ವೀಸ್ಲರ್ ಸದಾ ಕಾಲ ತನ್ನ ಬೆನ್ನ ಹಿಂದೆಯೇ ಇದ್ದಾನೆ ಎನ್ನುವುದನ್ನು ಅರಿಯದ ಡ್ರೇಮನ್ ನಾಟಕ ರಚಿಸುವ ಸಲುವಾಗಿ ಅದರ ವಸ್ತುವನ್ನು ಕುರಿತಂತೆ ತನ್ನ ಸಹಪಾಠಿಗಳೊಂದಿಗೆ ಚರ್ಚಿಸುತ್ತಿರುತ್ತಾನೆ. ಆದರೆ ವೀಸ್ಲರ್‌ನ ದೃಷ್ಟಿಯಲ್ಲಿ ಡ್ರೇಮನ್ ಮಾಡುತ್ತಿರುವುದು ಹೆಸರಿಗೆ ಮಾತ್ರ. ಅವನ ಮೂಲ ಉದ್ದೇಶವೇ ಬೇರೆ ಎಂದು ಸಂದೇಹ. ಈಸ್ಟ್ ಜರ್ಮನ್ ಸಂಗತಿಗಳನ್ನು ಪಾಶ್ಚ್ಯಾತ್ಯ ದೇಶಗಳಿಗೆ ತಿಳಿಸುವ ಉದ್ದೇಶವಿದೆ ಎಂದು ವೀಸ್ಲರ್ ಗೆ ಗುಮಾನಿ.
ಎ.ಎನ್. ಪ್ರಸನ್ನ ಬರೆಯುವ ʻಲೋಕ ಸಿನಿಮಾ ಟಾಕೀಸ್ʼನಲ್ಲಿ ಜರ್ಮನಿಯ ʻದ ಲೈವ್ಸ್ ಆಫ್ ಅದರ್ಸ್ʼ ಸಿನಿಮಾದ ವಿಶ್ಲೇಷಣೆ
ಅದು ಈಸ್ಟ್ ಜರ್ಮನಿ ಕಮ್ಯುನಿಸ್ಟ್ ಆಡಳಿತದ ಅವಧಿ. ಚಿತ್ರದ ಕಥನದ ಕಾಲಮಾನ ೧೯೮೪. ಹದಿನಾರು ಮಿಲಿಯನ್ ಜನಸಂಖ್ಯೆ ಇರುವ ಅದರ ಪ್ರದೇಶದಲ್ಲಿ ಅನುಮತಿಯಿಲ್ಲದೆ ಯಾರೊಬ್ಬರ ಪ್ರವೇಶವೂ ನಿಷಿದ್ಧ. ಅದಕ್ಕಾಗಿಯೇ ನಿರ್ಮಿಸಿದ ದೊಡ್ಡ ಗೋಡೆ(ಗ್ರೇಟ್ ವಾಲ್). ತನ್ನ ಆವರಣದೊಳಗೆ ಇರುವವರೆಲ್ಲ ತನ್ನ ರಾಷ್ಟ್ರದ ಹಿತವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಒಂದೆಳೆಯ ಭಿನ್ನ ಸ್ವರೂಪದ ಕೆಲಸಗಳಲ್ಲಿ ತೊಡಗಿಕೊಳ್ಳುವುದನ್ನು ರಾಷ್ಟ್ರ ವಿರೋಧಿ ಕೆಲಸವೆಂದು ಪರಿಗಣಿಸಿ ಅತ್ಯಂತ ಘೋರ ಶಿಕ್ಷೆಗೆ ಒಳಪಡಿಸುವ ವ್ಯವಸ್ಥೆ ಅದರ ಜೊತೆಗೆ, ಜನಜೀವನದ ಸಕಲ ವಿಭಾಗಗಳಲ್ಲಿಯೂ ಶಿಸ್ತು ಮತ್ತು ನಿಯಮಗಳ ಅಳವಡಿಕೆ. ನಿಗದಿಪಡಿಸಿರುವ ರೀತಿಯಲ್ಲಿ ಎಲ್ಲ ವಿದ್ಯಮಾನಗಳು ಜರುಗಬೇಕು. ಒಟ್ಟಾರೆಯಾಗಿ ಎಲ್ಲ ಬಗೆಯ ಸ್ವಾತಂತ್ರ್ಯಕ್ಕೆ ಕಡಿವಾಣ.
