ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಈ ಆದಿಚುಂಚನಗಿರಿ ಕ್ಷೇತ್ರ ನಾಥಪಂಥದ ಪ್ರವರ್ತಕನಾದ ಸಿದ್ಧಯೋಗಿಯಿಂದ ಸ್ಥಾಪಿತವಾದುದೆಂದು ಪ್ರತೀತಿ. ಸುದೀರ್ಘ ಗುರುಪರಂಪರೆಯ ಕೃಪೆಗೆ ಪಾತ್ರವಾದ ಈ ಕ್ಷೇತ್ರದ ಪೀಠವು ಈವರೆಗೆ ಎಪ್ಪತ್ತೊಂದು ಗುರುವರೇಣ್ಯರ ಆರೋಹಣದಿಂದ ಪಾವನವೆನಿಸಿಕೊಂಡಿದೆ. ಚೋಳರಿಂದ ಮೊದಲುಗೊಂಡು ಹೊಯ್ಸಳ, ಸಾಳ್ವ, ವಿಜಯನಗರ, ಯಲಹಂಕ ಮೊದಲಾದ ಅರಸುಮನೆತನಗಳವರೆಗೆ ಶತಶತಮಾನಗಳ ಕಾಲ ಆದಿಚುಂಚನಗಿರಿಕ್ಷೇತ್ರವು ರಾಜಪೂಜೆಯ ಮನ್ನಣೆಗೆ ಪಾತ್ರವಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಎಪ್ಪತ್ತೊಂಭತ್ತನೆಯ ಕಂತು
ದುರ್ಗೆ ಸಂಹರಿಸಿದ ಮಹಿಷನ ಹೆಸರು ಮೈಸೂರಿಗೆ ಅಂಟಿಕೊಂಡಂತೆ ಶಿವನಿಂದ ಸಂಹಾರಗೊಂಡ ಚುಂಚನೆಂಬ ರಕ್ಕಸನ ಹೆಸರಿನಿಂದ ಚುಂಚನಗಿರಿ ಪ್ರಸಿದ್ಧಿ ಪಡೆದಿದೆ. ಶಿವನೇ ಇಲ್ಲಿ ಕುಳಿತು ತಪಸ್ಸು ಮಾಡಿದನೆಂದ ಮೇಲೆ ಸ್ಥಳಮಹಿಮೆಯ ಬಗೆಗೆ ಹೆಚ್ಚಿಗೆ ಹೇಳುವುದಕ್ಕೇನಿದೆ? ಆದ್ದರಿಂದಲೇ ಈ ಪುಣ್ಯಕ್ಷೇತ್ರಕ್ಕೆ ಆದಿಚುಂಚನಗಿರಿಯೆಂಬ ಹೆಸರು.
ಮಂಡ್ಯಜಿಲ್ಲೆಯ ನಾಗಮಂಗಲ ತಾಲ್ಲೂಕಿಗೆ ಸೇರಿದ ಈ ಆದಿಚುಂಚನಗಿರಿ ಕ್ಷೇತ್ರ ನಾಥಪಂಥದ ಪ್ರವರ್ತಕನಾದ ಸಿದ್ಧಯೋಗಿಯಿಂದ ಸ್ಥಾಪಿತವಾದುದೆಂದು ಪ್ರತೀತಿ. ಸುದೀರ್ಘ ಗುರುಪರಂಪರೆಯ ಕೃಪೆಗೆ ಪಾತ್ರವಾದ ಈ ಕ್ಷೇತ್ರದ ಪೀಠವು ಈವರೆಗೆ ಎಪ್ಪತ್ತೊಂದು ಗುರುವರೇಣ್ಯರ ಆರೋಹಣದಿಂದ ಪಾವನವೆನಿಸಿಕೊಂಡಿದೆ. ಚೋಳರಿಂದ ಮೊದಲುಗೊಂಡು ಹೊಯ್ಸಳ, ಸಾಳ್ವ, ವಿಜಯನಗರ, ಯಲಹಂಕ ಮೊದಲಾದ ಅರಸುಮನೆತನಗಳವರೆಗೆ ಶತಶತಮಾನಗಳ ಕಾಲ ಆದಿಚುಂಚನಗಿರಿಕ್ಷೇತ್ರವು ರಾಜಪೂಜೆಯ ಮನ್ನಣೆಗೆ ಪಾತ್ರವಾಗಿದೆ.
ಆದಿಚುಂಚನಗಿರಿ ಕ್ಷೇತ್ರದ ಮುಖ್ಯ ದೇವಾಲಯ ಕಾಲಭೈರವನ ಗುಡಿ. ಪುರಾಣಕಥೆಯ ಪ್ರಕಾರ, ಶಿವ- ಮೋಹಿನಿರೂಪಿ ವಿಷ್ಣುವಿನ ಪುತ್ರನೆನಿಸಿದ ಭೈರವ ಅಕಾಲದಲ್ಲಿ ಜನಿಸಿದ್ದರಿಂದ ಅಕಾಲಭೈರವನೆಂಬ ಹೆಸರುಪಡೆದರೂ ಆತನನ್ನು ಎಲ್ಲರೂ ಕಾಲಭೈರವನೆಂದೇ ಗುರುತಿಸುವುದು. ಶಿವನ ದ್ವಾರಪಾಲಕನಾದ ಈ ದೈವವನ್ನು ಜನಪದರು ಬಾಗಿಲುಬೈರವನೆಂದೂ ಅನ್ನದಾನಿ ಬೈರವನೆಂದೂ ಗುರುತಿಸುವರು. ಹೊಸದಾಗಿ ನಿರ್ಮಿಸಲಾಗಿರುವ ಕಾಲಭೈರವೇಶ್ವರ ದೇವಾಲಯವು ಅತಿ ವಿಸ್ತಾರವೂ ಭವ್ಯವೂ ಆದ ನಿರ್ಮಾಣವಾಗಿದೆ.
ನಾಲ್ಕು ಗೋಪುರಗಳನ್ನುಳ್ಳ ಈ ನಿರ್ಮಿತಿಯ ರಾಯಗೋಪುರದ ಎತ್ತರ ಒಂದು ನೂರು ಅಡಿಗಳು. ಉಳಿದ ಮೂರು ದಿಕ್ಕುಗಳಲ್ಲಿರುವ ಗೋಪುರಗಳು ತಲಾ ಐವತ್ತೇಳು ಅಡಿಗಳಷ್ಟು ಎತ್ತರವಾಗಿವೆ. ನೂರಾರು ಕಂಬಗಳಿಂದ ಅಲಂಕೃತವಾದ ಪ್ರಾಕಾರದಿಂದ ಸುತ್ತುವರೆಯಲ್ಪಟ್ಟ ಗರ್ಭಗುಡಿಯ ಮುಂಭಾಗದಲ್ಲಿ ಎದುರುಬದುರಾಗಿ ಅಷ್ಟಭೈರವ ವಿಗ್ರಹಗಳಿವೆ. ತಲಾ ಹತ್ತು ಅಡಿಗಳಷ್ಟು ಎತ್ತರದ ಈ ಎಂಟು ಭವ್ಯಮೂರ್ತಿಗಳನ್ನು ಕಪ್ಪುಶಿಲೆಯಿಂದ ಕಂಡರಿಸಲಾಗಿದೆ. ಪ್ರಾಕಾರದ ಸುತ್ತಲೂ ಕಂಬಗಳ ಮೇಲೆ ಭೈರವನ ವಿವಿಧ ರೂಪಗಳನ್ನು ಬಿಂಬಿಸುವ ಅರವತ್ನಾಲ್ಕು ಮೂರ್ತಿಗಳನ್ನು ಕಾಣಬಹುದು. ಗರ್ಭಗುಡಿಯಲ್ಲಿರುವ ಕಾಲಭೈರವನ ವಿಗ್ರಹವು ಪುರಾತನವಾದುದು. ದೇವಾಲಯದ ಪ್ರಾಕಾರದಲ್ಲಿ ಪ್ರದಕ್ಷಿಣೆ ಬರುವಾಗ ಸ್ತಂಭಾಂಬಿಕಾದೇವಿ ಹಾಗೂ ಮಾಳಮ್ಮ ದೇವಿಯರ ಗುಡಿಗಳನ್ನು ಕಾಣಬಹುದು.
