ಅಕ್ಷಯಾಂಬರ

ಮೊಟ್ಟೆಯೊಡೆದ ಚಿಟ್ಟೆ
ಕನಸುಗಳ ಕಟ್ಟುತ್ತಾ ನೂಲು ಬಿಟ್ಟಿತ್ತು
ಕಣ್ಮನಗಳಲಿ ಕಾರುಣ್ಯ ಮೂಡಿ
ನೇಯ್ದ ಮೊದಲ ನೇಯ್ಗೆ
ಮಗ್ಗದಲಿ ಬಣ್ಣದ ಸೀರೆಯಾಗಿತ್ತು

ಲಟಾ ಪಟಾ, ಪಟಾ ಲಟಾ
ಮಗ್ಗದ ಸದ್ದು
ನೇಯುವವರ ಬೀದಿ ತುಂಬಾ ಆವರಿಸಿತ್ತು
ಬೆವರಲ್ಲೇ ಅದ್ದಿ ತೆಗೆದ ನೂಲುಗಳು
ಸಂಕಟವ ತೊಟ್ಟು
ಜಗದ ಬಟ್ಟೆಯಾಗಿತ್ತು

ದೇಹ ಬೇಡಿದಷ್ಟೂ ಅಳತೆ
ಉಡುವಷ್ಟು ಅಕ್ಷಯಾಂಬರ
ನೇಕಾರರ ಯಾವ ಮನೆಯಲ್ಲೂ
ಅಕ್ಷಯಪಾತ್ರೆಗಳಿಲ್ಲ
ನೇಯುವ ಮಗ್ಗ ಸುಮ್ಮನಾದರೆ
ನೇಕಾರನಿಗೆ ಅನ್ನವಿಲ್ಲ

ನಾರನ್ನು ಹೆಕ್ಕಿತಂದ ಹಕ್ಕಿಯಂತೆ
ಸಿಕ್ಕು ಸಿಕ್ಕುಗಳನ್ನು ಬಿಡಿಸಿ
ತೊಡಲು ಉಡಲು
ದೇಹವೆಂಬ ಗೂಡಿಗೆ ಬಟ್ಟೆ ನೇದ

ಸುಳ್ಳುಗಳನ್ನು ನೇಯದ
ಮಗ್ಗ ಸತ್ಯ ನುಡಿಯುತ್ತದೆ
ನೇಯುವಾಗ ನೂಲು ಬಿಟ್ಟರೆ ಬಟ್ಟೆ
ಅಂದ ಬಿಟ್ಟು ಬಂಧ ಶೂನ್ಯ
ನೇಕಾರ ಸತ್ಯವನೇ ನೇದ
ಉಟ್ಟವರು ತೊಟ್ಟವರು
ಮೆರೆದು ಮಿಂಚಿದವರು
ಸುಳ್ಳುಗಳನ್ನು ಹೇಳುತ್ತಲೇ ಇದ್ದಾರೆ