ಕಥೆಯು ಅವನೆಣಿಸಿದಂತೆ ಸಾಗುವುದಿಲ್ಲ. ಅರ್ಥಾತ್, ಕಸದ ಬುಟ್ಟಿಯೆಂಬುದು ಒಂದು ರೂಪಕ. ಇಲ್ಲಿ ಲೂಟಿಯಾಗಿರುವುದು ಅಮಾಯಕ ಆತ್ಮದ ಬದುಕು. ಅದು ಸುಟ್ಟಿರುವುದು ಸುಂದರ ಕನಸುಗಳನ್ನು. ಮುಗಿದ ಕಥೆಗೆ ಇನ್ನೆಲ್ಲಿ ಶುರುವೆಂದೆನಿಸುವ ಸನ್ನಿವೇಶದಲ್ಲಿ, ಮಗಳಿಗಾದ ಘೋರ ಅನ್ಯಾಯದ ವಿರುದ್ಧ, ಅಪ್ಪ ಹೋರಾಡುವುದು ಯುಕ್ತಿಯಿಂದ. ಹಾಗಾದರೆ, ನೈಜ ಕಥೆಯೇನು? ಏನಿದು ಅನ್ಯಾಯ? ಮಹಾರಾಜನಿಗೆ ಯಾಕೀ ಆಕ್ರೋಶ? ಎಲ್ಲವೂ ಸೇರಿ ಭಾವನೆಗಳ ಅನಾಮತ್ತಾಗಿ ಆಪೋಶನ ತೆಗೆದುಕೊಳ್ಳುವಂತಹ ಅಂತ್ಯವಿರುವ, ಸಮಾಜದ ನಡುವೆ ಸದ್ದಿಲ್ಲದೇ ನಿರಂತರವಾಗಿ ನಡೆಯುತ್ತಲೇ ಇರುವ ಭವಿಷ್ಯವ ಕೊಲ್ಲುವ ರಾಕ್ಷಸಿ ಪ್ರವೃತ್ತಿಗೆ ಹಿಡಿದ ಕನ್ನಡಿಯೇ ‘ಮಹಾರಾಜ’.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ತಮಿಳಿನ ‘ಮಹಾರಾಜಾ’ ಸಿನಿಮಾದ ವಿಶ್ಲೇಷಣೆ
ಮುಗಿಲು ಬೆಳ್ಮುಗಿಲು
ನನ್ನ ಈ ಮಗಳು ದೇವರಿಗಿಂತ ಮಿಗಿಲು
ಬೊಗಸೆ ಗಾತ್ರದ ಚಂದ್ರ ಅವಳ ನೆರಳು
ಕಣ್ಣಲೆ ಇದೆ ಹೊಂಬಿಸಿಲು
ಉಸಿರೇ ಇಲ್ಲಿ ಲಾಲಿ ಅಪ್ಪುಗೆಯೇ ತೂಗೋ ಜೋಲೀ
ಬದುಕಿನಲ್ಲಿ ಅವಳೇ ಭರವಸೆಯ ಹೋಳಿ
ಮರವ ತಪ್ಪಿದ ಬಿಳಲು ಗರಿಯ ಹತ್ತಿದೆ ನವಿಲು
ನನ್ನ ಹಗಲು ನನ್ನ ಇರುಳು ಮಗಳು..
ನನ್ನ ಮಗಳು..
