”ಆಲೂರರು ಮೂಲತಃ ಭಾವನಾತ್ಮಕ ಲೇಖಕ. ಕಣ್ಣು ಹನಿಗೂಡುವ, ಗಳಗಳ ಅಳುವ, ಗದ್ಗಗಿತನಾಗುವ, ಕೊರಳಸೆರೆ ಬಿಗಿಯುವ ದುಃಖ ಉಮ್ಮಳಿಸುವ ಸನ್ನಿವೇಶಗಳು ಇಲ್ಲಿ ಬರುತ್ತವೆ. ಬರೆಹದಲ್ಲಿರುವ ದಟ್ಟ ಭಾವನಾತ್ಮಕತೆಯು ವಿದ್ಯುತ್ ಪ್ರವಾಹದಂತೆ ಪ್ರಬಂಧಗಳನ್ನು ಆವರಿಸಿಕೊಂಡಿದೆ. ಇದು ಪ್ರಬಂಧಗಳ ಚಿಂತನಶೀಲತೆಯನ್ನು ಕೊಂಚ ಕ್ಷೀಣಗೊಳಿಸಿದೆ ಕೂಡ. ವ್ಯಕ್ತಿಗಳಲ್ಲಿ ಇತ್ಯಾತ್ಮಕವಾದುದನ್ನೇ ಕಾಣುವುದರಿಂದ, ಬಾಳಿನ ಮತ್ತು ಮನುಷ್ಯರ ಕರಾಳ ಮುಖಗಳನ್ನು ಚಿತ್ರಿಸುವುದಕ್ಕೆ ಅವು ಹಿಂಜರಿದಿರುವಂತೆ ಕೂಡ ತೋರುತ್ತದೆ”
ಚಂದ್ರಶೇಖರ ಆಲೂರರ ಪ್ರಬಂಧ ಸಂಕಲನಕ್ಕೆ ಡಾ.ರಹಮತ್ ತರೀಕೆರೆ ಬರೆದ ಮುನ್ನುಡಿ.
ನಾನು ಹಿಂದೆ `ಲಂಕೇಶ್ ಪತ್ರಿಕೆ’’ಯಲ್ಲಿ ಇಷ್ಟಪಟ್ಟು ಓದುತ್ತಿದ್ದ ಅಂಕಣಗಳಲ್ಲಿ ಚಂದ್ರಶೇಖರ ಆಲೂರರದೂ ಒಂದು. ದೈನಿಕ ಬದುಕಿನಲ್ಲಿ `ಸಾಮಾನ್ಯ’ವೆಂದು ಭಾವಿಸಿರುವ ಅತಿಪರಿಚಿತ ವಿಷಯಗಳನ್ನು ಹೆಕ್ಕಿಕೊಂಡು, ತಮ್ಮ ಮಾಂತ್ರಿಕಸ್ಪರ್ಶದಿಂದ ಅನಿರೀಕ್ಷಿತ ಹೊಳಹು ಹೊಮ್ಮಿಸುವಂತೆ ಕುಸುರಿಯ ಭಾಷೆಯಲ್ಲಿ ಕಟ್ಟಿಕೊಡುವ ಅವರ ಕಲೆಗಾರಿಕೆ ಸೋಜಿಗ ಬರಿಸುತ್ತಿತ್ತು; ಅವರ ಪ್ರಬಂಧಗಳೊಳಗೆ ತುಡಿವ ಮಾನವೀಯವೂ ಭಾವುಕವೂ ಆದ ಸ್ಪಂದನೆ ಮನಸ್ಸನ್ನು ಆವರಿಸಿಕೊಳ್ಳುತ್ತಿತ್ತು. ಎರಡು ದಶಕಗಳ ಕಾಲ ನಿರಂತರ ಪ್ರಬಂಧ-ಪ್ರವಾಸಕಥನ ಬರೆಯುತ್ತಲಿದ್ದ ಆಲೂರರು, ಯಾಕೊ ಮರೆವಿಗೆ ಸಲ್ಲುತ್ತಿದ್ದಾರೆ ಅನಿಸುತ್ತಿತ್ತು. ಹೀಗಿರುತ್ತ, ಕವಿಮಿತ್ರ ರಾಜೇಂದ್ರ ಪ್ರಸಾದ್ ಆಲೂರರ ಸಮಗ್ರ ಪ್ರಬಂಧ ಸಂಕಲನಕ್ಕೆ ಮುನ್ನುಡಿ ಬರೆಯಬೇಕೆಂದು ಕೇಳಿದರು. ಇದು ಆಲೂರರ ಅಪೇಕ್ಷೆಯೂ ಆಗಿತ್ತೆಂದು ಹಿಂದಿನಿಂದ ಬಂದ ಅವರ ಕರೆಯಿಂದ ತಿಳಿಯಿತು. ಪ್ರಬಂಧ ಪ್ರಿಯನಾದ ನನಗಿದು ಸಹಜವಾಗಿಯೇ ಸಂತೋಷ ಕೊಟ್ಟಿತು. ಪ್ರಿಯ ಲೇಖಕನನ್ನು ಇಡಿಯಾಗಿ ಮತ್ತೊಮ್ಮೆ ಓದುವ ಅವಕಾಶ ಸಿಕ್ಕ ಸಂತೋಷದಲ್ಲಿ ಪ್ರಬಂಧಗಳನ್ನು ಓದಿ ಸಹೃದಯ ರೂಪದ ಈ ಕೆಲವು ಅನಿಸಿಕೆಗಳನ್ನು ದಾಖಲಿಸಿದ್ದೇನೆ.
ಇಲ್ಲಿನ ಪ್ರಬಂಧಗಳಲ್ಲಿ ಎದ್ದು ಕಾಣುವುದು ವಸ್ತುವೈವಿಧ್ಯ. ಸಿನಿಮಾ, ಮಳೆ, ಗೋಡೆಬರೆಹ, ನಗರದ ಬದುಕು, ಗ್ರಾಮ ಬದುಕಿನ ಪಲ್ಲಟ, ರೈತಾಪಿ ಕಷ್ಟ, ಬದುಕಿನಲ್ಲಿ ಸೆಣಸುವ ವ್ಯಕ್ತಿಗಳು, ನಾಟಕೀಯ ಹೊರಳಿಕೆ ಪಡೆವ ಮನುಷ್ಯ ಸಂಬಂಧಗಳು-ಹೀಗೆ ಪನಸಾರೆ ಅಂಗಡಿಯಲ್ಲಿಟ್ಟ ಎಲೆ ಬೀಜ ಬೇರುಗಳಂತೆ ಇಲ್ಲಿನ ವಸ್ತುಲೋಕವಿದೆ. ಈ ವಸ್ತುಗಳ ಒಳಗಿನ ಪದರಗಳನ್ನು ತಾಳ್ಮೆಯಿಂದ ಬಿಡಿಸಿ ತೋರುವ ಪ್ರಬಂಧಗಳು ತಮ್ಮ ಒಡಲಿಂದ ಬಾಳದೃಷ್ಟಿಯೊಂದನ್ನು ಹೊಮ್ಮಿಸುತ್ತವೆ. ಈ ದೃಷ್ಟಿಕೋನವು ಅವಸರದಲ್ಲಿ ತೆಗೆದುಕೊಂಡ ನೈತಿಕ ಸರಳೀಕರಣದಲ್ಲಿ ಹುಟ್ಟಿದ್ದಲ್ಲ. ಇಲ್ಲಿ ಬರುವ ಹಳ್ಳಿ-ನಗರದ ಕೊಡುಕೊಳೆಯನ್ನೇ ಗಮನಿಸಬಹುದು. ಇಲ್ಲೆಲ್ಲೂ ಹಳ್ಳಿಯನ್ನು ಕೇವಲ ಮಮಕಾರದಲ್ಲಿ ನಗರವನ್ನು ಕೇವಲ ಸಿನಿಕತೆಯಲ್ಲಿ ಚಿತ್ರಿಸುವುದಿಲ್ಲ. ಅಲ್ಲಿನ ಕಷ್ಟ ಮತ್ತು ಜೀವಂತಿಕೆಯನ್ನು ಪ್ರಬಂಧಗಳು ಒಟ್ಟಿಗೆ ಹಿಡಿದುಕೊಡುತ್ತವೆ. ನಗರ ಸೆಳೆತಕ್ಕೆ ಸಿಕ್ಕು ಗ್ರಾಮಗಳು ಚಿಗುರೊಡೆಯುತ್ತಿರುವ ಚಿತ್ರಗಳಿರುವಂತೆ, ಬರ್ಬಾದಾಗುತ್ತಿರುವ ಚಿತ್ರಗಳೂ ಇವೆ. ಎರಡೂ ತಮ್ಮ ಸ್ನೇಹ ಮತ್ತು ಸಂಘರ್ಷದಲ್ಲಿ ಪಡೆದುಕೊಂಡ ಮತ್ತು ಕಳೆದುಕೊಳ್ಳುತ್ತಿರುವ ದೃಶ್ಯಗಳಿವೆ. ಜಯಂತ ಕಾಯ್ಕಿಣಿಯವರು ಬೀದಿ ಚಿತ್ರಗಳ ಮೂಲಕ ಮುಂಬೈ ಬದುಕನ್ನು ಹಿಡಿದುಕೊಟ್ಟಂತೆ ಇಲ್ಲಿ ಬೆಂಗಳೂರಿನ ಬದುಕಿದೆ.
