ಹಿಂದಿನ ಸಾಲಿನಲ್ಲಿ ಮಲಗಿದ್ದ ಶ್ವೇತಾ ಜೋರಾಗಿ ಭುಜ ಅಲುಗಿಸಿ ನನ್ನನೆಬ್ಬಿಸುತ್ತಿದ್ದಾಳೆ. ಅವಳಿಗೆ ಗಂಟಲುಬ್ಬಿ ಮಾತೇ ಹೊರಡುತ್ತಿಲ್ಲ. ಕೈಸನ್ನೆ ಮಾಡಿ ಕಿಟಕಿಯ ಪರದೆ ಎತ್ತು ಎನ್ನುತ್ತಿದ್ದಾಳೆ. ಪೈಲಟ್ ಕಡೆ ಬೆರಳು ತೋರಿಸುತ್ತಿದ್ದಾಳೆ. ನನಗೋ ಎದೆ ಧಸಕ್ ಎಂದಿತು. ಅವಳ ಮುಖದ ತುಂಬಾ ಇದ್ದ ನಗು ನೋಡಿ ವಿಮಾನ ಅಪಾಯದಲ್ಲಿಲ್ಲ ಎಂದು ಖಾತ್ರಿಯಾಯಿತು. ಅಂದರೆ.. ಅಂದರೆ.. ನಿಜಕ್ಕೂ ನಾರ್ಥರ್ನ್ ಲೈಟ್ಸ್ ಕಾಣಿಸುತ್ತಿದೆಯಾ? ಇವೆಲ್ಲ ನಡೆದಿದ್ದು ಕೆಲವೇ ಸೆಕೆಂಡುಗಳಲ್ಲಿ ಎನ್ನಬಹುದು.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ಅರೋರಾ ಬೋರಿಯಾಲಿಸ್‌ನ ಪ್ರವಾಸದ ಕುರಿತು ಬರೆದಿದ್ದಾರೆ ವೈಶಾಲಿ ಹೆಗಡೆ

ಅರೋರಾ ಬೋರಿಯಾಲಿಸ್ ಅಥವಾ ನಾರ್ಥರ್ನ್ ಲೈಟ್ಸ್ ಅಥವಾ ಉತ್ತರ ಧ್ರುವದ ಬೆಳಕು ಎಂದರೆ ಆಕಾಶ ಲೋಕದ ಅತ್ಯದ್ಭುತ ವಿದ್ಯಮಾನ. ಇದನ್ನು ಈ ಜೀವಿತದಲ್ಲೊಮ್ಮೆ ಈ ಕಣ್ಣುಗಳಲ್ಲೊಮ್ಮೆ ನೋಡಿ ಅನುಭವಿಸಬೇಕೆಂಬುದು ನನ್ನ ಅದಮ್ಯ ಆಸೆಗಳಲ್ಲೊಂದಾಗಿತ್ತು. ಅದೀಗ ನನ್ನ ಅನನ್ಯ ಅನುಭವಗಳಲ್ಲೊಂದು.

ಅದೊಂದು ಅಕ್ಟೊಬರ್ ಕೊನೆಯ ಶುಕ್ರವಾರ. ಎಷ್ಟೊಂದು ದಿನವಾದವು ಭೇಟಿಯಾಗದೆ, ನಮ್ಮ ವರ್ಷಕ್ಕೊಮ್ಮೆ ಒಟ್ಟಿಗೆ ರೆಸ್ಟೋರೆಂಟಿನಲ್ಲಿ ಕೂತು ಹರಟುವ ಸಂಪ್ರದಾಯ ನಡೆಯದೆ, ಎಂದುಕೊಂಡು ಗೆಳತಿ ಶ್ವೇತಾಳೊಂದಿಗೆ ಊಟದ ಯೋಜನೆ ಹಾಕಿದ್ದಷ್ಟೇ. ಊಟದ ನಡುವೆ ಇಬ್ಬರಿಗೂ ತಿನ್ನುವ ತಿರುಗುವ ಹುಚ್ಚಿನ ಹಲವು ವಿಷಯಗಳು ಹಾದು ಹೋಗುವಾಗ ನಾರ್ಥರ್ನ್ ಲೈಟ್ಸ್ ಪ್ರಸ್ತಾಪ ಬಂತು. ನಡೆ ಈ ಚಳಿಗಾಲದಲ್ಲಿ “ಐಸ್ಲ್ಯಾಂಡ್‌” ಗೆ ಹೋಗುವಾ ಎಂದು ತಮಾಷೆ ಮಾಡಿಕೊಂಡೆವು.

