ರಾತ್ರಿಯಾದರೆ ಸಾಕು, ಒಂದೊಂದು ಮನೆಯೂ ಒಂದೊಂದು ಬೆಳಕಿನ ಡಬ್ಬಿ. ಒಂದೊಂದು ಕಿಟಕಿಯಲ್ಲಿ ಕತ್ತಲು, ಇನ್ನೊಂದರಲ್ಲಿ ಬೆಳಕು. ಆ ಬೆಳಕಿನ ಪರದೆಯ ಹಿಂದೆಯೇ ಕಪ್ಪು ನೆರಳಾಗಿ ಕದಲುವ ಮನುಷ್ಯರು. ವಾಹನಗಳ ಭರಾಟೆ ತಗ್ಗಿರುವ ರಾತ್ರಿ ಹತ್ತರ ನೀರವದಲ್ಲಿ ಸಮೀಪದಲ್ಲೇ ಕೇಳಿಸುವ ರೈಲಿನ ಕೇಕೆ. ಅರೆರೇ, ರೈಲಿನ ಹಳಿ ಇಷ್ಟು ಹತ್ತಿರದಲ್ಲೇ ಇದೆಯೇ? ಈ ಕ್ಷಣಕ್ಕೆ ಕೇಳಿಸಿದ ಕೇಕೆಯಲ್ಲೇ ಅದು ಹಾದು ಹೋಗಲಿರುವ ನದಿ-ಬೆಟ್ಟ-ಸುರಂಗ-ಕಾಡುಗಳ ಸುಂದರ ಪ್ರಯಾಣದ ಕಲ್ಪನೆಯಾಗಿ ಮನಸ್ಸಿನಲ್ಲೇನೋ ಖುಷಿಯ ಭಾವ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
“ಎಂಟನೇ ಮೈಲಿ… ಯಾರ್ರೀ ಇಳ್ಯೋರು ಎಂಟನೇ ಮೈಲಿ…”
ಸಿಹಿ ನಿದ್ರೆಯ ಒಳಗಿನಿಂದಲೇ ತೇಲಿ ಬಂದ ಆ ಕೂಗಿಗೆ ಕಣ್ತೆರೆದರೆ ರಿವ್ವನೆ ಮುತ್ತಿಕೊಳ್ಳುವ ಚಳಿಯ ಜೊತೆಗೇ ಅಡರಿಕೊಳ್ಳುತ್ತದೆ ಆತಂಕ. ಎಂಟನೇ ಮೈಲಿ ಎನ್ನುವ ಹೆಸರಿನಲ್ಲಿನ ಹೊಸತನದಲ್ಲೇ ‘ಬೆಂಗಳೂರು ನಿನಗೆ ಅಪರಿಚಿತ’ ಎನ್ನುವ ಬೆದರಿಕೆಯಿದೆ. ಎಂಟನೇ ಮೈಲಿಯೆಂದರೆ ಇಲ್ಲೆಲ್ಲೋ ಒಂದು ಮೈಲಿಗಲ್ಲಿರಬಹುದು, ಅದರ ಪಕ್ಕದಲ್ಲಿ ಹೆದ್ದಾರಿಯಂಥಾ ತೆರೆದ ದಾರಿಯೊಂದು ಉದ್ದುದ್ದಕ್ಕೆ ಮಲಗಿರಬಹುದು ಎಂದೆಲ್ಲ ಅಂದುಕೊಳ್ಳುತ್ತ ಬಸ್ಸಿನ ಕಿಟಕಿ ಸರಿಸಿದರೆ ಹೊರಗಡೆ ಕಣ್ಣಿಗೆ ರಾಚುವಂಥಾ ಶಹರ. ಅರೇರೇ, ಎಲ್ಲಿದೆ ಮೈಲಿಗಲ್ಲು? ಎಲ್ಲಿದೆ ಹೆದ್ದಾರಿ? ಇಲ್ಲಿ ಬರೀ ಕಣ್ಕುಕ್ಕುವ ಕಟ್ಟಡಗಳೇ ಇದ್ದಾವಲ್ಲ? ಎಂದುಕೊಳ್ಳುವಾಗಲೇ ಮತ್ತೊಂದು ಊರಿನ ಹೆಸರು ಮ್ಯಾಪಿನಲ್ಲಿ ತೋರಿಸುತ್ತದೆ: ಮತ್ತೀಕೆರೆ!
