ದಿನ ಬೆಳಗಾದರೆ ನಮ್ಮ ಮನೆಗೆ ಹಾಜರಾಗಲು ಕಾತರದಿಂದ ಕಾಯುವ ಮಕ್ಕಳಿಬ್ಬರೂ ಆವತ್ತು ಮನೆಯೊಳಗೆ ಬರಲು ಹಿಂದುಮುಂದು ನೋಡುತ್ತಿದ್ದರು. ಹೊರಗೆ ನಿಂತುಕೊಂಡೇ ಮಾತಾಡ್ತೀವಿ ಅನ್ನೋ ತರ ಅವರ ದೇಹಭಾಷೆ ಇತ್ತು.. ನಮಗೆ ಅನುಮಾನ ಬರುವಷ್ಟರಲ್ಲಿ ಅವರೇ, ‘ಅಮ್ಮಾ ಹೇಳಿದಾರೆ, ಇವತ್ತು ನಾವು ಪೋರ್ಕ್ ತಿಂದಿದ್ದೀವಿ, ಅದಕ್ಕೆ ನಿಮ್ಮನೆಯೊಳಗೆ ಬರ್ಬಾರ್ದುʼ ಅನ್ನುತ್ತ ಹಲ್ಲುಬಿಟ್ಟರು. ‘ಏ.. ಹಾಗೆಲ್ಲ ಹೇಳ್ಬಾರ್ದು.. ಬನ್ನಿ ಒಳಗೆʼ ಅಂತಂದೆವು. ಅವರ ತಾಯಿ ಪುಟ್ಟ ಮಕ್ಕಳಿಬ್ಬರಿಗೆ ಹಾಗೆ ಹೇಳಿ ಕಳಿಸಿದ್ದಕ್ಕೆ ನಮ್ಮಿಬ್ಬರಿಗೂ ನಿಜಕ್ಕೂ ಬೇಸರವಾಗಿತ್ತು.
ರೂಪಶ್ರೀ ಕಲ್ಲಿಗನೂರ್ ಬರಹ
‘ನಾವು ಕೊಟ್ಟದ್ದು ನೀವು ತಿಂತೀರಾ?’… ಮನೆಯ ಕಾಂಪೌಂಡಿನಲ್ಲಿ ನೆರೆಮನೆಯವರೊಟ್ಟಿಗೆ ಸ್ಥಳೀಯ ಆಹಾರದ ಬಗ್ಗೆ ಮಾತನಾಡುತ್ತಾ ನಿಂತಾಗ, ಹೀಗವರು ನನ್ನ ಮೊದಲ ಬಾರಿ ಕೇಳಿದಾಗ ನನಗೆ ಆ ಪ್ರಶ್ನೆ ಅರ್ಥವಾಗದೇ ಅಥವಾ ಜೀರ್ಣವಾಗದೇ “ಏನಂದ್ರೀ… ಅರ್ಥ ಆಗ್ಲಿಲ್ಲ” ಅಂದೆ. ‘ಅಲ್ಲ, ನಾವು ಮನೇಲಿ ನಾನ್ ವೆಜ್ ಮಾಡ್ತೀವಿ ಅದ್ಕೆ ಕೇಳಿದೆ. ಪಾತ್ರೆ ಎಲ್ಲ ಬೇರೆ ಇಟ್ಟಿದ್ದೀನಿ. ಆದ್ರೂ… ನೀವು ತಿಂತೀರ ಇಲ್ಲವಾ ಅಂತೊಮ್ಮೆ ಕೇಳಿದೆ…ʼ ಅಂತಂದು ಮೆಲುವಾಗಿ ನಕ್ಕರು. ಅವರ ಮಾತಿನ ಒಳಾರ್ಥ ಆಗ ನನಗೆ ಅರ್ಥವಾಗಿ ‘ಅರೇ ಹಾಗೇನಿಲ್ಲ… ತಿಂತೀವಿ. ಅಲ್ಲಿ ತಿನ್ನಬಾರ್ದು ಇಲ್ಲಿ ತಿನ್ನಬಾರ್ದು ಅಂತೇನೂ ಇಲ್ಲ ನಮಗೆ. ವೆಜ್ ಎಲ್ಲಿ ಮಾಡಿ ಕೊಟ್ಟರೂ, ಏನು ಕೊಟ್ಟರೂ ತಿನ್ನೋದೆʼ ಅಂತಂದೆ. ಅದಕ್ಕವರು ‘ಆಗಲಿʼ ಅಂತಂದು ಮಾರನೆಯ ದಿನ ಬೈಂಬಳೆ ಕರ್ರೀ… ಅಂದರೆ ಕಣಿಲೆ (ಎಳೆ ಬಿದಿರು) ಪಲ್ಯ ಮತ್ತು ಅದರೊಟ್ಟಿಗೆ ಅಕ್ಕಿ ರೊಟ್ಟಿಯನ್ನೂ ಕೊಟ್ಟಾಗ ‘ಇದು ಚನ್ನಾಗಿದ್ಯಲ್ಲ…ʼ ಅಂತ ಮೇಯ್ದಿದ್ದೆ. ಹಿಂದೆ ಇಲ್ಲೇ ಕೊಡಗಿನಲ್ಲೇ ಎರಡು-ಮೂರು ಬಾರಿ ಕಣಿಲೆಯ ಪಲ್ಯವನ್ನು ತಿನ್ನಲು ಪ್ರಯತ್ನಿಸಿದರೂ ಅದರ ರುಚಿ ನನಗೆ ಒಗ್ಗಿರಲೇಯಿಲ್ಲ. ತಟ್ಟೆಯಲ್ಲಿ ಬಡಿಸಿದ ಯಾವುದಕ್ಕೂ ಊಹೂಂ ಹೇಳದವಳು ಕಣಿಲೆಯನ್ನು ತಿನ್ನಲಾಗದೇ ವಿಪರೀತ ಬೇಸರದಿಂದ (ಅಂದರೆ ತಟ್ಟೆಗೆ ಹಾಕಿದ್ದನ್ನು ತಿನ್ನಲಾಗುತ್ತಿಲ್ಲವಲ್ಲ ಎಂದು), ಇನ್ನೊಂದು ತಟ್ಟೆಗೆ ವರ್ಗಾಯಿಸುತ್ತಿದ್ದೆ.
ಉತ್ತರ ಕರ್ನಾಟಕದ ಮೂಲದ, ಬೆಂಗಳೂರಿನಲ್ಲಿ ಬೆಳೆದ ನನಗೆ ಇಂಥದ್ದೊಂದು ಆಹಾರ ಇರುತ್ತದೆಂದೂ ಮದುವೆಗೂ ಮುನ್ನ ಗೊತ್ತಿರಲಿಲ್ಲ. ಅತ್ತೆ ಮನೆಯಲ್ಲಿ ಎಲ್ಲರೂ ಚಪ್ಪರಿಸಿಕೊಂಡು ತಿನ್ನುವ ಬೈಂಬಳೆ ನನಗೆ ಇನ್ನೂ ಒಗ್ಗಿಲ್ಲ.. ಕಣಿಲೆಯ ಭಿನ್ನವಾದ ವಾಸನೆ ಮತ್ತು ರುಚಿ ಎರಡೂ ನನ್ನ ನಾಲಿಗೆಗೆ ಹೊಂದಿಕೊಳ್ಳಲಾಗುತ್ತಲೇ ಇಲ್ಲ. ಆದರೆ ಮೊನ್ನೆ ನೆರೆಮನೆಯವರು ಕೊಟ್ಟಾಗ ಹೇಗೆ ಇಷ್ಟವಾಯ್ತು ಅಂತ ಯೋಚಿಸುತ್ತಿರುವಾಗ ನಮಗೆ ಕೊಡಲೆಂದೇ ಆವತ್ತು ಕಣಿಲೆಗೆ ಯಾವುದೇ ಮಸಾಲೆಯನ್ನು ಸೇರಿಸದೇ ಕೇವಲ ಒಗ್ಗರಣೆಯನ್ನಷ್ಟೇ ಹಾಕಿ ಮಾಡಿದ್ದರಂತೆ. ಹಾಗಾಗಿ ಅದರ ಫ್ಲೇವರ್ ತುಂಬಾ ಮೈಲ್ಡ್ ಎನ್ನಿಸಿ ನಾನು ತಿಂದಿರಬಹುದು ಎನ್ನಿಸಿತು.