ಇನ್ನೇನು? ನಮ್ಮ ತಲೆಯಲ್ಲಿ ಆ ಕುಣಿಯುವ ಬೆಳಕು ಕುಣಿಯತೊಡಗಿತ್ತು. ತಲೆಯಲ್ಲೀಗ ಬೇರಾವ ವಿಚಾರಕ್ಕೂ ಜಾಗವಿರಲಿಲ್ಲ. ಮನೆಗೆ ಬಂದರೂ ಅದೇ ಗುಂಗು. ಅವಳೋ ಜನವರಿಯಲ್ಲಿ ಬುಕ್ ಮಾಡ್ಬಿಟ್ಟೆ ಕಣೆ ಎಂದು ಮರುದಿನ ಮೆಸೇಜ್ ಬೇರೆ. ನನಗೋ ಜನವರಿಯಲ್ಲಿ ರಜೆಯಿಲ್ಲ. ಅವಳಿಗೆ ಡಿಸೆಂಬರ್‌ನಲ್ಲಿ ಬಳಸಲು ರಜೆ ಉಳಿದಿಲ್ಲ. ನನ್ನ ಡಿಸೆಂಬರ್ ರಜೆ ಖರ್ಚು ಮಾಡಿಕೊಳ್ಳದಿದ್ದರೆ ಹಾಗೆಯೇ ಕಳೆದು ಹೋಗುತ್ತದೆ. ಒಳ್ಳೆ ಫಜೀತಿ. ನಾವಿಬ್ಬರೂ ವೃತ್ತಿಪರ ಮಹಿಳೆಯರು. ಧಿಡೀರನೆ ಎಲ್ಲಾದರೂ ಹೊರಡಬೇಕೆಂದರೆ ಗಂಡ ಮನೆ ಮಕ್ಕಳೊಡನೆ ಕೆಲಸದ ರಜೆಯನ್ನೂ ಹೊಂದಿಸಿಕೊಳ್ಳಬೇಕು. ನನ್ನ ಗಂಡನೋ ಒಂದು ಚಳಿ ದೇಶದಿಂದ ಇನ್ನೂ ಹೆಚ್ಚಿನ ಚಳಿ ದೇಶಕ್ಕೆ ಬೆಳಕು ಕೂಡ ಇಲ್ಲದ ಜಾಗಕ್ಕೆ ಅದೆಂತ ರಾತ್ರಿಯಲ್ಲಿ ಬಣ್ಣದ ಬೆಳಕು ನೋಡಲು ಹೋಗುವುದೇ, ನಾಟ್ ವರ್ಥ್ ಎಂಬ ಉಡಾಫೆ. ನಾನು ಆ ಒಂದು ಕ್ಷಣದಲ್ಲಿ ಒಬ್ಬಳಾದರೂ ಹೋಗಿ ಬಿಡುವುದೇ ಸೈ ಎಂದು ನಿರ್ಧರಿಸಿಬಿಟ್ಟೆ. ಒಂದೇ ಉಸಿರಿನಲ್ಲಿ ಆಕೆಗೆ ಕರೆ ಮಾಡಿ ಹೇಳಿದರೆ, ಅಯ್ಯೋ ನಾನೂ ಬರ್ತೀನಿ ತಡಿ ಹೇಗೋ ರಜೆ ಹೊಂದಿಸ್ಕೊಳ್ಳುವೆ ಎಂದು ಜತೆಯಾದಳು. ಯಾವ ಲೆಕ್ಕಾಚಾರವೂ ಹಾಕದೆಯೇ, ಸುಮ್ಮನೆ ಡಿಸೆಂಬರ್ ಒಂದಕ್ಕೆ ಹೊರಡುವಾ ಎಂದು ನಿರ್ಧರಿಸಿದೆವು. ವಿಮಾನದ ಮತ್ತು ಹೋಟೆಲ್ ಬುಕಿಂಗ್ ಕೂಡ ಮಾಡಿಬಿಟ್ಟೆವು. ನಮಗಿದ್ದಿದ್ದು ಈಗ ಕೇವಲ ಒಂದು ತಿಂಗಳ ಅವಧಿ. ಎಲ್ಲ ತಯಾರಿ, ಸಂಶೋಧನೆ, ಟೂರ್ ಬುಕಿಂಗ್ ಎಲ್ಲ ನಡೆಯಬೇಕು. ನಾನು ನಾರ್ಥರ್ನ್ ಲೈಟ್ಸ್ ವಿಜ್ಞಾನ, ವಿವರಗಳ ಒಳಗೆ ಹೂತುಹೋಗತೊಡಗಿದ್ದೆ, ಶ್ವೇತಾ, ಹಿಂದೊಮ್ಮೆ ಬೇಸಿಗೆಯಲ್ಲಿ ಐಸ್ಲ್ಯಾಂಡ್‌ ನೋಡಿ ಬಂದವಳಾದ್ದರಿಂದ ಎಲ್ಲ ಲೌಕಿಕ ವ್ಯಾವಹಾರಿಕ ವಿಚಾರಗಳನ್ನೆಲ್ಲ ಆಕೆ ವಹಿಸಿಕೊಂಡಳು. ಟ್ರಾಕಿಂಗ್ ಆಪ್, ಸೋಲಾರ್ ಫ್ಲೇರ್ಸ್ ಜಾಲತಾಣಗಳು, ಸೂರ್ಯನ ಕಲೆಗಳನ್ನು, ಜ್ವಾಲೆಗಳನ್ನ ವರ್ಷವಿಡೀ ದಾಖಲಿಸುವ ಜಾಲತಾಣಗಳು, ಕೆ ಪಿ ಇಂಡೆಕ್ಸ್ ವರದಿ, ಮುನ್ನೋಟಗಳು ಹೀಗೆ ವಿಷಯ ಕಲೆ ಹಾಕುತ್ತ, ನಾವು ಹೋಗುವ ಸಮಯದಲ್ಲಿ ನಮಗೆ ಈ ನರ್ತಿಸುವ ಹಸಿರ ಲೈಟ್ಸ್ ಸಿಗುವ ಅವಕಾಶವಿದೆಯೇ ಎಂದು ನನ್ನದೇ ಒಂದು ಹವಾಮಾನ ಮುನ್ಸೂಚನೆಯ ತರದ ಪಟ್ಟಿ ಮಾಡಿಕೊಂಡೆ. ಕಾಣುತ್ತದೋ ಇಲ್ಲವೋ, ಒಂದು ಅಂದಾಜಾದರೂ ಇರಲಿ ಎಂಬುದು ನನ್ನ ನಿಲುವಾಗಿತ್ತು. ಕೆ ಪಿ ಇಂಡೆಕ್ಸ್ ಎಂಬುದು ಸೌರ ಜ್ವಾಲೆಯ ತೀವ್ರತೆಯನ್ನು ಗುರುತಿಸುವ ಮಾಪಕ ಅಂಕೆ. ಸಾಮಾನ್ಯವಾಗಿ ಒಂದು, ಎರಡು ಇದ್ದಲ್ಲಿ ಅಪರೂಪಕ್ಕೆ ೪, ೫, ಆರರವರೆಗೂ ಆಗುತ್ತೆ.

