ಇದೆಲ್ಲಕ್ಕೆ ಶಿಕರಪ್ರಾಯದಂತೆ ಇದ್ದುದು ಅಲ್ಲಿನ ಆಲ್ ಕರಾ ಗುಹೆ. ನೋಡಲಿಕ್ಕೆ ನಮ್ಮ ಬದಾಮಿಯ ಗುಹೆಯ ಬಣ್ಣವಿರುವ ಇದು ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಸಮುದ್ರದಿಂದ ರೂಪುಗೊಂಡಿರುವುದಾಗಿಯೂ ಅದರ ಒಳಮೈಯಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವುದಾಗಿಯೂ ಅಲ್ಲಿನ ಗೈಡ್ ನಮಗೆ ಹೇಳಿದರು. ಅದರ ಎತ್ತರ ಆಕೃತಿ ನಮ್ಮ ಶಿರಸಿಯ ಯಾಣದಂತಿದೆಯಾದರೂ ಒಂದು ಲಾವಾದ ಪರಿಣಾಮದಿಂದ ಮತ್ತೊಂದು ಮರಳುಗಾಡಿನಲ್ಲಿ ಯಾವಾಗಲೋ ಬಿದ್ದ ಬೀಳುತ್ತಿದ್ದ ಮಳೆಯಿಂದ ಆಗಿರಬಹುದೆಂದು ನಂತರ ನಾನು ತಿಳಿದುಕೊಂಡೆ. ಸೌದಿಯ ಟೂರಿಸಂನವರು ಈ ಗುಹೆಯನ್ನು ಮತ್ತು ಅಲ್ಲಿನ ಪ್ರಾಚೀನ ಮಾರುಕಟ್ಟೆಯನ್ನು ಚೆನ್ನಾಗಿ ಪ್ರಮೋಟ್ ಮಾಡುತ್ತಿದ್ದರೂ ಎಲ್ಲಿಯೂ ಜುಡಾ, ಜೀಸಸ್‌ನ ಬಗ್ಗೆ ಹೇಳಲಿಲ್ಲ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಒಂಭತ್ತನೆಯ ಕಂತು
ಒಮ್ಮೆ ನನ್ನ ಆಗಿನ ಯುಕ್ರೇನ್‌ನ ಸಹೋದ್ಯೋಗಿ ಮಿಖೈಲೋ ಲ್ಯಾಕೋವಿಚ್ ಸೌದಿಯ ಪೂರ್ವ ರಾಜ್ಯದ ಅಲ್ ಹಸ – ಅಲ್ ಹುಫುಫ್ ಅವಳಿ ನಗರಗಳ ಒಂದು ಸ್ವಾರಸ್ಯಕರ ಸಂಗತಿಯನ್ನು ಹೇಳಿದರು. ಅದೆಷ್ಟು ಕುತೂಹಲ ಕೆರಳಿಸಿತೆಂದರೆ ನಾನು ಮುಂದಿನ ವಾರವೇ ಅಲ್ಲಿಗೆ ಹೋಗಲು ಸಿದ್ಧನಾದೆ. ನಮ್ಮ ಜೊತೆಗೆ (ನಾನೂ ನನ್ನ ಹೆಂಡತಿ) ಅವರೂ ಅವರ ಹೆಂಡತಿಯೂ ಜೊತೆಯಾದರು.
