ರಾಸ್ಕೋಲ್ನಿಕೋವ್‌ನಲ್ಲಿ ಹುಟ್ಟಿದ ಅಸಹ್ಯದ ಭಾವ ಅವನ ಎಚ್ಚರದ ಮೇರೆಯನ್ನೂ ಮೀರಿ ಹರಿಯಿತು. ಅವನು ನಗು ನಿಲ್ಲಿಸಿದ. ಹುಬ್ಬು ಗಂಟಿಕ್ಕಿದ. ಪೋರ್ಫಿರಿಯನ್ನು ಬಹಳ ಹೊತ್ತು ದಿಟ್ಟಿಸಿದ. ಆ ನೋಟದಲ್ಲಿ ದ್ವೇಷವಿತ್ತು. ಕೊನೆಯೇ ಇರದ ಹಾಗೆ ಬೇಕೆಂದೇ ನಗು ಉಕ್ಕಿಸಿಕೊಳ್ಳುತ್ತಿದ್ದಷ್ಟೂ ಹೊತ್ತು ಅವನ ನೋಟ ಪೋರ್ಫಿರಿಯನ್ನು ಬಿಟ್ಟು ಕದಲಲಿಲ್ಲ. ಸ್ಪಷ್ಟವಾಗಿಯೇ ಇಬ್ಬರೂ ಎಚ್ಚರಗೇಢಿಗಳಾಗಿದ್ದರು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು

 

ಭಾಗ ನಾಲ್ಕು: ಐದನೆಯ ಅಧ್ಯಾಯ

ಮಾರನೆಯ ಬೆಳಿಗ್ಗೆ ಹತ್ತು ಗಂಟೆಗೆ ಸರಿಯಾಗಿ ರಾಸ್ಕೋಲ್ನಿಕೋವ್ ಪೋಲೀಸ್‍ ಸ್ಟೇಷನ್ನಿಗೆ ಹೋಗಿ, ಅಲ್ಲಿನ ತನಿಖೆಯ ಕಮೀಶನರ್ ವಿಭಾಗದ ಅಧಿಕಾರಿಯನ್ನು ಕಂಡು, ತಾನು ಬಂದಿರುವುದಾಗಿ ಪೋರ್ಫಿರಿ ಪೆಟ್ರೊವಿಚ್‌ಗೆ ತಿಳಿಸುವಂತೆ ಕೋರಿದ. ಅವನಿಗಾಗಿ ಕರೆ ಬರುವ ಮೊದಲು ಹತ್ತು ನಿಮಿಷವಾದರೂ ಕಾಯಬೇಕಾಗಿ ಬಂದಿದ್ದಕ್ಕೆ ಆಶ್ಚರ್ಯಪಟ್ಟ. ಹೋದ ತಕ್ಷಣ ಭೇಟಿಯ ಅವಕಾಶ ಸಿಗುತ್ತದೆ ಎಂದು ಅವನು ಲೆಕ್ಕ ಹಾಕಿದ್ದ. ವೀಕ್ಷಕರ ಕೋಣೆಯಲ್ಲಿ ಕೂತಿದ್ದ. ಜನ ಬರುತ್ತ ಹೋಗುತ್ತ ಇದ್ದರು. ಅವರು ಯಾರಿಗೂ ಅವನ ಬಗ್ಗೆ ಆಸಕ್ತಿ ಇರಲೇ ಇಲ್ಲ. ಕಛೇರಿಯ ಹಾಗೆ ಕಾಣುತ್ತಿದ್ದ ಪಕ್ಕದ ಕೋಣೆಯಲ್ಲಿ ಕೆಲವು ಕಾರಕೂನರು ಏನೋ ಬರೆಯುತ್ತಿದ್ದರು. ಅವರು ಯಾರಿಗೂ ರಾಸ್ಕೋಲ್ನಿಕೋವ್ ಯಾರು, ಯಾಕೆ ಬಂದಿದ್ದಾನೆ ಅನ್ನುವ ಕಲ್ಪನೆಯೂ ಇರಲಿಲ್ಲ. ಕಸಿವಿಸಿಪಡುತ್ತ, ಸಂಶಯಪಡುತ್ತ ಸುತ್ತಲೂ ನೋಡಿದ. ತಾನು ಹೊರಟು ಹೋಗದ ಹಾಗೆ ತನ್ನ ಮೇಲೆ ಕಣ್ಣಿಡುವುದಕ್ಕೆ ಯಾರನ್ನಾದರೂ ನೇಮಿಸಿದ್ದಾರೋ ಏನೋ ಎಂದು ಪರೀಕ್ಷಿಸಿ ನೋಡಿದ. ಅಂಥದೇನೂ ಕಾಣಲಿಲ್ಲ. ಇದ್ದವರೆಲ್ಲ ಕ್ಷುಲ್ಲಕ ಕೆಲಸಗಳಲ್ಲಿ ಮುಳುಗಿದ್ದ ಕಛೇರಿಯ ಜನ ಅಥವ ಏನೇನೋ ಕೆಲಸಕ್ಕೆ ಬಂದ ಜನ. ಅವರು ಯಾರಿಗೂ ಅವನನ್ನು ಕಟ್ಟಿಕೊಂಡು ಏನೂ ಆಗಬೇಕಾಗಿರಲಿಲ್ಲ.

ಅವನು ಏಕ ಕಾಲದಲ್ಲಿ ನಾಲ್ಕು ದಾರಿಗಳನ್ನು ಹಿಡಿದು ಹೋಗಿದ್ದರೂ ಯಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಒಂದು ಸಂಗತಿ ಮಾತ್ರ ಅವನಿಗೆ ಸ್ಪಷ್ಟವಾಗುತ್ತಿತ್ತು. ನಿನ್ನೆಯ ದಿನ ಭೂತದ ಹಾಗೆ ನೆಲದೊಳಗಿಂದ ಎದ್ದು ಬಂದಂತಿದ್ದ ಆ ನಿಗೂಢ ಮನುಷ್ಯನಿಗೆ ನಿಜವಾಗಲೂ ಎಲ್ಲವೂ ಗೊತ್ತಿದ್ದಿದ್ದರೆ ಅವರು ರಾಸ್ಕೋಲ್ನಿಕೋವ್‌ನನ್ನು ಹೀಗೆ ಸುಮ್ಮನೆ ಇಲ್ಲಿ ಕಾಯುತ್ತ ಕೂರುವುದಕ್ಕೆ ಬಿಡುತ್ತಿರಲಿಲ್ಲ. ಅವನಾಗೇ ಇಲ್ಲಿಗೆ ಬರುತ್ತಾನೆಂದು ಹನ್ನೊಂದು ಗಂಟೆಯವರೆಗೆ ಕಾಯುತ್ತಿದ್ದರೇನು? ಅಂದರೆ, ಅವನು ಪೋಲೀಸರಿಗೆ ಹೇಳಿಲ್ಲ, ಅಥವಾ ಅವನಿಗೆ ಏನೂ ಗೊತ್ತಿಲ್ಲ. ಅವನು ಕಣ್ಣಾರೆ ಏನೂ ಕಂಡಿಲ್ಲ (ಕಣ್ಣಾರೆ ನೋಡುವುದಕ್ಕಾದರೂ ಹೇಗೆ ಆದೀತು?) ಹಾಗಾಗಿ ರಾಸ್ಕೋಲ್ನಿಕೋವ್ ನಿನ್ನೆಯೆಲ್ಲ ಅನುಭವಿಸಿದ ಸಂಕಟ ಎಲ್ಲ ಬರೀ ನೆರಳ ಭೂತ, ಎಲ್ಲವೂ ಅವನ ರೋಗಗ್ರಸ್ತ ಕಲ್ಪನೆಯ ಪರಿಣಾಮ. ನಿನ್ನೆಯ ದಿನ ಅವನು ತೀವ್ರ ಹತಾಶೆ, ಕಳವಳಗಳಿಗೆ ಗುರಿಯಾಗಿದ್ದಾಗಲೇ ಇಂಥ ಒಂದು ಊಹೆ ಅವನಿಗೆ ಶಕ್ತಿ ನೀಡಿತ್ತು. ಹೀಗೆಲ್ಲ ಯೋಚನೆ ಮಾಡಿ ಹೊಸ ಹೋರಾಟಕ್ಕೆ ಸಿದ್ಧನಾಗುತ್ತಿರುವಾಗ ಮೈಯಲ್ಲಿ ನಡುಕವಿದೆ ಅನ್ನುವುದು ಅವನ ಗಮನಕ್ಕೆ ಬಂದಿತ್ತು. ಆ ದರಿದ್ರ ಪೋರ್ಫಿರಿ ಪೆಟ್ರೊವಿಚ್‍ ನನ್ನು ಕಾಣಲು ಹೋಗುವಾಗಲೇ ಇಂಥ ನಡುಕ ಹುಟ್ಟಿತಲ್ಲ ಅನ್ನುವ ಯೋಚನೆಯೇ ಅವನಿಗೆ ಸಿಟ್ಟು ತರಿಸಿತ್ತು. ಆ ಮನುಷ್ಯನ್ನು ಮತ್ತೆ ಭೇಟಿ ಮಾಡುವುದು ಭಯಂಕರ ಅನಿಸುತ್ತಿತ್ತು.

ಅವನ ಬಗ್ಗೆ ಅತಿಯಾದ, ಅಳತೆಮೀರಿದ, ಕೊನೆಯಿರದ ದ್ವೇಷ ಹುಟ್ಟಿತ್ತು. ಕೋಪ ಎಷ್ಟು ತೀವ್ರವಾಗಿತ್ತೆಂದರೆ ಅವನ ನಡುಕ ನಿಂತು ಹೋಯಿತು. ತಣ್ಣಗೆ, ಸೊಕ್ಕಿನಿಂದಲೇ ಒಳಕ್ಕೆ ಹೋಗಬೇಕು, ಸಾಧ್ಯವಾದಷ್ಟೂ ಸುಮ್ಮನೆ ಇರಬೇಕು, ಮಾತಾಡಬಾರದು, ಗಮನವಿಟ್ಟು ನೋಡಬೇಕು, ಕೇಳಿಸಿಕೊಳ್ಳಬೇಕು, ಬೇಕಾದ್ದಾಗಲಿ, ಈ ಬಾರಿ ಮಾತ್ರ ಆತಂಕ ಪಡಬಾರದು, ಕಳವಳಕ್ಕೆ ಅವಕಾಶಕೊಡಬಾರದು ಅಂದುಕೊಳ್ಳುತ್ತಿದ್ದ. ಆಗ ಅವನಿಗೆ ಪೋರ್ಫಿರಿ ಪೆಟ್ರೊವಿಚ್‍ ನ ಕಛೇರಿಯೊಳಗಿಂದ ಕರೆ ಬಂದಿತು.

ಆ ಹೊತ್ತಿನಲ್ಲಿ ಅದು ಹೇಗೋ ಪೋರ್ಫಿರಿ ಪೆಟ್ರೊವಿಚ್ ತನ್ನ ಕಛೇರಿಯಲ್ಲಿ ಒಬ್ಬನೇ ಇದ್ದ. ಅವನ ಕಛೇರಿ ಅನ್ನುವುದು ದೊಡ್ಡದೂ ಅಲ್ಲದ ಸಣ್ಣದೂ ಅಲ್ಲದ ಕೋಣೆ. ಅಲ್ಲಿ ಕ್ಯಾನ್‌ವಾಸ್ ಹೊದಿಸಿದ ಸೋಫಾದ ಮುಂದೆ ಬರೆಯಲು ಬಳಸುವ ದೊಡ್ಡದೊಂದು ಇಳಿಜಾರು ಮೇಜು ಇತ್ತು, ಬೀರು ಇತ್ತು, ಮೂಲೆಯಲ್ಲಿ ಹಲವು ಡ್ರಾಗಳಿರುವ ಕ್ಯಾಬಿನೆಟ್ಟಿತ್ತು, ಕೆಲವು ಕುರ್ಚಿಗಳಿದ್ದವು—ಎಲ್ಲವೂ ಕಛೇರಿಯ ವಸ್ತುಗಳ ಹಾಗೆ ಹಳದಿ ಮರದಲ್ಲಿ ಮಾಡಿ ಪಾಲಿಶ್ ಕೊಟ್ಟಿದ್ದಂಥವು. ಹಿಂದಿನ ಗೋಡೆ—ಸರಿಯಾಗಿ ಹೇಳಬೇಕೆಂದರೆ ಪಾರ್ಟಿಶನ್‍ ನಲ್ಲಿ ಮುಚ್ಚಿದ ಬಾಗಿಲಿತ್ತು. ಅಂದರೆ ಅದರಾಚೆಗೆ ಇನ್ನೂ ಹಲವು ರೂಮುಗಳಿದ್ದವು. ರಾಸ್ಕೋಲ್ನಿಕೋವ್ ಒಳಕ್ಕೆ ಬಂದಾಗ ಪೋರ್ಫಿರಿ ಪೆಟ್ರೊವಿಚ್ ತಟ್ಟನೆ ಎದ್ದು ಅವನು ಒಳಬಂದ ಬಾಗಿಲನ್ನು ಮುಚ್ಚಿದ. ಈಗ ಕೋಣೆಯಲ್ಲಿ ಇಬ್ಬರೇ ಇದ್ದರು. ಅವನು ಭೇಟಿಗೆ ಬಂದ ರಾಸ್ಕೋಲ್ನಿಕೋವ್‍ ನನ್ನು ಸಂತೋಷಚಿತ್ತದಿಂದ, ಸ್ನೇಹಮಯವಾಗಿ ಸ್ವಾಗತಿಸಿದ. ಏಕಾಂತದಲ್ಲಿ ಯಾವುದೋ ಕೆಲಸವನ್ನು ಗುಟ್ಟಾಗಿ ಮಾಡುತ್ತಿದ್ದವನ ಹಾಗೆ ಅವನ ವರ್ತನೆಯಲ್ಲಿ ಮುಜುಗರದ ಸೂಚನೆ ಇತ್ತು. ಹಲವು ನಿಮಿಷಗಳ ನಂತರವಷ್ಟೇ ಇದು ರಾಸ್ಕೋಲ್ನಿಕೋವ್‌ನ ಗಮನಕ್ಕೆ ಬಂದಿತ್ತು.

‘ಆಹಾ ಮಿತ್ರಾ… ಹೇಗಿದ್ದೀಯ! ಇದೇನು ನಮ್ಮ ರಾಜ್ಯಕ್ಕೆ ಬಂದಿದ್ದೀಯ…’ ಪೋರ್ಫಿರಿ ಎರಡೂ ಕೈ ಚಾಚಿ ಅವನತ್ತ ಹೆಜ್ಜೆ ಹಾಕುತ್ತ ಮಾತಾಡಿದ. ‘ಸರಿ, ಕೂತುಕೊಳ್ಳಯ್ಯಾ! ಅಥವಾ ಮಿತ್ರಾ ಅಂತಲೋ ಅಯ್ಯಾ ಅಂತಲೋ ಕರೆಯುವುದು ಅತೀ ಸಲಿಗೆ ಅನಿಸುತ್ತದೇನೋ!? ದಯವಿಟ್ಟು ಹಾಗೆ ತಿಳಿಯಬೇಡಿ, ಸಾರ್… ಇಗೋ, ಸೋಫಾ ಮೇಲೆ ಕುಳಿತುಕೊಳ್ಳಿ…’

ಅವನ ಮೇಲೆ ನೆಟ್ಟಿದ್ದ ದೃಷ್ಟಿಯನ್ನು ಕದಲಿಸದೆ ರಾಸ್ಕೋಲ್ನಿಕೋವ್ ಸೋಫಾದ ಮೇಲೆ ಕೂತ.

‘ನಮ್ಮ ರಾಜ್ಯ ಅಂದ, ತುಂಬ ಪರಿಚಯದವರ ಹಾಗೆ ಮಾತಾಡಿಸಿದ, ನನ್ನ ಕಡೆಗೆ ಎರಡೂ ಕೈ ಚಾಚಿಕೊಂಡು ಬಂದ, ನನ್ನ ಒಂದು ಕೈಯನ್ನೂ ಮುಟ್ಟಲಿಲ್ಲ. ಸರಿಯಾದ ಹೊತ್ತಿನಲ್ಲಿ ಹಿಂದಕ್ಕೆಳೆದುಕೊಂಡ, ಯಾಕೆ…’ ಅನ್ನುವ ಅನುಮಾನ ರಾಸ್ಕೋಲ್ನಿಕೋವ್ ಮನಸಿನಲ್ಲಿ ಮಿಂಚಿತು. ಇಬ್ಬರೂ ಒಬ್ಬರನ್ನೊಬ್ಬರು ಗಮನಿಸುತ್ತಿದ್ದರು. ಕಣ್ಣುಗಳು ಕಲೆಯುತ್ತಿದ್ದ ಹಾಗೆ ಮಿಂಚಿನಷ್ಟು ವೇಗವಾಗಿ ಮತ್ತೆಲ್ಲೋ ನೋಡುತ್ತಿದ್ದರು.

‘ಸಾರ್, ಈ ಹಾಳೆ ಮೇಲೆ ಬರೆದುಕೊಂಡು ಬಂದಿದೀನಿ… ಅದೇ, ಗಡಿಯಾರದ ವಿಚಾರ… ತಗೊಳ್ಳಿ. ಇದು ಸರಿಯಾಗಿದೆಯೋ ಅಥವ ಬೇರೆ ಬರೆದುಕೊಡಬೇಕೋ, ಹೇಳಿ.’

ಎಲ್ಲಿಗೋ ಹೋಗುವ ಆತುರದಲ್ಲಿದ್ದವನ ಹಾಗೆ, ‘ಏನು? ಯಾವ ಹಾಳೆ? ಸರಿ, ಸರಿ… ಚಿಂತೆ ಮಾಡಬೇಡಿ, ಎಲ್ಲ ಸರಿಯಾಗಿದೆ, ಸಾರ್,’ ಅಂದ ಪೋರ್ಫಿರಿ ಪೆಟ್ರೊವಿಚ್. ಆಮೇಲೆ ರಾಸ್ಕೋಲ್ನಿಕೋವ್‌ನಿಂದ ಹಾಳೆ ತೆಗೆದುಕೊಂಡು ಕಣ್ಣಾಡಿಸಿದ.

‘ಸರಿಯಾಗಿದೆ, ಸಾರ್. ಇನ್ನೇನೂ ಬೇಕಾಗಿಲ್ಲ.’ ಅದೇ ವೇಗದಲ್ಲಿ ಹೇಳಿ ಹಾಳೆಯನ್ನು ಮೇಜಿನ ಮೇಲಿಟ್ಟ. ಒಂದು ನಿಮಿಷ ಆದಮೇಲೆ, ಬೇರೆ ಏನೋ ಮಾತಾಡುತ್ತಿದ್ದವನು ಆ ಹಾಳೆಯನ್ನು ಮತ್ತೆ ಎತ್ತಿಕೊಂಡು ಬೀರುವಿನ ಮೇಲಿಟ್ಟ.

‘ಕೊಲೆಯಾದ ಹೆಂಗಸಿಗೂ ನನಗೂ ಹೇಗೆ ಪರಿಚಯ ಅನ್ನುವ ವಿಚಾರವನ್ನ ನಿನ್ನೆ ದಿನ ನೀವು ಅಫಿಶಿಯಲ್ ಆಗಿ ಕೇಳಬೇಕು ಅಂತಿದ್ದೀರಿ ಅನ್ನಿಸಿತು…’ ರಾಸ್ಕೋಲ್ನಿಕೋವ್ ಮತ್ತೆ ಮಾತು ಶುರುಮಾಡಿದ. ‘ಅಯ್ಯೋ, ಕೇಳಬೇಕು ಅಂತಿದ್ದಿರಿ ಅನ್ನಿಸಿತು’ ಅಂತ ಯಾಕೆ ಹೇಳಿದೆ?’ ಪ್ರಶ್ನೆ ಅವನ ಮನಸಿಲ್ಲಿ ಮಿಂಚಿತು. ತಟ್ಟನೆ ಅದರ ಹಿಂದೆಯೇ ‘ಹಾಗೆ ಯಾಕೆ ಅಂದೆ ಅಂತ ಚಿಂತೆ ಯಾಕೆ ಮಾಡತಿದೀನಿ?’ ಅನ್ನುವ ಇನ್ನೊಂದು ಪ್ರಶ್ನೆ ಹುಟ್ಟಿತು.

ಪೋರ್ಫಿರಿಯ ಜೊತೆಗೆ ಒಂದೆರಡು ಮಾತಾಡಿದ ತಕ್ಷಣ, ರಾಸ್ಕೋಲ್ನಿಕೋವ್ ಮನಸಿನಲ್ಲಿ ಅಭದ್ರತೆಯ ಭಾವ ಹುಟ್ಟಿ ರಾಕ್ಷಸಾಕಾರವಾಗಿ ಬೆಳೆಯುತ್ತಿತ್ತು. ನರಗಳ ತುದಿ ಸುಟ್ಟ ಹಾಗೆ ಅನಿಸುತ್ತಿತ್ತು, ಕಳವಳವಾಗುತ್ತಿತ್ತು. ‘ತಪ್ಪು… ನನ್ನಷ್ಟಕ್ಕೆ ನಾನೇ ಸಿಕ್ಕಿಬೀಳತೇನೆ ಹೀಗಾದರೆ’ ಅಂದುಕೊಂಡ.