ಗರ್ಭಗುಡಿಯ ಹಿಂಭಾಗದಲ್ಲಿ ಎರಡು ಬದಿಗೆ ಶಿವನ ಕುಮಾರರಾದ ಗಣಪತಿ ಹಾಗೂ ಸುಬ್ರಮಣ್ಯಸ್ವಾಮಿಯವರ ಗುಡಿಗಳಿವೆ. ಇವೆಲ್ಲ ವಿಗ್ರಹಗಳು ಇತ್ತೀಚಿನವಾದರೂ ತಮ್ಮ ಸುಸ್ಪಷ್ಟವೂ ಆಕರ್ಷಕವೂ ಆದ ಕೆತ್ತನೆ ಹಾಗೂ ಭವ್ಯವಾದ ಆಕಾರಗಳಿಂದಾಗಿ ಗಮನಸೆಳೆಯುತ್ತವೆ.
ಕಂಬದಮ್ಮ ಎಂದು ಹೆಸರುಪಡೆದ ಶಕ್ತಿದೇವತೆ ಚುಂಚನಗಿರಿಯಲ್ಲಿ ಸ್ತಂಭರೂಪದಲ್ಲಿ ನೆಲೆಸಿರುವಳೆಂದು ಜನಪ್ರತೀತಿ. ಶಿವನು ತಪೋಮಗ್ನನಾಗಿದ್ದ ಇಲ್ಲಿನ ತೇಜೋಮಯವಾದ ಪೀಠವು ಜ್ವಾಲಾಪೀಠವೆಂದೂ ಅಚ್ಚಕನ್ನಡದಲ್ಲಿ ಉರಿಗದ್ದುಗೆಯೆಂದೂ ಹೆಸರುಪಡೆದಿದೆ. ವಿಶೇಷದಿನಗಳಲ್ಲಿ ಜಗದ್ಗುರುಗಳು ಈ ಜ್ವಾಲಾಪೀಠವನ್ನು ಏರುತ್ತಾರೆ.
ಗಂಗಾಧರೇಶ್ವರ, ಕತ್ತಲೆ ಸೋಮೇಶ್ವರ, ಚಂದ್ರಮೌಳೀಶ್ವರ ಗವಿಸಿದ್ಧೇಶ್ವರ ಹಾಗೂ ಮಲ್ಲೇಶ್ವರ ಎಂಬ ಹೆಸರುಗಳುಳ್ಳ ಪಂಚಲಿಂಗದರ್ಶನವನ್ನೂ ಶ್ರೀಕ್ಷೇತ್ರದಲ್ಲಿ ಪಡೆಯಬಹುದು. 23 ಅಡಿಗಳಷ್ಟು ಎತ್ತರವಾದ ನಾಗಲಿಂಗೇಶ್ವರ ಶಿಲ್ಪವು ಇಲ್ಲಿನ ಮತ್ತೊಂದು ವಿಶೇಷ. ಕಾಲಭೈರವನ ಗುಡಿಯ ಪಕ್ಕದಲ್ಲಿ ಮೆಟ್ಟಿಲೇರಿ ಹೋದರೆ ನಂದಿಯ ಶಿಲಾವಿಗ್ರಹವೂ ಗಂಗಾಧರೇಶ್ವರ ಗುಡಿಯೂ ಇವೆ. ಬೆಟ್ಟದ ಮೇಲುಭಾಗದಲ್ಲಿ ಆಕಾಶಭೈರವನೆಂಬ ಹೆಸರುಪಡೆದ ಎತ್ತರದ ಕಲ್ಲು ಇದ್ದು, ಇದನ್ನೇರುವ ಸಾಹಸಕ್ಕಾಗಿ ಜನರು ಇಲ್ಲಿಯವರೆಗೆ ಬರುತ್ತಾರೆ. ಚೇಳೂರು ಕಂಬವೆಂಬ ಇನ್ನೊಂದು ಕಲ್ಲುಗುಡ್ಡ ದುರ್ಗಮವಾಗಿದೆ.
