ತುರ್ತು ಪರಿಸ್ಥಿತಿ ಸಮಯದಲ್ಲಿ ಇವರನ್ನೂ ಜೈಲಿಗೆ ಹಾಕಿದ್ದರು. ಅಲ್ಲಿ ಇವರ ಜತೆ ಸುಮಾರು ರಾಜಕೀಯ ನಾಯಕರು ಸಹ ಇದ್ದರು. ಸುಮಾರು ಇವರ ಜತೆಯ ಜೈಲುವಾಸಿಗಳು ಮುಂದೆ ಕೇಂದ್ರ ಸರ್ಕಾರದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಹುದ್ದೆ ಹೊಂದಿದ್ದರು. ಇವರು ಯೋಗ, ಕನ್ನಡ ಪಾಠ, ಮನೆ ವೈದ್ಯ ಮೊದಲಾದ ಶಿಕ್ಷಣ ಅಲ್ಲಿ ಕೊಡುತ್ತಿದ್ದರು. ತುರ್ತು ಪರಿಸ್ಥಿತಿ ಮುಗಿದು ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ಇವರ ಜತೆ ಜೈಲಿನಲ್ಲಿದ್ದ ಸುಮಾರು ಜನ ಅದರ ಪ್ರತಿಫಲ ಚೆನ್ನಾಗಿ ಪಡೆದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೇಳನೆಯ ಕಂತು ನಿಮ್ಮ ಓದಿಗೆ

ಅರಾಸೇ ಅವರ ಬಗ್ಗೆ ಬರೀತಾ ಇದ್ದೆ. ಅದಕ್ಕೆ ಮೊದಲು ಶೇಷಾದ್ರಿ ಪುರದ ಬಗ್ಗೆ ಕೆಲವು ವಿಷಯ ತಿಳಿಸಿದ್ದೆ. ಅರಾಸೇ ಅವರ ಪರಿಚಯ ಆದದ್ದು ಹೇಗೆ ಅಂತ ಶುರು ಹಚ್ಚಿದ್ದೆ.

ಕುಮಾರವ್ಯಾಸನ ಭಾರತದ ಮೇಲೆ ಅಥಾರಿಟಿಯಿಂದ ಮಾತನಾಡಬಲ್ಲ ಕೆಲವೇ ವಿದ್ವಾಂಸರಲ್ಲಿ ಇವರೂ ಒಬ್ಬರು. ಬೆಂಗಳೂರಿಗೆ ಬಂದಾಗ ಅವರಿಗೆ ಇಸ್ಕಾರ್ಟ್ ನಾನು. ಅವರ ಟ್ರಂಕ್ ನನ್ನ ಕೈಗಿತ್ತು ಅವರು ಹೋಗಬೇಕಾದ ಜಾಗ ಹೇಳುವುದು, ನಾನು ಅವರನ್ನು ಅಲ್ಲಿಗೆ ಕರೆದೊಯ್ಯುವುದು ನಡೆಯುತ್ತಿತ್ತು…. ಅಂತ ಕತೆ ನಿಲ್ಲಿಸಿದ್ದೆ. ಹೀಗೆ ಅವರನ್ನು ಬೆಂಗಳೂರಿನಲ್ಲಿ ಅವರು ಹೋಗಬೇಕಾದ ಸ್ಥಳ, ನೋಡಬೇಕಾದ ಜನರ ಭೇಟಿ ನನ್ನ ಮೂಲಕ ಆಗುತ್ತಿತ್ತು.

ಮೊದಲು ಊರಿಂದ ಟ್ರಂಕ್ ತರುತ್ತಾ ಇದ್ದವರು, ನಂತರ ಒಂದು ಕಿಟ್ ಬ್ಯಾಗ್ ಜತೆ ಬರುತ್ತಿದ್ದರು. ಆಲ್ ಇಂಡಿಯಾ ರೇಡಿಯೋದಲ್ಲಿದ್ದ ಶ್ರೀ ಎಂ ಎಸ್ ಕೆ ಪ್ರಭು ಅವರನ್ನ ಮೊದಲ ಸಲ ಭೇಟಿಯಾಗಿಸಿದ್ದು ಹೀಗೆ. ಆಲ್ ಇಂಡಿಯಾ ರೇಡಿಯೋ ಅರ್ಥಾತ್ ಆಕಾಶವಾಣಿ ಕ್ಯಾಂಟೀನ್‌ನಲ್ಲಿ ಕೂತು ಕಾಫಿ ಹೀರುತ್ತಾ ನನ್ನ ಪರಿಚಯ ಪ್ರಭುಗೆ ಅರಾ ಸೇ ಮಾಡಿಸಿದ್ದು ಹೀಗೆ.. ಇವನು ಪ್ರಜಾವಾಣಿ ಮಿಡಲ್ ಬರಿತಾನೆ. ತಿಂಗಳಿಗೆ ಅದೆಷ್ಟೋ ಬರೆದು ಬರೆದೂ ರಾಶಿ ಗುಡ್ಡೆ ಹಾಕ್ತಾನೆ. ಪ್ರಭು ಹೌದಾ ಅಂತ ನಕ್ಕು ಪರಿಚಯ ಮಾಡಿಕೊಂಡರು. ಈ ಪರಿಚಯ ಪ್ರಭು ಅವರು ಇರುವ ತನಕ ಮುಂದುವರೆಯಿತು. ಪ್ರಭು ರಿಟೈರ್ ಆಗುವವರೆಗೆ ಪ್ರಭು ಸಂಗಡ ಈ ಕ್ಯಾಂಟೀನ್ ಮತ್ತು ನಗರದ ಬೇರೆಬೇರೆ ಕಡೆ ಅದೆಷ್ಟು ಕಾಫಿ ಖಾಲಿ ಮಾಡಿದೀವಿ ಅಂತಾ ಲೆಕ್ಕ ಇಲ್ಲ. ಪ್ರಭು ಅವರ ಬರಹಗಳು ಅರಾ ಸೇ ಅವರಿಗೆ ತುಂಬಾ ಅಚ್ಚುಮೆಚ್ಚು. ನನ್ನ ಪ್ರಕಾರ ಶಿವಕುಮಾರ್, ಪ್ರಭು ನಂಬರ್ ಒನ್ ಹ್ಯೂಮರಿಸ್ಟ್ ಕಣಯ್ಯಾ ಅಂತ ಅವರು ಆಗಾಗ ಹೇಳುತ್ತಿದ್ದ ಮಾತು. ಅವರಿಬ್ಬರೂ ಸೇರಿದಾಗಲೂ ಅಷ್ಟೇ. ಈಗಿನ ಸಾಹಿತ್ಯದ ಬಗ್ಗೆ ಚರ್ಚೆ ಮತ್ತು ವಿಶ್ಲೇಷಣೆ. ಪ್ರಭು fantasy ಲೇಖಕ ಅಂತ ವಿಮರ್ಶಕರು ಗುರುತಿಸಿದ್ದರು. ಅವರಿಂದ ಮತ್ತಷ್ಟು ಮೌಲಿಕ ಬರಹಗಳ ನಿರೀಕ್ಷೆ ಇತ್ತು. ಅದನ್ನೆಲ್ಲ ಹುಸಿ ಮಾಡಿ ಪ್ರಭು ನಿವೃತ್ತರಾದ ಒಂದೆರೆಡು ವರ್ಷದಲ್ಲಿಯೇ ದೇವರನ್ನು ಸೇರಿದರು.

ಒಮ್ಮೆ ಸಾಹಿತ್ಯ ಪರಿಷತ್‌ನಲ್ಲಿ ಯಾವುದೋ ಸಭೆ. ಸಭೆ ನಂತರ ಚಾಮರಾಜಪೇಟೆ ಅಂಗಡಿ ಬೀದಿಗೆ ಬಂದೆವು. ಕಾಫಿ ಕುಡಿಯೋಣ ಅಂತ ಹೋಟೆಲ್ ಹೊಕ್ಕೆವು. ಇಡ್ಲಿ ತಿನ್ನೋಣ ಅಂತ ತಲಾ ಎರಡು ಪ್ಲೇಟ್ ಇಡ್ಲಿ ವಡೆ ಮುಗಿಸಿ ಕಾಫಿ ಕುಡಿದು ಆಚೆ ಬಂದೆವು. ಏನೋ ಜ್ಞಾಪಿಸಿಕೊಂಡು ಹಾಗೇ ನಿಂತರು. ಇವತ್ತೆಷ್ಟು ತಾರೀಖು ಅಂತ ಕೇಳಿದರು. ಹೇಳಿದೆ. ಈಗ ಟೈಮ್ ಎಷ್ಟು? ಕೈ ಗಡಿಯಾರ ನೋಡಿ ಎರಡೂ ಕಾಲು ಅಂದೆ. ಇಲ್ಲಿಂದ ಬಸವನಗುಡಿ ಎಷ್ಟು ದೂರ? ಅಲ್ಲಿ ಅಣ್ಣಯ್ಯಪ್ಪ ಅವರ ಮನೆ ಗೊತ್ತಾ?
ಗೊತ್ತು, ಹೇಳಿ ಏನು ಸಮಾಚಾರ ಅಂದೆ.

