ಬಹುಶ್ರುತ ಪ್ರತಿಭೆಯ ವಿಮರ್ಶಕ, ಜಂಗಮ ರೂಪದ ಕಥನಕಾರ ಡಾ.ರಹಮತ್ ತರೀಕೆರೆ ಕನ್ನಡದ ಹೊಸ ತಲೆಮಾರಿನ ಬರಹಗಾರರ ಕುರಿತು ಬರೆದಿರುವ ಲೇಖನ ಮಾಲೆಯ ಮೊದಲ ಕಂತು ಇಲ್ಲಿದೆ. ಈ ಸರಣಿಯ ಮುಂದಿನ ಲೇಖನಗಳು ಇನ್ನು ಮುಂದೆ ಪ್ರತಿ ಗುರುವಾರ ಇಲ್ಲಿ ಕಾಣಿಸಿಕೊಳ್ಳಲಿದೆ. 

ಅರುಣ್ ಜೋಳದಕೂಡ್ಲಿಗಿ

ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ `ಬಯಲು ಸಾಹಿತ್ಯ ವೇದಿಕೆ’ ಎಂಬ ಒಂದು ಸಂಘಟನೆಯಿತ್ತು. ಅದೊಂದು ತರಹ ನಮ್ಮ ಹಿರಿಯ ತಲೆಮಾರಿನ ಲೇಖಕರು ಕಟ್ಟಿಕೊಂಡಿದ್ದ `ಗೆಳೆಯರ ಗುಂಪ’ನ್ನು ಹೋಲುವಂತಹುದು. ಅಲ್ಲಿ ಕೆಲವು ಯುವ ಲೇಖಕರು ವರ್ಷಕ್ಕೊಂದಾವರ್ತಿ ಕಲೆತು, ಯಾರಾದರೊಬ್ಬ ಹಿರಿಯ ಲೇಖಕರನ್ನು ಮುಂದಿಟ್ಟುಕೊಂಡು, ತಮ್ಮ ಬರೆಹದ ಸುಖದುಃಖಗಳನ್ನು ಹಂಚಿಕೊಳ್ಳುತ್ತಿದ್ದರು. ಈ ಸಾಹಿತ್ಯ ವೇದಿಕೆಯಿಂದ ಅನೇಕ ಜೀವಪರ ಲೇಖಕರು ಹೊಮ್ಮಿದರು. ಅವರು ವೇದಿಕೆಯಿಂದಲೇ ಹೊರಹೊಮ್ಮಿದವರು ಎಂಬುದಕ್ಕಿಂತ ವೇದಿಕೆಯಲ್ಲಿ ಅವರು ತಮ್ಮನ್ನು ತಾವು ಮಸೆದುಕೊಂಡು ಸ್ಪಷ್ಟತೆ ಪಡೆದುಕೊಂಡರು ಎನ್ನುವುದೇ ಹೆಚ್ಚು ಸರಿ.

ಆದರೆ ಬಯಲು ಸಾಹಿತ್ಯ ವೇದಿಕೆಯಿಂದ ಎಷ್ಟು ಲೇಖಕರು ರೂಪುಗೊಂಡರು ಎಂಬುದಕ್ಕಿಂತ ಅಲ್ಲಿ ಸೇರುತ್ತಿದ್ದ ಎಷ್ಟು ಲೇಖಕ ಲೇಖಕಿಯರು ಪರಸ್ಪರ ವರಿಸಿ ಬಾಳಸಂಗಾತಿಗಳಾದರು ಎಂಬ ಬಗ್ಗೆ ಅದರ ವಿರೋಧಿಗಳು ಲೆಕ್ಕ ಇಟ್ಟಿರುವುದುಂಟು. ವೇದಿಕೆಯ ಗುಪ್ತ ಅಜೆಂಡಾವೇ ಲಗ್ನದ್ದಾಗಿದ್ದು, ಸೂಕ್ತ ಸಂಗಾತಿಗಳು ಸಿಕ್ಕ ಬಳಿಕ ಬಯಲು ಸಾಹಿತ್ಯ ವೇದಿಕೆ ಬಯಲಾಯಿತು ಎಂದು ಅವರು ಆಪಾದನೆ ಮಾಡುತ್ತಾರೆ. ಹತ್ತು ವರ್ಷಗಳ ಬಳಿಕ ನೋಡುವಾಗ, ಬೆಂಗಳೂರಿನಾಚೆ ಸ್ಥಳೀಯ ಮಟ್ಟದಲ್ಲಿದ್ದ ಇಂಥ ಲೇಖಕರ ಗುಂಪುಗಳು, ಬರೆಹದ ಗುಟ್ಟುಗಳನ್ನೊ ಸಮಸ್ಯೆಗಳನ್ನೊ ಹಂಚಿಕೊಂಡಿದ್ದಕ್ಕಿಂತ, ನಮ್ಮ ಸುತ್ತಣ ಸಮಾಜದ ಬಗ್ಗೆ ವಿಮರ್ಶಾತ್ಮಕವಾದ ಜಾತ್ಯತೀತವಾದ ಧೋರಣೆಯನ್ನು ರೂಪಿಸಿಕೊಂಡವು ಎಂಬುದೇ ನನಗೆ ಮುಖ್ಯವಾಗಿ ಕಾಣುತ್ತದೆ. ಅರುಣ್ ಆ ವೇದಿಕೆಯಲ್ಲಿ ಸಕ್ರಿಯವಾಗಿದ್ದ ಲೇಖಕರಲ್ಲಿ ಒಬ್ಬರು.

ಯುವ ಲೇಖಕಿಯರ ವಿಳಾಸ ಮತ್ತು ಸೆಲ್ ನಂಬರ್ ಬೇಕಾದರೆ ಅರುಣ್ ಗೆ ಕೇಳಬೇಕು ಎಂಬ ಖ್ಯಾತಿಯನ್ನು ಗೆಳೆಯರಲ್ಲಿ ಗಳಿಸಿರುವ ಅರುಣ್, ಕುಂವೀಯವರ ಕೊಟ್ಟೂರು ಸೀಮೆಯವರು. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಪುಟ್ಟಹಳ್ಳಿ ಜೋಳದಕೂಡ್ಲಿಗಿಯವರು. ತಂದೆ ಸಣ್ಣರೈತ. ತಾಯಿ ಅಂಗನವಾಡಿಯ ಕಾರ್ಯಕರ್ತರು. ಈ ಕಾರ್ಯಕರ್ತೆಯರ ಕಷ್ಟಗಳನ್ನು ಪ್ರಜಾವಾಣಿಯ ವಾಚಕರ ವಾಣಿಗೆ ಬರೆಯುವ ಮೂಲಕವೇ ಬರೆಹದ ಕಲೆ ಕಲಿತುಕೊಂಡೆ ಮೂಲತಃ ಕವಿಯಾಗಿರುವ ಅರುಣ್, ಕೆಲವು ಅತ್ಯುತ್ತಮ ಕವಿತೆಗಳನ್ನು ಬರೆದಿರುವರು. ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂಎ ಪದವಿ ಪಡೆದಿದ್ದು, ಕರ್ನಾಟಕದಲ್ಲಿ ಈತನಕ ನಡೆದಿರುವ ಜಾನಪದ ಅಧ್ಯಯನಗಳನ್ನು ತಾತ್ವಿಕವಾಗಿ ವಿಶ್ಲೇಷಣೆ ಮಾಡುವಂತಹ ಪಿಎಚ್.ಡಿ., ಸಂಶೋಧನೆಯನ್ನು ಮುಗಿಸಿರುವರು. ಸದ್ಯ ಮೈಸೂರಿನ ಸಿಐಐಎಲ್ನಲ್ಲಿ ಭಾಷೆ ಕುರಿತ ಒಂದು ಯೋಜನೆಯಲ್ಲಿ ಸಹಾಯಕರಾಗಿ ಕೆಲಸದಲ್ಲಿರುವರು. ಈತನಕ ಅರುಣ್ ಎರಡು ಪುಸ್ತಕಗಳನ್ನು ಹೊರತಂದಿದ್ದಾರೆ. ಒಂದು- `ನೆರಳು ಮಾತನಾಡುವ ಹೊತ್ತು’ (2004) ಎಂಬ ಕವನ ಸಂಕಲನ. ಇನ್ನೊಂದು- `ಸೊಂಡೂರು ಭೂಹೋರಾಟ’ (2008) ಎಂಬ ಸಂಶೋಧನ ಕೃತಿ. ಅನೇಕ ಪತ್ರಿಕಾ ಬರೆಹಗಳನ್ನೂ ಸಣ್ಣಕತೆಗಳನ್ನೂ ಬಿಡಿಬಿಡಿಯಾಗಿ ಪ್ರಕಟಿಸಿರುವ ಅರುಣ್, ಅವಕ್ಕೆ ವಿಶ್ವವಿದ್ಯಾಲಯ ಮತ್ತು ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ತಮ್ಮ ಕವಿತೆಗಳಿಗೆ ಪ್ರಜಾವಾಣಿ ಕಾವ್ಯಸ್ಪರ್ಧೆಯಲ್ಲಿ ಎರಡು ಬಾರಿ ಪ್ರಶಸ್ತಿಯನ್ನೂ ದೊರಕಿಸಿಕೊಂಡಿದ್ದಾರೆ.

ಜೀವಂತಿಕೆಯಿಂದ ಪುಟಿಯುವ ಅರುಣ್, ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಬರೆಯುತ್ತ ಲೇಖಕರಾಗಿ ರೂಪುಗೊಂಡವರು. ನಮ್ಮ ಗ್ರಾಮಬದುಕಿನಲ್ಲಿರುವ ಬಾಳಿನ ಹೋರಾಟವನ್ನೂ ಮಾನವ  ಪ್ರೀತಿಯನ್ನೂ ಸಣ್ಣತನ ಮತ್ತು ಕೊಳಕನ್ನೂ ಬರೆಹದಲ್ಲಿ ಮಿಡಿಸಿದವರು. ಅವರ ಬರೆಹದಲ್ಲಿ ಪ್ರೀತಿಗಾಗಿ ಹಾತೊರೆಯುವ ಜೀವವೊಂದರ ತುಡಿತಗಳಿವೆ. ಅದರಲ್ಲೂ ಅವರ ಪ್ರೇಮಪದ್ಯಗಳು ಬಹಳ ತೀವ್ರವಾಗಿವೆ. ಹೀಗೆ ಏಕಕಾಲಕ್ಕೆ ಆರ್ದ್ರವಾದ ಪ್ರೇಮಪ್ರೀತಿಯನ್ನೂ ಸಾಮಾಜಿಕ ರಾಜಕೀಯ ವಿದ್ಯಮಾನಗಳ ಬಗ್ಗೆ ನಿಷ್ಠುರವಾದ ನಿಲುವನ್ನೂ  ಒಳಗೊಂಡಿರುವುದು ಹೊಸತಲೆಮಾರಿನ ಬಹುತೇಕ ಲೇಖಕರ ಗುಣವಾಗಿದೆ. ಇವರ ಜತೆಗೆ ಹೊರಜಗತ್ತಿನ ಬಗ್ಗೆ ಕಾಳಜಿಯಿಲ್ಲದ, ನಿರಾಳವಾದ ಸ್ಥಿತಿಯಲ್ಲಿ ಒಂದು ಅಂತರ್ಮುಖಿ ಜಗತ್ತನ್ನು ಕಟ್ಟಿಕೊಳ್ಳುವ ಲೇಖಕರೂ ಇದ್ದಾರೆ. ಅವರಲ್ಲಿ `ರಾಜಕೀಯ’ ಎನ್ನಲಾಗುವ ವಿದ್ಯಮಾನಗಳ ಬಗ್ಗೆ ಒಂದು ಬಗೆಯ ಕೋಮಲ ಹಿಂಜರಿಕೆ, ನಿರ್ಲಿಪ್ತತೆ ಅಥವಾ ಅತಿ ಹುಷಾರುತನ ಇವೆ. ಲಹರಿ ರೂಪದಲ್ಲಿ ಮನದೊಳಗಿನ ಹೂಹಗುರ ಭಾವಗಳಿಗೆ ರೂಪಕೊಡುವ ಕಲಾತ್ಮಕತೆ ಅವರಿಗೆ ಪ್ರಿಯ. ಬರೆಹದ ಈ ಮನೋಧರ್ಮವನ್ನು ಕೆಲವು ಪತ್ರಿಕೆಗಳು ಅಥವಾ ಲೇಖಕರು ಮುಂದೆ ನಿಂತು ಓರಿಯಂಟ್ ಮಾಡಿರುವುದುಂಟು. ಸಾಮಾಜಿಕವಾಗಿ ಎಲ್ಲವನ್ನೂ ಎದುರಾಳಿ ಪರಿಕಲ್ಪನೆಯಲ್ಲೇ ಮಣಿಸಿ ನೋಡುವ ಆಕ್ರೋಶದಲ್ಲಿ ಹೂಂಕರಿಸುವ ಮನೋಧರ್ಮದಂತೆ, ಈ ಬಗೆಯ ವರ್ತಮಾನದ ದರ್ದಿಲ್ಲದ ನಿರಾಳತೆಯ ಮನೋಧರ್ಮ ಕೂಡ ಸಾಹಿತ್ಯದಲ್ಲಿ ಅನೇಕ ಮಿತಿಗಳಿಗೆ ಕಾರಣವಾಗಿದೆ.

ಆದರೆ ದಿಗ್ಭ್ರಮೆ ಮೂಡಿಸುವಂತಹ ವಿದ್ಯಮಾನಗಳು ಜರುಗುವ, ದಾರಿದ್ರ್ಯ ಮತ್ತು ಗುಡ್ಡೆಬಿದ್ದಿರುವ ಸಂಪತ್ತು ಎಂಬ ಅತಿಗಳಿರುವ ಬಳ್ಳಾರಿ ಸೀಮೆಯಲ್ಲಿ, ಇಲ್ಲಿನ ಯಾವುದೇ ಸೂಕ್ಷ್ಮಮನಸ್ಸಿನ ಲೇಖಕರಲ್ಲಿ ಸಹಜವಾಗಿ ಇರುವಂತೆ, ಅರುಣ್ ಬರೆಹದಲ್ಲೂ ತಲ್ಲಣಗಳಿವೆ; ಇಲ್ಲಿನ ಗಣಿಗಾರಿಕೆ, ಜಾತಿ ಮತ್ತು ರೊಕ್ಕದ ರಾಜಕಾರಣವು ಸಾಮಾನ್ಯ ಎಂದು ನಾವು ಕರೆಯುವ ಜನರಲ್ಲೂ ನಿರ್ಮಿಸಿರುವ ಮನೋಧರ್ಮದ ಬಗ್ಗೆ ಸೋಜಿಗದ ಒಳನೋಟಗಳು ಅವರಲ್ಲಿವೆ. ಇದರ ಸುಳಿವು ಅವರ ಆರಂಭದ ಪತ್ರಿಕಾ ಬರೆಹಗಳಲ್ಲಿಯೇ ಪ್ರಕಟವಾಗಿತ್ತು. ಅಂಗನವಾಡಿ ಕಾರ್ಯಕರ್ತೆಯರ ಕಷ್ಟದ ಮೇಲೆ ಅವರು ಬರೆದ ಪತ್ರಿಕಾ ಲೇಖನ, ಸರ್ಕಾರದ ಇಲಾಖೆ ಎಚ್ಚೆತ್ತುಕೊಂಡು ತನ್ನ ದೋಷವನ್ನು ತಿದ್ದಿಕೊಳ್ಳುವಂತೆ ಮಾಡಿತು. ಇದು ಬರೆಹದ ಸಣ್ಣಶಕ್ತಿಯನ್ನು ತನಗೆ ಮನವರಿಕೆ ಮಾಡಿತು ಎಂದು ಒಂದೆಡೆ ಅವರು ಹೇಳಿಕೊಂಡೂ ಇದ್ದಾರೆ. ಆದರೆ ಸಮಸ್ಯೆಯನ್ನು ಬಗೆಹರಿಸುವ ಸರಳ ಆಕ್ಟಿವಿಸಂನ ಆಚೆಹೋಗಿ, ಚಿಂತನೆ ನಡೆಸುವ ದಿಸೆಯಲ್ಲಿ ಅವರ ಬರೆಹಗಳು ಚಲಿಸಿವೆ. ಕೆಲವೊಮ್ಮೆ ಅವರ ಪತ್ರಿಕಾ ಬರೆಹಗಳಲ್ಲಿ ಛೇಡಿಸುವಿಕೆಯ ತಮಾಷೆಯ ಗುಣದಿಂದ, ಸ್ತ್ರೀಸ್ವಾತಂತ್ರ್ಯದ ಬಗ್ಗೆ ಲಘುವಾದ ರೀತಿಯ ಧೋರಣೆಯ ಬರೆಹಗಳೂ ಬಂದಿರುವುದಿದೆ. ಇದರಿಂದ ಸಹಲೇಖಕಿಯರು ಅವರಿಗೆ ವಾಗ್ದಂಡನೆ ವಿಧಿಸಿರುವುದೂ ಉಂಟು. ಮುಖ್ಯವೆಂದರೆ, ತಂತಮ್ಮ ಹಳ್ಳಿಗಳಿಂದ ನಗರದ ನಾಗರಿಕ ಲೋಕಕ್ಕೆ ವಿಸ್ಮಯವೆನಿಸುವ ಮತ್ತು ರೋಚಕತೆ ಉಂಟುಮಾಡುವ ವಿಶಿಷ್ಟ ಆಚರಣೆಗಳ ಬಗ್ಗೆ ಬರೆವ ಆಮಿಷವನ್ನು ಅರುಣ್ ಬಿಟ್ಟುಕೊಟ್ಟಿರುವುದು. ಬದಲಿಗೆ ಅಲ್ಲಿನ ಜೀವನದ ದುಗುಡ ಮತ್ತು ಚೈನತ್ಯಶೀಲತೆಯನ್ನು ತೋರುವ ವಿಶ್ಲೇಷಕ ಬರೆಹಗಳನ್ನು ಮಾಡುತ್ತಿರುವುದು.

ನಮ್ಮ ಬಹುತೇಕ ಗ್ರಾಮೀಣ ಮೂಲದ ಲೇಖಕರಲ್ಲಿ ಇರುವಂತೆ, ಅಸಮಾನತೆ ಬಗ್ಗೆ ವ್ಯಗ್ರತೆ, ಕೋಮುವಾದದ ಬಗ್ಗೆ ಖಚಿತವಾದ ನಿಲುವು, ದುಡಿವ ಸಮುದಾಯದ ಸೆಣಸುಬಾಳಿನ ಬಗ್ಗೆ ಪ್ರೀತಿ, ಎಲ್ಲವನ್ನೂ ಅರುಣ್ ಬರೆಹ ಒಳಗೊಂಡಿದೆ. ನಾಡಿನ ಚಳುವಳಿ ಮತ್ತು ಹೋರಾಟಗಳ ಬಗ್ಗೆ ಆಳದಲ್ಲಿ ಸೆಳೆತವುಳ್ಳ ಅರುಣ್ ಕೊಂಚ ಭಾವುಕ ಲೇಖಕ. ಅದು ಕೆಲವೊಮ್ಮೆ ತೊಡಕೂ ಆಗಿದೆ. ಬದುಕಿನಲ್ಲಿರುವ ಜೀವಂತಿಕೆ ಹಾಸ್ಯಗಳನ್ನು ಸೂಕ್ಷ್ಮವಾಗಿ ಗ್ರಹಿಸುವ ಇವರ ಲವಲವಿಕೆ ಪ್ರಕಟವಾಗಿರುವ ಬಿಡಿ ಕತೆಗಳಲ್ಲಿ ಕಾಣುತ್ತದೆ. ಇಲ್ಲಿ ತುಂಬಿರುವ ವಿನೋದ ಪ್ರಜ್ಞೆ ಆಪ್ತವಾಗಿದೆ. ಆದರೆ ಇದು ದೈತ್ಯಲೇಖಕ ಕುಂವಿಯವರ ಪ್ರಭಾವದಿಂದ ತಪ್ಪಿಸಿಕೊಂಡು ತಮ್ಮದೇ ಆದ ನುಡಿಗಟ್ಟನ್ನು ಕಂಡುಕೊಳ್ಳುವುದರ ಸವಾಲಿರುವುದನ್ನು ಸಹ ಈ ಲೇಖಕನಿಗೆ ಸೂಚಿಸುತ್ತದೆ. ಅತಿ ಗಂಭೀರತೆಯು ಬರೆಹಕ್ಕೆ ಸಹಜವಾಗಿ ಇರಬಹುದಾದ ವಿನೋದ ಪ್ರಜ್ಞೆಯನ್ನು ಕೊಂದು, ಜೋಭದ್ರ ಮುಖವನ್ನು ಜೋಡಿಸುತ್ತದೆ. ಬರಿಯ ವಿನೋದವು ವರ್ತಮಾನದಲ್ಲಿ ಏನೂ ಸಮಸ್ಯೆಯಿಲ್ಲ ಎಂಬಂತೆ ಕೇವಲ ಸಂಭ್ರಮದ ಬೇಹೊಣೆ ಮನೋಧರ್ಮವನ್ನು ಒಳಗೊಳ್ಳುತ್ತದೆ. ಈ ಎರಡು ದಡಗಳಲ್ಲಿ ನಮ್ಮ ಕೆಲವು ಹೊಸಬರೆಹಗಾರರು ತುಯ್ಯಲಾಡುವುದುಂಟು.

ಅರುಣ್ ಅವರಲ್ಲಿ ಮೊದಲಿದ್ದ ಭಾವುಕ ಪ್ರಧಾನತೆ ಕಡಿಮೆಗೊಂಡು ಚಿಂತನಶೀಲತೆ ಒದಗುತ್ತಿದೆ. ಇದಕ್ಕೆ ಕಾರಣ, ಕ್ಷೇತ್ರಕಾರ್ಯ ಮಾಡಿ ಜನರ ಜತೆ ಮಾತಾಡಿ ಬರೆದ `ಸೊಂಡೂರು ಭೂಹೋರಾಟ’ ಎಂಬ ಕೃತಿಯೊ ತಿಳಿಯದು. ಕವಿತೆ ಅವರ ನಿಜವಾದ ಪ್ರಕಾರವಾಗಿದ್ದರೂ, ಯಾವ ಪ್ರಕಾರದಲ್ಲಿ ತಮ್ಮ ಸೃಜನಶೀಲತೆಯನ್ನು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂಬ ಒಂದು ತೆರೆದ ಸ್ಥಿತಿಯಲ್ಲಿ ಅವರಿದ್ದಾರೆ. ಜೀವಪ್ರೀತಿಯೂ ವಿಶಿಷ್ಟ ಅನುಭವ ಲೋಕವೂ ಹದುಳದಾಯಕ ಮನಸ್ಸೂ ಇರುವ ಅರುಣ್ ಅವರ ಸಾಮಾಜಿಕ ಕಳಕಳಿ, ಅವರು ಬರೆಯುತ್ತಿರುವ ವಾಚಕರವಾಣಿ ಪತ್ರಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಈಗ ಪ್ರಕಟವಾಗುತ್ತಿರುವ `ಅವ್ವನ ಅಂಗನವಾಡಿ’ ಎಂಬ ಸಂಕಲನವು ಅರುಣ್ ಕಾವ್ಯ ಪಡೆದಿರುವ ಹೊಸ ಮಜಲನ್ನು ತೋರಲಿದೆ.

ಸರ್ಜಾಶಂಕರ್ ಹರಳಿಮಠ

ನನಗೆ ಸರ್ಜಾಶಂಕರ ಹರಳಿಮಠ ಅವರ ಪರಿಚಯವಾಗಿದ್ದು, `ಬೆಚ್ಚಿಬೀಳಿಸಿದ ಬೆಂಗಳೂರು’ ಎಂಬ ಅಂಕಣ ಬರೆಹದ ಪುಸ್ತಕದಿಂದ. ಅವರನ್ನು ಕಂಡಿರದ ಮತ್ತು ಓದಿರದ ನನಗೆ, ಮುನ್ನುಡಿ ಬರೆಯಲು ಶಿವಮೊಗ್ಗೆಯ ಗೆಳೆಯರು ಒಂದು ಹಸ್ತಪ್ರತಿ ಕಳಿಸಿದರು. ಬೆಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ನೌಕರನಾಗಿರುವ ತೀರ್ಥಹಳ್ಳಿ ಸೀಮೆಯ ಹಳ್ಳಿಯ ಯುವಕನೊಬ್ಬ, ತನ್ನ ಊರಿನ ಪುಟ್ಟಪತ್ರಿಕೆಯಲ್ಲಿ ಒಂದು ವರ್ಷಕಾಲ ಬರೆದ ಅಂಕಣ ಬರೆಹಗಳವು. ಓದತೊಡಗಿದೆ. ಅತ್ಯುತ್ತಮ ಮನಸ್ಸಿನ ಅಭಿವ್ಯಕ್ತಿಗಳಂತೆ ಅವಿದ್ದವು. ಊರಿನ ನೆನಪುಗಳನ್ನು ಪರಸ್ಥಳವಾದ ಬೆಂಗಳೂರಿನ ವರ್ತಮಾನದಲ್ಲಿ ನೆನೆಯುತ್ತ, ಬೆಂಗಳೂರಿನಲ್ಲಿ ಆಗುತ್ತಿರುವ ತನ್ನ ಅನುಭವಗಳನ್ನು ಊರಿನ ಬದುಕಿನ ಜತೆಗಿಟ್ಟು ನೋಡುತ್ತ ಹುಟ್ಟಿದ್ದ ಆ ಬರೆಹಗಳು ತುಂಬ ಫ್ರೆಶ್ ಆಗಿದ್ದವು. ಕಾಳಜಿಯಿಂದ ಕೂಡಿದ ಸೂಕ್ಷ್ಮ ಮನಸೊಂದು, ತನ್ನ ಪರಿಸರಕ್ಕೆ ಜೀವಂತಿಕೆಯಿಂದ ಮಿಡಿಯುತ್ತ ಮೂಡಿದ್ದ ಆ ಬರೆಹಗಳಲ್ಲಿ, ಒಂದು ಬಗೆಯ ತೀವ್ರತೆಯಿತ್ತು. ಚಿತ್ರಕವಾದ ಭಾಷೆಯಿತ್ತು. ಹೊಸಸಮಾಜ ಕಟ್ಟುವ ಕನಸು, ತನ್ನ ಮಿತಿಗಳನ್ನು ಮೀರುವ ತುಡಿತ, ಮನುಷ್ಯರ ಸಣ್ಣತನಗಳಿಗೆ ಆಕ್ರೋಶ, ಸಮಾನತೆಗಾಗಿ ತುಡಿತ, ಮಾನವೀಯತೆ ಎಲ್ಲವೂ ಇದ್ದವು. ಇದೇ ಮಲೆನಾಡಿನ ಕುವೆಂಪು ಅವರ `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಚಿಂತನೆ, ಗೋಪಾಲಗೌಡರ ಸಮಾಜವಾದಿ ರಾಜಕಾರಣ, ಅನಂತಮೂರ್ತಿಯವರ ಚಿಂತನಶೀಲತೆ, ಲಂಕೇಶರ ಬಂಡುಕೋರತನಗಳು, ಈ ಭಾಗದ ಹೊಸತಲೆಮಾರಿನ ಬರೆಹಗಾರರಲ್ಲಿ ಇಂಗಿ, ಹೊಸರೂಪದಲ್ಲಿ ಮೈದಾಳುತ್ತಿವೆಯೇನೊ ಎಂಬಂತೆ  ಆ ಬರೆಹಗಳಿದ್ದವು.

ನನಗೆ ಅಲ್ಲಿ ಸೋಜಿಗವಾಗಿದ್ದು, ಹೆಚ್ಚಿನವರು ಮಹಾನಗರಕ್ಕೆ ನಾನಾ ಕಾರಣಗಳಿಂದ ಮುಖಮಾಡಿರುವ ಹೊತ್ತಲ್ಲಿ, ಅದರಿಂದ ಬೆಚ್ಚಿಬಿದ್ದು ಮರಳಿಮಣ್ಣಿಗೆ ಬರಲು ಯುವಕನೊಬ್ಬ  ತವಕಿಸುತ್ತಿರುವುದು. (ಹೀಗೆ ಬೆಂಗಳೂರಿನಿಂದ ಬೆಚ್ಚಿಬಿದ್ದು ಮರಳಿ ಮನೆಗೆ ಬಂದು ಬರೆಯುತ್ತಿರುವ ಇನ್ನೊಬ್ಬ ಲೇಖಕರೆಂದರೆ, ಲಕ್ಷ್ಮಣ ಬದಾಮಿ.) ಆದರೆ ನಮ್ಮ ನಗರಗಳ ಬದುಕಲ್ಲಿ ಹೊಸಬರನ್ನು ಎಳೆದುಕೊಳ್ಳುವ ಸೆಳೆತವೂ ಇದೆ. ಬೆಚ್ಚಿಬೀಳಿಸಿ ಓಡಿಸುವ ಗುಣವೂ ಇದೆ. ಈ ಸೆಳೆತ ಮತ್ತು ಭೀತಿಗಳನ್ನು ಸಿನಿಕರಾಗದೆ ಮೇಳವಿಸಿ ಸರಳೀಕರಿಸದೆ ಬರೆಯುವುದು ಒಂದು ಸವಾಲು. ಆ ಸವಾಲನ್ನು ಈ ಅಂಕಣ ಬರೆಹಗಳು ಸಮತೋಲನದಿಂದ ನಿಭಾಯಿಸಿದ್ದವು. ಪೂರ್ವಗ್ರಹಗಳನ್ನು ಹೇರುವ ಬದಲು, ಸುಮ್ಮನೆ ತಮಗಾದ ಅನುಭವಗಳನ್ನೆಲ್ಲ ತಮಗೆ ಹುಟ್ಟಿದ ಪ್ರಶ್ನೆಗಳನ್ನು ಮುಕ್ತವಾದ ಮನಸ್ಸಿನಿಂದ ಓದುಗರ ಮುಂದಿಟ್ಟು ಸಂವಾದಕ್ಕೆ ಒಡ್ಡಿಕೊಂಡಿದ್ದವು.

ಬಾಲ್ಯದ ಬದುಕಿಗೆ ಹೋಗಿ ಅಲ್ಲಿಂದ ಚಿತ್ರಗಳನ್ನು ಎತ್ತಿಕೊಂಡು ಬರುವ ಸರ್ಜಾ ಅವರ ಅಂಕಣ ಪ್ರಬಂಧಗಳು, ಆತ್ಮಕಥನದ ಆಯಾಮದಿಂದ ಆಪ್ತವಾಗುತ್ತವೆ. ಇವು ತಮ್ಮೊಳಗೆ ಒಂದು ಬಗೆಯ ಸಣ್ಣಕತೆಯ ರೂಪವನ್ನು ಕೂಡ ಒದಗಿಸಿಕೊಂಡಿವೆ. ಇವು, ಅವರು ಸಣ್ಣಕಥೆಗಾರನಾಗಿ ಹೊಮ್ಮಲು ಮಾಡಿಕೊಂಡ ಸಿದ್ಧತೆಯಂತೆ ಕೂಡ ತೋರುತ್ತವೆ. ಯಾಕೆಂದರೆ, ಅವರ ಅಂಕಣಗಳಲ್ಲಿ ಮತ್ತೆಮತ್ತೆ ಬರುವ ಅಪ್ಪಯ್ಯನ ಪಾತ್ರವು, ಕತೆಗಳಲ್ಲಿ ಬೇರೊಂದು ಬಗೆಯಲ್ಲಿ ಮುಂದುವರೆಯುತ್ತದೆ. ಅದರಲ್ಲೂ ಗುಡಿಯಲ್ಲಿ ಪೂಜೆ ಮಾಡುವ, ಉಳಿದ ಹೊತ್ತಲ್ಲಿ ತಲೆಯ ಮೇಲೆ ಗೌಡರ ಮನೆಯ ಹಾಲಿನ ಕ್ಯಾನನ್ನು ತೀರ್ಥಹಳ್ಳಿಗೆ ಹೊತ್ತುಹೋಗುವ, ಅಲ್ಲಿನ ಭತ್ತದ ಮಿಲ್ಲಿನಲ್ಲಿ ಖಾಲಿಚೀಲಗಳನ್ನು ಹೊದ್ದುಕೊಂಡು ಮಲಗಿದ್ದು ಬೆಳಕು ಹರಿದಾಗ ಬರುವ, ಹೆಗ್ಗಡೆಯವರ ಅಡಿಕೆ ಬೇಯಿಸುವ ಬಾಯ್ಲರಿನ ಒಲೆಗೆ ರಾತ್ರಿಯೆಲ್ಲ ಗರಿತಳ್ಳುವ ಈ ಅಪ್ಪಯ್ಯನ ಪಾತ್ರವು, ಮಲೆನಾಡಿನ ಬ್ರಾಹ್ಮಣರನ್ನು ಕುರಿತ ನಮ್ಮ ಗ್ರಹಿಕೆಗಳನ್ನು ಒಡೆದುಹಾಕುತ್ತದೆ.

ಮುಂದೆ ಸರ್ಜಾ, ಸಣ್ಣಕತೆಗಳನ್ನು ಬರೆದರು. ಅವು ಹಲವಾರು ಕಡೆ ಬಹುಮಾನ ಪಡೆದಿವೆ. ಅವೆಲ್ಲವೂ `ಬಾರಯ್ಯ ಬೆಳದಿಂಗಳೇ’ ಎಂಬ ಸಂಕಲನದಲ್ಲಿ ಪ್ರಟಕವಾಗಿವೆ. ಅದರಲ್ಲಿ `ಸಾವಿತ್ರು ಮಕ್ಳು’, `ಬಾರಯ್ಯ ಬೆಳದಿಂಗಳೇ’ ಮುಂತಾದ ಒಳ್ಳೆಯ ಕತೆಗಳಿವೆ. ಪ್ರಬಂಧದಂತೆ ಕತೆಬರೆಯುವ, ಕಥೆಯಂತೆ ಪ್ರಬಂಧ ಬರೆಯುವ, ಸರ್ಜಾ ಇಲ್ಲಿ ಕೆಲವು ಹೊಸಲೋಕಗಳನ್ನು ತೆರೆದು ತೋರುತ್ತಾರೆ. ಅವುಗಳಲ್ಲಿ ಮಲೆನಾಡಿನ ಇತ್ತೀಚಿನ ವಿದ್ಯಮಾನಗಳ ಚಿತ್ರಣಗಳಿವೆ. ಇವು ಕುವೆಂಪು ಮತ್ತು ಅನಂತಮೂರ್ತಿಯವರು ಕೊಡುವ ಚಿತ್ರಗಳಿಗಿಂತ ಭಿನ್ನವಾದವು. ಈ ಭಿನ್ನತೆಯನ್ನು `ಕುವೆಂಪುಗೆ ಸಿಗದ ಕತೆ’ಯಲ್ಲಿ ನೋಡಬಹುದು. ಈ ಕತೆ ಕುವೆಂಪು ಜತೆಗೆ ನಮ್ರವಾಗಿ ಮಾಡಿರುವ ಸಂಘರ್ಷವೂ ಹೌದು. ಅವರು ಕಟ್ಟಿಕೊಟ್ಟ ಬದುಕಿಗೆ ಒಡೆದ ಹೊಸಚಿಗುರೂ ಹೌದು. ಪರಂಪರೆ ಎಂದರೆ, ಯಾರೊ ದೊಡ್ಡವರು ನಡೆದ ದಾರಿಯಲ್ಲಿ ಸಾಗುವುದು ಮಾತ್ರವಲ್ಲ. ಅದರ ಜತೆಗೆ ಜಗಳ ಕೂಡ. ಒಬ್ಬ ಲೇಖಕ ತನ್ನ ಸುತ್ತಲ ಬದುಕಿಗೆ ಅದರ ವಾಸ್ತವತೆಗೆ ನಿಷ್ಠನಾಗಿರುವ ಮೂಲಕವೇ, ಪರಂಪರೆಯನ್ನು ವಿಮರ್ಶೆ ಮಾಡುತ್ತಲೇ ಅದರ ಭಾಗವಾಗುವ ಬಗೆಯನ್ನು ಇಲ್ಲಿ ಕಾಣಬಹುದು.

ಆಧುನಿಕ ಕನ್ನಡ ಸಾಹಿತ್ಯಕ್ಕೆ ಅತಿಹೆಚ್ಚು ಕೊಡುಗೆಗಳನ್ನು ನೀಡಿರುವ ಕೀರ್ತಿ ತೀರ್ಥಹಳ್ಳಿ ಸೀಮೆಯ ತುಂಗಾತೀರಕ್ಕೆ ಸಲ್ಲುತ್ತದೆಯೊ ಏನೊ? ಅಂತಹ ಜಾಗದಿಂದ ಬಂದು ಬರೆಯಬೇಕೆಂದರೆ, ಕುವೆಂಪು ಅವರಿಂದ ಹಿಡಿದು ಅನಂತಮೂರ್ತಿಯ ಅವರ ತನಕ, ಎಷ್ಟೊಂದು ಮಾದರಿಗಳಿವೆ. ಇವೇ ಹೊಸತಲೆಮಾರಿನ ಪ್ರತಿಭೆಗಳಿಗೆ ಸವಾಲು ಕೂಡ ಆಗಿವೆ. ಈ ಸವಾಲನ್ನು ತಮ್ಮದೇ ರೀತಿಯಲ್ಲಿ ಸರ್ಜಾ ತರಹದ ಲೇಖಕರು  ಕೈಗೆತ್ತಿಕೊಂಡಿದ್ದಾರೆ. ಅವರ ಕತೆಗಳ ವಿಶಿಷ್ಟತೆ ಇರುವುದು ಮಲೆನಾಡು ಭಾಗದ ಜೀವನ ಚಿತ್ರಗಳನ್ನು ನೀಡುತ್ತಲೇ ಮನುಷ್ಯರ ಮನಸ್ಸಿನ ತಲ್ಲಣಗಳನ್ನು ಹಿಡಿಯವುದು.

ಸರ್ಜಾ ಶಂಕರ್ ಅವರು ಬಹಳಷ್ಟು ಸಲ ಹೃದಯದಿಂದ ಚಿಂತಿಸುತ್ತಾರೆ. ಅದು ಒಳ್ಳೆಯದೇ. ಆದರೆ ಇದುವೇ ಅವರ ಕತೆಗಳಿಗೆ ಒಮ್ಮೊಮ್ಮೆ ಅತಿಭಾವುಕವಾದ ಆವರಣವನ್ನು ಕೊಡುತ್ತದೆ. ಅವರ ಕಾವ್ಯಾತ್ಮಕವಾದ ಭಾಷೆಯಲ್ಲೂ ಈ ಬಗೆಯ ಭಾವುಕತೆಯಿದೆ. ಅವರ ಕತೆಗಳಲ್ಲಿನ ಅತಿ ಉದ್ದನೆಯ ವಾಕ್ಯಗಳ ಪ್ರಯೋಗವು ಬಹಳ ಪರಿಣಾಮಕರ ಎಂದು ಅನಿಸುವುದಿಲ್ಲ. ಮುಸ್ಲಿಮರನ್ನು ಕುರಿತ ಸಾರ್ವಜನಿಕ ಬದುಕಿನಲ್ಲಿ ಇರುವ ಪೂರ್ವಗ್ರಹಿಕೆಗಳನ್ನು ಒಡೆದುಹಾಕುವುದಕ್ಕೆ ಅವರು ಕೊಡುವ ಚಿತ್ರಗಳು ಕೆಲವೊಮ್ಮೆ ಉದ್ದೇಶಪೂರ್ವಕ ಅನ್ನಿಸುವುದುಂಟು. ಸರ್ಜಾ ಅವರು ಬಹಳ ಮಹತ್ವಾಕಾಂಕ್ಷೆಯಿಂದ ಬರೆಯುವ ಅನೇಕ ಕತೆಗಳು ಸಾಧಾರಣವಾಗಿ ತೋರುತ್ತವೆ. ಈಚೆಗೆ ಅವರ `ಜೀವದನಿ’ ಎಂಬ ಅಂಕಣ ಬರೆಹಗಳ ಸಂಕಲನ ಬಿಡುಗಡೆಗೊಂಡಿದೆ. ಅದು ಕೂಡ `ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ’ ಅವರ ಚಡಪಡಿಕೆತನದ ಅಭಿವ್ಯಕ್ತಿಯಾಗಿದೆ. ಹೀಗಿದ್ದೂ ನನಗೆ ಬರೆಹದ ತಾಜಾತನವುಳ್ಳ `ಬೆಚ್ಚಿಬೀಳಿಸಿದ ಬೆಂಗಳೂರು’ ನನ್ನ ಪ್ರಿಯವಾದ ಪುಸ್ತಕಗಳಲ್ಲಿ ಒಂದಾಗಿದೆ.

ನಿಜಕ್ಕೂ ಸರ್ಜಾ ಶಂಕರ್, ತಮ್ಮ ಬರೆಹದಾಚೆ ಚಾಚಿಕೊಳ್ಳುತ್ತಿರುವ ವ್ಯಕ್ತಿತ್ವವು ನನಗೆ ಆದರ ಹುಟ್ಟಿಸಿದೆ. ಅವರು ಶಿವಮೊಗ್ಗ ಜಿಲ್ಲೆಯ ನಾಗರಿಕ ಹಕ್ಕುಗಳಿಗಾಗಿ ಜನರ ಒಕ್ಕೂಟ (ಪಿಯುಸಿಎಲ್) ಘಟಕದ ಕಾರ್ಯದರ್ಶಿ. ಕೋಮುವಾದ ವಿರೋಧಿ ಚಳುವಳಿಯಲ್ಲಿ ತೊಡಗಿಕೊಂಡವರು. ಪಂಚಾಯಿತಿ ಚುನಾವಣೆಯಲ್ಲಿ ಜನಪರವಾದ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಲು ಯತ್ನಿಸಿ ನಿರಾಶರಾದವರು. ಎಲ್ಲಿ ನೋವಾದರೂ ಅದು ತನ್ನದೆಂಬಂತೆ ಮಿಡಿಯುವವರು. ಇದನ್ನೆಲ್ಲ ಅವರು ರೂಢಿಸಿಕೊಂಡಿದ್ದು ಲಂಕೇಶ್ ಅವರ ಬರೆಹ ಮತ್ತು ಪತ್ರಿಕೆಗಳಿಂದ. `ಲಂಕೇಶ್ ಪತ್ರಿಕೆ’ ಮೂಡಿಸಿದ ರಾಜಕೀಯ ಪ್ರಜ್ಞೆಯು, ಇಂತಹ ಅನೇಕ ತರುಣ ಮನಸ್ಸುಗಳನ್ನು ರೂಪಿಸಿತು. ಅವರು ಚಿಂತಿಸುವ ಮತ್ತು ಬರೆಹ ಮಾಡುವ ಕಲೆಯನ್ನು ಮಾತ್ರವಲ್ಲದೆ, ತಮ್ಮ ಪರಿಸರವನ್ನು ಬದಲಿಸುವುದಕ್ಕೆ ಯತ್ನಿಸುವುದನ್ನು ಕಲಿಸಿತು. ಈಗಲೂ ಸ್ಥಳೀಯವಾದ ಬೇರೆಬೇರೆ ಪತ್ರಿಕೆಗಳಲ್ಲಿ ಸರ್ಜಾ ಅವರು ತಮ್ಮ ಪರಿಸರದ ವಿದ್ಯಮಾನಗಳಿಗೆ ಶಾರ್ಪಾಗಿ ಪ್ರತಿಕ್ರಿಯಿಸುತ್ತ ಇರುತ್ತಾರೆ.

ಸರ್ಜಾ ಅವರು ಶಿವಮೊಗ್ಗೆಯಲ್ಲಿ `ದೇಸೀ ಸಂಸ್ಕೃತಿ’ ಎಂಬ ಅಂಗಡಿ ನಡೆಸುತ್ತಾರೆ. ಅದರಲ್ಲಿ ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ ಕುಶಲಕರ್ಮಿಗಳು ಅದರಲ್ಲೂ ಗ್ರಾಮೀಣ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಅವರು ತಮ್ಮ ಅಂಗಡಿ ಆರಂಭಿಸಿದಾಗ, ನನಗೆ ಅವರು ಕನ್ನಡದ ಅತ್ಯಂತ ಮಹತ್ವದ 25 ಕಾದಂಬರಿಗಳನ್ನು ಪಟ್ಟಿಮಾಡಿಕೊಡಲು ಕೇಳಿದರು. ಅವನ್ನು ತರಿಸಿ, ತಮ್ಮ ಅಂಗಡಿಯ ಕಪಾಟಿನಲ್ಲಿಟ್ಟರು- ಅಂಗಡಿಗೆ ಬಂದು ಹೋಗುವವರಿಗೆಲ್ಲ ಅವು ಓದಲು ಸ್ಫೂರ್ತಿಯಾಗಲಿ ಎಂದು. ಈಗ ಸರ್ಜಾ ಅಂತಃಕರಣ ಎಂಬ ಪ್ರಕಾಶನ ಆರಂಭಿಸಿದ್ದಾರೆ. ಅವರು ವರ್ಷಕ್ಕೊಮ್ಮೆ ತುಂಗಾತೀರದಲ್ಲಿ ಬೆಳುದಿಂಗಳ ರಾತ್ರಿಯಲ್ಲಿ ಏರ್ಪಡಿಸುವ ಊಟ ಮತ್ತು ಚರ್ಚಾಗೋಷ್ಠಿಗಳ ಬಗ್ಗೆ ನಾನು ಕೇಳಿದ್ದೇನೆ. ಹೋಗಲು ಸಾಧ್ಯವಾಗಿಲ್ಲ.

ಲೇಖಕರು ಏಕಾಂತವನ್ನು ನಿರ್ಮಿಸಿಕೊಂಡು ಬರೆಯುವುದು ಮತ್ತು ಪ್ರಕಟಿಸುವುದು ಸುಲಭ. ಆದರೆ ತಮ್ಮ ಊರು ಪರಿಸರವನ್ನು ಜೀವಂತವಾಗಿ ಇಡಬೇಕು ಎಂದು ತುಡಿಯುತ್ತ ಆಕ್ಟಿವಿಸ್ಟ್ ಆಗಿ ರಿಸ್ಕ್ ತೆಗೆದುಕೊಳ್ಳುವುದು ಕಷ್ಟದ ಕೆಲಸ. ಸರ್ಜಾರಂತಹ ತರುಣರು ತಮ್ಮ ಊರುಗಳನ್ನು ತಮ್ಮ ಬರೆಹ ಮಾತುಕತೆ ಮತ್ತು  ಕ್ರಿಯಾಶೀಲತೆಗಳಿಂದ  ಜೀವಂತವಾಗಿ ಇಟ್ಟಿರುವರು. ಭೈರಪ್ಪನವರಂತಹ ಹಿರಿಯ ಲೇಖಕರು ಅತಿಜಾಣ್ಮೆಯಿಂದಲೂ ಮತೀಯ ಲೆಕ್ಕಾಚಾರದಿಂದಲೂ ಕೂಡಿದ ಬರೆಹ ಮಾಡುತ್ತಿದ್ದಾರೆ. ಕೆಲವು ಹಿರಿಯರು ಒಳಗಿನ ಒತ್ತಡವಿಲ್ಲದೆ ಸಾಧಾರಣ ಬರೆಹಗಳನ್ನು ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ, ನಾಡನ್ನು ಕಟ್ಟುವ ಕನಸಿನಿಂದ ಕೂಡಿ ಜೀವಂತಿಕೆ ಮಿಡಿಯುವಂತ ಬರೆಹ ಮಾಡುತ್ತಿರುವ ಇಂತಹ ಲೇಖಕರು ಕನ್ನಡ ಸಾಹಿತ್ಯದ ಮಾನವೀಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ. ಅದು ಮುಂದುವರೆಯಲಿ.

ತಾರಿಣಿ ಶುಭದಾಯಿನಿ

ಕಳೆದ ಒಂದು ದಶಕದಿಂದ ಕಾವ್ಯ ಮತ್ತು ವಿಮರ್ಶೆಯ ಕ್ಷೇತ್ರದಲ್ಲಿ ತಾರಿಣಿ ಶುಭದಾಯಿನಿ ಅವರು ಕೆಲಸ ಮಾಡುತ್ತಿದ್ದಾರೆ. ಅವರು ಈತನಕ `ತೋಡಿರಾಗ’ ಹಾಗೂ `ಚಿತ್ತಗ್ಲಾನಿಯ ಮಾತು’ ಕವನ ಸಂಕಲನಗಳನ್ನೂ `ಹೆಡೆಯಂತಾಡುವ ಸೊಡರು’ ಎಂಬ ವಿಮರ್ಶಾ ಸಂಕಲನವನ್ನೂ ಪ್ರಕಟಿಸಿದ್ದಾರೆ. ಭಾವಪ್ರಧಾನವೂ ಸಂಶ್ಲೇಷಣ ಪ್ರಧಾನವೂ ಆದ ಕಾವ್ಯ ಹಾಗೂ ತಾರ್ಕಿಕವೂ ವೈಚಾರಿಕವೂ ವಿಶ್ಲೇಷಣ ಪ್ರಧಾನವೂ ಆದ ವಿಮರ್ಶೆ -ಹೀಗೆ ಎರಡರಲ್ಲೂ ಅವರು ತಮ್ಮನ್ನು ಏಕಕಾಲದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾವ್ಯಕ್ಕೆ ಹೋಲಿಸಿದರೆ, ಅವರು ವಿಮರ್ಶಕಿಯಾಗಿಯೇ ತಮ್ಮ ಶಕ್ತಿಯನ್ನು ಹೆಚ್ಚು ಪ್ರಕಟಿಸುತ್ತಿದ್ದಾರೆ ಅನಿಸುತ್ತದೆ. ಈ ಹೊತ್ತಿನ ವಿಮರ್ಶೆ ಪ್ರಕಾರ ಎದುರಿಸುತ್ತಿರುವ ಕ್ರೈಸಿಸ್ಸೂ ಹೀಗನಿಸಲು ಕಾರಣವಿದ್ದೀತು.

ತಾರಿಣಿ ಕಾವ್ಯದ ವಿಶೇಷತೆಯೆಂದರೆ, ಸೂಕ್ಷ್ಮವಾಗಿ ಮೆಲುದನಿಯಲ್ಲಿ ಮಾತನಾಡುವುದು; ಲೋಕದ ಅನಾಮಿಕ `ಅಮುಖ್ಯ’ ಎನಿಸಿರುವ ಚಿತ್ರಗಳ ಮೂಲಕ ಬಾಳಿನ ಪರಿಯನ್ನೂ ಮನುಷ್ಯರ ಸ್ವಭಾವವನ್ನೂ ಕಟ್ಟಿಕೊಡುವುದು. ಅಕ್ಕಸಾಲಿಗರ ಬೀದಿಯ ಧೂಳನ್ನು ಬಾಚಿಕೊಂಡು ಅದರಲ್ಲಿ ಚಿನ್ನದ ರೇಕನ್ನು ಹುಡುವವರ ರೂಪಕದಲ್ಲಿ ತಮ್ಮ ಕಾವ್ಯದ ಕಸುಬನ್ನು ಅವರು ಚಿತ್ರಿಸಿಕೊಳ್ಳುವುದನ್ನು ಸಾಂಕೇತಿಕವಾಗಿದೆ. ತಾರಿಣಿ ಕಾವ್ಯಕ್ಕೆ ತನ್ನ ಮಿತಿಯ ಅರಿವಿದೆ. ಅರಿವಿನ ಕಾರಣದಿಂದ ಬಂದಿರುವ ವಿನಯವಿದೆ. ಆದರೆ ಈ ವಿನಯದ ಮಂದ್ರಸ್ತರದಲ್ಲಿ ಇದ್ದುಕೊಂಡೇ ಸುಪ್ತವಾದ ಆತ್ಮವಿಶ್ವಾಸವನ್ನೂ ಅಗಾಧವಾದ ಚೈತನ್ಯವನ್ನೂ ಪ್ರಕಟಿಸುವ ಗುಣವೂ ಅವರ ಕಾವ್ಯಕ್ಕಿದೆ. ಹಾಗೆ ಕಂಡರೆ, ಅವರ ಕಾವ್ಯದಲ್ಲಿ ಕಟಕಿ ವ್ಯಂಗ್ಯ ಕಡಿಮೆ. ತಾನು ಎಲ್ಲವನ್ನೂ ಬಲ್ಲೆ ಎಂಬ ಖಚಿತ ಭಾವವಿರುವ ಕಡೆ, ಕೊಂಚ ವಿಡಂಬನೆ ಮಾಡುವ ಕಡೆ, ಅವರ ಒಳ್ಳೆಯ ಕಾವ್ಯ ಬಂದಿಲ್ಲ. ಬದಲಿಗೆ ನೋಯುವ ತಳಮಳಗೊಳ್ಳುವ ದಿಕ್ಕೆಟ್ಟ ಅವಸ್ಥೆಯಲ್ಲಿ ಕಂಗಾಲಾದಂತೆ ಬರೆಯುವಾಗ ಅವರ ಅತ್ಯುತ್ತಮ ಕಾವ್ಯ ಸೃಷ್ಟಿಯಾಗಿದೆ. ಅವರ ಸಂಕಲನದ ಹೆಸರುಗಳೂ ಈ ದೃಷ್ಟಿಯಿಂದ ಮಾರ್ಮಿಕವಾಗಿವೆ. ಹೆಣ್ಣನ್ನು ಆವರಿಸಿರುವ ಅಮೂರ್ತವಾದ ಬಂಧನ ಹಾಗೂ ಆ ಸನ್ನಿವೇಶದೊಳಗಿದ್ದೇ ತನ್ನ ಇರುವಿಕೆಯನ್ನು ಸಾಬೀತುಪಡಿಸಲು ಆಕೆ ಮಾಡುವ ಸೆಣಸಾಟಗಳನ್ನು ಅಭಿವ್ಯಕ್ತಿಸಲು ಅವರ ಕಾವ್ಯ ಹೊಸಭಾಷೆಯನ್ನು ಹುಡುಕುತ್ತಿರುವಂತೆ ತೋರುತ್ತದೆ. ಆದರೆ ದೊಡ್ಡ ಕ್ಯಾನವಾಸಿಟ್ಟುಕೊಂಡು ಹುಟ್ಟುವ ಅವರ ಉದ್ದನೆಯ ಕವನಗಳು ಅಳ್ಳಕವಾಗುತ್ತವೆ. ಪುಟ್ಟಕಕ್ಷೆಯಲ್ಲಿ ಹಿಡಿಯವ ಕವನಗಳು ಹೆಚ್ಚು ಶಕ್ತಿ ಪಡೆದಿವೆ.

ಕಾವ್ಯದ ಅಂತರ್ಮುಖಿತನಕ್ಕೆ ಹೋಲಿಸಿದರೆ ವಿಮರ್ಶೆಯಲ್ಲಿ ತಾರಿಣಿ ಹೆಚ್ಚು ಓಟ್ ಸ್ಪೋಕನ್ ಆಗುತ್ತಾರೆ. ಇದು ವಿಮರ್ಶೆಯ ಪ್ರಕಾರದಲ್ಲೇ ಇರುವ ಒತ್ತಾಸೆ ಕೂಡ. ಇದರಿಂದ ಅವರಿಗೆ ಲೇಖಕರ ಲೋಕದೃಷ್ಟಿಯ ಮೇಲೆ, ಮೌಲ್ಯದ ನೆಲೆಯಿಂದ ಪ್ರಶ್ನೆಯನ್ನು ದಿಟ್ಟತನದಲ್ಲಿ ಎತ್ತುವುದೂ ಸಾಧ್ಯವಾಗಿದೆ. ಸಾಹಿತ್ಯದ ಸೂಕ್ಷ್ಮ ಓದನ್ನು ಮಾಡುವ ತಾರಿಣಿಯವರದು ವಿವರಣಶೀಲ ಹಾದಿಯಲ್ಲ; ಪ್ರಶ್ನೆಗಳನ್ನು ಎತ್ತಿ ಕೃತಿಯನ್ನು ಮುಖಾಮುಖಿಯಾಗುವ ಹಾದಿ. ಕನ್ನಡದ ಕೆಲವು ಕವಿಗಳಲ್ಲಿ ಕಾಣುತ್ತಿರುವ ರಮ್ಯತೆಯ ಸಮಸ್ಯೆಯೇನು? ಎಸ್.ಜಿ.ಸಿದ್ಧರಾಮಯ್ಯ ಅವರಂತಹ ಕವಿಗಳು ಮಂಡಿಸುತ್ತಿರುವ ದೇಶಿ ಪರಿಕಲ್ಪನೆ ಒಂದು ಸ್ವಯಂಪೂರ್ಣವಾಗಲು ಸಾಧ್ಯವೇ? ವಸುಧೇಂದ್ರ ಅವರ ಬರೆಹದಲ್ಲಿ ಯಾಕೆ ನಮ್ಮ ಸಮಾಜದ ವಿಷಮತೆ ವೈರುಧ್ಯಗಳ ಚಿತ್ರ ಕಡಿಮೆ? ಭೈರಪ್ಪನವರಿಗೆ ಯಾಕೆ ಹಿಂದುತ್ವದ ಸಿದ್ಧಾಂತವನ್ನು ಮಂಡಿಸಬೇಕಿನಿಸುತ್ತಿದೆ -ಇತ್ಯಾದಿ ಪ್ರಶ್ನೆಗಳನ್ನು ಅವರು ಎತ್ತುತ್ತಾರೆ. ಜಿಎಸ್ಎಸ್, ಪ್ರತಿಭಾ ನಂದಕುಮಾರ್, ಪೂರ್ಣಚಂದ್ರ ತೇಜಸ್ವಿಯವರ ಬರೆಹದ ಬಗ್ಗೆ ಕೂಡ ಬೇಕಾದಷ್ಟು ಕ್ರಿಟಿಕಲ್ ಆದ ಸಾಲುಗಳಿವೆ. ಕನ್ನಡ ವಿಮರ್ಶೆಯಲ್ಲಿ ವಿಮರ್ಶಾತ್ಮಕ ನಿಷ್ಠುರತೆಯ ಮೊನಚು ಕಳೆದು ಹೋಗುತ್ತಾ, ಒಂದು ಬಗೆಯಲ್ಲಿ ಎಲ್ಲವನ್ನೂ ಕ್ವಾಲಿಫೈ ಮಾಡುವ ಉದಾರವಾದಿಯ ಹೊಂದಾಣಿಕೆಯ ಸ್ವಭಾವದ ಮಾದರಿಗಳಿವೆ. ವಿಮರ್ಶಾತ್ಮಕ ಮೊನಚು ನಾನೇ ಸರಿತನದ ಸರ್ವಾಧಿಕಾರಿ ದನಿಯಾಗುವ ಮಾದರಿಗಳೂ ಇವೆ. ಇಂತಹ ಹೊತ್ತಲ್ಲಿ ತಾರಿಣಿ ವಿಮರ್ಶೆಯಲ್ಲಿರುವ ಸಮತೋಲನ ಮತ್ತು ವಿವೇಕಗಳು ಮಹತ್ವದ ಸಂಗತಿಗಳಾಗಿವೆ. ಅವರು ಗಾಂಭೀರ್ಯದ ಭಾರವಿಲ್ಲದೆ ಸರಳವಾಗಿ ಸಹಜವಾಗಿ ಒಳನೋಟಗಳನ್ನು ಚೆಲ್ಲುವ ಪರಿ ಪ್ರಿಯವಾಗುತ್ತದೆ.

ತಾರಿಣಿ ಪತ್ರಿಕೆಗಳಲ್ಲಿ ಕೆಲವು ಕಾಲ ಪುಸ್ತಕ ವಿಮರ್ಶೆ ಬರೆಯುತ್ತಿದ್ದರು. ಪರಿಚಯಾತ್ಮಕತೆ ಮುಖ್ಯವಾಗಿರುವ ಈ ಬರೆಹದಲ್ಲೂ ಅವರು ಪ್ರಶ್ನೆಗಳನ್ನು ಎತ್ತುತ್ತಿದ್ದರು. ಆಳಕ್ಕೆ ಹೋಗಲು, ತಾತ್ವೀಕರಣ ಹಂತಕ್ಕೆ ಚಲಿಸಲು ಹೆಚ್ಚು ಅವಕಾಶವಿಲ್ಲದ ಜಾಗವಿದು. ಆದರೆ ಪುಸ್ತಕ ವಿಮರ್ಶೆಯಲ್ಲಿ ಆಗದ ಕೆಲಸವನ್ನು ತಮ್ಮ ವಿಮರ್ಶನ ಬರೆಹಗಳಲ್ಲಿ ಅವರು ಚೆನ್ನಾಗಿ ಮಾಡಿದ್ದಾರೆ. ಆದರೂ ಹೊಸಕಾಲದ ವಿಮರ್ಶಕರ ನಿಜವಾದ ಸತ್ವಪರೀಕ್ಷೆ ಕಾರಂತ ಮಾಸ್ತಿ ಕುವೆಂಪು ಬೇಂದ್ರೆ ಮುಂತಾದ ನಮ್ಮ ಗ್ರೇಟ್ ಮಾಸ್ಟರ್ಸ್ ಗಳನ್ನು ಮುಖಾಮುಖಿಯಾದಾಗಲೇ ಆಗುವುದು. ಸದ್ಯಕ್ಕೆ ತಾರಿಣಿ ವಿಮರ್ಶೆಯಲ್ಲಿ ಈ ಮುಖಾಮುಖಿ ಸಾಧ್ಯವಾಗಿಲ್ಲ. ಆದರೆ ಅದಕ್ಕೆ ಬೇಕಾದ ಸಿದ್ಧತೆ ಮಾತ್ರ ಅವರಲ್ಲಿ ಪ್ರಕಟವಾಗಿದೆ.

ಚಿತ್ರದುರ್ಗದ ಸರ್ಕಾರಿ ಪದವಿ ಕಾಲೇಜಿನಲ್ಲಿ ಇಂಗ್ಲಿಶ್ ಅಧ್ಯಾಪಕರಾಗಿರುವ ತಾರಿಣಿ, ಅಪಾರವಾದ ಓದನ್ನು ಮಾಡಿದ್ದಾರೆ. ನಮ್ಮ ವಿವಿಗಳಲ್ಲಿ ಈಚೆಗೆ ಬಂದೆರಗಿದಂತಿರುವ ವಿದ್ವತ್ ಹೀನ ವಾತಾವರಣಕ್ಕೆ ಹೋಲಿಸಿದರೆ, ತಾರಿಣಿಯವರಂತಹ ವಿದ್ವತ್ ಪರಂಪರೆಯ ಅಧ್ಯಾಪಕರು, ಪದವಿ ಕಾಲೇಜುಗಳಲ್ಲಿ ಇರುವುದು ವಿದ್ಯಾರ್ಥಿಗಳ ಭಾಗ್ಯ. ವೃತ್ತಿಯ ಹಿನ್ನೆಲೆಯ ಕಾರಣದಿಂದ ತಾರಿಣಿ ವಿಮರ್ಶೆಯಲ್ಲಿ ಪಶ್ಚಿಮದ ಲೇಖಕರ ಹೆಚ್ಚು ಉಲ್ಲೇಖಗಳಿವೆ. ಇವಕ್ಕೆ ಹೋಲಿಸಿದರೆ, ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಉಲ್ಲೇಖ ಕಡಿಮೆ. ಆಧುನಿಕ ಪೂರ್ವ ಕನ್ನಡ ಸಾಹಿತ್ಯದ ಹಂಗಿಲ್ಲದೆ ಸಾಹಿತ್ಯ ವಿಮರ್ಶೆ ಬರೆಯಬಹುದು. ಆದರೂ ಅಲ್ಲಿ ಎಂತಹುದೋ ಒಂದು ಕೊರತೆ ಉಳಿದುಬಿಡುತ್ತದೆ. ಆಧುನಿಕ ಸಾಹಿತ್ಯಕ್ಕೆ ಸೀಮಿತಗೊಳಿಸಿಕೊಂಡಂತಿರುವ ಕೆಲವು ವಿಮರ್ಶಕರಲ್ಲಿ ಇದನ್ನು ಕಾಣಬಹುದು. ಆದರೆ ಸಮಕಾಲೀನವಾದ ಒಂದು ಕೃತಿಯ ಬಗ್ಗೆ ಮಾತಾಡುವಾಗಲೂ ಪರೋಕ್ಷವಾಗಿ ಒಟ್ಟು ಕನ್ನಡ ಸಾಹಿತ್ಯ ಪರಂಪರೆ ಕುರಿತ ನೋಟಗಳನ್ನು ಕೊಡಬಲ್ಲ ಜಿ.ಎಸ್.ಆಮೂರ, ಕೀರ್ತಿನಾಥ ಕುರ್ತಕೋಟಿ, ರಾಜೇಂದ್ರ ಚೆನ್ನಿ, ಸಿ.ಎನ್.ರಾಮಚಂದ್ರನ್, ಗಿರಡ್ಡಿ ಗೋವಿಂದರಾಜ -ಮುಂತಾದವರಲ್ಲಿ ಇದು ಕಾಣುವುದಿಲ್ಲ. ಇದು ಎಲ್ಲರಿಗೂ ಪಾಠದಂತಿದೆ.

ಶತಮಾನದ ಸಾಹಿತ್ಯ ವಿಮರ್ಶೆ ಸಂಕಲನ ಮಾಡುವಾಗ, ಕನ್ನಡದಲ್ಲಿ ಹೊಸ ತಲೆಮಾರಿನಲ್ಲಿ ವಿಮರ್ಶಕರೇ ಕಾಣುತ್ತಿಲ್ಲವೆಂದು, ಅದರ ಸಂಪಾದಕರಾದ ಎಚ್.ಎಸ್.ರಾಘವೇಂದ್ರರಾವ್ ಆತಂಕ ವ್ಯಕ್ತಮಾಡಿದ್ದರು. ಆದರೆ ಜೋಗಿ, ಸಿರಾಜ್ ಅಹಮದ್, ವಿಕ್ರಂವಿಸಾಜಿ, ವಿನಯಾ, ತಾರಿಣಿ, ಹರೀಶ- ಮುಂತಾದವರು ಈ ಆತಂಕಕ್ಕೆ ಉತ್ತರ ಕೊಡುವಂತೆ ಬರೆಯುತ್ತಿರುವರು. ಆದರೂ ಕನ್ನಡ ವಿಮರ್ಶೆ ಅಳಿವಿನಂಚಿನಲ್ಲಿರುವ ಪ್ರಕಾರದಂತೆಯೇ ಕಾಣುತ್ತಿದೆ.

ಕನ್ನಡದ ಕಾವ್ಯ ಮತ್ತು ಕಾದಂಬರಿ ಪ್ರಕಾರದಲ್ಲಿ ಮಹಿಳೆಯರು ಹೆಚ್ಚು ತೊಡಗಿಕೊಂಡಿದ್ದಾರೆ. ಸಣ್ಣಕತೆ ಹಾಗೂ ವಿಮರ್ಶೆಯಲ್ಲಿ ಅವರ ಸಂಖ್ಯೆ ಕಡಿಮೆ. ಇದೇಕೆಂದು ಅರ್ಥವಿಸಬೇಕಿದೆ. ಈ ಹಿನ್ನೆಲೆಯಲ್ಲಿ ಲೇಖಕಿಯರು ಸಾಹಿತ್ಯದ ಮೌಲ್ಯಮಾಪನ ಮಾಡುವ ಕೆಲಸಕ್ಕೆ ಒಂದು ಸಾಂಸ್ಕೃತಿಕ ಮಹತ್ವವಿದೆ. ಒಬ್ಬ ಸಂವೇದನಶೀಲ ಮಹಿಳೆ, ನಮ್ಮ ಮಹತ್ವದ ಲೇಖಕರ ಬಗ್ಗೆ ಕಲಾಶಕ್ತಿಗಿಂತ, ಹೆಣ್ಣಿನ ಬಗ್ಗೆ ಅವರು ತಾಳಿರುವ ಧೋರಣೆಯ ಬಗ್ಗೆ ಯಾಕೆ ಸೆನ್ಸಿಟಿವ್ ಆಗುತ್ತಾರೆ? ಒಬ್ಬ ದೊಡ್ಡ ಲೇಖಕ ಬರೆದ ಆತ್ಮಕತೆಯ ಚಾರಿತ್ರಿಕ ಮಹತ್ವಕ್ಕಿಂತ, ಆತ ನಿಡುಗಾಲ ತನ್ನ ಜೀವನ ಸಂಗಾತಿಯಾಗಿದ್ದ ಮಡದಿಯ ಬಗ್ಗೆ ಮೌನವಹಿಸುವುದು ಆಕೆಗೆ ಯಾಕೆ ಕಾಡುತ್ತದೆ? ಈ ಪ್ರಶ್ನೆಗಳನ್ನು ನಾವು ಗಂಭೀರವಾಗಿ ಪರಿಶೀಲಿಸಬೇಕಿದೆ. ಇಲ್ಲದಿದ್ದರೆ ದಲಿತವನ್ನು ಒಳಗೊಂಡಂತೆ ಎಲ್ಲ ಬಗೆಯ ಸಂವೇದನ ಪ್ರಧಾನ ಓದನ್ನು ನಿರಾಕರಿಸುವ ಅಸೂಕ್ಷ್ಮತೆ ಉಂಟಾಗುತ್ತದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬಳಕೆಯಾಗುತ್ತಿರುವ ಭಾಷೆಯೇ ಮೂಲತಃ ಪುರುಷವಾಚಿ. ಹೀಗಾಗಿಯೇ ಆಶಾದೇವಿ, ವಿನಯಾ ಬರೆಯುವಾಗ, ಕನ್ನಡದ ಮುಖ್ಯಧಾರೆಯ ವಿಮರ್ಶೆ ಕಾಣಿಸದ ಕೆಲವು ನೋಟಗಳನ್ನು ಅವರು ಕಾಣಿಸುತ್ತಿದ್ದಾರೆ ಅನಿಸುತ್ತದೆ. ಹಾಗೆ ತಾರಿಣಿಯವರದು ಸ್ತ್ರೀವಾದಿ ಎನ್ನಬಹುದಾದ ವಿಮರ್ಶೆಯಲ್ಲ. ಅವರಲ್ಲಿ ಜೆಂಡರ್ ಸೆನ್ಸಿಟಿವಿಟಿಯಿದೆ.

ಆದರೆ ಮಹಿಳಾವಾದದ ಹ್ಯಾಂಗ್ ಓವರಿಲ್ಲದೆ ಕೂಡ ಈ ಕುರಿತ ಪ್ರಶ್ನೆಗಳನ್ನು ಅವರು ಎತ್ತಬಲ್ಲರು. ಆದರೂ ಕವಿಯಾಗಿ ತನ್ನದೇ ಭಾಷೆ ಪಡೆದಿರುವ ತಾರಿಣಿ, ವಿಮರ್ಶೆಯ ಭಾಷೆಯಲ್ಲಿ ತನ್ನದೇ ಆದ ಈಡಿಯಂ ಒಂದನ್ನು ಪಡೆದಿಲ್ಲ್ಲವೇನೋ ಅನಿಸುತ್ತದೆ. ತಾರಿಣಿ ಅವರ ಸದ್ಯದ ವಿಮರ್ಶೆಯ ಒಲವನ್ನು ಕಂಡರೆ, ಅದೀಗ ಕನ್ನಡದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಮತ್ತು ಜನಪ್ರಿಯವೂ ಆಗಿರುವ ಸಾಂಸ್ಕೃತಿಕ ವಿಮರ್ಶೆಯತ್ತ ಇದ್ದಂತಿದೆ. ಕಲಾತ್ಮಕ ಗೀಳಿನಿಂದ ಸಾಹಿತ್ಯ ಓದುವುದು ಒಂದು ಅತಿಯಾದರೆ, ಆಶಯಕ್ಕಾಗಿ ಓದುವುದು ಇನ್ನೊಂದು ಅತಿ. ಮೊದಲನೆಯದು ಒಂದು ರೂಪವನ್ನು ಅಂತಿಮವೆಂದು ಭಾವಿಸಿದರೆ, ಇನ್ನೊಂದು ತನಗೆ ಇಷ್ಟವಾದ ರಾಜಕೀಯ ಸಾಮಾಜಿಕ ಧೋರಣೆ ಮತ್ತು ವಸ್ತುವನ್ನು ಅಂತಿಮವೆಂದು ಭಾವಿಸುತ್ತದೆ. ಇವುಗಳ ಅಪಾಯವನ್ನು ಈಗ ವಿಮರ್ಶೆಯಲ್ಲಿ ಕೆಲಸ ಮಾಡುತ್ತಿರುವ ನಾವೆಲ್ಲರೂ ನದರಿನಲ್ಲಿ ಇಟ್ಟುಕೊಳ್ಳಬೇಕಿದೆ.

ಮಹಾಂತೇಶ ನವಲಕಲ್

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಮಣ್ಣಿನಲ್ಲಿ ಕತೆಗಳನ್ನು ಬೆಳೆಯುವ ಯಾವುದೊ ಸತ್ವವಿದೆಯೆಂದು ತೋರುತ್ತದೆ. ಅಲ್ಲಿಂದ ರಾಜಶೇಖರ ನೀರಮಾನ್ವಿ, ಅಮರೇಶ ನುಗಡೋಣಿ, ಚಿದಾನಂದಸಾಲಿ ಮುಂತಾದ ಪ್ರತಿಭಾವಂತ ಕತೆಗಾರರು ಹೊಮ್ಮಿದರು. ಈ ಸರಣಿಯಲ್ಲಿ ಈಗ ಮಹಾಂತೇಶ ನವಲಕಲ್.

ಕೃಷಿವಿಜ್ಞಾನದಲ್ಲಿ ಪದವೀಧರರಾದ ನವಲಕಲ್ ಒಂದು ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಿಡಿ ಕತೆಗಳಿಗೆ ಉದ್ದಕ್ಕೂ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡು ಬಂದಿರುವ ಇವರು, ಈ ವರ್ಷ `ನೀರಿನ ನೆರಳು’ ಕಥಾಸಂಕಲನಕ್ಕೆ ಬೆಸಗರಹಳ್ಳಿ ಕಥಾಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿ ನವಲಕಲ್ ಅವರಿಗೆ ಬಂದಿರುವುದು ಅರ್ಥಪೂರ್ಣವಾಗಿದೆ. ಯಾಕೆಂದರೆ, ಬೆಸಗರಹಳ್ಳಿಯವರು, ಗ್ರಾಮೀಣ ಬದುಕನ್ನು ಕಕ್ಕುಲಾತಿಯಿಂದ ಹಿಡಿದುಕೊಡುವ ಮೂಲಕ 70ರ ದಶಕದಲ್ಲಿ ಒಂದು ಪರಿಯ ಸಂಚಲನೆ ಮೂಡಿಸಿದ್ದರು. ಅವರ ಕೆಲಸವನ್ನು ಅರ್ಧಶತಮಾನದ ಬಳಿಕ ಬಂದಿರುವ ನವಲಕಲ್ ಕೂಡ ಅಷ್ಟೇ ಕಾಳಜಿಯಿಂದ ಮುಂದುವರೆಸಿದ್ದಾರೆ.

ನವಲಕಲ್ ಪ್ರತಿಭಾವಂತ ಕತೆಗಾರ ಎನ್ನುವುದನ್ನು ಅವರ ಮೊದಲನೇ ಸಂಕಲನವೇ ಪ್ರಕಟಿಸಿಬಿಟ್ಟಿದೆ. ಅವರ  ಕತೆಗಳಲ್ಲಿರುವ ವಿಶೇಷ ಸಂಗತಿಗಳೆಂದರೆ-

1. ರಾಯಚೂರು ಸೀಮೆಯ ಪ್ರಾದೇಶಿಕ ಜೀವನವನ್ನು ಸಮರ್ಥವಾಗಿ ಹಿಡಿದುಕೊಡುತ್ತಿರುವುದು; ಮಾತ್ರವಲ್ಲದೆ, ಪ್ರಾದೇಶಿಕ ವಿಶಿಷ್ಟವಾದ ಅನುಭವ ಮತ್ತು ಭಾಷೆಯನ್ನು ನಗರದ ಮಧ್ಯಮವರ್ಗದ ಓದುಗರ ಮುಂದೆ, ಹೊಸ ಸರಕನ್ನಾಗಿ ಮಂಡಿಸಿ ಬೆರಗುಗೊಳಿಸುವ ವಾಂಛೆಯನ್ನು ಅವರು ಬಿಟ್ಟುಕೊಟ್ಟಿರುವುದು; ಅನುಭವವನ್ನೂ ಅದರ  ಅಭಿವ್ಯಕ್ತಿಗಾಗಿ ಭಾಷೆಯನ್ನೂ ಬಾಳಿನ ಶೋಧಕ್ಕೆ ಬಳಸುತ್ತಿರುವುದು.

2. ಪಾತ್ರಗಳ ಒಳತೋಟಿಯನ್ನು ಚಿತ್ರಿಸುವ ಕುಶಲತೆ ಮತ್ತು ಸೂಕ್ಷ್ಮತೆ ಪ್ರಕಟಿಸಿರುವುದು. ನವ್ಯದ ಕತೆಗಾರರಲ್ಲಿ ದೊಡ್ಡ ಶಕ್ತಿಯಾಗಿದ್ದ ಈ ಮನೋ ವಿಶ್ಲೇಷಣಾತ್ಮಕವಾದ ಕಥನಕ್ರಮವು, 70-80ರ ದಶಕದ ದಲಿತ-ಬಂಡಾಯದ ಕತೆಗಾರರಲ್ಲಿ ಸಾಕಷ್ಟು ಕ್ಷೀಣಗೊಂಡಿತ್ತು. ವಸ್ತು ಮತ್ತು ಧೋರಣಾ ಪ್ರಧಾನವಾದ ಕತೆಗಾರಿಕೆಯು ಮನಸ್ಸಿನ ಒಳಗೆ ಹೊಕ್ಕುನೋಡುವ ಕುತೂಹಲಗಳನ್ನು ಕಡಿಮೆ ಮಾಡಿಕೊಳ್ಳುತ್ತದೆ. ಆದರೆ ನವಲಕಲ್ ರಂತಹ ಹೊಸತಲೆಮಾರಿನ ಲೇಖಕರು ಈ ಕಥನಕ್ರಮವನ್ನು ಅರ್ಥಪೂರ್ಣವಾಗಿ ಮತ್ತೆ ಬಳಕೆಗೆ ತರುತ್ತಿದ್ದಾರೆ.

3. ತಮ್ಮ ವ್ಯಂಗ್ಯಪ್ರಜ್ಞೆಯಿಂದ ಕತೆಗಳ ಲೋಕವನ್ನು ಲವಲವಿಕೆಯಲ್ಲಿ ಇಟ್ಟಿರುವುದು. ಬಹುಶಃ ತೇಜಸ್ವಿ, ದೇವನೂರು, ಕುಂವೀ ಅವರ ಕತೆಗಾರಿಕೆಯ ಪ್ರಭಾವವು, ಇಂತಹ ಕತೆಗಾರರಿಗೆ ಗಂಭೀರತೆಯ ಹೆಸರಲ್ಲಿ ರೋತೆದನಿ ತಾಳದಂತೆ ತಡೆದಿರಬಹುದು. ಇಲ್ಲಿನ ವಿನೋದ ದೃಷ್ಟಿಯು ಜೀವಂತ ಸಂಭಾಷಣೆಗಳಿಗೆ ಮಾತ್ರವಲ್ಲದೆ, ಬಾಳಿನ ಘಟನೆಗಳನ್ನು ಚೂಪಾಗಿ ನೋಡುವುದಕ್ಕೂ ಕಾರಣವಾಗಿದೆ.

4. ಹೊಸ ಅನುಭವದ ಪ್ರಕಟಣೆಗೆ ಬೇಕಾಗಿ ಭಾಷೆಯನ್ನು ಪಳಗಿಸುತ್ತಿರುವ ಪ್ರಯೋಗಗಳು. ನವಲಕಲ್ ಭಾಷೆಯ ಜತೆಗೆ ಆಟವನ್ನು ಆಡಬಲ್ಲರು, ಧ್ವನಿಪೂರ್ಣವಾದ ಸಾಲುಗಳನ್ನು ಬರೆಯಬಲ್ಲರು. ಕಾವ್ಯಮಯ ತೀವ್ರತೆಯಿಂದ ಕೂಡಿದ ಭಾಷೆಯಲ್ಲಿ ನವಲಕಲ್ ಕತೆ ಬರೆಯಬಲ್ಲರು. ಇದಕ್ಕೆ `ಆಕ್ರಾಂತ’ ಕತೆ ಸಾಕ್ಷಿ. ಆದರೂ `ನೀರಿನ ನೆರಳು’ `ಮಹಾಘನ ಕತ್ತಲೆ’ ಮುಂತಾದ ಅನುಭಾವ ಜಗತ್ತಿನ ಪರಿಭಾಷೆಯು ಕತೆಗಳಿಗೆ ಅರ್ಥಪೂರ್ಣವಾಗಿ ಜೋಡಣೆಯಾಗಿದೆ ಅನಿಸುವುದಿಲ್ಲ.

ಎಲ್ಲ ಕತೆಗಾರರು ತಮ್ಮ ಮೊದಲ ಘಟ್ಟದಲ್ಲಿ ಬಾಲ್ಯದ ಅನುಭವಗಳಿಗೆ ಹೋಗುವಂತೆ, ನವಲಕಲ್ ಕೂಡ  ಹೋಗುತ್ತಾರೆ. ಬಾಲ್ಯದ ಅನುಭವ ಬರುವ ಕಡೆ ಕತೆಗಳು ಆಪ್ತವಾದ ಲೋಕವನ್ನು ಕಟ್ಟಿಕೊಳ್ಳುತ್ತವೆ. ಮುಖ್ಯವೆಂದರೆ, ಕತೆಗಾರ ಯಾವುದೇ ಪಾತ್ರದ ಪರ ಇಲ್ಲವೇ ವಿರೋಧವಾಗಿ ನಿಲ್ಲದಿರುವುದು, ಪಾತ್ರಗಳ ಅನಗತ್ಯವಾದ ದುರಳೀಕರಣವಾಗಲಿ ವೈಭವೀಕರಣವಾಗಲಿ ಮಾಡದಿರುವುದು. ಲೋಕದ ಘಟನೆಗಳನ್ನು ಭಾವಾವೇಶ ಪೂರ್ವಗ್ರಹಗಳಿಲ್ಲದೆ ನೋಡುವ ಕತೆಗಾರನ ಸಮಚಿತ್ತತೆಯು ಇಲ್ಲಿ ಬದುಕಿನ ಅರ್ಥಶೋಧನೆಗೆ ಅಗತ್ಯವಾದ  ದಾರ್ಶನಿಕ ಆಯಾಮವನ್ನು ಒದಗಿಸಿದೆ.

ನವಲಕಲ್ ಗಟ್ಟಿಯಾದ ವಸ್ತುವನ್ನು ಆರಿಸಿಕೊಂಡು ಕತೆ ಬರೆಯುತ್ತಾರೆ. ಅದನ್ನು ಸಮರ್ಥವಾಗಿ ಬೆಳೆಸುತ್ತಾರೆ. ಆದರೆ ಅದಕ್ಕೆ ಫಿನಿಶಿಂಗ್ ಟಚ್ ಕೊಡುವುದಕ್ಕೆ ಬೇಕಾದ ತಾಳ್ಮೆ ಮತ್ತು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಕತೆಗಳಲ್ಲಿ ಕೊನೆಯ ಘಟನೆಗಳು ವೇಗವಾಗಿ ನಡೆಯುತ್ತವೆ ಇಲ್ಲವೇ ಸಾಮಾನ್ಯ ಮುಕ್ತಾಯ ಕಾಣುತ್ತವೆ. ಅವರು ಈಚೆಗೆ ಬಿಡಿಯಾಗಿ ಪ್ರಕಟಿಸಿದ `ಭಾರತ ಭಾಗ್ಯವಿಧಾತ’ ಕತೆಯಲ್ಲೂ ಈ ಸಮಸ್ಯೆಯಿದೆ. ಸಂಕಲನದ ಮೊದಲನೇ ಕತೆ `ನೀರಿನನೆರಳು’ ದೀರ್ಘವಾಗಿದೆ ಮತ್ತು ಚದುರಿಕೊಂಡು ಹೋಗಿದೆ. ಬಹುಶಃ ಕಾದಂಬರಿಯ ವಸ್ತುವನ್ನು ಕತೆಗೆ ಪಳಗಿಸುವುದರಿಂದ ಹೀಗಾಗಿದೆಯೊ, ಪತ್ರಿಕೆಗಳಲ್ಲಿ ಪ್ರಕಟಿಸುವ ಹಂಗಿಲ್ಲದೆ ಬರೆದದ್ದರಿಂದ ಹೀಗಾಗಿದೆಯೊ ತಿಳಿಯದು. ಪತ್ರಿಕೆಗಳು ಸಣ್ಣಕತೆಗಳ ಪಾಲಿಗೆ ಸಾಕುವ ತಾಯಿಯೂ ಹೌದು. ಅವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ನಿಯಂತ್ರಿಸುವ ಕತ್ತರಿಗಳೂ ಹೌದು.

ಅಪಾರ ಶಕ್ತಿಯಿರುವ ಕತೆಗಾರರಲ್ಲಿ ಒಬ್ಬರಾಗಿರುವ ನವಲಕಲ್ ಅವರ `ನೀರಿನನೆರಳು’ `ನಾಯಿ ಎಂಬ ಮನುಷ್ಯ’ `ಆಕ್ರಾಂತ’ `ನಾನಾರೆಂದರೆ ನಾನಲ್ಲ’ ಇವು ಕನ್ನಡದ ಅತ್ಯುತ್ತಮ ಕತೆಗಳಾಗಬಲ್ಲವು. ಎಳೆತಲೆಮಾರಿನ ಕಣ್ಣಿನ ಮೂಲಕ ಜಮೀನುದಾರಿ ವ್ಯವಸ್ಥೆಯ ಪಾರಂಪರಿಕ ಕ್ರೌರ್ಯ ಮತ್ತು ಅಸಹಾಯಕತೆಗಳನ್ನು ಬಿಂಬಿಸುವ `ಆಕ್ರಾಂತ’ ಕತೆಯಲ್ಲಿ ಅವರು ಸಾಧಿಸಿರುವ ಯಶಸ್ಸು ಬಹಳ ದೊಡ್ಡದಾಗಿದೆ.

ಇಷ್ಟು ಒಳ್ಳೆಯ ಕತೆಗಳಿಗೆ ಕುಂದು ಬರುವಂತೆ ಕರಡು ದೋಷಗಳಿವೆ. ಅದರಲ್ಲೂ ಅವು ಮುನ್ನುಡಿಯಲ್ಲಿ ಕಿರಿಕಿರಿಯಾಗುವಷ್ಟು ತುಂಬಿಕೊಂಡಿವೆ. ಸಾಹಿತ್ಯವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡದಿರುವ ಅನೇಕ ಲೇಖಕರು, ಕ್ಲೀಷೆಯಿಲ್ಲದ ಹೊಸತನದ ಭಾಷೆ ಬಳಸುವುದುಂಟು. ಆದರೆ ಈ ಹಿನ್ನೆಲೆಯೇ ಕೆಲವೊಮ್ಮೆ ವಿಚಿತ್ರ ಭಾಷಾದೋಷಗಳಿಗೆ ಕಾರಣವೂ ಆಗಬಹುದು. ಇದೇನೂ ಕತೆಗಾರರ ಪ್ರತಿಭೆಯ ಸಮಸ್ಯೆಯಲ್ಲ. ಕುಶಲತೆ ಮತ್ತು ವೃತ್ತಿಪರತೆಯ ಸಮಸ್ಯೆ. ಉತ್ತರ ಕರ್ನಾಟಕದ ಅನೇಕ ಕತೆಗಾರರಲ್ಲಿ ಅನುಭವ ಸಮೃದ್ಧಿಯಿದೆ. ಬರೆಯುವ ಶಕ್ತಿಯಿದೆ. ಆದರೆ ಕಸುಬುದಾರಿಕೆ ವಿಷಯದಲ್ಲಿ ಸೂಕ್ಷ್ಮತೆ ತೋರುವುದಿಲ್ಲ. ಈ ಸಮಸ್ಯೆ ಶಾಂತರಸರಲ್ಲೂ ಇತ್ತು.

ವಿಶೇಷವೆಂದರೆ, ನವಲಕಲ್ ಅವರ ಅರ್ಧಕ್ಕಿಂತ ಹೆಚ್ಚುಕತೆಗಳು, ಆಧುನಿಕ ಕಾರ್ಪೊರೇಟ್ ಜಗತ್ತಿನ ವಸ್ತುವುಳ್ಳವು. ನಮ್ಮ ಈ ಹೊತ್ತಿನ ಅಭಿವೃದ್ಧಿಯ ಸಂಕಥನದ ಮೇಲಿನ ಕಾಮೆಂಟುಗಳಂತಿವೆ ಈ ಕತೆಗಳು. ಎಲ್ಲೋ ಒಂದೆಡೆ ವಿವೇಕ ಶಾನುಭಾಗರ `ಹುಲಿ ಸವಾರಿ’ ನೆನಪು ಸುಳಿದುಹೋಗುತ್ತದೆ; `ಆಕ್ರಾಂತ’ ಕತೆಯು ಕುವೆಂಪು ಅವರ ಕಲ್ಕಿ ಪದ್ಯದ ವಿನ್ಯಾಸವನ್ನು ನೆನಪಿಸುತ್ತದೆ. ಆದರೆ ಪ್ರಭಾವದ ಹಂಗಿನಲ್ಲಿ ಬೀಳುವ ಅಗತ್ಯವಿಲ್ಲದ ಕತೆಗಾರ ನವಲಕಲ್. ಲಾಭ ನಷ್ಟಗಳೇ ಆತ್ಯಂತಿಕ ಮೌಲ್ಯವಾಗಿರುವ ವ್ಯವಹಾರ ಜಗತ್ತಿನೊಳಗಿದ್ದು ಅಲ್ಲಿನ ಕುಟಿಲತೆ, ಕ್ರೌರ್ಯಗಳಿಗೆ ಬೆನ್ನುಕೊಟ್ಟಂತೆ ಬರೆಯುತ್ತಿರುವ ಎಷ್ಟೊ ಲೇಖಕರು ಕನ್ನಡದಲ್ಲಿದ್ದಾರೆ. ಅವರಿಗೆ ಹೋಲಿಸಿದರೆ, ಮಾರ್ಕೆಟ್ ಎಕಾನಮಿಯಿಂದ ಕುಟುಂಬದಲ್ಲೂ ಮಾನವ ಸಂಬಂಧಗಳಲ್ಲೂ ಹುಟ್ಟಿರುವ ತಲ್ಲಣಗಳನ್ನು ನವಲಕಲ್ ಕಕ್ಕುಲಾತಿಯಿಂದ ಹಿಡಿಯಲು ಯತ್ನಿಸುತ್ತಿದ್ದಾರೆ. ಇವತ್ತು ಉದ್ಯಮಲೋಕದ ವಿದ್ಯಮಾನಗಳನ್ನು ನೋಡಲು ಬೇಕಾದ ದುರಂತ ದೃಷ್ಟಿ ಈ ಗ್ರಾಮೀಣ ಲೋಕದಿಂದ ಬಂದ ಲೇಖಕರಿಗೆ ಚೆನ್ನಾಗಿ ದಕ್ಕಿದೆಯೊ ಏನೊ? ಬಹುಶಃ ಇದು ಸಾಧ್ಯವಾಗಿರುವುದು, ಗ್ರಾಮಗಳಲ್ಲಿ ಆಗುವ ಸ್ಥಿತ್ಯಂತರಗಳ ಮೂಲಕ ಈ ಕಾರ್ಪೊರೇಟ್ ಜಗತ್ತಿನ ವಿದ್ಯಮಾನಗಳನ್ನು ನೋಡುತ್ತಿರುವುದರಿಂದಲೇ ಇರಬೇಕು. ಈ ಕಾರಣಕ್ಕೆ ನವಲಕಲ್ ಅವರು (ಬೆಸಗರಹಳ್ಳಿಯವರ ತರಹ) ಕೇವಲ `ಗ್ರಾಮೀಣ ಪ್ರಜ್ಞೆ’ಯ ಕತೆಗಾರರೇನಲ್ಲ. ಸಂವೇದನೆಯ ದೃಷ್ಟಿಯಿಂದ ಇದಕ್ಕೂ ನಾಲ್ಕು ಹೆಜ್ಜೆ ಮುನ್ನಡೆದಿರುವ ಕತೆಗಾರ.

ಚಿದಾನಂದ ಸಾಲಿ

ಚಿದಾನಂದ ಸಾಲಿ ರಾಯಚೂರು ಜಿಲ್ಲೆಯ ಸಿರಿವಾರದವರು. ಪತ್ರಿಕೋದ್ಯಮ ಎಂಎ ಒಳಗೊಂಡಂತೆ ಹಲವಾರು ಪದವಿಗಳನ್ನು ಪಡೆದಿರುವ ಸಾಲಿ ಕೆಲಕಾಲ ಪತ್ರಕರ್ತರಾಗಿದ್ದವರು; ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದವರು; ಆಕಾಶವಾಣಿಯಲ್ಲಿ ಅನೌನ್ಸರ್ ಆಗಿದ್ದವರು; ಸದ್ಯ ಅವರು ಪ್ರೌಢಶಾಲೆಯಲ್ಲಿ ಗಣಿತ ಕಲಿಸುವ ಶಿಕ್ಷಕರಾಗಿದ್ದಾರೆ. ಇಂತಹದೊಂದು ಬಹುತ್ವದ ಹಿನ್ನೆಲೆಯು ಅವರಿಗೆ ಕತೆ, ಕವಿತೆ, ಅನುವಾದ, ವ್ಯಕ್ತಿಚಿತ್ರ, ಅಂಕಣ ಬರೆಹದಂತಹ ಹಲವು ಪ್ರಕಾರಗಳಲ್ಲೂ ಕೆಲಸ ಮಾಡಲು ಪ್ರೇರಿಸಿದಂತಿದೆ.

ಕನ್ನಡ-ತೆಲುಗು ದ್ವಿಭಾಷಿಕ ಪರಿಸರದಲ್ಲಿರುವ ಸಾಲಿಯವರು, ತೆಲುಗಿನಿಂದ ಅನುವಾದ ಮಾಡುವ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತಿದ್ದಾರೆ. ಅವರು ಕಾಳಿಪಟ್ಟಣಂ ರಾಮರಾವ್ ಅವರ ಕತೆಗಳನ್ನೂ (`ಯಜ್ಞ’) ಸಿ.ನಾರಾಯಣರೆಡ್ಡಿ (`ಕಾಲಸಾಕ್ಷಿಯಾಗಿ’) ಹಾಗೂ ಮಹೆಜಬೀನ್ (`ಎಲೆಯುದುರೂ ಕಾಲ’) ಕಾವ್ಯವನ್ನೂ ಅನುವಾದಿಸಿದ್ದಾರೆ. ಶಾಂತಿನಿಕೇತನದಲ್ಲಿ ಕಲಿತುಬಂದ  ಚಿತ್ರಕಲಾವಿದ ಶಂಕರಗೌಡ ಬೆಟ್ಟದೂರು ಅವರ ವರ್ಣಚಿತ್ರಗಳನ್ನು ಪರಿಚಯಿಸುವ `ಚೌಕಟ್ಟಿನಾಚೆ’ ಪುಸ್ತಕ ತಂದಿದ್ದಾರೆ. `ಧರೆಗೆ ನಿದ್ರೆಯು ಇಲ್ಲ’ ಎಂಬುದು ಅವರ ಕಥಾಸಂಕಲನ; `ಮೌನ’  ಗಜಲುಗಳ ಸಂಕಲನ.

ಸಾಲಿ, ಹೀಗೆ ಬಹುಪ್ರಕಾರದಲ್ಲಿ ಕೆಲಸ ಮಾಡಿರುವುದಾದರೂ ಅವರ ನಿಜ ಪ್ರತಿಭೆ ಪ್ರಕಟವಾಗಿರುವುದು ಸಣ್ಣಕತೆಯಲ್ಲೇ. ಬಂದ ಬಹುಮಾನಗಳಲ್ಲಿ ಹೆಚ್ಚಿನವು ಅವರ ಕತೆಗಳಿಗೇ ಬಂದಿವೆ. 1988ರಲ್ಲಿ ಅವರ ಕಥಾಸಂಕಲನ `ಧರೆಗೆ ನಿದ್ರೆಯು ಇಲ್ಲ’ ಪ್ರಕಟವಾಯಿತು.  ಅದನ್ನು ಓದಿದ ಹೊಸತರಲ್ಲಿ, ನಾನು ಅವರಿಗೆ ಬರೆದಿದ್ದ ಪತ್ರವನ್ನು, (ಅವರ ಅನುಮತಿ ಪಡೆದು, ಒಂದೆರಡು ಪದ ಎಡಿಟ್ ಮಾಡಿ) ಇಲ್ಲಿ ಕೊಟ್ಟಿರುವೆ.

ಪ್ರಿಯ ಚಿದಾನಂದ ಸಾಲಿ,
ನಿಮ್ಮ ಕಥಾಸಂಕಲನವನ್ನು ಓದಿದ ಮೇಲೆ ನನಗಾಗಿರುವ ಸಂತೋಷವನ್ನು ಈ ಪತ್ರದ ಮೂಲಕ ಹಂಚಿಕೊಳ್ಳುತ್ತಿರುವೆ. ಇದು ತಕ್ಷಣದ ಪ್ರತಿಕ್ರಿಯೆ. ಇದನ್ನು ವಿಮರ್ಶೆ ಎಂದು ಭಾವಿಸುವ ಅಗತ್ಯವಿಲ್ಲ. ನನಗೆ ಬಹಳ ಇಷ್ಟವಾಗಿದ್ದು, ನೀವು ವಸ್ತುವನ್ನು ಆರಿಸಿಕೊಳ್ಳುವ ಮತ್ತು ಅದನ್ನು ಟ್ರೀಟ್ ಮಾಡುವ ವಿಧಾನ. ಅಮರೇಶ ನುಗಡೋಣಿ ಅವರಂತೆ ನಿಮಗೆ ಕತೆ ಬರೆಯಲು ಗ್ರಾವಿಟಿಯಿರುವ ವಸ್ತುವೇ ಬೇಕಿಲ್ಲ. ಚಿಕ್ಕಪುಟ್ಟ ಎನ್ನಬಹುದಾದ ವಸ್ತುವಿನಲ್ಲೂ ಗಂಭೀರವಾದ ತೊಡಗುವಿಕೆ ಮತ್ತು ಸೂಕ್ಷ್ಮ ವಿಸ್ತರಿಸುವಿಕೆಯಿಂದ ಬಾಳಿನ ಲಯವನ್ನು ಶೋಧಿಸಲು ನಿಮಗೆ ಸಾಧ್ಯವಾಗಿದೆ. ಇದನ್ನು ನಾನು ಜಯಂತ ಕಾಯ್ಕಿಣಿ ಅವರಲ್ಲೂ   ನಿಮ್ಮ ಭಾಗದ ನೀರಮಾನ್ವಿಯವರಲ್ಲೂ ಕಂಡಿದ್ದೇನೆ. ಇದರಿಂದ ಕತೆಯ ರೂಪದ ಬಗ್ಗೆ ಹೆಚ್ಚು ಹಿಡಿತ ವಹಿಸಲು ನಿಮಗೆ ಸಾಧ್ಯವಾಗಿದೆ.

ನಿಮ್ಮ ಹೆಚ್ಚಿನ ಕತೆಗಳು ಮನೋವಿಶ್ಲೇಷಣಾತ್ಮಕವಾಗಿದ್ದು ನವ್ಯ ಕತೆಗಳನ್ನು ನೆನಪಿಸುತ್ತಿವೆ. ಪಾತ್ರಗಳನ್ನು ಸಾವಧಾನವಾಗಿ  ಕಟೆಯಲು ಸಹ ಇದರಿಂದ ನಿಮಗೆ ಸಾಧ್ಯವಾಗಿದೆ. ಆದರೆ ನವ್ಯದ ಈ ಅಂತರ್ಮುಖೀ ವಿಧಾನವು ಜೀವನ ದೃಷ್ಟಿಕೋನದಿಂದ ಕೆಲವು ಮಿತಿಗಳನ್ನು ಒಡ್ಡುತ್ತದೆ. ಕತೆಗಳು ಕೆಲವೊಮ್ಮೆ ನಿರುದ್ದಿಶ್ಯವಾಗಿ ಮುಗಿಯುವಂತಾಗಿರುವುದು ಇದರಿಂದಲೇ. ಆದರೆ ಈ ಅಪಾಯದಿಂದ ಉಳಿಸಿರುವುದು ನಿರೂಪಕ ಪಾತ್ರಗಳಲ್ಲಿರುವ ಅಳವಟ್ಟಿರುವ ಸ್ವವಿಮರ್ಶೆ. ಅಂದರೆ ತಮ್ಮ ಸಣ್ಣತನ ವಿಕ್ಷಿಪ್ತತೆಗಳನ್ನು ತಾವೇ ಕಂಡುಕೊಳ್ಳಲು ಹಿಂಜರಿಯದ ಕಾರಣದಿಂದ ಆ ಪಾತ್ರಗಳಲ್ಲಿ ಸಂಭವಿಸಿರುವ ಪ್ರಾಮಾಣಿಕತೆ ಮತ್ತು ಬ್ಲಾಕ್ ಹ್ಯೂಮರ್ ಅರ್ಥಪೂರ್ಣವಾಗಿದೆ.

ಕಾಮಿಕ್ ಶೈಲಿ ನಿಮ್ಮ ಕತೆಗಳ ಮತ್ತೊಂದು ಶಕ್ತಿ. ಇದಕ್ಕೆ ನಮ್ಮ ಕಾಲದ ಪ್ರಭಾವಶಾಲಿ ಕತೆಗಾರರಾದ ಕುಂವಿಯವರ ಪ್ರಭಾವವೂ ಕಾರಣವಿರಬಹುದು. ಆದರೆ ಈ ವೈನೋದಿಕತೆ ಕುಂವಿಯವರಲ್ಲಿರುವಂತೆ ಸ್ವೇಚ್ಛೆಯಾಗಿಲ್ಲ ಅಥವಾ ನುಗಡೋಣಿಯವರಲ್ಲಿ ಇರುವಂತೆ ವಿನೋದ ರಹಿತವಾಗಿಲ್ಲ; ಸಮತೋಲನದಲ್ಲಿದೆ. ಈ ವಿನೋದದಿಂದ ಜೀವನದ ಮುಡುಕುಮೂಲೆಗೂ ಹೋಗಿ ಅಲ್ಲಿನ ಚಿತ್ರಗಳನ್ನು ನೋಡಲು ನಿಮಗೆ ಸಾಧ್ಯವಾಗಿದೆ. ಅದರಲ್ಲೂ ಅಧೋಲೋಕಗಳನ್ನು ಚಪ್ಪರಿಕೆ ಮತ್ತು ಶೀಲಾಶ್ಲೀಲದ ಹಂಗಿಲ್ಲದೆ ನೋಡುವ ರೀತಿಯು ಚೆನ್ನಾಗಿ ಬಂದಿದೆ.

ನಿಮ್ಮಲ್ಲಿ ಭಾಷೆಯ ಜತೆಗೆ ಆಟವಾಡುವ ಕುಶಲತೆಯಿದೆ. ಅದರಲ್ಲೂ ರಾಯಚೂರಿನ ದೋಆಬ್ ಪ್ರದೇಶದ ಭಾಷೆಯ ಅದ್ಭುತವಾದ ಪ್ರಯೋಗವಿದೆ. ನೈಜಾಂ ಕರ್ನಾಟಕದ ಉರ್ದುಗನ್ನಡದ ಝಲಕಿದೆ. ಕಥನದ ತುಂಬ ಇರುವ ಶಬ್ದಚಿತ್ರಗಳು ಸಹಜವಾಗಿವೆ ಮತ್ತು ಪರಿಣಾಮಕಾರಿಯಾಗಿವೆ.

ನನಗೆ ಇಲ್ಲಿ ಪ್ರಿಯವಾದ ಕತೆಗಳೆಂದರೆ, `ಅಂಬರದೊಳಗಾಡುವ ಗಿಳಿ’  `ಕಾಗೆಯೊಂದಗಳು ಕಂಡರೆ’; ಬಹುಶಃ ಆತ್ಮಕಥನಾತ್ಮಕ ಧಾಟಿಯಲ್ಲಿ ನಿರೂಪಕನ ಬಾಲ್ಯಕ್ಕೆ ಹೋಗಿಬರುವ ಎಲ್ಲ ಕತೆಗಳಲ್ಲೂ ನೀವು ತುಂಬ ಶಕ್ತವಾಗಿ ಕಾಣಿಸುತ್ತೀರಿ. ನಾಗ್ಯಾ, ಚಿನ್ನಪ್ಪಮಾಸ್ತರ, ಅಲ್ಲಮ ಮುಂತಾದ ಪಾತ್ರಗಳು ತುಂಬ ಜೀವಂತವಾಗಿವೆ.

ಆದರೆ `ಕಂಡುದ ಹಿಡಿಯದೆ’ ಕತೆಯ ನಾಟಕೀಯತೆ ಕೊಂಚ ಅತಿ ಮತ್ತು ಕೃತಕ ಅನಿಸಿತು. ನಿಮ್ಮ ವಿನೋದ ಧಾಟಿ ಕೊಂಚ ಮಿತಿಮೀರಿದರೆ, ಕತೆಗಳನ್ನು ಕಟ್ಟಿಹಾಕುವ ಅಪಾಯವಿದೆ. ಹಾಗೆ ತಮ್ಮ ಶೈಲಿಯಲ್ಲಿ ತಾವೇ ಬಂಧಿತರಾದ ಕುಂವಿ `ಅರಮನೆ’ ಕಾದಂಬರಿಯಲ್ಲಿ ಸೋಲುವಡೆದುದನ್ನು ನಾವೆಲ್ಲ ನೋಡಿದ್ದೇವಷ್ಟೆ. `ಕಾಗೆಯೊಂದಗುಳ ಕಂಡರೆ’ ಕತೆಯ ಕೊನೆಯಲ್ಲಿ ಒಂದು ಬಗೆಯ ಗೊಂದಲವಿದೆ ಅನಿಸಿತು.

