ಹೀಗೆ ಹೊತ್ತಿಲ್ಲದ ಹೊತ್ತಿನಲ್ಲಿ ಕೆಲಸಮಾಡುವುದರಿಂದ, ಓಡಾಡಲು ಸ್ವಂತ ವಾಹನ ಇಲ್ಲದಿರುವುದರಿಂದ, ರೈಲು, ಬಸ್ಸುಗಳಲ್ಲಿ ಅಥವಾ ನಡೆದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬೇಕಾಗಿರುವುದರಿಂದ, ಕೆಲವು ಅನಾಹುತಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದೇ ಹೆಚ್ಚಿನ ಅನಾಹುತಗಳಿಗೆ ಕಾರಣ. ಇದು ಭಾರತೀಯ ವಿದ್ಯಾರ್ಥಿಗಳೇ ಅಲ್ಲ, ಎಲ್ಲಾ ದೇಶಗಳ ವಿದ್ಯಾರ್ಥಿಗಳಿಗೂ ಜರುಗುತ್ತದೆ. ರಾತ್ರಿಯ ಹೊತ್ತು ಜನ ಸಂದಣಿ ಕಡಿಮೆ ಇರುವುದರಿಂದ, ಕುಡಿದ ಮತ್ತಿನಲ್ಲಿ ಇರುವವರ, ಮಾದಕ ವ್ಯಸನಿಗಳ, ಸಣ್ಣ ಪುಟ್ಟ ಕಳ್ಳರ, ಸುಮ್ಮನೆ ಕೀಟಲೆ ಮಾಡುವವರ ಕಣ್ಣಿಗೆ ಬಿದ್ದು ಅನಾಹುತ ಸಂಭವಿಸುತ್ತದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

ಇತ್ತೀಚಿಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ಅಮೇರಿಕಾದಲ್ಲಿ ಆಗುತ್ತಿರುವ ದಾಳಿಗಳ ಬಗ್ಗೆ ಪ್ರಜಾವಾಣಿ ಪತ್ರಿಕೆ ಬೆಳಕು ಚೆಲ್ಲಿದೆ (ಆಳ-ಅಗಲ: ಭಾರತೀಯರ ವಿದ್ಯಾರ್ಥಿಗಳೇ ಏಕೆ ಗುರಿ, ಮಾರ್ಚ್ ೨೮, ೨೦೨೪). ಪತ್ರಿಕೆಯಲ್ಲಿ ಇರುವ ವಿಚಾರಗಳು ಬಹು ಮಟ್ಟಿಗೆ ನಿಜವಾದರೂ, ಇಂತಹ ಪ್ರಕರಣಗಳ ಬಗ್ಗೆ ಈ ಅಂಕಣದಲ್ಲಿ ಬೆಳಕು ಚೆಲ್ಲೋಣ.

ತಮ್ಮದಲ್ಲದ ಜನಾಂಗಗಳ ಮೇಲಿನ ದಬ್ಬಾಳಿಕೆ ಇಂದು ನೆನ್ನೆಯದಲ್ಲ, ಅದು ಯಾವುದೋ ಒಂದು ದೇಶದಲ್ಲಿ ನಡೆಯುವ ಸಂಗತಿಯೂ ಅಲ್ಲ. ಎಲ್ಲಾ ದೇಶಗಳಲ್ಲಿ, ಎಲ್ಲಾ ಕಡೆ ನಡೆದಿರುವಂಥಹುದೆ. ನಮ್ಮ ರಾಜ್ಯದಲ್ಲೇ ತೆಗೆದುಕೊಂಡರೆ ಉತ್ತರ ಭಾರತದವರ ಮೇಲೆ, ಬೆಂಗಳೂರಿನಲ್ಲಿ ನೆಲೆಸಿರುವ ಪಕ್ಕದ ರಾಜ್ಯಗಳ ಜನರ ಮೇಲೆ ಸ್ವಲ್ಪ ಅಸಹನೆ ಆಗಾಗ ಪ್ರಕಟಗೊಂಡಿದೆ, ಪ್ರಕಟಗೊಳ್ಳುತ್ತಿದೆ. ಇದು ಭಾರತದ ಇತರ ರಾಜ್ಯಗಳಲ್ಲೂ ಕಾಣಸಿಗುತ್ತದೆ. ಭಾರತದವರೇ ಇತರ ಭಾರತೀಯರಿಗೆ ತೋರುವ ಅಸಹನೆ ಕಾಣುತ್ತೇವೆ. ಇದು ಮಾನವನ ಒಂದು ಗುಣ. ತಮಗೇ ಎಲ್ಲಾ ಸಿಗಬೇಕು ಎನ್ನುವ ಮನಸುಗಳ ನಡುವೆ, ತಮಗೆ ಸಿಗುತ್ತಿರುವುದನ್ನು