ಈ ಉತ್ತರ ಧ್ರುವದ ಬೆಳಕೆಂಬುದು ವರ್ಷವಿಡೀ ಸದಾ ಕಾಣಿಸುವ ಆದರೆ ಅದರ ತೀವ್ರತೆ, ಸೂರ್ಯನ ಜ್ವಾಲೆಯ ಚಂಡಮಾರುತಕ್ಕನುಗುಣವಾಗಿ ಬದಲಾಗುವ ವಿಜ್ಞಾನ. ಸೂರ್ಯನ ಮೇಲ್ಮೈಯಿಂದ ಹೊಮ್ಮುವ ಅನಿಲಗಳ ಜ್ವಾಲೆ ವಿದ್ಯುತ್ ಚಾರ್ಜ್ಡ್ ಕಣಗಳ ಸಮೂಹ. ಇವು ೭೨ ಮಿಲಿಯನ್ ಕೀಲೊಮೀಟರಿನಷ್ಟು ದೂರವನ್ನು ಕೇವಲ ಒಂದು ಗಂಟೆಯಲ್ಲಿ ಕ್ರಮಿಸಬಲ್ಲವು! ಅಷ್ಟು ವೇಗದಲ್ಲಿ ಸಾಗುತ್ತ ಭೂಮಿಯ ವಾತಾವರಣಕ್ಕೆ ಇವು ಅಪ್ಪಳಿಸಿದಾಗ ಅದನ್ನು ತಡೆಯುವುದು ಭೂಮಿಯ ಆಯಸ್ಕಾಂತ ವಲಯ ಅಥವಾ ಮ್ಯಾಗ್ನೆಟಿಕ್ ಫೀಲ್ಡ್. ಹಾಗೆ ಅಪ್ಪಳಿಸಿದ ಈ ವಿದ್ಯುತ್ ಅನಿಲದ ಕಣಗಳನ್ನು ನಮ್ಮ ಭೂಮಿಯ ಮ್ಯಾಗ್ನೆಟಿಕ್ ಫೀಲ್ಡ್ ಉತ್ತರ ಧ್ರುವಕ್ಕೂ, ದಕ್ಷಿಣದ ಧ್ರುವಕ್ಕೂ ಚದುರಿಸಿ ಕಳಿಸುವುದು. ಒಂದು ರೀತಿಯಲ್ಲಿ ಉತ್ತರ ಧೃವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ ಎಂಬುದು ನಿಜ. ದಕ್ಷಿಣದ ಬೆಳಕು ಕೂಡ ಇದೆ, ಆದರೆ ದಕ್ಷಿಣ ಧ್ರುವದಲ್ಲಿ ಜನವಸತಿ ಕಡಿಮೆ. ನೀರು, ನೆಲಕ್ಕಿಂತ ಹೆಚ್ಚಿನ ಜಾಗವನ್ನು ಆಕ್ರಮಿಸಿಕೊಂಡಿರುವುದರಿಂದ ನೋಡಲು ಹೋಗುವುದು ಸುಲಭವಲ್ಲ. ಹಾಗಾಗಿ ಉತ್ತರ ಧ್ರುವದ ಬೆಳಕು ಖ್ಯಾತಿ ಹೊಂದಿದೆ. ಈ ಅನಿಲ ಕಣಗಳು ಮನುಷ್ಯರಿಗೆ ಫಿಂಗರ್ ಪ್ರಿಂಟ್ ಇದ್ದ ಹಾಗೆ, ಪ್ರತಿಯೊಂದು ಅನಿಲವೂ ತನ್ನದೇ ಆದ ಬಣ್ಣವನ್ನು ಸೂಸುವುದು. ಈ ಅನಿಲದ ತಾಕಲಾಟ ಭೂಮಿಯ ವಾತಾವರಣದೊಂದಿಗೆ ಆದಾಗ ಬೆಳಕಿನ ವರ್ಣಮಾಲೆಯ ನಡುವಲ್ಲಿಯ ಹಸಿರುಬಣ್ಣ ಮನುಷ್ಯರ ಕಣ್ಣುಗಳಿಗೆ ಸುಲಭವಾಗಿ ಗುರುತಿಸಬಲ್ಲ ಬಣ್ಣವಾದ್ದರಿಂದ ಹಸಿರು ಹೆಚ್ಚು ಗುರುತರವಾಗಿ ಗೋಚರಿಸುವುದು. ಅದರೊಂದಿಗೆ ಗುಲಾಬಿ, ಕೆಂಪು, ನೇರಳೆ ಕೂಡ ತೀವ್ರವಾಗಿ ಬಹಳಷ್ಟು ಬಾರಿ ಕಾಣಿಸುವುದು. ಹೀಗೆಲ್ಲ ಮಾಹತಿ ಕಲೆಹಾಕಿ, ಅರೋರಾ ಸೆರೆಹಿಡಿವ ಆರ್ಕ್ಟಿಕ್ ಪ್ರದೇಶದ ಲೈವ್ ಕ್ಯಾಮ್‌ಗಳಲ್ಲಿ ನೋಡುತ್ತ ಜಾಡು ಹಿಡಿಯುತ್ತಾ ಆಗಲೇ ಉತ್ಸುಕರಾಗಿದ್ದ ನಮಗೆ ಅಂತೂ ನಾವು ಹೊರಡುವ ದಿನ ಬಂದಿತ್ತು.