‘ಹೌದು, ಹೌದು, ಹೌದು! ಚಿಂತೆ ಮಾಡಬೇಡಿ! ಅರ್ಜೆಂಟಿಲ್ಲ, ಅರ್ಜೆಂಟಿಲ್ಲ, ಸಾರ್,’ ಪೋರ್ಫಿರಿ ಪೆಟ್ರೊವಿಚ್ ಗೊಣಗಿದ. ಡೆಸ್ಕಿನ ಹಿಂದೆ ಅತ್ತ ಇತ್ತ ಸರಿದಾಡಿದ. ಅದು ಗೊತ್ತುಗುರಿ ಇಲ್ಲದ ಸರಿದಾಟದ ಹಾಗಿತ್ತು, ಒಂದು ಕ್ಷಣ ಕಿಟಕಿಯನ್ನು ನೋಡಿ, ಇನ್ನೊಂದು ಕ್ಷಣ ಬೀರುವನ್ನು ನೋಡಿ, ಮತ್ತೆ ಮೇಜನ್ನು ನೋಡಿ, ಮೊದಮೊದಲು ರಾಸ್ಕೋಲ್ನಿಕೋವ್‌ನ ಸಂಶಯದ ನೋಟ ತಪ್ಪಿಸಿಕೊಳ್ಳುತ್ತ, ಮತ್ತೆ ತಟ್ಟನೆ ನಿಶ್ಚಲ ನಿಂತು, ನೇರಾ ನೇರ ಅವನನ್ನು ದಿಟ್ಟಿಸುತ್ತಿದ್ದ. ಗುಂಡನೆಯ ಆಕಾರದ ಅವನ ಪುಟ್ಟ ದುಂಡು ಮೈ ಬೇರೆ ಬೇರೆ ದಿಕ್ಕುಗಳಲ್ಲಿ ಗೋಡೆಗೆ ಬಡಿದು ಮತ್ತೆ ವಾಪಸು ಬರುವ ಚೆಂಡಿನ ಹಾಗೆ ಕಾಣುತ್ತಿತ್ತು.

‘ನಮಗೆ ಬೇಕಾದಷ್ಟು ಟೈಮಿದೆ ಸಾರ್, ಬೇಕಾದಷ್ಟು ಟೈಮಿದೆ! ಸಿಗರೇಟು ಸೇದತೀರಾ? ನಿಮ್ಮ ಬ್ರಾಂಡ್ ಬೇರೆನಾ? ತಗೊಳ್ಳಿ, ಸಿಗರೇಟು…’ ಅತಿಥಿಗೆ ಸಿಗರೇಟು ಕೊಡುತ್ತ ಮಾತಾಡಿದ. ‘ನಿಮ್ಮನ್ನ ಇಲ್ಲಿ ಕೂರಿಸಿ ಮಾತಾಡತಾ ಇದೇನೆ. ನನ್ನ ಕ್ವಾರ್ಟರ್ಸು ಇಗೋ ಈ ಪಾರ್ಟಿಶನ್‌ನ ಹಿಂದೆ ಇದೆ… ಸರ್ಕಾರ ಕೊಟ್ಟಿರುವ ಕ್ವಾರ್ಟರ್ಸು, ಸಾರ್. ಈಗ ಸದ್ಯಕ್ಕೆ ಬೇರೆ ಬಾಡಿಗೆ ಮನೆಯಲ್ಲಿದೇನೆ. ಇಲ್ಲಿ ಸುಣ್ಣ, ಬಣ್ಣ, ರಿಪೇರಿ ಕೆಲಸ ನಡೆದಿದೆ. ಇನ್ನೇನು ರೆಡಿ ಆದ ಹಾಗೇ… ಸರ್ಕಾರದ ಕ್ವಾರ್ಟರ್ಸು ಚೆನ್ನಾಗಿರತ್ತೆ, ಅಲ್ಲವಾ?’

‘ಹ್ಞೂಂ, ಚೆನ್ನಾಗಿರತ್ತೆ,’ ರಾಸ್ಕೋಲ್ನಿಕೋವ್ ಅವನನ್ನೇ ನೋಡುತ್ತ ಅಣಕದ ದನಿಯಲ್ಲಿ ಅಂದ.

‘ಚೆನ್ನಾಗಿರತ್ತೆ, ಚೆನ್ನಾಗಿರತ್ತೆ…’ ಪೋರ್ಫಿರಿ ಪೆಟ್ರೊವಿಚ್ ಮತ್ತೆ ಮತ್ತೆ ಅನ್ನುತ್ತಲೇ ಇದ್ದ, ಅವನ ತಲೆಗೆ ತಟ್ಟನೆ ಬೇರೆ ಏನೋ ಯೋಚನೆ ಬಂದಿದೆ ಅನ್ನುವ ಹಾಗೆ. ಇದ್ದಕ್ಕಿದ್ದ ಹಾಗೆ ರಾಸ್ಕೋಲ್ನಿಕೋವ್‌ನ ಎದುರಿಗೆ ಎರಡೇ ಹೆಜ್ಜೆ ದೂರದಲ್ಲಿ ನಿಂತು ‘ಚೆನ್ನಾಗಿರತ್ತೆ’ ಅಂತ ಗಟ್ಟಿಯಾಗಿ ಅಂದ. ಸರ್ಕಾರದ ಕ್ವಾರ್ಟರ್ಸು ಚೆನ್ನಾಗಿರತ್ತೆ ಅನ್ನುವ ಕ್ಷುಲ್ಲಕ ಮಾತಿಗೂ ರಾಸ್ಕೋಲ್ನಿಕೋವ್‌ನನ್ನು ಅವನು ಚಿಂತಾಮಗ್ನನಾಗಿ, ಗಂಭೀರವಾಗಿ, ನೋಡುತ್ತಿರುವ ರೀತಿಗೂ ಹೊಂದಾಣಿಕೆ ಇರಲಿಲ್ಲ. ಇದೆಲ್ಲ ಸೇರಿ ರಾಸ್ಕೋಲ್ನಿಕೋವ್‌ನೊಳಗೆ ಕೋಪ ಕುದಿಯಿತು. ಪೋರ್ಫಿರಿಯನ್ನು ಅಣಕಿಸುವ, ಉದ್ಧಟತನದ ಮಾತಾಡದೆ ಇರಲು ಆಗಲಿಲ್ಲ..

‘ಗೊತ್ತಾ ನಿಮಗೆ,’ ಅವನು ತಟ್ಟನೆ ಪೋರ್ಫಿರಿಯನ್ನು ಸೊಕ್ಕಿನಿಂದ ನೋಡುತ್ತ, ಸೊಕ್ಕನ್ನು ಖುಷಿಯಾಗಿ ಅನುಭವಿಸುತ್ತಾ ಕೇಳಿದ: ‘ಲಾಯರುಗಳು ಬಳಸುವ ಕಾನೂನು ಬದ್ಧ ನಿಯಮವೋ ತಂತ್ರವೋ ಇದೆಯಂತೆ—ವಿಚಾರಣೆ ನಡೆಸುವವರೆಲ್ಲರೂ ಮೊದಲಿಗೆ ವಿಚಾರಣೆಗೆ ಸಂಬಂಧವಿಲ್ಲದ ಯಾವುದೋ ವಿಚಾರ ಮಾತಾಡತಾ, ಅಥವಾ ಗಂಭೀರವಾದ ವಿಚಾರ ಚರ್ಚೆ ಮಾಡತಾ ಎದುರಿಗೆ ಇರುವವರ ಧೈರ್ಯ ಕುದುರಿಸುತ್ತಾರೆ. ವಿಚಾರಣೆಗೆ ಗುರಿಯಾದವನ ಗಮನ ಬೇರೆ ಕಡೆಗೆ ಸೆಳೆದು. ಅವನ ಜಾಣತನಕ್ಕೆ ಜೋಗುಳ ಹಾಡಿ ಮಲಗಿಸಿ, ಮುಖ್ಯವಾದ ಅಪಾಯಕಾರೀ ಪ್ರಶ್ನೆಯನ್ನು ತೀರ ಅನಿರೀಕ್ಷಿತವಾಗಿ ಕೇಳುತ್ತಾರಂತೆ—ಹೌದಾ? ಎಲ್ಲ ವಿಚಾರಣಾ ಕೈಪಿಡಿಗಳಲ್ಲೂ ಇದನ್ನು ಬರೆದಿರುತ್ತಾರಂತೆ, ಹೌದಾ?’

‘ಹ್ಙಾ, ಹ್ಞಾ, ಹ್ಞಾ… ಹಾಗಾದರೆ ನಾನು ಸರ್ಕಾರಿ ಕ್ವಾರ್ಟರ್ಸ್‍ ಬಗ್ಗೆ ಮಾತಾಡಿದ್ದು ನಿಮ್ಮನ್ನ… ಹ್ಞಾ?’ ಅನ್ನುತ್ತ ಪೋರ್ಫಿರಿ ಪೆಟ್ರೊವಿಚ್ ಕಣ್ಣನ್ನು ಕಿರಿದು ಮಾಡಿ ಮಿಟುಕಿಸಿದ. ಖುಷಿಯ ಭಾವ, ಗುಟ್ಟು ಅನ್ನುವ ಭಾವ ಅವನ ಮುಖದ ಮೇಲೆ ಹಾಯ್ದು ಹೋಯಿತು. ಹಣೆಯ ಮೇಲಿನ ಪುಟ್ಟ ನಿರಿಗೆಗಳು ತಮಗೆ ತಾವೇ ನಯವಾದವು, ಅವನ ಕಣ್ಣು ಕಿರಿದಾಯಿತು, ಮೈ ಸಡಿಲವಾಯಿತು, ಇದ್ದಕ್ಕಿದ್ದ ಹಾಗೆ ಸುದೀರ್ಘವಾದ ನರ್ವಸ್ ಆದ ನಗುವೊಂದು ಉಕ್ಕಿ ಬಂದು ಅವನ ಇಡೀ ಮೈ ಕುಲುಕಿ ಓಲಾಡಿ ರಾಸ್ಕೋಲ್ನಿಕೋವ್‍ ನ ಕಣ್ಣನ್ನು ನೇರವಾಗಿ ದಿಟ್ಟಿಸುತ್ತ ನಿಂತ. ರಾಸ್ಕೋಲ್ನಿಕೋವ್ ಕೂಡ ನಕ್ಕ, ಬಲವಂತವಾಗಿ. ಅವನೂ ನಗುತ್ತಿರುವುದನ್ನು ಕಂಡ ಪೋರ್ಫಿರಿ ಪೆಟ್ರೊವಿಚ್ ನಗುವಿನ ಬಿರುಗಾಳಿಯನ್ನೆ ಎಬ್ಬಿಸಿದ.

ಅವನ ಮುಖ ಕೆಂಪಾಯಿತು. ರಾಸ್ಕೋಲ್ನಿಕೋವ್‌ನಲ್ಲಿ ಹುಟ್ಟಿದ ಅಸಹ್ಯದ ಭಾವ ಅವನ ಎಚ್ಚರದ ಮೇರೆಯನ್ನೂ ಮೀರಿ ಹರಿಯಿತು. ಅವನು ನಗು ನಿಲ್ಲಿಸಿದ. ಹುಬ್ಬು ಗಂಟಿಕ್ಕಿದ. ಪೋರ್ಫಿರಿಯನ್ನು ಬಹಳ ಹೊತ್ತು ದಿಟ್ಟಿಸಿದ. ಆ ನೋಟದಲ್ಲಿ ದ್ವೇಷವಿತ್ತು. ಕೊನೆಯೇ ಇರದ ಹಾಗೆ ಬೇಕೆಂದೇ ನಗು ಉಕ್ಕಿಸಿಕೊಳ್ಳುತ್ತಿದ್ದಷ್ಟೂ ಹೊತ್ತು ಅವನ ನೋಟ ಪೋರ್ಫಿರಿಯನ್ನು ಬಿಟ್ಟು ಕದಲಲಿಲ್ಲ. ಸ್ಪಷ್ಟವಾಗಿಯೇ ಇಬ್ಬರೂ ಎಚ್ಚರಗೇಢಿಗಳಾಗಿದ್ದರು. ಪೋರ್ಫಿರಿ ಪೆಟ್ರೊವಿಚ್ ಬಂದಿದ್ದ ಅತಿಥಿಯನ್ನು ಲೆಕ್ಕಿಸದೆ ನಗುತ್ತಿದ್ದಾನೆ, ಒಂದಿಷ್ಟೂ ಮುಜುಗರವಾಗಿರಲಿಲ್ಲ ಅವನಿಗೆ ಅನಿಸುತ್ತಿತ್ತು. ಇದು ದುಶ್ಶಕುನದ ಹಾಗೆ ರಾಸ್ಕೋಲ್ನಿಕೋವ್‌ಗೆ ಕಂಡಿತು. ಪೋರ್ಫಿರಿ ಪೆಟ್ರೊವಿಚ್ ಮೊದಲೂ ಮುಜುಗರಪಟ್ಟಿರಲಿಲ್ಲ, ಬದಲಾಗಿ ತಾನೇ ಬಲೆಗೆ ಬಿದ್ದೆ ಅನಿಸಿತು. ನನಗೆ ತಿಳಿಯದ್ದು ಏನೋ ಇದೆ, ಯಾವುದೋ ಉದ್ದೇಶವಿದೆ, ಎಲ್ಲವನ್ನೂ ಮೊದಲೇ ಸಿದ್ಧಮಾಡಿದ್ದಾರೆ, ಈಗಲೋ ಆಗಲೋ ನನ್ನ ಹಿಡಿದು ಹಾಕುತ್ತಾರೆ ಅನಿಸಿತು.

ಅವನು ನೇರವಾಗಿ ವಿಷಯಕ್ಕೆ ಬಂದ. ಸೋಫಾದಿಂದ ಎದ್ದು ಕ್ಯಾಪನ್ನು ಕೈಗೆತ್ತಿಕೊಂಡ.

‘ಪೋರ್ಫಿರಿ ಪೆಟ್ರೊವಿಚ್, ನಾನು ವಿಚಾರಣೆಗೆ ಹಾಜರಾಗಬೇಕು ಅಂತ ನಿನ್ನೆಯ ದಿನ ನೀವು ಹೇಳಿದಿರಿ,’ ವಿಚಾರಣೆಗೆ ‘ಎಂಬ ಮಾತನ್ನು ಒತ್ತಿ ಹೇಳುತ್ತ ಕೆರಳಿದ ದನಿಯಲ್ಲಿ ರಾಸ್ಕೋಲ್ನಿಕೋವ್ ಹೇಳಿದ. ‘ನಾನು ಬಂದಿದ್ದೇನೆ. ನೀವು ಕೇಳುವುದು ಏನಾದರೂ ಇದ್ದರೆ ಬೇಗ ಕೇಳಿ. ಇಲ್ಲದಿದ್ದರೆ ಹೋಗಲು ಬಿಡಿ. ನನಗೆ ಬೇರೆ ಕೆಲಸ ಇದೆ. ಕುದುರೆ ಗಾಡಿಗೆ ಸಿಕ್ಕಿ ಸತ್ತ ಅಧಿಕಾರಿಯ ಅಂತ್ಯ ಸಂಸ್ಕಾರಕ್ಕೆ ಹೋಗಬೇಕು. ಅವನ ವಿಚಾರ ನಿಮಗೂ ತಿಳಿದಿದೆ.’ ಹೀಗೆ ಹೇಳುತ್ತಿದ್ದ ಹಾಗೆಯೇ ಯಾಕೆ ಈ ಮಾತು ಸೇರಿಸಿದೆ ಎಂದು ತನ್ನ ಮೇಲೇ ತಾನೇ ಕೋಪಗೊಂಡು ಇನ್ನಷ್ಟು ಕೆರಳಿದ. ‘ಇದೆಲ್ಲ ಸಾಕಾಗಿ ಹೋಗಿದೆ, ಗೊತ್ತಾಯಿತಾ ಸಾರ್? ಈ ಟೆನ್ಷನ್ನಿನಿಂದಲೇ ನನಗೆ ಕಾಯಿಲೆ ಆಗಿದ್ದು.,’ ಕಿರುಚುವ ದನಿಯಲ್ಲಿ ಹೇಳಿದ. ಕಾಯಿಲೆ ಬಗ್ಗೆ ಹೇಳುವುದು ಬೇಡವಾಗಿತ್ತು ಅನಿಸುತ್ತಿದ್ದರೂ ಜೋರಾಗಿ ಹೇಳಿದ. ‘ಇಷ್ಟೇ… ನಿಮ್ಮ ಪ್ರಶ್ನೆ ಇದ್ದರೆ ಕೇಳಿ, ಇಲ್ಲಾ ನನ್ನ ಕಳಿಸಿ, ಪ್ರಶ್ನೆ ಕೇಳುವುದಿದ್ದರೆ ಕ್ರಮಬದ್ಧವಾಗಿ ಸರಿಯಾಗಿ ಕೇಳಿ! ಬೇರೆ ಥರ ಕೇಳಿದರೆ ನನ್ನ ಒಪ್ಪಿಗೆ ಇಲ್ಲ. ಸರಿ. ಗುಡ್‍ ಬೈ. ಯಾಕೆ ಅಂದರೆ ನಮ್ಮಿಬ್ಬರಿಗೂ ಇಲ್ಲಿ ಏನೂ ಕೆಲಸ ಇಲ್ಲ.’

‘ದೇವರೇ! ಏನಿದು? ಕೇಳುವುದಕ್ಕೆ ಏನಿದೆ?’ ಪೋರ್ಫಿರಿ ಪೆಟ್ರೊವಿಚ್ ಇದ್ದಕ್ಕಿದ್ದ ಹಾಗೆ ಕುಲುಕುಲು ನಕ್ಕ. ತಕ್ಷಣವೇ ತನ್ನ ದನಿಯನ್ನೂ ಮುಖಭಾವವನ್ನೂ ಬದಲಿಸಿ ನಗು ನಿಲ್ಲಿಸಿದ. ‘ಚಿಂತೆ ಮಾಡಬೇಡಿ, ಪ್ಲೀಸ್,’ ಅನ್ನುತ್ತ ಎಲ್ಲ ದಿಕ್ಕುಗಳಿಗೂ ದಡ ದಡ ಓಡಾಡಿದ. ಇದ್ದಕ್ಕಿದ್ದ ಹಾಗೆ ರಾಸ್ಕೋಲ್ನಿಕೋವ್‌ನನ್ನು ಕೂರಿಸಲು ಪ್ರಯತ್ನಪಟ್ಟ. ‘ಟೈಮಿದೆ, ಸಾರ್, ಟೈಮಿದೆ. ಇದೆಲ್ಲ ನಾನ್ಸೆನ್ಸ್, ಕೆಲಸಕ್ಕೆ ಬಾರದ ವಿಚಾರ, ಸಾರ್. ನೀವು ನಮ್ಮ ಕಛೇರಿಗೆ ಬಂದಿರಲ್ಲ, ಅದೇ ಸಂತೋಷ. ನೀವು ನಮ್ಮ ಅತಿಥಿಗಳು. ನಾನು ಹೀಗೆಲ್ಲ ನಕ್ಕಿದ್ದಕ್ಕೆ ದಯವಿಟ್ಟು ಕ್ಷಮಿಸಬೇಕು ರಾಡಿಯಾನ್ ರೊಮೊನೊವಿಚ್. ರೋಡಿಯಾನ್ ರೊಮೊನೊವಿಚ್ ಅನ್ನುವುದು—ಸರಿ ತಾನೇ? ನಾನು ನರ್ವಸ್ ಮನುಷ್ಯ. ನಿಮ್ಮ ಜಾಣತನದ ಮಾತು ಕೇಳಿ ನಗು ತಡೆಯುವುದಕ್ಕೆ ಆಗಲಿಲ್ಲ. ಒಂದೊಂದು ಸಾರಿ ಅರ್ಧ ಗಂಟೆಯಾದರೂ ನಗು ನಿಲ್ಲಿಸಕ್ಕೇ ಆಗಲ್ಲ… ಬಹಳ ಬೇಗ ನಗು ಬರತ್ತೆ ನನಗೆ, ಸಾರ್. ನನ್ನ ಈ ಸ್ವಭಾವದಿಂದಲೇ ಯಾವಾಗ ಸ್ಟ್ರೋಕ್ ಆಗತ್ತೋ ಅನ್ನುವ ಭಯ ದಯವಿಟ್ಟು ಕೂತುಕೊಳ್ಳಿ, ಪ್ಲೀಸ್. ಅಥವ ನಿಮಗೆ ಇನ್ನೂ ಕೋಪವೋ?’

ರಾಸ್ಕೋಲ್ನಿಕೋವ್ ಸುಮ್ಮನಿದ್ದ. ಕೇಳಿಸಿಕೊಂಡ. ಗಮನಿಸಿದ. ಸಿಟ್ಟಿನಲ್ಲಿ ಹುಬ್ಬು ಗಂಟಿಕ್ಕಿಕೊಂಡೇ ಕುಳಿತ.