ಇವತ್ತು ನನಗೆ ತುಂಬಾ ಹತ್ತಿರದ ಬಂಧುಗಳ ಹನ್ನೆರಡನೇ ದಿವಸದ ಕಾರ್ಯ ಕಣಯ್ಯಾ. ಈಗ ನೆನಪಿಗೆ ಬಂತು. ಅಣ್ಣಯಪ್ಪ ಅಂತ ಒಬ್ಬರು ಅಲ್ಲಿ ಈ ಕಾರ್ಯ ಎಲ್ಲಾ ನಡೆಸ್ತಾರಂತೆ. ಅಲ್ಲೇ ಕರ್ಮ ಆಗ್ತಾ ಇರೋದು, ಅಲ್ಲಿಗೆ ಬಿಡು.. ಇನ್ನೂ ಪೂರ್ತಿ ಕಾರ್ಯ ಆಗಿರೋಲ್ಲ…

ಟೈಮ್‌ಗೆ ಸರಿಯಾಗಿ ಹೋಗುಕ್ಕೆ ಆಗುತ್ತೋ ಇಲ್ಲವೋ ಅನ್ನುವ ಆತಂಕ. ಆ ಆತಂಕದಲ್ಲೇ ಆಟೋ ಹುಡುಕಿದೆ. ಆಟೋ ಹತ್ತಿ ಅಲ್ಲಿಗೆ ಅಂದರೆ ಅಣ್ಣಯ್ಯಪ್ಪ ಅವರ ಮನೆಗೆ ಹೋದೆವು. ಹತ್ತಿರ ಹತ್ತಿರ ಎರಡೂವರೆ ಎರಡೂ ಮುಕ್ಕಾಲಿಗೆ ಅಲ್ಲಿ ಸೇರಿದೆವು. ಆಗ ತಾನೇ ತಿಥಿ ಕಾರ್ಯ ಮುಗಿದು ಹಾಲಿನಲ್ಲಿ ಎಲ್ಲರೂ ಊಟಕ್ಕೆ ಕೂತಿದ್ದರು. ಎಲೆಗೆ ಬಡಿಸಿ ಆಗಿತ್ತು. ಪರಿಶಂಚನೆಗೆ ಕಾಯುತ್ತಿದ್ದರು. ಇನ್ನೂ ಊಟ ಶುರು ಆಗಿರಲಿಲ್ಲ. ಸರಸರ ಇವರು ಪ್ಯಾಂಟ್ ಶರ್ಟ್ ತೆಗೆದು ಅವರ ಟ್ರಂಕ್‌ನಿಂದ ಪಂಚೆ ತೆಗೆದರು. ನೀಟಾಗಿ ಪಂಚೆ ಉಟ್ಟರು. ಇವನಿಗೂ ಒಂದೆಲೆ ಹಾಕಿ ಅಂತ ಹೇಳಿದರು. ಇಬ್ಬರಿಗೂ ಎಲೆ ಹಾಕಿದರು. ನನಗೆ ಪಂಚೆ ಇಲ್ಲ, ಶರಟು ಬಿಚ್ಚಲ್ಲ, ಸಾರ್ ನೀವು ಊಟ ಮಾಡಿ ನನಗೆ ಈಗ ತಾನೇ ತಿಂಡಿ ಆಗಿದೆಯಲ್ಲಾ ಅಂದೆ. ಬಲವಂತ ಮಾಡಿ ಕೂತ್ಕೋ, ಇಲ್ಲಿಗೆ ಬಂದ ಮೇಲೆ ಊಟ ಮಾಡದೆ ಹೋಗಬಾರದು, ಪ್ಯಾಂಟ್ ಷರಟು ಹಾಕ್ಕೊಂಡೆ ಕೂತ್ಕೋ… ಅಂತ ಕೂಡಿಸಿದರು. ಇಬ್ಬರಿಗೂ ಬಡಿಸಿದ ನಂತರ ಎಲ್ಲರೂ ಎಲೆಗೆ ಕೈ ಹಾಕಿದರು. ಪ್ಯಾಂಟ್ ಶರಟಲ್ಲೇ ನಾನು ಚಕ್ಕಳ ಮಕ್ಕಳ ಹಾಕಿ ಅವರ ಪಕ್ಕ ಕೂತೆ. ಇಬ್ಬರೂ ಅಕ್ಕ ಪಕ್ಕ ಕೂತು ತಿಥಿ ಊಟ ಉಂಡೆವು. ಊಟದ ನಂತರ ಎಲ್ಲರನ್ನೂ ಸುತ್ತ ಕೂಡಿಸಿಕೊಂಡು ಅರಾಸೇ ಅವರು ಗೀತೆಯ ಕೆಲವು ಶ್ಲೋಕ, ಅದರ ಅರ್ಥ ಹೇಳಿದರು.

ಯಾರೋ ಗುರುತು ಪರಿಚಯ ಇಲ್ಲದವರ ಹನ್ನೆರಡನೇ ದಿವಸದ ತಿಥಿ ಊಟಕ್ಕೆ ಹೋಗಿ ಉಂಡಿದ್ದು ನನಗೆ ಈಗಲೂ ಸೋಜಿಗ ಮತ್ತು ಇಂತಹ ಅನುಭವ ಯಾರಿಗಾದರೂ ಆಗಿದೆಯಾ ಎನ್ನುವ ಸಂಶಯ ಸಹ. ಇಡೀ ಪ್ರಪಂಚದಲ್ಲಿ ನನಗೊಬ್ಬನಿಗೆ ಮಾತ್ರ ಈ ಅನುಭವ ಆಗಿದೆಯಾ ಅನ್ನುವ ಸಂಶಯ ಬೇರೆ…

ಊಟ ಮುಗಿಸಿ ಮನೆಯವರ ಹತ್ತಿರ ಮಾತಾಡಿ ಇವರು ಹೊರಟರಾ?

ನೋಡು ಇದಕ್ಕೇ ಋಣ ಅನ್ನೋದು, ನಿನಗೂ ಅವರಿಗೂ ಪರಿಚಯವೇ ಇಲ್ಲ. ಆದರೂ ನೀನು ಇವತ್ತು ಇಲ್ಲಿ ಊಟ ಮಾಡಿದೆ…… ಅಂತ ಶುರು ಮಾಡಿ ಋಣಾನುಬಂಧದ ಬಗ್ಗೆ ಸುಮಾರು ಹೊತ್ತು ವಿಶ್ಲೇಷಣೆ ಮಾಡಿದರು. ಇಂತಹ ವಿಷಯ ಬಂದಾಗ ನನ್ನ ತಲೆಯಲ್ಲಿನ ಮಂಗ ಪೂರ್ತಿ ಸ್ಕೋಪ್ ತಗೋತ್ತಿತ್ತು ಮತ್ತು ವಿತಂಡವಾದ ತಾಂಡವ ಆಡುತ್ತಿತ್ತು. ಅವರೋ ಆಗಾಗ ಸಿಡುಕು ಮೂತಿ ಮಾಡಿಕೊಂಡು ಉತ್ತರ ಕೊಡುವ ಅದರ ಮೂಲಕ ನನ್ನನ್ನು, ನನ್ನ ಒಳಗಿನ ಮಂಗನನ್ನು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡುತ್ತಿದ್ದರು.
ಒಮ್ಮೆ ಅರಾ ಸೇ ಹಂಚಿಕೊಂಡ ವಿಷಯ ಇದು.

ಚೋ ರಾಮಸ್ವಾಮಿ ಗೊತ್ತಲ್ಲಾ? ತಮಿಳಿನ ತುಘಲಕ್ ಎನ್ನುವ ಪತ್ರಿಕೆಯ ಸಂಪಾದಕ ಮತ್ತು ಕಟು ವಿಡಂಬನೆಯ ಬರಹಗಾರ. ದ್ರಾವಿಡ ಪಕ್ಷಗಳ ವಿಲಕ್ಷಣಗಳನ್ನು ಹಿಗ್ಗಾ ಮುಗ್ಗಾ ಝಾಡಿಸುತ್ತಿದ್ದವರು. ಅದರಲ್ಲೂ ದ್ರಾವಿಡ ಪಕ್ಷಗಳ ಸಂಸ್ಕೃತ ವಿರೋಧೀ ಭಾಷಾ ನೀತಿ ಇವರಷ್ಟು ತೀವ್ರವಾಗಿ ವಿಡಂಬಿಸಿದವರು ತಮಿಳು ಭಾಷೆಯಲ್ಲಿ ಬೇರೆ ಇಲ್ಲ. ಒಂದು ದೊಡ್ಡ ಸುಶಿಕ್ಷಿತ ಓದುಗ ಬಳಗ ಹೊಂದಿದ್ದರು. ಒಂದು ಪ್ರಸಂಗ ಇವರನ್ನು ಕುರಿತು ಕೇಳಿದ್ದೆ. ತಮಿಳು ಭಾಷಾ ಉಗ್ರರು ತಮಿಳಿನಲ್ಲಿ ಸಂಸ್ಕೃತ ಪದಗಳನ್ನು ಯಾವುದೇ ಕಾರಣಕ್ಕೂ ಉಪಯೋಗಿಸಬಾರದು ಎಂದು ಒಂದು ಟರಾವು ಮಾಡಿದರು. ಚೋ ಅದಕ್ಕೆ ಪ್ರತಿಕ್ರಿಯಿಸಿದ್ದು ಹೀಗೆ. ಪತ್ರಿಕೆಯಲ್ಲಿ ಪ ಫ ಉಪಯೋಗಿಸುವ ಕಡೆ ಇಂಗ್ಲಿಷಿನ f ಹಾಕಿದರಂತೆ! ನನಗೆ ತಮಿಳು ಅಕ್ಷರಗಳು ಗೊತ್ತಿದ್ದರೂ ಯಾವುದೇ ಪತ್ರಿಕೆ ಪುಸ್ತಕ ಮೂಲ ತಮಿಳಿನಲ್ಲಿ ಓದಿಲ್ಲ. ಕಾರ್ಖಾನೆಯಲ್ಲಿ ನನ್ನ ತಮಿಳು ಸ್ನೇಹಿತರು ಹದಿನೈದು ಇಪ್ಪತ್ತು ತಮಿಳು ಮ್ಯಾಗಝೀನ್ ಹಿಡಿದು ಓದುವುದು ಮತ್ತು ಪರಸ್ಪರ ಬದಲಾಯಿಸುವುದು ಮಾಡುತ್ತಿದ್ದರು. ಅವರ ಮೂಲಕ ತಮಿಳಿನ ಕೆಲವು ನಿಯತ ಕಾಲಿಕೆಗಳ ಹೆಸರು ಗೊತ್ತಿತ್ತು. ಕುಟುಂಬಾತಾಳೆ ಪತ್ರಿ ಕೈ ಎನ್ನುವ tag line ಒಂದಿಗೆ ರಾಣಿ ಎನ್ನುವ ಪತ್ರಿಕೆ ನೆನಪಿದೆ. ತಮಿಳು ದಿನಪತ್ರಿಕೆಗಳಲ್ಲೂ ಅವರದ್ದೇ ಆದ ಓದುಗ ಚಾಯ್ಸ್ ಇರುತ್ತಿತ್ತು. DMK ಬೆಂಬಲದ ಪತ್ರಿಕೆಯನ್ನು AIDMK ಅವರು ಮೂಸಿ ಸಹ ನೋಡುತ್ತಿರಲಿಲ್ಲ, ಮತ್ತು ವೈಸ್ ವರ್ಸ್ಆ. ತಮಾಶೆ ಅಂದರೆ ಈ ಎರಡೂ ಮೂರು ತಮಿಳರ ಗುಂಪಿನಲ್ಲಿ ಯಾರ ಬಳಿಯೂ ತುಘಲಕ್ ಪತ್ರಿಕೆ ಕಾಣಿಸುತ್ತಿರಲಿಲ್ಲ. ಈ ಗುಂಪಿನವರು ಚೋ ರಾಮಸ್ವಾಮಿ ಅವರನ್ನು ದೂರ ಬಹುದೂರ ಇಟ್ಟಿರಬೇಕು!