ಇಡೀ ಸಂಕಲನ ಸುಂದರವಾದ ವ್ಯಕ್ತಿಚಿತ್ರಗಳ ಸಂಪುಟದಂತಿದೆ. ದನದ ಮಾರಾಟಗಾರ, ನಟಿ, ರೈತ, ವಾಚ್ವುಮನ್, ಸ್ಟೇಶನ್ಮಾಸ್ಟರ್ ಹೀಗೆ ಹಲವಾರು ಪಾತ್ರಗಳು ಇಲ್ಲಿವೆ. ಬಹುತೇಕ ವ್ಯಕ್ತಿಗಳು ಚೈತನ್ಯವಂತ ಸ್ತ್ರೀಯರು. ಇಷ್ಟಾಗಿ ಸ್ಟೇಶನ್ ಮಾಸ್ತರಾಗಿರುವ ಪ್ರಬಂಧನಾಯಕನ ತಂದೆಯ ಪಾತ್ರವು ಓದುಗರ ಚಿತ್ತದಲ್ಲಿ ಗಾಢವಾಗಿ ನಿಂತುಬಿಡುತ್ತದೆ. ಈ ಪಾತ್ರದ ಭಾಗವಾಗಿ ರೈಲು ರೈಲ್ವೆಹಳಿ ಸಿಗ್ನಲ್ ಪ್ಲಾಟಫಾರಂ ಸ್ಟೇಶನ್ ಕ್ವಾರ್ಟಸ್ಸುಗಳ ವಿಶಿಷ್ಟ ಜಗತ್ತೇ ಇಲ್ಲಿ ಮೈತಳೆಯುತ್ತದೆ. ಕುವೆಂಪು ಪ್ರಬಂಧಗಳಲ್ಲಿ ಕಾಡಿನಂತೆ, ಗೊರೂರರ ಪ್ರಬಂಧಗಳಲ್ಲಿ ಹೊಳೆಯಂತೆ, ಪುತಿನ ಪ್ರಬಂಧಗಳಲ್ಲಿ ದೇಗುಲದಂತೆ ಇಲ್ಲಿ ರೈಲ್ವೆಸ್ಟೇಶನ್ನು ರಸ್ತೆ ಮತ್ತು ಸಿಗ್ನಲ್ಲುಗಳ ಲೋಕವಿದೆ. ಈ ಲೋಕವು ರೂಪಕವಾಗಿ ಸಂಕೇತವಾಗಿ ಮತ್ತೆಮತ್ತೆ ಪ್ರಬಂಧಗಳಲ್ಲಿ ಅವತರಿಸುತ್ತದೆ.
ಆಲೂರರು ಮನುಷ್ಯ ಸಂಬಂಧಗಳನ್ನು ಶೋಧಿಸುವ ಅಂತಃಕರಣದ ಲೇಖಕ. ಎಂತಲೇ ಬರೆಹದಲ್ಲಿ ಅಂತರ್ಜಲದಂತೆ ಮಾನವೀಯತೆ ಹರಿದಾಡಿದೆ. ಜನರ ಸ್ವಭಾವವನ್ನು ಸೂಕ್ಷ್ಮವಾಗಿ ಅವಲೋಕಿಸುವ ಗುಣ ಅವರಲ್ಲಿದೆ. ಹೀಗಾಗಿ ಪ್ರಬಂಧಗಳಲ್ಲಿ ಮನುಷ್ಯ ಸಂಬಂಧಗಳ ಹಲವು ಪದರಗಳು ಬಿಚ್ಚಿಕೊಳ್ಳುತ್ತವೆ. ಬದುಕಿನ ಸಂಭ್ರಮ ಮತ್ತು ಸಂಕಟಗಳನ್ನು ತಾಳ್ಮೆಯಿಂದ ಹಿಡಿಯುವ ಪ್ರಬಂಧಗಳು, ಬಾಳನ್ನು ಕಟ್ಟಿಕೊಳ್ಳಲು ವಿಶಿಷ್ಟ ವ್ಯಕ್ತಿಗಳು ನಡೆಸುವ ಹೋರಾಟವನ್ನು ಆದರ್ಶಮೌಲ್ಯವಾಗಿ ಕಾಣಿಸುತ್ತವೆ. ಇಲ್ಲಿ ವಿಸ್ಮಯಭಾವವಿದೆ, ಸಮೃದ್ಧ ಕಲ್ಪನಾತ್ಮಕತೆಯಿದೆ. ಇಲ್ಲಿನ ಬರೆಹದ ಸೌಂದರ್ಯವು ಪುಟ್ಟದಾಗಿರುವ ವಿವರಗಳನ್ನು ಕಾಣಿಸುವ ಮತ್ತು ಅರ್ಥಪೂರ್ಣವಾಗಿ ಜೋಡಿಸುವ ಕುಶಲತೆಗಳಲ್ಲಿದೆ. ಕಾಣಿಸುವ ಬಗೆಯಲ್ಲಿ ಅಡಗಿದೆ. ಕಾಣುವ ಕಣ್ಣಿದ್ದರೆ ಬದುಕಿನ ಬಾಳಿನ ಸ್ವಾರಸ್ಯಕರ ಚಿತ್ರಗಳು ರಸ್ತೆಸಿಗ್ನಲ್ನಲ್ಲೂ ಗೋಚರಿಸಬಲ್ಲವು.
