ಮಲೆನಾಡಿನ ಊರುಗಳಲ್ಲಿ ಬಾಳೆಹಣ್ಣನ್ನು ಅಕ್ಕಿಯೊಂದಿಗೆ ರುಬ್ಬಿ ರೊಟ್ಟಿ, ದೋಸೆ, ಸುಟ್ಟೇವು ಎನ್ನುವ ತಿಂಡಿಗಳನ್ನು ಮಾಡುತ್ತಾರೆ. ಬಾಳೆಹಣ್ಣಿನ ರೊಟ್ಟಿ, ದೋಸೆಗಳೆಂದರೆ ಹಿರಿಯರಿಂದ ಕಿರಿಯರವರೆಗೆ ಪ್ರಿಯವಾದ ತಿಂಡಿ. ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಎರಡು ಹೊಟ್ಟೆ. ಬಾಳೆಹಣ್ಣಿನ ಕಡುಬು ಹಲಸಿನಹಣ್ಣಿನ ಕಡುಬಿನಷ್ಟೆ ರುಚಿಯಾದ ಸಿಹಿತಿಂಡಿ. ಬಾಳೆಹಣ್ಣು ಸೇರಿಸಿ ಒತ್ತು ಶಾವಿಗೆ ಮಾಡುವುದೂ ಇದೆ. ಈಗಿನಂತೆ ತರಾವರಿ ತಿಂಡಿ ತಿನಿಸುಗಳು ಸುಲಭವಾಗಿ ದೊರೆಯದ ದಿನಗಳವು. ಮನೆಯಲ್ಲಿ ಬಾಳೆಗೊನೆ ನೇತುಹಾಕಿರುವುದು ಕಂಡರೆ ಅಮ್ಮಂದಿರನ್ನು ಗೋಳುಹೊಯ್ಯುತ್ತಿದ್ದೆವು. ದೋಸೆ ಅಥವಾ ರೊಟ್ಟಿ ಮಾಡು ಎಂದು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹನ್ನೊಂದನೆಯ ಕಂತಿನಲ್ಲಿ ಬಹುಪಯೋಗಿ ಬಾಳೆಯ ಕುರಿತ ಬರಹ ನಿಮ್ಮ ಓದಿಗೆ

ಸರ್ವೋಪಯೋಗಿ, ಸರ್ವಕಾಲಕ್ಕೂ ಯೋಗ್ಯ, ಎಲ್ಲ ಕಾಲದಲ್ಲಿಯೂ ಲಭ್ಯ ಮುಂತಾಗಿ ನಾವು ಯಾವುದ್ಯಾವದೋ ವಸ್ತುಗಳಿಗೆ ಬಳಸುವುದಿದೆ.  ಆದರೆ ಕೆಲವೇ ವಸ್ತುಗಳು ಇಂತಹ ಪದಪ್ರಯೋಗಗಳಿಗೆ ಯೋಗ್ಯವಾಗಿರುತ್ತವೆ. ಉದಾ; ಬಾಳೆ. ಬಾಳೆಯ ಗಿಡ ಅಥವಾ ಮರದಿಂದ ಹಿಡಿದು ಅದರ ಕಾಯಿ, ಹಣ್ಣು, ದಿಂಡು, ಗೊನೆ, ಅದರ ಹೂವು/ಮೂತಿ ಎಲ್ಲವೂ ಬಳಸಲು ಯೋಗ್ಯವಾದವು.  ಅದು ಸರ್ವ ಋತುವಿನಲ್ಲಿಯೂ ಸಿಗುವ ಫಲ. ಬಾಳೆಹಣ್ಣು ಸೇರುವುದಿಲ್ಲ ಎನ್ನುವವರು ನನ್ನ ಅನುಭವಕ್ಕಂತೂ ಬಂದಿಲ್ಲ. ಇದು ಸರ್ವರಿಗೂ ಇಷ್ಟವಾದ ಹಣ್ಣೂ ಹೌದು.
ಹಾಗಾದರೆ ಬಾಳೆ ಎನ್ನುವುದು ಒಂದೇ ಬಗೆಯದೇ ಅಂದರೆ ಹೌದು, ಅಲ್ಲ ಎರಡೂ ನಿಜ. ಹಲವು ಬಗೆಯ ಬಾಳೆ ಜಾತಿಗಳಿವೆ. ನಾವು ಚಿಕ್ಕವರಿರುವಾಗ ನಮಗೆ ಗೊತ್ತಿದ್ದುದು ರಸಬಾಳೆ, ಮಿಟ್ಲಬಾಳೆ, ಹೂಬಾಳೆ, ಬೂದಿಬಾಳೆ, ಕರಿಬಾಳೆ, ಚಂದ್ರಬಾಳೆ, ಶಾನುಬಾಳೆ ಮತ್ತು ಕಲ್ಲುಬಾಳೆ.  ಇತ್ತೀಚಿನ ವರ್ಷಗಳಲ್ಲಿ ಇನ್ನೂ ಹಲವು ಬಗೆಯ ಬಾಳೆಗಳನ್ನು ಬೆಳೆಯಲಾಗುತ್ತಿದೆ.  ಮುಖ್ಯವಾಗಿ ಬಾಳೆಯನ್ನು ಬೆಳೆಯುವುದು ಹಣ್ಣಿಗೋಸ್ಕರವೇ ಆದರೂ ವಿಶೇಷ ದಿನಗಳಲ್ಲಿ ಬಾಳೆ ಎಲೆಯ ಬಳಕೆಯೂ ಹೆಚ್ಚಾಗಿಯೇ ಆಗುತ್ತಿದೆ. ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಊಟಕ್ಕೆ ಬಾಳೆ ಎಲೆಯನ್ನೇ ಬಳಸುತ್ತಿದ್ದರು. ಹಾಗಾಗಿ ʻಬಾಳೆ ಎತ್ತೋ ಗುಂಡ ಎಂದರೆ ಉಂಡವರು ಎಷ್ಟು ಜನʼ ಎನ್ನುವ ಗಾದೆ ಹುಟ್ಟಿಕೊಂಡಿರಬೇಕು.