‘ನನ್ನ ಬಗ್ಗೇನೇ ನಿಮಗೊಂದು ವಿಚಾರ ಹೇಳತೇನೆ, ರೋಡಿನ್ ರೊಮೊನಿವಿಚ್. ಅದು ನನ್ನ ಸ್ವಭಾವವನ್ನ ವಿವರಿಸತ್ತೆ.’ ಅತಿಥಿಯ ಕಣ್ಣು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಅನ್ನುವ ಹಾಗೆ ಪೋರ್ಫಿರಿ ಪೆಟ್ರೊವಿಚ್ ಮೊದಲಿನ ಹಾಗೇ ರೂಮಿನಲ್ಲಿ ಸರಿದಾಡುತ್ತ ಮಾತಾಡಿದ. ‘ನಿಮಗೆ ಗೊತ್ತು, ನನಗೆ ಮದುವೆ ಆಗಿಲ್ಲ. ಎಲೆ ಉದುರಿ ವಯಸ್ಸಾದ ಮರ ನಾನು… ಮತ್ತೆ ಗಮನಿಸಿದ್ದೀರಾ ರೊಡಿಯಾನ್ ರೊಮೊನೊವಿಚ್, ನಮ್ಮ ರಶಿಯಾದಲ್ಲಿ, ಅದರಲ್ಲೂ ಪೀಟರ್ಸ್‌ಬರ್ಗ್‌ನ ದೊಡ್ಡ ಮನುಷ್ಯರ ಬಳಗದಲ್ಲಿ ಪರಸ್ಪರ ಗೌರವ ಇರುವ ಆದರೂ ತೀರ ಪರಿಚಿತರಲ್ಲದ ಇಬ್ಬರು, ನಿಮ್ಮ ಹಾಗೆ ನನ್ನ ಹಾಗೆ ಇರುವಂಥವರು, ಭೇಟಿಯಾದರೆ ಸಾರ್ ಒಂದರ್ಧ ಗಂಟೆ ಕೂಡ ಮಾತಾಡಕ್ಕೆ ವಿಷಯ ಇರಲ್ಲ. ಸೆಟಗೊಂಡು ಮುಜುಗರಪಡುತ್ತ ಸುಮ್ಮನೆ ಕೂತುಬಿಡುತ್ತಾರೆ. ಎಲ್ಲಾರಿಗೂ ಮಾತಾಡಕ್ಕೆ ವಿಷಯ ಇರತ್ತೆ.

ಉದಾಹರಣೆಗೆ ಹೆಂಗಸರಿಗೆ, ಉದಾಹರಣೆಗೆ ಸಾಹುಕಾರರಿಗೆ, ಉದಾಹರಣೆಗೆ ಮೇಲ್ವರ್ಗದವರಿಗೆ, ಮಾತಾಡಕ್ಕೆ ಏನಾದರೂ ವಿಷಯ ಸಿಗತ್ತೆ. ಆದರೆ ಮಧ್ಯಮ ಜನ, ನಿಮ್ಮ ನನ್ನಂಥವರು, ಯಾವಾಗಲೂ ಮುಜುಗರಪಡುತ್ತ ಮಾತಾಡಕ್ಕೆ ಕಷ್ಟಪಡತೇವೆ. ಓ, ತಂದೆಯೇ, ಯಾಕೆ ಹೀಗೆ? ನಮಗೆ ಸಾಮಾಜಿಕ ಆಸಕ್ತಿ ಇಲ್ಲವೋ ಅಥವಾ ನಾವು ತುಂಬ ಪ್ರಾಮಾಣಿಕರಾಗಿದ್ದು ಒಬ್ಬರಿಗೊಬ್ಬರು ಮೋಸ ಮಾಡಕ್ಕೆ ಇಷ್ಟಪಡಲ್ಲವೋ? ನಿಮಗೇನನ್ನಿಸತ್ತೆ? ದಯವಿಟ್ಟು ಸಾರ್, ನಿಮ್ಮ ಕ್ಯಾಪು ಅಲ್ಲಿಡಿ. ನೀವು ಹೊರಡತಾ ಇದೀರಿ, ನನಗೆ ಮುಜುಗರ ಆಗಿದೆ ಅಂದುಕೊಳ್ಳತಾರೆ ನೋಡಿದವರು… ಹಾಗಲ್ಲ, ನಿಮ್ಮನ್ನ ನೋಡಿ ಬಹಳ ಸಂತೋಷವಾಗಿದೆ ಸಾರ್…’

ರಾಸ್ಕೋಲ್ನಿಕೋವ್ ಕ್ಯಾಪನ್ನು ಕೆಳಗಿಟ್ಟ, ಆದರೂ ಮಾತಾಡದೆ ಸುಮ್ಮನೆ ಕೂತು, ಹುಬ್ಬುಗಂಟಿಕ್ಕಿಕೊಂಡು, ಪೋರ್ಫಿರಿಯ ಅರ್ಥವಿರದ ನೀರ್ಗುಳ್ಳೆಯಂಥ ಮಾತು ಕೇಳಿಸಿಕೊಳ್ಳುತ್ತ ಕೂತ. ‘ಹೀಗೆ ವಟವಟ ಮಾತಾಡಿ ನನ್ನ ಗಮನ ಬೇರೆ ಕಡೆ ಸೆಳೆಯುವುದಕ್ಕೆ ಪ್ರಯತ್ನಪಡುತ್ತಿದ್ದಾನೋ?’ ಎಂದು ಕೇಳಿಕೊಂಡ.

‘ಕಾಫಿ ತಗೊಳ್ಳಿ ಅಂತ ನಿಮಗೆ ಹೇಳಲ್ಲ, ಸಾರ್. ಯಾಕೆಂದರೆ ಇದು ಕಾಫಿ ಕುಡಿಯುವ ಜಾಗವಲ್ಲ. ಆದರೂ ಬರೀ ಐದೇ ಐದು ನಿಮಿಷ ಗೆಳೆಯನ ಜೊತೆಗೆ ಇದ್ದು ಖುಷಿ ಪಡಿ.’ ಪೋರ್ಫಿರಿ ಮಾತಿನ ಪ್ರವಾಹವನ್ನು ಸತತವಾಗಿ ಹರಿಸುತ್ತಲೇ ಇದ್ದ. ‘ಈ ಸರ್ಕಾರಿ ಕೆಲಸದ ಕರ್ತವ್ಯಗಳು ಗೊತ್ತಲ್ಲ ಸಾರ್, ನಿಮಗೆ, ಸುಮ್ಮನೆ ಅತ್ತ ಇತ್ತ ಹೆಜ್ಜೆ ಹಾಕತಾನೇ ಇರತೇನೆ ಹೀಗೆ. ನಿಮಗೆ ಬೇಜಾರಾಗಿದ್ದರೆ ದಯವಿಟ್ಟು ಕ್ಷಮಿಸಿ. ಹೀಗೆ ಓಡಾಡಿದರೆ ವಾಕ್ ಮಾಡಿದ ಹಾಗಾಗತ್ತೆ, ಹೆಮರಾಯಿಡ್ಸ್ ಸಾರ್ ಜಿಮ್ನಾಸ್ಟಿಕ್ಸ್ ಮಾಡಿದರೆ ವಾಸಿ ಆಗಬಹುದಾ ಅಂತ ನೋಡಿದೆ. ಸ್ಟೇಟ್ ಕೌನ್ಸಿಲರ್, ಸೀನಿಯರ್ ಸ್ಟೇಟ್ ಕೌನ್ಸಿಲರ್, ಕೊನೆಗೆ ಪ್ರೀವೀ. ಕೌನ್ಸೆಲರುಗಳು ಕೂಡ ಹಗ್ಗದಾಟ ಆಡತಾರೆ ಅಂತ ಕೇಳಿದೇನೆ. ನಮ್ಮ ಕಾಲದಲ್ಲಿ, ಈ ಯುಗದಲ್ಲಿ ವಿಜ್ಞಾನ ಹೀಗೆ ನೋಡಿ… ಹೌದು ಸಾರ್. ಇರಲಿ, ವಿಚಾರಣೆ ಇತ್ಯಾದಿ ಎಲ್ಲ ಫಾರ್ಮಾಲಿಟೀಸ್ ಇರತಾವಲ್ಲ… ನೋಡಿ ನೀವೆಷ್ಟು ಒಳ್ಳೆಯವರು, ಸ್ವತಃ ನೀವೇ ವಿಚಾರಣೆಯ ಮಾತು ಎತ್ತಿದಿರಿ. ನಿಮಗೇ ಗೊತ್ತಲ್ಲ ರೋಡಿಯಾನ್ ರೊಮೊನೊವಿಚ್, ಈ ವಿಚಾರಣೆಗಳಲ್ಲಿ ಎಷ್ಟೋ ಸಾರಿ ವಿಚಾರಣೆಗೆ ಒಳಪಡುವವನಿಗಿಂತ ವಿಚಾರಣೆ ನಡೆಸುವವನೇ ತಬ್ಬಿಬ್ಬಾಗತಾನೆ. ನೀವೇ ಅದನ್ನ ಸ್ವಲ್ಪ ಹೊತ್ತಿಗೆ ಮುಂಚೆ ಕರೆಕ್ಟಾಗಿ ಹೇಳಿದಿರಿ.’ (ರಾಸ್ಕೋಲ್ನಿಕೋವ್ ಅಂಥ ಮಾತು ಆಡಿರಲೇ ಇಲ್ಲ.) ಎಲ್ಲ ಗಜಿಬಿಜಿ ಆಗತ್ತೆ, ಸಾರ್. ನಿಜವಾಗಿ ಗಜಿಬಿಜಿ! ಹೇಳಿದ್ದೇ ಹೇಳೋದು, ಕೇಳಿದ್ದೇ ಕೇಳೋದು, ನಗಾರಿ ಬಾರಿಸಿದ ಹಾಗೆ.

ಈಗ ಏನೋ ಸುಧಾರಣೆ ಆಗತ್ತೆ ಅನ್ನತಿದ್ದಾರೆ. ಕೊನೆಯ ಪಕ್ಷ ನಮ್ಮ ಹುದ್ದೆಗೆ ಬೇರೆ ಹೆಸರು ಕೊಟ್ಟರೆ ಸಾಕು. ಹೆ, ಹ್ಹೆಹ್ಹೆ, ಹ್ಹೆಹ್ಹೆಹ್ಹೇ. ಇನ್ನ ನಮ್ಮ ತಂತ್ರಗಳ ಬಗ್ಗೆ ನೀವೇ ಎಷ್ಟು ಜಾಣತನದಿಂದ ಹೇಳಿದಿರಿ! ನಿಮ್ಮ ಮಾತನ್ನ ಪೂರಾ ಒಪ್ಪತೇನೆ. ಹೇಳಿ ಸಾರ್, ಮೊದಮೊದಲು ಸಂಬಂಧವೇ ಇರದ ಪ್ರಶ್ನೆ ಕೇಳುತ್ತಾರೆ. ಆಮೇಲೆ ಇದ್ದಕ್ಕಿದ್ದ ಹಾಗೆ ತಲೆ ಮೇಲೆ ಕೊಡಲಿ ಎತ್ತಿ ಹಾಕಿದ ಹಾಗೆ ಐನಾತಿ ಪ್ರಶ್ನೆ ಕೇಳಿ ಅವನನ್ನ ಹಿಡಿದು ಹಾಕುತಾರೆ ಅಂತ ಅಪಾದಿತರಿಗೆ ಮಾತ್ರ ಅಲ್ಲ ಅತೀ ಮಂಕು ತಲೆಯ ರೈತನಿಗೂ ಗೊತ್ತು. ಅಲ್ಲವಾ? ಹ್ಹೆಹ್ಹೆಹ್ಹೇ… ನೆಟ್ಟಗೆ ತಲೇ ಮೇಲೇ ಹೊಡೆದ ಹಾಗೆ, ಹ್ಹೆಹ್ಹೆಹ್ಹೇ… ಅಲ್ಲಾ ಇವರೇ, ಸರ್ಕಾರಿ ಕ್ವಾರ್ಟರ್ಸ್ ಬಗ್ಗೆ ನಾನು ಮಾತಾಡಿದ್ದು ನಿಮ್ಮನ್ನ… ಹ್ಹೆಹ್ಹೇ! ನೀವು ತುಂಬ ವ್ಯಂಗ್ಯ ಮಾಡತೀರಪ್ಪ! ನಾನು ಹಾಗಲ್ಲ. ಸರಿ, ಸರಿ, ನಿಲ್ಲಿಸತೇನೆ! ಹ್ಞಾ, ಒಂದು ಮಾತು ಇನ್ನೊಂದು ಮಾತನ್ನ ಎಬ್ಬಿಸತ್ತೆ. ನೀವೇ ನೋಡಿ, ಸರಿಯಾದ ರೀತಿಯ ವಿಚಾರಣೆ ಅಂತಂದಿರಿ ನೀವು. ಸರಿಯಾದ ರೀತಿ ಅಂದರೇನು? ನಿಮಗೇ ಗೊತ್ತು ಸಾರ್, ಎಷ್ಟೋ ಕೇಸುಗಳಲ್ಲಿ ಸರಿಯಾದ ರೀತಿ ಅನ್ನೋದೇ ನಾನ್ಸೆನ್ಸ್. ಕೆಲವು ಸಾರಿ ಸ್ನೇಹದ ಮಾತುಕತೆಯೇ ಉಪಯೋಗಕ್ಕೆ ಬರತ್ತೆ. ರೀತಿ, ಕ್ರಮ ಇವೆಲ್ಲ ಎಲ್ಲೂ ಓಡಿಹೋಗಲ್ಲ. ಅವನ್ನ ನೆಚ್ಚಿಕೊಂಡರೆ ಏನೂ ಗಿಟ್ಟಲ್ಲ. ಒಂದು ಮಾತು ಹೇಳತೇನೆ, ವಿಚಾರಣೆ ನಡೆಸುವ ಅಧಿಕಾರಿಯನ್ನು ಪ್ರತಿ ಹೆಜ್ಜೆಗೂ ಕ್ರಮ, ರೀತಿ ಅಂತ ಕಟ್ಟಿಹಾಕಬಾರದು. ವಿಚಾರಣೆ ಅನ್ನುವುದು ಕಲೆ, ಅದರದೇ ದಾರಿ ಇರತ್ತೆ, ಹ್ಹೆಹ್ಹೆಹ್ಹೇ!’

ಪೋರ್ಫಿರಿ ಪೆಟ್ರೊವಿಚ್ ಉಸಿರು ಎಳೆದುಕೊಳ್ಳಲು ಒಂದು ಕ್ಷಣ ಮಾತು ನಿಲ್ಲಿಸಿದ. ಖಾಲಿ ಪದಪುಂಜಗಳ ರೂಪದಲ್ಲಿ ಮಾತು ಅವನಿಂದ ಒಂದೇ ಸಮ ಸುರಿಯುತ್ತಿತ್ತು. ನಡುವೆ ತಟ್ಟನೆ ಮಹತ್ವದ್ದಾದ ಪುಟ್ಟದೊಂದು ಶಬ್ದ ಬರುತ್ತಿತ್ತು. ಮತ್ತೆ ಕೂಡಲೆ ಅರ್ಥಹೀನವಾಗಿ ಹರಿಯುತ್ತಿತ್ತು. ಈಗ ಅವನು ಕೋಣೆಯಲ್ಲಿ ಅತ್ತಿಂದಿತ್ತ ಓಡುತ್ತಿದ್ದ, ಅವನ ದಪ್ಪನೆಯ ಗಿಡ್ಡ ಕಾಲು ವೇಗ, ಮತ್ತೂ ವೇಗವಾಗಿ ಹೆಜ್ಜೆ ಹಾಕುತ್ತಿದ್ದವು. ನೆಲ ನೋಡುತ್ತ, ಬಲಗೈಯನ್ನು ಬೆನ್ನ ಹಿಂದೆ ಕಟ್ಟಿಕೊಂಡು ಎಡಗೈಯನ್ನು ಒಂದೇ ಸಮ ಬೀಸುತ್ತ, ಬೀಸಿದ ಕೈ ಅವನಾಡುವ ಮಾತಿಗೆ ಸಂಬಂಧವೇ ಇಲ್ಲದ ಹೊಸ ಹೊಸ ಭಂಗಿಗಳನ್ನು ತಳೆಯುತ್ತ—ಓಡಿಯಾಡುತ್ತಿದ್ದ. ಅವನು ಹಾಗೆ ಓಡಾಡುತ್ತಿರುವಾಗ ಎರಡು ಬಾರಿ ಬಾಗಿ ಬಳಿ ಏನೋ ಕೇಳಿಸಿಕೊಳ್ಳುವವನ ಹಾಗೆ ತಳುವಿದ ಅನ್ನುವುದನ್ನು ರಾಸ್ಕೋಲ್ನಿಕೋವ್ ತಟ್ಟನೆ ಗಮನಿಸಿದ… ‘ಯಾತಕ್ಕಾದರೂ ಯಾರಿಗಾದರೂ ಕಾಯುತ್ತಿದ್ದಾನಾ, ಹೇಗೆ?ʼ

‘ನೀವು ಹೇಳಿದ್ದು ನಿಜವಾಗಲೂ ಸರಿ, ಸಾರ್,’ ಪೋರ್ಫಿರಿ ಮತ್ತೆ ಮಾತಿನ ಎಳೆ ಎತ್ತಿಕೊಂಡ. ರಾಸ್ಕೋಲ್ನಿಕೋವ್‌ನನ್ನು ತುಂಬ ಪ್ರಾಮಾಣಿಕವಾಗಿ, ಸಂತೋಷಚಿತ್ತನಾಗಿ ನೋಡುತ್ತ ಮಾತಾಡಿದ. (ಅದರಿಂದ ರಾಸ್ಕೋಲ್ನಿಕೋವ್ ಬೆಚ್ಚಿ ತಟ್ಟನೆ ಹುಷಾರಾದ.) ‘ನಮ್ಮ ಕಾನೂನು ನಡಾವಳಿಗಳ ಬಗ್ಗೆ ನೀವು ಹೇಳಿದ್ದು, ತಮಾಷೆ ಮಾಡಿದ್ದು ತುಂಬ ಸರಿಯಾಗಿದೆ, ಸಾರ್. ಹೆಹ್ಹೇ! ನಾವು ಬಳಸುವ ಗಹನವಾದ ಮನಶ್ಶಾಸ್ತ್ರೀಯ ತಂತ್ರಗಳು (ಕೆಲವು ತುಂಬ ತಮಾಷೆಯಾಗಿರತವೆ) ಸರಿಯಾದ ಕ್ರಮ, ಕಟ್ಟಳೆಜೊತೆಗೆ ಹೊಂದಿಸಲು ಹೋದರೆ ಕೆಲಸಕ್ಕೆ ಬಾರದವಾಗುತ್ತವೆ. ಹೌದು, ಸಾರ್… ನಮ್ಮ ವಿಚಾರಣೆಯ ಪದ್ಧತಿಗಳ ಬಗ್ಗೆ ಹೇಳತಾ ಇದೇನೆ. ನನಗೆ ಇವನೋ ಅವನೋ ಅಥವ ಇನ್ಯಾರೋ ಅಪರಾಧಿ ಇರಬಹುದು ಅನ್ನುವ ಗುಮಾನಿ ಹುಟ್ಟಿದಾಗ, ಉದಾಹರಣೆಗೆ ನನ್ನ ಪಾಲಿಗೆ ಬಂದಿರುವ ಚಿಕ್ಕಕೇಸನ್ನೇ ತಗೊಳ್ಳಿ… ನೀವು ವಕೀಲರಾಗಲು ಓದುತ್ತಿದ್ದೀರಿ, ಅಲ್ಲವಾ?’

