ನನ್ನದೇ ಮನೆಯೆನಸಿ
ಅವಸರದಲಿ ಒಳನುಗ್ಗಿದೆ
ತುದಿಗೋಡೆಯ ಕಿಟಕಿ ನೇರದ
ಕುರ್ಚಿಗಂಟಿ ಕುಳಿತು
ಪದ್ಯ ಬರೆಯುತ್ತಿದ್ದಾಳೆ ಎಮಿಲಿ:
“ಬಿಕಾಸ್ ಐ ಕುಡ್ ನಾಟ್ –
ಸ್ಟಾಪ್ ಫರ್ ಡೆಥ್”
ಅಡುಗೆಮನೆಯ ಮೇಲ್ಛಾವಣಿಯಿಂದ
ತೆಲೆಕೆಳಗಾಗಿ ಇಳಿಬಿದ್ದು
ಗೂಡೋಲೆಯನ್ನೇ
ದಿಟ್ಟಿಸುತ್ತಿದ್ದಾಳೆ ಸಿಲ್ವಿಯಾ
ಉಪ್ಪರಿಗೆಯ ಮೇಲೆ
ಜೋಡಿಸಿದ ಕುಂಡಲಗಳಲ್ಲಿಯ
ಒಣ ಗುಲಾಬಿಸಸಿಗಳೆಡಿಗೆ
ಕಾಂಕ್ರೀಟು ಎರೆಯುತ್ತಾ
ತಾನೇ ಬರೆದ ಹಾಡಂದನ್ನು
ಉಲಿಯುತ್ತಿದ್ದಾನೆ ಶಾಕುರ್
ತರಗಲೆಗಳು ತುಂಬಿದ ತಾರಸಿಯಲ್ಲಿ
ಮೈಮುಡುಚಿ ನಿಂತು
ಗಾಳಿಯನ್ನು ಅನವಶ್ಯ –
ದೂರುತ್ತಿದ್ದಾಳೆ ಫಿಜರ್ನಿಕ್.
ಇದು ನನ್ನದೇ ಮನೆ
ಒಳಹೊಕ್ಕ ಮೇಲೆ
ಹೊರಬರಲಾರೆ.
********************
ಎಮಿಲಿ : ಎಮಿಲಿ ಡಿಕಿನ್ಸನ್,ಅಮೇರಿಕಾದ
ಕವಯಿತ್ರಿ.’because I could
not stop for death’ ಎಂಬುದು
ಅವಳ ಪ್ರಸಿದ್ಧ ಕವಿತೆ.
ಸಿಲ್ವಿಯಾ :ಸಿಲ್ವಿಯಾ ಪ್ಲಾತ್, ಅಮೇರಿಕಾದ
ಕವಯಿತ್ರಿ .
ಶಾಕುರ್ : ಟುಪಾಕ್ ಶಾಕುರ್, ಉತ್ತರ
ಅಮೇರಿಕಾದ ಕವಿ,ಹಾಡುಗಾರ.
‘The rose that grew from
the concrete ‘ ಎಂಬ
ಕವನ ಸಂಕಲನದ ಕರ್ತೃ.
ಫಿಜರ್ನಿಕ್ : ಅಲಜಾಂಡ್ರಾ ಫಿಜರ್ನಿಕ್,
ಅರ್ಜಂಟೀನಾದ ಕವಯಿತ್ರಿ,
Diana’s tree ಜನಪ್ರಿಯ
ಸಂಕಲನ
ಅಜಯ್ ವರ್ಮಾ ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರು.
ಸದ್ಯ ಧಾರವಾಡದಲ್ಲಿ ಬಿ.ಎಸ್ಸಿ ಓದುತ್ತಿದ್ದಾರೆ.
‘ಗಗನಸಿಂಧು’ ಪ್ರಕಟಿಕ ಕವನ ಸಂಕಲನ.
ಡಯಾನಾ ಮರ ಸ್ಪಾನಿಶ್ ಕವಿತೆಗಳ ಅನುವಾದದ ಸಂಕಲನ.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