ಬಾಸ್ಟನ್‌ನಿಂದ ಐಸ್ಲ್ಯಾಂಡ್‌ ರಾಜಧಾನಿ ರೆಕಾವಿಕ್‌ಗೆ ೫ ಗಂಟೆಗಳ ವಿಮಾನಯಾನ. ಐಸ್ಲ್ಯಾಂಡ್ ಸಮಯ ಅಮೆರಿಕಾದ ಪೂರ್ವ ಕರಾವಳಿ ಸಮಯಕ್ಕಿಂತ ಐದು ಗಂಟೆ ಮುಂದಿದೆ. ಬೆಳಗ್ಗೆ ಹನ್ನೊಂದೂವರೆಗೆ ಹೊರಟರೆ, ಅಲ್ಲಿ ನಾವು ತಲುಪುವುದು ರಾತ್ರಿ ಹನ್ನೊಂದು ಗಂಟೆಗೆ. ನಮ್ಮ ಲೆಕ್ಕಾಚಾರದ ಪ್ರಕಾರ ಅಂದು ಕೆಪಿ ಇಂಡೆಕ್ಸ್ ೫. ಎಂದರೆ ವಾತಾವರಣ ಅನುಕೂಲಕರವಾಗಿದ್ದಲ್ಲಿ, ಮೋಡ ಮುಸುಕದಿದ್ದಲ್ಲಿ, ಒಳ್ಳೆಯ ಪ್ರದರ್ಶನ ಕಣ್ಣಿಗೆ ಬೀಳಬೇಕು. ನಮ್ಮ ಅತಿಯಾಸೆ ನೋಡಿ, ಅಯ್ಯೋ ವಿಮಾನದಲ್ಲೇ ಕಂಡರೆ ಎಷ್ಟು ಚೆನ್ನಾಗಿರತ್ತಲ್ವ ಎಂದು ಹಲುಬಿಕೊಂಡಿದ್ದೆವು ಕೂಡ. ವಿಮಾನವೂ ಖಾಲಿ ಖಾಲಿ. ಉದ್ದುದ್ದ ಇಡೀ ಸಾಲು ಸೀಟುಗಳನ್ನಾವರಿಸ್ಕೊಂಡು ಒಂದೊಂದು ಸಾಲು ಹಿಡಿದು ಮಲಗಿಬಿಟ್ಟೆವು. ಅದ್ಯಾವ ಮಾಯದಲ್ಲಿ ನಿದ್ದೆ ಹತ್ತಿತೋ ಗೊತ್ತಿಲ್ಲ. ಹಿಂದಿನ ಸಾಲಿನಲ್ಲಿ ಮಲಗಿದ್ದ ಶ್ವೇತಾ ಜೋರಾಗಿ ಭುಜ ಅಲುಗಿಸಿ ನನ್ನನೆಬ್ಬಿಸುತ್ತಿದ್ದಾಳೆ. ಅವಳಿಗೆ ಗಂಟಲುಬ್ಬಿ ಮಾತೇ ಹೊರಡುತ್ತಿಲ್ಲ. ಕೈಸನ್ನೆ ಮಾಡಿ ಕಿಟಕಿಯ ಪರದೆ ಎತ್ತು ಎನ್ನುತ್ತಿದ್ದಾಳೆ. ಪೈಲಟ್ ಕಡೆ ಬೆರಳು ತೋರಿಸುತ್ತಿದ್ದಾಳೆ. ನನಗೋ ಎದೆ ಧಸಕ್ ಎಂದಿತು. ಅವಳ ಮುಖದ ತುಂಬಾ ಇದ್ದ ನಗು ನೋಡಿ ವಿಮಾನ ಅಪಾಯದಲ್ಲಿಲ್ಲ ಎಂದು ಖಾತ್ರಿಯಾಯಿತು. ಅಂದರೆ.. ಅಂದರೆ.. ನಿಜಕ್ಕೂ ನಾರ್ಥರ್ನ್ ಲೈಟ್ಸ್ ಕಾಣಿಸುತ್ತಿದೆಯಾ? ಇವೆಲ್ಲ ನಡೆದಿದ್ದು ಕೆಲವೇ ಸೆಕೆಂಡುಗಳಲ್ಲಿ ಎನ್ನಬಹುದು. ಪರದೆ ಎತ್ತಿ ಕಿಟಕಿಯಲಿ ನೋಡುತ್ತೇನೆ. ಎದುರಿಗೆ ಕಾಣುವುದೇನದು? ನಭೋ ಮಂಡಲದ ಅಡ್ಡಡ್ಡ ಎಳೆದಂತೆ ಹಸಿರ ಕಾಮನಬಿಲ್ಲು, ಅಲ್ಲಿಂದ ಹೊರಡುತ್ತಿದ್ದ ಅಲೆಯಂತ, ಹೊಗೆ ಏಳುತ್ತಿದ್ದಂತ ನರ್ತನ. ಜೋರಾಗಿ ಕಿರುಚಿಕೊಂಡೆ. ಜೊತೆಗೆ ಇಡೀ ವಿಮಾನ ಹರ್ಷೋದ್ಗಾರದಲ್ಲಿ ಕಿರುಚಿಕೊಳ್ಳುತ್ತಿತ್ತು. ಪುಟ್ಟ ಮಕ್ಕಳಂತೆ ಕುಣಿಯುತ್ತಿದ್ದ ನಮ್ಮನ್ನು ನೋಡುತ್ತಿದ್ದ ಗಗನಸಖಿಯರಿಗೆಲ್ಲ ನಗು. ದಿನವೂ ನೋಡುವ ಅವರೆಷ್ಟು ಧನ್ಯರೋ! ಕಣ್ಣು ಕಿಟಕಿಗೆ ಅಂಟಿಕೊಂಡಿತ್ತು. ಬೆಳಕು ಕುಣಿಕುಣಿದು ಸುರುಳಿಯಾಯಿತು, ಕೊಳವೆಯಾಯ್ತು, ಅಂಚೆಲ್ಲ ಗುಲಾಬಿಯಾಯ್ತು, ಕ್ಷಿತಿಜದಂಚಲ್ಲಿ ಎದ್ದು ಕಣ್ಣೆದುರು ಅಗಾಧ ಹರಡಿಕೊಂಡಂತೆ ಪ್ರತ್ಯಕ್ಷವಾಯ್ತು, ಮಾಯವಾಯ್ತು, ಬಗೆಬಗೆಯ ರೂಪತಾಳಿ ಕಾಮನಬಿಲ್ಲಿನ ಅಂಚು ಒರೆಸಿಕೊಂಡಂತೆ ಕಳಚಿಕೊಳ್ಳುತ್ತ ಸುಮಾರು ನಲ್ವತ್ತು ನಿಮಿಷಗಳ ಮೇಲೆ ಕಾಣದಾಯ್ತು. ಅಷ್ಟೊತ್ತಿಗೆ ನಾವು ಆರ್ಕ್ಟಿಕ್ ಪ್ರದೇಶದ ಗ್ರೀನ್ಲ್ಯಾಂಡ್‌ ಸಮುದ್ರ ದಾಟಿ ಮೋಡಗಳ ಕೆಳಗೆ ಸಾಗಲುತೊಡಗಿದ್ದೂ ಕಾರಣವಿರಬಹುದು. ನಮ್ಮ ಪ್ರಯಾಣದ ಶುರುವಾತು ಹೀಗೂ ಆಗಬಹುದೆಂದು ಬಯಸಿದ್ದರೂ ಇಷ್ಟೊಂದು ರೋಮಾಂಚಕಾರಿ ಇರಬಹುದೆಂಬ ಕಲ್ಪನೆಯೂ ಇರಲಿಲ್ಲ. ಆಗಲೇ ಧನ್ಯೋಸ್ಮಿ ಎಂಬಂತಾ ಭಾವ. ಕೆ ಪಿ ಇಂಡೆಕ್ಸ್ ಪ್ರೆಡಿಕ್ಷನ್ ಸತ್ಯವಾಯಿತಲ್ಲಾ ಎಂಬ ಖುಷಿ. ರೇಖಾವಿಕ್ ತಲುಪಿ ನಮ್ಮ ಹೋಟೆಲಿನತ್ತ ಬಸ್ಸಿನಲ್ಲಿ ಹೊರಟರೆ ಜೋರು ಮಳೆ, ಮೋಡ. ಅಂದು ರೇಖಾವಿಕ್‌ನಲ್ಲಿ ಯಾವ ಬೆಳಕೂ ಕಾಣಲಿಲ್ಲ. ಮೋಡಗಳ ಮೇಲಿದ್ದ ನಮ್ಮ ವಿಮಾನದ ಜನರ ಒಟ್ಟೂ ಪುಣ್ಯವೋ ಏನೋ ಎಂಬಂತೆ ನಮಗೆ ಅರೋರಾಳ ದರ್ಶನವಾಗಿತ್ತು.