ಶ್ರೀಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ನಿತ್ಯ ಅನ್ನದಾಸೋಹದ ವ್ಯವಸ್ಥೆಯಿದೆ. ನಿತ್ಯಪೂಜೆ, ವಿಶೇಷ ಉತ್ಸವಾದಿಗಳಲ್ಲದೆ ವಾರ್ಷಿಕ ರಥೋತ್ಸವವೂ ವಿಜೃಂಭಣೆಯಿಂದ ನೆರೆವೇರುತ್ತದೆ.
ಪಾಲ್ಗುಣ ಶುಕ್ಲ ಪೂರ್ಣಿಮೆಯಂದು ಶ್ರೀಕ್ಷೇತ್ರದಲ್ಲಿ ಗಂಗಾಧರೇಶ್ವರ ಹಾಗೂ ಕಾಲಭೈರವೇಶ್ವರ ರಥೋತ್ಸವ. ಅದರಂತೆ ಈ ವಾರವಿಡೀ ಆದಿಚುಂಚನಗಿರಿಯಲ್ಲಿ ಉತ್ಸವಾದಿಗಳ ಸಡಗರ. ಕ್ಷೇತ್ರದ ಚಟುವಟಿಕೆಗಳ ವೈಭವವನ್ನು ಮನದುಂಬಿಕೊಳ್ಳಬಯಸುವವರಿಗೆ ಅಲ್ಲಿಗೆ ಭೇಟಿ ನೀಡಲು ಇದಕ್ಕಿಂತ ಮಿಗಿಲಾದ ಸಂದರ್ಭವಿಲ್ಲ.
ಬೆಂಗಳೂರಿನಿಂದ ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಬೆಳ್ಳೂರು ಕ್ರಾಸ್ ಸಮೀಪವಿರುವ ರಸ್ತೆಯ ಮೂಲಕ ಆದಿಚುಂಚನಗಿರಿಗೆ ಬರಬಹುದು. ಸಮೀಪದಲ್ಲಿರುವ ನಾಗಲಾಪುರ, ಬೆಳ್ಳೂರು, ನಾಗಮಂಗಲಗಳಲ್ಲಿರುವ ಹೊಯ್ಸಳ ದೇವಾಲಯಗಳನ್ನೂ ನೋಡಿ ಬರಲು ಅವಕಾಶವಿದೆ.
ತಿರು ಶ್ರೀನಿವಾಸಾಚಾರ್ಯ ಗೋಪಾಲ್ ಭಾಷೆ, ಸಾಹಿತ್ಯ, ವನ್ಯಜೀವನ, ವಿಜ್ಞಾನದ ಕುರಿತು ಲೇಖನಗಳನ್ನು, ಪುಸ್ತಕಗಳನ್ನು ಬರೆದಿದ್ದಾರೆ. ಅವರ ‘ಕಾಡು ಕಲಿಸುವ ಪಾಠ’ ಕೃತಿಗೆ ವಿಜ್ಞಾನ ವಿಷಯದಲ್ಲಿ ೨೦೧೩ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ದೊರೆತಿದೆ.