ಕೆರೆಯ ಏರಿ. ಅದರ ಪಕ್ಕ ಹಸಿರಾಗಿ ಬಿದ್ದುಕೊಂಡಿರುವ ಕಾಲುದಾರಿ. ಅಲ್ಲಿ ಸಾಲಾಗಿ ಮೇಯುತ್ತಿರುವ ಹಸುಗಳು. ಇವನ್ನೆಲ್ಲ ಕಲ್ಪಿಸಿಕೊಂಡು ಮತ್ತೀಕೆರೆಯ ಉದ್ದಗಲಕ್ಕೂ ಅಲೆದರೂ ಕೆರೆ ಬಿಡಿ, ಸಣ್ಣ ನೀರಿನ ಹೊಂಡವೂ ಇಲ್ಲ. ಬೈಯಪ್ಪನ ಹಳ್ಳಿ, ತಾವರೆಕೆರೆ, ಹೊಸಕೆರೆ ಹಳ್ಳಿ… ಹೀಗೆ ಹೆಸರಿನಲ್ಲೇ ಎಷ್ಟೆಲ್ಲ ಹಸಿರಿನ ಕಲ್ಪನೆಯಿರುವ ನಾಮಕರಣ ಮಾಡಿಕೊಂಡಿರುವ ಊರುಗಳಾದರೂ ಒಳಗಡೆ ಮತ್ತದೇ ಕಟ್ಟಡ ಹಾಗೂ ಮನುಷ್ಯರ ಕಿಕ್ಕಿರಿದ ಸಂಯೋಜನೆಯಲ್ಲಿ ನಿಂತಿರುವ ಏರಿಯಾಗಳು. ಅದೇಕೆ ಈ ಶಹರದ ಏರಿಯಾಗಳ ಹೆಸರಿಗೂ, ಅವುಗಳ ಸ್ವರೂಪಕ್ಕೂ ಸಂಬಂಧವೇ ಇಲ್ಲ ಎಂದುಕೊಂಡರೆ ಬೆಂಗಳೂರು ವಿಷಾದವಾಗಿ ನಗುತ್ತದೆ.
ಆಫಿಸಿನಲ್ಲಿ, ಮಧ್ಯಾಹ್ನದ ಊಟವಾದ ನಂತರದ ಕಿರು ಬಿಡುವಿನಲ್ಲಿ ರಾಜರಾಜೇಶ್ವರಿ ನಗರದ ಬೀದಿಗಳಲ್ಲಿ ಸುಮ್ಮನೆ ನಡೆಯುತ್ತೇನೆ. ಇಕ್ಕೆಲದಲ್ಲೂ ಮರಗಳಿರುವ, ಅಷ್ಟಾಗಿ ವಾಹನ ಸಂಚಾರವಿಲ್ಲದ, ಶಹರದ ಉಳಿದ ಏರಿಯಾಗಳಿಗಿಂತ ಭಿನ್ನವಾದ ಒಳ ರಸ್ತೆಗಳಿವು. ಮೇಲೆ ಸುಡುತ್ತಿರುವ ಬಿಸಿಲನ್ನು ನುಂಗಿಕೊಂಡು ತಂಪಾಗಿ ರಸ್ತೆಯಗಲಕ್ಕೂ ನೆರಳು ಹಾಸಿರುವ ಮರಗಳು. ಅವುಗಳಡಿಯಲ್ಲಿ ನಿಶ್ಯಬ್ಧವಾಗಿ ನಿಂತ ಅಪಾರ್ಟ್ಮೆಂಟುಗಳು! ರಾತ್ರೋ ರಾತ್ರಿಯ ಅಭಿವೃದ್ಧಿಯ ಪಥದಲ್ಲಿ ಅದ್ಯಾವ ಪ್ರತ್ಯೇಕ ಹಾದಿಯನ್ನು ಹಿಡಿಯಿತೋ ಈ ರಾಜರಾಜೇಶ್ವರಿ ನಗರ? ಇಂಡಸ್ಟ್ರಿಯಲ್ ಏರಿಯಾ ಆಗುವ ಬದಲು ರೆಸಿಡೆನ್ಶಿಯಲ್ ತಾಣವಾಗುವ ನಿರ್ಧಾರ ಮಾಡುವ ಮೂಲಕ ತನ್ನ ಹಸಿರನ್ನು ಉಳಿಸಿಕೊಂಡು ಬಿಟ್ಟಿತು.