ಆಲೂರರು ಸಣ್ಣಕತೆ ಕಾದಂಬರಿಗಳನ್ನೂ ಬರೆದಿದ್ದಾರೆ. ಆದರೂ ಅವರ ನಿಜವಾದ ಅಸ್ಮಿತೆ ಪ್ರಕಟವಾಗಿರುವುದು ಪ್ರಬಂಧಗಳಲ್ಲಿ. ಅವರದು ಮೂಲತಃ ಪ್ರಬಂಧ ಪ್ರತಿಭೆ. ಇಷ್ಟೊಂದು ಪ್ರಬಂಧಗಳನ್ನು ಬರೆದ ಲೇಖಕರು ನಮ್ಮ ತಲೆಮಾರಿನಲ್ಲಿ ಬಹಳಿಲ್ಲ. ಇಲ್ಲಿ ಸಜೀವ ಪಾತ್ರಗಳಿವೆ; ಜೀವಂತ ಸಂಭಾಷಣೆಗಳಿವೆ; ಪ್ರಬಂಧಗಳಲ್ಲಿ ಸಣ್ಣಕತೆ ಮತ್ತು ಪ್ರವಾಸ ಕಥನದ ಗುಣಗಳಿವೆ; ಕಾವ್ಯದ ಚಿತ್ರಕತೆಯಿದೆ. ನಡುರಾತ್ರಿ ನಿರ್ಜನ ಕತ್ತಲ ರೈಲುನಿಲ್ದಾಣದಲ್ಲಿ ಕುಟುಂಬವೊಂದು ಕತ್ತಲಲ್ಲಿ ಇಳಿದಾಗ ಪಟ್ಟ ಅನುಭವದ ಚಿತ್ರಣವಂತೂ ಕತ್ತರಿಸಿಟ್ಟ ಕಾವ್ಯಭಾಗದಂತಿದೆ. ಸ್ವಾನುಭವ ಮತ್ತು ನೆನಪುಗಳಿಂದಲೇ ಉದ್ಭವಿಸುವ ಪ್ರಬಂಧಗಳಿವು. ಕೆಲವಂತೂ ಆತ್ಮಕಥೆಯ ಅಧ್ಯಾಯಗಳಂತಿವೆ. ಮರಳಿಮರಳಿ ಆತ್ಮಕಥನಕ್ಕೆ ಸ್ವಾನುಭವಕ್ಕೆ ಹೊರಳುವ ಕಡೆ ಬರೆಹವು ವಿಶಿಷ್ಟವಾದ ಆಪ್ತತೆಯನ್ನು ಪಡೆಯುತ್ತದೆ. ಕಾವ್ಯ ಕತೆ ಚಿಂತನೆ ಆತ್ಮಕತೆಗಳ ಪ್ರವಾಸ ಕಥನಗಳು ಒಟ್ಟಿಗೆ ಸಂಗಮಿಸಿದಂತೆ ಈ ಪ್ರಬಂಧಗಳ ವಿನ್ಯಾಸವಿದೆ. ಪ್ರಬಂಧಗಳ ಚೆಲುವನ್ನು ಹೆಚ್ಚಿಸಿರುವ ಸಂಗತಿಗಳಲ್ಲಿ ಸಾಹಿತ್ಯದ ಓದಿನ ಅರ್ಥಪೂರ್ಣ ಉಲ್ಲೇಖಗಳೂ ಸೇರಿವೆ. ಇವು ವಿಶ್ವಸಾಹಿತ್ಯದ ಬೇರೆಬೇರೆ ಲೇಖಕರ ಮತ್ತು ಕೃತಿಗಳಿಂದ ಬಂದಿದ್ದು, ಲೇಖಕರ ಓದಿನ ಹರಹನ್ನು ತೋರಿಸುತ್ತವೆ. ಈ ಉಲ್ಲೇಖಗಳು ಬಿರುಕಿಲ್ಲದೆ ಹೆಣಿಕೆಗೊಂಡು ಪ್ರಬಂಧದ ವಸ್ತು ಮತ್ತು ಜೀವನದೃಷ್ಟಿಕೋನದಲ್ಲಿ ಒದಗಿಕೊಳ್ಳುತ್ತವೆ ಕೂಡ. ಹೆಚ್ಚಿನ ಪ್ರಬಂಧಗಳಲ್ಲಿ ನಡುನಡುವೆ ಹಾಯುವ ಧ್ವನಿಪೂರ್ಣವಾದ ಚಿಂತನೆಗಳಿವೆ. ಪ್ರಬಂಧಗಳ ಕೊನೆಯಲ್ಲಿ ಅನಿರೀಕ್ಷಿತವಾಗಿ ಬರುವ ಸಾಲು ಓದಗರನ್ನು ಮರುಚಿಂತನೆಗೆ ಪ್ರೇರಿಸುತ್ತವೆ. ಪ್ರಬಂಧಗಳಲ್ಲಿ ಲೇಖಕ ಸ್ವಾನುಭವವನ್ನು ಓದುಗರೊಡನೆ ಹಂಚಿಕೊಳ್ಳುವ ಬಹಿರ್ಮುಖೀ ಗುಣದ ಜತೆ, ತನ್ನ ಪಾಡನ್ನು ತಾನು ಅನುಭವಿಸುವ ತಲ್ಲಣಿಸುವ ಅಂತರ್ಮುಖಿ ಆಯಾಮವೂ ಇದೆ. ಇಲ್ಲಿನ ಚಿಂತನಶೀಲತೆಯನ್ನು ಧ್ಯಾನಸ್ಥ ಮನಸ್ಸಿನ ಸ್ವಗತಗಳ ರೂಪದಲ್ಲಿಯೇ ನೋಡಬೇಕು.
ಆದರೆ ತನ್ನನ್ನು ತಾನೇ ಗೇಲಿಗೊಳಿಸಿಕೊಳ್ಳುವ ಮತ್ತು ಗಂಭೀರ ಸೋಗಿನಲ್ಲಾಡುವ ಮಾತಲ್ಲೇ ವಿಭಿನ್ನ ಅರ್ಥವನ್ನು ಹೊಮ್ಮಿಸುವ, ಆಮೂಲಕ ಜೀವನ ದರ್ಶನವನ್ನು ಕಾಣಿಸುವ ಮೂರ್ತಿರಾವ್, ರಾಕೃ ಮಾದರಿಯ ಲಲಿತ ಪ್ರಬಂಧಗಳ ಪರಂಪರೆಗೆ ಯಾಕೊ ಪ್ರಬಂಧಗಳು ಚಲಿಸುವುದಿಲ್ಲ. ಇದಕ್ಕೆ ಬೇಕಾದ ಹಾಸ್ಯ ವ್ಯಂಗ್ಯಗಳು ಕಡಿಮೆಯಿರುವುದು ಇದಕ್ಕೆ ಕಾರಣವೇ? ಆಲೂರರು ಮೂಲತಃ ಭಾವನಾತ್ಮಕ ಲೇಖಕ. ಕಣ್ಣು ಹನಿಗೂಡುವ, ಗಳಗಳ ಅಳುವ, ಗದ್ಗಗಿತನಾಗುವ, ಕೊರಳಸೆರೆ ಬಿಗಿಯುವ ದುಃಖ ಉಮ್ಮಳಿಸುವ ಸನ್ನಿವೇಶಗಳು ಇಲ್ಲಿ ಬರುತ್ತವೆ. ಬರೆಹದಲ್ಲಿರುವ ದಟ್ಟ ಭಾವನಾತ್ಮಕತೆಯು ವಿದ್ಯುತ್ ಪ್ರವಾಹದಂತೆ ಪ್ರಬಂಧಗಳನ್ನು ಆವರಿಸಿಕೊಂಡಿದೆ. ಇದು ಪ್ರಬಂಧಗಳ ಚಿಂತನಶೀಲತೆಯನ್ನು ಕೊಂಚ ಕ್ಷೀಣಗೊಳಿಸಿದೆ ಕೂಡ. ವ್ಯಕ್ತಿಗಳಲ್ಲಿ ಇತ್ಯಾತ್ಮಕವಾದುದನ್ನೇ ಕಾಣುವುದರಿಂದ, ಬಾಳಿನ ಮತ್ತು ಮನುಷ್ಯರ ಕರಾಳ ಮುಖಗಳನ್ನು ಚಿತ್ರಿಸುವುದಕ್ಕೆ ಅವು ಹಿಂಜರಿದಿರುವಂತೆ ಕೂಡ ತೋರುತ್ತದೆ.
ಅನುಕ್ರಮವಾಗಿಟ್ಟು ನೋಡಿದರೆ, ಪ್ರಬಂಧಗಳು ಸ್ವಾನುಭವಕೇಂದ್ರಿತವಾಗಿ ಆರಂಭಗೊಂಡು ಚಿಂತನಾಕೇಂದ್ರಿತವಾಗಿ ಚಲಿಸಿರುವುದು ಕಾಣುತ್ತದೆ. ಕೊನೆಯ ಪ್ರಬಂಧಗಳಂತೂ ದಾರ್ಶನಿಕತೆಯ ಅಂಚಿನಿಂದ ನೇದ ಪತ್ತಲಗಳಾಗಿವೆ. `ರೈಲ್ವೇಸ್ಟೇಶನ್’ `ಆಕ್ಷಣದ ಸತ್ಯ’ `ಬೆಂಗಳೂರು ಮಳೆ’ `ವಾಚಮ್ಯಾನಮ್ಮ’ `ಟ್ರಾಫಿಕ್ ಸಿಗ್ನಲ್’ `ವುಲನ್ ಕೋಟು’ ಇವು ಇಲ್ಲಿನ ಶ್ರೇಷ್ಠ ಪ್ರಬಂಧಗಳು. ಇಲ್ಲಿನ ಗದ್ಯದಲ್ಲಿ ಒಂದೂ ಸ್ವರಗೆಟ್ಟ ವಾಕ್ಯವಿಲ್ಲ. ಲೇಖಕರು ಸೃಜನಶೀಲ ಗಳಿಗೆಯಲ್ಲಿ ರೂಪುಗೊಳ್ಳುವ ಭಾಷೆ ಮತ್ತು ಬರೆಹದ ಕಸುಬುದಾರಿಕೆಯನ್ನು ಜೀವನ್ಮರಣದ ಪ್ರಶ್ನೆಯಾಗಿಸಿಕೊಂಡಿದ್ದ ಲಂಕೇಶರ ಗರಡಿಯಲ್ಲಿ ನುರಿತ ಕಾರಣದಿಂದಲೂ ಇದು ಸಾಧ್ಯವಾಗಿರಬಹುದು. ಮನುಷ್ಯಕೇಂದ್ರಿತ ಜೀವನಪ್ರೀತಿಯನ್ನು ಅಂತರ್ಗತಗೊಳಿಸುವುದು ಕನ್ನಡದ ಶ್ರೇಷ್ಠ ಗದ್ಯಬರೆಹದ ಯಾವತ್ತೂ ಲಕ್ಷಣವಾಗಿದೆ. ಅಂತಹ ಗದ್ಯಬರೆಹಗಳಿವು. ಹೊಸತಲೆಮಾರಿನ ಓದುಗರಲ್ಲಿ ಮತ್ತು ಲೇಖಕರಲ್ಲಿ ಆಲೂರರನ್ನು ಓದಿರದವರು ಇದ್ದರೆ, ಖಂಡಿತ ಓದುವಂತಾಗಬೇಕು; ಅವರ ಪ್ರಬಂಧಗಳ ಮಂದ್ರ ಸಂಗೀತದಂತಹ ಚಿಂತನಶೀಲತೆಯನ್ನೂ ಅನುಭವದ ಆಪ್ತತೆಯ ಬಿಸುಪನ್ನೂ ಅನುಭವಿಸುವಂತಾಗಬೇಕು ಎಂದು ನಾನು ಬಯಸುತ್ತೇನೆ.