ಇಂತಹ ಹಿನ್ನೆಲೆಯನ್ನು ಪರಿಕಲ್ಪಿಸಿ ಅದಕ್ಕೆ ಸಂಪೂರ್ಣ ಹೊಂದಿಕೊಳ್ಳುವ ಚಿತ್ರಕಥೆಯನ್ನು ಬರೆದು, ನಿರ್ದೇಶನ ಮಾಡಿದ ತನ್ನ ಮೊದಲನೆಯ ಚಿತ್ರ ʻದ ಲೈವ್ಸ್ ಆಫ್ ಅದರ್ಸ್ʼ ೨೦೦೭ರ ಅತ್ಯುತ್ತಮ ವಿದೇಶಿ ಚಲನಚಿತ್ರವೆಂದು ಆಸ್ಕರ್ ಪ್ರಶಸ್ತಿ ಪಡೆದ ಫ್ಲೋರಿಯನ್ ಹೆನ್‌ಕೆಲ್ ವಾನ್ ದೋನೆಸ್ ಮಾರ್ಕ್ ಅವರ ಸಾಮರ್ಥ್ಯವನ್ನು ಚಿತ್ರಾಸಕ್ತರು ಮೆಚ್ಚಿಕೊಂಡಿರುವುದು ಸಹಜವೇ. ಕಾರಣ ಈ ಚಿತ್ರ ಇಲ್ಲಿಯ ತನಕ ನಿರ್ಮಿಸಲಾದ ಪ್ರಪಂಚದ ನೂರು ಉತ್ತಮ ಚಿತ್ರಗಳಲ್ಲಿ ಒಂದೆಂದು ಮಾನ್ಯತೆ ಗಳಿಸಿದೆ. ಇದೇ ನಿರ್ದೇಶಕನ ಇತರ ಪ್ರಖ್ಯಾತ ಚಿತ್ರಗಳೆಂದರೆ ಛಿದ್ರಗೊಂಡ ಹೃದಯಗಳನ್ನು ಒಂದುಗೂಡಿಸಲು ಹೋಗಿ ತಾನೆ ಅದರೊಳಗೆ ಸಿಕ್ಕಿಹಾಕೊಳ್ಳುವ ʻದ ವಿಸಿಟ್ʼ(೨೦೧೦) ಮತ್ತು ಪೂರ್ವ ಜರ್ಮನಿಯಲ್ಲಿದ್ದ ಕಲಾವಿದನೊಬ್ಬ ಪಶ್ಚಿಮ ಜರ್ಮನಿಯಲ್ಲಿ ನೆಲೆಸಬೇಕಾಗಿ ಬಂದು ತನ್ನ ಬಾಲ್ಯದ ನೆನಪುಗಳಿಂದ ಸುತ್ತುವರಿಯಲ್ಪಡುವ ʻನೆವರ್ ಲುಕ್ ಅವೇ(೨೦೧೮).
ಅವನ ಹೆಸರು ವೀಸ್ಲರ್. ಅವನು ವೃತ್ತಿಯಲ್ಲಿ ಸ್ಟಾಸಿ ಕ್ಯಾಪ್ಟನ್. ಒಂಟಿಯಾಗಿರುವ ಅವನಿಗೆ ಅನುಮಾನ ಬಂದ ವ್ಯಕ್ತಿಗಳ ಒಳಗನ್ನು ಹೊರಹಾಕುವುದೇ ಅವನ ವೃತ್ತಿಯ ಮೂಲ. ತನ್ನ ಯೋಜನೆಯನ್ನು ಸಮರ್ಥವಾಗಿ ಪೂರೈಸುವುದೇ ಅವನ ಕ್ರಿಯಾ ವಿಧಾನ. ಅದು ಅವನಿಗೆ ಸ್ವಭಾವಕ್ಕೆ ಅನುಗುಣವಾಗಿ ಬಂದಿರುತ್ತದೆ. ಅವನು ಅನುಮಾನಿಸಿದ ವ್ಯಕ್ತಿಗಳನ್ನು ಇಂಟರ್‌ವ್ಯೂ ಮಾಡಿ ಅವರು ಎಷ್ಟೇ ಬಲವಾಗಿ ತಮ್ಮೊಳಗೆ ಸತ್ಯವನ್ನು ತಡೆಹಿಡಿದಿದ್ದರೂ ಅದನ್ನು ಹೊರಬೀಳಿಸುವ ಬಗೆಯನ್ನು ಬಲ್ಲ. ಸತ್ಯವನ್ನು ಹೊರಬೀಳಿಸುವುದಕ್ಕೆ ಅವನು ಅನುಸರಿಸುವ ವಿಧಾನದ ಸೂಕ್ಷ್ಮಗಳನ್ನು ಹೊಸದಾಗಿ ಆ ಬಗೆಯ ಕೆಲಸಕ್ಕೆ ನಿಯುಕ್ತರಾದವರಿಗೆ ವ್ಯಕ್ತಿಗಳಿಗೆ ಕಲಿಸಿ ಕೊಡುವುದು ಅವನ ಇನ್ನೊಂದು ಕೆಲಸ. ಹೀಗೆ ಕಲಿಸಿ ಕೊಡುವುದು ಕೂಡ ಒಂದು ಬಗೆಯ ವಿಶೇಷ ರೂಪದಲ್ಲಿ. ಇಂಟರ್ ವ್ಯೂ ನಡೆದಂತೆಯೇ ತೋರಿಸುವುದು ಒಂದಾದರೆ, ಪ್ರಚಲಿತದಲ್ಲಿರುವುದನ್ನು ರೆಕಾರ್ಡ್ ಮಾಡಿ ವಿವರಿಸುವುದು ಇನ್ನೊಂದು. ಈ ಎರಡನ್ನೂ ಜೊತೆಜೊತೆಯಾಗಿ ಲಘುವಿನ ವಾತಾವರಣದಲ್ಲಿ ಸಿನಿಮಾದಲ್ಲಿ ನಿರೂಪಿಸಲಾಗಿದೆ. ಇಂತಹ ಲಘುವಿನ ಪ್ರಸಂಗ ಇನ್ನೊಮ್ಮೆ ಚಿತ್ರದಲ್ಲಿರುವುದಿಲ್ಲ. ಎಲ್ಲವೂ ಗಂಭೀರ ಮತ್ತು ಕಾರ್ಯ ನಿಯೋಜಿತ.
