Advertisement
ಆಶಾ ರಘು ಬರೆದ ಈ ಭಾನುವಾರದ ಕತೆ “ನೇಪಥ್ಯ”

ಆಶಾ ರಘು ಬರೆದ ಈ ಭಾನುವಾರದ ಕತೆ “ನೇಪಥ್ಯ”

ನಾನು ಬಣ್ಣ ಹಚ್ತಾ, ಮೊಳೆ ಹೊಡೀತಾ, ಲೈಟು ಕಟ್ತಾ ಬೆಳೆಯತೊಡಗಿದೆ. ಹರಿದ ಒಳ ಅಂಗಿಯ ಮೇಲೆ ರಾಜಕುಮಾರನ ಗರಿಗರಿ ಉಡುಪು..! ತಲ್ಲಣಗಳಲ್ಲಿ ಕುಸಿಯುವ ಮನಸ್ಸನ್ನು ಮೀರಿ ಹೊರಗೆ ಹಾಸ್ಯೋತ್ಸಾಹದ ಸಂಭಾಷಣೆಗಳ ಹೊನಲು..! ಒಮ್ಮೊಮ್ಮೆ ಇದು ತಿರುಗುಮುರುಗೂ ಆಗುವುದುಂಟು..! ನಾಟಕವಲ್ಲವೇ..!? ಎಷ್ಟೋ ಬಾರಿ ನಾನು ವಾಸ್ತವ ಸಂಗತಿಗಳಿಗೆ ಪ್ರತಿಕ್ರಿಯಿಸಿದರೆ, ಅದು ದಿಟವಾ ಅಥವಾ ನಾಟಕ ಆಡುತ್ತಿದ್ದೇನೆಯಾ ಅಂತ ನನಗೇ ಗುಮಾನಿ ಅನ್ನಿಸುವಷ್ಟು ಅಭಿನಯ ಕಲೆ ನನಗೆ ಒಲಿಯಿತು. ನಡೆಯುತ್ತಿದ್ದವನಿಗೆ ಸೈಕಲ್ ಬಂತು. ಸೈಕಲ್ ಹೋಗಿ ಸ್ಕೂಟರ್ ಬಂತು.
ಆಶಾ ರಘು ಬರೆದ “ಕೆಂಪು ದಾಸವಾಳ” ಕಥಾ ಸಂಕಲನದ ಕತೆ “ನೇಪಥ್ಯ” ಈ ಭಾನುವಾರದ ಬಿಡುವಿನ ಓದಿಗೆ

‘……Art is a lie that tells the truth ಅಂತ ಪಾಬ್ಲೋ ಪಿಕಾಸೋ ಹೇಳ್ತಾನೆ. ನಾಟಕ ಅನ್ನೋದು ಒಂದು ಆಟ… ಸುಳ್ಳಿನ ಆಟ. ಆದರೆ ಸುಳ್ಳು ಆ ಆಟದ ಭೂಮಿಕೆಯೇ ಹೊರತು ಉದ್ದೇಶ ಅಲ್ಲ. ಹಾಗಿದ್ದರೆ ಸುಳ್ಳಿನ ಭೂಮಿಕೆಯಿರೋ ಆಟವನ್ನ ಯಾಕಾಗಿ ಆಡ್ತೀವಿ..? ಯಾಕೆ ಅಂದ್ರೆ ನಾಟಕದ ಉದ್ದೇಶ ಸತ್ಯಶೋಧನೆ!’ ಜೋರಾದ ಕರತಾಡನ… ನಗುಮೊಗದಿಂದ ಚಪ್ಪಾಳೆಯನ್ನು ಸ್ವೀಕರಿಸಿ ತಲೆಬಾಗಿ ವಂದಿಸುವಂತೆ ಮಾಡಿ, ಮುಂದುವರೆದು, ’… ಸುಳ್ಳಿಗೂ ನಾಟಕಕ್ಕೂ ಇರೋ ಸಂಬಂಧವನ್ನ ಕೆಸರಿಗೂ ಕಮಲಕ್ಕೂ ಇರೋ ಸಂಬಂಧಕ್ಕೆ ಹೋಲಿಸಬಹುದು. ಹೇಗೆ ಕೆಸರಿನಿಂದ ಜೀವಸತ್ವ ಪಡೆದು ಮೇಲೆದ್ದು ಬರೋ ಕಮಲ ಜಗತ್ತಿಗೆ ಸೌಂದರ್ಯ ದರ್ಶನ ಮಾಡಿಸಬಲ್ಲದೋ, ಅದೇ ರೀತಿ ಸುಳ್ಳಿನ ಭೂಮಿಕೆಯಿಂದ ಮೇಲೆದ್ದು ಬರೋ ನಾಟಕ ಕೂಡಾ ಪ್ರೇಕ್ಷಕರಿಗೆ ಸತ್ಯದರ್ಶನ ಮಾಡಿಸಬಲ್ಲದು. ಕಮಲದ ಸಸ್ಯಕ್ಕೆ ಹೇಗೆ ಹೂವು ಅದರ ಸಾರ್ಥಕತೆಯೋ, ಹಾಗೇ ಸತ್ಯದರ್ಶನ ನಾಟಕದ ಅಥವಾ ಯಾವುದೇ ಕಲೆಯ ಸಾರ್ಥಕತೆ!’ ಮತ್ತೆ ಜೋರಾದ ಕರತಾಡನ… ಸಿಲ್ಲೆ… ಗದ್ದಲ…