‘ಲೀಫ್ ಲೋಟಸ್’: ಆಲೂರರ ಸಂಕಲನದ ಒಂದು ಪ್ರಬಂಧ
`ಆಗುಂಬೆ ಘಟ್ಟದಲ್ಲಿ ನಿಂತು ಸೂರ್ಯಾಸ್ತವನ್ನ ನೋಡುತ್ತಾ, ನೋಡುತ್ತಾ ಕಣ್ಣು ಮಂಜಾದಂತಾಗಿ (ಪಂಪನ ನೀಳಾಂಜನೆ ನೃತ್ಯದ `ನಾರೀರೂಪದ ಯಂತ್ರಂ ಚಾರುತರಂ ನೋಡೆ ನೋಡೆ ಕರಗಿದುದು…’ ಯಾಕೆ ನೆನಪಿಗೆ ಬಂತು!) ಕೆಳನೋಡಿದರೆ ಹಸಿರು ಪ್ರಪಾತ. ಹಾಗೆ ದೃಷ್ಟಿ ಮೇಲೆ ಬಂದರೆ ಹೇಮಂತ-ಉಮಾ; ಅಮೀರ್ ಜಾನ್-ನೂರ್ ಜಹಾನ್- ಹತ್ತಾರು ಕೆತ್ತನೆ ಕೆಲಸಗಳು. ಕೆಲವಂತೂ ಸ್ಫುಟವಾಗಿ ಕಾಣು ತ್ತಿದ್ದವು. ಮತ್ತೆ ಕೆಲವು ಆಗುಂಬೆ ಮಳೆಗೆ ಸಿಕ್ಕಿ ಜರ್ಜರಿತ ವಾಗಿದ್ದವು. (ಬರೆದವರ ಪ್ರೇಮ ಹಾಗಾಗದಿರಲಿ!). ಇನ್ನೂ ಹಲವು ಒಂದರ ಮೇಲೊಂದು ಬರೆದದ್ದರಿಂದ ಯಾರು ಯಾರ ಜೋಡಿ ಎಂಬುದು ಗೊಂದಲವಾಗುತ್ತಿತ್ತು. ಮತ್ತೆ ಕೆಲವು ಒನ್ವೇ ಟ್ರಾಫಿಕ್: ವೀಣಾ ನಾನು ನಿನ್ನನ್ನ ಪ್ರೀತಿಸುತ್ತೇನೆ ಆನಂದ್… ಮತ್ತೆ ಕೆಲವರು ತಮ್ಮ ಹೆಸರಿನ ಮುಂದೆ ಇದ್ದುದನ್ನು ತಿದ್ದಿದ್ದರು! ಇನ್ನೂ ಕೆಲವು ಬರೀ ಇನಿಷಿಯಲ್ ಗಳು. ಪಾಪ! ಯಾರೋ ಸಂಕೋಚದ ಪ್ರೇಮಿಗಳು… ನಗು ಬಂತು.
ಇದು ಎಲ್ಲಿಲ್ಲ! ದೇವರಾಯನದುರ್ಗದ ಪುಷ್ಕರಣಿಯ ಮೆಟ್ಟಿಲ ಮೇಲೆ, ಬಾದಾಮಿ ಗುಹೆಗಳಲ್ಲಿ, ಗೋಲ್ ಗುಂಬಜ್ ನ ಸುತ್ತು ಗೋಡೆಗಳ ಮೇಲೆ, ಶಿವಗಂಗೆಯ ಬಂಡೆಗಳ ಮೇಲೆ, ಹಂಪೆಯ ವಿರೂಪಾಕ್ಷನ ಸುತ್ತಮುತ್ತ… ಬೇಲೂರು ಹಳೇಬೀಡಿನ ಸುಂದರ ಶಿಲಾ ಬಾಲಿಕೆ ಯರ ಹೂವಿನಂಥ ಸ್ತನಗಳ ಮೇಲೆ-ಕೆಲವೊಮ್ಮೆ ಉಳಿಯಲ್ಲಿ ಕೆತ್ತಿದಷ್ಟು ಢಾಳಾಗಿ, ಕೆಲವೆಡೆ ಬ್ಲೇಡಿನಲ್ಲಿ ಬಿಡಿಸಿದಂತೆ, ಹಲವೆಡೆ ಕೈವಾರದ ಮೊನೆಯಿಂದ ಕುಸುರಿ ಮಾಡಿದಂತೆ, ನೂರೆಂಟು ಕೆತ್ತನೆ ಕೆಲಸಗಳು, ಪ್ರೀತಿಯ ಹೆಸರು ಮಾತ್ರವಲ್ಲ, ಕೆಲವೊಮ್ಮೆ ಚಿತ್ರಗಳು ಕೂಡಾ. ನೀರಿನ ಅಲೆಯ ಮೇಲೆ ಬರೆಯುವಂತಿದ್ದರೆ ಜಗತ್ತಿನ ಎಲ್ಲ ಕಡಲು, ಸಾಗರದ ಅಲೆಗಳು ಈ ಚಿತ್ತಾರದಿಂದ ಕಂಗೊಳಿಸುತ್ತಿತ್ತೇನೋ!
ಇಂಥ ಸ್ವಭಾವದ ಜನರಿಗೆ ಶಾಸ್ತ್ರೀ, ಭಟ್ಟರಂತೆ ಖಾಲಿ ಜಾಗ ಕಂಡರೂ ಸಹಿಸಲಾಗು ವುದಿಲ್ಲ. ಪರೀಕ್ಷೆಯಲ್ಲಿ `ಫಿಲ್ ಅಪ್ ದಿ ಬ್ಲಾಂಕ್ಸ್’ ತುಂಬದಿದ್ದರೂ ಇಂಥ ಜಾಗ ತುಂಬುವುದರಲ್ಲಿ ಇವರು ನಿಸ್ಸೀಮರು. ಖಾಲಿ ಜಾಗ ಕಂಡಲ್ಲೆಲ್ಲ ಇವರ ಅಮರ ಪ್ರೇಮದ ಅಥವಾ ಭಗ್ನಪ್ರೇಮದ ಕಥಾನಕ ಬರಹದಲ್ಲಿ ಅಥವಾ ಚಿತ್ರದಲ್ಲಿ ಮೂಡಲೇಬೇಕು. ಎಲ್ಲರಿಗೂ ಇಂಥ `ದುರ್ಬುದ್ದಿ’ಯೇ ಇರುತ್ತದೆ ಎಂದೇನಿಲ್ಲ. ಇದರಲ್ಲಿ `ಏನಾದರು ಮಾಡುತಿರು ತಮ್ಮ, ಆ ಹೂವ ಕೀಳು’ ಸ್ವಭಾವದವರೇ ಹೆಚ್ಚು. ಹುಡುಗನೊಬ್ಬ ತನ್ನ ಹುಡುಗಿಯ ಹೆಸರನ್ನು ನದಿಯ ಮರಳ ಮೇಲೆ ಬರೆಯಲು ಕೂಡಾ ಸಂಕೋಚ ಪಡುವಂತಿದ್ದರೆ ನಮ್ಮ ಚೆಲುವಿನ ತಾಣಗಳು, ಐತಿಹಾಸಿಕ ಕ್ಷೇತ್ರಗಳು ಎಷ್ಟು ಸುಂದರವಾಗಿರುತ್ತಿದ್ದವು!
