ಪ್ರತಿ ವರ್ಷ ಜನವರಿ ೨೬ರಂದು ಕ್ರಿಕೆಟ್ ಮತ್ತು ಟೆನ್ನಿಸ್ ಆಸ್ಟ್ರೇಲಿಯದ ಜನರ ಮನಸ್ಸನ್ನು ತುಂಬಿ ಬಿಡುತ್ತದೆ. ಈ ಸಲ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯ ಸೌತ್ ಆಫ್ರಿಕಕ್ಕೆ ಸೋತಿತು. ಜನವರಿ ೨೬ರ ಏಕದಿನ ಪಂದ್ಯದಲ್ಲಿ ಸೋಲುವ ಮೂಲಕ ಏಕದಿನ ಸರಣಿಯನ್ನೂ ಸೋತಿತು. ಆದರೆ ಅದೇ ಹಿಂದಿನ ದಿನ ಯೆಲೀನ ಡಾಕಿಚ್ ಎಂಬವಳು ಆಸ್ಟ್ರೇಲಿಯನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದಳು. ಟೀವಿ, ಪತ್ರಿಕೆಯಲ್ಲೆಲ್ಲಾ ಅವಳ ಗೆಲುವನ್ನು ಸಂಭ್ರಮದಿಂದ ಕೊಂಡಾಡಿದರು.
ಜನವರಿ ೨೬ ಇಂಡಿಯಕ್ಕೆ ಗಣರಾಜ್ಯದಿನ. ಆಸ್ಟ್ರೇಲಿಯಕ್ಕೆ “ಆಸ್ಟ್ರೇಲಿಯ ಡೇ” ಮತ್ತು “ಇನ್ವೇಷನ್ ಡೇ”. ಈ ವರ್ಷ ಅದೇ ಹೊತ್ತಿಗೆ ಚೈನಾದ ಹೊಸ ವರ್ಷವೂ ಸೇರಿಕೊಂಡಿದೆ. ಎಲ್ಲವೂ ಒಂದು ಜನಾಂಗದವರು ತಮ್ಮ ಗುರುತನ್ನು ಮತ್ತೆ ಅವಲೋಕಿಸಿಕೊಳ್ಳುವ ದಿನ. ಲೋಕದ ಎಲ್ಲ ಕಡೆಯಿರುವ ಚೈನಾದವರು ಸಾಂಸ್ಕೃತಿಕವಾಗಿ ತಮ್ಮ ದಿನ ಎಂದು ಹೇಳಿಕೊಳ್ಳುವ ಅವರ ಹೊಸ ವರ್ಷಕ್ಕೆ ಡ್ರಾಗನ್ ಕುಣಿತ ಮೆರಗು ತರುತ್ತದೆ. ಚೈನಾಟೌನುಗಳಲ್ಲಿ ಬಣ್ಣಬಣ್ಣದ ದೀಪದ ಬುಡ್ಡಿಗಳು ರಾರಾಜಿಸುತ್ತದೆ. ಲಕ್ಷಾಂತರ ಜನ ತಮ್ಮ ಊರುಗಳಿಗೆ ತೆರಳಿ, ತಮ್ಮ ಮನೆಮಂದಿಯೊಡನೆ ಕೂತು, ಉಂಡು, ಪೂಜೆಯ ಜತೆಗೆ ಮೋಜೂ ಮಾಡುತ್ತಾರೆ.
ಆಸ್ಟ್ರೇಲಿಯದ “ಇನ್ವೇಷನ್ ಡೇ” ಕೂಡ ಜನವರಿ ೨೬ರಂದೇ, ಅಥವಾ ಅದನ್ನು ದೇಶದ ಅಬಾರಿಜಿನಿಗಳು ಹಾಗೆ ಆಚರಿಸುತ್ತಾರೆ. ಏಕೆಂದರೆ ಅದು ೧೭೮೮ರಲ್ಲಿ ಕ್ಯಾಪ್ಟನ್ ಕುಕ್‌ನ ಹಡಗು ಸಿಡ್ನಿಯ ಬಾಟನಿ ಬೇ ಒಳಗೆ ತೇಲಿ ಬಂದ ದಿನ. ಬಿಳಿಯರು ಈ ನೆಲ “ಟೆರಾ ನಲ್ಲಿಯಸ್”, ಯಾರಿಗೂ ಸೇರಿಲ್ಲ ಅಂದುಕೊಂಡ ದಿನ. ಇಲ್ಲಿಯ ಮೂಲನಿವಾಸಿಗಳ ದೃಷ್ಟಿಯಲ್ಲಿ ಆಕ್ರಮಣವೆಸಗಿದ ದಿನ. ಹಾಗಾಗಿಯೇ, ಅಬಾರಿಜಿನಿಗಳು ಅದನ್ನು ಆಕ್ರಮಣದ ದಿನ ಎಂದೇ ನೋಡುತ್ತಾರೆ. ತಮ್ಮದೇ ಹಾಡು, ಕುಣಿತ, ಆಚರಣೆಗಳಲ್ಲಿ ದಿನವನ್ನು ತುಂಬಿಕೊಳ್ಳುತ್ತಾರೆ. ಎಲ್ಲ ಅತ್ಯಾಚಾರ, ಅಪಚಾರಗಳ ನಡುವೆಯೂ ತಾವು ತಾವಾಗಿ ಉಳಿದಿರುವ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ.
