ಅಮ್ಮನ ಕೆಲಸಗಳಲ್ಲಿ ಜಾಸ್ತಿ ಸಹಾಯ ಮಾಡುತ್ತಿದ್ದದ್ದೆ ನಾನು. ಆ ಒಲೆಯ ಹತ್ತಿರ ಕುಳಿತು ಒಂದೊಂದೆ ಕಟ್ಟಿಗೆಯನ್ನು ಇಡುವುದರಲ್ಲಿ ಏನೊ ಒಂದು ಖುಷಿ ಇರುತ್ತಿತ್ತು. ಬೆಳಗಿನ ಚುಮು ಚುಮು ಚಳಿಗೆ ಒಲೆ ಮುಂದೆ ಕುಳಿತು ಬಿಸಿಕಾಯಿಸುತ್ತಿದ್ದಾಗ ಕಟ್ಟಿಗೆ ಉರಿಯಿಂದ ಬೆರಳು ಸುಟ್ಟುಕೊಂಡಿದ್ದು ಇದೆ. ಎಲ್ಲರೂ ಒಟ್ಟಿಗೆ ಕುಳಿತು ಕಾಫಿ ಕುಡಿದು ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದ ದಿನಗಳು ಈಗಲೂ ಕಣ್ಣಲ್ಲಿ ನೀರು ತರಿಸುತ್ತದೆ. ಕಟ್ಟಿಗೆಯ ಒಲೆಯ ಮೇಲೆ ಬೇಯಿಸುತ್ತಿದ್ದ ರಾಗಿ ರೊಟ್ಟಿಯ ಘಮ ಮರೆಯಲಾಗದಂತಹದು. ಹಬ್ಬಗಳಲ್ಲಿ ಅಡುಗೆ ಮಾಡುವಾಗ ಕಟ್ಟಿಗೆಯನ್ನು ಇಡುವ ಕೆಲಸ ನನ್ನದೆ ಆಗಿರುತ್ತಿತ್ತು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಮೂವತ್ತನೆಯ ಕಂತು ನಿಮ್ಮ ಓದಿಗೆ

ನಮ್ಮ ಮನೆ ಅಜ್ಜನ ಕಾಲದಲ್ಲಿ ಕಟ್ಟಿದ್ದ ಹದಿನಾರು ಗೂಟದ ಮನೆಯಾಗಿತ್ತು. ಅದರಲ್ಲಿ ಒಂದು ಭಾಗ ಅಡಿಗೆಮನೆ ಅದರ ಮುಂದಿನದು ಪಡಸಾಲೆ ಪಕ್ಕದಲ್ಲಿ ದನದ ಕೊಟ್ಟಿಗೆ ಅದರಲ್ಲಿ ಇಡೀ ಕುಟುಂಬ ಬದುಕಬೇಕಾಗಿತ್ತು. ನಮ್ಮ ಮನೆಯ ಗೋಡೆಗಳು ಸುಣ್ಣಕಾಣುತ್ತಿದ್ದದ್ದು ವರ್ಷಕ್ಕೊಮ್ಮೆ. ಅದು ಯುಗಾದಿಗಷ್ಟೆ… ಮೂರ್ನಾಲ್ಕು ತಿಂಗಳಲ್ಲಿ ಕಪ್ಪನೆಯ ರೂಪವನ್ನು ಪಡೆದು ಅದು ಗೋಡೆಯೊ ಮಸಿಬಳಿದ ಬಟ್ಟೆಯೊ ಎಂಬಂತೆ ವಿವರ್ಣವಾಗುತ್ತಿದ್ದದ್ದೆ ಹೆಚ್ಚು. ಅದಕ್ಕೆ ಕಾರಣವೂ ಇತ್ತು. ಚಿಮಣಿ ಕಟ್ಟಿಲ್ಲದ ಮೂರು ಕುಪ್ಪೆಯ ಒಲೆಯಿಂದ ಹೊರಬರುತ್ತಿದ್ದ ಹೊಗೆ ನಮ್ಮನ್ನೆಲ್ಲಾ ಒಮ್ಮೊಮ್ಮೆ ಉಸಿರುಕಟ್ಟಿಸುತ್ತಿದ್ದದ್ದು ಇದೆ. ಅವಾಗಲೆಲ್ಲಾ ಅಮ್ಮನ ಕಣ್ಣಿಂದ ನೀರು ಜಿನುಗುತ್ತಿತ್ತು. ಅದರಲ್ಲೆ ನಮ್ಮನ್ನೆಲ್ಲಾ ಜೋಪಾನ ಮಾಡುವ ಜವಾಬ್ದಾರಿಯೂ ಇತ್ತು. ನಾವೆಲ್ಲಾ ಚಿಕ್ಕಮಕ್ಕಳು ನಮ್ಮನ್ನು ನೋಡಿಕೊಳ್ಳಲು ಅಕ್ಕ ಇರುತ್ತಿದ್ದಳು. ಆದರೆ ಅವಳು ಅಡುಗೆ ಮಾಡುವಷ್ಟು ದೊಡ್ಡವಳೇನಲ್ಲ ಹಾಗಾಗಿ ಕೂಲಿಯಿಂದ ಬಂದು ಅಡುಗೆ ಮಾಡಿ ಬಡಿಸುವ ಕೆಲಸವೂ ಅಮ್ಮನದೆ ಆಗಿತ್ತು.

ಅದು ಮೂರುಕುಪ್ಪೆಯ ಒಲೆ. ಅಮ್ಮ ಮದುವೆಯಾಗಿ ಬರುವಾಗಲೆ ಇತ್ತು. ಅದನ್ನು ಬದಲಾಯಿಸುವ ಶಕ್ತಿಯೂ ಇರಲಿಲ್ಲ ಅವರಿಗೆ. ಹಾಗಾಗಿ ಅಮ್ಮನು ಅದರಲ್ಲೆ ಹತ್ತಾರು ವರ್ಷಗಳ ಕಾಲ ಅನ್ನ ಬೇಯಿಸಿದ್ದಳು. ಅಪ್ಪನು ಕೂಲಿಯೆ ಮಾಡುತ್ತಿದ್ದನಾದರೂ ಅಡುಗೆಯ ಜವಾಬ್ದಾರಿ ನನ್ನದಲ್ಲ ಎಂಬಂತೆ ಒಲೆ ಬದಲಾಯಿಸುವ ಗೋಜಿಗೆ ಹೋಗಿರಲಿಲ್ಲ.

ಅಮ್ಮ ಕೂಲಿಯಿಂದ ಬರುವಾಗಲೆ ತಲೆಮೇಲೆ ಸೌದೆಯ ಕಟ್ಟನ್ನು ಹೊತ್ತು ತರುತ್ತಿದ್ದಳು. ಅಮ್ಮನಿಗೆ ಮಕ್ಕಳು ಹಸಿವಿನಿಂದಿರುತ್ತಾರೆ ಎಂಬ ಯೋಚನೆ ಬೇರೆ ಅವುಗಳನ್ನು ತಂದು ಕತ್ತರಿಸಿ ಒಪ್ಪ ಒರಣವಾಗಿ ವಲೆಗೂಡಿನಲ್ಲಿ ಜೋಡಿಸಿ ಅಡುಗೆಗೆ ಸಿದ್ಧತೆ ಮಾಡುತ್ತಿದ್ದಳು. ಮಳೆ ಬಂದರಂತೂ ಕಟ್ಟಿಗೆಗಳು ನೆನೆದು ಮನೆತುಂಬಾ ಹೊಗೆ ಸುತ್ತಿಕೊಂಡು ನಾವೆಲ್ಲ ಕೆಮ್ಮುತ್ತಾ ಏದುಸಿರು ಬಿಡುತ್ತ ಬುಡ್ಡಿದೀಪದ ಬೆಳಕಿನಲ್ಲಿಯೆ ಅಮ್ಮನ ಅವಸ್ಥೆ ನೋಡುತ್ತ ಗಾರೆ ನೆಲದ ಮೇಲೆ ಮಲಗಿ ಎಷ್ಟೋ ಬಾರಿ ನಿದ್ದೆಹೋಗಿದ್ದು