ಈ ಅರೋರಾ ನೋಡಲು ಪ್ರಶಸ್ತ ಜಾಗಗಳೆಂದರೆ ಆರ್ಕ್ಟಿಕ್ ಪ್ರದೇಶದ ಚಳಿಗಾಲಗಳು. ಯಾಕೆಂದರೆ ಈ ಬೆಳಕು ಕಾಣಿಸುವುದು ಧ್ರುವ ಪ್ರದೇಶಗಳಲ್ಲಿ ಮಾತ್ರ. ಹಾಗೂ ಕತ್ತಲ ರಾತ್ರಿ ದೊಡ್ಡದಿರಬೇಕು. ಆಗ ಬೆಳಕನ್ನು ಗುರುತಿಸುವ ಸಾಧ್ಯತೆ ಹೆಚ್ಚು. ಅಂದರೆ ನೀವು ಚಳಿಗಾಲದಲ್ಲಿ ನಾರ್ವೆ, ಸ್ವೀಡನ್, ಫಿನ್‌ಲ್ಯಾಂಡ್ ಇತ್ಯಾದಿ ಸ್ಕ್ಯಾಂಡಿನೇವಿಯಾ ದೇಶಗಳ ಉತ್ತರಭಾಗವನ್ನಾಗಲೀ, ಅಲಾಸ್ಕ, ಕೆನಡಾದ ಉತ್ತರ ಪ್ರದೇಶ, ಗ್ರೀನ್ಲ್ಯಾಂಡ್‌ ಇಲ್ಲವೇ ರಷ್ಯಾದ ತಂಡ್ರಾ ಪ್ರದೇಶಗಳನ್ನು ಭೇಟಿ ಮಾಡಬೇಕು. ಹಾಗೆ ನೋಡಿದರೆ, ಐಸ್ಲ್ಯಾಂಡ್‌ ಈ ನಾರ್ಡಿಕ್ ದೇಶಗಳಲ್ಲಿ ಜಾಗತಿಕವಾಗಿ ಸುಲಭವಾಗಿ ಭೇಟಿ ನೀಡಬಲ್ಲಂತ ದೇಶ. ಈ ಎಲ್ಲ ಪ್ರದೇಶಗಳ ಹಗಲು, ರಾತ್ರಿಗಳು ವಿಪರೀತವಾದವುಗಳು. ಬೇಸಿಗೆಯಲ್ಲಿ ೨೦ರಿಂದ ೨೪ ಗಂಟೆ ಉರಿಯುವ ಸೂರ್ಯನಿಗೆ ನಿದ್ದೆಯಿಲ್ಲದಿದ್ದರೆ, ಚಳಿಗಾಲದಲ್ಲಿ ಬರೀ ೨-೪ ಗಂಟೆಗಳ ಹಗಲು. ಅದೂ ಒಂದು ಬಗೆಯ ಹಳದಿ ಬೆಳಕು, ಬೆಳ್ಳನೆಯ ಪ್ರಖರ ಬೆಳಕಲ್ಲ. ಹುಟ್ಟುವ ಪುರುಸೊತ್ತಿಲ್ಲದಂತೆ ಮುಳುಗುವ ತಯಾರಿಯಲ್ಲಿರುವ ಸೂರ್ಯ. ಹಾಗಾಗಿ, ಅರೋರಾ ಬೆಳಕಿನ ಚಲನೆಯ ಜಾಡು ಹಿಡಿಯುವುದು ಸುಲಭ. ಮರುದಿನ ಸೂರ್ಯ ಹುಟ್ಟುವ ಮೊದಲೇ ಎದ್ದು ಊರು ಸುತ್ತಲು ಹೊರಟ ನಮಗೋ ರಾತ್ರಿಯಾಗುವ ತವಕ. ಹನ್ನೊಂದು ಗಂಟೆಯಾದರೂ ಪತ್ತೆಯಿಲ್ಲದ ಸೂರ್ಯನ ಮಂದ ಬೆಳಕಲ್ಲಿ ತಿಂದು ತಿರುಗಿ, ಅದ್ಭುತ ಜ್ವಾಲಾಮುಖಿ ಗುಡ್ಡಗಳ ನಡುವಿನ ಬ್ಲೂ ಲಗೂನ ಬಿಸಿನೀರ ಬುಗ್ಗೆಯ ಕೊಳದಲ್ಲಿ ಮನದಣಿಯೆ ಸಮಯ ಕಳೆದು ಹೊರಬಿದ್ದ ನಮಗೆ ಮತ್ತೆ ರಾತ್ರಿ ಗಸ್ತಿಗೆ ಹೊರಡುವ ತಯಾರಿ.

ಟ್ರಾಕಿಂಗ್ ಆಪ್, ಸೋಲಾರ್ ಫ್ಲೇರ್ಸ್ ಜಾಲತಾಣಗಳು, ಸೂರ್ಯನ ಕಲೆಗಳನ್ನು, ಜ್ವಾಲೆಗಳನ್ನ ವರ್ಷವಿಡೀ ದಾಖಲಿಸುವ ಜಾಲತಾಣಗಳು, ಕೆ ಪಿ ಇಂಡೆಕ್ಸ್ ವರದಿ, ಮುನ್ನೋಟಗಳು ಹೀಗೆ ವಿಷಯ ಕಲೆ ಹಾಕುತ್ತ, ನಾವು ಹೋಗುವ ಸಮಯದಲ್ಲಿ ನಮಗೆ ಈ ನರ್ತಿಸುವ ಹಸಿರ ಲೈಟ್ಸ್ ಸಿಗುವ ಅವಕಾಶವಿದೆಯೇ ಎಂದು ನನ್ನದೇ ಒಂದು ಹವಾಮಾನ ಮುನ್ಸೂಚನೆಯ ತರದ ಪಟ್ಟಿ ಮಾಡಿಕೊಂಡೆ. ಕಾಣುತ್ತದೋ ಇಲ್ಲವೋ, ಒಂದು ಅಂದಾಜಾದರೂ ಇರಲಿ ಎಂಬುದು ನನ್ನ ನಿಲುವಾಗಿತ್ತು.

ಅಂದು ಆಕಾಶದಲ್ಲಿ ಅಲ್ಲಲ್ಲಿ ದಟ್ಟ ಮೋಡಗಳ ಹಾವಳಿ. ನಮ್ಮನ್ನು ಹತ್ತಿಸಿಕೊಂಡ ರಾತ್ರಿ ಸುಮಾರು ಒಂಬತ್ತೂವರೆಗೆ ಯಾತ್ರಿಕರ ಟೂರ್ ಬಸ್ಸೊಂದು ಊರ ಬೆಳಕಿನ ಲೋಕದಿಂದ ಆಗಸದ ಬೆಳಕು ಹುಡುಕಲು ಹೊರಟಿತ್ತು. ಆ ಪುಟ್ಟ ಬಸ್ಸಿನಲ್ಲಿ ಇದ್ದಿದ್ದು ಬಹುಶ ಇಪ್ಪತ್ತು ಜನರು. ಸಮುದ್ರ ತೀರದ ಕತ್ತಲ ಜಾಗಕ್ಕೆ ಹೋಗಿ ಸಾಕಷ್ಟು ಕಾದರೂ ಮೋಡಗಳ ಹಾವಳಿ ನಿಲ್ಲದು. ಅರೋರಾ ಹೊರಗೆ ಬರಳು. ಆತ ಜಾಗ ಬದಲಿಸುತ್ತಾ ಎಲ್ಲೆಲ್ಲೋ ಬಸ್ಸು ಓಡಿಸುತ್ತ, ವೈಜ್ಞಾನಿಕ ಕಾರಣಗಳನ್ನೆಲ್ಲ ಹೇಳುತ್ತಾ ಹೋಗುತ್ತಿದ್ದರೆ, ನಮಗೆ ಅಯ್ಯೋ ನಿನ್ನೆ ಕಂಡ ವಿಮಾನದರ್ಶನೇ ಕೊನೆಯೋ ಏನೋ, ಇನ್ನು ಕಾಣುವುದಿಲ್ಲವೋ ಏನೋ ಎಂದುಕೊಳ್ಳುತ್ತಲೇ ಏನೋ ವಿಷಾದ. ಅಂದು ಸರಿಯಾಗಿ ಏನೂ ಕಾಣಲಿಲ್ಲ. ರಾತ್ರಿ ಒಂದು ಗಂಟೆಯವರೆಗೆ ಕಾಯ್ದು ಕುಳಿತ ಮೇಲೆ ಸಣ್ಣಗೆ ಊದಾ ಬಣ್ಣದ ಕಮಾನು ಏನೋ ಉತ್ತರದಿಕ್ಕಿನಲ್ಲಿ ಗೋಚರಿಸಿದಂತಾಯ್ತು. ಅರೋರಾ ತೀಕ್ಷ್ಣವಾಗಿಲ್ಲದಿದ್ದಲ್ಲಿ, ಮನುಷ್ಯರ ಕಣ್ಣಿಗೆ ಆ ಬೆಳಕು ದಟ್ಟ ಹಸಿರಾಗಿ ಕಾಣಿಸುವುದಿಲ್ಲ. ನಮ್ಮ ಕಣ್ಣಲ್ಲಿನ ಶಂಕು ಕೋಶಗಳು, ಬೆಳಕಿನ ಸ್ಪೆಕ್ಟ್ರಮ್‌ನಲ್ಲಿ ಹಸಿರು ಬಣ್ಣ ತೀಕ್ಷ್ಣವಾಗಿಲ್ಲದಿದ್ದಲ್ಲಿ ಅದನ್ನು ಸೋಸಿ ಪ್ರತ್ಯೇಕಿಸಲಾರವು. ಆದರೆ ನೀವು ಕ್ಯಾಮರಾ ಮೂಲಕ ನೋಡಿದಲ್ಲಿ, ಸ್ಪಷ್ಟವಾದ ಹಸಿರು ಗೋಚರಿಸುವುದು. ಇಂದು ನಮ್ಮ ಕಣ್ಣಿಗೆ ಕಂಡಿದ್ದು ವಿಮಾನದಲ್ಲಿ ಕಂಡಂತ ಗುಲಾಬಿಯಂಚಿನ ಹಸಿರಲ್ಲ. ನಮ್ಮ ಕೆ ಪಿ ಇಂಡೆಕ್ಸ್ ಕೂಡ ಬರೀ ೨ ಎಂದು ತೋರಿಸಿದ್ದರಿಂದ, ಈ ಗ್ರೇಯ್ ಬೆಳಕಿನ ಕಮಾನು ಸರಿಯಾಗಿಯೇ ಹೊಂದಿಕೆಯಾಗಿತ್ತು. ಇಂದು ಕಂಡಷ್ಟೇ ಭಾಗ್ಯ ಎಂದುಕೊಂಡು ಜಾಗ ಖಾಲಿ ಮಾಡಿ ಹೋಟೆಲಿಗೆ ಬಂದು ಮಲಗುವಷ್ಟರಲ್ಲಿ ರಾತ್ರಿ ಏರಡೂವರೆ ಗಂಟೆ. ನಾವೂ ಛಲಬಿಡದ ತ್ರಿವಿಕ್ರಮಿಯರು. ಮರುದಿನ ಮತ್ತೆ ಹುಡುಕಲೇಬೇಕೆಂದು ಪಣ ತೊಟ್ಟಿದ್ದೆವು. ಹಾಗಾಗಿಯೇ ಮುಂಚೆಯೇ ಬೇರೊಬ್ಬ ಟೂರ್ ಆಪರೇಟರ್‌ನನ್ನು ಗೊತ್ತು ಮಾಡಿದ್ದೆವು.