ಕನರ್ಾಟಕದ ಒಂದೇ ಪ್ರದೇಶದಿಂದ ಬಂದ ನಾಲ್ವರು ಕತೆಗಾರರೆಂದರೆ ಶಾಂತರಸ, ನೀರಮಾನ್ವಿ, ನುಗಡೋಣಿ ಮತ್ತು ನೀವು. ನಾಲ್ಕನೆಯ ತಲೆಮಾರಿಗೆ ಸೇರಿದ ನೀವು ಇವರೆಲ್ಲರಿಗಿಂತ ನಿಮ್ಮದೇ ಆದ ವಿಶಿಷ್ಟತೆಯನ್ನು ಸಾಧಿಸಲು ಯತ್ನಿಸಿದ್ದೀರಿ. ಅದು ಬಹುಮಟ್ಟಿಗೆ ಸಾಧ್ಯವಾಗಿದೆ. ನೀವೊಬ್ಬ ಒಳ್ಳೆಯ ಗದ್ಯ ಬರೆಹಗಾರ. ನಿಮ್ಮ ಗಜಲುಗಳಿಗಿಂತಲೂ ನನಗೆ ನಿಮ್ಮ ಗದ್ಯ ಕಸುವಿನದು ಅನಿಸಿದೆ. ಬದುಕಿನ ಅರ್ಥವನ್ನು ಶೋಧಿಸುವ ದೃಷ್ಟಿಯಿಂದಲೂ ನಿಮ್ಮ ಕಾವ್ಯಕ್ಕೆ ಇಲ್ಲದ ಸಾಮರ್ಥ್ಯವನ್ನು ಗದ್ಯವು ಪ್ರಕಟಿಸುತ್ತಿದೆ. ನಿಮ್ಮಲ್ಲಿ ಅಪಾರ ಶಕ್ತಿಯಿದೆ. ಅದನ್ನು ಪ್ರಕಟಿಸಿರಿ. ನಮಸ್ಕಾರ. ಸ್ನೇಹದ -ರಹಮತ್ ತರೀಕೆರೆ

ಮತ್ತೊಮ್ಮೆ ಸಾಲಿಯವರ ಕತೆಗಳನ್ನು ಓದುವಾಗ, ಅವರು ಅಗತ್ಯಕ್ಕಿಂತ ಹೆಚ್ಚಾಗಿಯೇ ಅಧೋಲೋಕಕ್ಕೆ ಹೋಗಿ ಅಲ್ಲಿನ ವಿಕ್ಷಿಪ್ತ ಲೋಕಗಳನ್ನು ಹಿಡಿಯುತ್ತಿದ್ದಾರೇನೊ ಅನಿಸಿತು. ಅವರದು ಮೂಲತಃ ವ್ಯಕ್ತಿಗಳ ಒಳಹೊಕ್ಕು ಅದರ ತಲ್ಲಣಗಳನ್ನು ಹೆಕ್ಕಿನೋಡುವ ಮನುಷ್ಯ ವರ್ತನೆಗಳ ಹುಡುಕಾಟದ ಬರೆಹ. ಅವರ ಕಥೆಗಳಲ್ಲಿ ಒಂದು ಪರಿಸರಕ್ಕಿಂತ ಇಂಡಿವಿಜ್ಯುಲ್ ಗಳು ಎದ್ದುಕಾಣುತ್ತಾರೆ. ಈ ಇಂಡಿವಿಜ್ಯುಯಲಿಸಂ ಅವರ  ಗಜಲುಗಳಲ್ಲೂ ಇದೆ. ಈ ವಿಷಯದಲ್ಲಿ ಅವರೇ ಅದ್ಭುತವಾಗಿ ಅನುವಾದಿಸಿರುವ ಮೆಹಜಬೀನಳ ಕಾವ್ಯದಿಂದ ಅವರ ಬರೆಹ ಕಲಿಯುವುದಿದೆ ಅನಿಸುತ್ತದೆ. ಆದರೆ ವ್ಯಕ್ತಿಗತ ಹುಡುಕಾಟಗಳು ಒಂದು ಬಗೆಯಲ್ಲಿ ಪರಿಸರದ ತಲ್ಲಣಗಳನ್ನು ಹಿಡಿಯುವ ವಿಷಯದಲ್ಲಿ ಬೆನ್ನುಕೊಡುವಂತೆ ಮಾಡುತ್ತ್ತವೆಯೇನು? ಇದು ಇದೇ ಭಾಗದ ಕಲಿಗಣನಾಥ, ನುಗಡೋಣಿ, ನವಲಕಲ್ ಅವರ ಕತೆಗಳಿಗೆ ಹೋಲಿಸುವಾಗ ಹುಟ್ಟುತ್ತಿರುವ ಶಂಕೆ. ಸಾಲಿ ಕತೆಗಳಲ್ಲಿ ಬಳಸುತ್ತಿರುವ ವಿನೋದ ಕೂಡ ಎಕ್ಸಾಸ್ಟ್ ಆಗುತ್ತಲಿದೆ.

ಹೈದರಾಬಾದ್ ಕರ್ವಾಟಕದ ಲೇಖಕರಿಗೆ, ಅದರಲ್ಲೂ ರಾಯಚೂರು ಸೀಮೆಯವರಿಗೆ, ಪರಿಸರದಿಂದಲೇ ಸಹಜವಾಗಿ ಉರ್ದುವಿನ ಒಡನಾಟ ಸಿಕ್ಕಿಬಿಡುತ್ತದೆ. ರಾಯಚೂರು ಶಾಂತರಸ ಮುಕ್ತಾಯಕ್ಕ, ಮುದ್ದಣ್ಣ ಮಂಜರ್, ಅಮರಚಿಂತ ಮುಂತಾದ ಗಜಲ್ ಕವಿಗಳು ಊರು. ಉರ್ದು ಕವಿಗಳೂ ಇರುವ ಊರು. ಇಂತಹ ಪರಿಸರದಲ್ಲಿ ಬೆಳೆದ ಸಾಲಿಯವರು ಗಜಲ್ ಬರೆಯಲು ಸಾಧ್ಯವಾಗಿದೆ. ಸಾಲಿಯವರ ಗಜಲ್ ಗಳು ನಿಜಕ್ಕೂ ಚೇತೋಹಾರಿಯಾಗಿವೆ. ಅಲ್ಲಿಂದ ಹಲವಾರು ಸುಂದರವಾದ ಸಾಲುಗಳಿವೆ. ಆದರೆ `ಪರ್ಸನಲ್’ ಎನ್ನಬಹುದಾದ ಅಂತರಂಗದ ರೊಮ್ಯಾಂಟಿಕ್ ಭಾವ ಮತ್ತು ದುಗುಡಗಳನ್ನು ಹಿಡಿಯುವ, ಲೋಕದ ಕೋಲಾಹಲಗಳನ್ನು ಅಷ್ಟಾಗಿ ಒಳಗೊಳ್ಳದ ಈ ಪ್ರಕಾರದಲ್ಲಿ, ಒಬ್ಬ ಕವಿ ಎಷ್ಟು ದೂರ ಹೋಗಬಹುದು?

ನಿಜಕ್ಕೂ ಖುಷಿಯಾಗುವುದು ಮತ್ತು ಅಭಿನಂದಿಸಬೇಕು ಅನಿಸುವುದು ಸಾಲಿಯವರ ಮೆಹಜಬೀನ್ ಅನುವಾದಕ್ಕೆ (`ಎಲೆಯುದುರೊ ಕಾಲ’); ತೆಲುಗಿನ ವಿಶಿಷ್ಟ ಸಂವೇದನೆಯ ಕವಿಯಾದ ಮೆಹಜಬೀನ್ ಕಾವ್ಯವನ್ನು ಅವರು ಬಹಳ ಆಪ್ತವಾಗಿ ತನ್ಮಯವಾಗಿ ಅನುವಾದಿಸಿದ್ದಾರೆ. ಮಹಜಬೀನ್ ಕಾವ್ಯದಲ್ಲಿರುವ ಫ್ರೆಶ್ಶೆನಿಸುವ ಹೆಣ್ತನದ ಭಾವನೆಗಳನ್ನು ಸಶಕ್ತವಾಗಿ ತಂದಿದ್ದಾರೆ. ಹಿಂದೆ ಈ ಭಾಗದ ಎಂ.ಲಕ್ಷ್ಮಣ ಅವರು ತೆಲುಗಿನಿಂದ ಚೆರಬಂಡರಾಜು ಕಾವ್ಯವನ್ನು ತಂದಿದ್ದರು. ಆದರೀಗ ಹೊಸತಲೆಮಾರಿನ ಲೇಖಕರ ಆಯ್ಕೆ ಬದಲಾಗಿದೆ. ಇದಕ್ಕೆ ನಮ್ಮ ನಾಡಿನ ಬದಲಾದ ಸನ್ನಿವೇಶಗಳೂ ಪ್ರೇರಕವಾಗಿವೆ. ಇಷ್ಟಂತೂ ನಿಜ. ಕವಿಯಾದ ಸಾಲಿಯವರ ಸುಂದರವಾದ ಗಜಲುಗಳನ್ನೂ ಪಕ್ಕಕ್ಕೆ ಸರಿಸುವಂತೆ, ಅವರ ಈ ಅನುವಾದವು ಮಹತ್ವದ್ದಾಗಿ ಕಾಣುತ್ತಿದೆ.

ಸಾಲಿ ಈಚೆಗೆ ಸಂದರ್ಶನವೊಂದರಲ್ಲಿ ಮಾತಾಡುತ್ತ, ತಮ್ಮ ಬರೆಹದ ಸವಾಲುಗಳೇನು ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ:  “ಅಸಮಾನತೆ, ಕೀಳರಿಮೆ, ಅವಮಾನ ಮತ್ತು ನಿರ್ಲಕ್ಷ್ಯ. ಇವುಗಳಿಂದಾಗಿಯೇ ಹೆಚ್ಚುಹೆಚ್ಚು ಬರೆಯುವ ಹುಮ್ಮಸ್ಸು ತನ್ನೆಲ್ಲ ಶಕ್ತಿಯಿಂದ ಪುಟಿದೇಳುವುದು”; ಒಬ್ಬ ತರುಣ ಲೇಖಕನ ಈ ತಲ್ಲಣಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಈ ಹತಾಶೆ ಸಾಮಾಜಿಕವಾದದ್ದಾದರೆ ಒಂದರ್ಥ ಬರುತ್ತದೆ;  ಸಾಹಿತ್ಯಕವಾದುದಾದರೆ ಮತ್ತೊಂದು ಅರ್ಥ ಒದಗುತ್ತದೆ. ಲೇಖಕರಲ್ಲಿ ಅಸ್ಮಿತೆರಹಿತ ಸ್ಥಿತಿಯನ್ನು ಗಾಢವಾಗಿ ಪರಿಭಾವಿಸುವುದೂ ಬರೆಹಕ್ಕೆ ಒಂದು ಪ್ರೇರಣೆಯೇ? ಕರ್ನಾಟಕದಲ್ಲಿ ಮಾಸ್ ಮೂವ್ ಮೆಂಟುಗಳು ಕ್ಷೀಣಿಸಿರುವ ಸನ್ನಿವೇಶದಲ್ಲಿ ಅಥವಾ ಇರುವ ಚಳುವಳಿಗಳಲ್ಲಿ ಭಾಗವಹಿಸದ ಕಾರಣದಿಂದ ಲೇಖಕರಲ್ಲಿ ಇಂತಹ ತುಮುಲಗಳು ಹುಟ್ಟಿಕೊಳ್ಳುತ್ತಿವೆಯೇ? ಸ್ಪರ್ಧೆ ಗೆಲುವು ಮತ್ತು ಸೋಲುಗಳೇ ದೊಡ್ಡ ಮೌಲ್ಯಗಳಾಗಿರುವ ಮಾರುಕಟ್ಟೆಯ ಸಂಸ್ಕೃತಿ ಲೇಖಕರನ್ನೂ ಹೀಗೆ ಕ್ಯಾರಿಯರಿಸ್ಟ್ ಮಾಡುತ್ತಿದೆಯೊ? ಮಾಧ್ಯಮಗಳು ತಮಗೆ ಬೇಕಾದ ಲೇಖಕರಿಗೆ ಸೃಷ್ಟಿಸುತ್ತ ಮತ್ತು ಪೋಷಿಸುತ್ತ ತಮ್ಮನ್ನು ಹೊರಗಿಟ್ಟಿವೆಯೆಂದು ರಾಜಧಾನಿಯಾಚೆಯ ಊರುಗಳ ಲೇಖಕರಲ್ಲಿ ತಲ್ಲಣವಿದೆಯೊ? ಅಥವಾ ಇಂತಹದ್ದನ್ನೆಲ್ಲ ಮೀರುವ ಪ್ರಬುದ್ಧತೆಯನ್ನು ನಮ್ಮ ಲೇಖಕರು ತಣ್ಣಗೆ ಪಡೆದುಕೊಳ್ಳುವ ಜರೂರನ್ನು ಇದು ಸೂಚಿಸುತ್ತಿದೆಯೊ? ಹೇಳುವುದು ಸಂದಿಗ್ಧವಾಗಿದೆ.

ಬಿ. ಪೀರ್ ಬಾಶಾ

ಬಳ್ಳಾರಿ ಜಿಲ್ಲೆಯ ಹಡಗಲಿಯವರಾದ ಪೀರ್ ಬಾಶಾ, ಮೂಲತಃ ಕವಿ. ಈವರೆಗೆ ಅವರು ನಾಲ್ಕು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. `ಜೀವಬಂತು ಹಾದಿಗೆ’ (1992) ಹಾಗೂ `ಜಾಲಿಯಹೂಗಳ ನಡುವೆ’ (2000)-ಅವರ ಕವನ ಸಂಗ್ರಹಗಳು. ಇವೆರಡು ಸಂಕಲನಗಳಿಂದ ಆಯ್ದ ಕವಿತೆಗಳನ್ನೂ ಈಚಿನ ಕವಿತೆಗಳನ್ನೂ ಸೇರಿಸಿ, ಈಗ `ದೇವರು ಮನುಷ್ಯರಾದ ದಿನ’ (2009) ಸಂಕಲನವೂ ಬಂದಿದೆ. `ಉರಿಯ ಬೆಳಕು ಬಂಗಾಳ’ (2005)  ಪ್ರವಾಸ ಕಥನವಾದರೆ, `ಸಮಾಜವಾದಿ ಹೋರಾಟಗಾರರ ಸಂದರ್ಶನ’ವು (2007) ಹೆಸರೇ ಸೂಚಿಸುವಂತೆ ಸಂದರ್ಶನ ಸಂಪುಟ. ಕವನ ಸಂಕಲನಗಳು ಪೀರ್ ಅವರ ಧ್ಯಾನಶೀಲ ಪ್ರವೃತ್ತಿಯ ಫಲಗಳಾಗಿದ್ದರೆ, ಕೊನೆಯ ಎರಡು ಕೃತಿಗಳು, ಕಾಲಲ್ಲಿ ಚಕ್ರ ಕಟ್ಟಿಕೊಂಡು ತಿರುಗಾಡುವ ಅವರ ಹವ್ಯಾಸದಿಂದ ಹುಟ್ಟಿದವು. ಆದರೆ ಈ ಎಲ್ಲವೂ ಅವರ ರಾಜಕೀಯ ಚಟುವಟಿಕೆ, ಸೈದ್ಧಾಂತಿಕ ಬದ್ಧತೆ ಹಾಗೂ ಅಕ್ಟಿವಿಸಮ್ ಗಳ ಭಾಗವಾಗಿವೆ. ಚಳುವಳಿಗಳಿಗೆ ಇಷ್ಟೊಂದು ತವಕಿಸುವ ತೊಡಗಿಸಿಕೊಳ್ಳುವ ಲೇಖಕರು ಹೊಸತಲೆಮಾರಿನಲ್ಲಿ ಕಡಿಮೆ.

ಒಬ್ಬ ಸಾಮಾಜಿಕ ಕಾರ್ಯಕರ್ತರಾಗಿರುವ ಪೀರ್, 80ರ ದಶಕದ ಚಳುವಳಿಗಳು ಕ್ಷೀಣವಾಗುವ ಹೊತ್ತಿನಲ್ಲಿ ಬರೆಯಲಾರಂಭಿಸಿದವರು; ಆ ಹೊತ್ತಿಗಾಗಲೇ, ನಾನಾ ಕಾರಣಗಳಿಂದ ಹೊಳಪು ಕಳೆದುಕೊಳ್ಳುತ್ತಿದ್ದ `ಖಡ್ಗವಾಗಲಿ ಕಾವ್ಯ, ಜನರ ನೋವಿಗೆ ಮಿಡಿವ ಪ್ರಾಣಮಿತ್ರ’ ಆಶಯವನ್ನು ಸೀರಿಯಸ್ಸಾಗಿ ಸ್ವೀಕರಿಸಿದವರು. ಇದಕ್ಕೆ ಸಾಕ್ಷಿಯಾಗಿ ಇಲ್ಲಿನ ಕೆಲವು ಕವನಗಳಲ್ಲಿ ಕಾಣುವ ದರ್ಗಾ ಮತ್ತು ಸಿದ್ಧಲಿಂಗಯ್ಯನವರ ಪ್ರಭಾವಗಳಿವೆ. ಅವರ ಎರಡನೇ ಸಂಕಲನಕ್ಕೆ ಕಾಮ್ರೇಡ್ ಗಳಾದ ರಂಜಾನ್ ದರ್ಗಾ ಮತ್ತು ಎಸ್.ಎಸ್. ಹಿರೇಮಠ ಅವರು ಮುನ್ನುಡಿ ಮತ್ತು ಹಿನ್ನುಡಿ ಬರೆದಿರುವುದೂ ಗಮನಾರ್ಹ. ರಾಜಕೀಯ ಕ್ರಿಯೆಯ ಭಾಗವಾಗಿ ಕಾವ್ಯವನ್ನು ಬರೆಯುವ ಅಥವಾ ಬರೆದ ಕಾವ್ಯ ರಾಜಕೀಯ ಆಶಯವನ್ನು ಸಾಕಾರಗೊಳಿಸಬೇಕೆಂಬ ಅವರ ತುಯ್ತವು, ಮೊದಲನೇ ಸಂಕಲನದಲ್ಲಿ ಸಾಕಷ್ಟು ಒರಟಾಗಿ ಪ್ರಕಟವಾಗಿದೆ. ಆದರೆ ಎರಡು ಮತ್ತು ಮೂರನೆಯ ಸಂಕಲನಗಳು, ವಾಸ್ತವಕ್ಕೆ ಡಿಕ್ಕಿಹೊಡೆದು ಕೆಲವು ಭ್ರಮೆ ಮತು ಅತ್ಯುತ್ಸಾಹಗಳನ್ನು ಕಳೆದುಕೊಂಡು, ಸನ್ನಿವೇಶದ ವೈರುಧ್ಯಗಳನ್ನು ಧೇನಿಸುತ್ತ ಹುಟ್ಟಿದೆ. ಆದರೆ ಇಲ್ಲಿಯೂ `ಸಮತೆ ಸಾರುವ ಗಿಡಕೆ ಬೇರುಗಳೇ ನಾವಾಗಿ ಜಗದ ನೆಲದಾ ತುಂಬ ಹಸಿರವಾಗುವ’ ಎಂದು ಕ್ರಾಂತಿಯ ಆಶಯಗಳನ್ನು ಸರಳ ಉಮೇದಿನಲ್ಲಿ ಬರೆಯುವ ರ್ಹೆಟೊರಿಕ್ ಸಾಲುಗಳಿವೆ; “ನನಗೆ `ಗುಲಾಬಿ ಹೂಗಳ ನಡುವೆ’ ನಿಂತು ಬರೆಯಲು ಸಾಧ್ಯವಾದರೆ ನಾನು ಖಂಡಿತ ಸಂತೋಷಿಸುತ್ತೇನೆ. ಗುಲಾಬಿ ನಮ್ಮ ಕನಸು. ಜಾಲಿ ನಮ್ಮ ಸವಾಲು” ಎಂಬ ಸಂಕಲ್ಪಗಳಿವೆ. ಆಕ್ಟಿವಿಸ್ಟ್ ಲೇಖಕರಲ್ಲಿ ಈ ಬಗೆಯ ಕರೆಗೊಡುವ ಧಾಟಿ, ಜವಾಬ್ದಾರಿ ನಿಭಾಯಿಸುವ ವೀರನಿಷ್ಠೆಗಳು ಸಹಜ. ಆದರೂ ಭಾವಾವೇಶ ಮತ್ತು ಅತಿಭಾರದ ಹೊಣೆಗಾರಿಕೆ ಭಾವಗಳು ಕಡಿಮೆಯಾಗಿ, ವಿಷಾದವೂ ವೇದನೆಯೂ ಚಿಂತನೆಯೂ ಎರಡನೇ ಸಂಕಲನದಲ್ಲಿ ಮಡುಗಟ್ಟಿಕೊಂಡಿವೆ. ಈ ಕಾರಣಕ್ಕೆ ಇಲ್ಲಿನ ಕಾವ್ಯ ಹೆಚ್ಚು ಮೆಚ್ಯೂರಡ್ ಕೂಡ ಆಗಿದೆ. ಭಾಷೆಯ ಬಳಸುವಿಕೆ ಮತ್ತು ಕವಿತೆ ರಚಿಸುವ ವಿಷಯದಲ್ಲಿ ಕವಿಗೆ ರೂಪದ ಮೇಲೆ ನಿಯಂತ್ರಣ ಸಾಧ್ಯವಾಗಿದೆ. ಇದನ್ನು `ಪುಟ್ಟಪೆಟ್ಟಿಗೆ ನೆನಪು’ ತರಹದ ಸರಳವೂ ಹೃದ್ಯವೂ ಆದ ಕವನದಲ್ಲಿ ನೋಡಬಹುದು. ಸಮುದಾಯ ಬದ್ಧತೆ ಮತ್ತು ಮಾನವತಾವಾದ ಪೀರ್ ಕಾವ್ಯದ ಲಕ್ಷಣ.

ಪೀರ್ ಕವಿತೆ ಬರೆಯುವುದಷ್ಟೇ ಅಲ್ಲ; ಗೋಷ್ಠಿಗಳಲ್ಲಿ ಅದನ್ನು ಚೆನ್ನಾಗಿ ಸಂವಹನವಾಗುವಂತೆ ವಾಚನ ಕೂಡ ಮಾಡುತ್ತಾರೆ. ಸಭೆಗಳಲ್ಲಿ ಸ್ಪಷ್ಟವಾಗಿ ಪರಿಣಾಮಕಾರಿಯಾಗಿ ಮಾತಾಡುವ ವಾಗ್ಮಿತೆ ಅವರಿಗೆ ಚಳುವಳಿಗಳಿಂದ ಬಂದ ಕಲೆಯಿದ್ದೀತು; ತಾರ್ಕಿಕತೆ, ತಾತ್ವಿಕ ಖಚಿತತೆ ಮತ್ತು ನೇರತನ ಪೀರ್ ಅವರ ಮಾತು ಮತ್ತು ಬರೆಹದ ವಿಶಿಷ್ಟತೆ. ಇವು ಗದ್ಯಕ್ಕೂ ಚಳುವಳಿಯ ಕ್ರಿಯಾಶೀಲತೆಗೂ ಅಗತ್ಯವೇ. ಆದರೆ ಕಾವ್ಯಕ್ಕೆ? ಕಾವ್ಯವು ವಿಚಾರ ಮತ್ತು ಅ-ವಿಚಾರಗಳ ಆಚೆಗಿನ ಭಾಷೆಯಲ್ಲಿ ಹುಟ್ಟುವಂತಹುದು. ಹೀಗಾಗಿ ತಾರ್ಕಿಕತೆ ಮತ್ತು ಅತಿಸ್ಪಷ್ಟತೆಗಳನ್ನು ಮೀರಿದ ನೆಲೆಯಲ್ಲಿ ಬರೆಹ ಮತ್ತು ಚಿಂತನೆಯನ್ನು ಕೊಂಡೊಯ್ಯಲು ಅವರಿಗೆ ತೊಡಕಾಗಿದೆ ಎಂದು ಅನಿಸುತ್ತದೆ. ಅವರ ಗದ್ಯಕ್ಕೆ ಈ ತೊಡಕನ್ನು ಮೀರುವುದಾಗಿಲ್ಲ. ಆದರೆ ಬಾಳಿನ ವೈರುಧ್ಯಗಳನ್ನು ಧೇನಿಸುವ `ತ್ರಿಕೋನದ ನಡುವೆ’ `ದೇವರೆಲ್ಲ ಮನುಷ್ಯರಾದ ದಿನ’ `ಅಮೇಜಾನಿನ ಹಾಗೆ’ `ರಾಮರಾಮ! ನೀನು ಮರವಾಗು’ `ಮಾ ನಿಷಾಧ’ ಮುಂತಾದ ಇಲ್ಲಿನ ಚಿಂತನಶೀಲವಾದ ಶ್ರೇಷ್ಠ ಕವನಗಳಲ್ಲಿ ಈ ಮೀರುವಿಕೆ ಸಾಧ್ಯವಾಗಿದೆ. ಎಂತಲೇ ಇಲ್ಲಿ `ದೀಪವಾರಿಸು ಗೆಳೆಯಾ ನನಗೆ ಬೆಳಕುಬೇಕು’ ಎಂಬ ಸಾಲುಗಳಿವೆ. 

ಕರ್ನಾಟಕದಲ್ಲಿ ಒಂದು ಕಾಲಕ್ಕೆ ರಾಜಕಾರಣವನ್ನು ತಮ್ಮ ಬದ್ಧತೆ ಮತ್ತು ಆಕ್ಟಿವಿಸಂಗಳಿಂದ ಆವರಿಸಿಕೊಂಡಿದ್ದ ಸಮಾಜವಾದಿಗಳು, ನಂತರ ನಾನಾ ಕಾರಣಗಳಿಂದ ಅಜ್ಞಾತವಾಸಕ್ಕೆ ಸಂದರು. ಪೀರ್ ಅಂತಹವರನ್ನೆಲ್ಲ ಹುಡುಕಿ ಸಂದರ್ಶನ ಮಾಡಿ ಪ್ರಕಟಿಸಿದ ಸಂಪುಟವು ಕರ್ನಾಟಕದ ಚಳುವಳಿಗಳ ಚರಿತ್ರೆಯ ದೃಷ್ಟಿಯಿಂದ ಮುಖ್ಯವಾಗಿದೆ. ಇದಕ್ಕಾಗಿ ಪೀರ್ ಮುಂಬೈ ಅಂಕೋಲೆ ಬೀದರ ಎಂದೆಲ್ಲ ಸುತ್ತಾಟ ಮಾಡಿದ್ದಾರೆ. ಇಲ್ಲಿ ಬಹಳಷ್ಟು ಚಳುವಳಿಗಾರರಿಗೆ ಸೈತ ಅಪರಿಚಿತರಾಗಿರುವ ಪೊನ್ಮಮ್ಮಾಳ್, ಕೆ.ಎಸ್.ಕಾರಂತ ಮುಂತಾದವರ ಸಂದರ್ಶನಗಳಿವೆ. ಇಲ್ಲಿ ಎರಡು ತಲೆಮಾರಿನ ನಡುವಣ ತಾತ್ವಿಕ ನೋಟಗಳ ಭಿನ್ನತೆ ಮತ್ತು ಈ ಕಾರಣದಿಂದಲೇ ಹುಟ್ಟಿರುವ ಚಕಮಕಿಗಳನ್ನು ಕಾಣಬಹುದು. ಕಮ್ಯುನಿಸ್ಟ್ ಗರಡಿಯಲ್ಲಿ ಪಳಗಿರುವ ಸಂದರ್ಶಕರು, ಕಮ್ಯುನಿಸ್ಟರನ್ನು ತೀವ್ರ ಟೀಕಿಸುತ್ತಿದ್ದ ಲೋಹಿಯಾವಾದಿಗಳ ಜತೆ ಮಾತಾಡಿರುವುದರಿಂದ ಇಲ್ಲೊಂದು ಬಗೆಯ ಸೈದ್ಧಾಂತಿಕ ಚಕಮಕಿ ಏರ್ಪಟ್ಟಿದೆ. ಆದರೆ ಕೆಲವು ಕಡೆ ಸಂದರ್ಶಕರ ವಯೋಸಹಜ ಕೆಚ್ಚಿನಿಂದಲೊ ಸಿದ್ಧಾಂತದ ಹಮ್ಮಿನಿಂದಲೊ ಮಾತುಕತೆ ವಿಚಾರಣೆಯ ಸ್ವರೂಪವನ್ನೂ ಪಡೆದುಕೊಂಡಿದೆ. ಆದರೂ ಈ ಹಿರಿಯ ಜೀವಗಳು ನಾಡನ್ನು ಕಟ್ಟಲು ತಮ್ಮ ಬದುಕನ್ನೇ ತೇದಿವೆ ಎಂಬ ಗೌರವ, ಇವರ ಚಿಂತನೆಗಳು ಔಟ್ ಡೇಟೆಡ್ ಆಗಿವೆ ಎಂಬ ನಿರಾಸೆ, ಈಗ ಅವರಿರುವ ಅಸಹಾಯಕ ಸ್ಥಿತಿಯ ಬಗ್ಗೆ ಕಳಕಳಿ ಇವೆಲ್ಲವೂ ಬ್ಲೆಂಡ್ ಆಗಿದ್ದು, ಇಲ್ಲಿನ ಸಂದರ್ಶನಗಳು ಮಹತ್ವದ ಸಾಂಸ್ಕೃತಿಕ ದಾಖಲೆಗಳಾಗಿವೆ; ಇವು ಅಜ್ಜನನ್ನು ಪ್ರೀತಿಸುವ ಆದರೆ ತಾತ್ವಿಕವಾಗಿ ಒಪ್ಪದ ಮೊಮ್ಮಗನ ಜಗಳಗಳಂತಿವೆ. ಪೀರ್ ಇದಕ್ಕೆ ಬರೆದಿರುವ ಸುದೀರ್ಘ ಪ್ರಸ್ತಾವನೆಯು ಅವರ ಅಧ್ಯಯನಶೀಲತೆ, ಸೈದ್ಧಾಂತಿಕ ಸ್ಪಷ್ಟತೆ ಹಾಗೂ ಚಿಂತನಶೀಲತೆಯ ದ್ಯೋತಕವಾಗಿದೆ.

ಸಾಹಿತ್ಯ ಅಕೆಡಮಿ ಯುವಲೇಖಕರಿಗಾಗಿ ಪ್ರವಾಸ ಕಳಿಸುವ ಯೋಜನೆಯಲ್ಲಿ ಕಲ್ಕತೆಗೆ ಹೋಗಿ ಬರೆದ ಪ್ರವಾಸಕಥನ. ಪೀರ್ ನ ಆಯ್ಕೆ ಬಂಗಾಳವಾಗಿರುವುದಕ್ಕೆ ಕಾರಣ ತನಗೆ ತಾನೇ ಸ್ಪಷ್ಟವಾಗಿದೆ. ಎಡಸಿದ್ಧಾಂತವು ರಾಜಕೀಯ ಪ್ರಯೋಗಕ್ಕೆ ಒಳಪಟ್ಟಿರುವ ರಾಜ್ಯಕ್ಕೆ ಹೋಗುವಾಗ ಸಹಜವಾಗಿ ಇದ್ದ ಭಾವಾನಾತ್ಮಕ ಉತ್ಸಾಹ, ಅಲ್ಲಿನ ವಾಸ್ತವವನ್ನು ಕಣ್ಣಾರೆ ಕಂಡಾಗ ಸಾಕಷ್ಟು ಕಡಿಮೆಯಾಗಿದೆ. ಆದರೂ ಆಳದಲ್ಲಿ ಬಂಗಾಳದ ರಾಜಕಾರಣದ ಬಗ್ಗೆ ಡಿಫೆನ್ಸಿವ್ ಆಗಿರುವುದೇ ಅಲ್ಲಿನ ನೋಟಗಳಿಗೆ ಮಿತಿಯನ್ನೂ ತಂದುಕೊಟ್ಟಿದೆ. ಇದರಲ್ಲಿ ಬಂಗಾಳದ ಲೇಖಕರು ಬುದ್ಧಿಜೀವಿಗಳ ಸಂದರ್ಶನಗಳಿವೆ. ಆದರೆ  ಅತ್ಯುತ್ತಮ ಭಾಗಗಳು ಕಲ್ಕತೆಯ ಬೀದಿ ಬದುಕಿನ ಚಿತ್ರಗಳೇ. ಇಲ್ಲಿನ ಉಜ್ವಲವಾದ ಭಾಗವೆಂದರೆ, ಪುಸ್ತಕ ಮೇಳಕ್ಕೆ ಬೆಂಕಿ ಬೀಳುವ ಪ್ರಸಂಗ. ಗದ್ಯವನ್ನೂ ಪದ್ಯದಂತೆ ಧ್ವನಿಪೂರ್ಣವಾಗಿ ಬಳಸಿರುವ ಪೀರ್, ಅನೇಕ ಒಳನೋಟಗಳನ್ನು ಇಲ್ಲಿ ಚೆಲ್ಲಿದ್ದಾರೆ. ಆದರೂ ಈ ಕಥನ ಅವರ ಕಾವ್ಯದಷ್ಟು ದೊಡ್ಡ ಸಾಧನೆ ಮಾಡಿದೆ ಅನಿಸುವುದಿಲ್ಲ.

“ನನ್ನನ್ನು ಹನಿಯಾಗಿ ಹೊತ್ತು ಹರಿದಿದ್ದ `ಸಾವಿರಾರು ನದಿ’ಗಳೆಲ್ಲ ಈ ಹೊತ್ತು ಕೋಮುವಾದದ ಕಾವಿಗೆ ಬತ್ತಿ ಕೆರೆಯಂಗಳವಾದವು” ಎಂದು ಕವಿ ಒಂದೆಡೆ ನೋವುಣ್ಣುವುದುಂಟು. ಹಿರಿಯ ಲೇಖಕರು ವ್ಯವಸ್ಥೆಯ ಹೊಟ್ಟೆಯಲ್ಲಿ ಕರಗಿಹೋಗುತ್ತಿರುವ, ಇಂಟಿಗ್ರಿಟಿ ಕಳೆದುಕೊಳ್ಳುತ್ತಿರುವ ಬಗ್ಗೆ ಆಕ್ರೋಶವಿದೆ; ಚಳುವಳಿಗಳು ಇಲ್ಲದಿರುವುದೇ ಹೊಸತಲೆಮಾರಿನ ಲೇಖಕರ ಅನೇಕ ತಾತ್ವಿಕ ಮತ್ತು ಬರೆಹದ ಬಿಕ್ಕಟ್ಟುಗಳಿಗೆ ಕಾರಣವೆಂದು ಕೂಡ ಅವರು ನಂಬಿದ್ದಾರೆ; ಆದರೆ ಈ `ಶೂನ್ಯಸ್ಥಿತಿ’ಯೇ ಹೊಸತಲೆಮಾರಿನ ಲೇಖಕರಿಗೆ ಚರಿತ್ರೆ ಒಡ್ಡಿರುವ ಆಹ್ವಾನ ಎಂದು ಪರಿಭಾವಿಸತೊಡಗಿದರೆ, ಈ ತಬ್ಬಲಿಭಾವ ಕಡಿಮೆಯಾದೀತೊ ಏನೊ?

ಪೀರ್ `ದೇವರು ಮನುಷ್ಯರಾದ ದಿನ’ ಕವನ ಸಂಕಲನವನ್ನು ಈಚೆಗೆ ತೀರಿಕೊಂಡ ಪ್ರೊ. ಎಸ್.ಎಸ್. ಹಿರೇಮಠ ಅವರಿಗೆ ಅರ್ಪಿಸಿದ್ದಾರೆ. ಹಿರೇಮಠ ಅವರು ಬಳ್ಳಾರಿ ಜಿಲ್ಲೆಯಲ್ಲಿ ಅನೇಕ ತರುಣರನ್ನು ಕಮ್ಯುನಿಸ್ಟ್ ಚಿಂತನೆಯೊಳಗೆ ರೂಪಿಸಿದರು; ಅವರಿಗೆ ಕವಿತೆ ಬರೆಯುವುದಕ್ಕೂ ಪ್ರೇರಿಸಿದರು. ಅವರು ಬರೆದಿದ್ದನ್ನು ಪ್ರಕಟಿಸಿದರು. ಸಾರ್ವಜನಿಕ ಪ್ರಾಮುಖ್ಯತೆ ಇರುವ ಇಶ್ಯೂಗಳಿಗಾಗಿ ಬೀದಿಗಿಳಿಯುವ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಕ್ರಿಯಾಶೀಲತೆ ಇರುವ ಒಂದು ಪಡೆಯನ್ನೂ ಕಟ್ಟಿದರು. ಈ ಪಡೆಯ ಸೈನಿಕರಲ್ಲಿ ಪೀರ್ ಒಬ್ಬರು. ವಿಚಿತ್ರವೆಂದರೆ, ಹೀಗೆ ಎಡಪಂಥೀಯ ಚಳುವಳಿಯನ್ನು ಈ ಭಾಗದಲ್ಲಿ ಕಟ್ಟಿದ ಹಿರೇಮಠ, ಪೀರ್ ಮುಂತಾದ ಕವಿಗಳು, ನಂತರದ ದಿನಗಳಲ್ಲಿ ಕಮ್ಯುನಿಸ್ಟ್ ಪಕ್ಷ ರಾಜಕಾರಣದಿಂದ ದೂರಸರಿದಿದ್ದು. ಇದು ಪಕ್ಷ ರಾಜಕೀಯದ ಚೌಕಟ್ಟಿನಾಚೆ ಹೋಗಿ ಸ್ವತಂತ್ರ ಚಿಂತನೆ ಮಾಡುವ ಮತ್ತು ಭಿನ್ನಮತವನ್ನು ನಿಷ್ಠುರವಾಗಿ ಹೇಳುವ ಲೇಖಕರ ಪಾಡಿನ ಪರಿಣಾಮವೂ ಇದ್ದೀತು. ಹಿರೇಮಠರ ಗರಡಿಯಲ್ಲಿ ಪಳಗಿದ ಪೀರ್ ಗೆ ಪ್ರಶ್ನೆ ಮಾಡುವ, ಭಿನ್ನಮತ ಮಂಡಿಸುವ, ಪ್ರತಿಭಟಿಸುವ ಗುಣಗಳು ಸಹಜವಾಗೇ ಇವೆ. ಪೀರ್ ಮತ್ತು ಅವರ ಸಂಗಾತಿಗಳು ತಮ್ಮ ಈ ಬಂಡುಕೋರತನದಿಂದಲೂ ನೈತಿಕ ವ್ಯಕ್ತಿತ್ವದಿಂದಲೂ, ಭಾಷಣ, ಕಾವ್ಯ, ಪುಸ್ತಕ ಪ್ರಕಟಣೆಗಳಿಂದಲೂ ಹಡಗಲಿಯನ್ನು ಜೀವಂತ ಇಟ್ಟಿರುವರು; ಇವರು ಕೋಮುವಾದ ಮತ್ತು ಮೂಲಭೂತವಾದಗಳ ಬಗ್ಗೆ ಖಚಿತ ವಿರೋಧವನ್ನು ಹೊಂದಿರುವವರು. ಈ ಹಿನ್ನೆಲೆಯಲ್ಲಿ ಇಲ್ಲಿರುವ ಮಸೀದಿಯ ಮೀನಾರುಗಳಿಗೆ ಪ್ರಶ್ನೆ ಕೇಳುವ ಕವನ, ಅರ್ಥಪೂರ್ಣವಾಗಿದೆ. ಆದರೆ ಈ ಧಾರ್ಮಿಕ ಯಜಮಾನಿಕೆ ವಿರುದ್ಧ ಕಾವ್ಯ ತೋರುವ ಪ್ರತಿರೋಧಕ್ಕೆ ಹೋಲಿಸಿದರೆ, ಸಮುದಾಯಗಳ ದೈನಿಕ ಬದುಕಿನ ಭಾಗವಾಗಿರುವ ಸಾಂಸ್ಕೃತಿಕ ಲೋಕಗಳು ಇಲ್ಲದಿರುವುದು ಪೀರ್ ಕಾವ್ಯದ ಕೊರತೆ ಅನಿಸುತ್ತದೆ. ಪ್ರವಾಸ ಕಥನದಲ್ಲಿ ಈ ಕೊರತೆ ನೀಗಿರುವುದನ್ನು ಕಂಡರೆ, ಕಾವ್ಯಪ್ರಕಾರಕ್ಕೇ ಈ ವಿಷಯದಲ್ಲಿ ಮಿತಿಗಳಿವೆಯೊ? ಆದರೂ ಪ್ರೀತಿಸಲು ಸಮುದಾಯಗಳ ಮೂರ್ತ ಬದುಕೇ ಕಾಣದೆ, ವಿರೋಧಿಸಲು ಬರೀ ಹಗೆಗಳೇ ಕಾಣುವ ಈ ಸ್ಥಿತಿಯ ಬಗ್ಗೆ, ಜನರ ಬದುಕಿನ ನಿತ್ಯವಿವರಗಳಿಗೆ ಹೋದರೆ ಧರ್ಮದ ಹುದುಲಲ್ಲಿ ಸಿಕ್ಕುವ ಆತಂಕವುಳ್ಳ ವೈಚಾರಿಕತೆ ಬಗ್ಗೆ, ನಮ್ಮ ಪ್ರತಿರೋಧಿ ಗುಣವುಳ್ಳ ಎಲ್ಲ ಲೇಖಕರು ಮರುಚಿಂತಿಸಬೇಕಿದೆ.

ಮಂಜುನಾಥ್ ಲತಾ

ನಂಜನಗೂಡು ತಾಲೂಕಿನ ತಗಡೂರಿನವರಾದ ಮಂಜುನಾಥ್ ಲತಾ (1975) ವೃತ್ತಿಯಿಂದ ಪತ್ರಕರ್ತರು. (ಮೊದಲ ಕಥಾ ಸಂಕಲನದಲ್ಲಿ ಅವರ ಹೆಸರು ಮಂಜುನಾಥ್ ಗೀತಾ ಎಂದಿದ್ದು, ಎರಡನೆಯ ಸಂಕಲನದಲ್ಲಿ ಅದು ಮಂಜುನಾಥ ಲತಾ ಆಗಿದೆ.) ಹಲವಾರು ಪತ್ರಿಕೆಗಳಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿರುವ ಮಂಜುನಾಥ್ ಹೆಸರಾಗಿರುವುದು ಪತ್ರಕರ್ತರಾಗಿಯಲ್ಲ; ತಮ್ಮ ಅತ್ಯುತ್ತಮ ಸಣ್ಣಕತೆಗಳಿಂದ. `ತೆಂಕಲಕೇರಿ’ (2003) `ಸನ್ ಆಫ್ ಸಿದ್ಧಪ್ಪಾಜಿ’ (2008) ಅವರ ಕಥಾಸಂಕಲನಗಳು.

ಭಾಷೆ ಮತ್ತು ಅನುಭವದ ದೃಷ್ಟಿಯಿಂದ ಹೇಳುವುದಾದರೆ, ಮಂಜುನಾಥ್ ದೇವನೂರರ  ಸೀಮೆಯವರು; ತಮ್ಮ ಕಥೆಗಳಿಗೆ ದೇವನೂರರು ಒಂದು ಪ್ರೇರಣೆಯೆಂದು ಅವರು ಹೇಳಿಕೊಂಡೂ ಇದ್ದಾರೆ. ಶಕ್ತ ಲೇಖಕರ ಸೀಮೆಯಿಂದ ಬರುವ ಲೇಖಕರ ಮುಂದೆ ಯಾವಾಗಲೂ ಎರಡು ಇಕ್ಕಟ್ಟುಗಳು ಮುನ್ನಿಲ್ಲುತ್ತವೆ. ಒಂದು- ಅವರ ಗಾಢಪ್ರಭಾವಕ್ಕೆ ಬಿದ್ದು ನಕಲು ರಚನೆಗಳನ್ನು ಮಾಡುತ್ತ ಹೋಗುವುದು; ಎರಡು- ಅವರ ಪ್ರಭಾವಳಿಯನ್ನು ಹರಿದು ಹೊರಬಂದು ತಮ್ಮದೇ ಚಹರೆ ಕಂಡುಕೊಳ್ಳುವುದು. ಮೊದಲನೆಯದು ಅನುಕರಣೆಯ ಸುಲಭದ ಹಾದಿ; ಎರಡನೆಯದು ಕೆಚ್ಚಿನ ಹಾದಿ. ಇಂತಹ ಕೆಚ್ಚನ್ನು ತೋರದ ಅನೇಕ ಲೇಖಕರು ಬೇಂದ್ರೆ ಕುವೆಂಪು ಅವರ ನೆಳಲುಗಳನ್ನು ಸೃಷ್ಟಿಸಿರುವುದುಂಟು. ಮೈಸೂರು ಸೀಮೆಯಲ್ಲೂ ದೇವನೂರರ ನೆಳಲು ಬರೆಹಗಳು ಹುಟ್ಟಿವೆ. ನಂಜನಗೂಡು ಭಾಗದ ದಲಿತರ ಆಡುಮಾತನ್ನು ಬಳಸುವುದೇ ಸಾಧನೆಯೆಂಬ ತಪ್ಪು ತಿಳಿವಳಿಕೆಯಲ್ಲಿ ಸಿಲುಕಿ ಕಲಾತ್ಮಕ ಸಾಧನೆ ಮಾಡಲಾಗದವರೂ ಇಲ್ಲಿದ್ದಾರೆ. ಆದರೆ ಈ ಭಾಗದಿಂದ ಬರೆಯುತ್ತಿರುವ ಅನೇಕ ಹೊಸತಲೆಮಾರಿನ ಲೇಖಕರು ಇಂತಹ ಪ್ರಭಾವ ವಲಯದಾಚೆ ಬಂದು ಸ್ವಂತದ್ದನ್ನು ಸಾಧಿಸಲು ಯತ್ನಿಸಿರುವರು. ಮಂಜುನಾಥ್ ಬರೆಹದಲ್ಲೂ ದೇವನೂರರ ಚಿಹ್ನೆಗಳು ಅದರಲ್ಲೂ `ಕುಸುಮಬಾಲೆ’ ಪ್ರಭಾವಗಳು ಅಲ್ಲಲ್ಲಿವೆ. ಆದರೆ ಅವರು ತಮ್ಮ ಕೆಲವು ಕತೆಗಳಲ್ಲಿ ದೇವನೂರರನ್ನು ದಾಟಿಯೂ ಹೋಗಬಲ್ಲ ಪತ್ರಿಭೆಯನ್ನು ಪ್ರಕಟಿಸುತ್ತಿರುವರು.

ಮಂಜುನಾಥ್ ಈ ಹೊತ್ತಿನ ಒಳ್ಳೆಯ ಕಥೆಗಾರರು ಅನಿಸಲು ಕೆಲವು ಕಾರಣಗಳಿವೆ. ಅವೆಂದರೆ- ಭಾಷೆಯನ್ನು ಅವರು ಕೇವಲ ಸಂವಹನ ಮಾಧ್ಯಮವಾಗಿ ಬಳಸುತ್ತಿಲ್ಲ. ಅದನ್ನು ನಾಟಕೀಯವಾಗಿಯೂ ರೂಪಕಾತ್ಮಕವಾಗಿಯೂ ಧ್ವನಿಪೂರ್ಣವಾಗಿಯೂ ಬಳಸುವ ಮೂಲಕ, ಅದರ ಸಾಧ್ಯತೆಗಳನ್ನು ವಿಸ್ತರಿಸುತ್ತಿರುವ ಬಗೆ ಗಮನಾರ್ಹವಾಗಿದೆ. ಇಲ್ಲಿನ ಕತೆಗಳಲ್ಲಿ ಮನುಷ್ಯರನ್ನು ಕುರಿತ ಗ್ರಹಿಕೆ ಸರಳವಾಗಿಲ್ಲ. ವ್ಯಕ್ತಿಗಳನ್ನು ಅನಗತ್ಯವಾಗಿ ದುರಳೀಕರಿಸುವ ಇಲ್ಲವೇ ವೈಭವೀಕರಿಸುವ ಅವಸರಕ್ಕೆ ಬದಲು, ಅವರನ್ನೂ ಮಾನವೀಯ ನೆಲೆಯಲ್ಲಿ ನೋಡುವ ಸಂಯಮವಿದೆ. “ಎಲ್ಲರ ಕತೆಗಳನ್ನು ಆ ಕತೆಗಳೊಳಗಿನ ಮನುಷ್ಯರ ದೊಡ್ಡಸ್ತಿಕೆ, ನೀಚತನ ಕ್ರೌರ್ಯ ಎಲ್ಲವನ್ನೂ ಕಂಡು ಮೆಚ್ಚಿ ಬೆಚ್ಚಿ ನನ್ನೊಳಗಿನ ನಾ ಕಂಡ ಮನುಷ್ಯರೊಳಗಿನ ದೊಡ್ಡಸ್ತಿಕತೆ ನೀಚತನಗಳೆಲ್ಲವನ್ನೂ ನಾನೂ ಯಾಕೆ ಕತೆಮಾಡಬಾರದೆಂಬ ಮನುಷ್ಯ ಸ್ವಾರ್ಥವೇ ನನ್ನನ್ನು ಕತೆಗಾರನನ್ನಾಗಿ ಮಾಡಿವೆ” ಎಂದು ಅವರು ಒಂದೆಡೆ ಹೇಳಿಕೊಂಡಿರುವುದುಂಟು. ಬಹುಶಃ ಇದು ಈ ಕತೆಗಾರ ಲಂಕೇಶ್ ಅವರಿಂದ ಕಲಿತಿರುವ ಪಾಠವಿದ್ದೀತು.

ದಲಿತ ಲೇಖಕರ ಬರೆಹದಲ್ಲಿ ಸಹಜವಾಗಿಯೇ ತಮ್ಮನ್ನು ದಮನಿಸಿರುವ ವ್ಯವಸ್ಥೆಯ ಚಿತ್ರಗಳಿರುತ್ತವೆ. ಮಂಜುನಾಥ್ ವಿಶೇಷವೆಂದರೆ, ಹಾಗೆ ದಮನಿಸಿದವರು ಕೂಡ ಬೇರೆಬೇರೆ ಅಸಹಾಯಕತೆ ಮತ್ತು ತಲ್ಲಣಗಳಲ್ಲಿ ಬೇಯುತ್ತಿರುವುದನ್ನು ನೋಡುವುದು. ಹಾಗೆ ನೋಡುವ ತಾಯ್ತನದ ತಾಳ್ಮೆ ಪ್ರಕಟಿಸುವುದು. ಇಲ್ಲಿನ ಕತೆಗಳಲ್ಲಿ ಧಗಧಗಿಸಿ ಉರಿಯುವ ಮಹಿಳೆಯರಿದ್ದಾರೆ. ಸಾಂಪ್ರದಾಯಕ ಸಮಾಜ ಮಾನ್ಯ ಮಾಡದ ಅವರ ಲೈಂಗಿಕ ಸಂಬಂಧಗಳ ಚಿತ್ರಗಳಿವೆ. ಓದುಗರನ್ನು ತಲ್ಲಣದೊಳಕ್ಕೆ ಅದ್ದುವ ಪ್ರಸಂಗಗಳಿವೆ. (`ಸಾವಿತ್ರಿ ಎಂಬ ಸತಿಯ ಪ್ರಸಂಗ’ ಕತೆಯ ದಾರುಣತೆಯು ಖಾಸನೀಸರ `ತಬ್ಬಲಿಗಳು’ ಕತೆಯಂತೆ ಕಲಕುತ್ತದೆ.) ಆದರೆ ಈ ಯಾವುವೂ ಸೆನ್ಸೇಶನ್ನಿನ ವಾಂಛೆಗೆ ಬಳಕೆಯಾಗಿಲ್ಲ. ಬದಲಿಗೆ ಬಾಳಿನ ಅನೂಹ್ಯ ಪರಿಯನ್ನೂ ಇಕ್ಕಟ್ಟಿನಲ್ಲಿ ಮನುಷ್ಯರು ತೋರುವ ವಿಚಿತ್ರ ವರ್ತನೆಯ ಸ್ವರೂಪವನ್ನೂ ಕಾಣಿಸುವುದಕ್ಕೆಂದು ಬರುತ್ತವೆ.  ಬದುಕಿನ ಅಸಹಾಯಕತೆಯಲ್ಲಿ ತೊಳಲಾಡುತ್ತಲೇ ತಮ್ಮ ತುಂಬು ಚೈತನ್ಯವನ್ನು ಪ್ರಕಟಿಸುವ ಅನೇಕ ಧೀಮಂತ ಮಹಿಳೆಯರನ್ನು ಇಲ್ಲಿನ ಕತೆಗಳು ಕಟೆದಿವೆ.

ತಮ್ಮ ಬರೆಹಕ್ಕೆ ತಾವು ಬದುಕಿ ಬೆಳೆದ ಬೀಭತ್ಸ ಜೀವನಕ್ರಮವಿರುವ ಪ್ರದೇಶಗಳೇ ಪ್ರೇರಣೆಯೆಂದು ತಿಳಿದು, ಅವನ್ನು ರೋಮಾಂಚಕವಾಗಿ ವೈಭವೀಕರಿಸುವ ಸ್ವಭಾವವು, ಕನ್ನಡದ ಕುಂವಿಯೇ ಮೊದಲಾದ ಕೆಲವು ಹಿರಿಯ ಲೇಖಕರಲ್ಲಿದೆ. ಇದಕ್ಕೆ ಹೋಲಿಸಿದರೆ, ನಮ್ಮ ಈ ಹೊಸ ಕತೆಗಾರರು ತಮ್ಮ ಕಥನಕ್ಕೆ ಕಾರಣವಾಗಿರುವ ಅನುಭವಲೋಕದ ವಿಷಯದಲ್ಲಿ ಹೆಚ್ಚು ವಿಮರ್ಶಾತ್ಮಕವಾಗಿದ್ದಾರೆ. ಅದರಲ್ಲೂ ಪ್ರಜ್ಞಾವಂತ ದಲಿತರ ಪಾತ್ರಗಳ ತಲ್ಲಣಗಳನ್ನು ಕಾಣಿಸುವಲ್ಲಿ ಮಂಜುನಾಥ್ ಕತೆಗಳು ತೋರುವ ಸೂಕ್ಷ್ಮತೆ ಅಪೂರ್ವವಾಗಿದೆ.