ಇದೇ ಸಮಸ್ಯೆ ನನಗೆ ಹಲಸಿನ ಕಾಯಿಯ ಪಲ್ಯ ತಿನ್ನುವುದರಲ್ಲೂ ಇದೆ. ಒಮ್ಮೆ ಮಂಗಳೂರಿಗೆ ಅಪ್ಪನ ಸ್ನೇಹಿತರ ಮನೆಗೆ ಹೋದಾಗ, ಚಪಾತಿ ಮತ್ತು ಅರ್ಧ ತಟ್ಟೆ ಹಲಸಿನಕಾಯಿ ಪಲ್ಯ ಬಡಿಸಿದ್ದರು. ನಮಗ್ಯಾರಿಗೂ ಅದಕ್ಕೂ ಮುಂಚೆ ಹಲಸಿನಕಾಯಿಯಿಂದ ಪಲ್ಯವೊಂದನ್ನು ಮಾಡಲಾಗುತ್ತದೆ ಅನ್ನುವ ಸಂಗತಿಯೂ ಗೊತ್ತಿರಲಿಲ್ಲ. ಆದರೆ ಸಾಮಾನ್ಯವಾಗಿ ತಟ್ಟೆಯಲ್ಲಿನ ಆಹಾರ ವೇಸ್ಟ್ ಮಾಡುವುದಿಲ್ಲವೆಂದರೂ, ಅವತ್ತು ಒಮ್ಮೆ ಬಾಯಿಗೆ ಹಾಕಿಕೊಂಡ ಹಲಸಿನ ಕಾಯಿ ಪಲ್ಯದ ಒಂದು ತುತ್ತನ್ನನ ಹೊಟ್ಟೆಗಿಳಿಸುವಷ್ಟರಲ್ಲಿ ಜೀವನವೇ ಸಾಕುಸಾಕು ಎನ್ನಿಸಿತ್ತು. ಬೇರೆ ಇನ್ಯಾವುದೇ ಪಲ್ಯವೂ ಅಲ್ಲಿರಲಿಲ್ಲವಾಗಿ, ಪರಿಸ್ಥಿತಿ ಕಷ್ಟದಲ್ಲಿದ್ದರೂ ಚಪಾತಿಯನ್ನಷ್ಟೇ ತಿಂದು ಎದ್ದು, ಪಲ್ಯವನ್ನು ಪೂರಾ ಮುಸುರೆಯ ಪಾತ್ರೆಗೆ ಸುರುವಿದ್ದಾಯಿತು. ಇದರಿಂದ ನನ್ನ ಬಗ್ಗೆ ನನಗೇ ಅಪರಾಧಿ ಭಾವವನ್ನು ಮೂಡಿಸಿತ್ತು.
ಮತ್ತೊಂದು ದಿನ, ದಿನ ಬೆಳಗಾದರೆ ನಮ್ಮ ಮನೆಗೆ ಹಾಜರಾಗಲು ಕಾತರದಿಂದ ಕಾಯುವ ಮಕ್ಕಳಿಬ್ಬರೂ ಆವತ್ತು ಮನೆಯೊಳಗೆ ಬರಲು ಹಿಂದುಮುಂದು ನೋಡುತ್ತಿದ್ದರು. ಹೊರಗೆ ನಿಂತುಕೊಂಡೇ ಮಾತಾಡ್ತೀವಿ ಅನ್ನೋ ತರ ಅವರ ಬಾಡಿ ಲಾಂಗ್ವೇಜ್ ಇತ್ತು.. ನಮಗೆ ಅನುಮಾನ ಬರುವಷ್ಟರಲ್ಲಿ ಅವರೇ, ‘ಅಮ್ಮಾ ಹೇಳಿದ್ದಾರೆ, ಇವತ್ತು ನಾವು ಪೋರ್ಕ್ ತಿಂದಿದ್ದೀವಿ, ಅದಕ್ಕೆ ನಿಮ್ಮನೆಯೊಳಗೆ ಬರ್ಬಾರ್ದುʼ ಅಂತು ಹಲ್ಲುಬಿಟ್ಟರು. ‘ಏ.. ಹಾಗೆಲ್ಲ ಹೇಳ್ಬಾರ್ದು.. ಬನ್ನಿ ಒಳಗೆʼ ಅಂತಂದೆವು. ಅವರ ತಾಯಿ ಪುಟ್ಟ ಮಕ್ಕಳಿಬ್ಬರಿಗೆ ಹಾಗೆ ಹೇಳಿ ಕಳಿಸಿದ್ದಕ್ಕೆ ನಮ್ಮಿಬ್ಬರಿಗೂ ನಿಜಕ್ಕೂ ಬೇಸರವಾಗಿತ್ತು. ನಾನು ಸಂಜೆ ಅವರ ತಾಯಿ ಸಿಗಲು ಕಾಯುತ್ತಿದ್ದೆ, ಸಂಜೆ ಮಾತಿಗೆ ಸಿಕ್ಕಿದ್ದೇ… ‘ಯಾಕೆ ಹಾಗೆ ಹೇಳಿ ಕಳಿಸಿದ್ರಿ ಮಕ್ಕಳಿಗೆ? ಮಕ್ಕಳಿಗೇನು ಗೊತ್ತಾಗತ್ತೆ? ಹಾಗೆಲ್ಲ ಹೇಳಬೇಡಿʼ ಅಂದಾಗ, ಈ ಹಿಂದೆ ಪಕ್ಕದಲ್ಲಿ ವಾಸಿಸುತ್ತಿದ್ದ ಮನೆಯವರೊಬ್ಬರು, ಮಕ್ಕಳಿಬ್ಬರು ಪೋರ್ಕ್ ತಿಂದು ಅವರ ಮನೆಗೆ ಹೋದದಿನ ಮಕ್ಕಳಿಬ್ಬರನ್ನೂ ಬೈದು ಕಳುಹಿಸಿದ್ದರಂತೆ… ಹೀಗೆ ಪೋರ್ಕ್ ತಿಂದ ದಿನವೆಲ್ಲ ನಮ್ಮನೆಗೆ ಬರಕೂಡದು- ಎಂದು ಅವಾಜ್ ಹಾಕಿ ಕಳುಹಿಸಿದ್ದರಂತೆ. ಹಾಗಾಗಿ ಎಂದಾಗ… ನಿಜಕ್ಕೂ ಜನರ ತಲೆಯಲ್ಲಿ ಏನು ಓಡುತ್ತದೆ ಎಂದು ಆಶ್ಚರ್ಯವಾಯ್ತು. ಅವರ ತಟ್ಟೆ, ಅವರ ಹೊಟ್ಟೆ… ಅವರವರ ಇಷ್ಟವಲ್ಲವೇ. ಅದರಲ್ಲಿ ಬೇರೆಯವರದ್ದೇನು ರಾಜಕೀಯ? ಯಾರೂ ನಮ್ಮನೆಯೊಳಗೆ ಬಂದು ನಾವೇನು ತಿನ್ನಬೇಕು? ಏನು ಬಿಡಬೇಕು ಎಂದು ಹೇಳುವುದಿಲ್ಲವಾದ್ದರಿಂದ ನಾವೂ ತೆಪ್ಪಗಿರುವುದನ್ನ ಕಲಿತುಕೊಳ್ಳಬೇಕು.
ಅತ್ತೆ ಮನೆಯಲ್ಲಿ ಎಲ್ಲರೂ ಚಪ್ಪರಿಸಿಕೊಂಡು ತಿನ್ನುವ ಬೈಂಬಳೆ ನನಗೆ ಇನ್ನೂ ಒಗ್ಗಿಲ್ಲ.. ಕಣಿಲೆಯ ಭಿನ್ನವಾದ ವಾಸನೆ ಮತ್ತು ರುಚಿ ಎರಡೂ ನನ್ನ ನಾಲಿಗೆಗೆ ಹೊಂದಿಕೊಳ್ಳಲಾಗುತ್ತಲೇ ಇಲ್ಲ. ಹಾಗಾಗಿ ತಣ್ಣಗೆ ಇನ್ನೊಂದು ತಟ್ಟೆಗೆ ವರ್ಗಾಯಿಸುತ್ತಿದ್ದೆ.
