ತೊಟ್ಟು ಕ್ರಾಂತಿ ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನ ಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.
ಕಾವ್ಯಾ ಕಡಮೆ ಕಥಾ ಸಂಕಲನ “ತೊಟ್ಟು ಕ್ರಾಂತಿ”ಗೆ ಕತೆಗಾರ ಶ್ರೀಧರ ಬಳಗಾರ ಬರೆದ ಮುನ್ನುಡಿ ನಿಮ್ಮ ಓದಿಗೆ

ನೈತಿಕ ಕಲ್ಪನೆಗೆ (Moral Imagination) ಅವಕಾಶ ನೀಡದ ಆಕ್ರಮಣಕಾರಿ ವೇಗದಲ್ಲಿ ಜಗತ್ತನ್ನು ಆವರಿಸುತ್ತಿರುವ ಮಾಹಿತಿ ಮಾರುಕಟ್ಟೆ ಮತ್ತು ಅದರಿಂದ ರೂಪುಗೊಂಡ ಅಮಲಿನ ಸರಕುಸಂಸ್ಕೃತಿಯ ಜನ್ಮಜಾತೆಯಾದ ಕಾರ್ಪೋರೇಟ್‌ಗಳ ಅಟ್ಟಹಾಸದ ಕಾಲದಲ್ಲಿ ಕಲೆಯ ಅಸ್ತಿತ್ವದ ಬಗ್ಗೆ ಏಳುತ್ತಿರುವ ಅನುಮಾನ ಮತ್ತು ಆತಂಕದ ಕೋಲಾಹಲವನ್ನೇ ಕಥೆಯ ವಸ್ತುವನ್ನಾಗಿರಿಸಿರುವ ವಿಲಕ್ಷಣವಾದ ಹೊಸ ಬೆಳವಣಿಗೆಯನ್ನು ವರ್ತಮಾನದ ಬರೆವಣಿಗೆಯಲ್ಲಿ ನಾವು ಕಾಣುತ್ತಿದ್ದೇವೆ. ಕಥೆಗಳ ತಾತ್ವಿಕ ನಿಲುವು ಮತ್ತು ತಂತ್ರಗಳು ಜಾಗತಿಕ ಬೃಹತ್ ವ್ಯಾಪಾರಿ ಸಂಸ್ಥೆಗಳ ವಿಮರ್ಶಾತ್ಮಕ ನೋಟಗಳ ಉತ್ಪಾದನೆಯಾಗಿರುವುದು ಸೋಜಿಗದ ವಾಸ್ತವವಾಗಿದೆ. ಮನುಷ್ಯನ ವ್ಯಕ್ತಿತ್ವದ ಅಸ್ಮಿತೆಯನ್ನೇ ನುಂಗಿ ಹಾಕುವ ಹವಣಿಕೆಯಲ್ಲಿರುವ ಗ್ರಾಹಕಸಂಸ್ಕೃತಿಯನ್ನು ಕಥನ ಎದುರಿಸುವುದು ಅನಿವಾರ್ಯ ವಿಧಿಯಾಗಿದೆ. ಮಾರುಕಟ್ಟೆಯ ಭೌತಿಕ ಭೋಗದ ಮಂಪರಿನಲ್ಲಿ ಸಮುದಾಯ ಕೊಚ್ಚಿಹೋಗುವುದರಕ್ಕಿಂತಲೂ ಹೆಚ್ಚು ಅಪಾಯಕಾರಿಯಾದದ್ದು ಅದು ನೈತಿಕ ಅನುಪಸ್ಥಿತಿಯ ಕೂಪದಲ್ಲಿ ಮುಳುಗುತ್ತಿರುವುದು. ಬಾಹ್ಯ ಶಕ್ತಿಗಳ ಆಕ್ರಮಣಗಳ ನಡುವೆ ಮನುಷ್ಯನ ಪ್ರತಿರೋಧಾತ್ಮಕ ಅಂತಃಸತ್ವದ ಸೋಲನ್ನು ಒಪ್ಪಿಕೊಳ್ಳದ ಕಥೆಗಳು ಸಂಪೂರ್ಣ ದಿಗ್ವಿಜಯ ಪತಾಕೆಯನ್ನು ಎತ್ತಿ ಹಿಡಿಯುವುದನ್ನು ತಡೆಹಿಡಿದಿವೆ. ಆದರೆ, ಅದೆಷ್ಟೋ ಸಲ ಕಥನಗಾರಿಕೆ ನೈತಿಕ ಅಥವ ತಾತ್ವಿಕ ಎಚ್ಚರವನ್ನು ಉದ್ದೀಪಿಸಿದರೂ ಎಚ್ಚರವನ್ನು ಗಾಢವಾಗಿ ಕಲಕುವಲ್ಲಿ ಯಶಸ್ವಿಯಾಗಲಿಲ್ಲ ಎಂದನಿಸುತ್ತದೆ. ಕಥೆ ಸಂಚರಿಸಿ, ಕಂಪಿಸಬೇಕಿದ್ದ ಓದುಗನ ಕಲ್ಪನೆ ಮತ್ತು ಯೋಚನಾ ಸ್ಥಳದಲ್ಲಿ ಪ್ರವಾಹೋಪಾದಿಯಲ್ಲಿ ಕಿಕ್ಕಿರಿದು, ತಿಳಿದುಕೊಳ್ಳಲು ಅವಕಾಶ ನೀಡದೆ ಎಲ್ಲವನ್ನೂ ತೀರ್ಮಾನಿಸಿ ಹೇಳುವ ವಿವರಣೆಯ ವೇಷದಲ್ಲಿ ಆಮಿಷ ಒಡ್ಡುತ್ತಿರುವ ಮಾಹಿತಿಯ ಪ್ರಭುತ್ವವನ್ನು ಎದುರಿಸುವುದು, ಕಾಲಾಂತರದಿಂದ ಮೂಕರಾಗಿಸಲ್ಪಟ್ಟವರ ಮಾತಿಗೆ ಅವಕಾಶ ಮಾಡಿಕೊಡುವುದು ಮತ್ತು ಮನುಷ್ಯ ಸಂಬಂಧಗಳನ್ನು ವಿಕೃತಗೊಳಿಸುವ ಜಾತಿ-ಮತಗಳ ಕಟ್ಟುಪಾಡುಗಳನ್ನು ದಾಟಿಸುವ ದಾರಿಗಳನ್ನು ಹುಡುಕುವುದು ಕಥನಕ್ಕಿರುವ ಇಂದಿನ ಮುಖ್ಯ ಸವಾಲುಗಳಾಗಿವೆ.

(ಕಾವ್ಯಾ ಕಡಮೆ)

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸುಹೊಕ್ಕಾಗಿರುವ ಮನೆಯೊಂದನ್ನು ಹೊಕ್ಕು ಹೊರ ಬಂದ ಅನುಭವವಾಯಿತು. ಮುಖ್ಯವಾಗಿ ಬಾಗಿಲಿರದ, ಬಟ್ಟೆ ತೊಟ್ಟಿರದವರ ಈ ಮನೆಯಲ್ಲಿ ಬೆತ್ತಲೆ ನಡೆದಾಡುತ್ತ ಜಾಹೀರಾತಾಗಿರುವ ಸ್ತ್ರೀಯರು, ಮತೀಯ ವಿಕೃತಿ ಮತ್ತು ಪ್ರಾಕೃತಿಕ ದುರ್ವಿಧಿಯನ್ನು ಮುಗ್ಧ ಮಕ್ಕಳಲ್ಲಿ ಎದುರಿಸುವ ಮಾತೃ ಅಂತಃಕರಣದ ತಾಯಂದಿರು ಭೇಟಿಯಾದರು.