(ಶ್ರೀ ಸತ್ಯವ್ರತ ಮತ್ತು ಡಾ.ಲಕ್ಷ್ಮೀ ಅವರು)

ಈ ಇದರ ಅಂದರೆ ಚೋ ಅವರು ಪ ಫ ಉಪಯೋಗಿಸುವ ಕಡೆ ಇಂಗ್ಲಿಷಿನ f ಹಾಕಿದ ಸತ್ಯಾಸತ್ಯತೆ ಬಗ್ಗೆ ನನ್ನ ತಮಿಳು ಸ್ನೇಹಿತರನ್ನು ಒಮ್ಮೆ ಕೇಳಿದ್ದೆ. ಅವರೂ ಸಹ ಉಗ್ರ ಅಭಿಮಾನಿ. ಚೋ ನಾ? ಅವನು ಬಿಡಿ ಸಾರ್, ಅವನನ್ನ ತಮಿಳುನಾಡಿನಲ್ಲಿ ಯಾರೂ ಲೈಕ್ ಮಾಡಲ್ಲ ಅಂತ ತಮಿಳರಿಗೆ ವಿಶಿಷ್ಟವಾಗಿರುವ ಒಂದು ಬೈಗುಳ ಬೈದು, ಬಾಯ್ತುಂಬಾ ಅದನ್ನು ಹೇಳಿ ದುಡ ದುಡಾ ನಡೆದು ಬಿಟ್ಟಿದ್ದರು. ಈ ಬೈಗುಳ ತಾಯಿ ವೇಳೈ ಅಂತ. ಅವರು ದುಡ ದುಡಾ ಹೋದಮೇಲೆ ಮತ್ತೆ ನಾನು ಮಾತಾಡಲು ಚಾನ್ಸೇ ಇರಲಿಲ್ಲ. ಅವರು ಹಾಗೆ ಹೋಗಿದ್ದು ನೋಡಿ ಚೋ ಈ ತಮಾಷೆ ಖಂಡಿತ ಮಾಡಿರಬಹುದು ಅನಿಸಿತ್ತು. BGL ಸ್ವಾಮಿ ಅವರ ತಮಿಳು ತಲೆಗಳ ನಡುವೆ ಓದಿದರೆ ತಮಿಳರ ಹಲವಾರು ಅತಿರೇಕಗಳ ಸ್ಯಾಂಪಲ್ ಸಿಗುತ್ತೆ. ಒಂದು ಸ್ಯಾಂಪಲ್ ಅಂದರೆ ಕಾಲ್ಡ್ ವೆಲ್‌ನ ಪುಸ್ತಕದ (ಇದರಲ್ಲಿ ತಮಿಳು ಭಾಷೆಯ ಕಾಲ ಕೊಂಚ ಮುಂದಕ್ಕೆ ಬರುವ ಬಗ್ಗೆ ಇತ್ತು ಎಂದು ಓದಿದ ನೆನಪು)ಒಂದು ಇಡೀ ಚಾಪ್ಟರ್ ಅನ್ನು ಲೈಬ್ರರಿಗಳಿಂದ ಅಪೇಸ್ ಮಾಡಿದ್ದು ಮತ್ತು ಅದರ ಕುರುಹು ಸಹ ಸಿಗದ ಹಾಗೆ ಮಾಯ ಮಾಡಿದ್ದು. ಅಂತಹ ಸ್ಯಾಂಪಲ್ ರಿಡಿಂಗ್ ಅನ್ನು ತಮಿಳರ ಬಗ್ಗೆ ಓದಿದವರಿಗೆ ಇದು ಅಸಹಜ ಎನಿಸದು!

ಮತ್ತೆ ಅರಾ ಸೇ ಹಂಚಿಕೊಂಡ ಒಂದು ಸಂಗತಿ. ಕೊರವಂಜಿ ಪತ್ರಿಕೆ ಬಗ್ಗೆ ಕೇಳಿ ತಿಳಿದಿದ್ದ ಚೋ ಅವರು ಕೊರವಂಜಿಯ ಒಂದು ಸಂಚಿಕೆಯನ್ನು ತಮಿಳಿಗೆ ಭಾಷಾಂತರಿಸಿ ಪ್ರಕಟಿಸುವ ಯೋಜನೆ ಹಾಕಿಕೊಂಡರು. ಅನುವಾದಕ್ಕೂ ಶುರು ಮಾಡಿದರು. ರಾಶಿ, ಇವರು ಕೊರವಂಜಿ ಸಂಪಾದಕರು, ಅವರನ್ನು ಸಂಪರ್ಕಿಸಿ ತಮ್ಮ ಯೋಜನೆಯ ವಿವರ ನೀಡಿದರು. ನಿಮ್ಮ ಯೋಜನೆಯೇನೋ ಸರಿ. ಆದರೆ ಅರಾ ಸೇ ಲೇಖನ ಹೇಗೆ ಭಾಷಾಂತರ ಮಾಡ್ತೀರಿ? ಭಾಷೆಯ ಬಂಧ, ಹರಿವು, ಹುದುಗಿರುವ ಹಾಸ್ಯ ಅದು ಚಿಂತನೆಗೆ ಹತ್ತಿಸುವ ರೀತಿ….. ಇವುಗಳನ್ನು ನೇರ ಭಾಷಾಂತರಿಸುವುದು ಸಾಧ್ಯವಾಗದು..

ಚೋ ಅವರ ಐಡಿಯಾ ಡ್ರಾಪ್ ಮಾಡಿದರು.

ಇವರ ಪರಮಾರ್ಥ ಪದಕೋಶ ನಿಘಂಟು ಮತ್ತು ಕೆಲವು ಪುಸ್ತಕ ಕಾಮಧೇನು ಪ್ರಕಾಶನದ ಶಾಂಸುಂದರ್ ಹೊರ ತಂದಿದ್ದರು. ಕಾಮಧೇನುಗೆ ಸುಮಾರು ಸಲ ನಾನೂ ಅರಾ ಸೇ ಸಂಗಡ ಹೋಗಿದ್ದೆ. ಹೀಗಾಗಿ ಅವರೂ ಪರಿಚಿತರು. ಶಾಮಸುಂದರ್ ಅವರ ಲೇಖನ ಒಂದು ಟೆಕ್ಸ್ಟ್ ಬುಕ್‌ನಲ್ಲಿ ನೋಡಿದೆ, ಅಲ್ಲೇ ಕೊಟ್ಟಿದ್ದ ಅವರ ಪರಿಚಯ ಓದಿದರೆ, ಅವರು ನಮ್ಮ ತಾಯಿ ಊರಿನವರು, ದಾಸಾಲುಕುಂಟೆ ಅವರು. ಅವರ ಬಳಿ ಈ ವಿಷಯ ಹೇಳಿದಾಗ ಖುಷಿ ಆಯಿತು, ಇಬ್ಬರಿಗೂ.

ಒಮ್ಮೆ ಸಂಜೆ ಆಕಾಶದ ತುಂಬಾ ಮೋಡ. ಮಳೆ ಸುರಿಯುವ ಮುನ್ನ ಮನೆ ಸೇರಬೇಕು ಅನ್ನುವ ಆತುರ. ಅವರನ್ನು ದಡ ದಡ ಓಡಿಸಿಕೊಂಡು ಹಲವಾರು ಕಡೆ ರಸ್ತೆ ದಾಟಿಸಿ ಮೂರು ನಾಲ್ಕುBTS(ಆಗಿನ್ನೂ bmtc ಕಲ್ಪನೆ ಇರಲಿಲ್ಲ)ಬಸ್ಸು ಬದಲಾಯಿಸಿ ವಿದ್ಯಾರಣ್ಯಪುರದ ನಮ್ಮ ಮನೆ ಸೇರಿದೆವು. ಆಗ ಈಗಿನ ಹಾಗೆ ಟ್ರಾಫಿಕ್ ಇರಲಿಲ್ಲ ಮತ್ತು ರಸ್ತೆ ದಾಟುವುದು ಒಂದು ಸಿನಿಮಾ ಹೀರೋ ಮಾಡಬಹುದಾದ ಕಾರ್ಯ ಅನಿಸುವ ಭಾವನೆ ಬಂದಿರಲಿಲ್ಲ. ಈಗ ಬೆಂಗಳೂರಿನ ಯಾವುದೇ ರಸ್ತೆ ಕ್ರಾಸ್ ಮಾಡಬೇಕಾದರೂ ಹೀರೋ instinct ಬೇಕೇ ಬೇಕು.
ರಾತ್ರಿ ಒಂಭತ್ತರ ಸುಮಾರಿಗೆ ಮನೆ ಸೇರಿದ್ದು. ಉಂಡೆವು, ರೂಮಿನಲ್ಲಿ ಹಾಸಿಗೆ ಹಾಸಿ ಆಯ್ತು.

ಇಡೀ ರಾತ್ರಿ ಅವರು ಆಧ್ಯಾತ್ಮದ ಬಗ್ಗೆ ಹೇಳಿದರು, ಮಧ್ಯೆ ಮಧ್ಯೆ ನನ್ನ ಕೊಂಕು ಸಹಿಸಿಯೂ. ಬೆಳಿಗ್ಗೆ ಸ್ನಾನ ಮುಗಿಸಿ ವಿಭೂತಿ ಕೊಡು ಅಂದರು. ಇಲ್ಲ ಅದನ್ನ ಇಟ್ಟಿಲ್ಲ ಅಂದೆ. ಯಾವ ಜಾತಿ ನೀನು ಅಂದರು.

ಮನುಜ ಕುಲ ತಾನೊಂದೇ ವಲಂ…. ಅಂದೆ!

ಹೀಗೆ ಮಾತಾಡೋದು ಅವರಿಂದಲೇ ಕಲಿತಿದ್ದೆ!