ಬಾಳೆ ಎನ್ನುವ ಸಸ್ಯವು ಎಷ್ಟೊಂದು ಬಗೆಯಲ್ಲಿ ಉಪಯೋಗಿ. ಈಗ ಬಾಳೆಲೆಯ ವಿಷಯಕ್ಕೆ ಬರೋಣ. ಅದು ಊಟಕ್ಕಷ್ಟೆ ಬಳಕೆಯಾಗುತ್ತಿರಲಿಲ್ಲ, ಅದರಿಂದ ದೊನ್ನೆಯನ್ನು ತಯಾರಿಸಿ ಬಳಸುತ್ತಿದ್ದರು. ಈಗಿನಂತೆ ಪ್ಲಾಸ್ಟಿಕ್‌ ಲೋಟ ಅಥವಾ ಸ್ಟೀಲಿನ ಲೋಟಗಳು ಇಲ್ಲದಿದ್ದಾಗ ಸಭೆ-ಸಮಾರಂಭಗಲ್ಲಿ ಸಾರು, ತಂಬುಳಿಗಳನ್ನು ಕುಡಿಯಲು, ಪಾಯಸ-ಕೀರುಗಳನ್ನು ಸವಿಯಲು ಬಾಳೆಯಿಂದ ತಯಾರಿಸಿದ ದೊನ್ನೆಯೇ ನಮಗೆ ಸಂಗಾತಿಯಾಗಿತ್ತು. ದೇವರ ಎಡೆಗೆ, ಮುತ್ತೈದೆ ಬಾಗಿನಕ್ಕೆ, ಮಡಿಯ ಕೆಲವು ಕಾರ್ಯಗಳಿಗೆ ಬಾಳೆಲೆ ತೀರ ಅಗತ್ಯವಾಗಿತ್ತು. ಹಲವು ತಿಂಡಿಗಳ ತಯಾರಿಗೆ ಇದು ಅಗತ್ಯ. ಹಲಸಿನ ಹಣ್ಣಿನ ಕಡುಬಿಗೆ, ಉದ್ದಿನ ಖಾರದ ಕಡುಬಿಗೆ, ಕಾಯಿ ಕಡುಬು ಮಾಡಲು ಬಾಳೆಲೆ ಬೇಕು. ಹಿಂದೆಲ್ಲ ಯಾವುದೇ ಹಲ್ವಗಳನ್ನು ತಯಾರಿಸಲಿ ಅದನ್ನು ಬಾಳೆಲೆಯ ಮೇಲೆಯೇ ಹರಗುತ್ತಿದ್ದರು. ಒಲೆಯ ಮೇಲೆನ ಪಾತ್ರೆಯನ್ನು ಇಳಿಸಲು ಅಮ್ಮ, ಅಜ್ಜಿಯರು ಬಾಳೆಲೆಯನ್ನು ಮಡಚಿ ಉಪಯೋಗಿಸುತ್ತಿದ್ದರು. ಕಾವಲಿಗೆ ಎಣ್ಣೆ ಉಜ್ಜಲು, ತೆಳ್ಳೇವು ಎರೆಯಲು ಬಾಳೆಲೆ ಬಳಕೆಯಾಗುತ್ತಿತ್ತು. ಈಗಲೂ ಅದಕ್ಕೆ ಒಂದಿಷ್ಟು ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇಲ್ಲಿ ಬಾಳೆಲೆಯ ಊಟ ದೊರಕುತ್ತದೆ ಎನ್ನುವ ಬೋರ್ಡ್‌ ತಗಲಿಸಿದ್ದನ್ನೂ ಕಾಣಬಹುದು.

