Advertisement
ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು. ಮಾತಾಡಿ ಹೊಡೆತ ತಿನ್ನುವುದಕ್ಕಿಂತ ಸುಮ್ಮನಿರುವುದೇ ವಾಸಿ ಎನ್ನಿಸಿ, ಮೌನವಾಗಿದ್ದೆ.
ಕೀರ್ತಿ
ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ “ಒಂದು ಜೀವ ಮೂರು ಜನ್ಮ” ಎಂಟನೆಯ ಕಂತು

ಮೊದಲ ನಾಟಕ ‘ಸತ್ಯ ಹರಿಶ್ಚಂದ್ರ’ದ ನೆನಪುಗಳನ್ನು ಕೆದಕಿದಷ್ಟು ಅಕ್ಷಯವೇ! ಆ ನಕ್ಷತ್ರಿಕ ಬೆಂಬಿಡದ ಬೇತಾಳನಂತೆ ಕಾಟ ಕೊಡುತ್ತಿರುವಾಗ, ಲೋಹಿತಾಶ್ವನಾಗಿದ್ದ ನಾನು ನನಗರಿವಿಲ್ಲದೆ ಪಾತ್ರಕ್ಕೆ ಸ್ಪಂದಿಸುತ್ತಿದ್ದೆ. ಅದಕ್ಕೆ ಬೇಕಾದ ಕಲಿಕಾ ತರಗತಿಗಳೂ ಕಂಪೆನಿಯಲ್ಲಿ ನಡೆಯುತ್ತಿತ್ತು. ಕಾಡಿನ ದಾರಿಯಲ್ಲಿ ಸಾಗುವಾಗ ನಕ್ಷತ್ರಿಕ ಹಸಿವಾಯಿತು, ಬಾಯಾರಿಕೆ ಎಂದೆಲ್ಲ ಬೊಬ್ಬಿಡುವ ದೃಶ್ಯವೊಂದಿದೆ. ಹರಿಶ್ಚಂದ್ರ ಚೊಂಬಿನಲ್ಲಿ ಹಾಲನ್ನು ತಂದುಕೊಟ್ಟರೆ, ಅಷ್ಟು ಕುಡಿದು ನನ್ನೆಡೆಗೆ ವ್ಯಂಗ್ಯ ನೋಟವನ್ನು ನೋಡಬೇಕು. ಆಗ ನಾನು, ‘ನನಗೆಲ್ಲಿ?’ ಎಂದು ಕೇಳಿದರೆ, ಖಾಲಿ ಚೊಂಬು ತೆಗೆದು ನನ್ನ ಕೈಯಲ್ಲಿಟ್ಟು ನಕ್ಕು ಮುಂದೆ ಸಾಗುತ್ತಾನೆ. ನಾನಾಗ ಚೊಂಬನ್ನು ಎಸೆದು ಹುಡುಗನ ಸಹಜ ಸಿಟ್ಟನ್ನು ವ್ಯಕ್ತಪಡಿಸುವ ಆತುರದಲ್ಲಿದ್ದೆ. ತುಸು ಜೋರಾದ ನನ್ನ ಎಸೆತದಿಂದ ಚೊಂಬು ನೇರವಾಗಿ ಹಾರ್ಮೋನಿಯಂ ಪೆಟ್ಟಿಗಿ ಮೇಷ್ಟ್ರ ತಲೆಗೇ ಬೀಳಬೇಕೆ! ಎಸೆಯಬೇಕು ಎಂದಿದ್ದರು, ಜೋರಾಗಿ ಎಸೆಯಬಾರದು ಅಂತೇನೂ ನಿಯಮ ಹಾಕಿರದ ಕಾರಣ ನನ್ನ ಪಾಡಿಗೆ ಎಸೆದು ಬಂದಿದ್ದೆ.

ಹಿಂದೆ ನಿಂತ ಭಾಗಮ್ಮನವರು ನನ್ನ ಬರುವಿಕೆಯನ್ನೇ ಕಾಯುತ್ತಿದ್ದರೆಂದು ಅವರ ಕಣ್ಣ ಹುಡುಕಾಟವೇ ತಿಳಿಸುತ್ತಿತ್ತು. ಹಾರ್ಮೋನಿಯಂ ಪೆಟ್ಟಿಗಿ ಮೇಷ್ಟ್ರ ತಲೆಯಲ್ಲಿ ರಕ್ತ ಸುರಿಯುತ್ತಿದೆ ಎಂಬ ವಿಷಯ ತಿಳಿದದ್ದು ಅವರಿಂದಲೇ. ಆ ಕ್ಷಣಕ್ಕೆ ಗಾಬರಿಯಾಗಿದ್ದಂತೂ ನಿಜ. ಮೇಷ್ಟ್ರ ಬಳಿ ದೌಡಾಯಿಸಿ, ತಪ್ಪಾಯಿತೆಂದೆ. ನಕ್ಕುಬಿಟ್ಟರು!