ಉಂಟು. ಅವಾಗೆಲ್ಲಾ ಅಮ್ಮ ನಮ್ಮನ್ನು ಎದ್ದೇಳಿಸಿ ಕೈತುತ್ತು ತಿನಿಸುತ್ತ ಮಲಗಿಸುತ್ತಿದ್ದಳು. ಮನೆಯಲ್ಲಿ ಕಿಟಕಿಗಳೆ ಇಲ್ಲದ್ದರಿಂದ ನಾವು ಉಸಿರಾಡುತ್ತಿದ್ದದ್ದು ಹೊಗೆಯೂ ಗಾಳಿಯೊ ಅಂತು ಬೆಳಿಗ್ಗೆ ಏಳುತ್ತಿದ್ದೆವು. ಅಮ್ಮ ಕೂಲಿ ಹೋಗುತ್ತಿದ್ದ ಮನೆಗಳಿಗೆ ಹೋದರೆ ಗೋಡೆಗಳೆಲ್ಲ ಚನ್ನಾಗಿಯೆ ಇರುತ್ತಿದ್ದವು. ನನಗೆ ನಮ್ಮ ಮನೆಯ ಒಲೆಯಿಂದ ಮಾತ್ರ ಹೊಗೆ ಬರುತ್ತದೆಯೆ ಇವರುಗಳ ಮನೆಯಲ್ಲಿ ಇನ್ನೆಂಥ ಒಲೆ ಇರಬೇಕು ಎಂಬ ಕುತೂಹಲ ಒಮ್ಮೆ ಅಮ್ಮನನ್ನು ಕೇಳಿಯೆ ಬಿಟ್ಟಿದ್ದೆ. ಅವರು ಅನುಕೂಲಸ್ಥರು ಅವರ ಒಲೆಗಳು ಐದು ಕುಪ್ಪೆಯವು ಜೊತೆಗೆ ಚಿಮಣಿ ಕಟ್ಟಿರುತ್ತಾರೆ. ಅದರಲ್ಲಿ ಸರಾಗವಾಗಿ ಹೊಗೆ ಹೊರಗೆ ಹೋಗುತ್ತದೆ ಅದಕ್ಕೆ ಅವರ ಮನೆಗಳಲ್ಲಿ ಹೊಗೆ ಸುತ್ಕಳಲ್ಲ ಎಂದಿದ್ದಳು. ನಾವು ಚಿಮಣಿ ಒಲೆ ಕಟ್ಟುಸ್ಬೌದಲ್ಲ ಎಂದರೆ ನಮಗೆ ಅಷ್ಟು ಸಾಮರ್ಥ್ಯ ಎಲ್ಲಿದೆ ಎಂದುತ್ತರಿಸಿದ್ದಳು. ಆದ್ರೆ ನನಗೊಂದು ಆಸೆ ಇದೆ; ಕೂಲಿ ಮಾಡಿದ ದುಡ್ಡಲ್ಲೆ ಒಂದಿಷ್ಟು ಕೂಡಿಸಿ ಐದು ಕುಪ್ಪೆಯ ಒಲೆ ಹಾಕ್ಬೇಕು. ಅಂತಹ ಮನೆ ಏಳ್ಗೆ ಇರ್ತದೆ ಅಂದಿದ್ದಳು. ಏನು ಅರ್ಥವಾಗದ ನಾನು ಕಕ್ಕಾಬಿಕ್ಕಿಯಾಗಿ ಹೊಟ್ಟೆಮೇಲೆ ಕೈಯಾಡಿಸುತ್ತಾ ನನ್ನ ಹಸಿವಿನ ಸಂಕಟ ಹೇಳಿದ್ದೆ. ಮುಂದೆಂದೂ ಅದರ ಬಗ್ಗೆ ನಾನು ಮಾತಾಡೋಕೆ ಹೋಗಲಿಲ್ಲ. ಆದ್ರೆ ಅಡುಗೆ ಮಾಡೋವಾಗೆಲ್ಲ ಅಮ್ಮ ಊದೋಗೊಳ್ಪಿಯಿಂದ ಊದಿ ಊದಿ ಒಲೆ ಹೊತ್ತಿಸೊ ಸಂಕಟ ಹಸಿವಿನ ಸಂಕಟ ಎರಡೂ ಮನಸ್ಸನ್ನು ತಳಮಳಗೊಳಿಸುತ್ತಿದ್ದವು.