“ತೊಟ್ಟು ಕ್ರಾಂತಿ” ಕಥೆಯಲ್ಲಿ ಜಗತ್ತಿನಾದ್ಯಂತ ಕಂಪನಿಯ ಶೇರುಗಳನ್ನು ಮಾರಾಟ ಮಾಡಲು ತೆರೆದೆದೆಯ ತರುಣಿಯರು ಮ್ಯಾರಥಾನದಲ್ಲಿ ಭಾಗವಹಿಸುವುದು ಕ್ರಾಂತಿಕಾರಕ ಯೋಜನೆ ಎನ್ನುವುದರಲ್ಲೇ ಬೆಚ್ಚಿಬೀಳಿಸುವ ವ್ಯಂಗ್ಯವಿದೆ. ಆರ್ಥಿಕ ಲಾಭಕ್ಕಾಗಿ ಮನುಷ್ಯರನ್ನು ಬೀದಿಯಲ್ಲಿ ಅರೆಬೆತ್ತಲ ಜಾಹೀರಾತಾಗಿಸಿ ಮಾರುವ ಸ್ಪರ್ಧೆಗೆ ಇಳಿದಿರುವ ಕಂಪನಿಯ ಸಿಇಓಗಳು ಸ್ವಯಂ ತಮ್ಮ ಮಾನಭಂಗಕ್ಕಿಳಿದಿರುವುದು ನೈತಿಕತೆಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಸ್ತ್ರೀಯ ಸ್ವಾತಂತ್ರ್ಯದ ಅಭಿವ್ಯಕ್ತಿಯಾಗಿ ಮ್ಯಾರಥಾನನ್ನು ನೋಡುವುದರಲ್ಲಿರುವ ದುರಂತದ ಸಾಧ್ಯತೆಯನ್ನು ಕಥೆ ಅತ್ಯಂತ ಸೂಕ್ಷ್ಮವಾಗಿ ಸೂಚಿಸುತ್ತದೆ.

ಈ ಕಥೆಯ ಆವರ್ತನದ ಇನ್ನೊಂದು ಆವೃತ್ತಿ ಎಂಬಂತೆ “ಆಯಿಲ್ ಪೇಂಟ್”ನಲ್ಲಿ ದಾಂಪತ್ಯ ಪಾವಿತ್ರ್ಯವನ್ನೂ ಕಲೆಯ ಸೌಂದರ್ಯವನ್ನೂ ನಾಶಗೊಳಿಸಿದ, ಕಾಮವನ್ನು ಮಾರಾಟ ಮಾಡುವ ಮಾಡೆಲ್ಲಿಂಗ್ ವೃತ್ತಿಯ ವಿಕೃತ ಚಿತ್ರದ ನಿರೂಪಣೆಯಿದೆ. ಪ್ರತಿಭಾಶಾಲಿ ಚಿತ್ರಕಲಾವಿದ ರಾವ್ ಸ್ಟೂಡಿಯೊದಲ್ಲಿ ಬೆತ್ತಲೆ ಭಂಗಿಯ ಪೆಯಿಂಟಿಂಗ್ ಚಿತ್ರಿಸುವಾಗ ಎಸಗುವ ಲೈಂಗಿಕ ಕಿರುಕಳ, ಮೀ ಟು ಅಭಿಯಾನ, ಮಿಡಿಯಾದವರ ಬ್ಲ್ಯಾಕ್‌ಮೇಲ್, ಹೆಂಡತಿ ಸಾಕ್ಷಿ ಹೇಳಲು ನಿರಾಕರಿಸುವುದು… ಹೀಗೆ ಕಥೆ ಒಂದು ವಿಷವ್ಯೂಹವನ್ನೇ ಸೃಷ್ಟಿಸುತ್ತದೆ. ಕೊನೆಯಲ್ಲಿ ಅವಳ ನೈತಿಕ ಕ್ರೋಧಕ್ಕೆ ಪೇಯಿಂಟಿಂಗ್ ಬೆಂಕಿಗೆ ಆಹುತಿಯಾಗುವುದು ಮತ್ತು ರಾವ್ ಗನ್ ಹಿಡಿದು ಸ್ಟೂಡಿಯೊ ಪ್ರವೇಶಿಸುವುದು ಕಥೆಗೆ ಸಂದಿಗ್ಧವಾದ ಓಪನ್ ಎಂಡೆಡ್ ನೀಡುತ್ತವೆ. ಸುಟ್ಟ ಪೇಯಿಂಟಿಂಗ್ ವೀರ್ಯದ ವಾಸನೆಯನ್ನು ಹೊರ ಸೂಸುವ ರೂಪಕವಾಗಿ ಕಥೆಯ ಆಶಯವನ್ನು ಧ್ವನಿಸಿಬಿಡುತ್ತದೆ.