ಇಲ್ಲಿನ ಕತೆಗಳು ಅಕ್ಷರಸ್ಥ ದಲಿತರ ಭ್ರಷ್ಟತೆಯನ್ನು ಕೂಡ ನಿಷ್ಠುರವಾಗಿ ಆತ್ಮನಿರೀಕ್ಷಕವಾಗಿ ಚಿತ್ರಿಸುತ್ತವೆ. ಇದಕ್ಕೆ `ಸನ್ ಆಫ್ ಸಿದ್ಧಪ್ಪಾಜಿ’ ಕತೆ ಸಾಕ್ಷಿ. ಸಿದ್ಧಪ್ಪಾಜಿ ವಿವೇಕ ಮತ್ತು ಮಾನವೀಯತೆಯ ತಲೆಮಾರಿನ ಸಂಕೇತವಾದರೆ, ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡಿರುವ ಅವನ ಮಗನಲ್ಲಿ ಅಪ್ಪನ ಸಾಮುದಾಯಕ ಪ್ರಜ್ಞೆಯಿಲ್ಲ. ಬದಲಿಗೆ ತನ್ನ ಸಮುದಾಯದ ಅಬಲರನ್ನೇ ಅವನು ತುಳಿಯಬಲ್ಲವನಾಗಿದ್ದಾನೆ. ಈ ತಲೆಮಾರಿನ ಆಲೋಚನ ಕ್ರಮದ ಅಂತರವನ್ನು ತೋರಿಸಲೆಂದೇ ಕತೆ ಅವನನ್ನು `ಸನ್’ ಎಂಬ ಪರಕೀಯ ಪರಿಭಾಷೆಯಲ್ಲಿ ಕರೆಯುತ್ತಿರಬಹುದು.

ಇಲ್ಲಿನ ಕತೆಗಳಲ್ಲಿ ಒಂದು ಬಗೆಯ ದಾರ್ಶನಿಕತೆಯಿದೆ. ಅವರ ಕತೆಗಳ ಹಿಂದಿನ ಭಿತ್ತಿಯಾಗಿರುವ ಮಾನವೀಯತೆಯು ಈ ದಾರ್ಶನಿಕತೆಗೆ ಒಂದು ಆಳವನ್ನೂ ಕೊಟ್ಟಿದೆ. ಮೊದಲ ಸಂಕಲನದಲ್ಲಿ ಕತೆಕಟ್ಟುವ ಪ್ರಾಥಮಿಕ ಪಾಠಗಳನ್ನು ಕುದುರಿಸಿಕೊಂಡ ಮಂಜುನಾಥ್, ಎರಡನೇ ಸಂಕಲನದಲ್ಲಿ  ಆಶ್ಚರ್ಯವೆನಿಸುವಂತಹ ಬೆಳವಣಿಗೆಯನ್ನೂ ಪ್ರಬುದ್ಧತೆಯನ್ನೂ ಪ್ರಕಟಿಸಿಬಿಟ್ಟರು. ಆದರೆ ತಮ್ಮ ಕತೆಗಳಲ್ಲಿ ಅವರು ತೋರಿರುವ ಕಲಾತ್ಮಕ ಶ್ರದ್ಧೆ ಮತ್ತು ಅನುಭವದ ಶೋಧದ ಪರಿಯನ್ನು ತಮ್ಮ ಕಿರುಕಾದಂಬರಿ (`ಪಲ್ಲಂಗ’ 2008) ಹಾಗೂ ಕವನಗಳ `ಸೋಜಿಗದ ಸೂಜಿಮಲ್ಲಿಗೆ’ (2008) ವಿಷಯದಲ್ಲಿ ತೋರಿಲ್ಲ. ಅವರ ಕಾದಂಬರಿ ಫ್ರೆಶ್ ಆಗಿದೆ. ಅಲ್ಲಿನ ಪಾತ್ರಗಳು ಜೀವಂತವಾಗಿವೆ. ಅಲ್ಲಿ ಅಕೃತಕವಾದ ಲವಲವಿಕೆಯ ಮಾತುಕತೆಗಳಿವೆ. ಆದರೆ ಕತೆ ಹೇಳುವಿಕೆಯ ಸಲೀಸುತನ ಮತ್ತು ಕಲೆಯಾಗಿಸುವಲ್ಲಿ ಹೋರಾಟ ಇಲ್ಲದಿರುವಿಕೆಯೇ ಅದರ ಮಿತಿಯಾಗಿದೆ. ಸ್ಪರ್ಧೆಗಾಗಿ ಬರೆದ ಬರೆಹದ ಸಮಸ್ಯೆಯಿದು ಎನ್ನುವಂತಿಲ್ಲ. ಯಾಕೆಂದರೆ, ಅವರ ಒಳ್ಳೆಯ ಕತೆಗಳೆಲ್ಲ ಸ್ಪರ್ಧೆಗೆಂದು ಬರೆದವೇ ಆಗಿವೆ. ವಿಷಾದವನ್ನೇ ಕಚ್ಚಿರುವ ಅವರ ಕವನಗಳು ಓದಿಸಿಕೊಳ್ಳುತ್ತವೆ. ಆದರೆ ಅವು ಕೊಂಚ ವಾಚಾಳಿಯಾಗಿವೆ. ಅಸ್ಪಷ್ಟತೆ ಮತ್ತು ಏಕತಾನತೆ ಅವುಗಳ ಸಮಸ್ಯೆಯಾಗಿದೆ. ಮನಸ್ಸಲ್ಲಿ ನಿಂತು ಅವು ಕಾಡುವುದಿಲ್ಲ. ಇದನ್ನೆಲ್ಲ ಕಾಣುವಾಗ, ಮಂಜುನಾಥ್ ಅವರ  ನಿಜಪ್ರಕಾರ ಸಣ್ಣಕತೆಯೆಂದೇ ತೋರುತ್ತದೆ. ಅವರ ಅತ್ಯುತ್ತಮ ಕವಿತೆಗಳು ಅವರ ಗದ್ಯದಲ್ಲೇ ಇವೆಯೆನ್ನಬಹುದು. `ಒಳಗಲ ಜ್ಯೋತಿಯು’ ಕತೆಯಲ್ಲಿ ದೀಪವು ಒಂದು ಪತ್ರಿಮೆಯಾಗಿ ಬೆಳೆದು ಇಡೀ ಕತೆಯ ಆವರಿಸುವ ಪರಿಯನ್ನು ಗಮನಿಸಬೇಕು.

ಇಲ್ಲಿನ ಕತೆಗಳ ಯಶಸ್ಸಿಗೆ ಇಲ್ಲಿನ ಪ್ರಯೋಗಶೀಲತೆ, ಭಾವತೀವ್ರತೆ ಮತ್ತು ರೂಪಾಕಾತ್ಮಕತೆಗಳೂ ಕಾರಣ. ಆದರೆ ಇವೇ ಕೆಲವೊಮ್ಮೆ ಆಲಂಕಾರಿಕ ಭಾರಗಳಾಗಿ ಕಥೆಯು ಅಸ್ಪಷ್ಟತೆ ಪಡೆದುಕೊಳ್ಳುವುದುಂಟು. ಉದಾ.ಗೆ, “ಆ ಬಗೆ ಈ ಬಗೆಯಲ್ಲಿ ಆ ಅವ್ವ ಮಗಳಿಬ್ಬರ ಮುಂದೆ ಹೆಪ್ಪಾದ ನೆಪ್ಪುಗಳನ್ನು ಕತ್ತಲು ತಂದು ಕೆಡವುತ್ತಿದ್ದರೂ ಕೊನೆಗೆ ಅವರ ಕಣ್ಣುಗಳಿಗೆ ಬೊಗಸೆಯಲ್ಲಿ ಮೊಗೆಮೊಗೆದು ನಿದ್ದೆಯು ತಂದಿತು” ಎಂಬ ವಾಕ್ಯವನ್ನು ನೋಡಬಹುದು. ಇಲ್ಲಿನ ಮ್ಯಾಜಿಕಲ್ ರಿಯಲಿಸಂ ಪ್ರಯೋಗವು ಕೆಲವು ಕಡೆ ಮೆಲೊಡ್ರಾಮಾ ಆಗುವ ಅಂಚಿಗೆ ಹೋಗುವುದುಂಟು. ಇಲ್ಲಿನ ದಾರ್ಶನಿಕತೆ ಕೂಡ ಉದಾರವಾದಿಯೊಬ್ಬನ ಸಂತತನದಂತೆ ಕಾಣುತ್ತದೆ. ಈ ಸಂತತನವು ತೀಕ್ಷ್ಣವಾದ ರಾಜಕೀಯ ಸಾಮಾಜಿಕ ಸಂಘರ್ಷಗಳನ್ನು ಹಿಡಿಯಲು ಬೇಕಾದ ನಿಷ್ಠುರತೆಯನ್ನು ಕಳೆದುಬಿಡುವ ಸಾಧ್ಯತೆಯೂ ಇದೆ.

ಮಂಜುನಾಥರ ಎರಡನೇ ಸಂಕಲನವು “ಆಸಕ್ತಿ ಅಸಹ್ಯ ಹುಟ್ಟಿಸುವ ನನ್ನ ಊರುಕೇರಿಗೆ”  ಅರ್ಪಣೆಯಾಗಿದೆ. ಇಲ್ಲಿ ಪರಸ್ಪರ ವಿರುದ್ಧ ಭಾವಸೂಚಕ ಶಬ್ದಗಳು ಒಟ್ಟಿಗೆ ಇರುವುದು ಕುತೂಹಲಕರ. ಮಂಜುನಾಥ್ ಮುನ್ನುಡಿಗಳಲ್ಲಿ ಹೀಗೆ ಪರಸ್ಪರ ವಿರುದ್ಧ ಅನುಭವಗಳು ಒಟ್ಟಿಗೆ ಇರುವಂತಹ ವಿನ್ಯಾಸದ ಮಾತುಗಳು ಅನೇಕ ಸಲ ಬರುತ್ತವೆ. ಇಂತಹ ವಾಕ್ಯರಚನೆಯ ಹಿಂದೆ, ಲೋಕವನ್ನು ನೋಡುವ ಒಂದು ಚಿಂತನಕ್ರಮವೂ ಇದ್ದಂತಿದೆ. ಅದು ಬಹುಶಃ ಮನುಷ್ಯರನ್ನು ಅಥವಾ ಬಾಳನ್ನು ಅದರೆಲ್ಲ ಕೇಡು ಚೆಲುವು ವಿಕ್ಷಿಪ್ತತೆಯ ಸಮೇತ ಗ್ರಹಿಸುವ, ಸಂಕೀರ್ಣ ದೃಷ್ಟಿಕೋನ. ಯಾವುದನ್ನೂ ಏಕಪಕ್ಷೀಯವಾಗಿ ಸರಳೀಕರಿಸಲು ದುಡುಕದ ಈ ನಿಲುವು ಇಲ್ಲಿನ ಬರೆಹಕ್ಕೆ ಒಂದು ಬಗೆಯ ಸಮತೋಲನವನ್ನು ನೀಡಿದೆ.

ಮಂಜುನಾಥ್ ಗೆ ತಮ್ಮ ಬರೆಹದ ಬಗ್ಗೆ ಗುಮಾನಿಯೂ ಸಂಕೋಚವೂ ಇದೆ. ತಮ್ಮ ಕಥೆಗಳು ನಿಜಜೀವನದಲ್ಲಿ ಎಬ್ಬಿಸಿದ ಕೆಲವು ಪ್ರತಿಕ್ರಿಯೆಗಳನ್ನು ಉಲ್ಲೇಖಿಸುವ ಅವರು `ನಾನು ಬರೆದ ಕತೆಗಳು ಒಂದಷ್ಟು ಮಂದಿಯ ಅಸಮಾಧಾನಕ್ಕೆ ಅವರ ಮನಸ್ಸನ್ನು ನೋಯಿಸಿದ್ದಕ್ಕೆ ನನ್ನಲ್ಲಿ ಈಗಲೂ ವಿಷಾದವಿದೆ’ ಎಂದು ಹೇಳುವುದುಂಟು. ಬರೆಹಕ್ಕಿಂತ ಬದುಕು ದೊಡ್ಡದು ಮನುಷ್ಯರ ನೋವುಗಳು ದೊಡ್ಡವು ಎಂದು ನಂಬಿದ್ದರಿಂದ ಇಂತಹ ವಿನಯ ಬಂದಿದೆ. ಈ ವಿನಯವು ಸಾಂಸ್ಕೃತಿಕವಾಗಿ ದೊಡ್ಡದಾಗಿದೆ.

ಮಾಸ್ತಿಯವರಿಂದ ಹಿಡಿದು ದೇವನೂರರ ತನಕ ಅನೇಕರಿಂದ ಕಲಿತಿರುವ, ಕಲಿತರೂ ಅದರ ಹಂಗಿನಲ್ಲಿ ಬೀಳದಂತೆ ತನ್ನತನ ಸಾಧಿಸಬಲ್ಲ ಕುಶಲತೆಯಿರುವ ಮಂಜುನಾಥ್ ಬರೆಹವು, ಪರಂಪರೆಯ ಜತೆ ಅನುಸಂಧಾನ ಮಾಡುವ ತನ್ಮಯತೆ ಮತ್ತು ಎಚ್ಚರ ಎರಡೂ ಗುಣಗಳನ್ನು ಹೊಂದಿದೆ. `ಒಳಗಲ ಜ್ಯೋತಿಯು’ `ಹಸಿರು ಗಾಜಿನಬಳೆ’ ಇವು ಕನ್ನಡದ ಶ್ರೇಷ್ಠ ಕತೆಗಳ ಸಾಲಲ್ಲಿ ನಿಲ್ಲಬಲ್ಲವು. ಇಂತಹ ಕತೆಗಳನ್ನು ಸೃಷ್ಟಿಸಿರುವ ಮಂಜುನಾಥರದು ನಿಸ್ಸಂಶಯವಾಗಿ ಹೊಸತಲೆಮಾರಿನ ಅತ್ಯುನ್ನತ ಪ್ರತಿಭೆಗಳಲ್ಲಿ ಒಂದು.

ಹೊಸ ತಲೆಮಾರಿನಲ್ಲಿ ಇಂತಹ ಅನೇಕರ ಅತ್ಯುತ್ತಮ ಕತೆಗಳನ್ನು ಓದುವಾಗ, ಮಾಸ್ತಿ ಚಿತ್ತಾಲರಂತಹ ಹಿರಿಯರ ಕತೆಗಳು ಸರಳ ಸಪ್ಪೆ ಅನಿಸತೊಡಗಿ, ಗಾಬರಿಯಾಗುತ್ತದೆ. ಕನ್ನಡದ ಕಥನ ಪರಂಪರೆಯನ್ನು ಕಟ್ಟಿರುವ ಈ ಹಿರಿಯರ ಬರೆಹಕ್ಕೆ ತನ್ನದೇ ಆದ ಚಾರಿತ್ರಿಕ ಮಹತ್ವವಿದೆ. ಅದನ್ನು ಮರೆಯುವಂತಿಲ್ಲ. ಆದರೆ ಈ ಹಿರಿಯ ಲೇಖಕರನ್ನು ಮಂಕುಗೊಳಿಸುವಂತೆ ಹೊಸತಲೆಮಾರಿನ ಕಥೆಗಾರಿಕೆಯು ಉಜ್ವಲವಾಗಿದೆ ಮತ್ತು ಅವರು ನಿರ್ಮಿಸಿದ ಪರಂಪರೆಯನ್ನು ಅರ್ಥಪೂರ್ಣವಾಗಿ ವಿಸ್ತರಿಸುತ್ತಿದೆ ಎಂಬುದು ಮಾತ್ರ ನಿರಾಕರಿಸಲಾಗದ ನಿಜವಾಗಿದೆ.

ವಿನಯಾವಿನಯಾ ವಕ್ಕುಂದ

ಕರ್ನಾಟಕದಲ್ಲಿ ಗೋಕರ್ಣ ಸೀಮೆಯು ಅತಿ ಹೆಚ್ಚು ಕತೆಗಾರರನ್ನು ಹಡೆದ ತಾಣಗಳಲ್ಲಿ ಒಂದೆನಿಸುತ್ತಿದೆ. ಮೊದಲಿಗೆ ಇಲ್ಲಿಂದ ಯಶವಂತ ಚಿತ್ತಾಲರು ಬಂದರು; ಬಳಿಕ ಜಯಂತ ಕಾಯ್ಕಣಿ, ವಿವೇಕ ಶಾನುಭಾಗ, ಶ್ರೀಧರ ಬಳಿಗಾರ, ಅಶೋಕ ಹೆಗ್ಗಡೆ ಮುಂತಾದವರು ಬಂದರು; ಈಗ ಇವರ ಬೆನ್ನಹಿಂದೆ ಸುನಂದಾ ಕಡಮೆ, ವಿನಯಾ, ಸಂದೀಪ ನಾಯಕ, ರಾಜೀವನಾಯಕ. ಅಘನಾಶಿನಿ ಹೊಳೆ ಅರಬ್ಬೀ ಕಡಲನ್ನು ಕೂಡುವ ಅಳಿವೆಯ ಬಳಿಯಿರುವ ಊರು ನಾಡಮ್ಯಾಸ್ಕೇರಿ. ಈ ಊರಿನವರಾದ ವಿನಯಾ, ಈತನಕ ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವೆಂದರೆ, `ಬಾಯಾರಿಕೆ’ (2002) `ನೂರು ಗೋರಿಯ ದೀಪ’ (2007) ಎಂಬ ಎರಡು ಕವನ ಸಂಕಲನಗಳು; `ಊರ ಒಳಗಣ ಬಯಲು’ ಎಂಬ ಕಥಾಸಂಕಲನ (2008).

ವಿನಯಾ ಮೂಲತಃ ಒಬ್ಬ ಕವಿ. ಅವರು ಲೋಕದ ಯಾವ ವಸ್ತುವನ್ನು ಕುರಿತೂ ಕವಿಯಾಗಿಯೇ ಪರಿಭಾವಿಸುತ್ತಾರೆ ಮತ್ತು ಅದನ್ನು ಕವಿತೆಯಾಗಿಯೇ ಅಭಿವ್ಯಕ್ತಿಸಲು ಯತ್ನಿಸುತ್ತಾರೆ. ಅವರ ಮುನ್ನುಡಿಗಳೂ ಕವಿತೆಯಂತೆ ರೂಪಕದ ಭಾಷೆಯಲ್ಲಿಯೇ ಇವೆ. ಅವರ ಕತೆಗಳಲ್ಲಿರುವ ಗದ್ಯವೂ ಅವರ ಕವಿತೆಯ ವಿಸ್ತರಣೆಯಂತಿದೆ. ಕವಿತೆಯೇ ಬಹುಶಃ ಅವರ ಭಾಷೆ. ಕವಿತೆಯನ್ನು ಕುರಿತು ಅವರ ಕೆಲವು ಗ್ರಹಿಕೆಗಳು ಹೀಗಿವೆ: “ಕವಿತೆ ನನಗೆ ಎಂದೂ ಅನ್ಯವಲ್ಲ. ಅದು ನಾನೇ. ನನ್ನನ್ನು ನನ್ನೊಳಗಿನ ಬದುಕನ್ನು ಕಾಣಲು ಕಟ್ಟಲು ಸಿಕ್ಕತಾಣ”; “ಕವಿತೆ ಬರೆಯುವುದೆಂದರೆ, ಮನದ ಮಾತುಗಳನು ಅದರೆಲ್ಲ ರಕ್ತ, ಮಾಂಸ, ವಾಸನೆ, ಒಜ್ಜೆಗಳೊಂದಿಗೆ ಕಾದಿಡುವುದು.. ನನ್ನೊಳಗಿನ ನಾನು ಅನವರತ ಸಾಯುವ, ಹುಟ್ಟುವ ಚೋದ್ಯಕ್ಕೆ ನಾನೇ ಸಾಕ್ಷಿಯಾಗಿರುವ ವಿಸ್ಮಯ”; ಈ ಹೇಳಿಕೆಗಳು ಕವಿತೆ ಕವಿಗೆ ತನ್ನನ್ನು ತಾನು ಕಂಡುಕೊಳ್ಳುವ ಮತ್ತು ಪಡೆದುಕೊಳ್ಳುವ ಮಾಧ್ಯಮವಾಗಿರುವ ದ್ಯೋತಕದಂತಿವೆ. ಆದರೆ ಇಷ್ಟೊಂದು ಪರ್ಸನಲ್ ಆಗಿ ಪರಿಭಾವಿತವಾಗಿರುವ ಅವರ ಕವಿತೆಯು, ನಿಜದಲ್ಲಿ ತನ್ನ ಪೆಣ್ತುಡಿತಗಳಿಂದ ಸಾಮಾಜಿಕವೂ ಆಗಿಬಿಟ್ಟಿದೆ. ಸೂಕ್ಷ್ಮಸಂವೇದನೆಯ ಎಲ್ಲ ಲೇಖಕರಲ್ಲಿ ವೈಯಕ್ತಿಕ ಮತ್ತು ಸಾರ್ವಜನಿಕ ಎಂಬ ಆಯಾಮಗಳು ಬೆಸುಗೆಯರಿಯದಂತೆ ಕೂಡಿಕೊಂಡಿರುತ್ತವೆಯಷ್ಟೆ. ಹೀಗಾಗಿ ಇಲ್ಲಿ ಘೋಷಣೆಯಂತೆ ಕಾಣುವ ಸಾಲುಗಳೂ ಪ್ರಾಮಾಣಿಕವಾಗಿ ಹುಟ್ಟಿದ ಸಂಕಲ್ಪಗಳಾಗಿವೆ. ಕವಿಗೆ ಲಯದ ಮೇಲಿನ ಹಿಡಿತವು ಕೂಡ (“ನಮ್ಮೊಳಗೆ ಉರಿವ ದೊಂದಿಯಂಥ ಕನಸು, ಆ ಬೆಳಕಲ್ಲಿ ಆಡುವದು ನನ್ನ ಕೂಸು”) ಅದು ತನ್ನ ಎಲ್ಲೆ ಮೀರದಂತೆ ತಡೆದಿದೆ.

ವಿನಯಾ ಅತಿಸೂಕ್ಷ್ಮ ಎನ್ನಬಹುದಾದ ಭಾವುಕ ಮನಸ್ಸಿನ ಕವಿ. ಅವರ ಕಾವ್ಯವು ಪರಿಸರದಲ್ಲಿರುವ ವೈರುಧ್ಯ ಮತ್ತು ವಿಷಮತೆಗಳಿಗೆ ತೀವ್ರವಾಗಿ ಮಿಡಿಯುತ್ತದೆ; ಬದುಕಿನ ಚೆಲುವಿಗೆ ಪಡುವ ಸಂಭ್ರಮಗಳಿಂದಲೂ, ಲೋಕದ ಕಾರ್ಪಣ್ಯಗಳಿಗೆ ಪಡುವ ದುಗುಡಗಳಿಂದಲೂ ಅದು ಕೂಡಿದೆ. ಸಂಗಾತಿಯ ಸಂಗದ ಅನುಭವವನ್ನು ಕಾಣಿಸುವಾಗ ವಿನಯಾ ಅಕ್ಕನಂತೆಯೂ, ಪರಿವರ್ತನೆಯ ಕೆಚ್ಚನ್ನು ಕಾಣಿಸುವಾಗ (ಮೊದಲ ಘಟ್ಟದ) ಸಿದ್ಧಲಿಂಗಯ್ಯನಂತೆಯೂ ಕಾಣುತ್ತಾರೆ. ಒಬ್ಬ ಕವಿಯಲ್ಲಿ ಪರಂಪರೆಯ ಹಲವು ಕಾಲದೇಶಗಳ ಪ್ರೇರಣೆಗಳು ಮೈದೋರುವ ಈ ಪರಿ ಸೋಜಿಗ ತರುತ್ತದೆ. ವಿನಯಾ ಅವರ ಮೊದಲ ಸಂಕನಲವು ಬೆರಗು ಮತ್ತು ಸಂಭ್ರಮ ಪ್ರಧಾನವಾಗಿದೆ; ಎರಡನೆಯದು ವಿಷಾದ ಮತ್ತು ದುಗುಡ ಪ್ರಧಾನವಾಗಿದೆ. ಇದಕ್ಕೆ ಕಾರಣ, ಕವಿತೆ ಬದುಕಿನ ವಾಸ್ತವಿಕತೆಗೆ ಹೆಚ್ಚು ಮಿಡಿಯುತ್ತ ಹೋಗಿರುವುದು. ಅವರ ಕವನದ ನಾಯಕಿಯೊಬ್ಬಳು ಒಮ್ಮೆ ಮನೆಯ ದೇವರ ಪಟಗಳನ್ನೆಲ್ಲ ಹೊರಹಾಕಿ ಜಳಕ ಮಾಡಿ ನಿರಾಳವಾಗಿ, ಮಗಳ ಪಾಟಿಚೀಲ ನೋಡುತ್ತಾಳೆ. ಅದರಲ್ಲಿ ಗಣಪತಿಯ ಚಿತ್ರವೊಂದು ಕೂತು ಅಣಕಿಸುತ್ತದೆ! ಬಹುಶಃ ತನ್ನನ್ನೂ ಒಮ್ಮೆ ಜಿಗುಟಿಕೊಂಡು ನೋಡಬಲ್ಲ ಯಾವ ಸಂವೇದನೆಯೂ ಏಕಮುಖಿ ಆಗಿರುವುದಿಲ್ಲ.

ವಿನಯಾ ಹೊಟ್ಟೆಯೊಳಗಿನ ಕರುಳನ್ನು ಕಿತ್ತು ಹೊರಗಿಟ್ಟಂತೆ ಬರೆಯುವ ಕವಿ. ಆರ್ದತೆ ಮತ್ತು ಆರ್ತತೆ ಅವರ ಬರೆಹದ ಲಕ್ಷಣ. ಹೊಸತಲೆಮಾರಿನಲ್ಲಿ ಹೀಗೆ ಬರೆಯುತ್ತಿರುವ ಮತ್ತೊಬ್ಬ ಕವಿಯೆಂದರೆ ಎನ್.ಕೆ. ಹನುಮಂತಯ್ಯ. ಕಷ್ಟವೆಂದರೆ, ಲೋಕದ ವಿಷಮತೆಗೆ ಅತಿಯಾಗಿ ತಲೆಗೊಡುವ ಎಲ್ಲ ಬರೆಹವೂ ಒಜ್ಜೆಯಾಗುತ್ತದೆ. ಅಲ್ಲಿ ಬೆರಗು ಕಡಿಮೆಗೊಳ್ಳುತ್ತ ಹೋಗುತ್ತದೆ. ಆದರೆ ಬೆರಗನ್ನು ಉಳಿಸಿಕೊಂಡಿರುವ ವಿನಯಾ ಅವರಿಗೆ ಕವಿತೆ ಕಟ್ಟಲು ದೊಡ್ಡ ಚಿಕ್ಕವಸ್ತುಗಳೂ ಸಾಕು. `ಮನೆಯಿಂದ ಮನೆಗೆ’ ಅವರ ಉತ್ತಮ ಕವಿತೆಗಳಲ್ಲಿ ಒಂದು. ಕೆಎಸ್ ನ ಅವರ ಇದೇ ಹೆಸರಿನ ಕವಿತೆ ಜತೆ ಹೋಲಿಸಿದರೆ, ತಲೆಮಾರುಗಳ ಸಂವೇದನೆಯ ಅಂತರ ತಿಳಿಯುತ್ತದೆ. ವಿನಯಾ ಅವರ ಎರಡೂ ಸಂಕಲನಗಳಲ್ಲಿ ತುಂಬ ಫ್ರೆಶ್ ಆಗಿರುವ ನೂರಾರು ಧ್ವನಿಪೂರ್ಣ ಸಾಲುಗಳಿವೆ. ಅವನ್ನು ಓದುವಾಗ, ಅವರ ಸ್ವಂತಿಕೆಯ ಸ್ವರೂಪ ಖಚಿತವಾಗುತ್ತದೆ.

ಕವಿತೆಯನ್ನು ತಮ್ಮ ಪ್ರಧಾನ ನುಡಿಗಟ್ಟಾಗಿಸಿಕೊಂಡಿರುವ ವಿನಯಾ, ಪ್ರಾಸಂಗಿಕವಾಗಿ ಎಂಬಂತೆ ಕತೆಗಳನ್ನು ಬರೆದಿದ್ದಾರೆ. ಅವು ಕೂಡ ಅವರ ಗದ್ಯಶಕ್ತಿಯನ್ನು ಸಾಬೀತುಪಡಿಸಿವೆ. ಗದ್ಯವನ್ನೂ ಕವಿತೆಯಂತೆ ಬರೆಯುವುದರ ಕಷ್ಟವೆಂದರೆ, ಅದು ರೂಪಕದ ಭಾಷೆಯಲ್ಲಿ ಉಸಿರುಗಟ್ಟುವಂತೆ ಭಾಸವಾಗುವುದು; ಗದ್ಯಕ್ಕೆ ಬೇಕಾದ ನಿರಾಳತೆ ಮತ್ತು ಬೌದ್ಧಿಕತೆಯ ಆಯಾಮಗಳು ಹ್ರಾಸಗೊಳ್ಳುವುದು. ವಿನಯಾ ಕತೆಗಳ ವಿಶೇಷತೆಯೆಂದರೆ, ಇಲ್ಲಿ ಮೈದಳೆದು ಬರುವ ಚೈತನ್ಯಶೀಲ ಮಹಿಳೆಯರ ಪಾತ್ರಗಳು; ಆದರೆ ಈ ಜೀವಗಳನ್ನು ಬಾಳಿಸದ ಸಮಾಜದ ಕಾಠಿನ್ಯವನ್ನೂ ಕತೆಗಳು ಕಾಣಿಸುತ್ತವೆ. ಇಲ್ಲಿನ  ಕತೆಗಳನ್ನು ಜೀವನ ಪ್ರೀತಿ ಮತ್ತು ದುಡಿಮೆಗಳನ್ನು ಪರಮ ಮೌಲ್ಯವಾಗಿಸಿಕೊಂಡಿರುವ, ಆದರೆ ವ್ಯವಸ್ಥೆಯ ತಾರತಮ್ಯದ ಆವಿಗೆಯಲ್ಲಿ ನಲುಗುವ ಮಹಿಳೆಯರ ಆತ್ಮಕಥನಗಳೆಂದು ಕರೆಯಬಹುದೋ ಏನೋ. `ಸ್ವಯ’ `ಕಡಿತನಕ ಕಾಯೊ’ ಇಲ್ಲಿನ ಅತ್ಯುತ್ತಮ ಕತೆಗಳು. ವಿನಯಾ ಕೆಲವೊಮ್ಮೆ ಹಿರಿದಾದ ವಸ್ತುವನ್ನು ಕತೆಯಲ್ಲಿ ಹುದುಗಿಸಲು ಯತ್ನಿಸುತ್ತಾರೆ. ಜತೆಗೆ ಅವರು ಕವಿತೆಯಂತೆ ಸಣ್ಣ ಘಟನೆಯನ್ನು ಕುಶಲತೆಯಿಂದ ಅರಳಿಸಿ ಕಿರುಗತೆಗಳನ್ನೂ ಬರೆಯಬಲ್ಲರು. ಈ ಕಿರುಗತೆಗಳು ಕವಿತೆಯಂತೆ ಹೆಚ್ಚು ಸಾಂದ್ರವಾಗಿವೆ. ಪರಿಣಾಮಕಾರಿಯಾಗಿವೆ. ಆದರೆ ಅವುಗಳಿಗೆ ನಾಡಮ್ಯಾಸ್ಕೇರಿಯ ಲೋಕವನ್ನು ಹಿಡಿವ ತ್ರಾಣವಿದ್ದಂತಿಲ್ಲ. ದೊಡ್ಡಕತೆಗಳಲ್ಲಿ ಮ್ಯಾಸ್ಕೇರಿಯ ಭಾಷೆಯು ಪಾತ್ರಗಳ ಮಾತುಕತೆಯ ಮೂಲಕ ಪ್ರಕಟವಾಗುವಾಗ, ಅದು ಕಡಲಬದಿಯ ಬಾಳಿನ ಸಾಂಸ್ಕೃತಿಕ ಕಸುವೆಲ್ಲವನ್ನು ಮೈದೆಗೆದು ತೋರುತ್ತದೆ. ಆದರೆ ಅದೇ ಭಾಷೆಯು ಕಥೆಯ ನಿರೂಪಣೆಗೂ ಬಳಕೆಯಾಗುವ ಕಡೆ ಕಥೆಯ ಹರಿವಿಗೆ ತೊಡರೊಡ್ಡಿದಂತೆ ಕಾಣುತ್ತದೆ. ಕತೆಯ ವಿಷಯದಲ್ಲಿ ವಿನಯಾ ಅನೇಕ ಪ್ರಯೋಗಗಳನ್ನು ಮಾಡುತ್ತಿರುವರು. ಇವು ಅವರು ಕತೆಗೆ ತಕ್ಕ ರೂಪವೊಂದನ್ನು ಹುಡುಕುತ್ತಿರುವ ಅವಸ್ಥೆಯನ್ನು ಸೂಚಿಸುತ್ತಿವೆ. ಅದರಲ್ಲೂ ವಿವರ ಇಡಿಕಿರಿದ ಕತೆಗಳನ್ನು ಕಾಣುವಾಗ, ಅವು ಕಾದಂಬರಿ ರೂಪಕ್ಕೆ ಹಂಬಲಿಸುತ್ತಿವೆ ಎಂದೂ ಅನಿಸುತ್ತದೆ. ಸಮಸ್ಯೆಯೆಂದರೆ, ನಿರುದ್ದಿಶ್ಯವಾಗಿ ಮುಗಿವ ಕತೆಗಳೂ ಇಲ್ಲಿ ಸೇರಿರುವುದು. ಪತ್ರಿಕೆಗಳ ಒತ್ತಡಕ್ಕೆ ಬಲಿಯಾಗದೆ ಉಳಿಯುವುದಕ್ಕೆ ಎಲ್ಲ ಪ್ರತಿಭಾವಂತ ಲೇಖಕರು ಎಚ್ಚರ ವಹಿಸಬೇಕಿದೆ.

ಧಾರವಾಡ ಸಮೀಪದ ಆಳ್ನಾವರ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ ಆಗಿರುವ ವಿನಯಾ, ಅತ್ಯುತ್ತಮ ವಾಗ್ಮಿ ಕೂಡ. ಸೆಮಿನಾರುಗಳಲ್ಲಿ ಅವರು ಪರಿಣಾಮಕಾರಿಯಾಗಿ ವಿಚಾರ ಮಂಡನೆ ಮಾಡುತ್ತಾರೆ.  ಸ್ತ್ರೀಸಂವೇದನೆಯ ದೃಷ್ಟಿಯಿಂದ ಲೋಕವನ್ನೂ ಸಾಹಿತ್ಯವನ್ನೂ ನೋಡುತ್ತ ಮಹಿಳೆಯ ವಿಷಯದಲ್ಲಿ ನಡೆವ ತಾರತಮ್ಯವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾರೆ. ನಮ್ಮ ದೈನಿಕ ವರ್ತನೆ ಮಾತು ಬರೆಹಗಳಲ್ಲಿ ನಮಗೇ ಅರಿಯದಂತೆ ಹುದುಗಿಕೊಂಡಿರುವ ಜೆಂಡರ್ ಬಯಾಸುಗಳನ್ನು ಹೊರಗೆಡಹಲು ಇಂತಹ ಚಿಂತನೆಯ ಅಗತ್ಯವಿದೆ. ಹೊಸತಲೆಮಾರಿನ ಕೆಲವು ಲೇಖಕರಲ್ಲಿ, ನಿರ್ದಿಷ್ಟ ಪ್ರಕಾರಕ್ಕೆ ಅದರಲ್ಲೂ ಕಾವ್ಯಕ್ಕೆ ವಿಚಿತ್ರವಾದ ನಿಷ್ಠೆಯೂ, ಇತರೆ ಪ್ರಕಾರಗಳ ಬಗ್ಗೆ ಅಸಡ್ಡೆಯೂ ಇರುವುದುಂಟು. ಇದಕ್ಕೆ ಹೋಲಿಸಿದರೆ, ವಿನಯಾ ತರಮತವಿಲ್ಲದೆ ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು; ಬಿಡಿಯಾಗಿ ಪ್ರಕಟವಾಗಿರುವ ಅವರ ಲೇಖನಗಳು ಅವರೊಬ್ಬ ಒಳ್ಳೆಯ ವಿಮರ್ಶಕಿ ಕೂಡ ಆಗಬಲ್ಲರು ಎಂದು ಸೂಚಿಸುತ್ತಿವೆ. ಕನ್ನಡ ವಿಮರ್ಶೆಗೆ ಸ್ತ್ರೀಸಂವೇದನಾ ನೆಲೆಗಳ ಮತ್ತಷ್ಟು ಪ್ರವೇಶದ ಜರೂರಿರುವ ಸಂದರ್ಭದಲ್ಲಿ ಇದು ಸ್ವಾಗತಾರ್ಹವಾದ ಸಂಗತಿಯಾಗಿದೆ; ಮಹಿಳಾ ಸಂವೇದನೆಯು ನಮ್ಮ ದೊಡ್ಡ ಲೇಖಕರು ಎನಿಸಿಕೊಂಡಿರುವವರ ಬರೆಹದಲ್ಲಿ ನಾನಾ ರೂಪಗಳಲ್ಲಿ ಅಡಗಿರುವ ಪುರುಷವಾದಿ ಮನೋಧರ್ಮವನ್ನು ಹೊರಸೆಳೆದು ಪರಿಶೀಲಿಸುವ ಕೆಲಸ ನಡೆಯಬೇಕಿದೆ. ಇದನ್ನು ವಿನಯಾ ಮತ್ತವರ ಸಂಗಾತಿಗಳು ಸಮರ್ಥವಾಗಿ ಆರಂಭಿಸಿದ್ದಾರೆ. ಶಂಕೆಯೆಂದರೆ, ಈ ಸ್ತ್ರೀಸಂವೇದನೆಯೊಂದನ್ನೇ ಅತಿಯಾಗಿ ಆವಾಹಿಸಿಕೊಂಡರೆ, ಅದು ನೋಟವನ್ನೆಲ್ಲ ತಾನೇ ಆವರಿಸಿಕೊಂಡು, ಬದುಕನ್ನೂ ಬರೆಹವನ್ನೂ ನೋಡಲು ಬೇಕಾದ ಇತರೆ ಆಯಾಮಗಳನ್ನು ಕಳೆದುಬಿಡಬಹುದೇ ಎಂಬುದು.

ವಿನಯಾ ಅತಿ ಎನಿಸುವಷ್ಟು ಗಂಭೀರ ಲೇಖಕಿ. ಪರಿಸರವು ಬದಲಾಗಬೇಕು ಎಂಬ ತುಡಿತವು ಅವರ ಬರೆಹಕ್ಕೆ ಒಂದು ಆಕ್ಟಿವಿಸ್ಟ್ ಗುಣವನ್ನೂ ಎರೆದುಬಿಟ್ಟಿದೆ. ಅವರು ತಮ್ಮ ಇಡೀ ವ್ಯಕ್ತಿತ್ವವನ್ನು ತೆತ್ತುಕೊಂಡು ಬರೆಯುತ್ತಾರೆ. ಅವರ ಕತೆ ಮತ್ತು ಕವನಗಳಲ್ಲಿ ಬರುವ ನಾಯಕಿ(ನಿರೂಪಕಿ)ಯರು ಸಹ ಭಾವಭರಿತರು; ದುಗುಡೆಯರು. ವಿನಯಾ ಅವರ ಒಟ್ಟು ಬರೆಹದಲ್ಲೇ ಭಾವುಕತೆಯ ತೀವ್ರ ಹರಿದಾಟವಿದೆ. ಈ  ಕಾರಣ, ಅದರ ಅಭಿವ್ಯಕ್ತಿಗೆಂದು ಭಾಷೆಯೂ ಆವೇಶದಿಂದ ಚಾರ್ಜ್ ಆಗುತ್ತದೆ. ಇದರಿಂದ ಬರೆಹಕ್ಕೆ ಓದುಗರನ್ನು ತಮ್ಮ ತೆಕ್ಕೆಯಲ್ಲಿ ಸೆಳೆದುಕೊಂಡು ಹೋಗುವ ಮತ್ತು ಆತಂಕದಲ್ಲಿ ಅದ್ದುವ ಗುಣವೂ ದೊರೆಕೊಂಡಿದೆ. ಜತೆಗೆ ಅವರ ಬರೆಹಕ್ಕೆ ಒಂದು ಬಗೆಯ ಹೇರಿಕೆ ಬಂದುಬಿಟ್ಟಿದೆ. ಲೇಖಕಿ ಭಾವನಾತ್ಮಕತೆಯನ್ನು ಕೊಂಚ ಹೆಚ್ಚಾಗೇ ಎಕ್ಸಾಸ್ಟ್ ಮಾಡುತ್ತಿದ್ದಾರೆ ಅನಿಸುತ್ತದೆ. ಇಲ್ಲಿ ತಕ್ಷಣಕ್ಕೆ, ತಮ್ಮ ಸಹಜ ವಿನೋದಪ್ರಜ್ಞೆಯಿಂದ ಸುನಂದಾ ಕಡಮೆಯವರು ವಸ್ತುವನ್ನು ಹಗುರವಾಗಿ ನಿರ್ವಹಿಸಿ ಹುಟ್ಟಿಸುವ ಒಳನೋಟಗಳು ನೆನಪಾಗುತ್ತವೆ.

ಎತ್ತರಕ್ಕೂ ಬಹುಮುಖಿಯಾಗಿಯೂ ಬೆಳೆಯುವ ಎಲ್ಲ ಕುರುಹುಗಳನ್ನು ಪ್ರಕಟಿಸಿರುವ ಹೊಸತಲೆಮಾರಿನ ಲೇಖಕರಲ್ಲಿ ವಿನಯಾ ಒಬ್ಬರು. ಹಲವು ಪ್ರಕಾರದಲ್ಲಿ ತೊಡಗಿಕೊಳ್ಳುವುದು, ಕೆಲವೊಮ್ಮೆ ಯಾವುದರಲ್ಲೂ ಆಳವಾಗಿ ಬೇರುಬಿಡದ ಚದುರುವಿಕೆ ಕೂಡ ಆಗಬಹುದು. ದೊಡ್ಡದನ್ನು ಬರೆಯುವ ಮತ್ತು ಏನನ್ನು ಬರೆದರೂ ಅಲ್ಲಿ ತಮ್ಮ ಅಸ್ಮಿತೆಯ ಛಾಪನ್ನು ಹಾಕಬಲ್ಲ ಶಕ್ತಿಯುಳ್ಳ ವಿನಯಾ, ಹಲವು ಪ್ರಕಾರಗಳನ್ನು ಸಂಭಾಳಿಸುವ ಬಗೆಯನ್ನು ಇನ್ನೂ ನೋಡಬೇಕಿದೆ.

 ಬಿ.ಎಂ.ರಶೀದ್

ಚಿಕ್ಕವಯಸ್ಸಿನಲ್ಲೇ ತೀರಿಕೊಂಡ ಕೆಲವು ಹೊಸತಲೆಮಾರಿನ ಲೇಖಕರು ಸದಾ ನನಗೆ ಕಾಡುತ್ತಿರುತ್ತಾರೆ. ಒಬ್ಬರು ವಿಭಾ ತಿರುಕಪಡಿ. ಇನ್ನೊಬ್ಬರು ಬಿ.ಎಂ. ರಶೀದ್. ಮತ್ತೊಬ್ಬರು ಎನ್.ಕೆ. ಹನುಮಂತಯ್ಯ. ಎಲ್ಲರೂ ಅಸಾಧಾರಣ ಪ್ರತಿಭಾವಂತರು. ಜೀವನ ಪ್ರೀತಿಯುಳ್ಳವರು; ಮಾನವೀಯ ಲೋಕದೃಷ್ಟಿಯಿದ್ದವರು. ರಶೀದ್ ಧಗಧಗಿಸಿ ಉರಿದು ಬೂದಿಯಾದ ಲೇಖಕನಾದರೆ, ವಿಭಾ ತನ್ನ ತಾಳ್ಮೆ ಮತ್ತು ಕೆಚ್ಚಿನ ಮೂಲಕ ಲೋಕದೃಷ್ಟಿಯೊಂದನ್ನು ರೂಪಿಸಿಕೊಳ್ಳುತ್ತಿದ್ದ ಲೇಖಕಿ. ಹನುಮಂತಯ್ಯ ತನ್ನ ಒಡಲಿಗೆ ತಾನೇ ಬೆಂಕಿ ಹಚ್ಚಿಕೊಂಡು ಒಳಗೇ ಬೇಯುತ್ತ ಸುಟ್ಟುಹೋದವರು.

ಪಿ. ಲಂಕೇಶ್ ಅವರು ತಮ್ಮ `ಪತ್ರಿಕೆ’ಯಲ್ಲಿ ಅನೇಕ ಲೇಖಕರ ಬಗ್ಗೆ ಬರೆಯುತ್ತಿದ್ದರು ಮತ್ತು ಅವರಿಂದ ಬರೆಯಿಸುತ್ತಲೂ ಇದ್ದರಷ್ಟೆ; ಹೀಗೆ ಅವರಿಂದ ಗುರುತಿಸಲ್ಪಟ್ಟ ಪ್ರತಿಭವಂತ ಲೇಖಕರಲ್ಲಿ ಕರ್ನಾಟಕದ ಹಲವು ಸಮುದಾಯಕ್ಕೆ ಸೇರಿದ, ಹಲವು ಪ್ರದೇಶಗಳಿಂದ ಬಂದವರೆಲ್ಲ ಇದ್ದರು. ಅದರಲ್ಲೂ ಹೊಸತಲೆಮಾರಿನ ಲೇಖಕರನ್ನು ಮೆಚ್ಚುವ ಮತ್ತು ವಿಮರ್ಶೆಯ ಮೂಲಕ ರೂಪಿಸುವ ತಾಯ್ತನದ ಗುಣ ಲಂಕೇಶ್ ಅವರಿಗಿತ್ತು. ಬಿ.ಚಂದ್ರೇಗೌಡ, ನಟರಾಜ ಹುಳಿಯಾರ್ -ಇವರೆಲ್ಲ ಮೊದಲ ಘಟ್ಟದಲ್ಲಿ ಹೀಗೆ ರೂಪುಗೊಂಡವರು. ಇವರಲ್ಲಿ ಅತಿ ಚಿಕ್ಕವಯಸ್ಸಿನ ಲೇಖಕನಾಗಿ ಲಂಕೇಶರ ಪ್ರೀತಿಯನ್ನು ಸೆಳೆದುಕೊಂಡು ಬರೆದವರಲ್ಲಿ ರಶೀದ್ ಒಬ್ಬರು. ಒಮ್ಮೆ ರಶೀದ್ `ಗರ್ಭ’ ಎಂಬ ಪುಟ್ಟಕತೆಯನ್ನು ಬರೆದರು. ಲಂಕೇಶ್ ಅದನ್ನು ಎಷ್ಟು ಮೆಚ್ಚಿಕೊಂಡರೆಂದರೆ, ನನಗೂ ಇಂತಹದೊಂದು ಕತೆ ಬರೆಯಲು ಆಗುವುದಿಲ್ಲವಲ್ಲ ಎಂದು ತಮ್ಮ ಅಸೂಯೆಯನ್ನು ಹೇಳಿಕೊಳ್ಳುವಷ್ಟು.

ಬಿ.ಎಂ. ರಶೀದ್ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಮಠ ಎಂಬ ಊರಿನವರು; ಅವರು `ಲಂಕೇಶ್ ಪತ್ರಿಕೆ’ಗೆ ಕೆಲವು ಕಾಲ, ವರದಿಗಾರನಾಗಿಯೂ ಕೆಲಸ ಮಾಡಿದರು. ಅವರು ಐದಾರು ವರ್ಷಗಳ ಕಾಲದಲ್ಲಿ ಕೆಲವು ಕತೆ, ಕವನ ಮತ್ತು ಲೇಖನಗಳನ್ನು ಬರೆದರು. ಅವೆಲ್ಲವನ್ನು ಒಟ್ಟುಗೂಡಿಸಿ `ಪರುಷಮಣಿ’ ಎಂಬ ಹೆಸರಲ್ಲಿ ಅವರ ಸೋದರ ಮತ್ತು ಕತೆಗಾರ ಬಿ.ಎಂ.ಬಶೀರ್ ಪ್ರಕಟಿಸಿದ್ದಾರೆ.

ರಶೀದ್ ಬರೆಹದ ವಿಶಿಷ್ಟತೆಗಳೆಂದರೆ-
1. ಯೌವನ ಸಹಜವಾಗಿದ್ದ ತೀವ್ರತೆ ಮತ್ತು ಭಾವನಾತ್ಮಕತೆ. ಬಹುತೇಕ ಕವನ ಕತೆಗಳ ವಸ್ತು ಗಂಡು ಹೆಣ್ಣುಗಳಿಬ್ಬರ ಸಂಬಂಧ ಕುರಿತಾಗಿದ್ದು, ಈ ತೀವ್ರತೆಯೆನ್ನುವುದು ಒಳವಿದ್ಯುತ್ತಿನಂತೆ ಅಲ್ಲಿ ಪ್ರವಹಿಸುತ್ತದೆ. ಅದಕ್ಕೆ  ಕತೆಯೊಂದರ ಸಾಲನ್ನು ಉಲ್ಲೇಖಿಸಬಹುದು: “ಯೇಟ್ಸ್ ಕವಿಯಂತೆ ಈ ಬಡವ ತನ್ನ ಕನಸುಗಳನ್ನೆಲ್ಲ ಅವಳ ಬುಡಕ್ಕೆ ಸುರಿದ. ಅವಳು ಆರಾಮಾಗಿ ಅವನ್ನು ತುಳಿಯುತ್ತ ನಡೆದಳು. ಐರನ್ ಲೇಡಿ”.
2. ಗಾಢವಾದ ದುರಂತ ಪ್ರಜ್ಞೆ. ಸುಡುವ ಆತ್ಮವೊಂದು ಹರಿದುಕೊಂಡು ಬಿದ್ದಂತೆ ಕಾಣುವ ಅವರ ಬರೆಹದಲ್ಲಿ ದುಗುಡ ತುಂಬಿಕೊಂಡು ತೊಳಲಾಡುವ ಮನಸ್ಸೊಂದು ಗೋಚರವಾಗುತ್ತದೆ.

ಪ್ರಶ್ನೆಯೆಂದರೆ, ಚಿಕ್ಕವಯಸ್ಸಿಗೇ ಯಾಕೀ ಬಗೆಯ ಚಡಪಡಿಕೆ ಮತ್ತು ವಿಷಾದಪ್ರಜ್ಞೆ? ವೈಯಕ್ತಿಕ ಬಾಳಿನ ವೇದನೆಗಳೊ ಅಥವಾ ತನ್ನ ಅತಿಸೂಕ್ಷ್ಮ ಸ್ವಭಾವದಿಂದಲೇ ಪ್ರಕ್ಷುಬ್ಧಗೊಳ್ಳುವ ಮನಸ್ಸೊ? ಬಹುಶಃ ಎರಡನೆಯದೇ ನಿಜವೆನಿಸುತ್ತದೆ. ಬದುಕಿನ ಬಗೆಗಿನ ತೀವ್ರ ವ್ಯಾಮೋಹವುಳ್ಳ ಕೆಲವರು ಲೋಕ ತನ್ನಿಚ್ಛೆಯಂತೆ ವರ್ತಿಸಬೇಕೆಂದು ಹಟ ಮಾಡುತ್ತಾರೆ. ಜೀವನದ ಬಗ್ಗೆ ಸುಂದರ ಕಲ್ಪನೆಯುಳ್ಳ ಇವರು ಕನಸುಗಾರರು; ಮಹತ್ವಾಕಾಂಕ್ಷಿಗಳು; ಕೊಂಚ ಅವಸರಿಗಳು ಕೂಡ. ಲೋಕ ತಮ್ಮಂತೆ ವರ್ತಿಸುವುದಿಲ್ಲವೆಂಬ ವಾಸ್ತವಕ್ಕೆ ಡಿಕ್ಕಿ ಹೊಡೆದಾಗ, ಕಳವಳಿಸಲು ಆರಂಭಿಸುತ್ತಾರೆ. ಅಸಹಾಯಕತೆ ಆಕ್ರೋಶಗಳು ಅವರನ್ನು ಆವರಿಸುತ್ತದೆ. ಈ ಹಿನ್ನೆಲೆಯಲ್ಲಿ, ರಶೀದ್ ಬರೆಹದಲ್ಲಿ ಲೋಕದ ಜತೆ ತೋಡಿಕೊಳ್ಳುವಷ್ಟೇ ತೀವ್ರವಾಗಿ, ಸಂಬಂಧ ಮುರಿದುಕೊಳ್ಳಲು ಎಳಸುವ ಮನಸ್ಸೊಂದು ಕೆಲಸ ಮಾಡಿರುವುದನ್ನು ನೋಡಬಹುದು. ಅವರ ಕತೆ ಕವಿತೆಗಳಲ್ಲಿ `ಈ ಬದುಕನ್ನು ಫುಟ್ ಬಾಲಿನಂತೆ ಒದೀಬೇಕು’ ಎಂದು ಆಕ್ರೋಶಿಸುವ ನಾಯಕರು ಮತ್ತೆಮತ್ತೆ ಕಾಣಿಸುತ್ತಾರೆ. ಅವರ ಕವನದ ನಾಯಕನೊಬ್ಬನು ತನ್ನ ಪ್ರೇಯಸಿಗೆ `ಸಾವು ಮಾತ್ರ ಬದುಕಿಗೆ ರುಜುವಾತು’ ಎಂದು ಹಿತವಚನ ನುಡಿಯುತ್ತಾನೆ; ಮತ್ತೊಬ್ಬನಿಗೆ ಈ ಜಗತ್ತು `ವಧಿಸಲ್ಪಡುವ ಕೈದಿಯ ಕೊನೆಯ ಊಟದಂತೆ’ ಕಾಣುತ್ತದೆ; ಮಗದೊಬ್ಬನಿಗೆ ಎದುರಿನ ಕಡಲು `ಜೀಕುವ ತಳಮುರಿದ ಹಡಗುಗಳೆಲ್ಲವ ನುಂಗಿ ನೊಣೆ’ಯುವ ನೀರಿನಂತೆ ಕಾಣುತ್ತದೆ; `ವಿಷಾದಪರ್ವ’ ಕವಿತೆಯಲ್ಲಿ ಇಂತಹದೊಂದು ಸಾಲಿದೆ: “ನೀನೊಬ್ಬಳಿದ್ದೀಯೆಂದು ನಮಗೆ ನೆನಪಾಗುವುದು ನೀನಿಲ್ಲದಾಗ. ಕರುಣಾಳು ಸಾವಿಗೆ ನಮಿಸು”. ಸಾವು `ಕರುಣಾಳು’ ಆಗಿ ಕಾಣುವುದೇ ಒಂದು ವಿಚಿತ್ರ ಮನಸ್ಥಿತಿ.

