀಳುವ ಹಾಗೆ ಕೊಟ್ಟು ಕುಳ್ಳಿರಿಸುತ್ತಿದ್ದರು.

ಈ ಎಲ್ಲಾ ವಿಚಿತ್ರ ಪಾತ್ರಗಳು ಕೊಡುವ ಶಿಕ್ಷೆಗಳಿಂದಾಗಿ ಶಾಲೆ ಅಕ್ಷರಶಃ ನರಕವಾಗಿ ಹೋಯಿತು. ಈ ಮೊದಲು ಎಸ್.ವಿ.ಪಿ. ಶಾಲೆಗೆ ಸೇರುವುದು ಹಲವು ಕಾರಣಕ್ಕೆ ನನಗೆ ಆಸಕ್ತಿದಾಯಕವಾಗಿತ್ತು. ಏಳನೇ ತರಗತಿಯವರೆಗೂ ಚಡ್ಡಿ ಹಾಕಿಯೇ ಶಾಲೆಗೋಗುತ್ತಿದ್ದ ನನಗೆ ಎಂಟನೇ ತರಗತಿಯ ಪ್ರವೇಶ ಮೊದಲ ಬಾರಿಗೆ ಪ್ಯಾಂಟ್ ಧರಿಸುವ ಅವಕಾಶ ಒದಗಿಸುತ್ತೆ ಎಂಬುದಾದರೆ, ಹೆಚ್ಚುವರಿಯಾಗಿ ಕಡ್ಡಾಯವಾಗಿ ಪ್ರತಿ ದಿನ ಶೂ ಹಾಕಿಯೇ ಶಾಲೆಗೆ ಹೋಗಬೇಕಿತ್ತು. ಇವೆರೆಡೂ ನಮ್ಮಪ್ಪನಿಗೆ ದುಬಾರಿ ಎಂಬುದು ನಿಜವಾದರೂ ನನ್ನ ಕುತೂಹಲ ಮತ್ತು ಆಸೆ ಈಡೇರಿಕೆಗೆ ಈ ಶಾಲೆ ಉತ್ತಮ ಅವಕಾಶವಾಗಿತ್ತು. ಈ ಎಲ್ಲ ಆಕಾಂಕ್ಷೆಗಳ ಭ್ರಮೆ ಕಳಚಲು ನನಗೆ ಹೆಚ್ಚೇನು ಸಮಯ ಹಿಡಿಯಲಿಲ್ಲ. ಶಾಲೆ ಪ್ರಾರಂಭವಾದ ಒಂದೆರೆಡು ತಿಂಗಳಲ್ಲೇ ಆ ಶಾಲೆಯ ಬಂಡವಾಳ ನಮಗೂ, ನಮ್ಮ ಬಂಡವಾಳ ಶಾಲೆಗೂ ತಿಳಿದು ತರಗತಿಯನ್ನು ಬಿಟ್ಟು ಸುತ್ತತೊಡಗಿದೆವು.

ಹೊಸ ಹಾಸ್ಟೆಲ್ ಬದುಕು ಪ್ರಾರಂಭದೊಂದಿಗೆ ಒಂದು ಎಡವಟ್ಟು ಮೇಳೈಸಿಕೊಂಡಿತು. ನಮ್ಮೂರಿನಲ್ಲಿ ನನ್ನೊಟ್ಟಿಗೆ ತನ್ನ ಅಜ್ಜಿ ಮನೆಯಲ್ಲಿ ಐದನೇ ತರಗತಿಯವರೆಗೆ ಓದಿದ್ದ ಹುಡುಗಿಯೊಬ್ಬಳು ಆರನೇ ತರಗತಿ ಓದಲು ತನ್ನ ತಾಯಿ ನೌಕರಿಯಲ್ಲಿದ್ದ ತಿಪಟೂರಿಗೆ ವರ್ಗಾವಣೆಗೊಂಡು ಬಂದಿದ್ದಳು. ಅವರಿದ್ದ ಬಾಡಿಗೆ ಮನೆ ನಮ್ಮ ಹೊಸ ಹಾಸ್ಟೆಲ್‌ನ ಎದುರು ಬೀದಿಯಲ್ಲೆ ಇತ್ತು. ಅವರು ನೀರಿಗೆ ಹಾಲಿಗೆ ಪ್ರತಿಯೊಂದಕ್ಕೂ ಹಾಸ್ಟೆಲ್ ಮುಂದೆಯೇ ತಿರುಗಾಡಬೇಕಿತ್ತು. ಬೆಳ್ಳಗಿದ್ದ ಆಕೆಯನ್ನು ಕಂಡರೆ ನಾನು ನಾಚಿ ನೀರಾಗುತ್ತಿದ್ದೆ. ನಮ್ಮ ನೆಂಟರ ಹುಡುಗರಿಗೆಲ್ಲ ಈ ವಿಷಯ ಗೊತ್ತಿದ್ದು ನನ್ನನ್ನು ರೇಗಿಸಲು ಅವಳ ಹೆಸರಿಡಿದು ಕರೆಯುತ್ತಿದ್ದರು. ಒಂದು ದಿನ ಬೆಳ್ಳಂ ಬೆಳಗ್ಗೆ ಆಕೆ ತನ್ನ ತಮ್ಮನೊಂದಿಗೆ ಟ್ಯೂಷನ್ ಮುಗಿಸಿಕೊಂಡು ಹಾಸ್ಟೆಲ್ ಹಿಂದಿನ ದಾರಿಯಿಂದ ಮನೆಗೆ ವಾಪಾಸ್ಸಾಗುತ್ತಿದ್ದಳು. ಕಿಟಕಿಯಲ್ಲಿ ಕಾದುಕೊಂಡಿದ್ದ ಹುಡುಗರ ಗುಂಪು, ನಾನು ಬೇಡ ಬೇಡವೆಂದು ಅಂಗಾಲಾಚಿದರೂ ಬಿಡದೆ ಆಕೆಯ ಹೆಸರಿಡಿದು ಜೋರಾಗಿ ಕೂಗಿದರು. ಆಕೆ ತಿರುತಿರುಗಿ ನೋಡಿಕೊಂಡು ಹೋಗಿದ್ದಳು. ಈ ವಿಷಯದಲ್ಲಿ ಹೆದರುತ್ತಿದ್ದ ನನ್ನನ್ನು ಆಕೆಯ ಹೆಸರಿಡಿದು ಕೂಗಿ ಬ್ಲಾಕ್‌ಮೇಲ್ ಮಾಡುತ್ತಿದ್ದರು.