ವೀಸ್ಲರ್‌ಗೆ ನಾಟಕ ನೋಡುವುದು ಕೂಡ ಒಂದು ಹವ್ಯಾಸ. ಅವನು ಟಿಯೋಗ್ ಡ್ರೇಮನ್ ಎಂಬಾತ ರಚಿಸಿದ ಮತ್ತು ಹೆಸರಾಂತ ಕಲಾವಿದೆ ಕ್ರಿಸ್ತಿ-ಮರೀಯಾ ನಟಿಸಿದ ನಾಟಕವನ್ನು ನೋಡಲು ಹೋಗಿರುತ್ತಾನೆ. ಆಗ ಪ್ರಾಸಂಗಿಕವಾಗಿ ಅವನಿಗೆ ಜೊತೆಗೆ ಬಂದವರಿಂದ ನಾಟಕಕಾರ ಈಸ್ಟ್ ಜರ್ಮನಿಯ ಬಗ್ಗೆ ನಿಷ್ಠೆ ಹೊಂದಿದವನು ಎನ್ನುವ ಅಭಿಪ್ರಾಯ ಕೇಳಿಬರುತ್ತದೆ. ಎಲ್ಲವನ್ನೂ ಬೇರೊಂದು ದೃಷ್ಟಿಯಿಂದಲೇ ಆಲೋಚಿಸುವ ಅವನು ಅದನ್ನು ಅಲ್ಲಗಳೆದು ಹಾಗಿರಲು ಸಾಧ್ಯವೇ ಇಲ್ಲ ಎನ್ನುವ ನಿಲುವು ಅವನದು. ಅವನಿಗೇನೋ ಗುಮಾನಿ. ಆಗಿನಿಂದಲೇ ಕಥೆಯ ಮೂಲದ ಎಳೆಗೆ ಕಥನದ ಸ್ವರೂಪ ಬೆರೆತು ಬೆಳೆಯುತ್ತದೆ. ಇಡೀ ಕಥನದಲ್ಲಿ ಅಂದಿನ ದಿನಗಳಲ್ಲಿ ಈಸ್ಟ್ ಜರ್ಮನಿಯ ಆಡಳಿತ ಪ್ರದೇಶದೊಳಗೆ ಸ್ಟಾಸಿ ಅಧಿಕಾರಿವರ್ಗದವರಿಗೆ, ಗೂಢಚಾರಿಕೆ ಮಾಡುವುದೇ ಆದ್ಯ ಕರ್ತವ್ಯ. ಹಾಗೆ ಮಾಡುವ ಪ್ರಕ್ರಿಯೆಯಲ್ಲಿ ರಾಷ್ಟ್ರವಿರೋಧಿ ಚಟುವಟಿಕೆಗಳನ್ನು ಗುರುತಿಸುವ ಮತ್ತು ಹಾಗೆ ಮಾಡುವವರ ಮರ್ಮಗಳನ್ನು ಪತ್ತೆ ಹಚ್ಚಿ, ಸರ್ಕಾರಕ್ಕೆ ತಿಳಿಸುವುದೇ ಕೆಲಸವಾಗಿರುತ್ತದೆ.
