ಮೂರನೇ ಬೆಲ್ ಆದ ತಕ್ಷಣ ನಟ ನಿಧಾನವಾಗಿ ಪ್ರೇಕ್ಷಕರ ಕೈಹಿಡಿದು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ನಟ ಪಾತ್ರದಲ್ಲಿ ಇಳಿಯುತ್ತಿದ್ದಂತೆ ಪ್ರೇಕ್ಷಕನೂ ತನ್ನನ್ನು ಮರೆಯುತ್ತಾನೆ. ನಟರೊಂದಿಗೆ – ನಿರ್ದೇಶಕರು ತಮ್ಮ ತಮ್ಮ ಕಲ್ಪನೆಯಲ್ಲಿ ಇಷ್ಟು ತಿಂಗಳೂ ಕಟ್ಟಿದ ನಾಟಕ ಪ್ರೇಕ್ಷಕರೊಂದಿಗೆ ಸಂವಾದಕ್ಕಿಳಿಯುತ್ತದೆ. ನೋಡಿದ ನಾಟಕಗಳಲ್ಲಿ ಕೆಲವೇ ಕೆಲವು ಪ್ರಯೋಗಗಳು ನಾಟಕ ಮುಗಿದ ಎಷ್ಟೋ ವರ್ಷಗಳ ನಂತರವೂ ನೆನಪಿನ ಭಾಗವಾಗಿ ಭದ್ರವಾಗಿರುತ್ತದೆ ಎಂದರೆ ಆ ಮಾಧ್ಯಮಕ್ಕಿರುವ ಶಕ್ತಿ ಅಂಥದ್ದು! ಆ ಪ್ರಯೋಗಗಳು ಹೇಗಿತ್ತು ಎಂದರೆ ಹೇಳಲು ಬರುವುದಿಲ್ಲ… ಮಾಡಿ ತೋರಿಸಲು ಬರುವಂಥದ್ದಲ್ಲ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ
ಪ್ರದರ್ಶಕ ಕಲೆಗಳು ನಮ್ಮಲ್ಲಿ ಉಂಟುಮಾಡುವ ಅನುಭವವನ್ನು ದಾಖಲು ಮಾಡುವುದು ಕಷ್ಟ. ಅದು ಉಳಿಯುವುದು ಪ್ರೇಕ್ಷಕನ ಮನಸ್ಸಿನಲ್ಲಿ ನಿರ್ದಿಷ್ಟ ಪ್ರಯೋಗವು ಉಂಟು ಮಾಡಿದ ಅನುಭವದಲ್ಲಿ. ಸಂಗೀತವನ್ನಾದರೂ ರೆಕಾರ್ಡಿಂಗ್ಗಳ ಮೂಲಕ ಮತ್ತೆ ಮತ್ತೆ ಕೇಳಬಹುದು. ಇತ್ತೀಚೆಗೆ ನಾಟಕಗಳನ್ನೂ ರೆಕಾರ್ಡ್ ಮಾಡುತ್ತಾರೆ. ಆದರೆ ಅದು ನಾಟಕ ನೋಡಿದ ಅನುಭವವನ್ನು ಎಂದೂ ಕಟ್ಟಿಕೊಡಲು ಸಾಧ್ಯವಿರುವುದಿಲ್ಲ. ಅಧ್ಯಯನ ದೃಷ್ಟಿಯಿಂದ ನಾಟಕಗಳ ದಾಖಲೀಕರಣ ಒಳ್ಳೆಯದಾದರೂ ಅದಕ್ಕಿರುವ ಮಿತಿಗಳೇ ಹೆಚ್ಚು. ನೃತ್ಯದಲ್ಲಿಯೂ ಹಾಗೆ. ನಿರ್ದಿಷ್ಟ ಸಂಯೋಜನೆಗಳನ್ನು ನೋಡಬಹುದು, ತಿಳಿದುಕೊಳ್ಳಬಹುದು. ಆದರೆ ಒಂದು ಪ್ರದರ್ಶನ ನೀಡಿದ ಅನುಭವ ಕಟ್ಟಿಕೊಡಲು ಸಾಧ್ಯವಿಲ್ಲ.