ಇತರರಿಗೆ ಹಂಚುವುದನ್ನು ಸಹಿಸುವ ಗುಣವೂ ಇರುವುದಿಲ್ಲ. ಸಾಮಾನ್ಯವಾಗಿ ಬಹುತೇಕ ಜನ ಒಳ್ಳೆಯವರೇ ಆಗಿರುವುದರಿಂದ ಸಮಾಜ ಇನ್ನೂ ಭಯಾನಕವಾಗಿಲ್ಲ. ಆದರೂ ಕೆಲವು ಕೆಟ್ಟ ಮನಸುಗಳಿಂದ ಅನಾಹುತಗಳಾಗುತ್ತಿರುತ್ತವೆ. ಇಂತಹ ಕೆಟ್ಟಬೀಜ ಜನರ ಮನಸಿನಲಿ ಬಿತ್ತುವುದು ದೇಶಕಟ್ಟುವ ಅವಕಾಶವುಳ್ಳ ಬಹುತೇಕ ರಾಜಕಾರಣಿಗಳೇ ಆಗಿರುತ್ತಾರೆ ಎನ್ನುವುದು ಸಮಾಜದ ವ್ಯಂಗ್ಯ.

ಡೊನಾಲ್ಡ್ ಟ್ರಂಪ್ ಅಮೆರಿಕಾದ ಅಧ್ಯಕ್ಷರಾದಾಗ “ಅಮೇರಿಕಾ ಮೊದಲು” ಎನ್ನುವ ಸ್ಲೋಗನ್ ಮೊಳಗಿಸಿದರು. ವಲಸಿಗರಿಂದ ಸ್ವದೇಶಿಗರ ಕೆಲಸಕ್ಕೆ ಕುತ್ತು ಬರುತ್ತಿದೆ ಎನ್ನುವ ಅನುಮಾನವನ್ನು ಎಲ್ಲೆಡೆ ಬಿತ್ತಿದರು. ಇದರಿಂದ ಸದಾ ಉದಾರಿ ಮನೋಭಾವದಿಂದ ಯೋಚಿಸುತ್ತಿದ್ದ ಅಮೇರಿಕಾದ ಜನ ಸ್ವದೇಶ ಮನೋಭಾವ ಬೆಳಿಸಿಕೊಂಡು ಟ್ರಂಪ್ ಅವರನ್ನು ಗೆಲ್ಲಿಸಿ ಅಧ್ಯಕ್ಷರನ್ನಾಗಿ ಮಾಡಿದರು. ಇದರಿಂದ ಯುವಜನ ವಲಸಿಗರ ಮೇಲೆ ಅಸಹನೆ ಬೆಳೆಸಿಕೊಂಡರು. ಬೇರೆ ಬೇರೆ ವಿದ್ಯಮಾನಗಳು ನಡೆದವು. ಕೊನೆಗೆ ಮನವರಿಕೆಗೊಂಡ ಜನ ಮುಂದಿನ ಚುನಾವಣೆಯಲ್ಲಿ ಬೈಡನ್ ಅವರನ್ನು ಅಧ್ಯಕ್ಷರಾಗಲು ಅನುವು ಮಾಡಿಕೊಟ್ಟರು.

ಯಾವುದೇ ಸಂಗತಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪುವ ಸಮಯ ಈಗ ಕ್ಷಣಗಳಲ್ಲಿದೆ. ಅದರಲ್ಲೂ ಅಮೆರಿಕದಲ್ಲಿ ನಡೆಯುವ ಸಂಗತಿಗಳ ಬಗ್ಗೆ ಎಲ್ಲಿಲ್ಲದೆ ಆಸಕ್ತಿ ಇಡೀ ಜಗತ್ತಿನಲಿ ಇದೆ. ಒಂದು ಸಣ್ಣ ಸಂಗತಿಯೂ ಬೇಗ ಚಲನೆ ಕಂಡುಕೊಂಡು ಎಲ್ಲೆಡೆ ತಾಕುತ್ತದೆ. ಮಾಧ್ಯಮಗಳು ಅದನ್ನು ಎಷ್ಟು ರಾಡಿ ಎಬ್ಬಿಸಬೇಕೋ ಅಷ್ಟು ಎಬ್ಬಿಸಿ, ಎಲ್ಲಾ ಸಂಗತಿಗಳಿಗೂ ಚರ್ಚೆ ಇಟ್ಟು, ಜನರಿಗೆ, ಮಾಧ್ಯಮ ನಡೆಸುವವರ ಇಷ್ಟದ ಸುತ್ತ ಚರ್ಚೆ ನಡೆಸುವಂತೆ ನೋಡಿಕೊಳ್ಳುತ್ತವೆ. ಆದ್ದರಿಂದ ಆಗುವ ಒಂದೋ, ಎರಡು ಸಂಗತಿಗಳು ದಿನಾ ನಡೆಯುತ್ತಿರುವ ಸಂಗತಿಗಳಂತೆ ಬಿಂಬಿಸುವ ಪ್ರಯತ್ನ ನಡೆಯುತ್ತವೆ. ಅಮೇರಿಕಾದ ದೊಡ್ಡಣ್ಣನ ಇಮೇಜಿನಿಂದ ಇತರ ಎಲ್ಲಾ ದೇಶಗಳಿಗೂ ಅಮೇರಿಕಾದ ಮೇಲೆ ಒಂದು ಸಣ್ಣ ಅಸಹನೆ ಇದೆ.

