‘ಟಿ ಎಸ್ ಎಲಿಯಟ್ ಹೇಳುವ ಪ್ರತಿಭೆ ಮತ್ತು ಪರಂಪರೆ ಅಥವಾ ಪರಂಪರೆ ಮತ್ತು ಪ್ರತಿಬೆ ಒಂದನ್ನೊಂದು ನುಂಗಲು ಹೊರಟಿರುವ ಎರಡು ಹಲ್ಲಿಗಳ ಹಾಗೆ. ಯಾವುದು ತಿನ್ನುತ್ತಿರುವುದು, ಯಾವುದು ಸಾಯುತ್ತಿರುವುದು ಎಂದು ಗೊತ್ತಾಗುವುದಿಲ್ಲ. ಕನ್ನಡದ ದೊಡ್ಡ ಕಥೆಗಾರ್ತಿಯೊಬ್ಬಳು ಸುಳಿಯಲ್ಲಿ ಸಿಲುಕಿ ಮೃತಳಾದ ನದಿಯ ಪಕ್ಕದಲ್ಲೇ ಕುಳಿತು ಕನ್ನಡದ ಎಳೆಯ ಕಥೆಗಾರ ನಚಿಕೇತ ತನ್ನ ಹೊಸ ಕಥೆಗಳನ್ನು ಬರೆಯುತ್ತಿದ್ದಾನೆ. ಇದಲ್ಲವೇ ಪ್ರತಿಭೆ ಮತ್ತು ಪರಂಪರೆಯ ಅತ್ಯುತ್ತಮ ಉದಾಹರಣೆ’
ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಸುಳಿಹೊಳೆ ಕಥಾಧಾಮ” ನಿಮ್ಮ ಓದಿಗೆ

ಸುಳಿಹೊಳೆ ಕಥಾಧಾಮದ ಒಳಗೆ ಹಾಲಿನಂತೆ ಹರಡಿದ್ದ ಬೆಳದಿಂಗಳಿನ ಬೆಳಕು, ತಲೆಯೊಳಗೆ ಉಯ್ಯಾಲೆ ತೂಗುತ್ತಿದ್ದ ಅದು ಯಾವುದೋ ಮಾಯಕದಂತಹ ಪಾನೀಯ. ಟೇಬಲಿನ ಮೇಲೆ ಹೊಳೆಯುತ್ತಿರುವ ಹಲವು ಖಾದ್ಯಗಳು. ಗೋಡೆಯ ಮೇಲೆ ಚೆಗೆವಾರಾ, ಗಾಂಧಿ, ಟಾಲ್ ಸ್ಟಾಯ್, ಮಾವೋ, ಮಾರ್ಕ್ಸ್, ಟಾಗೂರ್, ಕುವೆಂಪು, ಅರುಂದತಿಯರ ಫೋಟೋಗಳು. ಗೋಡೆಯ ನಡುವೆ ದೊಡ್ಡ ನಗ್ನ ನಿತಂಬಗಳನ್ನು ಎದೆಯ ಮೇಲೆ ಹರಿಯಬಿಟ್ಟು ಮಲಗಿರುವ ಪಿಕಾಸೋನ ವರ್ಣ ಚಿತ್ರದ ಪ್ರಿಂಟೆಡ್ ಪ್ರತಿ. ಎಲ್ಲಿಂದಲೋ ತೇಲಿ ಬರುತ್ತಿರುವ ಮಂದ್ರ ಸಂಗೀತ……

ಆ ಇರುಳು ಕಥೆ ಹೇಳುವ ಸರದಿ ನನ್ನದಾಗಿತ್ತು. ಏನು ಕಥೆ ಹೇಳುವುದು ಎಂದು ಗೊತ್ತಾಗದೆ ಒರಿಯಾದ ಕಥೆಗಾರ್ತಿ ಚೆಂಗುಲಾಬಿಯ ಕುಡಿದ ಕಣ್ಣುಗಳನ್ನು ನೋಡುತ್ತಾ ಕೂತಿದ್ದೆ.

ಆಕೆಯ ಕುಡಿದ ಕಣ್ಣುಗಳು ಕಮ್ಯೂನಿಸ್ಟ್ ಪತಾಕೆಯ ನಕ್ಷತ್ರಗಳಂತೆ ಹೊಳೆಯುತ್ತಿದ್ದವು. ಆಕೆಗೆ ಚೆಂಗುಲಾಬಿ ಅನ್ನುವುದು ನಾನಿಟ್ಟ ಅಡ್ಡ ಹೆಸರು. ಆಕೆಯ ನಿಜವಾದ ಹೆಸರು ಹೇಮಲತಾ . ಈಕೆಯ ಒಂದೊಂದು ಕಥೆಯಲ್ಲೂ ರಕ್ತ, ನೋವು, ಹೋರಾಟ, ಸಾವು ವೋಲ್ಗಾ ನದಿಯಂತೆ ಹರಿಯುತ್ತಿತ್ತು. ಅದು ಬಿಟ್ಟರೆ ನಗರಗಳ ಎಲ್ಲ ಹುಡುಗಿಯರ ಹಾಗೆ ಬಿಡುಬೀಸಾಗಿದ್ದ ತರುಣಿ. ಮದುವೆ ಎನ್ನುವುದು ಮನುಷ್ಯ ಜನ್ಮಕ್ಕೆ ಅಂಟಿದ ಶಾಪ ಅನ್ನುವುದು ಆಕೆಯ ಗಟ್ಟಿಯಾದ ನಂಬಿಕೆ.

ಆಕೆಯ ಕಥೆ ಹೇಳುವ ಸರದಿ ಬಂದಾಗ ಭುವನೇಶ್ವರದಲ್ಲಿರುವ ತನ್ನ ಎರಡು ಬೆಡ್ ರೂಮಿನ ಫ್ಲಾಟಿನಲ್ಲಿ ಹೆಚ್ಚು ಕಡಿಮೆ ವಾರಕ್ಕೊಂದಾದರೂ ಬಾರಿ ನಡೆಯುತ್ತಿದ್ದ ತನ್ನ ಅಪ್ಪ ಅಮ್ಮನ ವಾರ್ಡ್ ರೋಬ್ ಜಗಳವನ್ನು ರಸವತ್ತಾಗಿ ಬಣ್ಣಿಸಿದ್ದಳು. ಅಪ್ಪ ನಿವೃತ್ತ ರೈಲ್ವೆ ನೌಕರ. ಅಮ್ಮ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಕ್ಯಾಷಿಯರ್. ಇಬ್ಬರೂ ತಾರುಣ್ಯದಲ್ಲಿ ಕ್ರಾಂತಿಕಾರಿಗಳಾಗಿದ್ದಾಗ ಪ್ರೀತಿಸಿ ಮದುವೆಯಾದವರು. ಬರುಬರುತ್ತಾ ಅವರಿಗೆ ಸಂಸಾರದಲ್ಲಿ ರಸ ಕಡಿಮೆಯಾಗಿ ಇಬ್ಬರೂ ಎಡ ಚಳುವಳಿಯ ಬೇರೆ ಬೇರೆ ಬಣಗಳಾಗಿ ಇಬ್ಬಾಗವಾದರು. ಈಗ ಅವರಿಬ್ಬರ ಸೈದ್ಧಾಂತಿಕ ಕಲಹಕ್ಕೆ ಬಲಿಯಾಗುವುದು ಮನೆಯ ಕಪಾಟುಗಳ ಒಳಗಿರುವ ಬಟ್ಟೆಗಳು. ಇಬ್ಬರೂ ಸಿಟ್ಟಲ್ಲಿ ಕೂಗಾಡುತ್ತಾ ಒಬ್ಬರು ಇನ್ನೊಬ್ಬರ ಬಟ್ಟೆಗಳನ್ನು ಎತ್ತಿ ಚೆಲ್ಲಾಪಿಲ್ಲಿಯಾಗಿ ಕೋಣೆಯ ತುಂಬೆಲ್ಲಾ ಬಿಸಾಕುತ್ತಾರಂತೆ. ಆಮೇಲೆ ಮೌನವಾಗಿ ಒಬ್ಬರೂ ಇನ್ನೊಬ್ಬರ ಬಟ್ಟೆಗಳನ್ನು ಕಪಾಟಿನೊಳಕ್ಕೆ ಜೋಡಿಸಿಡುತ್ತಾರಂತೆ. ಮೊದಲು ಇವಳು ಸಣ್ಣವರಿದ್ದಾಗ ಅವರಿಬ್ಬರೂ ಹೀಗೆ ಜಗಳವಾಡುತ್ತಾ ಮನೆಯ ಸಾಕು ಬೆಕ್ಕನ್ನು ಒಬ್ಬರಿನ್ನೊಬ್ಬರ ಮೇಲೆ ಬಿಸಾಕುತ್ತಿದ್ದರಂತೆ. ನಿದ್ದೆ ಬಾರದೆ ಕಣ್ಣು ಬಿಟ್ಟುಕೊಂಡು ಮಲಗಿದ್ದವಳ ತಲೆಯ ಮೇಲೆ ಕಿರುಚಿಕೊಂಡು ಅತ್ತ ಇತ್ತ ಹಾರಾಡುತ್ತಿದ್ದ ಮುದ್ದಿನ ಸಾಕು ಬೆಕ್ಕು. ಆಗ ಆಗುತ್ತಿದ್ದ ಜಗಳದ ಕಾರಣ ಸಿದ್ಧಾಂತವಾಗಿರಲಿಲ್ಲವಂತೆ. ಅದು ಲೈಂಗಿಕ ಕಾರಣವಾಗಿತ್ತಂತೆ.

ಅವಳು ಹೇಳಿದ ಲೈಂಗಿಕ ಕಥೆಯೊಳಗೆ ಹಾರಾಡುತ್ತಿದ್ದ ಬೆಕ್ಕುಗಳು ಕುಡಿದಿದ್ದ ನನ್ನ ತಲೆಯೊಳಗೆ ಅತ್ತಿಂದಿತ್ತ ಜಿಗಿಯುತ್ತಿದ್ದವು. ಆಕೆಯಾದರೋ ಅಗಲವಾಗಿ ಬಾಯಿ ತೆರೆದು ಆಕಳಿಸಿ ಎದೆಯನ್ನು ಮುಂದೆ ತಂದು ಮೈಮುರಿದಳು. ಇದಂತೂ ನನ್ನ ಈ ಇಳಿ ವಯಸ್ಸಿನ ಎದೆಯೊಳಗೆ ಬೆಂಕಿ ಹೊತ್ತಿಸುವ ಆಕೆಯ ಹುನ್ನಾರ. ಹುಷಾರಾಗಿರಬೇಕು ಎಂದು ಅವಳ ಅಗಲವಾದ ಕಣ್ಣುಗಳಿಂದ ನನ್ನ ಕಣ್ಣುಗಳನ್ನು ಕಿತ್ತು ಹೊರತೆಗೆದು ಗೋಡೆಯ ನಡುವಿನ ಪಿಕಾಸೋ ಹೆಂಗಸಿನ ಕಡೆ ಮಿದುಳನ್ನು ಜಾಗೃತಗೊಳಿಸಿದೆ..