ಎಷ್ಟೆಲ್ಲಾ ನಾಟಕ ನೋಡಿರುತ್ತೇವೆ. ಖುಷಿ ಪಟ್ಟಿರುತ್ತೇವೆ. ನಟ/ನಟಿಯರ ಅಭಿನಯ ಎಷ್ಟು ಚನ್ನಾಗಿರುತ್ತದೆಯೋ ನಾಟಕ ಅಷ್ಟು ಚನ್ನಾಗಿರುತ್ತದೆ. ನಟ/ನಟಿ ಎಷ್ಟ ಮಟ್ಟಿಗೆ ಆ ನಾಟಕದ ಪಾತ್ರದೊಂದಿಗೆ ಸನ್ನಿವೇಶವನ್ನು ನಂಬಿರುತ್ತಾರೆಂದರೆ ಅವನು/ ಳು ‘ಇದು ರಣರಂಗʼ ಎಂದರೆ ಅಲ್ಲಿ ಕುಳಿತಿರುವಷ್ಟು ಸಹೃದಯರೂ ಅದನ್ನು ನಂಬುತ್ತಾರಲ್ಲ! ಅದೇ ಈ ಮಾಧ್ಯಮದ ಅನನ್ಯತೆ. ಮೂರನೇ ಬೆಲ್ ಆದ ತಕ್ಷಣ ನಟ ನಿಧಾನವಾಗಿ ಪ್ರೇಕ್ಷಕರ ಕೈಹಿಡಿದು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಾನೆ. ನಟ ಪಾತ್ರದಲ್ಲಿ ಇಳಿಯುತ್ತಿದ್ದಂತೆ ಪ್ರೇಕ್ಷಕನೂ ತನ್ನನ್ನು ಮರೆಯುತ್ತಾನೆ. ನಟರೊಂದಿಗೆ – ನಿರ್ದೇಶಕರು ತಮ್ಮ ತಮ್ಮ ಕಲ್ಪನೆಯಲ್ಲಿ ಇಷ್ಟು ತಿಂಗಳೂ ಕಟ್ಟಿದ ನಾಟಕ ಪ್ರೇಕ್ಷಕರೊಂದಿಗೆ ಸಂವಾದಕ್ಕಿಳಿಯುತ್ತದೆ. ನೋಡಿದ ನಾಟಕಗಳಲ್ಲಿ ಕೆಲವೇ ಕೆಲವು ಪ್ರಯೋಗಗಳು ನಾಟಕ ಮುಗಿದ ಎಷ್ಟೋ ವರ್ಷಗಳ ನಂತರವೂ ನೆನಪಿನ ಭಾಗವಾಗಿ ಭದ್ರವಾಗಿರುತ್ತದೆ ಎಂದರೆ ಆ ಮಾಧ್ಯಮಕ್ಕಿರುವ ಶಕ್ತಿ ಅಂಥದ್ದು! ಆ ಪ್ರಯೋಗಗಳು ಹೇಗಿತ್ತು ಎಂದರೆ ಹೇಳಲು ಬರುವುದಿಲ್ಲ… ಮಾಡಿ ತೋರಿಸಲು ಬರುವಂಥದ್ದಲ್ಲ.