ಅಸಹಾಯಕ ವಿಧವೆಯೊಬ್ಬಳು ಮತೀಯ ಹಿಂಸೆ, ಅಸ್ಪೃಶ್ಯತೆಯಂತಹ ಸಾಂಪ್ರದಾಯಕ ಕಟ್ಟುಪಾಡು ಮತ್ತು ಗಂಡಸಿನ ನೈತಿಕ ಗುಂಡಾಗಿರಿಯಿಂದ ಅನುಭವಿಸುವ ಮೌನನರಳುವಿಕೆ ಮುಗ್ಧ ಮನಸಿನ ಮೇಲೆ ಉಂಟು ಮಾಡುವ ಪರಿಣಾಮವನ್ನು ನವಿರಾಗಿ ನಿರೂಪಿಸುವ ಕಥೆ “ಮುಟ್ಟಬಾರದ ಹುಡುಗ.” ಅಸಹಜ ಕಟ್ಟುಪಾಡುಗಳಿಂದ ವಿಶೂ ಮತ್ತು ಸದಾನಲ್ಲಿ ಅರಳಬೇಕಿದ್ದ ಪ್ರೀತಿ ಒಣಗಿ, ಅದೆಷ್ಟು ನಿಷ್ಪಂದವಾಗುವುದೆಂದರೆ ಒಬ್ಬರಿಗೊಬ್ಬರು ಸ್ಪರ್ಶಿಸಿದರೂ ಅಲ್ಲಿ ದೇಹವಿರದೆ ಬರೀ ಗಾಳಿ ಮುಟ್ಟಿದ ಅನುಭವ ಉಂಟಾಗುತ್ತದೆ! “ವಿಶೂ, ಹೊರಗಿಂದ ಮುಟ್ಟೋಕೆ ಸಾಧ್ಯವಾಗಿ, ಒಳಗಿಂದು ಏನೂ ಅರ್ಥವಾಗದಿದ್ದರೆ ಇದನ್ನು ನೀನು ಬದಲಿ ಮಾಡಿಕೊಳ್ತಿದ್ದೆಯೇನು?” ವಯಸ್ಸಿಗೆ ಮೀರಿದ ಸದಾನ ಪ್ರಶ್ನೆ ಕಥೆಗೆ ಭಾರವೆನಿಸಿದರೂ ಕಾಡುವುದು ಸುಳ್ಳಲ್ಲ. ಪಾತ್ರಗಳ ವಿಶಿಷ್ಟ ಮನೋಧರ್ಮ, ಅವುಗಳ ಪ್ರಾದೇಶಿಕ ಮಾತುಗಳ ವಿಭಿನ್ನ ರುಚಿ, ಕಥನವನ್ನು ಜೀವಂತಗೊಳಿಸಿದ ಆಪ್ತ ವಿವರಗಳು ತಮ್ಮ ಪಾಡಿಗೆ ಸಹಜವಾಗಿ ಜಿನುಗುತ್ತ ನಮ್ಮನ್ನು ಆರ್ದ್ರಗೊಳಿಸುತ್ತವೆ.

ಹಗಲು ಮತ್ತು ರಾತ್ರಿಯನ್ನು ಉದ್ಯೋಗದ ಸಲುವಾಗಿ ಪಾಳಿಪ್ರಕಾರ ಹಂಚಿಕೊಂಡ ಗಂಡ-ಹೆಂಡತಿಯರ ಸಣ್ಣ ಸಂಶಯದಿಂದ ಸಂಸಾರ ವಿಘಟನೆಯಾಗುವುದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಕಥೆ “ರಾಷ್ಟ್ರಗೀತೆ.” ಸದಾ ಒಂದಲ್ಲ ಒಂದು ರೀತಿಯ ಉದ್ವಿಗ್ನತೆಯನ್ನು ದಿನಚರಿಯನ್ನಾಗಿಸಿಕೊಂಡ ಸಮಾಜ ಮನುಷ್ಯ-ಮನುಷ್ಯರ ನಡುವಿನ ನಂಬಿಕೆಯನ್ನು ದುರ್ಬಲಗೊಳಿಸಿದೆ. ಸಂಬಂಧಗಳೊಳಗೆ ಅಪನಂಬಿಕೆ ಇಣಕಲು ವ್ಯಕ್ತಿಗತ ತಪ್ಪು ತಿಳುವಳಿಕೆ ಮಾತ್ರ ಕಾರಣವಾಗಿರದೆ ವರ್ತಮಾನದ ಜಾಗತಿಕ ವಿಧ್ವಂಸಕ ವಿದ್ಯಮಾನಗಳ ಒಳನುಸುಳುವಿಕೆಯೂ ಕಾರಣವಾಗಬಹುದು. ಬಂಗ್ಲಾದೇಶದ ರಾಷ್ಟ್ರಗೀತೆಯ ಸಂಗೀತ ಮಾಧುರ್ಯಕ್ಕೆ ಮಾರುಹೋದ ಹೆಂಡತಿಯನ್ನು ಗೂಢಚಾರಣಿಯಾಗಿ ದೇಶದ್ರೋಹ ಎಸಗುತ್ತಿದ್ದಾಳೆಂದು ಅನುಮಾನಿಸಿ ತನ್ನ ಜೀವಕ್ಕೇ ಅಪಾಯವಿದೆಯೆಂದು ದಾಂಪತ್ಯ ವಿಚ್ಛೇದನ ಮಾಡಿಕೊಳ್ಳುವ ಯಶವಂತ ಹೃದಯಗಳ ನಡುವಿನ, ಮನುಷ್ಯ ಮತ್ತು ಸಮಾಜದ ನಡುವಿನ ಬಿರುಕಿನ ಸ್ಥಿತಿಯಾಗಿದ್ದಾನೆ. ದೇಶದ ಒಗ್ಗಟ್ಟನ್ನು ಪೊರೆಯುವ ರಾಷ್ಟ್ರ ಗೀತೆಯೇ ಸಂಸಾರವನ್ನು ಒಡೆಯುವ ಶಕ್ತಿಯಾಗುತ್ತದೆ. ವಿಶ್ವಾತ್ಮಕತೆಯ ಸಾಧ್ಯತೆಯನ್ನು ದೇಶ ಮತ್ತು ಸಂಸಾರದ ಗಡಿಗಳು ಸುಂದರ ಆದರ್ಶದ ಮಟ್ಟದಲ್ಲಿಟ್ಟಿರುವ ಸತ್ಯವನ್ನು ಕಥೆ ಪರೋಕ್ಷವಾಗಿ ಬಿಂಬಿಸುತ್ತದೆ. ದಂಪತಿಯನ್ನು ಸಂತೈಸಿದ ಆದಿಶಕ್ತಿ ಆಶ್ರಮದ ಮಮತಾನಂದಮಯಿಯವರನ್ನು ಧರ್ಮದರ್ಶಿಗಳು ಉಚ್ಛಾಟಿಸುವ ಹಿನ್ನೆಲೆ ಕಥೆಗೆ ಆಕಸ್ಮಿಕವಲ್ಲ. ಅಲ್ಲೂ ಕೂಡ ಆಧ್ಯಾತ್ಮಿಕತೆಯನ್ನು ಲೌಕಿಕ ಹಿತಾಸಕ್ತಿ ಅಸಹನೆ ಮತ್ತು ಅನುಮಾನದಿಂದ ನೋಡುತ್ತಿದೆ. ಆದರೆ, ಈ ಎರಡು ಚೌಕಟ್ಟುಗಳು ಸಂಯೋಜನೆಯಲ್ಲಿ ಕಥೆಯ ಶಿಲ್ಪವನ್ನು ಸಡಿಲಗೊಳಿವೆ.

