ಕುಂಚಗಳ ತರಬೇಡ
ಬಿದ್ದ ಹೂಗಳಿಗೂ
ವೈಭವದ ದಿನಗಳಿದ್ದವು
ಬೂದಿಯಾಗದ
ನೆನಪುಗಳೊಳಗೂ
ಹಿಮಗೆಂಡದ
ನೋವುಗಳಿದ್ದವು
ಗಾಜಿನಂಥ ಕಣ್ಣೊಳಗೂ
ಚೂರಾಗದ ಚಿತ್ರಗಳಿದ್ದವು
ಸುಡು ಬೇಸಿಗೆಯಲ್ಲಿಯೂ
ಪ್ರಿಯವೆನಿಸುವ ಹಸಿ ಸ್ಪರ್ಶವಿತ್ತು
ನಿನ್ನೊಳಗೆ ಮಲಗಿ
ವರ್ಷಗಳು ಕಳೆದಿವೆ;
ಮೃತ ಸಮುದ್ರದಂಥ
ಮೈಯೊಳಗಿನ
ನೆತ್ತರೂ ಹೆಪ್ಪುಗಟ್ಟಿದೆ;
ಈಗೇನಿದ್ದರೂ
ಮಾಗಿ ಪರ್ವ;
ತ್ಯಕ್ತರಾಗಿ ವಸಂತದ
ದಿನಗಳನ್ನು ದೂಡಬೇಕು
ಒಬ್ಬಂಟಿಯಾಗಿರುವುದನ್ನು
ರೂಢಿಸಿಕೊಳ್ಳಬೇಕು..!
ಜೊತೆಗಾರರು
ಎಲ್ಲಿಯವರೆಗೂ ಬರುತ್ತಾರೆ?
ಸ್ಮಶಾನದವರೆಗೂ
ಬರಬಹುದು
ಹೆಚ್ಚೆಂದರೆ
ಸಮಾಧಿಯವರೆಗೂ..
ಸಮಾಧಿಯೊಳಗೆ
ಪರಿವಾರವಿರುವುದಿಲ್ಲ;
ಕಡೆಯಪಕ್ಷ ಎದೆಯಮೇಲೆ
ಹಚ್ಚಿಟ್ಟ ಶೋಕದ
ದೀಪವನ್ನು ಆರದಂತೆ
ಮರೆಮಾಡಿಕೊಳ್ಳಲೂ
ಕೈಗಳಿರುವುದಿಲ್ಲವೆಂದಮೇಲೆ
ಹಚ್ಚಿಕೊಳ್ಳುವುದರಲ್ಲಿ
ಯಾವ ಅರ್ಥವಿದೆ?
ಅರ್ಥವಿಲ್ಲದ ಪ್ರಶ್ನೆಗಳು
ಮನುಷ್ಯನನ್ನು ಅರ್ಧಸುಟ್ಟರೆ
ನಾವಿಟ್ಟ ನಂಬಿಕೆಗಳು
ಇನ್ನರ್ಧ ಸುಡುತ್ತವೆ..!
ಸುಟ್ಟ ಬದುಕಿನ ಚಿತ್ರಕ್ಕೆ
ಹಸಿರು ಬಣ್ಣ ಮೆತ್ತಲು
ಕುಂಚಗಳ ದಯಮಾಡಿ
ಮತ್ತೆ ತರಬೇಡ..!
ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