‘ಹ್ಞೂ, ಓದತಾ ಇದ್ದೆ…’

‘ಸರಿ ಹಾಗಾದರೆ, ಇಲ್ಲೊಂದು ಸಣ್ಣ ಉದಾಹರಣೆ ಇದೆ, ಮುಂದೆ ನಿಮ್ಮ ಉಪಯೋಗಕ್ಕೆ ಬರಬಹುದು, ಅಂದರೆ, ನಾನು ನಿಮಗೆ ಪಾಠ ಮಾಡುವ ಧೈರ್ಯ ಮಾಡತಾ ಇದೀನಿ ಅಂತಲ್ಲ, ನೀವು ಅಪರಾಧದ ಬಗ್ಗೆ ಪೇಪರಿನಲ್ಲಿ ಲೇಖನ ಬರೆದವರು! ಖಂಡಿತ ಇಲ್ಲ ಸಾರ್, ನಿಮಗೆ ಸುಮ್ಮನೆ ಒಂದು ಉದಾಹರಣೆ ಕೊಡತೇನೆ, ಅದು ವಾಸ್ತವವಾಗಿ ನಡೆದದ್ದು. ನಾನು ಇವನನ್ನೋ ಅವನನ್ನೋ ಇನ್ಯಾರನ್ನೋ ಅಪರಾಧಿ ಎಂದು ಪರಿಗಣಿಸಿದರೆ, ತಕ್ಕ ಸಮಯ ಬರುವವರೆಗೆ, ಅವನ ವಿರುದ್ಧ ಸಾಕ್ಷಿ ಇದ್ದರೂ, ನಾನು ಯಾಕೆ ಅವನಿಗೆ ತೊಂದರೆ ಕೊಡಲಿ? ಉದಾಹರಣೆಗೆ, ಒಬ್ಬ ತಕ್ಷಣವೇ ಬಂಧಿಸಬೇಕಾದವನಿರಬಹುದು. ಇನ್ನೊಬ್ಬ ತೀರ ಬೇರೆ ಸ್ವಭಾವದವನಾಗಿದ್ದು ಬೇರೆ ಥರದ ಮನುಷ್ಯನಾಗಿದ್ದರೆ ಅವನು ಆರಾಮವಾಗಿ ಅಡ್ಡಾಡಿಕೊಂಡಿರುವುದಕ್ಕೆ ನಾನು ಯಾಕೆ ಅಡ್ಡಿ ಮಾಡಲಿ, ಸಾರ್? ಹ್ಹೆಹ್ಹೆ! ನಿಮಗೆ ಸರಿಯಾಗಿ ಅರ್ಥ ಆಗಲಿಲ್ಲ, ಗೊತ್ತಾಯಿತು ನನಗೆ. ಇನ್ನೂ ಸ್ಪಷ್ಟವಾಗಿ ಹೇಳತೇನೆ, ಕೇಳಿ. ನಾನು ಅಪರಾಧಿಯನ್ನ ಬೇಗ ಹಿಡಿದು ಸೆರೆಮನೆಗೆ ತಳ್ಳಿದರೆ ಅವನಿಗೆ ನೈತಿಕ ಬೆಂಬಲ ತೋರಿಸಿದ ಹಾಗಾಗತ್ತೆ, ಹ್ಹೆಹ್ಹೇ! ನಗತಾ ಇದೀರಿ?’ (ರಾಸ್ಕೋಲ್ನಿಕೋವ್ ನಗುವ ಯೋಚನೆಯನ್ನೂ ಮಾಡಿರಲಿಲ್ಲ. ತುಟಿ ಬಿಗಿದು, ತನ್ನ ನೋಟವನ್ನು ಪೋರ್ಫಿರಿ ಪೆಟ್ರೊವಿಚ್‌ನ ಮೇಲೇ ನೆಟ್ಟು ಕೂತಿದ್ದ). ‘ಹೌದು, ಸಾರ್. ಕೆಲವು ಅಪರಾಧಿಗಳ ವಿಷಯದಲ್ಲಿ ಇದು ನಿಜ. ಯಾಕೆಂದರೆ ಥರಾ ಥರಾ ಜನ ಇರತಾರೆ, ಸಾರ್.

‘ಆದರೆ ವಿಚಾರಣೆ ಕ್ರಮ ಮಾತ್ರ ಒಂದೇ. ನೀವು ಪುರಾವೆಯ ಮಾತು ಹೇಳಿದಿರಿ. ಸರಿ, ಪುರಾವೆ ಇದೆ. ಆದರೆ ಪುರಾವೆ ಎರಡು ಅಲಗಿನ ಕತ್ತಿ. ನಾನು ವಿಚಾರಣೆಯ ಅಧಿಕಾರಿ. ಹಾಗಾಗಿ ದುರ್ಬಲ ಮನುಷ್ಯ ಅಂತ ಒಪ್ಪಿಕೊಳ್ಳತೇನೆ. ನನ್ನ ವಿಚಾರಣೆಯನ್ನು ಗಣಿತದ ಸ್ಪಷ್ಟತೆಯಲ್ಲಿ ಮಂಡಿಸಬೇಕು ಅನ್ನುವವನು ನಾನು. ಎರಡೆರಡಲಿ ನಾಲ್ಕು ಅನ್ನುವಂಥ ನೇರ, ನಿರ್ವಿವಾದಿತ ಪುರಾವೆ ಬೇಕು ನನಗೆ! ಇವನೇ ಅಪರಾಧಿ ಅನ್ನುವುದು ನನಗೆ ಗೊತ್ತಿದ್ದರೂ ಸಮಯಕ್ಕೆ ಮೊದಲೇ ಅವನನ್ನ ಸೆರೆಗೆ ಹಾಕಿದರೆ ಅವನ ಅಪರಾಧ ಸಾಬೀತು ಮಾಡುವ ಗಟ್ಟಿ ಸಾಕ್ಷಿ ನನಗೆ ಸಿಗದೆ ಹೋಗಬಹುದು. ಯಾಕೆ? ಯಾಕೆಂದರೆ ಅವನಿಗೆ ನಾನು ನಿರ್ದಿಷ್ಟವಾದೊಂದು ಸ್ಥಾನ ಕೊಡುತ್ತಿದ್ದೇನೆ, ಅವನಿಗೆ ಹಣೆಪಟ್ಟಿ ಹಚ್ಚುತ್ತಿದ್ದೇನೆ, ಅವನು ಮಾನಸಿಕವಾಗಿ ನನ್ನಿಂದ ಬಚ್ಚಿಟ್ಟುಕೊಳ್ಳುವುದಕ್ಕೆ ಅವಕಾಶಮಾಡಿಕೊಟ್ಟಿರುತ್ತೇನೆ. ಕೊನೆಗೂ ಅವನಿಗೆ ಅರ್ಥವಾಗತ್ತೆ, ಅಪರಾಧ ಮಾಡಿದ್ದಕ್ಕಾಗಿ ನನ್ನ ಸೆರೆಗೆ ಹಾಕಿದ್ದಾರೆ ಅಂತ. ಸೆ

ಬೆಸ್ಟಪೋಲ್‌ನ ಜನ ಹೇಳತಾರೆ ಅಲ್ಲಿದ್ದ ಬುದ್ಧಿವಂತರಿಗೆಲ್ಲ ಹೆದರಿಕೆ ಆಗಿತ್ತಂತೆ, [1854ರಲ್ಲಿ ಅಲ್ಮಾ ನದಿಯ ಬಳಿ ಯುದ್ಧವಾದಮೇಲೆ] ಶತ್ರು ಯಾವ ಕ್ಷಣದಲ್ಲಾದರೂ ಊರಿಗೆ ಮುತ್ತಿಗೆ ಹಾಕಬಹುದು ಅಂತ ಭಯಪಟ್ಟಿದ್ದರಂತೆ. ಶತ್ರು ಮಾಮೂಲು ಮುತ್ತಿಗೆಯ ಕ್ರಮ ಅನುಸರಿಸುತ್ತ ಕಂದಕ ತೋಡುತ್ತಿದ್ದಾನೆ ಅನ್ನುವುದು ಗೊತ್ತಾದಾಗ ಜನಕ್ಕೆ ಬಹಳ ಸಂತೋಷವಾಗಿ ಆತ್ಮವಿಶ್ವಾಸ ಹುಟ್ಟಿತಂತೆ. ಅಂದರೆ ಯುದ್ಧ ಕಡಮೆಯೆಂದರೂ ಇನ್ನೂ ಇರಡು ತಿಂಗಳು ನಡೆಯತ್ತೆ, ಯಾಕೆಂದರೆ ಮಾಮೂಲು ಮುತ್ತಿಗೆ ಹಾಕಿ ಊರು ಹಿಡಿಯುವುದಕ್ಕೆ ಎಷ್ಟು ಕಾಲ ಬೇಕೋ ಯಾರಿಗೆ ಗೊತ್ತು. ಮತ್ತೆ ನಗತಾ ಇದೀರಿ? ಮತ್ತೆ ನನ್ನ ಮಾತು ನಂಬಲ್ಲ. ಸರಿ ನೀವು, ನೀವೇ ಸರಿ! ಇವೆಲ್ಲ ವಿಶೇಷ ಕೇಸುಗಳು, ಒಪ್ಪತೇನೆ. ಈಗ ನಾನು ಕೈಗೆತ್ತಿಕೊಂಡಿರುವುದೂ ವಿಶೇಷವಾದ ಕೇಸು! ಆದರೂ ನೋಡಿ ರೋಡಿಯಾನ್ ರೊಮಾನೊವಿಚ್, ಒಂದು ವಿಷಯ ನಿಮ್ಮ ಗಮನದಲ್ಲಿರಬೇಕು. ಬರೆದಿಟ್ಟಿರುವ ಕ್ರಮಗಳಿಗೆ ಸರಿಯಾಗಿ ಹೊಂದಿಕೊಳ್ಳುವ ಒಂದು ಅಪರಾಧವೂ ಇಲ್ಲ. ಯಾಕೆಂದರೆ ಯಾವುದೇ ಅಪರಾಧವಾಗಲಿ, ಅದು ನಡೆದ ತಕ್ಷಣ, ವಿಶಿಷ್ಟವಾದ, ವಿಶೇಷವಾದ ಅಪರಾಧವಾಗುತ್ತದೆ. ಹಾಗಾಗಿ ತನಗಿಂತ ಮೊದಲು ನಡೆದ ಅಪರಾಧಗಳಿಗಿಂತ ಬೇರೆಯಾಗಿರುತ್ತದೆ.

ಈ ಥರದಲ್ಲಿ ಅತ್ಯಂತ ಹಾಸ್ಯಾಸ್ಪದ ತಪ್ಪುಗಳು ಆಗತವೆ, ಸಾರ್. ಅಪರಾಧಿ ಅಂತ ಗೊತ್ತಿರುವವನನ್ನ ಸುಮ್ಮನೆ ಅವನ ಪಾಡಿಗೆ ಬಿಟ್ಟರೆ, ಅವನನ್ನ ಜೈಲಿಗೆ ಹಾಕದಿದ್ದರೆ, ಅಥವ ಅವನ ತಂಟೆಗೇ ಹೋಗದಿದ್ದರೆ, ಏನಾಗತ್ತೆ ಗೊತ್ತಾ? ನನಗೆ ಅವನ ಬಗ್ಗೆ ಎಲ್ಲವೂ ಗೊತ್ತು ಒಳಗುಟ್ಟುಗಳೆಲ್ಲ ತಿಳಿದಿವೆ, ಹಗಲೂ ರಾತ್ರಿ ಅವನ ಮೇಲೆ ಎಚ್ಚರದ ಕಣ್ಣಿಟ್ಟಿದ್ದೇನೆ ಅನ್ನುವ ಸಂಶಯ ಅವನನ್ನು ಪ್ರತಿನಿಮಿಷವೂ ಕಾಡುವುದಕ್ಕೆ ಶುರು ಮಾಡತ್ತೆ. ಅವನಲ್ಲಿ ಇಂಥ ಸಂಶಯ ಶಾಶ್ವತವಾಗಿ ಇರುವ ಹಾಗೆ ಮಾಡಿದರೆ, ದೇವರೇ, ಅವನು ಸುಳಿಗೆ ಸಿಕ್ಕ ಹಾಗೆ ಆಡುತ್ತಾನೆ, ಎರಡೆರಡಲಿ ನಾಲ್ಕು ಅನ್ನುವಂಥ ಪುರಾವೆ ಸಿಗುವ ಹಾಗೆ ಏನಾದರೂ ಮಾಡತಾನೆ, ಅಷ್ಟಾದರೆ ಸಾಕಲ್ಲವಾ, ಸಾರ್. ಪೆದ್ದ ರೈತನಿಗೂ ಈ ಕಾಲದ ವಿದ್ಯೆ ಕಲಿತಿರುವ ಬುದ್ಧಿಜೀವಿಗೂ ಹೀಗೇ ಆಗತ್ತೆ! ಯಾಕೆಂದರೆ ಸಾರ್ ಮನುಷ್ಯ ಯಾವ ಥರದ ಬೆಳವಣಿಗೆ ಸಾಧಿಸಿದಾನೆ ಅನ್ನುವುದು ಮುಖ್ಯ. ನರಗಳ ಉದ್ರೇಕ ಸಾರ್, ನರಗಳ ಉದ್ರೇಕ. ಅದನ್ನ ಮರೆತುಬಿಟ್ಟಿರಿ, ಸಾರ್ ಇತ್ತೀಚೆಗೆ ಎಲ್ಲಾರಿಗೂ ರೋಗ, ಸದಾ ರೇಗತಾ ಇರತಾರೆ. ಎಲ್ಲಾರಿಗೂ ಪಿತ್ಥ ಜಾಸ್ತಿ ಆಗಿದೆ! ಹೇಳತೇನೆ ಕೇಳಿ, ಹೀಗಾದಾಗ ಅವರು ಮಾಹಿತಿಯ ಚಿನ್ನದ ಗಣಿ ಆಗಿಬಿಡತಾರೆ!

ನನಗೆ ಬೇಕಾದ ಅಪರಾಧಿ ಬೀದಿಯಲ್ಲಿ ಅಡ್ಡಾಡಿಕೊಂಡಿರತಾನೆ ಅಂತ ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ! ಓಡಾಡಲಿ, ಬೇಕಾದಷ್ಟು ಓಡಾಡಲಿ! ಆದರೂ ಅವನಿಗೆ ತಾನು ನನಗೆ ಬಲಿ ಆಗುವವನು, ನನ್ನಿಂದ ತಪ್ಪಿಸಿಕೊಂಡು ಎಲ್ಲೂ ಓಡಾಡಕ್ಕೆ ಆಗಲ್ಲ ಅಂತ ಗೊತ್ತಿರಬೇಕು! ಹೆಹ್ಹೆ! ಓಡಿದ ಅಂತಿಟ್ಟುಕೊಳ್ಳಿ, ಎಲ್ಲಿಗೆ ಹೋಗತಾನೆ, ಫಾರಿನ್ನಿಗಾ? ಪೋಲೆಂಡಿನವನು ಹೋದರೂ ಹೋದಾನು, ಇವನು ಹೋಗಕ್ಕಾಗಲ್ಲ. ಯಾಕೆಂದರೆ ಅವನನ್ನ ಗಮನಿಸತಾ ಇದೇನೆ, ತಕ್ಕ ಎಚ್ಚರಿಕೆ, ಏರ್ಪಾಡು ಮಾಡಿದೇನೆ. ಯಾವುದಾದರೂ ಕುಗ್ರಾಮಕ್ಕೆ ಹೋಗಿ ಬಚ್ಚಿಟ್ಟುಕೊಳ್ಳುತ್ತಾನಾ? ಅಲ್ಲೆಲ್ಲ ಬರೀ ರೈತರೆ ಇರತಾರೆ, ನಿಜವಾದ, ರಶಿಯನ್ ರೈತರು. ನೆಲದ ಮಕ್ಕಳು. ಪ್ರಬುದ್ಧನಾದ ಈ ಮನುಷ್ಯ, ಈ ಕಾಲದ ವಿದ್ಯ ಓದಿದವನು, ಜೈಲಿಗೆ ಬೇಕಾದರೆ ಹೋದಾನೇ ಹೊರತು ಅವನ ಕಣ್ಣಿಗೆ ವಿದೇಶೀಯರ ಹಾಗೆ ಕಾಣುವ ರಶಿಯನ್ ರೈತರ ಜೊತೆ ಬದುಕಲಾರ. ಹ್ಹೆಹ್ಹೇ!

ಇದೆಲ್ಲ ನಾನ್ಸೆನ್ಸ್, ಬರೀ ಹೊರಗಿನ ವಿಚಾರ. ಓಡಿಹೋಗುವುದು ಅಂದರೇನು! ಅದೊಂಥರ ಪಾರ್ಮಾಲಿಟಿ, ಶಿಷ್ಟಾಚಾರ, ಅಷ್ಟೆ. ಅದೇ ಮುಖ್ಯ ವಿಚಾರ ಅಲ್ಲ. ಅವನು ನನ್ನ ಬಿಟ್ಟು ಓಡಿಹೋಗಲ್ಲ. ಹಾಗೆ ಹೋಗಕ್ಕೆ ಅವನಿಗೆ ಜಾಗ ಇಲ್ಲ ಅಂತಲ್ಲ, ಮಾನಸಿಕವಾಗಿ ಅವನು ನನ್ನ ಬಿಟ್ಟು ಹೋಗಲಾರ, ಹ್ಹೆಹ್ಹೇ! ಹೋಗಕ್ಕೆ ಎಲ್ಲಾದರೂ ಜಾಗ ಇದ್ದಿದ್ದರೂ ನನ್ನ ಬಿಟ್ಟು ಹೋಗಲ್ಲ, ಇದು ನಿಸರ್ಗದ ನಿಯಮ. ಮೇಣದ ಬತ್ತಿ ಹತ್ತಿರ ಸುತ್ತಾಡುವ ಜಿಟ್ಟೆ ನೋಡಿದ್ದೀರಾ? ಇವನೂ ಹಾಗೇ, ನನ್ನ ಸುತ್ತಾನೇ ಸುತ್ತತಾ ಇರತಾನೆ. ದೀಪದ ಸುತ್ತ ಸುತ್ತುವ ಚಿಟ್ಟೆ ಹಾಗೆ. ಸ್ವಾತಂತ್ರ್ಯ ಅನ್ನುವುದು ಅವನಿಗಿಷ್ಟ ಆಗಲ್ಲ. ಯೋಚನೆ ಮಾಡಕ್ಕೆ ಶುರುಮಾಡತಾನೆ, ಬಲೆಗೆ ಬಿದ್ದ ಪ್ರಾಣಿ ಥರ ಒದ್ದಾಡತ, ಬಲೆ ಸಿಕ್ಕುಸಿಕ್ಕಾಗಿ ಸಾಯೋವಷ್ಟು ಚಿಂತೆ ಮಾಡತಾನೆ!… ಇನ್ನೂ ಏನಪ್ಪ ಅಂದರೆ ಅವನು ನನಗೋಸ್ಕರಾನೇ ಎರಡೆರಡಲ ನಾಲ್ಕು ಅನ್ನುವಂಥ ಟ್ರಿಕ್ಕು ಸಿದ್ಧಮಾಡಿಕೊಳ್ಳತಾನೆ—ಅವನಿಗೆ ನಾನು ಸ್ವಲ್ಪ ಜಾಸ್ತಿ ಟೈಮು ಕೊಟ್ಟರೆ ಸಾಕು. ನನ್ನ ಸುತ್ತ ಗಿರಕಿ ಹೊಡೀತಾನೆ, ಹತ್ತಿರ ಹತ್ತಿರ ಬರತಾನೆ, ನೇರ ನನ್ನ ಬಾಯಿಗೇ ಬಂದು ಬೀಳತಾನೆ, ಲಬಕ್! ನುಂಗಿ ಹಾಕತೇನೆ. ಬಹಳ ಚೆನ್ನಾಗಿರತ್ತೆ, ಹ್ಹೆಹ್ಹೇ! ನಂಬಲ್ಲವಾ ನೀವು ನನ್ನ ಮಾತು?’

ರಾಸ್ಕೋಲ್ನಿಕೋವ್ ಉತ್ತರ ಕೊಡಲಿಲ್ಲ. ಮುಖ ಬಿಳಿಚಿ, ನಿಶ್ಚಲವಾಗಿ ಕೂತು, ಪೋರ್ಫಿರಿಯನ್ನೇ ದಿಟ್ಟಿಸುತ್ತಿದ್ದ.

ಹಣೆಯ ಮೇಲಿನ ಪುಟ್ಟ ನಿರಿಗೆಗಳು ತಮಗೆ ತಾವೇ ನಯವಾದವು, ಅವನ ಕಣ್ಣು ಕಿರಿದಾಯಿತು, ಮೈ ಸಡಿಲವಾಯಿತು, ಇದ್ದಕ್ಕಿದ್ದ ಹಾಗೆ ಸುದೀರ್ಘವಾದ ನರ್ವಸ್ ಆದ ನಗುವೊಂದು ಉಕ್ಕಿ ಬಂದು ಅವನ ಇಡೀ ಮೈ ಕುಲುಕಿ ಓಲಾಡಿ ರಾಸ್ಕೋಲ್ನಿಕೋವ್‍ ನ ಕಣ್ಣನ್ನು ನೇರವಾಗಿ ದಿಟ್ಟಿಸುತ್ತ ನಿಂತ.