ಹಸಿಬಾಳೆಯಷ್ಟೆ ಅಲ್ಲ, ಒಣಗಿದ ಬಾಳೆಲೆಯೂ ಬಹುಪಯೋಗಿಯೇ. ಹಿಂದೆಲ್ಲ ದೊನ್ನೆಯನ್ನು ಒಣಬಾಳೆ ಮತ್ತು ಬಾಳೆಪಟ್ಟೆ ಸೇರಿಸಿ ಸುತ್ತಿ ಕಟ್ಟಿಡುವ ರೂಢಿ ಇತ್ತು. ಉಪ್ಪನ್ನು ರವುಸದಂತೆ ಮತ್ತು ಅಕ್ಕಿ ಹುಳುಬೀಳದಂತೆ ಕಾಪಿಡಲು ಮುಡಿ ಕಟ್ಟಿಡುವ ರೂಢಿಯಿತ್ತು. ಇದಕ್ಕೆ ಒಣಗಿದ ಬಾಳೆ ಸಹಕಾರಿಯಾಗಿತ್ತು. ನಮ್ಮೂರ ಕಡೆ ಇದನ್ನು ರವುದಿ ಎಂದು ಕರೆಯುತ್ತಾರೆ. ಒಣಬಾಳೆಗೆ ಸಹಕರಿಸುತ್ತಿದ್ದುದು ಬಾಳೆನಾರು. ಬಾಳೆಯ ಗಿಡ ಗೊನೆಬಿಟ್ಟ ನಂತರದಲ್ಲಿ ಅದನ್ನು ಕಡಿದು ಬಾಳೆನಾರು ತಯಾರಿಸುವುದು ಒಂದು ಶ್ರದ್ಧೆಯ ಕೆಲಸ. ಸಾಧಾರಣವಾಗಿ ಚಳಿಗಾಲ ಮುಗಿಯುವ ಹೊತ್ತಿಗೆ ಇದನ್ನು ಮಾಡಲಾಗುತ್ತಿತ್ತು. ಆ ದಿನಗಳಲ್ಲಿ ಮಳೆಬಂದು ಬಾಳೆಪಟ್ಟೆ ಒಣಗಿಲ್ಲ ಎನ್ನುವ ಮಾತಿಗೆ ಆಸ್ಪದವಿರುತ್ತಿರಲಿಲ್ಲ. ತೋಟದಿಂದ ಕಡಿದು ತಂದಿದ್ದ ಬಾಳೆಕಂಬವನ್ನು ನಾವೆಲ್ಲ ಇಳಿಸಂಜೆಯಲ್ಲಿ ನಿಧಾನವಾಗಿ ಬಿಡಿಸಿ ಅಂಗಳದಲ್ಲಿ ಒಣಗಿಸುತ್ತಿದ್ದೆವು. ಅದಕ್ಕೆ ಇಬ್ಬರು ಬೇಕು. ಎರಡೂ ತುದಿಯಿಂದ ಅದನ್ನು ನಿಧಾನವಾಗಿ ಬಿಡಿಸುವುದು ನಾಜೂಕಿನ ಕೆಲಸ. ತುಸು ಹೆಚ್ಚುಕಡಿಮೆಯಾದರೂ ಅದು ಒಡೆದು ಇಡಿಯಾದ ಬಾಳೆಪಟ್ಟೆ ಸಿಗುವುದಿಲ್ಲ. ಹೀಗೆ ತಯಾರಾದ ಬಾಳೆನಾರು ಅಥವಾ ಪಟ್ಟೆ ಕೂಡ ಬಹಳ ಕೆಲಸಕ್ಕೆ ಸಹಾಯಕ. ಹೂವನ್ನು ಯಾವ ರೀತಿಯಲ್ಲಿ ಮಾಲೆ ಮಾಡುವುದಾದರೂ ಬಾಳೆನಾರು ಬೇಕೇಬೇಕು. ಅಂಚಿನ ನಾರು ಮಾಲೆಕಟ್ಟಲು ಬಳಕೆಯಾದರೆ ಅದಕ್ಕಿಂತ ತುಸು ದಪ್ಪವಿರುವ ನಾರು ಹೂವಿನ ದಂಡೆಯನ್ನು ಮಡುವುದಕ್ಕೆ ಬೇಕು. ಮೂರು ಎಳೆಯಲ್ಲಿ ಜಡೆ ಹೆಣೆದಂತೆ ದಂಡೆ ಕಟ್ಟುವುದು ನಾಜೂಕಿನ ಕೆಲಸ. ಮಲ್ಲಿಗೆ, ಮೊಲ್ಲೆ, ಜಾಜಿ, ನಂದಿಬಟ್ಟಲು ಹೂಗಳನ್ನು ಚಂದವಾಗಿ ಮುಡಿಗೆ ಸುತ್ತುವಂತೆ ನೇಯುವುದು ಒಂದು ಬಗೆಯಾದರೆ, ಎರಡೂ ಕಡೆಗಳಲ್ಲಿ ಹೂವನ್ನು ಸಿಕ್ಕಿಸಿ ಚಾಪೆದಂಡೆ ಅಥವಾ ಪಟಾಕಿದಂಡೆ ನೇಯುವುದು ಇನ್ನೊಂದು ಬಗೆಯದು. ಈ ರೀತಿಯ ದಂಡೆಯಿಂದ ಮೊಗ್ಗಿನ ಜಡೆಯಂತೆ  ಅಲಂಕರಿಸಿಬಹುದು. ಇವೆಲ್ಲ ಬಹಳ ತಾಳ್ಮೆಯನ್ನು ಬೇಡುತ್ತವೆ. ಮಾವಿನ ಚಂಡೆ ಪೋಣಿಸಲಿಕ್ಕೆ, ಗಿಡಗಳು ಬಾಗದಂತೆ ಕೋಲನ್ನು ನೆಟ್ಟು ಬಿಗಿಯಲು, ಅಡಿಕೆಗೆ ಹುಳಬೀಳದಂತೆ ಕೊಟ್ಟೆ ಅಥವಾ ಕರಡದಿಂದ ಅದರ ರಕ್ಷಣೆ ಮಾಡಲು ಬಾಳೆಪಟ್ಟೆಯ ಬಳಕೆ ಅನಿವಾರ್ಯ. ಅಮ್ಮಂದಿರು ಕೂದಲ ತುದಿಗೆ ಉಲ್ಲನ್ನಿನ ದಾರ ಬಳಸುತ್ತಿದ್ದರೆ ಅಜ್ಜಿಯರ ಜಡೆಯ ತುದಿಗೆ ಬಾಳೆನಾರಿನ ಗಂಟು ಇರುತ್ತಿತ್ತು.