ಚಂದ್ರಮತಿ ಮತ್ತು ಹರಿಶ್ಚಂದ್ರರು ಮಾರಾಟವಾಗುವ ಸನ್ನಿವೇಶದಲ್ಲಿ, ಅಪ್ಪ ಅಮ್ಮರು ನನ್ನ ತೊರೆಯುತ್ತಿದ್ದಾರೆ ಎಂದು ಗೊತ್ತಾದ ತಕ್ಷಣ ಲೋಹಿತಾಶ್ವ ಗೋಳಾಡುತ್ತಾನೆ. ಅಸಹಾಯಕತೆ, ತನ್ನವರಿದ್ದೂ ಅನುಭವಿಸಬೇಕಾದ ತಬ್ಬಲಿತನ, ಪಾತ್ರವೊಂದು ಕಾಣಿಸಬೇಕಾದ ಎಷ್ಟೆಲ್ಲ ಭಾವಗಳಿವೆ ಅಲ್ಲಿ! ನಾನೋ ನೀರಸವಾಗಿ, ‘ಅಪ್ಪ, ಅಮ್ಮ ನೀವಿಬ್ಬರೂ ನನ್ನಿಂದ ದೂರವಾಗುತ್ತಿದ್ದೀರಾ? ನಾನಿನ್ನು ಹೇಗಿರಲಿ?’ ಎನ್ನುತ್ತಾ ಒಂದೂ ಅಕ್ಷರ ತಪ್ಪದಂತೆ ಡೈಲಾಗ್ ಒಪ್ಪಿಸುತ್ತಿದ್ದೆನಷ್ಟೇ. ಚಂದ್ರಮತಿಯಾಗಿದ್ದ ಮುರುಗೋಡು ರೇಣಮ್ಮನವರು ಇದೆಲ್ಲವನ್ನು ಸಹಿಸುತ್ತಲೇ ಇರಲಿಲ್ಲ. ಪಾತ್ರಕ್ಕೆ ಜೀವ ತುಂಬಿಸಬೇಕೆಂದಷ್ಟೇ ಅವರು ನಂಬಿದ್ದರು. ಹಾಗಾಗಿ, ‘ಮಗೂ… ಲೋಹಿತಾಶ್ವ’ ಎಂದು ಓಡಿಬಂದು ತಬ್ಬುತ್ತಿದ್ದರು. ಹಾಂ.. ಬರೀ ತಬ್ಬುತ್ತಿರಲಿಲ್ಲ. ತೊಡೆಯನ್ನು ಗಿಂಡುತ್ತಿದ್ದರು. ಕಿವಿಗಪ್ಪಳಿಸುವ ಹಿನ್ನೆಲೆ ಸಂಗೀತದ ನಡುವೆ ರೇಣಮ್ಮನವರು, ‘ಜೋರಾಗೇ ಅಳು, ನೋವಿಂದ ಕರಿಬೇಕು’ ಅಂತೆಲ್ಲ ಹೇಳುತ್ತಿದ್ದರು. ಕೂತ ಮೂಕ ಪ್ರೇಕ್ಷಕರಿಗೆ ಇದ್ಯಾವುದೂ ಕಾಣಿಸದಷ್ಟು ಸೂಕ್ಷ್ಮವಾಗಿ, ಬೆಣ್ಣೆಯಿಂದ ಕೂದಲೆಳೆದಷ್ಟು ನಾಜೂಕಾಗಿ ನನ್ನ ಕಿವಿಯಲ್ಲಿ ಉಸುರುತ್ತಿದ್ದರು. ತಬ್ಬಿದ ತಾಯಿಯನ್ನು, ಹೊರಟುನಿಂತ ತಂದೆಯನ್ನು ನೋಡುತ್ತಾ ಆರ್ದ್ರದನಿಯಲ್ಲಿ ಸಂಭಾಷಿಸುತ್ತಿದ್ದೆ. ಮನಕಲಕುವ ದೃಶ್ಯಕ್ಕೆ ಪ್ರೇಕ್ಷಕರು ಕಣ್ಣೀರ್ಗರೆಯುತ್ತಾ, ಚಪ್ಪಾಳೆ ತಟ್ಟಿ, ಅಭಿನಂದಿಸುತ್ತಿದ್ದರು.

