ಬಂದು ಆಗಲೇ ಮೂರು ದಿನಗಳಾಗಿತ್ತು. ನಾನು ತಾಳ್ಮೆ ಕಳೆದುಕೊಳ್ಳತೊಡಗಿದೆ. ಇನ್ನೂ ಎಲ್ಲಿ ಕೆಲಸಕ್ಕೆ ಹೋಗಬೇಕು ಅಂತ ನನ್ನ ದಾಸ್ ಬಾಸ್ ಯಾಕೆ ಹೇಳುತ್ತಿಲ್ಲ ಅಂತ ದಿಗಿಲು ಉಂಟಾಯಿತು. ಫೋನಾಯಿಸಿ ಕೇಳಿದೆ ಕೂಡ. ಇರಿ ಇವತ್ತು ಸಂಜೆ ನಿಮ್ಮ ಹೊಟೇಲ್ ಹತ್ತಿರ ಸಿಗುವೆ ಅಂದರು ದಾಸ್. ಸಂಜೆ ಸ್ವಲ್ಪ ತಡವಾಗಿಯೇ ಆದರೂ ಬಂದರು. ಚಳಿ ಈಗಾಗಲೇ ಶುರುವಾಗಿತ್ತು. ಹೊರಗೆ ನಿಲ್ಲಲು ಸಾಧ್ಯವಾಗದಷ್ಟು. ಹೀಗಾಗಿ ಅವರ ಕಾರ್ ಅನ್ನು ಶುರು ಇಟ್ಟುಕೊಂಡೆ ಅದರ ಒಳಗಡೆಯೇ ಮಾತಾಡಲು ಕೂತೆವು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಐದನೆಯ ಬರಹ
ನಾವಿದ್ದ ಹೊಟೇಲ್‌ನ ಹೆಸರು Extended Stay America ಅಂತ. ತುಂಬಾ ದೊಡ್ಡ ಹೊಟೇಲ್ ಅಲ್ಲ. ಅದರ ಕಟ್ಟಡಕ್ಕೆ ಬರಿ ಮೂರು ಅಂತಸ್ತುಗಳು ಇದ್ದವು ಅಂತ ನೆನಪು. ಓಮಾಹಾ ತುಂಬಾ ಚಿಕ್ಕ ಹಾಗೂ ಚೊಕ್ಕ ಪಟ್ಟಣ. ಜಗತ್ತಿನ ದೊಡ್ಡ ಸಿರಿವಂತ Warren Buffett ಅಲ್ಲಿ ಇದ್ದಾರೆ ಅನ್ನೋದು ಬಿಟ್ಟರೆ ಬೇರೆ ಯಾವ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬಂದು ಉಳಿದುಕೊಳ್ಳುವಂತಹ ತಾಣ ಅಲ್ಲ. ಹೀಗಾಗಿ ಅಲ್ಲಿ ಅಷ್ಟೊಂದು ದೊಡ್ಡ ಹೊಟೇಲ್‌ಗಳು ಇರುವ ಸಾಧ್ಯತೆಗಳೂ ಇರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿದ್ದವರು ಬಿಳಿಯರು ಅನ್ನೋದು ಬಿಟ್ಟರೆ ನಮ್ಮ ಭಾರತದ ಹೋಟೆಲಿಗಿಂತ ತುಂಬಾ ಭಿನ್ನ ಅನಿಸಲಿಲ್ಲ. ಒಂದೇ ದೊಡ್ಡ ವ್ಯತ್ಯಾಸ ಅಂದರೆ ಕೋಣೆಗಳನ್ನು ಹೆಚ್ಚಾಗಿ ಕಟ್ಟಿಗೆಯನ್ನು ಬಳಸಿ ಮಾಡಿದ್ದರು. ಅಲ್ಲಿನ ಚಳಿಗಾಲ ತುಂಬಾ ಭಯಂಕರ ಆಗಿರುವುದೇ ಅದಕ್ಕೆ ಕಾರಣ. ಕಟ್ಟಿಗೆಯನ್ನು ಬಳಸುವುದರಿಂದ ಕೋಣೆಯನ್ನು ಆದಷ್ಟು ಬೆಚ್ಚಗೆ ಇಡಬಹುದು. ಆದರೆ ಬೆಂಕಿಯ ಅವಘಡಗಳು ಸಂಭವಿಸಿದರೆ ಮಾತ್ರ ತುಂಬಾ ಭಯಂಕರ ಆಗಿರುತ್ತವೆ ಕೂಡ. ಅದೇ ಕಾರಣಕ್ಕೆ ಅಲ್ಲಿನ ಪ್ರತಿಯೊಂದು ಕಟ್ಟಡದ ಬಳಿ ಬೆಂಕಿಯನ್ನು ನಂದಿಸುವ ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿ ಇರುತ್ತದೆ. ಅಂತಹ ಅವಘಡಗಳು ಸಂಭವಿಸಿದಾಗ ಅಗ್ನಿ ಶಾಮಕ ವಾಹನಗಳು ಕೂಡ ತುಂಬಾ ಸ್ಥಳಕ್ಕೆ ಬೇಗನೆ ಬಂದು ನಿಂತುಬಿಡುತ್ತವೆ.
