ಬಸ್ ಡಾಂಬರ್ ರಸ್ತೆ ಸೀಳಿಕೊಂಡು ಅರ್ಧ ದಾರಿ ಕ್ರಮಿಸಿತು. ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಜೋರಾಗಿ ಅಳುವ ಧನಿಯೊಂದು ಕೇಳಿ ಬಂದಿತು. ಎಲ್ಲರೂ ಗಾಬರಿಯಾಗಿ ಅತ್ತಕಡೆ ಗಮನ ಹರಿಸಿದರು. ನಾಗಚಂದ್ರನೂ ಆ ಕಡೆ ಹೊರಳಿ ನೋಡಿದ. ಇವನಿಗೆ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಅಳುವ ವ್ಯಕ್ತಿ ಸಾಮಾನ್ಯನಂತೆ ಕಾಣಿಸುತ್ತಿರಲಿಲ್ಲ. ಆತ ಬಟ್ಟೆ ಶಿಸ್ತಿನ ವ್ಯಕ್ತಿಯಾಗಿದ್ದ. ಯಾವುದೋ ಜವಾಬ್ದಾರಿಯುತ ಸ್ಥಾನದಲ್ಲಿರುವಂತೆ ಕಂಡುಬರುತಿತ್ತು.
ಶರಣಗೌಡ ಬಿ. ಪಾಟೀಲ ತಿಳಗೂಳ ಪ್ರಬಂಧ ನಿಮ್ಮ ಓದಿಗೆ

ಅವತ್ತು, ಪರೀಕ್ಷಾ ಕಾರ್ಯದ ನಿಮಿತ್ತ ಶಿಕ್ಷಕ ನಾಗಚಂದ್ರ ಒಂದು ಗಂಟೆ ಮುಂಚಿತವಾಗೇ ಪರೀಕ್ಷಾ ಕೇಂದ್ರದಲ್ಲಿ ಹಾಜರಾದ. ಇವನಂತೆ ಸುಮಾರು ಜನ ಪರೀಕ್ಷಾ ಕಾರ್ಯ ನಿರ್ವಹಿಸಲು ಬಂದಿದ್ದರು. ಪರೀಕ್ಷೆ ಎಂದರೆ ಅದೊಂದು ಪವಿತ್ರ ಕಾರ್ಯವೆಂದೇ ಹೇಳಲಾಗುತ್ತದೆ. ವಿದ್ಯಾರ್ಥಿಗಳು ಇಡೀ ವರ್ಷ ಓದಿದ್ದನ್ನು ಮೌಲ್ಯಮಾಪನಕ್ಕೊಳಪಡಿಸುವ ಒಂದು ಮಹತ್ವದ ವಿಧಾನವಾಗಿದ್ದು ಅದರಲ್ಲಿ ವಿದ್ಯಾರ್ಥಿಗಳ ಭವಿಷ್ಯವೂ ಅಡಗಿರುತ್ತದೆ. ಅಂದಿನ ಪರೀಕ್ಷೆಯು ಸಮಯಕ್ಕೆ ಸರಿಯಾಗಿ ಆರಂಭವಾಗಿ ಯಾವುದೇ ಅಡೆತಡೆ ಇಲ್ಲದೇ ನಿಗದಿತ ಸಮಯಕ್ಕೆ ಮುಕ್ತಾಯವಾಯಿತು. ಸಾಮಾನ್ಯವಾಗಿ ಪರೀಕ್ಷೆಗಳು ಮಾರ್ಚ್‌ ತಿಂಗಳ ಕೊನೆಯ ವಾರದಲ್ಲಿ ಆರಂಭವಾಗುತ್ತವೆ. ಆ ಸಮಯ ಬಿಸಿಲು ಕೂಡ ಜಾಸ್ತಿ ಅಂತಲೇ ಹೇಳಬಹುದು.

ಪರೀಕ್ಷೆ ಆರಂಭವಾದಾಗ ಬಿಸಿಲಿನ ತಾಪ ಅಷ್ಟೇನೂ ಇರಲಿಲ್ಲ. ಆದರೆ ಪರೀಕ್ಷೆ ಮುಗಿಸಿ ಹೊರ ಬಂದಾಗ ಬಿಸಿಲಿನ ಪ್ರಖರತೆ ಗರಿಷ್ಠ ಮಟ್ಟ ತಲುಪಿ ನಲವತ್ನಾಲ್ಕು ಡಿಗ್ರಿ ಸೆಲ್ಷಿಯಸ್ ತಲುಪಿದ್ದು ಗಾಬರಿ ಮೂಡಿಸಿತು. ಮೊದಲೇ ಕಲಬುರಗಿ ಕಡೆ ಬಿಸಿಲು ಎಲ್ಲಕ್ಕಿಂತ ಜಾಸ್ತಿನೇ ಇರುತ್ತದೆ, ನಾಗಚಂದ್ರನ ಹಣೆಯ ಮೇಲೆ ಬೆವರ ಹನಿಗಳು ತಂತಾನೆ ಹೊರ ಬರಲು ಆರಂಭವಾದವು. ಗಂಟಲು ಒಣಗಿ ಪದೇ ಪದೇ ನೀರು ಕುಡಿದರೂ ಬಾಯಾರಿಕೆ ನೀಗದಂತಾಯಿತು.

“ಅಬ್ಬಾ ಎಂಥಾ ಬಿಸಿಲು ಎಂಥಾ ಸೆಕೆ” ಅಂತ ಬೇಸರ ಹೊರ ಹಾಕಿದ. ಹಬ್ಬ ಮತ್ತು ಪರೀಕ್ಷೆ ಒಟ್ಟೊಟ್ಟಿಗೆ ಬಂದಿದ್ದರಿಂದ ಜನರ ಓಡಾಟವೂ ಜಾಸ್ತಿಯಾಗಿತ್ತು. ಪರೀಕ್ಷಾ ಕೇಂದ್ರವಲ್ಲದೇ ಇತರ ಸಾರ್ವಜನಿಕ ಸ್ಥಳಗಳಲ್ಲೂ ಜನವೋ ಜನ ಕಾಣುತಿದ್ದರು. ಪರೀಕ್ಷೆ ಮುಗಿದ ಬಳಿಕ ಜನ ಬೈಕು ಆಟೋ ಮತ್ತಿತರ ವಾಹನ ಹತ್ತಿ ಹೊರಟು ಹೋದರು. ನಾಗಚಂದ್ರ ಕಲಬುರಗಿಗೆ ಹೋಗುವವನಿದ್ದ. ಬೇಗ ಮನೆ ಸೇರಬೇಕು ಅಂತ ಒಂದು ಆಟೋ ಹತ್ತಿ ತಾಲೂಕು ಕೇಂದ್ರದ ಬಸ್ ನಿಲ್ದಾಣಕ್ಕೆ ಬಂದಿಳಿದಾಗ ಕಡು ಬಿಸಿಲು ಸಾಕಷ್ಟು ಹೈರಾಣು ಮಾಡಿತು. ಬಿಸಿಲಿನ ತಾಪ ಅಂಗಾಲಿನಿಂದ ನಡುನೆತ್ತಿಯ ತನಕ ಉರಿದು ಬೆವರಿನ ಸ್ನಾನವೇ ಮಾಡಿಸಿತು, ಬೆವರಿನಿಂದ ಮೈಮೇಲಿನ ಬಟ್ಟೆಗಳು ಕೂಡ ಕಲೆ ಮೂಡಿ ಅಸಹ್ಯ ಮೂಡಿಸಿದವು.

ಮಧ್ಯಾಹ್ನ ಸಮಯ ಬಸ್ ಸಂಚಾರ ಕಡಿಮೆ ಇರುತ್ತವೆ. ಹೋಗಲು ಯಾವ ಬಸ್ ಸಿಗ್ತಾವೋ ಇಲ್ಲವೋ ಅಂತ ಲೆಕ್ಕ ಹಾಕಿ ನಿಂತಾಗ ಕಲುಬುರಗಿಗೆ ಹೊರಡುವ ಬಸ್ಸೊಂದು ಬಂದು ನಿಂತಿತು. ನನ್ನ ಅದೃಷ್ಟ ಚನ್ನಾಗಿದೆ ಅಂತ ಭಾವಿಸಿ ಮೆಲ್ಲಗೆ ಆ ಕಡೆ ಹೆಜ್ಜೆಹಾಕಿದ. ಸುಮಾರು ಜನ ಬಸ್ಸಿಂದ ಇಳಿದರು. ಆಗ ಅರ್ಧ ಬಸ್ಸೇ ಖಾಲಿಯಾಯಿತು. ಸಧ್ಯ ಆರಾಮಾಗಿ ಹೋಗಬಹುದು ಅಂತ ಬಸ್ ಹತ್ತಿ ಮುಂದಿನ ಸೀಟಿಗೆ ಹೋಗಿ ಕುಳಿತ. ಸ್ವಲ್ಪ ಸಮಯದಲ್ಲೇ ಬಸ್ಸಿನ ಎಲ್ಲಾ ಸೀಟುಗಳು ಭರ್ತಿಯಾದವು. ಸುಮಾರು ಹತ್ತು ಹದಿನೈದು ನಿಮಿಷ ಕಳೆದರೂ ಬಸ್ ಹೊರಡದೇ ಇದ್ದಾಗ ಸಹಜವಾಗಿ ಇವನಿಗೆ ಚಡಪಡಿಕೆ ಶುರುವಾಗಿ…

“ಬಸ್ ಫುಲ್ ಆದರೂ ಡ್ರೈವರ್ ಯಾಕೆ ಚಾಲೂ ಮಾಡ್ತಿಲ್ಲ. ನಿಲ್ಲಿಸಿ ಎಲ್ಲಿಗೆ ಹೋದ?” ಅಂತ ಅತ್ತ ಇತ್ತ ದೃಷ್ಟಿ ಹಾಯಿಸಿದ. ಡ್ರೈವರ್‌ ಪಕ್ಕದ ಕ್ಯಾಂಟೀನ್ ಮುಂದೆ ನಿಂತು ಮಜ್ಜಿಗೆ ಕುಡಿಯುವದು ಕಂಡು ಬಂದಿತು. ಆತನಿಗೂ ಬಿಸಿಲಿನ ತಾಪ ತಟ್ಟಿದೆ ಅಂತ ಯೋಚಿಸಿ ಬ್ಯಾಗಿನಿಂದ ಪೇಪರ್ ಹೊರ ತೆಗೆದು ಗಾಳಿ ಹಾಕಿಕೊಳ್ಳತೊಡಗಿದ.

ವಿಪರೀತ ಸೆಕೆಯಿಂದ ಪ್ರಯಾಣಿಕರು ಕೂಡ ತೊಂದರೆ ಅನುಭವಿಸತೊಡಗಿದರು. ಕರ್ಚೀಪೋ ಪೇಪರೋ ತೆಗೆದುಕೊಂಡು ಗಾಳಿ ಹಾಕಿಕೊಳ್ಳುತ್ತಾ ಬಸ್ ಯಾವಾಗ ಹೊರಡ್ತಾದೋ ಏನೋ? ನಮ್ಮ ತ್ರಾಸ್ ನಮಗೇ ಗೊತ್ತು ಇಲ್ಲಿ ಬೆಂಕಿ ಕಾಯಿಸಿಕೊಂಡಂಗ ಆಗ್ತಿದೆ. ಆದರೂ ಬಸ್ ಬಿಡ್ತಿಲ್ಲ. ನಮಗೆಲ್ಲ ಇಲ್ಲೇ ಕೂಡಿಸಿ ಡ್ರೈವರ್ ಎಲ್ಲಿಗೆ ಹೊರಟು ಹೋದ? ಹಿಂಗ ಹೋದರ ಹ್ಯಾಂಗ? ಅಂತ ಕೋಪ ತಾಪ ಹೊರ ಹಾಕಿದರು.