ಐದಾರು ಪ್ರಯೋಗಗಳನ್ನು ಪೂರೈಸುವ ಹೊತ್ತಿಗಾಗಲೇ ಈ ನಾಟಕಕ್ಕೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿತ್ತು. ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು. ಮಾತಾಡಿ ಹೊಡೆತ ತಿನ್ನುವುದಕ್ಕಿಂತ ಸುಮ್ಮನಿರುವುದೇ ವಾಸಿ ಎನ್ನಿಸಿ, ಮೌನವಾಗಿದ್ದೆ. ಈ ಮಾತಂತಿರಲಿ, ಅಂದು ನಾಟಕ ಮುಗಿದ ಮಾರನೇ ದಿನ ಏಳೆಂಟು ಜನ ಮನೆ ಬಾಗಿಲೆದುರು ನಿಂತು, ‘ಲೋಹಿತಾಶ್ವನ ಪಾತ್ರ ಮಾಡಿದವನನ್ನ ಕರೆಯಿರಿ’ ಎಂದರು. ಅವನು ಮಾಡಿದ್ದಲ್ಲ, ಅವಳೆಂದು ಭಾಗಮ್ಮನವರು ಸ್ಪಷ್ಟಪಡಿಸಿದರು. ಬಂದ ಜನರು ಬೆರಗಾಗುತ್ತಾ, ‘ಆ ಮಗುವನ್ನು ಒಂದಷ್ಟು ಸಮಯ ಕಳಿಸಿಕೊಡಿ. ಮಗೂಗೆ ತಿಂಡಿ ತಿನ್ನಿಸ್ಬೇಕೆಂಬ ಆಸೆ ನಮ್ಗೆಲ್ಲ, ಬೇಗನೇ ಕರೆತರುತ್ತೇವೆ’ ಎನ್ನುತ್ತಾ ತಮ್ಮ ಬಯಕೆಯನ್ನೇನೊ ಹಂಚಿಕೊಂಡರು. ಅಜ್ಜಿ ಭಾಗಮ್ಮ ಒಪ್ಪಬೇಕಲ್ಲಾ! ಮನೆ ವಿಳಾಸ ಕೊಟ್ಟವರಾರೆಂದು ರೇಗುತ್ತಾ, ಮುಲಾಜಿಲ್ಲದೆ ಬಾಗಿಲು ಮುಚ್ಚಿದರು.

ಬದುಕಿನಲ್ಲಿ ಅಪರಿಚಿತರ ಪರಿಚಯ ಅದೆಷ್ಟು ಸೋಜಿಗ! ಬೋರ್ಡಿಂಗ್‌ನಲ್ಲಿ ಇಟ್ಟಿದ್ದ ಡಬ್ಬಿಗಳಿಗೆ ತಿಂಡಿ, ಊಟ ತುಂಬಿಸಿಕೊಂಡು ಮನೆಗೆ ತರುವ ಜವಾಬ್ದಾರಿ ನನ್ನದೇ ಆಗಿತ್ತು. ಓಡಾಡುವುದನ್ನು ನೋಡಿದ್ದರೆಂದು ಕಾಣುತ್ತದೆ. ಅಂದು ಬಂದಿದ್ದ ಜನರೆಲ್ಲ ದಪ್ಪ ಎಳೆಯ ಬೆಳ್ಳಿ ಕಾಲ್ಗೆಜ್ಜೆಯನ್ನು ತಂದಿದ್ದರು. ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದಾಗ, ‘ನಂಗಿವನ್ನೆಲ್ಲ ಕೊಡ್ಸ್‌ಬ್ಯಾಡ್ರಿ. ನಮ್ಮಜ್ಜಿಗ್ ಗೊತ್ತಾತಂದ್ರ ಬೈತಾಳ. ನಾ ತಗೊಣಲ್ರಿ’ ಎಂದು ನಿರಾಕರಿಸಿದೆ. ಅಲ್ಲಿದ್ದವರಲ್ಲೊಬ್ಬರು, ‘ಒಂದ್ ಕೆಲ್ಸ ಮಾಡಾನ. ಹಿಂಗ್ ಕೊಡೋದಕ್ಕಿಂತ ಆಯರಿ ಮಾಡಾನ?’ ಎಂದದ್ದಕ್ಕೆ ಹೇಳಿದವನ ತಲೆ ಸವರಿ ಭೇಷ್ ಎಂದರು. ಆ ದಿನದ ನಾಟಕದಲ್ಲಿ ಅದೇ ಬೆಳ್ಳಿಯ ಕಾಲ್ಗೆಜ್ಜೆ ಆಯರಿಯಾಗಿ ಅಂದರೆ ಆಯರಿ ಅಂದರೆ ಗೌರವದ ಕಾಣಿಕೆಯಾಗಿ ದೊರಕಿತು. ಕಲಾ ಜಗತ್ತಿನಲ್ಲಿ ಅಂಬೆಗಾಲಿಕ್ಕುತ್ತಿದ್ದ ಹೊತ್ತಿಗೆ ನನಗೆ ದೊರೆತ ಮೊದಲ ಉಡುಗೊರೆ. ಬೆಲೆ ಕಟ್ಟಲಾಗದ್ದು. ಆದರೆ, ಇಂದಿಗದು ಕನಿಷ್ಠ ಐವತ್ತು ಸಾವಿರ ಬೆಲೆ ಬಾಳುತ್ತಿತ್ತೇನೊ. ಏಕೆಂದರೆ 1954 – 55ರ ಸಮಯದಲ್ಲಿ ಒಂದೊ ಎರಡೊ ರೂಪಾಯಿ ಆಯರಿ ಮಾಡಿದರೆ ಬಹಳ ದೊಡ್ಡದು. ಸಿರಿವಂತರಾದವರು ಗರಿಷ್ಠ ಹತ್ತು ರೂಪಾಯಿ ಆಯರಿ ಮಾಡುತ್ತಿದ್ದದಷ್ಟೇ. ಹಾಗಾಗಿ, ಹಿಡಿದಾಗ ಭಾರವೆನಿಸುತ್ತಿದ್ದ ಗಟ್ಟಿಮುಟ್ಟಾದ ಆ ಕಾಲ್ಗೆಜ್ಜೆಗೂ ಪಾತ್ರವನ್ನು ಮೆಚ್ಚಿ ಉಡುಗೊರೆ ಕೊಟ್ಟ ಜನರ ಪ್ರೀತಿಗೂ ನನ್ನ ಬದುಕಲ್ಲಿ ವಿಶೇಷವಾದ ತಾವಿದೆ.