ನಮ್ಮ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಅಂತಹ ಒಂದು ದೇಶಕ್ಕೆ ಹೋಗಿದ್ದೆವು. ನಾನು ಆಗ ತಾನೇ ನಲವತ್ತರ ಹೊಸ್ತಿಲು ದಾಟಿದ್ದೆ. ಅದೊಂದು ವಿಚಿತ್ರ ಘಟ್ಟ. ಒಂದಿಷ್ಟು ದುಡ್ಡು, ಆಸ್ತಿ, ಆತ್ಮಬಲ ಒಟ್ಟುಗೂಡಿಸಿಕೊಂಡಿರುತ್ತೇವೆ. ಸಾಕಷ್ಟು ಅನುಭವಗಳನ್ನು ಪಡೆದಿರುತ್ತೇವೆ. ಅಥವಾ ಅನುಭವದ ಹೆಸರಿನಲ್ಲಿ ತುಂಬಾ ತಪ್ಪುಗಳನ್ನು ಮಾಡಿಕೊಂಡಿರುತ್ತೇವೆ! ಪ್ರಬುದ್ಧರಾಗಿದ್ದೇವೆ ಎಂಬ ಭ್ರಮೆಯಲ್ಲಿ ತೇಲುತ್ತ ಎಲ್ಲರಿಗೂ ಉಪದೇಶ ಮಾಡುತ್ತಿರುತ್ತೇವೆ. ಬೇರೆ ಯಾರೂ ಸರಿ ಇಲ್ಲ ಎಂಬ ನಿಲುವು ಇರುತ್ತದೆ. ನಮ್ಮ ಜೊತೆಗಿರುವ ಸ್ನೇಹಿತರೂ, ಬಂಧುಗಳೂ ನಮ್ಮ ವಯಸ್ಸಿನವರಾಗಿದ್ದರೆ ಅವರೂ ಕೂಡ ಅದೇ ತರಹದ ಭ್ರಮೆಯಲ್ಲಿದ್ದರೆ ಅವರಿಗೂ ಹಾಗೆಯೇ ಅನಿಸಿ, ಅಂತಹ ಕೆಲವರ ಜೊತೆಗೆ ಮಾನಸಿಕ ತಿಕ್ಕಾಟಗಳು, ಮನಸ್ತಾಪಗಳು ಈ ವಯಸ್ಸಿನಲ್ಲಿ ಸಹಜ ಅನ್ನೋದು ನನ್ನ ಅನಿಸಿಕೆ. ಭಾರತದಲ್ಲಾದ ಅಂತಹ ಒಂದಿಷ್ಟು ಕಟು ಅನುಭವಗಳು ನನ್ನ ಯೋಚನಾ ಲಹರಿಯನ್ನೇ ಬದಲಿಸಿದ್ದವು. ಇನ್ನು ಮುಂದೆ ಯಾವುದಕ್ಕೂ ಅಂಟಿಕೊಳ್ಳಬಾರದು, ಯಾರನ್ನೂ ಜಾಸ್ತಿ ಹಚ್ಚಿಕೊಳ್ಳಬಾರದು. ಹೊಸ ಗೆಳೆಯರನ್ನು ಮಾಡಿಕೊಂಡರೂ ಕೂಡ ಅವರ ಜೊತೆ ಅಷ್ಟಕ್ಕಷ್ಟೆ ಇದ್ದರಾಯ್ತು.. ಎಂಬ ಹಲವು ನಿರ್ಧಾರಗಳನ್ನು ಮಾಡಿದ್ದೆವು. ಯಾಕೆಂದರೆ ಇಂತಹ ತಾಕಲಾಟಗಳು ಆದಾಗ ಮಾನಸಿಕವಾಗಿ ಒತ್ತಡ ಜಾಸ್ತಿ ಆಗುವುದರ ಜೊತೆಗೆ ಸಮಯವೂ ವ್ಯರ್ಥ ಆಗುತ್ತದೆ. ಜೀವನ ಪೂರ್ತಿ ಹೀಗೆ ಸಮಯವನ್ನು ಕಳೆಯುವ ಬದಲು ಅಂತಹ ಸಂಬಂಧಗಳನ್ನು ಅಲ್ಲಿಗೆ ನಿಲ್ಲಿಸಿ ಬೇರೆ ಸಾರ್ಥಕ ಚಟುವಟಿಕೆಗಳಲ್ಲಿ ಮುಂದುವರಿದರೆ ಎಲ್ಲರಿಗೂ ಒಳಿತು.