ಹತ್ತಾರು ವರ್ಷ ಯಾರಿಂದಲೂ ಸೋಲನ್ನು ಅನುಭವಿಸದೇ ಉಬ್ಬಿದ್ದ ಕ್ರಿಕೆಟಿಗರು ಜನವರಿ ೨೬ರಂದು ತುಸು ಮಣಿದರು. ಯಾಕೆ ಸೋಲುತ್ತಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಗುನುಗಿಕೊಂಡರು. ಅತ್ತ ಟೆನ್ನಿಸ್ ಓಪನ್‌ನಲ್ಲಿ ಗೆದ್ದ ಎಲೀನಳ ಕತೆಯೂ ಒಂದು ಬಗೆಯಲ್ಲಿ ತಾನು ಯಾರು ಎಲ್ಲಿಗೆ ಸೇರಿದವಳು ಎಂಬ ಕತೆಯೇ. ಈ ಹಿಂದೆ ಆಸ್ಟ್ರೇಲಿಯಕ್ಕೆ ಆಡಿ ಹಲವಾರು ಕಡೆ, ಹಲವಾರು ವಿಜೇತರನ್ನು ಗೆದ್ದಿದ್ದ ಹುಡುಗಿ ಯೆಲೀನ. ಆದರೆ ಈ ಸಲ ಮಾತ್ರ ಗೆದ್ದೊಡನೆ ಸಣ್ಣ ಮಗುವಿನಂತೆ ಒತ್ತಿಹಿಡಿದ ಅಳು ಅತ್ತದ್ದು ಯಾಕೆ, ಆ ಅಳುವಿನಲ್ಲಿ ಬರೇ ವಿಜಯವಲ್ಲದೆ ನೋವು ಸಂಕಟವೆಲ್ಲಾ ಕಂಡಿದ್ದು ಯಾಕೆ? ಉತ್ತರ ಎಲ್ಲರಿಗೂ ಗೊತ್ತಿರುವುದೇ. ಸರ್ಬಿಯನ್ ತಂದೆ, ಕ್ರೊಯೇಶಿಯನ್ ತಾಯಿ ಈಕೆಗೆ. ಯುಗೊಸ್ಲಾವಿಯಾ ಸಂಘರ್ಷಕ್ಕೆ ಮುನ್ನ ತಪ್ಪಿಸಿಕೊಂಡು ಅವರು ಆಸ್ಟ್ರೇಲಿಯಕ್ಕೆ ವಲಸೆ ಬಂದಾಗ ಇವಳಿನ್ನೂ ಪುಟ್ಟ ಹುಡುಗಿ. ನಂತರ ಟೆನ್ನಿಸಿನಿಂದಾಗ ಇಲ್ಲಿ ಮನೆಮಾತಾಗಿದ್ದವಳು. ತನ್ನ ತಂದೆ ಡಮೀರನ ಮಾತು ಕೇಳಿ ಆಸ್ಟ್ರೇಲಿಯ ತೊರೆದು ಯೂರೋಪಿಗೆ ಹೋಗಿಬಿಟ್ಟಳು. ತಂದೆಗೆ ಇವಳ ನಲ್ಲನನ್ನು ಕಂಡರೆ ಆಗದು. ಅತೀವ ಪೊಸೆಸಿವ್ ತಂದೆಯೊಡನೆ ಜಗಳವಾಡಿ ಮಾತು ಬಿಡುವುದಲ್ಲದೇ ತನ್ನ ಕುಟುಂಬವನ್ನೇ ತೊರೆಯಬೇಕಾಗಿ ಬಂದಿತು. ಈಗ ಮತ್ತೆ ಆಸ್ಟ್ರೇಲಿಯಕ್ಕಾಗಿ ಆಡುತ್ತೇನೆ ಎಂದು ಬಂದಿದ್ದಾಳೆ. ತನ್ನ ತಂದೆಯನ್ನು ಹತ್ತಿರ ಸುಳಿಯಲೂ ಬಿಟ್ಟಿಲ್ಲ. ಮೂರ್ನಾಕು ವರ್ಷದಿಂದ ಆಡಲಾಗದೆ ಇವಳ ಕತೆ ಮುಗಿಯಿತು