ಬೇಸ್ಮೆಂಟಿನ ಅಂಚಿನಲ್ಲಿ ಈಗಷ್ಟೇ ಊಟವಾದ ಜೊಂಪಿಗೆ ಕುಗುರುತ್ತ ಕುಳಿತ ಸೆಕ್ಯುರಿಟಿ. ಕತ್ತಲು-ಬೆಳಕುಗಳ ಸಂಯೋಜನೆಯಲ್ಲಿ ಪ್ರಶಾಂತವಾಗಿ ನಿಂತ ಬೇಸ್ಮೆಂಟುಗಳು. ಅವುಗಳ ಶಾಂತಿಯನ್ನು ನೋಡುವಾಗ ಅದೇನೋ ನೆಮ್ಮದಿ. ಊಟ ಮುಗಿದಿರುವ, ಧಾವಂತವಿಲ್ಲದ ಮಧ್ಯಾಹ್ನವೊಂದು ಅವನ್ನು ಗಟ್ಟಿಯಾಗಿ ಆಲಂಗಿಸಿಕೊಂಡಿದೆ.
ಏನು ಮಾಡುತ್ತಿರಬಹುದು ಅದರೊಳಗಿರುವ ಕೆಲಸಕ್ಕೆ ಹೋಗದ ಗೃಹಿಣಿಯರು? ಇದ್ದುದರಲ್ಲೇ ನಿಶ್ಯಬ್ಧವಾಗಿರುವ ಮಧ್ಯಾಹ್ನದ ಶಾಂತ ಶಹರವನ್ನು ಎರಡನೇ ಮಹಡಿಯ ಕಿಟಕಿಯಿಂದೊಮ್ಮೆ ನೋಡಿ ಕಿಟಕಿ ಸರಿಸಿ ಮಲಗಿರಬಹುದು. ಸಂಜೆ ಮಕ್ಕಳು ಬಂದ ನಂತರ ಹೊಲಿಯಲಾಗದ ಕಸೂತಿಯನ್ನು ಸ್ವೆಟರ್ಗೆ ಹೆಣೆಯುತ್ತ ಕುಳಿತಿರಬಹುದು. ತೌರಿನ ಅಮ್ಮನಿಗೆ ಕರೆ ಮಾಡಿ ಸಿಟ್ಟೌಟಿನಲ್ಲಿ ಅರಳಿದ ಕುಂಡದ ಹೂವಿನ ಬಗ್ಗೆ ಹೇಳುತ್ತಿರಬಹುದು. ಮಾತು-ಮಾತಿನಲ್ಲೇ ಮುಂದಿನ ತಿಂಗಳು ತೌರಿಗೆ ಹೋಗುವುದು ನಿಕ್ಕಿಯಾಗಿ, ಪ್ರಯಾಣದ ಸಂಭ್ರಮವಾಗಲೇ ಮನಸ್ಸಿನಲ್ಲಿ ಶುರುವಾಗಿರಬಹುದು. ಇನ್ನು, ಕೋಣೆಯಲ್ಲಿ ಬೆಚ್ಚಗೆ ಹೊದ್ದು ಮಲಗಿರುವ ನಿವೃತ್ತ ವೃದ್ಧರ ಪಕ್ಕದ ಕಿಟಕಿಯಲ್ಲಿ ತಣ್ಣಗೆ ಎಲೆ ತೂಗುತ್ತ ನಿಂತ ಮೇ ಫ್ಲವರ್ ಮರ. ಬದಿಯಲ್ಲಿ ಆಗಷ್ಟೇ ಓದಿ ಮುಗಿಸಿದ ದಿನ ಪತ್ರಿಕೆ. ಪಕ್ಕದ ಕೋಣೆಯಲ್ಲಿ ನಿಶ್ಯಬ್ಧವಾಗಿ ವರ್ಕ್ ಫ್ರಂ ಹೋಂ ಮಾಡುತ್ತಿರುವ ಇಂಜಿನಿಯರ್. ಹೀಗೆ ಇವರುಗಳ ನಡುವೆ ಹಬ್ಬಿಕೊಂಡಿರುವ ಧಾವಂತವಿಲ್ಲದ ಸಮಯವನ್ನು ಕಲ್ಪಿಸಿಕೊಳ್ಳುವುದೇ ಏನೋ ಖುಷಿ.