ಇವೆಲ್ಲ ಕಾರಣದಿಂದಲೊ ಏನೊ, ರಶೀದ್ ಬರೆಹದಲ್ಲಿ ಒಂದು ಬಗೆಯ ದಾರ್ಶನಿಕ ಆಳವಿದೆ; ಇದಕ್ಕೆ ಅವರಲ್ಲಿ ಅಂತರ್ಗತವಾಗಿ ಮಿಡಿಯುತ್ತಿದ್ದ ಮೃತ್ಯುಪ್ರಜ್ಞೆಯೇ ಮುಖ್ಯ ಕಾರಣವೆನಿಸುತ್ತದೆ. ಬಿಸಿನೆತ್ತರಿನ ತರುಣರ ಬರೆಹದಲ್ಲಿ ಕುದಿತ, ತೀಕ್ಷ್ಣತೆ ಬಂಡುಕೋರತನ ಇರುವುದು ಸೋಜಿಗವಲ್ಲ. ಆದರೆ ಮರಣ ಪ್ರಜ್ಞೆ? ನಮಗೆ ಹೀಗೆ ಹಿಡಿದು ಕಾಡಿಸುವ ಮೃತ್ಯುಪ್ರಜ್ಞೆ ಎದುರಾಗುವುದು ಗಂಗಾಧರ ಚಿತ್ತಾಲರ ಕವಿತೆಗಳಲ್ಲಿ. ಖಚಿತಗೊಂಡಿದ್ದ ಮೃತ್ಯುವನ್ನು ಮುಖಾಮುಖಿ ಮಾಡುತ್ತ ಚಿತ್ತಾಲರು ಕರುಳು ಹಿಂಡುವ ಆರ್ತಕಾವ್ಯ ಬರೆದರು. ಆದರೆ ಇನ್ನೂ ಜೀವನಕ್ಕೆ ತೆರೆದುಕೊಳ್ಳುತ್ತಿದ್ದ ಈ ತರುಣರ ಬರೆಹದಲ್ಲಿ ಗೀಳಿನಂತೆ ಆವರಿಸಿಕೊಂಡಿರುವ ಮೃತ್ಯುಚಿಂತನೆ ಮಾತ್ರ ಅರ್ಥವಾಗುವುದಿಲ್ಲ.

ಗಾಯಕ ಮುಖೇಶ್ ಬಗ್ಗೆ ರಶೀದ್ ಬರೆದಿರುವ ಅಪೂರ್ವವಾದ ಒಂದು ಲೇಖನವಿದೆ. ಹಳೇ ಹಿಂದಿಹಾಡುಗಳ ವ್ಯಸನಿಯಾದ ನನಗದು ಬಹಳ ಹಿಡಿಸಿದ ಲೇಖನ. ಆದರೆ ಆ ಲೇಖನದ ತುಂಬ ರಶೀದರ ಸಾವಿನ ಧ್ಯಾನವಿದೆ; ಸತ್ತ ಗಾಯಕನೊಂದಿಗೆ ಸಂವಾದಗೆಯ್ಯುವ ಧಾಟಿಯಲ್ಲಿರುವ ಇದರಲ್ಲಿ ಮುಖೇಶನ “ತೇರಿ ದುನಿಯಾಮೆ ದಿಲ್ ಲಗತಾನಹೀ, ವಾಪಸ್ ಬುಲಾಲೆ” ಮುಂತಾದ ವಿಷಾದ ಗೀತೆಗಳ ಚರ್ಚೆಯಿದೆ. ಹರಿಹರನ ರಗಳೆಗಳ ಶಾಪಗ್ರಸ್ತರಾಗಿ ಭೂಲೋಕಕ್ಕೆ ಬರುವ ಶಿವಗಣಗಳು ಕೈಲಾಸಕ್ಕೆ ಹೊರಳಿ ಹೋಗಲು ಶಿವನನ್ನು ಬೇಡುವ ಆರ್ತತೆಯನ್ನು ಇವು ನೆನಪಿಸುತ್ತವೆ.

ಒಂದು ಕೆಟ್ಟದಿನದಂದು ರಶೀದ್ ಸ್ವಹತ್ಯೆ ಮಾಡಿಕೊಂಡರು. ತಮ್ಮನ್ನು ಯಾರೊ ಹಿಂಬಾಲಿಸುತ್ತಿದ್ದಾರೆ ಎಂಬ ಪರ್ಸಿಕ್ಯೂಟಿವ್ ಸಿಂಡ್ರೋಮಿನಿಂದ ನರಳುತ್ತಿದ್ದ ನಾಟಕಕಾರ ಸಂಸರು ಸಹ ಆತ್ಮಹತ್ಯೆ ಮಾಡಿಕೊಂಡವರೇ. ಈಚೆಗೆ ನಮ್ಮ ಕವಿ ಹನುಮಂತಯ್ಯನವರು ಇದೇ ದಾರಿ ಹಿಡಿದುಬಿಟ್ಟರು. ಇಂತಹವರನ್ನು `ಜೀವನ ಎದುರಿಸಲಾರದೆ ಹೋದ ಪಲಾಯನವಾದಿ’ ಎಂದು ಕರೆವುದು ಸುಲಭ; ಆದರೆ ಕೊಂಚ ಹೈಪರ್ ಸೆನ್ಸಿಟಿವಿಟಿ ಹಾಗೂ ಅರಾಜಕೀಯ ಎನ್ನಬಹುದಾದ ಅತಾರ್ಕಿಕತೆಯುಳ್ಳ ಇಂತಹವರ ಬರೆಹದ ಸಂಕೀರ್ಣತೆ ಮತ್ತು ಲೋಕಗ್ರಹಿಕೆ ಅರ್ಥಮಾಡಿಕೊಳ್ಳುವುದು ಸುಲಭವಲ್ಲ. `ಜಗತ್ತು ತನ್ನನ್ನು ಹುಚ್ಚನೆನ್ನುತ್ತಿದೆ. ನಿಜವೇನೆಂದರೆ ಈ ಜಗತ್ತಿಗೇ ಹುಚ್ಚು ಹಿಡಿದಿದೆ’ ಎಂದು ಮುಖೇಶನ ಹಾಡಿನ ಮಾತನ್ನು ರಶೀದ್ ಸಮರ್ಥಿಸುವುದು ಗಮನಾರ್ಹ. ಇದಕ್ಕೆ ತಕ್ಕಂತೆ ರಶೀದ್ ಮೇಲೆ ಲಂಕೇಶ್, ಸಾದತ್ ಹಸನ್ ಮಂಟೊ, ಅಮೃತಾಪ್ರೀತಂ, ಬೋದಿಲೇರ್ ಮುಂತಾದ ವಿಕ್ಷಿಪ್ತ ಲೇಖಕರ ಗಾಢ ಪ್ರಭಾವವಿತ್ತು. ದೇಶವಿಭಜನೆಯ ಚಾರಿತ್ರಿಕ ದುರಂತಗಳ ನಡುವೆ ಬದುಕಿದ ಮಂಟೂ ಮತ್ತು ಅಮೃತಾ, ತಮ್ಮ ಅಸಹಾಯಕ ನೋಟಗಳ ಅಭಿವ್ಯಕ್ತಿಗಾಗಿಯೇ ತೀಕ್ಷ್ಣವ್ಯಂಗ್ಯದ ಭಾಷೆಯನ್ನೂ ವಿಹ್ವಲತೆಯ ನೋಟವನ್ನೂ ಕಂಡುಕೊಂಡಿದ್ದರು. ಆದರೂ ಅವರು ಈ ಲೋಕದ ಜತೆ ಏಗುತ್ತ ಬದುಕಿದರು ಮತ್ತು ಬರೆದರು. ಆದರೆ ವಿಕ್ಷಿಪ್ತತೆಯನ್ನು ಹೆಚ್ಚಾಗಿಯೆ ಆವಾಹಿಸಿಕೊಂಡಂತಿದ್ದ ಇದ್ದ ರಶೀದ್ ಮಾತ್ರ ಏಗಲಿಲ್ಲ.

ರಶೀದ್ ಕತೆ ಮತ್ತು ಕವಿತೆಗಳು ಬಾಳಿನ ಬಗ್ಗೆ ತನಗಿದ್ದ ಅಪೇಕ್ಷೆ ಆಕ್ಷೇಪಗಳೆಲ್ಲವನ್ನೂ ಲೇಖಕನೊಬ್ಬನು ತೋಡಿಕೊಳ್ಳುವ ಖಾಸಾ ಅಭಿವ್ಯಕ್ತಿ ಮಾಧ್ಯಮದಂತಿವೆ. ಅಲ್ಲಿ ಅತೃಪ್ತ ಜೀವಗಳ ತೊಳಲಾಟವಿದೆ; ಆದರೆ ರಶೀದರ ಪತ್ರಿಕಾ ಲೇಖನಗಳಲ್ಲಿ ತಾರ್ಕಿಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಗುಣವಿದೆ. ವ್ಯವಸ್ಥೆಯನ್ನು ಒಪ್ಪದ ಬಂಡುಕೋರತನವಿದೆ; ಸಾಮಾಜಿಕ ವಿಷಮತೆ ಮತ್ತು ವೈರುಧ್ಯಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಜರೂರಿಯಿದೆ; ಇದಕ್ಕೆ ಸಾಕ್ಷಿ- ಉಪೇಂದ್ರರ ಸಿನಿಮಾ, ಬೀದಿಗೆ ಬಿದ್ದ ಜನರನ್ನು ಎತ್ತಿತಂದು ಸಾಕುವ ಕ್ರೈಸ್ತದಂಪತಿಗಳ ಆಶ್ರಮ ಹಾಗೂ ನೆರಿಯಾ ಎಂಬ ಕಾಡುಪ್ರದೇಶದ ಬಡವರನ್ನು ಕುರಿತು ಇರುವ ಲೇಖನಗಳು.

ಕರಾವಳಿಯ ಬ್ಯಾರಿ ಮುಸ್ಲಿಂ ಹಿನ್ನೆಲೆಯಿಂದ ಹಲವಾರು ಲೇಖಕರು ಬಂದರು. ಅವರಲ್ಲಿ ಬಿ.ಎಂ.ರಶೀದ್ ತನ್ನ ರಕ್ತ ಮಜ್ಜೆಗಳನ್ನೇ ಕರಗಿಸಿ ಶಾಯಿಮಾಡಿಕೊಂಡಂತೆ ಬರೆಯುತ್ತಿದ್ದ ಲೇಖಕ. ರಶೀದ್ ಬರೆಹದ ವಿಶಿಷ್ಟತೆಯೆಂದರೆ ಉದ್ದುದ್ದ ವಾಕ್ಯಗಳು. ಉದ್ದವಾದರೂ ಲಯಗೆಡದ; ಜಿಜ್ಞಾಸೆ ತುಂಬಿಕೊಂಡಿದ್ದರೂ ಕ್ಲಿಷ್ಟಗೊಳ್ಳದ ವಾಕ್ಯಗಳು ಅವು. `ಪರುಷಮಣಿ’ ಕೃತಿಯನ್ನು ಅದರಲ್ಲಿರುವ ಝಳಕ್ಕಾಗಿಯಲ್ಲದೆ, ರಶೀದ್ ಬರೆಹದ ಪಾರದರ್ಶಕವೂ ಜೀವಂತವೂ ಆದ ಭಾಷೆಗಾಗಿಯೂ ಓದಬಹುದು. ಪಾತ್ರಗಳ ಮನಸ್ಸಿನೊಳಗೆ ಹೊಕ್ಕು ಅದರೊಳಗಿನ ಹೊಯ್ದಾಟಗಳನ್ನು ಮೂರ್ತವಾದ ಚಿತ್ರಗಳ ಮೂಲಕ ಹಿಡಿಯುವುದರಿಂದ ಭಾಷೆಗೆ ಈ ಮೂರ್ತತೆ ಬಂದಿತು ಅನಿಸುತ್ತದೆ.

ಒಬ್ಬ ತರುಣ ಲೇಖಕನ ತಲ್ಲಣ ಆದರ್ಶ ಜಾಣ್ಮೆ ಉದ್ವೇಗಗಳನ್ನು ಅರ್ಥಮಾಡಿಕೊಂಡು, ಆತನನ್ನು ಬಾಳಗೊಡದಂತೆ ನಮ್ಮ ಸಮಾಜ ತನ್ನ ಸ್ಪೇಸನ್ನೇ ಕಿರಿದುಗೊಳಿಸಿಕೊಂಡಿದೆಯೊ ಅಥವಾ ತನ್ನ ಅತಿಸೂಕ್ಷ್ಮತೆ ವಿಕ್ಷಿಪ್ತತೆಗಳಿಂದ ತತ್ತರಿಸುವ ಇಂತಹ ತರುಣರು ದುಡುಕಿನಿಂದ ಜೀವಕಳೆದುಕೊಂಡರೊ ತಿಳಿಯದಾಗಿದೆ.

ಇಂತಹ ಪ್ರಶ್ನೆಗಳನ್ನು ರಶೀದ್ ಬರೆಹ ಮತ್ತು ಬಾಳು ನಮ್ಮ ಮುಂದಿಟ್ಟು ನಿರುಮ್ಮಳವಾಗಿ ನಿರ್ಗಮಿಸಿದೆ.

ಶೈಲಜ ಹಿರೇಮಠಶೈಲಜ ಹಿರೇಮಠ

ಕನ್ನಡದ ಹೊಸತಲೆಮಾರಿನ ಲೇಖಕರಲ್ಲಿ ಸಾಹಿತ್ಯ ವಿಮರ್ಶಕರುಂಟು. ಪಿಎಚ್.ಡಿ, ಪದವಿಗಾಗಿ ಸಂಶೋಧನೆ ಮಾಡಿದವರೂ ಉಂಟು. ಆದರೆ ತಮಗೆ ಕಾಡುವ ವಿಷಯವೊಂದನ್ನು ಆರಿಸಿಕೊಂಡು ವ್ಯಾಪಕವಾದ ಕ್ಷೇತ್ರಕಾರ್ಯ ಮಾಡಿ, ಸಾಂಸ್ಕೃತಿಕವಾದ ಸಂಶೋಧನೆ ಮಾಡುವವರು ಮಾತ್ರ ತೀರಾ ಕಡಿಮೆ. ಇವರಲ್ಲಿ ಮಹಿಳೆಯರು ಇನ್ನೂ ಕಡಿಮೆ. ಈ ಹಿನ್ನೆಲೆಯಲ್ಲಿ ಡಾ. ಶೈಲಜ ಅವರ ಹೆಸರು ಮುಖ್ಯವಾಗಿ ತೋರುತ್ತದೆ.

ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದಲ್ಲಿ ನಿರ್ಧೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶೈಲಜ, ತಮ್ಮ `ಪಾತರದವರು’ ಕೃತಿಯಿಂದ ಗಮನಸೆಳೆದವರು. ನಂತರ ಅವರು `ಸ್ತ್ರೀಕಥನ’ ಮುಂತಾದ ಕೃತಿಗಳನ್ನು ಪ್ರಕಟಿಸಿದರು. ಆದರೂ `ಪಾತರದವರು’ ಅವರ ಪ್ರಮುಖ ಕೃತಿಯಾಗೇ ಉಳಿದಿದೆ. ಸಾಹಿತ್ಯ ಅಕಾದೆಮಿಯ ಬಹುಮಾನವನ್ನೂ ಪಡೆದ ಈ ಕೃತಿ, ನಟುವ, ಸಾನಿ ಅಥವಾ ಕಲಾವಂತ ಎಂದು ಕರೆಯಲಾಗುವ ಸಮುದಾಯವೊಂದರ ತಲಸ್ಪರ್ಶಿಯಾದ ಅಧ್ಯಯನದ ಪರಿಣಾಮ.

`ಪಾತರದವರು’ ಕರ್ನಾಟಕದ ನಟನೆ ಮತ್ತು ಹಾಡಿಕೆ ಮಾಡುವ ಒಂದು ಸಮುದಾಯ. ಇದರಲ್ಲಿ ಮುಸ್ಲಿಮರನ್ನೂ ಒಳಗೊಂಡಂತೆ ಮುಖ್ಯವಾಗಿ ಕೆಳಜಾತಿಯ ಮಹಿಳೆಯರು ಇದ್ದಾರೆ. ಇವರಲ್ಲಿ ಕೆಲವರು ನಾಟಕ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತೆ ಕೆಲವರು ಕರ್ನಾಟಕದ ಗುಡಿಸಂಸ್ಕೃತಿಯ ಭಾಗವಾಗಿರುವವರು. ಕರ್ನಾಟಕದ ನಾಟಕ ಮತ್ತು ಸಂಗೀತಗಳ ಚರಿತ್ರೆಯನ್ನು ಇವರ ಹೊರತುಪಡಿಸಿ ಕಲ್ಪಿಸಿಕೊಳ್ಳುವಂತಿಲ್ಲ. ಇವರಲ್ಲಿ ಅನೇಕರು ನಟಿಯರಾಗಿಯೂ ಸಂಗೀತ ವಿದುಷಿಯರಾಗಿಯೂ ಪ್ರಸಿದ್ಧರಾದರು. ಇವರು ಪುರುಷ ಪ್ರಧಾನ ಸಮಾಜದ ಸಂಸ್ಥೆಗಳಾಗಿ ಹೋಗಿರುವ ವಿವಾಹ ಕುಟುಂಬಗಳ ಚೌಕಟ್ಟಿನಾಚೆ ಚಲಿಸಿ, ತಮ್ಮಿಚ್ಛೆಯ ಪುರುಷರನ್ನು ಸಂಗಾತಿಯಾಗಿಸಿಕೊಂಡು ಬದುಕು ಕಟ್ಟಿಕೊಂಡಿದ್ದವರು. ಒಂದು ಬಗೆಯಲ್ಲಿ ಸ್ವತಂತ್ರರು. ಆದರೆ ಈ ಸ್ವಾತಂತ್ರ್ಯದ ಜತೆಯಲ್ಲೇ ಸಾಮಾಜಿಕವಾಗಿ ಅಪಮಾನವನ್ನೂ ಆರ್ಥಿಕವಾದ ಅಭದ್ರತೆಯನ್ನೂ ಕೌಟುಂಬಿಕವಾದ ಭಗ್ನತೆಯನ್ನೂ ಅನುಭವಿಸಿದವರು. ಕರ್ನಾಟಕದಲ್ಲಿ ಇದೊಂದು ಕಣ್ಣಿಗೆ ತಟ್ಟನೆ ಕಾಣದ ಆದರೆ ತಲ್ಲಣದ ಬದುಕನ್ನು ಅನುಭವಿಸುತ್ತಿರುವ ಸಮುದಾಯ. ನಿರ್ಲಕ್ಷ್ಯಕ್ಕೂ ಅಪಮಾನಕ್ಕೂ ಒಳಪಟ್ಟಿರುವ ಈ  ಅಧೋಲೋಕದ ಬಗ್ಗೆ ದಕ್ಷಿಣ ಕರ್ನಾಟಕದ ಕಡೆಯಿಂದ ನಟುವರ ಸಂಸ್ಕೃತಿ ಪುಸ್ತಕ ಬಂದಿದೆ. ಇತ್ತ ಉತ್ತರ ಕರ್ನಾಟಕದಿಂದ ಶೈಲಜ ಅವರು ಪ್ರಕಟಿಸಿರುವ ಪಾತರದವರ ಮೇಲಿನ ಅಧ್ಯಯನವು ಪ್ರಮಾಣಗ್ರಂಥವಾಗಿದೆ.

ಇದಾದ ಬಳಿಕ ಶೈಲಜ ಇದೇ ಲೋಕದ ಇತರ ಕವಲುಗಳಂತೆ ತೋರುವ ಬಸವಿ ಹಾಗೂ ದೇವದಾಸಿ ಸಂಪ್ರದಾಯಗಳ ಮೇಲೆ ಅಧ್ಯಯನ ಮಾಡಿದರು; ಮಾತೃಪ್ರಧಾನ ಸಂಸ್ಕೃತಿ ಕುರಿತು ಪುಸ್ತಕ ಬರೆದರು. ದೇವದಾಸಿ ವಿಮೋಚನ ಸಂಸ್ಥೆಯನ್ನು ನಡೆಸುವ ಸಾಮಾಜಿಕ ಕಾರ್ಯಕರ್ತರನ್ನು ಹಾಗೂ ಕಲಾವಂತ ಸಮುದಾಯಕ್ಕೆ ಸೇರಿದ ರಂಗನಟಿಯರನ್ನು ಸಂದರ್ಶನ ಮಾಡಿದರು. ಈಗ ಹೆಣ್ಣು ಹೆಚ್ಚು ಎಂದು ಹಾಡಿಕೆ ಮಾಡುವ ನಾಗೇಶಿ ಸಂಪ್ರದಾಯಕ್ಕೆ ಸಂಬಂಧಿಸಿದ ಗಾಯಕಿಯರ ಬದುಕಿನ ಮೇಲೆ ಕೆಲಸ ಮಾಡುತಿದ್ದಾರೆ. ಮಹಿಳೆಗೆ ಸಂಬಂಧಿಸಿದಂತಹ ನಿರ್ದಿಷ್ಟ ಕ್ಷೇತ್ರವನ್ನು ಇಟ್ಟುಕೊಂಡು, ಅದರ ಬೇರೆಬೇರೆ ಮಗ್ಗುಲುಗಳನ್ನು ಶೋಧಿಸುತ್ತ ಹೋಗುತ್ತಿರುವ ಅವರ ಈ ಅಧ್ಯಯನಗಳು ಸಾಂಸ್ಕೃತಿಕವಾಗಿ ಮಹತ್ವದ್ದಾಗಿವೆ.

ಶೈಲಜಾ ಅವರ ಅಧ್ಯಯನಗಳ ವಿಶೇಷತೆಗಳೆಂದರೆ,
1. ನೇರ ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ವಿವರಗಳ ಮೂಲಕ ಅಧ್ಯಯನ ಮಾಡುವುದು. ಪಾತರದವರು, ಬಸವಿಯರು ಮತ್ತು ದೇವದಾಸಿಯರನ್ನು ಹುಡುಕಿಕೊಂಡು ಶೈಲಜ ಕರ್ನಾಟಕದ ಮೂಲೆಮುಡುಕಿನ ಸ್ಥಳಗಳಿಗೆ ಹೋಗಿದ್ದಾರೆ. ಅವರನ್ನು ಖುದ್ದಾಗಿ ಭೇಟಿ ಮಾಡಿದ್ದಾರೆ; ಅವರು ಮೊದಲಿಗೆ ಮಾತಾಡಲು ತಿರಸ್ಕರಿಸಿದರೂ, ಛಲಬಿಡದೆ, ಒಲಿಸಿ, ಅವರ ವಿಶ್ವಾಸ ಗಳಿಸಿ, ಅವರು ತಮ್ಮಂತರಂಗದ ಲೋಕವನ್ನು ತೆರೆದುಕೊಳ್ಳುವಂತೆ ಮಾಡಿದ್ದಾರೆ. ಅವರ ಮಾತುಗಳಿಂದಲೇ ಅವರ ಕತೆಯನ್ನು ಕಟ್ಟಿಕೊಡುವ ಕಥನ ಮಾದರಿಯನ್ನು ಸಹ ರೂಪಿಸಿಕೊಂಡಿದ್ದಾರೆ. ಹೀಗಾಗಿ ಅವರ ಆಪ್ತವಾಗಿದ್ದು ಕಥೆಯಂತೆ ಓದಿಸಿಕೊಳ್ಳುತ್ತವೆ.

2. ತಮಗೆ ಸಿಕ್ಕ ಮಾಹಿತಿ ಮತ್ತು ತಮಗಾದ ಅನುಭವವನ್ನು ವರ್ತಮಾನದ ಬದುಕಿನಲ್ಲಿಟ್ಟು, ಆಧುನಿಕ ನಾಗರಿಕ ಮಹಿಳೆಗೆ ಬೇಕಾದ ಸಮಾನತೆ ಸ್ವಾತಂತ್ರ್ಯಗಳ ಮೌಲ್ಯಗಳ ನೆಲೆಯಲ್ಲಿ ನಿಷ್ಠುರವಾಗಿ ವಿಶ್ಲೇಷಿಸುವುದು. ಸಾಮಾನ್ಯವಾಗಿ ಧರ್ಮದ ಲೇಪನವುಳ್ಳ ಸಂಗತಿಗಳನ್ನು ಸಂಸ್ಕೃತಿಯ ಹೆಸರಲ್ಲಿ ಸಮರ್ಥಿಸುವ ಪರಿಪಾಠವು ಕೆಲವು ಸಂಶೋಧಕರಲ್ಲಿದೆ. ಇಂತಹ ಸಂಶೋಧಕರು ಕೆಲವು ಪದ್ಧತಿಗಳನ್ನು ಸಾಂಸ್ಕೃತಿಕ ವಿಶ್ಲೇಷಣೆಯ ಹೆಸರಲ್ಲಿ ಚಾರಿತ್ರಿಕವಾಗಿ ವಿಶ್ಲೇಷಿಸುವಷ್ಟಕ್ಕೆ ನಿಲ್ಲಿಸುತ್ತಾರೆ. ಅಥವಾ ಅವನ್ನು ಸಮಕಾಲೀನ ಮೌಲ್ಯಗಳ ನೆಲೆಯಲ್ಲಿ ವಿಮರ್ಶೆ ಮಾಡದೆ ನಿರ್ಲಿಪ್ತತೆ ತೋರುತ್ತಾರೆ. ಕೆಲವೊಮ್ಮೆ ಅವನ್ನು ಬೇಖಬರಿನಲ್ಲಿ ವೈಭವೀಕರಿಸುವುದೂ ಉಂಟು. ಸಾಮಾಜಿಕ ಮತ್ತು ವರ್ಗೀಯ ಅಸಮಾನತೆಗೆ ಸಂಬಂಧಪಟ್ಟ ಯಾವುದೇ ವಿಷಯ ಕುರಿತು ಅಧ್ಯಯನ ಮಾಡುವಾಗ, ವಿದ್ವತ್ತಿಗಿಂತ ಮುಖ್ಯವಾದುದು ಅದನ್ನು ವರ್ತಮಾನದ ಬದುಕಿನಲ್ಲಿಟ್ಟು ನೋಡುವ ವೈಚಾರಿಕ ದೃಷ್ಟಿಕೋನ. ಸ್ತ್ರೀಸಂವೇದನೆಯ ದೃಷ್ಟಿಕೋನವುಳ್ಳ ಶೈಲಜ, ಈ ದೇವಸ್ತ್ರೀಯರ ಮೂಲಕ ಕರ್ನಾಟಕದ `ಸಾಂಸ್ಕೃತಿಕ’ `ಧಾರ್ಮಿಕ’ ಚರಿತ್ರೆಯನ್ನು ಪುನಾರಚಿಸುವುದಕ್ಕೆ ಹೋಗುವುದಿಲ್ಲ. ಬದಲಿಗೆ ವರ್ತಮಾನದಲ್ಲಿ ಅವರ ಬದುಕು ಏನಾಗಿದೆ ಎಂದು ಶೋಧಿಸುವತ್ತ ಗಮನ ಹರಿಸುತ್ತಾರೆ.

3. ಈಗಾಗಲೇ ಪ್ರಸಿದ್ಧರಾಗಿರುವ ವಿದ್ವಾಂಸರು ಚರಿತ್ರೆ ಸಂಸ್ಕೃತಿಯ ಹೆಸರಲ್ಲಿ ಕಟ್ಟಿಕೊಟ್ಟಿರುವ ಕಥನಗಳ ಒಳಗೆ ಅಡಗಿರುವ ಊಳಿಗಮಾನ್ಯ ಪುರುಷವಾದಿ ಪರ ನಿಲುವುಗಳ ಮೇಲೆ ಪ್ರಶ್ನೆ ಎತ್ತುವುದು ಹಾಗೂ ಅವನ್ನು ವಿಮರ್ಶೆಗೆ ಒಳಪಡಿಸುವುದು. ಹೀಗೆ ವಿಮರ್ಶೆಗೆ ಒಳಪಡುವಲ್ಲಿ ಗ್ರಹಿಕೆಗಳಲ್ಲಿ ಪುರುಷ ವಿದ್ವಾಂಸರವು ಮಾತ್ರವಲ್ಲ; ಪುರುಷವಾದಿ ಮೌಲ್ಯಗಳನ್ನು ಒಪ್ಪಿಕೊಂಡಿರುವ ಮಹಿಳಾ ವಿದ್ವಾಂಸರವೂ ಇವೆ. ಶೈಕ್ಷಣಿಕವಾಗಿ ಗಣ್ಯತೆ ಪಡೆದಿರುವ ಅಧ್ಯಯನಕಾರರ ಪೂರ್ವಗ್ರಹಿಕೆಗಳನ್ನು ತಮ್ಮ ಕಾಮನ್ ಸೆನ್ಸಿಕ್ ಆದ ನೇರ ಮತ್ತು ದಿಟ್ಟ ನಿಲುವಿನಿಂದ ಶೈಲಜ ಬಯಲುಗೊಳಿಸುತ್ತಾರೆ ಮತ್ತು ಮೌಲ್ಯಮಾಪನ ಮಾಡುತ್ತಾರೆ.

4. ವಿದ್ವತ್ ಕಾಳಜಿಗಿಂತ ಮಿಗಿಲಾಗಿ ಈ ಸನ್ನಿವೇಶವು ಬದಲಾವಣೆಯಾಗಬೇಕೆಂಬಸಾಮಾಜಿಕ ತುಡಿತ ಇರುವುದು. ಇಲ್ಲಿ ಅಧ್ಯಯನ ಮಾಡುವವರಿಗೆ ಖಚಿತವಾದ ಸಾಮಾಜಿಕ ದೃಷ್ಟಿಕೋನಗಳು ಬೇಕಾಗುತ್ತವೆ. ಶೈಲಜ ಅವರ ಅಧ್ಯಯನಗಳು ನಿರ್ಲಿಪ್ತ ವರದಿಗಾರಿಕೆಗಿಂತ ಭಿನ್ನವಾಗಿ ಭಾವನಾತ್ಮಕವಾದ ತೀಕ್ಷ್ಣತೆಯನ್ನು ಒಳಗೊಂಡಿವೆ. ಹೀಗಾಗಿ ಅವರ ಅಧ್ಯಯನಗಳು ಉರಿಯುವ ಆತ್ಮಗಳ ಕಥನಗಳಂತಿವೆ. ದಮನಿತ ಮಹಿಳೆಯರ ಬದುಕನ್ನು ಕುರಿತ ಪ್ರಾಮಾಣಿಕ ಕಳಕಳಿ ಮತ್ತು ಅವರ ಅವಸ್ಥೆಗೆ ಕಾರಣವಾಗಿರುವ ವ್ಯವಸ್ಥೆ ಕುರಿತ ಆಕ್ರೋಶಗಳು ಅನೇಕ ಒಳನೋಟಗಳಿಗೆ ಕಾರಣವಾಗಿವೆ. ಸ್ತ್ರೀಯ ನೋವು ನಲಿವುಗಳೇ ಮುಖ್ಯವಾಗಿರುವುದರಿಂದ ಅವರು ಯಾವ ಜಾತಿ ಮತ್ತು ಧರ್ಮಗಳಿಗೆ ಸೇರಿದವರು ಎಂಬ ಸಂಗತಿಯು ಹಿನ್ನೆಲೆಗೆ ಸರಿದು, ಜೆಂಡರ್ ಸೆಕ್ಯುಲರಿಸಂನ ನಿಲುವು ರೂಪುಗೊಂಡಿದೆ. ಹೀಗಾಗಿ ಇಲ್ಲಿನ ಅಧ್ಯಯನಕ್ಕೆ ಒಂದು ಬಗೆಯ ಆಕ್ಟಿವಿಸ್ಟ್ ಆಯಾಮ ಒದಗಿದೆ. ಈ ಹಿನ್ನೆಲೆಯಿಂದ ಶೈಲಜ ಅವರ ವಿಶ್ಲೇಷಣೆಗಿಂತ  ಅನುಬಂಧದಲ್ಲಿ ಬರುವ `ಕ್ಷೇತ್ರಕಾರ್ಯಾನುಭವ’ಗಳು ಕುತೂಹಲಕರವಾಗಿದೆ.

ಕನ್ನಡ ಚಿಂತನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಈಗ ಮಹಿಳಾವಾದಿ ಚಿಂತನಕ್ರಮಗಳು ಪ್ರವೇಶಿಸುತ್ತಿವೆ. ಕರ್ನಾಟಕದ ಅಧ್ಯಯನಗಳಲ್ಲಿ ಆಳವಾಗಿ ಸ್ಥಾಪಿತವಾಗಿರುವ ಲೋಕದೃಷಿಯಲ್ಲಿ ಅವು ಪಲ್ಲಟವನ್ನೂ ತರುತ್ತಿವೆ. ಆದರೂ ಕರ್ನಾಟಕ ಅಧ್ಯಯನಗಳ ದೊಡ್ಡಭಾಗವು ಸಾಹಿತ್ಯಕ ಅಧ್ಯಯನಗಳಿಗೆ ಸೀಮಿತವಾಗಿದೆ ಮತ್ತು ಅಲ್ಲಿರುವ ಸ್ತ್ರೀವಾದಿ ನೆಲೆಯು ನಗರ ಮಧ್ಯಮವರ್ಗದ ಮೇಲುಜಾತಿಯ ನೆಲೆಯ ಪರಿಮಿತಿಗೆ ಒಳಗಾಗಿದೆ. ಅದಕ್ಕೆ ನಾಡಿನ  ದುಡಿಯುವ ವರ್ಗದ ಮತ್ತು ಸಾಮಾಜಿಕವಾಗಿ ಕೆಳಜಾತಿಗಳ ನೆಲೆಯ ಮಹಿಳೆಯರ ಬಾಳಿನ ಆಯಾಮ ಅಷ್ಟಾಗಿ ದಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಸಾಮಾಜಿಕವಾದ ಅಪಮಾನ ಮತ್ತು ಧಾರ್ಮಿಕ ಗೌರವದಂತಹ ಎರಡು ಅತಿರೇಕದ ಉಪಚಾರವುಳ್ಳ, ಈ `ದೇವಸ್ತ್ರೀ’ಯರನ್ನು ಕುರಿತ ಶೈಲಜರ  ಅಧ್ಯಯನಗಳು ಮುಖ್ಯವಾಗಿ ಕಾಣುತ್ತವೆ.

ಪಾತರದವರು, ಬಸವಿಯರು ಮತ್ತು ದೇವದಾಸಿಯರದು, ನಮ್ಮ ನಾಡಿನ ಗುಡಿಸಂಸ್ಕೃತಿ, ಫ್ಯೂಡಲ್ ವ್ಯವಸ್ಥೆ ಮತ್ತು ಶ್ರೇಣೀಕೃತ ಜಾತಿವ್ಯವಸ್ಥೆಗಳು ಕೂಡಿ ಚಾರಿತ್ರಿಕವಾಗಿ ಸೃಷ್ಟಿಸಿರುವ ಒಂದು ಸಮುದಾಯ. ಈ ಸಮುದಾಯಕ್ಕೆ ಸಂಗೀತ, ನಟನೆಯಂತಹ ಕಲಾ ಆಯಾಮವೂ ಇದೆ. ವೇಶ್ಯಾವೃತ್ತಿಯಂತಹ ಸಾಮಾಜಿಕ ಸಮಸ್ಯೆಯ ಆಯಾಮವೂ ಇದೆ. ಇಂತಹ ಲೋಕಗಳಲ್ಲಿ ಕೆಲಸ ಮಾಡುವುದೇ ಒಂದು ಸವಾಲು. ಇಲ್ಲಿ ಮಹಿಳಾ ಅಧ್ಯಯನಕಾರಿಗೆ ಸಿಗುವ ಸುಲಭ ಪ್ರವೇಶವು ಇತರರಿಗೆ ಸಿಗುವುದಿಲ್ಲ. ಒಂದೊಮ್ಮೆ ಪ್ರವೇಶ ಸಿಕ್ಕರೂ ಸಾಮಾಜಿಕ ಸಂಕೋಚದಿಂದ ನರಳುವ ಅವರ ಜತೆ ವಿಶ್ವಾಸ ಸಂಪಾದಿಸುವುದು, ಹಂಚಿಕೊಳ್ಳಲು ಕಷ್ಟವೆನಿಸುವ ಖಾಸಗಿ ಅನುಭವಗಳನ್ನು ಪಡೆದುಕೊಳ್ಳುವುದು ಸುಲಭವಲ್ಲ. ಇನ್ನೂ ಕಷ್ಟದ ಸಂಗತಿಯೆಂದರೆ, ಈ ಅನುಭವ ಮತ್ತು ವಿವರಗಳನ್ನು ಹಂಚಿಕೊಂಡವರಿಗೆ ಮುಜುಗರವಾಗದಂತೆ ಅಧ್ಯಯನದಲ್ಲಿ ಮಂಡಿಸುವುದು. ನಾಗರಿಕ ಜಗತ್ತಿಗೆ ಮಂಡಿಸುವ ವಿಧಾನದ್ದು. ಅನೇಕ ಸಲ ಜನರ ಬದುಕಿನ ವೈಯಕ್ತಿಕ ವಿವರಗಳು ಸಂಶೋಧನೆಗೆ ಕೇವಲ ವಸ್ತುವಾಗತೊಡಗಿದರೆ, ಅಲ್ಲಿ ಮಾನವೀಯ ಸೂಕ್ಷ್ಮತೆ ಕಣ್ಮರೆಯಾಗುತ್ತದೆ. ಸಂಶೋಧನೆ ಪ್ರಕಟವಾದ ಬಳಿಕ ಹೊಸ ಕಷ್ಟಪರಂಪರೆಗಳು ಆರಂಭವಾಗುತ್ತವೆ. ಇಂತಹ ಗುಪ್ತಲೋಕಗಳಲ್ಲಿ ಅಧ್ಯಯನ ಮಾಡುವಾಗ, ನಾಗರಿಕ ಜಗತ್ತಿಗೆ ಹೆಚ್ಚು  ಗೊತ್ತಿಲ್ಲದ ಲೋಕ ಹೊಕ್ಕು ಬಂದೆ ಎಂಬ ಹೆಮ್ಮೆ ಕೆಲಸ ಮಾಡತೊಡಗುತ್ತದೆ. ಇದು ತಂದ `ಅಪರೂಪ’ದ ಮಾಹಿತಿಯನ್ನು ನಾಗರಿಕ ಲೋಕಕ್ಕೆ ತೋರಿಸಿ ಬೆರಗುಗೊಳಿಸುವ ಹಮ್ಮಾಗಿ ಮಾರ್ಪಡಬಹುದು. ಗೂಢಲೋಕಗಳ ಮೇಲೆ ಬೆಳಕು ಚೆಲ್ಲುತ್ತೇವೆಂದು ಹೇಳಿಕೊಂಡು, ಅನೇಕ ಪತ್ರಿಕೆ ಮತ್ತು ದೃಶ್ಯಮಾಧ್ಯಮಗಳು, ಇಂತಹ ಸಮುದಾಯಗಳ ಬಗ್ಗೆ ಸಾಂಸ್ಕೃತಿಕ ಸೂಕ್ಷ್ಮತೆಯೂ ಮಾನವೀಯ ಸಂವೇದನೆಯೂ ಇಲ್ಲದ ರೋಚಕ ವರದಿ ಮಾಡಿ ಸಾಕಷ್ಟು ಅನಾಹುತ ಮಾಡಿವೆ. ಮಾರುಕಟ್ಟೆ ಸಂಸ್ಕೃತಿಗೆ ಜನರ ಬದುಕಿನ ಖಾಸಗಿ ವಿವರವನ್ನೂ ಸರಕಿನಂತೆ  ಮಾರಿ ಲಾಭಮಾಡುವ ಪ್ರವೃತ್ತಿಯಿದೆ. ಇಂತಹ ಸಂದರ್ಭದಲ್ಲಿ ಸಂಶೋಧಕರು ಸಾಮಾಜಿಕ ಹೊಣೆಗಾರಿಕೆ ಪ್ರಕಟಿಸಬೇಕಾಗುತ್ತದೆ. ನಮ್ಮ ಜತೆಗೇ ಬದುಕುತ್ತಿರುವ ಜೀವಂತ ವ್ಯಕ್ತಿ ಮತ್ತು ಸಮುದಾಯಗಳ ಮೇಲೆ ಅಧ್ಯಯನ ಮಾಡುವುದು, ನಿರ್ಜೀವ ವಸ್ತುಗಳ ಮೇಲೆ ಅಧ್ಯಯನ ಮಾಡುವುದಕ್ಕಿಂತ ಭಿನ್ನವಾದುದು. ಇಲ್ಲಿನ ವಿಶಿಷ್ಟ ಸಂಗತಿಗಳನ್ನು ಬಹಿರಂಗಪಡಿಸಿದರೆ, ಹೇಳಿಕೊಂಡವರ ಖಾಸಗಿ ಬದುಕು ಘಾಸಿಯಾಗಿ, ಅವರಿಗೆ ಅಪಮಾನವಾಗುತ್ತದೆ. ಅದನ್ನು ಹೇಳದಿದ್ದರೆ ಅಧ್ಯಯನ ಅಪೂರ್ಣವಾಗುತ್ತದೆ. ಇಂತಹ ಇಕ್ಕಟ್ಟಿನ ಒಳಗೆ ಮಾನವೀಯ ಎಚ್ಚರ ಮತ್ತು ಸೂಕ್ಷ್ಮತೆಯನ್ನು ಪ್ರಕಟಿಸಬೇಕಾಗುತ್ತದೆ. ಶೈಲಜ ಇದನ್ನು ಪ್ರಕಟಿಸಲು ಯತ್ನಿಸಿದ್ದಾರೆ.

ಶೈಲಜ ಅವರ ಅಧ್ಯಯನಗಳಲ್ಲಿ ಕೆಲವು ಮಿತಿಗಳಿವೆ. ಅವೆಂದರೆ- 1. ಮಾಹಿತಿ ಸಂಗ್ರಹ ಮತ್ತು ಅದನ್ನು ವಿಶ್ಲೇಷಣೆ ಮಾಡುವ ಜತೆಗೆ ಅದನ್ನು ತಾತ್ವೀಕರಣದತ್ತ ಕೊಂಡೊಯ್ಯಲು ಸಾಧ್ಯವಾಗದೆ ಇರುವುದು. ಅಮೂಲ್ಯ ಅನುಭವ ಮತ್ತು ಮಾಹಿತಿಗಳನ್ನು ಚಿಂತನೆಗಳಾಗಿ ಪರಿವರ್ತಿಸಲು ಬೇಕಾದ ಕುಶಲತೆ ಪಡೆದುಕೊಳ್ಳುವುದು ಹೊಸಗಾಲದ ವಿದ್ವಾಂಸರ ಮುಂದಿನ ಸವಾಲಾಗಿದೆ. 2. ಸಾಹಿತ್ಯಕ ವಿಶ್ಲೇಷಣೆ ಮಾಡುವ ಭಾಗಗಳು ದುರ್ಬಲವಾಗಿರುವುದು. ಅನೇಕ ಸಲ ಸಾಹಿತ್ಯಕ ಅಧ್ಯಯನಗಳಲ್ಲಿ ಸಿಗುವ ಸೂಕ್ಷ್ಮತೆಯು ಸಾಮಾಜಿಕ ಅಧ್ಯಯನಗಳಲ್ಲಿ ಉಪಯುಕ್ತವಾದ ನೋಟಗಳಿಗೆ ಕಾರಣವಾಗಬಲ್ಲದು. ಈ ಸಂದರ್ಭದಲ್ಲಿ ಪಾತರದವರನ್ನು ವಸ್ತುವಾಗಿಸಿಕೊಂಡ ಕಾದಂಬರಿ, ಅದರಲ್ಲೂ ಕಾರಂತರ `ಮೈಮನಗಳ ಸುಳಿಯಲ್ಲಿ’, ಇಲ್ಲಿ ನೆನಪಾಗುತ್ತಿದೆ. 3. ದಮನಿತ ಮಹಿಳೆಯರ ಬದುಕಿನ ಸಂಕಷ್ಟಗಳು ಹುಟ್ಟಿಸಿರುವ ಭಾವಾನಾತ್ಮಕ ಆಕ್ರೋಶ ಮತ್ತು ಅನುಕಂಪೆಗಳು ಮತ್ತಷ್ಟು ಆಳವಾದ ಸಂಕೀರ್ಣವಾದ ವಿಶ್ಲೇಷಣೆಗೆ ಹೋಗಲು ತಡೆದಿರುವುದು. 4. ಪುರುಷನೆಲೆಯನ್ನು ಎದುರಾಳಿಯಾಗಿ ಇಟ್ಟುಕೊಂಡು ನೋಡುವ ಧೋರಣೆಯಿಂದ ಇಲ್ಲಿ ಹೊಸನೋಟಗಳು ದಕ್ಕಿವೆ. ಆದರೂ ಈ ಧೋರಣೆ ಸಮಾಜದ ಅಥವಾ ಬಾಳಿನ ಇತರೆ ಆಯಾಮಗಳತ್ತ ನೋಡಲು ಬೇಕಾದ ದಟ್ಟ ವಿಸ್ತರಣೆಗೆ ತೊಡಕಾಗಿರುವಂತೆ ತೋರುತ್ತದೆ. 5. ಜನಬದುಕಿನ ಒಳಗೆ ಆಳವಾಗಿ ಪ್ರವೇಶವುಳ್ಳ ಇವರ ಅಧ್ಯಯನಗಳು, ಇದೇ ವಿಷಯ ಕುರಿತಂತೆ ಬೇರೆಬೇರೆ ಭಾಷೆಗಳಲ್ಲಿ ನಡೆದಿರುವ ಅಧ್ಯಯನಗಳ ಅಭ್ಯಾಸದಿಂದ ತೌಲನಿಕ ಪ್ರಯೋಜನ ಪಡೆಯಲು ಸಾಧ್ಯವಾಗದೆ ಇರುವುದು. ಕನ್ನಡದ ಅಧ್ಯಯನಕಾರರಿಗೆ ಕನ್ನಡೇತರ  ಅಧ್ಯಯನಗಳಿಂದ ಶಕ್ತಿಯನ್ನು ಪಡೆದುಕೊಳ್ಳಲು ಕನಿಷ್ಠ ಮಟ್ಟದ ಇಂಗ್ಲಿಷು ಬೇಕಾಗಿದೆ. ಸಾಧ್ಯವಾದರೆ ಭಾರತದ ಸಹ ಚಿಂತಕರ ಜತೆ ತಮ್ಮ ಅಧ್ಯಯನ ಫಲಗಳನ್ನು ಹಂಚಿಕೊಳ್ಳಲು ಸಂವಾದ ಮಟ್ಟದ ಇಂಗ್ಲಿಷನ್ನು ಸಹ ಪಡೆದುಕೊಳ್ಳುವ ಅಗತ್ಯವಿದೆ. ಇಲ್ಲದಿದ್ದರೆ, ನಮ್ಮ ಬಹಳಷ್ಟು ಉಪಯಕ್ತವಾದ ಅಧ್ಯಯನಗಳು ದ್ವೀಪದಂತೆ ಪ್ರಾದೇಶಿಕ ಪರಿಮಿತಿಯಲ್ಲೇ ಉಳಿದುಬಿಡುತ್ತವೆ.

ಕರ್ನಾಟಕ ಅಧ್ಯಯನಗಳಿಗೆ ಹೊಸಹೊಸ ಪ್ರತಿಭೆಗಳ ಆಗಮನವು ಇನ್ನಷ್ಟು ಬೇಕಾಗಿದೆ. ಆದರೆ ಪ್ರತಿಭೆಗಳು ಮಾತ್ರ ಬಂದರೆ ಸಾಲದು. ಅವಕ್ಕೆ ತಕ್ಕ ದೃಷ್ಟಿಕೋನಗಳೂ ಬರಬೇಕು. ಅದರಲ್ಲೂ ಮಹಿಳಾ ದೃಷ್ಟಿಕೋನಗಳು ಕರ್ನಾಟಕದ ಚರಿತ್ರೆ ಕಲೆ ಸಂಸ್ಕೃತಿ ಭಾಷೆ ಇತ್ಯಾದಿ ವಿಷಯಗಳಲ್ಲಿ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸುವ ಅಗತ್ಯವಿದೆ. ಇದರಿಂದ ಕರ್ನಾಟಕವನ್ನು ಕುರಿತ ಹೊಸ ನೋಟಗಳು ಸಿಗುತ್ತವೆ ಮಾತ್ರವಲ್ಲ, ಈಗಾಗಲೇ ನಡೆದಿರುವ  ಅಧ್ಯಯನಗಳಲ್ಲಿ ಕೈಬಿಟ್ಟಿರುವ ಅಥವಾ ಅಡಗಿಸಿರುವ ಪ್ರಶ್ನೆಗಳನ್ನು ಎತ್ತಲು ನೆರವಾಗುತ್ತದೆ. ಶೈಲಜ ಈ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ದೇವು ಪತ್ತಾರ

ಬೀದರಿನಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಮುಖ್ಯ ವರದಿಗಾರರಾಗಿರುವ ದೇವುಪತ್ತಾರ್ ಅವರು, ಹೊಸತಲೆಮಾರಿನ ಲೇಖಕರಲ್ಲಿ ಕೊಂಚ ಅಲಾಯದವಾಗಿ ನಿಲ್ಲುವವರು. ಅವರ  ಬರೆಹಗಳು ಕರ್ನಾಟಕ ಸಂಸ್ಕೃತಿ ಮತ್ತು ಚರಿತ್ರೆಯ ಅಧ್ಯಯನ ಮಾಡುವ ಎಲ್ಲರಲ್ಲೂ ಕುತೂಹಲ ಹುಟ್ಟಿಸಬಲ್ಲವು. ಇದಕ್ಕೆ ಕಾರಣ, ಅವರ ಬರೆಹದೊಳಗೆ ಇರುವ ಸಂಶೋಧಕ ಗುಣ. ವರದಿಗಾರಿಕೆಯ ಸಾಮಾನ್ಯ ಲಕ್ಷಣವೆಂದರೆ, ಹೊಸಹೊಸ ಸುದ್ದಿ ಮತ್ತು ಮಾಹಿತಿಗಳಿಗಾಗಿ ಹಸಿವನ್ನು ತೋರುವುದು; ಅವನ್ನು ವರದಿಯಾಗಿ ಕಳಿಸಿದ ಬಳಿಕ ಆ ಹಸಿವು ಇಂಗಿ ಮನಸ್ಸು ನಿರಾಳವಾಗುವುದು. ಆಯಾ ದಿನಹುಟ್ಟಿ ಮರುದಿನ ಪ್ರಸ್ತುತತೆ ಕಳೆದುಕೊಳ್ಳುವ ಈ ವರದಿತನದ ಆಚೆಗೂ ಹೋಗಬಲ್ಲ ತ್ರಾಣ, ಎಷ್ಟೊ  ವರದಿಗಾರರಿಗೆ ಇರುವುದಿಲ್ಲ; ಒಂದೊಮ್ಮೆ ಇದ್ದರೂ, ಹಾಗೆ ಹೋಗಲು ಅವರ ದೈನಿಕ ವರದಿತನದ ಒತ್ತಡಗಳು ಬಿಡುವುದಿಲ್ಲ.

ಇಂತಹ ಇಕ್ಕಟ್ಟಿನಲ್ಲಿ ಕೆಲಸ ಮಾಡುತ್ತ ದೇವು ಕರ್ನಾಟಕ ಚರಿತ್ರೆಯನ್ನು ಭಿನ್ನವಾಗಿ ಕಟ್ಟುವ ಸಂಶೋಧನಾತ್ಮಕ ಬರೆಹಗಳನ್ನು ಬರೆಯುತ್ತ ಬಂದಿದ್ದಾರೆ. ಭಿನ್ನವೇಕೆಂದರೆ, ವಿಶಿಷ್ಟ ಪ್ರತಿಭೆಯನ್ನು ಮೆರೆದ ಅಜ್ಞಾತ ವ್ಯಕ್ತಿಗಳ ವ್ಯಕ್ತಿಚಿತ್ರ ಮತ್ತು ಜೀವನಚಿತ್ರಗಳನ್ನು ರಚಿಸುವುದು. ಉದಾಹರಣೆಗೆ, ಬೀದರಿನ ಅಪರೂಪದ ಕ್ಯಾಮರಾ ಎಂಜಿನಿಯರ್ ಗುಲಾಂ ಮುಂತಕಾ (೨೦೦೮) ಅವರ ಜೀವನಚರಿತ್ರೆ; ಸುರಪುರದಲ್ಲಿ ಬ್ರಿಟಿಷರ ರಾಜಕೀಯ ಏಜೆಂಟನಾಗಿದ್ದ ಮೆಡೋಸ್ ಟೇಲರನ ಮೇಲೆ ಅವರು ಸಂಪಾದಿಸಿದ ಪುಸ್ತಕ ‘ಮಹಾದೇವ ಬಾಬಾ ಮೆಡೋಸ್ ಟೇಲರ್’. ಈಗ ದೇವು, ಮಹಮೂದ್ ಗವಾನನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾರೆ. ಬಹಮನಿ ರಾಜ್ಯದ ಪ್ರಧಾನಮಂತ್ರಿಯಾಗಿದ್ದ, ಗವಾನನು ದೊಡ್ಡ ವಿದ್ವಾಂಸನೂ ದಾರ್ಶನಿಕನೂ ಶಿಕ್ಷಣತಜ್ಞನೂ ಆಗಿದ್ದವನು. ಮಹಾ ಪ್ರಾಮಾಣಿಕ ಮತ್ತು ಜನಪ್ರಿಯ. ದೊರೆಯ ತಪ್ಪು ತಿಳಿವಳಿಕೆ ಕಾರಣದಿಂದ ಕೊಲ್ಲಲ್ಪಟ್ಟವನು.

