ಅಂತೂ ಕಡಿದಾದ ಮಾರ್ಗದಲ್ಲಿ ಸಾಗಿ, ಜಾತ್ರೆಯಲ್ಲಿ ಸುತ್ತಾಡಿದೆವು. ತೇರಿನ್ನೂ ಎಳೆದಿರಲಿಲ್ಲ, ಕಾಯುವಷ್ಟು ವ್ಯವಧಾನವಿಲ್ಲದೆ ಸುಸ್ತಾಗುತ್ತಿದೆಯೆಂದು ಮತ್ತೆ ಅವರನ್ನು ಕರೆತಂದೆ. ಅರವತ್ತರ ವಯಸ್ಸಿನ ಡಾಕ್ಟರಜ್ಜನನ್ನು ಈ ರೀತಿಯಾಗಿ ನಡೆಸಿಕೊಂಡಿದ್ದಕ್ಕೆ ಮನೆ ಜನರಿಗೆಲ್ಲ ಸಿಟ್ಟು. ಅಷ್ಟು ದೂರದವರೆಗೆ ನಡೆಸಿ, ರಥೋತ್ಸವವನ್ನೂ ತೋರಿಸದೆ ಗಡಿಬಿಡಿಯಲ್ಲಿ ಕರೆದುಕೊಂಡು ಬಂದದ್ದಕ್ಕೆ ಎಲ್ಲರೂ ಬೈಯುವವರೇ. ಅಂದು ಸಮಯವಾಗುತ್ತಿದೆಯೆಂದು ಡಾಕ್ಟರಜ್ಜ ದದೇಗಲ್ಲಿಗೆ ಹೊರಟರು. ಅಂದು ಕಂಡಿದ್ದೇ ಕೊನೆ, ಇನ್ನೆಂದೂ ಅಜ್ಜ ಮತ್ತು ನಾನು ಸಂಧಿಸಲೇ ಇಲ್ಲ!
ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎರಡನೆಯ ಕಂತು
ಐದು ವರ್ಷದವಳಾಗಿದ್ದ ನನಗೆ ಅರವತ್ತರ ವಯಸ್ಸಿನಲ್ಲಿದ್ದ ಆ ಡಾಕ್ಟರ್ ಅಜ್ಜ ತೋರಿಸಿದ ಪ್ರೀತಿಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ತುಪ್ಪ ಸವರಿದ ಚಪಾತಿಯನ್ನು ನನಗೆ ತಿನ್ನಿಸುತ್ತಿದ್ದದ್ದು, ತರಾವರಿ ಗೊಂಬೆಗಳನ್ನು ನನಗಾಗಿ ತರುತ್ತಿದ್ದದ್ದು, ಒಂದರೆಕ್ಷಣವೂ ಮನೆಯವರ ನೆನಪು ಕಾಡದಂತೆ ಕಾಳಜಿ ವಹಿಸುತ್ತಿದ್ದದ್ದನ್ನು ಈಗ ನೆನದರೂ ಕಣ್ಣಿಗೆ ಕಟ್ಟಿದ ಹಾಗೇ ಇದೆ. ನನ್ನ ತಂದೆ ತಾಯಿಯರಿಬ್ಬರೂ ಮೂರು ದಿನ ಬಿಟ್ಟು ಮತ್ತೆ ಆಸ್ಪತ್ರೆಗೆ ಬಂದಿದ್ದರು. ನನ್ನನ್ನು ಕರೆದೊಯ್ಯಬೇಕೆಂದಿದ್ದ ಅವರಿಗೆ, ‘ಇವಳನ್ನು ಇಲ್ಲೇ ಬಿಟ್ಟುಹೋಗಿ. ನಾ ನೋಡ್ಕೋತೀನಿ. ಪೂರ್ತಿಯಾಗಿ ಗುಣವಾಗೋಕೆ ಇನ್ನೊಂದಷ್ಟು ಸಮಯ ಹಿಡಿಯತ್ತೆ’ ಎಂದು ಈ ಡಾಕ್ಟರ್ ಅಜ್ಜ ನನ್ನ ಮೇಲಿನ ಪ್ರೀತಿ, ಕಾಳಜಿಗೋ ಏನೊ ಹೇಳಿಬಿಟ್ಟಿದ್ದರು. ಆದರೆ ತಂದೆತಾಯಿಯರಿಬ್ಬರೂ ಡಾಕ್ಟರ್ ಅಜ್ಜನ ಮಾತಿಗೆ ಮರುಉತ್ತರಿಸದೆ ನನ್ನನ್ನು ಬಿಟ್ಟು ಹೊರಟೇಹೋದರು!