‘ಒಳ್ಳೆಯ ಪಾಠ!’ ಮೈ ತಣ್ಣಾಗುತ್ತಿತ್ತು, ಯೋಚನೆ ಮಾಡಿದ. ‘ನಿನ್ನೆ ಆಡಿದ ಹಾಗೆ ಬೆಕ್ಕು-ಇಲಿ ಆಟ ಕೂಡ ಅಲ್ಲ, ತನಗೆ ಎಷ್ಟು ಶಕ್ತಿ ಇದೆ ಅಂತ ತೋರಿಸಿಕೊಳ್ಳುವ ಬಡಬಡಿಕೆಯೂ ಅಲ್ಲ. ತೀರ ಬುದ್ಧಿವಂತ! ಇನ್ನೇನೋ ಗುರಿ ಇದೆ, ಏನದು? ಹ್ಞಾ! ನಾನ್ಸೆನ್ಸ್! ನನ್ನ ಹೆದರಿಸುವುದಕ್ಕೆ ಇದೆಲ್ಲ! ನಿನ್ನ ಹತ್ತಿರ ಯಾವ ಸಾಕ್ಷಿ, ಪುರಾವೆ ಇಲ್ಲ. ನಿನ್ನೆ ನನಗೆ ಸಿಕ್ಕಿದ ಮನುಷ್ಯ ನಿಜವಾಗಿ ಇಲ್ಲವೇ ಇಲ್ಲ! ನನ್ನ ದಿಕ್ಕು ತಪ್ಪಿಸುವುದಕ್ಕೆ ನೋಡತಾ ಇದೀಯ. ಮೊದಲೇ ಹೀಗೆಲ್ಲ ಹೇಳಿ ರೇಗಿಸಕ್ಕೆ ನೋಡತಾ ಇದೀಯ. ರೇಗಿ ಏನಾದರೂ ಹೇಳಿದಾಗ ಹಿಡಿದು ಹಾಕತೀಯ. ಎಲ್ಲಾ ಸುಳ್ಳು. ಅದೆಲ್ಲ ನಡೆಯಲ್ಲ. ಸರಿ, ಅವನು ಇಷ್ಟೊಂದೆಲ್ಲ ನನಗೆ ಹೇಳಿದ್ದು ಯಾಕೆ?… ನಾನು ಕೆರಳಲಿ ಅಂತಲಾ?… ಇಲ್ಲ, ಬ್ರದರ್. ಬರೀ ಸುಳ್ಳು. ನೀನು ಏನೇ ರೆಡಿಮಾಡಿಕೊಂಡಿರು, ಗೆಲ್ಲಲ್ಲ. ಸರಿ, ನೀನೇನು ರೆಡಿ ಮಾಡಿಕೊಂಡಿದೀಯೋ, ನೋಡಣ!’ ಗೊತ್ತಿರದ ಯಾವುದೋ ಭಯಂಕರ ಅನಾಹುತ ಎದುರಿಸುವುದಕ್ಕೆ ಶಕ್ತಿಯೆಲ್ಲ ಒಗ್ಗೂಡಿಸಿಕೊಂಡು ಕೂತ.

ಪೋರ್ಫಿರಿಯ ಮೇಲೆ ಬಿದ್ದು ಅಲ್ಲೇ ಕತ್ತು ಹಿಸುಕಿ ಸಾಯಿಸಬೇಕು ಎಂದು ಒಂದೊಂದು ಸಲ ಅನಿಸುತ್ತಿತ್ತು. ಕಛೇರಿಗೆ ಬಂದ ಕ್ಷಣದಿಂದಲೂ ತನ್ನ ಈ ಕೋಪದ ಬಗ್ಗೆ ಅವನಿಗೆ ಎಚ್ಚರವಿತ್ತು. ತುಟಿ ಒಣಗಿದೆ, ಎದೆ ಬಡಿದುಕೊಳ್ಳುತ್ತಿದೆ, ತುಟಿಯಂಚಿನಲ್ಲಿ ಎಂಜಲ ನೊರೆ ಇದೆ, ಗೊತ್ತಿತ್ತು. ಆದರೂ ಸರಿಯಾದ ಹೊತ್ತು ಬರುವವರೆಗೆ ಮಾತಾಡದೆ ಸುಮ್ಮನಿರಬೇಕು ಅನ್ನುವ ನಿರ್ಧಾರ ಮಾಡಿದ್ದ. ಈ ಪರಿಸ್ಥಿತಿಯಲ್ಲಿ ಇದೇ ಸರಿಯಾದ ಉಪಾಯ, ಹೀಗೆ ಮಾಡಿದರೆ ಏನೂ ಬಿಟ್ಟುಕೊಟ್ಟ ಹಾಗಾಗಲ್ಲ, ಬದಲಾಗಿ ಶತ್ರುವೇ ನನ್ನ ಮೌನದಿಂದ ಚಡಪಡಿಸಿ ತಾನೇ ಏನಾದರೂ ಬಿಟ್ಟುಕೊಟ್ಟಾನು ಎಂದು ಆಸೆಪಡುತ್ತಿದ್ದ ರಾಸ್ಕೋಲ್ನಿಕೋವ್.

‘ಇಲ್ಲ, ನೀವು ನನ್ನ ನಂಬತಾ ಇಲ್ಲ, ನನಗೊತ್ತು. ನಾನು ಸುಮ್ಮನೆ ಜೋಕು ಹೇಳತಾ ಹುಡುಗಾಟ ಆಡತಿದೀನಿ ಅಂದುಕೊಂಡಿದೀರಿ.’ ಪೋರ್ಫಿರಿ ಹಚ್ಚು ಹೆಚ್ಚು ಖುಷಿಯಾಗುತ್ತ, ಕೊನೆಯಿಲ್ಲದೆ ಕುಲುಕುಲು ನಗುತ್ತ, ಮತ್ತೆ ರೂಮಿನಲ್ಲಿ ಸುತ್ತು ಹಾಕುವುದಕ್ಕೆ ಶುರು ಮಾಡಿದ್ದ.

‘ಹೌದು ಸಾರ್, ಸರಿ ನೀವಂದುಕೊಂಡಿದ್ದು. ನನ್ನ ಆಕಾರನ ಕೂಡ ದೇವರು ಹೇಗೆ ಮಾಡಿಟ್ಟಿದಾನೆ ಅಂದರೆ ನೋಡಿದವರಿಗೆ ತಮಾಷೆ ಅನಿಸತ್ತೆ, ನಾನು ಬಫೂನು ಅಂದುಕೊಳ್ಳತಾರೆ. ನಾನೇನು ಹೇಳತೇನೆ ಅಂದರೆ, ಸಾರ್, ನೀವು, ಪ್ರಿಯ ರೋಡಿಯಾನ್ ರೊಮೊನೊವಿಚ್‍ ಅವರು—ದಯವಿಟ್ಟು ಈ ಮುದುಕನ್ನ ಕ್ಷಮಿಸಿ—ನೀವು ಇನ್ನೂ ಯುವಕರು, ಈಗ ಯೌವನಕ್ಕೆ ಕಾಲಿಡತಾ ಇದೀರ ಅನ್ನಬಹುದು, ಹಾಗಾಗಿ ನಿಮ್ಮ ಜೊತೆಯ ಯುವಕರ ಹಾಗೇನೇ ಮನುಷ್ಯನ ಬುದ್ಧಿಶಕ್ತಿಗೆ ಬಹಳ ಬೆಲೆ ಕೊಡತೀರಿ. ಚುರುಕಾದ ಜಾಣಮಾತು, ಅಮೂರ್ತ ವಿಚಾರಗಳ ವಾದ ವಿವಾದ ಇಂಥವು ನಿಮ್ಮನ್ನ ಸೆಳೆದುಕೊಳ್ಳುತ್ತವೆ. ನನಗೆ ಸೈನ್ಯದ ವಿಚಾರ ತಿಳಿದಿರುವ ಮಟ್ಟಿಗೆ ಹೇಳುವುದಾದರೆ ನೀವು, ಯುವಕರು, ಆಸ್ಟ್ರಿಯದ ಯುದ್ಧ ಸಮಿತಿಯ ಥರ. ಅವರು ಪೇಪರಿನ ಮೇಲೆ ಹಾಕಿದ ಲೆಕ್ಕಾಚಾರದಲ್ಲಿ ನಪೋಲಿಯನ್ ನನ್ನು ಸೋಲಿಸಿ ಸೆರೆಹಿಡಿದಿದ್ದರು. ಲೆಕ್ಕಾಚಾರ ಪಕ್ಕಾ ಆಗಿತ್ತು. ಜಾಣತನದ ಪ್ಲಾನು ಮಾಡಿದ್ದರು. ಆಗಿದ್ದೇನು? ಜನರಲ್ ಮ್ಯಾಕ್ ಇಡೀ ಸೈನ್ಯದ ಜೊತೆ ನೆಪೋಲಿಯನ್‌ಗೆ ಶರಣಾದ, ಹ್ಹೆಹ್ಹೇ! ನನಗೆ ಗೊತ್ತು ರೋಡಿಯನ್ ರೊಮೊನೊವಿಚ್, ನನ್ನಂಥ ಸಿವಿಲ್ ಸರ್ವೆಂಟು ಮಿಲಿಟರಿಯ ಉದಾಹರಣೆ, ಚರಿತ್ರೆಯ ಉದಾಹರಣೆ ಕೊಟ್ಟದ್ದಕ್ಕೆ ತಮಾಷೆ ಅನಿಸತಿದೆ ನಿಮಗೆ. ಮಿಲಿಟರಿ ಕಂಡರೆ ಬಹಳ ಆಸೆ ನನಗೆ. ಮಿಲಿಟರಿಗೆ ಸಂಬಂಧಪಟ್ಟ ಪುಸ್ತಕ ಓದತೇನೆ. ನಾನು ನಿಜವಾಗಲೂ ಮಿಲಿಟರಿಯಲ್ಲಿ ಕೆಲಸ ಮಾಡಬೇಕಾಗಿತ್ತು, ಸಾರ್. ನಾನು ನೆಪೋಲಿಯನ್ ಆಗತಿರಲಿಲ್ಲವೇನೋ, ಕೊನೇ ಪಕ್ಷ ಮೇಜರ್ ಆದರೂ ಆಗತಿದ್ದೆ. ಹ್ಹೆಹ್ಹೆಹ್ಹೆ!

ಮಿತ್ರಾ, ನಾನೀಗ ನಿರ್ದಿಷ್ಟ ಕೇಸಿನ ಸತ್ಯವಾದ ವಿವರಗಳನ್ನ ಹೇಳತೇನೆ. ಯಾವುದೇ ಕೇಸಿನಲ್ಲಿ ವಾಸ್ತವ ಮತ್ತು ಮನುಷ್ಯ ಸ್ವಭಾವ ಇವು ಬಹಳ ಮುಖ್ಯ ಸಾರ್. ಇವೆರಡೂ ಅತ್ಯಂತ ಹುಷಾರಾಗಿ ಮಾಡಿದ ಲೆಕ್ಕಾಚಾರಗಳನ್ನೂ ನಾಶಮಾಡಿಬಿಡತವೆ! ಈ ಮುದುಕನ ಮಾತು ಗಂಭೀರವಾಗಿ ಕೇಳಿ, ರೋಡಿಯಾನ್ ರೊಮಾನೊವಿಚ್’ (ಮೂವತ್ತೈದು ವರ್ಷವೂ ಆಗಿರದಿದ್ದ ಪೋರ್ಫಿರಿ ಪೆಟ್ರೊವಿಚ್ ತಕ್ಷಣವೇ ಮುದುಕನಾಗಿಬಿಟ್ಟ ಹಾಗೆ, ಅವನ ದನಿಯೂ ಬದಲಾದ ಹಾಗೆ, ಅವನು ನೂರು ವರ್ಷದವನ ಹಾಗೆ ಕಾಣುವುದಕ್ಕೆ ಶುರುವಾಗಿತ್ತು) ಅಲ್ಲದೇ, ನಾನು ಪ್ರಾಮಾಣಿಕ, ಸಾರ್… ನಾನು ಪ್ರಾಮಾಣಿಕ, ಹೌದೋ ಅಲ್ಲವೋ? ನಿಮಗೇನನ್ನಿಸತ್ತೆ? ಪೂರ್ಣ ಪ್ರಾಮಾಣಿಕ ಅಂತ ನಾನೇನೋ ಅಂದುಕೊಂಡಿದೇನೆ. ಯಾವ ಫೀಸೂ ಕೇಳದೆ ಉಚಿತವಾಗಿ ಹೇಳುತಿದ್ದೇನೆ. ಹೆಹ್ಹೆಹ್ಹೇ! ಸರಿ ಸಾರ್, ಮುಂದಕ್ಕೆ ಹೇಳಬೇಕು ಅಂದರೆ… ನನ್ನ ಅಭಿಪ್ರಾಯದಲ್ಲಿ… ಹಾಗೆ ನೋಡಿದರೆ, ಜಾಣತನ ಅನ್ನುವುದು ನಿಸರ್ಗ ಕೊಟ್ಟಿರುವ ಅಮೂಲ್ಯ ಒಡವೆ, ಅದೊಂದಿದ್ದರೆ ಬದುಕಿನಲ್ಲಿ ಬಹಳ ಸಮಾಧಾನ ಇರುವುದು ಸತ್ಯ. ಜಾಣತನ ಒಂದೊಂದು ಸಲ ಎಂಥ ಆಟ ಕಟ್ಟುತ್ತದೆಂದರೆ ಬಡಪಾಯಿ ವಿಚಾರಣಾಧಿಕಾರಿಯ ಬುದ್ಧಿಯೇ ಅವನ ದಿಕ್ಕು ತಪ್ಪಿಸಿದರೆ ಅವನು ಕಲ್ಪನೆಯಲ್ಲೇ ತೇಲಿ ಹೋಗತಾನೆ. ಅವನೂ ಮನುಷ್ಯ! ಆದರೂ ಮನುಷ್ಯ ಸ್ವಭಾವಾನೇ ಅವನಿಗೆ ಸಹಾಯಮಾಡತ್ತೆ. ಇದು ಯುವಕರಿಗೆ ಅರ್ಥ ಆಗಲ್ಲ, ಅವರು ಬುದ್ಧಿಯನ್ನೇ ನಂಬಿಕೊಂಡು ‘ಎಲ್ಲ ಅಡಚಣೆ ದಾಟಿ ಹೋಗತಾರೆ’ (ನಿನ್ನೆ ನೀವೇ ಈ ಮಾತು ಬಳಸಿ ಎಷ್ಟು ಅಚ್ಚುಕಟ್ಟಾಗಿ, ವರ್ಣನೆ ಮಾಡಿದಿರಲ್ಲ!)

ನಮ್ಮ ಮನುಷ್ಯ, ಅಂದರೆ ಈ ನಿರ್ದಿಷ್ಟ ಕೇಸಿನಲ್ಲಿ ಕಣ್ಣಿಗೆ ಕಾಣದೆ ತಪ್ಪಿಸಿಕೊಂಡಿರುವ ಮನುಷ್ಯ, ಮಿಸ್ಟರ್ ಎಕ್ಸ್ ಅನ್ನೋಣ ಅವನನ್ನ, ಬ್ರಿಲಿಯಂಟಾಗಿ ಸುಳ್ಳು ಹೇಳತಾನೆ, ಗೆದ್ದೆ ಅಂದುಕೊಂಡು ಬೀಗತಾನೆ, ಆಮೇಲೆ ನೋಡಿ, ಇದ್ದಕಿದ್ದ ಹಾಗೆ ಬಹಳ ಕುತೂಹಲ ಹುಟ್ಟಿಸುವಂಥ, ಆಘಾತವಾಗುವಂಥ ಪಾಯಿಂಟಿನಲ್ಲಿ ಪ್ರಜ್ಞೆ ತಪ್ಪಿ ಬಿದ್ದುಬಿಡತಾನೆ. ಅವನಿಗೆ ಹುಷಾರಿಲ್ಲ ಅಂತ ಇಟ್ಟುಕೊಳ್ಳಿ, ಅವನ ರೂಮು ಇಕ್ಕಟ್ಟು, ಉಸಿರು ಕಟ್ಟಿಸೋಂಥಾದ್ದು ಅಂದುಕೊಳ್ಳಿ. ಆದರೂ, ಸಾರ್ ಆದರೂ ಅವನು ಅದ್ಭುತವಾದ ಸುಳ್ಳು ಹೇಳತಾನೆ. ಹೇಳಿದೆನಲ್ಲಾ, ಅವನ ಸ್ವಭಾವಾನೇ ಅವನಿಗೆ ಕೈಕೊಡತ್ತೆ! ಇನ್ನೊಂದು ಸಾರಿ ತನ್ನ ಬುದ್ಧಿವಂತಿಕೆಗೆ ತಾನೇ ಮರುಳಾಗಿ ಆಟ ಕಟ್ಟತಾನೆ, ಅವನ ಮೇಲೆ ಸಂಶಯಪಡುವವನನ್ನ ಮಂಗ ಮಾಡಕ್ಕೆ ನೋಡತಾನೆ. ಬೇಕು ಅಂತಲೇ ಮುಖ ಬಿಳಿಚಿಕೊಳ್ಳತ್ತೆ, ನಾಟಕದಲ್ಲಿ ನಟರು ಮಾಡತಾರಲ್ಲ ಹಾಗೆ, ಆದರೆ ಹಾಗೆ ಬಿಳಿಚಿಕೊಂಡಿದ್ದು ಸಹಜ ಅನ್ನೋ ಹಾಗೆ ಇರತಾನೆ. ಎಷ್ಟು ಸಹಜ ಅಂದರೆ ಅದೇ ನಿಜ ಅನ್ನೋಹಾಗಿರತ್ತೆ. ಅದಕ್ಕೇ ಅನುಮಾನ ಬರತ್ತೆ!

ನಮ್ಮ ಮಿಸ್ಟರ್ ಎಕ್ಸ್ ಅನ್ನುವ ಅಪರಾಧಿ ಮೊದಮೊದಲು ಎಲ್ಲರ ಕಣ್ಣಿಗೆ ಮಣ್ಣೆರಚಬಹುದು, ಆದರೂ ನೋಡಿ, ಅಧಿಕಾರಿಯೇನೂ ಪೆದ್ದ ಅಲ್ಲವಲ್ಲಾ! ಸಂಶಯ ಹುಟ್ಟತ್ತೆ, ಮನೆಗೆ ಹೋಗಿ ರಾತ್ರಿಯೆಲ್ಲ ಯೋಚನೆ ಮಾಡತಾನೆ. ಪ್ರತಿ ಹೆಜ್ಜೆಯಲ್ಲೂ ಹೀಗೇ ಆಗತ್ತೆ, ಸಾರ್. ಯಾರೂ ಏನೂ ಹೇಳದಿದ್ದರೂ ಕೇಳದಿದ್ದರೂ ಅವನೇ ಮುಂದಾಗಿ ಮೂಗು ತೂರಿಸಿಕೊಂಡು ಎಲ್ಲ ಕಡೆ ಹೋಗತಾನೆ, ಮಾತಾಡದೆ ಬಾಯಿ ಮುಚ್ಚಿಕೊಂಡಿರಬೇಕಾದ ವಿಷಯಗಳ ಬಗ್ಗೆ ಮಾತು ಶುರು ಮಾಡತಾನೆ. ಏನೇನೋ ಉದಾಹರಣೆಗಳನ್ನ ಕೊಡತಾನೆ, ಹ್ಹೆಹ್ಹೆಹ್ಹೇ! ಅವನೇ ಸ್ವತಃ ಬಂದು ಯಾಕೆ ನನ್ನ ಸೆರೆಹಿಡಿದಿಲ್ಲ, ಬಹಳ ಹಿಂದೇನೇ ಜೈಲಿಗೆ ಹಾಕಬೇಕಾಗಿತ್ತಲ್ಲ ಅಂತ ಕೇಳತಾನೆ. ಹ್ಹೆ ಹ್ಹೆಹ್ಹೇ! ತುಂಬಾ ಜಾಣರಾದವರಿಗೂ, ಮನಶ್ಶಾಸ್ತ್ರ ಗೊತ್ತಿರುವವರಿಗೂ, ಲೇಖಕರಿಗೂ ಹೀಗೇ ಆಗಬಹುದು, ಸಾರ್! ಮನುಷ್ಯ ಸ್ವಭಾವ ಕನ್ನಡಿ, ಸ್ವಚ್ಛವಾದ ಕನ್ನಡಿ, ಅದನ್ನ ನೋಡಿ, ಮೆಚ್ಚಿಕೊಳ್ಳಿ. ಅರೇ, ಯಾಕೆ ಇಷ್ಟು ಬಿಳಿಚಿಕೊಂಡಿರಿ ರೋಡಿಯಾನ್ ರೊಮೊನೊವಿಚ್? ಉಸಿರು ಕಟ್ಟಿಸತಾ ಇದೆಯಾ? ಕಿಟಕೀ ತೆಗೀಲಾ?’

‘ಓ, ಪರವಾಗಿಲ್ಲ ಬಿಡಿ, ಪರವಾಗಿಲ್ಲ,’ ಅಂದ ರಾಸ್ಕೋಲ್ನಿಕೋವ್ ಇದ್ದಕಿದ್ದ ಹಾಗೆ ಗಹಗಹಿಸಿ ನಕ್ಕುಬಿಟ್ಟ.

ಪೋರ್ಫಿರಿ ಅವನೆದುರು ನಿಂತ, ಸ್ವಲ್ಪ ಕಾದ, ಇದ್ದಕಿದ್ದ ಹಾಗೆ ಅವನೂ ಜೋರಾಗಿ ನಗುವುದಕ್ಕೆ ಶುರುಮಾಡಿದ. ರಾಸ್ಕೋಲ್ನಿಕೋವ್ ಸೋಫಾದಿಂದ ಎದ್ದ ಹಿಸ್ಟೀರಿಯ ಥರ ಇದ್ದ ನಗುವನ್ನು ತಟ್ಟನೆ ನಿಲ್ಲಿಸಿದ.

