ವಿಶ್ವ ಚಿತ್ರರಂಗದಲ್ಲೇ ಹೊಸ ಸಂಚಲನ ತಂದ ಜಪಾನಿನ ಮಹಾನ್ ನಿರ್ದೇಶಕ ಅಕಿರ ಕುರೊಸವ ಹುಟ್ಟಿದ್ದು ಮಾರ್ಚ್ 23, 1910ರಂದು. ಅವಿಸ್ಮರಣೀಯ ಚಿತ್ರಗಳನ್ನು ನೀಡಿ ಚಿತ್ರರಸಿಕರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ ಕುರೊಸವ, ಈಗ ಇದ್ದಿದ್ದರೆ ನೂರು ವರ್ಷಗಳನ್ನು ಪೂರೈಸಿರುತ್ತಿದ್ದರು ಎಂದು ನೆನಪು ಮಾಡಿಕೊಂಡಿದ್ದಾರೆ ಪತ್ರಕರ್ತ, ಚಿತ್ರನಿರ್ದೇಶಕ ಎನ್.ಎಸ್.ಶಂಕರ್.
ಇಳಿ ಮಧ್ಯಾಹ್ನದ ಮಂಪರಿನಲ್ಲಿ ಆಲಸ್ಯದಿಂದ ಮರದ ಬೊಡ್ಡೆಗೊರಗಿ ನಿದ್ದೆಗೆ ಜಾರುತ್ತಿರುವ ಆ ದರೋಡೆಕೋರ. ಕಾಡನ್ನೇ ಕವಿದ ನೀರವತೆ. ಪ್ರಾಣಿ ಪಕ್ಷಿಗಳೂ ಅಲುಗಿಸದ ಮೌನ. ಆ ಜೋಂಪನ್ನು ಕದಡುವಂತೆ ಒಮ್ಮೆಲೇ ಕೇಳುವ ಕುದುರೆಯ ಖುರಪುಟಕ್ಕೆ ದರೋಡೆಕೋರ ಕಣ್ಣು ಬಿಟ್ಟು ನೋಡುತ್ತಾನೆ: ಕುದುರೆಯ ಮೇಲೆ ಶ್ವೇತ ವಸ್ತ್ರ ತೊಟ್ಟು ತನ್ನ ಮುಖವನ್ನು ಬಿಳಿ ದುಕೂಲದಿಂದ ಮರೆ ಮಾಡಿಕೊಂಡು ಕೂತ ಒಬ್ಬ ಯುವತಿ; ಮತ್ತು ಲಗಾಮು ಹಿಡಿದು ಅವಳನ್ನು ನಡೆಸಿಕೊಂಡು ಹೆಜ್ಜೆ ಹಾಕುತ್ತಿರುವ ಒಬ್ಬ ಗಂಡಸು (ಅವಳ ಗಂಡ)- ಕಾಡು ಹಾದು ಹೋಗುತ್ತಿದ್ದಾರೆ.
ದರೋಡೆಕೋರ ಕಣ್ಣು ಬಿಟ್ಟ ಆ ಗಳಿಗೆಗೇ ಸರಿಯಾಗಿ, ಯಾವ ಕಾಣದ ಕೈಯ ಸಂಚೋ ಎಂಬಂತೆ, ತಂಗಾಳಿ ಬೀಸಬೇಕೇ? ಬೀಸಿದರೆ ಬೀಸಲಿ, ಗಾಳಿಗೆ ತರುಣಿಯ ಮುಖಪರದೆ ನಸುವೇ ಸರಿಯಬೇಕೇ? ಹಾಗೆ ಪರದೆ ಸರಿದು ನೋಡಿದರೆ, ಎದೆ ಝಲ್ಲೆನ್ನುವ ಅವಳ ಚೆಲುವು! ದರೋಡೆಕೋರ ಕಣ್ಣರಳಿಸಿ ನೋಡುತ್ತಾನೆ…
ಮುಂದಕ್ಕೇನು ನಡೆಯಿತು ಎಂಬ ಬಗ್ಗೆ ಒಮ್ಮತವಿಲ್ಲ. ಒಟ್ಟಾರೆ, ಆ ಯುವತಿಯ ಅತ್ಯಾಚಾರ ನಡೆದಿದೆ, ಅವಳ ಗಂಡ ಶವವಾಗಿ ಬಿದ್ದಿದ್ದಾನೆ.