ಸಾಯುವ ವಿವಿಧ ವಿಧಾನಗಳ ಬಗ್ಗೆ ಮಾರ್ಗದರ್ಶನ ನೀಡಲು ಹುಟ್ಟಿದ ‘ಆಸರೆ’ ಎಂಬ ಹೆಸರಿನ ಸೂಸೈಡ್ ಹಾಟ್‌ಲೈನ್ ಸುತ್ತ ನಡೆಯುವ ಕಥೆ “ಪಿಂಕಿ.” ಅಪಾರ ಜೀವನ ಪ್ರೀತಿಯಿಂದ ಬೆಳೆಯಬೇಕಿದ್ದ ಸಣ್ಣ ಮಕ್ಕಳನ್ನು ಸಾಯಲು ಒತ್ತಾಯಿಸುವ ಸಮಾಜದಲ್ಲಿ ಬದುಕನ್ನು ಬಾಧಿಸುತ್ತಿರುವ ಕ್ರೌರ್ಯದ ತೀವ್ರತೆ ಊಹೆಗೂ ಮೀರಿದ್ದು. ದುಡ್ಡಿನ ಲೆಕ್ಕಾಚಾರ ಕೇಳುವ ಯಾಂತ್ರಿಕ ಜೀವನಕ್ಕೆ ದುಡಿಮೆಯ ದೈನಿಕ ವರದಿಯನ್ನು ಸಲ್ಲಿಸುವವರೆಲ್ಲರೂ ಧಾವಂತ, ಆತಂಕ ಮತ್ತು ಉದ್ವೇಗದಿಂದ ದಣಿದಿದ್ದಾರೆ. ಜೀವ ಸಂಬಂಧಗಳಿಗೆ ಸುಸ್ಥಿರತೆ ಒದಗಿರದ ಕಾಲದಲ್ಲಿ ಊಹಿಸಿದ ಕೇಡುಗಳೆಲ್ಲ ನಿಜವಾಗುತ್ತಿವೆ. ಬದುಕಿನ ಬಗೆಗಿನ ನಂಬಿಕೆ, ಸದ್ವಿಚ್ಛೆಯನ್ನು ಮೆಟ್ಟಿಹಾಕಿದ ನಿರ್ದಯ ವಾಸ್ತವ ಮೇಲ್ಗೈ ಸಾಧಿಸಿದೆ. ಮೌನದ ವೇಷದಲ್ಲಿ ಮನೆಯಲ್ಲಿ ಸಾವು ನಿಂತಿದೆ; ಅನಾಮಿಕ ನೀರವತೆಯಲ್ಲಿ ಸೂತಕದ ವಾಸನೆ ಹರಡಿದೆ. ಪೂರ್ವಿಯ ಸಾವಿನ ಶಂಕೆಯಲ್ಲಿದ್ದವರಿಗೆ ರಮಣನ ಸಾವು ಎದುರಾಗುತ್ತದೆ. ಬದುಕಿನ ತರ್ಕಕ್ಕೆ ಸಿಗದ ಸಾವಿನ ನಡೆ ನಿಗೂಢವಾದದ್ದು.

ಅಂತರ್ಯಕ್ಕಿಳಿಯದ ಅಥವಾ ಬತ್ತಿಹೋದ ಪ್ರೀತಿ ಚರ್ಮದ ಮೇಲೆ ಹಚ್ಚೆಯಾಗಿ ವ್ಯಾಪಾರದ ಸರಕಾಗಿಬಿಡುವ ಅಮಾನವೀಯ ಬದುಕಿಗೆ ಕನ್ನಡಿ ಹಿಡಿಯುವ ಕಥೆ “ಟ್ಯಾಟೂ.” ಮನುಷ್ಯರು ಸಂಪರ್ಕದಲ್ಲಿದ್ದೂ ಅವರ ನಡುವೆ ಜೀವಂತ ಸಂಬಂಧ ಸಾಧ್ಯವಾಗಿಸದ ಪಾರ್ಲರ್ ಎಲ್ಲವನ್ನೂ ಉಪಯೋಗೀ ದೃಷ್ಟಿಯಿಂದ ನೋಡುವ ಜಾಹೀರಾತು ಪ್ರದರ್ಶಿಸುವ ಸಂಸ್ಥೆಯೇ. ದ್ವೀಪವಾದ ಜೀವಗಳಿಗೆ ಪ್ರೀತಿ ಕೇವಲ ದೇಹದ ಚಹರೆಯಾಗಿರುವುದನ್ನು ಸ್ವಯಂ ಅನುಭವಿಸುವ ನಿರೂಪಕಿ ಅನುಕಂಪಕ್ಕೆ ಪಾತ್ರಳಾಗುತ್ತಾಳೆ.