ಅಮ್ಮ ಹಠಮಾರಿ ಕೂಲಿ ಮಾಡಿ ಮಾಡಿ ಬದುಕನ್ನು ನಡೆಸಿ ಅದರಲ್ಲೆ ಒಂದಿಷ್ಟು ದುಡ್ಡು ಉಳಿಸಿಕೊಂಡಿದ್ದಳು. ಮೂರುಕುಪ್ಪೆಯ ಒಲೆಯಲ್ಲಿ ಅನ್ನ ಬೇಯಿಸಿ ಬೇಯಿಸಿ ಅದು ಕಾದು ಕಾದು ಒಂದಿನ ಸೀಳುಬಿಟ್ಟಿತು. ಹಿಂಗೆ ಭಿನ್ನವಾದ ಒಲೆಯಲ್ಲಿ ಅಡುಗೆ ಮಾಡುವಂತಿಲ್ಲ. ಅದು ಮನೆಗೆ ಶ್ರೇಯಸ್ಸಲ್ಲ ಅನ್ನೊ ನಂಬಿಕೆ ಬೇರೆ. ಈಗ ಹೊಸ ಒಲೆ ತರಲೇಬೇಕು. ತಾನು ಕೂಡಿಟ್ಟ ದುಡ್ಡು ನೋಡಿದ್ರೆ ಒಲೆ ತರೋದಕ್ಕೆ ಇನ್ನಷ್ಟು ದುಡ್ಡು ಹೊಂಚ್ಬೇಕು. ಯಾರ್ಯಾರನ್ನೋ ಕೇಳಿದ್ಳು. ಯಾರು ಕೊಡ್ಲಿಲ್ಲ. ಹಾಗಾಗಿ ಬೇರೆ ದಾರಿ ಇಲ್ಲದೆ ಸೀಳ್ಬಿಟ್ಟ ಒಲೆಗೆ ಮಣ್ಮೆತ್ತಿ ಅದರಲ್ಲಿ ಒಂದಷ್ಟು ದಿನ ಅಡುಗೆ ಮಾಡಿದಳು.

ಒಂದಿನ ಹತ್ತಿರದ ಊರಿನ ಸಂತೆಗೆ ನನ್ನನ್ನು ಕರ್ಕೊಂಡು ಹೋದಳು. ನನಗೂ ಸಂತೆಯಲ್ಲಿ ಪಕೋಡ ತಿನ್ಬೌದು.. ಮಂಡಕ್ಕಿ ತಿನ್ಬೌದು… ಅಂದ್ಕೊಂಡು ಜೊತೆಗೆ ಹೋದೆ. ಅಮ್ಮ ಸಂತೆಯಲ್ಲಿ ಮೊದಲು ಒಂದು ಗಡಿಗೆ ತಗಂಡ್ಲು ನಂತರ ಐದು ಕುಪ್ಪೆಯ ವಲೆ ತಗಂಡ್ಲು ಗಡಿಗೆ ನನ್ನ ಮೇಲೆ ಹೊರಿಸಿದಳು. ಒಲೆಯನ್ನು ಅಮ್ಮ ಹೊತ್ಕೊಂಡ್ಲು. ನನಗೆ ಅಮ್ಮ ಪಕೋಡ ತಗಳಿಲ್ವ? ಮಂಡಕ್ಕಿ ಇಲ್ವಲ್ಲ… ಅಂದ್ಕೊಂಡೆ ಬರ್ತಾ ಅದನ್ನು ತಗಂಡ್ಲು. ಮನೆಯಲ್ಲಿ ಎಲ್ಲರೂ ತಿನ್ನುವಿರಂತೆ ಅಂದು, ಒಲೆ ಹೊತ್ತು ನಡೆದಳು. ನಾನು ಗಡಿಗೆ ತಲೆಮೇಲೆ ಹೊತ್ಕೊಂಡು ನಡೆದೆ. ಅಮ್ಮನ ನಡಿಗೆಯಲ್ಲಿ ಏನೊ ಸಾಧಿಸಿದ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಅಪ್ಪನಿಗೆ ಏನನ್ನಿಸಿತೊ ಅವರಿವರ ಹತ್ತಿರ ಸಾಲ ಮಾಡಿ ಒಂದು ಚಿಮಣಿಯನ್ನು ಕಟ್ಟಿಸಿದ. ಹಳೆಯ ಒಲೆಯನ್ನು ಕಿತ್ತು ಹೊಸ ಒಲೆಯನ್ನು ಹಾಕುವಾಗ ಅದಕ್ಕೆ ಪೂಜಿಸಿ ಶಾಸ್ತ್ರೋಕ್ತವಾಗಿ ಅದನ್ನು ಹಾಕಲಾಯಿತು. ಒಂದು ಭಾಗದಲ್ಲಿ ಮಣ್ಣಿನ ಗಡಿಗೆಗೆ ಹೊಂದಿಕೊಂಡಂತೆ ಎರಡುಕುಪ್ಪೆಯ ಒಲೆ ಅದಕ್ಕೆ ಇನ್ನೊಂದು ಭಾಗದಲ್ಲಿ ಮೂರುಕುಪ್ಪೆಯ ಒಲೆ ಇತ್ತು ಏಕ ಕಾಲದಲ್ಲಿ ಎರಡು ಒಲೆಯ ಮೇಲೆ ಅಡುಗೆ ತಯಾರಾಗುತ್ತಿತ್ತು. ಹೊಗೆಯು ಚಿಮಣಿ ದೀಪದಿಂದ ಹೊರಗೆ ಹೋಗುತ್ತಿದ್ದರಿಂದ ಹೊಗೆ ಕಮ್ಮಿಯಾದರೂ ಊದೋಗೊಳ್ಪಿಯಿಂದ ಊದುವುದಂತೂ ತಪ್ಲಿಲ್ಲ.

ಅಮ್ಮನ ಕೆಲಸಗಳಲ್ಲಿ ಜಾಸ್ತಿ ಸಹಾಯ ಮಾಡುತ್ತಿದ್ದದ್ದೆ ನಾನು. ಆ ಒಲೆಯ ಹತ್ತಿರ ಕುಳಿತು ಒಂದೊಂದೆ ಕಟ್ಟಿಗೆಯನ್ನು ಇಡುವುದರಲ್ಲಿ ಏನೊ ಒಂದು ಖುಷಿ ಇರುತ್ತಿತ್ತು. ಬೆಳಗಿನ ಚುಮು ಚುಮು ಚಳಿಗೆ ಒಲೆ ಮುಂದೆ ಕುಳಿತು ಬಿಸಿಕಾಯಿಸುತ್ತಿದ್ದಾಗ ಕಟ್ಟಿಗೆ ಉರಿಯಿಂದ ಬೆರಳು ಸುಟ್ಟುಕೊಂಡಿದ್ದು ಇದೆ. ಎಲ್ಲರೂ ಒಟ್ಟಿಗೆ ಕುಳಿತು ಕಾಫಿ ಕುಡಿದು ಮುಂದಿನ ಕೆಲಸಕ್ಕೆ ಅಣಿಯಾಗುತ್ತಿದ್ದ ದಿನಗಳು ಈಗಲೂ ಕಣ್ಣಲ್ಲಿ ನೀರು ತರಿಸುತ್ತದೆ. ಕಟ್ಟಿಗೆಯ ಒಲೆಯ ಮೇಲೆ ಬೇಯಿಸುತ್ತಿದ್ದ ರಾಗಿ ರೊಟ್ಟಿಯ ಘಮ ಮರೆಯಲಾಗದಂತಹದು. ಹಬ್ಬಗಳಲ್ಲಿ ಅಡುಗೆ ಮಾಡುವಾಗ ಕಟ್ಟಿಗೆಯನ್ನು ಇಡುವ ಕೆಲಸ ನನ್ನದೆ ಆಗಿರುತ್ತಿತ್ತು. ಯುಗಾದಿಯಂದು ಬೇಳೆಬೇಯಿಸಿ ಅದನ್ನು ರುಬ್ಬುವಾಗ ಅಮ್ಮನಿಗೆ ಸಹಾಯಕ್ಕೆ ನಿಲ್ಲುತ್ತಿದ್ದೆ. ಅನುಕೂಲಸ್ಥರ ಮನೆಯಲ್ಲಿರುವಂತೆ ನಮ್ಮ ಮನೆಯಲ್ಲೂ ಚಿಮಣಿ ಒಲೆ ಬಂತಲ್ಲ ಎಂಬ ಖುಷಿ ಇತ್ತು. ಆದರೆ ಕಟ್ಟಿಗೆ ತರುವುದು ತಪ್ಪಲಿಲ್ಲ. ಅಮ್ಮ ಕೆಲಸದಲ್ಲಿ ಯಾವಾಗಲೂ ಮುಂದು. ಕಟ್ಟಿಗೆ ತರಲು ನನ್ನನ್ನು ತರಲು ಕರೆದುಕೊಂಡು ಹೋಗುತ್ತಿದ್ದಳು. ನನಗೆ ಅಷ್ಟು ಸುಲಭವಾಗಿ ಕಟ್ಟಿಗೆ ಕತ್ತರಿಸಲು ಬರುತ್ತಿರಲಿಲ್ಲ. ಅಮ್ಮ ಬೇಗನೆ ಎರಡು ಹೊರೆ ಕಟ್ಟಿಗೆ ಕಡಿದು ಕಟ್ಟುತ್ತಿದ್ದಳು. ಅಮ್ಮ ನನಗೆ ಭಾರ ಆಗುತ್ತದೆಂದು ಕಡಿಮೆಯ ಕಟ್ಟಿಗೆಯ ಹೊರೆ ಹೊರಿಸುತ್ತಿದ್ದಳು. ನಾನು ಅದನ್ನು ಎಲ್ಲಿಯೂ ಬೀಳಿಸದೆ ಹೊತ್ತುಕೊಂಡು ಬಂದು ಉಸಿರು ಸಿಕ್ಕಿಕೊಂಡವನಂತೆ ಕುಳಿತುಬಿಡುತ್ತಿದ್ದೆ. ಅಂತೂ ಉರುವಲಿನ ಒಲೆ ನನಗೆ ಕಷ್ಟದ ಬದುಕನ್ನು ಕಲಿಸಿತು.

ನಮ್ಮದು ಹಳೆಯ ಮನೆಯಾದ್ದರಿಂದ ಮಳೆ ಬಂದಾಗಲೆಲ್ಲಾ ಚಿಮಣಿಯಿಂದ ಬೀಳುತ್ತಿದ್ದ ನೀರು ಒಲೆ ಬೇಗ ಹೊತ್ತಿಕೊಳ್ಳದೆ ನಮ್ಮ ಹಸಿವಿನ ಸಂಕಟವನ್ನು ಜಾಸ್ತಿಯೆ ಮಾಡುತ್ತಿತ್ತು. ಆಗ ಒಲೆಗೆ ಕಟ್ಟಿಗೆ ಇಟ್ಟು ಒಂದಿಷ್ಟು ಸೀಮೆಎಣ್ಣೆ ಬಿಟ್ಟು ವಲೆ ಹಚ್ಚುತ್ತಿದ್ದೆವು. ಆಧುನೀಕರಣವಾದಂತೆ ಮನೆ ಒಂದಿಷ್ಟು ನವೀಕರಣಗೊಂಡು ತಕ್ಕಮಟ್ಟಿಗೆ ಅನುಕೂಲವು ಆಗಿ ನಮ್ಮ ಜೀವನ ವಿಧಾನ ಸುಧಾರಿಸಿತು. ಆದರೆ ಐದು ಕುಪ್ಪೆಯ ವಲೆ ಬದಲಾಗಲಿಲ್ಲ. ಬಹುತೇಕ ಎಲ್ಲಾ ಮನೆಗಳಲ್ಲಿಯೂ ಇಂತಹದೇ ಒಲೆಗಳಿದ್ದವು. ಊರಿನಲ್ಲಿ ಗಿಡದ ದೇವರು ಮಾಡಿದಾಗ ಮೂರು ಕಲ್ಲುಗಳೆ ಬಾಡು ಬೇಯಿಸುವ ಒಲೆಯಾಗುತ್ತಿತ್ತು ಮನೆಯಲ್ಲಿ ಬೆರಣಿಯ ಕೂಳಿನಿಂದ ಅಡಿಗೆ ಮಾಡಿದ ಸಂದರ್ಭಗಳನ್ನು ನೋಡಿದ್ದೆವು. ಹೀಗಿರುವಾಗ ಊರಿನಲ್ಲೊಬ್ಬ ಸಗಣಿಯಿಂದ ತಯಾರಿಸುವ ಗೋಬರ್ ಗ್ಯಾಸ್ ನ್ನು ಮೊದಲ ಬಾರಿಗೆ ಆತನ ಮನೆಯಲ್ಲಿ ಅಳವಡಿಸಿಕೊಂಡನು ಅದನ್ನು ನೋಡಲು ಊರಿಗೆ ಊರೆ ಅವನ ಮನೆಗೆ ಹೋಗಿತ್ತು. ಅದು ವಿಶೇಷವಾಗಿತ್ತು. ಅದರಲ್ಲಿ ಎಷ್ಟು ಅಡಿಗೆ ಮಾಡಿದರೊ ಗೊತ್ತಿಲ್ಲ. ಮತ್ತೆ ಅವರ ಮನೆಯಲ್ಲಿ ಒಲೆಯಿಂದಲೆ ಅಡಿಗೆ ಮಾಡುತ್ತಿದ್ದರು. ದಿನ ಕಳೆದಂತೆ ಊರು ಬದಲಾಯಿತು; ಸಿಲಿಂಡರ್‌ಗಳು ಬಂದವು. ವಿಧವಿಧದ ಸ್ಟವ್‌ಗಳು ಬಂದವು. ಆಗ ಕುಳಿತು ಅಡಿಗೆ ಮಾಡುತ್ತಿದ್ದರು. ಅಲ್ಲಿ ಹರಟೆ ಇರುತ್ತಿತ್ತು. ಒಂದು ಭಾಂದವ್ಯ ಇರುತ್ತಿತ್ತು. ಒಟ್ಟಿಗೆ ಕೆಲಸದಲ್ಲಿ ಭಾಗಿಯಾಗಿ ಅಡುಗೆ ರುಚಿಯನ್ನು ಸವಿಯುವ ಅವಕಾಶವಿರುತ್ತಿತ್ತು. ಈಗ ಮಾತಾಡಲು ಪುರುಸೊತ್ತಿಲ್ಲದೆ ಅಡುಗೆಯಲ್ಲೊಂದು ಭಾಂದವ್ಯದ ಸೆಳಕು ಇಲ್ಲದೆ ತರಾತುರಿಯಲ್ಲಿ ಬದುಕಿನ ಬಂಡಿ ಸಾಗುವಾಗ ಅಂದು ಕುಪ್ಪೆಯ ಒಲೆಯ ಮುಂದೆ ಕುಳಿತು ಕಟ್ಟಿಗೆ ಇಡುವಾಗ, ಅಮ್ಮ ಐದು ಕುಪ್ಪೆಯ ಒಲೆ ತರುವುದಕ್ಕೆ ಪೈಸೆ ಪೈಸೆ ದುಡ್ಡು ಕೂಡಿಸಿದ್ದು ನೆನಪಾಗುತ್ತದೆ. ಅದು ನಮ್ಮ ಹಸಿವನ್ನು ನೀಗಿಸಿದ್ದು ನೆನಪಾಗುತ್ತದೆ.

(ಮುಂದುವರಿಯುವುದು)