ಅನ್ನುವಾಗ, ವೈಲ್ಡ್ ಕಾರ್ಡಿನಲ್ಲಿ ಹಿಂತಿರುಗಿ, ಕ್ವಾರ್ಟರ್ ಫೈನಲ್ಲಿಗೆ ಬಂದು ಎಲ್ಲರ ಹುಬ್ಬೇರಿಸಿದಳು. ಆಸ್ಟ್ರೇಲಿಯಾದ ಹುಡುಗರೂ ಮೊದಲ ರೌಂಡುಗಳಲ್ಲೇ ಸೋತು ಬದಿಗೆ ಸರಿದಿದ್ದರು. ಇಡೀ ದೇಶ ಯೆಲೀನಳ ಬೆನ್ನು ತಟ್ಟುತ್ತಾ ಉತ್ತೇಜಿಸುತ್ತಿತ್ತು. ಯೆಲೀನ ಕ್ವಾರ್ಟರ್ ಫೈನಲ್ಲಿನಲ್ಲಿ ಸೋತಳು. ಆದರೆ ಹೆಣ್ಣು ಮಗಳೊಬ್ಬಳು ತನ್ನತನವನ್ನು ಮತ್ತು ತನ್ನ ಶಕ್ತಿಯನ್ನು ಕಂಡುಕೊಳ್ಳುವ ದಾರಿಯ ಕಷ್ಟಗಳು ಬರೇ ವಯ್ಯಕ್ತಿಕವಷ್ಟೇ ಅಲ್ಲ. ರಾಷ್ಟ್ರ ಚರಿತ್ರೆ ಸಂಸ್ಕೃತಿಗಳನ್ನು ವ್ಯಾಪಿಸುವ ಯೆಲೀನಳ ಕತೆ ನಿಜಕ್ಕೂ ಅದ್ಭುತ ಅನಿಸುತ್ತದೆ.
ಇಂಡಿಯದ ಸಂವಿಧಾನ ಸ್ಥಾಪಿಸಲ್ಪಟ್ಟ ಗಣರಾಜ್ಯದ ದಿನವೂ ಕೂಡ ದೇಶವಾಗಿ ನಮ್ಮ ಬಗ್ಗೆ ಆತ್ಮಾವಲೋಕಿಸಿಕೊಳ್ಳುವ ದಿನವೇ. ಸಂವಿಧಾನದ ಮೂಲ ಆಶಯಗಳನ್ನು ನಾವೆಷ್ಟು ನೆನಪಿನಲ್ಲಿಟ್ಟುಕೊಂಡಿದ್ದೇವೆ? ಎಷ್ಟು ಮರೆತಿದ್ದೇವೆ? ಎಷ್ಟು ತ್ಯಜಿಸಿದ್ದೇವೆ? ಇವೆಲ್ಲಾ ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಧ್ವಜಾರೋಹಣ, ಸೈನ್ಯ, ಅಸ್ತ್ರದ ಪೆರೇಡುಗಳ ಹೊರತಾಗಿ ನಮ್ಮ ದೇಶದ ಚೌಕಟ್ಟನ್ನು ಹೇಗೆ ನೋಡುತ್ತೇವೆ? ಸಂವಿಧಾನ ಮಾತ್ರ ಬೆಂಬಲಕ್ಕಿರುವ, ಕೆಲವೊಮ್ಮೆ ಆ ಬೆಂಬಲವೂ ಇಲ್ಲದ ದುರ್ಬಲವರ್ಗಕ್ಕೆ ಗಣರಾಜ್ಯ ದಿನದ ಮಹತ್ವವೇನು? ಸಂವಿಧಾನವೂ ಬೆಂಬಲಕ್ಕೆ ಬರದೇ ಇದ್ದಾಗ ಅವರೇನು ಮಾಡಬೇಕು? ಪರಿಣಾಮಕಾರಿಯಾಗಿ ತಮ್ಮ ಹತಾಶೆಯನ್ನು ಅವರು ಹೇಗೆ ವ್ಯಕ್ತಪಡಿಸಬಲ್ಲರು? ಇದಕ್ಕೆಲ್ಲಾ ಗಣರಾಜ್ಯದ ದಿನವಾದರೂ ಮಾತುಕತೆ ಪ್ರೇರೇಪಿಸುವುದು ಸೂಕ್ತವೇನೋ.