ಇನ್ನು ಈ ಅಪಾರ್ಟ್ಮೆಂಟುಗಳ ಎತ್ತರದ ನೋಟವೆಂದರೆ ನನಗೆ ಅದೇನೋ ಸೆಳೆತ. ಹತ್ತು ವರ್ಷಗಳ ಕೆಳಗೆ ಸಂಬಂಧಿಕರೊಬ್ಬರು ಶ್ರೀನಿವಾಸ ನಗರದಲ್ಲಿ ಬಾಡಿಗೆಗಿದ್ದ ಆರನೆಯ ಮಹಡಿಯ ಅಪಾರ್ಟ್ಮೆಂಟಿಗೆ ಆಗಾಗ ಹೋಗುತ್ತಿದ್ದೆ. ಮುಖ್ಯ ರಸ್ತೆಯಿಂದ ಬಲಕ್ಕೆ ತಿರುಗಿ, ಇಳಿಜಾರಿನಲ್ಲಿ ಎಡಕ್ಕೆ ಹೊರಳಿದಾಗ ಸಿಕ್ಕುವ ಇಕ್ಕಟ್ಟಿನ ರಸ್ತೆಯ ಇಕ್ಕೆಲದಲ್ಲೂ ರಾಶಿ ಸುರಿದ ಸಿಮೆಂಟುಗಳು, ನಿಲುಗಡೆಯಾದ ವಾಹನಗಳು, ತೆರೆದ ಮೋರಿ ಹಾಗೂ ಒಡೆದ ರಸ್ತೆ! ನಡೆಯಲಿಕ್ಕೇ ಜಾಗವಿಲ್ಲದ ಇಲ್ಲೂ ನುಗ್ಗುವ ಕಾರು, ಬೈಕುಗಳಿಂದ ಪಾರಾಗುತ್ತ ಅಪಾರ್ಟ್ಮೆಂಟನ್ನು ಹೊಕ್ಕು ಆರನೇ ಮಹಡಿಗೆ ಏರಿದರೆ ಇಲ್ಲಿ ತೆರೆದುಕೊಳ್ಳುವ ಲೋಕವೇ ಬೇರೆ. ಅರೆಗತ್ತಲಿನಲ್ಲಿ ಮಲಗಿರುವ ನಿಶ್ಯಬ್ಧದ ಕಾರಿಡಾರು. ಆ ಕತ್ತಲಿನಲ್ಲೇ ಅದು ಹೇಗೋ ಹಬ್ಬಿಕೊಂಡಿರುವ ಕುಂಡದ ಬಳ್ಳಿ. ಒಂದೇ ರೀತಿ ಕಾಣುವ, ನಂಬರೊಂದೇ ಬದಲಾಗಿರುವ ಸಾಲು ಸಾಲು ಫ್ಲಾಟುಗಳು. ಯಾವುದನ್ನು ಹೊಕ್ಕರೂ ಎದಿರಾಗುವ ನನ್ನ ಸಂಬಂಧಿಕರನ್ನೇ ಹೋಲುವ ಮಾಡ್ರನ್ ಸಂಸಾರಗಳು. ಹೀಗೆ ಕಾಪಿ-ಪೇಸ್ಟ್ ಮಾಡಿದಂತಿರುವ ತದ್ರೂಪದ ಮನೆಗಳನ್ನು ಹಾದು ಸಂಬಂಧಿಕರ ಫ್ಲಾಟನ್ನು ಹೊಕ್ಕರೆ, ಅಲ್ಲಿಂದ ಕಾಣುವ ಶಹರವೇ ಬೇರೆ.