ಡ್ರೇಮನ್‌ನ ಒಳಗನ್ನು, ಅವನ ಮನಸ್ಸಿನ ಆಲೋಚನೆಗಳನ್ನು, ಕೃತ್ಯಗಳನ್ನು ಹೊರಗೆಡವಲು ವೀಸ್ಲರ್‌ನ ಮೇಲಧಿಕಾರಿಯೂ ಆಜ್ಞೆಮಾಡುತ್ತಾನೆ. ವೀಸ್ಲರ್‌ಗೆ ತನಗೆ ವಿಧಿಸಿದ ಈ ಕೆಲಸದಲ್ಲಿ ಅತೀವ ನಿಷ್ಠೆ. ಅದರಂತೆಯೇ ತಕ್ಷಣವೇ ಕಾರ್ಯಪ್ರವೃತ್ತವಾಗುವ ಅವನು ಡ್ರೇಮನ್ನಿನ ಫ್ಲಾಟಿನಲ್ಲಿರುವ ಎಲ್ಲ ಬಗೆಯ ವಿವರಗಳನ್ನು ತಿಳಿದುಕೊಳ್ಳುವ ವ್ಯವಸ್ಥೆಯನ್ನು ಹೆಣೆಯುತ್ತಾನೆ. ತನ್ನ ಸಾಧಾರಣವೆನಿಸುವ ಫ್ಲಾಟಿನಲ್ಲಿ ಕುಳಿತು, ಯಾವುದೋ ವಿಷಯದಲ್ಲಿ ಮಗ್ನನಾಗಿರುವಂತೆ ತುಂಬ ಗಂಭೀರ ವದನದಿಂದ ಕಿವಿಗೆ ಹೆಡ್ ಸೆಟ್ ಹಾಕಿಕೊಂಡು, ಒಂದಿಷ್ಟೂ ಸಮಯ ವ್ಯರ್ಥ ಮಾಡದೆ ಬರಹಗಾರ ಡ್ರೇಮನ್ ಮತ್ತು ಅವನ ಪ್ರೇಯಸಿ ಕ್ರಿಸ್ತಿ- ಮರೀಯಾ ಅವರ ಮಾತು ಮತ್ತು ಚಲನವಲನಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತಾನೆ. ಅವರಿಬ್ಬರ ನಡುವೆ ನಡೆಯುವಂಥ ವರ್ತನೆಗಳನ್ನು ನೋಡುವ, ಆಡಿದ ಮಾತುಗಳನ್ನು ಕೇಳಿಸಿಕೊಳ್ಳುವ ಪ್ರತಿಯೊಂದಕ್ಕೂ ಕೇವಲ ಕಣ್ಣಿನಿಂದಲೇ ಪ್ರತಿಕ್ರಿಯಿಸುತ್ತ ತನ್ನೆಲ್ಲ ಭಾವಗಳನ್ನು ಕುಳಿತಂತೆಯೇ ವ್ಯಕ್ತಪಡಿಸುತ್ತಿರುತ್ತಾನೆ.
ಡ್ರೇಮನ್ ಮತ್ತು ಕ್ರಿಸ್ತಿ-ಮರೀಯಾ ಆಡುವ ಪಿಸುಮಾತು ಮತ್ತು ನಡವಳಿಕೆಗಳಲ್ಲಿ ಯಾವುದಾದರೊಂದು ಬಗೆಯಲ್ಲಿ ಅನುಮಾನಿಸುವಂಥ ಸಂಗತಿ ದೊರಕಲಿ ಎಂದು ಹಂಬಲಿಸುತ್ತಾನೆ. ತನ್ನ ವೃತ್ತಿಯ ಚೌಕಟ್ಟಿನೊಳಗೆ ಸೇರುವ ಒಂದಿಷ್ಟು ಸಿಕ್ಕರೂ ಆರೋಪ ಹೊರಿಸಲು ಕಾತರನಾಗಿರುತ್ತಾನೆ. ಹೀಗೆ ಮಾಡುವುದರಲ್ಲಿಯೇ ಸಮಯ ಕಳೆಯುವ ವೀಸ್ಲರ್ ವಿಚಿತ್ರ ಬಗೆಯ ಒತ್ತಡದಲ್ಲಿ ಸಿಲುಕಿರುವವನಂತೆ ಕಾಣುತ್ತಾನೆ.
ವೀಸ್ಲರ್ ಸದಾ ಕಾಲ ತನ್ನ ಬೆನ್ನ ಹಿಂದೆಯೇ ಇದ್ದಾನೆ ಎನ್ನುವುದನ್ನು ಅರಿಯದ ಡ್ರೇಮನ್ ನಾಟಕ ರಚಿಸುವ ಸಲುವಾಗಿ ಅದರ ವಸ್ತುವನ್ನು ಕುರಿತಂತೆ ತನ್ನ ಸಹಪಾಠಿಗಳೊಂದಿಗೆ ಚರ್ಚಿಸುತ್ತಿರುತ್ತಾನೆ. ಆದರೆ ವೀಸ್ಲರ್‌ನ ದೃಷ್ಟಿಯಲ್ಲಿ ಡ್ರೇಮನ್ ಮಾಡುತ್ತಿರುವುದು ಹೆಸರಿಗೆ ಮಾತ್ರ. ಅವನ ಮೂಲ ಉದ್ದೇಶವೇ ಬೇರೆ ಎಂದು ಸಂದೇಹ. ಈಸ್ಟ್ ಜರ್ಮನ್ ಸಂಗತಿಗಳನ್ನು ಪಾಶ್ಚ್ಯಾತ್ಯ ದೇಶಗಳಿಗೆ ತಿಳಿಸುವ ಉದ್ದೇಶವಿದೆ ಎಂದು ವೀಸ್ಲರ್ ಗೆ ಗುಮಾನಿ. ಅವನು ಹೀಗೆ ಅನುಮಾನಿಸುವುದಕ್ಕೆ ಪಾಶ್ಚಾತ್ಯ ದೇಶಗಳಲ್ಲಿ ಡ್ರೇಮನ್ ಬರಹಗಳು ಒಳ್ಳೆಯ ಬಗೆಯಲ್ಲಿ ಸ್ವೀಕೃತವಾಗುತ್ತಿರುತ್ತವೆ.