ನಾಟಕ ಮಾಡಲೇಬೇಕೆಂಬ ಉತ್ಕಟವಾದ ಆಸೆಯನ್ನು ಮುಖ್ಯವಾಗಿ ನೀನಾಸಮ್ ತಿರುಗಾಟ ಉಂಟುಮಾಡಿತು. ಈಗಾಗಲೇ ನಾಟಕ ಮಾಡುತ್ತದ್ದ ಹವ್ಯಾಸಿ ತಂಡಗಳಿಗೆ ತಮ್ಮ ನಾಟಕಗಳನ್ನು ರೂಪಿಸಿಕೊಳ್ಳುವ ಸಾಧ್ಯತೆಯನ್ನು ನೀಡಿ ಒಂದು ಸಂಚಲನವನ್ನೇ ಉಂಟು ಮಾಡಿತು. ನಂತರ ಅದರ ಮುಂದುವರಿಕೆಯೆಂಬಂತೆ ನೀನಾಸಮ್ ನಿಂದ ಹೊರಬಂದ ಕಲಾವಿದರು ತಮ್ಮದೇ ಸಮಾನಮನಸ್ಕರ ತಂಡ ಕಟ್ಟಿಕೊಂಡು ಅನೇಕ ಪ್ರಯೋಗಗಳ ಮೂಲಕ ಸಣ್ಣ ಸಣ್ಣ ಊರುಗಳಲ್ಲಿ ನಾಟಕ ಪ್ರದರ್ಶನಮಾಡಿದರು. ಅದರಲ್ಲಿ ತಿಪಟೂರಿನ ‘ಪ್ರೊಥಿಯೂʼ (ಪ್ರೊಫೆಶನಲ್ ಥಿಯೇಟರ್ ಯೂನಿಟ್ ) ಬಹುಶಃ ಮೊದಲನೆಯದು. ಅತೀ ಕಡಿಮೆ ಸಂಪನ್ಮೂಲಗಳಲ್ಲಿ ನಾಟಕ ಮಾಡುತ್ತಿದ್ದರು. ಅವರು ನಾಟಕ ಮಾಡಲು ಇಂತಿಷ್ಟು ಸ್ಥಳ ಮತ್ತು ಸಂಭಾವನೆಯನ್ನು ಕೇಳುತ್ತಿದ್ದರಷ್ಟೆ. ಎಲ್ಲಿ ಬೇಕಾದರೂ ಮಾಡಬಹುದಾದಂತೆ ಆ ನಾಟಕಗಳ ವಿನ್ಯಾಸವೂ ಇರುತ್ತಿತ್ತು. ಸಂಭಾವನೆಯೂ ಬಹಳ ಹೆಚ್ಚೇನೂ ಇರುತ್ತಿರಲಿಲ್ಲ. ಕಲಾವಿದರೂ ಕಡಿಮೆ ಸಂಖ್ಯೆಯಲ್ಲಿರುತ್ತಿದ್ದರು ಮತ್ತು ಲೈಟ್, ಡಿಮ್ಮರ್ ಎಲ್ಲವನ್ನೂ ತಾವೇ ತರುತ್ತಿದ್ದರಿಂದ ಆಯೋಜಕರಿಗೂ ಹೊರೆ ಆಗುತ್ತಿರಲಿಲ್ಲ. ಆ ಸಮಯದಲ್ಲಿ ನಾವು ನೋಡಿದ ನಾಟಕಗಳು ನಟರಾಜ ಹೊನ್ನವಳ್ಳಿ ಯವರು ನಿರ್ದೇಶಿಸಿದ ಮಾಸ್ತಿಯವರ ಕತೆಗಳ ರಂಗರೂಪ ‘ಮಾಸ್ತಿ ಕತೆ ಮೂರುʼ ಮತ್ತು ರಘುನಂದನ ಅವರ ನಿರ್ದೇಶನದ ‘ಧರ್ಮ ದುರಂತʼ. ‘ಮಾಸ್ತಿಕತೆ ಮೂರುʼ ನಾಟಕ ಆಗಿನ ಸಮಯಕ್ಕೆ ಹೊಸದಾದ ನಿರೂಪಣಾ ಶೈಲಿಯಲ್ಲಿತ್ತು. ಎಲ್ಲ ನಟನಟಿಯರೂ ಒಂದೇ ರೀತಿಯ ಕಾಸ್ಟ್ಯೂಂ ಗಳನ್ನು ಹಾಕಿಕೊಂಡು ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ಅದು ಆಗಿನ ಸಮಯಕ್ಕೆ ಬಹಳ ಹೊಸದಾದ ಶೈಲಿಯ ಆಪ್ತ ರಂಗಭೂಮಿಯ ಪ್ರಯೋಗ. ನಂತರ ಚನ್ನಕೇಶವ ಅವರು ಗೋಪಾಲಕೃಷ್ಣ ಅಡಿಗರ ಕಾವ್ಯವನ್ನು ಆಧರಿಸಿ ‘ನಾನುʼ ಎಂಬ ಏಕ ವ್ಯಕ್ತಿಪ್ರಯೋಗ ಮಾಡಿದ್ದರು. ಪೂರಾ ನಟನೆಯೂ ಅಲ್ಲದ, ಕಾವ್ಯವಾಚನವೂ ಅಲ್ಲದ ಹೊಸದೊಂದು ರೀತಿಯ ಪ್ರಯೋಗ ಅದು. ಅಡಿಗರ ಕಾವ್ಯವನ್ನು ಆ ಪ್ರಯೋಗ ಅರ್ಥ ಮಾಡಿಸಲಿಲ್ಲ, ಒಂದು ರೀತಿ ಅಡಿಗರ ಸಾಹಿತ್ಯದ ರಂಗಭೂಮಿಯ ರೂಪಾಂತರ ಎನಿಸುವಂತಿತ್ತು. ಮುಂದೆ ಪ್ರಯಾಣ ತಂಡವೂ ಅಡಿಗರ ಕಾವ್ಯಗಳನ್ನಾಧರಿಸಿದ ‘ಕೊಳಲು-ಭೂಮಿಗೀತʼ ಎಂಬ ಪ್ರಯೋಗ ಮಾಡಿದ್ದರು. ಇವೆರಡೂ ಕನ್ನಡ ರಂಗಭೂಮಿಯ ಅಪರೂಪದ ಪ್ರಯೋಗಗಳು. ಧಾರವಾಡದ ‘ಗೊಂಬೆಮನೆʼ, ‘ಚಿಣ್ಣ ಬಣ್ಣʼ, ತಂಡಗಳೂ ಅತಿ ಕಡಿಮೆ ಸಂಪನ್ಮೂಲದಲ್ಲಿ ಬಹಳ ಒಳ್ಳೆಯ ಪ್ರಯೋಗಗಳನ್ನು ನಮ್ಮೂರಿನಲ್ಲಿ ಮಾಡಿದ್ದರು. ನಂತರ ವೆಂಕಟರಮಣ ಐತಾಳರು ನಿರ್ದೇಶಿಸಿ ‘ಪ್ರಯಾಣʼ ತಂಡ ಪ್ರಸ್ತುತ ಪಡಿಸಿದ ಕುಮಾರವ್ಯಾಸ ಭಾರತದ ಕರ್ಣನ ಪಾತ್ರವನ್ನು ಆಧರಿಸಿದ ‘ಕರ್ಣಾದರ್ಶʼ ಅತೀ ಕಡಿಮೆ ಸಂಪನ್ಮೂಲದಲ್ಲಿ ನನ್ನನ್ನು ಪ್ರಭಾವಿಸಿದ ನಾಟಕ. ಈ ತಂಡಗಳ ಪ್ರಭಾವ ತಕ್ಷಣಕ್ಕೆ ತಿಳಿಯುತ್ತಿರಲಿಲ್ಲ. ಆದರೆ ಕರ್ನಾಟಕದಾದ್ಯಂತ ರಂಗಭೂಮಿಯ ಒಂದು ಮಾದರಿಯನ್ನೇ ಸೃಷ್ಟಿಸಿತು. ನಂತರದಲ್ಲಿ ಜನಮನದಾಟ, ಆಟ ಮಾಟ, ಕಿನ್ನರ ಮೇಳ ತುಮರಿ ತಂಡಗಳೂ ಇದೇ ಮಾದರಿಯಲ್ಲಿ ಯಶಸ್ವಿಯಾಗಿ ನಾಟಕಗಳನ್ನು ಮಾಡಿಕೊಂಡು ಬಂದವು.