ಭಾರತದಲ್ಲಿ, ಹಲವಾರು ಧರ್ಮಗಳಿರುವಂತೆ, ಧರ್ಮಗಳಲ್ಲೂ ಜಾತಿಗಳೂ ಇವೆ. ಅಮೆರಿಕಾದಲ್ಲಿ ಜಾತಿ ವ್ಯವಸ್ಥೆ ಇಲ್ಲ. ಅನೇಕ ಧರ್ಮದವರು ನೆಲೆಸಿದ್ದಾರೆ. ಇತ್ತೀಚಿಗೆ ಭಾರತದಲ್ಲಿ ಒಂದು ಧರ್ಮದ ಬಗ್ಗೆ ಒಂದು ಬಗೆಯ ಸಂಶಯ ಶುರುವಾಗಿದೆ, ಇಂತಹ ಸಂಶಯ ಹೊತ್ತೇ ಹಲವಾರು ಜನ ಅಮೇರಿಕ ದೇಶಕ್ಕೆ ಬರುತ್ತಾರೆ. ಇಲ್ಲಿ ಬರುವ ಕೆಲ ಜನ ಒಂದುಗೂಡುತ್ತಾರೆ, ಗುಂಪನ್ನು ಕಟ್ಟಿಕೊಳ್ಳುತ್ತಾರೆ. ಅಮೆರಿಕಾದಲ್ಲೂ ಇದೇ ಭಾರತೀಯರು ಒಂದು ಧರ್ಮದ ಜನರ ಬಗ್ಗೆ ಅಸಹನೆ ತೋರುತ್ತಾರೆ. ಅದೇ ಮನೋಭಾವದಿಂದ ಒಂದು ಧರ್ಮಕ್ಕೆ ಸೇರಿದ ಜನಕ್ಕೆ ಎಷ್ಟೇ ಅರ್ಹತೆ ಇದ್ದರೂ ಭಾರತೀಯ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ಹಿಂದುಮುಂದೆ ನೋಡುತ್ತಿದ್ದಾರೆ. ಇಂತಹ ಗುಂಪುಗಾರಿಕೆ ಒಳಗೊಳಗೇ ಅಸಹನೆ ಉಂಟುಮಾಡುತ್ತದೆ.

ಇತ್ತೀಚಿಗೆ, ಭಾರತೀಯರು ಜಾತಿ ಸಂಘಗಳನ್ನು ಅಮೆರಿಕಾದಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ. ಅಮೆರಿಕಾದಲ್ಲಿ ವೀರಶೈವ ಸಂಘವಿದೆ, ಗೌಡರ ಸಂಘವಿದೆ, ತೆಲುಗು ಜನರ ರೆಡ್ಡಿ ಸಂಘ, ನಾಯಿಡು ಸಂಘ, ರಾಜು ಸಂಘ ಅಮೆರಿಕಾದಲ್ಲಿ ಇವೆ. ಇವು ಬರಿ ಹಿರಿಯರ ನಡುವೆ, ಮನರಂಜನೆಗಾಗಿ ಇದ್ದರೆ ಪರವಾಗಿಲ್ಲ, ಆದರೆ ಇಂತಹ ಗುಂಪುಗಳು ವಿಶ್ವವಿದ್ಯಾಲಗಳಲ್ಲಿ ಆಗುತ್ತಿವೆ. ಇಲ್ಲಿನ ಕ್ಯಾಂಪಸ್ ಉದ್ಯೋಗಳನ್ನು ತಮ್ಮವರಿಗೆ ಮಾತ್ರ ಕೊಡಿಸಲು ಸಹಾಯಮಾಡುತ್ತಾರೆ. ಅಲ್ಲಿ ತಮ್ಮದೇ ಗುಂಪನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅರ್ಹತೆ ಇದ್ದರೂ ತಮಗೆ ಕೆಲಸ ಸಿಗದಿದ್ದರೆ ಅಸಹನೆ ಶುರುವಾಗುತ್ತದೆ, ಸದ್ಯ ಇದು ದೈಹಿಕ ಹಲ್ಲೆಗೆ ಎಡೆಮಾಡಿಕೊಡುತ್ತಿಲ್ಲ, ಆದರೂ ಅಸಹನೆ ಬೆಳೆದೂ ಅಂತಹ ಕೃತ್ಯಕ್ಕೂ ಎಡೆಮಾಡಬಹುದು.