ದೇವು ಅವರ ಈಚೆಗೆ ಪ್ರಕಟವಾದ ‘ಈಗ ಹೀಗಿರುವ ಲೋಕದಲ್ಲಿ’ ಕೃತಿಯಂತೂ, ಹೈದರಾಬಾದ್ ಸೀಮೆಯ ವಿಶಿಷ್ಟ ವ್ಯಕ್ತಿಚಿತ್ರಗಳ ಸಂಪುಟವೇ ಆಗಿದೆ. ಕನ್ನಡದಲ್ಲಿ ಮೊದಲು ವ್ಯಕ್ತಿಚಿತ್ರಗಳ ಪರಂಪರೆಯನ್ನು ಆರಂಭಿಸಿದವರು ಡಿವಿಜಿ ಎನ್ನಬಹುದು. ಅವರ ‘ಜ್ಞಾಪಕ ಚಿತ್ರಶಾಲೆ’ಯ ಸಂಪುಟಗಳು, ಕರ್ನಾಟಕದ ರಾಜಕೀಯ ಸಾಮಾಜಿಕ ಚರಿತ್ರೆಯನ್ನು ವ್ಯಕ್ತಿಚಿತ್ರಗಳ ಮೂಲಕ ಕಟ್ಟುವ ಕೆಲಸವನ್ನು ಬಹಳ ಚೆನ್ನಾಗಿ ಮಾಡುತ್ತವೆ. ನಂತರ ಎ.ಎನ್.ಮೂರ್ತಿರಾವ್, ವಿಸೀ ಮುಂತಾದವರು ಈ ಪರಂಪರೆಯನ್ನು ಮುಂದುವರೆಸಿದರು. ಲಂಕೇಶ್ ಕೂಡ ಬಹಳಷ್ಟು ವ್ಯಕ್ತಿಚಿತ್ರಗಳನ್ನು ಪತ್ರಿಕಾಬರೆಹದ ಭಾಗವಾಗಿ ಬರೆದರು. ಈಚೆಗೆ ಈ ಸಾಲಿನಲ್ಲಿ ಬಂದ ಕೃತಿ ಎಸ್.ಆರ್. ವಿಜಯಶಂಕರ್ ಅವರ ‘ಒಡನಾಟ’.

ದೇವು ವ್ಯಕ್ತಿಚಿತ್ರಗಳ ವಿಶೇಷವೆಂದರೆ, ಅವರ ಲೇಖನಕ್ಕೆ ವಸ್ತುವಾಗಿರುವ ಹೆಚ್ಚಿನವರು ಅಜ್ಞಾತವಾಗಿದ್ದುಕೊಂಡು ಬದುಕಿದವರು; ಪ್ರಧಾನಧಾರೆಯ ಚರಿತ್ರೆಯ ಚೌಕಟ್ಟಿನಾಚೆ ಇರುವ ಯಾರೂ ಅರಿಯದ ವೀರರು; ಹಸ್ಸುಖಾನ್, ತಾರಾನಾಥ್, ಮಿರಾಜುದ್ದೀನ್, ನರಸಿಂಗರಾವ್, ಮಹಮೂದ್ ಗವಾನ, ಎಂ.ಎಸ್. ಪುಟ್ಟಣ್ಣ, ಮೆಡೋಸ್ ಟೇಲರ್, ಶೆಟ್ಟರ ನಾಗಪ್ಪ, ಶೇಷರಾವ ಕಾಮತೀಕರ್, ನಿಕಿಟಿನ್, ಸಂಗೀತಗಾರ ರಾಮ, ಗುಲಾಂ ಮುಂತಾಕ, ಷಣ್ಮುಖಪ್ಪ, ಆಲಗೂರು ರಾಚಪ್ಪ -ಮುಂತಾದವರು; ಈ ಕೃತಿಯನ್ನು ಸಾಮಾನ್ಯರ ಚರಿತ್ರೆಯ ಸಂಪುಟವೆಂದೂ ಕರೆಯಬಹುದು. ಇಲ್ಲಿನ ಟೇಲರ್ ಹಾಗೂ ಗವಾನರು ಸಾಮಾನ್ಯರಲ್ಲ; ಆದರೆ ಕರ್ನಾಟಕದ ಚರಿತ್ರಕಾರರಿಂದ ಕಡೆಗಣಿಸಲ್ಪಟ್ಟವರು. ಪ್ರಸಿದ್ಧರ ಬೆನ್ನುಹತ್ತಿ ಹೋಗುವ ಸಾಂಪ್ರದಾಯಕ ಚರಿತ್ರೆಯ ಹಾದಿಯನ್ನು ಕೈಬಿಟ್ಟು, ಸ್ಥಳೀಯರಾಗಿದ್ದು ನಾಡಿನ ಬದುಕನ್ನು ವರ್ಣರಂಜಿತವಾಗಿ ಕಟ್ಟಿದ ವ್ಯಕ್ತಿಗಳ ಜೀವನ ಚರಿತ್ರೆಯತ್ತಲೇ ದೇವು ಅವರ ಒಲವಿದೆ.

ಮೇಲಿನ ಪ್ರಕಟಿತ ಹಾಗೂ ಪ್ರಕಟವಾಗುತ್ತಿರುವ ಎಲ್ಲ ಕೃತಿಗಳು, ದೇವು ಅವರ ಮುಖ್ಯ ಆಸಕ್ತಿಯ ಕ್ಷೇತ್ರವೊಂದನ್ನು ಸೂಚಿಸುತ್ತಿವೆ. ಅದೆಂದರೆ ಚರಿತ್ರೆ. ಚರಿತ್ರೆಯನ್ನು ಅಗೆದೆ ತೆಗೆದು ಬರೆಯುವ ಅವರ ಈ ಸೆಳೆತವು, ಮೊದಲಿಂದಲೂ ಅವರ ಒಳಗೇ ಇತ್ತೊ ಅಥವಾ ಹಾದಿಬೀದಿಯಲ್ಲಿ ಚರಿತ್ರೆ ಸೂರೆಯಾಡಿರುವ ಬೀದರಿನಂತಹ ಊರಲ್ಲಿ ಇರುವುದರಿಂದ ಚಿಗುರೊಡೆಯಿತೊ ತಿಳಿಯದು. ನಮ್ಮ ದಿನಪತ್ರಿಕೆಗಳು ಕರ್ನಾಟಕದ ಸ್ಥಳೀಯ ವ್ಯಕ್ತಿ ಮತ್ತು ವಿದ್ಯಮಾನಗಳ ಮೇಲೆ ಲೇಖನಗಳನ್ನುಳ್ಳ, ವಿಶೇಷ ಪುರವಣಿಗಳನ್ನು ಪ್ರಕಟಮಾಡಲು ಆರಂಭಿಸಿದವಷ್ಟೆ. ಆ ಬಳಿಕ, ನಮ್ಮ ಪ್ರಧಾನ ಚರಿತ್ರೆಗೆ ಗೊತ್ತಿಲ್ಲದ ನೂರಾರು ವಿಷಯಗಳು ತಿಳಿದು ಬರತೊಡಗಿದವು. ಮಾತ್ರವಲ್ಲ, ಅವನ್ನು ಬರೆಯುವ ಒಂದು ಲೇಖಕರ ಬಳಗವೂ ಕನ್ನಡದಲ್ಲಿ ಸೃಷ್ಟಿಯಾಯಿತು. ಅಂತಹ ಪುರವಣಿಗಳಿಂದ ದೇವು ಅವರ ಮೊದಲ ಘಟ್ಟದ ಬರೆಹಗಳು ರೂಪುಗೊಂಡಂತಿವೆ. ಆದರೆ ಅವು ವಿಶೇಷ ಮಾಹಿತಿ ಸಂಗ್ರಹ ಮತ್ತು ಆಕರ್ಷಕ ಮಂಡನೆಯ ಸೀಮಿತತೆಯನ್ನು ದಾಟಿ, ಗಂಭೀರ ಸಂಶೋಧನ ಲೇಖನಗಳಾಗುವತ್ತ ಚಲಿಸಿದವು. ಅದರಲ್ಲೂ ಸಂಗೀತಗಾರರನ್ನು ಕುರಿತ ದೇವು ಬರೆಹಗಳು ಸಾಂಸ್ಕೃತಿಕವಾಗಿ ಅನನ್ಯವಾಗಿವೆ.

ದೇವು ಬರೆಹಗಳ ಇನ್ನೊಂದು ವಿಶೇಷತೆಯೆಂದರೆ, ಚರಿತ್ರೆಯನ್ನು ಒಣವಿವರಗಳ ಕಂತೆಯಾಗಿಸದೆ ಸ್ವಾರಸ್ಯಕರ ಕತೆಯಾಗಿಸುವುದು; ಅಥವಾ ಕತೆಯ ಕುತೂಹಲಕ್ಕಾಗಿ ಚಾರಿತ್ರಿಕ ಪ್ರಜ್ಞೆಯನ್ನು ಬಲಿಗೊಡದೆ ಇರುವುದು. ಇದೊಂದು ಎಚ್ಚರದ ಸಮತೋಲನ. ಸಣ್ಣಕತೆಗಾರನಂತೆ ಒಂದು ಸಣ್ಣ ಘಟನೆಯನ್ನು ಆಯ್ದುಕೊಂಡು, ಅದರ ಸುತ್ತಮುತ್ತಲಿನ ಸಣ್ಣಪುಟ್ಟ ವಿವರಗಳನ್ನು ಕಲೆಹಾಕಿ, ಒಂದು ಅಚ್ಚುಕಟ್ಟಾದ ಚಿತ್ರವನ್ನು ಬರೆಯುವ ಕುಶಲತೆಯನ್ನು ಅವರು ಹೊಂದಿದ್ದಾರೆ. ಈ ಕಾರಣದಿಂದ, ಅವರ ಬರೆಹಗಳನ್ನು ಚರಿತ್ರೆ ಮತ್ತು ಕತೆಗಾರಿಕೆಗಳ ಸಂಕರದ ಫಲಗಳೆನ್ನಬಹುದು.

ತಮ್ಮ ಚಾರಿತ್ರಿಕ ಬರೆಹಗಳಿಗೆ ಬೇಕಾದ ಮಾಹಿತಿ ಪಡೆಯಲು ದೇವು ಪಡುವ ಶ್ರಮ ಮತ್ತು ತೋರುವ ಶ್ರದ್ಧೆಗಳು, ಅವನ್ನು ಓದುವ ಯಾರಿಗೂ ಮನವರಿಕೆಯಾಗುತ್ತವೆ. ಟೇಲರ್ ಪುಸ್ತಕಕ್ಕೆ ಅವರು ಬರೆದಿರುವ ಪ್ರಸ್ತಾವನೆ ಇದಕ್ಕೆ ಸಾಕ್ಷಿ. ಅವರೊಮ್ಮೆ ನನಗೆ ಫೋನ್ ಮಾಡಿ, `ಎಂ.ಎಸ್. ಪುಟ್ಟಣ್ಣನವರು ಮಹಮದ್ ಗವಾನನ ಮೇಲೆ ಬರೆದಿರುವ ಪುಸ್ತಕ ಹುಡುಕುತ್ತಿದ್ದೇನೆ, ನಿಮ್ಮಲ್ಲಿದೆಯೇ?’ ಎಂದು ಕೇಳಿದರು. ದುರ್ಲಭವಾದ ಆ ಕೃತಿಯ ಹೆಸರನ್ನು ನಾನು ಕೇಳಿದ್ದೆ. ನನಗದು ಸಿಕ್ಕಿರಲಿಲ್ಲ. ಚರಿತ್ರೆಯ ಕೆಲವು ಅಧ್ಯಾಪಕರಿಗಾದರೂ ಇಂತಹದೊಂದು ಕೃತಿಯಿರುವ ಬಗ್ಗೆ ತಿಳಿದಿದೆಯೊ ಇಲ್ಲವೊ? ಕಡೆಗೊಮ್ಮೆ ದೇವು ಅದನ್ನು ಎಲ್ಲಿಂದಲೊ ಹುಡುಕಿ ಪಡೆದರು. ಹಾಗೆಯೇ ಬಿಜಾಪುರದ ನೆಲದಿಂದ ಮೂಡಿದ ಪ್ರಸಿದ್ಧ ಚರಿತ್ರೆಯ ಗ್ರಂಥ ‘ತಾರೀಖೆ ಫೆರಿಸ್ತಾ’ದ ಅನುವಾದವನ್ನು ಅಂತರ್ಜಾಲದಲ್ಲಿ ಹುಡುಕಿ ನನಗದನ್ನು ಕಳಿಸಿಕೊಟ್ಟರು. ಅವರು ಬೀದರಿಗೆ ಭೇಟಿಕೊಟ್ಟಿದ್ದ ರಷ್ಯನ್ ಪ್ರವಾಸಿ ನಿಕಿಟಿನ್ ಕುರಿತು ಅವರು ಮಾಡಿರುವ ಶೋಧವಂತೂ ಅಪರೂಪದ್ದಾಗಿದೆ. ಇವೆಲ್ಲ ದೇವು ಅವರಲ್ಲಿರುವ ಗಂಭೀರ ಸಂಶೋಧಕನ ಕುರುಹುಗಳು.

ದಿನಪತ್ರಿಕೆಯಲ್ಲಿದ್ದೂ ಸಂಶೋಧನ ಪ್ರವೃತ್ತಿಯನ್ನೂ ಚಿಂತನಶೀಲತೆಯನ್ನೂ ಪಡೆದುಕೊಳ್ಳುವ ಸವಾಲನ್ನು ದೇವು, ತಮ್ಮ ಒಳಗಿನ ವಿದ್ವತ್ ಸಹಜ ಸೆಳೆತದಿಂದ ನಿಭಾಯಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಎಷ್ಟೊ ಸಂಶೋಧಕರು ಮಾಡಲಾಗದ್ದನ್ನು ಅವರು ಮಾಡುತ್ತಿದ್ದಾರೆ ಎಂದೂ ಹೇಳಬಹುದು. ಅವರ ಸಂಶೋಧನ ಬರೆಹಗಳಲ್ಲಿ ಸಂಶೋಧಕನ ಖಚಿತತೆಯಿದೆ. ನಿರ್ಲಿಪ್ತವಾಗಿ ಬರೆಯುವ ವಸ್ತುನಿಷ್ಠತೆಯಿದೆ. ಅವರ ಲೇಖನಗಳು ಕುತೂಹಲ ಹುಟ್ಟುವಂತೆ ಸ್ವಾರಸ್ಯಕರವಾಗಿರುತ್ತವೆ ಮತ್ತು ಒಂದೇ ಬೈಠಕ್ಕಿನಲ್ಲಿ ಓದಿಸಿಕೊಳ್ಳುತ್ತವೆ. ಕವಿಯೂ ಆಗಿರುವ ದೇವು ಕೆಲವು ಕಡೆ ತನ್ಮಯವಾಗಿ ಕಾವ್ಯದ ಭಾಷೆಯನ್ನು ಬಳಸುವುದುಂಟು. “ರಾಚಪ್ಪ ಸಾಥ್ ನೀಡುವಾಗೆಲ್ಲ ಗಾಯಕನ ಕಣ್ಮಸಕು ಮಾಡಿ ಲಯದ ದಟ್ಟಕಾಡಿನಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುತ್ತಿದ್ದ” ಎಂಬಂತಹ ವಾಕ್ಯಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಆದರೆ ದೇವು ಬರೆಹದಲ್ಲಿ ಕೆಲವು ಮಿತಿಗಳಿವೆ. ಮೊದಲನೆಯದಾಗಿ, ಅವರಿಗೆ ಪತ್ರಿಕಾ ಬರೆಹದಲ್ಲಿ ಸಾಮಾನ್ಯವಾಗಿರುವ ವರದಿಗಾರಿಕೆಯ ಗುಣದಿಂದ ಕೆಲವೊಮ್ಮೆ ತಪ್ಪಿಸಿಕೊಳ್ಳಲು ಆಗಿಲ್ಲ; ಸ್ವಾರಸ್ಯವನ್ನು ಹುಟ್ಟಿಸಲು ಭಾಷೆಗೆ ಬಣ್ಣವನ್ನು ಅವರು ಬೆರೆಸುವುದೂ ಉಂಟು. “ಬೀದರಿನಲ್ಲಿ ಬರಬಂದರೆ ಮೈಸೂರಲ್ಲಿ ವಡೆ ದುಬಾರಿ” ಎಂಬ ಲೇಖನದ ತಲೆಬರೆಹವು, ಓದುಗರನ್ನು ಸೆಳೆದುಕೊಳ್ಳಲೆಂದೇ ರೋಚಕಗೊಂಡಂತಿದೆ. ಎರಡನೆಯದಾಗಿ, ದೇವು ಅವರ  ವ್ಯಕ್ತಿಚಿತ್ರಗಳಲ್ಲಿ ಹಳಹಳಿಕೆಯ ದನಿಯೊಂದು ಸುಳಿಯುತ್ತದೆ. ಕಳೆದುಹೋದ ದಿನಗಳು ಸುಂದರವಾಗಿದ್ದವು ಎಂದು ನಂಬಿ ವರ್ತಮಾನದ ಬಗ್ಗೆ ಅವರು ಕೆಲವು ಕಡೆ ಅನಗತ್ಯವಾಗಿ ಕಠೋರವಾಗಿ ಮಾತಾಡುವುದುಂಟು. ಮೂರನೆಯದಾಗಿ, ಸಾರ್ಥಕ ಬದುಕನ್ನು ಬದುಕಿದ ಸಾಮಾನ್ಯ ವ್ಯಕ್ತಿಗಳನ್ನು ದೇವು ವ್ಯಕ್ತಿಚಿತ್ರಕ್ಕೆ ವಸ್ತುವಾಗಿ ಆರಿಸಿಕೊಳ್ಳುತ್ತಾರೇನೊ, ನಿಜ. ಆದರೆ ವ್ಯಕ್ತಿಯ ಸದ್ಗುಣಗಳನ್ನೇ ಮುಂದುಮಾಡಿ ಬರೆಯುವ ಸಹೃದಯತೆ ಮತ್ತು ಉದಾರತೆಗಳಿಂದ, ಆ ವ್ಯಕ್ತಿಚಿತ್ರಗಳಿಗೆ ನಿಷ್ಠುರತೆಯ ಅಂಚು ತಪ್ಪಿಹೋಗಿದೆ. ಒಂದು ಬಗೆಯ ಡಿಫೆನ್ಸಿವ್ ಗುಣ ಅವರ ಈ ಚಿತ್ರಗಳಲ್ಲಿದ್ದು, ವಿಮರ್ಶಾತ್ಮಕತೆಯು ಕಡಿಮೆಗೊಂಡಿದೆ. ಟೇಲರ್ ಕುರಿತ ಲೇಖನಗಳಲ್ಲಿ, ಅಮೂಲ್ಯವಾದ ಮಾಹಿತಿಗಳಿವೆ. ಆದರೆ ಟೇಲರನ ಬಗ್ಗೆ ಭಾವಪಕ್ಷಪಾತದಿಂದ ಬರೆದಿರುವ ಕಾರಣ, ವಸಾಹತುಶಾಹಿ ಆಡಳಿತೆಯ ಆರ್ಥಿಕ ಹಿತಾಸಕ್ತಿಗಳನ್ನಾಗಲಿ, ರಾಜಕೀಯ ತಂತ್ರಗಾರಿಕೆಗಳನ್ನಾಗಲಿ ರಾಜಕೀಯ ಪ್ರಜ್ಞೆಯಿಂದ ವಿಶ್ಲೇಷಿಸಲು ಅವರಿಗೆ ಸಾಧ್ಯವಾಗಿಲ್ಲ. ಸಮಕಾಲೀನ ರಾಜಕಾರಣಿಗಳನ್ನು ಕುರಿತ ವ್ಯಕ್ತಿಚಿತ್ರಗಳಲ್ಲೂ ರಾಜಕೀಯ ವಿಶ್ಲೇಷಣೆಗಳಲ್ಲೂ ವಿಮರ್ಶಾತ್ಮಕ ಎಳೆಗಳಿರುವುದುಂಟು. ಆದರವು ಕ್ಷೀಣವಾಗಿವೆ. ಲಂಕೇಶ್ ಬರೆಯುವ ವ್ಯಕ್ತಿಚಿತ್ರಗಳು, ತಮ್ಮ ನಿಷ್ಠುರತೆಯ ಅಲಗಿನ ಕಾರಣದಿಂದಲೇ ಹೆಚ್ಚು ಮಾನುಷವಾಗಿವೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು.

ಕನ್ನಡದ ದೈನಿಕ ಪ್ರತಿಕೆಗಳಲ್ಲಿ ವರದಿಗಾರಿಕೆ ಸಾಕಷ್ಟಿದೆ. ಆದರೆ ಅಲ್ಲಿ ಸೂಕ್ಷ್ಮವೂ ನಿಷ್ಠುರವೂ ಆದ ರಾಜಕೀಯ ವಿಶ್ಲೇಷಣೆ ಮಾಡುವ ಪ್ರಬುದ್ಧತೆ ತುಸು ಕಡಿಮೆ. ಅದೂ ಇದೆ ಎಂದು ರವೀಂದ್ರರೇಷ್ಮೆ ಬರೆಯುವಾಗ ಗೊತ್ತಾಗುತ್ತಿತ್ತು. ಈಗ ಅಮೀನ್‌ಮಟ್ಟು ಅವರು ಬರೆಯತೊಡಗಿದ ಬಳಿಕವೂ ಗೊತ್ತಾಗುತ್ತಿದೆ; ಕನ್ನಡ ಪತ್ರಿಕೋದ್ಯಮದಲ್ಲಿ ರಾಜಕೀಯ ಸಾಮಾಜಿಕ ವರದಿಗಾರಿಕೆಯಿದೆ. ಆದರೆ ಕಲ್ಚುರಲ್ ರಿಪೋರ್ಟಿಂಗ್ ಎನ್ನುವುದು ಕಡಿಮೆ. ಅದು ಸಹ ಇದೆ ಎಂದು ದೇವು ಮುಂತಾದ ಸಂವೇದನಶೀಲರ ಬರೆಹಗಳಿಂದ ಗೊತ್ತಾಗುತ್ತಿದೆ. ಒಂದು ಜಿಲ್ಲೆಗೆ ಕೆಲವು ವರ್ಷಗಳ ಮಟ್ಟಿಗೆ ಹೋಗುವ ವರದಿಗಾರ ಒಬ್ಬರಿಗೆ, ನಿಜವಾಗಿಯೂ ಜನರ ಬಗ್ಗೆ ಪ್ರೀತಿ, ಕಾಳಜಿ ಮತ್ತು ಬದ್ಧತೆಯಿದ್ದರೆ,  ಸಂಶೋಧನೆಯ ಕುತೂಹಲವಿದ್ದರೆ, ಆ ಸೀಮೆಯ ಸಾಂಸ್ಕೃತಿಕ ಚರಿತ್ರೆಯನ್ನು ಹೇಗೆ ಕಟ್ಟಿಕೊಡಬಹುದು ಎಂಬುದಕ್ಕೆ ದೇವು ಬರೆಹಗಳು ನಿದರ್ಶನವಾಗಿವೆ. ಅವರು ಬೀದರಿಗೆ ಹೋದಮೇಲೆ, ಬೀದರಿನ ಚರಿತ್ರೆಯ ಅಜ್ಞಾತ ಅಧ್ಯಾಯವೊಂದು ಓದುಗರ ಮುಂದೆ ತೆರೆದುಕೊಂಡಂತಾಗಿದೆ.

ಮೂಲತಃ ಗುಲಬರ್ಗ ಜಿಲ್ಲೆಯ ಶಹಾಪುರದವರಾದ ದೇವು, ಧಾರವಾಡದಲ್ಲಿ ಇಂಗ್ಲಿಷ್ ಸಾಹಿತ್ಯ ಓದಿದವರು. ಆದರೆ ಅವರು ಬರೆಯುತ್ತಿರುವ ಬರೆಹಗಳು, ಅವರನ್ನು ಒಬ್ಬ ಗಂಭೀರ ಚರಿತ್ರೆಯ ವಿದ್ವಾಂಸನಾಗುವತ್ತ ಕರೆದೊಯ್ಯುತ್ತಿವೆ. ದೇವು ಬರೆಹಗಳು ಚರಿತ್ರೆಯ ಅಪರಿಚಿತ ಲೋಕವನ್ನು ನಮ್ಮ ಅರಿವಿಗೆ ತರುವ ಕಾರಣಕ್ಕಾಗಿ ಮಾತ್ರ ಮುಖ್ಯವಾಗಿಲ್ಲ; ತಮ್ಮ ಒಳಗಿನ ಲೋಕದೃಷ್ಟಿಗಾಗಿಯೂ ಮುಖ್ಯವಾಗಿವೆ. ಕನ್ನಡದಲ್ಲಿ ಹೊಸತಲೆಮಾರಿನ ಚರಿತ್ರಕಾರರು ದೊಡ್ಡಸಂಖ್ಯೆಯಲ್ಲಿ ಪ್ರವೇಶಿಸುತ್ತಿದ್ದಾರೆ. ಆದರೂ ಕರ್ನಾಟಕ ಚರಿತ್ರ ಬರೆಹವು ಮತೀಕರಣದ ನೆರಳಿನಿಂದ ಪೂರಾ ಬಿಡುಗಡೆಗೊಂಡಿಲ್ಲ. ಇಂತಹ ಹೊತ್ತಲ್ಲಿ ಕರ್ನಾಟಕದ ರಾಜಕೀಯ ಚರಿತ್ರೆಯ ಗದ್ದಲದೊಳಗೆ ಸಂಭವಿಸಿರುವ ಮಾನವೀಯ ದುರಂತ ಮತ್ತು ಚೈತನ್ಯಶೀಲತೆಯನ್ನು ದೇವು ಹುಡುಹುಡುಕಿ ಬರೆಯುತ್ತಿದ್ದಾರೆ. ಬದುಕಿನ ಸಣ್ಣಪುಟ್ಟ ಸಂಗತಿಗಳಿಗೂ ಚರಿತ್ರೆಯಲ್ಲಿ ಮಹತ್ವವಿದೆ ಎಂದು ಅವರ ಬರೆಹಗಳನ್ನು ಓದುವಾಗ ತಿಳಿಯುತ್ತದೆ; ಜೀವನ ಪ್ರೀತಿಯುಳ್ಳ ಯಾವುದೇ ವ್ಯಕ್ತಿ ಮಾಡುವ ಕೆಲಸಗಳು ಜಾತಿ ಮತಗಳಾಚೆ ಹೋಗಿ ಮಾನವೀಯ ನೆಲೆಯಲ್ಲಿ ನಿಲ್ಲುತ್ತವೆ ಎಂದು ಅವು ಸೂಚಿಸುತ್ತವೆ. ಪತ್ರಕರ್ತನೊಬ್ಬ ತಣ್ಣಗೆ ಬರೆಯುತ್ತ ಜನಾಭಿಪ್ರಾಯವನ್ನು ರೂಪಿಸುವ ಮತ್ತು ಬದಲಿಸುವ ಕೆಲಸವನ್ನು ಮಾಡುತ್ತಿರುವ ಈ ಪರಿ, ಗಮನಾರ್ಹವಾಗಿದೆ.

ವಿಕ್ರಮ ವಿಸಾಜಿ

ಬೀದರ್ ಜಿಲ್ಲೆಯು ಆರ್ಥಿಕ ಅಭಿವೃದ್ಧಿಯ ವಿಷಯದಲ್ಲಿ ಹಿಂದುಳಿದಿರುವುದು ಎಲ್ಲರಿಗೂ ಗೊತ್ತಿರುವ ದಿಟವಾಗಿದೆ. ಆದರೆ ಈ ಹಿಂದುಳಿಯುವಿಕೆ, ಆಧುನಿಕ ಕನ್ನಡ ಸಾಹಿತ್ಯದ ಮಟ್ಟಿಗೂ ಇದ್ದಂತಿದೆ. ‘ಆಧುನಿಕ ಕನ್ನಡ ಸಾಹಿತ್ಯದ ಮಟ್ಟಿಗೆ’ ಎಂಬ ಮಾತನ್ನು ಯಾಕೆ ಹೇಳಬೇಕಿದೆ ಎಂದರೆ, ಈ ಭಾಗದಲ್ಲಿ ಅಖಿಲ ಭಾರತ ಖ್ಯಾತಿಯ ಉರ್ದು ಲೇಖಕರಿದ್ದಾರೆ ಹಾಗೂ ದೊಡ್ಡ ಸಂಖ್ಯೆಯ ಜನಪದ ಕವಿಗಳಿದ್ದಾರೆ. ತತ್ವಪದಕಾರರಿದ್ದಾರೆ. ಜತೆಗೆ ೧೨ನೇ ಶತಮಾನದಲ್ಲಿ ನೂರಾರು ಶರಣರು ಸಾಹಿತ್ಯ ರಚನೆ ಮಾಡಿದ ಸೀಮೆಯಿದು. ಹೀಗಿದ್ದೂ ಆಧುನಿಕ ಕನ್ನಡ ಸಾಹಿತ್ಯದ ವಿಷಯದಲ್ಲಿ ಒಂದು ಬಗೆಯ ಬಡತನವಿರಲು ಏನು ಕಾರಣವಿರಬಹುದು? ಬಹುಶಃ ಈ ಸೀಮೆ ವಸಾಹತುಶಾಹಿ ಆಧುನಿಕತೆಗೆ ಬಹಳ ತಡವಾಗಿ ತೆರೆದುಕೊಂಡಿದ್ದು; ಆಧುನಿಕ ಸಾಹಿತ್ಯದ ಚಟುವಟಿಕೆಗೆ ತಳಹದಿಯಂತಿರುವ ಮಧ್ಯಮವರ್ಗವೊಂದು ದೊಡ್ಡ ಪ್ರಮಾಣದಲ್ಲಿ ರೂಪುಗೊಂಡಿಲ್ಲದೆ ಇರುವುದು; ಒಂದೆಡೆ ಮಹಾರಾಷ್ಟ್ರವೂ ಮತ್ತೊಂದೆಡೆ ಆಂಧ್ರಪ್ರದೇಶವೂ ತಮ್ಮ ಬಗಲಲ್ಲಿ ಹಿಡಿದುಕೊಂಡಂತಿರುವ ಭಾಷಿಕ ಮತ್ತು ಭೌಗೋಳಿಕ ಸನ್ನಿವೇಶವಿರುವುದು; ನಿಜಾಮರ ಆಳ್ವಿಕೆ ಕಾಲದಲ್ಲಿ ಉರ್ದು ಭಾಷೆ ಹೇರಿಕೆಯಾಗಿದ್ದು- ಇವೆಲ್ಲವೂ ಕಾರಣವಿರಬಹುದು. ಆದರೆ ಇಂತಹದೇ ಚಾರಿತ್ರಿಕ ಹಿನ್ನೆಲೆಯುಳ್ಳ ಗುಲಬರ್ಗಾ-ರಾಯಚೂರು ಭಾಗಗಳಲ್ಲಿ ಅನೇಕ ಲೇಖಕರು ಮೂಡಿಬಂದರು ಎಂಬುದನ್ನು ನೆನೆದರೆ, ಮೇಲಿನ ಕಾರಣಗಳು ನಿಜವಿರದೆ ಬೇರೇನೊ ಕಾರಣಗಳಿವೆ ಅನಿಸುತ್ತದೆ. ಇದೊಂದು ಸಂಕೀರ್ಣವಾದ ಚಾರಿತ್ರಿಕ ಸಂಗತಿ. ಲೇಖಕರಾದ ವಿಕ್ರಮ ವಿಸಾಜಿ(೧೯೭೬) ಇಂತಹ ವಿಶಿಷ್ಟ ಪ್ರಾದೇಶಿಕ ಹಿನ್ನೆಲೆಯಿಂದ ಬಂದವರು.

ಗುಲಬರ್ಗದ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿರುವ ವಿಕ್ರಂ, ಎರಡು ದಶಕಗಳ ಬರವಣಿಗೆ ಮಾಡಿರುವ ಇತಿಹಾಸ ಹೊಂದಿದ್ದಾರೆ. ಬಾಲಕವಿಯಾಗಿ ತಮ್ಮ ೧೨ನೇ ವಯಸ್ಸಿನಲ್ಲೇ ‘ಗಾಳಿಪಟ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದೇ ಅವರ ಈ ‘ಸುದೀರ್ಘ’ ಸಾಹಿತ್ಯ ಸೇವೆಗೆ ಕಾರಣ. ಅವರ ಸಾಹಿತ್ಯದ ಓದು -ಬರೆಹಗಳಿಗೆ ಪ್ರೇರಣೆ ಅವರ ತಂದೆಯಾದ ಜಿ.ಬಿ. ವಿಸಾಜಿಯವರು. ವಿಕ್ರಂ ತಮ್ಮ ಕೃತಿಯೊಂದರ ಅರ್ಪಣೆಯಲ್ಲಿ “ತನ್ನ ಜಿಲ್ಲೆಯನ್ನೇ ತನ್ನ ಜಗತ್ತೆಂದು ಭಾವಿಸಿ ಅಲ್ಲಿನ ಊರು-ಕೇರಿ ಸಂತೆಯಲ್ಲಿ ಸಾಹಿತ್ಯದ ಪ್ರೀತಿ ಉಕ್ಕಿಸಿದ ಅಪ್ಪನಿಗೆ” ಎಂದು ಇದನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ ಕೂಡ. ಕನ್ನಡ ಅಧ್ಯಾಪಕರೂ ಸ್ವತಃ ಲೇಖಕರೂ ಆದ ಜಿ.ಬಿ. ವಿಸಾಜಿಯವರು ತಮ್ಮ ಭಾಷಣ ಮತ್ತು ಬರೆಹಗಳಿಂದ ಭಾಲ್ಕಿಯಂತಹ ಪ್ರದೇಶದಲ್ಲಿ ಸಾಹಿತ್ಯಕ ಪರಿಸರ ನಿರ್ಮಿಸಿದವರು.

ವಿಕ್ರಂ ಮುಖ್ಯವಾಗಿ ಕಾವ್ಯ, ವಿಮರ್ಶೆ ಮತ್ತು ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು. ಆಧುನಿಕ ಗ್ರೀಕ್ ಕಾವ್ಯವನ್ನು ಅವರು ವಿಜಯಾ ಗುತ್ತಲ ಅವರ ಜತೆಗೂಡಿ ಅನುವಾದ ಮಾಡಿದರು; ಕನ್ನಡಕ್ಕೆ ಹಾಗೆ ಹೆಚ್ಚು ಒಡನಾಟವಿಲ್ಲದ ಭಾಷೆಯೊಂದರ ಕಾವ್ಯವನ್ನು ತಂದಿದಕ್ಕಾಗಿ ಈ ಈರ್ವರನ್ನೂ ಅಭಿನಂದಿಸಬೇಕು. ಆದರೆ ಇಲ್ಲಿನ ಅನುವಾದಗಳಲ್ಲಿ ಅರ್ಥನಿಷ್ಠೆ ಹೆಚ್ಚಾಗಿಯೊ ಏನೊ, ಕನ್ನಡ ಕವನದಲ್ಲಿರುವ ಸಹಜ ಲಯಗಳು ಕಡಿಮೆಯಾಗಿವೆ. ಕೆಲವು ಕಡೆ ಗ್ರೀಕಿನ ಸಾಂಸ್ಕೃತಿಕ ಪರಕೀಯತನವೂ ಉಳಿದುಬಿಟ್ಟಿದೆ. ವಿಕ್ರಂ ಅವರ ನಿಜವಾದ ಕಸುವು ಪ್ರಕಟವಾಗಿರುವುದು ಅವರ ಕಾವ್ಯ ಮತ್ತು ವಿಮರ್ಶೆಯಲ್ಲಿ. ಅವರ ಎರಡನೇ ಕವನ ಸಂಕಲನವಾದ ‘ತಮಾಶಾ’ದಲ್ಲಿ (೨೦೦೦) ತಾರುಣ್ಯ ಸಹಜವಾದ ಪ್ರೇಮ ಕಾಮಗಳಿಗೆ ಅಭಿವ್ಯಕ್ತಿ ಸಿಕ್ಕಿದೆ; ಇಲ್ಲಿರುವ ತೀವ್ರತೆ, ಪ್ರಾಮಾಣಿಕತೆ ಮತ್ತು ಶ್ಲೀಲಾಶ್ಲೀಲದ ಹಂಗಿಲ್ಲದ ವ್ಯಾಮೋಹ ಪ್ರಿಯವಾಗುತ್ತದೆ. ಉದಾಹರಣೆಗೆ, ‘ತಮಾಶಾ’ದಲ್ಲಿ ಕುಣಿಯುವ ಹುಡುಗಿಯನ್ನು ಕುರಿತು ಇರುವ ಇಲ್ಲಿನ ಕವನ. ಕಂಬಾರರ ಕಾವ್ಯವು ಹೆಣ್ಣನ್ನು ಗಂಡಸರು ಅನುಭವಿಸುವ ಒಂದು ವಸ್ತುವಂತೆ ಚಿತ್ರಿಸುವುದನ್ನು ಮುಂದೆ ವಿಕ್ರಂ ತಮ್ಮ ವಿಮರ್ಶೆಯಲ್ಲಿ ಕಟುವಾಗಿ ವಿಶ್ಲೇಷಿಸಿರುವುದುಂಟು. ಆದರೆ, ಸ್ವತಃ ಅವರ ಕಾವ್ಯದ ಮೊದಲ ಘಟ್ಟ ಶುರುವಾಗಿದ್ದು ಮಾತ್ರ ಇದೇ ಕಂಬಾರರ ಪ್ರೇರಣೆಯಿಂದ; ಅದರಲ್ಲೂ ಕಂಬಾರರ ‘ಋಷ್ಯಶೃಂಗ’ದಂತಹ ‘ನೀಲಿ’ ಕವನಗಳಿಂದ.

‘ತಮಾಶಾ’ ಸಂಕಲನದಲ್ಲಿ ಅನೇಕ ಒಳ್ಳೆಯ ಕವನಗಳಿವೆ. ಜೀವನಪ್ರೀತಿ ಮತ್ತು ಲವಲವಿಕೆ ಇಲ್ಲಿನ ಕವನಗಳ ಮುಖ್ಯ ಗುಣ. ಸೊಕ್ಕಿನಿಂದ ಮುಸುಗುಡುವ ಇಲ್ಲಿನ ಕವನಗಳಲ್ಲಿ ತಾರುಣ್ಯ ಸಹಜವಾದ ಸ್ವಚ್ಛಂದ ನೋಟಗಳಿವೆ. ಚರಿತ್ರೆಯ ಹಲವಾರು ಪ್ರೇಮಿಗಳ ಬಾಳನ್ನು ಕಟ್ಟಿದ ಕಥನಗಳಿವೆ. ಆದರೆ ಇಲ್ಲಿನ ಕಾವ್ಯದಲ್ಲಿ ದೊಡ್ಡ ಧ್ಯಾನವಾಗಲಿ ಜೀವನ ಕಾಣ್ಕೆಯ ಗರಜಾಗಲಿ ಕಡಿಮೆ. ಇದಕ್ಕೆ ಹೋಲಿಸಿದರೆ ಈಚೆಗೆ ಹೊರಬಂದಿರುವ ‘ಗೂಡು ಕಟ್ಟುವ ಚಿತ್ರ’ (೨೦೦೬) ಸಂಕಲನವು ವಿಕ್ರಂ ಕಾವ್ಯ ಪಡೆದಿರುವ ಎತ್ತರವನ್ನು ಸೂಚಿಸುತ್ತದೆ. ಮೊದಲ ಘಟ್ಟದಲ್ಲಿ ಕಾಣುವ ಕಂಬಾರರಂತಹ ದೊಡ್ಡಕವಿಗಳ ಢಾಳಾದ ಪ್ರಭಾವದಿಂದ ಬಿಡಿಸಿಕೊಂಡು, ತಮ್ಮದೇ ಆದ ನುಡಿಗಟ್ಟನ್ನು ಕವಿ ಇಲ್ಲಿ ಕಂಡುಕೊಂಡಿದ್ದಾರೆ. ಇಲ್ಲಿ ಫ್ರೆಶ್‌ಆದ ಶಬ್ದಚಿತ್ರಗಳು ಇಲ್ಲಿವೆ. ಆರ್ತತೆ ಮತ್ತು ಧ್ಯಾನವುಳ್ಳ ಇಲ್ಲಿನ ಕಾವ್ಯದಲ್ಲಿ ತನ್ನತನದ ಹುಡುಕಾಟವಿದೆ. ಲೋಕದ ನೋವಿಗೆ ಗೈದ ಮಿಡಿತವಿದೆ. ಮತೀಯ ಹಿಂಸೆಯನ್ನು ಕುರಿತ ಪ್ರತಿರೋಧವು ಚೂಪಾದ ವ್ಯಂಗ್ಯ ಮತ್ತು ವಿಷಾದಗಳಲ್ಲಿ ವ್ಯಕ್ತವಾಗಿದೆ.

ಈ ಸಂಕಲನದಲ್ಲಿ ಕವನದ ಸ್ವರೂಪವನ್ನು ಕುರಿತ ಕವನಗಳು ವಿಶೇಷವಾಗಿವೆ. ಕವಿಗೆ ಸೃಷ್ಟಿಶೀಲತೆಯಲ್ಲಿ ಶಬ್ದ ಅಥವಾ ಭಾಷೆಯ ಮಾಯೆಯು ವಿಸ್ಮಯದಂತೆ ಕಾಡಿದೆ. ಆದರೆ ಇಲ್ಲಿ ಯಾಕೊ, ಆಡುನುಡಿಯನ್ನು ಬಳಸಿ ಬರೆದಿರುವ ಕವನಗಳು, ‘ಶಿಷ್ಟ’ ಭಾಷೆಯನ್ನು ಬಳಸಿ ಕಟ್ಟಿರುವ ಕವನಗಳಂತೆ ಅರ್ಥಪೂರ್ಣವಾಗಿಲ್ಲ. ಇದು ಆಡುನುಡಿಯನ್ನು ಸೂಕ್ಷ್ಮ ಚಿಂತನೆಯ ಧಾರಣೆಗೆ ತಕ್ಕಂತೆ ಪಳಗಿಸಲಾಗದ ಕವಿಕರ್ಮದ ಸೋಲೊ, ಆ ಈ ಆಡುಭಾಷೆಗೇ ಆಧುನಿಕ ಚಿಂತನೆಯನ್ನು ಹೊರಲಾಗದ ಮಿತಿಯಿದೆಯೊ ಅಥವಾ ಕಾವ್ಯಭಾಷೆ ಕುರಿತು ಓದುಗರಾಗಿ ನಮ್ಮ ಗ್ರಹಿಕೆಗಳಲ್ಲೇ ಇರುವ ಸಮಸ್ಯೆಯೊ ಗೊತ್ತಾಗುತ್ತಿಲ್ಲ. ಕಂಬಾರರು ಜಾನಪದೀಯ ನಟನೆಯ ಭಾಷೆಯಲ್ಲಿ ಅತಿ ಆಧುನಿಕವಾದದ್ದನ್ನು ಹೇಳಲು ಮಾಡಿಕೊಂಡಿರುವ ತಂತ್ರಗಾರಿಕೆಯು, ಹಾಗೆ ಅನುಕರಣೆ ಮಾಡುವುದು ಸುಲಭವಲ್ಲ.

ತುಂಬ ಕಿರಿಯ ವಯಸ್ಸಿನಲ್ಲಿ ವಿಶ್ವವಿದ್ಯಾಲಯಕ್ಕೆ ಸೇರಿದ ವಿಕ್ರಂ, ತಮ್ಮ ಅಧ್ಯಯನಶೀಲತೆಯಿಂದ ಬೆಳೆದವರು; ನಮ್ಮ ವಿಶ್ವವಿದ್ಯಾಲಯಗಳು ವಿದ್ವತ್‌ಹೀನತೆಯಿಂದ ನರಳುತ್ತಿರುವ ಈ ದಿನಗಳಲ್ಲಿ, ನಿಸ್ಸಂಶಯವಾಗಿ ಅವರೊಬ್ಬ ವಿದ್ವತ್ ಪರಂಪರೆಯ ಅಧ್ಯಾಪಕರಲ್ಲಿ ಒಬ್ಬರು. ವಿಶ್ವವಿದ್ಯಾಲಯಗಳು ಸಹಜವಾಗಿಯೇ ವಿಶ್ಲೇಷಣಾತ್ಮಕವಾದ ಬೌದ್ಧಿಕ ಬರೆಹಗಳನ್ನು ಮಾಡಲು ಒತ್ತಾಯಿಸುತ್ತವೆ. ಹೀಗಾಗಿ ಕವಿತೆಯನ್ನೇ ತನ್ನ ಅಭಿವ್ಯಕ್ತಿಯ ಮುಖ್ಯ ಪ್ರಕಾರವಾಗಿಸಿಕೊಂಡಿದ್ದ ಈ ಕವಿ, ವಿಮರ್ಶೆಯನ್ನೂ ಬರೆಯಬೇಕಾಗಿ ಬಂದಿರಬಹುದು. ಆದರೆ ಈ ಪ್ರಕಾರದಲ್ಲಿಯೂ ಅವರು ತಮ್ಮ ಚಹರೆ ರೂಪುಗೊಳ್ಳುವಂತಹ ಬರೆಹವನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ, ಅವರ ಅವರ ‘ಬೆಳಕಿನ ಮುಖ’ (೨೦೦೪) ಎಂಬ ವಿಮರ್ಶಾ ಸಂಕಲನ. ಇದರಲ್ಲಿ ‘ಬೀದರ ಜಿಲ್ಲೆಯ ಕಾದಂಬರಿಗಳು’ ಮುಂತಾದ ಅತಿಸಾಮಾನ್ಯ ಮಟ್ಟದ ಲೇಖನಗಳೂ ಇವೆ. ಆದರೆ ಇಲ್ಲಿರುವ ಕಂಬಾರ ಮತ್ತು ಕಾರ್ನಾಡರ ನಾಟಕಗಳನ್ನು ಕುರಿತ ಹಾಗೂ ಕುರ್ತಕೋಟಿಯವರ ವಿಮರ್ಶೆ ಕುರಿತ ಲೇಖನಗಳು ಚೆನ್ನಾಗಿವೆ. ತಮ್ಮ ವಿಮರ್ಶೆಗಾಗಿ ದೊಡ್ಡದೊಡ್ಡ ಲೇಖಕರನ್ನೇ ತಡವಿಕೊಂಡು ಕುಸ್ತಿ ಹಿಡಿಯುವ ಹವ್ಯಾಸವೊಂದು ವಿಕ್ರಂ ಅವರಲ್ಲಿದ್ದಂತಿದೆ. ಈ ಕುಸ್ತಿಯಾಟಕ್ಕೆ ಬೇಕಾಗಿ ಶಕ್ತಿಯನ್ನು ಅವರು ಮತ್ತಷ್ಟು ಪಡೆದುಕೊಳ್ಳಬೇಕಿದೆ. ಆದರೆ ಪರಂಪರೆಯಿಂದ ತ್ರಾಣವನ್ನು ಪಡೆದುಕೊಳ್ಳುವ ಬಗ್ಗೆ ಅವರಲ್ಲಿರುವ ಅಪಾರ ಶ್ರದ್ಧೆಯು ಅವರನ್ನು ಎಡವದಂತೆ ನಡೆಸುತ್ತಿದೆ. ಇದಕ್ಕೆ ಕುರ್ತಕೋಟಿಯವರ ವಿಮರ್ಶೆಯ ಮೇಲಿರುವ ಒಂದು ಲೇಖನ ಸಾಕ್ಷಿ. ಇದು ವಿಕ್ರಂ ಅವರ ಸಮತೋಲನ ಗುಣ ಮತ್ತು ಪ್ರಬುದ್ಧತೆ ಎರಡನ್ನೂ ಸೂಚಿಸುತ್ತದೆ. ಅವರು ತಾವು ವಿಮರ್ಶಿಸುವ ಲೇಖಕರ ಶಕ್ತಿಸ್ಥಳಗಳನ್ನು ಗುರುತಿಸುವ ಸಹೃದಯತೆಯನ್ನು ತೋರಬಲ್ಲರು. ಅದೇ ಹೊತ್ತಲ್ಲಿ, ಅವರ ಮಿತಿಗಳನ್ನು ನಮ್ರವಾಗಿ ಆದರೆ ಖಚಿತವಾಗಿ ಸೂಚಿಸಬಲ್ಲರು. ಒಮ್ಮೊಮ್ಮೆ ಈ ನಮ್ರತೆ ಮತ್ತು ಸಮತೋಲನ ಮಾಡುವ ಎಚ್ಚರಗಳು, ಕೊಂಚ ಹೆಚ್ಚಾಗಿ, ವಿಮರ್ಶೆಯಲ್ಲಿ ತೀರ್ಮಾನದಾಯಕವಾದ ಹೇಳಿಕೆಗಳನ್ನು ಮಾಡಲು ತೊಡಕನ್ನು ಒಡ್ಡಿರುವುದೂ ಉಂಟು.

ವಿಕ್ರಂ ವಿಮರ್ಶೆಯಲ್ಲಿ ಇಷ್ಟವಾಗುವುದು ರೂಪಕದ ಭಾಷೆಯ ಬಳಕೆ. ಪ್ರಾಚೀನ ಸಾಹಿತ್ಯ ಕುರಿತು ಕುರ್ತಕೋಟಿಯವರ ವಿಮರ್ಶೆ, ಅವರಿಗೆ “ಮನೆಯ ಹಿಂದಿನ ಕಾಡನ್ನು ಕಾಣಲು ಬಿಟ್ಟ ಕಿಂಡಿಯ ತರಹ” ಕಾಣುತ್ತದೆ; ಇದೇ ಕುರ್ತಕೋಟಿಯವರ ಬಗ್ಗೆ ಅವರು ಹೀಗೆ ಬರೆಯುತ್ತಾರೆ: “ಕುರ್ತಕೋಟಿಯವರು ‘ಆದಿಪುರಾಣದ’ದ ಪುರುದೇವನಂತೆ. ಪ್ರಾಚೀನ ಮಹಾಕಾವ್ಯಗಳ ಓದು ಅವರಿಗೆ ನೀಳಾಂಜನೆಯ ನೃತ್ಯ. ನೀಳಾಂಜನೆಯ ಸಾವು ಪುರುದೇವನಿಗೆ ಗೊತ್ತಾದಂತೆ, ಕೃತಿಯಲ್ಲಿನ ವಾಗರ್ಥಗಳ ಹುಸಿಸಂಬಂಧ ಅವರಿಗೆ ಥಟ್ಟನೆ ಗೋಚರಿಸುತ್ತದೆ… ವಿಚಿತ್ರವೆಂದರೆ, ನೀಳಾಂಜನೆಯ ಸಾವಿನಿಂದ ಪುರುದೇವನಿಗೆ ಅತಿಶಯ ಭೋಗದಲ್ಲಿ ವಿರಕ್ತಿ ಹುಟ್ಟಿದರೆ, ಇವರಿಗೆ ತಮ್ಮ ನಮ್ಮ ನಂಬಿಕೆಯ ಬಗೆಗೆ ವಿಶ್ವಾಸ ವೃದ್ಧಿಸುತ್ತದೆ”; ಡಿ.ಆರ್. ನಾಗರಾಜ್ ಅವರ ಕುರಿತ ವ್ಯಾಖ್ಯಾನವಿದು: “ಅವರ ಬರವಣಿಗೆಯ ಉದ್ದಕ್ಕೂ ನನಗೆ ಕಾಣುವುದು ಪಡ್ಡೆ ಹುಡುಗನ ಉತ್ಸಾಹ ಮತ್ತು ಮಾಗಿದ ನಾಟಿವೈದ್ಯನಿಗೆ ತನ್ನ ಕೆಲಸದ ಬಗ್ಗೆ ಇರುವ ಗಾಢ ನಂಬಿಕೆ, ಶ್ರದ್ಧೆ”.