…ಮುದುಕ ರಂಗಣ್ಣ ಪ್ಯಾಂಟಿನ ಬೆಲ್ಟ್ ಅನ್ನು ತುಸು ಎಳೆದು ಬಿಗಿ ಮಾಡಿಕೊಂಡು ಲಘುವಾಗಿ ಓಡತೊಡಗಿದ. ಕಾಲಿನ ಚಪ್ಪಲಿ ಕಿತ್ತು ಮೂರು ಮಾರು ದೂರಕ್ಕೆ ಚಿಮ್ಮಿತು. ಅರೆಕಿತ್ತ ಉಗುರನ್ನು ಹಲ್ಲುಮುಡಿ ಕಚ್ಚಿಕೊಂಡು ಪೂರ್ತಿ ಕಿತ್ತು ಪಕ್ಕಕ್ಕೆ ಎಸೆದು, ಬ್ಯಾಗಿನಿಂದ ಕರವಸ್ತ್ರ ತೆಗೆದು ರಕ್ತ ಹೆಚ್ಚು ನಷ್ಟವಾಗದಂತೆ ಒತ್ತಿ ಹಿಡಿದು ಹಾಗೇ ಕಾಲಿಗೆ ಸುತ್ತಿಕೊಂಡು, ವೇಗವಾಗಿ ಕುಂಟುತ್ತಲೇ ಮುಂದೆ ಸಾಗಿ, ಕರವಸ್ತ್ರ ತೆಗೆದು, ಚಪ್ಪಲಿ ಮೆಟ್ಟಿಕೊಂಡು ಲಗುಬಗೆಯಿಂದ ಜ್ಯೂನಿಯರ್ ಆರ್ಟಿಸ್ಟ್ ಸಂಘದ ಮ್ಯಾನೇಜರ್ ಹೇಳಿದ್ದ ಗುರುತಿನಂತೆ ಸರ್ಕಲ್ ಗಣಪತಿ ಗುಡಿಯ ಹತ್ತಿರಕ್ಕೆ ಬರುವ ವೇಳೆಗೆ ಕಿರುಪಾತ್ರಗಳ ಕಲಾವಿದರನ್ನು ತುಂಬಿಕೊಂಡಿದ್ದ ಟೆಂಪೋ ಟ್ರಾವೆಲರ್ ನಿಗದಿತ ಸ್ಥಳವನ್ನು ಬಿಟ್ಟು ಸ್ವಲ್ಪ ಮುಂದಕ್ಕೆ ಚಲಿಸಿ ಸಾಗುತ್ತಿತ್ತು. ಮುದುಕಪ್ಪ ವೇಗವನ್ನು ಇನ್ನಷ್ಟು ಹೆಚ್ಚಿಸಿ ಟಿ.ಟಿ ಹಿಂದೆಯೇ ಓಡಿದ. ಕಿಟಕಿಗೆ ಮುಖ ಹಾಕಿ ಕುಳಿತಿದ್ದ ಕಲಾವಿದರು ‘ನಿಲ್ಲಿಸಿ ನಿಲ್ಲಿಸಿ’ ಅಂತ ಕಿರುಚುತ್ತ ಟಿಟಿಯ ಒಡಲಿಗೇ ಬಡಿದ ಮೇಲೆ ಡ್ರೈವರ್ ಗಾಡಿಯನ್ನು ನಿಲ್ಲಿಸಿದ. ‘ಯಾಕೆ? ಬೇಗ ಬರೋಕ್ಕೆ ಆಗ್ತಾ ಇರಲಿಲ್ಲವ? ಹೀರೋ ಹೀರೋಯಿನ್‌ಗಳೆಲ್ಲ ಕಾಯಬೇಕ ನಿನಗೋಸ್ಕರ..?’ ಅಂತ ಮ್ಯಾನೇಜರ್ ಬೈದು ಹತ್ತಿಸಿಕೊಂಡ. ‘ಯಾಕೆ ಮುದುಕಪ್ಪ… ಏನಾಯ್ತು ಕಾಲು..?’ ‘ಅಯ್ಯೋ! ಮುದುಕಪ್ಪ ನೋಡ್ರೇ ಕಾಲು ಗಾಯ ಮಾಡ್ಕೊಂಡು ಬಂದದೆ…’ ‘ಬಿದ್ಯಾ..? ಅದಕ್ಕೇ ಲೇಟಾ..?’ ಅಂತ ಕೂತಿದ್ದ ಬಾಲೆಯರು ಪ್ರಶ್ನಿಸುತ್ತ ಮುದುಕನಿಗೆ ಜಾಗ ಬಿಟ್ಟುಕೊಟ್ಟರು. ರಂಗಣ್ಣ ಕೂತು ಗಟ್ಟಿಯಾಗಿ ಉಸಿರುಬಿಟ್ಟ. ರಕ್ತದ ಕಲೆಯಾಗಿದ್ದ ಭಾಗವನ್ನು ಒಳಗೆ ಮಾಡಿ, ಅದೇ ಕರವಸ್ತ್ರದಿಂದ ಮುಖವನ್ನು, ಶರ್ಟ್ ಒಳಗೆ ಕೈ ಹಾಕಿ ಎದೆ, ಕಂಕುಳುಗಳನ್ನು ಒರೆಸಿಕೊಂಡ. ಟೆಂಪೋ ಟ್ರಾವೆಲರ್ ಒಂದು ಪಾರ್ಕ್ ಮುಂದೆ ಬಂದು ನಿಂತಿತು.