ನನ್ನಾಕೆ ಬಳಿ ಯಾವ ಪಂಗಡ ಅಮ್ಮ ನಿನ್ನ ಗಂಡ ಅನ್ನೋ ಎಡಬಿಡಂಗಿ ಪ್ರಾಣಿ ಅಂತ ವಿಚಾರಿಸಿದರು.
ಪೂರ್ತಿ ವಿವರ ತಿಳಕೊಂಡರು.
ಗೋಪಿ ಚಂದನ ಇದೆಯೋ
ಇಲ್ಲ ಅಂತ ತಲೆ ಆಡಿಸಿದೆ.
ಹೋಗಲಿ ಮುದ್ರೆ ಇದೆಯೋ…
ಇಲ್ಲ ಅದೂ ಇಲ್ಲ.
ಅವರಿಗೆ ಇಂತಹ ಮನೇನೂ ಒಂದಿರುತ್ತಾ ಅಂತ ಅನಿಸಿರಬೇಕು. ಮುಖದಲ್ಲಿ ಭಾವನೆ ತೋರಿಸದೆ
ಹೋಗಲಿ ಕುಂಕುಮ ಅಂತಿರತ್ತೆ, ಹೆಂಗಸರು ಹಣೆಗೆ ಇಟ್ಕೋ ಬೇಕಲ್ಲಾ? ನೀನು ಕುಂಕುಮ ಇಟ್ಕೋತೀಯ ಅಲ್ವಾಮ್ಮ ತಾಯಿ. ಕುಂಕುಮದ ಭರಣಿ ಕೊಡಮ್ಮ ಅಂತ ನನ್ನಾಕೆ ಕೈಲಿ ಕುಂಕುಮ ಇಸಕೊಂಡರು. ಪಂಚವಾಳದಲ್ಲಿನ ಕುಂಕುಮ ನೋಡಿ ಹೋ ಇದಾದರೂ ಇದೆಯಲ್ಲ ಮನೇಲಿ ಅಂತ ಸ್ವಗತ ಮಾಡಿಕೊಂಡರು. ಪಂಚವಾಳದ ಕುಂಕುಮ ತೆಗೆದು ಹಣೆಗೆ ಹಚ್ಚಿಕೊಂಡು ಉದ್ಧರಣೆ ಪಂಚಪಾತ್ರೆ ಅದೇನಾದರೂ ಇಟ್ಟಿದೀಯಾ….. ಅಂತ ಕೇಳುವಾಗ, ಇಲ್ಲ ಅಂತ ತಲೆ ಆಡಿಸಿದೆ. ಒಂದು ಸ್ಟೀಲ್ ಲೋಟ, ಚಮಚ ಇಸಕೊಂಡರು. ಪೂರ್ವ ದಿಕ್ಕು ಯಾವುದು?

ನೋಡಿ ಇದೇ ಇರಬಹುದು ಬೆಳಿಗ್ಗೆ ಸೂರ್ಯ ಇಲ್ಲಿ ಕಾಣಿಸುತ್ತೆ.. ಅಂತ ದಿಕ್ಕು ತೋರಿಸಿದೆ.

ಪೂರ್ವ ದಿಕ್ಕಿಗೆ ಮುಖ ಮಾಡಿ ಕೂತು ಸಂಧ್ಯಾವಂದನೆ ಮಾಡಿದರು. ಕಾಫಿ ಬೇಡಮ್ಮಾ ಟೀ ಕಾಸಿಬಿಡು ಅಂತ ತಿಂಡಿ ನಂತರ ಹೇಳಿದರು. ಐದಾರು ಸಲ ಟೀ ನಂತರ ಊಟ ಮಾಡಿ ಹೊರಡಬೇಕಾದರೆ ನನ್ನಾಕೆಗೆ ಹೀಗೆ ಅಡ್ವೈಸ್ ಮಾಡಿದರು…

ಅವನು ಹೋದ ದಾರಿಲೆ ಬಿಡಬೇಡ. ದಿನಾ ಪೂಜೆ ಮಾಡಿಸು. ನೂರೆಂಟು ಗಾಯತ್ರಿ ಹೇಳಿಸು, ಮನೇಲಿ ದೇವರಪೂಜೆ ಪಾತ್ರೆ ಪಡಗ ಇಟ್ಕೋಬೇಕು. ನಮ್ಮ ಸಂಪ್ರದಾಯ ಉಳಿಸಿಕೊಳ್ಳಬೇಕು. ಹೇಳಿದ ಹಾಗೆ ಕೇಳಲಿಲ್ಲ ಅಂದರೆ ಉಣ್ಣಕ್ಕೆ ಇಕ್ಕಬೇಡ….. ಹೆಂಡತಿ ನಕ್ಕಳು! ಪತ್ರ ಬರೆದಾಗ ನನ್ನಾಕೆ ಅಡುಗೆ ಬಗ್ಗೆ ಮೆಚ್ಚುಗೆ ಇರ್ತಾ ಇತ್ತು ಮತ್ತು ಅಡ್ವೈಸ್ ಸಹ! ಈ ಪ್ರಸಂಗ ಎಷ್ಟೋ ವರ್ಷಗಳ ನಂತರ ಮತ್ತೆ ನೆನಪಿಗೆ ಬಂದದ್ದು ಉಡುಪಿಗೆ ಹೋಗಿದ್ದಾಗ. ಅಲ್ಲೊಂದು ಅಂಗಡಿಯಲ್ಲಿ ದೇವರ ಪೂಜೆ ಸಂಬಂಧಿಸಿದ ಪಾತ್ರೆ, ಪಗಡ ಲೋಹದ ದೇವರ ಪ್ರತಿಮೆ ಇವೆಲ್ಲಾ ಜೋಡಿಸಿದ್ದರು. ಮುಂಭಾಗದಲ್ಲಿ ಗೋಪಿ ಚಂದನ ಸಾನೇಕಲ್ಲೂ ಗಂಧದ ಮರದ ತುಂಡು…. ಇವೂ ಕಾಣಿಸಿತು. ಒಂದು ಪ್ಲಾಸ್ಟಿಕ್ ಬಾಟಲ್‌ನಲ್ಲಿ ನಾಲ್ಕು ನಾಲ್ಕು ಮುದ್ರೆಗಳ ಗೊಂಚಲು ನೋಡಿದೆ. ಯಾತಕ್ಕೂ ಇರಲಿ ಅಂತ ಒಂದು ಗೊಂಚಲು, ನಾಲ್ಕು ಬೇರೆ ಬೇರೆ ರೀತಿ ಮುದ್ರೆ ಇರೋದು ಕೊಂಡುಕೊಂಡೆ. ಅದು ಮನೇಲಿ ಅಟ್ಟದ ಒಂದು ಮೂಲೆಯಲ್ಲಿ ಭದ್ರವಾಗಿ ಕೂತಿದೆ. ಇದನ್ನ ಯಾವಾಗಲಾದರೂ ನೋಡಿದಾಗ ಅರಾ ಸೇ ಮುಖ ಎದುರಿಗೆ ಬಂದು ಎಂತಾ ಎಡಬಿಡಂಗಿನೋ ನೀನು ಅಂತ ಕೇಳಿದ ಹಾಗೆ ಅನಿಸುತ್ತೆ…!

ಬೆಂಗಳೂರಿನ BTS ಬಸ್ಸಿನಲ್ಲಿ ಅವರನ್ನು ಸುಮಾರು ಸಲ ಓಡಾಡಿಸಿದ್ದು, ಕೈ ಹಿಡಿದು ಎಳೆದುಕೊಂಡು ರಸ್ತೆ ದಾಟಿಸಿದ್ದು… ಬಹುಶಃ ಅವರಿಗೆ ಕಕ್ಕಾ ಬಿಕ್ಕಿ ಮಾಡಿದ್ದಲ್ಲದೆ ಭಯ ಹುಟ್ಟಿಸಿ ಬಿಟ್ಟಿತಾ ಅಂತ ನನಗೆ ಆಮೇಲೆ ಅನಿಸಿತು. ಯಾಕೆ ಹಾಗೆ ಅನಿಸಿತು ಅಂದರೆ ಅವರ ಬಹು ದಿನದ ಶ್ರಮದ ಮತ್ತು ಅವರಿಗೆ ತೃಪ್ತಿ ತಂದ ಪರಮಾರ್ಥ ಪದಕೋಶ ಬಿಡುಗಡೆ ಆಯಿತು. ಸಾಂಪ್ರದಾಯಿಕ ಬಿಡುಗಡೆ, ಕೃತಿ ಕರ್ತೃ ಪರಿಚಯ ಇವೆಲ್ಲಾ ಮುಗಿದು ಅರಾಸೇ ಮಾತು ಕೊನೆಗೆ, ವಂದನಾರ್ಪಣೆಗೆ ಮೊದಲು. ಪುಸ್ತಕದ ಬಗ್ಗೆ, ತಾವು ಅದನ್ನು ಯಾಕೆ ಬರೆದದ್ದು ಮುಂತಾದ ವಿವರ ಎಲ್ಲಾ ಮುಗಿದನಂತರ ತಮಗೆ ಸಹಾಯ ಮಾಡಿದವರ ಸರ್ವರ ಪಟ್ಟಿ ನೆನಪಿನಿಂದಲೇ ಹೇಳಿ ಮುಗಿಸಿದರು. ಇನ್ನೇನು ನಮಸ್ಕಾರ ಹೇಳಿ ಮೈಕ್ ಮುಂದಿನವರಿಗೆ ಬಿಡ್ತಾರೆ ಅಂದುಕೊಂಡರೆ ಮತ್ತೆ ಮೈಕ್ ಕಡೆ ನೋಡಿ ಮುಖ ಅಗಲಿಸಿದರು. ಮುಖ ಅಗಲಿಸಿದಾಗ ಅವರ ಕಣ್ಣಲ್ಲಿ ಚೇಷ್ಟೆಯ ಹೊಳಪು ಬರುವುದನ್ನು ಎಷ್ಟೋ ಸಲ ಕಂಡಿದ್ದೆ. ಮೂಗು ಸಹ ಖುಶಿಯಿಂದ ಅರಳುತ್ತಿತ್ತು… ಯಾರಿಗೋ ಇದೆ ಗ್ರಾಚಾರ ಅನಿಸಿತು. ಕತ್ತು ಉದ್ದ ಮಾಡಿ ಸಭಿಕರಲ್ಲಿ ಯಾರನ್ನೋ ಹುಡುಕಿದರು. ನನ್ನೆಡೆ ನೋಡಿದರಾ…
ಮಾತು ಮುಂದುವರೆಯಿತು.