ಇಲ್ಲಿ ದಿನೇದಿನೇ ಜನರ ಪ್ರತಿಕ್ರಿಯೆ ಹೆಚ್ಚಾಗುತ್ತಿತ್ತು. ಸಹೃದಯರ ಸ್ಪಂದನೆ ಕಲಾವಿದರ ಪಾಲಿಗೆ ಅದೆಷ್ಟು ಅಮೂಲ್ಯವಾದದ್ದು ಎಂದು ತೂಕವಿಟ್ಟು ಹೇಳಲಾರೆ. ಆ ಮಾನವಿ ಕಂಪೆನಿಯ ಮಾಲೀಕರು ಲೋಹಿತಾಶ್ವನ ಪಾತ್ರ ಮಾಡುತ್ತಿದ್ದದ್ದನ್ನು ಕಂಡು ‘ನೀನು ಮಲ್ಲಮ್ಮ ಅಲ್ಲ, ಅಭಿನಯ ಸರಸ್ವತಿ ಕಣಮ್ಮ’ ಎಂದು ಹೊಸ ಹೆಸರನ್ನು ನಾಮಕರಣ ಮಾಡಿಬಿಟ್ಟರು. ಆಗ ಭಾನಾಪುರದ ಲಕ್ಷ್ಮೀದೇವಿ, ‘ನಾನು ಲಕ್ಷ್ಮೀ, ನೀನು ಸರಸ್ವತಿ. ನಾವಿಬ್ಬರೂ ಸೇರಿ ಇಡೀ ಕರ್ನಾಟಕದ ತುಂಬ ಮೆರೆಯೋಣ’ ಎಂದಿದ್ದಳು. ಮಲ್ಲಮ್ಮನ ಅಭಿನಯದ ಬದುಕಿನಲ್ಲಿ ಸರಸ್ವತಿಯ ಹೊಸ ಅಧ್ಯಾಯ ಆರಂಭವಾಯಿತು.