ಹನ್ನೆರಡು ದಿನ ಕಳೆದಿರಬೇಕೆನಿಸುತ್ತದೆ, ಡಾಕ್ಟರ್ ಅಜ್ಜ ತಮ್ಮ ಕಾರಿನಲ್ಲಿ ನನ್ನನ್ನು ಕೂರಿಸಿಕೊಂಡು ಕುಕನೂರಿಗೆ ಹೊರಡುವವರಿದ್ದರು. ಅವರ ಮನಸ್ಸು ಅದೆಷ್ಟು ಭಾರವಾಗಿತ್ತೆಂದು ಈಗ ಊಹಿಸಿಕೊಳ್ಳಬಲ್ಲೆ. ಬೇರೆ ಮಗು ಸಿಕ್ಕಾಗ ನಮ್ಮ ಪ್ರೀತಿಯನ್ನೆಲ್ಲ ಧಾರೆಯಾಗಿ ಹರಿಸಿ, ಕೊನೆಗೆ ಇನ್ನೊಬ್ಬರಿಗೆ ಅದನ್ನು ಹಸ್ತಾಂತರಿಸೋದು ಇದೆಯಲ್ಲಾ, ಅದು ಅತೀವ ಸಂಕಟದ ಸ್ಥಿತಿ. ನನ್ನ ಬದುಕಿನಲ್ಲೂ ಇಂಥದ್ದೇ ಒಂದು ಘಟನೆ ನಡೆದಿತ್ತು. ನನ್ನ ಜೊತೆಗಾಗ ಮೂರು ಮಕ್ಕಳಿದ್ದರು. ಆದರೆ ಡಾಕ್ಟರ್ ಅಜ್ಜನ ಪರಿಸ್ಥಿತಿ ದುರಂತಮಯ. ಕಾಲರಾ ರೋಗದಿಂದಾಗಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳನ್ನು ಕಳೆದುಕೊಂಡು ಡಾಕ್ಟರ್ ಅಜ್ಜ ನಿಜಕ್ಕೂ ಅನಾಥರಾಗಿದ್ದರು. ದೂರದ ಸಿಕಂದರಾಬಾದ್ನಲ್ಲಿ ಲಕ್ಷಗಟ್ಟಲೆ ಆಸ್ತಿಯಿತ್ತು. ಇರುವ ಹಣ ತಮ್ಮ ಬದುಕನ್ನು ಸಂತೋಷದಿಂದ ಇರಿಸುವುದಿಲ್ಲ ಎಂಬುದನ್ನು ಡಾಕ್ಟರ್ ಅಜ್ಜ ಅರಿತಿದ್ದರು. ಓದು, ಶಿಕ್ಷಣವನ್ನು ನೀಡಿ, ನನ್ನನ್ನು ವಿದ್ಯಾವಂತಳನ್ನಾಗಿ ಮಾಡಬೇಕೆಂದು ತೀರ್ಮಾನಿಸಿರಬೇಕು, ನಮ್ಮ ಮನೆಗೆ ಬಂದಿದ್ದವರು, ‘ನನ್ನೆಲ್ಲ ಆಸ್ತಿಯನ್ನೆಲ್ಲ ಇವಳ ಹೆಸರಿಗೇ ಬರೆಯುತ್ತೇನೆ. ಇವಳನ್ನು ಚೆನ್ನಾಗಿ ಓದಿಸುವೆ’ ಅಂತೆಲ್ಲ ಹೇಳಿ ಅಲವತ್ತುಕೊಂಡಿದ್ದರು.