ಈ ಮೇಲಿನ ಎಲ್ಲಾ ಪ್ರಯೋಗಗಳ ಸಮಾನ ಅಂಶವೆಂದರೆ, ಅವರು ಆಡುತ್ತಿದ್ದ ನಾಟಕಗಳು ಸಣ್ಣ ಊರುಗಳಿಂದ ಹಿಡಿದು ಎಲ್ಲಿ ಬೇಕಾದರೂ ಪ್ರದರ್ಶನ ನೀಡಬಹುದಾಗಿತ್ತು. ಆದರೆ, ನಾಟಕ ನೋಡುವಾಗ ಗುಣಮಟ್ಟದಲ್ಲಿ ಎಲ್ಲಿಯೂ ರಾಜಿ ಮಾಡಿಕೊಂಡಿದ್ದಾರೆ ಎನಿಸುತ್ತಿರಲಿಲ್ಲ. ನಟ/ನಟಿಯರೇ ಆ ಪ್ರಯೋಗಗಳ ಜೀವಾಳವಾಗಿದ್ದುದು ಇದಕ್ಕೆ ಕಾರಣವಿರಬಹುದು. ಆ ತಂಡಗಳ ಕಲಾವಿದರು ಅತ್ಯಂತ ಶಿಸ್ತಿನಿಂದ ನಾಟಕ ಮಾಡುತ್ತಿದ್ದರು. ಕೇವಲ ರಂಗದ ಮೇಲೆ ಮಾತ್ರವಲ್ಲದೇ, ಅವರುಗಳು ಬಂದಾಗಿನಿಂದ ರಂಗಸ್ಥಳ ನೋಡುವುದು, ಅಲ್ಲಿ ತಮಗೆ ಸೂಕ್ತವೆನಿಸುವ ಸ್ಥಳವನ್ನು ರಂಗಸ್ಥಳವಾಗಿ ಮಾರ್ಪಡಿಸಿಕೊಳ್ಳುವುದು, (ಚಾಮರಾಜನಗರದ ವರ್ತಕರ ಭವನದ ಮೂರೂ ಕಡೆಯೂ ಬೇರೆ ಬೇರೆ ನಾಟಕಗಳನ್ನು ಮಾಡಿದ್ದರು) ಬಹಳ ಶಿಸ್ತಿನಿಂದ ತಾಲೀಮು ನಡೆಸುತ್ತಿದ್ದರು. ಏನೂ ಮಾತನಾಡದೆಯೇ ಅವರ ಕೆಲಸಗಳ ಮೂಲಕವೇ ನಮ್ಮಂಥ ಆಸಕ್ತರಿಗೆ ‘ಇದರಲ್ಲಿ ದೊಡ್ಡದೇನೋ ಇದೆʼ ಎನ್ನುವುದುನ್ನು ಹೇಳುತ್ತಿದ್ದವು. ‘ಧರ್ಮದುರಂತʼ ನಾಟಕದ ಮೊದಲು ಆ ತಂಡದಲ್ಲಿದ್ದ ನಿಶ್ಯಬ್ಧ, ಅವರ ತಯಾರಿಯೇ ಮೊದಲ ಬಾರಿಗೆ ನನಗೆ ‘ಹೀಗೆ ನಾನೂ ನಾಟಕ ಮಾಡಬೇಕುʼ ಎನಿಸಿದ್ದು. ‘ಕರ್ಣಾದರ್ಶʼ ನೋಡಿ ನಟನೆಯ ಸಾಧ್ಯತೆ ತಿಳಿದದ್ದು. ಇನ್ನೊಂದು ಗಮನಾರ್ಹ ಅಂಶವೆಂದರೆ, ರಂಗದ ಮೇಲೆ ನಟರು ಎಷ್ಟೇ ಅದ್ಭುತವಾದ ಕೆಲಸ ಮಾಡಿದರೂ, ಆಯೋಜಕರ ಜತೆಗೆ ಬಹಳ ವಿಶ್ವಾಸದಿಂದ ಇರುತ್ತಿದ್ದರು. ತಂಡ ಸಣ್ಣದಾದರೂ ಒಂದಕ್ಕಿಂತ ಒಂದು ಅದ್ಭುತ ಪ್ರಯೋಗಗಳಾಗುತ್ತಿದ್ದವು. ಆ ಒಂದು ತಂಡದಲ್ಲಿರುತ್ತಿದ್ದ ಕಲಾವಿದರು ಒಬ್ಬೊಬ್ಬರೂ ಒಂದು ತಂಡವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಇದ್ದರೂ ಅವರೆಲ್ಲ ಸೇರಿ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದರು. ‘ನಿರ್ದೇಶಕʼ ಎನಿಸಿಕೊಳ್ಳುವ, ತಂಡದ ಮಾಲೀಕ ಎನಿಸಿಕೊಳ್ಳುವಂಥ ನಡವಳಿಕೆ ಯಾರಲ್ಲಿಯೂ ಕಾಣುತ್ತಿರಲಿಲ್ಲ. ಇಂತಹ ಒಂದೊಂದು ತಂಡಗಳೂ ತಮ್ಮ ಕೆಲಸದ ಮೂಲಕವೇ ನಮ್ಮಂತಹ ರಂಗಾಸಕ್ತರ ಅಭಿರುಚಿಯನ್ನು ಬೆಳೆಸಿದವು.