ನಾ ಬಯಸಿದ್ದ ಬದುಕು ನನ್ನದಾಗೇಬಿಟ್ಟಿತು ಎಂಬ ಭ್ರಮೆಯಲ್ಲಿದ್ದೆ. ವಾಸ್ತವ ಎಚ್ಚರಿಸದಿರುತ್ತದೆಯೇ! ಲೋಹಿತಾಶ್ವ, ತಾಯಿ ಕರುಳು ನಾಟಕದ ‘ದಾಕ್ಷಾಯಿಣಿ’, ಮುದುಕನ ಮದುವೆಯ ‘ಮಂದಾಕಿನಿ’, ಟಿಪ್ಪು ಸುಲ್ತಾನ ನಾಟಕದ ಮಗನ ಪಾತ್ರಗಳ ಮೂಲಕ ಇನ್ನಿಲ್ಲದೆ ಜನಮನ್ನಣೆ ಗಳಿಸುವ ಹೊತ್ತಿನಲ್ಲಿ ಅವ್ವ ಅಪ್ಪರಿದ್ದ ಊರಿನಲ್ಲಿ ಕೂಗಾಟ ಗಲಾಟೆಗಳು ಮೇರೆ ಮೀರಿತ್ತು. ಮನೆ ಕಳುವಾದ ದುಃಖವೇ ಮಾಸಿರದ ಸಂದರ್ಭದಲ್ಲಿ ನಾನು ಮನೆಬಿಟ್ಟು ಬಂದಿದ್ದೆ. ಭಾಗಮ್ಮನವರ ಭಾನಾಪುರದ ತೋಟದ ಮನೆಯಲ್ಲಿದ್ದ ಅವ್ವನ ಆರೋಗ್ಯ ಹದಗೆಡುತ್ತಿತ್ತು. ಏತ ನೀರಾವರಿ ಪದ್ಧತಿ ಬೇರೆ, ನೀರು ಸೇದುವಷ್ಟರಲ್ಲಿ ರಟ್ಟೆಯೇ ಸೋತುಹೋದಂತಹ ಅನುಭವ. ಮೊದಲೇ ಕೃಶವಾಗಿದ್ದ ಅವ್ವ ಇನ್ನಷ್ಟು ಸೊರಗಿದಳು. ಇನ್ನು ಕಾಯಬಾರದೆಂದು ಅಪ್ಪ ತೀರ್ಮಾನಿಸಿ, ಪೊಲೀಸ್ ಕಂಪ್ಲೇಂಟ್ ಕೊಟ್ಟುಬಿಟ್ಟರು. ಭಾಗಮ್ಮನವರ ಅಣ್ಣ, ರಾಮಣ್ಣನವರು ಮನೆಗೆ ಬರುವಷ್ಟರಲ್ಲಿ ಪೊಲೀಸಿನವರು ಬಂದಾಗಿತ್ತು. ‘ನಿಮ್ಮ ತಂಗಿ ಇವರ ಮಗಳನ್ನು ಮತ್ತೆ ಕರೆದುಕೊಂಡು ಬಂದಿಲ್ಲ ಅಂತ ಕಂಪ್ಲೇಂಟ್ ಕೊಟ್ಟಿದಾರೆ. ಕಡೆ ಪಕ್ಷ ಮಗಳು ಇಲ್ಲಿದ್ದಾಳೆ, ಹೀಗಿದ್ದಾಳೆ ಅನ್ನೋ ವಿಷ್ಯ ತಿಳಿಸ್ಬೇಕು ತಾನೆ? ನಿಮ್ ತಂಗಿಗೆ ಒಂದು ಪತ್ರ ಬರೆಯೋದಕ್ಕೆ ಕಷ್ಟ ಏನ್ರೀ! ಮೂರು ತಿಂಗಳಾದರೂ ಮಗಳು ಬರದೇ ಇದ್ದದ್ದಕ್ಕೆ, ಅವಳಿಗೆ ಎಳ್ಳು ನೀರು ಬಿಡೋದಕ್ಕೆ ಹೊರಟಿದ್ದಾರೆ. ಏನ್ ಮಾಡೋದು ನೀವೇ ಹೇಳಿ’ ಎಂದು ಕೈಚೆಲ್ಲಿಬಿಟ್ಟರು.

ರಾಮಣ್ಣನವರು ನೇರವಾಗಿ ಕಂಪೆನಿಗೆ ಬಂದುಬಿಟ್ಟರು. ನಡೆದ ಸಂಗತಿಯನ್ನೆಲ್ಲ ಹೇಳಿದ್ದರು. ಊರಿಗೆ ಹಿಂತಿರುಗುವುದನ್ನು ಬಿಟ್ಟು ಮತ್ಯಾವ ಆಯ್ಕೆಯೂ ಇರಲಿಲ್ಲ. ಬಟ್ಟೆ ವಸ್ತುಗಳನ್ನೆಲ್ಲ ಚೀಲದಲ್ಲಿ ತುಂಬಿಕೊಂಡು ಹೊರಟುನಿಂತೆ. ಇಡೀ ಕಂಪೆನಿಯೇ ಬೇಸರಿಸಿತ್ತು. ಮುರುಗೋಡು ರೇಣಮ್ಮನವರು ರಂಗದಲ್ಲಿ ಮಾತ್ರವಲ್ಲ, ನಿಜದಲ್ಲೂ ತಾಯಿಯೇ ಆಗಿದ್ದರು. ಎಲ್ಲರೊಂದಾಗಿ ಒಂದು ಜೊತೆ ಬಟ್ಟೆ ಕೊಟ್ಟು ಕಳುಹಿಸಿದರು. ಅವರ ಭಾವಪೂರ್ಣ ಹಾರೈಕೆಗಳೆಲ್ಲ ವಿದಾಯದ ಹೆಜ್ಜೆಗಳನ್ನು ಅಂದು ಭಾರಗೊಳಿಸಿದ್ದವು.