ಅಂದಹಾಗೆ ಅವರು ಹೇಳಿದ ಪ್ರಸಂಗ ಹೀಗಿತ್ತು. ಏಸು ಕ್ರೈಸ್ತನನ್ನ ಕೇವಲ ಮೂವತ್ತು ಕಾಸಿಗೆ ಹಿಡಿದುಕೊಟ್ಟ ಆತನ ಸ್ನೇಹಿತ ‘ಜುಡಾ’ ತದನಂತರ ಅಪಮಾನ ತಾಳಲಾಗದೆ ಬೆಟ್ಲಹೇಮ್‌ನಿಂದ ಇಲ್ಲಿಗೆ ಬಂದು ಇಲ್ಲಿನ ಅಲ್ ಕರಾ ಗುಹೆಯಲ್ಲಿ ಬಚ್ಚಿಟ್ಟುಕೊಂಡು, ಪಶ್ಚಾತಾಪದಿಂದ ಬೆಂದು ಆತ್ಮಹತ್ಯೆ ಮಾಡಿಕೊಂಡನಂತೆ ಎಂಬುದು. ಆರ್ಥೊಡಾಕ್ಸ್ ಕ್ರಿಶ್ಚಿಯನ್ನರಾದ ಮಿಖೈಲೋ ದಂಪತಿಗಳಿಗೆ ತಮ್ಮ ಆರಾಧ್ಯ ದೈವ, ಪ್ರವಾದಿ ಜೀಸಸ್‌ನ ಸಾವಿಗೆ ಕಾರಣನಾದ ಜುಡಾ ಕೊನೆಯುಸಿರಿತ್ತ ಜಾಗವನ್ನ ನೋಡುವುದು ಬಹು ಮುಖ್ಯವಾಗಿತ್ತು. ಹಾಗೆಯೇ ಸೌದಿಯಲ್ಲಿನ ದಮ್ಮಾಮ್ ಪ್ರದೇಶದಲ್ಲಿ ಒಂದನೆಯ ಶತಮಾನದ ಚರ್ಚ್ ಒಂದು ಇರುವುದಾಗಿಯೂ ಅದಕ್ಕೆ ತಂತಿ ಬೇಲಿ ಹಾಕಿ ಅಲ್ಲಿಗೆ ಹೋಗುವ ರಸ್ತೆಗಳನ್ನು ಅಳಿಸಿಬಿಟ್ಟಿರುವುದಾಗಿಯೂ ಹೇಳಿದರು.

ಸೌದಿಗೆ ಹೊಸದಾಗಿ ಬಂದಾಗ ಅಲ್ಲಿಂದ ಬಹ್ರೇನ್‌ಗೆ ಆಗಾಗ ಹೋಗುತ್ತಿದ್ದ ನಾನು ಅಲ್ಲಿನ ಮ್ಯೂಸಿಯಂನಲ್ಲಿ ಇರಿಸಿದ್ದ ಬೈಜಾಂಟೈನ್ (ಪೂರ್ವ ರೋಮನ್) ಕಾಲದ ಮನುಷ್ಯ ಮೂರ್ತಿಗಳು ಬುದ್ಧನನ್ನು ಹೋಲುತ್ತಿದ್ದುದು ನೋಡಿ ಬೆರಗಾಗಿದ್ದೆ! ಇವೆಲ್ಲವೂ ನನ್ನ ಕುತೂಹಲವನ್ನು ಇಮ್ಮಡಿಯಾಗಿಸಿದ್ದರಿಂದ ಅಲ್ಲಿಗೆ ಅಂದರೆ ಅಲ್ ಹಸ- ಹುಫುಫ್‌ಗೆ ಅವರೊಡನೆ ಹೋಗಲು ಸಮ್ಮತಿಸಿದೆ. ಇದು ನಾವಿದ್ದ ಜುಬೈಲ್ ಇಂಡಸ್ಟ್ರಿಯಲ್ ಸಿಟಿಯಿಂದ 220 ಕಿಲೋಮೀಟರ್ ಇದ್ದು ನನ್ನ ಕಾರಿನಲ್ಲಿಯೇ ಹೋದೆವು. ಸೋಜಿಗವೆಂದರೆ ಜುಡಾನ ಸತ್ಯಾಸತ್ಯದ ಬಗ್ಗೆ ಓದಲು ಇಂಟರ್ನೆಟ್- ವಿಕಿಪೀಡಿಯಾ ಎಲ್ಲ ಜಾಲಾಡಿದರೂ ಏನೂ ಸಿಗಲಿಲ್ಲ. ಎಲ್ಲೋ ಒಂದು ಕಡೆ ಯಾರೋ ಫಿಲಿಪಿನೋದವರು ಬ್ಲಾಗ್ ಒಂದರಲ್ಲಿ ಇದರ ಕನೆಕ್ಷನ್ ಬಗ್ಗೆ ಬರೆದಿದ್ದರು. ಅದು ಎಷ್ಟು ನಿಜವೋ ಅರಿಯದು ಆದರೆ ಇಡೀ ಮಧ್ಯಪ್ರಾಚ್ಯದಲ್ಲಿ ಅತೀ ದೊಡ್ಡ ಓಯಸಿಸ್ ಇರುವುದು ಮತ್ತು ಲಕ್ಷಗಟ್ಟಲೆ ಎಕರೆ ಕರ್ಜೂರದ ಮರಗಳಿರುವುದು ಇಲ್ಲಿಯೇ ಆದ್ದರಿಂದ ಜುಡಾ ನನಗೆ ಮುಖ್ಯವಾಗಿರಲಿಲ್ಲ. ಬಹುಶಃ ಅವರಿಗೆ ಅದು ಮುಖ್ಯ ಇದ್ದಿರಬಹುದು!