ಬಾಳೆಯ ಮರದಿಂದ ನಾರನ್ನು ಬಿಡಿಸಿದ ಮೇಲೆ ಉಳಿದ ಬಾಳೆದಿಂಡು ಹಲವು ವಿಧದ ಅಡಿಗೆಗೆ ಉಪಯುಕ್ತ. ಅದರ ಹುಳೀರು, ಪಲ್ಯ, ಸಾಸುವೆ ಎಲ್ಲವೂ ಅಡಿಗೆಯ ಭಾಗವೇ. ಅದರಲ್ಲಿಯೂ ಹಿರಿಯರ ದಿನಗಳಲ್ಲಿ ಕೆಲವು ಕಡೆ ಇದು ಅಡಿಗೆಯ ಪಟ್ಟಿಗೆ ಸೇರಲೇಬೇಕಾದ ವ್ಯಂಜನ. ಬಾಳೆದಿಂಡಿಗೆ ಔಷಧೀಯ ಗುಣವೂ ಇದೆ ಎಂದು ಮೂತ್ರಪಿಂಡದಲ್ಲಿನ ಕಲ್ಲು ಕರಗಲು ಇದರ ರಸವನ್ನು ಕುಡಿಸುವ ರೂಢಿಯಿದೆ. ಬಾಳೆಮೂತಿಯನ್ನು(ಹೂ) ಸಹ ಅಡಿಗೆಗೆ ಬಳಸುತ್ತ ಬರಲಾಗಿದೆ. ಮೇಲಿನ ಸಿಪ್ಪೆಗಳನ್ನು ಸುಲಿದು ಒಳಗಿರುವ ಭಾಗವನ್ನು ಪಲ್ಯವಾಗಿ, ಮೊಸರು ಬಜ್ಜಿ ಮಾಡಿ ಸವಿಯುವುದನ್ನು ಮಹಿಳೆಯರು ಬಹಳ ಹಿಂದಿನಿಂದಲೂ ಮಾಡುತ್ತಿದ್ದಾರೆ. ಚೌತಿಹಬ್ಬಕ್ಕೆ ಚಕ್ಕುಲಿ ತಯಾರಿಸುವಾಗ, ಕೆಲವೊಮ್ಮೆ ದೋಸೆಯ ಹಿಟ್ಟನ್ನು ಸಿದ್ಧಪಡಿಸುವಾಗ ಬ್ರಾಹ್ಮಣರ ಮನೆಗಳಲ್ಲಿ ಬಾಳೆಮರದ ಬುಡದಲ್ಲಿ ಗಡಿಗೆಗಳನ್ನು ಹೂತಿಟ್ಟು ಅದರ ಬೇರಿನಿಂದ ನೀರನ್ನು ಸಂಗ್ರಹಿಸಿ ಹಿಟ್ಟನ್ನು ಕಲೆಸಲು ಉಪಯೋಗಿಸುತ್ತಿದ್ದರು. ಈ ನೀರು ಬಹಳ ತಂಪು ಎನ್ನುವುದು ಒಂದಾದರೆ ಈ ನೀರನ್ನು ಸೇರಿಸಿದರೆ ಅದು ಮುಸುರೆ ಆಗುವುದಿಲ್ಲ ಎನ್ನುವುದು ಇನ್ನೊಂದು. ಮದುವೆ, ಮುಂಜಿ, ಹಬ್ಬ, ಹರಿದಿನಗಳಲ್ಲಿ ಅಂದರೆ ಧಾರ್ಮಿಕ ಆಚರಣೆಗಳಲ್ಲಿ ಬಾಳೆಕಂದು ಬೇಕೇಬೇಕು. ಮನೆ ಬಾಗಿಲಿಗೆ ಬಾಳೆಕಂದು ಕಟ್ಟಿದರೆ ಏನೋ ವಿಶೇಷವಿದೆ ಎನ್ನುವಮಟ್ಟಿಗೆ ಅದರ ಬಳಕೆ. ಮಲೆನಾಡಿನ ಕೆಲವೆಡೆ ಮದುವೆ ಮಂಟಪವನ್ನು ಬಾಳೆಕಂಬದಿಂದ ಬಹಳ ಸುಂದರವಾಗಿ ಸಿದ್ಧಪಡಿಸುತ್ತಾರೆ.  ಇನ್ನು ಬಾಳೆಕಾಯಿ ಮತ್ತು ಹಣ್ಣು ಎಲ್ಲಕಾಲದಲ್ಲಿಯೂ ಹಲವು ರೀತಿಯಲ್ಲಿ ಬಳಕೆಯಾಗುವ ಫಲ.