ಲಲಿತ ಪ್ರಬಂಧದ ಧಾಟಿಯಲ್ಲಿ ಆರಂಭವಾಗುವ “ಬರೆಯಲಾಗದ ಕಥೆ”ಯಲ್ಲಿ ತಂದೆಯ ಜವಾಬ್ದಾರಿ ಹೊರಲು ಸಿದ್ಧನಿಲ್ಲದವನಿಂದ ದೂರಾಗಿ, ತವರಿನವರಿಂದ ತಿರಸ್ಕೃತಳಾಗಿ ಏಕಾಂಗಿಯಾಗಿ ಮಗುವಿನ ವಿಕಲತೆಯನ್ನು ಲೀಲೆ ಎಂದು ಪೊರೆಯುವ ಅಸಾಮಾನ್ಯ ಅವಿವಾಹಿತ ತಾಯಿಯೊಬ್ಬಳ ಕರುಣಾಜನಕ ಸಂಕಟ ಅನುಕಂಪ ಮಾತ್ರವಲ್ಲದೆ ಘನತೆಯನ್ನೂ ಗೆದ್ದು ಬಿಡುತ್ತದೆ. ನಿರೂಪಕಿಯ ದುರಂತ ಬದುಕಿನಿಂದ ಒಳ್ಳೆಯ ಕಥೆಯೊಂದು ಹುಟ್ಟಿರುವುದು ವಿಷಾದಯೋಗವೇ. ತಾಯಿಯ ಸಹನೆ ಮತ್ತು ಪ್ರೀತಿಯ ಸ್ವೀಕಾರದಲ್ಲಿ ಮಗುವಿನ ವಿಕಾರ ಹಿನ್ನಲೆಗೆ ಸರಿಯುತ್ತದೆ. ಕಥೆಯಾಗಲೀ ಕೂಸಾಗಲೀ ಸೃಷ್ಟಿಯ ವಿಷಯದಲ್ಲಿ ಸುಂದರ, ಕುರೂಪ ಎಂಬ ವರ್ಗೀಕರಣವೇ ಪ್ರಕೃತಿಯಲ್ಲಿ ಅಸಹಜವಾದದ್ದೆಂದು ಕಥೆ ಸೂಚಿಸುತ್ತದೆ. ಬದುಕಿನಂತೆಯೇ ಬರೆವಣಿಗೆಗೂ ತಾರ್ಕಿಕ ಅಂತ್ಯ ಸಾಧ್ಯವಿಲ್ಲವೇನೊ ಎಂಬ ಸಂದಿಗ್ಧತೆಯಲ್ಲಿ ಕಥೆ ನಿಲ್ಲುತ್ತದೆ.