ಒಟ್ಟಿನಲ್ಲಿ ಸಧ್ಯಕ್ಕೆ ಹೊಸದಾದ ಸ್ಥಳವೊಂದರಲ್ಲಿ, ಹೊಸ ಜೀವನ ನಡೆಸಿ ಅಲ್ಲಿನ ಬದುಕನ್ನು ಅನುಭವಿಸಬೇಕು ಎಂಬ ಇರಾದೆ ಇತ್ತು. ಆದರೆ ಓಮಾಹದಲ್ಲಿ ನಾನು ಕೆಲಸ ಮಾಡುವ ಸ್ಥಳ ಇನ್ನೂ ನಿಗದಿ ಆಗಿರಲಿಲ್ಲ. ಬೇಗನೇ ಒಂದು ನಿರ್ಧಾರವಾದರೆ ಮನೆಯನ್ನು ಬಾಡಿಗೆಗೆ ನೋಡಬೇಕಿತ್ತು. ಅಲ್ಲಿನ ನನ್ನ ಬಾಸ್ ದಾಸ್ ಅಂತ ಇದ್ದರು. ಅವರನ್ನು ಭಾರತದಿಂದ ಫೋನಲ್ಲಿ ಮಾತಾಡಿಸಿದ್ದೆನೆ ಹೊರತು ಇನ್ನೂ ಭೇಟಿಯಾಗಿರಲಿಲ್ಲ.
ಹೋಟೆಲಿನಲ್ಲಿ ಊಟಕ್ಕೆಲ್ಲ ಅಷ್ಟು ಅನುಕೂಲ ಇರಲಿಲ್ಲ. ಯಾವುದಾದರೂ ಭಾರತೀಯ ತಿಂಡಿ ತಿನಿಸುಗಳನ್ನು ಮಾಡುವ ಹೊಟೇಲುಗಳು ಇವೆ ಅಂತ ಗೊತ್ತಿದ್ದರೂ ಅವು ಅಷ್ಟೊಂದು ಹತ್ತಿರದಲ್ಲಿ ಇರಲಿಲ್ಲ. ಅಲ್ಲಿ ಅಷ್ಟು ಸುಲಭವಾಗಿ ಅಡ್ಡಾಡಲು ಸಾಧ್ಯವಿಲ್ಲ. ಕಾರ್ ಬೇಕೆ ಬೇಕು. ಭಾರತದಿಂದ ತಂದಿದ್ದ ಕೆಲವು ಸಣ್ಣ ಪುಟ್ಟ ನೂಡಲ್ಸ್, ready to eat ಗಳಂತಹ ಧಿಡೀರ್ ತಿಂಡಿ ಮಾಡಿಕೊಳ್ಳಲು ಅಲ್ಲಿ ವ್ಯವಸ್ಥೆ ಇತ್ತು. ಅದರಿಂದ ಹೊಟ್ಟೆ ತುಂಬಿದರೂ ಮನಸ್ಸಿಗೆ ತೃಪ್ತಿ ಆಗುತ್ತಿರಲಿಲ್ಲ. Burger, Sandwich ಅಂಗಡಿಗಳು ಇದ್ದವಾದರೂ ಅವುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಅಷ್ಟೊತ್ತಿಗೆ ಕುಡಿಯುವ ನೀರು ಕೂಡ ಖಾಲಿಯಾದಾಗ ಎಲ್ಲಿಂದ ತರುವುದು ಎಂಬ ಪ್ರಶ್ನೆ ಶುರುವಾಯ್ತು. ನಮ್ಮ ದೇಶದಲ್ಲಿ ಇರುವಂತೆ ಕಿರಾಣಿ ಅಂಗಡಿಗಳು ಅಲ್ಲಿ ಇರೋದಿಲ್ಲವಲ್ಲ. ಇದ್ದರೆ ಬರಿ ದೊಡ್ಡ mart ಗಳು. ಗೂಗಲ್ ಮಾಡಿ ನೋಡಿದಾಗ ಹತ್ತಿರದಲ್ಲೇ ಒಂದು Walmart store ಇರುವುದು ತಿಳಿಯಿತು. ಹತ್ತಿರ ಅಂದರೂ ಎರಡು ಕಿಲೋಮೀಟರ್!
