ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ ಮನೆಯೇ ಕೇಂದ್ರವಾಗಿ ಇಷ್ಟು ವರ್ಷಗಳಲ್ಲಿ ನಡೆಯುತ್ತಿರುವ ನೃತ್ಯಶಾಲೆ, ಸಂಗೀತ ಶಾಲೆ, ನಾಟಕ ಶಾಲೆಯ ನೂರಾರು ಹುಡುಗ ಹುಡುಗಿಯರು ಈ ಮನೆಯ ಒಡನಾಟದಲ್ಲಿ ಬೆಳೆದಿದ್ದಾರೆ. ಮತ್ತು ಹೋರಾಟ, ಚಳುವಳಿ, ಕ್ರಾಂತಿ ಎನ್ನುವ ಕಾಮ್ರೇಡ್‌ಗಳು, ಕವಿಗಳೂ, ಲೇಖಕರು, ಪತ್ರಕರ್ತರು, ಪ್ರಗತಿಪರ ರಾಜಕೀಯ ನೇತಾರರೂ ಅಟ್ಟದ ಮೇಲಿನ ಸಭೆಗಳಿಂದಾಗಿ ಈ ಮನೆಯ ಭಾಗವಾಗಿದ್ದಾರೆ. ಅಂದಿನ ದಿನಗಳ ಈ ಮನೆಯನ್ನು ಕೆಲವು ಸ್ನೇಹಿತರು ಜಾತ್ಯಾತೀತ ಮಠವೆಂದೂ; ಅಲ್ಲಿ ನಿತ್ಯ ದಾಸೋಹವೆಂದು ನೆನಪಿಸಿಕೊಂಡು ಮಾತನಾಡುತ್ತಿದ್ದುದುಂಟು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಅಧ್ಯಾಯ ನಿಮ್ಮ ಓದಿಗೆ

ಪ್ರಿಯ ಭೂಮಿ,

ಈ ಮಣ್ಣಿನ ಬಂಡಿಯಲ್ಲಿ ಕುಳಿತು ನನ್ನ ಗುರು ಫುಕುವೋಕಾನ ಅರಸುತ್ತಾ ನನ್ನ ನಾಟಕದ ನಾಯಕಿ ವಸಂತಸೇನೆಯ ಬಳಿ ಬಂದಿದ್ದೇನೆ. ಈ ನಾಟಕ ತಾಲೀಮಿನ ಪ್ರಕ್ರಿಯೆಯ ಕಡೆಯ ದಿನಗಳಲ್ಲಿ ಒಂದು ದಿನ ರಾತ್ರಿ ಇದ್ದಕಿದ್ದಂತೆ ನಾವೆಲ್ಲರೂ ಕೂಡಿ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಈ ನಾಟಕವೂ ಒಂದು ರೀತಿ ‘ವಸಂತಸೇನೆ ಎಂಬ ನನ್ನ ಮುತ್ತಜ್ಜಿಯ ಕಥೆ’ ಎಂದೆನಿಸಿ ಕಥೆಯೊಂದು ನನಪಾಯಿತು.

ಮರುದಿನ ಬೆಳಗ್ಗೆ ನಾನು ವಸಂತಸೇನೆ, ಮದನಿಕೆ, ಮೈತ್ರೇಯ, ಸಂವಹಕ, ವರ್ಧಮಾನಕ, ಎಲ್ಲರೂ ರಂಗಮಂದಿರದ ಆವರಣದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆವು. ಆಗ ನಾನು ಅವರಿಗೆ ಈ ಕಥೆಯನ್ನು ಹೇಳಿದೆ.

(ಸತೀಶ್‌ ತಿಪಟೂರು)