ಆದರೆ, ಮನೆ ಜನರ ಪಾಲಿಗೆ ನಾನು ಬರೀ ಮಲ್ಲಮ್ಮನಾಗಿರಲಿಲ್ಲ. ಹುಟ್ಟಿದಾಗಿನಿಂದ ಅವರೆಲ್ಲರ ಕಣ್ಮಣಿ ಆಗಿದ್ದೆ. ಡಾಕ್ಟರ್ ಅಜ್ಜ ಎಷ್ಟೆ ಒತ್ತಾಯಿಸಿದರೂ ಮನೆಯಲ್ಲಿದ್ದ ಯಾರೊಬ್ಬರ ಸಮ್ಮತಿಯೂ ದೊರಕಲಿಲ್ಲ. ಬೇಸರದಿಂದ ಡಾಕ್ಟರ್ ಅಜ್ಜ ಹೊರಟೇಬಿಟ್ಟರು. ನಾಲ್ಕು ದಿನಗಳೂ ಕಳೆದಿರಲಿಲ್ಲ, ಮತ್ತೆ ಮನೆ ಮುಂದೆ ಪ್ರತ್ಯಕ್ಷ! ‘ಅಯ್ಯೋ, ಇದ್ಯಾಕ್ರೀ ಮತ್ ಬಂದೀರಿ?’ ಎಂದು ಎಲ್ಲರೂ ಪ್ರಶ್ನಿಸುವವರೇ. ಡಾಕ್ಟರ್ ಅಜ್ಜ ಮಾತ್ರ ಕೈಯಲ್ಲಿ ನಾನಾ ಬಣ್ಣ, ವಿವಿಧ ವಿನ್ಯಾಸವುಳ್ಳ ಚಂದದ ಫ್ರಾಕುಗಳನ್ನು ನನಗಾಗಿ ತಂದಿದ್ದರು. ಆಗೆಲ್ಲ ಫ್ರಾಕು ಕೊಂಡುಕೊಳ್ಳುವುದೆಂದರೆ ನಮ್ಮ ಪಾಲಿಗೆ ದುಬಾರಿಯೇ ಆಗಿತ್ತು. ಬಟ್ಟೆ, ಗೊಂಬೆಗಳೆಲ್ಲ ಯಾವ ಮಕ್ಕಳಿಗೆ ತಾನೆ ಖುಷಿ ನೀಡುವುದಿಲ್ಲ ಹೇಳಿ! ಅದರಲ್ಲೂ ನನ್ನನ್ನು ತುಂಬುಪ್ರೀತಿಯಿಂದ ‘ಮಮ್ತಾಜ್’ ಎಂದು ಕರೆಯುತ್ತಿದ್ದರು. ಹಾಗೆ ಯೋಚಿಸಿದರೆ, ಅಂದೇ ಮುಸ್ಲಿಂ ಧರ್ಮಕ್ಕೆ ಸೇರಬಹುದಾದ ಸಾಧ್ಯತೆಯೂ ಇತ್ತು.
ಆಗ ಗುದ್ನಪ್ಪನ ಮಠದಲ್ಲಿ ನಡೆಯುತ್ತಿದ್ದ ಜಾತ್ರೆ ವಿಶೇಷವಾಗಿತ್ತು. ಮೂಲಾ ನಕ್ಷತ್ರದ ದಿನ ರಥೋತ್ಸವ ನಡೆಯುತ್ತಿತ್ತು. ದೀಪಾವಳಿ ಹಬ್ಬ ಕಳೆದ ಮೇಲೆ ಈ ಗುದ್ನಪ್ಪನ ಜಾತ್ರೆಗಾಗಿ ಕಾಯುತ್ತಿದ್ದೆವು. ಆ ಸಂದರ್ಭದಲ್ಲಿ ನನಗೆಂದೇ ಐದು ಜೊತೆ ಕಸೂತಿ ಮಾಡಿದ ಫ್ರಾಕುಗಳ ಜೊತೆ ಪಟಾಕಿಯ ಮೂಟೆಯನ್ನೇ ಡಾಕ್ಟರಜ್ಜ ಹೊತ್ತು ತಂದಿದ್ದರು. ಅಕ್ಕಪಕ್ಕದ ಮನೆಯ ಮಕ್ಕಳೆಲ್ಲ ಬಾಯಿ ಬಾಯಿ ಬಿಟ್ಟು ನೋಡುತ್ತಿದ್ದರು. ಎಂಟು ದಿನ ಭರ್ಜರಿಯಾಗಿ ಪಟಾಕಿ ಹಚ್ಚಿದೆವು, ಸಂತೋಷಕ್ಕೆ ಕುಣಿದು ಕುಪ್ಪಳಿಸಿದ್ದೆವು.