ಮಧ್ಯಾಹ್ನದ ಹೊತ್ತಿಗೆ ಹೊರಟು ಅಲ್ಲಿಗೆ ಸಂಜೆಯ ಮುಂದೆ ತಲುಪುವ ಮುಂಚೆ ಮತ್ತೊಂದು ಸೋಜಿಗದ ಸಂಗತಿ ಹೇಳಬೇಕು. ಅದು “ಅಲ್ ಹಸ” ಗುಹೆಗೆ ಹೋಗುವ ದಾರಿಯಲ್ಲಿ ಬಲಕ್ಕೆ ಹಲವು ಬೋರ್ಡ್‌ಗಳು ಜುಡಾ ಎನ್ನುವ ಊರಿಗೆ ದಾರಿ ತೋರಿಸುತ್ತಿದ್ದುದು (?). ಇದರಬಗ್ಗೆ ಇಲ್ಲಿಯವರೆಗೆ ನನಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಲ್ ಹಸ ದಲ್ಲೆಲ್ಲಾ ಲಕ್ಷಾಂತರ ಕರ್ಜೂರದ ಮರಗಳನ್ನು ರಸ್ತೆಯ ಮಧ್ಯೆ ತಿಳಿನೀರಿನ ಚಾನಲ್‌ಗಳನ್ನು ಕಂಡು ಬೆರಗಾಗಿದ್ದೆ.
ನೆನಪಿಡಿ ಸೌದಿಯಲ್ಲಿ 80 ಪ್ರತಿಶತ ನೋಡಲು ಸಿಗುವುದು ಮರುಭೂಮಿಯಷ್ಟೇ; ಅಲ್ಲಿ ಹುಲ್ಲು ಬೆಳೆಯಲೂ ಮಿಲಿಯನ್ ಡಾಲರ್ ಬೇಕು! ಇಂತಹ ಜಾಗದಲ್ಲಿ ಓಯಸಿಸ್ ಇರುವುದು, ಅಲ್ಲಿ ಸ್ವಾಭಾವಿಕವಾಗಿಯೇ ಹಸಿರು, ಕರ್ಜೂರದ ಮರಗಳು, ಅದರ ಕಾರಣದಿಂದ ಸೃಷ್ಟಿಯಾದ ಸಾವಿರಾರು ವರ್ಷ ಹಳೆಯದಾದ ಪಟ್ಟಣ, ಊರುಗಳು, ಸಂಸ್ಕೃತಿ, ಜನಜೀವನ, ಅತ್ಯಂತ ಪ್ರಾಚೀನವಾದ ಮತ್ತು ಸಾವಿರಾರು ಅಂಗಡಿಗಳಿರುವ UNESCO ಮಾನ್ಯತೆ ಪಡೆದ ಮಾರುಕಟ್ಟೆ ಅಲ್ಲಿ ಸಿಗುವ ಸುಗಂಧ ದ್ರವ್ಯಗಳು, ಸಾಮ್ರಾಣಿ, ಜಡೀ ಭೂಟಿ (ಗಿಡ ಮೂಲಿಕೆಗಳು), ಬಟ್ಟೆ ಬರೆ, ಚರ್ಮದಿಂದ ಮಾಡಿದ ಜಾಕೆಟ್ಟುಗಳು, ಸಾಂಬಾರು ಪದಾರ್ಥ, ಸ್ಪೈಸೆಸ್, ಅರೇಬಿಕಾ ಕಾಫಿ ಮಾರುಕಟ್ಟೆ ಮುಂತಾದವನ್ನು ನೋಡಿ ಬೆರಗಾದೆವು.

ಇದೆಲ್ಲಕ್ಕೆ ಶಿಕರಪ್ರಾಯದಂತೆ ಇದ್ದುದು ಅಲ್ಲಿನ ಆಲ್ ಕರಾ ಗುಹೆ. ನೋಡಲಿಕ್ಕೆ ನಮ್ಮ ಬದಾಮಿಯ ಗುಹೆಯ ಬಣ್ಣವಿರುವ ಇದು ಸಾವಿರಾರು ವರ್ಷಗಳ ಹಿಂದೆ ಇಲ್ಲಿದ್ದ ಸಮುದ್ರದಿಂದ ರೂಪುಗೊಂಡಿರುವುದಾಗಿಯೂ ಅದರ ಒಳಮೈಯಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಇರುವುದಾಗಿಯೂ ಅಲ್ಲಿನ ಗೈಡ್ ನಮಗೆ ಹೇಳಿದರು. ಅದರ ಎತ್ತರ ಆಕೃತಿ ನಮ್ಮ ಶಿರಸಿಯ ಯಾಣದಂತಿದೆಯಾದರೂ ಒಂದು ಲಾವಾದ ಪರಿಣಾಮದಿಂದ ಮತ್ತೊಂದು ಮರಳುಗಾಡಿನಲ್ಲಿ ಯಾವಾಗಲೋ ಬಿದ್ದ ಬೀಳುತ್ತಿದ್ದ ಮಳೆಯಿಂದ ಆಗಿರಬಹುದೆಂದು ನಂತರ ನಾನು ತಿಳಿದುಕೊಂಡೆ. ಸೌದಿಯ ಟೂರಿಸಂನವರು ಈ ಗುಹೆಯನ್ನು ಮತ್ತು ಅಲ್ಲಿನ ಪ್ರಾಚೀನ ಮಾರುಕಟ್ಟೆಯನ್ನು ಚೆನ್ನಾಗಿ ಪ್ರಮೋಟ್ ಮಾಡುತ್ತಿದ್ದರೂ ಎಲ್ಲಿಯೂ ಜುಡಾ, ಜೀಸಸ್‌ನ ಬಗ್ಗೆ ಹೇಳಲಿಲ್ಲ. ನಮಗೂ ಕೇಳುವ ಧೈರ್ಯ ಬರಲಿಲ್ಲ. ಈ ಜಾಗವನ್ನ ಅವರು “land of civilizations” ಎಂದು ಕರೆದಿದ್ದರು.

ಒಂದು ವಿಷಯವೆಂದರೆ ಈ ಅವಳಿ ಊರುಗಳ ಬೇರೆ ಬೇರೆ ಕಡೆ ಈ ರೀತಿ ಮರುಭೂಮಿಯಿಂದೆದ್ದ ಆಕೃತಿಗಳನ್ನು ಕಂಡೆವು. ಅಲ್ಲೆಲ್ಲ ಇಷ್ಟು ದೊಡ್ಡದಾದ ಗುಹೆಗಳಿಲ್ಲದಿದ್ದರೂ ಒಳ್ಳೆಯ ಬೆಳಕಿನ ವಿನ್ಯಾಸ ಮಾಡಿದ್ದರು. ಹೊರ ಜಗತ್ತಿಗೆ ಬಾಗಿಲು ಹಾಕಿಕೊಂಡು ಕುಳಿತಿದ್ದ ಸೌದಿ ಒಡನೆಯೇ ಇಂತಹ ತಾಣಗಳನ್ನು ಕಳೆದ ಐದಾರು ವರ್ಷಗಳಿಂದ ಮುನ್ನೆಲೆಗೆ ತಂದಿದೆ. ಇದರಿಂದ ಪ್ರವಾಸಿಗಳು, ಎಕಾನಮಿ, ಸಾಫ್ಟ್ ಪವರ್ ಹೆಚ್ಚಾಗುತ್ತದೆ ಎಂಬುದು ಅವರ ಚಿಂತನೆ. ಅದರ ಜೊತೆಗೇ ಇಲ್ಲಿನ ನೂರಾರು ಜಾಗಗಳು ಈಗಲೂ ತಂತಿಬೇಲಿಯ ಹಿಂದೆ ಇರುವುದು ನಿಜ. ನಾನು ಮೇಲೆ ಹೇಳಿದ ಪುರಾತನ ಚರ್ಚ್‌ನ ಬಗ್ಗೆ ಅಫೀಷಿಯಲ್ ಆಗಿ ಸೌದಿಯ newspaper ಒಂದರಲ್ಲಿ ಕೆಲವು ವರ್ಷಗಳ ಹಿಂದೆ ನಾನು ಓದಿದಾಗ ಬದಲಾಗುತ್ತಿರುವ ದೇಶದ ಬಗ್ಗೆ ಖುಷಿಯಾಯಿತು. ಎಲ್ಲ ಮುಗಿಸಿಕೊಂಡು ವಾಪಸು ರಾತ್ರಿ ಜುಬೈಲ್‌ಗೆ ಮರಳುವಾಗ ಮತ್ತೆ ದಾರಿಯಲ್ಲಿ ಜುಡಾ ಪಟ್ಟಣಕ್ಕೆ ದಾರಿ ಎಂದಿದ್ದ ಬೋರ್ಡ್‌ಗಳನ್ನು ನೋಡಿ ನಾನೂ ಮತ್ತು ಮಿಖೈಲೋ ಹುಬ್ಬೇರಿಸಿದೆವು!

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