ಬಸ್ ಜಾಸ್ತಿ ಹೊತ್ತು ನಿಂತಾಗ ತಿಂಡಿ ತಿನಿಸು, ತಂಪು ಪಾನೀಯ ಮಾರುವವರು ಬಸ್ಸಿಗೆ ಸುತ್ತುವರಿದು ನಾಮುಂದು ತಾಮುಂದು ಅಂತ ವ್ಯಾಪಾರ ಶುರು ಮಾಡಿದರು.

ದೊಡ್ಡ ಪ್ಲೇಟಿನಲ್ಲಿ ಪಿರಮಿಡ್ ಆಕಾರದಲ್ಲಿ ಕಲ್ಲಂಗಡಿ ಕತ್ತರಿಸಿಕೊಂಡು ತಂದ ಹುಡುಗನೊಬ್ಬ “ಲಾಲೇ ಲಾಲ್ ಲಾಲೇ ಲಾಲ್” ಅಂತ ಜೋರಾಗಿ ಕೂಗುತ್ತಾ ಪ್ರಯಾಣಿಕರನ್ನು ಆಕರ್ಷಿಸಿದರೆ “ಥಂಡಾ ಥಂಡಾ ಕೂಲ್ ಕೂಲ್” ಅಂತ ಐಸ್ ಕ್ರೀಮ್ ಮಾರುವವನೂ ಬಣ್ಣ ಬಣ್ಣದ ಐಸ್ ಕ್ರೀಮ್ ಥರ್ಮಾಕೂಲ್ ಡಬ್ಬಿಯಲ್ಲಿ ಹಾಕಿಕೊಂಡು ಬಂದು ಮಾರಲು ಪೈಪೋಟಿಗಿಳಿದ.

“ಒನ್ ಲಿಟರ್, ಹಾಫ್ ಲಿಟರ್ ಕೋಲ್ಡವಾಟರ ಬರೀ ಹತ್ತು ರುಪಾಯಿ, ಇಪ್ಪತ್ತು ರುಪಾಯಿ” ಅಂತ ನೀರು ಮಾರುವವರೂ ಒಂದೇ ಸವನೆ ಕೂಗುತ್ತಾ ನಾಮುಂದು ತಾಮುಂದು ಅಂತ ವ್ಯಾಪಾರ ಶುರುಮಾಡಿದರು. ವ್ಯಾಪಾರ ಭರ್ಜರಿಯಾಗೇ ನಡೆಯಿತು. ಆದರೆ ಬಸ್ ಮಾತ್ರ ಹೊರಡದೇ ಇದ್ದಾಗ ಪ್ರಯಾಣಿಕರ ಕೋಪ ಬಿಸಿಲಿನ ತಾಪದಂತೆ ಏರತೊಡಗಿತು.

“ಬೇಗ ಬಸ್ ಬಿಡ್ರಿ, ನಿಂತಲ್ಲೇ ನಿಂತರ ತ್ರಾಸ್ ಆಗ್ತೈತಿ. ಒಳಗಿನವರ ಕಷ್ಟ ನಿಮಗ ಹ್ಯಾಂಗ ಗೊತ್ತಾಗ್ಬೇಕು ಬಿಡ್ತೀರೋ ಇಲ್ಲವೋ ಹೇಳಿ ಇಲ್ಲದಿದ್ದರೆ ಬೇರೆ ವಾಹನ ಹತ್ತಿ ಹೋಗ್ತೀವಿ ” ಅಂತ ತಾಳ್ಮೆ ಕಳೆದುಕೊಂಡ ಪ್ರಯಾಣಿಕನೊಬ್ಬ ಜೋರು ಧನಿಯಲ್ಲಿ ಕೋಪ ತಾಪ ಹೊರ ಹಾಕಿದ.