ಹೋಗಿ ತಂದೇನು ಅಂದರೆ ನನ್ನ ಬಳಿ ಕಾರಿರಲಿಲ್ಲ. Taxi ಮಾಡಿಕೊಂಡು ಹೋಗಬೇಕು ಅಂದರೆ, ಸ್ಥಳೀಯ ನಂಬರ್ ಇದ್ದ ತಾತ್ಕಾಲಿಕ ಸಿಮ್ ಆಗಿದ್ದರಿಂದ ಕಂಪೆನಿ ಅವರು ಕೊಟ್ಟಿದ್ದ debit ಕಾರ್ಡ್ ಬಳಸಿ Taxi ಬುಕ್ ಮಾಡಲು ಯಾಕೋ ಆಗುತ್ತಿರಲಿಲ್ಲ. ಹೊಟೇಲ್‌ನಲ್ಲಿ ಲಭ್ಯವಿದ್ದ ಕುಡಿಯುವ ನೀರಿನಲ್ಲಿ ಸಹಿಸಲಾರದಷ್ಟು ಕ್ಲೋರಿನ್ನಿನ ಘಾಟು ವಾಸನೆ, ಅಲ್ಲಿ ಎಲ್ಲವೂ “ಕೆಮಿಕಲ್ಮಷ” ಆಗಿರುವುದನ್ನು ಸಾರಿ ಸಾರಿ ಹೇಳುತ್ತಿತ್ತು. ನೀರಿನ ಬಾಟಲಿಗಳನ್ನು ತರಲು ನಡೆದುಕೊಂಡೆ ಹೋಗೋಣ ಅಂತ ನಿರ್ಧರಿಸಿ ಆಶಾ, ಪರಿಧಿಯ ಜೊತೆಗೆ walk ಹೊರಟೆ. ಹೊಟೇಲ್‌ಗೆ ಹತ್ತಿಕೊಂಡಿದ್ದ ಅಗಲವಾದ concrete ರಸ್ತೆ ಅದು. ಬಹುಶಃ ಹಿಮ ಬೀಳುವ ಕಾರಣದಿಂದ ಡಾಂಬರಿಗಿಂತ concrete ರಸ್ತೆ ಬಾಳಿಕೆ ಬರುತ್ತೆ ಅಂತಿರಬೇಕು. ಅಲ್ಲಲ್ಲಿ ಸಣ್ಣಪುಟ್ಟ ಹಳ್ಳ, ಬಿರುಕು ಇದ್ದದ್ದನ್ನು ನೋಡಿ ಇಲ್ಲಿನ ರಸ್ತೆಗಳೂ ನಮ್ಮ BBMP ರಸ್ತೆಯ ತರಹ ತೂತೇ ಎಂಬ ವಿಕೃತ ಆನಂದ ಅನುಭವಿಸಿದೆ! ಪಕ್ಕದಲ್ಲೇ ಇದ್ದ sidewalk (footpath ಪದಕ್ಕೆ ಅಮೆರಿಕನ್ನರು ಬಳಸುವ ಪರ್ಯಾಯ ಪದ!) ನ ಗುಂಟ ನಮ್ಮ ನಡಿಗೆ ಮುಂದುವರಿಯಿತು. ಒಂದರ್ಧ ಗಂಟೆಗಳಷ್ಟು ನಡೆದ ಮೇಲೆ ಕೊನೆಗೂ Walmart ದರ್ಶನವಾಯ್ತು. ಅಲ್ಲಿ ನೀರನ್ನು ಬಿಟ್ಟು ಮತ್ತೇನನ್ನೂ ಕೊಂಡುಕೊಳ್ಳುವ ಉತ್ಸಾಹ ಇರಲಿಲ್ಲ. ಒಂದಿಷ್ಟು ನೀರಿನ ಬಾಟಲಿಗಳ box ಕೊಂಡು debit card ನಲ್ಲಿ ಹಣ ಪಾವತಿಸಿ ಮತ್ತೆ ಹೊಟೇಲ್ ನೆಡೆಗೆ ನಡೆಯುತ್ತಾ ಹೊರಟೆವು. ಹೊಟೇಲ್ ಮುಟ್ಟಿದ ಕೂಡಲೇ ಒಂದು ಬಾಟಲಿ ತೆಗೆದು ನೀರು ಕುಡಿದ ಕೂಡಲೇ ನನ್ನ ಮುಖ ಇಂಗು ತಿಂದ ಮಂಗನಂತೆ ಆಗಿತ್ತು! ಯಾಕೆಂದರೆ ಆ ನೀರು ಮಿನರಲ್ ವಾಟರ್ ಆಗಿರದೆ ಯಾವುದೋ ಒಂದು flavor ಇರುವ ನೀರಾಗಿತ್ತು! ಅದನ್ನು ಕುಡಿದರೆ ನೀರಡಿಕೆ ಕಡಿಮೆ ಆಗುವ ಬದಲು ಜಾಸ್ತಿ ಆಯ್ತು. ಗಡಿಬಿಡಿಯಲ್ಲಿ ಸರಿಯಾಗಿ ನೋಡದೆ ನೀರನ್ನು ಖರೀದಿಸಿದ ಪರಿಣಾಮ ಅದಾಗಿತ್ತು. ಇಲ್ಲಿ ನೀರಿಗೂ ಗತಿಯಿಲ್ಲದೆ ಹೋಯಿತಲ್ಲ ಅಂತ ತಮಾಷೆ ಮಾಡಿದೆ. ಅನಿವಾರ್ಯವಾಗಿ ಕ್ಲೋರಿನ್ ನೀರೇ ಕುಡಿದು ದಾಹವನ್ನು ನೀಗಿಸಿಕೊಂಡೆವು.
ಅದೊಂದು ವಿಚಿತ್ರ ಘಟ್ಟ. ಒಂದಿಷ್ಟು ದುಡ್ಡು, ಆಸ್ತಿ, ಆತ್ಮಬಲ ಒಟ್ಟುಗೂಡಿಸಿಕೊಂಡಿರುತ್ತೇವೆ. ಸಾಕಷ್ಟು ಅನುಭವಗಳನ್ನು ಪಡೆದಿರುತ್ತೇವೆ. ಅಥವಾ ಅನುಭವದ ಹೆಸರಿನಲ್ಲಿ ತುಂಬಾ ತಪ್ಪುಗಳನ್ನು ಮಾಡಿಕೊಂಡಿರುತ್ತೇವೆ! ಪ್ರಬುದ್ಧರಾಗಿದ್ದೇವೆ ಎಂಬ ಭ್ರಮೆಯಲ್ಲಿ ತೇಲುತ್ತ ಎಲ್ಲರಿಗೂ ಉಪದೇಶ ಮಾಡುತ್ತಿರುತ್ತೇವೆ. ಬೇರೆ ಯಾರೂ ಸರಿ ಇಲ್ಲ ಎಂಬ ನಿಲುವು ಇರುತ್ತದೆ.
ಬಂದು ಆಗಲೇ ಮೂರು ದಿನಗಳಾಗಿತ್ತು. ನಾನು ತಾಳ್ಮೆ ಕಳೆದುಕೊಳ್ಳತೊಡಗಿದೆ. ಇನ್ನೂ ಎಲ್ಲಿ ಕೆಲಸಕ್ಕೆ ಹೋಗಬೇಕು ಅಂತ ನನ್ನ ದಾಸ್ ಬಾಸ್ ಯಾಕೆ ಹೇಳುತ್ತಿಲ್ಲ ಅಂತ ದಿಗಿಲು ಉಂಟಾಯಿತು. ಫೋನಾಯಿಸಿ ಕೇಳಿದೆ ಕೂಡ. ಇರಿ ಇವತ್ತು ಸಂಜೆ ನಿಮ್ಮ ಹೊಟೇಲ್ ಹತ್ತಿರ ಸಿಗುವೆ ಅಂದರು ದಾಸ್. ಸಂಜೆ ಸ್ವಲ್ಪ ತಡವಾಗಿಯೇ ಆದರೂ ಬಂದರು. ಚಳಿ ಈಗಾಗಲೇ ಶುರುವಾಗಿತ್ತು. ಹೊರಗೆ ನಿಲ್ಲಲು ಸಾಧ್ಯವಾಗದಷ್ಟು. ಹೀಗಾಗಿ ಅವರ ಕಾರ್ ಅನ್ನು ಶುರು ಇಟ್ಟುಕೊಂಡೆ ಅದರ ಒಳಗಡೆಯೇ ಮಾತಾಡಲು ಕೂತೆವು. ಅಲ್ಲಿ heater on ಮಾಡಿದ್ದರಿಂದ ಸ್ವಲ್ಪ ಬೆಚ್ಚಗೆ ಇತ್ತು.