‘ಹಾರುತ್ತಿರುವ ಈ ಬೆಕ್ಕಿನ ಪ್ರತಿಮೆ ಆಧುನಿಕೋತ್ತರ ಭಾರತೀಯ ಕಥಾ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನೇ ನೀಡಬಲ್ಲದು’ ಮಲಯಾಳೀ ಕಥೆಗಾರ ಉಣ್ಣಿಕೃಷ್ಣನ್ ಉಪ್ಪಿನಕಾಯಿ ನೆಕ್ಕಿಕೊಂಡು ಬಿಕ್ಕಳಿಸಿದ್ದ. ಗಹನವಾದ ಏನು ಹೇಳುವಾಗಲೂ ಇವನಿಗೆ ತಪ್ಪದೇ ಬರುವ ಬಿಕ್ಕು. ‘ಇವನು ಮಲಯಾಳಂ ಕಥಾ ಸಾಹಿತ್ಯದ ಒಂದು ದೊಡ್ಡ ಬಿಕ್ಕಟ್ಟು’ ನಾನು ಪಕ್ಕದಲ್ಲಿ ಕುಳಿತಿರುವ ನಚಿಕೇತನ ಕಿವಿಯಲ್ಲಿ ಲೊಚಗುಟ್ಟುತ್ತೇನೆ. ಇದೀಗ ಹೊಸದಾಗಿ ಕುಡಿಯಲು ಕಲಿತಿರುವ ಕನ್ನಡದ ಕಥೆಗಾರ ಕಂದ ಈ ನಚಿಕೇತ. ಈತನ ಕಥೆಗಳನ್ನು ಓದಿದ ಇಳಿವಯಸ್ಸಿನ ವಿಮರ್ಶಕರೊಬ್ಬರು ಕನ್ನಡದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ತಲ್ಲಣಗಳಿಗೆ ಧ್ವನಿಯಾಗುತ್ತಿರುವ ತರುಣ ಕಥೆಗಾರ ಎಂದು ಈತನನ್ನು ರೈಲು ಹತ್ತಿಸಿರುವ ಕಾರಣ ಈತ ಆ ರೈಲು ಹತ್ತಿ ಬಹಳ ದೂರ ಹೊರಟು ಬಿಟ್ಟಿದಾನೆ. ನಾನು ಆಗಾಗ ಈತನನ್ನು ರೈಲಿನಿಂದ ಇಳಿಸಲು ನೋಡುತ್ತಿರುತ್ತೇನೆ. ತಾನು ಸಲಿಂಗ ಪ್ರೇಮಿಯೇ, ಉಭಯ ಕಾಮಿಯೇ, ವಿಲಕ್ಷಣ ಪ್ರೇಮಿಯೇ ಎಂಬ ಹುಡುಕಾಟದಲ್ಲಿರುವ ಈತ ಒಮ್ಮೊಮ್ಮೆ ತುಟಿಗೆ ಬಣ್ಣ ಬಳಿದುಕೊಳ್ಳುತ್ತಾನೆ. ಒಮ್ಮೊಮ್ಮೆ ತೊಡೆಯ ಬಳಿ ಸಣ್ಣಗೆ ಹರಿದ ಶುರಾಲು ಹಾಕಿಕೊಂಡಿರುತ್ತಾನೆ. ಒಮ್ಮೊಮ್ಮೆ ಮೊಲದ ಕಿವಿಯ ಹಾಗಿರುವ ಉಣ್ಣೆಯ ಟೋಪಿ ಹಾಕಿಕೊಂಡು ಓಡಾಡುತ್ತಾನೆ.

‘ನಾನು ಏನೆಂದು ಅರಿಯುವ ಪ್ರಯತ್ನವೇ ನನ್ನ ಬರವಣಿಗೆ’ ಎನ್ನುತ್ತಿರುತ್ತಾನೆ. ಈ ಕುರಿತು ಬಹಳಷ್ಟು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಾತನಾಡಿದ್ದಾನೆ. ಅವನು ಹೋದಲ್ಲೆಲ್ಲ ಈ ಇಳಿವಯಸ್ಸಿನ ವಿಮರ್ಶಕರೂ ಹದ್ದಿನಂತೆ ಹಿಂಬಾಲಿಸುತ್ತಾರೆ. ನಾನು ಕಂಡುಹಿಡಿದ ಈ ಪ್ರತಿಭೆಯನ್ನು ಬೇರೆ ಯಾರೂ ವಿಮುಖಗೊಳಿಸಬಾರದು ಎನ್ನುವುದು ಅವರ ಕಾಳಜಿ.

‘ಅಲ್ಲ ಮಾರಾಯ ನೀನು ಯಾರೆಂದು ನೀನು ಅರಿಯುವುದು ಯಾಕೆ? ಉಳಿದವರು ಅರಿತರೆ ಸಾಲದೇ?ʼ ಎಂದು ನಾನು ಕಿಚಾಯಿಸುತ್ತೇನೆ.

ನಚಿಕೇತ ಕಣ್ಣರಳಿಸಿ ನೋಡುತ್ತಾನೆ. ನಚಿಕೇತ ಹಾಗೆ ಕಣ್ಣರಳಿಸಿದಾಗ ನನಗೆ ನನ್ನ ಮಗನ ನೆನಪಾಗಿ ಎದೆಯೊಳಗೆ ನದಿಯೊಂದು ಹರಿದಂತಾಗುತ್ತದೆ.

‘ನೋಡು ಮಾರಾಯ, ಬಾಲ್ಯಕಾಲದಲ್ಲಿ ನಿನ್ನ ಹಾಗೇ ನಾನೂ ನಾನು ಯಾರೆಂದು ಹುಡುಕುತ್ತಿದ್ದೆ. ಆ ಹುಡುಕಾಟದ ಪ್ರಯತ್ನದಲ್ಲಿ ನನ್ನ ಬಾಲ್ಯಕಾಲದ ಗೆಳೆಯನ ಚಡ್ಡಿ ಬಿಚ್ಚಲು ಹೊರಟಿದ್ದೆ. ಅದನ್ನು ನೋಡಿದ ನನ್ನ ಪಪ್ಪ ನಾಗರ ಬೆತ್ತದಿಂದ ನನ್ನ ಕುಂಡೆಗೆ ಬಾರಿಸಿದ್ದರು. ಹಾಗಾಗಿ ನಾನು ಗೇ ಆಗಲಿಲ್ಲ. ಅಕಸ್ಮಾತ್ ಪಪ್ಪ ಹಾಗೆ ಕುಂಡೆಗೆ ಬಾರಿಸಿರದಿದ್ದರೆ ವಿಮರ್ಶಕರು ಇದೇ ಕೆಲಸವನ್ನು ಮಾಡುತ್ತಿದ್ದರು. ಹಾಗಾಗಿ ನನ್ನ ಕುಂಡೆ ಬಚಾವಾಯಿತು. ನೀನೂ ಆದಷ್ಟು ಬೇಗ ನಿನ್ನದನ್ನು ರಕ್ಷಿಸಿಕೋ’ ಎಂದು ಗಹಗಹಿಸಿ ನಕ್ಕಿದ್ದೆ.

ಅವನು ಅವಮಾನದಲ್ಲಿ ವ್ಯಗ್ರನಾಗಿ ನೋಡಿದ್ದ.

ಒಂದು ತಲೆಮಾರಿನ ಕಥಾ ಅಭಿವ್ಯಕಿಯನ್ನು ನಾನು ಹೀಗೆ ಬೆತ್ತ ಮತ್ತು ಕುಂಡೆಯ ಪ್ರತಿಮೆಯ ಮೂಲಕ ಭಗ್ನಗೊಳಿಸಿದ್ದು ಎಳೆಯನಾದ ಆತನಿಗೆ ಇಷ್ಟವಾಗಿರಲಿಲ್ಲ.
ಹತ್ತಿರದಿಂದ ಎದ್ದು ದೂರ ಹೋಗಿ ಕುಳಿತಿದ್ದ.
ಬಹುಶಃ ಕೊಳಕು ಮನುಷ್ಯ ಅಂದುಕೊಂಡಿರಬೇಕು.

ಏನು ಮಾಡುವುದು ಕೊಂಚ ಹೆಚ್ಚು ಕುಡಿದಾಗ ಹೀಗೆ ಗಹಗಹಿಸುವುದು ಮತ್ತು ವಿಲಕ್ಷಣವಾಗಿ ಮಾತನಾಡುವುದು ನನ್ನ ಚಾಳಿ.

ನಚಿಕೇತನೂ ನನ್ನ ಹಾಗೆಯೇ ಮಲೆನಾಡಿನ ಕಾಫಿ ತೋಟದಲ್ಲಿ ಬೆಳೆದವನು. ಸರಕಾರದ ವಿದ್ಯಾರ್ಥಿ ವೇತನ ಪಡೆದು ದೆಹಲಿಯಲ್ಲಿ ಅಂತರಾಷ್ಟ್ರೀಯ ಸಂಬಂಧ ಓದಲು ಹೋಗಿ ಅರ್ಧಕ್ಕೆ ಬಿಟ್ಟು ಬಂದವನು. ರಾಜಕೀಯ ಮಾಡಬೇಕು ಅಂದುಕೊಂಡಿದ್ದವನು ಬರೆಯಲು ಶುರುಮಾಡಿದ್ದಾನೆ. ಯಾವಾಗಲೂ ಹೊಳಪುಗಣ್ಣುಗಳ ಹುಡುಗ ಹುಡುಗಿಯರು ಆತನ ಸುತ್ತ ಜೇನುಹುಳಗಳಂತೆ ಮುತ್ತಿಕೊಂಡಿರುತ್ತಾರೆ.

ನನ್ನ ಪ್ರಾಯದಲ್ಲಿ ಹೀಗೆ ಯಾರಾದರೂ ಹುಡುಗಿಯರು ಹತ್ತಿರ ಬಂದಿದ್ದರೆ ಆ ಇರುಳೆಲ್ಲ ಪ್ರೇಮ ನೈರಾಶ್ಯದಿಂದ ನಿದ್ದೆ ಬಾರದೆ ಹೊರಳಾಡುತ್ತಿದ್ದೆ. ಆದರೆ ಈ ನಚಿಕೇತ ಹಾಗೆ ಅಂಟಿಕೊಂಡ ಪ್ರತಿಯೊಂದು ಸಂಬಂಧಗಳನ್ನೂ ಕೊಯಿದು ಕತ್ತರಿಸಿ ತಿರುಗಾ ಮುರುಗಾ ತಿರುಗಿಸಿ ಒಂದೊಂದನ್ನೂ ಒಂದೊಂದು ಉಪ್ಪಿನ ಕಾಯಿಯ ಜಾಡಿಯಲ್ಲಿ ಮುಚ್ಚಿಟ್ಟ ಹಾಗೆ ಮುಚ್ಚಿಟ್ಟು ತಾನು ಮಾತ್ರ ಮುಗುಂ ಆಗಿರುತ್ತಾನೆ.