ಇವತ್ತು ನಾನು ನಿಮ್ಮ ಮುಂದೆ ಇಲ್ಲಿ ನಿಂತಿದ್ದೀನಿ ಅಂದರೆ ಅಲ್ಲಿ ಕೊನೇಲಿ ಯಾರಿಗೂ ಕಾಣದ ಹಾಗೆ ಅವಿತುಕೊಂಡು ಕೂತಿದ್ದಾನಲ್ಲ ಗೋಪಾಲಕೃಷ್ಣ ಅವನೇ ಕಾರಣ. ಈ ಊರಿನಲ್ಲಿ ನಾನು ಯಾವತ್ತೋ ಬಸ್ ಅಡಿಗೆ ಸಿಕ್ಕಿಕೊಳ್ಳೋದನ್ನ ತಪ್ಪಿಸಿ ನನ್ನ ಪ್ರಾಣ ಕಾಪಾಡಿದವನು ಇವನೇ….. ಮೊದಲಾಗಿ ಹೇಳಿ ನನಗೂ ಸಖತ್ ವಂದನಾರ್ಪಣೆ ನಿಜಾರ್ಥದಲ್ಲಿ ಆಯಿತು.

ಕಾರ್ಯಕ್ರಮ ಮುಗಿದ ನಂತರ ಅರಾಸೇ ಅವರ ನಂಟರ ಸಂಗಡ ಹೊರಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಾ ಮಿತ್ರ, ಅವರ ಸುತ್ತಾ ಅಭಿಮಾನಿಗಳ ಗುಂಪು. ಅಲ್ಲಿ ನಾನೂ ಇದ್ದೆ. ನೀನು ಮಾಡಿದ ದೊಡ್ಡ ತಪ್ಪು ಏನು ಗೊತ್ತಾ…?

ನಾನು ತಬ್ಬಿಬ್ಬಾದೆ. ಇಲ್ಲ ಗೊತ್ತಿಲ್ಲ.. ಅಂತ ತೊದಲಿದೆ. ಅವನ ಜೀವ ಯಾಕೆ ಉಳಿಸಿದೆ ಅವತ್ತು…? ಅವನು ಮಾಡೋ ಎಲ್ಲಾ ಅನಾಹುತಕ್ಕೂ ನೀನೇ ಕಾರಣ!

ಮಿತ್ರ ಅವರ ಇಂತಹ ಜೋಕುಗಳು ಸಾವಿರಾರು. ಮೊದಲ ಬಾರಿ ಕೇಳಿದವರಿಗೆ ಅದು ಅರ್ಥ ಆಗದೇ ತಬ್ಬಿಬ್ಬು ಆಗುವುದು ನಿಜ. ಅವರ ಸಂಗಡ ಪಳಗಿದ ಮೇಲೆ ಇದು ಅತಿ ಸಹಜ. ವೇದಿಕೆ ಮೇಲೆ ಮೈಕ್ ಹಿಂದೆ ಇದ್ದರಂತೂ ಅವರು ಸರ್ವಜ್ಞ. ಒಮ್ಮೆ ಒಂದು ಹಾಸ್ಯೋತ್ಸವದ ಸಭೆಯಲ್ಲಿ ಶಿವಲಿಂಗದ ಕುರಿತು ಇವರು ಮಾಡಿದ ಭಾಷಣ ಎಷ್ಟು ಪಾಂಡಿತ್ಯ ಪೂರ್ಣ ಆಗಿತ್ತು ಅಂದರೆ ಪ್ರೇಕ್ಷಕ ವೃಂದ ಕೈ ಚಪ್ಪಾಳೆ ದನಿ ಇನ್ನೂ ಕಿವಿಯಲ್ಲಿದೆ. ಒಂದು ಸಲ ನಮ್ಮ ವಿದ್ಯಾರಣ್ಯಪುರ ಏರಿಯಾದಲ್ಲಿ ಅವರನ್ನ ನೋಡಿದೆ. ರಸ್ತೆ ದಾಟಿ ಹೋಟೆಲ್ ಕಡೆ ಹೆಜ್ಜೆ ಹಾಕುತ್ತಿದ್ದರು.
ಏನ್ ಸಾರ್ ಇಲ್ಲಿ? ಅಂತ ಕೇಳಿದೆ.

ಯಾರದ್ದೋ ಹೆಸರು ಹೇಳಿ ಅವನು ಸತ್ತು ಹೋಗಿಬಿಟ್ಟ ಕಣಪ್ಪಾ, ನೋಡೋಕ್ಕೆ ಹೋಗಿದ್ದೆ, ಅಂದರು.

ಅಯ್ಯೋ ಹೌದಾ ಸಾರ್? ಏನಾಗಿತ್ತು ಅವರಿಗೆ… ಅಂದೆ.

ಅವನು ಇಂಗ್ಲಿಷ್ ಪಾಠ ಹೇಳಿಕೊಡ್ತಾ ಇದ್ದ… ಅಂದರು!

ಮತ್ತು ನಿರ್ಲಿಪ್ತರಾಗಿ ಭಾವನೆಗಳೇ ಇಲ್ಲದೆ ನಿಂತರು. ಒಂದು ನಿಮಿಷ ನಕ್ಕು ಎದುರಿನ ಹೋಟೆಲ್‌ಗೆ ಹೊಕ್ಕೆವು ಕಾಫಿಗೆ. ಇವರಿಬ್ಬರೂ ಅಂದರೆ ಅರಾ ಸೇ ಮತ್ತು ಮಿತ್ರ ಅವರು ಸೇರಿದರೆ ವಾಗ್ವಾದ, ವಾಗ್ವಾದ ಜೋರುಮಾತು ಮತ್ತು ತುಂಬಾ ಶಾರ್ಪ್ ಜೋಕುಗಳು ಸಾಮಾನ್ಯ.

ನಂತರದಲ್ಲಿ ಅರಾ ಸೇ ಭರಮಸಾಗರ ಬಿಟ್ಟು ಬೆಂಗಳೂರು ಸೇರಿದರು. ಅವರ ಸಮಗ್ರ ಸಾಹಿತ್ಯವನ್ನು ಗೆಳೆಯ ರಾಮನಾಥ್ ಪ್ರಕಟಿಸಿದರು. ಕನ್ನಡ ಸಾರಸ್ವತ ಲೋಕ ಅವರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎನ್ನುವ ಕೊರಗು ನನ್ನಂತಹವರಿಗೆ ಈಗಲೂ ಕಾಡುತ್ತದೆ.

ಸಾಹಿತಿ ಮಿತ್ರ ಶ್ರೀ ಆನಂದ ರಾಮ ಶಾಸ್ತ್ರೀ ಅವರು ತರಂಗ ಪತ್ರಿಕೆಯಲ್ಲಿ ತುಂಬಾ ಹಿಂದೆ ಒಂದು ಲೇಖನ ಬರೆದಿದ್ದರು. ಅದರಲ್ಲಿ ಹಲವು ಗಣ್ಯ ಸಾಹಿತಿಗಳನ್ನು ಭೇಟಿ ಮಾಡಿದ ಪ್ರಸಂಗಗಳು ಇದ್ದವು. ತಮಾಶೆ ಅಂದರೆ ನನ್ನಂತಹ ಅಗಣ್ಯ ಸಹ ಅಲ್ಲಿ ಕಾಣಿಸಿದ್ದ!

ಅರಾ ಸೇ ಅವರ ಬಗ್ಗೆ ಬರೆಯುತ್ತಾ ಒಂದು ರೈಲ್ವೆ ಸ್ಟೇಶನ್‌ನಿಂದ ಅರಾ ಸೇ ಅವರು ಹೊರಗೆ ಬರುವ ದೃಶ್ಯ ವಿವರಿಸುತ್ತಾರೆ. ಬಹುಶಃ ದಾವಣಗೆರೆ ರೈಲ್ವೆ ಸ್ಟೇಶನ್ ಇರಬೇಕು. ಶ್ರೀ ಶಾಸ್ತ್ರಿ ಅವರು ದಾವಣಗೆರೆ ಅವರು. ಇಡೀ ರೈಲ್ವೇ ಸ್ಟೇಶನ್ ಅವರದ್ದು ಎನ್ನುವ ಗತ್ತು ಗಾಂಭೀರ್ಯ ಅವರು ಬರುವ ರೀತಿಯಲ್ಲಿ ಎದ್ದು ಕಾಣುತ್ತಿತ್ತು ಎನ್ನುವ ಭಾವ ಬರುವ ಲೇಖನ. ಅರಾ ಸೇ ಅವರನ್ನು ನೋಡಿದಾಗಲೆಲ್ಲ ನನಗೆ ಈ ಹೋಲಿಕೆ ನೆನಪಿಗೆ ಬರುತ್ತಿತ್ತು. ಶಾಸ್ತ್ರಿ ಅವರ ಲೇಖನ ಪುಟ್ಟದಾದರೂ ಅರಾ ಸೇ ಅವರ ಬಗ್ಗೆ ಬಂದ ಈ ಅಪರೂಪದ ಬರಹ ನನ್ನ ತಲೆಯಲ್ಲಿ ಇನ್ನೂ ಉಳಿದಿದೆ. ಅರಾ ಸೇ ನಿಧನರಾದ ಮೇಲೆ ಶ್ರೀ ರಾಮನಾಥ ಅವರು ಪ್ರಜಾವಾಣಿಯಲ್ಲಿ ಬರೆದ ಲೇಖನ ಸಹ ಆಗಾಗ ನೆನಪಿಗೆ ಬರುತ್ತದೆ.

ಶೇಷಾದ್ರಿ ಪುರ ಮತ್ತು ಕಾಮಧೇನು ಪ್ರಕಾಶನದ ನೆನಪು ಎಲ್ಲೆಲ್ಲಿಗೋ ಭೃಂಗದ ಬೆನ್ನೇರಿ ಹೋಯಿತಾ?