ಆಹಾರದ ವಿಷಯದಲ್ಲಿ ನನಗೆ ಆರಿಸಿ, ಅದನ್ನ ತಿಂತೀನಿ… ಇನ್ನೊಂದನ್ನ ತಿನ್ನಲ್ಲ ಅಂತನ್ನುವ ಕಂಪ್ಲೇಂಟ್‌ಗಳಿರುವುದೂ ಸರಿಯಲ್ಲ. ಎಷ್ಟೋ ದೇಶಗಳಲ್ಲಿ, ಅಥವಾ ನಮ್ಮದೇ ದೇಶದಲ್ಲಿ ಒಂದು ಹೊತ್ತು ಊಟಕ್ಕೆ ಪರದಾಡುವ ಲಕ್ಷಗಟ್ಟಲೇ ಜನರಿರುವಾಗ, ಮನೆಯಲ್ಲಿ ಮಾಡಿಟ್ಟ ಆಹಾರಕ್ಕೆ ಹೆಸರಿಟ್ಟರೆ, ಅದರಷ್ಟು ದುರಹಂಕಾರ ಮತ್ಯಾವುದೂ ಇಲ್ಲವೆಂದೇ ನನ್ನ ನಂಬಿಕೆ. ನಮ್ಮ ಮನೆಯಲ್ಲೂ ನಾವು ಸಣ್ಣವಯಸ್ಸಿನಿಂದ ಮದುವೆಯಾಗುವವರೆಗೆ ಯಾವುದಾದರೂ ಕಾರಣಕ್ಕೆ ಬೇಸರಕ್ಕೋ, ಕೋಪಕ್ಕೋ ‘ಊಟ ಮಾಡಲ್ಲ…ʼ ಅಂತ ಹೇಳಿದರೆ ಸಾಕು.. ‘ಅನ್ನದಮ್ಯಾಲೆ ಸೊಕ್ಕು ತೋರಸ್‌ಬ್ಯಾಡ್ರೀ…ʼ ಅಂತಲೇ ಅಪ್ಪ ಅಮ್ಮ ಬೈಯೋದು. ಅದು ನಾವು ಮೂವರೂ ಕಲಿತ ದೊಡ್ಡ ಪಾಠ. ಹಾಗಾಗಿ ಸಸ್ಯಾಹಾರ ಎಲ್ಲಿ ಏನು ಕೊಟ್ಟರೂ ಅದರ ಬಗ್ಗೆ ಚಕಾರವೆತ್ತುವುದಿಲ್ಲ. ಅದರ ಬಗ್ಗೆ ಕಮೆಂಟ್ ಮಾಡಲೂ ಹೋಗುವುದಿಲ್ಲ. ಅದು ಹೋಟಲ್ ಊಟವಾದರೂ ಸರಿ ಮನೆಯದ್ದಾರೂ ಸರಿ. ಒಂದು ಕಡೆ ಟ್ರೈ ಮಾಡಿದ್ದು ಇಷ್ಟವಾಗಲಿಲ್ಲವಾದರೆ ಮತ್ತೊಂದು ಕಡೆ ಪ್ರಯತ್ನಿಸೋದು. ಅಷ್ಟೇ. ಆದರೆ ಹಲಸಿನ ಪಲ್ಯ ಹಾಗೂ ಬೈಂಬಳೆಯ ವಿಷಯದಲ್ಲಿ ಹೊಂದಿಕೊಳ್ಳಲು ಇನ್ನೂ ಸಮಯ ಬೇಕೇನೋ.
ಭಾರತ ವಿವಿಧತೆಗೆ ಹೆಸರಾದ ದೇಶ. ಊಟ, ಬಟ್ಟೆ, ಸಂಸ್ಕೃತಿ ಎಲ್ಲವೂ ಒಂದು ರಾಜ್ಯದಿಂದ, ಇನ್ನೊಂದು ರಾಜ್ಯದಲ್ಲಿ ಭಿನ್ನ-ವಿಭಿನ್ನ. ಬಹುತೇಕ ಉತ್ತರ ಭಾರತದ ರಾಜ್ಯಗಳಲ್ಲಿ ಸಸ್ಯಾಹಾರವೇ ಪ್ರಮುಖ ಆಹಾರ ಪದ್ಧತಿ. ಆದರೆ ದಕ್ಷಿಣ ಭಾರತದಲ್ಲಿ ಸಸ್ಯಾಹಾರಿಗಳೂ ಮತ್ತು ಮಾಂಸಾಹಾರಿಗಳೂ ಬಹುತೇಕ ಸರಿಸಮಾನ ಅಂಕಿಯಷ್ಟು ಇದ್ದಾರೆಂದೇ ಹೇಳಬಹುದು. ಮೊನ್ನೆ ‘ಫ್ಯಾಮಿಲಿಮ್ಯಾನ್ʼ ಸರಣಿ ನೋಡುವಾಗ ಅದರಲ್ಲೊಂದು ಸಂಭಾಷಣೆ ಹೀಗಿತ್ತು.. ತಮಿಳುನಾಡಿಗೆ ಬಂದ ಉತ್ತರ ಭಾರತದ ಅಂಡರ್‌ಕವರ್ ಏಜೆಂಟ್ ಒಬ್ಬ ‘ನನಗೆ ಸೌಥ್ ಇಂಡಿಯನ್ ಆಹಾರ ಅಂದ್ರೆ ತುಂಬಾ ಇಷ್ಟʼ ಎಂದದ್ದೇ ತಮಿಳುನಾಡಿನ ಅಧಿಕಾರಿ ಚುಟುಕಾಗಿ ಕೇಳುತ್ತಾನೆ ‘ ಸೌಥ್ ಇಂಡಿಯನ್ ಅಂದ್ರೆ ಯಾವ ಸ್ಟೇಟ್‌ನದ್ದು?ʼ ಅಂತ… ಹೌದು ದಕ್ಷಿಣ ಭಾರತ ಅಂದರೆ ಈಗಿನ ತೆಲಂಗಾಣವೂ ಸೇರಿ ಒಟ್ಟು ಐದು ರಾಜ್ಯಗಳು. ಒಂದೊಂದು ರಾಜ್ಯದಲ್ಲಿ ಒಂದೊಂದು ತಿಂಡಿ/ಊಟ ಜನಪ್ರಿಯವಾಗಿರುತ್ತದೆ. ಅದರಲ್ಲೂ ಸಸ್ಯಾಹಾರವೋ ಮಾಂಸಾಹಾರವೋ ಅಂತಲೂ ನೋಡಬೇಕು…
ಭಾಷೆಯ ವೈವಿದ್ಯಕ್ಕೂ ಆಹಾರದ ವೈವಿದ್ಯಕ್ಕೂ ಬಹಳ ಸಾಮ್ಯತೆಯಿದೆ. ಪ್ರಾಂತೀಯವಾಗಿ ಭಾಷೆಯ ಬಳಕೆ ಹೇಗೆ ಬದಲಾಗತ್ತೋ ಹಾಗೇ ಅಲ್ಲಿನ ಪ್ರಕೃತಿಯ ಆಧಾರದಮೇಲೆ ಆಹಾರ ಶೈಲಿಯೂ ಭಿನ್ನವಾಗಿರುತ್ತದೆ. ಸಸ್ಯಾಹಾರವನ್ನೇ ರೂಢಿಯಲ್ಲಿಟ್ಟುಕೊಂಡಿರುವ ಒಂದಷ್ಟು ಜಾತಿಯ ಜನರು, ಕೆಲವೊಂದು ಪ್ರದೇಶಗಳಲ್ಲಿ, ಉದಾಹರಣೆಗೆ ಮಂಗಳೂರು, ಕೇರಳ ಇಂಥ ಊರುಗಳಲ್ಲಿ ಮೀನು ತಿನ್ನುವುದು ಸಾಮಾನ್ಯ. ಹಾಗಾಗಿಯೇ ಪ್ರಾಂತೀಯತೆ ಭಾಷೆಯ ಮೇಲೂ ಆಹಾರದ ಮೇಲೂ ಸಮಾನವಾಗಿ ತನ್ನ ಪ್ರಭಾವವನ್ನು ಬೀರುತ್ತದೆ. ಉತ್ತರಕರ್ನಾಟಕದಂತ ಬಿಸಿಲಿನ ಪ್ರದೇಶಗಳಲ್ಲಿ ಉಷ್ಣಬೆಳೆ ಗೋಧಿ ಸಾಮಾನ್ಯವಾಗಿ ತಿನ್ನಲ್ಪಡುವ ಆಹಾರವಲ್ಲ. ಅಲ್ಲಿಗೆ ಜೋಳದ ರೊಟ್ಟಿ, ಮತ್ತು ಮಸಾಲೆರಹಿತ ಆಹಾರಗಳೇ ಉತ್ತಮ. ತೆಂಗಿನಕಾಯಿ ರುಬ್ಬಿಹಾಕಿದ ಸಾಂಬಾರು ಮಾಡುವುದು ಅಲ್ಲೆಲ್ಲ ಗೊತ್ತೇ ಇಲ್ಲ ಎನ್ನಬಹುದು. ಹಾಗಾಗಿ ಅಲ್ಲಿ ಸಾಂಬಾರು, ತಿಳಿ ಸಾರು, ಹುಳಿ, ತಂಬುಳಿಗಳ ಮಾತು ಬರುವುದಿಲ್ಲ. ಅನ್ನಕ್ಕೆ ಸಾರು ಅಷ್ಟೇ.
ಉತ್ತರಕರ್ನಾಟಕದಲ್ಲಿ ಮಕ್ಕಳು ಉಣ್ಣುವ ರೀತಿಯನ್ನು ನೀವು ನೋಡಬೇಕು. ವರುಷ ತುಂಬಿದ ಮಕ್ಕಳೆಲ್ಲ, ಮನೆಯ ಇತರ ಮಕ್ಕಳೊಡನೆ, ದೊಡ್ಡವರೊಡನೆ ಅಚ್ಚುಕಟ್ಟಾಗಿ ನೆಲಕ್ಕೆ ಕೂತು, ತಾಟಿನಲ್ಲಿ ರೊಟ್ಟಿ ಹಾಕಿಸಿಕೊಂಡು ಅದರ ಮೇಲೆ, ಹಾಲೋ, ಮಜ್ಜಿಗೆಯೋ, ಅಮ್ಮ ಹಾಕಿದ್ದನ್ನು ಆಚೀಚೆ ಚೆಲ್ಲಿಕೊಂಡು ತಿಂದು ಮುಗಿಸುತ್ತವೆ. ಬೆಂಗಳೂರಿನಂತೆ ಬೀದಿಬೀದಿ ಸುತ್ತುತ್ತಾ ಮಕ್ಕಳಿಗೆ ಉಣ್ಣಿಸುವ ಪದ್ಧತಿ ಅಲ್ಲಿ ಇಲ್ಲವೆಂದೇ ಹೇಳಬೇಕು.
ಕಳೆದ ಜನವರಿಯಲ್ಲಿ ಕೇರಳದಲ್ಲಿ ನನ್ನ ಅತ್ತೆಮನೆ ಕಡೆಯ ಸಂಬಂಧಿಕ ಹುಡುಗಿಯೊಬ್ಬಳ ಮದುವೆ ನಡೀತು. ಮದುವೆಕಾರ್ಯಗಳೆಲ್ಲ ನಡೆದ ನಂತರದಲ್ಲಿ ಹುಡುಗನ ಮನೆಯಲ್ಲೇ ಊಟಕ್ಕೆ ಏರ್ಪಡಿಸಲಾಗಿತ್ತು. ನಾನು, ವಿಪಿನ್ ಮತ್ತು ನಮ್ಮ ಮಾವ ಮಾತ್ರವೇ ಅಲ್ಲಿದ್ದ ಸಸ್ಯಾಹಾರಿ ಪ್ರಾಣಿಗಳು! ಹಾಗಾಗಿ ನಮ್ಮನ್ನು ಊಟದ ಟೇಬಲ್‌ನ ಮೊದಲಿಗೇ ಕೂರಿಸಿದ್ದರು. ಬಡಿಸಲಿಕ್ಕೆ ಅನುಕೂಲವಾಗಲೆಂದು ಹೀಗೆ ನಮ್ಮನ್ನು ಟೇಬಲ್‌ನ ತುದಿಗೆ ಕೂರಿಸಿರಬಹುದೆಂದುಕೊಂಡೆ. ಮತ್ತೂ ಎದುರುಗಡೆ ನಿಂತಿದ್ದ ಮನೆಯ ಹಿರಿಯರು, ಆಕಡೆ ಗೋಡೆಯ ಬಳಿ ನಿಂತಿದ್ದ ಬಡಿಸುವವರಿಗೆಲ್ಲ, ನಮ್ಮ ಮೂರು ಜನರನ್ನು ಬೊಟ್ಟು ಮಾಡಿ ತೋರಿಸಲಾಯ್ತ. ಓಹೋ.. ಅಂತ ನಾನು ಮನಸ್ಸಿನಲ್ಲೇ ಅಂದುಕೊಂಡೆ. ಆಮೇಲೆ ಇನ್ನೇನು ಊಟ ಬಡಿಸಬೇಕು, ಅಷ್ಟರಲ್ಲಿ ನಮ್ಮ ಪಕ್ಕದಲ್ಲಿ ಅವರ ಕಡೆಯ ಹುಡುಗನೊಬ್ಬನನ್ನ ಕಳಿಸಿ, ನಮ್ಮ ಟೇಬಲ್ಲಿನ ಪಕ್ಕದಲ್ಲೇ ನಿಂತುಕೊಳ್ಳಲು ಸೂಚಿಸಿದರು. ಆ ಹುಡುಗ ಬಂದು ನಗುಮೊಗದಿಂದ ಒಂದಿಷ್ಟೂ ಬೇಸರವಿಲ್ಲದೇ, ನಮ್ಮನ್ನು ಮಾತಾಡಿಸಿಕೊಂಡು