ಮದುವೆ ಊಟದ ಸವಿ

ಹಾಸ್ಟೆಲ್ ಹಿಂಭಾಗದಲ್ಲಿ ಕೆ.ಇ.ಬಿ. ಕ್ವಾಟ್ರಸ್ ಇತ್ತು. ಅಲ್ಲಿ ನಮಗೆ ಪ್ರಭಣ್ಣನೆಂಬ ಆಪತ್ಬಾಂಧವನಿದ್ದ. ಆಟೋ ಓಡಿಸುತ್ತಿದ್ದ ಆತನನ್ನು ಹುಡುಗರೆಲ್ಲ ರೌಡಿ ಎಂದು ನಂಬಿದ್ದರು. ನಮ್ಮ ಮಾವನ ಶಿಷ್ಯನಾದ ಆತ(ಡಿ.ಎಸ್.ಎಸ್ ಕಾರ್ಯಕರ್ತ) ನಮ್ಮ ಕಷ್ಟಕ್ಕೆ ಕೂಡಲೆ ಧಾವಿಸಿ ಬರುತ್ತಿದ್ದ. ನಮಗೆ ತೊಂದರೆ ಕೊಡುತ್ತಿದ್ದ ಹುಡುಗರಿಗೆ ಅವನದೇ ಭಾಷೆಯಲ್ಲಿ ಅವಾಜ್ ಬಿಟ್ಟು ಹೋಗುತ್ತಿದ್ದ. ಅದನ್ನು ಕಂಡು ಹುಡುಗರೆಲ್ಲ ಪ್ರಭಣ್ಣನಿಗೆ ಹೆದರಿ ನಮ್ಮ ತಂಟೆಗೆ ಬರುತ್ತಿರಲಿಲ್ಲ. ಪ್ರಭಣ್ಣನ ಅಣ್ಣ ಕೆ.ಇ.ಬಿ. ನೌಕರನಾಗಿದ್ದರಿಂದ ಕ್ವಾಟ್ರಸ್‌ನಲ್ಲಿ ಅವರ ಮನೆ ಇತ್ತು. ಶಾಲೆಗೆ ಚಕ್ಕರ್ ಹೊಡೆಯುತ್ತಿದ್ದ ನಾವು (ಭಗತ್, ಮುರುಳಿ, ಜೇಪಿ, ರೋಹಿತ್) ಮಧ್ಯಾಹ್ನದ ಹೊತ್ತು ಟಿವಿಯಲ್ಲಿ ಬರುತ್ತಿದ್ದ ಸಿನಿಮಾ ನೋಡಲು ಅವರ ಮನೆಗೆ ಪಾಟಾಗಿದ್ದೆವು. ಮನೆಯಲ್ಲಿರುತ್ತಿದ್ದ ಪ್ರಭಣ್ಣನ ಅತ್ತಿಗೆ ನಮ್ಮನ್ನು ಪ್ರೀತಿ ಗೌರವದಿಂದ ಕಂಡು ಒಂದು ದಿನವೂ ‘ಸ್ಕೂಲಿಗೆ ಯಾಕೆ ಹೋಗಿಲ್ಲ’ ಎಂದು ಕೇಳದೆ ಮಧ್ಯೆ ಮಧ್ಯೆ ಟೀ ಕಾಫಿ ಮಾಡಿಕೊಡುತ್ತಿತ್ತು.