‘ಸುಮಾರು ಹದಿನೇಳು ಹದಿನೆಂಟು ವರ್ಷಗಳ ಹಿಂದೆ ನಾನು ಮತ್ತು ವಾಣಿ ಮನೆಯಲ್ಲಿ ಇರುವಾಗ ಬೆಳಗ್ಗೆ ಒಂಬತ್ತು ಗಂಟೆಯ ಆಸುಪಾಸಿನ ಸಮಯದಲ್ಲಿ ಮುದುಕಿಯೊಬ್ಬರು ನಮ್ಮ ಮನೆಯ ಮುಂದಿನ ಗೇಟಿನ ಬಳಿ ನಿಂತಿದ್ದರು. ಅವರನ್ನು ನೋಡಿದರೆ ಭಿಕ್ಷೆ ಬೇಡಲು ಬಂದವರೆಂದು ಅನ್ನಿಸುತ್ತಿರಲಿಲ್ಲ. ಆದರೆ ಹಸಿದು ಆಯಾಸವಾಗಿ ಏನನ್ನೊ ಅರಸುವಂತೆ ನಿಂತಿದ್ದರು. ಸುಮಾರು ಎಂಬತ್ತರ ಅಂಚಿನಲ್ಲಿದ್ದ ಅವರನ್ನು ನಾನು ಒಳಕ್ಕೆ ಕರೆದು ಕುಳ್ಳಿರಿಸಿದೆ. ವಾಣಿ ತಿಂಡಿ, ನೀರು ಕೊಟ್ಟು ಉಪಚರಿಸಿದಳು. ಸ್ವಲ್ಪ ಸಮಯದ ಬಳಿಕ ನಾನು ಕುತೂಹಲದಿಂದ ಯಾವ ಊರಜ್ಜಿ ನಿನ್ನದು ಎಂದು ಕೇಳಿದೆ. ಸುಮಾರು ನಾಲ್ಕಾರು ಮೈಲಿ ದೂರದ ಹಳ್ಳಿಯೊಂದರ ಹೆಸರನ್ನು ಹೇಳಿದರು. ಆ ಊರು ನನ್ನ ತಾಯಿಯ ತವರೂರು ಎಂದು ಹೇಳಿದೆ. ಅಲ್ಲಿ ಯಾರ ಮನೆ, ನಿಮ್ಮ ಪೂರ್ವಿಕರು ಯಾರು ಎಂದು ಅಜ್ಜಿ ಬೆರಗಿನಿಂದ ಕೇಳಿದರು. ನಾನು ವಿವರವಾಗಿ ಎಲ್ಲವನ್ನೂ, ನಮ್ಮ ಗುರುತುಗಳನ್ನು ಹೇಳಿದೆ. ತಕ್ಷಣವೇ ತುಂಬಾ ಪರಿಚಿತರಂತೆ ನೀವು ಸುಶೀಲನ ಮಕ್ಕಳ ಎಂದು ಕೇಳಿದರು. ನಾನು ಹೌದು ಎಂದು ಹೇಳಿದೆ. ಅಜ್ಜಿ ತನ್ನ ಬಾಲ್ಯದ ನೆನಪುಗಳಿಗೆ ಮರಳಿ ನನ್ನ ತಾಯಿಯ ಅಜ್ಜಿ ನಮ್ಮ ಮುತ್ತಜ್ಜಿ ವಸಂತಸೇನೆಯ ಕಥೆಯನ್ನು ನಮಗೆ ಹೇಳಿದರು.