ಆರನೇ ಮಹಡಿಯ ಫ್ಲಾಟಿನ ಪಶ್ಚಿಮದ ಕಿಟಕಿ ನೇರ ನಾನೀಗ ನಡೆದು ಬಂದ ದಾರಿಗೇ ತೆರೆಯುತ್ತಿತ್ತು. ಅದೇ ಇಕ್ಕಟ್ಟಿನ ರಸ್ತೆ, ಒತ್ತೊಟ್ಟಿನ ಇಳುಕಲು. ಆದರೆ ಇಲ್ಲಿ ನಿಂತು ನೋಡುವಾಗ ಮಾತ್ರ ಆ ನೋಟವೇ ಬೇರೆ. ಇಡೀ ಏರಿಯಾವೇ ಯಾರೋ ಬರೆದು ಹೋದ ಚಿತ್ರದಂತೆ ಕಾಣುತ್ತಿದೆ. ಚಿಕ್ಕ ಚಿಕ್ಕ ಮನೆಗಳೆಲ್ಲ ಸ್ಕೇಲಿಟ್ಟು ಕತ್ತರಿಸಿ, ಬಣ್ಣ ಬಳಿದು ನಿಲ್ಲಿಸಿದ ರಟ್ಟಿನ ರಚನೆಗಳಂತೆ. ಫೋಟೋ ಶಾಪಿನಲ್ಲಿ ಬೇರ್ಯಾವುದೋ ಫೋಟೋದಿಂದ ಕತ್ತರಿಸಿ ಇಲ್ಲಿ ಹಾಕಿದಂತೆ ಕಾಣುವ ನಡುವಿನ ಟಾರು ರಸ್ತೆ. ಆ್ಯನಿಮೇಟ್ ಮಾಡಿದಂತೆ ಅವುಗಳ ಮೇಲೆ ನಿಧಾನವಾಗಿ ಚಲಿಸುವ ವಾಹನಗಳು. ಅಗೋ ಅಲ್ಲಿ, ದೂರದಿಂದ ಹರಿದು ಬಂದಿರುವ ಮೋರಿ ಹಾಗೂ ಅದಕ್ಕೆ ಕಟ್ಟಿದ ಕಿರು ಸೇತುವೆ. ಅದರಾಚೆಗೆ ಅಲ್ಲಿ ಒಂದಷ್ಟು ಮಕ್ಕಳು ಕ್ರಿಕೇಟಾಡುತ್ತಿರುವ ಖಾಲಿ ಸೈಟು. ಅದರಾಚೆಗೆ ಸಾಲಾಗಿ ನಿಂತ ಕಟ್ಟಡಗಳ ರಾಶಿಯ ತುತ್ತ ತುದಿಯ ದಿಗಂತದಲ್ಲಿ ಕೆಂಪಾಗಿ ಮುಳುಗುತ್ತಿರುವ ಸಂಜೆಯ ಸೂರ್ಯ! ಅಬ್ಬಬ್ಬಾ, ನಾನು ಬೈದುಕೊಳ್ಳುತ್ತ ನಡೆದು ಬಂದ ರಸ್ತೆ ಇದೇನಾ? ಎಂಥಾ ಇಕ್ಕಟ್ಟಿನ ಪರಿಸರವೂ ಎತ್ತರಕ್ಕೇರಿದ ಮರುಕ್ಷಣ ಎಷ್ಟು ಸುಂದರವಾಗುತ್ತದಲ್ಲ ಅನ್ನಿಸುತ್ತಿತ್ತು.