******

ಸುಳಿಹೊಳೆ ಕಥಾಧಾಮದ ಒಳಗೆ ಎಲ್ಲರೂ ಇನ್ನಷ್ಟು ನಿರಾಳವಾಗುತ್ತಿದ್ದಾರೆ. ಯಾರೋ ಕದ ತೆರೆದಿಟ್ಟಿರಬೇಕು. ಬೆಳದಿಂಗಳ ಜೊತೆ ಕುಳಿರ್ಗಾಳಿಯೂ ಒಳ ಬರುತ್ತಿದೆ. ಸುಳಿಹೊಳೆಯ ಮೇಲಿಂದ ಹಾದು ಬರುತ್ತಿರುವ ಶೀತಲ ತಂಗಾಳಿ. ಬೆಳದಿಂಗಳ ಜೊತೆ ತೇಲಿ ಬರುತ್ತಿರುವ ಹಿತವಾದ ತಂಬಾಕಿನ ಪರಿಮಳ. ಬಹುಶಃ ಹರಿಜಿತ್ ಹೊರಗೆ ಸಿಗರೇಟು ಸೇದುತ್ತಿರಬೇಕು.

ಹರಿಜಿತ್ ಆಂಗ್ಲಭಾಷೆಯಲ್ಲಿ ಬರೆಯುತ್ತಿರುವ ಪಂಜಾಬಿ ಕಥೆಗಾರ. ಕೆನಡಾದಿಂದ ನೇರವಾಗಿ ಬಂದಿದ್ದಾನೆ. ವಾಪಾಸು ಹೋಗುವಾಗ ಪಂಜಾಬಿಗೆ ತೆರಳಿ ತನ್ನ ಪೂರ್ವಜರು ಸ್ವಚ್ಛ ಮಾಡುತ್ತಿದ್ದ ಮಲದ ಗುಂಡಿಗಳನ್ನು ನೋಡಿ ಹೋಗಬೇಕು ಎಂದುಕೊಂಡಿದ್ದಾನೆ. ವಿಶಾಲಕ್ಕೆ ಹರವಾದ ಎದೆಯ ತಲೆಯ ತುಂಬ ಜಟೆಯಂತಹ ಮುಡಿ ಬೆಳೆಸಿಕೊಂಡಿರುವ ಈತ ಕೆನಡಾದ ಇರುಳ ಕ್ಲಬ್ ಒಂದರಲ್ಲಿ ಸಾಕ್ಸೋಫೋನ್ ನುಡಿಸುತ್ತಾನಂತೆ. ಉಳಿದ ಹೊತ್ತಿನಲ್ಲಿ ಬರೆಯುತ್ತಾನಂತೆ.

‘ಕಥೆಗೂ ಕಥೆಗಾರನ ಬದುಕಿಗೂ ಸಂಬಂಧವಿಲ್ಲ’ ಅನ್ನುತ್ತಾನೆ ಆತ. ‘ಒಂದು ವೇಳೆ ನೀನು ಭೌತಶಾಸ್ತ್ರದಲ್ಲಿ ಪ್ರಬಂಧ ಮಂಡಿಸುತ್ತಿರುವೆ ಅಂದಿಟ್ಟುಕೋ. ನಿನ್ನ ಹುಟ್ಟು ಬಾಲ್ಯ ಹಸಿವು ಸಂಕಟ ಇದೆಲ್ಲವನ್ನೂ ಅಲ್ಲಿ ಎಲ್ಲಿ ತರುತ್ತೀಯಾ? ತರುವುದಿಲ್ಲ ಅಲ್ಲವೇ. ಹಾಗೇ ಬರಹ ಕೂಡಾ’ ಅನ್ನುತ್ತಾನೆ. ಈತನ ಇಂತಹ ಖಡಕ್ ಮಾತುಗಳಿಂದಲೇ ಇರಬೇಕು ಹೇಮಲತಾ ಆತನಿಗೂ ಈಗ ಹತ್ತಿರವಾಗಿದ್ದಾಳೆ. ಇಬ್ಬರೂ ಆಗಾಗ ಬರಹದ ನಡುವೆ ಹೊರ ಹೋಗಿ ಸುಳಿಹೊಳೆಯ ದಡದಲ್ಲಿ ಸಿಗರೇಟು ಸೇದಿ ಬರುತ್ತಾರೆ, ಇಬ್ಬರೂ ಹೆಗಲಿಗೆ ಹೆಗಲು ತಾಗಿಸಿ ನಡೆಯುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರುತ್ತಾರೆ.

ಮಲಯಾಳಿ ಕಥೆಗಾರ ಉನ್ನಿಕೃಷ್ಣನ್‌ಗೆ ಇದು ಒಂದು ಚೋದ್ಯದ ಮತ್ತು ಅಸೂಯೆಯ ವಿಷಯ. ‘ಆತ ಬದುಕಿಗೂ ಬರಹಕ್ಕೂ ಸಂಬಂಧವಿಲ್ಲ ಎನ್ನುತ್ತಾನೆ. ಆದರೆ ಹಾಗೆ ಹೇಳುವವನು ತನ್ನ ಪೂರ್ವಜರು ಸ್ವಚ್ಛಗೊಳಿಸುತ್ತಿದ್ದ ಮಲದ ಗುಂಡಿಗಳನ್ನು ಯಾಕೆ ನೋಡುತ್ತಿದ್ದಾನೆ. ಇದೇ ನನಗೆ ಚೋದ್ಯವಾಗುತ್ತಿರುವುದು’ ಎನ್ನುತ್ತಾನೆ.

‘ಅದು ಹೆಗೆಲ್ ಹೇಳುವ ವಿರೋದಾಭಾಸ ಎಂಬ ತತ್ವ’ ಹೆಗೆಲ್ ಬಿಗೆಲ್ ಮಾರ್ಕ್ಸ್ ಗ್ರೀಕ್ಸ್ ಏನೂ ಓದಿಕೊಳ್ಳದ ನಾನು ಉಣ್ಣಿಕೃಷ್ಣನ ಬಳಿ ಓಳು ಬಿಡುತ್ತೇನೆ. ಎಂತಹ ಸತ್ಯದ ಮಾತು ಎಂಬಂತೆ ಆತ ನನ್ನನ್ನು ಅಪ್ಪಿಕೊಳ್ಳುತ್ತಾನೆ. ಆತನಿಗೆ ಓದಿಕೊಂಡವರನ್ನು ಕಂಡರೆ ಹೆದರಿಕೆ ಮತ್ತು ಗೌರವ. ಏಕೆಂದರೆ ಅವನು ಏನೂ ಓದಿಕೊಳ್ಳುವುದಿಲ್ಲ. ಬಾಗಿಲು ಹಾಕಿಕೊಂಡು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಸುದ್ದಿ ಚಾನೆಲ್‌ಗಳನ್ನು ನೋಡುತ್ತಾನೆ. ಮತ್ತು ತಿಂಗಳುಗಟ್ಟಲೆ ಕುಳಿತು ಕಥೆ ಕಾದಂಬರಿಗಳನ್ನು ಬರೆಯುತ್ತಾನೆ.

‘ನಾನು ಮನೆಯಲ್ಲಿ ಕುಡಿಯುವುದಿಲ್ಲ ಮತ್ತು ಸೇದುವುದಿಲ್ಲ. ಏಕೆಂದರೆ ಹಾಗೇನಾದರೂ ಮಾಡಿದರೆ ನನ್ನ ಹೆಂಡತಿ ನಾಯಿಗೆ ಬೈದ ಹಾಗೆ ಬಯ್ಯುತ್ತಾಳೆ’ ಎಂದು ಯಾವುದೇ ಎಗ್ಗಿಲ್ಲದೆ ಸತ್ಯ ಹೇಳುತ್ತಾನೆ.

‘ನಾನು ನಿಮ್ಮ ಸಂತೋಷಕ್ಕಾಗಿ ಕುಡಿಯುತ್ತೇನೆ’ ಎಂದು ಮತ್ತಷ್ಟು ಸುರಿದುಕೊಳ್ಳುತ್ತಾನೆ. ಕುಳಿತಲ್ಲೇ ನಿದ್ದೆ ಹೋಗುತ್ತಾನೆ.

ನಚಿಕೇತ ನಿದ್ದೆಗೆ ಜಾರಿದ ಉಣ್ಣಿಕೃಷ್ಣನ ತೋಳುಗಳನ್ನು ಎತ್ತಿ ಮಗುವನ್ನು ನಡೆಸಿಕೊಂಡು ಹೋಗುವಂತೆ ಮಹಡಿಯ ಮೆಟ್ಟಿಲನ್ನು ಹತ್ತಿಸಿ ಆತನ ಕೋಣೆ ತಲುಪಿಸಿ ಕೆಳಗಿಳಿದು ಬರುತ್ತಾನೆ. ಏರು ಜವ್ವನಿಗನಂತಹ ಆತನ ಬಲಿಷ್ಟ ತೋಳುಗಳು. ಹಿಂದಕ್ಕೆ ಬಾಚಿದ ಕಪ್ಪಗಿನ ಆತನ ತಲೆಕೂದಲು. ಆ ಬೆಳದಿಂಗಳಿಗೆ ಹೊಳೆವ ಅವನ ಕಣ್ಣುಗಳು ಈ ಹುಡುಗ ರೂಪದರ್ಶಿಯಾಗುವ ಬದಲು ಕಥೆಗಾರ ಯಾಕಾದ.

ನಚಿಕೇತನನನ್ನು ನೋಡಿದಾಗಲೆಲ್ಲ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಮಗನ ನೆನಪಾಗುತ್ತದೆ. ಬಾಟಲಿಯಲ್ಲಿ ಉಳಿದುಕೊಂಡ ಅಷ್ಟನ್ನೂ ಗ್ಲಾಸಿಗೆ ಬಗ್ಗಿಸಿ ಆ ಕುಳಿರಿನ ಇರುಳಿನ ಚಂದ್ರನ ಬೆಳಕಲ್ಲಿ ಸುಳಿಹೊಳೆ ಹರಿಯುವ ಸದ್ದು ಕೇಳಿಸುವತ್ತ ನಡೆಯತೊಡಗುತ್ತೇನೆ.

ಸುಳಿಹೊಳೆಯ ಬದಿಯ ಈ ಕಥಾಧಾಮದಲ್ಲಿ ವರ್ಷಕ್ಕೊಂದು ಬಾರಿ ಹೇಮಂತ ಋತುವಿನಲ್ಲಿ ಒಂದು ತಿಂಗಳ ಈ ಕಥಾಕೂಟ ನಡೆಯುತ್ತದೆ. ಇದೇ ಸುಳಿಹೊಳೆಯಲ್ಲಿ ನಡುಮಧ್ಯಾಹ್ನದ ಹೊತ್ತಲ್ಲಿ ಈಜಲು ಹೋಗಿ ದುರ್ಮರಣಕ್ಕೀಡಾದ ಕನ್ನಡದ ಹಿರಿಯ ಕಥೆಗಾರ್ತಿಯ ನೆನಪಿಗಾಗಿ ಪ್ರತಿ ವರ್ಷ ನಡೆಯುವ ಕಥಾಕೂಟ. ದೂರದೂರದ ದೇಶಭಾಷೆಗಳ ಕಥಾಕರ್ತೃಗಳು ಒಂದು ತಿಂಗಳು ಪಟ್ಟಾಗಿ ಕುಳಿತು ಅವರವರ ಭಾಷೆಗಳಲ್ಲಿ ಕಥೆ ಬರೆಯುತ್ತಾರೆ. ಬರಹಕ್ಕೆ ವಿರಾಮ ಕೊಟ್ಟು ತಮ್ಮ ತಮ್ಮ ಕೋಣೆಗಳಿಂದ ಹೊರಬರುತ್ತಿದ್ದಂತೆ ಅಡುಗೆ ಮನೆಯಿಂದ ಹಿತಕರವಾದ ಕಾಫಿಯ ಪರಿಮಳ ಹೊರಬರುತ್ತಿರುತ್ತದೆ.

ಉಪಾಹಾರದ ಮೇಜಿನ ಮೇಲೆ ಏನೆಲ್ಲ ಬೇಕೋ ಅವೆಲ್ಲ ಹರಡಿಕೊಂಡಿರುತ್ತವೆ.
ಮಧ್ಯಾಹ್ನವೂ ಸಂಜೆಯೂ ರಾತ್ರಿಯೂ ಹೀಗೆಯೇ ಇರುತ್ತವೆ.

ಈ ನಡುವಿನ ಸಮಯದಲ್ಲಿ ತಮ್ಮ ಕೋಣೆಗೆ ತೆರಳುವ ಕಥೆಗಾರರು ಬರೆಯಲು ಕೂರುತ್ತಾರೆ. ಇರುಳಿನ ಊಟದ ಮೊದಲು ಮಾತುಕತೆ ಹರಟೆ ಪಾನೀಯ ಊಟದ ನಂತರ ಒಬ್ಬೊಬ್ಬರು ಒಂದು ಕಥೆಯನ್ನು ಇಲ್ಲಿ ಹೇಳಬೇಕು. ಅದಾದ ಮೇಲೆಯೂ ಬರೆಯುವ ಹುರುಪು ಇರುವವರು ನಡು ಇರುಳಿನವರೆಗೂ ಬರೆಯುತ್ತಾರೆ. ಬರೆದು ಮುಗಿಸಿದ ಮೇಲೆ ಕುಳಿರ್ಗಾಳಿಯ ಸುಳಿಹೊಳೆ ತಟಾಕದ ಮೇಲೆ ಸಣ್ಣದೊಂದು ನಡಿಗೆ. ಆಮೇಲೆ ನಿದ್ದೆ ಹೋಗುವವರು ನಿದ್ದೆ ಹೋಗುತ್ತಾರೆ.

ಕೆಲವು ಕಥೆಗಾರರ ಕೋಣೆಯ ಬೆಳಕು ಬೆಳಗಿನವರೆಗೂ ನದೀಪಾತ್ರದ ಉದ್ದಕ್ಕೂ ಬಿದ್ದುಕೊಂಡಿರುತ್ತದೆ.
ನಾನೂ ಇರುಳೆಲ್ಲ ಎಚ್ಚರವಿರುತ್ತೇನೆ.
ಬಾಲ್ಯದ ಕಥಾ ಭೂತಗಳು ನನ್ನ ಮಿದುಳೊಳಕ್ಕೆ ಇಣುಕಲು ಶುರುಮಾಡುವುದೇ ನಡು ಇರುಳಿನ ನಂತರ.
ಈ ಬಾರಿ ಒಂದು ಅಕ್ಷರವನ್ನೂ ಬರೆಯಲಾಗದೆ ಸುಮ್ಮನೆ ಬಿದ್ದುಕೊಂಡಿರುತ್ತೇನೆ.

******

ಕಿವಿಯೊಳಗೆ ಈಗಲೂ ಮೊಳಗುವ ಬಾಲ್ಯದ ಇದೇ ಸುಳಿಹೊಳೆ. ಇದೇ ಹೊಳೆಯ ಇದೇ ತಿರುವಲ್ಲಿ ಬಿಡೆಯಿಲ್ಲದೆ ಈಜುತ್ತಿದ್ದ ಕಥೆಗಾರ್ತಿ. ಇದೇ ಹೊಳೆಯ ಸುಳಿಯಲ್ಲಿ ಮುಳುಗಿ ಹೆಣವಾಗಿ ಮೇಲೆದ್ದು ತೇಲಿಬಂದ ಕಥೆಗಾರ್ತಿ. ಕಥೆ ಎಂದರೇನೆಂದು ಗೊತ್ತಿಲ್ಲದ ಬಾಲ್ಯದ ಹಾಯಾದ ಕಾಲ. ಹಲವು ವರ್ಷಗಳ ನಂತರ ಇದೇ ಸುಳಿಯಲ್ಲಿ ಬಾಲ್ಯಕಾಲದ ದೋಸ್ತ ಜಗನ್ನಾಥ ಮುಳುಗಿ ಸತ್ತು ಹೋಗಿದ್ದ. ಮಗನೊಡನೆ ಒಬ್ಬನೇ ಬದುಕುತ್ತಿದ್ದ ಆತನ ತಾಯಿ ಕೌಸಲ್ಯಾ ಅಂಗನವಾಡಿಯ ಟೀಚರ್ ಆಗಿದ್ದಳು. ಕೌಸಲ್ಯಾಳನ್ನು ಆ ಊರಿಗೆ ವರ್ಗವಾಗಿ ಬಂದಿದ್ದ ಪೋಲೀಸ್ ರೈಟರ್ ಇಟ್ಟುಕೊಂಡಿದ್ದಾನೆ ಎಂದು ಸುದ್ದಿಯಾಗಿತ್ತು. ಇಟ್ಟುಕೊಳ್ಳುವುದು ಅಂದರೆ ಏನೆಂದು ಸರಿಯಾಗಿ ಇನ್ನೂ ಗೊತ್ತಿಲ್ಲದ ಕಾಲ.

ಯಾರೋ ಹುಡುಗರು ಬೆಳಗೆ ಬೇಗನೇ ಬಂದು ಜಗನ್ನಾಥ ಕೂರುವ ಡೆಸ್ಕಿನ ಮೇಲೆ ಒಂದು ಚಕ್ಕುಲಿಯ ತೂತದ ಒಳಗೆ ಒಂದು ಸಿಪ್ಪೆ ತೆಗೆದ ಬಾಳೆ ಹಣ್ಣು ಸಿಕ್ಕಿಸಿಟ್ಟು ಅದರ ಸುತ್ತ ಚಾಕ್ ಪೀಸಿನಲ್ಲಿ ತ್ರಿಕೋನ ಬರೆದಿಟ್ಟು ಹೋಗಿದ್ದರು.
ಜಗನ್ನಾಥ ಕ್ಲಾಸಿಗೆ ಬಂದವನು ಚೀಲವನ್ನೂ ಕೆಳಗಿಡದೆ ಎದ್ದು ಹೋಗಿದ್ದ.

ಅದೇ ಅಪರಾಹ್ನ ಸುಳಿಹೊಳೆಯ ಇದೇ ಸುಳಿಯೊಳಗಿಂದ ದೇಹವಾಗಿ ತೇಲಿಬಂದಿದ್ದ.
ಅಪರಿಮಿತ ಚೆಲುವಿನ ನದಿ. ಹೊಳೆವ ಬಿಸಿಲಲ್ಲಿ ನದಿಯ ಬಂಗಾರದ ಬಣ್ಣಕ್ಕೆ ಮುತ್ತಿಕ್ಕುವ ದುಂಬಿಗಳು. ನೀರಿಂದ ಮೇಲೆತ್ತಿದ ಜಗನ್ನಾಥ ಬಾಯಿಂದ ಬುರುಗಿನ ಹಾಗೆ ನೊರೆ ಹೊರಬರುತ್ತಿತ್ತು. ವಿಷ ಕುಡಿದು ಸುಳಿಗೆ ಹಾರಿದ್ದಾನೆ ಎಂದು ಜನರು ಆಡಿಕೊಳ್ಳುತ್ತಿದ್ದರು.

ಸುಳಿಗೆ ಸಿಕ್ಕು ಮುಳುಗಿ ಹೋದ ಕಥೆಗಾರ್ತಿಯ ಆತ್ಮ ಚರಿತ್ರೆ ಬರೆದವರು ನದಿಯಲ್ಲಿ ಸುಳಿಯೊಳಗಿಂದ ತೇಲಿಬಂದ ಆಕೆಯ ಮುಖ ಎಷ್ಟು ಪ್ರಶಾಂತವಾಗಿತ್ತು ಎಂದು ಬರೆದಿದ್ದರು. ಖ್ಯಾತ ಕವಿಯೊಬ್ಬರು ‘ಹಸಿರಲ್ಲಿ ಉಸಿರಾಗಿ ನೀರಲ್ಲಿ ಲಯವಾಗಿ ಪಂಚಭೂತಗಳಲ್ಲಿ ಒಂದಾದ ಮಾತೆ’ ಎಂದು ಕವಿತೆ ಬರೆದಿದ್ದರು.

*****

‘ಲಯವೂ ಇಲ್ಲ ಸೃಷ್ಟಿಯೂ ಇಲ್ಲ ಸಗಣಿಯೂ ಇಲ್ಲ. ನಿಮ್ಮ ಕನ್ನಡದ ಎಲ್ಲ ಕವಿಗಳೂ ಸಾಹಿತಿಗಳೂ ಸೇರಿಕೊಂಡು ನನ್ನ ಅಮ್ಮನ ಜೀವ ತೆಗೆದರು.’