“ಬಸ್ ಮುಂದೆ ಸಾಗಿದರೆ ಸ್ವಲ್ಪ ಗಾಳೀಯಾದ್ರು ಹತ್ತತಾದೆ ಸೀಟ್ ಭರ್ತಿಯಾದರೂ ಬಿಡುತ್ತಿಲ್ಲ ಅಂದ್ರೆ ಏನು ಹೇಳೋದು. ಸೀಟ್ ಖಾಲಿ ಇದ್ದರ ನಿಲ್ಲಿಸಬೇಕು ಅಂತ ಮತ್ತೊಬ್ಬ ಪ್ರಯಾಣಿಕನೂ ಧನಿಗೂಡಿಸಿದ. ಉಳಿದ ಪ್ರಯಾಣಿಕರು ಅವರ ಮಾತಿಗೆ ಬೆಂಬಲಿಸಿ ಬೇಗ ಬಸ್ ಬಿಡುವಂತೆ ಒಕ್ಕೊರಲಿನಿಂದ ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮಣಿದ ಕಂಡಕ್ಟರ ಜೋರಾಗಿ ಸೀಟಿ ಊದಿ ಡ್ರೈವರಿಗೆ ಬಸ್ ಬಿಡಲು ಸೂಚಿಸಿದ. ಆತ ಅವಸರವಾಗಿ ಬಂದು ಬಸ್ ಚಾಲೂ ಮಾಡಿ ಹೊರಟ.

“ಆಹಾ ಈಗ ಗಾಳಿ ಬರ್ತಿದೆ ನೋಡ್ರಿ, ಬಿಸಿ ಗಾಳಿಯಾದ್ರು ಪರವಾಗಿಲ್ಲ ಇಷ್ಟೋತನಕ ಬೆಂಕಿ ಕಾಯಿಸಿಕೊಂಡಂಗ ಆಗಿ ಮೈ ಎಲ್ಲಾ ಉರೀತಿತ್ತು. ಈ ವರ್ಷದಂಥಾ ಬಿಸಿಲು ನಾವು ನೋಡೇ ಇಲ್ಲ. ಹೋದ ವರ್ಷ ಮಳೆ ಕಡಿಮೆಯಾಗಿ ಈ ಸ್ಥಿತಿ ಬಂದಿದೆ. ಇನ್ನೂ ಎರಡು ತಿಂಗಳ ಹ್ಯಾಂಗ ಕಳೀಬೇಕೋ ಏನೋ? ಗೊತ್ತಾಗ್ತಿಲ್ಲ… ಅಂತ ಪ್ರಯಾಣಿಕನೊಬ್ಬ ವಾಸ್ತವ ಹೇಳಿದಾಗ. “ನಮ್ಮ ಕಡಿ ಯಾವಾಗಲೂ ಬಿಸಿಲು ಜಾಸ್ತಿ ಇರ್ತಾದೆ ಇದೇನು ನಮಗ ಹೊಸದಲ್ಲ. ಇದೆಲ್ಲಾ ರೂಢೀಯಾಗಿ ಬಿಟ್ಟಿದೆ, ಬಿಸಿಲಿಗಂಜಿ ಮನ್ಯಾಗ ಕೂಡಲು ಆಗ್ತಾದಾ? ಸಂತಿ ಪ್ಯಾಟೀ ಮದುವೆ ಮುಂಜಿ ಅಂತ ಇದ್ದರ ಹೋಗಲೇಬೇಕು. ಯಾವದೂ ಬಿಡೋ ಹಾಗಿಲ್ಲ. ಇದೇ ಸಮಯ ಕಾರ್ಯಕ್ರಮಗಳು ಜಾಸ್ತಿ ಇರ್ತಾವೆ ಅಂತ ಮತ್ತೊಬ್ಬ ಪ್ರಯಾಣಿಕ ಕೂಡ ಸಮಜಾಯಿಸಿ ನೀಡಲು ಮುಂದಾದ.