ಒಂಟಿಯಾಗಿರುವ ಅವನಿಗೆ ಅನುಮಾನ ಬಂದ ವ್ಯಕ್ತಿಗಳ ಒಳಗನ್ನು ಹೊರಹಾಕುವುದೇ ಅವನ ವೃತ್ತಿಯ ಮೂಲ. ತನ್ನ ಯೋಜನೆಯನ್ನು ಸಮರ್ಥವಾಗಿ ಪೂರೈಸುವುದೇ ಅವನ ಕ್ರಿಯಾ ವಿಧಾನ. ಅದು ಅವನಿಗೆ ಸ್ವಭಾವಕ್ಕೆ ಅನುಗುಣವಾಗಿ ಬಂದಿರುತ್ತದೆ.
ಡ್ರೇಮನ್ ತಾನು ಬರೆಯಬೇಕೆಂದಿರುವ ನಾಟಕದ ವಿಷಯದ ಬಗ್ಗೆ ತನ್ನ ಪ್ರೇಯಸಿಯ ನಟನೆಯ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿದ ಸಂಗತಿಗಳು ಪ್ರಗತಿ ಹೊಂದುವ ಬಗ್ಗೆ ಆಸಕ್ತಿ ಹೊಂದಿರುತ್ತಾನೆ. ಇವಕ್ಕೆ ಪ್ರತಿಯಾಗಿ ವೀಸ್ಲರ್ ಇವೆಲ್ಲವನ್ನು ಬೇರೊಂದು ದೃಷ್ಟಿಯಿಂದಲೇ ನೋಡುತ್ತಾನೆ. ಇಷ್ಟೆಲ್ಲ ಪ್ರಯತ್ನ ಮಾಡಿದರೂ ಅವನಿಗೆ ತಾನು ಅನುಮಾನಿಸುವ ರೀತಿಯಲ್ಲಿ ಅವರ ಯಾವುದೇ ಮಾತು-ನಡೆ ಕಾಣುವುದಿಲ್ಲ.
ದಿನಗಳು ಕಳೆದಂತೆ ವೀಸ್ಲರ್‌ನ ಭಾವ ಪ್ರಕ್ರಿಯೆಯಲ್ಲಿ ತೀವ್ರತರ ಬದಲಾವಣೆಯಾಗುತ್ತದೆ. ಅವರಿಬ್ಬರ ಜೀವನ ಕ್ರಮ, ಜೀವನ ದೃಷ್ಟಿ, ಎಳ್ಳಷ್ಟೂ ತವಕ-ತಲ್ಲಣಗಳಿಗೆ ಎಡೆ ಮಾಡದ ಅವರ ಜೀವನ ವಿಧಾನ ಮುಂತಾದವುಗಳಿಂದ ವೀಸ್ಲರ್‌ಗೆ ಅವರನ್ನು ಕುರಿತು ಆಪ್ತ ಭಾವನೆ ಉಂಟಾಗುತ್ತದೆ. ಆದರೂ ಅವನು ವೃತ್ತಿ ನಿಷ್ಠೆಯ ಕಾರಣ ತನ್ನ ಕೆಲಸವನ್ನು ಮುಂದುವರಿಸುತ್ತಾನೆ.