ಅಂದು ಡಾಕ್ಟರಜ್ಜನಲ್ಲಿ, ‘ಅಜ್ಜ, ಅಜ್ಜ ಜಾತ್ರಿಗೆ ಹೋಗಾನ?’ ಎಂದೆ. ನಾನು ಜಾತ್ರೆಗೇ ಕರೆಯುತ್ತಿದ್ದೇನೆಂದು ಅವರಿಗೂ ತಿಳಿಯಿತು. ಅದೇ ಹುಮ್ಮಸ್ಸಿನಲ್ಲಿ ಹೊರಟುನಿಂತರು. ಮನೆಯವರೂ ಒಪ್ಪಿದ್ದಾಯಿತು, ಇಬ್ಬರೇ ಹೊರಟೆವು. ಮೂರು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿದರೆ ಜಾತ್ರೆ ನಡೆಯುವ ಜಾಗ ಸೇರುತ್ತಿದ್ದೆವು. ಈಗಿನಂತೆ ವಾಹನ ವ್ಯವಸ್ಥೆ ಇರಲಿಲ್ಲವಲ್ಲಾ, ಅದರಲ್ಲೂ ಆಧುನಿಕತೆ ಎಂಬುದು ಮುಂದೊಂದು ಕಾಲದಲ್ಲಿ ಇಡೀ ಜಗತ್ತನ್ನು ಆವರಿಸಿಕೊಳ್ಳುತ್ತದೆ ಎಂಬ ಅರಿವೂ ಮೂಡದ ಕಾಲ. ಅಂತೂ ಕಡಿದಾದ ಮಾರ್ಗದಲ್ಲಿ ಸಾಗಿ, ಜಾತ್ರೆಯಲ್ಲಿ ಸುತ್ತಾಡಿದೆವು. ತೇರಿನ್ನೂ ಎಳೆದಿರಲಿಲ್ಲ, ಕಾಯುವಷ್ಟು ವ್ಯವಧಾನವಿಲ್ಲದೆ ಸುಸ್ತಾಗುತ್ತಿದೆಯೆಂದು ಮತ್ತೆ ಅವರನ್ನು ಕರೆತಂದೆ. ಅರವತ್ತರ ವಯಸ್ಸಿನ ಡಾಕ್ಟರಜ್ಜನನ್ನು ಈ ರೀತಿಯಾಗಿ ನಡೆಸಿಕೊಂಡಿದ್ದಕ್ಕೆ ಮನೆ ಜನರಿಗೆಲ್ಲ ಸಿಟ್ಟು. ಅಷ್ಟು ದೂರದವರೆಗೆ ನಡೆಸಿ, ರಥೋತ್ಸವವನ್ನೂ ತೋರಿಸದೆ ಗಡಿಬಿಡಿಯಲ್ಲಿ ಕರೆದುಕೊಂಡು ಬಂದದ್ದಕ್ಕೆ ಎಲ್ಲರೂ ಬೈಯುವವರೇ. ಅಂದು ಸಮಯವಾಗುತ್ತಿದೆಯೆಂದು ಡಾಕ್ಟರಜ್ಜ ದದೇಗಲ್ಲಿಗೆ ಹೊರಟರು. ಅಂದು ಕಂಡಿದ್ದೇ ಕೊನೆ, ಇನ್ನೆಂದೂ ಅಜ್ಜ ಮತ್ತು ನಾನು ಸಂಧಿಸಲೇ ಇಲ್ಲ!
