೧
ಬದುಕು ಸಾರವೆಂದು ತಿಳಿದದ್ದು ನೀ ಬಂದ ಮೇಲೆ
ಬದುಕು ಸಾಲದೆಂದು ಅನಿಸಿದ್ದು ನೀ ಬಂದ ಮೇಲೆ
ಒಣಗಿರುವ ಕಸಕೆ ಬೆಂಕಿ ಹೊತ್ತಿದ್ದು ನೀ ಬಂದ ಮೇಲೆ
ಉರಿವ ಎದೆಯಲೂ ಜೀವರಸ ಜಿನುಗಿದ್ದು ನೀ ಬಂದ ಮೇಲೆ
ಬರಡಾದ ಬಾಂದಳ ನಗುವಂತೆ ಕಂಡಿದ್ದು ನೀ ಬಂದ ಮೇಲೆ
ನಗುವ ನಯನದ ತುಂಬ ಹನಿಗಳೊಡೆದದ್ದು ನೀ ಬಂದ ಮೇಲೆ
ಕಾಣದೆಲೆ ಹೋಗುವ ಕಾಲ ಕೈತಾಕಿ ನಿಂತಿದ್ದು ನೀ ಬಂದ ಮೇಲೆ
ಕೈ ತಾಕಿ ಮೈ ಸೋಕಿ ಓಡದೆಲೆ ಪಕ್ಕ ಕುಳಿತಿದ್ದು ನೀ ಬಂದ ಮೇಲೆ
ಸಮಯಾಸಮಯವಿರದೆ ಸಾವ ನೆರಳೂ ಓಡಿದ್ದು ನೀ ಬಂದ ಮೇಲೆ
ಸಾವ ಚಿಹ್ನೆಗಳಿರದೆ ಬದುಕ ಬಾಂದಳ ಕಂಡಿದ್ದು ನೀ ಬಂದ ಮೇಲೆ
೨
ಜೋಳಿಗೆ ಹಿಡಿದು ಫಕೀರನಾದೆ ನಾನು
ಮನವ ತುಂಬಿಸಬಾರದೆ ನೀನು
ಹರಿದ ಜೋಳಿಗೆ ತುಂಬ ನಿನ್ನದೇ ನೆನಪು
ಹೊಲಿದು ಹದಗೊಳಿಸಿಡಬಾರದೆ ನೀನು
ಕಾಲಾತೀತವಲ್ಲ ಕಾಲಗಣನೆಗಳಿಲ್ಲ ನೆನಪಿಗೆ
ನಡುರಸ್ತೆಯಲಿ ನಿಲಿಸಿ ತಣಿಸಿಡಬಾರದೆ ನೀನು
ಭಾರಿ ಕತ್ತಲೆಯಲಿರುವವನ ಎಳೆದು
ಬೆಳಕಕಾಣಿಸಿ ಕಣ್ಮುಚ್ಚಿಸಿಡಬಾರದೆ ನೀನು
ಬಾರದ ಭವಗಳು ಬಂದಾಯಿತು ಇಲ್ಲಿಯೇ
ಇನ್ನೇನಿದೆ ಇಲ್ಲಿ ಸಾವಾಗಿಸಿಬಿಡಬಾರದೆ ನೀನು
ಆರ್ . ದಿಲೀಪ್ ಕುಮಾರ್ , ಮೂಲತಃ ಚಾಮರಾಜನಗರದವರು. ಸದ್ಯ ಗುಂಡ್ಲುಪೇಟೆ ಪಟ್ಟಣದ ಸರಕಾರಿ ಡಿ ಬಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಮರ್ಶೆ, ಸಂಶೋಧನೆ , ಕಾವ್ಯರಚನೆ ಮತ್ತು ಭಾಷಾಂತರದಲ್ಲಿ ತೊಡಗಿದ್ದಾರೆ.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