(ಶ್ರೀಧರ ಬಳಗಾರ)

ಎರಡು ದೇಶಗಳ ಭಿನ್ನ ಸಂಸ್ಕೃತಿಯನ್ನು ಮುಖಾಮುಖಿಯಾಗಿಸುವ “ಸಂದರ್ಶನ” ಸಂಕೀರ್ಣವಾದ ವಿಶಿಷ್ಟ ಧ್ವನ್ಯಾರ್ಥದ ಕಥೆ. ಬೇರೆಯವರ ಖಾಸಗಿ ಗುಟ್ಟುಗಳನ್ನು ಸಾರ್ವಜನಿಕವಾಗಿ ಬಿಚ್ಚಿ ಹೇಳುವುದು ಭಾರತದ ಕೌಟುಂಬಿಕ ಸಂಸ್ಕೃತಿಯಲ್ಲಿ ಅಸಭ್ಯ ವರ್ತನೆಯಾದರೆ ಪಾಶ್ಚಾತ್ಯ ಪರಿಸರದಲ್ಲಿ ತನ್ನ ವೈಯಕ್ತಿಕ ಸಂಸಾರದ ಸೂಕ್ಷ್ಮಗಳನ್ನು ಮಾಧ್ಯಮಗಳಲ್ಲಿ ಸಂಕೋಚವಿಲ್ಲದೆ ಬಹಿರಂಗವಾಗಿ ಗಾಸಿಪ್ ಮಾಡುವುದು ಮೆಚ್ಚುಗೆಯ ವಿಷಯವಾಗುತ್ತದೆ. ಆದರೆ, ಭಾರತದಲ್ಲಿ ಅಮೆರಿಕಾದಲ್ಲಿರುವಂತೆ ಅನಾಮಿಕ ಅಪರಿಚಿತ ಒಂಟಿತನದ ನರಕವಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿ ಮನುಷ್ಯರಿಗೆ ಗುಟ್ಟಾದ ಏಕಾಂತ ಸ್ಥಳವೇ ಸಾಧ್ಯವಿಲ್ಲವೆಂದು ಕಥೆ ಒಂದಿಷ್ಟೂ ವಾಚ್ಯಗೊಳಿಸದೆ ತಿಳಿಸಿಬಿಡುತ್ತದೆ. ಏಕೆಂದರೆ, ಇಲ್ಲಿ ಎಲ್ಲವೂ ವ್ಯಾಪಾರದ ಸರಕುಗಳೇ. ತನ್ನ ಸಹಜ ವಿನೋದಶೀಲ ಗುಣವಿಶೇಷದಿಂದ ಲಘುಧಾಟಿಯಲ್ಲಿ ಗಹನವಾದ ಸತ್ಯವನ್ನು ವ್ಯಕ್ತಪಡಿಸಿದ ಸ್ಮೃತಿಯ ‘ವಿಶ್ವರೂಪ’ ದರ್ಶನ ನೆನಪಿನಲ್ಲುಳಿಯುತ್ತದೆ.

ತೊಟ್ಟು ಕ್ರಾಂತಿ ಸಂಕಲನದ ಕಥೆಗಳಲ್ಲಿ ಕೆಲವು ಪ್ರದೇಶದ ಕನ್ನಡದ ಉಪಭಾಷೆಗಳ ಪ್ರಯೋಗವಾಗಿದೆ. ಪಾತ್ರಗಳ ಮಾತಿನ ಭಿನ್ನ ಶೈಲಿಯಲ್ಲಿ ಆಕಾರ ಪಡೆಯುವ ಕಥೆಗೆ ಹಲವು ಧ್ವನಿಗಳಿವೆ. ಭಾಷೆಯ ಮೂಲಕ ಕಥೆಯ ನಿರೂಪಣೆಯಲ್ಲ; ಭಾಷೆಯೇ ಕಥೆಯಾಗುವುದು; ಭಾಷೆ ಕಥೆಯಾಗುವುದೆಂದರೆ ಮನುಷ್ಯರಾಗುವುದು; ಭಾಷೆಯೇ ಮನುಷ್ಯರೊಡಗೂಡಿ ವಿಷಯವಾಗುವುದು ಇಲ್ಲಿ ಸಾಧ್ಯವಾಗಿದೆ; ಆದ್ದರಿಂದ ಪಾತ್ರ-ಪರಿಸರದ ಹಾಸುಹೊಕ್ಕಿನ ನೇಯ್ಗೆ ಈ ಕಥೆಗಳ ಯಶಸ್ಸಿಗೆ ಕಾರಣಗಳಲ್ಲೊಂದು.

(ಕೃತಿ: ತೊಟ್ಟು ಕ್ರಾಂತಿ (ಕಥಾ ಸಂಕಲನ), ಲೇಖಕರು: ಕಾವ್ಯಾ ಕಡಮೆ, ಪ್ರಕಾಶಕರು: ಛಂದ ಪುಸ್ತಕ, ಬೆಲೆ: 180/-)