ಬಸ್ ಡಾಂಬರ್ ರಸ್ತೆ ಸೀಳಿಕೊಂಡು ಅರ್ಧ ದಾರಿ ಕ್ರಮಿಸಿತು. ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಜೋರಾಗಿ ಅಳುವ ಧನಿಯೊಂದು ಕೇಳಿ ಬಂದಿತು. ಎಲ್ಲರೂ ಗಾಬರಿಯಾಗಿ ಅತ್ತಕಡೆ ಗಮನ ಹರಿಸಿದರು. ನಾಗಚಂದ್ರನೂ ಆ ಕಡೆ ಹೊರಳಿ ನೋಡಿದ. ಇವನಿಗೆ ಆಶ್ಚರ್ಯದ ಜೊತೆಗೆ ಗಾಬರಿಯೂ ಆಯಿತು. ಅಳುವ ವ್ಯಕ್ತಿ ಸಾಮಾನ್ಯನಂತೆ ಕಾಣಿಸುತ್ತಿರಲಿಲ್ಲ. ಆತ ಬಟ್ಟೆ ಶಿಸ್ತಿನ ವ್ಯಕ್ತಿಯಾಗಿದ್ದ. ಯಾವುದೋ ಜವಾಬ್ದಾರಿಯುತ ಸ್ಥಾನದಲ್ಲಿರುವಂತೆ ಕಂಡುಬರುತಿತ್ತು.

ಇಂಥಹ ವ್ಯಕ್ತಿ ಒಮ್ಮಿಂದೊಮ್ಮೆಲೆ ಯಾಕೆ ಅಳ್ತಿದ್ದಾನೆ? ಏನು ಸಮಸ್ಯೆ ಆಗಿದೆ? ಬಿಸಿಲಿನ ತಾಪ ಜಾಸ್ತಿ ಇರೋದ್ರಿಂದ ಆರೋಗ್ಯದಲ್ಲಿ ಏನಾದ್ರು ಏರುಪೇರಾಗಿದೆಯೇ? ಅಂತ ಯೋಚಿಸಿ ಆತನ ಹತ್ತಿರ ಬಂದು ಯಾಕೆ ಸರ್ ಅಳ್ತಿದ್ದೀರಿ ಏನಾಯಿತು? ಅಂತ ಪ್ರಶ್ನಿಸಿದ. ಆದರೂ ಆತ ಉತ್ತರ ಕೊಡದೇ ಅಳುವದು ಮುಂದುವರೆಸಿದ.

“ಇಷ್ಟೋತನಕ ಸರಿಯಾಗೇ ಇದ್ದ ಈಗ ಏಕಾಏಕಿ ಅಳ್ತಿದ್ದಾನೆ ಯಾಕೆ ಅಂತ ನಮಗೂ ಗೊತ್ತಾಗ್ತಿಲ್ಲ” ಎಂದು ಪಕ್ಕದ ಸೀಟಿಗೆ ಕುಳಿತ ಪ್ರಯಾಣಿಕನೊಬ್ಬ ಹೇಳಿದಾಗ

“ವಿಷಯ ಹೇಳಿದರೆ ತಾನೆ ಗೊತ್ತಾಗೋದು ಬರೀ ಅಳುತ್ತಾ ಕುಂತರ ಹ್ಯಾಂಗ?” ಅಂತ ಪುನಃ ಪ್ರಶ್ನಿಸಿದ. ಆದರೂ ಆತನಿಂದ ಉತ್ತರ ಬರಲಿಲ್ಲ.

“ಇದು ಯಾವುದೋ ದೆವ್ವ ಭೂತದ ಕಾಟವೇ ಇರಬೇಕು ಮೊದಲೇ ಮಟಮಟ ಮದ್ಯಾಹ್ನ ಸಮಯ ಇಂತಹ ಸಮಯದಲ್ಲೇ ಕಾಟ ಕೊಡ್ತಾವೆ” ಅಂತ ಎಡಭಾಗದ ಸೀಟಿಗೆ ಕುಳಿತ ಮುದುಕಿಯೊಬ್ಬಳು ಅನುಮಾನ ಹೊರ ಹಾಕಿದಾಗ
“ಯಾವ ದೆವ್ವನೂ ಇಲ್ಲ ಯಾವ ಭೂತನೂ ಇಲ್ಲ ಆರೋಗ್ಯದಲ್ಲಿ ಏನೋ ಸಮಸ್ಯೆಯಾಗಿರಬೇಕು. ಡಾಕ್ಟರ ಹತ್ರಾ ಕರಕೊಂಡ ಹೋದ್ರೆ ಎಲ್ಲಾ ಸರಿ ಹೋಗ್ತಾದೆ” ಅಂತ ಕೆಲವರು ಸಲಹೆ ನೀಡಿದರು.