“ಇನ್ನೂ ನಮ್ಮ client confirm ಮಾಡಿಲ್ಲ. ಆದರೆ ಹೆದರಬೇಡಿ, ನಮ್ಮ account ನಲ್ಲಿ ತುಂಬಾ projects ಇವೆ. ಎಲ್ಲೋ ಒಂದು ಕಡೆ ಆಗುತ್ತೆ.” ಅಂದು ಧೈರ್ಯ ತುಂಬುತ್ತಲೆ, ಬೆಚ್ಚಗಿನ ಕಾರಲ್ಲಿ ನಡುಗುವಂತೆ ಮಾಡಿದರು! ಇನ್ನೊಂದೆರಡು ದಿನಗಳಲ್ಲಿ ಗೊತ್ತಾಗುತ್ತೆ ಅಂತ ಭರವಸೆ ಕೊಟ್ಟರು. ಹಾಗೆಯೇ ಒಂದು ಇಂಡಿಯನ್ ಸ್ಟೋರ್‌ಗೆ ಕೂಡ ಕರೆದುಕೊಂಡು ಹೋದರು. ಅಲ್ಲಿನ ಕೆಲವು ಭಾರತೀಯರು ಹಾಗೂ ತಿಂಡಿ ತಿನಿಸುಗಳನ್ನು ನೋಡಿ ಮನಸ್ಸಿಗೆ ಸ್ವಲ್ಪ ಸಮಾಧಾನ ಆಯ್ತು. ಒಂದು ಮೊಸರಿನ packet, ನೀರಿನ bottles ಗಳನ್ನು ಕೊಂಡೆ. ದಾಸ್ ವಾಪಸ್ಸು ಹೊಟೇಲ್‌ಗೆ ನನ್ನನ್ನು ಬಿಟ್ಟು ಮನೆಗೆ ಹೋದರು. ಅವರು ಬಂದು ಹೋಗಿದ್ದು ಸ್ವಲ್ಪ ಸಮಾಧಾನ ತಂದಿತ್ತಾದರೂ ಇನ್ನೂ ಅನಿಶ್ಚಿತತೆ ಕಾಡುತ್ತಿತ್ತು. ದೇಶವನ್ನು ಬಿಡುವಾಗ ಗೆಳೆಯನೊಬ್ಬ ಹೇಳಿದ “ನಿನ್ನ ಜೀವನ ಅತಂತ್ರ ಆಗುತ್ತೆ” ಎಂಬ ಮಾತು ಪದೇ ಪದೇ ನೆನಪಾಯ್ತು!
ಮನಸ್ಸು ತುಂಬಾ ಹೆದರಿಸಿಬಿಡುತ್ತದೆ. ಹೀಗೆ ಆದರೆ, ಹಾಗೆ ಆದರೆ ಎಂಬ ಯೋಚನೆಗಳನ್ನು ತುಂಬಿ ಧೃತಿಗೆಡುವಂತೆ ಮಾಡುತ್ತದೆ. ಬಹಳ ಕೆಟ್ಟದಾದರೆ ಏನಾದೀತು? ವಾಪಸ್ಸು ಭಾರತಕ್ಕೆ ಮರಳಿ ಹೋಗುವುದು ಅಷ್ಟೇ ಅಂತ ನಾನು, ಆಶಾ ಧೈರ್ಯ ತಂದುಕೊಂಡು, ಇದ್ದಷ್ಟು ದಿನ ಓಮಾಹ ಸುತ್ತಾಡೋಣ ಅಂತ ಅಲ್ಲಿಯೇ ಅಕ್ಕಪಕ್ಕದ ಕೆಲವು ಸ್ಥಳಗಳನ್ನು ನೋಡಿ ಒಂದೆರಡು ದಿನ ಕಳೆದೆವು.
ಅವತ್ತು ದಾಸ್ ಫೋನ್ ಬಂತು. ಅಲ್ಲೊಂದು ಕಡೆ ಒಂದು project ಗೆ account manager ಬೇಕಿತ್ತು. ಅಲ್ಲಿ ಒಂದು ಸಂದರ್ಶನ ಕೊಟ್ಟೆ. ಅವರು ಮುಂದಿನ ವಾರದಿಂದ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದರು. ಬದುಕಿದೆಯ ಬಡ ಜೀವವೇ ಅಂತ ಮುಂದಿನ ತಯಾರಿ ಮಾಡಲು ತೊಡಗಿದೆ.