ಈ ಪ್ರಕರಣದ ವಿಚಾರಣೆ ನ್ಯಾಯಾಧೀಶನ ಮುಂದೆ ಬರುತ್ತದೆ. ಅಲ್ಲಿ ಮಂಡನೆಯಾಗುವ ಸಾಕ್ಷ್ಯಕ್ಕೆ ನಾಲ್ಕು ಮುಖ! ಮೊದಲು ದರೋಡೆಕೋರನ ಹೇಳಿಕೆ. ಅವನ ಪ್ರಕಾರ ಆ ಯುವತಿಯೇ ಅವನೆಡೆಗೆ ಆಕರ್ಷಿತಳಾಗಿ ತನ್ನ ಗಂಡನನ್ನು ಕೊಲ್ಲುವಂತೆ ಪರೋಕ್ಷ ಸೂಚನೆ ಕೊಡುತ್ತಾಳೆ. ಅದರಂತೆ ಅವಳನ್ನು ಕೂಡಿ, ಮತ್ತೆ ತಾನು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿ ಗಂಡನನ್ನು ಕೊಂದೆನೆಂಬುದು ಅವನ ವಿವರಣೆ. ಅಂದರೆ ಅಲ್ಲಿ ನಡೆದದ್ದು ಅತ್ಯಾಚಾರವಲ್ಲ, ಪ್ರಣಯಕೂಟ.
ಆದರೆ ಆ ಯುವತಿ ಹೇಳುವುದೇ ಬೇರೆ. ಜೊತೆಗೆ, ಈ ಘಟನೆಯನ್ನು ಕಣ್ಣಾರೆ ಕಂಡವನೂ ಒಬ್ಬನಿದ್ದಾನೆ- ಸೌದೆ ಕಡಿಯಲು ಕಾಡಿಗೆ ಬಂದ ಆಕಸ್ಮಿಕ ಸಾಕ್ಷಿ. ಅವನದು ಇನ್ನೊಂದೇ ಬಗೆಯ ವಿವರಣೆ. ಒಟ್ಟು ಮೂವರ ಹೇಳಿಕೆಗಳೂ ಮೂರು ಬಗೆಯಾಗಿ ಗೊಂದಲ. ಹಾಗಾದರೆ ಸತ್ಯ ನಿಷ್ಕರ್ಷ ಹೇಗೆ? ಕಡೆಗೆ ಸತ್ತವನ ಸಾಕ್ಷ್ಯದ ಮೂಲಕವಾದರೂ ಅಂತಿಮ ಸತ್ಯ ಹೊರಬರಬಹುದೇನೋ ಅಂದುಕೊಂಡು ಗಣಮಗಳನ್ನು ಕರೆಸಿ (ಪಾಶ್ಚಾತ್ಯರಲ್ಲಿ ಮೀಡಿಯಂ ಅನ್ನುತ್ತಾರಲ್ಲ, ಅದಕ್ಕೆ ನಮ್ಮ ಗ್ರಾಮೀಣರಲ್ಲಿ ಸಂವಾದಿಯಾದದ್ದು ಗಣಮಗ/ಗಣಮಗಳು) ಮಡಿದವನ ಆತ್ಮವನ್ನು ಆಹ್ವಾನಿಸುತ್ತಾರೆ. ಮತ್ತು ಆ ಆತ್ಮ ತನ್ನ ಸತ್ಯವನ್ನೂ ಹೇಳುತ್ತದೆ. ಆಗಲಾದರೂ ಎಲ್ಲ ಬಗೆಹರಿಯಿತೇ?…
ಇದು, ತನ್ನ ಸಮುರಾಯ್ ಚಿತ್ರಗಳ ಮೂಲಕ ವಿಶ್ವ ಚಿತ್ರರಂಗದಲ್ಲೇ ಹೊಸ ಸಂಚಲನ ತಂದ ಜಪಾನಿನ ಮಹಾನ್ ನಿರ್ದೇಶಕ ಅಕಿರ ಕುರೊಸವನ ಅವಿಸ್ಮರಣೀಯ ಚಿತ್ರ ರಶೊಮೊನ್ನ ಹಂದರ.
ತಾನು ಕಂಡದ್ದು ತನ್ನ ಸತ್ಯ. ತನ್ನ ಅನುಭವ, ನೆನಪುಗಳು, ಅವಮಾನಗಳು, ತನ್ನ ಅಳುಕು, ತಲ್ಲಣಗಳು… ಒಟ್ಟು ತಾನು ಕಂಡುಂಡಿದ್ದರ ಸಂಕೀರ್ಣ ಹೊರೆ ಹೊತ್ತೇ ಬದುಕುವ ಮನುಷ್ಯ, ಎಷ್ಟೇ ಪ್ರಾಮಾಣಿಕನಾಗಿ ಪ್ರಯತ್ನಿಸಿದರೂ ಶುದ್ಧ ಸತ್ಯ ಕಾಣಲಾರ ಅಥವಾ ಹೇಳಲಾರ ಎನ್ನುವುದು, ಚಿತ್ರ ಹೊರಡಿಸುವ ಹತ್ತಾರು ಇಂಗಿತಗಳಲ್ಲೊಂದು. (ದೆವ್ವವಾದ ಮಾತ್ರಕ್ಕೆ ನಿಜವನ್ನೇ ಹೇಳಬೇಕೆಂಬ ಖಾತ್ರಿಯಿದೆಯೇ ಎಂಬ, ದಿಗ್ಭ್ರಮೆ ಹುಟ್ಟಿಸುವ ಪ್ರಶ್ನೆಯೂ ಒಂದು ಹಂತದಲ್ಲಿ ಬರುತ್ತದೆ!)