-ಕೆ ಕಲ್ಯಾಣ್
ಮಗಳೆಂದರೆ ಬೆಳಕು. ಕತ್ತಲೊಳಗೆ ಕಳೆದು, ಕರಗಿ ಹೋಗುವ ಧೂಳು ಮೆತ್ತಿದ ಬದುಕಿಗೆ ಕಂದೀಲು ಹಿಡಿದು ಬರುವ ದೇವತೆ ಅವಳು. ಅವಳ ನಗು, ನಡಿಗೆ, ಹುಸಿಕೋಪ ಎಲ್ಲವೂ ಅಪ್ಪನ ಅಕ್ಷಿಗೆ ಅಲಂಕಾರ. ಅವನಿಗೆ ಅವಳೇ ಬಿಸಿಲು ಬೇಡದ ನೆರಳು, ನದಿಯ ದಾಟಿಸುವ ನಾವೆ, ಜಲಪಾತಗಳ ಕಣ್ಣೊರೆಸುವ ಮಳೆ, ಮರದ ಕೈಗಳಿಗೆ ಮುದ ನೀಡುವ ತಂಗಾಳಿ. ಎಲ್ಲಕ್ಕಿಂತ ಮೀರಿ ಕಾಲಾತೀತ ಸ್ನೇಹಿತೆ. ಅಪ್ಪ ಮಗಳು, ಅಮ್ಮ ಮಗ ಈ ಬಂಧವೇ ಒಂದು ಸುಂದರ ಕಥನ. ಇಲ್ಲಿ ಮಾತು ಬೆಳೆಯುತ್ತದೆ, ಮೌನ ಮುಳುಗುತ್ತದೆ. ಆದರೆ, ಇಲ್ಲಿ ಪ್ರೀತಿಯೆಂಬುದು ಎಂದಿಗೂ ಮುಗಿಯದ ಅಧ್ಯಾಯ. ಹೊಂದಿರುವುದು ಕಾಳಜಿಯೆಂಬ ಭಾವ ಪೂರ್ಣ ರೂಪ. ಇಂತಹ ಒಂದು ಅಪ್ಪ ಮಗಳ ಅಸ್ಖಲಿತ ಅನುಬಂಧದ ಕಥನವೇ ‘ಮಹಾರಾಜ’.
ಅವನ ಹೆಸರು ಮಹಾರಾಜ. ಹಾಗೆಂದು ಅವನು ಧನ, ಕನಕ, ಅಂತಸ್ತು, ಅಧಿಕಾರದ ಬಲದಲ್ಲಿ ಮಹಾರಾಜನಲ್ಲ. ಆದರೆ, ಮನಸ್ಸು ದೊರೆಯಂಥದ್ದು. ಮಗಳೊಂದಿಗೆ ವಾಸ. ವೃತ್ತಿಯಲ್ಲಿ ಕ್ಷೌರಿಕ. ಜ್ಯೋತಿ ಸಲೂನ್ ಆತನ ಅಂಗಡಿಯ ನಾಮಧೇಯ. ಜ್ಯೋತಿಯೆಂದರೆ ಅವಳೇ ಬದುಕಿನ ಹಣತೆಯ ಬೆಳಗುವವಳು, ಮಗಳು. ಅವರಿಬ್ಬರೂ ವಾಸಿಸುವುದು ಅವಳೊಂದಿಗೆ. ಅವಳೆಂದರೆ ಲಕ್ಷ್ಮಿ. ಅವಳು ಹುಡುಗಿಯಲ್ಲ. ಜ್ಯೋತಿಯ ಉಸಿರ ಉಳಿಸಿದ ಉಡುಗೊರೆ. ಅವಳು ಕಸದ ಬುಟ್ಟಿ. ಅದೊಂದು ದಿನ ಲಾರಿ ಯಮರಾಜನ ರೂಪದಲ್ಲಿ ಬಂದು ಮನೆಯ ಗೋಡೆಗೆ ಅಪ್ಪಳಿಸಿದಾಗ ಮಹಾರಾಜನ ಪತ್ನಿ ಕಾಲವಾಗುತ್ತಾಳೆ. ಅಟ್ಟಣಿಗೆಯ ಮೇಲೆ ಕುಳಿತಿದ್ದ ಕಬ್ಬಿಣದ ಕಸದ ಬುಟ್ಟಿ ಎಳೆಯ ಜ್ಯೋತಿ ಮೇಲೆ ಬಿದ್ದು, ಅವಳನ್ನು ಉಳಿಸುತ್ತದೆ. ಅಂದಿನಿಂದ ಮಹಾರಾಜ ಮತ್ತು ಜ್ಯೋತಿಗೆ ಆ ಕಸದ ಬುಟ್ಟಿಯೂ ಜೊತೆಗಾತಿ.