*****
ಕಾಳಿಂಗ ನಾಯಿ ನಾನು ಹುಟ್ಟುವುದಕ್ಕಿಂತ ಮುನ್ನವೇ ಮೂರ್ನಾಲ್ಕು ಮಳೆಗಾಲಗಳನ್ನು ಕಂಡಿದ್ದ. ಹಾಗಾಗಿ ಮನೆಮಂದಿಯೊಳಗೆ ಒಬ್ಬನಾಗಿದ್ದ. ನಾನೆಂದರೆ ಅವನಿಗೆ ಅದೆಂತಹ ಅಕ್ಕರೆ! ಊರಿನಲ್ಲಿ ನಮ್ಮ ಸಂಬಂಧಿಕರೆಲ್ಲ ಒಟ್ಟಾಗಿ ಒಂದೇ ಕೇರಿಯ ಅಕ್ಕಪಕ್ಕದ ಮನೆಗಳಲ್ಲಿದ್ದೆವು. ಆ ಓಣಿಯ ಕೊನೆಯ ಮನೆಯೇ ನಮ್ಮದು. ಅಲ್ಲಿಂದ ಸ್ವಲ್ಪ ದೂರದಲ್ಲಿ ಬಯಲಿತ್ತು. ನಿತ್ಯ ಶೌಚದ ಕಾರ್ಯಗಳಿಗೆಲ್ಲ ಅಲ್ಲಿಗೇ ಹೋಗಬೇಕಾಗಿತ್ತು. ಬೆಳಗಿನ ನಸುಬೆಳಕಿನಲ್ಲಿ ಎದ್ದು, ತಂಬಿಗೆ ಹಿಡಿದು ಹೊರಟಾಗೆಲ್ಲ, ಕಾಳಿಂಗ ನನ್ನ ಜೊತೆಗೇ ಬರುತ್ತಿದ್ದ. ನಾನು ಮರೆಯಲ್ಲಿ ಕೂತಿದ್ದರೆ, ನನ್ನ ಹತ್ತಿರದ ಬರುತ್ತಿದ್ದ ಊರ ಹಂದಿಗಳಿಗೆ ಜೋರಾಗಿ ಬೊಗಳುತ್ತಾ, ಹೆದರಿಸಿಬಿಡುತ್ತಿದ್ದ.
ಸಾಕುಪ್ರಾಣಿಗಳೆಂದರೆ ನನಗೆ ಎಲ್ಲಿಲ್ಲದ ಖುಷಿ. ಮನೆಯಲ್ಲಿ ಸಾಕಿದ್ದ ಹಸು, ಕರುಗಳು, ಆಡುಗಳಿಗೆ ಹುಲ್ಲು ಮೇಯಿಸುವುದಕ್ಕೆಂದು ಸ್ನೇಹಿತರೆಲ್ಲ ಒಟ್ಟಾಗಿ ಕರೆದೊಯ್ಯುತ್ತಿದ್ದರು. ಅಂತಹದ್ದರಲ್ಲಿ ಆಡನ್ನು ನಾನೇ ಮೇಯಿಸಬೇಕೆಂದು ಗೋಗರೆದೆ. ಏನೊ ಮಹತ್ತರ ಕೆಲಸ ಮಾಡುವವಳಂತೆ ಅದರ ಕುತ್ತಿಗೆಗೆ ಹಗ್ಗ ಕಟ್ಟಿ ಎಳೆದೊಯ್ಯುತ್ತಿರುವಾಗ, ಹಗ್ಗ ಬೇಲಿಗೆ ಸಿಕ್ಕಿ, ಆ ಬೇಲಿಯ ಕೋಲು ಆಡಿನ ಕಾಲಿಗೆ ತಾಕಿ, ಕಾಲೇ ಮುರಿದುಹೋದಂತೆ ಆಡು ಅಲ್ಲೇ ಬಿದ್ದುಕೊಂಡಿತು. ‘ನನ್ ಆಡು ನಡೀವಲ್ದು, ಏಳ್ವಲ್ದು’, ಬೇಲಿಯ ಬಳಿ ಅಳುತ್ತಿದ್ದೆ. ಅಪ್ಪ ಅವ್ವ ಮನೆಗೆ ಬಂದರೆ ಮಲ್ಲಮ್ಮನೂ ಇಲ್ಲ, ಮಲ್ಲಮ್ಮನ ಆಡೂ ಇಲ್ಲ ಎನ್ನುತ್ತಾ ಹುಡುಕಾಡುತ್ತಿದ್ದರು. ಬಂದಿದ್ದೇ ಆಡಿನ ಜೊತೆಗೆ ನನ್ನನ್ನು ಎತ್ತಿಕೊಂಡು ಹೋದರು.