ಬಾಳೆಕಾಯಿ ಉಳಿದ ತರಕಾರಿಗಳಂತೆ ಹಲವು ಬಗೆಯಲ್ಲಿ ಅಡಿಗೆಗೆ ಉಪಯುಕ್ತ. ಗಿಡದಿಂದ ಕಿತ್ತ ಮೇಲೂ ಅದನ್ನು ಕೆಲವು ದಿನಗಳ ಕಾಲ ಇಟ್ಟು ಬಳಸಬಹುದು. ʻಬದನೆಕಾಯಿ ರುಚಿ ಬೆಳೆದವ ಬಲ್ಲ, ಬಾಳೆಕಾಯಿ ರುಚಿ ರಾಜಬಲ್ಲʼ ಎನ್ನುವ ಮಾತಿದೆ. ಅಂದರೆ ಬದನೆಕಾಯಿ ಬೇಗ ಬಾಡುತ್ತದೆ, ಆದರೆ ಬಾಳೆಕಾಯಿ ಅರಮನೆ ತಲುಪುವವರೆಗೆ ಬಾಡದೆ ಇರುತ್ತದೆ. ತೋಟ ಇರುವ ಮನೆಗಳಲ್ಲಿ ಆಗಾಗ ಬಾಳೆಕಾಯಿಯ ವ್ಯಂಜನ ಊಟದ ಭಾಗವಾಗಿರುತ್ತದೆ. ಹಂಪಾಗಿರುವ (ದೋರಗಾಯಿ) ಬಾಳೆಕಾಯನ್ನು ಬಬ್ಬೂದಿಯಲ್ಲಿ ಸುಟ್ಟು ತಿನ್ನುವುದಿದೆಯಲ್ಲ ಅದರ ಗಮ್ಮತ್ತೆ ಬೇರೆ. ರಜೆಯ ದಿವಸ ಮಧ್ಯಾಹ್ನದ ಹೊತ್ತಿನಲ್ಲಿ ಹಿರಿಯರೆಲ್ಲ ಉಂಡು ಮಲಗಿರುವಾಗ ಬಚ್ಚಲೊಲೆಯ ಬಬ್ಬೂದಿಯಲ್ಲಿ ಅದನ್ನು ಸುಟ್ಟು ತಿಂದರೆ ʻಬಲ್ಲವನೆ ಬಲ್ಲ ಅದರ ಸವಿಯನ್ನುʼ ನಮ್ಮ ತಂದೆ ಬಹಳ ತಮಾಶೆಯಾಗಿ ಹೇಳುತ್ತಿದ್ದರು: ʻಏಯ್‌ ಪುರುಷೋತ್ತಮ ಯಾಕೋ ಬೆಳ್ಳಂಬೆಳಗ್ಗೆ ಬಾಳೆಕಾಯಿ ಸುಟ್ಟು ತಿನ್ನೋದು? ತಗಂಡು ಬಾ ನನಗೊಂದುʼ ಅಂತ ಅಜ್ಜನೊಬ್ಬ ಮೊಮ್ಮಗನಿಗೆ ಬೈಯ್ಯುತ್ತಿದ್ದರಂತೆ. ಈಗ ನಗರವಾಸಿಗಳಿಗೂ ಬಾಳೆಕಾಯಿ ಚಿಪ್ಸಿನ ರುಚಿ ಹತ್ತಿದೆ. ನೇಂದ್ರಬಾಳೆ ಮತ್ತು ಜಿ-ನೈನ್‌ ಬಾಳೆಯಿಂದ ತಯಾರಿಸಿದ ಚಿಪ್ಸ್‌ನ ಮುಂದೆ ಉಳಿದವು ಪೇಲವ. ʻಊರಿಗೆ ಹೋದರೆ ಬಾಳೆಕಾಯಿ ಚಿಪ್ಸ್‌ ತಂದುಕೊಡ್ತೀರಾ?ʼ ಎಂದು ಕೇಳುವವರೂ ಇದ್ದಾರೆ. ಹಿಂದೆ ಹಲಸಿನ ಹಪ್ಪಳದಂತೆ ಬಾಳೆಕಾಯಿ ಹಪ್ಪಳವನ್ನೂ ಮಾಡುತ್ತಿದ್ದರು. ಈಗೀಗ ಇದರ ಹಪ್ಪಳ ಮಾಡುವವರು ಅಪರೂಪ. ಹಲಸಿನ ಹಪ್ಪಳ ಮಾಡಿದಷ್ಟು ಸುಲಭವಲ್ಲ ಬಾಳೆಕಾಯಿಯ ಹಪ್ಪಳದ ತಯಾರಿ. ಅದನ್ನು ಬೇಯಿಸಿ ಕುಟ್ಟಿ ಹಿಟ್ಟನ್ನು ತಯಾರಿಸಬೇಕು. ಹಲಸಿನ ಹಪ್ಪಳದಂತೆ ಬಾಳೆಯ ಮೇಲೆ ಹಚ್ಚಲು ಬರುವುದಿಲ್ಲ. ಅದನ್ನು ಲಟ್ಟಿಸಿ ಒಣಗಿಸಬೇಕು. ಹಿಟ್ಟಿನ ಹದ ತುಸು ವ್ಯತ್ಯಾಸವಾದರೂ ಹರೋಹರ.