ಆದರೂ ಇವರ ಕೊಳಕುತನದ ಬಗ್ಗೆ ರೇಗಿಕೊಂಡು, ಅಭಿರುಚಿಹೀನತೆಯ ಬಗ್ಗೆ ನೊಂದುಕೊಂಡು ಸುಮ್ಮನಾಗಬಹುದು; ಇವರ ಮುಗ್ಧತೆಯ ಬಗ್ಗೆ ಸಂತಸ ಕೂಡಾ ತಾಳಬಹುದೇನೋ! ಆದರೆ ನಿಜಕ್ಕೂ ಆಕ್ರೋಶ ಉಕ್ಕುವುದು ನಮ್ಮ ಶಾಲಾ-ಕಾಲೇಜುಗಳ, ಸರ್ಕಾರಿ ಕಟ್ಟಡಗಳ ಗೋಡೆ, ಸಿನಿಮಾ ಕಾಲೇಜು ಲ್ಯಾವೆಟರಿ ಗೋಡೆಗಳನ್ನು ನೋಡಿದಾಗ, ಅಲ್ಲಿ ನೂರೆಂಟು ಕಲೆಗಳು. ಶಾಲಾ-ಕಾಲೇಜುಗಳ ಗೋಡೆಗಳ ಮೇಲೆ ಪ್ರತಿ ವರ್ಷವೂ ಚುನಾವಣೆಗೆ ನಿಲ್ಲುವ ಧೀರರ ಚಿತ್ರಗಳು. ಅದರ ಮೇಲೆ ಸಗಣಿ ಇತ್ಯಾದಿ, ಹಾಗೇ ಊರಿಗೇ ಕಾಣಿಸುವಷ್ಟು ದೊಡ್ಡದಾಗಿ ಅವರ ಹೆಸರುಗಳು. ಇದು ಒಂದು ಬಗೆಯ ರಾಜಕಾರಣಿಗಳು ಹಬ್ಬಿಸಿರುವ ಅಂಟುಜಾಢ್ಯ.
ಮತ್ತೊಂದು ಬಗೆ
ಡೆಸ್ಕಿನ ಮೇಲೆ, ಗೋಡೆಯ ಮೇಲೆ ಹುಡುಗಿಯರ ಹೆಸರು, ಚಿತ್ರಗಳು; ಅಧ್ಯಾಪಕ-ಅಧ್ಯಾಪಕಿಯರ ಹೆಸರು. ಲೋಫರ್ ಗಿರಿಯನ್ನ ತೋರುವ ವಿಕೃತ ರೂಪಗಳು ಕಾಣುವುದು ಈಚೆಗೆ ಸಾಮಾನ್ಯವಾಗುತ್ತಿದೆ. ಇನ್ನು ನಿಜವಾದ `ಕವಿ’ಗಳನ್ನ, `ಸರ್ವಜ್ಞ’ರನ್ನ, ಮನೋ ರೋಗಿಗಳನ್ನು ಕಾಣಬೇಕೆಂದರೆ ಕಾಲೇಜು, ಸಿನಿಮಾ ಲ್ಯಾವೆಟರಿಗಳನ್ನ ನೋಡಬೇಕು. ಹುಡುಗಿಯರ ಹೆಸರಿನ ಮೇಲೆ ಪ್ರಾಸಬದ್ಧ ಕವನಗಳು, ಜೊತೆಗೆ `ಇವಳನು ಮುಟ್ಟದಿರೆ ಪಾಪಿ’; `ಇವಳನು ಮುಟ್ಟಿದವರೇ ಪಾಪಿ ಎಂದ ಸರ್ವಜ್ಞ’ ಮುಂತಾದ ಸರ್ವಜ್ಞ ವಚನಗಳು. ಸಿನಿಮಾ ಮಂದಿರಗಳು ಹಾಗೂ ಸಾರ್ವಜನಿಕ ಲ್ಯಾವೆಟರಿಗಳಲ್ಲಂತೂ ಎಲ್ಲ ಸಿನಿಮಾ ನಟನಟಿಯರ ಹೆಸರು… ಅವರ ‘ಬೆಲೆ’ ಎಲ್ಲಾ ಇರುತ್ತದೆ!
ಹದಿಹರಯದ ಹುಡುಗರ ಅತೃಪ್ತ ಆಕಾಂಕ್ಷೆಗಳು, ಕಾಮದ ನಿಗೂಢತೆ ಅವರಲ್ಲಿ ಮೂಡಿಸಿದ ಕತ್ತಲಲೋಕ ಈ ಬರವಣಿಗೆಯಲ್ಲಿ ತೆರೆದುಕೊಂಡಿರುತ್ತದೆ. ಇಂಥ ಕಡೆ ಕೆಸರೆರಚುವವರಲ್ಲಿ ಬಹುಪಾಲು ಹುಡುಗರು ಅರೆ ವಿದ್ಯಾವಂತರೆ. ವಾಕ್ಯ ರಚನೆಯಲ್ಲಿ ಹತ್ತಾರು ದೋಷಗಳಿರುತ್ತವೆ. ಈ ಹುಡುಗರು ತಂತಮ್ಮ ಹೆಸರು ಬರೆದುಕೊಂಡು ಅದರ ಮುಂದೆ ತಮಗಿಷ್ಟವಾದ ಸಿನಿಮಾ ನಟಿಯರ ಹೆಸರು ಬರೆದುಕೊಂಡಿರುತ್ತಾರೆ. ಜೊತೆಗೆ ಬೆತ್ತಲೆ ಚಿತ್ರಗಳು, ಅದರಲ್ಲೂ ವಿವಿಧ ಭಂಗಿ. ಇನ್ನೂ ಕಾಮ ಕಾಡದ ಹುಡುಗರಿಗೆ ಅಭಿಮಾನದ ಭೂತ ಹಿಡಿದಿರುತ್ತದೆ. `ಸಾಹಸಸಿಂಹ ವಿಷ್ಣುವರ್ಧನ್ ಗೆ ಜೈ’ ಎಂದು ಒಬ್ಬ ಬರೆದಿರುತ್ತಾನೆ. ಮತ್ತೊಬ್ಬ ಶ್ರಮಪಡದೆ ವಿಷ್ಣುವರ್ಧನ್ ಹೊಡೆದು ರಾಜಕುಮಾರ್ ಎಂದು ಬರೆದಿರುತ್ತಾನೆ. ಇಲ್ಲೆ ಬಹಳಷ್ಟು ಸಲ ತಾವು ದ್ವೇಷಿಸುವ ನಟರ ಬಗ್ಗೆ ಸೊಂಟದ ಕೆಳಗಿನ ಬೈಗುಳಗಳ ರಾಶಿಯನ್ನೇ ರಾಚಿರುತ್ತಾರೆ. ಆದರೂ ಇಲ್ಲೆಲ್ಲ ನಮ್ಮ ಹುಡುಗರ ಲೈಂಗಿಕ ಅಜ್ಞಾನ ಹಾಗೂ ಅಭೀಪ್ಸೆ ಪ್ರಕಟಗೊಂಡಿರುವುದೇ ಹೆಚ್ಚು.