ನಾನು ನಾಲ್ಕನೇ ವಯಸ್ಸಿನಲ್ಲಿರುವಾಗಲೇ ಗಿಳಿ, ಪಂಜರವನ್ನು ತಂದಿದ್ದರು. ‘ರಾಮ’ ಎಂಬ ನಾಮಕರಣವೂ ಆಯಿತು. ತಿಂಡಿಯನ್ನು ತಟ್ಟೆಗೆ ಹಾಕಿ, ಆ ಪಂಜರದಲ್ಲಿದ್ದ ಗಿಳಿ ಬಳಿ ಬಂದು, ‘ಇದು ನಿನ್ಗ, ಮತ್ತಿದು ನನ್ಗ’ ಎಂದು ಅದರ ಪಾಲಿನ ತಿಂಡಿಯನ್ನು ಒಟ್ಟಿಗಿರಿಸಿ ತಿನ್ನಿಸುತ್ತಿದ್ದೆ. ಅವ್ವ ಅಪರೂಪಕ್ಕೆ ಎಲೆ, ಅಡಿಕೆ ತಾಯೆಂದು ಕಳಿಸುತ್ತಿದ್ದಳು. ಮನೆಗೂ ಅಂಗಡಿಗೂ ಕಡಿಮೆಯೆಂದರೂ ಒಂದು ಕಿ.ಮೀ ಅಂತರವಿತ್ತು. ಮರಳಿ ಬರುವಾಗ ಚೂರು ತಡವಾದರೂ ಸಾಕು, ಅವ್ವನ ಮೂಗು ತುದಿಯಲ್ಲೇ ಸಿಟ್ಟಿರುತ್ತಿತ್ತು. ಬಡಿಗೆಯಿಂದ ಬಾರಿಸುವುದಕ್ಕೆ ತಯಾರಾಗಿರುತ್ತಿದ್ದಾಗೆಲ್ಲ ರಾಮ ಪಂಜರದಲ್ಲೇ ವಿಲವಿಲ ಒದ್ದಾಡುತ್ತಿದ್ದ. ‘ಅಕ್ಕಂಗ್ ಹೊಡಿಬೇಡ’ ಎಂದು ಯವ್ವನಲ್ಲಿ ಬೇಡುತ್ತಿದ್ದ, ಆದೇಶವನ್ನೂ ನೀಡುತ್ತಿದ್ದ. ‘ಆಕಿಗ್ ಹೊಡದ್ರ ನಿಂಗ್ ನೋವಾಗತ್ತೇನ?’ ಎಂದು ಅವ್ವ ರಾಮಂಗೂ ರೇಗಿ, ಸುಮ್ಮನಾಗುತ್ತಿದ್ದಳು.

ಅಪ್ಪ ಅವ್ವ ಇಬ್ಬರೂ ಹೊರಗಿನ ಕೆಲಸಕ್ಕೆಂದು ಹೋಗಿದ್ದರು. ಹೊರಡುವ ಮುನ್ನ ಎಚ್ಚರಿಸಿದ್ದರು, ಪಂಜರದ ಬಾಗಿಲು ತೆಗೀಬೇಡವ್ವಾ ಎಂದು. ನಮ್ಮ ಭಾಗದ ಮನೆ ಹೇಗಿತ್ತೆಂದರೆ ಮುಖ್ಯ ದ್ವಾರದ ಮುಂದೆ ಅವಾರ ಇರುತ್ತಿತ್ತು. ಅವಾರ ಎಂದರೆ ಸಾಮಾನ್ಯವಾಗಿ ಅಂಗಳದಂತೆ ಕಾಣುತ್ತದೆ. ಆದರೆ ಮೇಲ್ಛಾವಣಿ ಇಲ್ಲದ, ಸುತ್ತ ಗೋಡೆಗಳಿರುವುದಕ್ಕೆ ಅವಾರ ಎಂಬುದು ರೂಢಿ. ರಾಮನ ರೆಕ್ಕೆಗಳಿಗೆ ಹಾರುವ ಶಕ್ತಿಯಿತ್ತೆಂಬುದನ್ನು ಐದು ವರ್ಷದವಳಾದ ನನಗೆ ತಿಳಿಯುವುದಾದರೂ ಹೇಗೆ! ಪಂಜರದ ಬಾಗಿಲು ತೆರೆದೆ, ರಾಮ ಹೊರಬಂದ. ಮೂರು ಸುತ್ತು ಅವಾರದ ಗೋಡೆಯತ್ತ ಅಡ್ಡಾಡಿದ. ನಾಲ್ಕನೇ ಸುತ್ತಿಗೆ ಹಾರೇಬಿಟ್ಟ. ಅವನು ಹಾರಿಹೋಗುತ್ತಲಿದ್ದ, ನಾನವನ ಬೆಂಬಿದ್ದಿದ್ದೆ. ಹೇಳಿದ್ದೆನಲ್ಲಾ, ನಮ್ಮೂರಿನಲ್ಲಿ ಮಹಾಮಾಯಿ ದೇವಸ್ಥಾನವೊಂದಿದೆ ಎಂದು. ಅದರ ಪಕ್ಕದಲ್ಲಿ ಆಲದಮರವೊಂದಿತ್ತು. ಆಲದಮರದವರೆಗೂ ಹಿಂಬಾಲಿಸಿಕೊಂಡು ಹೋದೆ. ಮರದಲ್ಲೆಲ್ಲೊ ಕುಳಿತಿರಬೇಕೆಂದು ಪ್ರೀತಿಯಿಂದ ಕರೆದೆ, ಬರಲಿಲ್ಲ. ಪ್ರೀತಿ ಕರಗಿ ಅಳು ತುಂಬಿತು. ರಾಮ ಬರಲೇ ಇಲ್ಲ! ಸಂಜೆಯವರೆಗೂ ಅವನಿಗಾಗೆ ಗೋಗರೆಯುತ್ತಿದ್ದೆ. ಅಪ್ಪ ಅವ್ವ ನಾನಿಲ್ಲದನ್ನು ನೋಡಿ ಗಾಬರಿಯಾಗಿದ್ದರು. ಮನೆಗೆ ಬಂದ ಬಳಿಕ, ‘ಕಳೆದುಹೋದುದಕ್ಕೆ ಬೇಸರಿಸಬಾರದು, ಇನ್ನೊಂದು ತಂದರಾಯಿತು’ ಎಂದೆಲ್ಲ ಹೇಳಿದ್ದರು. ಆದರೆ, ಕಳೆದುಕೊಳ್ಳುವ ಸಂಕಟ ಮಾತ್ರ ನನ್ನನ್ನೆಂದೂ ಬಿಡಲೇಇಲ್ಲ!
*****
ಸಿನೆಮಾಗೆಂದು ಹೋಗುತ್ತಿದ್ದೆವು. ಅಣ್ಣ ತಮ್ಮಂದಿರಲ್ಲಿ ಯಾರೊಬ್ಬರಿಗೂ ಸಿನೆಮಾ ನೋಡುವುದರ ಬಗ್ಗೆ ಆಸಕ್ತಿ ಇದ್ದಂತಿರಲಿಲ್ಲ. ಆದರೆ ನಮ್ಮವ್ವನಿಗೆ ಎಲ್ಲಿಲ್ಲದ ಇಷ್ಟ. ಮೈ ತುಂಬ ಚಾದರ ಹೊದ್ದುಕೊಂಡು, ನನ್ನನ್ನು ಸೊಂಟದಲ್ಲಿ ಕೂರಿಸಿಕೊಂಡು ರಾತ್ರಿ ಹತ್ತರ ಹೊತ್ತಿಗೆ ಅವ್ವ ಸಿನೆಮಾಗೆ ಹೋಗುತ್ತಿದ್ದಳು. ಇನ್ನೊಂದು ದಿಕ್ಕಿನಿಂದ ಅವ್ವನ ಗೆಳತಿಯರ ಬಳಗ ಬರುತ್ತಿತ್ತು. ನನಗೆ ನೆನಪಿರುವ ಹಾಗೆ, ‘ರಾಮಾಂಜನೇಯ ಯುದ್ಧ’ ಸಿನೆಮಾ ಎರಡುಮೂರು ಸಲವಾದರೂ ನೋಡಿದ್ದೆ. ಕಲಾವಿದರ ಅಭಿನಯಕ್ಕೆ ನಾನಂದು ರೋಮಾಂಚನಗೊಂಡಿದ್ದೆ. ಅರೇ! ನಾನೂ ಹೀಗೆ ಮಾಡಬೇಕಲ್ಲಾ ಎಂದೂ ಅನಿಸಿತ್ತು.