ತೋಟದಿಂದ ಕಡಿದು ತಂದಿದ್ದ ಬಾಳೆಕಂಬವನ್ನು ನಾವೆಲ್ಲ ಇಳಿಸಂಜೆಯಲ್ಲಿ ನಿಧಾನವಾಗಿ ಬಿಡಿಸಿ ಅಂಗಳದಲ್ಲಿ ಒಣಗಿಸುತ್ತಿದ್ದೆವು. ಅದಕ್ಕೆ ಇಬ್ಬರು ಬೇಕು. ಎರಡೂ ತುದಿಯಿಂದ ಅದನ್ನು ನಿಧಾನವಾಗಿ ಬಿಡಿಸುವುದು ನಾಜೂಕಿನ ಕೆಲಸ. ತುಸು ಹೆಚ್ಚುಕಡಿಮೆಯಾದರೂ ಅದು ಒಡೆದು ಇಡಿಯಾದ ಬಾಳೆಪಟ್ಟೆ ಸಿಗುವುದಿಲ್ಲ. ಹೀಗೆ ತಯಾರಾದ ಬಾಳೆನಾರು ಅಥವಾ ಪಟ್ಟೆ ಕೂಡ ಬಹಳ ಕೆಲಸಕ್ಕೆ ಸಹಾಯಕ. ಹೂವನ್ನು ಯಾವ ರೀತಿಯಲ್ಲಿ ಮಾಲೆ ಮಾಡುವುದಾದರೂ ಬಾಳೆನಾರು ಬೇಕೇಬೇಕು.

ಬೂದುಬಾಳೆ ಬೇರೆ ಉಪಯೋಗಕ್ಕೆ ಅಷ್ಟೊಂದು ಚೆನ್ನಾಗಿ ಆಗದಿದ್ದರೂ ಹಪ್ಪಳಕ್ಕೆ ಯೋಗ್ಯ. ಇತ್ತೀಚಿನ ವರ್ಷಗಳಲ್ಲಿ ಬಾಳೆಕಾಯಿ ಮೌಲ್ಯವರ್ಧನೆ ಮಾಡಿ ಬಾ.ಕಾ.ಹು. ಎಂದು (ಬಾಳೆಕಾಯಿಹುಡಿ) ಮಾರಾಟ ಮಾಡಲಾಗುತ್ತಿದೆ. ಹೀಗೆ ಸಿದ್ಧಗೊಂಡ ಬಾಳೆಕಾಯಿ ಹುಡಿಯನ್ನು ತಿಂಗಳಾನುಗಟ್ಟಲೆ ಕಾಪಿಡಬಹುದು. ಇದನ್ನು ಅಂಬಲಿ ಮಾಡಿ ಕುಡಿಯಬಹುದು. ರೊಟ್ಟಿಹಿಟ್ಟಿಗೆ ಸೇರಿಸಬಹುದು. ಹಲವು ಬಗೆಯಲ್ಲಿ ಬಳಸಬಹುದಾಗಿದೆ.

ಬಾಳೆಕಾಯಿಯ ಕೊನೆಯ ಹಂತದಲ್ಲಿ ಸಿಗುವುದು ಬಾಳೆಹಣ್ಣು. ಇದು ಅನೇಕ ಬಗೆಯಲ್ಲಿ ಬಳಸಲಾಗುವ ಹಣ್ಣು. ಆಹಾರವಾಗಿ, ಪೂಜೆಗೆ, ಉಪವಾಸಕ್ಕೆ ಎಂದು ನಮ್ಮಲ್ಲಿ ಬಳಕೆಯಾಗುತ್ತಿದೆ. ಮೂಲತಃ ಇದು ಉಷ್ಣವಲಯದ ಬೆಳೆ. ನಮ್ಮ ದೇಶದ ಎಲ್ಲ ಕಡೆ ಇದನ್ನು ಬೆಳೆಯುತ್ತಿದ್ದಾರೆ. ಯಾವುದೇ ಹಬ್ಬವನ್ನು ಬಾಳೆಹಣ್ಣು ಇಲ್ಲದೆ ಆಚರಿಸುವ ರೂಢಿಯೇ ಇಲ್ಲ. ದೇವರ ನೈವೇದ್ಯಕ್ಕೆ, ಮುತ್ತೈದೆಯರಿಗೆ ಕೊಡುವ ಅರಿಶಿನ ಕುಂಕುಮದ ಜೊತೆಗೆ ಬಾಳೆಹಣ್ಣನ್ನು ಬಳಸುತ್ತ ಬರಲಾಗಿದೆ. ಬಾಳೆಹಣ್ಣಿನ ಸೀಕರಣೆ ಅಥವಾ ರಸಾಯನ ಬಹಳ ಜನಪ್ರಿಯವಾದ ತಿನಿಸು. ರಸಾಯನ ಎಂದರೆ ಹದವಾಗಿ ಬೆರೆತದ್ದು ಎನ್ನುವ ಅರ್ಥದಲ್ಲಿ ಹಾಸ್ಯ ರಸಾಯನ ಎನ್ನುವ ಪದವೂ ಚಾಲ್ತಿಗೆ ಬಂದಿರಬೇಕು.  ಸತ್ಯನಾರಾಯಣ ಪೂಜೆಗೆ ಮಾಡುವ ಪ್ರಸಾದಕ್ಕೆ ಅಳತೆಯಂತೆ ಬಾಳೆಹಣ್ಣನ್ನು ಸೇರಿಸುತ್ತಾರೆ. ಬಾಳೆಹಣ್ಣಿನಿಂದ ಮಾಡುವ ಹಲ್ವ/ಬರ್ಫಿಗೆ ವಿಶೇಷ ಮನ್ನಣೆ. ಅದರಲ್ಲಿಯೂ ನೇಂದ್ರ ಬಾಳೆಹಣ್ಣಿನಿಂದ ಇದು ತಯಾರಾದರೆ ಅದರ ರುಚಿಯೇ ರುಚಿ.