ಬಹುಪಾಲು ಆಸ್ಟ್ರೇಲಿಯನ್ನರಿಗೆ ಜನವರಿ ೨೬ರ ಆಸ್ಟ್ರೇಲಿಯ ಡೇ ಅಂದರೆ ನಿರಾಳವಾಗಿರಬೇಕಾದ ದಿನ. ಬೇಸಿಗೆಯ ಬಿರುಬಿಸಿಲಿಗೆ ಬೀಚಿಗೆ ಹೋಗಿ ಮೈತಂಪು ಮಾಡಿಕೊಳ್ಳುವುದು. ಅಥವಾ ನಾಕು ಜನ ಕುಟುಂಬದವರೋ, ಗೆಳೆಯರೋ, ನೆರೆಹೊರೆಯವರೋ ಸೇರಿ ಹಿತ್ತಲಲ್ಲಿ ಬಾರ್ಬಿಕ್ಯೂ ಹೂಡಿ, ತಂಪಾದ ಬಿಯರ್ ಕುಡಿದು, ಹರಟೆ ಹೊಡೆದು ರಜೆಯನ್ನು ಕಳೆಯುವುದು. ಗಂಭೀರ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಒತ್ತಡ ಇರದೇ ಇರುವುದೂ ಒಂದು ಲಕ್ಷುರಿಯೇ. ಆದರೆ ಈ ಸಲ ಕುಡಿದು ಅಮಲೇರಿದ ಹದಿಹರೆಯದ ಬಿಳಿಯ ಮಕ್ಕಳ ಗುಂಪುಗಳು ಸುದ್ದಿಯಲ್ಲಿದ್ದಾರೆ. ಹಲವು ಕಡೆಗಳಲ್ಲಿ ಬಿಳಿಯರಲ್ಲದ ಆಸ್ಟ್ರೇಲಿಯನ್ನರ ಜತೆ ಪುಂಡರಂತೆ ನಡೆದುಕೊಂಡದ್ದು ವರದಿಯಾಗಿದೆ. ಕಾರುಗಳನ್ನು ಕುಟ್ಟಿ ಹಾಕಿದ್ದು ವರದಿಯಾಗಿದೆ. ಆ ವರ್ತನೆಯ ಹಿಂದೆ ಬರೇ ಕುಡಿತದ, ಹುಡುಗಾಟ ಇದೆಯೆ? ಅಥವಾ ಜನಾಂಗೀಯ ಭಾವನೆಯ ಕರಾಳ ಛಾಯೆ ಇದೆಯೇ ಎಂಬ ಚರ್ಚೆ ಶುರುವಾಗಿದೆ. ರಾಮಸೇನೆಯ ಪುಂಡಾಟದ ಬಗ್ಗೆ ಇದೇ ಬಗೆಯ ಚರ್ಚೆ ಇಂಡಿಯದಲ್ಲೂ ಶುರುವಾಗಿದೆಯಲ್ಲವೆ? “ನಾವು ವಿಶಾಲ ಹೃದಯಿಗಳು” ಎಂಬ ಜಡ್ಡು ಹಿಡಿದ ವಿವರಣೆಯನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಆಸ್ಟ್ರೇಲಿಯನ್ನರು/ಇಂಡಿಯನ್ನರು ಅಂದರೆ ಯಾರು, ಹೇಗೆ ನಡಕೊಳ್ಳಬೇಕು ಎಂಬುದನ್ನು ಉತ್ತರಿಸಿಕೊಳ್ಳಬೇಕಾದ ಹೊತ್ತು ಮತ್ತೆ ಮತ್ತೆ ಬರುತ್ತಿದೆ, ಹೆಚ್ಚೆಚ್ಚು ತೀವ್ರವಾಗಿ ಬರುತ್ತಿದೆ.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.