ಇಲ್ಲಿಗೆ ಬರುತ್ತಿದ್ದ ವಾರಾಂತ್ಯದ ಸಂಜೆಗಳಲ್ಲಿ ನಾನು ಹಾಗೂ ಸಂಬಂಧಿಕರು ಕಾಫಿಯ ಲೋಟ ಹಿಡಿದು ನೇರ ಟೆರೆಸಿಗೆ ಹೋಗುತ್ತಿದ್ದೆವು. ಇನ್ನೂ ಒಂದೆರಡು ಮಹಡಿ ಎತ್ತರದಲ್ಲಿರುವ ಅಲ್ಲಿಂದ ನೋಡಿದರಂತೂ ಇಡೀ ಶಹರ ನೀಲಾಕಾಶದ ಕೆಳಗೆ ಹಚ್ಚಿಟ್ಟ ಬೆಳಕಿನ ಗೂಡುಗಳಂತೆ! ಸಂಜೆಯು ತೊಡಿಸಿದ ಬಣ್ಣದಂಗಿಗಳ ತೊಟ್ಟು ತೇಲಿ ಬರುವ ಮೋಡಗಳ ಹಿನ್ನೆಲೆಯಲ್ಲಿ ಈ ಬೆಂಗಳೂರು ಅದೆಷ್ಟು ಸುಂದರ! ಆ ಇಕ್ಕಟ್ಟು, ಕಗ್ಗಂಟಿನ ರಸ್ತೆಗಳ ಬದಲು ಈ ನೀಲಾಕಾಶದಲ್ಲೇ ನಾವು ಓಡಾಡುವಂತಿದ್ದರೆ, ಹಾರುತ್ತ ಆಫೀಸಿಗೆ ಹೋಗುವಂತಿದ್ದರೆ ಬೆಳಗಿನ ಧಾವಂತದ ಪ್ರಯಾಣವೂ ಎಷ್ಟು ಉಲ್ಲಾಸಭರಿತವಾಗಿರುತ್ತಿತ್ತಲ್ಲ? ಅಷ್ಟಕ್ಕೂ ಪ್ರಯಾಣದ ಖುಷಿ ಅಡಗಿರುವುದು ಸಾಗುವ ದಾರಿಯಲ್ಲ ಅಥವಾ ತಲುಪುವ ತಾಣದಲ್ಲ?
ಇಕ್ಕಟ್ಟಿನ ರಚನೆಗಳಿಂದಾಗಿ ಕಳೆದುಕೊಂಡ ತನ್ನ ವಿಸ್ತಾರವನ್ನು ಮರಳಿ ಪಡೆಯಲೆಂದೇ ಈ ಶಹರ ಎತ್ತರದ ಕಟ್ಟಡಗಳ ಕಟ್ಟಿಕೊಂಡಿರಬೇಕು. ಬಹುಶಃ. ರಾತ್ರಿಯಾದರೆ ಸಾಕು, ಒಂದೊಂದು ಮನೆಯೂ ಒಂದೊಂದು ಬೆಳಕಿನ ಡಬ್ಬಿ. ಒಂದೊಂದು ಕಿಟಕಿಯಲ್ಲಿ ಕತ್ತಲು, ಇನ್ನೊಂದರಲ್ಲಿ ಬೆಳಕು. ಆ ಬೆಳಕಿನ ಪರದೆಯ ಹಿಂದೆಯೇ ಕಪ್ಪು ನೆರಳಾಗಿ ಕದಲುವ ಮನುಷ್ಯರು. ವಾಹನಗಳ ಭರಾಟೆ ತಗ್ಗಿರುವ ರಾತ್ರಿ ಹತ್ತರ ನೀರವದಲ್ಲಿ ಸಮೀಪದಲ್ಲೇ ಕೇಳಿಸುವ ರೈಲಿನ ಕೇಕೆ. ಅರೆರೇ, ರೈಲಿನ ಹಳಿ ಇಷ್ಟು ಹತ್ತಿರದಲ್ಲೇ ಇದೆಯೇ? ಈ ಕ್ಷಣಕ್ಕೆ ಕೇಳಿಸಿದ ಕೇಕೆಯಲ್ಲೇ ಅದು ಹಾದು ಹೋಗಲಿರುವ ನದಿ-ಬೆಟ್ಟ-ಸುರಂಗ-ಕಾಡುಗಳ ಸುಂದರ ಪ್ರಯಾಣದ ಕಲ್ಪನೆಯಾಗಿ ಮನಸ್ಸಿನಲ್ಲೇನೋ ಖುಷಿಯ ಭಾವ. ಟೆರೆಸಿನಿಂದಿಳಿದು ಬಂದು, ಅದೇ ಪಶ್ಚಿಮದ ಕಿಟಕಿಯ ಪಕ್ಕದ ಮಂಚದಲ್ಲಿ ಮಲಗಿ ಪರದೆ ಸರಿಸಿದರೆ ಕನಸಿನಂತೆ ಹೊಳೆಯುತ್ತ ನಿದ್ರೆಗೆ ಜಾರಿಸುವ ಕಿಟಕಿಯಾಚೆಗಿನ ಮಿಣುಕು ದೀಪಗಳು.