ಮರುದಿನ ಬೆಳಿಗ್ಗೆ ಸಿಲ್ಫ್ರಾ ಫಿಷರ್‌ನಲ್ಲಿ ಈಜಾಟ, ಬಿಸಿನೀರ ಬುಗ್ಗೆಗಳ ತಾಣ, ಗಲ್ಫಾಸ್ ಜಲಪಾತಗಳನೆಲ್ಲ ಮುಗಿಸಿ ರಾತ್ರಿ ಊಟ ಮುಗಿಯಲಿಕ್ಕಿಲ್ಲ, ಮತ್ತೆ ನಮ್ಮ ತಯಾರಿ ಶುರು. ದೇಹದ ಅಣುರೇಣುವಿನಲ್ಲಿ ಚಳಿಯೋ ಚಳಿ. ಬಾಸ್ಟನ್ನಿಗರಾದ ನಮಗೆ ಚಳಿ ಹೊಸದೇನಲ್ಲ. ಒಂದು ಬಗೆಯಲ್ಲಿ ಆರ್ಕ್ಟಿಕ್ ವಿಂಡ್ ತರದ ಚಳಿ ಇಲ್ಲಿ ನಮಗೆ ರೂಢಿ ಇದೆ. ಆದರೆ ಅಲ್ಲಿ ಒಂದೇ ಜಾಗದಲ್ಲಿ ನೀವು ನಿಂತು ಕಾಯಬೇಕೆಂದರೆ ಹತ್ತು ನಿಮಿಷಗಳಲ್ಲಿ ಎಲ್ಲ ಮರಗಟ್ಟುತ್ತೆ. ಹಾಗಾಗಿ ಹಿಮಪರ್ವತಗಳ ಟ್ರೆಕಿಂಗ್‌ಗೆ ಬೇಕಾಗುವ ಬಟ್ಟೆ, ಬೂಟುಗಳು ಅತ್ಯವಶ್ಯಕ. ನೀವು ಇಂಥದ್ದೊಂದು ಪ್ರಯಾಣದ ಆಸೆಯಲ್ಲಿದ್ದರೆ, ಮೊಟ್ಟಮೊದಲಿಗೆ ಖರೀದಿಸಬೇಕಾಗಿದ್ದು, ಒಳ್ಳೆ ಗ್ರಿಪ್ ಇರುವ, ಚಳಿಯಲ್ಲಿ, ಹಿಮದಲ್ಲಿ ನಡೆಯಬಲ್ಲಂಥ ಟ್ರೆಕಿಂಗ್ ಬೂಟುಗಳು. ಎರಡನೆಯದಾಗಿ ಬೆಚ್ಚಗಿಡುವ ಬಟ್ಟೆಗಳು. ನಾವೂ ಎಲ್ಲ ಬಗೆಯ ಬಟ್ಟೆಯ ಪದರಗಳನ್ನೂ ಹೊತ್ತುಕೊಂಡು ಹೋಗಿದ್ದರಿಂದ ಎಲ್ಲ ಮೈಮೇಲೆ ಹೇರಿಕೊಂಡು ಬಸ್ ಹತ್ತಿದೆವು. ಮತ್ತೆ ಬೆಳಕಿನ ಬೇಟೆ ಶುರು. ಈತನೂ ಒಂದೆರಡು ಕಡೆ ಜಾಗ ಬದಲಾಯಿಸುತ್ತ, ಮೋಡಗಳ ಜಾಡು ಗುರುತಿಸಿ, ಅವನ್ನು ತಪ್ಪಿಸುತ್ತ, ಕೊನೆಗೊಂದು ವಾಲ್ಕೆನೋ ಕಲ್ಲುಗಳ ಲಾವಾಫೀಲ್ಡಿನಂಥ ಜಾಗಕ್ಕೆ ತಂದು ನಿಲ್ಲಿಸಿದ. ಗಾಡಿಯ ಬೆಳಕನ್ನೂ ಆರಿಸಿ ಇಳಿಯಿರಿ ಇಳಿಯಿರಿ ಎಂದ.

ಬೆನ್ನ ಹಿಂದೆ ಕಗ್ಗತ್ತಲ ಆಗಸದಲ್ಲಿ ಹೌದೋ ಅಲ್ಲವೋ ಎಂಬಂತೆ ಮುರುಕ ಚಂದ್ರ ಹೊಳೆಯುತಿದ್ದ. ಕಣ್ಣ ಮುಂದೆ ವಿಮಾನದಲ್ಲಿ ಕಂಡಂಥದ್ದೇ ಲಿಂಬೆ ಹಣ್ಣಿನ ಬಣ್ಣದ ಹಸಿರು ಕಾಮನಬಿಲ್ಲು ಹೆದೆಯೇರಿಸಿದಂತೆ ಕಟ್ಟತೊಡಗಿತ್ತು.

ಮತ್ತೆ ಕಿರುಚಿಕೊಂಡೆ. ಹ್ಞಾ ಅದೇ, ನಾನು ಖುಷಿಯಿಂದ ಕಿರುಚಿಕೊಳ್ಳಲು ಫೇಮಸ್ಸು. ಪರ್ವತದ ನೆತ್ತಿಯಲ್ಲಿ, ಸಾಗರದ ಆಳದಲ್ಲಿ, ನಿರ್ಜನ ಕಾಡಲ್ಲಿ, ಬಹಳಷ್ಟು ಕಡೆ ಕಿರುಚಿಕೊಂಡಿರುವೆ. ಆ ಹಸಿರು ಕಾಮನಬಿಲ್ಲು ಬಾಗುತ್ತಾ ನಡುವಲ್ಲಿ ಸುರುಳಿಯಾಗುತ್ತ ತಿರುಪಿಕೊಳ್ಳುತ್ತ ನಮ್ಮ ಸಲುವಾಗೇ ಕುಣಿವಂತೆ ಬಳುಕತೊಡಗಿತ್ತು. ಸುಮಾರು ಇಪ್ಪತ್ತು ನಿಮಿಷಗಳ ಮೇಲೆ ಬಿಲ್ಲಿನ ಪೂರ್ವದ ಕೊಂಡಿ ಕಳಚಿಕೊಂಡು ಪಶ್ಚಿಮದಿಂದ ಚಿಮ್ಮಿದ ಅಲೆಯಂತೆ ಎದ್ದು ಆಡತೊಗಿತ್ತು. ಉದ್ದ ಪತಾಕೆಯಂತಾಯ್ತು. ಕೆಳಗೊಂದು ಕವಲೊಡೆದು ಎರಡೆರಡು ಅಲೆಗಳಂತಾಯ್ತು. ಈಗ ಪಶ್ಚಿಮ ಕೊಂಡಿಯು ಕೂಡ ಕಳಚಿ ಉತ್ತರದಲ್ಲೊಂದು ಸುಳಿಸುಳಿಯಾಗಿ ತಿರುಗುವ ಸುರುಳಿಯಂತಾಯ್ತು. ಆ ಸುರುಳಿ ಬಿಚ್ಚಿಕೊಂಡು ಮತ್ತೆ ಪಶ್ಚಿಮಕ್ಕೆ ಜೋಡಿಸಿಕೊಂಡಂತಾಗಿ ಪಶ್ಚಿಮದೆಡೆಗೆ ಕ್ಷೀಣವಾಗುತ್ತ ಸಾಗಿ ಮರೆಯಾಯ್ತು.

ನೀವು ಈ ಧ್ರುವಲೋಕದ ಬೆಳಕಿನ ವ್ಯಾಮೋಹಕ್ಕೆ ಸಿಲುಕಿದವರಾದಲ್ಲಿ, ಆ ಬಯಕೆ ತೀರಿಸಕೊಳ್ಳಬೇಕೆಂದರೆ ೨೦೨೭/೨೮ ರ ಚಳಿಗಾಲದ ಒಳಗೆ ತೀರಿಸಿಕೊಳ್ಳಿ. ಯಾಕೆಂದರೆ ಸೌರಚಕ್ರ ಸುಮಾರು ೧೦-೧೨ ವರ್ಷಗಳ ಚಕ್ರ. ಈಗಿನ ಚಕ್ರ ೨೦೨೦ರಲ್ಲಿ ಆರಂಭವಾಗಿದೆ. ಅದು ೨೦೨೪/೨೫ರ ಚಳಿಗಾಲದಲ್ಲಿ ಸೂರ್ಯನ ಜ್ವಾಲೆಗಳ ಅನಿಲ ಉಗುಳುವಿಕೆ ಉತ್ತುಂಗದಲ್ಲಿರುತ್ತೆ. ಅಲ್ಲಿಂದ ಕೆಡಿಮೆಯಾಗುತ್ತ ಸಾಗಿ ೨೦೩೧ರಲ್ಲಿ ಕೊನೆಗೊಳ್ಳುತ್ತೆ. ಮತ್ತೆ ಹೊಸಚಕ್ರದ ಪುನರಾವರ್ತನೆ. ಹಾಗಾಗಿ ನಿಮಗೆ ಹಸಿರು ಕಾಮನ ಬಿಲ್ಲಿನ ಕನಸು ಈಡೇರಬೇಕಾದಲ್ಲಿ ಈ ಸೌರಜ್ವಾಲೆಗಳು ಹೊಮ್ಮುತ್ತಿರಬೇಕು. ೨೦೨೭/೨೮ರ ಚಳಿಗಾಲದ ನಂತರ ನೀವು ಮತ್ತೆ ನಿಮ್ಮ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಕನಿಷ್ಟ ಆರೇಳು ವರ್ಷ ಹೊಸಚಕ್ರ ತಾರಕಕ್ಕೇರಲು ಕಾಯಬೇಕು.


ಈ ಸೂರ್ಯ, ಭೂಮಿಯ ನಡುವಿನ ವಿದ್ಯುತ್ ಯುದ್ಧವೇ ಕುಣಿಯುವ ಬೆಳಕು ಎಂದು ಗೊತ್ತಿದ್ದರೂ ಎಂಥ ದಿವ್ಯ ಅನುಭವವದು! ಸದ್ದಿಲ್ಲ, ಗದ್ದಲವಿಲ್ಲ. ಮದ್ದಿಲ್ಲ, ಕಹಳೆಯಿಲ್ಲ, ತಣ್ಣನೆಯ ಯುದ್ಧ, ಅದರಿಂದ ಹೊರಡುವ ಬಣ್ಣ ಬಣ್ಣದ ಬೆಳಕು. ಜಗದ ನಾಟಕರಂಗದ ಪರದೆಯ ಮೇಲೆ ಕುಣಿಯುವ ಬೆಳಕು. ಹಸಿರು ದುಕೂಲದ ಸೆರಗಿಗೆ ಗುಲಾಬಿ ಕುಚ್ಚಿನಂಥ ಬೆಳಕು. ಇದ್ಯಾವ ಹಂಗಿಲ್ಲದೆ ನೋಡಿದರೆ, ಸಮಗ್ರ ವಿಶ್ವದ ವಿದ್ಯಮಾನದ ಆಕಾಶಕಾಯಗಳ ಚಲನೆಯಲ್ಲಿ ಒಂದಿಷ್ಟು ಬೆಳಕು ಕುಣಿದಂತೆ ಕಾಣುವ ದೃಶ್ಯವಿದು. ನನಗೋ ಇಷ್ಟೆಲ್ಲಾ ವಿಜ್ಞಾನವನ್ನು ತಲೆಯಲ್ಲಿಟ್ಟುಕೊಂಡು ಹೋದರೂ ಕಂಡಿದ್ದು ಮಾತ್ರ ದೇವರು ನಕ್ಕಂತೆ, ಆಗಾಧ ವಿಶ್ವದ ಈ ಸಣ್ಣ ಜೀವಿಯ ಕಣ್ಣಿಗೆ ಏನೆಲ್ಲಾ ತೋರಿಸಿದೆ ದೇವಾ ಎಂದು ಕಣ್ತುಂಬಿ ಬಂದಂತೆ.