ಎತ್ತುಗಳನ್ನು ಕಟ್ಟಿಹಾಕುತ್ತಿದ್ದ ಕೊಟ್ಟಿಗೆಯಲ್ಲಿ, ಅವುಗಳಿಗೆ ಮೇವನ್ನು ಹಾಕುವುದಕ್ಕಾಗಿ ‘ಗ್ವಾದಲಿ’ಗಳನ್ನು ನಿರ್ಮಿಸಿರುತ್ತಾರೆ. ರಂಗವೇದಿಕೆಯೆಂದು ಗ್ವಾದಲಿಯನ್ನೇ ಏರುತ್ತಿದ್ದೆ. ತಲೆಗೆ ಪಟಗಾ (16 ಮೊಳ ಉದ್ದದ ರುಮಾಲು) ಸುತ್ತಿಕೊಂಡು, ಲಂಗವನ್ನೇ ಕಚ್ಚೆಯನ್ನಾಗಿ ಉಟ್ಟು, ಬಾಲವಿಲ್ಲದಿದ್ದರೆ ಹೇಗೆ? ಸಣ್ಣ ದಾರವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು, ಬೇಳೆ ಮಗುಚುವ ಗುಂಡನ್ನು ಗದೆಯಾಗಿ ಹೆಗಲಿಗೇರಿಸಿ, ಮುಂದು ಬಾಯಿಗೆ ಗಾಳಿ ಸೇರಿಸಿ ನಿಂತೆನೆಂದರೆ ನಾನು ಹನುಮಂತನೇ. ಇನ್ನೂ ಕೇಳಿ, ಮನೆಯಲ್ಲಿ ದಿನವೂ ರೊಟ್ಟಿ ಸುಡುವುದು ಖಾಯಮ್ಮಾಗಿತ್ತು. ಕರಕಲಾದ ರೊಟ್ಟಿಯಿಂದ ಕಪ್ಪು ಬಣ್ಣ, ಕುಂಕುಮ ಮತ್ತೆ ಬೂದಿಯನ್ನು ಸಂಗ್ರಹಿಸಿ, ಒಂದೊಂದೇ ಬಣ್ಣವನ್ನು ಬಾಯಿಗೆ ಬಳಿದುಕೊಳ್ಳುವಾಗಿನ ನನ್ನ ಸಂಭ್ರಮ ಹೇಳತೀರದು. ಹಾಗೆಯೆ, ಸಿನೆಮಾ ಸಂಭಾಷಣೆಯನ್ನೆಲ್ಲ ಸೇರಿಸಿ, ಅತ್ತಿತ್ತ ನಾಲ್ಕಾರು ಹೆಜ್ಜೆ ಹಾಕುತ್ತಿದ್ದೆ. ಮನೆಮಂದಿಗೆಲ್ಲ ನಗು, ಆಶ್ಚರ್ಯ!

ಇಷ್ಟಕ್ಕೆ ಮುಗಿದಿಲ್ಲ, ಅವ್ವ ಅಪ್ಪ ಹೋದಡೆಯೆಲ್ಲ ಅಭಿನಯ ಮಾಡಿ ತೋರಿಸು ಎನ್ನುತ್ತಿದ್ದರು. ನನಗೂ ಖುಷಿಯಿತ್ತಲಾ, ಹನುಮಂತನಂತೆ ಹಾರಿ, ರಾವಣನೆದುರು ಸವಾಲು ಹಾಕಿ ಬಾಲದ ಮೇಲೆ ಕೂತಂತೆ ನಟಿಸುತ್ತಿದ್ದೆ. ಮೊಬೈಲ್ ಇಲ್ಲದ ಆ ಕಾಲಕ್ಕೆ ಅದು ವೈರಲ್ ಆಯಿತು!

ಕೀರ್ತಿ ಬೈಂದೂರ್ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