ಈ ಅಜ್ಜಿ ಚಿಕ್ಕ ಹುಡುಗಿಯಾಗಿದ್ದಾಗ ದೂರದಿಂದಲೇ ನಮ್ಮ ಮುತ್ತಜ್ಜಿ ವಸಂತಸೇನೆಯನ್ನು ನೋಡುತ್ತಿದ್ದರಂತೆ. ಉದ್ದಕೂದಲಿನ ಸುಂದರಿಯೊಬ್ಬಳು ಎರಡಂತಸ್ತಿನ ಮನೆಯ ತಾರಸಿಯಲ್ಲಿ ನಿಂತು ತನ್ನ ತಲೆಗೂದಲನ್ನು ಬಿಸಿಲಿಗೆ ಒಡ್ಡಿ, ಒಪ್ಪ ಮಾಡಿ ಬಾಚಿಕೊಳ್ಳುತ್ತಿದ್ದ, ಜಡೆ ಹೆಣೆದುಕೊಳ್ಳುತ್ತಿದ್ದ ದೃಶ್ಯವನ್ನು ಸಚಿತ್ರವಾಗಿ ನಮಗೆ ಕಾಣಿಸಿದ್ದರು. ಅಂದಿನ ಆ ಮನೆಯ ವೈಭವವನ್ನು ಕುದುರೆಗಳ ಮೇಲೆ ಬರುತ್ತಿದ್ದ ಅವರ ಶ್ರೀಮಂತ ಸ್ನೇಹಿತರನ್ನು, ಅವರ ಒಡವೆಗಳನ್ನು, ಆಸ್ತಿಯನ್ನು ಮುಂತಾಗಿ ಚಿಕ್ಕಂದಿನಲ್ಲಿ ತಾನು ಕಂಡಂತೆ, ಕೇಳಿದಂತೆ, ಎಲ್ಲವನ್ನೂ ನಮಗೆ ಹೇಳಿದರು. ಅಜ್ಜಿ ಹೇಳಿದಂತೆ ಅವರ ಮೈ ಮುಖಗಳಲ್ಲಿದ್ದ ಬಣ್ಣದ ಕಾಂತಿ ಮತ್ತು ಅಗಲವಾಗಿ ಹಣೆಗಿಡುತ್ತಿದ್ದ ಅವರ ರೂಪ ನಮ್ಮ ಕಲ್ಪನೆಯಲ್ಲಿ ಅಸ್ಪಷ್ಟವಾಗಿರುವುದರ ಹೊರತು ಅವರ ಯಾವ ಭಾವಚಿತ್ರಗಳೂ ನಮ್ಮ ಮನೆಯಲ್ಲಿ ಇಲ್ಲ. ನಾನು ಚಿಕ್ಕಂದಿನಲ್ಲಿರುವಾಗಲೇ ನನ್ನ ತಾಯಿ ತೀರಿಕೊಂಡದ್ದರಿಂದ ಅವರೊಂದಿಗಿನ ಒಡನಾಟದ ಕೆಲವು ನೆನಪುಗಳನ್ನು ಬಿಟ್ಟರೆ ನನ್ನ ಅಜ್ಜಿ, ಮುತ್ತಜ್ಜಿ, ಯಾರನ್ನೂ ನಾನು ನೋಡಿಲ್ಲ. ಸುಮಾರು ನೂರು ವರ್ಷಗಳ ಹಿಂದಿನ ಈ ಕಥೆಯ ಪಳಯುಳಿಕೆ ಎಂಬಂತೆ ಆಸ್ತಿಯ ಪಾಲಿನಲ್ಲಿ ಏಳೆಂಟು ಎಕರೆ ಜಮೀನು, ನಿವೇಶನಗಳು ಮತ್ತು ಒಡವೆಗಳೆಲ್ಲಾ ಅಜ್ಜಿಯಿಂದ ನನ್ನ ತಾಯಿಗೆ ಬಂದಿದ್ದವು. ನಾನು ಚಿಕ್ಕಂದಿನಲ್ಲಿ ಅಟ್ಟದ ಮೇಲಿನ ದೊಡ್ಡ ಜಾಕಾಯಿ ಪೆಟ್ಟಿಗೆಯಲ್ಲಿನ ಒಡವೆಗಳ ಬಗ್ಗೆ ಕಥೆಗಳನ್ನು ಕೇಳಿದ್ದೆ. ಮತ್ತು ನನ್ನ ತಾಯಿಯ ಬಳಿ ಇದ್ದ ಬಂಗಾರದ ನೆಕ್ಲೆಸು, ಜಡೆ ಬಿಲ್ಲೆಗಳನ್ನು ನಾನು ಮುಟ್ಟಿ ನೋಡಿದ ಸ್ಪರ್ಶದ ನೆನಪುಗಳು ನನಗಿನ್ನೂ ದಟ್ಟವಾಗಿದೆ. ಕಾಲದ ಹರಿವಿನಲ್ಲಿ ಈ ಎಲ್ಲಾ ಆಸ್ತಿ ಒಡವೆಗಳು ಕರಗಿಹೋದರೂ ಮತ್ತೊಂದು ಒಡವೆಯ ಗಂಟು ನಮಗೆ ಬಳುವಳಿಯಾಗಿ ಬಂತು.