ಗಾಂಧಿ ಭವನದ ಟೋಪೊಗ್ರಾಪಿ ಹೇಳಿದ್ದೆ ಅಲ್ಲವಾ. ಶಿವಾನಂದ ಸ್ಟೋರ್ಸ್ ಪಕ್ಕ ಎಡಕ್ಕೆ ತಿರುಗಿದರೆ ಗಾಂಧಿ ಭವನ, ಮುಂದೆ ಹಾಗೇ ಬಂದರೆ ಎಡಕ್ಕೆ ನಿಮಗೆ ಸರ್ವೋದಯ ಸಂಘ ಹೆಸರಿನ ಬೋರ್ಡು ಕಾಣುತ್ತೆ. ಇದು ವಲ್ಲಭ ನಿಕೇತನ. ವಲ್ಲಭ ಬಾಯಿ ಪಟೇಲ್ ಅವರ ನೆನಪಿಗೆ ಇದು ಅಂತ ಮೊದ ಮೊದಲು ಅಂದುಕೊಂಡಿದ್ದೆ. ಆದರೆ ಅದು ವಲ್ಲಭ ಸ್ವಾಮಿ ಎನ್ನುವ ಸಂತರ ಹೆಸರಿನಲ್ಲಿ ನಿರ್ಮಿಸಿರುವುದು ಎಂದು ತಿಳಿಯಿತು. ಇದು ೧೯೬೫ರಲ್ಲಿ ನಿರ್ಮಾಣ ಆಗಿದ್ದು. ಅದರ ಪಕ್ಕ ಒಂದು ಗೇಟು, ಗೇಟು ಒಳಗೆ ಹೋದರೆ ಎಡಕ್ಕೆ ವಿನೋಬಾ ಅವರ ಪಟ್ಟ ಶಿಷ್ಯ, ಸರ್ವೋದಯ ಪತ್ರಿಕೆಯ ಆಗಿನ ಸಂಪಾದಕ ಶ್ರೀ ಸತ್ಯವ್ರತ ಮತ್ತು ಅವರ ಶ್ರೀಮತಿ ಡಾಕ್ಟರ್ ಲಕ್ಷ್ಮೀ ಅವರ ಪುಟ್ಟ ಮನೆ. ಲಕ್ಷ್ಮೀ ಅವರು ನೈಸರ್ಗಿಕ ಚಿಕಿತ್ಸಾ ವಿಧಾನ ಅನುಸರಿಸುತ್ತಿದ್ದರು. ಹಾಗಂದರೆ ಅರ್ಥ ಆಗಲಿಲ್ಲ ತಾನೇ? ಅವರು ನಾಚುರೋಪತಿ ವೈದ್ಯೆ. ಮನೆಯ ಒಂದು ಪುಟ್ಟ ಕೊಠಡಿಯಲ್ಲಿ ಅದಕ್ಕೆ ಸಂಬಂಧ ಪಟ್ಟ ಸಲಕರಣೆಗಳು ಇದ್ದವು. ಹಾಗೇ ಮುಂದೆ ಹೋದರೆ ಒಂದು ಅನಾಥಾಶ್ರಮ ಮತ್ತು ವೃದ್ಧಾಶ್ರಮ. ಇದನ್ನು ಶ್ರೀ ರಾಮಕೃಷ್ಣ ಹೆಗಡೆ ಅವರ ಸಹೋದರಿ ಶ್ರೀಮತಿ ಮಹಾದೇವಿ ತಾಯಿ ಅವರು ನಡೆಸುತ್ತಿದ್ದರು. ಶ್ರೀಮತಿ ಮಹಾದೇವಿ ತಾಯಿ ಅವರನ್ನು ಹೆಗಡೆ ಅವರ ತಾಯಿ ಅಂತ ನಾನು ತಿಳಿದಿದ್ದೆ. ಒಂದು ಸಂಚಿಕೆಯಲ್ಲಿ ಹಾಗೇ ಬರೆದಿದ್ದೆ ಸಹ. ಅವರು ಸಹೋದರಿ ಅಂತ ನಂತರ ತಿಳಿಯಿತು. ಹೀಗೆ ಸುಮಾರು ಸಲ ಆಗಿಬಿಡುತ್ತೆ. ತೀರಾ ಈಚಿನ ಪ್ರಸಂಗ ಒಂದು. ಮನೆ ಪಕ್ಕದ ಪಾರ್ಕಿಗೆ ಪ್ರತಿದಿನ ಗೆಳೆಯರು ಮಾತ್ರ ವಾಕಿಂಗ್ ಬರೋರು. ಅವರ ಮಗ ದೂರದಲ್ಲಿ ಬೆಂಗಳೂರಿನ ಇನ್ನೊಂದು ಮೂಲೆಯಲ್ಲಿ ಇದ್ದದ್ದು. ಒಮ್ಮೆ ಆತ ಇಲ್ಲಿ ಬಂದಿದ್ದಾಗ ಅಪ್ಪನ ಜತೆ ವಾಕಿಂಗ್‌ನಲ್ಲಿ ಸಿಕ್ಕರು. ಮಗನನ್ನು ಗೆಳೆಯರು ವಾಕಿಂಗ್‌ನಲ್ಲಿ ಪರಿಚಯಿಸಿದರು. ಒಂದೆರೆಡು ತಿಂಗಳ ನಂತರ ಅವರಿಬ್ಬರೂ ಒಟ್ಟಿಗೆ ಮತ್ತೆ ಪಾರ್ಕ್‌ನಲ್ಲಿ ಸಿಕ್ಕಿದರಾ, ಮಗನ ಗುರುತು ಹತ್ತಲಿಲ್ಲ. ಜೊತೇಲಿ ಇದ್ದನಲ್ಲ, ಅದು ನನ್ನ ಮಗ ಅಂತ ಮಾರನೇ ದಿವಸ ಗೆಳೆಯರು ಹೇಳಿದರು. ಅವರನ್ನು ಹೇಗೆ ಮರೆತೆವು ಅಂತ ತಲೆ ತುರಿಸಿಕೊಂಡೆವಾ. ಯಾಕೆ ಅಂತ ಹೊಳೆಯಿತು. ಮಗ ಈ ಸಲ ಸಿಕ್ಕಿದಾಗ ಕೂದಲಿಗೆ ಬಣ್ಣ ಹಾಕಿರಲಿಲ್ಲ ಅಂತ flash ಆಯಿತು!

ಮತ್ತೆ ಸತ್ಯವ್ರತ ಅವರ ಬಗ್ಗೆ. ವಿನೋಬಾ ಅವರು ಕರ್ನಾಟಕಕ್ಕೆ ಬಂದಾಗಲೆಲ್ಲ ಅವರ ಭಾಷಣವನ್ನು ಸತ್ಯವ್ರತ ಅವರು ಕನ್ನಡಕ್ಕೆ ತರ್ಜುಮೆ ಮಾಡುತ್ತಿದ್ದರು

ಇವರ ಹುಟ್ಟು ಹೆಸರು ಗುಂಡಾಚಾರ್, ಚಿತ್ರದುರ್ಗದ ಚಳ್ಳಕೆರೆ ಅವರು. ನ್ಯಾಷನಲ್ ಕಾಲೇಜಿನಲ್ಲಿ BSc ಪದವಿ ನಂತರ ತಮ್ಮ ಓದಿನ ದಿವಸಗಳಲ್ಲಿ ಗಾಂಧಿ ಮತ್ತು ವಿನೋಬಾ ಅವರಿಂದ ಆಕರ್ಷಿತರಾಗಿದ್ದ ಸತ್ಯವ್ರತ ಅವರು ವಿನೋಬಾ ಅವರ ಸರ್ವೋದಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಚಂಬಲ್ ಕಣಿವೆಯ ಡಕಾಯಿತರನ್ನು ಮುಖ್ಯ ವಾಹಿನಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇವರು ನನ್ನ ಶ್ರೀಮತಿಯ ಚಿಕ್ಕಪ್ಪ ಅಂದರೆ ತಂದೆ ತಮ್ಮ. ಅದರಿಂದ ಅವರ ಜತೆ ಸಲಿಗೆ ಕೊಂಚ ಹೆಚ್ಚು ಅಂತಲೇ ಹೇಳಬೇಕು. ಇವರ ಮನೆಯಲ್ಲಿ ಮೊಟ್ಟ ಮೊದಲ ಬಾರಿಗೆ ತಿಂದ ಕಾಕ್ರಾ ಬಗ್ಗೆ ಹಿಂದೆ ಹೇಳಿದ್ದೆ. ಅವರ ಮನೆಯಲ್ಲಿದ್ದ ಘೇಂಡಾ ಮೃಗದ ಚರ್ಮದ ಕುರ್ಚಿ ಬಗ್ಗೆ ಹೇಳಿದ್ದೆ. ಅವರ ಬಗ್ಗೆ ಸಲಿಗೆ ಹೆಚ್ಚು ಅದರಿಂದ ಅವರ ಪೊಲಿಟಿಕಲ್ ಐಡಿಯಾಲಜಿ ಮತ್ತು ವಿನೋಬಾ ಗಾಂಧಿ ಅವರ ಬಗ್ಗೆ ನಾನು ಕೇಳಿದ್ದ ಸುಮಾರು ಸುದ್ದಿಗಳು ಲೇವಡಿ ರೂಪ ಪಡೆದಿತ್ತು. ಲೇವಡಿಗಳು ಜೋಕುಗಳಾಗಿ ಅವರ ಮುಂದೆ ಬಾಲ ಬಿಚ್ಚುತ್ತಿದ್ದವು.

ಚಂಬಲ್ ಕಣಿವೆ ಡಕಾಯಿತರು ಸನ್ಮಾರ್ಗ ಹಿಡಿದರು. ಅವರೆಲ್ಲಾ ದರೋಡೆ ಮಾಡೋದು ಬಿಟ್ಟು ನಮ್ಮ MP ಗಳು, MLA ಗಳು ಆದರು…. ಇದು ಅಂತಹ ಜೋಕುಗಳಲ್ಲಿ ಒಂದು. ಇನ್ನೊಂದು ಅನುಶಾಸನ ಪರ್ವದ್ದು. ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ಅದನ್ನು ವಿನೋಬಾ ಅವರು ಎರಡೂ ಕೈಯಲ್ಲಿ ಚಪ್ಪಾಳೆ ತಟ್ಟಿ ಅನುಶಾಸನ ಪರ್ವ ಅಂತ ಹೇಳಿದರು ಅಂತ ಪತ್ರಿಕಾ ವರದಿ. ಅವರು ಸೊಳ್ಳೆ ಹೊಡೆಯಲು ಚಪ್ಪಾಳೆ ಹೊಡೆದರೆ ಅದು ಹೇಗೆ ಪರ್ವ ಆಗುತ್ತೆ ಅಂತ ರೇಗಿಸೋದು..