ಮಲೆನಾಡಿನ ಊರುಗಳಲ್ಲಿ ಬಾಳೆಹಣ್ಣನ್ನು ಅಕ್ಕಿಯೊಂದಿಗೆ ರುಬ್ಬಿ ರೊಟ್ಟಿ, ದೋಸೆ, ಸುಟ್ಟೇವು ಎನ್ನುವ ತಿಂಡಿಗಳನ್ನು ಮಾಡುತ್ತಾರೆ. ಬಾಳೆಹಣ್ಣಿನ ರೊಟ್ಟಿ, ದೋಸೆಗಳೆಂದರೆ ಹಿರಿಯರಿಂದ ಕಿರಿಯರವರೆಗೆ ಪ್ರಿಯವಾದ ತಿಂಡಿ. ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಎರಡು ಹೊಟ್ಟೆ.  ಬಾಳೆಹಣ್ಣಿನ ಕಡುಬು ಹಲಸಿನಹಣ್ಣಿನ ಕಡುಬಿನಷ್ಟೆ ರುಚಿಯಾದ ಸಿಹಿತಿಂಡಿ. ಬಾಳೆಹಣ್ಣು ಸೇರಿಸಿ ಒತ್ತು ಶಾವಿಗೆ ಮಾಡುವುದೂ ಇದೆ. ಈಗಿನಂತೆ ತರಾವರಿ ತಿಂಡಿ ತಿನಿಸುಗಳು ಸುಲಭವಾಗಿ ದೊರೆಯದ ದಿನಗಳವು. ಮನೆಯಲ್ಲಿ ಬಾಳೆಗೊನೆ ನೇತುಹಾಕಿರುವುದು ಕಂಡರೆ ಅಮ್ಮಂದಿರನ್ನು ಗೋಳುಹೊಯ್ಯುತ್ತಿದ್ದೆವು. ದೋಸೆ ಅಥವಾ ರೊಟ್ಟಿ ಮಾಡು ಎಂದು. ಬೆಳಗಿನ ದೋಸೆಯೊಂದಿಗೋ ರೊಟ್ಟಿಯೊಂದಿಗೋ ರಸಾಯನ ಮಾಡುವುದೂ ಇತ್ತು.  ಕೆಲವೊಮ್ಮೆ ಸಂಜೆಹೊತ್ತಿಗೆ ಅದನ್ನು ಸೀಳಿ ಕಾವಲಿ ಮೇಲೆ ತುಪ್ಪದಲ್ಲಿ ಬೇಯಿಸಿ ಕೊಡುತ್ತಿದ್ದರು. ಬೂದುಬಾಳೆ ಹಣ್ಣಿಗೆ ಈ ಉಪಚಾರ. ಯಾಕೆಂದರೆ ಅದರ ಗೊನೆಯ ಗಾತ್ರ ಬಹಳ ದೊಡ್ಡದು. ಸುಮಾರು ನೂರೈವತ್ತರಿಂದ ಇನ್ನೂರು ಕಾಯಿವರೆಗೆ ಒಂದು ಗೊನೆಯಲ್ಲಿರುತ್ತಿತ್ತು.

ಬಾಳೆಹಣ್ಣನ್ನು ಹಾಗೆಯೇ ತಿನ್ನುವವರೂ ಸಾಕಷ್ಟು ಜನ. ಕೆಲವರಿಗೆ ಮನೆಯಲ್ಲಿ ಬಾಳೆಹಣ್ಣು ಇದೆ ಅಥವಾ ಆಗಿದೆ ಎಂದರೆ ಬೆಳಗಿನ ತಿಂಡಿಗೆ ಹಸಿವೆ ಕಡಿಮೆ. ಈಗ  ಬಾಳೆಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಕುಡಿಬಾಳೆಗಾಗಿ, ಹಣ್ಣಿಗೆ, ಬಾಳೆಕಂದು ಎಂದು  ಬೆಳೆಯುತ್ತಾರೆ. ಹಿಂದೆ ಬಾಳೆ  ವಾಣಿಜ್ಯ ಬೆಳೆಯಾಗಿರಲಿಲ್ಲ. ನಾವು ಚಿಕ್ಕವರಿರುವಾಗ ರಸಬಾಳೆ ಮತ್ತು ಹೂಬಾಳೆ, ಮೆಟ್ಲುಬಾಳೆ ಹಣ್ಣುಗಳನ್ನು ಮಾರುತ್ತಿರಲಿಲ್ಲ. ಅದು ಮನೆಬಳಕೆಗೆ. ಇಡಿಯಾಗಿ ಗೊನೆಯ ಹಣ್ಣು ಖರ್ಚಾಗುತ್ತಿರಲಿಲ್ಲ. ಬಾಳೆಹಣ್ಣನ್ನು ಉಪ್ಪು-ಖಾರದೊಂದಿಗೆ ಸವಿಯುತ್ತಿದ್ದೆವು. ಉಪ್ಪು, ಹಸಿಮೆಣಸಿನಕಾಯಿ, ನಿಂಬೆರಸ, ಕೊಬ್ಬರಿಯೆಣ್ಣೆ ಎಲ್ಲವೂ ಜೀರ್ಣಕ್ರಿಯೆಗೆ ಸಹಕಾರಿ.  