ಒಂದು ದಿನ ಮಹಾರಾಜನ ಮನೆಗೆ ಆಗಂತುಕರ ಆಗಮನವಾಗುತ್ತದೆ. ಜ್ಯೋತಿ ಆಟೋಟಗಳಲ್ಲಿ ಭಾಗವಹಿಸಲು ಪರವೂರಿಗೆ ತೆರಳಿರುತ್ತಾಳೆ. ಆ ಅಪರಿಚಿತ ವ್ಯಕ್ತಿಗಳು ಮಹಾರಾಜನಿಗೆ ಹೊಡೆದು, ಕಸದಬುಟ್ಟಿಯ ಕಳವು ಮಾಡುತ್ತಾರೆ. ಅದನ್ನು ಹುಡುಕುವಂತೆ ದೂರು ನೀಡಲು ಆತ ಪೋಲೀಸ್ ಕಚೇರಿಗೆ ಬರುತ್ತಾನೆ. ಆದರೆ ಆತನ ದೂರು ಕೇಳಿ, ಹುಚ್ಚನೀತ ಎಂದು ಎಲ್ಲರೂ ಉಪೇಕ್ಷಿಸುತ್ತಾರೆ. ಆತನನ್ನು ಹೊರಹಾಕಲು ಯತ್ನಿಸುತ್ತಾರೆ. ಆದರೆ ಆತನ ಒಳಗಿರುವ ಹಠವಾದಿತನ ಸ್ಟೇಷನ್ನಿನ ಆಕಾರವೇ ವಿರೂಪವಾಗುವಂತೆ ಮಾಡುತ್ತದೆ ಮತ್ತು ತನ್ನ ದೂರನ್ನು ಸ್ವೀಕರಿಸಲೇಬೇಕು ಎಂಬ ಪ್ರಬಲ ಸಂದೇಶವನ್ನು ರವಾನೆ ಮಾಡುತ್ತದೆ. ಮುಂದೆ ದುಡ್ಡಿನ ಆಮಿಷಕ್ಕೆ ದೂರು ಸ್ವೀಕರಿಸುವ ಉನ್ನತ ಪೋಲೀಸ್ ಅಧಿಕಾರಿ, ಕೇವಲ ಕಸದ ಬುಟ್ಟಿಗೆ ಈತ ಈ ಪರಿಯ ಪ್ರತಿಕ್ರಿಯೆಯ ನೀಡಲು ಸಾಧ್ಯವಿಲ್ಲ ಬದಲಾಗಿ ಆ ಕಸದಬುಟ್ಟಿಯ ಹಿಂದೆ ಭಾರೀ ಹಣದ ವಹಿವಾಟಿರಬಹುದು ಎಂಬ ಊಹೆಯ ಬೆನ್ನು ಹತ್ತುತ್ತಾನೆ. ಆದರೆ, ಕಥೆಯು ಅವನೆಣಿಸಿದಂತೆ ಸಾಗುವುದಿಲ್ಲ. ಅರ್ಥಾತ್, ಕಸದ ಬುಟ್ಟಿಯೆಂಬುದು ಒಂದು ರೂಪಕ. ಇಲ್ಲಿ ಲೂಟಿಯಾಗಿರುವುದು ಅಮಾಯಕ ಆತ್ಮದ ಬದುಕು. ಅದು ಸುಟ್ಟಿರುವುದು ಸುಂದರ ಕನಸುಗಳನ್ನು. ಮುಗಿದ ಕಥೆಗೆ ಇನ್ನೆಲ್ಲಿ ಶುರುವೆಂದೆನಿಸುವ ಸನ್ನಿವೇಶದಲ್ಲಿ, ಮಗಳಿಗಾದ ಘೋರ ಅನ್ಯಾಯದ ವಿರುದ್ಧ, ಅಪ್ಪ ಹೋರಾಡುವುದು ಯುಕ್ತಿಯಿಂದ. ಹಾಗಾದರೆ, ನೈಜ ಕಥೆಯೇನು? ಏನಿದು ಅನ್ಯಾಯ? ಮಹಾರಾಜನಿಗೆ ಯಾಕೀ ಆಕ್ರೋಶ? ಎಲ್ಲವೂ ಸೇರಿ ಭಾವನೆಗಳ ಅನಾಮತ್ತಾಗಿ ಆಪೋಶನ ತೆಗೆದುಕೊಳ್ಳುವಂತಹ ಅಂತ್ಯವಿರುವ, ಸಮಾಜದ ನಡುವೆ ಸದ್ದಿಲ್ಲದೇ ನಿರಂತರವಾಗಿ ನಡೆಯುತ್ತಲೇ ಇರುವ ಭವಿಷ್ಯವ ಕೊಲ್ಲುವ ರಾಕ್ಷಸಿ ಪ್ರವೃತ್ತಿಗೆ ಹಿಡಿದ ಕನ್ನಡಿಯೇ ‘ಮಹಾರಾಜ’.
ಕನ್ನಡದ ಮಟ್ಟಿಗೆ ರಿವರ್ಸ್ ಸ್ಕ್ರೀನ್ ಪ್ಲೇ ಎಂದಾಗ ನೆನಪಾಗುವುದು ನಿರ್ದೇಶಕ ಸೂರಿ. ‘ಟಗರು’ ಮತ್ತು ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಗಳ ದೃಶ್ಯ ಜೋಡಣೆಯಲ್ಲಿರುವ ಹಾವು ಏಣಿಯಾಟ ‘ಮಹಾರಾಜ’ ಚಿತ್ರದ ಕಥೆಯ ಆತ್ಮ. ಇಲ್ಲಿ ಕಥೆ ಹೇಳುವ ಶೈಲಿಯೇ, ಇದು ವಿಭಿನ್ನ ಚಿತ್ರವಾಗಿ ಮೂಡಿಬರಲು ಕಾರಣ. ಹತ್ತು ಸಾಲುಗಳ ಕಥೆಯಲ್ಲಿ ಎಂಟನೇ ಸಾಲನ್ನು ಮೊದಲು ಹೇಳಿ, ಮೊದಲನೇ ಸಾಲನ್ನು ನಂತರ ಹೇಳುವ ಪರಿ ಕಥೆಗೆ ಕುತೂಹಲವ ಸೇರಿಸಲು ಯಶಸ್ವಿಯಾಗಿದೆ. ಅನಂತರ ಕೊನೆಯಲ್ಲಿ ಬರುವ ಭಾವುಕ ಸನ್ನಿವೇಶಗಳು ವೀಕ್ಷಕನ ಮನದಲ್ಲಿ ಚುಚ್ಚಿ ಉಳಿಯುವಂತೆ ಮಾಡುತ್ತದೆ. ಇಲ್ಲಿ ಕ್ರೈಮ್‌ನ ಸಮರ್ಥನೆಯಿಲ್ಲ. ಆದರೆ, ಅಮಾನವೀಯ ಕೃತ್ಯಗಳಲ್ಲಿ ಕೈ ತೊಳೆಯುವ ಮಂದಿಯ ಹಸ್ತವನ್ನು ಯಾರು ಕತ್ತರಿಸದಿದ್ದರೂ, ಕರ್ಮವೆಂಬುದು ಅದ್ಯಾವುದೋ ರೂಪದಲ್ಲಿ ಬಂದು ಶಿಕ್ಷಿಸುತ್ತದೆ ಎಂಬ ಇಶಾರೆಯಿದೆ. ಬಲೆಯೊಳಗೆ ಸಿಲುಕಿದ ಮೀನಿನಂತೆ, ಬೆಳಕಿಗೆ ಚುಂಬಿಸಲು ಬಂದು ತನ್ನ ಉಸಿರಿಗೆ ತಾನೇ ಸಂಚಕಾರ ತಂದುಕೊಳ್ಳುವ ಹುಳುವಿನಂತೆ ಪರರ ಬದುಕಿನ ಹಳಿ ತಪ್ಪಿಸುವ ಮಂದಿಯ, ಭವಿಷ್ಯಕ್ಕೆ ಪೂರ್ಣ ವಿರಾಮ ಬೀಳುವುದು ಕೆಟ್ಟ ಮಾದರಿಯಲ್ಲಿಯೇ ಎಂಬುದು ಚಿತ್ರದಲ್ಲಿ ಅಡಗಿರುವ ಸತ್ಯ.