ನದಿಯಲ್ಲಿ ಮುಳುಗಿ ಹೋದ ಕಥೆಗಾರ್ತಿಯ ಮಗ ಮಿಲಿಟರಿಯಲ್ಲಿ ಸೇನಾಧಿಕಾರಿಯಾಗಿ ನಿವೃತ್ತಿ ಹೊಂದಿರುವವರು ದೆಹಲಿಯ ಲಜಪತ್ ನಗರದ ತಮ್ಮ ಮನೆಯಲ್ಲಿ ಕುಳಿತು ನನಗೆ ವಿವರಿಸಿದ್ದರು. ಮನೆಯ ಹಜಾರದ ಗೋಡೆಯಲ್ಲಿ ಜೀವಂತ ತಾಯಿಯ ಹಾಗೆ ತೂಗುತ್ತಿರುವ ಕಥೆಗಾರ್ತಿಯ ವರ್ಣಚಿತ್ರ. ಪಕ್ಕದಲ್ಲೇ ತಾಯಿಯ ತಂದೆಯೂ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದ ಮಹಾಬಲ ಭಟ್ಟರ ಕಪ್ಪುಬಿಳುಪು ಚಿತ್ರ . ತಾಯಿಯ ಒಂದೇ ಒಂದು ಕಪ್ಪು ಬಿಳುಪು ಚಿತ್ರಕ್ಕೆ ತಮ್ಮ ನೆನಪಿನ ಬಣ್ಣಗಳನ್ನೂ ಸೇರಿಸಿ ವರ್ಣಚಿತ್ರಗಾರನಿಂದ ಬರೆಸಿ ಬಂಗಾರದ ಚೌಕಟ್ಟಿನೊಳಗೆ ನಗುತ್ತಿದ್ದ ಚಿತ್ರ. ಹಣೆಯಲ್ಲಿ ಅಷ್ಟು ದೊಡ್ಡ ಕುಂಕುಮ, ಬೈತಲೆಯಲ್ಲಿ ಸಿಂಧೂರ. ಕನ್ನಡ ಬಾರದ ಉತ್ತರ ಇಂಡಿಯಾದ ಅವರ ಮಡದಿ ಎಂದೂ ಇಲ್ಲದ ಹಾಗೆ ಇದ್ದಕ್ಕಿದ್ದಂತೆ ಭಾವುಕರಾಗುತ್ತಿರುವ ತಮ್ಮ ಪತಿಯನ್ನುಕಂಡು ಗಲಿಬಿಲಿಗೊಂಡಿದ್ದರು.

‘ಈತನನ್ನು ಗೊತ್ತಿಲ್ಲ ನಿನಗೆ. ನನ್ನ ಊರಿನಲ್ಲಿ ಬಹಳ ದೊಡ್ಡ ಮನುಷ್ಯ. ಕಥೆಗಾರ ಸಾಹಿತಿ ಸಿನೆಮಾಕ್ಕೆ ಹಾಡೂ ಬರೆಯುತ್ತಾನೆ. ಬಹಳ ದೊಡ್ಡ ಸ್ತ್ರೀ ಸೌಂದರ್ಯ ಅಭಿಮಾನಿ. ಎಲ್ಲ ಊರುಗಳಲ್ಲೂ ಗೆಳತಿಯರನ್ನು ಹೊಂದಿದ್ದಾನೆ. ಆದರೆ ಏನು ಮಾಡುವುದು ಒಳ್ಳೆಯ ಮನುಷ್ಯ. ಅದಕ್ಕಾಗಿಯೇ ಮನೆಯ ಒಳಗೆ ಬಿಟ್ಟುಕೊಂಡಿದ್ದೇನೆ’ಎಂದು ತಮಾಷೆ ಮಾಡುತ್ತಾ ಹಗುರವಾಗಿದ್ದರು. ಇರುಳು ಎಷ್ಟೋ ಸುತ್ತುಗಳ ಪಾನೀಯ ಮುಗಿಸಿದ ಮೇಲೆ ಎದ್ದು ನಿಂತು ಗಟ್ಟಿಯಾಗಿ ಆಲಂಗಿಸಿ ಮತ್ತೆ ಭಾವುಕರಾಗಿದ್ದರು.

‘ಊರಿಗೆ ಹಿಂತಿರುಗಿದ ಮೇಲೆ ಸತ್ಯವನ್ನು ಮುಚ್ಚಿಡದೆ ಬರೆ. ನನ್ನ ತಾಯಿಯ ಭ್ರಾಮಕ ಕಥೆಗಳನ್ನು ಭಾವುಕರಾಗಿ ಓದುವ ಕನ್ನಡದ ಓದುಗರಿಗೆ ತಾಯಿಯ ಪ್ರೀತಿ ಸಿಗದೆ ಬೆಳೆದ ಈ ಅನಾಥ ಬಾಲಕನ ಕ್ರೋಧ ಗೊತ್ತಾಗಲಿ ಎಂದು ಬೀಳ್ಕೊಟ್ಟಿದ್ದರು.

‘ಹೌದು ನದಿಯ ಅದೇ ಸುಳಿಯಲ್ಲಿ ನನ್ನ ಬಾಲ್ಯದ ಗೆಳೆಯ ಜಗನ್ನಾಥನೂ ತೇಲಿ ಬಂದಿದ್ದ. ಅದೇ ನದಿ, ಅದೇ ಬಂಡೆಗಳು ಅದೇ ಸುಳಿ, ಅದೇ ಕಾರಣಗಳು.’ ಅವರ ಎದುರು ನಾನೂ ಕಣ್ಣೀರಾಗಿದ್ದೆ. ನನಗೂ ಕಣ್ಣೀರು ಬರುತ್ತದೆ ಎಂದು ಬಹಳ ದಿನಗಳ ನಂತರ ಗೊತ್ತಾದ ದೆಹಲಿಯ ಇರುಳು ಅದು.

******

ಸ್ಫಟಿಕದಂತಹ ನದಿಯ ನೀರಲ್ಲಿ ತಿಂಗಳ ಬೆಳಕಲ್ಲಿ ಚೂಪು ಮೂತಿಯ ಜೋಡಿ ಮೀನುಗಳು ಚಲಿಸದೇ ತೇಲದೇ ನಿದ್ದೆ ಹೋಗಿದ್ದವು . ಸಣ್ಣದಿರುವಾಗ ಹೆಗಲ ಮೇಲೆ ಗ್ಯಾಸ್ ಲೈಟಿನ ಕಂದೀಲು ಎತ್ತಿಕೊಂಡು ಕೈಯಲ್ಲಿ ಮೀನು ಇರಿಯುವ ಬರ್ಜಿ ಹಿಡಿದುಕೊಂಡು ಮೌನವಾಗಿ ನಿದ್ದೆ ಹೋಗಿರುವ ಮೀನುಗಳನ್ನು ಇರಿಯುತ್ತ ಚೀಲದೊಳಗೆ ತುಂಬಿಸಿಕೊಂಡು ನದಿಯ ಉದ್ದಕ್ಕೆ ನಡೆಯುತ್ತಿದ್ದೆವು.

ಈ ಸುಳಿಯ ಬಂಡೆಯ ಬಳಿ ಬಂದಾಗ ನಮ್ಮ ಮೌನ ಇನ್ನಷ್ಟು ಹೆಪ್ಪುಗಟ್ಟುತ್ತಿತ್ತು. ಅಲ್ಲಿಂದ ಆದಷ್ಟು ವೇಗವಾಗಿ ಮುಂದಕ್ಕೆ ನಡೆಯುತ್ತಿದ್ದೆವು. ಹರಿವ ನೀರ ಸದ್ದಿನಲ್ಲಿ ಅವ್ಯಕ್ತ ಭಯವಾಗಿ ಹಾದು ಹೋಗುತ್ತಿದ್ದ ಎರಡು ದುರ್ಮರಣಗಳು ಆಕಾಶದಲ್ಲಿ ಉಣ್ಣೆಯ ಸುರುಳಿಗಳ ಹಾಗೆ ತೇಲಿ ಹೋಗುತ್ತಿದ್ದ ಮೋಡಗಳಲ್ಲಿ ದೇಹಪಡೆದುಕೊಳ್ಳುತ್ತಿದ್ದವು.

‘ನಿಮಗೆ ಗೊತ್ತಿಲ್ಲ. ನನ್ನ ತಾಯಿಯ ದೇಹ ನದಿಯ ಸುಳಿಯಿಂದ ತೇಲಿ ಮೇಲಕ್ಕೆ ಬಂದಾಗ ಆಕೆ ಈಜುಡುಗೆಯನ್ನು ಧರಿಸಿದ್ದಳು. ಆಮೇಲೆ ಅವಳ ಮೃತದೇಹದ ಮೇಲೆ ಗೌರವಾನ್ವಿತವಾಗಿ ಸೀರೆಯನ್ನು ಉಡಿಸಲಾಯಿತು. ಆಕೆ ಗೆಳೆಯನ ಜೊತೆ ಈಜಲು ನದಿಗಿಳಿದಿದ್ದಳು. ಆಕೆ ಸುಳಿಗೆ ಸಿಲುಕಿದಾಗ ಆ ಹೇಡಿ ಓಡಿ ತಪ್ಪಿಸಿಕೊಂಡು ಓಡಿ ತನ್ನ ಮನೆಯಲ್ಲಿ ಅಡಗಿ ಕುಳಿತ. ಅಜ್ಜ ಮಹಾಬಲ ಭಟ್ಟರು ಮರ್ಯಾದೆಗೆ ಅಂಜಿ ಮಗಳ ದೇಹಕ್ಕೆ ಸೀರೆ ಸುತ್ತಿ ಅಗ್ನಿಗೆ ಅರ್ಪಿಸಿದರು. ನಿನಗೆ ಧೈರ್ಯವಿದ್ದರೆ ಈ ನಿಜದ ಕಥೆಯನ್ನು ಬರೆ’ ಎಂದು ಸೇನಾಧಿಕಾರಿ ಸಾಹೇಬರು ನನಗೆ ಸವಾಲು ಎಸೆದಿದ್ದರು.

ದೇಶವನ್ನೂ, ತಾಯಿಯನ್ನೂ ಏಕಪ್ರಕಾರವಾಗಿ ಭಾವಿಸಿಕೊಂಡು ಭಾವುಕನಾಗಿದ್ದ ಧೀರ ಸೇನಾಪುತ್ರ. ಮಗುವಾಗಿರುವಾಗ ತಾಯಿಯನ್ನು ಉಳಿಸಿಕೊಳ್ಳಲಾಗದ ಅವರ ನಿಜವಾದ ಅಸಹಾಯಕತೆ. ಆದರೆ ನಾವಾದರೋ ಹುಟ್ಟನ್ನೂ ಸಾವನ್ನೂ ಪ್ರೇಮವನ್ನೂ ಕಾಮವನ್ನೂ ಸಂಕೇತಗಳಾಗಿ ಪ್ರತಿಮೆಗಳಾಗಿ ಕಟೆದು ಕಥಾಕಮ್ಮಟದಲ್ಲಿ ಗದ್ಯಶಿಲ್ಪಗಳನ್ನಾಗಿ ನಿಲ್ಲಿಸುವ ನಿಸ್ಸೀಮ ಕಥೆಗಾರರು.