ಅಷ್ಟೊತ್ತಿಗೆ ನನ್ನ ಇನ್ನೊಬ್ಬ ಹಳೆಯ ಮಿತ್ರ ಫೋನ್ ಮಾಡಿ ಅದೆ ಊರಲ್ಲಿ ತನ್ನ ಪರಿಚಯದವರೊಬ್ಬರು ಇದ್ದಾರೆ, ಏನಾದರೂ ಸಹಾಯ ಬೇಕಾದರೆ ಅವರಿಗೆ ಕೇಳು ಅಂತ ಹೇಳಿದ್ದ. ಆದರೆ ಯಾರಿಗೂ ತೊಂದರೆ ಕೊಡೋದು ಬೇಡ ಅಂತ ನಾನು ಈಗಾಗಲೇ ನಿರ್ಧಾರ ಮಾಡಿದ್ದೆ. ನಾವೇ ಊರಲ್ಲಿ ಸ್ವತಂತ್ರವಾಗಿ ಅಡ್ಡಾಡಿ ಮನೆ ಹುಡುಕಲು ತೊಡಗಿದೆವು. ಅಲ್ಲಿ ತುಂಬಾ apartment ಗಳು ಇದ್ದವು. ನನ್ನ office ನ ಹತ್ತಿರದಲ್ಲೇ ಇರುವ ಒಂದು ಅಪಾರ್ಟ್ಮೆಂಟ್ ಅನ್ನು 1100 ಡಾಲರ್ ತಿಂಗಳ ಬಾಡಿಗೆಗೆ ತೆಗೆದುಕೊಂಡೆವು. ಅದು ತುಂಬಾ ಹೊಸದಾಗಿ ಕಾಣುತ್ತಿತ್ತು. ಬಟ್ಟೆ ಹಾಗೂ ಪಾತ್ರೆ ತೊಳೆಯುವ ಯಂತ್ರಗಳು ಮನೆಯ ಒಳಗಡೆಯೇ ಇದ್ದವು. ಹೀಗಾಗಿ ಮನೆಯ ಬಾಡಿಗೆ ತುಸು ಹೆಚ್ಚೇ ಇತ್ತು. ಇದಕ್ಕಿಂತ ಕಡಿಮೆ ಬಾಡಿಗೆಯ ಕೆಲವು ಅಪಾರ್ಟ್ಮೆಂಟ್‌ಗಳಲ್ಲಿ ಬಟ್ಟೆ ತೊಳೆಯಲು ಬಳಸುವ ಯಂತ್ರ ಹೊರಗಡೆ ಇತ್ತು. ನಾವು ಅಲ್ಲಿಗೆ ಹೋಗಿದ್ದು ಸುಖವಾಗಿ ಇರಲು ಹಾಗೂ ಸುತ್ತಾಡಲು. ದುಡ್ಡು ಉಳಿಸಿ ವಾಪಸ್ಸು ಒಯ್ಯಲು ಅಲ್ಲ. ಅಲ್ಲಿ ಇರೋವರೆಗೂ, ಆರಾಮಾಗಿ ಕಳೆಯೋಣ ಅಂತ ಇದೆ ಅಪಾರ್ಟ್ಮೆಂಟ್‌ಅನ್ನು ಇಷ್ಟಪಟ್ಟೆವು.
ನಾವು ಅಪಾರ್ಟ್ಮೆಂಟ್‌ಗೆ ಶಿಫ್ಟ್ ಆಗುವಾಗ ಅಲ್ಲಿದ್ದ ನಮ್ಮ ಮಿತ್ರನ ಮಿತ್ರರಿಗೆ ಹೇಗೋ ಗೊತ್ತಾಗಿ ತಾವೇ ತಮ್ಮ Benz car ತೆಗೆದುಕೊಂಡು ಕೂಡಲೇ ಸಹಾಯಕ್ಕೆ ಬಂದರು. ಅಲ್ಲಿ ಬೆಂಜ್ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ. ಅದಕ್ಕೆ ನಮ್ಮ ದೇಸಿಗಳು (ಅನಿವಾಸಿ ಭಾರತೀಯರಿಗೆ ಅಲ್ಲಿನವರು ಕರೆಯೋದು ಹಾಗೆ!) ಇಂತಹ ಸುಖಗಳಿಗಾಗಿ ಅಮೆರಿಕೆಗೆ ಹೋಗಲು ಹಾತೊರೆಯುತ್ತಾರೆ!