ಆತ ಅತ್ತು ಅತ್ತು ಸುಸ್ತಾಗಿ ಮೂರ್ಛೆಯೂ ಹೋದಾಗ ಆತನ ಮುಖದ ಮೇಲೆ ನೀರು ಸಿಂಪಡಿಸಿ ಎಚ್ಚರಗೊಳಿಸಿದರು. ಎಚ್ಚರಗೊಂಡರೂ ಆತನು ಅಳುವದು ನಿಲ್ಲಿಸಲಿಲ್ಲ.

ಮನುಷ್ಯ ಅಂದ್ಮೇಲೆ ಕಷ್ಟ ಸುಖ ಆರೋಗ್ಯ ಅನಾರೋಗ್ಯ ಇದ್ದೇ ಇರ್ತಾದೆ. ಆದರೆ ಈ ವ್ಯಕ್ತಿ ನೋಡಲು ದೊಡ್ಡ ವ್ಯಕ್ತಿ ಕಂಡಂತೆ ಕಾಣಸ್ತಾನೆ, ಈ ರೀತಿ ಬಸ್ಸಿನಲ್ಲಿ ಅಳೋದು ಎಷ್ಟು ಸರಿ? ಎಲ್ಲಿ ಅಳಬೇಕು ಎಲ್ಲಿ ಅಳಬಾರದು ಅನ್ನುವ ಪರಿಜ್ಞಾನವಿಲ್ಲವೇ? ಅಂತ ಕೆಲವರು ಪರಸ್ಪರ ಮಾತಾಡಿಕೊಂಡರು.

ದುಃಖ ಬಂದರೆ ಏನ್ಮಾಡೋದು? ಕೆಲವರಿಗೆ ತಡೆದುಕೊಳ್ಳಲು ಆಗ್ತಾದೆ ಇನ್ನೂ ಕೆಲವರಿಗೆ ಆಗೋದಿಲ್ಲ, ಮೃದು ಮನಸ್ಸಿನವರಿಗೆ ಕಣ್ಣೀರಿನ ರೂಪದಲ್ಲಿ ತಂತಾನೆ ಹೊರ ಬರುತ್ತದೆ. ಈ ವ್ಯಕ್ತಿಗೆ ಯಾವ ಸಂಕಟ ಎದುರಾಗಿದೆಯೋ ಏನೋ ಯಾರಿಗೆ ಗೊತ್ತು? ಅಂತ ಇನ್ನೂ ಕೆಲವರು ಸಮಜಾಯಿಸಿ ನೀಡಿದರು. ಬಸ್ ಹಾಗೇ ಚಲಿಸತೊಡಗಿತು. ಆತನ ಜೇಬಿನಲ್ಲಿನ ಮೊಬೈಲ ರಿಂಗಾಯಿತು. ಯಾರದೋ ಕಾಲ್ ಬರ್ತಿದೆ. ಈಗಲಾದರು ರಿಸೀವ ಮಾಡಿ ಮಾತಾಡುವಂತೆ ಆತನಿಗೆ ಕೆಲವರು ಸಲಹೆ ನೀಡಿದರು. ಎರ್ಡ್ಮೂರು ಬಾರಿ ರಿಂಗಾದರು ಆತ ರಿಸೀವ್‌ ಮಾಡದೇ ಇದ್ದಾಗ ಯಾವದೋ ಎಮರ್ಜೆನ್ಸಿ ಕಾಲ್ ಇರಬೇಕು ಆತ ಮಾತಾಡೋ ಸ್ಥಿತಿಯಲ್ಲಿಲ್ಲ ನೀವೇ ಯಾರಾದ್ರು ರಿಸೀವ್ ಮಾಡಿ ಮಾತಾಡಿ ವಿಷಯ ತಿಳಿದುಕೊಳ್ಳಿ ಅಂತ ಕಂಡಕ್ಟರ ಸಲಹೆ ನೀಡಿದಾಗ ನಾಗಚಂದ್ರ ಆತನ ಜೇಬಿನಿಂದ ಮೊಬೈಲ್ ಹೊರ ತೆಗೆದು ರಿಸೀವ ಮಾಡಿ ಕಿವಿಗೆ ಹಚ್ಚಿಕೊಂಡ.