ತುರ್ತು ಪರಿಸ್ಥಿತಿ ಸಮಯದಲ್ಲಿ ಇವರನ್ನೂ ಜೈಲಿಗೆ ಹಾಕಿದ್ದರು. ಅಲ್ಲಿ ಇವರ ಜತೆ ಸುಮಾರು ರಾಜಕೀಯ ನಾಯಕರು ಸಹ ಇದ್ದರು. ಸುಮಾರು ಇವರ ಜತೆಯ ಜೈಲುವಾಸಿಗಳು ಮುಂದೆ ಕೇಂದ್ರ ಸರ್ಕಾರದಲ್ಲಿ ಹಾಗೂ ರಾಜ್ಯ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಹುದ್ದೆ ಹೊಂದಿದ್ದರು. ಇವರು ಯೋಗ, ಕನ್ನಡ ಪಾಠ, ಮನೆ ವೈದ್ಯ ಮೊದಲಾದ ಶಿಕ್ಷಣ ಅಲ್ಲಿ ಕೊಡುತ್ತಿದ್ದರು. ತುರ್ತು ಪರಿಸ್ಥಿತಿ ಮುಗಿದು ಜನತಾ ಸರ್ಕಾರ ಅಧಿಕಾರಕ್ಕೆ ಬಂದಾಗ ಇವರ ಜತೆ ಜೈಲಿನಲ್ಲಿದ್ದ ಸುಮಾರು ಜನ ಅದರ ಪ್ರತಿಫಲ ಚೆನ್ನಾಗಿ ಪಡೆದರು. ಇವರು ಎಂಥಾ ಸಾಧು ಅಂದರೆ ಸರ್ಕಾರದ ಯಾವ ಸವಲತ್ತು ನನಗೆ ಬೇಡ ಅಂತ ನಿರ್ಧಾರ ಮಾಡಿದ್ದರು. ಅಂತಹ ಕಮಿಟೆಡ್ ಮನುಷ್ಯರನ್ನು ನಾನು ಮೆಚ್ಚುತ್ತಾ ಇದ್ದೆ ಆದರೂ ಸಾರ್ ನಿಮ್ಮದು ತುಂಬಾ ಅಂದರೆ ತುಂಬಾ ನೆ ಅತಿ ಆಯ್ತು ಅಂತ ರೇಗಿಸುತ್ತಿದ್ದೆ.

ಸ್ವಾತಂತ್ರ್ಯ ಹಬ್ಬದ ಒಂದು ವಿಶೇಷ ಸಮಾರಂಭಕ್ಕೆ ಸತ್ಯವ್ರತ ಅವರು BEL ನ ಕುವೆಂಪು ಕಲಾಕ್ಷೇತ್ರದಲ್ಲಿ ಲಲಿತ ಕಲಾ ಸಂಘದ ಮೂಲಕ

ಒಂದು ವಿಶೇಷ ಉಪನ್ಯಾಸ ನೀಡಿದ್ದರು. ಆಗ ನಾನು ಅಲ್ಲಿ ಕಾರ್ಯದರ್ಶಿ.

ಸ್ವಾತಂತ್ರ್ಯ ಹೋರಾಟಗಾರರಾಗಿ, ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿ ಏನನ್ನೂ ಪ್ರತಿ ಫಲವಾಗಿ ಪಡೆಯದೆ ನಿರ್ಗಮಿಸಿದ ಅವರ ನೆನಪು ನಮಗೆ ಪ್ರತಿದಿನ. ಅವರ ನಿಧನದ ನಂತರ ಶ್ರೀ ರವೀಂದ್ರ ರೇಷ್ಮೆ ಅವರು ಸಂಪಾದಿಸುತ್ತಿದ್ದ ಪತ್ರಿಕೆಗೆ ಸತ್ಯವ್ರತ ಅವರ ಬಗ್ಗೆ ಒಂದು ಲೇಖನ ಬರೆದಿದ್ದೆ. ಬಹುಮುಖಿ ಪ್ರತಿಭಾವಂತರಾಗಿದ್ದ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪ್ರಭುತ್ವ ಹೊಂದಿದ್ದ ಸತ್ಯವ್ರತ ಅವರು ಗಾಂಧಿ ಹಾಗೂ ವಿನೋಬಾ ಸಾಹಿತ್ಯವನ್ನು ಕನ್ನಡಕ್ಕೆ ತಂದರು. ಇವರ ಗೀತಾರ್ಥ ಚಿಂತನೆ ಗ್ರಂಥಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತ್ತು. ಏಳುನೂರು ಐವತ್ತು ರುಪಾಯಿ ಬಹುಮಾನ ಬಂದಿತ್ತು ಎಂದು ಆಗಾಗ ನೆನೆಯುತ್ತಿದ್ದರು. 2009ರ ಮಾರ್ಚ್ 13ರಂದು ಸತ್ಯವ್ರತ ದೇವರ ಪಾದ ಸೇರಿದರು. ಅವರ ಹೆಸರಿನಲ್ಲಿ ಒಂದು ದತ್ತಿ ನಿಧಿಯನ್ನು ಬಂಧುಗಳು ಸ್ಥಾಪಿಸಿದರು. ಇದರ ಮೂಲಕ ಶ್ರೀ ಸತ್ಯವ್ರತ ಅವರ ನೆನಪಿನಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅವರು ಪ್ರತಿವರ್ಷ ಸತ್ಯವ್ರತ ಸ್ಮಾರಕ ದತ್ತಿ ಉಪನ್ಯಾಸ ಏರ್ಪಡಿಸುತ್ತಾರೆ.

ಇವರು ಮೃತರಾದ ಕೆಲವು ವರ್ಷದಲ್ಲಿ ಲಕ್ಷ್ಮೀ ಅವರೂ ಸಹ ದೇವರ ಪಾದ ಸೇರಿದರು. ಮಕ್ಕಳು ಇರಲಿಲ್ಲ, ಅದರಿಂದ ಅವರು ಸತ್ತಮೇಲೂ ಸಹ ಬೈಗುಳದಿಂದ ತಪ್ಪಿಸಿಕೊಂಡರು ಅಂತ ತಮಾಷೆಯಾಗಿ ಹೇಳುತ್ತಾ ಇರುತ್ತೇನೆ. ಸರ್ಕಾರದ ಯಾವ ಸವಲತ್ತು ಬೇಡ ಎಂದು ದೂರನಿಂತವರು ಅವರು. ಅಂಥವರನ್ನು ಸ್ವಂತ ಮಕ್ಕಳು ಬೈಯದೇ ಇರುತ್ತಾರೆಯೇ….! ನನಗೆ ಗೊತ್ತಿರುವ ಕವಿಯೊಬ್ಬರ ಮಗ ಅವರನ್ನು ಬೈಯುತ್ತಿದ್ದದ್ದು ಹೀಗೆ… ಆಹಾ ಕವಿ ಪುಂಗವ, ಮಹಾ ಕವಿ ಒಂದು ಸೈಟ್ ಮಾಡಲಿಲ್ಲ ಒಂದು ಮನೆ ಮಾಡಲಿಲ್ಲ ಊರಿಗೆಲ್ಲಾ ಕವಿತೆ ಹೇಳ್ಕೊಂಡು ತಿರುಗಿದ….|

ಸತ್ಯವ್ರತ ಅವರನ್ನು ಅತಿಯಾಗಿ ತಮಾಷೆ ಮಾಡುತ್ತಿದ್ದ ಪ್ರಸಂಗ ಇದು. ಮತ್ತೊಂದು ನನ್ನನ್ನು ಈಗಲೂ ಕಾಡುವ ಪ್ರಸಂಗ ಒಂದು ನೆನಪಿಗೆ ಬಂತು. ಸತ್ಯವ್ರತ ಅವರಿಗೆ ಅಂದಿನ ಹಳೇ ಮೈಸೂರಿನ ಎಲ್ಲರ ಹಾಗೆ ಕಾಫಿ ಚಟ. ಇದು ಕೊಂಚ ಹೆಚ್ಚು ಅನ್ನುವಷ್ಟು.

(ವಿನೋಬಾ ಭಾವೆ)

ವಿನೋಬಾ ಅವರ ಭಾಷಣದ ತರ್ಜುಮೆ ಇವರು ಮಾಡುತ್ತಿದ್ದರು ಎಂದು ನೆನೆಸಿದೆ. ಭಾಷಣಕ್ಕೆ ಮೊದಲು ಒಂದು ಲೋಟ ಕಾಫಿ ಕುಡಿದು ಬಾಯಿ ಚೆನ್ನಾಗಿ ತೊಳೆದುಕೊಂಡು ಮೈಕ್ ಮುಂದೆ ನಿಲ್ಲುತ್ತಿದ್ದರು. ಶಿವಮೊಗ್ಗದ ಬಳಿ ಹೀಗೇ ತರ್ಜುಮೆ ಮಾಡಲು ಮೈಕ್ ಮುಂದೆ ನಿಂತರು. ಎಂದಿನ ಹಾಗೇ ಕಾಫಿ ಹೀರಿ ಬಾಯಿ ಚೆನ್ನಾಗಿ ಮುಕ್ಕಳಿಸಿ ಇವರು ನಿಂತಿದ್ದಾರೆ. ವಿನೋಬಾ ಭಾಷಣ ಶುರುಮಾಡಿದರು. ಇವರೂ ತರ್ಜುಮೆ ಮಾಡಿದರು. ಮುಂದೆ ಭಾಷಣ ಮುಂದುವರೆಸಿ ಎಂದು ಅವರ ಕಡೆ ತಿರುಗಿದರು. ವಿನೋಬಾಜಿ ಮುಖ ಸಿಂಡರಿಸಿ ಮೂಗು ತುರಿಸಿದರು. ಕಾಫಿ ವಾಸನೆ ಅಲ್ಲಿಯವರೆಗೂ ಹೋಗಿದೆ, ಅದರಿಂದ ವಿನೋಬಾ ಅವರು ಹೀಗೆ ಪ್ರತಿಕ್ರಿಯಿಸಿದರು ಅಂತ ಇವರಿಗೆ ಹೊಳೆಯಿತು. (ಈ ಪ್ರಸಂಗ ಸತ್ಯವ್ರತ ಅವರು ಹೇಳಿದಾಗ ಜ್ಞಾನೋದಯ ಅಂತ ನಾನು ಉದ್ಗರಿಸಿದ್ದೆ). ಪಾಪ ಹಿರಿಯರಿಗೆ ಎಂತಹ ಹಿಂಸೆ ಕೊಡ್ತಾ ಇದೀನಿ ಅಂತ ಇವರಿಗೆ ಅನಿಸಿತು. ಅವತ್ತಿಂದ ಕಾಫಿ ಬಿಟ್ಟು ಬಿಟ್ಟರು. ಈ ಪ್ರಸಂಗ ಅವರು ಹೇಳಿದಾಗ ಇವರ ಬಗ್ಗೆ ಅಯ್ಯೋ ಅನಿಸಿತು. ಒಂದು ಕೊಂಕು ಪ್ರಶ್ನೇ ನನ್ನ ಮನಸಿನ ಮಂಗ ಕೇಳಿತು. ವಿನೋಬಾ ಸಿಗರೇಟ್ ಸೇದುತ್ತಾ ಇದ್ದರಂತೆ, ಅದರ ವಾಸನೆ ನೀವು ಹೇಗೆ ಸಹಿಸ್ತಾ ಇದ್ರಿ… ಅಂದೆ. ವಿನೋಬಾ ಅವರಿಗೆ ಶ್ವಾಸಕೋಶ ಕಟ್ಟಿ ಉಸಿರಾಟಕ್ಕೆ ತೊಂದರೆ ಆಗ್ತಾ ಇತ್ತು. ಲಾವಂಚದ ಬೇರು ಸುಟ್ಟು ಅದರ ಹೊಗೆ ಒಳಗೆ ಎಳೆದು ಕೊಳ್ಳುತ್ತಿದ್ದರು ಅಂತ ಯಾರೋ ಹೇಳಿದ್ದು ನೆನಪಿತ್ತು ಮತ್ತು ಈ ಲಾವಂಚದ ಬೇರನ್ನು ಪೇಪರಿನಲ್ಲಿ ಸುತ್ತಿ ಸಿಗರೇಟ್ ಆಕಾರದಲ್ಲಿ ಬಿಕರಿ ಆಗುತ್ತಿತ್ತು. ಆರಾಧ್ಯ ದೇವದ ಮೇಲೆ ಒಂದು ಹುಳು ಹೀಗೆ ಕಾಮೆಂಟ್ ಮಾಡಿದರೆ ಯಾವ ಭಕ್ತ ಸಹಿಸುತ್ತಾನೆ?