ವಿಕ್ರಂ ಬಾಲ್ಯದಲ್ಲೇ ತಮ್ಮನ್ನು ಅತಿಯಾಗಿ ಆವರಿಸಿಕೊಂಡಿದ್ದ ಕಂಬಾರರ ಕಾವ್ಯದ ಮೇಲೆ ಮುಂದೆ ಸಂಶೋಧನೆ ಮಾಡಿದರು. ‘ನಾದಗಳು ನುಡಿಯಾಗಲೆ’ (೨೦೦೮) ಎಂಬ ಹೆಸರಲ್ಲಿ ಇದು ಪ್ರಕಟವಾಗಿದೆ. ಕಂಬಾರರ ಕಾವ್ಯದ ಪ್ರಖರತೆ, ವಿಶಿಷ್ಟತೆ ಹಾಗೂ ಅಲೌಕಿಕ ಸೆಳೆತಗಳನ್ನು ಕಂಡು ಪಟ್ಟಿರುವ ಬೆರಗು ಇಲ್ಲಿನ ವಿಶ್ಲೇಷಣೆಯಲ್ಲಿದೆ. ಜತೆಗೆ ಕಂಬಾರರ ಕಾವ್ಯದ ವಿಷಯದಲ್ಲಿ ಅನೇಕ ದಿಟ್ಟವಾದ ಪ್ರಶ್ನೆಗಳನ್ನು ಅವರು ಎತ್ತುತ್ತಾರೆ. ವಿಕ್ರಂ ತಮ್ಮ ಕೆಲಸವನ್ನು ಬಹಳ ಗಂಭೀರವಾಗಿಯೂ ಪಾಂಡಿತ್ಯಪೂರ್ಣವಾಗಿಯೂ ಮಾಡಿದ್ದಾರೆ. ಆದರೂ ಪಿಎಚ್‌.ಡಿ., ಸಂಶೋಧನೆಯ ವಿನ್ಯಾಸವೇ ಒಂದು ಬಗೆಯಲ್ಲಿ ಕೃತಕ ಗಾಂಭೀರ್ಯದಿಂದ ಕೂಡಿದ್ದು; ಉಲ್ಲೇಖಗಳ ಭಾರದಿಂದ ಅದು ಜಡವಾಗಿರುತ್ತದೆ; ವಿಮರ್ಶಾ ಲೇಖನಗಳ ಹಾಗೆ ಒಳನೋಟಗಳನ್ನು ಒಂದು ಫೋಕಸ್ಸಿನಲ್ಲಿ ಮಂಡಿಸಲು ಅದು ಅಷ್ಟಾಗಿ ಅವಕಾಶ ಕಲ್ಪಿಸುವುದಿಲ್ಲ. ಇದಕ್ಕೆ ಸಾಕ್ಷಿ, ‘ಚಕೋರಿ’ಯ ಆಶಯವನ್ನು ಎಳೆಎಳೆಯಾಗಿ ವಿಶ್ಲೇಷಿಸಿರುವ ಲೇಖಕರಿಗೆ, ಅಂತಿಮವಾಗಿ ಅದು ಜೀವಂತವಾದ ಕೃತಿಯೊ ಅಲ್ಲವೊ ಎಂದು ಹೇಳಲು ಸಾಧ್ಯವಾಗಿಲ್ಲದೆ ಇರುವುದು. ಹೀಗಾಗಿಯೇ, ಚದುರಿದ ಚಿಂತನೆಗಳಿರುವ ಇಂತಹ ಸಂಶೋಧನ ಕೃತಿಗಿಂತ, ವಿಕ್ರಂ ತಮ್ಮ ಚಿಕ್ಕಪುಟ್ಟ ವಿಮರ್ಶಾ ಲೇಖನಗಳಲ್ಲೇ ಹೆಚ್ಚು ಚುರುಕಾಗಿ ಮತ್ತು ಅರ್ಥಪೂರ್ಣವಾಗಿ ಕಾಣುತ್ತಾರೆ. ಉದಾಗೆ, ‘ಕಂಬಾರರ ನಾಟಕಗಳು’ ಪುಸ್ತಕಕ್ಕೆ ಅವರು ಸಂಪಾದಕರಾಗಿ ಬರೆದಿರುವ ಮುನ್ನುಡಿ; ವಿಭಾ ಕವನ ಸಂಕಲನಕ್ಕೆ ಬರೆದಿರುವ ಸಂಪಾದಕೀಯ ಹಿನ್ನುಡಿ; ಕುರ್ತಕೋಟಿ ವಿಮರ್ಶೆ ಬಗ್ಗೆ ಬರೆದ ಲೇಖನ; ಗ್ರೀಕ್ ಕಾವ್ಯಾನುವಾದಕ್ಕೆ ಬರೆದಿರುವ ಉಪೋದ್ಘಾತ- ಇವೆಲ್ಲವೂ ವಿಕ್ರಮ ಅವರ ಅಧ್ಯಯನಶೀಲತೆಯನ್ನು ಮಾತ್ರವಲ್ಲ, ಅವರೊಳಗೆ ತುಡಿಯುತ್ತಿರುವ ಸೂಕ್ಷ್ಮವಾದ ಸಾಹಿತ್ಯಕ ಸಂವೇದನೆ ಮತ್ತು ವಿಮರ್ಶಾ ವಿವೇಕವನ್ನು ಒಳಗೊಂಡಿವೆ.

ತಮ್ಮ ಸರಳತೆ, ಹಾಸ್ಯಪ್ರಜ್ಞೆ ಹಾಗೂ ಸಜ್ಜನಿಕೆಯ ವ್ಯಕ್ತಿತ್ವದಿಂದ ಬಹಳ ಜನರ ಪ್ರೀತಿಗೂ ವಿಶ್ವಾಸಕ್ಕೂ ಪಾತ್ರರಾಗಿರುವ ಹೊಸತಲೆಮಾರಿನ ಲೇಖಕರಲ್ಲಿ ವಿಕ್ರಂ ಒಬ್ಬರು. ವಿಶೇಷವೆಂದರೆ, ಹಿರಿಯ ಲೇಖಕರನ್ನು ಅನುಸಂಧಾನ ಮಾಡುವಾಗ, ಅವರು ತಾವು ಮತ್ತು ತಮ್ಮ ವಾರಿಗೆಯ ಲೇಖಕರು ಎದುರಿಸಬೇಕಾದ ಸವಾಲನ್ನು ಕುರಿತು ಪ್ರಸ್ತಾಪ ಮಾಡುವುದು; ಅದರಲ್ಲೂ ಪರಂಪರೆಯ ಶ್ರದ್ಧೆ ಮತ್ತು ಅದನ್ನು ಮೀರುವ ಅನಿವಾರ್ಯತೆ ಕುರಿತು ಚರ್ಚಿಸುವುದು. ಇದು ಅವರಲ್ಲಿನ ಹೊಣೆಗಾರಿಕೆಯ ಸಂಕೇತವಾಗಿದೆ. ಆದರೆ ‘ಹೊಸತಲೆಮಾರಿನ ಲೇಖಕರಿಗೆ ಯಾವುದೇ ಸಿದ್ಧಾಂತ ತತ್ವಗಳ ಹಂಗಿಲ್ಲ. ಮುಕ್ತವಾಗಿ ಬರೆಯುತ್ತಿದ್ದೇವೆ’ ಎಂಬರ್ಥದ ಅವರ ಹೇಳಿಕೆ ಚರ್ಚಾಸ್ಪದವಾದುದು. ವಾಸ್ತವದಲ್ಲಿ ಬರೆಹವೊಂದು ಹಾಗಿರಲು ಸಾಧ್ಯವೇ? ಅವರಿಗೆ ಪ್ರಿಯವಾದ ಲೇಖಕರಾದರೂ ಇಂತಹ ತತ್ವಸಿದ್ಧಾಂತಗಳಿಂದ ಪೂರ್ಣ ಹೊರತಾದವರಲ್ಲ. ಅದನ್ನು ತಮ್ಮ ಸೃಜನಶೀಲತೆಯ ಆಳದಲ್ಲಿ ಮರುಹುಟ್ಟಿಸಿದವರು, ಅಷ್ಟೆ.

ವಿಕ್ರಂ ಬರೆಹದಲ್ಲಿ ವಿನಯ ಮತ್ತು ನಿಷ್ಠುರತೆಗಳ ಒಂದು ಅಪೂರ್ವ ಹದವಿದೆ. ಪರಂಪರೆಯ ದೊಡ್ಡಮಟ್ಟದ ಕೃತಿಗಳಲ್ಲಿ ತನಗೆ ಅರಿವಾಗದ್ದು ಇನ್ನೂ ಎಷ್ಟೊ ಉಳಿದಿದೆ ಎಂಬ ಪ್ರಜ್ಞೆಯು ವಿನಯಕ್ಕೆ ಕಾರಣವಾಗಿದ್ದರೆ; ತನ್ನ ಎದುರಿಗಿರುವ ಸಮಕಾಲೀನ ವಾಸ್ತವಕ್ಕೆ ಜೀವಂತವಾಗಿ ಮಿಡಿಯಬೇಕು, ಒಂದು ಘಟನೆ ಅಥವಾ ಕೃತಿಯ ಬಗ್ಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳಬೇಕು ಎಂಬ ಅವರ ನಿಲುವು ನಿಷ್ಠುರತೆಗೆ ಕಾರಣವಾಗಿದೆ. “ಒಬ್ಬ ಲೇಖಕ ಎಷ್ಟು ಚಂದದ ರೂಪಕ, ಪ್ರತಿಮೆಗಳನ್ನು ಸೃಷ್ಟಿಸುತ್ತಿದ್ದಾನೆಂಬುದಷ್ಟೇ ಮುಖ್ಯವಲ್ಲ. ಅಂತಿಮವಾಗಿ ಈ ರೂಪಕ ಪ್ರತಿಮೆಗಳು ಮನುಷ್ಯ ಜನಾಂಗದ ಯಾವ ಸತ್ಯವನ್ನು ಸಾರುತ್ತಿವೆ ಎಂಬುದು ಕೂಡ ಮುಖ್ಯ” ಎಂದು ಅವರು ಒಂದೆಡೆ ಹೇಳುವುದುಂಟು. ಈ ನಂಬಿಕೆಯು, ಕಲಾತ್ಮಕ ಸಾಧನೆಯ ಆಚೆ ಹೋಗಿ, ಜೀವನದ ಬಗ್ಗೆ ಲೇಖಕರ ಮಾನವೀಯ ಹೊಣೆಗಾರಿಕೆಯ ದ್ಯೋತಕವಾಗಿದೆ. ಈ ನಂಬಿಕೆಯು ವಿಕ್ರಂ ಬರೆಹದಲ್ಲಿ, ಅದರಲ್ಲೂ ಅವರ ಈಚಿನ ಕಾವ್ಯದಲ್ಲಿ, ಓದುಗರೆದೆಗೆ ನೇರ ಹಾಯುವಷ್ಟು ದಟ್ಟವಾಗಿದೆ.

ಕಲಿಗಣನಾಥ ಗುಡದೂರು

ಶಾಂತರಸ, ರಾಜಶೇಖರ ನೀರಮಾನ್ವಿ, ಅಮರೇಶ ನುಗಡೋಣಿ, ಮಹಂತೇಶ ನವಲಕಲ್, ಚಿದಾನಂದಸಾಲಿ -ಈ ಸಾಲಿನಲ್ಲಿ ಕಾಣುವ ರಾಯಚೂರು ಸೀಮೆಯ ಮತ್ತೊಬ್ಬ ಕತೆಗಾರ ಕಲಿಗಣನಾಥ ಗುಡದೂರು. ಸಿಂಧನೂರಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿರುವ ಕಲಿ, ಕಳೆದ ಒಂದು ದಶಕದಲ್ಲಿ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವೆಂದರೆ, ಉಡಿಯಲ್ಲಿಯ ಉರಿ (೨೦೦೦), ಮತಾಂತರ (೨೦೦೭), ಮಾಮೂಲಿ ಗಾಂಧಿ (೨೦೦೮).

ಹೊಸತಲೆಮಾರಿನ ಅನೇಕ ಕತೆಗಾರರ ಹಾಗೆ ಕಲಿ ಕೂಡ ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಬಹುಮಾನದಿಂದ ಪ್ರೇರಣೆ ಪಡೆದವರು;  ವಿದ್ಯಾರ್ಥಿಯಾಗಿದ್ದಾಗಲೇ (೧೯೯೭) ಅವರ ‘ಉಡಿಯಲ್ಲಿಯ ಉರಿ’ ಕತೆ, ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯಿತು; ನಂತರ ಅವರ ‘ಉರಿವಕೆಂಡದ ಮೇಲೆ’ ಕತೆಗೆ ‘ವಿಕ್ರಾಂತ ಕರ್ನಾಟಕ’ ಪತ್ರಿಕೆಯ ಬಹುಮಾನ ಬಂದಿತು. ಬಹುಶಃ ಆಧುನಿಕ ಕನ್ನಡ ಸಣ್ಣಕತೆಗಳ ಚರಿತ್ರೆಯನ್ನು ಈ ಕಥಾಸ್ಪರ್ಧೆಗಳಿಲ್ಲದೆ ಬರೆಯಲು ಸಾಧ್ಯವಿಲ್ಲವೇನೊ ಎಂಬಂತೆ ಈ ಬಹುಮಾನಗಳು ಆವರಿಸಿಕೊಂಡಿವೆ. ಆದರೆ ಈ ಕಥಾಸ್ಪರ್ಧೆಗಳು ಸಣ್ಣಕತೆಯ ಸ್ವರೂಪದ ಮೇಲೆ ಮಾಡಿರುವ ಇತರೆ ಪರಿಣಾಮಗಳನ್ನು ಇನ್ನೂ ಶೋಧಿಸಬೇಕಿದೆ.

ಕಲಿಯವರ ಮೇಲಿನ ಎರಡು ಕತೆಗಳ ಹೆಸರನ್ನು ಗಮನಿಸಿದರೆ, ಒಂದು ಸಂಗತಿ ಹೊಳೆಯುತ್ತದೆ. ಅದೆಂದರೆ ಅವರ ಕತೆಗಳ ವಸ್ತು ಹೆಚ್ಚಾಗಿ ‘ಉರಿ’ಯುವ ವಿದ್ಯಮಾನಗಳಿಗೆ ಸಂಬಂಧಿಸಿದಂತಿರುವುದು; ಆತಂಕ ಮತ್ತು ಸಂಘರ್ಷ ತುಂಬಿದ ಜಗತ್ತಿನ ಘಟನೆಗಳನ್ನು ಆರಿಸಿಕೊಂಡು ಬರೆಯುವುದು ಈ ಭಾಗದ ಲೇಖಕರ ಲಕ್ಷಣವೊ ಅಥವಾ ಈ ಸೀಮೆಯ ಬದುಕಿನ ವಸ್ತುಸ್ಥಿತಿಯೇ ಹೀಗಿದೆಯೊ ಸ್ಪಷ್ಟವಾಗುವುದಿಲ್ಲ.

ಕನ್ನಡದ ಹೊಸತಲೆಮಾರಿನ ಲೇಖಕರಲ್ಲಿ ಸಾಮಾಜಿಕ ಬದ್ಧತೆಯ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದೆ, ಹೂಹಗುರಾಗಿ ಲಹರಿಯಲ್ಲಿ ಲೋಕದ  ಸಂಭ್ರಮಗಳನ್ನು ಕುರಿತು ಬರೆಯುವ ಲೇಖಕರ ಮಾದರಿಯೊಂದು ಇದೆ; ಬಲಪಂಥೀಯ ಸಿದ್ಧಾಂತಕ್ಕೆ ತನ್ನನ್ನು ಒಳಗು ಮಾಡಿಕೊಂಡಿರುವ  ಲೇಖಕರ ಇನ್ನೊಂದು ಮಾದರಿಯೂ ಇದೆ. ಸಾಮಾಜಿಕ ಬದ್ಧತೆಗೆ ತಮ್ಮನ್ನೇ ತೆತ್ತುಕೊಂಡಂತೆ ಪರಿಸರದ ವಿದ್ಯಮಾನಗಳ ಮೇಲೆ ಬರೆಯುತ್ತಿರುವ ಲೇಖಕರ ಮತ್ತೊಂದು ಮಾದರಿಯಿದೆ. ಕಲಿ, ಈ ಮೂರನೆಯ ಮಾದರಿಯ ಲೇಖಕರೆನ್ನಬಹುದು. ಅದರಲ್ಲೂ ಬರೆಹದ ಮೇಲೆ ಸಾಮಾಜಿಕ ಹೊಣೆಗಾರಿಕೆಯನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಆವಾಹನೆ ಮಾಡಿಕೊಂಡಿರುವ ಲೇಖಕ ಎನ್ನಬಹುದು. ಅವರ ಕೆಲವು ಕತೆಗಳನ್ನು ನೋಡುವಾಗ ಭೂಭಾರವನ್ನು ಹೊತ್ತುಕೊಂಡು ಕುಸಿದುಹೋಗಿರುವ ಹರ್ಕ್ಯುಲಿಸ್‌ನ ಚಿತ್ರ ನೆನಪಾಗುತ್ತದೆ.

“ಬರಹಗಾರನೆಂದರೆ, ಕೇವಲ ಅಕ್ಷರಗಳ ಮೂಲಕ ಯುಟೋಪಿಯಾ ಸೃಷ್ಟಿಸುವುದಲ್ಲ. ಸುತ್ತಲಿನ ಬದುಕಿನ ಏರು ಇಳಿವುಗಳಲ್ಲಿ ಹತ್ತಿ ಇಳಿಯಬೇಕು”; “ಬರೆಹಗಾರ ಕೇವಲ ಅಕ್ಷರಗಳ ಮೂಲಕ ತನ್ನ ಪಾಲಿನ ಸಾಮಾಜಿಕ ಜವಾಬ್ದಾರಿ ನಿಭಾಯಿಸಿದರೆ ಸಾಲದು.. ಜೀವಪರ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟಗಳ ಬಗ್ಗೆ ಕೇವಲ ಸಿಂಪಥಿ ಹೊಂದಿದರೆ ಉಪಯೋಗವಿಲ್ಲ. ಹೋರಾಟದ ಸಾಗರದ ಹರಿವಿನಲ್ಲಿ ಲೇಖಕರೂ ಇತರರ ಜತೆ ಈಜಬೇಕಿದೆ”; “ಸಮಾಜಮುಖಿ ಪ್ರಜ್ಞೆ, ಮನುಷ್ಯತ್ವದ ನೆಲೆ, ಸಾದೃಶ್ಯವೆನಿಸಬಹುದಾದ ಕಲ್ಪನೆಗಳೇ ನನ್ನ ಕತೆಗಳ ತಿರುಳು” -ಹೀಗೆಂದು ಕಲಿ ತಮ್ಮ ಸಂಕಲನದ ಮುನ್ನುಡಿಗಳಲ್ಲಿ ಹೇಳಿಕೆ ಮಾಡಿರುದುಂಟು.

ಅವರ ಕಾಳಜಿ ಮತ್ತು ಬದ್ಧತೆಗಳು ಪ್ರಾಮಾಣಿಕವಾಗಿವೆ. ಗೌರವಾರ್ಹವಾಗಿವೆ. ಆದರೆ ಅವರ ಈ ಬದ್ಧತೆ ಮತ್ತು ಕಾಳಜಿಗಳ ತೀವ್ರತೆಯು ಅವರ ಬರೆಹವನ್ನು ಅತಿಗಂಭೀರತೆಗೆ ದೂಡಿಬಿಟ್ಟಿದೆ. ಅವರ ಕತೆಗಳಲ್ಲಿ ದಾರುಣ ಘಟನೆಗಳಿಂದ ಕೂಡಿದ ಉಸಿರುಗಟ್ಟಿದ ಬದುಕಿನ ಚಿತ್ರಗಳೇ ಹೆಚ್ಚಾಗಿವೆ. ಸಮಾಜದ ಅಧಿಕಾರಸ್ಥ ಶಕ್ತಿಗಳಿಂದ ಕ್ರೂರವಾಗಿ ದಮನಕ್ಕೆ ಒಳಗಾದ ಬಡವರು, ಮಕ್ಕಳು ಮತ್ತು ಮಹಿಳೆಯರೆ ಅವರ ಕತೆಗಳ ನಾಯಕರು. ಬಾಳಿನಲ್ಲಿ ಯಾವ ಸಂತೋಷವೂ ಸೆಳಕೂ ಇಲ್ಲದ ಉಸಿರುಗಟ್ಟಿದ ಕೊತಕೊತ ಕುದಿಯುವ ಲೋಕವನ್ನು ಅವರು ಚಿತ್ರಣ ಮಾಡುತ್ತಾರೆ.

ಇಲ್ಲಿ ಹುಟ್ಟುವ ಪ್ರಶ್ನೆಯೆಂದರೆ, ಕತೆಗಾರನೊಬ್ಬ ತನ್ನ ಪರಿಸರದ ವಾಸ್ತವಿಕ ಬದುಕಿನ ವಿವರಗಳನ್ನು ತಮ್ಮ ಕತೆಗಳಲ್ಲಿ ತುಂಬುತ್ತಿದ್ದಾನೊ ಅಥವಾ ಅವುಗಳ ಎಳೆಗಳನ್ನು ಹಿಡಿದು ದುಡಿಸಿಕೊಳ್ಳುತ್ತ ಹೊಸದರ್ಶನವೊಂದು ಒಡಮೂಡುವಂತೆ ಕತೆಯನ್ನು ಕಟ್ಟುತ್ತಿದ್ದಾನೊ ಎಂಬುದು. ನೀರಮಾನ್ವಿಯವರು ಇದೇ ಕೋಲಾಹಲದ ಲೋಕದ ವಿವರಗಳನ್ನು ಎತ್ತಿಕೊಂಡು ಸೂಕ್ಷ್ಮವಾಗಿ ಬಳಸಿಕೊಂಡು ಸಂವೇದನೆ ತುಂಬಿದ  ಕತೆಗಳನ್ನು ಕಟ್ಟುವಂತಹ ಒಂದು ಪರಂಪರೆ ಹಾಕಿದ್ದಾರೆ. ನುಗಡೋಣಿ, ಸಾಲಿ, ನವಲಕಲ್ ಅವರು ಸಹ ಈ ಹಾದಿಯಲ್ಲಿ ಸಾಕಷ್ಟು ಮುಂದೆ ಸಾಗಿದ್ದಾರೆ. ಇವರಿಗೆ ಹೋಲಿಸಿದರೆ, ಕತೆಯ ವಸ್ತು ಮತ್ತು ಪಾತ್ರಗಳ ಜತೆ ಭಾವಾವೇಶದ ತಾದಾತ್ಮ್ಯ ಪಡೆದುಕೊಳ್ಳುವ ಕಲಿಗಣನಾಥ ಅವರ  ಕಥನಗಾರಿಕೆ, ಅವನ್ನು ಸೃಜನಶೀಲ ದೂರದಲ್ಲಿಟ್ಟು ನಿರ್ವಹಿಸುವ ಕುಶಲತೆಯನ್ನು ತೋರಲು ಅನೇಕ ಕಷ್ಟಗಳನ್ನು ನಿರ್ಮಿಸಿಕೊಳ್ಳುತ್ತದೆ ಎಂದು ಅನಿಸುತ್ತದೆ. ಕತೆಯ ವಿವರಗಳ ಪ್ರವಾಹದಲ್ಲಿ ಲೇಖಕ ಸ್ವತಃ ತೇಲಿಹೋದಂತೆ ಅವರ ಬರವಣಿಗೆಯಿದೆ. ಭಾಷೆಯನ್ನು ವಿವರಗಳಿಗೆ ಬಳಸುವ ಕತೆಗಾರರು ಅದನ್ನು ಧ್ವನಿಪೂರ್ಣವಾಗಿ ದುಡಿಸಿಕೊಳ್ಳುವುದಕ್ಕೆ ಅವಕಾಶ ಕಳೆದುಕೊಳ್ಳುತ್ತಾರೆ. ಕಲಿಯ ಬಹುತೇಕ ಕತೆಗಳ ಯಶಸ್ಸು ಕಲೆಗಾರಿಕೆಗಿಂತ ತಮ್ಮ ವಸ್ತು ಮತ್ತು ಸಾಮಾಜಿಕ ಧೋರಣೆಯ ಕಾರಣದಿಂದಲೇ ಬಂದಿದ್ದು. ಅವರ ಮೊದಲ ಘಟ್ಟದ ಕತೆಗಳಲ್ಲಿ ಹಿಡಿಸಲಾರದಷ್ಟು ವಿವರಗಳನ್ನು ಕತೆಯ ಒಡಲಿಗೆ ತುಂಬುವಿಕೆಯಿದೆ. ತಾನು ಸೃಷ್ಟಿಸುವ ಪಾತ್ರಗಳ ಜತೆ ಕತೆಗಾರ ವೈಯಕ್ತಿಕ ಇಷ್ಟಾನಿಷ್ಟದೊಂದಿಗೆ ಬೆರೆತುಬಿಡುವ ಕಾರಣ, ಅವರ ಕತೆಗಳ ಪಾತ್ರಗಳನ್ನು ಕೆಟ್ಟ ಮತ್ತು ಒಳ್ಳೆಯ ಎಂದು ವಿಂಗಡಿಸಿಬಿಡಬಹುದು ಕೂಡ. ಇದರಿಂದ ಮನುಷ್ಯರ ಸಂಕೀರ್ಣ ಸ್ವಭಾವವನ್ನೂ ಬಾಳಿನ ವಿಚಿತ್ರ ಲಯವನ್ನೂ ಶೋಧಿಸುವ ಅವಕಾಶವನ್ನು ಕೈಯಾರೆ ಕಿರುದುಗೊಳಿಸಿಕೊಂಡಂತೆ ಆಗಿದೆ; ಕತೆಯಲ್ಲಿ ನಡೆಯುವ ಘಟನೆಗಳು ಮತ್ತು ಪಾತ್ರಗಳ ವರ್ತನೆಗಳು ಪೂರ್ವನಿಯೋಜಿತ (‘ಮತಾಂತರ’ `ಡಾಟರ್ ಆಫ್ ದುರುಗವ್ವ’) ಎಂಬಂತೆ ಭಾಸವಾಗುವುದಕ್ಕೆ ಅವಕಾಶವಾಗಿದೆ.

ಆದರೆ ಕಲಿಗಣನಾಥ, ತಮ್ಮ ಎರಡನೇ ಹಂತದಲ್ಲಿ ಮೇಲ್ಕಾಣಿಸಿದ ಮಿತಿಗಳನ್ನು ಮೀರುವುದಕ್ಕೆ ಯತ್ನಿಸುತ್ತಿದ್ದಾರೆ; ಪುಟ್ಟ ಘಟನೆಯನ್ನು ಇಟ್ಟುಕೊಂಡು ವಿವರಗಳಿಗೆ ಆಸೆಪಡದೆ ಸರಾಗವಾಗಿ ಕತೆಹೇಳುವ ಕಲೆಯನ್ನು ರೂಢಿಸಿಕೊಳ್ಳುತ್ತಿದ್ದಾರೆ. ದಾರುಣವಾದ ಜಗತ್ತಿನಲ್ಲೂ ದುಡಿಯುವ ಜನ ಬದುಕುಳಿಯಲು ಮಾಡುತ್ತಿರುವ ಹೋರಾಟ ಮತ್ತು ತೋರುತ್ತಿರುವ ಚೈತನ್ಯವನ್ನು ಹಿಡಿದಿಡಲು (‘ಕೆರೆ’) ಯತ್ನಿಸುತ್ತಿದ್ದಾರೆ; ಬಾಳಿನ ಲಯದಲ್ಲಿ ಇರುವ ತಮಾಶೆ ಮತ್ತು ಸಣ್ಣಪುಟ್ಟ ಉಲ್ಲಾಸಗಳನ್ನು ಕಾಣಿಸುವ ವ್ಯವಧಾನವನ್ನು ತೋರುತ್ತಿದ್ದಾರೆ; ಪಾತ್ರಗಳ ಮನಸ್ಸಿನೊಳಗೆ ಹೊಕ್ಕು ಅದರ ತಲ್ಲಣಗಳನ್ನು ತಾಳ್ಮೆಯಿಂದ ವಿಶ್ಲೇಷಿಸುವ ಕೆಲಸವನ್ನು (‘ಮಾಮೂಲಿ ಗಾಂಧಿ’) ಮಾಡುತ್ತಿದ್ದಾರೆ; ರೂಪಕದ ಭಾಷೆಯಲ್ಲಿ ಕತೆಗಳನ್ನು ಕಟ್ಟಲು (‘ಕತ್ತಲು’) ಯತ್ನಿಸುತ್ತಿದ್ದಾರೆ; ಇವೆಲ್ಲ ಅವರ ಕಥೆಗಾರಿಕೆ ಹಿಡಿದಿರುವ ಹೊಸ ಮಜಲಿನ ನಡಿಗೆಯನ್ನು ಸೂಚಿಸುತ್ತಿವೆ. ಅತಿವಾಸ್ತವವಾದಿ ಧಾಟಿಯ, ಸಾಮಾಜಿಕತೆ ಹೇರಿಕೆಯುಳ್ಳ ಕತೆಗಳನ್ನು ಬರೆದು ದಣಿದ ಬಳಿಕ ಬಹುಶಃ ಅವರು ಇತರೆ ಮಾದರಿಗಳನ್ನು  ಕಂಡುಕೊಳ್ಳುತ್ತಿರಬಹುದು.

ತನ್ನ ಸಾಮಾಜಿಕ ರಾಜಕೀಯ ನಿಲುವುಗಳನ್ನು ನೇರವಾಗಿ ಹಾಗೂ ಭಾವುಕವಾಗಿ ಘೋಷಿಸಿಕೊಳ್ಳುವ ಲೇಖಕರಲ್ಲಿ ಕಲಿ ಒಬ್ಬರು. ಅವರದು ನೇರವಾದ ಮತ್ತು ಪ್ರಾಮಾಣಿಕವಾದ ಗ್ರಾಮೀಣ ಮುಗ್ಧತೆಯ ಮನಸ್ಸು ಕೂಡ. ತಾವು ಬರೆದ ‘ಮತಾಂತರ’ ಕತೆಯನ್ನು ಓದಿ ಕಣ್ಣೀರು ಸುರಿಸಿರುವುದಾಗಿ ಅವರು ಒಂದೆಡೆ ಹೇಳಿಕೊಳ್ಳುವುದುಂಟು. ಅವರ ಈ ಭಾವುಕ ವ್ಯಕ್ತಿತ್ವವು ಅವರ ಮುನ್ನುಡಿಗಳಲ್ಲಿ ಕೂಡ ವ್ಯಕ್ತವಾಗಿದೆ. ಅವರು ತಮ್ಮ ಸಂಕಲನಗಳಿಗೆ ಅತಿದೀರ್ಘವಾದ ಮುನ್ನುಡಿಗಳನ್ನು ಬರೆಯುತ್ತಾರೆ. ಅವು ಕತೆಗಾರನ ಆತ್ಮಕಥೆಯ ಭಾಗಗಳಂತೆ ಕೂಡ ಇವೆ. ಕತೆಗಾರರ ನಿಲುವನ್ನು ಕತೆಗಳೇ ಹೇಳಬೇಕು; ಕತೆಗಾರನಲ್ಲ. ನವ್ಯದ ಲೇಖಕರು ತಮ್ಮ ಬಗ್ಗೆ ಮತ್ತು ತಮ್ಮ ಕೃತಿಗಳ ಬಗ್ಗೆ ಬಹಳ ಕಡಿಮೆ ಹೇಳಿಕೊಳ್ಳುತ್ತಿದ್ದರು ಎನ್ನುವುದನ್ನು ಇಲ್ಲಿ ನೆನೆಯಬೇಕು. ಕಲಿಯವರ ಮುನ್ನುಡಿಗಳು ಒಂದು ಬಗೆಯಲ್ಲಿ ಅವರ ಕದಡಿದ ಮನಃಸ್ಥಿತಿಯನ್ನು ಸಹ ಸೂಚಿಸುತ್ತವೆ. “ನಾನ್ ಅಕಾಡೆಮಿಕ್ ಪರಿಸರದಲ್ಲಿ ಬದುಕುತ್ತಿರುವ ನನ್ನ ಬಗ್ಗೆ ಸಾಹಿತ್ಯ ವಲಯ ಇನ್ನೂ ಒಂದು ತೆರನಾದ ಅಸ್ಪೃಶ್ಯತೆ ಹೊಂದಿರುವುದಕ್ಕೆ ನನಗೆ ಆಗಾಗ ಅಸಹ್ಯವೆನಿಸುವುದುಂಟು. ಅವಮಾನ, ಹೀಯಾಳಿಕೆ, ಧಿಕ್ಕರಿಸುವಿಕೆ ಎದುರಿಸಿಯೇ ಬದುಕಬೇಕೆಂದರೆ ನನಗೆ ಒಂದು ತೆರನಾದ ಖುಷಿ.”; “ನಾನಾಗಿ ಯಾರ ಮುಂದೆ ಕೈಕಟ್ಟಿ ಕೈಮುಗಿದು ಬೇಡುವುದು ಎಂದರೆ ಆಗಲ್ಲ” ಎಂದೆಲ್ಲ ಅವರು ಹೇಳುವುದುಂಟು.

ಒಬ್ಬ ಲೇಖಕನಿಗೆ ಹೀಗೆಲ್ಲ ಹೇಳುವಂತಹ ಅಗತ್ಯ ಯಾಕೆ ಬರುತ್ತದೆಯೊ ತಿಳಿಯದು. ಸದರಿ ಲೇಖಕನಿಗೆ ಸ್ಥಾಪಿತವಾದ ಸಾಹಿತ್ಯಕ ರಾಜಕಾರಣದ ಜತೆ ಒಂದು ಬಗೆಯ ಆಕ್ರೋಶ ಇದ್ದಂತಿದೆ. ಆದರೆ ಈ ಬಗ್ಗೆ ಕಲಿ ಅಗತ್ಯಕ್ಕಿಂತ ಜಾಸ್ತಿ ತಲೆಕೆಡಿಸಿಕೊಂಡಂತಿದೆ. ಅವರ ಮಾತುಗಳಲ್ಲಿ ದಮನಿತ ಅರಿಮೆಯಿಂದ ಹುಟ್ಟಿದ ನೋವು, ಕೀಳರಿಮೆ ಮತ್ತು ಸ್ವಾಭಿಮಾನಗಳ ಸಂಕೀರ್ಣ ಮನಸ್ಥಿತಿಯಿದೆ. ಬಹುಶಃ ಗಾಯಗೊಂಡಂತಿರುವ ಮನೋಸ್ಥಿತಿಯಿಂದಲೇ ಅವರು ಕತೆ ಬರೆಯುತ್ತಾರೆ ಮತ್ತು ಹಾಗೆ ಬರೆಯುವಿಕೆಯಲ್ಲಿ ನಿರಾಳತೆಯನ್ನು ಅನುಭವಿಸುತ್ತಾರೆ ಅನಿಸುತ್ತದೆ. ಸಣ್ಣಮೆಚ್ಚುಗೆಯಿಂದಲೂ ಪುಳಕಗೊಳ್ಳುವ ಹಾಗೂ ಸಣ್ಣ ಅವಜ್ಞೆಯಿಂದಲೂ ಕಂಗೆಡುವ ಕಲಿ, ಕೋಮಲ ಮನಸ್ಸಿನ ವ್ಯಕ್ತಿ. ಆದರೆ ಕೋಮಲತೆಯು ರಾಜಕೀಯ ಪ್ರಜ್ಞೆಯಲ್ಲಿ ಇರಬೇಕಾದ ಬೌದ್ಧಿಕತೆಯ ಚೂಪುತನವನ್ನು ಕ್ಷೀಣಗೊಳಿಸುತ್ತಿದೆಯೇ ಎಂದು ನನಗೆ ಶಂಕೆ.

ಜನಪರವಾದ ಚಳುವಳಿಗಳಲ್ಲಿ ಭಾಗವಹಿಸಿಕೊಂಡು ಬಂದಿರುವ ಕಲಿಗಣನಾಥ ಅವರ ಸಾಮಾಜಿಕ ಸಂವೇದನೆ ಮಾನವೀಯವಾಗಿದೆ. ಇದು “ಸಿಂಧನೂರಿನ ಬೀದಿಬದಿಯ ಚಪ್ಪಲಿ ಹೊಲಿಯುವ ತಮ್ಮ ರಾಘಣ್ಣ, ಹಣ್ಣು ಮಾರುವ ಹನಮಂತಣ್ಣ, ಮಸಾಲಿ ಸಾಮಾನು ಮಾರುವ ಮುನ್ನಾ, ಪಾನ್‌ಶಾಪ್‌ನ ಶೇಖರ್, ತತ್ತಿ ಮಾರುವ ಮುದುಕಿ ಇಂತಹ ನೂರಾರು ಜನಸಾಮಾನ್ಯರ ಜತೆ ಬದುಕುವುದೇ ಸ್ವರ್ಗದನುಭವ ನೀಡುತ್ತದೆ” ಎಂದು ಸಾರಿಕೊಳ್ಳುವಷ್ಟು ದೃಢವಾಗಿದೆ. ಕುಂವಿಯವರೂ ಹೀಗೇ ಹೇಳಿಕೊಂಡಿರುವುದುಂಟು. ಇದೆಲ್ಲ ದಿಟವೇ; ಉಚಿತವೇ. ಆದರೆ ಈ ವೀರನಿಷ್ಠೆಯು ದುಡಿಮೆಗಾರ ಜನರ ಲೋಕವನ್ನು ರೊಮ್ಯಾಂಟಿಸೈಜ್ ಮಾಡುವುದಕ್ಕೆ ಕಾರಣವಾಗುತ್ತಿದೆಯೇ? ಲೋಕದ ಬೇರೆಬೇರೆ ಅನುಭವಗಳ ಒಳಹರಿವಿಗೆ ಸ್ವಯಂ ನಿರ್ಬಂಧ ವಿಧಿಸಿಕೊಳ್ಳುವುದಕ್ಕೆ ಕಾರಣವಾಗುತ್ತಿದೆಯೇ? ಈ ಬಗ್ಗೆ ಮರುಚಿಂತನೆ ಮಾಡಬೇಕಿದೆ. ಕಲಿಯವರ ಕತೆಗಳಲ್ಲಿ ಆಧುನಿಕ ಬದುಕಿನ ಆಯಾಮಗಳನ್ನು ಹಿಡಿಯುವ ಕತೆಗಳಾಗಲಿ, ಪ್ರಜ್ಞಾವಂತ ಪಾತ್ರಗಳನ್ನು ಸೃಷ್ಟಿಸಿ ಅವುಗಳ ಮನೋಲೋಕದ ತಳಮಳವನ್ನು ಹಿಡಿಯುವುದಕ್ಕಾಗಲಿ, ಹೆಚ್ಚು ಸಾಧ್ಯವಾಗುತ್ತಿಲ್ಲ ಎಂಬುದು ಗಮನಾರ್ಹ. ಭಾವಾವೇಶವು ಜಿಜ್ಞಾಸೆಯ ಸಂಗ ಮಾಡದಿದ್ದರೆ, ದೊಡ್ಡದನ್ನು ಕಾಣಿಸುವುದು ಕಷ್ಟ.

“ಇನ್ನೂ ನೂರಾರು ಕಥೆಗಳು ಕೆಲವು ಕಾದಂಬರಿಗಳೂ ನನ್ನ ಮನಸ್ಸು ಹೃದಯ ಮತ್ತು ಕೈಬೆರಳ ತುದಿಗಳಲ್ಲಿವೆ” ಎಂದು ಲೇಖಕರು  ಹೇಳುವುದುಂಟು. ಇದು ಓದುಗರ ಪಾಲಿಗೆ ಬೆದರಿಕೆಯೊ ಭರವಸೆಯೊ ಕಾಣೆ. ನಮ್ಮ ಕೆಲವು ಹಿರಿಯ ಲೇಖಕರು ಜನಪ್ರಿಯತೆಗೆ ಮರುಳಾಗಿ ಆತ್ಮನಿರೀಕ್ಷೆಯೇ ಇಲ್ಲದೆ ಬರೆಬರೆದು ಓದುಗರ ಮುಂದೆ ಎಸೆಯುತ್ತಿರುವುದನ್ನು ನೋಡಿದರೆ, ಅವರ ಅದಮ್ಯ ಶಕ್ತಿಯ ಬಗ್ಗೆಯೇ ಅಂಜಿಕೆ ಹುಟ್ಟುತ್ತದೆ. ಆದರೆ ಕಲಾತ್ಮಕ ಕುಶಲತೆಯನ್ನು  ಪಡೆದುಕೊಳ್ಳುತ್ತಿರುವ, ಸಾಮಾಜಿಕ ಬದ್ಧತೆಯನ್ನು ಹೊಸ ವಿನ್ಯಾಸದಲ್ಲಿ ಮಂಡಿಸುವ ಸಾಧ್ಯತೆ ಪ್ರಕಟಿಸುತ್ತಿರುವ ಕಲಿಗಣನಾಥ ಅವರ ಶಕ್ತಿಯಿಂದ ಕನ್ನಡ ಕಥಾಪ್ರಕಾರಕ್ಕೆ ಬಹಳಷ್ಟು ಬರಬೇಕಿದೆ. ಇದಕ್ಕೆ ಬೇಕಾದ ಹೊರಳಿಕೆ ಮತ್ತು ಸಿದ್ಧತೆಯನ್ನು ಅವರ ಈಚಿನ ಕತೆಗಳು ತೋರುತ್ತಿವೆ.

ಎನ್.ಕೆ.ಹನುಮಂತಯ್ಯ

ಎನ್.ಕೆ. ಹನುಮಂತಯ್ಯ ಒಮ್ಮೆ ಕನ್ನಡ ವಿಶ್ವವಿದ್ಯಾಲಯದಲ್ಲಿ ದಲಿತ ಚಳುವಳಿಯ ಮೇಲೆ ಒಂದು ಉಪನ್ಯಾಸ ಮಾಡಿದರು. ದಲಿತ ಚಳುವಳಿಯ ಸದ್ಯದ ಸ್ಥಿತಿಯನ್ನು ಅವರು ನವಿಲಿನ ಒಂದು ರೂಪಕದಲ್ಲಿ ಹೇಳಿದರು. ಅವರ ಪ್ರಕಾರ ದಲಿತ ಚಳುವಳಿ, ಒಂದು ಕಾಲಕ್ಕೆ ಕರ್ನಾಟಕದ ಯಾವುದೇ ಮೂಲೆಯಲ್ಲಿ ದಲಿತರ ಮೇಲೆ ಹಲ್ಲೆಯಾದರೂ, ಅಲ್ಲಿಗೆ ಹೋಗಿ ಕ್ರಾಂತಿಯ ಮೊಟ್ಟೆಗಳನ್ನಿಟ್ಟು ಬರುವ ನವಿಲಿನ ಕೆಲಸವನ್ನು ಮಾಡುತ್ತಿತ್ತು. ನಂತರ ಆ ಮೊಟ್ಟೆಗಳು ಒಡೆದು ಅಲ್ಲಿ ಹೊಸನವಿಲುಗಳು ಹುಟ್ಟುತ್ತಿದ್ದವು; ಕ್ರಾಂತಿಯನ್ನು ಮುಂದುವರೆಸುತ್ತಿದ್ದವು. ಈಗ ಮೊಟ್ಟೆಯಿಡುವ ಆ ನವಿಲುಗಳೆಲ್ಲ ಧಣಿಗಳ ಖರೀದಿಗೆ ಒಳಗಾಗಿವೆ. ಅವು ಕಸಾಯಿಖಾನೆಯಲ್ಲಿ ತಮ್ಮ ಪುಕ್ಕ ತರಿಸಿಕೊಂಡು ಮಾಂಸಕ್ಕಾಗಿ ಮಾರಾಟಗೊಳ್ಳುತ್ತಿವೆ.

ಈ ರೂಪಕದಲ್ಲಿ ವರ್ತಮಾನವನ್ನು ವಿವರಿಸುವಾಗ ಅವರಲ್ಲಿ ವಿಷಾದವಿತ್ತು. ಒಂದು ಕ್ಷಣ ಭಾವುಕರಾಗಿ ಗಂಟಲು ಬಿಗಿದು ಮಾತು ಸಹ ನಿಂತಿತು. ಈ ಪ್ರಸಂಗವು ಎನ್.ಕೆ.  ಹನುಮಂತಯ್ಯ ಅವರ ವ್ಯಕ್ತಿತ್ವದ ಸ್ವರೂಪವನ್ನು ಮಾತ್ರವಲ್ಲ, ಅವರ ಬರೆಹದ ಪ್ರಮುಖ ಲಕ್ಷಣವನ್ನೂ ಹೇಳುವಂಥದ್ದಾಗಿದೆ. ಬಹುಶಃ ಅವರ ಬರೆಹದ ಎರಡು ಶಕ್ತಿಗಳೆಂದರೆ, ಭಾವಾನಾತ್ಮಕ ತೀವ್ರತೆ ಮತ್ತು ರೂಪಕಗಳ ನುಡಿಗಟ್ಟು. ಈ ಶಕ್ತಿಗಳು ಈಚೆಗೆ ಬರೆಯುತ್ತಿರುವ ಕವಿಗಳಲ್ಲೇ ಅವರನ್ನು ವಿಶಿಷ್ಟರನ್ನಾಗಿಸಿವೆ. ತಮ್ಮ ಕವಿತೆಗಳಲ್ಲಿ ಎನ್‌ಕೆ ಹುಟ್ಟಿಸುತ್ತಿರುವ ಹೊಸಭಾಷೆಯು ಓದುಗರ ಗ್ರಹಿಕೆಗಳನ್ನು ಭಗ್ನಗೊಳಿಸಿ, ಅವರ ಪ್ರಜ್ಞೆಯನ್ನು ತಟ್ಟನೆ ಹೊಸವಿಸ್ತಾರಕ್ಕೆ ಹಿಗ್ಗಿಸುವಷ್ಟು ಪ್ರಭಾವಶಾಲಿಯಾಗಿದೆ. ನೋಡಲು ಸರಳವೆಂದು ತೋರುವ ಅವರ ‘ಅವ್ವ ನಿಂತೇಯಿದ್ದಾಳೆ’ ಕವನ ಗಮನಿಸಬೇಕು. ಅದು ನಮ್ಮನ್ನು ಅಪ್ಪಳಿಸುವಂತೆ ಆವರಿಸಿಕೊಳ್ಳುತ್ತದೆ.

ಎನ್‌ಕೆ ಬಹಳ ವಿಶಿಷ್ಟವಾದ ದಲಿತ ಸಂವೇದನೆಯ ಲೇಖಕ. ದೇವನೂರ ಮಹಾದೇವ, ಸಿದ್ದಲಿಂಗಯ್ಯ ಅಥವಾ ಮೊಗಳ್ಳಿ, ಜಾಹ್ನವಿ ಅವರ ನಂತರ ಬಂದ ದಲಿತರ ಲೇಖಕರಲ್ಲಿ ಎನ್.ಕೆ. ಹನುಮಂತಯ್ಯ ಬಹಳ ಮುಖ್ಯವಾದವರು. ದಲಿತ ಸಾಹಿತ್ಯದ ನಾಲ್ಕನೆಯ ಈ ತಲೆಮಾರು ಲೋಕವನ್ನು ಗ್ರಹಿಸುತ್ತಿರುವ ಮತ್ತು ಬರೆಹದಲ್ಲಿ ಕಂಡರಿಸುತ್ತಿರುವ ಪರಿ ತೀರಾ ವಿಭಿನ್ನವಾಗಿದೆ. ಇದು ದಲಿತ ಸಾಹಿತ್ಯ ಪರಂಪರೆಯ ಶಕ್ತಧಾರೆಯನ್ನು ಮುಂದುವರೆಸುತ್ತಿದೆ, ಮಾತ್ರವಲ್ಲ ಅದಕ್ಕೆ ಹೊಸಮೊಗಗಳನ್ನು ಜೋಡಿಸುತ್ತಿದೆ. ಆದರೂ ‘ದಲಿತ ಸಂವೇದನೆ’ ಎಂಬ ಚೌಕಟ್ಟಿನಲ್ಲಿ ಎನ್‌ಕೆ ಅವರ ಬರೆಹವನ್ನು ಹಿಡಿಯುವುದಕ್ಕೆ ಆಗುವುದಿಲ್ಲ. ಅದು ದಲಿತ ಸಂವೇದನೆಯನ್ನು ವಿಶ್ವಪ್ರಜ್ಞೆಯ ವಿಶಾಲ ಭಿತ್ತಿಯಲ್ಲಿಟ್ಟು ನೋಡುವ ಅಥವಾ ಹೊಸ ಸಮಾಜನಿರ್ಮಾಣದ ಕಾಳಜಿಗಳನ್ನೂ ದಲಿತಭಿತ್ತಿಯಲ್ಲಿ ಅಳವಡಿಸುವ ಕಾಯಕದಲ್ಲಿ ತೊಡಗಿಕೊಂಡಿದೆ.
ಸರ್ಕಾರಿ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದ ಎನ್‌ಕೆ, ಈತನಕ  ‘ಹಿಮದ ಹೆಜ್ಜೆ’ (೧೯೯೭), ‘ಚಿತ್ರದ ಬೆನ್ನು’ (೨೦೦೬) ಎಂಬ ಕವನ ಸಂಕಲನಗಳನ್ನೂ, ‘ಎಂ.ವಿ.ವಾಸುದೇವರಾವ್’ (೨೦೦೨) ಎಂಬ ವ್ಯಕ್ತಿಚಿತ್ರವನ್ನೂ, ‘ಜಲಸ್ಥಂಭ’ (೨೦೦೩) ಎಂಬ ನಾಟಕವನ್ನೂ ‘ಕ್ರಾಂತಿಯ ವಸಂತ’ (೨೦೦೮) ಎಂಬ ಜೀವನ ಚರಿತ್ರೆಯನ್ನೂ ಪ್ರಕಟಿಸಿದರು. ಅಂಬೇಡ್ಕರ್ ವೈಚಾರಿಕತೆ, ಬುದ್ಧನ ಕರುಣೆ, ಅಲ್ಲಮನ ಬೆಡಗು, ಲಂಕೇಶರ ತಳಮಳ -ಇವೆಲ್ಲವೂ ಅವರಲ್ಲಿ ಸಂಗಮಗೊಂಡಂತಿದ್ದವು. ಅವರ ಬರೆಹದಲ್ಲಿ ಅಪಮಾನಕ್ಕೆ ಲೋಕದ ಕ್ರೌರ್ಯಕ್ಕೆ ತೀಕ್ಷ್ಣವಾಗಿ ಮಿಡಿಯುವ ಗುಣವೂ ಇತ್ತು. ಲೋಕದ ಚೆಲುವಿಗೆ ವಿಸ್ಮಯಪಡುವ ಮತ್ತು ಮೇರೆಮೀರುವಂತೆ ಸಂಭ್ರಮಿಸುವ ಗುಣವೂ ಇತ್ತು.

ಆದರೆ ಹೃದಯದ ಮೂಲಕವೇ ಲೋಕದ ವಿದ್ಯಮಾನಗಳನ್ನು ನೋಡುವುದು ಮತ್ತು ಪ್ರತಿಕ್ರಿಯಿಸುವುದು ಎನ್‌ಕೆ ಬರೆಹದ ಸ್ವಭಾವವಾಗಿತ್ತು. ಇದರ ಒಂದು ಸಮಸ್ಯೆಯೆಂದರೆ, ಕೊಚ್ಚಿಹೋಗುವಂತಹ ಭಾವುಕ ತೀವ್ರತೆಯಲ್ಲಿ ಬೌದ್ಧಿಕತೆಯನ್ನು ಬಿಟ್ಟುಕೊಡುವುದು. ಇದರಿಂದ ಅವರ ಬರೆಹದ ರಾಜಕೀಯ ಪ್ರಜ್ಞೆ ಕೆಲಮಟ್ಟಿಗೆ ಮಸಳಿಸುವುದುಂಟು, ಇದಕ್ಕೆ ಸಾಕ್ಷಿ, ಕಳೆದ ವರ್ಷ ಅಮೆರಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಹುಸೇನ್ ಒಬಾಮಾ ಗೆದ್ದಾಗ ಎನ್‌ಕೆ ಬರೆದ ಒಂದು ಕವನ. ಅದರಲ್ಲಿ ಒಬಾಮನನ್ನು ಕಪ್ಪುಚಂದಮಾಮನೆಂದೂ ಕಪ್ಪುಜನರ ಬಾಳಿನ ಕತ್ತಲೆಯನ್ನು ಬೆಳಗಲು ಅವನು ಬಂದಿದ್ದಾನೆಂದೂ ಸಂಭ್ರಮದ ಬಣ್ಣನೆಯಿದೆ. ಈ ಸಂಭ್ರಮದ ಹಿಂದಿನ ಸದಾಶಯವನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಲೋಕವಾಸ್ತವವನ್ನು ಭಾವುಕತೆಯಲ್ಲಿ ಗ್ರಹಿಸಿದ ಪರಿಣಾಮವೂ ಇದಾಗಿದೆ. ದಲಿತ ಚಳುವಳಿಯ ಪತನಕ್ಕೆ ಪಡುವ ವಿಷಾದವಿರಲಿ, ಕಪ್ಪುವರ್ಣೀಯನೊಬ್ಬ ಅಧಿಕಾರಕ್ಕೆ ಬಂದನೆಂದು ಪಡುವ ಸಂಭ್ರಮವಿರಲಿ, ಭಾವಾವೇಶದಲ್ಲಿ  ಚಿಂತನಶೀಲತೆಯನ್ನು ಕೈಬಿಡುವ ಎಲ್ಲ ಬರೆಹವೂ ಜಿಜ್ಞಾಸೆಯ ಚೂಪುತನಕ್ಕೆ ಎರವಾಗುತ್ತದೆ. ಆದರೆ ಎನ್‌ಕೆ ಅರಿವುಗೆಡದ ತನ್ಮಯತೆಯಲ್ಲಿ ಬರೆಯುವ ಗಳಿಗೆಗಳು ಬೇಕಾದಷ್ಟು ಇದ್ದವು. ಅಲ್ಲಿ ಅವರು ಬಾಳಿನ ವೈರುಧ್ಯಗಳನ್ನು ಅನೇಕ ಸರಳ ರಚನೆಗಳಲ್ಲಿ ತಾಳ್ಮೆಯಿಂದ ಪರಿಣಾಮಕಾರಿಯಾಗಿ ಹಿಡಿದಿಡುತ್ತಾರೆ. “ಚಮ್ಮಾರನ ಜೋಡುಮೆಟ್ಟಿ ಕಮ್ಮಾರನ ಖಡ್ಗ ಹಿಡಿದು ಕಾಯುತಾನಲ್ಲೊ, ರಾಜ ಕಾಯುತಾನಲ್ಲೊ” ಎಂದು ಆರಂಭವಾಗುವ ಒಂದು ಪುಟ್ಟ ಪದ್ಯವನ್ನು ಗಮನಿಸಬೇಕು. ಇಲ್ಲಿ ವರ್ಗಗಳ ನಡುವಣ ವೈರುಧ್ಯಗಳನ್ನು ವಾಚ್ಯವಾಗಿಸದೆ ಅದರ ಸಂಕೀರ್ಣತೆಗೆ ಮುಕ್ಕಾಗದಂತೆ ಹಿಡಿಯುವ ಯತ್ನವಿದೆ.