ಇತ್ತ ಭಾನಾಪುರಕ್ಕೆ ಬಂದ ಮೇಲಿನ ಕತೆ ಕೇಳಿ. ಅವ್ವ ಅಪ್ಪರು ಭಾಗಮ್ಮನವರ ತೋಟದ ಮನೆಯನ್ನು ಬಿಟ್ಟು ಭಾನಾಪುರದಲ್ಲೇ ಬೇರೆ ಮನೆ ನೋಡಿಕೊಂಡರು. ಸ್ವಚ್ಛಂದ ಆಗಸದಲ್ಲಿ ಹಾರಾಡುತ್ತಿದ್ದ ಹಕ್ಕಿಯನ್ನು ಹಿಡಿದು ಪಂಜರಕ್ಕೆ ಹಾಕಿದಂತಹ ಸ್ಥಿತಿ. ಮನೆಗೆ ಬಂದೆ ಎಂಬುದಕ್ಕಿಂತ ನಾಲ್ಕನೇ ತರಗತಿಯಲ್ಲಿ ಕೂರುವಂತಾಯಿತಲ್ಲಾ ನನ್ನ ಪಾಡು ಎಂಬ ಹತಾಶೆ. ಹೊಸಪೇಟೆ, ಗದಗದಲ್ಲಿ ಎರಡು ವರ್ಷ ಮುಗಿಸಿದ್ದೆ. ಈ ಶಾಲೆಯವರು ನೇರವಾಗಿ ನಾಲ್ಕನೇ ತರಗತಿಗೆ ಕೂರಿಸುತ್ತೇವೆ. ಆದರೊಂದು, ವರ್ಗಾವಣೆ ಪತ್ರವನ್ನು ತರಬೇಕೆಂದು ತಾಕೀತು ಮಾಡಿದ್ದರು. ಅಪ್ಪನಿಗೆ ಅದ್ಯಾವ ಮಹಾ ಕೆಲಸ! ತಂದುಕೊಟ್ಟದ್ದಾಯಿತು, ನಾನು ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದೂ ಆಯಿತು. ನನಗೋ ಕಂಪೆನಿಯದ್ದೇ ಗುಂಗು ಹಿಡಿದಿತ್ತು ಆಗ. ಶಾಲೆಯಲ್ಲೆಲ್ಲ ಅಭಿನಯಿಸಿದ್ದ ನಾಟಕದ ಪಾತ್ರಗಳನ್ನೇ ಮತ್ತೆ ನಟಿಸುತ್ತಿದ್ದೆ. ಕಂಪೆನಿಯ ಅನುಭವ ಹೇಳಿದ್ದೇ ಹೇಳಿದ್ದು.

ಮುಂದೆ ಹೇಳುವ ಕತೆ ಕಾಕತಾಳಿಯ ಎನಿಸಬಹುದು. ಈ ಭಾನಾಪುರದ ಅಕ್ಕಿ ಭಾಗಮ್ಮ ಹಾಗೂ ಇಡೀ ಕುಟುಂಬ ಮಾನವಿ ಕಂಪೆನಿ ಬಿಟ್ಟು ಭಾನಾಪುರಕ್ಕೆ ವಾಪಾಸಾದರು. ಮರಳಿದ್ದೆಂದರೆ ಹೇಗೆ, ನಾಟಕ ಕಂಪೆನಿಯ ಕಲಾವಿದರೆಂಬ ಅಸ್ತಿತ್ವವನ್ನೇ ಮರೆತಂತೆ! ಗಂಡು ಮಕ್ಕಳ ಮದುವೆ ಮಾಡಬೇಕೆಂದು ಭಾಗಮ್ಮನವರು ಕಂಪೆನಿಯನ್ನೇ ತೊರೆದುಬಂದಿದ್ದರು. ಭಾನಾಪುರದಲ್ಲಿ ಮೂರು ರಸ್ತೆ ಕೂಡುವ ಜಾಗವಿದೆ. ಅಲ್ಲಿ ಹೊಟೇಲು ತೆರೆದು, ವ್ಯಾಪಾರಕ್ಕಿಳಿದರು.