ಬಾಳೆಗೊನೆಯನ್ನು ಕಾಪಾಡುವುದು ಮಾತ್ರ ಬಹಳ ಕಷ್ಟ. ಮಂಗಗಳಿಂದ ಅದನ್ನು ರಕ್ಷಿಸಿ ಮನೆಗೆ ತರುವುದು ಸವಾಲಿನದು. ನಾವು ಮನುಷ್ಯರು ಒಪ್ಪತ್ತು, ಉಪವಾಸ ಮಾಡಿದಾಗ ಬಾಳೆಹಣ್ಣು ತಿನ್ನುತ್ತೇವೆ.  ಮಚ್ಚಿಮಲೆ ಶಂಕರನಾರಾಯಣರಾವ್‌ ಅವರು ಮಂಗಗಳು ಹೇಗೆ ಉಪವಾಸ ಮಾಡಿದವು ಎನ್ನುವುದನ್ನು ʻಮಂಗಗಳ ಉಪವಾಸʼ ಎನ್ನುವ ಪದ್ಯದಲ್ಲಿ ವಿವರಿಸಿದ್ದು ಹೀಗೆ: ಬಾಳೆ ತೋಟದ ಪಕ್ಕದ ಕಾಡಿನಲ್ಲಿದ್ದ ಮಂಗಗಳು ಉಪವಾಸ ಮಾಡಲು ಮುಂದಾದವು. ʻನಾಳೆಗೆ ತಿಂಡಿಯ ಈಗಲೆ ಹುಡುಕುವʼ ಎಂದುಕೊಂಡು ತೋಟಕ್ಕೆ ಹೋಗಿ ಹಣ್ಣನ್ನು ನೋಡುತ್ತಲೇ ಬಾಯಲ್ಲಿ ನೀರೂರಿತು. ʻಸುಲಿದೇ ಇಡುವ ಆಗದೆʼ ಎನ್ನುತ್ತದೆ  ಒಂದು ಕಪಿ. ಎಲ್ಲವೂ ಹಣ್ಣನ್ನು ಸುಲಿದು ಕೈಯೊಳಗೆ ಹಿಡಿದು ಕುಳಿತವು. ಇನ್ನೊಂದು ಮರಿಕಪಿ ʻಬಾಯೊಳಗಿಟ್ಟರೆʼ ಎಂದಿತು. ಕೊನೆಯಲ್ಲಿ ʻಜಗಿದೂ ಜಗಿದೂ ನುಂಗಿದವೆಲ್ಲ ಆಗಲೆ ಮುಗಿಯಿತು ಉಪವಾಸʼ

ಆನೆಗಳಿಗಂತೂ ಬಾಳೆತೋಟ ಅಂದರೆ ಬಹಳ ಪ್ರಿಯ. ಹಾಗಾಗಿಯೇ  ʻಬಾಳ್ವೆಯ ಚೆಲ್ವನಪ್ಪ ಬನಮಂ ಕಾಡಾನೆ ಪೊಯ್ದಂತೆʼ  ಎನ್ನುತ್ತಾನೆ ಪಂಪ. ಬಾಳೆಹಣ್ಣು ಕುರಿತ ಗಾದೆಗಳು ಇವೆ. ʻಬಾಳೆಹಣ್ಣು ತಿನ್ನು ಬಾರೋ ಎಂದರೆ ಸುಲಿದು ಇಟ್ಟಿದ್ದೀಯಾ ಅಂದʼ ʻಬಾಳೆ ಪಣ್ಣದೊಂದು ರುಚಿ ನೇರಿಲ ಪಣ್ಣೊಳಗುಂಟೆʼ ʻಬಾಳೆಪಣ್ಗಿನಿದಪ್ಪುದೆಂತು ಸಹಜಂʼ ಎಂದು ಹೋಲಿಸುತ್ತಾನೆ  ನಯಸೇನ. ಅವನ ಮಾತು ಬಾಳೆಹಣ್ಣಿನ ರುಚಿಯ ಸೊಗಸನ್ನು ಕಾಣಿಸುತ್ತದೆ. ಈಗ ಬಾಳೆಹಯಣ್ಣು ಬನ್ನು, ಕೇಕ್‌, ಐಸ್‌ಕ್ರೀಮುಗಳಿಗೂ ಬಳಕೆಯಾಗುತ್ತಿದೆ.
ಬಾಳೆಯ ಎಲ್ಲ ಭಾಗಗಳು ಉಪಯುಕ್ತವೇ.  ಅವೆಲ್ಲ ಹಸಿಯಾಗಿ ಇಲ್ಲವೆ ಒಣಗಿ ಪಶು ಆಹಾರವಾಗಿ ಬಳಕೆಯಾಗುತ್ತವೆ. ಅದರ ಭಾಗಗಳನ್ನು ಕತ್ತರಿಸಿ ಗೊಬ್ಬರವಾಗಿಯೂ  ಬಳಸುತ್ತ ಬರಲಾಗಿದೆ.