ಛೇ ಛೇ ನಿಮಗೆ ಯಾರೋ ಸುಳ್ಳು ಹೇಳಿದ್ದಾರೆ. ಉಸಿರು ಕಟ್ಟಿದಾಗ ಅವರು ಹರ್ಬಲ್ ಹೊಗೆ ಒಳಕ್ಕೆ ತಗೊಳ್ಳುತ್ತಾ ಇದ್ದರು. ಅದು ಸಿಗರೇಟ್ ಅಲ್ಲ… ಅಂದರು. ಸರಿ ಬಿಡಿ ಅಂತ ಸುಮ್ಮನಾದೆ. ಕಾಫಿ ಬಿಟ್ಟಮೇಲೆ ಆಡಿನ ಹಾಲು ಕುಡಿಯುತ್ತಾ ಇದ್ದರಂತೆ. ವಿನೋಬಾ ಸಹ ಆಡಿನ ಹಾಲು ಕುಡಿಯೋದು. ಅದೂ ಸಹ ಕೆಟ್ಟ ವಾಸನೆ ಅಂತೆ ಹೌದೆ.. ಇದು ನನ್ನ ಪ್ರಶ್ನೆ.

ಇಲ್ಲ ಹಾಗೇನಿಲ್ಲ.. ಅಂತ ಅವರ ಉತ್ತರ. ಇದು ಹಾರಿಕೆಯದು ಅಂತ ನನ್ನ ಮನಸು.

ಬೆಂಗಳೂರಿನಲ್ಲಿ ಆಡಿನ ಹಾಲು ಎಲ್ಲಿ ಸಿಗಬೇಕು?

ಕೆಲವು ಸಲ ಹಸು ಹಾಲು ಕೊಂಡುಕೊಳ್ಳುತ್ತಿದ್ದರು. ಎಮ್ಮೆ ಹಾಲು ತುಂಬಾ ಮಂದ ಮತ್ತು ಸಾತ್ವಿಕ ಗುಣ ಹೊಂದಿರಲ್ಲ, ಅದರಿಂದ ಎಮ್ಮೆ ಹಾಲು ಕೂಡದು (ಇದು ನನ್ನ ಊಹೆ ಅಷ್ಟೇ..) ಈ ನಡುವೆ ಅವರ ಹೆಂಡತಿ ಲಕ್ಷ್ಮೀ ಇವರಿಗೆ ಹೇಳಿದರು. ಹಸು ಹಾಲು ನಾವು ಕುಡಿಯೋದರಿಂದ ಅದರ ಕರುವಿಗೆ ಹಾಲು ಇರುವುದಿಲ್ಲ. ಪಾಪ ಕರು ಹಾಲು ನಾವು ಕಸಿದ ಹಾಗೆ….

ಲಕ್ಷ್ಮೀ ಅವರು ಗುಜರಾತಿನವರು ಮತ್ತು ಅಲ್ಲಿನ ಆಚಾರ ವಿಚಾರ ಆಹಾರ ಪದ್ಧತಿಯನ್ನು ಆಚರಿಸುತ್ತಾ ಇದ್ದವರು. ಇವರಿಗೂ ಹೌದಲ್ಲವಾ, ಕರು ಹಾಲು ಕಿತ್ತುಕೊಳ್ಳಲು ನಮಗೆ ಯಾರು ಅಧಿಕಾರ ಕೊಟ್ಟವರು ಅನಿಸಿತು. ಹಾಲು ಬಿಟ್ಟರು. ಕೊನೆವರೆಗೂ ಈ ನಿಯಮ ಕಟ್ಟು ನಿಟ್ಟಾಗಿ ಪಾಲಿಸಿದರು. ಮೂರು ನಾಲ್ಕು ಸಲ ಭಾರತದ ಉದ್ದ ಅಗಲಕ್ಕೆ ಪಾದಯಾತ್ರೆ ಮಾಡಿದರು ಮತ್ತು ಸರ್ವೋದಯ ಚಿಂತನೆ ಪ್ರಚಾರ ಇವರ ಪಾದಯಾತ್ರೆಯ ಮುಖ್ಯ ಅಜೆಂಡಾ.
ಬಂಧುಗಳ ಮನೆಗೆ ಬಂದರೆ ಎಣಿಸಿದ ಹಾಗೆ ಎರಡು ಮೂರು ಸ್ಪೂನ್ ಅನ್ನ, ತಿಳೀ ಸಾರು ಕಾಲು ಭಾಗದಲ್ಲಿ ಕಾಲು ಭಾಗ ಒಬ್ಬಟ್ಟು ಇಷ್ಟು ಅವರ ಊಟ. ಇದನ್ನೇ ಒಂದು ಗಂಟೆ ಕೂತು ಎಲ್ಲರ ಜತೆ ಮಾತು ಕತೆ ಆಡುತ್ತಾ ಹಸುವಿನ ಮುಗ್ಧ ನಗೆ ನಗುತ್ತಾ ಉಣ್ಣುವರು. ಮೊಮ್ಮಕ್ಕಳು ಅಂದರೆ ಪ್ರಾಣ. ಅವರ ಸಂಗಡ ಆಟ, ಮಾತು ಕತೆ ತುಂಬಾ ಸಂತೋಷ ಪಡುತ್ತಿದ್ದರು.

ಇವರು ನಿಧನರಾದ ಸುದ್ಧಿ ಯಾವ ಪತ್ರಿಕೆಯಲ್ಲೂ ಮುಖಪುಟದ ಮುಖಪುಟ ಬಿಡಿ ಒಳಪುಟದ ಸುದ್ದಿ ಸಹ ಆಗಲಿಲ್ಲ. ಯಾವುದೋ ಒಂದು ಪತ್ರಿಕೆಯ ಒಳ ಪುಟದಲ್ಲಿ ಎರಡು ಸೆಂಟಿಮೀಟರ್‌ನಲ್ಲಿ ಇವರ ಸಾವಿನ ಸುದ್ದಿ ಬಂದಿತ್ತು ಅಷ್ಟೇ…

ಗಾಂಧಿ ಭವನದ ಸುತ್ತ ಮುತ್ತ ಹೋದಾಗ ಈ ನೆನಪುಗಳು ಕಣ್ಣೆದುರು ಸಾಗುತ್ತದೆ ಮತ್ತು ಅರಿವು ಇಲ್ಲದ ಹಾಗೆ ಕಣ್ಣು ತೇವವಾದ ಹಾಗೆ ಅನಿಸುತ್ತದೆ. ಮೌಲ್ಯಗಳಿಗಾಗಿ ಬದುಕಿದ್ದ, ಅದನ್ನೇ ಉಸಿರಾಗಿಸಿಕೊಂಡಿದ್ದ ಹಿರಿಯರ ನೆನಪು ಆಗಾಗ ಮರು ಹುಟ್ಟು ಪಡೆಯುತ್ತದೆ….

ದಿವಸಕ್ಕೆ ಹತ್ತು ಹದಿನೈದು ಲೋಟ ಕಾಫಿ ಹೀರುವ ನನಗೆ ವಿನೋಬಾ ಅವರು ಗುರು ಆಗಿದ್ದರೆ ಹೇಗೆ ಇರುತ್ತಿತ್ತು ಎನ್ನುವ ಪ್ರಶ್ನೆ ಸುಮಾರು ಸಲ ಕಾಡಿದೆ. ಮನಸು ಅದಕ್ಕೆ ಒಂದು ಸಿದ್ಧ ಉತ್ತರ ಸಹ ಕೊಟ್ಟಿತು.. ಒಂದು ಮುಷ್ಟಿ ಬೆಳ್ಳುಳ್ಳಿ ಜಗಿದು ಬಂದಿದ್ದರೆ…, ಕಾಫಿ ವಾಸನೆ ಇದಕ್ಕಿಂತ ಸಾವಿರ ಪಾಲು ವಾಸಿ, ಇನ್ಮೇಲೆ ಕಾಫಿ ಕುಡಿದೇ ಬಂದು ತರ್ಜುಮೆ ಮಾಡು ಅಂತ ವಿನೋಬಾ ಜಿ ಅಪ್ಪಣೆ ಕೊಡುತ್ತಿದ್ದಿರಬಹುದು…….!

(ಇನ್ನೂ ಇದೆ….)