“ವಿಧಿ ಈ ರೀತಿ ನಿಮ್ಮ ಅಣ್ಣನ ಜೀವದ ಜೊತೆ ಕ್ರೂರವಾಗಿ ಆಟವಾಡಿತು, ಏನು ಮಾಡೋದು? ಹೋದ ಜೀವ ಮರಳಿ ಬರೋದಿಲ್ಲ… ಸಧ್ಯ ಸಮಾಧಾನ ಪಟ್ಟುಕೊಳ್ಳದೇ ಬೇರೆ ದಾರಿಯೇ ಇಲ್ಲ. ಎಕ್ಸಿಡೆಂಟ್ ಡೆತ್ ಆಗಿದ್ದರಿಂದ ಆಸ್ಪತ್ರೆಯಿಂದಲೇ ಬಾಡಿ ತೆಗೆದುಕೊಂಡು ಬರಬೇಕು. ಇನ್ನೂ ಒಂದು ಗಂಟೆ ತಡವಾಗಬಹುದು. ನೀನು ಸಧ್ಯ ಆಸ್ಪತ್ರೆಗೆ ಬರೋದು ಬೇಡ. ನೇರವಾಗಿ ಊರಿಗೇ ಬಂದು ಬಿಡು…” ಅಂತ ಕರೆ ಮಾಡಿದನು ಹೇಳಿದ. ವಿಷಯ ತಿಳಿಯುತ್ತಿದ್ದಂತೆ ನಾಗಚಂದ್ರನಿಗೂ ಅಘಾತವಾಯಿತು. ಇಂಥಹ ಸುದ್ದಿ ಯಾರಿಗೆ ತಾನೇ ಸಹಿಸಿಕೊಳ್ಳಲು ಸಾಧ್ಯ? ಈ ಸುದ್ದಿ ಗೊತ್ತಾಗೇ ಇವನು ಅಳುತ್ತಿದ್ದಾನೆ. ನಾವೆಲ್ಲ ಯಾಕೆ ಅಳ್ತಿದ್ದಾನೆ ಅಂತ ಏನೇನೋ ಯೋಚನೆ ಮಾಡ್ತಿದ್ದೆವು, ಒಡಹುಟ್ಟಿದವನ ಒಡಲಾಳದ ನೋವು ಈಗ ಅರ್ಥವಾಯಿತು ಅಂತ ಶೂನ್ಯ ದಿಟ್ಟಿಸಿದ.

ಅಷ್ಟರಲ್ಲಿ ಬಸ್ ತಲುಪಿ ನಿಂತುಕೊಂಡಿತು. “ಏನು ವಿಷಯ” ಅಂತ ಎಲ್ಲರೂ ನಾಗಚಂದ್ರನಿಗೆ ಕುತೂಹಲದಿಂದ ಪ್ರಶ್ನಿಸಿದರು. ನಡೆದ ಹಕೀಕತ ಬಿಡಿಸಿ ಹೇಳಿದಾಗ ಎಲ್ಲರೂ ಗಾಬರಿಗೊಂಡರು ಪುನಃ ಆ ವ್ಯಕ್ತಿಯ ಕಡೆ ನೋಡುತ್ತಾ ಭಾರವಾದ ಮನಸ್ಸಿನಿಂದ ನಿಟ್ಟುಸಿರುಬಿಟ್ಟು ಯೋಚಿಸತೊಡಗಿದರು!