ಚಿತ್ರದಲ್ಲಿ ನ್ಯಾಯಾಂಗ ವಿಚಾರಣೆಯಿದೆ. ಆದರೆ ನ್ಯಾಯಾಧೀಶ ಪ್ರೇಕ್ಷಕರ ಮುಂದೆ ಬರುವುದೇ ಇಲ್ಲ. ಈ ದೃಶ್ಯದಲ್ಲಿ ಪ್ರತಿ ಪಾತ್ರವೂ ತಾನು ಹೇಳಬೇಕಾದ್ದನ್ನು ನೇರ ಕ್ಯಾಮೆರಾಗೇ- ಅಂದರೆ ಪ್ರೇಕ್ಷಕರಿಗೇ ಒಪ್ಪಿಸುತ್ತದೆ. ಅಂದರೆ ಚಿತ್ರ ನೋಡುವ ಒಬ್ಬೊಬ್ಬ ಪ್ರೇಕ್ಷಕನೂ ಸತ್ಯದ ಈ ಗೋಜಲುಮಯ ಅನ್ವೇಷಣೆಯಲ್ಲಿ ಸ್ವತಃ ನ್ಯಾಯಾಧೀಶನಾಗಿ ತೊಡಗಿ ಯೋಚಿಸಬೇಕು ಅನ್ನುವ ತಂತ್ರ ನಿರ್ದೇಶಕನದು…
ನಾನು ಇಲ್ಲಿ ಕುರೊಸವನ ಅಸದೃಶ ತಾಂತ್ರಿಕ ಪರಿಣತಿಯ ಚರ್ಚೆಗೆ ತೊಡಗುವುದಿಲ್ಲ. ಆದರೆ ವರ್ಷಗಳ ಹಿಂದೆ ಈ ಚಿತ್ರವನ್ನು ನೋಡಿದಾಗ, ರಶೊಮೊನ್ ಒಂದೇ ಸತ್ಯದ ವಿವಿಧ ಶ್ರುತಿಗಳನ್ನು ಹಿಡಿಯುವ ಅಸಾಧಾರಣ ಗಾಥೆ ಎಂಬಷ್ಟಕ್ಕೇ ನನ್ನ ಗ್ರಹಿಕೆ ನಿಂತಿತ್ತು. ಇಲ್ಲಿ ಸತ್ಯ ಎಂಬುದಿಲ್ಲ, ಇರುವುದೆಲ್ಲ ವಾದಗಳೇ ಎಂಬಂಥ ಸರಳೀಕೃತ ತೀರ್ಮಾನವನ್ನೂ ದಾಟಿದ್ದು ಈ ತಿಳಿವು. ಆದರೆ, ಈ ಕೃತಿಯಲ್ಲಿ ಇನ್ನೂ ಗಾಢವಾದ ಗುಟ್ಟುಗಳು ಅಡಗಿವೆ ಅನ್ನುವುದು ಅರ್ಥವಾಗತೊಡಗಿದ್ದು,- ಚಿತ್ರನಿರ್ಮಿತಿ ಸಂದರ್ಭದ ಕತೆಯೊಂದು ಕಿವಿಗೆ ಬಿದ್ದಾಗ.
ಸತ್ತವನ ಆತ್ಮ ಗಣಮಗಳ ಮೂಲಕ ಬಂದು ತನ್ನ ಸಾಕ್ಷ್ಯ ನುಡಿಯಬೇಕಾದ ದೃಶ್ಯ ಚಿತ್ರಿಸುವ ಬಗ್ಗೆ ಕುರೊಸವ ತನ್ನ ಸಹಾಯಕನೊಂದಿಗೆ ಆ ದೃಶ್ಯದ ವಿವರಗಳನ್ನು ಚರ್ಚಿಸುವಾಗ ಆ ಸಹಾಯಕ ಒಪ್ಪದೆ ಬಂಡೆದ್ದನಂತೆ! ದೆವ್ವ ಎಲ್ಲಾದರೂ ಬಂದು ಸಾಕ್ಷ್ಯ ಹೇಳಲು ಸಾಧ್ಯವೇ? ಇದು ಪೂರ್ತಿ ಅವಾಸ್ತವಿಕ ಎಂಬುದು ಸಹಾಯಕನ ವಾದ.