ಇಂದಿನ ನಾಟಕ ಪ್ರಯೋಗಗಳು ಮುಂಬರುವ ಕಲಾವಿದರಿಗೆ ಎಂಥ ಪ್ರೇರಣೆಯನ್ನು ನೀಡುತ್ತಿದೆ ಎಂದು ಯೋಚಿಸುವಾಗ, ಒಂದು ನಾಟಕದಿಂದ ಪ್ರಭಾವಿತರಾಗಿ ಅದರ ಹುಚ್ಚಿಗೆ ಬೀಳುವಂಥ ರಂಗಾರ್ಥಿಗಳನ್ನು ತನ್ನತ್ತ ಸೆಳೆಯುವ ಕೆಲಸ ಬಹುಶಃ ಬಹಳ ಕಡಿಮೆ ಎನಿಸುತ್ತದೆ. ‘ನಾನು ಇಂಥ ನಾಟಕವೊಂದರಲ್ಲಿ ನಟಿಸಬೇಕುʼ, ‘ಇಂಥ ಪಾತ್ರ ಮಾಡಬೇಕುʼ ಎನ್ನುವ ಜಾಗದಲ್ಲಿ, ಸ್ವಂತ ತಂಡ ಮಾಡಿಕೊಂಡರೆ ಬರುವ ಲೌಕಿಕ ಲಾಭಗಳೇ ಹೆಚ್ಚು ಆಕರ್ಷಕವಾಗಿ ತೋರುತ್ತದೆ. ಹಾಗಾಗಿ ರಂಗತಂಡಗಳು ಮತ್ತು ಕಲಾವಿದರ ಪಟ್ಟಿ ಮಾಡಿದರೆ ಬಹುಶಃ ತಂಡಗಳ ಸಂಖ್ಯೆಯೇ ಹೆಚ್ಚಿರುತ್ತದೆಯೇನೋ. ಕಲಾವಿದರುಗಳು ಅವರೇ ತಂಡಗಳು ಮಾತ್ರ ಬೇರೆ!
ಇಂದು, ಉತ್ಸವಗಳಿಗೆ, ಮೆಗಾ ನಾಟಕಗಳಿಗೆ ಕೋಟ್ಯಂತರ ಹಣ ವೆಚ್ಚ ಮಾಡಿ ಸಿದ್ಧಪಡಿಸುವ ನಾಟಕಗಳನ್ನು ಚಿಕ್ಕ ಊರುಗಳಲ್ಲಿ ಆಡಲು ಸಾಧ್ಯವೇ ಇಲ್ಲ. ಅಷ್ಟು ಖರ್ಚು ಮಾಡಿದ ನಾಟಕಗಳೂ ಕೂಡಾ ಅಂದು ಒಂದು ಸಣ್ಣ ಹಾಲ್ ನಲ್ಲಿ ನಡೆದ ನಾಟಕ ನೀಡಿದ ಅನುಭವವನ್ನು ಇಂದಿನ ಹಲವು ರಂಗಪ್ರಯೋಗಗಳು ನೀಡಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಹಣ ಪಡೆಯುವ ರೆಪರ್ಟರಿಗಳು ಸಿದ್ಧ ಪಡಿಸಿದ ನಾಟಕಗಳೂ ತನ್ನ ವಿಜೃಂಭಣೆಯ ವಿನ್ಯಾಸಗಳಿಂದ ಜಿಲ್ಲಾ ಕೇಂದ್ರಗಳನ್ನು ದಾಟಿ ಬರಲು ಸಾಹಸ ಪಡಬೇಕಾಗಿದೆ. ಉಚಿತವಾಗಿ ನಾಟಕ ಪ್ರದರ್ಶನ ನೀಡಿದರೂ ನಾಟಕ ತಂಡಗಳನ್ನು ಕರೆಸಲು ಕಷ್ಟವಾಗುತ್ತದೆ.