ನನ್ನ ಮುತ್ತಜ್ಜಿ ವಸಂತಸೇನೆ ತನ್ನ ಒಬ್ಬಳೇ ಮಗಳಾದ ನನ್ನ ಅಜ್ಜಿಗೆ ‘ವಾಯಲಿನ್’ ಕಲಿಸುತ್ತಿದ್ದರಂತೆ. ಪಿಟೀಲು ರಾಮಣ್ಣ ಎಂಬುವರೊಬ್ಬರು ನನ್ನ ಅಜ್ಜಿಗೆ ಪಾಠ ಹೇಳಲು ಬರುತ್ತಿದ್ದರಂತೆ. ಮುಂದೆ ನನ್ನ ಅಜ್ಜಿ ಕಛೇರಿ ನೀಡುತ್ತಿದ್ದರೆಂದು ಕೇಳಿದ ನೆನಪು. ಈ ಅಜ್ಜಿ ಕಾಲ ಮೇಲೆ ಕಾಲು ಹಾಕಿ ಸಿಗರೇಟು ಸೇದುತ್ತಾ ಚರ್ಚಿಸುತ್ತಿದ್ದುದ್ದರ ಬಗ್ಗೆ ನಾನು ಕೇಳಿದ್ದೆ. ಅವರ ಒಬ್ಬಳೇ ಮಗಳಾದ ನನ್ನ ತಾಯಿ ಕೂಡ ದೈವ ಭಕ್ತೆಯಾಗಿದ್ದರು. ಹಲವು ಕುಸುರಿ ಕೌಶಲ್ಯಗಳಲ್ಲಿ ಪರಿಣಿತಿ ಇದ್ದವರು. ಅವರ ಆಸಕ್ತಿಯಿಂದ ಮನೆಯ ಮಕ್ಕಳಿಗೆ ಕಥಕ್ಕಳಿ, ಭರತನಾಟ್ಯ, ಮೃದಂಗ ತರಗತಿಗಳು ಚಿಕ್ಕಂದಿನಿಂದಲೇ ಸಿಕ್ಕಿತ್ತು.

ನನ್ನ ಮುತ್ತಜ್ಜಿ ವಸಂತಸೇನೆಯ ಸೋದರ ಸಂಬಂಧಿಗಳು, ಮಕ್ಕಳು, ಮರಿಮಕ್ಕಳೆಲ್ಲ ಬೆಂಗಳೂರು, ಅಮೇರಿಕಗಳಲ್ಲಿ ನೆಲೆಸಿದ್ದಾರೆ. ನನ್ನ ತಾಯಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಮೂಮರ‍್ನಾಲ್ಕು ತಲೆಮಾರಿನ ವಂಶವೃಕ್ಷ ಮುಂದೆ ಚಲಿಸಿದೆ.