ಈ ನಡುವೆ ವೀಸ್ಲರ್‌ನನ್ನು ಡ್ರೇಮನ್ ಬಗ್ಗೆ ವಿಚಾರಿಸುತ್ತಿದ್ದ ಅವನ ಉನ್ನತಾಧಿಕಾರಿಗೆ ಕ್ರಿಸ್ತಿನಾಳ ಮೇಲೆ ತಡೆಯಲಾರದಷ್ಟು ಮೋಹ ಉಂಟಾಗುತ್ತದೆ. ಇದರ ಪರಿಣಾಮವಾಗಿ ಅವನು ಡ್ರೇಮನ್‌ನನ್ನು ತನ್ನ ವಿರೋಧಿ ಎಂದು ಭಾವಿಸುತ್ತಾನೆ. ಹೇಗಾದರೂ ಮಾಡಿ ಡ್ರೇಮನ್‌ನನ್ನು ತನ್ನ ದಾರಿಯಿಂದ ಆಚೆ ಹೋಗುವಂತೆ ಮಾಡಬೇಕೆಂದು ಅವನಿಗೆ ತೀವ್ರವಾದ ಅಭಿಲಾಷೆಯಾಗುತ್ತದೆ. ಅದಕ್ಕೆಂದೇ ಅವನು ವೀಸ್ಲರ್ ಗೆ ಡ್ರೇಮನ್ ಮೇಲೆ ಆರೋಪ ಹೊರಿಸುವಂಥದನ್ನು ಏನಾದರೂ ಪತ್ತೆ ಹಚ್ಚಲು ಒತ್ತಾಯಿಸುತ್ತಾನೆ. ಆದರೆ ಯಾವುದೇ ರಾಷ್ಟ್ರದ್ರೋಹ ಅಥವಾ ನ್ಯಾಯ ವಿರೋಧಿ ಕುರುಹುಗಳು ಇಲ್ಲದಿರುವ, ಸಿಕ್ಕದಿರುವ ಕಾರಣ ಗೂಢಾಚಾರಿಕೆಯ ವೃತ್ತಿಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳಲು ಅವನು ಸಿದ್ಧನಿರುವುದಿಲ್ಲ. ಸಲ್ಲದ ಆರೋಪ ತನ್ನ ವೃತ್ತಿಗೆ ಅಯಕ್ತವಾದದ್ದು ಎಂದು ವೀಸ್ಲರ್‌ನ ಬದಲಾಗದ ನಿಲುವು. ಹೀಗಾಗಿ ಅವನು ಇಬ್ಬಗೆಯಲ್ಲಿ ಸಿಲುಕುತ್ತಾನೆ. ಮೇಲಧಿಕಾರಿಯದು ಒಂದಾದರೆ, ಡ್ರೇಮನ್ ಹಾಗೂ ಕ್ರಿಸ್ತಿನಾರದ್ದು ಇನ್ನೊಂದು. ಇವೆಲ್ಲವನ್ನೂ ವೀಸ್ಲರ್‌ನ ಹದವಾದ ಸೂಕ್ಷ್ಮ ಭಾವಾಭಿನಯದಿಂದ ವ್ಯಕ್ತವಾಗುತ್ತದೆ.
ಡ್ರೇಮನ್ ತನ್ನ ಬರಹಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಒಳ್ಳೆಯ ರೀತಿಯಿಂದ ಸ್ವೀಕೃತವಾಗುವ ಕಾರಣ ತಾನು ಬರೆಯುವುದು ಸ್ಥಳೀಯ ಅಧಿಕಾರಿಗಳಿಗೆ ತಿಳಿಯಬಾರದೆಂದು ಯಾರಿಗೂ ಅನುಮಾನ ಬಾರದ ಅತಿ ಸಣ್ಣ ಗಾತ್ರದ ಟೈಪ್ ರೈಟರ್ ಬಳಸುತ್ತಿರುತ್ತಾನೆ. ಅದನ್ನು ಬೇರೆ ಯಾರೂ ಊಹಿಸಲು ಸಾಧ್ಯವಾಗದಂಥ ಸ್ಥಳದಲ್ಲಿ ಬಚ್ಚಿಡುವ ಅಭ್ಯಾಸ ಅವನದು. ಆದರೆ ಇದು ತನ್ನ ಪ್ರೇಯಸಿಗೂ ಗೊತ್ತಾಗಬಾರದೆಂಬ ಅವನ ಉದ್ದೇಶ ನೆರವೇರುವುದಿಲ್ಲ. ಇವೆಲ್ಲದರ ಹಿಂದೆ ಅವನ ಮನಸ್ಸಿನಲ್ಲಿ ತಾನು ಪಾಶ್ಚಿಮಾತ್ಯ ದೇಶಗಳಿಗೆ ಸ್ವೀಕೃತ ಬರಹಗಾರನೆಂಬ ವಿಷಯ ಸ್ಥಳೀಯ ಸರಕಾರಕ್ಕೆ ತಿಳಿದು ಅದರಿಂದ ಅನಾಹುತವಾಗಬಹುದೆಂಬ ಗುಮಾನಿ ಇರುತ್ತದೆ.