ನನಗೆ ಯಾಕೆ ಮೊದಲೇ ತಿಳಿಸಲಿಲ್ಲ? ನನ್ನದೇ ಅಪಾರ್ಟ್ಮೆಂಟ್‌ನಲ್ಲಿ ಎಷ್ಟೊಂದು ಖಾಲಿ ಇದ್ದವು. ಅಲ್ಲೇ ಕೊಡಿಸುತ್ತಿದ್ದೆ ಅಂತ ಅವರು ಪ್ರೀತಿಯಿಂದ ಬೈದರು. ಅವರಿಗೆ ಮೊದಲೇ ಕರೆ ಮಾಡದೆ ಒಳ್ಳೆಯದು ಮಾಡಿದೆ ಅಂತ ಅನಿಸಿತು. ಯಾಕಂದರೆ ಯಾವುದೋ ಗುರುತು ಪರಿಚಯ ಇಲ್ಲದ ವಿದೇಶಕ್ಕೆ ಹೋದಾಗ ದಾಕ್ಷಿಣ್ಯಕ್ಕೆ ಒಳಗಾಗುವುದೇ ಜಾಸ್ತಿ. ನಾನು ಅವರು ಹೇಳಿದರು ಅಂತ, ಅವರು ಹೇಳಿದ ಮನೆ ಹಿಡಿದು ಅದು ಸರಿ ಇಲ್ಲದಿದ್ದರೆ ಅವರಿಗೆ ದೂಷಿಸುತ್ತಾ ಕೂಡುವುದು ನನಗೆ ಬೇಕಾಗಿರಲಿಲ್ಲ. ನನ್ನ ನಿರ್ಧಾರಕ್ಕೆ ನಾನೇ ಬದ್ಧ. ನಮಗೆ ಇಷ್ಟವಾದ ಮನೆ ನಾವೇ ಅರಿಸಿಕೊಂಡ ತೃಪ್ತಿ ನಮಗಿತ್ತು. ಆದರೂ ಅಲ್ಲಿಗೆ ಹೋಗಿ ಎಷ್ಟೋ ದಿನಗಳಾದ ಮೇಲೆ ಒಬ್ಬ ದೇಸಿಯನ್ನು ಕಂಡು ನಮಗೂ ಖುಷಿಯಾಗಿತ್ತು. ಅವರೂ ಕನ್ನಡದವರು ಹಾಗೂ ಗದಗಿನವರೆ ಆಗಿದ್ದು ಇನ್ನೂ ಖುಷಿ. ನಮ್ಮ suitcase ಗಳನ್ನೆಲ್ಲ ನಮ್ಮ ಹೊಸ ಬಾಡಿಗೆ ಅಪಾರ್ಟ್ಮೆಂಟ್‌ಗೆ ಸಾಗಿಸಿ ಆದ ಮೇಲೆ, ತಮ್ಮ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಸಿಕ್ಕವನೇ ಚಂದ್ರು!
(ಮುಂದುವರಿಯುವುದು..)
ಗುರುಪ್ರಸಾದ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿ ರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ), ಗ್ರಾಮ “ಡ್ರಾಮಾಯಣ” ಸೇರಿ ಇವರ ನಾಲ್ಕು ಕೃತಿಗಳು ಪ್ರಕಟಗೊಂಡಿವೆ.
ನಿಮ್ಮ ಬರಹ ನೇಮಿಚಂದ್ರರು ಬರೆದ ನೀರು ಕೊಡದ ನಾಡಿನಲ್ಲಿ ಲೇಖನವನ್ನು ನೆನಪಿಸಿತು. 40ನೇ ವರ್ಷದ ಮನಸ್ಸಿನ ತಾಕಲಾಟಗಳು, ಭ್ರಮೆಗಳ ಮನಸ್ಥಿತಿಯ ನಿಮ್ಮ ಅನಿಸಿಕೆಗೆ ನನ್ನ ಸಹಮತ. ಏಕೆಂದರೆ ನಾನೂ ಕೂಡ ಅದನ್ನು ದಾಟಿ ಬಂದವನು. ಓದಿನ ಖುಷಿ ಕೊಟ್ಟ ಲೇಖನ.
ಗದಗ ಸರ್, ತಮ್ಮ ಅನಿಸಿಕೆಗಳನ್ನು ಕೇಳಿ ತುಂಬಾ ಖುಷಿಯಾಗುತ್ತದೆ. ಧನ್ಯವಾದಗಳು 🙂