ಅದಕ್ಕೆ ಉತ್ತರವಾಗಿ ಕುರೊಸವ ಒಂದು ಮಾತು ಹೇಳುತ್ತಾನೆ:-
ಇವನೆಂಥ ದಡ್ಡ! ಮನುಷ್ಯನ ಅಹಂಕಾರಕ್ಕೆ ಎಷ್ಟು ಶಕ್ತಿ ಇದೆಯೆಂದರೆ, ಅದು ಗೋರಿಯನ್ನೂ ಸೀಳಿಕೊಂಡು ಬರುತ್ತೆ- ನನ್ನ ಕತೆ ಹೇಳ್ತೀನಿ ಅಂತ…!
ಇದನ್ನು ಕೇಳಿದ ಕೂಡಲೇ ನಾನು ಮೂಕವಿಸ್ಮಿತನಾಗಿ, ಕುರೊಸವನ ಸರಳ ಮಾತಿನ ಹಿಂದಿನ- ಬೆಳಕಿನಂಥ ಪ್ರಕಾಂಡ ತಿಳಿವಿಗೆ ತತ್ತರಿಸಿಹೋದೆ! ಎಂಥ ಮಾತು! ಬಗೆದಷ್ಟೂ ಚಿಮ್ಮುವ,- ಅರ್ಥ ಪರಂಪರೆಯನ್ನೇ ಹೊರಡಿಸುವ ಅನುಭವಸಂಪನ್ನ ಮಿಂಚು!!
ಕೇಳಿದಾಗ ಮೊದಮೊದಲು, ಜಗತ್ತಿನ ಎಲ್ಲ ದೆವ್ವದ ಕತೆಗಳೂ ಹೀಗೇ ಹುಟ್ಟಿರಬಹುದೇ ಅನಿಸಿತು. ಇನ್ನೂ ಕೆದಕಿದರೆ, ಅಯ್ಯೋ! ಮನುಷ್ಯ ಹೆಣೆಯುವ ಎಲ್ಲ ಕಥೆ, ಕಾವ್ಯ, ಚಿತ್ರ, ನೃತ್ಯ…. ಅವನ ಒಟ್ಟು ಸೃಷ್ಟಿ ಚಿಲುಮೆಯ ಮೂಲವೇ ಇದಲ್ಲವೇ?- ಈ ಗೋರಿ ಸೀಳುವ ತವಕ ಅನ್ನಿಸತೊಡಗಿತು. ಕಡೆಗೆ ಸಂತಾನಾಪೇಕ್ಷೆಯೂ ಸೇರಿದಂತೆ, ಮನುಷ್ಯ ಅಮರನಾಗುವ ವಾಂಛೆಯ ಬೇರು ಇದೇ- ಸಾವಿನಿಂದೆದ್ದು ಬರುವ ಅಹಂಕಾರ ಎಂದು ಬೋಧೆಯಾಗತೊಡಗಿತು…
ಅಂದು ಈ ನುಡಿಯ ತೇಜಸ್ಸಿಗೆ ಚಿಗುರಿದ ನನ್ನ ವಿಸ್ಮಯ ಇನ್ನೂ ಕರಗಿಲ್ಲ!…
ಎ.ಎನ್ .ಪ್ರಸನ್ನ ಬರೆದ ಲೋಕ ಸಿನೆಮಾ ಕಥಾನಕ : ಕುರಸೋವಾರ ಸತ್ಯದ ನೆರಳುಬೆಳಕಿನಾಟ ‘ರಾಶೊಮಾನ್’
ಬರಹಗಾರ, ಚಿಂತಕ, ಪತ್ರಕರ್ತ, ಚಿತ್ರ ನಿರ್ದೇಶಕ.ಜನವಾಣಿ, ಪ್ರಜಾವಾಣಿ, ಲಂಕೇಶ್ ಪತ್ರಿಕೆ ಮುಂತಾಗಿ ಹಲವು ಸಂಸ್ಥೆಗಳಲ್ಲಿ ಪತ್ರಕರ್ತನಾಗಿ ದುಡಿಮೆ. ‘ಮುಂಗಾರು’ ದಿನಪತ್ರಿಕೆ ಹಾಗೂ ‘ಸುದ್ದಿ ಸಂಗಾತಿ’ ವಾರಪತ್ರಿಕೆಗಳ ಸಂಸ್ಥಾಪಕರಲ್ಲೊಬ್ಬರು.