ಈ ಕಥೆಯನ್ನು ಸರತಿ ಸಾಲಿನಲ್ಲಿ ನಿಲ್ಲುವ ಮಕ್ಕಳಂತೆ, ನೇರವಾಗಿ ಹೇಳಿದ್ದರೆ ಮಾಮೂಲಿ ಅನ್ನ ಸಾಂಬಾರ್ ಎನಿಸಿಕೊಳ್ಳುತಿತ್ತು. ಆದರೆ ಇದೊಂದು ಭೂರಿ ಭೋಜನವಾದದ್ದು ದೃಶ್ಯಗಳ ಹೊಲಿಯುವಿಕೆಯಿಂದ ಎಂದರೆ ಅತಿಶಯೋಕ್ತಿಯಲ್ಲ.
ಈ ಚಿತ್ರದಲ್ಲಿ ಕಾಡುವ ಇಬ್ಬರೆಂದರೆ ವಿಜಯ ಸೇತುಪತಿ ಮತ್ತು ಸಚನಾ ನಾಮಿದಾಸ್. ಜ್ಯೋತಿಯಾಗಿ ಸಚನಾ ನಾಟಕೀಯ ಅಭಿನಯದ ಮೊರೆ ಹೋಗದೆ, ಅಪ್ಪನೊಂದಿಗೆ ಮಗಳ ಬಂಧವನ್ನು ಸರಳವಾಗಿ, ನೈಜವಾಗಿ ತೋರ್ಪಡಿಸಿದ್ದಾರೆ. ಡೋಮಿನೇಟಿಂಗ್ ಅನ್ನುತ್ತಾರಲ್ಲ ಅದೇ ತೆರನಾದ ಮಗಳು ಜ್ಯೋತಿ, ಅಪ್ಪನಿಗೆ ಗದರುತ್ತಾ, ಸಣ್ಣ ವಯಸ್ಸಿಗೆ ದೊಡ್ಡ ಯೋಚನೆಗಳನ್ನು ಮಾಡುತ್ತ, ಆಗಾಗ ಕೋಪಿಸಿಕೊಳ್ಳುತ್ತಿದ್ದರೆ, ಅಪ್ಪನಾದವನಿಗೆ ಮನದೊಳಗೆ ಖುಷಿ, ಹೆಮ್ಮೆ… ಮಗಳ ಬೆಳವಣಿಗೆಯ ಕಂಡು. ಆತ ಮಾತನಾಡದಿದ್ದರೂ, ಮೌನದಲ್ಲಿಯೇ ಹಿಗ್ಗುತ್ತಾನೆ. ಅದೇ ಅಪ್ಪ ಅನ್ಯಾಯವಾದಾಗ ಸಿಡಿದೇಳುತ್ತಾನೆ. ಶಾಲೆಯಲ್ಲಿ ಮಗಳ ಮೇಲೆ ಹಾಕಿದ ಸುಳ್ಳು ಆರೋಪವ ವಿರೋಧಿಸಿ, ಮುಖ್ಯಸ್ಥರ ಕ್ಷಮೆಗೆ ಪಟ್ಟು ಬಿಡದೆ ಆಗ್ರಹಿಸುತ್ತಾನೆ. ಮುಂದೆ ಪೋಲೀಸು ಠಾಣೆಯಲ್ಲಿಯೂ ಕೂಡ. ಮಗಳ ಮೇಲಿನ ಕ್ರೂರತೆಗೆ ಸೇಡು ತೀರಿಸಿಕೊಳ್ಳುವವನೂ ಆಗುತ್ತಾನೆ. ಮತ್ತೆ ಮರಳಿ ತನ್ನ ಅಂಗಡಿಗೆ ಬಂದು ತಣ್ಣಗೆ ತನ್ನ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಾನೆ. ಹೀಗೆ ತರಹೇವಾರಿ ಮುಖವಾಡಗಳಿರುವ ಪಾತ್ರವನ್ನು, ಉತ್ಕೃಷ್ಟ ಮಟ್ಟದಲ್ಲಿ ನಿಭಾಯಿಸಿದ್ದು ವಿಜಯ ಸೇತುಪತಿಯವರ ಹಿರಿಮೆ-ಗರಿಮೆ. ಆಫ್‌ಬೀಟ್ ಪಾತ್ರಗಳು ಎಂದಾಗ ಫಹಾದ್ ಫಾಸಿಲ್‌ರೊಂದಿಗೆ ನೆನಪಾಗುವುದು ವಿಜಯ ಸೇತುಪತಿ. ‘ಗಾಂಗ್ಸ್ ಆಫ್ ವಾಸೇಪುರ್’ ಖ್ಯಾತಿಯ ನಿರ್ದೇಶಕ ಅನುರಾಗ್ ಕಶ್ಯಪ್ ಇಲ್ಲಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವೊಂದು ಚೂರು ಪಾರು ಋಣಾತ್ಮಕ ವಿಮರ್ಶೆಯಿಲ್ಲದೇ ಜನರ ಮನಸ್ಸನ್ನು ಆವರಿಸಿದೆ ಎಂದರೆ ನಿತಿಲ್ ಸ್ವಾಮಿನಾಥನ್ ಅವರ ಬರವಣಿಗೆಗೆ ಆ ಪ್ರಶಂಸೆ ಸಲ್ಲಬೇಕು. ಪ್ರತೀ ಫ್ರೇಮು ಕೂಡ ಮಾತಿನಲ್ಲೋ, ಮೌನದಲ್ಲೋ ಕಥೆಯ ಹೇಳಲು ಬಳಕೆಯಾಗಿದೆ. ನಮ್ಮ ನಾಡಿನ ಅಜನೀಶ್ ಲೋಕನಾಥ್‌ರ ಹಿನ್ನೆಲೆ ಧ್ವನಿ ಸಂಕಲನ ಚಿತ್ರದ ಪ್ರಭಾವ ವಲಯದಲ್ಲಿ ವೀಕ್ಷಕರನ್ನು ಸಿಲುಕಿಸಲು ಯಶಸ್ವಿಯಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಹೊಸಗಾಲದ ತಾಜಾ ಚಿಂತನೆಗಳು ಸೇರಿಕೊಂಡು, ಒಂದು ಉದ್ದೇಶವೆಂಬ ಪಂಚಾಂಗದ ಮೇಲೆ ಗಟ್ಟಿ ಕಥೆಯೊಂದನ್ನು ನಿರ್ಮಿಸಿದರೆ, ದೀರ್ಘಕಾಲದ ಬಾಳುವಿಕೆಯಲ್ಲಿ ಯಾವುದೇ ಅನುಮಾನವಿಲ್ಲ ಎಂಬುದನ್ನು ಸಾಬೀತುಪಡಿಸುವ ಚಿತ್ರವೇ ‘ಮಹಾರಾಜ’
ಮುಗಿಸುವ ಮುನ್ನ:
ಟಗರು ಚಿತ್ರದಲ್ಲಿ ಪೋಲೀಸ್ ಅಧಿಕಾರಿ ತನ್ನ ಗೆಳತಿಯ ತಂಗಿ ಹೊರಗೆ ಹೋಗಿ ಬರುತ್ತೇನೆಂದು ಹೇಳಿದಾಗ, ‘ಹುಷಾರು’ ಎನ್ನುತ್ತಾರೆ. ತಾನು ಪೋಲೀಸ್ ಆಗಿಯೂ ‘ಹುಷಾರು’ ಎನ್ನಬೇಕಾದ ಪರಿಸ್ಥಿತಿಯನ್ನು ತಂದಿರುವ ಸಮಾಜದ ಬಗ್ಗೆ ಅವರಿಗೆ ಖೇದವುಂಟಾಗುತ್ತದೆ. ಇಂದು ನಮ್ಮ ಮಗಳು ಎಷ್ಟು ಸುರಕ್ಷಿತವೆಂಬುದು ಪ್ರಶ್ನೆಯಾಗಿಯೇ ಉಳಿಸುತ್ತಿದೆ ಈ ಸಮಾಜ. ಅತ್ಯಾಚಾರಗಳು ಪತ್ರಿಕೆಗಳ ಒಳ ಪುಟದಲ್ಲಿ ಸಿಂಗಲ್ ಕಾಲಂ ಸುದ್ದಿಗಳಾಗುತ್ತಿವೆ. ಕೈಗಳಿಗೆ ಬಂದಿರುವ ಜಂಗಮವಾಣಿ ಮನಸ್ಸು ಕೆಡಿಸುತ್ತಿದೆ. ಮನುಷ್ಯರಾಗಲು ಇಲ್ಲಿ ಯಾರೂ ಇಷ್ಟಪಡುತ್ತಿಲ್ಲ. ಸುರಿವ ರಕ್ತ, ನೋವಿನ ಆರ್ತನಾದವನ್ನು ಸಂಭ್ರಮಿಸುವ ಜನರೂ ನಮ್ಮೊಳಗೇ ದ್ವಿಗುಣಗೊಳ್ಳುತ್ತಿದ್ದಾರೆ. ‘ಬದುಕಿ ಮತ್ತು ಬದುಕಲು ಬಿಡಿ’ ಎಂಬ ಮಾತು ಗಟ್ಟಿಯಾಗಿ ಕೇಳಿಸಬೇಕಿದೆ. ಮನುಷ್ಯನೆಂಬವ ತನ್ನ ದೌರ್ಬಲ್ಯಗಳನ್ನು, ಚಟಗಳನ್ನು ಇನ್ನೊಂದು ಅಮಾಯಕ ಜೀವದ ಮೇಲೆ ಹೇರುವ ಪರಿ ಪಾಠವೇ ಈ ಮಾನವ ಸಮಾಜದ ಬಹುದೊಡ್ಡ ಸೋಲು.
ಈ ಕಥನದಲ್ಲಿ, ಅಪರಿಚಿತರಿಂದ ಅತ್ಯಾಚಾರಕ್ಕೊಳಗಾಗುವ ಬಾಲಕಿ ‘ನಾನೇನು ತಪ್ಪು ಮಾಡಿದೆ? ಅವರು ಯಾಕೆ ಹೀಗೆ ಮಾಡಿದರು ನನಗೆ?’ ಎಂದು ಕೇಳುವಾಗ ಉತ್ತರ ಸಿಗುವುದಿಲ್ಲ. ಒಟ್ಟಾರೆಯಾಗಿ, ಶಿಕ್ಷಿತರು ಹೆಚ್ಚಾಗುತ್ತಿದ್ದಾ ರೆಂದು ಹೇಳಬಹುದಷ್ಟೇ, ಹಲವು ಅರ್ಥಗಳಲ್ಲಿ…….
ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….