‘ಪೋರ್ಫಿರಿ ಪೆಟ್ರೊವಿಚ್,’ ಗಟ್ಟಿಯಾದ ದನಿಯಲ್ಲಿ ಸ್ಪಷ್ಟವಾಗಿ ಮಾತಾಡಿದ. ಕಾಲು ನಡುಗುತ್ತ ನೆಟ್ಟಗೆ ನಿಲ್ಲುವುದಕ್ಕೆ ಕಷ್ಟಪಡುತ್ತಿದ್ದ. ‘ನನಗೆ ಸ್ಪಷ್ಟವಾಗಿ ತಿಳಿಯಿತು. ಆ ಮುದುಕಿ ಮತ್ತವಳ ತಂಗಿಯನ್ನು ನಾನೇ ಕೊಂದೆ ಅಂತ ಖಂಡಿತವಾಗಲೂ ನಿಮಗೆ ನನ್ನ ಮೇಲೆ ಅನುಮಾನವಿದೆ. ಹೇಳೋದು ಇಷ್ಟೇ. ನನಗೆ ಇದನ್ನೆಲ್ಲ ನೋಡಿ ಸಾಕಾಗಿದೆ. ನಿಮಗೆ ಅಧಿಕಾರ ಇದ್ದರೆ ನನ್ನ ಮೇಲೆ ಕೇಸು ಹಾಕಿ. ನಿಮಗೆ ಅಧಿಕಾರ ಇದ್ದರೆ ನನ್ನ ಜೈಲಿಗೆ ಹಾಕಿ. ಹೀಗೆಲ್ಲ ನನಗೆ ಹಿಂಸೆ ಕೊಟ್ಟು, ತಮಾಷೆ ಮಾಡಿಕೊಂಡು ನಗಕ್ಕೆ ಅವಕಾಶ ಕೊಡಲ್ಲ ನಾನು.’

ಅವನ ತುಟಿ ನಡುಗಿದವು. ಕಣ್ಣು ಉರಿದವು. ಇದುವರೆಗೂ ತಡೆದಿಟ್ಟುಕೊಂಡಿದ್ದ ದನಿ ಉಕ್ಕೇರಿ ಗಟ್ಟಿಯಾಗಿ ಮಾತು ಹೊರಬಂದವು.

‘ಅವಕಾಶ ಕೊಡಲ್ಲ, ಸಾರ್!’ ತಟ್ಟನೆ ಕಿರುಚಿ, ಮುಷ್ಠಿ ಕಟ್ಟಿ, ಶಕ್ತಿಯೆಲ್ಲಾ ಬಿಟ್ಟು ಟೇಬಲ್ಲನ್ನು ಗುದ್ದಿದ. ‘ಕೇಳಿಸಿತಾ ಪೋರ್ಫಿರಿ ಪೆಟ್ರೊವಿಚ್, ಬಿಡಲ್ಲಾ!’

‘ಅಯ್ಯೋ, ದೇವರೇ! ಇದೇನಿದು, ಹೀಗೆ!’ ಭಯಗೊಂಡವನ ಹಾಗೆ ಕಾಣುತ್ತಿದ್ದ ಪೋರ್ಫಿರಿ ಪೆಟ್ರೊವಿಚ್ ಹೇಳಿದ. ‘ರೋಡಿಯಾನ್ ರೊಮೊನೊವಿಚ್, ಮಿತ್ರಾ, ಏನಾಯಿತು, ಏನಾಯಿತು ನಿಮಗೆ!’

‘ನಾನು ಬಿಡಲ್ಲಾ!’ ರಾಸ್ಕೋಲ್ನಿಕೋವ್ ಮತ್ತೆ ಚೀರಿದ

‘ಅಷ್ಟು ಜೋರಾಗಿ ಕೂಗಬೇಡಿ! ಜನಕ್ಕೆ ಕೇಳಿಸತ್ತೆ ಇಲ್ಲಿಗೆ ಓಡಿಬರತಾರೆ! ಅವರಿಗೆ ಏನಂತ ಹೇಳಣ? ಯೋಚನೆ ಮಾಡಿ!’ ಪೋರ್ಫಿರಿ ಪೆಟ್ರೊವಿಚ್ ಭಯದಲ್ಲಿ ಪಿಸುಗುಟ್ಟಿದ, ಅವನ ಮುಖ ರಾಸ್ಕೋಲ್ನಿಕೋವ್‍ ನ ಮುಖದ ಹತ್ತಿರ ಬಂದಿತ್ತು.

‘ಬಿಡಲ್ಲ, ನಾನು ಬಿಡಲ್ಲ!’ ರಾಸ್ಕೋಲ್ನಿಕೋವ್ ಯಾಂತ್ರಿಕವಾಗಿ ಹೇಳಿದ. ಆದರೆ ಇದ್ದಕಿದ್ದ ಹಾಗೆ ಅವನ ದನಿಯೂ ಪಿಸುದನಿಯಾಗಿತ್ತು.

ಪೋರ್ಫಿರಿ ಪೆಟ್ರೊವಿಚ್ ತಟ್ಟನೆ ಓಡಿ ಹೋಗಿ ಕಿಟಕಿ ತೆರೆದ.

‘ಗಾಳಿ ಬರಲಿ, ಸ್ವಲ್ಪ ಗಾಳಿ ಬರಲಿ! ನೀರು ಕುಡೀತೀರಾ ಸಾರ್, ಸ್ವಲ್ಪ?’ ನೀರು ತರಿಸಲು ಬಾಗಿಲಿಗೆ ಓಡಿ ಹೋದ, ವಾಪಸ್ಸು ಬಂದು ಮೂಲೆಯಲ್ಲಿದ್ದ ನೀರಿನ ಕ್ಯಾನ್‌ನಿಂದ ನೀರು ತಂದುಕೊಟ್ಟ.

‘ನೀರು ಕುಡಿಯಿರಿ, ಸ್ವಲ್ಪ ಸಮಾಧಾನ ಆಗತ್ತೆ,’ ಪಿಸುದನಿಯಲ್ಲಿ ಹೇಳಿದ. ಪೋರ್ಫಿರಿಯ ಹೆದರಿಕೆ ಮತ್ತೆ ಸಹಾನುಭೂತಿ ಎರಡೂ ಎಷ್ಟು ಸಹಜವಾಗಿದ್ದವೆಂದರೆ ರಾಸ್ಕೋಲ್ನಿಕೋವ್ ಸುಮ್ಮನಾದ, ಅವನನ್ನೇ ಕುತೂಹಲದಿಂದ ದಿಟ್ಟಿಸಿದ. ನೀರನ್ನಂತೂ ಕುಡಿಯಲಿಲ್ಲ.

‘ಮಿತ್ರಾ, ರೋಡಿಯೋನ್ ರೊಮೊನೊವಿಚ್! ಹೀಗೇ ಆದರೆ ಹುಚ್ಚು ಹಿಡಿದುಬಿಡತ್ತೆ, ನೋಡು! ಸ್ವಲ್ಪ ಕುಡಿ, ಒಂದೇ ಗುಟುಕು!’
ರಾಸ್ಕೋಲ್ನಿಕೋವ್ ಯಂತ್ರದ ಹಾಗೆ ನೀರಿನ ಲೋಟವನ್ನು ತುಟಿಗಿಟ್ಟುಕೊಂಡ. ಸುಧಾರಿಸಿಕೊಂಡು, ಅಸಹ್ಯಪಡುತ್ತ, ಲೋಟವನ್ನು ಮೇಜಿನ ಮೇಲಿಟ್ಟ.

‘ಹೌದು ಸಾರ್, ನಿಮಗೀಗ ಫಿಟ್ಸ್ ಬಂದಿತ್ತು! ಹೀಗೇ ಆದರೆ ನಿಮ್ಮ ಹಳೆಯ ಕಾಯಿಲೆ ಮತ್ತೆ ಬರತ್ತೆ.’ ಪೋರ್ಫಿರಿ ಸ್ನೇಹದಲ್ಲಿ ನಗುತ್ತ ಮಾತಾಡಿದರೂ ಅವನು ತಬ್ಬಿಬ್ಬಾಗಿದ್ದ. ‘‍ದೇವರೇ! ಮತ್ತೆ ಹೀಗಾಯಿತಲ್ಲಪ್ಪಾ! ನಿನ್ನೆ ಕೂಡ ರಝುಮಿಖಿನ್ ಬಂದಿದ್ದ, ನನ್ನ ನೋಡೋದಕ್ಕೆ. ನಿನ್ನೆ ನೀವು ಹೋದ ಮೇಲೆ ಬಂದ, ಊಟಮಾಡತಿದ್ದೆವು. ಅಲ್ಲಾ ನಾನು ಒಪ್ಪತೀನಿ, ನನಗೆ ಸ್ವಲ್ಪ ವ್ಯಂಗ್ಯ ಮಾಡುವ ಸ್ವಭಾವ ಇದೆ, ಚುಚ್ಚು ಮಾತೂ ಆಡತೇನೆ. ಆದರೆ ಅವನೇನು ಅಂದುಕೊಂಡಿದಾನೆ ಗೊತ್ತಾ?… ದೇವರೇ!. ಮಾತಾಡದಾ, ಆಡದಾ, ಸಾಕಾಗೋಯ್ತು… ದೇವರೇ! ನೀವೇ ಕಳಿಸಿದ್ದು ಅವನನ್ನ ಅನ್ನಬೇಡಿ ಮತ್ತೆ! ಕೂತುಕೊಳ್ಳಿ, ಕೂತುಕೊಳ್ಳಿ, ದಮ್ಮಯ್ಯಾ!’

‘ನಾನು ಅವನನ್ನ ಕಳಿಸಲಿಲ್ಲ… ಯಾಕೆ ಬಂದಿದ್ದ ಅವನು ಅನ್ನೋದು ಗೊತ್ತು,’ ಅಂದ ರಾಸ್ಕೋಲ್ನಿಕೋವ್.

‘ನಿಮಗೆ ಗೊತ್ತೂ?’

‘ಗೊತ್ತು. ಅದಕ್ಕೇನೀನಗ?’

‘ಏನು ಅಂದರೆ, ರೋಡಿಯೋನ್ ರೊಮಾನೊವಿಚ್—ನಿಮ್ಮ ಮಿಕ್ಕ ಸಾಹಸಗಳಿಗೆ ಹೋಲಿಸಿದರೆ ಇದು ಏನೇನೂ ಅಲ್ಲ. ಎಲ್ಲಾ ಮಾಹಿತಿ ನನಗೆ ತಿಳಿದಿದೆ, ಸಾರ್! ಹೇಗೆ ನೀವು ಕತ್ತಲಿಳಿಯುವ ಹೊತ್ತಿನಲ್ಲಿ ಬಾಡಿಗೆ ಮನೆ ನೋಡೋದಿಕ್ಕೆ ಹೋದಿರಿ, ಬಾಗಿಲ ಗಂಟೆ ಬಾರಿಸಿದಿರಿ, ರಕ್ತದ ಬಗ್ಗೆ ಕೇಳಿದಿರಿ, ಹಾಗೇ ಕೇಳಿದ್ದರಿಂದ ಕೆಲಸದವರಿಗೆ, ವಾಚ್‌ಮ್ಯಾನಿಗೆ ತಲೆಕೆಟ್ಟು ಹೋಯಿತು. ನೀವು ಆವಾಗ ಯಾವ ಸ್ಥಿತಿಯಲ್ಲಿದ್ದಿರಿ ಅಂತಲೂ ಗೊತ್ತು… ಆದರೂ ಕೂಡ ನೀವು ಹೀಗೇ ಮಾಡತಾ ಇದ್ದರೆ ಹುಚ್ಚು ಹಿಡಿಯತ್ತೆ ನಿಮಗೆ. ದೇವರೇ! ಸುಮ್ಮನೆ ಸಿಟ್ಟಿನಲ್ಲಿ ಕುದಿಯುತ್ತಾ ಇದೀರಿ ಸಾರ್. ಉದಾತ್ತವಾದ ಕೋಪ ಸಾರ್, ನಿಮ್ಮದು, ಮೊದಲು ವಿಧಿ ಅನ್ಯಾಯ ಮಾಡಿತು, ಆಮೇಲೆ ಪೋಲೀಸರು ಅನ್ಯಾಯ ಮಾಡಿದರು. ಹಾಗಾಗಿ ನೀವು ಅಲ್ಲಿಗೆ, ಇಲ್ಲಿಗೆ ತಾರಾಡತಾ ಇದೀರಿ. ಎಲ್ಲಾರೂ ಮನಸು ಬಿಚ್ಚಿ ಮಾತಾಡಲಿ, ಎಲ್ಲಾನೂ ಒಂದು ಸಾರಿಗೆ ಮುಗಿದು ಬಿಡಲಿ ಅಂತ ನಿಮ್ಮ ಆಸೆ. ಈ ಪೆದ್ದತನ, ಸಂಶಯ ಇವೆಲ್ಲದರಿಂದ ನಿಮಗೆ ರೇಜಿಗೆ ಆಗಿದೆ. ಹೌದಾ ಅಲ್ಲವಾ? ನಿಮ್ಮ ಮೂಡು ಸರಿಯಾಗಿ ಗೆಸ್ ಮಾಡಿದೇನೆ, ಅಲ್ಲವಾ?… ರಝುಮಿಖಿನ್ ಕೂಡ ತಲೆ ಕೆಡಿಸಿಕೊಳ್ಳುವ ಹಾಗೆ ಮಾಡಿದಿರಿ… ತುಂಬ ಒಳ್ಳೆಯವನು, ಮನಸ್ಸು ಮೃದೂ. ಅವನು ತೀರ ಒಳ್ಳೇವನು. ನಿಮಗೆ ಗೊತ್ತಲ್ಲಾ, ನಿಮಗೆ ಹುಷಾರಿಲ್ಲ, ನಿಮ್ಮ ಕಾಯಿಲೆ ಅವನಿಗೂ ಬರಬಹುದು… ನೀವು ಸಮಾಧಾನವಾಗಿದ್ದಾಗ ಎಲ್ಲಾ ವಿವರಿಸತೇನೆ… ಈಗ ಸದ್ಯ ಕೂತುಕೊಳ್ಳಿ! ಪ್ಲೀಸ್! ನಿಮ್ಮ ಮುಖ ನೋಡಿ, ಹೇಗಾಗಿದೆ. ಕೂತುಕೊಳ್ಳಿ, ಪ್ಲೀಸ್.’

ರಾಸ್ಕೋಲ್ನಿಕೋವ್ ಕುಳಿತ. ನಡುಕ ಕಡಮೆಯಾಗಿತ್ತು. ಮೈ ಬಿಸಿಯಾಗುತ್ತಿದೆ ಅನಿಸುತ್ತಿತ್ತು. ಹೆದರಿದ್ದರೂ ಸ್ನೇಹ ಪೂರ್ವಕ ಕಾಳಜಿ ತೋರುತ್ತಿದ್ದ ಪೋರ್ಫಿರಿ ಪೆಟ್ರೊವಿಚ್‌ನನ್ನು ಗಹನವಾದ ಆಶ್ಚರ್ಯದಲ್ಲಿ ಟೆನ್ಸ್ ಆಗಿ ನೋಡುತ್ತ ಮಾತು ಕೇಳಿಸಿಕೊಳ್ಳುತ್ತಿದ್ದ. ಅವನು ಹೇಳಿದ ಒಂದು ಮಾತನ್ನೂ ನಂಬಲಿಲ್ಲ. ವಿಚಿತ್ರವೆಂದರೆ, ಅವನು ಅನಿರೀಕ್ಷಿತವಾಗಿ ಅಪಾರ್ಟ್‌ಮೆಂಟಿನ ಬಗ್ಗೆ ಹೇಳಿದ ಮಾತನ್ನು ನಂಬಬೇಕು ಅನಿಸುತ್ತಿತ್ತು. ‘ಹಾಗಾದರೆ, ಅವನಿಗೆ ಅಪಾರ್ಟ್‌ಮೆಂಟ್‌ ವಿಚಾರ ಗೊತ್ತು. ಹೇಗೆ ತಿಳಿಯಿತು?’ ಅನ್ನುವ ವಿಚಾರ ತಟ್ಟನೆ ಮೂಡಿತು. ‘ತಿಳಿದಿದೆ ಅಂತ ಅವನಾಗೇ ಹೇಳತಾನೂ ಇದಾನೆ!’

‘ಹೌದು, ಸಾರ್. ಇಂಥಾದ್ದೇ ಇನ್ನೊಂದು ಕೇಸು ನಡೆದಿತ್ತು, ಸೈಕಾಲಜಿ ಕೇಸು. ಜಡ್ಡು ಕೂಡ ಇತ್ತು ಅವನಿಗೆ,’ ಪೋರ್ಫಿರಿ ಪೆಟ್ರೊವಿಚ್ ಬಡಬಡಿಸಿದ. ‘ನಾನೇ ಕೊಲೆಗಾರ ಅಂತ ಹೇಳಿಕೊಂಡು ಓಡಾಡತಿದ್ದ! ಭ್ರಮೆ ಹಿಡಿದಿತ್ತು ಅವನಿಗೆ. ‘ಇದು ಸತ್ಯ,’ ಅನ್ನತಿದ್ದ, ಪರಿಸ್ಥಿತಿ ಹೇಗಿತ್ತು, ಕೊಲೆಯಾದ ಜಾಗ ಇತ್ಯಾದಿ ಎಲ್ಲ ವಿವರಿಸಿ ಹೇಳತಾ ಇದ್ದ. ನಮಗೆಲ್ಲಾರಿಗೂ ಆಶ್ಚರ್ಯ, ಗೊಂದಲ. ಯಾಕೆ ಹಾಗೆ ಮಾಡಿದ? ತನಗೇ ಗೊತ್ತಿಲ್ಲದ ಹಾಗೆ ಈ ಕೊಲೆಗೆ ನಾನೂ ಒಂದಿಷ್ಟು ಕಾರಣ ಅಂತ ನಂಬಿಕೊಂಡಿದ್ದ. ಕೊಲೆಗಾರರಿಗೆ ತಾನೇ ನೆಪ ಒದಗಿಸಿದೆ ಅಂತ ಗೊತ್ತಾದಾಗ ನೋವು ತಿಂದ, ಮಂಕಾದ, ಮರಗಟ್ಟಿಹೋದ, ಏನೇನೋ ಕಲ್ಪನೆ ಮಾಡಿಕೊಂಡ, ತಲೆ ಕೆಟ್ಟು ಹೋಯಿತು. ಕೊಲೆ ಮಾಡಿವನು ತಾನೇ ಅಂತ ತನ್ನನ್ನೇ ನಂಬಿಸಿಕೊಂಡ! ಕೊನೆಗೆ ಸೆನೇಟು ಅವನ ಕೇಸು ವಿಚಾರಣೆ ಮಾಡಿ, ಪಾಪದವನನ್ನ ಬಿಡುಗಡೆ ಮಾಡಿ ಆಸ್ಪತ್ರೆಗೆ ಸೇರಿಸಿತು. ಸರ್ಕಾರದ ಸೆನೆಟಿಗೆ ಕೃತಜ್ಞತೆ ಹೇಳಬೇಕು.

ತ್ಚ್, ತ್ಚ್, ತ್ಚ್! ಅಂದರೇನಾಯಿತು? ಹೀಗೇ ನೀವು ಕೂಡ ಭ್ರಮೆಗೆ ಗುರಿಯಾಗಬಹುದು, ರಾತ್ರಿ ಹೊತ್ತು ಹೋಗಿ ಮನೆಯ ಗಂಟೆ ಬಾರಿಸಿ ರಕ್ತದ ಕಲೆ ಎಲ್ಲಿ ಅಂತ ವಿಚಾರಿಸಬಹುದು! ಇದನ್ನೆಲ್ಲ ಸೈಕಾಲಜಿಯಲ್ಲಿ ಓದಿದೇನೆ. ಕೆಲವು ಸಾರಿ ಇಂಥಾವರು ಕಿಟಕಿಯಿಂದ ಹೊರಕ್ಕೆ ಹಾರಬಹುದು, ಗಡಿಯಾರದ ಗೋಪುರದಿಂದ ಧುಮಕಬಹುದು, ಹೋಗಿ ಬಾಗಿಲ ಕರೆಗಂಟೆ ಕೂಡ ಬಾರಿಸಬಹುದು ಸಾರ್. ಇದು ರೋಗ, ರೊಡಿಯಾನ್ ರೊಮೊನೊವಿಚ್, ಇದೊಂದು ರೋಗ, ಜಡ್ಡು! ನಿಮ್ಮ ಕಾಯಿಲೇನ ನೀವು ತುಂಬ ಉದಾಸೀನ ಮಾಡತಿದೀರಿ. ಒಳ್ಳೆಯ ಡಾಕ್ಟರಿಗೆ ತೋರಿಸಿ. ನಿಮ್ಮನ್ನ ನೋಡತಾ ಇರುವ ಡುಮ್ಮ ಡಾಕ್ಟರು ಉಪಯೋಗ ಇಲ್ಲ… ನಿಮಗೆ ಚಿತ್ರವಿಭ್ರಮೆ, ಸನ್ನಿ, ಸನ್ನಿ ಹಿಡಿದ ಸ್ಥಿತಿಯಲ್ಲಿ ಸುತ್ತಾಡತಾ ಇದೀರಿ ನೀವು.’