ನದೀ ತಟಾಕದಲ್ಲಿ ದೆವ್ವದ ಹಾಗೆ ಕಪ್ಪಗೆ ನಿಂತಿರುವ ಬಂಡೆಯೊಂದರ ಮುಂದೆ ಪ್ಯಾಂಟಿನ ಜಿಪ್ಪು ಬಿಚ್ಚಿ ನಿಂತುಕೊಂಡೆ. ಜನ್ಮ ಜನ್ಮಾಂತರಗಳ ಪಾಪಪುಣ್ಯ ಸ್ವರ್ಗನರಕ ಕಥೆ ಕವಿತೆ ಸಾಹಿತ್ಯ ಸೌಂದರ್ಯ ಪ್ರೇಮ ಮೈಥುನ ಹುಟ್ಟು ಸಾವು ಎಲ್ಲವೂ ಹೊಟ್ಟೆಯೊಳಗಿಂದ ಕೊಚ್ಚಿಹೋಗುವಂತೆ ತೊಡೆಗಳ ನಡುವಿಂದ ಹರಿದುಹೋಗುತ್ತಿರುವ ಅಶ್ಕಲಿತ ಮೂತ್ರ.
ದೆವ್ವಗಳೇನಾದರೂ ನಿಜವಾಗಿಯೂ ಒಂದು ವೇಳೆ ಇದ್ದದ್ದೇ ಆದರೆ ಈ ಸುಂದರ ನದೀ ತೀರದ ಬೆಳದಿಂಗಳ ಅನುಪಮ ಚೆಲುವಿನ ಇರುಳನ್ನು ಮಲಿನಗೊಳಿಸುತ್ತಿರುವ ಈ ಯಕಶ್ಚಿತ್ ಕಥೆಗಾರನ ಕತ್ತು ಹಿಸುಕಿ ಸಾಯಿಸಲಿ ಎಂದು ಹೊಯ್ಯುತ್ತಲೇ ಇದ್ದೆ.
 

ನಾಳೆ ನಾನು ಈ ಸದರಿ ಕಥಾಕೂಟವನ್ನು ಮುಗಿಸಿ ಹೊರಡಬೇಕಾದ ದಿನ.

ನಾಡಿದ್ದಿನಿಂದ ಪ್ರಸಿದ್ಧ ಸಿನೆಮಾ ನಿರ್ದೇಶಕನ ಮುಂದೆ ಕೂರಬೇಕು. ಆತನಿಗೆ ಗಬ್ಬು ಹೆಂಡ ಕುಡಿದರೇನೇ ತಲೆಯೊಳಗೆ ಸಿನೆಮಾ ಕಥೆಗಳು ರೀಲಿನಂತೆ ಸುತ್ತುವುದು, ಜೊತೆಯಲ್ಲಿ ಕನ್ನಡ ಸಿನೆಮಾದ ತಾನಸೇನನೂ ಇರುತ್ತಾನೆ. ಜೊತೆಗೆ ಕಾಯಂ ಸಿನೆಮಾ ಆಸ್ಥಾನ ಕವಿಯಾಗಿರುವ ನಾನು. ನಾಡಿದ್ದು ಇರುಳು ಬೆಳಗಾಗುವುದರೊಳಗೆ ಆರು ಹಾಡುಗಳಾದರೂ ರೆಡಿಯಾಗಬೇಕು. ಇದು ಹಾಡುಗಳ ಮೇಲೆಯೇ ಸಿನಮಾಗಳು ಓಡುವ ಕಾಲ. ಹಾಗಾಗಿ ಅಭಿನವ ಕಾಳಿದಾಸನಂತೆ ನಾನು ಬರೆದದ್ದೇ ರಾಗ ತಾಳ ಪಲ್ಲವಿ.

‘ನೀನು ಕಾಳಿದಾಸ ಅಲ್ಲ ಕೋಳಿದಾಸ’ ಎಂದು ಅಮೇರಿಕಾದಲ್ಲಿ ತತ್ವಶಾಸ್ತ್ರ ಓದುತ್ತಿರುವ ಮಗ ಕಿಚಾಯಿಸುತ್ತಾನೆ. ಅವನು ಓದುತ್ತಿರುವ ದೇಶದಲ್ಲೂ ಕನ್ನಡಿಗರ ನಡುವೆ ಲೋಕಖ್ಯಾತನಾಗಿರುವ ಅಪ್ಪನನ್ನು ಕಂಡರೆ ಆತನಿಗೂ ಚೋದ್ಯ.

ಒಂದೇ ಒಂದು ಸಲ ಅಮ್ಮನನ್ನು ಮನಸಾರೆ ಪ್ರೀತಿಸದ ಅಪ್ಪ ಅದು ಹೇಗೆ ಇಷ್ಟೊಂದು ನಿರರ್ಗಳವಾಗಿ ಪ್ರೇಮ ಕವಿತೆಗಳನ್ನು ಬರೆಯುತ್ತಾನೆ ಎಂದು ಆತನಿಗೆ ಕೋಪ ಬೆರೆತ ಅಚ್ಚರಿ.

‘ನೀನಿನ್ನೂ ಬೆಳೆಯಬೇಕು ಮಗಾ.. ಪ್ರಪಂಚದಲ್ಲಿ ಎಷ್ಟೊಂದು ಅಚ್ಚರಿಗಳು ಕಾದಿರುತ್ತವೆ ಎಂದು ಬೆಳೆದಾಗಲೇ ಗೊತ್ತಾಗುವುದು’ ಎಂದು ಎಂದು ಆತನಿಗೆ ಒಂದು ಮೆಸೇಜ್ ಒಗಾಯಿಸಿ ಬಾಯಿ ಮುಚ್ಚಿಸಿದ್ದೆ…

ನಾನು ಒಂದು ಕಥೆಯನ್ನೂ ಮುಗಿಸದೆ ಅರ್ಧದಲ್ಲೇ ಹೊರಡುತ್ತಿದ್ದೇನೆ ಎಂದು ಕಥಾಕೂಟದ ನಡು ಅವಧಿಯಲ್ಲೇ ನನಗಾಗಿಯೇ ಏರ್ಪಡಿಸಿರುವ ಸಂತೋಷ ಕೂಟ. ಸುಳಿಹೊಳೆಯ ತಟಾಕದಲ್ಲಿ ಬಂಡೆಗಳ ನಡುವೆ ಕಲಾತ್ಮಕವಾಗಿ ಬೆಳಗುತ್ತಿರುವ ಸಾಲು ಸಾಲು ದೀಪಗಳು. ಮೂಲೆಯಲ್ಲಿ ಆಕಾಶದ ಕೊನೆಯಲ್ಲಿ ಕವಿಚಿಟ್ಟ ಆಕಾಶಬುಟ್ಟಿಯಂತೆ ಎದ್ದು ಬರುತ್ತಿರುವ ಚಂದ್ರ. ಮಿನುಗುತ್ತಿರುವ ನದಿ.

ಕಳೆದ ಇರುಳು ಇದೇ ಬಂಡೆಯ ಮೇಲೆ ಆಜನ್ಮ ಪರ್ಯಂತ ಉಚ್ಚೆ ಹೊಯ್ಯುತ್ತಾ ನಿಂತಿರುವನಂತೆ ಕಲ್ಲಾಗಿ ನಿಂತಿದ್ದೆನಂತೆ.

ನಚಿಕೇತ ನದೀಪಾತ್ರಕ್ಕೆ ಹುಡುಕಿಕೊಂಡು ಬಂದವನು ಕಲ್ಲಂತೆ ನಿಂತಿದ್ದ ನನ್ನನ್ನು ನಡೆಸಿಕೊಂಡು ಬಂದು ಮಹಡಿ ಹತ್ತಿಸಿ ಮೈತುಂಬ ಹಚ್ಚಡ ಹೊದೆಸಿ ನಿದ್ದೆ ಹೋಗುವವರೆಗೆ ಬಳಿ ಕುಳಿತಿದ್ದು ಹೋದನಂತೆ. ನಿಜ ಹೇಳುವುದಾದರೆ ನಾನು ನಿದ್ದೆ ಹೋಗಿರಲಿಲ್ಲ. ಕತ್ತಲಲ್ಲಿ ಅರ್ಧ ಕಣ್ಣು ಗೋಡೆಯ ಮೇಲೆ ಬಿದ್ದಿದ್ದ ಆತನ ನೆರಳನ್ನು ನೋಡುತ್ತಾ ಮಲಗಿದ್ದೆ.

ತಲೆಯೊಳಗೆ ಎಂತದೋ ಒಂದು ರಾಗ. ಬಹುಶಃ ಕುಮಾರ ಗಂಧರ್ವರ ಹಾಡು ಇರಬೇಕು.

ಜೀನಿ ಜೀನಿ ಜೀನೀ… ಕಿವಿಯೊಳಗೆ ಜೀರುಂಬೆ ಹಾಡಿನಂತೆ ಜೀಕುತ್ತಿರುವ ರಾಗ.

*****

ಸುಳಿಹೊಳೆಯ ಸಂತೋಷ ಕೂಟಕ್ಕೆ ಕಳೆಗಟ್ಟುತ್ತಿತ್ತು.

ನಾನು ಯಾಕೋ ಮ್ಲಾನವದನನಂತೆ ಕೂತಿದ್ದೆ. ಇದೊಂಥರ ಇದ್ದಕ್ಕಿದ್ದಂತೆ ಬರುವ ಜಾಣ ವೈರಾಗ್ಯ. ಬಹಳ ಮೌನವಾಗಿದ್ದು ಮಾತನಾಡುವ ಮೊದಲು ಬರುವ ಗೊಗ್ಗರು ಧ್ವನಿಯ ಹಾಗೆ. ಎಲ್ಲರೂ ನನ್ನ ಮಾತಿಗಾಗಿ ಕಾಯುವ ಹಾಗೆ ಕೂತಿದ್ದರು. ನಚಿಕೇತ ತಾಯಿಯ ಬಿಸುಪಿಗೆ ಒತ್ತಿಕೂತ ಬೆಕ್ಕುಮರಿಯ ಹಾಗೆ ಚೆಂಗುಲಾಬಿ ಅಲಿಯಾಸ್ ಹೇಮಲತಾಳಿಗೆ ಅಂಟಿಕೊಂಡು ಕೂತಿದ್ದ. ಬಹುಶಃ ಆತನಿಗೆ ತಾನು ಯಾರು ಎಂದು ಗೊತ್ತಾದ ಹಾಗಿತ್ತು. ಆಕೆ ಐಸ್ ಕ್ಯೂಬ್‌ಗಳನ್ನು ತುಂಬಿಕೊಂಡ ವಿಸ್ಕಿ ಬಾಟಲನ್ನು ತನ್ನ ಕೆನ್ನೆಗಳಿಗೆ ಸವರುತ್ತಾ ಆತನ ಇಳಿಬಿದ್ದ ಮುಡಿಯನ್ನು ಆಘ್ರಾಣಿಸುತ್ತಿದ್ದಳು.. ಕೋಣೆಯ ಮೂಲೆಯಲ್ಲಿ ದಿಂಬಿಗೆ ಒರಗಿಕೊಂಡು ನೆಲದಲ್ಲಿ ಕಾಲುಚಾಚಿ ಪಂಜಾಬಿ ಕಥೆಗಾರ ಹರಿಜಿತ್ ಅನ್ಯಮನಸ್ಕನಾಗಿ ಕೂತಿದ್ದ.