ನಮ್ಮ ವಿದ್ಯಾಭ್ಯಾಸ, ಪರಿಸರ ಏನನ್ನು ಸೃಷ್ಟಿಸುತ್ತಿದೆ? ಹೆಣ್ಣು-ಗಂಡಿನ ನಡುವೆ ಸಹಜ ಸಂಬಂಧ ಸಾಧ್ಯವೇ ಇಲ್ಲ ಎನ್ನುವುದನ್ನೇ ಅದು ಸಾರುತ್ತಿರುತ್ತದೆ. ಹುಡುಗಿ ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತಾಳೆ ಎಂಬುದನ್ನ ಒಂದನೆಯ ತರಗತಿಯ ಪಾಠವೇ ಬೋಧಿಸುತ್ತದೆ. ಸಾಮಾನ್ಯವಾಗಿ ಹುಡುಗರು ಪುಟ್ಟ ವಯಸ್ಸಿನಿಂದಲೂ ಅಧ್ಯಾಪಕಿಯರನ್ನೆ ಹೆಚ್ಚು ಇಷ್ಟಪಡುವುದು. ಬಹುಶಃ ತಾಯಿಯ ತಾಳ್ಮೆ, ಸಾತ್ವಿಕತೆ, ಮಿಗಿಲಾಗಿ ಮಮತೆಯನ್ನ ಆಕೆಯಲ್ಲಿ ಕಾಣುವುದೇ ಹೆಚ್ಚು. ಇಷ್ಟಾಗಿಯೂ ಮಕ್ಕಳು ಬೆಳೆವ ವಾತಾವರಣ, ಪಡೆವ ವಿದ್ಯೆ ಸಹಜವಾಗಿಯೇ ಅವರಲ್ಲಿ ಗಂಡು-ಹೆಣ್ಣಿನ ನಡುವೆ ತಾರತಮ್ಯವನ್ನು ಕಲಿಸಿರುತ್ತದೆ. ಇದೆಲ್ಲವೂ ಗಂಡು ಹುಡುಗರಲ್ಲಿ ಒಂದು ಬಗೆಯ ವಿಚಿತ್ರ ನೈತಿಕ ಕಾಳಜಿ ರೂಪುಗೊಳ್ಳಲು ಕಾರಣವಾಗಿರುತ್ತದೆ. ಹದಿನಾರರ ಹರಯದ ಅಕ್ಕ ಆಕೆಯ ಸಹಪಾಠಿಯೊಂದಿಗೆ ಮಾತಾಡುತ್ತಿದ್ದರೆ ಹತ್ತರ ತಮ್ಮನಿಗೆ ವಿಚಿತ್ರವಾಗಿ ಕಾಣುತ್ತಿರುತ್ತದೆ. ಅಕ್ಕ ಏನೋ ತಪ್ಪು ಮಾಡುತ್ತಿದ್ದಾಳೆ. ಮಾತಿಗೆ ಮುಂಚೆ ಯಾಕಿಷ್ಟು ನಗುತ್ತಿದ್ದಾಳೆ… ಇಂಥವರನ್ನೆ ಗಂಡುಬೀರಿ ಎಂದು ಆಡಿಕೊಳ್ಳುವುದು… ಇದನ್ನ ಅಮ್ಮನಿಗೆ ಹೇಳುವುದೋ ಹೇಗೆ… ಈ ಥರದ ಆತಂಕ, ಅಕ್ಕನನ್ನ ತಿದ್ದುವ ಆಶೆ ತಮ್ಮನಿಗಿರುತ್ತದೆ.
ಇದು ಮುಲಾಜಿಲ್ಲದೆ ನಮ್ಮ ಉಸಿರುಗಟ್ಟಿಸುವ ಮನೆಯ ವಾತಾವರಣ, ಸುತ್ತ ಮುತ್ತಣ ಪರಿಸರ ಹಾಗೂ ವಿದ್ಯೆಯಿಂದ ಬಂದದ್ದು. ಬಹುಶಃ ಈ ಕಾರಣದಿಂದಲೇ ಏನೋ ದೊಡ್ಡವರಾದ ಮೇಲೆ ಕೂಡಾ ಹೆಣ್ಣು-ಗಂಡಿನ ಸ್ನೇಹ, ಸಹಜ ಮಾತುಕತೆ ಸಹಾ ನೋಡುವ ಕಣ್ಣುಗಳಲ್ಲಿ ಕಾತುರ-ದುಗುಡ ತುಂಬುತ್ತದೆ. ಯಾಕೆ ಈ ಸಂಕುಚಿತ ಭಾವನೆ?
ಈ ವಿಚಿತ್ರ ನೈತಿಕ ಕಾಳಜಿಯ ಜೊತೆ ಮುಂದೆ ಹರಯಕ್ಕೆ ಕಾಲಿಡುವ ಹಂತದಲ್ಲಿದ್ದಾಗ ಕಾಮವೂ ಕಾಡಲಾರಂಭಿಸುತ್ತದೆ. ಮನಸ್ಸಿನಲ್ಲಿ ಮೂಡುವ ಕಾಮನೆಗಳು ಪಾಪಕೃತ್ಯದಂತೆ ಕಾಡುತ್ತವೆ. ಇದರಿಂದ ಏನಾಗುತ್ತದೆ? ನಿಜಕ್ಕೂ ‘ಒಳ್ಳೆಯವರಾದ’ ಚುರುಕಾದ ಹುಡುಗರಿಗೆ ಅವರ ಪ್ರತಿಭಾವಂತೆಯಾದ ಟೀಚರ್ ಅಥವಾ ಲೆಕ್ಚರರ್ (ಪಿ.ಯು.ಸಿ ಹುಡುಗರಿಗೆ, ಡಿಗ್ರಿ ಹುಡುಗರಿಗಲ್ಲ) ದೇವತೆಯಂತೆ (ಹಿರಿಯ ಗೆಳತಿಯಂತೆ)! ಕಾಣುತ್ತಿರುತ್ತಾಳೆ. ಅದರಲ್ಲೂ ಆಕೆ ಒಳ್ಳೆಯವಳಾಗಿದ್ದು ಸುಂದರವಾಗಿದ್ದರಂತೂ ಮಕ್ಕಳಿಗೆ ಇನ್ನೂ ಮಮತೆ.
ಆಕೆ ಬೇರೆ ಅಧ್ಯಾಪಕರೊಡನೆ ಹೆಚ್ಚು ಮಾತಾಡಿದರೆ ಆತಂಕಗೊಳ್ಳುವವರು ಮಕ್ಕಳು. ಇದು ಊರಜನರ ಬಾಯಿಗೆ ಬೀಳಬಹುದು ಎಂಬ ಭಯ. ಜೊತೆಗೆ ನಮ್ಮ ಟೀಚರ್ ಯಾಕೆ ಹೀಗೆ ಗಂಡಸರ ಜೊತೆ ಎಲ್ಲಾ ಮಾತಾಡಬೇಕು ಎಂದು ಆಗ್ರಹಪಡಿಸುವ ನೈತಿಕ ಕಾಳಜಿ, ಇದಕ್ಕಿಂಥ ಹೆಚ್ಚಾಗಿ ಮಕ್ಕಳು ಅಂಜುವುದು ಶಾಲೆ ಕಾಲೇಜಿನಲ್ಲಿರುವ ದಾಂಡಿಗ ಪೋಲಿ ಹುಡುಗರ ಬಗ್ಗೆ. ಎಲ್ಲ ಕಾಲದಲ್ಲೂ, ಎಲ್ಲ ಶಾಲೆಗಳಲ್ಲೂ, ಎಲ್ಲ ತರಗತಿಗಳಲ್ಲೂ ಇಂಥದೊಂದು ಪmõÁಲಂ ಇz್ದÉೀ ಇರುತ್ತದೆ.
ಇಂಥ ಹುಡುಗರು ತಮ್ಮ ಮೇಡಂ ಮೇಲೆ, ಗೋಡೆ ಮೇಲೆ ಏನಾದರೂ ಬರೆಯ ಬಹುದೆಂಬ ಆತಂಕ ಇವರದ್ದು.
ಆದರೆ ಹೀಗೆ ಬರೆಯುವವರದ್ದು ಪೂರಾ ತಪ್ಪಿರುವುದಿಲ್ಲ. ಮತ್ತೆ ನಮ್ಮ ವಿದ್ಯಾಭ್ಯಾಸ, ಪರಿಸರ, ಸೆಕ್ಸ್ ಬಗೆಗಿನ ಆತಂಕ, ಆಕರ್ಷಣೆ; ಕೊಂಚ ವಯಸ್ಸಿಗೆ ಮೀರಿದ ಉತ್ಸಾಹ ಕೆಲವೊಮ್ಮೆ ಬೇರೆ ಮೇಷ್ಟ್ರುಗಳ ಕಿತಾಪತಿ (ಇದೇ ಹೆಚ್ಚು!) ಇಂಥ ಬರವಣಿಗೆಗೆ ಕಾರಣ. ಬಹಳಷ್ಟು ಸಲ ಸುಪ್ತವಾಗಿ ಇಟ್ಟದ್ದನ್ನ ಹೊರಗೆಡಹುವ ಅನಿವಾರ್ಯತೆ ಕೂಡಾ ಬರಬಹುದು.
ಇದು ವಿದ್ಯೆ ಕಲಿತವರ ಪರಿಯಾದರೆ ಅರೆವಿದ್ಯೆ ಕಲಿತವರ, ಹೊಟೇಲು, ಸಿನಿಮಾಗೃಹ, ಬಸ್ ಸ್ಟ್ಯಾಂಡ್ ಬೆಂಚ್ ಗಳ ಮೇಲೆ ಜೀವನ ಕಳೆದವರ ಕಲೆ ಪ್ರಕಟವಾಗುವ ಬಗೆ ಮೊದಲಿನಂಥದು. ಇದೇ ಪಾರ್ಕಿನ ಬೆಂಚಿನ ಮೇಲೆ ದೇವಸ್ಥಾನದ ಗೋಡೆಗಳ ಮೇಲೆ ಮಾರ್ದನಿಸುವುದು ಕೂಡಾ.