ನನ್ನ ಮುತ್ತಜ್ಜಿಯಿಂದ ಆರೇಳು ತಲೆಮಾರುಗಳ ವಂಶವೃಕ್ಷದ ಕಥೆಯನ್ನು ನಾನು ನಿನಗೆ ಹೇಳಬೇಕು. ‘ವಸಂತಸೇನೆ ಎಂಬ ರೂಪಕದ ವಂಶವೃಕ್ಷ ಹಲವು ಕವಲಾಯಿತೋ ಅಥವಾ ಈ ಭೂಮಿಯ ತೋಟದಲ್ಲಿ ಹಲವು ಜಾತಿಯ ಗಿಡ, ಮರ, ಬಳ್ಳಿಗಳು ಒಂದಕ್ಕೊಂದು ಭಾವನಾತ್ಮಕ ಸಂಬಂಧಗಳಲ್ಲಿ ಬೆಸೆದುಕೊಂಡವೋ ಅಂತು ಈ ಕುಟುಂಬ ಹಲವು ಜಾತಿ, ಧರ್ಮ, ಸಂಸ್ಕೃತಿಗಳಲ್ಲಿ ತನ್ನ ಇರುವನ್ನು ಕಂಡುಕೊಂಡಿತ್ತು. ನಮ್ಮ ಮನೆಯಲ್ಲಿ ಓದಿಕೊಂಡು ಬೆಳೆದು ಬಾಳು ಕಂಡುಕೊಂಡ ಮನೆಯ ಮಾನಸ ಪುತ್ರಿ ಜಾಹಿಧಾ ಮತ್ತು ಅವಳ ಮಗ ಶಿವಕಬೀರನೂ ಸೇರಿದಂತೆ ಐವತ್ತರವತ್ತು ಮಂದಿ ಇರುವ ಈ ಕುಟುಂಬದ ಸರಪಳಿಯಲ್ಲಿ ಬಲಿಜ, ವಿಶ್ವಕರ್ಮ, ಸಾದರ, ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ, ಕುರುಬ, ಮಡಿವಾಳ, ಮೊದಲಿಯಾರ್, ಐಯ್ಯರ್ ಮುಂತಾಗಿ ಹತ್ತು ಹಲವು ಜಾತಿ ಧರ್ಮಗಳ ಕನ್ನಡ, ತಮಿಳು, ತೆಲುಗು, ಉರ್ದು, ಮಲೆಯಾಳಿ, ತುಳು ಭಾಷೆಗಳನ್ನಾಡುವ ವಿವಿಧ ಬಗೆಯ ಮಾಂಸಹಾರ, ಸಸ್ಯಹಾರಗಳನ್ನು ಸೇವಿಸುವ ಏಕ ರೂಪದ ಧಾರ್ಮಿಕ ಕಟ್ಟುಪಾಡುಗಳನ್ನು ಕಳಚಿಕೊಂಡ ವಿವಿಧ ಆಚಾರ ವಿಚಾರ ಸಂಸ್ಕೃತಿಗಳ ರಾಜಕೀಯ ಪಕ್ಷಪಾತಿಗಳ ಕುಟುಂಬ ಈ ಅಜ್ಜಿಯ ಮನೆ. ಈ ಅಜ್ಜಿಯರೆಲ್ಲಾ ಬಹಳ ಹಿಂದೆಯೇ ತೀರಿಕೊಂಡಿದ್ದರಿಂದ ಮತ್ತು ಸ್ವಾತಂತ್ರ್ಯ ಹೋರಾಟಗಾರರು, ಶಾಲಾ ಮಾಸ್ತರರು ಆಗಿದ್ದ ನನ್ನ ತಂದೆಯವರೇ ಈ ಕುಟುಂಬದ ಹಿರಿಯರಾಗಿ ಮನೆಯನ್ನು ಮುನ್ನಡೆಸಿದ್ದರಿಂದ ಈಗ ಅದು ಮುಂದಿನ ತಲೆಮಾರಿಗೆ ತಾತನ ಮನೆಯಾಗಿದೆ.

ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ ಮನೆಯೇ ಕೇಂದ್ರವಾಗಿ ಇಷ್ಟು ವರ್ಷಗಳಲ್ಲಿ ನಡೆಯುತ್ತಿರುವ ನೃತ್ಯಶಾಲೆ, ಸಂಗೀತ ಶಾಲೆ, ನಾಟಕ ಶಾಲೆಯ ನೂರಾರು ಹುಡುಗ ಹುಡುಗಿಯರು ಈ ಮನೆಯ ಒಡನಾಟದಲ್ಲಿ ಬೆಳೆದಿದ್ದಾರೆ. ಮತ್ತು ಹೋರಾಟ, ಚಳುವಳಿ, ಕ್ರಾಂತಿ ಎನ್ನುವ ಕಾಮ್ರೇಡ್‌ಗಳು, ಕವಿಗಳೂ, ಲೇಖಕರು, ಪತ್ರಕರ್ತರು, ಪ್ರಗತಿಪರ ರಾಜಕೀಯ ನೇತಾರರೂ ಅಟ್ಟದ ಮೇಲಿನ ಸಭೆಗಳಿಂದಾಗಿ ಈ ಮನೆಯ ಭಾಗವಾಗಿದ್ದಾರೆ. ಅಂದಿನ ದಿನಗಳ ಈ ಮನೆಯನ್ನು ಕೆಲವು ಸ್ನೇಹಿತರು ಜಾತ್ಯಾತೀತ ಮಠವೆಂದೂ; ಅಲ್ಲಿ ನಿತ್ಯ ದಾಸೋಹವೆಂದು ನೆನಪಿಸಿಕೊಂಡು ಮಾತನಾಡುತ್ತಿದ್ದುದುಂಟು. ಇದುವರೆಗೂ ಆ ಮನೆಯಲ್ಲೇ ಉಳಿದು ಈ ಎಲ್ಲದರ ಭಾಗವಾಗಿದ್ದ ನನ್ನ ಕುಟುಂಬ ಇನ್ನಷ್ಟು ಕ್ರಿಯಾಶೀಲವಾಗಲು ಏಕಾಂತ ಬಯಸಿ ದೂರದಲ್ಲಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಈ ಎಲ್ಲ ನೆನಪುಗಳನ್ನು ಹೊತ್ತು ಸದ್ಯ ಖಾಲಿಯಾಗಿರುವ ಮನೆ ಪರಿಪೂರ್ಣವಾಗಿ ಒಂದು ಸಾಂಸ್ಕೃತಿಕ ಕೇಂದ್ರವಾಗಲು, ಕೋಣೆಗಳ ಗೋಡೆಗಳನ್ನು ಕಳಚಿ ಬಯಲಾಗಲು ಕಾಲಕ್ಕೆ ತಕ್ಕಂತೆ ರೂಪ ಬದಲಿಸಿಕೊಳ್ಳಲು ಅಣಿಯಾಗುತ್ತಿದೆ.