ವೀಸ್ಲರ್ ಮೇಲೆ ಹೆಚ್ಚಾದ ಒತ್ತಡದ ಕಾರಣ ಕ್ರಿಸ್ತಿ-ಮರೀನಾಳನ್ನು ಇಂಟರ್‌ವ್ಯೂಗೆ ಗುರಿಪಡಿಸಿ ಅವಳಿಂದ ಏನಾದರೂ ಹೊರಗೆಡಹಲು ಸಾಧ್ಯವೇ ಎಂದು ಪ್ರಯತ್ನಿಸುತ್ತಾನೆ. ಇಂಟರ್‌ವ್ಯೂ ಮಾಡುವುದರಲ್ಲಿ ಸಿದ್ಧಹಸ್ತನಾದ ಅವನಿಗೆ ಅವಳಿಂದ ಅಪೇಕ್ಷಿತ ವಿಷಯಕ್ಕೆ ಬದಲಾಗಿ ಅವನು ಉಪಯೋಗಿಸುತ್ತಿದ್ದ ಟೈಪ್ ರೈಟರ್ ಬೇರೆಯವರಿಗೆ ಕಾಣಿಸದಂತೆ ಇರಿಸಿರುವುದರ ಕುರುಹು ಸಿಗುತ್ತದೆ. ಗೂಢಚಾರಿಕೆಗೆ ಸಂಬಂಧಪಟ್ಟಂತೆ ತಾನು ಸಫಲನಾದೆ ಎಂದು ವೀಸ್ಲರ್ ತಿಳಿದುಕೊಂಡು ಹೆಮ್ಮೆಪಟ್ಟುಕೊಂಡರೆ, ಇಂಟರ್ ವ್ಯೂನಲ್ಲಿ ತಾನು ಹೊರಹಾಕಿದ ಸಂಗತಿ ಕುರಿತಂತೆ ಆತ್ಮಸಾಕ್ಷಿಯ ಹಿಡಿತದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾಳೆ ಕ್ರಿಸ್ತಿ-ಮರೀಯಾ. ಡ್ರೇಮನ್ ತಾನು ಮೆಚ್ಚಿದ ನಾಟಕಕಾರ ಅಲ್ಲದೆ ತನಗೆ ಪ್ರಿಯತಮ. ಹೀಗಿದ್ದೂ ತಾನು ವೀಸ್ಲರ್‌ನ ಜಾಣ್ಮೆಗೆ ಸೋತು ಮುಖ್ಯ ಸಂಗತಿಯನ್ನು ಅವನಿಗೆ ತಿಳಿಸಿದ್ದರಿಂದ ತಪ್ಪಿತಸ್ಥ ಭಾವನೆ ಅವಳಿಗಾಗುತ್ತದೆ. ಅದರಿಂದ ಸಂಪೂರ್ಣ ನಲುಗಿ ಯಾರಿಗೂ ಸಂಶಯ ಬಾರದಂತೆ ತೆಗೆದುಕೊಳ್ಳುವ ಅವಳ ನಿರ್ಧಾರ ಎಂಥವರನ್ನೂ ಅಲ್ಲಾಡಿಸುತ್ತದೆ. ಅವಳ ನಿರ್ಧಾರದ ಹಿಂದಿನ ತಾತ್ವಿಕ ನಿಲುವು ಮೆಚ್ಚುಗೆ ಪಡೆಯುತ್ತದೆ. ಡ್ರೇಮನ್‌ನ ಬಗ್ಗೆ ಗೂಢಾಚಾರಿಕೆ ವಿಷಯದಲ್ಲಿ ವಿಫಲನಾದನೆಂಬ ಕಾರಣಕ್ಕೆ ವೀಸ್ಲರ್‌ನನ್ನು ಆ ಸ್ಥಾನದಿಂದ ತೆಗೆದುಹಾಕಲಾಗುತ್ತದೆ.
ಸಿನಿಮಾದ ಮುಖ್ಯ ವಿಷಯ, ಆಶಯ ಇತ್ಯಾದಿಗಳು ಒಂದು ಘಟ್ಟ ತಲುಪಿದ ಕಾರಣ ಸಹಜವಾಗಿಯೇ ಚಿತ್ರ ಕೊನೆಗೊಳ್ಳಬೇಕೆಂದು ನಿರೀಕ್ಷಿಸುವುದು ತಪ್ಪಲ್ಲ. ಆದರೆ ನಿರ್ದೇಶಕ ಹಲವು ವರ್ಷಗಳ ಕಾಲ ಮುಂದೆ ನಡೆದುದನ್ನು ನಿರೂಪಿಸುತ್ತಾನೆ.
ಇದರ ನಿರೂಪಣೆಯ ಕಾಲದಲ್ಲಿ ಬರ್ಲಿನ್ ವಾಲ್ ನಿರ್ನಾಮವಾಗಿರುತ್ತದೆ. ಜನಸಾಮಾನ್ಯರ ಬದುಕು ಬೇರೆಯೇ ನೆಲೆಯನ್ನು ತಲುಪಿರುತ್ತದೆ. ಹೀಗೆ ಉಂಟಾದ ಸಾಮಾಜಿಕ ಹರಹಿನಲ್ಲಿ ತನ್ನ ಸಾಮಾನ್ಯ ಕೆಲಸ ಮಾಡುತ್ತಾ ನಡೆಯುವ ವೀಸ್ಲರ್ ಅದೊಂದು ದಿನ ಪುಸ್ತಕದ ಅಂಗಡಿಯೊಂದರ ಮುಂದೆ ನಿಂತಾಗ ಒಳಗಡೆ ಡ್ರೈಮನ್ನ ಪುಸ್ತಕವೊಂದರ ಮುಖಪುಟದ ವಿಸ್ತೃತ ಚಿತ್ರ ಕಾಣುತ್ತದೆ. ಪುಸ್ತಕವನ್ನು ತೆಗೆದುಕೊಳ್ಳಲು ಹೋದ ಅವನಿಗೆ ನಿಜವಾಗಿಯೂ ಆಶ್ಚರ್ಯ ಕಾದಿರುತ್ತದೆ. ಕಾರಣ ʻಸೊನಾಟಾ ಫಾರ್ ಎ ಗುಡ್ ಮ್ಯಾನ್ʼ ಎಂದು ಬರೆದ ಆ ಕಾದಂಬರಿಯನ್ನು ಗೂಢಚಾರಿಕೆಯಲ್ಲಿ ವೀಸ್ಲರ್‌ಗೆ ಗೊತ್ತುಪಡಿಸಲಾಗಿದ್ದ ಗುಪ್ತವಾದ ಅಂಕೆಗೆ ಡ್ರೇಮನ್ ಅರ್ಪಿಸುತ್ತಾನೆ!