ಬಹುಶಃ ಒಟ್ಟಾರೆ ಭಾರತೀಯರ ಇಂಥ ಮಾನಸಿಕ ಸಂಕುಚಿತತೆ, ಅರೆಜ್ಞಾನ, ಕೊಳಕುತನ, ಅಭಿರುಚಿಹೀನತೆಯೇ ಇದಕ್ಕೆ ಬಹುಮುಖ್ಯ ಕಾರಣ. ನಮ್ಮ ತೀರ್ಥಕ್ಷೇತ್ರಗಳು ಅಂದರೆ ಪುಣ್ಯಕ್ಷೇತ್ರಗಳು, ಅವುಗಳ ಹಾದಿಗಳು ತಿಪ್ಪೆಗುಂಡಿಗಳಂತಿರುವುದು, ದೇವಸ್ಥಾನದ ಎದುರೇ ಮಲಮೂತ್ರ ವಿಸರ್ಜನೆ ಸಾಂಗೋಪಾಂಗವಾಗಿ ನಡೆಯುವುದು-ದೇವಸ್ಥಾನಗಳು ಜೂಜಿನ ಕಟ್ಟೆ ಆಗಿರುವುದು, ಅವುಗಳ ಗೋಡೆಗಳೆಲ್ಲ ನರಮಾನವರ ಸಾಹಸಗಾಥೆಯಿಂದ ತುಂಬಿರುವುದು… ಈ ಎಲ್ಲದರ ಹಿಂದೆ ನಮ್ಮ ಮನೋಧರ್ಮ, ಸೌಂದರ್ಯ ಪ್ರಜ್ಞೆಯ ಕೊರತೆ, ಭಗ್ನಗೊಳಿಸುವ ಕುರೂಪ ಸ್ವಭಾವ ಕೊಂಚಮಟ್ಟಿಗಾದರೂ ಅಡಗಿದೆ.
ಇದಕ್ಕೆ ಅದರಲ್ಲೂ ಗೋಡೆ ಬರಹಗಳಿಗೆ ಸಂಬಂಧಿಸಿದಂತೆ ಪಾಶ್ಚಾತ್ಯರೇನು ನಮ್ಮಿಂದ ಭಿನ್ನವಾಗಿಲ್ಲ. ಅವರು ಬೇರೆ ವಿಚಾರಗಳಂತೆಯೇ ಗೋಡೆಬರಹ ಅಥವಾ ಬಾತ್ ರೂಂ ಬರಹಗಳಲ್ಲಿ ನಮಗಿಂಥ ನೂರಾರು ಮೈಲಿ ಮುಂದಿದ್ದಾರೆ. ಇಂಥ ಬರಹ, ಕಲೆಯ ಸಂಗ್ರಹ ಗ್ರಾಫಿಟಿ ಐದು ಬೃಹತ್ ಸಂಪುಟಗಳಲ್ಲಿ ಪ್ರಕಟವಾಗಿದೆ. ‘love is a many gendered thing’ ‘contraceptives should be used on every conceivable occassion…’
ನಿಗಿಲ್ ರೀಸ್ ಎಂಬಾತ ವಿಶ್ವದಾದ್ಯಂತ ಇರುವ ಬಾತ್ ರೂಂ ಬರಹಗಳನ್ನು ಹತ್ತು ವರ್ಷಗಳಿಂದಲೂ ಸಂಗ್ರಹಿಸುತ್ತಾ ಬಂದು ಇದೀಗ 5ನೆಯ ಗ್ರಾಫಿಟಿ ಸಂಪುಟ ಪ್ರಕಟಿಸಿದ್ದಾನೆ. ವಿವಿಧ ದೇಶಗಳ 76 ಪ್ರತಿನಿಧಿಗಳು ಈ ಸಂಪುಟಕ್ಕಾಗಿ ಗೋಡೆಬರಹಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಇದರಲ್ಲಿ ತತ್ತ್ವ, ತಮಾಷೆ, ಸೆಕ್ಸ್ ಎಲ್ಲಾ ಇದೆ.
ಇಂಥ ಸಂಗ್ರಹಗಳಲ್ಲಿ below belt ಹೆಚ್ಚಿರುವುದರಿಂದ ಅಂಥ ವಾಕ್ಯಗಳನ್ನು ಉದ್ಧರಿಸುವುದು ಅನಗತ್ಯವಾದ್ದರಿಂದ ಹೆಚ್ಚು ಉದಾಹರಣೆ ಹೇಳಬೇಕಿಲ್ಲ. ಈ ಪ್ರಬಂಧದಲ್ಲಿ ಚರ್ಚಿತವಾಗುತ್ತಿರುವುದು ಇಂಥ ಬರಹಗಳ ಹಿನ್ನೆಲೆಯಲ್ಲಿ ನಿಂತ ಮಾನಸಿಕ ವಲಯ.
ಇದಿರಲಿ, ನಮ್ಮ ಜನರ ಕೊಳುಕುತನ, ಅಭಿರುಚಿಹೀನತೆಯ ಬಗ್ಗೆ ಎಷ್ಟೇ ದೂರಿದರೂ ಈ ಕೆಳ ಕಾಣಿಸುವ ಎರಡು ಅಥವಾ ಎರಡು ಬಗೆಯ ಗೋಡೆ ಬರಹಗಳ ಬಗ್ಗೆ ಈ ಲೇಖಕ ತನ್ನ ಮಮಕಾರ ಅಥವಾ ದೌರ್ಬಲ್ಯವನ್ನು ಬಚ್ಚಿಡಬಾರದು. ಇಂಥ ಬರಹಗಳು ತುಂಬಾ ಅಪ್ಯಾಯಮಾನವಾದವು ಕೂಡಾ.
ಹಳ್ಳಿಯಲ್ಲೇ ಕಲಿಯುತ್ತಿರುವ ಹುಡುಗ. ಐದು ಅಥವಾ ಆರನೆಯ ತರಗತಿಯಲ್ಲಿ ಓದುತ್ತಿದ್ದಾನೆ. ಇಂಗ್ಲಿಷ್ ಗೆ ತೆರೆದುಕೊಂಡು ಕೇವಲ ಕೆಲವು ದಿನಗಳು ಕಳೆದಿವೆ. ಮನೆಯಲ್ಲಿ ಸಾಧಾರಣ ಇಂಗ್ಲಿಷ್ ಕಲಿತ ತಂದೆ ಅಥವಾ ಚಿಕ್ಕಪ್ಪ. ಒಂದು ಸಂಜೆ ಅವರು ಹುಕ್ಕಿಯಲ್ಲಿದ್ದಾಗ ಹುಡುಗನನ್ನ ಕರೆದು `ಬರೆಯೋ ನಿನ್ನ ಇಂಗ್ಲಿಷ್ ನಾಲೆಡ್ಜ್ ಎಷ್ಟಿದೆ ನೋಡುವಾ… L.E.A.F., LOTUS…’ ಹೀಗೆ ಬಿಡಿ ಬಿಡಿಯಾಗಿ ನಾಲ್ಕು ಅಕ್ಷರಗಳನ್ನು ಬರೆಯಲು ಹೇಳುತ್ತಾರೆ. ಹುಡುಗ ಪದ ಮಾತ್ರ ಹೇಳಿದಾಗ ಸ್ಪೆಲಿಂಗ್ ಮಿಸ್ಟೇಕ್ ಮಾಡಿದರೂ ಕಷ್ಟಪಟ್ಟು ಬರೆಯುತ್ತಾನೆ. ನಂತರ ಅಪ್ಪ ಅದರ ಅರ್ಥ ಬರೆಯಲು ಹೇಳುತ್ತಾರೆ. ಹುಡುಗ ಅರ್ಧಗಂಟೆ ಡಿಕ್ಷನರಿ ಇದ್ದರೆ ಹುಡುಕಿ ಇಲ್ಲವಾದರೆ ಅವರಿವರನ್ನ ಕೇಳಿ ಅರ್ಥ ಬರೆಯುತ್ತಾನೆ. ತಂದೆ ಅದಷ್ಟನ್ನು ಜೋಡಿಸಲು ಹೇಳುತ್ತಾರೆ. Leaf -ಎಲೆ; LOTUS -ಕಮಲ, pearl -ಮುತ್ತು… ಹುಡುಗ ಆತಂಕಗೊಳ್ಳುತ್ತಾನೆ. umbrella ಅಂದರೆ…
ಜೋಡಿಸಿದ ತಕ್ಷಣ ಹುಡುಗ ನಾಚಿ ಕೆಂಪಾಗುತ್ತಾನೆ. ಮನೆಯಲ್ಲಿ ಕೊಂಚ ಇಂಗ್ಲಿಷ್ ಕಲಿತವರಿದ್ದರೆ ಅಥವಾ ಶಾಲೆಯಲ್ಲಿ ತುಸು ಹುಬ್ಬು ಸಡಿಲಿಸಿದ ಅಧ್ಯಾಪಕರಿದ್ದರೆ ಹುಡುಗರಿಗೆ ವಡ್ರ್ಸ್ವರ್ತ್, ಶೇಕ್ಸ್ಪಿಯರ್ ಗಿಂಥ ಮೊದಲೇ ಇಂಗ್ಲಿಷ್ ಭಾಷೆ ಮೂಡಿಸುವ ರೋಮಾಂಚನ ಇದು. ಬಹುಪಾಲು ಎಲ್ಲ ಹುಡುಗರು ಬಾಲ್ಯಕಾಲದಲ್ಲಿ ಈ ಲೀಫ್, ಲೋಟಸ್, ಪರ್ಲ್ ಅಂಬ್ರೆಲಾದ ಮಾಂತ್ರಿಕತೆಗೆ ಒಳಗಾಗಿಯೇ ಇರುತ್ತಾರೆ.