ಸೋಫಾದ ಒಂದು ಮೂಲೆಯಲ್ಲಿ ಕುಕ್ಕುರುಗಾಲಲ್ಲಿ ಕುಳಿತುಕೊಂಡಂತೆ ಮುದುಡಿಕೊಂಡು ಮಲಯಾಳಿ ಕಥೆಗಾರ ಉಣ್ಣಿಕೃಷ್ಣನ್ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಕೂತಿದ್ದ.

‘ನಾನು ಇಲ್ಲಿಂದ ಹೊರಡುವ ಮೊದಲು ಒಂದು ಪ್ರಸಂಗ ಹೇಳಿ ಮುಂದಕ್ಕೆ ಹೊರಡುತ್ತೇನೆ. ಇದನ್ನು ‘ಪ್ರತಿಭೆ ಮತ್ತು ಪರಂಪರೆ’ ಎಂಬ ಆಂಗ್ಲ ಕವಿ ಟಿ ಎಸ್ ಎಲಿಯಟ್ಟನ ಅಗ್ರ ಪ್ರಬಂಧದ ಆಶಯಗಳ ಹಿನ್ನೆಲೆಯಲ್ಲಿ ನೀವು ಅರ್ಥ ಮಾಡಿಕೊಳ್ಳಬೇಕು’ ಎಂದು ಗ್ಲಾಸಿನಲ್ಲಿ ಉಳಿದಿದ್ದ ಕೊನೆಯ ಗುಟುಕನ್ನು ಹೀರಿ ಸಣ್ಣದಾಗಿ ಕೆಮ್ಮಿ ಉಣ್ಣಿಕೃಷ್ಣನತ್ತ ನೋಡಿ ಹೇಳಿದೆ.

ಆತ ಅಕಾಶದಿಂದ ಬೀಳುವ ಮಾವಿನ ಹಣ್ಣೊಂದನ್ನು ಹಾರಿ ಹಿಡಿದುಕೊಳ್ಳಲು ಕೈ ಚಾಚಿದ ಬಾಲಕನ ಹಾಗೆ ಎಲಿಯಟ್ಟನನ್ನು ಮಸ್ತಕದೊಳಗೆ ತುಂಬಿಸಿಕೊಳ್ಳಲು ಸೋಫಾದ ಅಂಚಿಗೆ ಬಂದು ಕುಳಿತ.

‘ಈಗ ನನ್ನ ಮಾತನ್ನು ದಯವಿಟ್ಟು ಕೇಳಿ ಪ್ರತಿಭೆ ಅನ್ನುವುದು ಹಸಿವಿನ ಹಾಗೆ. ಪರಂಪರೆ ಅನ್ನುವುದು ಆಹಾರದ ಹಾಗೆ. ಪ್ರತಿಭೆಗೆ ಪರಂಪರೆಯನ್ನು ಕೊಂದು ತಿನ್ನುವಷ್ಟು ಕೆಟ್ಟ ಹಸಿವು.’

ತಟ್ಟೆಯಲ್ಲಿ ಉಳಿದಿದ್ದ ಹುರಿದ ಗೋಡಂಬಿಯನ್ನು ಬಾಯಿಗಿಟ್ಟುಕೊಂಡೆ.

ಇದೇನೋ ಇವನ ಹೊಸ ಆಟ ಎಂಬಂತೆ ಚೆಂಗುಲಾಬಿ ಹಿಮದ ಗಡ್ಡೆಗಳು ತುಂಬಿಕೊಂಡ ಗ್ಲಾಸನ್ನು ತನ್ನ ಇನ್ನೊಂದು ಕೆನ್ನೆಗೆ ಉಜ್ಜಿ ನಚಿಕೇತನಿಗೆ ಇನ್ನಷ್ಟು ಒತ್ತಿ ಕೂತಳು.

ನಾವು ಈಗ ಇರುವ ಈ ಸುಂದರವಾದ ಕಥಾ ಧಾಮವನ್ನೇ ನೋಡಿ. ಇದು ಒಂದು ಕಾಲದಲ್ಲಿ ಕಾಫಿ, ಕಿತ್ತಳೆ, ಏಲಕ್ಕಿ, ಕರಿಮೆಣಸು, ಲವಂಗ, ಕೋಕೋ ಅಡಿಕೆ ರಬ್ಬರ್ ಬೆಳೆಯುವ ಕಾಡಾಗಿತ್ತು. ಕಾಡಾನೆಗಳೂ, ಕಾಡುಕೋಣಗಳೂ, ಕಾಳಿಂಗ ಸರ್ಪಗಳೂ ಓಡಾಡುತ್ತಿದ್ದ ಕಾಡು.

ಹರಿಯುತ್ತಿರುವ ಈ ನದಿಯ ಹೆಸರು ಸುಳಿಹೊಳೆ. ಅದರ ತಟಾಕದಲ್ಲಿರುವ ಬಂಗಲೆ ಇದು. ಕಾಡಿಗೆ ಬೇಟೆಗೆ ಬರುತ್ತಿದ್ದ ಬ್ರಿಟಿಷರು ತಂಗಲು ಕಟ್ಟಿರುವ ಬಂಗಲೆ. ಬ್ರಿಟಿಷರು ಹೋಗುವಾಗ ಈ ಬಂಗಲೆ ತೋಟವನ್ನು ಪುತ್ತೂರಿನ ಮಹಾಬಲ ಭಟ್ಟರಿಗೆ ಹೆಚ್ಚುಕಡಿಮೆ ದಾನವಾಗಿ ಕೊಟ್ಟು ಹೋದರು. ಯಾಕೆಂದರೆ ಹಿಟ್ಲರನ ವಿರುದ್ಧ ಬರ್ಮಾ ಗಡಿಯಲ್ಲಿ ಕಾದಾಡಿ ಕಾಲು ಕಳೆದುಕೊಂಡ ಮಹಾಬಲ ಭಟ್ಟರು ಬಹಳ ಒಳ್ಳೆಯ ಮನುಷ್ಯರಾಗಿದ್ದರು. ಇಂಗ್ಲಿಷ್ ಸಾಹಿತ್ಯ. ಪಾಶ್ಚಾತ್ಯ ಸಂಗೀತ, ಸಿನೆಮಾ, ತತ್ವಜ್ಞಾನ ಎಲ್ಲವನ್ನೂ ಅರೆದು ಕುಡಿದ ಮಹಾಬಲ ಭಟ್ಟರು ಸ್ವಾತಂತ್ರ್ಯ ಬಂದಮೇಲೆ ಕೇಂದ್ರದಲ್ಲಿ ಮಂತ್ರಿಯೂ ಆಗಿದ್ದರು.

ಸ್ವಾತಂತ್ರ್ಯ ಬಂದ ಮೇಲೆ ಭಟ್ಟರು ಕನ್ನಡ ಸಾಹಿತ್ಯದ ಬಹಳ ದೊಡ್ಡ ಪೋಷಕರಾಗಿದ್ದರು. ಅವರ ಮಗಳೇ ಕನ್ನಡದ ಮೊದಲ ಆಧುನಿಕ ಕಥೆಗಾರ್ತಿ. ಆಕೆ ಅಪ್ರತಿಮ ಚೆಲುವೆಯಾಗಿದ್ದಳು. ಇಂಗ್ಲೆಂಡಿನಲ್ಲಿ ಓದಿ ಬಂದಿದ್ದಳು. ಟೆನಿಸ್ ಆಡುತ್ತಿದಳು. ಸಿಗರೇಟು ಸೇದುತ್ತಿದ್ದಳು. ಬಹುಶಃ ಕುಡಿಯುತ್ತಿದ್ದಳು ಕೂಡಾ. ಅದರಿಂದಾಗಿಯೇ ಬಹಳ ಮುಕ್ತವಾಗಿ ಬರೆಯುತ್ತಿದ್ದಳು. ಅವಳನ್ನು ನೋಡಲೆಂದೇ ಮಾತನಾಡಿಸಲೆಂದೇ ದೂರದೂರದ ಪ್ರಾಂತಗಳಿಂದ ಲೇಖಕ ಕಥೆಗಾರರು ಬಂದು ತಂಗುತ್ತಿದ್ದರು. ಅವಳು ಸ್ವಲ್ಪ ವಿಕ್ಷಿಪ್ತೆ ಮತ್ತು ಕೆಲವೊಮ್ಮೆ ಖಿನ್ನತೆಗೂ ಜಾರುತ್ತಿದ್ದಳು. ತನ್ನ ತಂದೆಯ ತೋಟದಲ್ಲೇ ಮ್ಯಾನೇಜರನಾಗಿದ್ದ ಕೊಡವರ ಮುತ್ತಣ್ಣನನ್ನು ಮದುವೆಯಾದಳು.

ತಂದೆಯ ವಿರುದ್ಧ ಬಂಡಾಯವಂತೆ ಅದು. ಆ ಬಂಡಾಯವನ್ನೂ ಮಹಾಬಲ ಭಟ್ಟರು ಮಗಳನ್ನು ಕ್ಷಮಿಸಿದರು. ತೋಟವನ್ನು ಅಳಿಯ ಮಗಳ ಕೈಗೆ ಬಿಟ್ಟು ದೆಹಲಿ ಸೇರಿಕೊಂಡರು. ಆಗಿನ ಕಾಲದ ಬಹಳ ದೊಡ್ಡ ಹೆಸರು. ಇದೇ ನದಿಯ ಸುಳಿಯಲ್ಲಿ ಕಥೆಗಾರ್ತಿ ಮಗಳು ತೀರಿ ಹೋದ ಸ್ವಲ್ಪ ಸಮಯದಲ್ಲಿ ತಾವೂ ಮಂತ್ರಿಯಾಗಿರುವಾಗಲೇ ದೆಹಲಿಯಲ್ಲಿ ತೀರಿಹೋದರು.

ಮಗಳ ಮುಳುಗಿದ ದೇಹ ನದಿಯ ಸುಳಿಯಿಂದ ಮೇಲೆದ್ದು ಬಂದ ವಿಷಯ ಅರಿತ ಮಹಾಬಲ ಭಟ್ಟರು ದೆಹಲಿಯಿಂದ ಧಾವಿಸಿ ಬಂದಿದ್ದರು. ಮಗಳ ದೇಹಕ್ಕೆ ಚಿತಾಸ್ಪರ್ಷವಾದ ಮೇಲೆ ಮೊಮ್ಮಗನ ಬೆರಳು ಹಿಡಿದುಕೊಂಡು ನದಿಯ ತಟಾಕಕ್ಕೆ ಬಂದಿದ್ದರು.
ಬಹಳ ಹೊತ್ತು ಅಲ್ಲೇ ಕುಳಿತಿದ್ದರಂತೆ.

