Advertisement
ಸಿಡ್ನಿಯಲ್ಲಿ ಕರುಣಿಸೋ ರಂಗ:ಅನಿವಾಸಿ ಆಸ್ಟ್ರೇಲಿಯಾ ಪತ್ರ

ಸಿಡ್ನಿಯಲ್ಲಿ ಕರುಣಿಸೋ ರಂಗ:ಅನಿವಾಸಿ ಆಸ್ಟ್ರೇಲಿಯಾ ಪತ್ರ

ನನ್ನ ಬಾಲ್ಯ ಕಳೆದದ್ದು ಬೆಂಗಳೂರಿನ ಸಿಟಿ ಮಾರ್ಕೆಟ್, ಕಲಾಸಿಪಾಳ್ಯ ಪ್ರದೇಶದ ಅಂಚಿನಲ್ಲಿದ್ದ ಪುಟ್ಟಕೋಣೆಗಳ ಚಿಕ್ಕ ಮನೆಯಲ್ಲಿ. ಮಧ್ಯಮವರ್ಗದ ಮನಸ್ಸುಳ್ಳ ಮನೆಯಲ್ಲಿ ಕೆಳಮಧ್ಯಮವರ್ಗದ ಸವಾಲುಗಳ ನಡುವೆ ಕಳೆಯಿತು. ಈ ಸವಾಲನ್ನು ಕೆಲವರು “ಕಷ್ಟ” ಎಂದು ಕರೆಯುತ್ತಾರೆ. ಆದರೆ ಕೈಗೆಟುಕದ ಚಿಕ್ಕಚಿಕ್ಕ ಕನಸಿದ್ದರೂ ನಮಗೆ ಹಾಗನಿಸುತ್ತಿರಲಿಲ್ಲ. ಅಜ್ಜಿ ಮನೆಯ ತಾತ-ಅಜ್ಜಿಯರ ಪ್ರೀತಿ, ಸೋದರ ಮಾವಂದಿರ ಕುಕ್ಕುಲತೆ ಆ “ಕಷ್ಟ”ಗಳನ್ನು ಸಹ್ಯಮಾಡಿದ್ದು ನಿಜವಾದರೂ, ಅದಕ್ಕಿಂತ ಮಿಗಿಲಾಗಿದ್ದು ಬೇರೊಂದಿತ್ತು. ಅದು ಸೆಲ್ಫ್-ಪಿಟಿ ಹಿಂಬಾಗಿಲಿನಿಂದಲೂ ನುಸುಳದಂತ ಅಪ್ಪ-ಅಮ್ಮನ ಕಟ್ಟೆಚ್ಚರದ ಪಾಲನೆ.

ಅಪ್ಪ ಈವತ್ತಿಗೂ ಕೆಲವೊಮ್ಮೆ ಆಜ್ಞೇಯತಾವಾದಿ ಆಗಿಯೂ, ಕೆಲವೊಮ್ಮೆ ಯಾವುದೋ “ಪ್ರಕೃತಿ ಶಕ್ತಿ” ಇದೆಯೆಂಬ ನಂಬಿಕೆಯನ್ನೂ ಉಳಿಸಿಕೊಂಡವರು. ವಿಕಾಸವಾದ ಮತ್ತು ದೈವಿಕ ಕಲ್ಪನೆಯ ಒಲ್ಲದ ಲಗ್ನ ಎಂದು ಅದನ್ನು ಅರಿಯುತ್ತೇನೆ. ಅವರಿಂದ ಪ್ರಭಾವಿತರಾದ ಅಮ್ಮ ಈಗಲೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆಯಿಲ್ಲದೆ, ಆದರೆ “ನಂಬಬೇಕೇನೋ” “ನಂಬಿದರೆ ಒಳ್ಳೆಯದೇನೋ” ಎಂಬ ತೊಳಲಾಟದಲ್ಲಿ ಇರುವವರು.

ಆ ಚಿಕ್ಕಮನೆಯಲ್ಲಿ ಬೆಳಗಾ ಮುಂಚೆ ಕೇಳುತ್ತಿದ್ದ ಸಿಟಿ ಮಾರ್ಕೆಟ್ ಮಸೀದಿಯ ನಮಾಜಿನ ಕರೆ ಮೈದಡವಿ ಎಬ್ಬಿಸುತ್ತಿತ್ತು. ಅದೆಂದೂ ಬೇಡದ್ದು ಅನಿಸುತ್ತಿರಲಿಲ್ಲ. ಆ ಕರೆಯುವ ದನಿ ಅದಕ್ಕೆ ತುಸು ಕಾರಣವಾದರೆ, ಕೇಳುವ ಕಿವಿಯೂ ತುಸು ಕಾರಣವಾಗಿತ್ತು. ಮುಂಜಾನೆಯ ನಸುಗತ್ತಲಲ್ಲಿ ಹಾಲು ತರಲು ಅಪ್ಪ ಮಫ್ಲರ್ ಸುತ್ತಿಕೊಂಡು ಹೊರಟರೆ, ಅಮ್ಮ ಮಜ್ಜಿಗೆ ಕಡಿಯಲು ಕೂರುತ್ತಿದ್ದರು. ಅಡುಗೆ ಮನೆಯ ಮೂಲೆಯ ಗೋಡೆಗೆ ಬಡಿದಿದ್ದ ಎರಡು ಕಬ್ಬಿಣದ ಹುಕ್ಕಿಗೆ ಕಟ್ಟಿದ ಬಿಳಿ ಹಗ್ಗದ ಕುಣಿಕೆ. ಅದರೊಳಗೆ ಗರಗರ ತಿರುಗುವ ಕಡಗೋಲು. ಮಜ್ಜಿಗೆಯ ಬುರ್‍ಬುರ್‍ ಸದ್ದು. ಅದರೊಟ್ಟಿಗೆ ಅಮ್ಮ ಗುನುಗುತ್ತಿದ್ದ “ಕರುಣಿಸೋ ರಂಗ” ಪದ.

ಅಮ್ಮ ಚಂದವಾಗಿ ಹಾಡಿದರೂ ತಮ್ಮನ್ನು ಗಾಯಕಿ ಅಂದುಕೊಂಡಿಲ್ಲ. ಬೇಂದ್ರೆಯವರ “ಏಳು ಚಿನ್ನ ಬೆಳಗಾಯ್ತು ಅಣ್ಣ” ಪದ್ಯಕ್ಕೆ ಅವರು ಹಾಕಿಕೊಂಡ ತಮ್ಮದೇ ಮಟ್ಟು ನನಗೆ ಈವತ್ತಿಗೂ ಪ್ರಿಯ ಎಂದರೆ “ಅಯ್ಯೋ ಹೋಗೋ” ಎಂದು ಬಾಯಿಗೆ ಕೈ ಅಡ್ಡ ಮಾಡಿ ನಗುತ್ತಾರೆ. ಆದರೆ, ನಮ್ಮ ಬಾಲ್ಯ ಜೀವನದ ಸವಾಲುಗಳನ್ನು ದೇವರ ಮುಂದೆ ಅಳುಕಿನಿಂದಲೇ ಇಡುವಂತೆ ಅವರು ಅಂದು “ಕರುಣಿಸೋ ರಂಗ” ಹಾಡುತ್ತಿದ್ದರು ಎಂದು ನನಗೆ ಯಾವಾಗಲೂ ಅನಿಸಿದೆ. “ಆ ಎಲ್ಲಾ ಪುರಾಣದ ಪಾತ್ರಗಳಂತೆ ಹಲವು ಬಗೆಗಳಲ್ಲಿ ನಾನು ಬೇಡಲಾರೆ” ಎಂಬುದನ್ನು ಅವರು ಕಂಡುಕೊಂಡಂತೆ ಅನಿಸುತ್ತಿತ್ತು. ಅವರ ಆ ಭಾವ, ಹಾಡಿನ ಸಾಲಿಗಿಂತ ಅವರು ಹಾಡುತ್ತಿದ್ದ ಮಟ್ಟಿನಲ್ಲಿ, ಆ ಮಟ್ಟನ್ನು ತೆರೆದಿಡುತ್ತಿದ್ದ ದನಿಯಲ್ಲಿ, ಆ ದನಿಯನ್ನು ಹೊರಡಿಸುತ್ತಿದ್ದ ಮನಸ್ಸಿನ ಆಳದ ಮುಜುಗರದಲ್ಲಿ ಇತ್ತೆಂದು ನನಗೆ ಈಗ ಅನಿಸುತ್ತದೆ. ಇಲ್ಲದಿದ್ದರೆ, ಅಷ್ಟು ಆಳಕ್ಕೆ ಆ ಹಾಡು ನನ್ನ ಮನಸ್ಸಿನಲ್ಲಿ ಕೂರಲು ಹೇಗೆ ಸಾಧ್ಯ ಎಂದು ಕೇಳಿಕೊಳ್ಳುತ್ತೇನೆ.

ಇದೆಲ್ಲಾ ನೆನಪಾದದ್ದು, ಪ್ರಸಿದ್ಧ ಗಾಯಕ ಭೀಮಸೇನ ಜೋಷಿ ಅದೇ ಪದವನ್ನು ಧಿಮಾಕಿನಿಂದಲೋ ಎಂಬಂತೆ ಹಾಡುವುದನ್ನು ಕೇಳಿದಾಗ. “ಬೇರೆಲ್ಲ ಭಕ್ತರಂತೆ ಬೇಡಲಾರೆ – so what – ಕರುಣಿಸೋ ರಂಗಾ” ಎಂದು ದೇವರ ಕತ್ತಿನ ಪಟ್ಟಿ ಹಿಡಿದಂತೆ ಇದೆಯಲ್ಲಾ ಅನಿಸಿದಾಗ. ಅವರ ಹಾಡಿಗೇನು ಉಪಪಾಟ ಎಂದು ಹುಡುಕ ಹೊರಟು ಖಾಲಿ ಕೈಯಲ್ಲಿ ಹಿಂದಿರುಗಿದಾಗ. ಸಿಡ್ನಿಯಲ್ಲಿ ನಮ್ಮ ಮಕ್ಕಳಿಗೆ ಸಿರಿವಂತಿಕೆಯ ನಡುವೆ ಸವಾಲಿನ ಬದುಕನ್ನು ಕಟ್ಟಿಕೊಡುವುದು ಹೇಗೆಂದು ಯೋಚಿಸುವಾಗ. ಸೆಲ್ಫ್-ಪಿಟಿಯ ಅಪಾಯ ಎಲ್ಲಾವಾಗಲೂ ಇದೆ ಎಂದು ಅನಿಸಿದಾಗ.

About The Author

ಸುದರ್ಶನ್

ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