ಇದೇ ಮತ್ತೆರಡು ವರ್ಷ ಕಳೆದು ಹೈಸ್ಕೂಲು ಸೇರಿದಾಗ ಗೋಡೆಯ ಮೇಲೆ ಪೆನ್ಸಿಲಿ ನಿಂದ ಅಥವಾ ಹುಡುಗಿಯರ ಡೆಸ್ಕ್ ಮೇಲೆ ಕೈವಾರದಿಂದ ಕಂಡೂ ಕಾಣಿಸದಷ್ಟು ಪುಟ್ಟದಾಗಿ ಕೆತ್ತುವ ಹುಮ್ಮಸ್ಸು ನೀಡುತ್ತದೆ. ಜಲಜ, ಕಮಲ, ಪುಷ್ಪ ಅಥವಾ ಯಾವುದೇ ಹೂವಿನ ಹೆಸರಿನ ಅದರಲ್ಲೂ ಇಂಗ್ಲಿಷ್ ಗೆ ಅನುವಾದಿಸಬಲ್ಲ ಹೂವ ಹೆಸರಿನ ಹುಡುಗಿಯರು ಶಾಲೆಯಲ್ಲಿದ್ದರಂತೂ ಹುಡುಗರಿಗೆ ಹಬ್ಬ, ರೋಮಾಂಚನ!
ಹೀಗೆ ಇಷ್ಟವಾದುದು ಇದರ ಮುಂದುವರಿದ ಮತ್ತೊಂದು ರೂಪ:
ಕುವೆಂಪುರವರ ಕಾನೂರು ಹೆಗ್ಗಡಿತಿ ಕಾದಂಬರಿಯಲ್ಲಿ ಒಂದು ಸಂದರ್ಭವಿದೆ. `ಹಲ್ಲಿಯ ಕೃಪೆ’ ಎಂಬ ಅಧ್ಯಾಯ ನೆನಪಿದ್ದರೆ ಈ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿ ದಂತಿದೆ. ಹೂವಯ್ಯ ಬೆನ್ನು ನೋವಿನಿಂದ ನರಳುತ್ತಾ ಸೀತೆಯ ಮನೆಯ ಮಂಚದ ಮೇಲೆ ಮಲಗಿದ್ದನು. ಎಲ್ಲ ಎಳೆಯ ಪ್ರೇಮಿಗಳಿಗೆ ಕಾಣುವಂತೆ ಸೀತೆ ಹೂವಯ್ಯನ ಕಣ್ಣಿಗೆ ಹಣತೆಯ ಮಂದ ಬೆಳಕಿನಲ್ಲಿ ಸ್ವಪ್ನ ಸುಂದರಿಯಂತೆ ಕಾಣುತ್ತಿದ್ದಳು.
“ಒಮ್ಮೆ ಅವಳನ್ನು ಮಾತನಾಡಿಸಲು ತಲೆಯೆತ್ತಿದವನು ಗೋಡೆಯ ಕಡೆ ನೋಡಿದನು. ಹಿತ್ತಾಳೆಯ ದೀಪದ ಕಂಬದ ಮೇಲೆ ಸಾಧಾರಣ ಪ್ರಕಾಶಮಾನವಾಗಿ ಉರಿಯುತ್ತಿದ್ದ ಹಣತೆಯ ಸೊಡರಿನ ಬೆಳಕಿನಲ್ಲಿ, ಬಿಳಿಯ ಗೋಡೆಯ ಮೇಲೆ, ಹಲ್ಲಿಯೊಂದು ಸಣ್ಣಪುಟ್ಟ ಹುಳುಗಳನ್ನು ಶಿಕಾರಿ ಮಾಡಲು ಹೊಂಚು ಹಾಕಿ ಕುಳಿತಿತ್ತು… ಹಲ್ಲಿ ಕೂತಿದ್ದ ಜಾಗದಲ್ಲಿಯೇ ಸೀಸದಕಡ್ಡಿಯಿಂದ ಏನನ್ನೊ ಸಣ್ಣಗೆ ಬರೆದಂತಿತ್ತು. ಬರವಣಿಗೆಯ ಅರ್ಧಭಾಗವನ್ನು ಹಲ್ಲಿಯ ದೇಹ ಮುಚ್ಚಿಬಿಟ್ಟಿತ್ತು. ಅದನ್ನು ಓದುವ ಕುತೂಹಲದಿಂದ ಹೂವಯ್ಯ ಸ್ವಲ್ಪ ತಲೆಬಾಗಿ ಮುಂಬರಿಯಲು ಹಲ್ಲಿ ಹೆದರಿ ಓಡಿತು. ಅದನ್ನೋದಿದ ಕೂಡಲೇ ಅವನ ಮುಖಕ್ಕೆ ನೆತ್ತರೇರಿದಂತಾಯ್ತು. `ಹೂವಯ್ಯ ಭಾವನನ್ನೆ ಮದುವೆಯಾಗುತ್ತೇನೆ” ಎಂದಿದ್ದ ಆ ಲಿಪಿಗೆ ಸೀತೆಯೇ ಕರ್ತಳೆಂಬುದೇನೋ ಅಕ್ಷರದಿಂದ ಅವನಿಗೆ ಗೊತ್ತಾಯಿತು.
“ಆತನಿಗೆ ಗೋಡೆಯ ಬರವಣಿಗೆ ಸೀತೆಯದು ಎನ್ನುವುದಕ್ಕಿಂತಲೂ ವಿಧಿಯ ಲಲಾಟ ಲಿಖಿತವೆಂಬಂತೆ ಭಾಸವಾಯ್ತು… ಬರಹ ಒಂದು ಮಹಾರಹಸ್ಯವೂ, ಶಕ್ತಿಪೂರ್ಣವೂ ಆದ ಪ್ರೇಮ ಮಂತ್ರವಾಗಿ ಪರಿಣಮಿಸಿತ್ತು. ಅವನ ಕಣ್ಣು ಮತ್ತೆ ಮತ್ತೆ ಗೋಡೆಯ ಕಡೆ ಹೋಗುತ್ತಿತ್ತು. ಗೋಡೆಯ ಲಿಪಿಯೂ ಸೀತೆಯಷ್ಟೇ ಸಮ್ಮೋಹಕವಾಗಿತ್ತು. ಸ್ವಲ್ಪ ಹೊತ್ತಿಗೆ ಮುಂಚೆ ಕೇವಲ ಜಡಮಾತ್ರವಾಗಿದ್ದ ಆ ಗೋಡೆ ಈಗ ಘನಚೈತನ್ಯವಾಗಿತ್ತು…”
ಇವೆರಡು ಬಗೆಯ ಗೋಡೆಬರಹ ಪಡೆದ ಸಮ್ಮೋಹಕತೆಗೆ ಈಡಾಗಿದ್ದಕ್ಕೆ ಕ್ಷಮೆ ಇರಬಹುದು!
(ಕೃತಿ: ಆಲೂರರ ಪ್ರಬಂಧಗಳು, ಲೇಖಕರು: ಚಂದ್ರಶೇಖರ ಆಲೂರು, ಪುಟಗಳು:400, ಬೆಲೆ:360, ಪ್ರಕಾಶನ: ಸಂಕಥನ)
ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ.
I used to enjoy reading kendasmpige regularly. But lately I am finding it very hard to read because of the font size, even with my reading glasses on. Could you please increase the size of the font? I hope this issue can be easily resolved. I would not want Miss reading because of the font size.
Thank you,
Vidya gadagkar