ಈ ಚಿತ್ರ ಹಲವು ಅಂಶಗಳನ್ನು ತೆರೆದಿಡುತ್ತದೆ. ಅವುಗಳಲ್ಲಿ ಮೊದಲಿಗೆ ಸರ್ಕಾರ ನಡೆಸುವ ರೀತಿ ಯಾವ ನೆಲಗಟ್ಟಿನದಾದರೂ ಕೊನೆಗೂ ಸಾಮಾನ್ಯ ಮನುಷ್ಯ ಜೀವಿಸುವ ವಿಧಾನಕ್ಕೆ ಎರವಾದರೆ, ಆ ಸರ್ಕಾರ ಅಥವಾ ರಾಷ್ಟ್ರ ಪ್ರಗತಿ ಹೊಂದುವುದು ಅಸಾಧ್ಯ ಎನ್ನುವುದನ್ನು ತಿಳಿಸುತ್ತದೆ. ಜನಸಾಮಾನ್ಯರ ಜೀವನದಲ್ಲಿ ಸರ್ಕಾರಗಳು ಯಾವ ಬಗೆಯ ಅತಿಕ್ರಮ, ಒತ್ತಡ, ಕನಿಷ್ಠ ಸ್ವಾತಂತ್ರ್ಯದ ಅಭಾವ ಉಂಟುಮಾಡಿದರೆ ಅದು ಅದಕ್ಕೇ ಎರವಾಗುತ್ತದೆ ಎನ್ನುವುದು. ಜೊತೆಗೆ ಅವರ ಭಾವನೆಗಳು, ಶಕ್ತಿ ಮತ್ತು ಒತ್ತಾಸೆಗಳು ಜೀವನ ನಡೆಸುವುದಕ್ಕೆ ಮೂಲ ನೆಲೆಯನ್ನು ಒದಗಿಸುತ್ತದೆ ಎನ್ನುವುದು. ಒಟ್ಟಾರೆಯಾಗಿ ಜನಜೀವನಕ್ಕೆ ಭಯದ ಹಿನ್ನೆಲೆ ಇದ್ದರೆ, ಒತ್ತಡವಿದ್ದರೆ ಅಥವಾ ಸರ್ಕಾರದ ಪೂರ್ವ ನಿಯೋಜಿತ ಗುರಿಯಿದ್ದರೆ ಆ ಕಡೆಗೆ ಅವರನ್ನು ಮುನ್ನಡೆಸಲು ಅಸಾಧ್ಯ ಎನ್ನುವುದನ್ನು ಪ್ರಕಟಿಸುತ್ತದೆ.
ಇಡೀ ಚಿತ್ರದಲ್ಲಿ ಎಲ್ಲಿಯೂ ಲಘುವಾದ ಅಂಶಕ್ಕೆ ಆಸ್ಪದವಿಲ್ಲ. ಹೆಚ್ಚಾದ ವರ್ತನೆಗಳಿಗೂ ಆಸ್ಪದವಿಲ್ಲದೆ ಹಲಕೆಲವು ಮಾತುಗಳು ಮತ್ತು ಸೂಚನೆಗಳಿಂದಲೇ ಗಂಭೀರ ವಿಷಯವನ್ನು ನಿರೂಪಿಸುವ ಮತ್ತು ಅದಕ್ಕೆ ಸರಿಸಾಟಿಯಾಗಿ ಅಭಿನಯಿಸಿರುವ ನಟವರ್ಗದ ಸಾಮರ್ಥ್ಯವನ್ನು ಮೆಚ್ಚಬೇಕಾಗುತ್ತದೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.
Excellent article
Namaste Prasanna Sir.
Nivu heliruva movies yelli sigutte? Nanu amazon prime, Netflix Ella hudukide. Konege DVD kuda available illa. Yelli sikkutte athva yellinda purchase madbeku please heli
ಬಹಳ ಒಳ್ಳೆಯ ಕೆಲಸ ಪ್ರಸನ್ನ ಸರ್
Complex plot explained in simple terms.