ಹೊಸ ಹಾಸ್ಟೆಲ್‌ನಲ್ಲಿ ನನ್ನ ಒಡನಾಟ ಹತ್ತನೆ ತರಗತಿ ಹುಡುಗರೊಂದಿಗೆ ಹೆಚ್ಚಿಗೆ ಇತ್ತು. ಸೂರ್ಯ, ಚಂದ್ರ ಎಂಬ ಹೆಸರಿಗೆ ತಕ್ಕಂತೆ ಬೆಳ್ಳಗೂ ಕರ್ರಗೂ ಇದ್ದ ಸ್ನೇಹಿತರಿದ್ದರು. ಶಂಕರ ಎಂಬ ಇನ್ನೊಬ್ಬನನ್ನು ‘ನರಿ’ ಎಂದು ಕರೆಯುತ್ತಿದ್ದರು. ಭಾನುವಾರದ ಒಂದು ಮಧ್ಯಾಹ್ನ ತರಾತುರಿಯಲ್ಲಿ ಎಲ್ಲಿಗೋ ರೆಡಿಯಾಗುತ್ತಿದ್ದರು. ಒಂಟಿಯಾಗಿದ್ದ ನನ್ನನ್ನು ಬಿಟ್ಟೋಗಲಾಗದೆ ‘ಬರುತ್ತೀಯ?’ ಎಂದರು. ಕಾದುಕೊಂಡಿದ್ದ ನಾನೂ ಸಿದ್ಧನಾದೆ. ಹಾಸ್ಟೆಲ್ ಮುಂದಿನ ಸೀದಾ ದಾರಿಯಲ್ಲಿ ನಡೆದುಕೊಂಡು ಹೊರಟೆವು. ಸುಮಾರು ದೂರ ನಡೆದೋದ ನಂತರ ಒಂದು ಚೌಲ್ಟ್ರಿ ಸಿಕ್ಕಿತು. ಅಲ್ಲಿ ನಡೆಯುತ್ತಿದ್ದ ವಿವಾಹದ ನೇಮ್ ಬೋರ್ಡ್ ರೋಡಿಗೆ ಆನಿಸಿಕೊಂಡಿತ್ತು. ಚಂದ್ರನ ಮಾರ್ಗದರ್ಶನದಲ್ಲಿ ಬಲಕ್ಕೆ ತಿರುಗಿ ಅಲ್ಲಿದ್ದ ಮೆಟ್ಟಿಲು ಹತ್ತಿ ಸೀದ ಡೈನಿಂಗ್ ಹಾಲ್ ತಲುಪಿದೆವು. ಕೊನೆ ಪಂಕ್ತಿ ಎನಿಸುತ್ತೆ, ಜನ ವಿರಳವಾಗಿದ್ದರು. ಕೆಳಗಡೆ ರಿಸೆಪ್ಷನ್ ನಡೆಯುತ್ತಿತ್ತು. ಸಿದ್ಧವಾಗಿದ್ದ ಬಾಳೆ ಎಲೆ ಹಿಂದೆ ಕುಳಿತುಕೊಂಡೆವು.

ನಮ್ಮ ಪಕ್ಕದ ಕುರ್ಚಿಗಳು ಖಾಲಿ ಇದ್ದವು. ಮಕ ಮಕ ನೋಡುತ್ತಿದ್ದ ಬಕೀಟುದಾರಿಗಳು ಕೊನೆಗೂ ತಂದು ಬಡಿಸಿದರು. ಲಾಡು, ಪಾಯಸ, ಮೈಸೂರ್ ಪಾಕ್, ಪಲಾವ್, ಹಪ್ಳ, ಉಪ್ಪಿನಕಾಯಿ, ಮಜ್ಜಿಗೆ ಅದ್ಭುತ! ಕಾಲಿ ಇದ್ದ ನಮ್ಮ ಪಕ್ಕದ ಕುರ್ಚಿಗಳು ನಂತರದಲ್ಲಿ ನಮ್ಮಂತೆಯೇ ಬಂದಿದ್ದ ಬೇರೆ ಬೇರೆ ಹುಡುಗರಿಂದ ತುಂಬತೊಡಗಿದವು. ಅವರು ಕೈ ಕಾಲು ತೊಳೆಯದೆ, ತಲೆ ಬಾಚಿರದೆ ಗಲೀಜು ಗಲೀಜಾಗಿ ಕಾಣುತ್ತಿದ್ದರು. ಅವರ ಕಣ್ಣಿಗೆ ನಾವೂ ಹಾಗೇ ಕಂಡಿರಬಹುದು. ಹಾಸ್ಟೆಲ್‌ಗೆ ಹಿಂತಿರುಗುವಾಗ ಹೊಸರುಚಿಗಳನ್ನು ಸವಿದ ಉಲ್ಲಾಸ ನನ್ನಲ್ಲಿತ್ತು. ಹೊಟ್ಟೆ ತುಂಬಿದ್ದಕ್ಕೆ ತೇಗು ಬರುತ್ತಿತ್ತು. ದಿನವೂ ಹೀಗೆ ಆದರೆ ಎಷ್ಟು ಚಂದ ಎಂದುಕೊಂಡು ಹಾಸ್ಟೆಲ್‌ಗೆ ವಾಪಾಸ್ ಆದೆ.