ಎನ್‌ಕೆ ಕವನಗಳು ಅನುಭವ ಚಿಂತನೆ ದರ್ಶನಗಳನ್ನು ರೂಪಕಗಳ ಮೂಲಕವೇ ವ್ಯಕ್ತಪಡಿಸುವ ಹಟತೊಟ್ಟಂತೆ ರಚನೆಗೊಂಡಿವೆ. ನಮ್ಮ ಕಾಲದಲ್ಲಿ ಹೀಗೆ ರೂಪಕಗಳನ್ನೇ ಕವಿತೆಯ ಭಾಷೆಯಾಗಿಸಿಕೊಂಡಿರುವ ಕವಿಪ್ರತಿಭೆಗಳು ವಿರಳ. ಈ ರೂಪಕ ಸೃಷ್ಟಿಗೆ ಬೇಕಾದ ಪ್ರಚಂಡ ಕಲ್ಪನಾ ಪ್ರತಿಭೆಯೂ ಅವರಲ್ಲಿತ್ತು. ಆದರೆ ಈ ರೂಪಕಗಳ ವ್ಯಸನವೇ ಅನೇಕ ಕಡೆ ಅವರ ಕವಿತೆಯನ್ನು ಅಸ್ಪಷ್ಟತೆಗೆ ತಳ್ಳುತ್ತಿರುವ, ಕವಿತೆಯಲ್ಲಿ ಸಹಜವಾಗಿ ನೆಲೆಸಬೇಕಾದ ಸರಳತೆಯನ್ನು ಕಳೆಯುತ್ತಿರುವ ಸಾಧ್ಯತೆಗೂ ದೂಡಿದಂತಿತ್ತು. ‘ಆ ಒಂದು ಹನಿ ಮಳೆ’ ಹಾಗೆ  ಪ್ರತಿಮೆಗಳ ಕಗ್ಗಾಡಲ್ಲಿ ಸಿಲುಕಿರುವ ಕವನ. ಇದಕ್ಕೆ ಹೋಲಿಸಿದರೆ, ‘ಏಡಿ’ ಮುಂತಾದ ಸಹಜೋಕ್ತಿಯಲ್ಲಿ ಹುಟ್ಟಿದ ಕವಿತೆಗಳೇ ಹೆಚ್ಚು ಅರ್ಥವತ್ತಾಗಿವೆ ಅನಿಸುತ್ತದೆ. ಎನ್‌ಕೆ ಅವರ ಕಾವ್ಯದ ರೂಪಕಗಳಲ್ಲಿ ಕೆಲವು ಚಿತ್ರಗಳು ಮತ್ತೆಮತ್ತೆ ಬರುತ್ತವೆ. ಉದಾಹರಣೆಗೆ, ಜಾತಿಕ್ರೌರ್ಯದಲ್ಲಿ ನಲುಗಿರುವ ದಲಿತ ಸಮುದಾಯದ ಚಿತ್ರವನ್ನು ಹಿಡಿಯಲು ಕವಿ ಬಳಸುವ ಮಲೆತ ನೀರು, ಕೊಳೆತಶವ, ಸುಡುವ ಬೆಂಕಿ ಇತ್ಯಾದಿ. ಅಪಾರ ದುಗುಡ ಮತ್ತು ವಿಷಾದ ತುಂಬಿರುವ ಈ ರೂಪಕ ಚಿತ್ರಗಳು ಕೆಲವೊಮ್ಮೆ ದಿಗ್ಭ್ರಮೆ ಬರಿಸುವಂತೆ ಬೀಭತ್ಸವಾಗಿವೆ. ಹೊರಬರಲು ಸಾಧ್ಯವೇ ಇಲ್ಲವೇನೊ ಎಂಬ ಹತಾಶೆಯ ಉಸಿರುಗಟ್ಟಿದ ಜಗತ್ತೊಂದು ಅವರ ಬರೆಹದಲ್ಲಿ ಒಡಮೂಡುತ್ತದೆ. ಇದು ಲೇಖಕರ ಅತಿಸೂಕ್ಷ್ಮತೆಯಿಂದ ಹುಟ್ಟಿರುವ ಉತ್ಪ್ರೇಕ್ಷಿತ ಚಿತ್ರವೊ ಅಥವಾ ದಲಿತ ಸಮಾಜದ ವೇದನಗಳಿಗೆ ನಾವು ಅಷ್ಟು ಸೆನ್‌ಸೆನ್ಸಿಟಿವ್ ಆಗಿರದೆ ಇರುವುದರಿಂದ ಅದು ಅತಿ ಅನಿಸುತ್ತದೆಯೊ ಕಾಣೆ.

‘ಚಿತ್ರದ ಬೆನ್ನು’ ಕವನ ಸಂಕಲನವು ಕನ್ನಡದ ಮಹತ್ವದ ಕೃತಿಗಳಲ್ಲಿ ಒಂದು. ಇದರಲ್ಲಿರುವ ೩೭ ಕವನಗಳು ಕನ್ನಡದ ಝಗಝಗಿಸುವ ಪ್ರತಿಭೆಯೊಂದನ್ನು ಓದುಗರ ಅನುಭವಕ್ಕೆ ತರುತ್ತವೆ. ಪ್ರತಿಪದ್ಯವೂ ಒಂದೊಂದು ಬಗೆಯ ಪ್ರಯೋಗವನ್ನು ಮಾಡಿರುವಂತೆ ಇಲ್ಲಿನ ಅಭಿವ್ಯಕ್ತಿಯ ವೈವಿಧ್ಯವಿದೆ. ಪಲ್ಲವಿಯಂತೆ ಅನುರಣನಗೊಳ್ಳುವ ಒಂದು ಸಾಲು ಕವಿತೆಯಲ್ಲಿ ಮತ್ತೆಮತ್ತೆ ಬಂದು ಹೊಸ ಅರ್ಥವಂತಿಕೆ ಹುಟ್ಟಿಸುವ ಪರಿಯನ್ನು ಗಮನಿಸಬಹುದು. “ಕಿರುಬೆರಳಲಿ ಕಡಲನೆತ್ತಿ ಹಣೆಬೊಟ್ಟನಿಟ್ಟು ಗಿರಿಯ ಉಗುರಲೆತ್ತಿ ಕಿವಿಯೋಲೆಯಿಟ್ಟು” ಎಂಬ ಮಹೋಪಮೆಗಳನ್ನು ಎನ್‌ಕೆ ಸಹಜವಾಗಿ ಹುಟ್ಟಿಸಬಲ್ಲರು. ವಾಸ್ತವದಾಚೆಯ ಯಾವಯಾವುದೋ ಅರ್ಥಗಳಿಗೆ ಕೈಚಾಚುವ ಅವರ ಅನೇಕ ಕವಿತೆಗಳು ಮಹತ್ವಾಕಾಂಕ್ಷೆಯಿಂದ ಕೂಡಿವೆ. ಅಲ್ಲಿ ಅಲ್ಲಮನದೊ ಎಚ್.ಎಸ್. ಶಿವಪ್ರಕಾಶರದೊ ಇನ್ನೂ ಅರಗದ ಪ್ರಭಾವವೂ ಇದ್ದಂತಿದೆ. ‘ಗುರುವಿನ ಹೆಣ’ ‘ಎರೆಹುಳದ ಬಾಯೊಳಗೆಕರಗುವ ಆನೆಗಳು’ ‘ಯೋಗಿಯಕಣ್ಣಲ್ಲಿ ಚಿಗುರುವ ಏಣಿ’ ಇತ್ಯಾದಿ ಕವನಗಳು ಇಂತಹವು. ಬೆಡಗಿನ ಈ ಪರಿಭಾಷೆಯು ಯಾಕೊ ಕವನಗಳ ಮೇಲೆ ಭಾರವಾಗಿ ಹೇರಿಕೊಂಡಿದೆ. ಯು.ಆರ್. ಅನಂತಮೂರ್ತಿಯವರು  ಹನುಮಂತಯ್ಯ “ಇದು  ಸಾಮಾಜಿಕ, ಇದು ವೈಯಕ್ತಿಕ, ಇದು ಆಧ್ಯಾತ್ಮಿಕ ಎಂದು ವಿಂಗಡಿಸಲಾರದಂತೆ” ಬರೆಯುತ್ತಿದ್ದಾರೆ ಎಂದು ಹೇಳುತ್ತಾರೆ. ಇದು ನಿಜ. ಆದರೆ ಈ ಹಲವು ಆಯಾಮಗಳ ಏಕೀಭವಿಸುವಿಕೆಯಲ್ಲಿ ಯಾವುದೊ ಒಂದು ಸಂಗತಿ (ಚಿಂತನಶೀಲತೆ?) ಮಿಸ್ಸಿಂಗ್ ಎಂದು ಕೂಡ ಅನಿಸುತ್ತಿದೆ.

ಬೂಸಾ ಚಳುವಳಿ ಖ್ಯಾತಿಯ ಬಸವಲಿಂಗಪ್ಪನವರ ಬದುಕಿನ ಮೇಲೆ ಎನ್‌ಕೆ ಬರೆದಿರುವ ಪುಸ್ತಕವು, ಒಂದು ವಿಶಿಷ್ಟ ಬಗೆಯ ಜೀವನ ಚರಿತ್ರೆ. ಇದನ್ನು ಅವರು ಕರ್ನಾಟಕದ ದಲಿತರ ಆತ್ಮಚರಿತ್ರೆಯಂತೆ ಕೂಡ ಬರೆಯಲು ಯತ್ನಿಸಿದ್ದಾರೆ. ಇದಕ್ಕಾಗಿ ಚರಿತ್ರಕಾರರ ಅಲಿಪ್ತ ಧಾಟಿಗೆ ಬದಲಾಗಿ, ಆತ್ಮಾವಲೋಕನದ ಆಪ್ತ ವಿಧಾನವೊಂದನ್ನು ಬಳಸಿದ್ದಾರೆ. ಇದರಿಂದ ಈ ಕೃತಿಯು, ಮಾಹಿತಿಗಾಗಿ ಓದುವುದಕ್ಕಿಂತ, ಅದರಲ್ಲಿ ಲಾವಾರಸದಂತೆ ಹರಿದಿರುವ ಲೇಖಕರ ತಳಮಳಗಳಿಗಾಗಿ ಓದುವಂತಹ ರೂಪಪಡೆದುಕೊಂಡಿದೆ. ಇದರ ಆರಂಭದಲ್ಲಿ ಲೇಖಕರು, “ಹಗಲು ಇರುಳಿನ ಬಲೆಯೊಳಗೆ ಪಕ್ಕದಲ್ಲೇ ಬೇಟೆಗಾರರ ಒಲೆ ಉರಿಯುತ್ತಿದೆ. ಈಗ ಹಾಡಲೇಬೇಕು ಈ ಪುಟ್ಟ ಕೊಕ್ಕಿನಲೇ ಬೇಟೆಗಾರರು ನಿದ್ರಿಸುವಂತೆ, ಈಗ ಈ ಪುಟ್ಟ ಕೊಕ್ಕನೇ ಖಡ್ಗವಾಗಿಸಬೇಕು ಬಲೆ ಹರಿದು ಬಯಲ ಸೇರುವಂತೆ” ಎಂದು ಹೇಳಿಕೊಳ್ಳುವುದುಂಟು. ಇದೊಂದು ಬಗೆಯಲ್ಲಿ ಬರೆಹದ ಉದ್ದೇಶದ ಘೋಷದಂತೆಯೂ ಇದೆ. ಇದು, ದಮನಕಾರಿ ಸಮಾಜವೊಂದರಲ್ಲಿ ಬದಲಾವಣೆ ಬಯಸುವ ಎಲ್ಲರಿಗೂ ಸಂಘರ್ಷ ಅನಿವಾರ್ಯವೆಂದು ನಂಬಿರುವ ಪರಿಯನ್ನು ಸೂಚಿಸುತ್ತಿರಬಹುದು. ವಿಶೇಷವೆಂದರೆ ಎನ್‌ಕೆಯವರಲ್ಲಿ ಮತ್ತೆಮತ್ತೆ ಬರುವ ಹಕ್ಕಿಗಳ ರೂಪಕ. ಬಲೆಗೆ ಸಿಕ್ಕ ಹಕ್ಕಿಗಳು ಸತ್ತಂತೆ ನಟನೆ ಮಾಡಿ ಇಡೀ ಬಲೆಯನ್ನೇ ಹೊತ್ತುಕೊಂಡು ಹಾರಿಹೋಗುವ ಜನಪ್ರಿಯ ಕತೆಯೊಂದಿದೆ. ಅದು ಸಾಮುದಾಯಿಕ ಕ್ರಿಯಾಶೀಲತೆಯನ್ನು ಸೂಚಿಸುವಂತಹ ರೂಪಕಕತೆ. ಆದರೆ ಇಲ್ಲಿ ಬಲೆಯನ್ನು ಹರಿದು ಬಯಲನ್ನು ಸೇರುವ ಆಶಯ ವ್ಯಕ್ತಿಪಡಿಸುತ್ತಿರುವುದು ಒಂಟಿ ಹಕ್ಕಿ. ಇದು ಏಕಾಂಗಿ ಹೋರಾಟದ ರೂಪಕವೊ ಹೊಸತಲೆಮಾರಿನ ದಲಿತರಲ್ಲಿ ಸಾಮುದಾಯಕ ಪ್ರಜ್ಞೆಯೊಳಗೆ ನಂಬಿಕೆಯೇ ಕಳೆದುಹೋಗಿರುವ ದ್ಯೋತಕವೊ ತಿಳಿಯುತ್ತಿಲ್ಲ. ಒಬಾಮಾ ಕುರಿತ ಪದ್ಯವಾಗಲಿ, ಬಸವಲಿಂಗಯ್ಯನವರನ್ನು ಕುರಿತು ‘ಕ್ರಾಂತಿಯ ವಸಂತ’ ಎಂದು ಕರೆಯುವಿಕೆಯನ್ನಾಗಲಿ, ಈ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬೇಕಿದೆ.

‘ಕ್ರಾಂತಿಯ ವಸಂತ’ ಕೃತಿಯು ಕೊನೆಯು ಲೇಖಕರ ಆರ್ತವಾದ ಆಶಯಗಳಿಂದ ಕೂಡಿದೆ. “ನಾನು ನಿಂತ ಹೆಣನಾತದ ನೀರಿನಿಂದ ಹಾರಿದ್ದಾಯ್ತು. ಕ್ರಾಂತಿಯ ಬೆಳಕಿನ ರೆಕ್ಕೆ ನನ್ನ ತೋಳುಗಳಲ್ಲಿ ಮೂಡಿ ಸಾವಿನಿಂದ ತಪ್ಪಿಸಿಕೊಂಡದ್ದಾಯ್ತು. ಆ ಸಾವು ಸಾವಲ್ಲ ಕೊಲೆ. ಅಂಥ ಕೊಲೆಯಿಂದ ಕಾಪಾಡಿದ ಕ್ರಾಂತಿಗೆ ಕೈಮುಗಿಯುತ್ತೇನೆ. ಈಗ ನಾನಿರುವ ಸ್ಥಳದಲ್ಲಿ ಎಷ್ಟೊಂದು ಜನರಿದ್ದಾರೆ! ಎಲ್ಲರೂ ತಮಗರಿವಿದ್ದೊ ಇಲ್ಲದೆಯೊ ಕುಲದ ಕುಲುಮೆಗೆ ಬಿದ್ದು ಕಣ್ಣು ಕಿವಿ ಮೂಗು ಎಲ್ಲವನ್ನೂ ನೀಗಿಕೊಂಡು ಹೆಳವರಾಗುತ್ತಿದ್ದಾರೆ”; ಇಂತಹ ದಾರುಣ ಸ್ಥಿತಿಯನ್ನು ಕವಿ ಕವನಗಳಲ್ಲೂ ಚಿತ್ರಿಸುವುದುಂಟು. “ಕ್ರಾಂತಿ ಎಂದರೆ ಹಿಂಸೆಯಲ್ಲ, ಬದಲಾವಣೆ. ಒಣಮರದ ಚಿಗುರು ಕ್ರಾಂತಿ. ಬತ್ತಿದ ಕೆರೆಗೆ ನೀರು ಬರುವುದು ಕ್ರಾಂತಿ. ಶೋಷಿತರು ತಮ್ಮ ನೋವನ್ನು ಸಮಾಜ ಬದಲಾವಣೆಯ ಅಧ್ಯಾತ್ಮವನ್ನಾಗಿ ಮಾಡಿಕೊಳ್ಳುವುದು ಕ್ರಾಂತಿ. ಅಂಥ ಕ್ರಾಂತಿಯ ವಸಂತ ನಮ್ಮದಾಗಲಿ” ಎಂದೂ ಅವರು ಹೇಳುವುದುಂಟು. ಎನ್‌ಕೆ, ಆದರ್ಶ ಮತ್ತು ಕನಸುಗಳ ಕವಿ. ಇವೇ ಅವರ ಬರೆಹದಲ್ಲಿ ಹೊರಲಾಗದ ಹೊರೆಯಂತೆಯೂ ಆಗಿಬಿಟ್ಟಿವೆ.

ಕಾವ್ಯಕ್ಕೆ ಹೋಲಿಸಿದರೆ ಎನ್‌ಕೆ ಗದ್ಯವು ಅಷ್ಟು ಮಹತ್ವದ್ದು ಅನಿಸುವುದಿಲ್ಲ. ಕವಿತೆಗಾಗಿ  ರೂಪುಗೊಳಿಸಿಕೊಂಡಿರುವ ರೂಪಕದ ಭಾಷೆಯು ಗದ್ಯದ ತರ್ಕಶೀಲತೆಯನ್ನೇ ಮಂಕುಗೊಳಿಸುವಂತೆ ತುಂಬಿಕೊಳ್ಳುತ್ತದೆ. ಕುವೆಂಪು ಮುಂತಾದ ಹಿರಿಯ ಲೇಖಕರು ಬುದ್ಧಿ ಭಾವಗಳನ್ನು ಒಂದಕ್ಕೆ ಮತ್ತೊಂದನ್ನು ಬಲಿಗೊಡದೆ, ಸಮತೋಲನದಲ್ಲಿ ಬಳಸಿ ವೈಚಾರಿಕ ಗದ್ಯವನ್ನೂ ಭಾವನಾತ್ಮಕವಾದ ಕಾವ್ಯವನ್ನೂ ಸೃಷ್ಟಿಸಿದರು ಎಂಬುದನ್ನು ಇಲ್ಲಿ ನೆನೆಯಬೇಕಿದೆ.

ತೇಜಸ್ವಿ ತಮ್ಮ ಬರೆಹಕ್ಕೆ ಕುವೆಂಪು ಲೋಹಿಯಾ ಕಾರಂತರ ಪ್ರೇರಣೆಗಳ ಬಗ್ಗೆ ಘೋಷಿಸಿಕೊಂಡಿದ್ದರು. ಅದನ್ನು ನೆನಪಿಸುವಂತೆ, ಎನ್‌ಕೆ, ಕುವೆಂಪು ಹಾಗೂ ಲಂಕೇಶ್ ಅವರ ಭಾಷೆ ಮತ್ತು ದರ್ಶನಗಳಿಗೆ ತಮ್ಮ ಕೃತಜ್ಞತೆಯನ್ನು ಅರ್ಪಿಸುವುದುಂಟು. ಹೊಸತಲೆಮಾರಿನ ಲೇಖಕರ ಪರಂಪರೆಯ ಪ್ರಜ್ಞೆ ಕುತೂಹಕಲಕಾರಿಯೂ ಮಾರ್ಮಿಕವೂ ಆಗಿದೆ. ತನ್ನೆಲ್ಲ ಯಶಸ್ಸಿನೊಂದಿಗೆ ಎನ್ಕೆ ಅವರ ಬರೆಹವು, ನಮ್ಮ ಕಾಲದ ಬದಲಾಗುತ್ತಿರುವ ವಾಸ್ತವವನ್ನು ಹಿಡಿಯಲು ಬೇಕಾದ ನುಡಿಗಟ್ಟಿಗಾಗಿ ಹೊಸತಲೆಮಾರಿನ ಲೇಖಕರು ನಡೆಸಿರುವ ಹೋರಾಟದ ಚಿತ್ರವನ್ನೂ ಸಹ ನೀಡುತ್ತಿತ್ತು. ಈ ಹೋರಾಟದಲ್ಲಿ ನಮ್ಮ ಅನೇಕ ರೀಕರನ್ನು ಹಿಂದಿಕ್ಕುವ ಕಸುವನ್ನು ಸಹ ಅದು ಪ್ರಕಟಿಸಿಬಿಟ್ಟಿತ್ತು. ಇನ್ನೂ ಏನೆಲ್ಲ ಸೋಜಿಗಗಳನ್ನು ಅದು ಕಾಣಿಸುತ್ತಿತ್ತೊ ಏನೊ?

ಆದರೆ..  ಇನ್ನೂ ಇರಲಾರದೆ ಎನ್‌ಕೆ ಅವಸರಪಟ್ಟುಕೊಂಡು ಕಾಣದ ಲೋಕಕ್ಕೆ ತೆರಳಿಬಿಟ್ಟರು.

ಪ್ರಭಾಕರ್ ಎ.ಎಸ್.

ಕರ್ನಾಟಕದಲ್ಲಿ ಬಳ್ಳಾರಿ ಜಿಲ್ಲೆಯಷ್ಟು ಸಂಶೋಧನೆಗೆ ಬೇಕಾದ ಪ್ರೇರಣೆ ಕೊಡುವ ಪ್ರದೇಶ ಮತ್ತೊಂದಿಲ್ಲ ಅನಿಸುತ್ತದೆ. ಲಕ್ಷಾಂತರ ಜನ ಸೇರುವ ಮೈಲಾರ ಕೊಟ್ಟೂರು ಹಂಪಿಯ ಜಾತ್ರೆಗಳು, ಗತಕಾಲದ ಇತಿಹಾಸದ ಭಾರವನ್ನು ಹೊತ್ತಿರುವ ಹಾಗೂ ಸಮಕಾಲೀನ ರಾಜಕಾರಣದ ಆಶೋತ್ತರಗಳಿಗೆ ಆಡುಂಬೊಲವಾಗಿರುವ ಹಂಪಿ-ವಿಜಯನಗರ, ಅಳಿವಿನಂಚಿನಲ್ಲಿರುವ ದೊಡ್ಡಾಟಗಳು, ತೆಲುಗು ಸಂಕರದ ಕನ್ನಡ ಭಾಷೆ, ಬಾಲಬಸವದಂತಹ ಜನಪದ ಅನುಭಾವಿ ಪರಂಪರೆಗಳು, ಬೆಳಗಲ್ ವೀರಣ್ಣನವರಂತಹ ಜನಪದ ಕಲಾವಿದರು, ಸಂಗನಕಲ್ಲು ಇತ್ಯಾದಿ ಪ್ರಾಗೈತಿಹಾಸಿಕ ಜಾಗಗಳು, ಅಗಸನೂರಿನ ಪ್ರಸಿದ್ಧ ಮೊಹರಂ ಆಚರಣೆ, ಕೋಗಳಿ ಬಾಗಳಿ ಹಲವಾಗಿಲು, ಸೊಂಡೂರಿನ ಪ್ರಾಚೀನ ಗುಡಿಗಳು, ಉಜ್ಜನಿಯ ಮರುಳಸಿದ್ಧ ಮಠ, ದರೋಜಿ ಈರಮ್ಮಳಂತಹ ಜನಪದ ಗಾಯಕರು, ಡಿ.ದುರ್ಗಾದಾಸ್ ಜೋಳದರಾಶಿ ದೊಡ್ಡನಗೌಡ ಸುಭದ್ರಮ್ಮ ಮನಸೂರರಂತಹ ರಂಗಭೂಮಿ ಕಲಾವಿದರು, ಕುಂವಿಯಂತಹ ಕತೆಗಾರರು, ಅತಿಯಾಗಿರುವಷ್ಟು ಕೈಗಾರೀಕರಣ, ಗಣಿಮಾಫಿಯಾ ರಾಜಕೀಯ ಸಂಸ್ಕೃತಿ -ಹೀಗೆ ಇವೆಲ್ಲವೂ ಬೇರೆಬೇರೆ ಕ್ಷೇತ್ರದ ಸಂಶೋಧಕರಿಗೆ ಆಹ್ವಾನ ನೀಡುವ ಸಂಗತಿಗಳಾಗಿವೆ. ಇಂತಹ ಪರಿಸರವಿರುವುದರಿಂದಲೊ ಏನೊ, ಅಧ್ಯಾಪನ ಕೆಲಸದಲ್ಲೇನೂ ಇರದ ಶ್ರೀ ಮುದೇನೂರ ಸಂಗಣ್ಣ, ಗುರುಮೂರ್ತಿ ಪೆಂಡಕೂರು ಮುಂತಾದವರು ಸಹ ಸಂಶೋಧನೆಯ ಕೆಲಸ ಮಾಡಿದರು. ವಿಶೇಷವೆಂದರೆ, ಈ ಭಾಗದ ಹೊಸ ತಲೆಮಾರಿನವರಿಗೆ ಸಂಶೋಧನೆಯಲ್ಲಿ ತೊಡಗಲು ಪ್ರೇರಣೆ ಸಿಕ್ಕಿದ್ದು, ಇದೇ ಜಿಲ್ಲೆಗೆ ಸೇರಿದ ಪ್ರಸಿದ್ಧ ಇತಿಹಾಸ ಸಂಶೋಧಕರಾದ ಎಸ್.ಶೆಟ್ಟರ್ ಅವರಿಂದಲ್ಲ; ಬದಲಿಗೆ ಬೆಳಗಾವಿ ಜಿಲ್ಲೆಯಿಂದ ಅಧ್ಯಾಪಕ ವೃತ್ತಿಗಾಗಿ ವಲಸೆ ಬಂದಂತಹ ಬಸವರಾಜ ಮಲಶೆಟ್ಟಿ ಮತ್ತು ಎಸ್.ಎಸ್. ಹಿರೇಮಠ ಅವರಿಂದ. ಇವರಿಬ್ಬರೂ ಆಕಸ್ಮಿಕವೆಂಬಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನವರು. ಪ್ರೊ. ಹಿರೇಮಠ ಅವರು ಇಲ್ಲಿನ ಜಾನಪದ ಜಾತ್ರೆ ಶಾಸನಗಳ ಮೇಲೆ ಸಂಶೋಧನೆಗೆ ಸ್ವತಃ ತೊಡಗಿದರು ಮಾತ್ರವಲ್ಲ, ತಮ್ಮ ಸಂಶೋಧನೆಯ ಹುಚ್ಚನ್ನು ಶಿಷ್ಯರಿಗೂ ಹತ್ತಿಸಿದರು. ಪಾಂಡಿತ್ಯವೂ ಜನಪರ ಹೋರಾಟಗಳೂ ಒಟ್ಟಿಗೆ ಬೆಸೆದುಕೊಳ್ಳುವ ಆಕ್ವಿವಿಸ್ಟ್ ಮಾದರಿಯೊಂದನ್ನು ಅವರು ರೂಪಿಸಿದರು. ಈ ಮಾದರಿಯನ್ನು ಅವರ ಶಿಷ್ಯರಲ್ಲಿ ಕೆಲವರಷ್ಟೇ ಮುಂದುವರೆಸಿದರು. ಅವರಲ್ಲಿ ತರುಣ ವಿದ್ವಾಂಸರಲ್ಲಿ ಒಬ್ಬರಾಗಿರುವ ಎ.ಎಸ್. ಪ್ರಭಾಕರ್ ಒಬ್ಬರು.

ಪ್ರಭಾಕರ್ ಪುಸ್ತಕಹರಪನಹಳ್ಳಿ ತಾಲೂಕಿನ ಒಂದು ಪುಟ್ಟಗ್ರಾಮದಿಂದ ಪ್ರಭಾಕರ್, ತಮ್ಮ ಗುರುವಿನ ತರಹ ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿದ್ದುಕೊಂಡೇ, ಸಮಾಜವಿಜ್ಞಾನದ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಹೊರಳಿಕೊಂಡವರು. ಕರ್ನಾಟಕ ಇತಿಹಾಸ ಸಂಶೋಧನೆಗಳಲ್ಲಿ ಮೊದಲಿನಿಂದಲೂ ಸಾಹಿತ್ಯದ ಹಿನ್ನೆಲೆಯವರು ಮುಂಚೂಣಿಯಲ್ಲಿ ಇರುವುದು ಸರ್ವವಿದಿತ. ಈಚೆಗೆ ಕನ್ನಡ ಸಾಹಿತ್ಯದ ಹಿನ್ನೆಲೆಯವರು ಮಾನವಶಾಸ್ತ್ರ ಜಾನಪದ ಸಮಾಜವಿಜ್ಞಾನ ಹಾಗೂ ಬುಡಕಟ್ಟು ಅಧ್ಯಯನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪ್ರವೇಶಿಸುತ್ತಿದ್ದಾರೆ. ಮಾತ್ರವಲ್ಲ, ಈ ಶಿಸ್ತುಗಳನ್ನು ಶಾಸ್ತ್ರಬದ್ಧವಾಗಿ ಕಲಿತವರಿಗಿಂತ ಭಿನ್ನಬಗೆಯಲ್ಲಿ ಕೆಲಸವನ್ನೂ ಮಾಡುತ್ತಿದ್ದಾರೆ. ಪ್ರಭಾಕರ್ ಈ ಸಾಲಿನಲ್ಲಿ ಸೇರುವಂಥವರು.

ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದಲ್ಲಿ ಅಧ್ಯಾಪಕರಾಗಿರುವ ಪ್ರಭಾಕರ್, ತಮ್ಮನ್ನು ಬುಡಕಟ್ಟು ಸಂಶೋಧನೆಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರು ‘ಬುಡಕಟ್ಟು ಅಧ್ಯಯನ’ ಪತ್ರಿಕೆಯನ್ನು ಚೆನ್ನಾಗಿ ಸಂಪಾದನೆ ಮಾಡಿದ್ದಾರೆ; ಮೂರು ಕೃತಿಗಳನ್ನು ಪ್ರಕಟಿಸಿದ್ದಾರೆ. ಅವೆಂದರೆ- ೧. ಮ್ಯಾಸಬೇಡರ ಕಥನಗಳು (೧೯೯೯). ಇದು ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡರು ಹಾಡುವ ಹಾಡುಗಳ ಸಂಗ್ರಹ; ೨. ಬುಡಕಟ್ಟು ಬದುಕಿನ ಸ್ಥಿತ್ಯಂತರಗಳು (೨೦೦೦). ಇದು ಅವರ ಬುಡಕಟ್ಟು ಅಧ್ಯಯನ ಕುರಿತ ಲೇಖನಗಳ ಸಂಗ್ರಹ; ೩. ಬುಡಕಟ್ಟು ಅಭಿವೃದ್ಧಿ ಮೀಮಾಂಸೆ (೨೦೦೪). ೪. ಆದಿವಾಸಿ ಆಖ್ಯಾನ (೨೦೦೬) ಇದು ಬುಡಕಟ್ಟು ಅಧ್ಯಯನಗಳಿಗೆ ಸಂಬಂಧಿಸಿದಂತೆ ಬೇರೆಬೇರೆಯವರು ಬರೆದ ಲೇಖನಗಳುಳ್ಳ ಒಂದು ಆಕರಗ್ರಂಥ. ೫. ಡೊಂಬರು: ಒಂದು ಚಾರಿತ್ರಿಕ ಹಿನ್ನೋಟ (೨೦೦೬) ಇದು ಸಮುದಾಯವೊಂದರ  ಬಾಳಿನ ಕಥನ.

ಇವಲ್ಲದೆ ಪ್ರಭಾಕರ್ ಅವರು ಮಹತ್ವದ ಲೇಖನಗಳನ್ನು ಪ್ರಕಟಿಸಿದ್ದಾರೆ. ಇವುಗಳಲ್ಲಿ ಆದಿವಾಸಿಗಳ ಮೇಲೆ ಅಂಬೇಡ್ಕರ್ ಮಾಡಿರುವ ಚಿಂತನೆ, ಕರ್ನಾಟಕದ ಅಲೆಮಾರಿ ಸಮುದಾಯಗಳ ಶಾಪಗ್ರಸ್ತ ಪಯಣ, ಬಂಗಾಳದ ಲೇಖಕಿ ಮಹಾಶ್ವೇತಾದೇವಿಯವರ ಆದಿವಾಸಿಪರ ಹೋರಾಟಗಳು, ಚಿಂತನೆ, ಭಾರತ ಸರ್ಕಾರದ ಆದಿವಾಸಿ ನೀತಿ ಹಾಗೂ ಕರ್ನಾಟಕದ ಆದಿವಾಸಿ ರೈತಹೋರಾಟಗಳ ಸ್ವರೂಪ ಕುರಿತ ಲೇಖನಗಳು ಸೇರಿವೆ. ಇವುಗಳಲ್ಲೆಲ್ಲ ಸಮುದಾಯ ಅಧ್ಯಯನಗಳಲ್ಲಿ ಒಳಗಿನವರಾಗಿ ಪ್ರವೇಶಿಸುವುದು ಹೇಗೆ ಎಂಬ ವಿಷಯ ಕುರಿತು ಚರ್ಚೆ ಮಾಡಿರುವ ಲೇಖನ ಮುಖ್ಯವಾಗಿದೆ. ಈ ಎಲ್ಲ ಲೇಖನಗಳು ಸಂಕಲನಗೊಂಡು ಪುಸ್ತಕರೂಪದಲ್ಲಿ ಬಂದರೆ, ಅವು ಪ್ರಭಾಕರ್ ಎಂತಹ ಗಂಭೀರ ಮತ್ತು ಪ್ರಾಮಾಣಿಕ ವಿದ್ವಾಂಸ ಎಂಬುದು ಮತ್ತಷ್ಟು ರುಜುವಾತಾಗುತ್ತದೆ.

ಕನ್ನಡದಲ್ಲಿ ತಮ್ಮನ್ನು ನಿರ್ದಿಷ್ಟ ಕ್ಷೇತ್ರಕ್ಕೆ ಸೀಮಿತಗೊಳಿಸಿಕೊಂಡು ಫೋಕಸ್ಸಾದ ಅಧ್ಯಯನಗಳನ್ನು ಮಾಡುವ ಪ್ರವೃತ್ತಿ ಕಡಿಮೆಯಾಗುತ್ತಿರುವ ಹೊತ್ತಲ್ಲಿ, ಪ್ರಭಾಕರ್ ಬುಡಕಟ್ಟು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅದಕ್ಕೆ ತಮ್ಮನ್ನು ಮೀಸಲಿರಿಸಿಕೊಂಡಿದ್ದಾರೆ. ಬುಡಕಟ್ಟು ಅಧ್ಯಯನವು ಮೇಜಿನ ಮುಂದೆ ಕುಳಿತು ಮಾಡುವಂತಹದ್ದಲ್ಲ. ಅದು ಆಕರ್ಷಕವಾಗಿರುವಷ್ಟೇ ಕಠಿಣವಾಗಿದೆ. ಅದು ಸಮುದಾಯಗಳ ಜತೆ ನೇರ ಒಡನಾಟವನ್ನು ಅಪೇಕ್ಷಿಸುತ್ತದೆ. ತಿರುಗಾಟವನ್ನು ಬೇಡುತ್ತದೆ. ಈ ತೊಡಕಿನ ಹಾದಿಯನ್ನು ಬೇಕೆಂದೇ ಆರಿಸಿಕೊಂಡಿರುವ ಪ್ರಭಾಕರ್ ಕರ್ನಾಟಕದ ಬುಡಕಟ್ಟು ಹಾಡಿಗಳನ್ನೆಲ್ಲ ತಿರುಗಾಡಿದ್ದಾರೆ; ಹಾಲಕ್ಕಿಗಳು, ಹಕ್ಕಿಪಿಕ್ಕಿಯರು, ಜೇನುಕುರುಬರು, ಕಾಡುಕುರುಬರು, ಗೌಡ್ಲುಗಳು, ಹಸಲರು ಮುಂತಾದ ಸಮುದಾಯಗಳ ಜತೆ ಒಡನಾಟ ಇಟ್ಟುಕೊಂಡಿದ್ದಾರೆ.

ಪ್ರಭಾಕರ್ ಬರೆಹಗಳಲ್ಲಿ ವ್ಯಾಪಕ ಓದಿನಿಂದ ಒದಗಿ ಬಂದಿರುವ ವಿದ್ವತ್ತು ಎದ್ದುಕಾಣುತ್ತದೆ. ಆದರೆ ಇಲ್ಲಿನ ವಿದ್ವತ್ತಿಗಿಂತ ಮುಖ್ಯವಾಗಿರುವುದು ಬುಡಕಟ್ಟು ಸಮುದಾಯಗಳ ವರ್ತಮಾನದ ತಲ್ಲಣಗಳನ್ನು ಕುರಿತು ಅವರಿಗಿರುವ ಕಾಳಜಿ; ಜನರ ಭವಿಷ್ಯತ್ತನ್ನು ಕಟ್ಟುವ ಕುರಿತು ಅವರಿಗಿರುವ ಕನಸು. ಈ ಹಿನ್ನೆಲೆಯಲ್ಲಿ ಪ್ರಭಾಕರ್ ಅವರಿಗೆ ಸಂಶೋಧನೆಯು ವೃತ್ತಿ ಅಥವಾ ಹವ್ಯಾಸದ ಸಂಗತಿಯಲ್ಲ; ಅದು ಸಾಮಾಜಿಕ ಬದ್ಧತೆಯ ವಿಷಯವಾಗಿದೆ. ಈ ಮಾತನ್ನು ಕೊಂಚ ವಿವರಿಸಬೇಕು.

ಕರ್ನಾಟಕ ಬುಡಕಟ್ಟು ಅಧ್ಯಯನ ಕ್ಷೇತ್ರದಲ್ಲಿ ಇರುವ ಮುಖ್ಯ ಸಮಸ್ಯೆಯೆಂದರೆ, ಅಲ್ಲಿ ಬಳಕೆಯಲ್ಲಿರುವ ಸಾಂಪ್ರದಾಯಕ ಅಧ್ಯಯನ ವಿಧಾನದ್ದು. ಈ ವಿಧಾನದಲ್ಲಿ ಬ್ರಿಟೀಶರು ರೂಪಿಸಿದ ಜನರನ್ನು ಅಪರಿಚಿತ ವಸ್ತುಗಳಂತೆ ನೋಡುವ ವಸಾಹತುಶಾಹಿ ಜನಾಂಗಿಕ ಗರ್ವದ ದೃಷ್ಟಿಕೋನವೂ, ಜನರನ್ನು ಅನಾಗರಿಕರು ಎಂಬಂತೆ ನೋಡುವ ಉಚ್ಚಜಾತಿಗಳ ದೃಷ್ಟಿಕೋನವೂ, ಜನರ ಅಭಿಪ್ರಾಯವನ್ನೇ ಕೇಳದೆ ಅವರ ಮೇಲೆ ಅಭಿವೃದ್ಧಿಯ ಮಾದರಿಗಳನ್ನು ಹೇರುವ ಆಧುನಿಕ ಪ್ರಭುತ್ವಗಳ ಏಕಪಕ್ಷೀಯ ನಿಲುವೂ ಒಟ್ಟಿಗೆ ಸೇರಿವೆ. ಪ್ರಭಾಕರ್ ತಮ್ಮ ಅಧ್ಯಯನಗಳ ಉದ್ದಕ್ಕೂ ಈ ಮೂರು ವಿಧಾನಗಳಲ್ಲಿರುವ ದೃಷ್ಟಿಕೋನದ ಜತೆ ತಾತ್ವಿಕ ಸಂಘರ್ಷ ಮಾಡುತ್ತಾರೆ. ಇವುಗಳ ಒಳಗಿರುವ ಅಮಾನುಷ ಧೋರಣೆಗಳನ್ನು ಹೊರಗೆಳೆಯುತ್ತಾರೆ. ಇವುಗಳಿಗೆ ಪರ್ಯಾಯವಾದ ಅಧ್ಯಯನ ವಿಧಾನವನ್ನು ರೂಪಿಸಲು ಯತ್ನಿಸುತ್ತಾರೆ. ಅಧ್ಯಯನಗಳಲ್ಲಿ ಪರ್ಯಾಯ ಅಧ್ಯಯನ ವಿಧಾನ ಹುಡುಕುವುದು ಕೇವಲ ಅಕಡಮಿಕ್ ಚಟುವಟಿಕೆಯಲ್ಲ. ಅದು ಮನುಷ್ಯರ ನೋವುನಲಿವುಗಳನ್ನು ಸಂಗಾತಿಯಾಗಿ ಅನುಭವಿಸುವ ಹೊಸತತ್ವದ ಹುಡುಕಾಟ ಕೂಡ.

ಪ್ರಭಾಕರ್ ಪುಸ್ತಕಇದರ ಜತೆಗೆ ಪ್ರಭಾಕರ್, ‘ನಮ್ಮ ಪರಂಪರೆ ಸಂಸ್ಕೃತಿಯ ವೈವಿಧ್ಯತೆ ಉಳಿಯಬೇಕು’ ಎಂದು ಪ್ರತಿಪಾದಿಸುವ ಪ್ರಗತಿಪರ ಸಂಸ್ಕೃತಿ ಚಿಂತಕರನ್ನು ವಿಮರ್ಶೆಗೆ ಒಳಪಡಿಸುತ್ತಾರೆ. ತಮ್ಮ ಕುಲಕಸುಬಿನ ಕಾರಣಕ್ಕಾಗಿಯೇ ಹೀನಾಯವಾದ ಸಾಮಾಜಿಕ ಅವಮಾನ ಅನುಭವಿಸುತ್ತಿರುವ ಸಮುದಾಯಗಳು, ತಮ್ಮ ಪಾರಂಪರಿಕ ವೃತ್ತಿಗಳ ಕುರಿತು ಏನೆಂದು ಭಾವಿಸಿವೆ ಎಂಬ ಪ್ರಾಥಮಿಕ ಪ್ರಶ್ನೆಯನ್ನು ಕೇಳಿಕೊಳ್ಳದೆ, ತಮ್ಮ ಫರ್ಮಾನುಗಳನ್ನು ಹೇರುವ ಚಿಂತಕರ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇದನ್ನು ಬುದ್ಧಿಜೀವಿಗಳ ಮೂಲಭೂತವಾದ ಎಂದು ಸಹ ಕರೆಯುತ್ತಾರೆ. ಹೀಗೆ ಮೂಲಭೂತ ಪ್ರಶ್ನೆಗಳನ್ನು ಎತ್ತಲು ಮತ್ತು ಆಕ್ರೋಶ ವ್ಯಕ್ತಮಾಡಲು ಕಾರಣಗಳೆಂದರೆ- ಪ್ರಭಾಕರ್ ಅವರಿಗೆ ಸಮುದಾಯಗಳ ಸಂಸ್ಕೃತಿಯ ಅನನ್ಯತೆಗಿಂತ ಅವುಗಳ ಅಸ್ತಿತ್ವ ಮತ್ತು ಸ್ವಾಭಿಮಾನದ ಪ್ರಶ್ನೆ ಮುಖ್ಯವಾಗಿರುವುದು; ಸಮುದಾಯಗಳ ಬದುಕಿನಲ್ಲಿ ಅರ್ಥಪೂರ್ಣವಾದ ಸಾಮಾಜಿಕ ಆರ್ಥಿಕ ಬದಲಾವಣೆಗಳು ಸಂಭವಿಸಬೇಕು ಎಂಬ ಒತ್ತಾಸೆ ಇರುವುದು; ಸ್ವತಃ ಅವರು ಕರ್ನಾಟಕದ ಮೈಕ್ರೊಸ್ಕೋಪಿಕ್ ಗಾತ್ರವೂ ದಮನಿತವೂ ಆದ ಒಂದು ಸಮುದಾಯದಿಂದ ಬಂದಿರುವುದು ಕೂಡ.

ಸಮಾಜವಿಜ್ಞಾನದ ಅನೇಕ ವಿದ್ವಾಂಸರು ಇವತ್ತು ಕನ್ನಡದಲ್ಲಿ ಬರೆಯಲು ಯತ್ನಿಸುತ್ತಿದ್ದಾರೆ. ಅವರ ಚಿಂತನೆಗಳು ಆರೋಗ್ಯಕರವಾಗಿವೆ. ಆದರೆ ಅವರಲ್ಲಿ ಅನೇಕರಿಗೆ ಸರಳವಾಗಿ ಅರ್ಥವಾಗುವ ಮತ್ತು ಓದುಗರ ಜತೆ ಸಂವಾದ ಮಾಡಬಲ್ಲ ಭಾಷೆಯನ್ನು ರೂಪಿಸಿಕೊಳ್ಳಲು ಆಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಭಾಕರ್ ತಮ್ಮ ಬರೆಹದಲ್ಲಿ ರೂಢಿಸಿಕೊಂಡಿರುವ ಭಾಷೆಯು ಸ್ಪಷ್ಟತೆ ಮತ್ತು ಸರಳತೆಯಿಂದ ಕೂಡಿದ್ದು ಪರಿಣಾಮಕಾರಿಯಾಗಿದೆ. ಆದರೆ ಅತಿದೀರ್ಘತೆ ಇವರ ಲೇಖನಗಳ ಒಂದು ಲಕ್ಷಣವಾಗಿವೆ. ಇದು ಅಧ್ಯಯನದ ವಿಸ್ತಾರವನ್ನು ಸೂಚಿಸುವ ಅಂಶವಾಗಿದೆ. ಆದರೂ ತಮ್ಮ ದೀರ್ಘತೆಯ ಕಾರಣದಿಂದಲೇ ಈ ಲೇಖನಗಳು ಗಂಭೀರ ಓದುಗರ ಸೊತ್ತಾಗಿ ಉಳಿದುಬಿಡುವ ಸಾಧ್ಯತೆಯಿದೆ. ಜೀವಂತ ಸಮುದಾಯಗಳ ಬಾಳಿಗೆ ನೇರವಾಗಿ ಸಂಬಂಧಿಸಿದ ಉರಿಯುವ ಸಮಸ್ಯೆಗಳನ್ನು ಚರ್ಚಿಸುವ ಎಲ್ಲರೂ, ತಮ್ಮ ವಿದ್ವತ್‌ವಿಶ್ಲೇಷಣೆಗಳ ಜತೆಯಲ್ಲಿ, ತಮ್ಮ ಚಿಂತನೆಯನ್ನು ಪುಟ್ಟ ಬರೆಹಗಳ ರೂಪದಲ್ಲಿ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟಿಸುವ ಅಗತ್ಯವೂ ಇದೆ. ಅಂತಹ ಪುಟ್ಟಲೇಖನಗಳು ಸಕಾಲಿಕವಾಗಿರುತ್ತವೆ ಮತ್ತು ಕೂಡಲೇ ಜನಾಭಿಪ್ರಾಯ ರೂಪಿಸುತ್ತವೆ.

ಕರ್ನಾಟಕದಲ್ಲಿ ಬಹಳ ಕೆಲಸ ಆಗಬೇಕಿರುವ ಕ್ಷೇತ್ರಗಳಲ್ಲಿ ಬುಡಕಟ್ಟು ಅಧ್ಯಯನವೂ ಒಂದು. ಬುಡಕಟ್ಟುಗಳು ಸೀಮಿತ ಪ್ರದೇಶಕ್ಕೆ ಬದ್ಧವಾಗಿ ವಾಸಿಸುವ ಸಮುದಾಯಗಳಾದರೆ, ಅವರನ್ನು ಕುರಿತ ಅಧ್ಯಯನಗಳು ಜಾಗತಿಕ ನೆಲೆಯವಾಗಿವೆ. ಇದೊಂದು ಬಗೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಿಳುವಳಿಕೆ ಹಂಚಿಕೊಳ್ಳುವ ಕ್ಷೇತ್ರ. ಈ ಹಿನ್ನೆಲೆಯಿಂದ ಜಗತ್ತಿನ ಅನೇಕ ವಿದ್ವಾಂಸರ ಚಿಂತನೆಯ ಜತೆಗೆ ಸಂಶೋಧಕರು ಒಡನಾಡಲು ಮಾಡಿರುವ ಯತ್ನವನ್ನು ಗಮನಿಸಬಹುದು. ಆದರೆ ಪ್ರಭಾಕರ್ ಚರ್ಚಿಸುವ ಚಿಂತಕರಲ್ಲಿ ಇಷ್ಟಪಟ್ಟು ಒಪ್ಪುವ ಮತ್ತು ಇಷ್ಟಪಡದೆ ನಿರಾಕರಿಸುವ ಎರಡು ವಿಭಾಗಗಳಿವೆ. ಅವರು ತಮಗೆ ಪ್ರಿಯವಾದ ಚಿಂತಕರನ್ನು ಮನಸಾ ಒಪ್ಪಿಕೊಂಡು ಅವರ ಆಲೋಚನೆಗಳನ್ನು ಪರಿಚಯಿಸುತ್ತಾರೆ ಮತ್ತು ಅವನ್ನು ವಿಸ್ತರಿಸುತ್ತಾರೆ. ಆದರೆ ಅವರ ಜತೆ ಭಿನ್ನಮತವಿಟ್ಟುಕೊಂಡು ಜಗಳಕ್ಕೆ ತೊಡಗುವುದಿಲ್ಲ. ಆದರೆ ತಮ್ಮ ಪ್ರಿಯ ಚಿಂತಕರಲ್ಲೂ ಇರುವ ಸಮಸ್ಯೆಗಳನ್ನು ಗುರುತಿಸುವ ಮತ್ತು ವಿಮರ್ಶಿಸುವ ಎಚ್ಚರವನ್ನು ಪಡೆದುಕೊಳ್ಳುವುದು ಕೂಡ ಸಂಶೋಧನೆಯಲ್ಲಿ ಮುಖ್ಯವಾದುದು. ಪ್ರಭಾಕರ್ ಬರೆಹದಲ್ಲಿ ಸ್ಥಾಪಿತ ಸಂಪ್ರದಾಯವಾದಿ ಚಿಂತನೆಗಳ ವಿರುದ್ಧ ಮಾಡಿರುವ ಕಟುಟೀಕೆ ಸಾಕಷ್ಟಿವೆ. ಇದು ಹೊಸದನ್ನು ಹುಟ್ಟಿಸುವ ಎಲ್ಲರೂ ಮಾಡಬೇಕಾದ ಕೆಲಸ. ಆದರೆ ನಿರಾಕರಿಸುವ ಕೆಲಸದಷ್ಟೇ ಪ್ರಮಾಣದಲ್ಲಿ ಪರ್ಯಾಯ ಚಿಂತನೆಗಳನ್ನು ಮುಂದಿಡುವ ಕೆಲಸ ನಡೆಯದೆ ಹೋದರೆ, ಅದೊಂದು ನೇತ್ಯಾತ್ಮಕ ಬರೆಹವಾಗಿಬಿಡುತ್ತದೆ. ದಂಗೆಗಳಿಗೆ ಅರ್ಥ ಬರುವುದು ಬದಲಿಗಳನ್ನು ಮಂಡಿಸುವುದರ ಮೂಲಕವೇ ಹೊರತು ಕೇವಲ ಪ್ರತಿರೋಧದಿಂದಲ್ಲ.

ಪ್ರಭಾಕರ್ ಎ.ಎಸ್.ಈ ಹೊತ್ತು ಭಾರತದ ನಾಗರಿಕ ಸಮಾಜದ ಅತಿಹೆಚ್ಚು ದೌರ್ಜನ್ಯಕ್ಕೆ ಒಳಗಾಗಿರುವುದು ಕಾಡು, ನದಿ ಮತ್ತು ಆದಿವಾಸಿಗಳು. ಉಳ್ಳವರಿಗೆ ತನ್ನದನ್ನು ಬಿಟ್ಟುಕೊಡುವ ಉದ್ಯಮನೀತಿ, ಪ್ರವಾಸನೀತಿ, ಗಣಿನೀತಿ, ಅರಣ್ಯನೀತಿಗಳು ಆದಿವಾಸಿಗಳ ಬಾಳನ್ನು ಕಂಗೆಡಿಸಿಬಿಟ್ಟಿವೆ. ಕರ್ನಾಟಕದಲ್ಲಿಯೇ ಉತ್ತರಕನ್ನಡ ಮಲೆನಾಡುಗಳ ಆದಿವಾಸಿ ಬದುಕು ಅತಂತ್ರವಾಗಿದೆ. ಅವರು ಹೋರಾಟವನ್ನೂ ಮಾಡುತ್ತಿದ್ದಾರೆ. ಅವರ ಹೋರಾಟಗಳನ್ನು ಪ್ರಭುತ್ವ ಹತ್ತಿಕ್ಕುತ್ತಿದೆ. ಇಂತಹ ವಿಷಮ ಸನ್ನಿವೇಶದಲ್ಲಿ ಬುಡಕಟ್ಟು ಅಧ್ಯಯನಕಾರರ ಮುಂದೆ ಇರುವುದು ಅಧ್ಯಯನ ಮಾಡುವ ವಸ್ತುಗಳಲ್ಲ; ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಜೀವಂತ ಜನರು. ಈ ವಾಸ್ತವವೇ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಮುಂದೆ ಇರುವ ವಿಪುಲ ಅವಕಾಶ ಮತ್ತು ಸವಾಲಾಗಿದೆ. ಪ್ರಭುತ್ವ ಮತ್ತು ಅದರ ಅಭಿವೃದ್ಧಿ ನೀತಿಗಳ ವಿಮರ್ಶಕರೂ ರಾಜಕೀಯ ಪ್ರಜ್ಞೆಯುಳ್ಳವರೂ ಆದ ಪ್ರಭಾಕರ್ ತರಹದ ಚಿಂತಕರು ಈ ಸವಾಲನ್ನು ಕೈಗೆತ್ತಿಕೊಳ್ಳುತ್ತಿರುವುದು ಉಚಿತವಾಗಿದೆ.