ಒಂದು ಕ್ಷಣ ಜಗತ್ತೆಲ್ಲ ಗಿರಗಿರ ಸುತ್ತುತ್ತಿದೆ ಅನಿಸಿತು ರಾಸ್ಕೋಲ್ನಿಕೋವ್‌ಗೆ.

‘ಹೌದಾ, ಹೌದಾ? ಈಗಲೂ ಸುಳ್ಳು ಹೇಳುತ್ತಾ ಇರಬಹುದಾ?’ ತಟ್ಟನೊಂದು ಯೋಚನೆ ಬಂತು ಅವನಿಗೆ, ‘ ಸಾಧ್ಯ ಇಲ್ಲ, ಸಾಧ್ಯ ಇಲ್ಲ!’ ಎಂದು ಅದನ್ನು ತಳ್ಳಿ ಹಾಕಿದ. ಯಾವ ಮಟ್ಟದ ಕೋಪ, ಆಕ್ರೋಶ ಹುಟ್ಟಬಹುದು ಅನ್ನುವ ಊಹೆ, ಬುದ್ಧಿಯ ಸ್ಥಿತಿಮಿತ ತಪ್ಪಬಹುದು ಅನ್ನುವ ಯೋಚನೆ ಮನಸ್ಸಿಗೆ ಬಂದವು.

ಪೋರ್ಫಿರಿಯ ಆಟವನ್ನು ಭೇದಿಸಲು ತನ್ನ ಎಲ್ಲ ವಿಚಾರಶಕ್ತಿಯನ್ನೂ ಬಳಸುತ್ತ, ‘ಅದು ಸನ್ನಿ ಅಲ್ಲ, ನಿಜಾ!’ ಎಂದು ಕೂಗಿದ. ‘ಅದು ನಿಜ, ನಿಜವಾಗಿ ಹೋಗಿದ್ದು! ಕೇಳಿಸಿತಾ?’

‘ಸರಿ, ಸಾರ್. ಅರ್ಥ ಆಯಿತು, ನೀವು ಹೇಳಿದದ್ದು ಕೇಳಿಸಿತು! ನಿನ್ನೆ ಕೂಡ ನೀವು ಸನ್ನಿ ಅಲ್ಲ ಅಂತ ಒತ್ತಿ ಒತ್ತಿ ಹೇಳಿದ್ದಿರಿ! ನೀವು ಹೇಳಿದ್ದು ನನಗೆ ತಿಳಿಯತ್ತೆ, ಸಾರ್! ಆದರೂ, ರೊಡಿಯಾನ್ ರೊಮೊನೊವಿಚ್, ದಯವಿಟ್ಟು ಇದನ್ನ ಸ್ವಲ್ಪ ಕೇಳಿ. ನೀವು ನಿಜವಾಗಿ ಅಪರಾಧೀನೇ ಆಗಿದ್ದರೆ, ಅಥವಾ ಈ ದರಿದ್ರ ಕೇಸಿನಲ್ಲಿ ಹೇಗೋ ಸಿಕ್ಕಿಬಿದ್ದಿದ್ದರೆ, ದಮ್ಮಯ್ಯಾ ಅನ್ನತೇನೆ, ಇದನ್ನೆಲ್ಲ ನೀವು ಸನ್ನಿಯ ಸ್ಥಿತಿಯಲ್ಲಿ ಮಾಡಿದ್ದಲ್ಲ, ನಿಜವಾಗಿ ಮಾಡಿದ್ದು ಅಂತ ಹೀಗೆ ಒತ್ತಿ ಹೇಳುತ್ತಿದ್ದಿರೇನು? ಹೇಗೆ ಸಾಧ್ಯ, ದೇವರೇ, ಹೇಗೆ ಸಾಧ್ಯ? ಈಗ ಹೇಳಿದ್ದಕ್ಕೆ ವಿರುದ್ಧವಾಗೇ ಹೇಳತಿದ್ದಿರಿ ಅಂದುಕೊಂಡಿದೇನೆ. ನಿಜವಾಗಲೂ ನೀವು ಅಪರಾಧಿಯೇ ಆಗಿದ್ದರೆ ಅಲ್ಲಿಗೆ ಹೋಗಿದ್ದು ಸನ್ನಿ ಹಿಡಿದಾಗ ಅನ್ನುವುದೇ ಸಹಜ ಅಲ್ಲವಾ? ಸರೀನಾ ನಾನು ಹೇಳಿದ್ದು?’

ಆ ಪ್ರಶ್ನೆಯ ಹಿಂದೆ ಏನೋ ಗುಟ್ಟಾದದ್ದು ಅಡಗಿರಬೇಕು. ರಾಸ್ಕೋಲ್ನಿಕೋವ್ ತನ್ನತ್ತ ಬಗ್ಗಿದ್ದ ಪೋರ್ಫಿರಿಯಿಂದ ದೂರ ಸರಿದು ದಿಗ್ಭ್ರಾಂತನ ಹಾಗೆ ಮಾತಿಲ್ಲದೆ ದಿಟ್ಟಿಸಿದ.

‘ಅಥವಾ ರಝುಮಿಖಿನ್ ವಿಷಯದಲ್ಲಿ—ಅಂದರೆ ಅವನಾಗೇ ನಿನ್ನೆಯ ದಿನ ನನ್ನ ನೋಡಲು ಬಂದನೋ, ನೀವೇ ಅವನನ್ನು ಕಳಿಸಿಕೊಟ್ಟಿರೋ ಅನ್ನುವ ವಿಷಯದಲ್ಲಿ ಬಚ್ಚಿಡುವ ಪ್ರಯತ್ನಾನೇ ಮಾಡದೆ ನೀವೇ ಕಳಿಸಿದ್ದು ಅಂತ ಒತ್ತಾಯ ಮಾಡಿ ಹೇಳುತ್ತೀರಲ್ಲಾ!’

ರಾಸ್ಕೋಲ್ನಿಕೋವ್ ಅಂಥದೇನೂ ಮಾಡಿರಲಿಲ್ಲ. ಬೆನ್ನು ಹುರಿಯಲ್ಲಿ ಚಳಕು ಹರಿದಾಡಿದಂತೆ ಅನಿಸಿತು.

‘ನೀವು ಸುಳ್ಳು ಹೇಳತಾ ಇದೀರಿ,’ ನೋವಿನ ನಗುವನ್ನು ತೋರಿಸುವ ಹಾಗೆ ಅವನ ತುಟಿ ತಿರುಚಿಕೊಂಡವು. ‘ನನ್ನ ಆಟವೆಲ್ಲ ಮೊದಲೇ ನಿಮಗೆ ಗೊತ್ತು ಅಂತ ತೋರಿಸಿಕೊಳ್ಳೋದಕ್ಕೆ ಮತ್ತೆ ಪ್ರಯತ್ನ ಪಡತಾ ಇದೀರಿ.’ ಅಂದ. ಮಾತನ್ನು ಎಚ್ಚರಿಕೆಯಿಂದ ಆಡುತ್ತಿಲ್ಲ, ಎಚ್ಚರಿಕೆ ಇರಬೇಕಾಗಿತ್ತು ಅಂತಲೂ ಅನಿಸುತ್ತಿತ್ತು. ‘ದಬಾವಣೆ ಮಾಡಕ್ಕೆ ನೋಡತಾ ಇದೀರಿ, ಅಥವಾ ನನ್ನ ನೋಡಿ ನಗತಾ ಇದೀರಿ…’

ಹಾಗೇ ಅವನನ್ನೇ ಇನ್ನೂ ದಿಟ್ಟಿಸುತ್ತಾ ಇದ್ದ. ತಟ್ಟನೆ ಕೊನೆಯಿರದ ಉಗ್ರವಾದ ಕೋಪ ರಾಸ್ಕೋಲ್ನಿಕೋವ್‌ನ ಕಣ್ಣಲ್ಲಿ ಜ್ವಲಿಸಿತು.

‘ಸುಳ್ಳು ಹೇಳತಾನೇ ಇರತೀರಿ!’ ನಿಧಾನವಾಗಿ, ದಣಿದ ದನಿಯಲ್ಲಿ ಹೇಳಿದ. ಜ್ವರದಲ್ಲಿ ಬರುವಂಥ ನಗು ತುಟಿಯ ಮೇಲಿತ್ತು. ನನ್ನಾಟ ನಿಮಗೆ ಗೊತ್ತು, ನಾನು ಏನು ಮಾತಾಡತೇನೆ ಅದೂ ಗೊತ್ತು ಅಂತ ನನ್ನ ನಂಬಿಸುವುದಕ್ಕೆ ಮತ್ತೆ ಪ್ರಯತ್ನಪಡತಾ ಇದೀರಿ.’ ಮಾತನ್ನು ತೂಕಮಾಡಿ ಆಡಬೇಕಿತ್ತು ಅನಿಸಿತು. ಆದರೂ ‘ನನ್ನ ಹೆದರಿಸುವುದಕ್ಕೆ ನೋಡತಾ ಇದೀರಿ ಅಥವಾ ತಮಾಷೆ ಮಾಡಿ ನಗತಾ ಇದೀರಿ…’ ಅಂದ.

‘ನುಣುಚಿಕೊಳ್ಳುವ ಆಟ ನೀವೂ ಚೆನ್ನಾಗೇ ಆಡತೀರಿ!’ ಅಂದ ಪೋರ್ಫಿರಿ. ‘ನಿಮ್ಮ ಜೊತೆ ಏಗಕ್ಕೆ ಆಗಲ್ಲ. ನನ್ನಬಿಟ್ಟರಿನ್ನಿಲ್ಲ ಅನ್ನುವ ಭಾವ ನಿಮ್ಮಲ್ಲಿ ತುಂಬಿಕೊಂಡಿದೆ. ನಂಬಲ್ಲವೇ? ಕೇಳಿ, ಇಲ್ಲಿ—ನನ್ನ ನಂಬಲ್ಲ ಅಂತೀರಿ, ಆದರೂ ನಂಬತೀರಿ. ಆಗಲೇ ಒಂದು ಅಡಿಯಷ್ಟು ನಂಬಿದ್ದೀರಿ ನನ್ನ ಮಾತು ಕೇಳತಾ ಪೂರಾ ಒಂದು ಗಜದಷ್ಟು ನಂಬತೀರಿ, ನನಗೆ ಗೊತ್ತು. ಯಾಕೆ ಅಂದರೆ ನನಗೆ ನಿಮ್ಮ ಮೇಲೆ ನಿಜವಾದ ಪ್ರೀತಿ ಇದೆ. ನಿಮಗೆ ಒಳ್ಳೆಯದಾಗಬೇಕು ಅನ್ನುವ ಪ್ರಾಮಾಣಿಕ ಆಸೆ ಇದೆ.’

ರಾಸ್ಕೋಲ್ನಿಕೋವ್‌ನ ತುಟಿ ಕಂಪಿಸಿದವು.

‘ಹೌದು, ಸಾರ್. ನಿಮ್ಮ ಮೇಲೆ ಪ್ರೀತಿ, ವಿಶ್ವಾಸ ಇದೆ. ನಿಮಗೆ ಕೊನೆಯದಾಗಿ ಒಂದು ವಿಚಾರ ಹೇಳತೇನೆ,’ ಅನ್ನುತ್ತ ರಾಸ್ಕೋಲ್ನಿಕೋವ್‌ನ ಕೈಯನ್ನು ಮೊಳಕೈಯಿಂದ ಸ್ವಲ್ಪ ಮೇಲೆ ಹಿಡಿದು ಹೇಳಿದ, ‘ನಿಮ್ಮ ಕಾಯಿಲೆ ಬಗ್ಗೆ ಗಮನ ಕೊಡಿ. ಅಲ್ಲದೆ ನಿಮ್ಮ ಮನೆಯವರೆಲ್ಲ ಬಂದಿದಾರೆ. ಅವರ ಬಗ್ಗೆನೂ ಸ್ವಲ್ಪ ಯೋಚನೆ ಮಾಡಿ. ಅವರನ್ನ ಪ್ರೀತಿಯಿಂದ ನೋಡಿಕೊಳ್ಳಿ, ಹೆದರಿಸಬೇಡಿ…’

‘ಅದನ್ನ ಕಟ್ಟಿಕೊಂಡು ನಿಮಗೇನಾಗಬೇಕು? ನಿಮಗೆ ಹೇಗೆ ಗೊತ್ತು? ಯಾಕೆ ನಿಮಗೆ ಅಷ್ಟೊಂದು ಕುತೂಹಲ? ಅಂದರೆ ನನ್ನ ಮೇಲೆ ಪತ್ತೇದಾರರನ್ನ ಇಟ್ಟಿದೀರಿ ಅಂತ ನನಗೆ ಗೊತ್ತಾಗಬೇಕು ಅಂತಲಾ?’

‘ಮಿತ್ರಾ, ಇದೆಲ್ಲ ನನಗೆ ತಿಳಿದದ್ದು ನಿಮ್ಮಿಂದಲೇ. ಸ್ವತಃ ನಿಮ್ಮಿಂದಲೇ! ನಿಮ್ಮ ಉತ್ಸಾಹ, ಉದ್ರೇಕದಲ್ಲಿ ಎಲ್ಲಾನೂ ನೀವೇ ಮೊದಲಿಗೆ ಹೇಳಿರತೀರಿ ಅನ್ನುವುದು ನಿಮ್ಮ ಗಮನಕ್ಕೇ ಬಂದಿರಲ್ಲ. ರಝುಮಿಖಿನ್‌ನಿಂದಲೂ ಒಂದಷ್ಟು ವಿವರಗಳು ನಿನ್ನೆ ತಿಳಿದವು. ಇಲ್ಲ, ಸಾರ್. ನೀವು ಇದೀಗ ನನ್ನ ಮಾತಿಗೆ ಅಡ್ಡಿ ಮಾಡಿದಿರಿ. ನೀವು ಬಹಳ ಜಾಣರಿರಬಹುದು, ನಿಮ್ಮಲ್ಲಿ ಅಭದ್ರತೆಯ ಭಾವ ಇದೆ. ಅದಕ್ಕೇ ಇದ್ದದ್ದು ಇದ್ದ ಹಾಗೆ ನೋಡಕ್ಕಾಗಲ್ಲ ನಿಮಗೆ… ಉದಾಹರಣೆಗೆ, ಅದೇ ಬಾಗಿಲಿನ ಕರೆಗಂಟೆಯ ವಿಚಾರ ನೋಡಿ. ನಾನು, ವಿಚಾರಣೆಯ ಅಧಿಕಾರಿ, ಪತ್ತೇದಾರ, ಕರೆಗಂಟೆ ಬಾರಿಸಿದಿರಿ ನೀವು ಅನ್ನುವಂಥ ಅಮೂಲ್ಯವಾದ ಸಂಗತಿ ಹೇಳಿದೆ. ನಿಮ್ಮ ಮೇಲೆ ಎಳ್ಳು ಕಾಳಿನಷ್ಟು ಅನುಮಾನ ಇದ್ದಿದ್ದರೂ ಹಾಗೆ ನಡೆದುಕೊಳ್ಳುತ್ತಿದ್ದೆನಾ? ನಿಮಗೆ ಅನುಮಾನ ಬರದ ಹಾಗೆ, ಒಂದಿಷ್ಟೂ ಸುಳಿವು ಕೊಡದೆ, ನಿಮಗೆ ಸಮಾಧಾನ ಆಗುವ ಹಾಗೆ ಮಾತಾಡತಿದ್ದೆ. ಹಾಗೆ ಮಾಡಿ ನಿಮ್ಮ ಯೋಚನೆ ಬೇರೆ ದಿಕ್ಕಿನಲ್ಲಿ ಹೋಗುವ ಹಾಗೆ ಮಾಡತಿದ್ದೆ. ಆಮೇಲೆ, ನಿಮ್ಮ ಮಾತಿನಲ್ಲೇ ಹೇಳುವುದಾದರೆ, ತಲೆಯ ಮೇಲೆ ಕೊಡಲಿಯಲ್ಲಿ ಹೊಡೆಯುತ್ತಿದ್ದೆ. ಕೊಲೆಯಾದ ಮಹಿಳೆಯ ಮನೆಯಲ್ಲಿ ನೀವು ರಾತ್ರಿ ಹತ್ತು ಗಂಟೆಯ ಹೊತ್ತಿನಲ್ಲಿ, ಹನ್ನೊಂದು ಅಂತಲೇ ಇಟ್ಟುಕೊಳ್ಳಿ, ಏನು ಮಾಡುತ್ತಿದ್ದಿರಿ? ಕರೆಗಂಟೆ ಯಾಕೆ ಬಾರಿಸಿದಿರಿ? ರಕ್ತದ ಬಗ್ಗೆ ಯಾಕೆ ಕೇಳಿದಿರಿ? ವಾಚ್‌ಮ್ಯಾನು ಗೊಂದಲಕ್ಕೆ ಗುರಿಯಾಗುವ ಹಾಗೆ ಯಾಕೆ ಮಾಡಿದಿರಿ? ಪೋಲೀಸ್‌ ಸ್ಟೇಶನ್ನಿಗೆ, ಲೆಫ್ಟಿನೆಂಟ್ ಹತ್ತಿರ ಹೋಗಬೇಕು ಅಂತ ಯಾಕೆ ಅವನನ್ನ ಪುಸಲಾಯಿಸಿದಿರಿ? ನಿಮ್ಮ ಮೇಲೆ ಕಿಂಚಿತ್ತಾದರೂ ಸಂಶಯವಿದ್ದಿದ್ದರೆ ಹೀಗೆಲ್ಲ ಕೇಳಿ ನಿಮ್ಮ ವಿಚಾರಣೆ ನಡೆಸುತ್ತಿದ್ದೆ.

ಕಾನೂನು ಹೇಳಿರುವ ಕ್ರಮದಲ್ಲಿ ನಿಮ್ಮ ಸಾಕ್ಷಿ ಪಡೆಯುತ್ತಿದ್ದೆ, ನಿಮ್ಮ ಮನೆಯನ್ನು ಹುಡುಕಾಡುತ್ತಿದ್ದೆ, ನಿಮ್ಮನ್ನು ಬಂಧಿಸುತ್ತಲೂ ಇದ್ದೆ… ನಾನು ಹೀಗೆಲ್ಲ ನಡೆದುಕೊಳ್ಳದೆ ಬೇರೆ ಥರ ನಡೆದುಕೊಂಡಿದೇನೆ ಅಂದರೆ ನನಗೆ ನಿಮ್ಮ ಮೇಲೆ ಸಂಶಯ ಇಲ್ಲ ಅಂತ ತಾನೇ ಅರ್ಥ! ಮತ್ತೆ ಹೇಳತೇನೆ ಕೇಳಿ, ನೀವು ಇರುವುದನ್ನು ಇರುವ ಹಾಗೆ ನೋಡುವ ಶಕ್ತಿ ಕಳೆದುಕೊಂಡಿದ್ದೀರಿ!’

ರಾಸ್ಕೋಲ್ನಿಕೋವ್‌ನ ಇಡೀ ಮೈ ಕಂಪಿಸಿ ತುಯ್ದಾಡಿತು. ಅದು ಪೋರ್ಫಿರಿಯ ಗಮನಕ್ಕೂ ಬಂದಿತ್ತು.

‘ಇನ್ನೂನು ಸುಳ್ಳು!’ ಜೋರಾಗಿ ಚೀರಿದ. ‘ನಿಮ್ಮ ಉದ್ದೇಶ ಗೊತ್ತು ನನಗೆ. ನೀವು ಸುಳ್ಳು ಹೇಳತಾನೇ ಇದೀರಿ… ಸ್ವಲ್ಪ ಹೊತ್ತಿಗೆ ಮೊದಲು ಬೇರೆಯ ಅರ್ಥದಲ್ಲಿ ಮಾತಾಡಿದಿರಿ. ನನಗೆ ಗೊತ್ತು… ಸುಳ್ಳು ಹೇಳುತ್ತಿದ್ದೀರಿ.’

‘ಸುಳ್ಳು ಹೇಳತಾ ಇದೇನಾ ನಾನು?’ ಪೋರ್ಫಿರಿ ಉದ್ರಿಕ್ತನಾಗಿದ್ದ ಆದರೂ ಬಹಳ ಖುಷಿಯ ‍ದನಿಯಲ್ಲಿ, ತನ್ನ ಬಗ್ಗೆ ರಾಸ್ಕೋಲ್ನಿಕೋವ್ ಏನಂದುಕೊಂಡರೂ ಅದಕ್ಕೂ ತನಗೂ ಸಂಬಂಧ ಇಲ್ಲ ಅನ್ನುವ ಹಾಗೆ ಅಣಕಿಸುವ ದನಿಯಲ್ಲಿ ಮಾತಾಡಿದ.