ನಾನು ಹೇಳುತ್ತಿರುವ ವಸಂತಸೇನೆ ಎಂಬ ನನ್ನ ಮುತ್ತಜ್ಜಿಗೂ ಒಂದು ಕಾಲವಿತ್ತು. ಆ ಕಾಲದಲ್ಲಿ ಅವಳಿಗೆ ಯೌವನವಿತ್ತು, ಬಯಕೆಗಳಿತ್ತು, ಒಬ್ಬ ಚಾರುದತ್ತನೂ ಇದ್ದಿರಬಹುದು, ಅವಳಿಗೂ ಆಸ್ತಿ ಇತ್ತು, ಅಂತಸ್ತಿತ್ತು, ‘ಒಡವೆಯ ಗಂಟು’ ಇತ್ತು. ಸಂಪತ್ತನ್ನು ದೇವಸ್ಥಾನಗಳಿಗೆ ದಾನ ಮಾಡಿದ ಹಿರಿಮೆ ಇತ್ತು. ಸಂಗೀತದ ಒಲವು ಇತ್ತು. ತನ್ನ ವಶವಾಗಲಿಲ್ಲ ಎಂಬ ಕಾರಣಕ್ಕೋ, ಅಥವಾ ಸಂಪತ್ತಿನ ಆಸೆಯಿಂದಲೋ ಮದ್ದು ಮಾಟ ಮಾಡಿಸಿ ಕೊಂದರೆಂಬ ಕಥೆಯಲ್ಲಿ ಶಕಾರನೂ ಇರಬಹುದು. ಅವಳ ಮರಿಮೊಮ್ಮಗನಾದ ನಾನು ‘ವಸಂತಸೇನೆ’ಯ ನಾಟಕ ಮಾಡುವ ಹೊತ್ತಲ್ಲಿ ಪಾಪ ಹೀಗೇಕೆ ನನ್ನ ಸ್ಮೃತಿ ತೋಟದಿಂದ ಒದಗಿಬಂದಳೋ ಗೊತ್ತಿಲ್ಲ. ಬಂದವಳು ಇಷ್ಟೆಲ್ಲಾ ಕಥೆಗಳನ್ನು ನಿಮ್ಮೆದುರು ಬಿಚ್ಚಿಟ್ಟು ಮರೆಯಾದಳು. ಅವಳ ಈ ಕಥೆಯಲ್ಲಿ ಸತ್ಯವೆಷ್ಟೋ; ನಮ್ಮ ಕಲ್ಪನೆಗಳು ವಿಸ್ತರಿಸಿಕೊಂಡಿದ್ದೆಷ್ಟೋ ಗೊತ್ತಿಲ್ಲ. ಆದರೂ ಕಥೆಯ ಮೂಲಕ ಆ ‘ವಸಂತಸೇನೆ’ ನಮ್ಮ ನಾಟಕದ ‘ವಸಂತಸೇನೆ’ಗೆ ಕಿಂಚಿತ್ತಾದರೂ ನೆರವಿಗೆ ಬಂದಿದ್ದರಲ್ಲಿ ನನಗೆ ಸಂಶಯವಿಲ್ಲ. ಅದಕ್ಕಾಗಿ ಮುತ್ತಜ್ಜಿಗೆ ನನ್ನ ನಮಸ್ಕಾರಗಳು.