ಊರೆಂದರೆ ಸುದ್ದಿ ಮಾಧ್ಯಮವೇ ಸರಿ. ಜನರೆಲ್ಲ ವರದಿಗಾರರಾಗಿ ತಾಜಾ ಸುದ್ದಿಯನ್ನೇ ಹಂಚುತ್ತಿರುವಾಗ ಈ ವಿಷಯ ನನ್ನ ಕಿವಿಗೆ ಬೀಳದಿರುವುದೇ ಅಸಾಧ್ಯ. ಲಕ್ಷ್ಮೀದೇವಿ ಬಂದಿದ್ದಾಳೆಂಬ ಸಂಗತಿ ತಿಳಿಯುತ್ತಿದ್ದಂತೆ ಕಾಲು ಚಕ್ರದಂತೆ ಅವರ ಮನೆಗೇ ಎಳೆದೊಯ್ದಿತು. ಹೋಗಿದ್ದೇ ಮಾತುಕತೆಯಾಡಿ, ಹಾಗಾಯಿತು ಹೀಗಾಯಿತು ಅಂತೆಲ್ಲ ಹರಟೆ ಹೊಡೆದೆ. ಹೊಟೇಲಿನ ಈ ಪಟ್ಟಂಗದ ಚಾವಡಿಗೆ ಬಿಡುವಿದ್ದಾಗೆಲ್ಲ ಬರುತ್ತಿದ್ದೆ. ಶಾಲೆಗೆ ಹೋಗುವುದನ್ನು ಬಿಟ್ಟಾದರೂ ಸರಿ, ಸಮಯ ಸರಿದೂಗಿಸಿಕೊಂಡು ಭೇಟಿಯಾಗುತ್ತಿದ್ದೆ. ಕಣ್ಣುಗಳೇ ಕ್ಯಾಮರಾಗಳಾಗಿದ್ದ ಕಾಲದಲ್ಲಿ ಅವ್ವನಿಗೆ ನನ್ನ ಸುದ್ದಿ ತಲುಪಿಯೇ ಹೋಯಿತು. ಸಿಟ್ಟು ನೆತ್ತಿಗೇರಿದ್ದ ಅವ್ವ ಊದುವ ಕೊಳವೆಯಲ್ಲಿ ಕಾಲಿಗೆ ಬರೆ ಇಟ್ಟಳು. ‘ಕಾಲಿದ್ರೆ ಆಕಿ ಮನಿಗೆ ಹೋಗ್ಬೇಕು ಅನ್ಸ್ತೇತಿ. ನಡಿಲಿಕ್ಕೇ ಆಗ್ದಿದ್ರೆ! ಈಗ್ ಹೆಂಗ್ ಹೋಗ್ತಿ ನೋಡಾನ?’, ಹೀಗೆ ಪಂಥಾಹ್ವಾನ ಸಿಗುತ್ತಿತ್ತು. ಹದಿನೈದು ದಿನಗಳು ಕಾಲೂರಲಾರದೆ ಒದ್ದಾಡಿಹೋಗುತ್ತಿದ್ದೆ. ನಾ ಹೋದ ಮೇಲೆ ಮನೆಯಲ್ಲಿ ಏನಾಯಿತೆಂದು ಕೇಳುವ ಗೋಜಿಗೇ ಹೋಗಿರಲಿಲ್ಲ. ಅಪ್ಪ ಬಾಸುಂಡೆ ಬರುವಂತೆ ಹೊಡೆದದ್ದನ್ನೆಲ್ಲ ಅವ್ವ ಹೇಳಿ ಅತ್ತಿದ್ದಳು. ನನಗೆ ಹೊಡೆಯುವ ಮೂಲಕ ಆ ನೋವಿನ ಭಾರವನ್ನು ಕಳೆದುಕೊಳ್ಳಬಹುದೆಂದು ಅವ್ವ ತಿಳಿದಿದ್ದಳೋ ಏನೊ! ಹಾಗಾಗಿ ಎಷ್ಟೇ ಹೊಡೆದರೂ, ನಾಟಕದ ಕಂಪೆನಿ ನಮ್ಮಂತಹ ಬಡವರಿಗಲ್ಲ ಎಂದೆಷ್ಟೇ ಬಲವಂತದಿಂದ ಅರ್ಥಮಾಡಿಸಲು ಪ್ರಯತ್ನಪಟ್ಟಷ್ಟೂ ನಾನು ಬಂಧಮುಕ್ತಳಾಗುವುದಕ್ಕೆ ಯೋಚಿಸುತ್ತಿದ್ದೆ.