ಇತ್ತೀಚೆಗೆ ನಡೆದ ಕೆಲವು ಉತ್ಸವಗಳ ಖರ್ಚು ನೋಡಿದರೆ ಆಶ್ಚರ್ಯವಾಗುತ್ತದೆ. ಅವರು ಉತ್ಸವದ ಹೊರ ಅಲಂಕಾರಕ್ಕೆ ಮಾಡಿದ ಖರ್ಚಿನಲ್ಲಿ ನಮ್ಮಂತಹ ಸಣ್ಣ ಊರುಗಳಲ್ಲಿ ಒಂದು ವರ್ಷ ಚಟುವಟಿಕೆ ನಡೆಸಬಹುದು. ಹೆಚ್ಚಿನ ಕಡೆ ರಂಗಭೂಮಿಯೂ ಒಂದು ‘ಈವೆಂಟ್ʼ ನಂತೆ ನಡೆಯುತ್ತಿರುವ ಈ ಕಾಲದಲ್ಲಿ ಹಲವು ವರ್ಷಗಳ ಹಿಂದೆ ನಾನು ನೋಡಿದ ಪ್ರಯೋಗಗಳು ಈಗಿನ ಕಾಲಕ್ಕೆ ಹೆಚ್ಚು ಪ್ರಸ್ತುತವೇನೋ ಅನಿಸುತ್ತದೆ. ಏಕೆಂದರೆ, ರಂಗಭೂಮಿ ನಮ್ಮನ್ನು ಆಕರ್ಷಿಸಿದ್ದು ಹೊರ ರೂಪದಿಂದಲ್ಲ, ಬದಲಿಗೆ ನಾಟಕ ನಡೆಯುವಾಗಿನ ಏಕಾಂತದಲ್ಲಿ. ನಾಟಕ ಮುಗಿದಾಗ ಉಂಟಾಗುವ ಆ ನಿಶ್ಯಬ್ಧ ಮತ್ತು ನಿರ್ವಾತದಲ್ಲಿ!

ಚಿತ್ರಾ ವೆಂಕಟರಾಜು, ಚಾಮರಾಜನಗರದವರು. ನಟಿ. ಕಳೆದ ೧೮ ವರ್ಷಗಳಿಂದ ಸರ್ಕಾರಿ ಪ್ರೌಢಶಾಲೆಯಲ್ಲಿ ರಂಗಶಿಕ್ಷಣ ದ ಶಿಕ್ಷಕಿಯಾಗಿಕೆಲಸ ನಿರ್ವಹಿಸುತ್ತಿದ್ದಾರೆ. ನೀನಾಸಮ್ ರಂಗಶಿಕ್ಷಣ ಕೇಂದ್ರದಿಂದ ರಂಗಶಿಕ್ಷಣ ದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ಚಾಮರಾಜನಗರದ ‘ಶಾಂತಲಾ ಕಲಾವಿದರುʼ ತಂಡದಲ್ಲಿ ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಕಲಾಶಿಕ್ಷಣ, ಸಾಹಿತ್ಯ, ಸಂಗೀತ, ನೃತ್ಯ, ಸಿನೆಮಾದಲ್ಲಿ ಆಸಕ್ತಿ. ಇವರು ಅಭಿನಯಿಸಿದ ಅಮೃತಾ ಪ್ರೀತಂ ಅವರ ಬದುಕನ್ನು ಆಧರಿಸಿದ ಏಕವ್ಯಕ್ತಿ ರಂಗಪ್ರಯೋಗ “ಮೈ ತೆನ್ನು ಫಿರ್ ಮಿಲಾಂಗಿ” ಹಲವಾರು ಪ್ರದರ್ಶನಗಳನ್ನು ಕಂಡಿದೆ.