‘ಸರಿ, ಈಗ ಸ್ವಲ್ಪ ಹೊತ್ತಿಗೆ ಮೊದಲು ನಿನ್ನ ಜೊತೆ ಹೇಗೆ ನಡೆದುಕೊಂಡೆ, ವಿಚಾರಣೆಯ ಅಧಿಕಾರಿಯಾಗಿರುವವನು. ನಿಮ್ಮ ರಕ್ಷಣೆಗೆ ಬೇಕಾದ ಉಪಾಯಗಳನ್ನೆಲ್ಲ, ಮನಶ್ಶಾಸ್ತ್ರದ ಉಪಾಯ—ಕಾಯಿಲೆ, ಸನ್ನಿ, ಕಾಯಿಲೆ, ಪೋಲೀಸರು ಇತ್ಯಾದಿ ಎಲ್ಲಾ ಇವನ್ನೆಲ್ಲ ಹೇಳಿಕೊಡುವ ಕೆಲಸ ಸ್ವತಃ ನಾನೇ ಮಾಡಲಿಲ್ಲವಾ? ಹ್ಞಾ? ಹ್ಹೆಹ್ಹೆಹ್ಹೇ! ಅಂದ ಹಾಗೆ, ಹೇಳಬೇಕು ಅಂದರೆ, ರಕ್ಷಣೆಯ ಈ ಮನಶ್ಶಾಸ್ತ್ರೀಯ ಉಪಾಯಗಳೆಲ್ಲ ಬುಡ ಭದ್ರವಿಲ್ಲದವು, ಎರಡು ಅಲಗಿನ ಕತ್ತಿಯ ಥರದವು. ಅಪರಾಧಿಗಳು ‘ಕಾಯಿಲೆ,’ ಅನ್ನುತಾರೆ, ‘ಸನ್ನಿ ಕನಸು,’ ಅನ್ನತಾರೆ, ‘ನೆನಪಿಲ್ಲ,’ ಅನ್ನತಾರೆ,’— ಇವೆಲ್ಲ ನಿಜವೇ ಇರಬಹುದು. ಆದರೂ ಕಾಯಿಲೆಯಲ್ಲಿ, ಸನ್ನಿಯಲ್ಲಿ, ಕಲ್ಪನೆಯಲ್ಲಿ ಇವೇ ಕನಸು ಯಾಕೆ? ಬೇರೆ ಕನಸು ಭ್ರಮೆ ಕೂಡ ಇರಬಹುದಿತ್ತಲ್ಲ ಅಂತ ಕೇಳಬಹುದು. ಸರಿಯಾ? ಹ್ಹೆ ಹ್ಹೆ ಹ್ಹೇ!’

ರಾಸ್ಕೋಲ್ನಿಕೋವ್ ಹೆಮ್ಮೆಯ, ತಿರಸ್ಕಾರದ ದೃಷ್ಟಿ ಬೀರಿದ.

ಪೋರ್ಫಿರಿಯ ಸ್ವಗತ ಭಾಷಣವನ್ನು ಪಕ್ಕಕ್ಕೆ ತಳ್ಳಿ ಹಾಕುತ್ತ ಗಟ್ಟಿಯಾಗಿ, ಒತ್ತಾಯ ಮಾಡುವ ದನಿಯಲ್ಲಿ ಕೇಳಿದ: ‘ಸರಳವಾಗಿ ಇಷ್ಟು ಹೇಳಿ ಸಾಕು. ನಾನು ಸಂಶಯ ಮುಕ್ತನೋ ಅಲ್ಲವೋ? ಹೇಳಿ ಪೋರ್ಫಿರಿ ಪೆಟ್ರೊವಿಚ್. ಹೇಳಿ, ಕೊನೆಯದಾಗಿ, ಸ್ಪಷ್ಟವಾಗಿ ಹೇಳಿ, ಬೇಗ ಹೇಳಿ.’

‘ಎಂಥಾ ಕೆಲಸ ಕೊಡತಾ ಇದೀರಿ! ಎಂಥಾ ಕೆಲಸ!’ ಪೋರ್ಫಿರಿ ಉದ್ಗರಿಸಿದ, ಅವನ ದನಿಯಲ್ಲಿ ಖುಷಿ ಇತ್ತು, ಜಾಣತನವಿತ್ತು, ಒಂದಿಷ್ಟೂ ಚಿಂತೆ ಇರಲಿಲ್ಲ. ‘ಅಲ್ಲಾ, ನೀವು ಹೇಳಿ ನೀವು— ನಾವು ನಿಮಗೆ ಕಿಂಚಿತ್ತೂ ತೊಂದರೆ ಕೂಡ ಕೊಟ್ಟಿಲ್ಲದೆ ಇರೋವಾಗ ಇದೆಲ್ಲ ಪ್ರಶ್ನೆ ಯಾಕೆ ಕೇಳಬೇಕು ನೀವು? ಬೆಂಕಿಯ ಜೊತೆ ಆಟ ಆಡಬೇಕು ಅಂತ ಹಟ ಮಾಡೋ ಮಗೂ ಥರಾ ನೀವು! ಇಷ್ಟೊಂದು ಚಿಂತೆ ಯಾಕೆ? ನಮ್ಮ ಮೈ ಮೇಲೆ ಬಿದ್ದು ಯಾಕೆ ಹೀಗೆಲ್ಲ ಕೇಳತ ಇದ್ದೀರಿ? ಏನು ಕಾರಣ? ಹ್ಞಾ? ಹ್ಹೆಹ್ಹೆಹ್ಹೇ!

‘ಹೇಳತಾ ಇದೀನಿ, ನನ್ನ ಕೈಲಿ ಸಹಿಸಿಕೊಳ್ಳಕ್ಕಾಗಲ್ಲ!’ ರಾಸ್ಕೋಲ್ನಿಕೋವ್ ಸಿಟ್ಟಿನಲ್ಲಿ ಅಂದ.

‘ಏನು ಸಹಿಸಿಕೊಳ್ಳಕ್ಕೆ ಆಗಲ್ಲ? ಅಸ್ಪಷ್ಟತೇನಾ?’ ಪೋರ್ಫಿರಿ ಮಧ್ಯವೇ ಮಾತಾಡಿದ.

‘ರೇಗಿಸಬೇಡಿ! ಸುಮ್ಮನಿರಲ್ಲ! ಹೇಳತಾ ಇದೇನೆ, ರೇಗಿಸಿದರೆ ಸುಮ್ಮನೆ ಇರಲ್ಲ… ಆಗಲ್ಲ, ಸುಮ್ಮನೇ ಇರಲ್ಲಾ! ಕೇಳಿಸಿತಾ? ಕೇಳಿಸಿತಾ…’ ಚೀರಿದ, ಮೇಜನ್ನು ಜೋರಾಗಿ ಗುದ್ದಿದ.

‘ಸಾಕು! ಸಾಕು! ಅವರಿಗೆಲ್ಲ ಕೇಳಿಸತ್ತೆ! ಸೀರಿಯಸ್ಸಾಗಿ ವಾರ್ನಿಂಗ್ ಕೊಡತಾ ಇದೀನಿ, ಮೈ ಮೇಲೆ ಎಚ್ಚರ ಇರಲಿ, ತಮಾಷೆ ಮಾಡತಾ ಇಲ್ಲ ನಾನು!’ ಈಗ ಪೋರ್ಫಿರಿ ಪಿಸುದನಿಯಲ್ಲೇ ಹೇಳಿದ್ದರೂ ಅವನ ಮುಖದಲ್ಲಿ ಮೊದಲಿದ್ದ ಉದಾರ ಗುಣದ ಮಹಿಳೆಯ ಬೆದರಿದ ನೋಟ ಇರಲಿಲ್ಲ. ಬದಲಾಗಿ ನೇರವಾಗಿ, ಕಠಿಣವಾಗಿ, ಹುಬ್ಬು ಗಂಟಿಕ್ಕಿ, ಎಲ್ಲ ಗುಟ್ಟು ಸಂದಿಗ್ಧಗಳನ್ನೂ ತಟ್ಟನೆ ಮೀರಿ ಆಜ್ಞೆ ಮಾಡುವ ದನಿ ಇತ್ತು. ಒಂದು ಕ್ಷಣ ಮಾತ್ರ. ರಾಸ್ಕೋಲ್ನಿಕೋವ್ ಗೊಂದಲಕ್ಕೆ ಗುರಿಯಾದ. ಮರು ಕ್ಷಣವೇ ಆಕ್ರೋಶ ಹುಟ್ಟಿತು. ವಿಚಿತ್ರವೆಂದರೆ ಅವನು ಮತ್ತೆ ಆಜ್ಞೆಯನ್ನು ಪಾಲಿಸುತ್ತ, ಒಳಗೆ ಆಕ್ರೋಶ ಹೊತ್ತಿ ಉರಿಯುತ್ತಿದ್ದರೂ ಹೊರಗೆ ಮೃದುವಾಗಿ ಮಾತಾಡಿದ.

‘ನನಗೆ ಹಿಂಸೆ ಕೊಟ್ಟರೆ ಸಹಿಸಿಕೊಂಡು ಸುಮ್ಮನೆ ಇರಲ್ಲ!’ ರಾಸ್ಕೋಲ್ನಿಕೋವ್ ಕೂಡ ಪಿಸುದನಿಯಲ್ಲಿ ಮಾತಾಡುತ್ತಿದ್ದ. ಮಾತು ಶುರು ಮಾಡುತ್ತಿದ್ದ ಹಾಗೇ ಆಜ್ಞೆಯನ್ನು ಧಿಕ್ಕರಿಸಲು ಆಗಲಿಲ್ಲವಲ್ಲಾ ಎಂದು ಮನಸಿಗೆ ನೋವಾಯಿತು, ದ್ವೇಷ ಹುಟ್ಟಿತು, ‘ಬಂಧಿಸಿ ನನ್ನನ್ನ, ಹುಡುಕಿ ಶೋಧನೆ ಮಾಡಿ, ವಿಚಾರಣೆ ಮಾಡಿ, ಆದರೆ ಏನು ಮಾಡಿದರೂ ಕಾನೂನುಬದ್ಧವಾಗಿ ಮಾಡಿ, ನನ್ನ ಜೊತೆ ಆಟ ಆಡಬೇಡಿ, ಸಾರ್…’

‘ಕಾನೂನು ಬದ್ಧ ಅಂತೆಲ್ಲ ತಲೆ ಕೆಡಿಸಿಕೊಳ್ಳಬೇಡಿ,’ ಪೋರ್ಫಿರಿ ತನ್ನ ಮಾಮೂಲಿ ನಗುವನ್ನು ನಗುತ್ತ ರಾಸ್ಕೋಲ್ನಿಕೋವ್‌ನನ್ನು ಮಧ್ಯದಲ್ಲೇ ತಡೆದು ಹೇಳಿದ. ದನಿಯಲ್ಲಿ ಮೆಚ್ಚುಗೆ ಇತ್ತು, ಸಂತೋಷವೂ ಇತ್ತು. ‘ನಾನು ನಿಮ್ಮನ್ನ ಇಲ್ಲಿಗೆ ಗೆಳೆಯನಾಗಿ ಆಹ್ವಾನಿಸಿದೆ, ಅಧಿಕಾರಿಯೊಬ್ಬ ಕರೆಸಿಕೊಳ್ಳುವ ಹಾಗಲ್ಲ!’ ಅಂದ.

‘ಥೂ, ನಿಮ್ಮ ಸ್ನೇಹಕ್ಕಿಷ್ಟು! ಕೇಳಿಸಿತಾ? ಥೂ. ನನ್ನ ಕ್ಯಾಪು ತಗೊಂಡು ಹೊರಟೆ. ನನ್ನ ಅರೆಸ್ಟು ಮಾಡಬೇಕು ಅಂತಿದ್ದರೆ ಅದಕ್ಕೆ ಏನು ಹೇಳಬೇಕೋ ಹೇಳಿ.’

ಅವನು ಕ್ಯಾಪು ಎತ್ತಿಕೊಂಡು ಬಾಗಿಲ ಕಡೆಗೆ ಹೆಜ್ಜೆ ಹಾಕಿದ.

‘ಪುಟ್ಟದೊಂದು ಸರ್ಪೈಸ್ ಇದೆ, ನೋಡಲ್ಲವಾ?’ ಪೋರ್ಫಿರಿ ಮತ್ತೆ ಮೊಳಕೈಯಿಂದ ಸ್ವಲ್ಪ ಮೇಲೆ ಅವನ ತೋಳನ್ನು ಹಿಡಿದು ಬಾಗಿಲ ಹತ್ತಿರ ನಿಲ್ಲಿಸಿ ಕೇಳಿದ. ಪೋರ್ಫಿರಿ ಹೆಚ್ಚು ಹೆಚ್ಚು ಖುಷಿಪಡುತ್ತ ಹುಡುಗಾಟ ಮಾಡುತ್ತಿದ್ದ. ಅದರಿಂದ ರಾಸ್ಕೋಲ್ನಿಕೋವ್‌ನ ಕೋಪ ಹೆಚ್ಚುತ್ತಿತ್ತು.

‘ಏನು ಸರ್ಪೈಸು? ಏನದು?; ಇದ್ದಕ್ಕಿದ್ದ ಹಾಗೆ ನಿಂತು ಪೋರ್ಫಿರಿಯನ್ನು ನೋಡುತ್ತ ಭಯದಲ್ಲಿ ಕೇಳಿದ.

‘ಪುಟ್ಟದೊಂದು ಸರ್ಪೈಸು, ಸಾರ್. ಬಾಗಿಲ ಹಿಂದೆ ಇದೆ, ಹ್ಹೆಹ್ಹೆಹ್ಹೆ!’ (ಪಾರ್ಟಿಶನ್ ಗೋಡೆಯಲ್ಲಿದ್ದ, ಅವನ ಕ್ವಾರ್ಟರ್ಸ್‌ಗೆ ಹೋಗುವ ಬಾಗಿಲತ್ತ ಬೆರಳು ತೋರಿದ.) ‘ಬೀಗ ಹಾಕಿಟ್ಟಿದೀನಿ… ಓಡಿ ಹೋಗಬಾರದು ಅಂತ!’

‘ಏನದು? ಎಲ್ಲಿ? ಏನು?…’ ರಾಸ್ಕೋಲ್ನಿಕೋವ್ ಬಾಗಿಲ ಹತ್ತಿರ ಹೋಗಿ ತೆಗೆಯಲು ನೋಡಿದ. ಬೀಗ ಹಾಕಿತ್ತು.

‘ಬೀಗ ಹಾಕಿದೆ, ಸಾರ್. ಬೀಗದ ಕೈ ಇಲ್ಲಿದೆ!’

ಜೇಬಿನಿಂದ ಬೀಗದ ಕೈ ತೆಗೆದು ತೋರಿಸಿದ.

‘ಇನ್ನೂ ಸುಳ್ಳು ಹೇಳತಾ ಇದೀರಿ!’ ರಾಸ್ಕೋಲ್ನಿಕೋವ್ ಚೀರಿದ. ‘ಜೋಕರ್, ಬಫೂನ್!’ ಪೋರ್ಫಿರಿಯತ್ತ ನುಗ್ಗಿದ. ಅವನು ಹಿಂದೆ ಸರಿದು ಬಾಗಿಲಹತ್ತಿರಕ್ಕೆ ಹೋಗಿದ್ದ. ಪೋರ್ಫಿರಿಯಲ್ಲಿ ಭಯವಿರಲೇ ಇಲ್ಲ.

‘ನನಗ್ಗೊತ್ತು, ನನಗೆ ಎಲ್ಲಾ ಗೊತ್ತು, ಸುಳ್ಳು ಹೇಳತಾ ಇದೀರಿ, ರೇಗಿಸತಾ ಇದೀರಿ, ನನ್ನ ಸಿಕ್ಕಿ ಹಾಕಿಸುವುದಕ್ಕೆ ನೋಡತಾ ಇದೀರಿ.’

‘ಸಿಕ್ಕಿಹಾಕಿಕೊಳ್ಳೋದು ಏನಿದೆ ರೋಡಿಯಾನ್ ರೊಮೊನೊವಿಚ್, ನೀವು ಸಿಟ್ಟಿನಲ್ಲಿ ಮೈ ಮರೆತಿದ್ದೀರಿ. ನಿಜವಾಗಲೂ ನಮ್ಮ ಜನಗಳನ್ನ ಕರೀತೇನೆ.’

‘ಸುಳ್ಳು! ನಿಮ್ಮ ಹತ್ತಿರ ಏನೂ ಇಲ್ಲ! ನಿಮ್ಮ ಜನಗಳನ್ನ ಕರೆಯಿರಿ! ನನಗೆ ಹುಷಾರಿಲ್ಲ ಅಂತ ಗೊತ್ತು, ನನ್ನ ರೇಗಿಸತಾ ಇದೀರಿ. ರೇಗಿ ರೇಗಿ ನನ್ನ ನಾನೇ ಬಯಲು ಮಾಡಿಕೊಳ್ಳಬೇಕು ಅಂತ ನಿಮ್ಮ ಉದ್ದೇಶ. ನನಗೆಲ್ಲಾ ಅರ್ಥ ಆಗತ್ತೆ. ನಿಮ್ಮ ಹತ್ತಿರ ಪುರಾವೆ ಇಲ್ಲ. ಇರೋದೆಲ್ಲ ಸಣ್ಣ ಪುಟ್ಟ, ಕೆಲಸಕ್ಕೆ ಬಾರದ ಅನುಮಾನ, ಊಹೆ, ಅಷ್ಟೇ. ಝಮ್ಯೊತೋವ್‌ನ ಊಹೆಗಳು… ನಿಮಗೆ ನನ್ನ ಸ್ವಭಾವ ಗೊತ್ತು. ನನಗೆ ಸಿಟ್ಟು ಬರಿಸಬೇಕು, ಆಮೇಲೆ ಪಾದ್ರಿಗಳು, ಆಫೀಸರುಗಳನ್ನ ಕರೆದು ನನ್ನ ಹಿಡಿದು ಹಾಕಬೇಕು ಅನ್ನುವುದು ನಿಮ್ಮ ಯೋಚನೆ… ಪಾದ್ರಿಗಳು ಆಫೀಸರುಗಳು ಬರಲಿ ಅಂತ ಕಾಯತಾ ಇದೀರಾ, ಹ್ಞಾ? ಯಾತಕ್ಕೆ ಕಾಯತಾ ಇದೀರಿ, ಎಲ್ಲಿ, ಮುಗಿಸಿಬಿಡಿ.’

‘ಯಾವ ಪಾದ್ರಿ, ಯಾವ ಆಫೀಸರು? ಏನೇನು ಕಲ್ಪನೆ ಬರತ್ತಲ್ಲ ನಿಮಗೇ! ಕಾನೂನು ಪ್ರಕಾರ ಹಾಗೆಲ್ಲ ಮಾಡೋ ಹಾಗಿಲ್ಲ. ಪ್ರೊಸೀಜರು ಏನು ಅಂತ ನಿಮಗೆ ಗೊತ್ತಿಲ್ಲ. ಕಾನೂನು, ಕಟ್ಟಳೆ ಎಲ್ಲಾ ಎಲ್ಲೂ ಓಡಿ ಹೋಗಲ್ಲ, ನೀವೇ ನೋಡತೀರಿ ಅದನ್ನ…’ ಪೋರ್ಫಿರಿ ಗೊಣಗಿದ. ಅವನ ಒಂದು ಕಿವಿ ಬಾಗಿಲ ಕಡೆಗೇ ಇತ್ತು.

ಅದೇ ಹೊತ್ತಿಗೆ ಬಾಗಿಲ ಆಚೆಯಿಂದ ಏನೋ ಗದ್ದಲ ಕೇಳಿಸಿತು.

‘ಆಹಾ, ಬರತಾ ಇದಾರೆ!’ ರಾಸ್ಕೋಲ್ನಿಕೋವ್‌ ಅಂದ. ‘ನೀವು ಹೇಳಿಕಳಿಸಿದೀರಿ! ಅವರು ಬರಲಿ ಅಂತ ಕಾಯತಾ ಇದ್ದಿರಿ!… ಲೆಕ್ಕ ಹಾಕಿದ್ದಿರಿ, ಎಲ್ಲಾ… ಸರಿ, ಬರಲಿ ಇಲ್ಲಿಗೆ—ಆಫೀಸರುಗಳು, ಸಾಕ್ಷಿಗಳು, ನಿಮ್ಮ ಹತ್ತಿರ ಏನೇನಿದೆಯೋ ಎಲ್ಲಾ… ಸರಿ, ನಾನು ಸಿದ್ಧ! ಸಿದ್ಧ!’

ಆ ಕ್ಷಣದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಸಾಮಾನ್ಯವಾಗಿ ಹೀಗೆಲ್ಲ ಆಗುತ್ತದೆ ಎಂದು ಕಲ್ಪನೆ ಮಾಡಿಕೊಳ್ಳುವುದಕ್ಕೂ ಆಗದು. ರಾಸ್ಕೋಲ್ನಿಕೋವ್‌ನಾವಗಳೀ ಪೋರ್ಫಿರಿಯಾಗಲೀ ಇಂಥ ಒಂದು ಮುಕ್ತಾಯ ಊಹಿಸಿಯೂ ಇರಲಿಲ್ಲ.