ಪ್ರಪಂಚದ ಎಲ್ಲೆಡೆಯಿಂದ ವಿದ್ಯಾರ್ಥಿಗಳು ಲಕ್ಷಗಳ ಸಂಖ್ಯೆಯಲ್ಲಿ ಅಮೆರಿಕಾಗೆ ಬರುತ್ತಿದ್ದಾರೆ. ಕಳೆದ ವರ್ಷ (೨೦೨೩) ಸುಮಾರು ನಾಲ್ಕೂವರೆ ಲಕ್ಷ ವಿದ್ಯಾರ್ಥಿ ವೀಸಾಗಳನ್ನು ಅಮೇರಿಕಾ ಭಾರತೀಯರಿಗೆ ಕೊಟ್ಟಿದೆ. ಇಷ್ಟು ಸಂಖ್ಯೆಯಲ್ಲಿ ಬರುವ ವಿದ್ಯಾರ್ಥಿಗಳು, ತಮ್ಮ ಖರ್ಚು ವೆಚ್ಚಕ್ಕಾಗಿ ಕೆಲಸ ಮಾಡಬೇಕಾಗುತ್ತದೆ. ಅಮೇರಿಕಾದ ಜೀವನ ತುಂಬಾ ದುಬಾರಿಯಾದ್ದರಿಂದ ಕೆಲಸಮಾಡುವುದು ಅನಿವಾರ್ಯ. ಆದರೆ ಅಷ್ಟು ಸಂಖ್ಯೆಯಲ್ಲಿ ಒಳ್ಳೆಯ ಉನ್ನತ ಕೆಲಸಗಳು ಇರುವುದಿಲ್ಲ. ಆದ್ದರಿಂದ ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಬೇಕಾಗುತ್ತದೆ. ಇಂತಹ ಕೆಲಸಗಳು ಸಾಮಾನ್ಯವಾಗಿ ರಾತ್ರಿ ಪಾಳಿ ಆಗಿರುತ್ತವೆ. ಸ್ಥಳೀಯರು ರಾತ್ರಿಪಾಳಿಯಲ್ಲಿ ಕೆಲಸಮಾಡುವುದು ಕಡಿಮೆ. ಹೀಗೆ ಹೊತ್ತಿಲ್ಲದ ಹೊತ್ತಿನಲ್ಲಿ ಕೆಲಸಮಾಡುವುದರಿಂದ, ಓಡಾಡಲು ಸ್ವಂತ ವಾಹನ ಇಲ್ಲದಿರುವುದರಿಂದ, ರೈಲು, ಬಸ್ಸುಗಳಲ್ಲಿ ಅಥವಾ ನಡೆದು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲುಪಬೇಕಾಗಿರುವುದರಿಂದ, ಕೆಲವು ಅನಾಹುತಗಳಿಗೆ ತೆರೆದುಕೊಳ್ಳುವುದು ಅನಿವಾರ್ಯವಾಗುತ್ತದೆ. ಇದೇ ಹೆಚ್ಚಿನ ಅನಾಹುತಗಳಿಗೆ ಕಾರಣ. ಇದು ಭಾರತೀಯ ವಿದ್ಯಾರ್ಥಿಗಳೇ ಅಲ್ಲ, ಎಲ್ಲಾ ದೇಶಗಳ ವಿದ್ಯಾರ್ಥಿಗಳಿಗೂ ಜರುಗುತ್ತದೆ. ರಾತ್ರಿಯ ಹೊತ್ತು ಜನ ಸಂದಣಿ ಕಡಿಮೆ ಇರುವುದರಿಂದ, ಕುಡಿದ ಮತ್ತಿನಲ್ಲಿ ಇರುವವರ, ಮಾದಕ ವ್ಯಸನಿಗಳ, ಸಣ್ಣ ಪುಟ್ಟ ಕಳ್ಳರ, ಸುಮ್ಮನೆ ಕೀಟಲೆ ಮಾಡುವವರ ಕಣ್ಣಿಗೆ ಬಿದ್ದು ಅನಾಹುತ ಸಂಭವಿಸುತ್ತದೆ. ಎಷ್ಟೋಸಲ ವಿದ್ಯಾರ್ಥಿಗಳು ರಾತ್ರಿ ಪಾಳಿಯಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ ಕೆಲಸ ಮಾಡಬೇಕಾಗುತ್ತದೆ; ಅಲ್ಲಿ ತರಾವರಿ ಜನ ಬರುತ್ತಾರೆ, ಅಂಥವರಲ್ಲಿ ಕೆಟ್ಟ ಜನರೂ ಇರುತ್ತಾರೆ, ಅಂತಹವರಿಂದ ಏನಾದರೂ ತೊಂದರೆ ಆಗಬಹುದು. ಅಮೆರಿಕಾದ ಶೇಕಡ ೮೦ ಜನರ ಹತ್ತಿರ ಗನ್ ಇದೆ, ಎಂದು ಒಂದು ಗಣತಿ ಹೇಳುತ್ತದೆ. ಗನ್ ಒಂದು ಕೆಟ್ಟವರ ಬಳಿಯಲ್ಲಿ ಇರಲೂ ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಸಾಧ್ಯವಾದಷ್ಟು ಯಾರೊಡನೆಯೂ ತಿಕ್ಕಾಟ ನಡೆಸುವುದು ಒಳ್ಳೆಯದಲ್ಲ. ಅಸುರಕ್ಷಿತ ಅನಿಸಿದರೆ ಅಂತಹ ಪ್ರದೇಶದಿಂದ ಹೊರನಡೆಯುವುದು ಸೂಕ್ತ. ಬೇರೆ ದೇಶಗಳ ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದಾರೆ, ಸ್ವದೇಶದ ವಿದ್ಯಾರ್ಥಿಗಳೂ ತೊಂದರೆ ಅನುಭವಿಸುತ್ತಿದ್ದಾರೆ, ಆದರೆ ಭಾರತೀಯ ವಿದ್ಯಾರ್ಥಿಗಳಿಗೆ ತೊಂದರೆ ಆದರೆ ಭಾರತದ ಎಲ್ಲ ಪತ್ರಿಕೆಗಳಲ್ಲಿ ಹಾಗು ಟಿವಿಗಳಲ್ಲಿ ಚರ್ಚೆ ಆಗುವುದರಿಂದ ಅದರ ಪರಿಣಾಮ ಹೆಚ್ಚಿರುತ್ತದೆ.

ಅಮೆರಿಕಾದಲ್ಲಿ ವಿದ್ಯಾರ್ಥಿಗಳು ಓದಿನ ಜೊತೆಗೆ, ತಮ್ಮ ಖರ್ಚನ್ನೂ ನಿಭಾಯಿಸಬೇಕು, ವಿದ್ಯಾರ್ಥಿ ಸಾಲವಿದ್ದರೆ ಅದರ ಮರುಪಾವತಿಯ ಒತ್ತಡ, ಹಣವಿರುವ ಇತರರಂತೆ ಬದುಕುವ ಒತ್ತಡಗಳಿಂದ ನರಳುತ್ತಾರೆ. ಇದಲ್ಲದೆ ಭಾರತಕ್ಕೆ ಹೋದಾಗ ಉಡುಗೊರೆಗಳನ್ನು ತೆಗೆದುಕೊಂಡು ಹೋಗುವ ಒತ್ತಡ, ಭಾರತದಲ್ಲಿ ಹಣ ಖರ್ಚು ಮಾಡುವ ಒತ್ತಡವೂ ಇರುತ್ತದೆ. ಓದು ಮುಗಿದು ಒಳ್ಳೆಯ ಕೆಲಸ ಸಿಗುವವರೆಗೂ ಈ ಒತ್ತಡವನ್ನು ನಿಭಾಯಿಸಲೇಬೇಕು. ಅಮೆರಿಕೆಗೆ ಬರುವುದು ಒಂದು ಪ್ರತಿಷ್ಟೆ, ಸಾಧನೆ, ಗೌರವದ ಸಂಕೇತ, ಇಂತಹ ಭ್ರಮೆಗಳು ಭಾರತದ ಜನರಲ್ಲಿ ಇರುವವರೆಗೂ ಇಂತಹ ಕಷ್ಟಗಳೂ, ಅನಾಹುತಗಳು ತಪ್ಪಿದ್ದಲ್ಲ.