*****
ಮೈಸೂರಿನ ಬೀದಿಯೊಂದರಲ್ಲಿ ನಡೆಯುತ್ತಿದ್ದೆ. ಇಲ್ಲಿನ ಬೀದಿಗಳೆಲ್ಲ ಅದು ಹೇಗೋ ಹಸಿರು ಪಾರ್ಕಿಗೆ, ಅಥವಾ ವಿಶಾಲವಾದ ತೆರೆದ ವೃತ್ತಗಳಿಗೆ, ಇಲ್ಲಾ ನೇರ ಕಾಣಿಸುವ ಚಾಮುಂಡಿ ಬೆಟ್ಟದ ನೋಟಕ್ಕೇ ತೆರೆದುಕೊಂಡು ಬಿಡುತ್ತವೆ. ರಸ್ತೆಗಳಿನ್ನೂ ವಿಶಾಲವಾಗಿಯೇ ಉಳಿದಿರುವ ಈ ಶಹರಕ್ಕೆ ಎತ್ತೆತ್ತರದ ಕಟ್ಟಡಗಳನ್ನು ನಿಲ್ಲಿಸಿಕೊಳ್ಳುವ ದರ್ದು ಬಂದಿಲ್ಲ. ಇಲ್ಲಿನ ಯಾವುದೇ ಎರಡು ಅಥವಾ ಮೂರನೆಯ ಮಹಡಿಯ ಟೆರೆಸು ಹತ್ತಿದರೂ ಚಾಮುಂಡಿ ಬೆಟ್ಟವೇ ಕಾಣಿಸುತ್ತದೆ. ರಾತ್ರಿಯ ಹೊತ್ತಿನಲ್ಲೂ ದೀಪ ಹಚ್ಚಿಕೊಂಡು ಮಿನುಗುವ ಚಾಮುಂಡಿ ಬೆಟ್ಟದ ನೋಟ ಶಹರವೊಂದರಲ್ಲಿ ಅಂತರ್ಗತವಾಗಿರುವ ವ್ಯಸ್ತತೆಯನ್ನು, ಅಸ್ತವ್ಯಸ್ತತೆಯನ್ನು, ಧಾವಂತವನ್ನು ಕಡಿಮೆ ಮಾಡಿದೆ.