ಕಾಲವೂ ಒದಗಿಬಂದಿತ್ತು. ಸಿರಟ್ಟಿ ರಾಮಣ್ಣ ಎಂಬುವವರು ಪಂಪನಗೌಡರ ಮಾಲೀಕತ್ವದ ಹೂವಿನ ಹಡಗಲಿ ಕಂಪೆನಿಗೆ ನನ್ನನ್ನು ಕಳುಹಿಕೊಡಬೇಕೆಂದು ಅವ್ವನನ್ನು ಒತ್ತಾಯಿಸಿದರು. ಬೇಡವೆಂದು ಎಷ್ಟೇ ಹೇಳಿದರೂ ಕೇಳಲಿಲ್ಲ. ನನ್ನ ಮನಸ್ಸಿನ ಮಾತು ಅವ್ವನಿಗೆ ಕೇಳಿಸಿತೆನ್ನಿಸುತ್ತದೆ. ಅಪ್ಪನನ್ನು ಒಪ್ಪಿಸಿ, ನನ್ನೊಂದಿಗೆ ತಮ್ಮನ ಜೊತೆಗೂಡಿ ಅವ್ವನೂ ಹೊರಟಳು. ದುರ್ಗಾದಾಸ್ ಎಂಬುವವರು ಹರಿಶ್ಚಂದ್ರ, ಮಾಲೀಕರ ಪತ್ನಿ ಅಂಜನಾದೇವಿ ಚಂದ್ರಮತಿ ಪಾತ್ರ ಮಾಡುತ್ತಿದ್ದರು. ನಾನು ಲೋಹಿತಾಶ್ವನ ಪಾತ್ರದಲ್ಲಿ ಮೊದಮೊದಲು ಕಾಣಿಸಿಕೊಳ್ಳುತ್ತಿದ್ದೆ. ಪಂಪನಗೌಡರ ಮಗಳು ಶಾಲೆ ಮುಗಿಸಿಬಂದಿದ್ದಳೆಂದು ಲೋಹಿತಾಶ್ವನ ಪಾತ್ರ ಅವಳಿಗೇ ನೀಡಿದರು. ಪಾತ್ರ ಕೈತಪ್ಪಿದರೆ ಅಳು ಒತ್ತರಿಸಿ ಬರುತ್ತಿತ್ತು. ಅವಳು ಆಗುವುದಿಲ್ಲ ಎಂದ ದಿನ ನಾ ಮಾಡಬೇಕಿತ್ತು.

ಇದರೊಂದಿಗೆ ಅನಕ್ಷರಸ್ಥೆಯಾಗಿದ್ದ ಅವ್ವನಿಗೆ ಕಂಪೆನಿಯ ರೀತಿ ರಿವಾಜುಗಳು, ಹೇಗೆ ವರ್ತಿಸಬೇಕೆಂದು ತಿಳಿದಿರಲಿಲ್ಲ. ತೀರಾ ಹಳ್ಳಿಭಾಗದ ಹೆಂಗಸಾಗಿದ್ದ ಅವ್ವನನ್ನು ಕಂಡು ಉಳಿದವರು ಅಸಹ್ಯವೆಂಬಂತೆ ನೋಡಲಾರಂಭಿಸಿದರು. ಇದೆಲ್ಲಕ್ಕೂ ಕಾರಣ ನಾನೇ ಎಂದು ಅವ್ವನಿಗೆ ಮತ್ತಷ್ಟು ದೃಢವಾಗತೊಡಗಿತ್ತು. ನಮ್ಮನ್ನು ನಡೆಸಿಕೊಳ್ಳುತ್ತಿದ್ದ ರೀತಿ, ವಾತಾವರಣವೇ ಮುಜುಗರ ಹುಟ್ಟಿಸುತ್ತಿದ್ದರೂ ಗಂಗಾವತಿ, ಸಿದ್ಧಾಪುರ, ಸಾಲು ಹುಣಿಸೇಮರಗಳಲ್ಲಿ ಮೂರು ಕ್ಯಾಂಪ್‌ ಪೂರೈಸಿದೆ. ನಿರ್ದಿಷ್ಟ ಪಾತ್ರವಿಲ್ಲದ ಬೇಸರ ಒಂದುಕಡೆಯಾದರೆ, ತಾಯಿಯ ಅಸಹನೆಗೆ ಗುರಿಯಾದ ಹೆದರಿಕೆ ಮತ್ತೊಂದು ಕಡೆ. ಈ ಕಂಪೆನಿಯಲ್ಲಿ ಮುಂದುವರೆಯುವುದು ತರವಲ್ಲವೆಂದು ಮರಳಿ ಊರಿಗೆ ಹೊರಟೆ.

(ಹಿಂದಿನ ಕಂತು: ಛಡಿ ಚಂ ಚಂ….)

About The Author

ಕೀರ್ತಿ ಬೈಂದೂರ್

ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಂದೋಲನ ಪತ್ರಿಕೆಯ ಹಾಡುಪಾಡು ಪುಟದಲ್ಲಿ ಇವರ ಅನೇಕ ಲೇಖನಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