ಪಕ್ಕದಲ್ಲಿ ನಿಂತುಕೊಂಡ. ಅದನ್ನು ಗಮನಿಸಿದ್ದೇ ವಿಪಿನ್, ‘ನೀವ್ಯಾಕೆ ನಿಂತುಕೊಂಡ್ರಿ.. ಊಟಕ್ಕೆ ಕೂತ್ಕೊಳ್ಳಿ… ಬಡಿಸುವವರಿಗೆ ನಾವು ಹೇಳ್ತೀವಿʼ ಅಂತ ಹೇಳಿದರೂ, ಆ ಹುಡುಗ.. ‘ಇಲ್ಲ ಇಲ್ಲ… ಇಲ್ಲಿ ಯಾರೂ ವೆಜ್ ತಿನ್ನೋರಿಲ್ಲ. ಹಿಂದೆಮುಂದೆ ನೋಡದೇ ಹಾಕ್ಕೊಂಡು ಹೋಗ್ಬಿಡ್ತಾರೆ… ನೆನಪಿರಲ್ಲ…ʼ ಅಂದಾಗ ಮನಸ್ಸಿನಲ್ಲಿ ನಾನು… ಓಕೆ… ಸಮಾಧಾನ ಅಂತ ನನ್ನಷ್ಟಕ್ಕೇ ಹೇಳಿಕೊಂಡೆಯಾದರೂ, ನಿಜಕ್ಕೂ ಇಡೀ ಊರಲ್ಲಿ ಸಸ್ಯಾಹಾರಿಗಳೇ ಇಲ್ವ ಅಂತ ಅಚ್ಚರಿಯಾಯ್ತು!
ನಮ್ಮ ಮೂರೂ ಜನರ ಊಟ ಮುಗಿಯುವವರೆಗೂ ಆ ಹುಡುಗ ಪಕ್ಕದಲ್ಲಿ ನಿಂತುಕೊಂಡಿದ್ದಾನಲ್ಲ ಎನ್ನುವ ಬೇಸರವಿತ್ತಾದರೂ, ಅವನ ಮುಖದಲ್ಲಿ ಮಾತ್ರ ಅತಿಥಿ ಸತ್ಕಾರ ಮಾಡುತ್ತಿರುವ ಹುಮ್ಮಸ್ಸಿತ್ತು. ಬಡಿಸುವ ಪ್ರತಿಯೊಬ್ಬರಿಗೂ ಅವನು ‘ವೆಜ್ʼ ಅಂತ ಸೂಚನೆ ನೀಡುತ್ತಲೇ ಇದ್ದ. ಮೂಲೆಯೊಂದರಲ್ಲಿ ನಿಂತ ಮೂವರು ಹಿರಿಯರೂ ನಮ್ಮ ಮೇಲೊಂದು ಕಣ್ಣಿಟ್ಟಿದ್ದರು. ಮತ್ತೆ ನಮ್ಮ ಮೂರು ಜನರ ಸಲುವಾಗಿಯೇ ಕೇರಳದ, ಸಾಂಪ್ರದಾಯಿಕ ಅಡುಗೆಯನ್ನೇ ಮಾಡಿಸಿಟ್ಟು, ಅಕ್ಕರೆಯಿಂದ ನೋಡಿಕೊಂಡದ್ದು, ಊಟದ ಕೊನೆಗೆ, ಬಾಳೆಹಣ್ಣನ್ನು ಊಟದ ಎಲೆಯ ನಡುವೇ ಬಡಿಸಿದ ಅವರದ್ದೇ ತೋಟದ ಜೇನಿನಲ್ಲಿ ಅದ್ದಿಕೊಂಡು ತಿಂದಷ್ಟೇ ಸಿಹಿಯಾಗಿತ್ತು.
ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಾಡೊಳಗ ಕಳದಾವು ಮಕ್ಕಾಳು’ ಮಕ್ಕಳ ನಾಟಕ . ‘ಚಿತ್ತ ಭಿತ್ತಿ’ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.
ಚೆಂದ ಬರಹ. ಆಹಾರ ಮತ್ತು ಮನುಷ್ಯ ಸಂಬಂಧ ಬೆಸೆಯುವ ಮಾನವೀಯ ಲಹರಿ