ಇಲ್ಲಿನ ವಿಶಾಲ ರಸ್ತೆಗಳನ್ನು, ಬದಿಯ ಮರಗಳನ್ನು, ಅಷ್ಟಾಗಿ ಜ್ಯಾಮಾಗದ ಟ್ರಾಫಿಕ್ಕನ್ನು, ಧಾವಂತವಿಲ್ಲದ ದಿನಚರಿಗಳನ್ನು ನೋಡಿದಾಗ ಬೆಂಗಳೂರೂ ಹೀಗೇ ಇರಬಾರದಿತ್ತೇಕೆ ಎಂದು ವ್ಯಥೆಯಾಗುತ್ತದೆ. ಒಂದು ರಾಜರಾಜೇಶ್ವರಿ ನಗರ, ಒಂದು ವಸಂತ ನಗರ, ಒಂದು ಜಯನಗರ ಇದ್ದಷ್ಟೇ ಹಸಿರಾಗಿ, ವಿಶಾಲವಾಗಿ ಹಾಗೂ ವ್ಯವಸ್ಥಿತವಾಗಿ ಉಳಿದ ಏರಿಯಾಗಳೂ ಇದ್ದಿದ್ದರೆ, ಅಭಿವೃದ್ಧಿಯ ಜೊತೆ ಹಸಿರು ಹಾಗೂ ವ್ಯವಸ್ಥಿತ ಮೂಲ ಸೌಕರ್ಯವನ್ನೂ ಉಳಿಸಿಕೊಳ್ಳಲು ಸರ್ಕಾರಗಳು ಹಾಗೂ ನಾಗರೀಕರು ದೃಢ ನಿಶ್ಚಯ ಮಾಡಿದ್ದರೆ ನನ್ನ ಬೆಂಗಳೂರು ಬರಿದೆ ಹತ್ತನೇ ಮಹಡಿಯ ಟೆರಾಸಿನಿಂದ ಮಾತ್ರವಲ್ಲ, ನೆಲದ ಮೇಲಿಂದಲೂ ಸುಂದರವಾಗಿಯೇ ಇರುತ್ತಿತ್ತೇನೋ?

ಅದೆಲ್ಲ ಏನೇ ಆದರೂ ಮೈಸೂರು ಅಥವಾ ರಾಜ್ಯದ ಇನ್ಯಾವುದೇ ಶಹರಗಳ ನಿಬಿಡ ರಹಿತ ವಿಶಾಲತೆಗಳ ಹಿಂದೆ ಬೆಂಗಳೂರಿನ ತ್ಯಾಗವಿದೆ. ಎಲ್ಲರಿಗೂ ತನ್ನಲ್ಲೇ ಜಾಗ ಕೊಟ್ಟು, ದೂರದ ರಾಜ್ಯದಲ್ಲಿ ಹುಟ್ಟಿದವರ ಉದ್ಯೋಗಕ್ಕೂ ತಾನೊಬ್ಬನೇ ಕೊನೆಯ ದಿಕ್ಕಾಗಿ, ‘ನನ್ನೂರು’ ಎನ್ನುವ ಪ್ರೀತಿಯಿಲ್ಲದವರಿಗೂ ಎದೆ ಹಾಸಿ, ಮರ, ಬೆಟ್ಟ, ಕೆರೆಗಳ ಸಮೇತ ತನ್ನ ಇಂಚಿಂಚನ್ನೂ ಮಾರಿಕೊಂಡ ಅದರ ವಿಶಾಲ ಹೃದಯವಿದೆ. ಯಾರಿಗೆ ಗೊತ್ತು? ಕಾಲದ ಹರಿವಿನಲ್ಲಿ ಮುಂದೆಂದೋ ನಮ್ಲೆಲ್ಲರಲ್ಲಿ ನಾಗರೀಕತೆಯ ಲಕ್ಷಣಗಳು ಮೈದಾಳಿ, ಅಭಿವೃದ್ಧಿಯ ಜೊತೆ ಪರಿಸರದ ಮಹತ್ವವೂ ಮನವರಿಕೆಯಾಗಿ, ಬೆಂಗಳೂರಿನಲ್ಲಿ ಕಂಪನಿಯ ಒಳಕೋಣೆಗಳ ಏರ್ ಫ್ರೆಷ್ನರ್ ಪರಿಮಳದ ಜೊತೆ ಅದರ ಹಳೆಯ ಸಂಪಿಗೆಯ ಘಮಲಿಗೂ ಜಾಗ ಸಿಗಬಹುದು.
ಬೆಂಗಳೂರಿನ ಹಸಿರು ಇನ್ನಷ್ಟು ಹೆಚ್ಚಬಹುದು.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