ನಾರ್ಡಿಕ್ ಕತೆಗಳಲ್ಲಿ ಈ ಬೆಳಕನ್ನು ಯುದ್ಧದಲ್ಲಿ ಸತ್ತವರ ಆತ್ಮಗಳು ಸ್ವರ್ಗಕ್ಕೆ ಸಾಗುವ ದಾರಿದೀಪ ಎಂದೂ, ನಾರ್ಸ್ ಸಂಸ್ಕೃತಿಯ ದೇವತೆ ಆಡಿನ್ ಯುದ್ಧವೀರರನ್ನು ಉತ್ತರದಲ್ಲಿ ಸ್ವರ್ಗಕ್ಕೆ ಕರೆದುಕೊಂಡು ಹೋಗುವಾಗ ಹೀಗೆ ಬೆಳಕಿನ ಸೇತುವೆ ನಿರ್ಮಾಣವಾಗಿ ಅವರು ಅದನ್ನು ದಾಟಿ ವಾಲ್ಹಲ್ಲದಲ್ಲಿ ಮೋಕ್ಷ ಹೊಂದುತ್ತಾರೆಂಬ ನಂಬಿಕೆಯಿತ್ತು. ಫಿನ್ಲ್ಯಾಂಡಿನ ಸಾಮಿ ಜನಾಂಗದವರಿಗೆ ಈ ಬೆಳಕಿನ ಬಗ್ಗೆ ಹೆದರಿಕೆಯಿತ್ತು. ಈ ಬೆಳಕನ್ನು ಕೆಣಕಿದರೆ ಕೆಲವರಿಗೆ ಬಂದು ಹೊತ್ತೊಯ್ಯುತ್ತದೆಂಬ ನಂಬಿಕೆಯಿತ್ತು. ಹಾಗಾಗಿ ಹೊರಬಂದು ನೋಡುವುದು, ಅದರೆಡೆಗೆ ಬೆರಳು ತೋರಿಸುವುದು ನಿಷಿದ್ಧವಾಗಿತ್ತು. ಐಸ್ಲ್ಯಾಂಡಿಕ್ ಕತೆಗಳಲ್ಲಿ ಇದು ಹುಟ್ಟುತ್ತಲೇ ಸತ್ತ, ಅಥವಾ ಪುಟ್ಟ ಮಕ್ಕಳ ಆತ್ಮಗಳ ನರ್ತನವೆಂದೂ, ಅವರ ನೋವನ್ನು ಕಡಿಮೆ ಮಾಡಲು ಬೆಳಕು ಬರುತ್ತದೆಂದೂ ಹಲವು ಬಗೆಯ ನಂಬಿಕೆಯಿದೆ. ಈ ಉತ್ತರದ ಬೆಳಕಿಗೆ ಅರೋರಾ ಬೋರಿಯಾಲಿಸ್ ಎಂದು ಹೆಸರು ಕೊಟ್ಟಿದ್ದು ಖಗೋಳ ವಿಜ್ಞಾನಿ ಗೆಲಿಲಿಯೋ ಗೆಲಿಲಿ. ಮುಂಜಾನೆ ಯಾ ದೇವತೆ ಅಥವಾ ಉಷೆ ಎಂದಂತೆ ಗ್ರೀಕ್ ದೇವತೆಯ ಹೆಸರು ಅರೋರಾ. ಉತ್ತರದ ಗಾಳಿಯ ದೇವರು ಬೋರಿಯಸ್. ಈ ಇಬ್ಬರ ಮಹಿಮೆಯನ್ನು ಸೇರಿಸಿ ಉತ್ತರದ ವಿದ್ಯುತ್ ಗಾಳಿಯಿಂದ ಹೊಮ್ಮುವ ಬೆಳಕಿಗೆ ಅರೋರಾ ಬೋರಿಯಲಿಸ್ ಎಂದು ಹೆಸರು ಬಂತು.

ಇಂಥದ್ದೊಂದು ವೈಭವಯುತ ಬೆಳಕಿನಾಟಕ್ಕೆ ಕಾರಣೀಭೂತವಾದ ಭೂಮಿಯ ವಾತಾವರಣಕ್ಕೆ, ಥಾಂಕ್ ಯು ಮ್ಯಾಗ್ನೆಟಿಕ್ ಫೀಲ್ಡ್ ಫಾರ್ ಆಲ್ವೇಸ್ ಕೀಪಿಂಗ್ ಅಸ್ ಸೇಫ್ ಎನ್ನಲೇ ಅಥವಾ ಅಯ್ಯೋ ಸೂರ್ಯನೇ, ನಿನ್ನ ಕೋಪ ತಾಪವೂ ಎಷ್ಟು ಚಂದ ಎನ್ನಲೇ? ಮತ್ತೊಮ್ಮೆ ಈ ದೃಶ್ಯಕಾವ್ಯಕ್ಕೆ ಸಾಕ್ಷಿಯಾದೆವಲ್ಲ ಎಂಬ ಧನ್ಯತೆ ಎಷ್ಟು ಬಾರಿ ಕಲ್ಪಿಸಿಕೊಂಡರೂ ಮುಗಿಯುವುದಿಲ್ಲ. ಆಗಲೇ ಹುಟ್ಟಿತ್ತು ಹೊಸ ಬಯಕೆ, ಇದು ಒಮ್ಮೆ ನೋಡಿದರೆ ತೀರುವ ದಾಹವಲ್ಲ. ಜೀವನದಲ್ಲಿ ನನಗಂತೂ ಇನ್ನೊಮ್ಮೆ ನೋಡಿಬಿಡಬೇಕು ಎಂಬಂತೆ ಈ ಅರೋರಾ ಗಾಳದ ಕೊಕ್ಕೆಗೆ ಸಿಕ್ಕ ಮೀನಂತೆ ಎಳೆದುಬಿಟ್ಟಿದೆ. ಅದೇನು ಮಾಯೆಯೋ ಆ ಕುಣಿವ ಹಸಿರು ಬೆಳಕಿನದು. ನೋಡುತ್ತಿದ್ದರೆ ಏನೋ ಮಾಯಕ ಶಕ್ತಿ, ಮಾಂತ್ರಿಕ ಮೋಹ ಹುಟ್ಟಿಸುವ ಈ ಬೆಳಕನ್ನು ಹುಡುಕಿ ಮತ್ತೊಮ್ಮೆ ಹೋಗಿಬಿಡಬೇಕು ಉತ್ತರದ ಧ್ರುವದೆಡೆಗೆ ಎಲ್ಲಿಯಾದರೂ.