‘ಸಣ್ಣ ಮೀನನ್ನು ದೊಡ್ಡ ಮೀನು ತಿನ್ನುವುದು. ಅದನ್ನು ಇನ್ನೊಂದು ದೊಡ್ಡ ಮೀನು. ಅದನ್ನು ಅದನ್ನಿಂನ್ನೊಂದನಿನ್ನೊಂದು….. ’

‘ಮನುಷ್ಯರೂ ಮನುಷ್ಯರನ್ನು ತಿನ್ನುತ್ತಾರೆ ಗೊತ್ತಾ ’

ಮಹಾಬಲ ಭಟ್ಟರು ಮೊಮ್ಮಗನಿಗೆ ಇನ್ನೊಂದು ಕಥೆ ಹೇಳಿದ್ದರು

ಅದು ಬಹಳ ಹಿಂದೆ ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಎರಡು ಮೂರು ವರ್ಷ ಮೊದಲು. ಎರಡನೇ ಜಾಗತಿಕ ಯುದ್ಧದ ಕೊನೆಯ ದಿನಗಳು. ಜಪಾನೀ ಸೇನೆಯ ಕೈಗೆ ಯುದ್ಧ ಖೈದಿಗಳಾಗಿ ಸಿಕ್ಕಿದ್ದ ಮಹಾಬಲ ಭಟ್ಟರು ಮತ್ತು ಇನ್ನಿಬ್ಬರು ಬ್ರಿಟಿಷ್ ಯೋದರು ಅಲ್ಲಿಂದ ತಪ್ಪಿಸಿಕೊಂಡು ಕೊಹಿಮಾ ಮತ್ತು ಇಂಪಾಲ್ ನಡುವಿನ ಕಾಡಲ್ಲಿ ದಾರಿ ತಪ್ಪಿ ನಡೆದಾಡುತ್ತಿದ್ದರಂತೆ. ಹಸಿವಿನಿಂದ ಕಂಗೆಟ್ಟ ಅವರನ್ನು ಹಳ್ಳಿಯವನೊಬ್ಬ ಮದುವೆಯ ಮನೆಯೊಂದಕ್ಕೆ ಕರೆದುಕೊಂಡು ಹೋದನಂತೆ. ಸಂಗೀತ, ಹಾಡು, ಕುಣಿತ, ಕೇಕೆ….

ಮದುವೆಯ ನಡುಮನೆಯಲ್ಲಿ ವೃದ್ಧನೊಬ್ಬನನ್ನು ಎತ್ತರದ ಕುರ್ಚಿಯಲ್ಲಿ ಕುಳ್ಳಿರಿಸಿ ಹೂ ಮಾಲೆಗಳಿಂದ ಅಲಂಕರಿಸಿ ಕೂರಿಸಿದ್ದರಂತೆ. ಎಲ್ಲರೂ ಸರತಿಯ ಸಾಲಲ್ಲಿ ಬಂದು ಆತನನ್ನು ಅಪ್ಪಿಕೊಂಡು ಆತನ ಶಾಲನ್ನು ಕಣ್ಣಿಗೆ ಒತ್ತಿಕೊಂಡು ಕಣ್ಣೀರುಗರೆಯುತ್ತಾ ಮುಂದಕ್ಕೆ ಹೋಗುತ್ತಿದ್ದರಂತೆ.

‘ಇದೇನು ಮದುವೆಯ ಮನೆಯಲ್ಲಿ ಮದುಮಗನನ್ನೂ ಮದುಮಗಳನ್ನೂ ಹೂಮಾಲೆ ಹಾಕಿ ಕುಳ್ಳಿರಿಸದೆ, ಸಾಯುವ ವಯಸ್ಸಾಗಿರುವ ವೃದ್ದನನ್ನುಅಲಂಕರಿಸಿ ಕೂರಿಸಿರುವಿರಲ್ಲಾ’ ಎಂದು ಅವರು ಕುತೂಹಲ ತಡೆಯಲಾರದೆ ವಿಚಾರಿಸಿದರಂತೆ.

‘ಇದು ಮದುವೆಯ ಮೊದಲ ದಿನದ ಸಂಪ್ರದಾಯ. ನಮ್ಮಲ್ಲಿ ಅತಿ ಹೆಚ್ಚು ವಯಸ್ಸಾಗಿ ಆರೋಗ್ಯವಾಗಿರುವ ವೃದ್ಧನನ್ನು ಗುರುತಿಸಿ ಪೂಜಿಸಿ ಸನ್ಮಾನಿಸಿ ನಂತರ ಕಡಿದು ಬೇಯಿಸಿ ಮದುವೆಯ ದಿನ ಔತಣದೂಟ ಮಾಡುತ್ತೇವೆ’ ಅಂದರಂತೆ
ಮಹಾಬಲ ಭಟ್ಟರು ಮೊಮ್ಮಗನಿಗೆ ಈ ಕತೆ ಹೇಳಿದ್ದರಂತೆ.

‘ನೋಡು ಮಗಾ ಒಂದು ಬದುಕಲು ಇನ್ನೊಂದು ಸಾಯಬೇಕು ಅದುವೇ ಮನುಷ್ಯ ನಾಗರಿಕತೆ’ ಅಂದಿದ್ದರಂತೆ.

‘ಟಿ ಎಸ್ ಎಲಿಯಟ್ ಹೇಳುವ ಪ್ರತಿಭೆ ಮತ್ತು ಪರಂಪರೆ ಅಥವಾ ಪರಂಪರೆ ಮತ್ತು ಪ್ರತಿಬೆ ಒಂದನ್ನೊಂದು ನುಂಗಲು ಹೊರಟಿರುವ ಎರಡು ಹಲ್ಲಿಗಳ ಹಾಗೆ. ಯಾವುದು ತಿನ್ನುತ್ತಿರುವುದು, ಯಾವುದು ಸಾಯುತ್ತಿರುವುದು ಎಂದು ಗೊತ್ತಾಗುವುದಿಲ್ಲ. ಕನ್ನಡದ ದೊಡ್ಡ ಕಥೆಗಾರ್ತಿಯೊಬ್ಬಳು ಸುಳಿಯಲ್ಲಿ ಸಿಲುಕಿ ಮೃತಳಾದ ನದಿಯ ಪಕ್ಕದಲ್ಲೇ ಕುಳಿತು ಕನ್ನಡದ ಎಳೆಯ ಕಥೆಗಾರ ನಚಿಕೇತ ತನ್ನ ಹೊಸ ಕಥೆಗಳನ್ನು ಬರೆಯುತ್ತಿದ್ದಾನೆ. ಇದಲ್ಲವೇ ಪ್ರತಿಭೆ ಮತ್ತು ಪರಂಪರೆಯ ಅತ್ಯುತ್ತಮ ಉದಾಹರಣೆ’

‘ನಾವು ಎಪ್ಪತ್ತು ವರ್ಷಗಳ ಹಿಂದೆ ಇದೇ ನದಿಯ ಸುಳಿಗೆ ಸಿಕ್ಕಿ ತೀರಿಹೋದ ಕಥೆಗಾರ್ತಿಯ ಆತ್ಮಕ್ಕೆ ಶಾಂತಿಯನ್ನೂ, ಹೊಸತಾಗಿ ಬರೆಯುತ್ತಿರುವ ನಚಿಕೇತನಿಗೆ ಪ್ರೀತಿಯನ್ನೂ ಹಾರೈಸೋಣ’ ಎಂದು ಸ್ವಲ್ಪ ತೂರಾಡುತ್ತಾ ಎದ್ದು ನಿಂತೆ.
ಎಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯತೊಡಗಿದರು.

*******

ಬೆಳಗ್ಗೆ ಬೇಗನೇ ಎದ್ದು ಹೊರಡಬೇಕೆಂದು ಅಲಾರ್ಮ್ ಇಟ್ಟು ಮಲಗಿದ್ದೆ. ಯಾರೋ ಕೆನ್ನೆ ಸವರಿದ ಹಾಗೆ ಅನಿಸಿ ಕಣ್ಣು ಬಿಟ್ಟೆ. ಮೂಗಿಗೆ ಅಡರುತ್ತಿರುವ ಚೆಂಡು ಹೂವಿನ ಒಗಚು ಪರಿಮಳ. ಕಣ್ಣು ತೆರೆದೆ.

ಹೇಮಲತಾ ಅದೆಲ್ಲಿಂದಲೋ ಚೆಂಡು ಹೂಗಳನ್ನು ಹುಡುಕಿ ದಾರಕ್ಕೆ ಪೋಣಿಸಿ ಹೂಮಾಲೆ ಮಾಡಿ ನಿದ್ರಿಸುತ್ತಿದ್ದ ನನ್ನ ಎದೆಯ ಮೇಲಿಟ್ಟು ನೋಡುತ್ತ ಕುಳಿತಿದ್ದಳು. ಪಕ್ಕದಲ್ಲಿ ನಚಿಕೇತ.

‘ನಮ್ಮ ನಡುವಿನ ಕಥೆಗಾರರಲ್ಲಿ ನೀವೇ ಹೆಚ್ಚು ವಯಸ್ಸಾದವರೂ ಆರೋಗ್ಯವಂತರೂ ಆಗಿದ್ದೀರಿ. ಹಾಗಾಗಿ ನಿಮ್ಮನ್ನು ಗುರುತಿಸಿ ಪೂಜಿಸಿ ಸನ್ಮಾನಿಸಿ ನಂತರ ಕಡಿದು ಬೇಯಿಸಿ ತಿನ್ನಲು ಬಂದಿದ್ದೇವೆ’ ಹೇಮಲತಾ ಎಂಬ ಚೆಂಗುಲಾಬಿ ಆ ಇರುಳಲ್ಲಿ ಮೋಹಕವಾಗಿ ಕಾಣುತ್ತಿದ್ದಳು.

‘ಇದುವೇ ಟಿ ಎಸ್ ಎಲಿಯಟ್ ಹೇಳುವ ಪ್ರತಿಭೆ ಮತ್ತು ಪರಂಪರೆ’ ನಚಿಕೇತ ನಕ್ಕು ನುಡಿದ.
ನಕ್ಕಾಗ ಅರಳುವ ಅವನ ಕೆನ್ನೆಯ ಗುಳಿ. ಮಗನ ಮುಖ ಕಣ್ಣಿಗೆ ತೇಲಿ ಬಂತು.
ಬಹುಶಃ ಇನ್ನು ನಿದ್ದೆ ಬರಲಾರದು.
ಬಾಲ್ಯದ ಸುಳಿಹೊಳೆಯ ತಟಾಕಕ್ಕೆ ಬಹುಶಃ ಇದು ಕೊನೆಯ ಬಾರಿ ನಾನು ಹೋಗುತ್ತಿರಬಹುದು ಎನ್ನುವ ಹಾಗೆ ನಡೆಯುತ್ತಾ ಹೊರಟೆ.

(ವಿಜಯ ಕರ್ನಾಟಕ ದೀಪಾವಳಿ ಸಂಚಿಕೆಯಲ್ಲಿ ಪ್ರಕಟಿತ ಕಥೆ)