(ಆಶಾ ರಘು)

ಲಾಂಗ್ ಶಾಟ್… ನಿರ್ದೇಶಕರು ಆಕ್ಷನ್ ಹೇಳಿದ ತಕ್ಷಣ ನಡುವೆ ಹೀರೋ ಹೀರೋಯಿನ್ ಕಡಲೇಕಾಯಿ ತಿನ್ನುತ್ತಾ ನಡೆದು ಬಂದು ಮಧ್ಯದ ಬೆಂಚಿನ ಮೇಲೆ ಕೂರುತ್ತಾರೆ. ಕಿರುಪಾತ್ರ ಕಲಾವಿದರೆಲ್ಲ ಇಬ್ಬರು, ಮೂವರು ಸಣ್ಣಸಣ್ಣ ಗುಂಪುಗಳಾಗಿ ಅಲ್ಲಲ್ಲಿ ದೂರದೂರದಲ್ಲಿ ಚಲಿಸುತ್ತಾ ಇರಬೇಕು. ಟಿಟಿ ಹತ್ತಿದಾಗಿನಿಂದ ಒಂದೇ ಬ್ಯಾಂಡ್ ಅನ್ನು ಅವನ ಎಡ ಕೈಯಿಗೆ, ಅವಳ ಬಲಗೈಯಿಗೆ ಹಾಕಿಕೊಂಡು ಜಂಟಿಯಾಗಿ ಪಿಸುಮಾತುಗಳಲ್ಲಿ ಉಳಿದ ಗುಂಪಿನಿಂದ ದೂರವೇ ಉಳಿದಿದ್ದ ಕಿರುಪಾತ್ರ ಕಲಾವಿದರಾಗಿದ್ದ ಪ್ರೇಮಿಗಳು, ಕೈಯಿಯ ಬ್ಯಾಂಡ್ ಬಿಚ್ಚದೆ ಹಾಗೇ ಕ್ಯಾಮೆರಾ ರೈಟ್‌ನಿಂದ ಕ್ಯಾಮೆರಾ ಲೆಫ್ಟ್ ಗೆ ನಡೆದು ಹೋದರು. ರಂಗಣ್ಣ ಚಿಕ್ಕ ಪ್ರಾಯದ ಹುಡುಗಿಯೊಬ್ಬಳ ಹೆಗಲ ಮೇಲೆ ಕೈ ಹಾಕಿಕೊಂಡು, ಸೆಟ್ ನವರು ಕೊಟ್ಟ ಕೋಲು ಹಿಡಿದು ಕ್ಯಾಮೆರಾ ಲೆಫ್ಟ್ ನಿಂದ ರೈಟ್ ಗೆ ನಡೆದ. ಇನ್ನು ಉಳಿದ ಗುಂಪುಗಳು ಸಹಾಯಕ ನಿರ್ದೇಶಕರುಗಳು ನಿರ್ದೇಶಿಸಿದಂತೆ ತಮ್ಮತಮ್ಮ ಪಥದಲ್ಲಿ ನಡೆದು ಪೂರೈಸಿದರು. ಈ ನಿರ್ದೇಶಕರ ಯಾವುದೇ ಶಾಟ್ ಒಂದು ಟೇಕಿಗೆ ಓಕೆ ಆಗುವುದು ಎಲ್ಲಿಯಾದರೂ ಉಂಟೇ…? ಮತ್ತೆ ಮತ್ತೆ ಕಟ್… ಮತ್ತೆ ಮತ್ತೆ ರೆಡಿ ಕ್ಯಾಮೆರಾ… ಆಕ್ಷನ್..!

ತುಂಬಿದ ಮದುವೆ ಮನೆಯ ಸನ್ನಿವೇಶ. ಮಾಂಗಲ್ಯ ಕಟ್ಟುವ ವೇಳೆಗೆ ದಢೂತಿ ಮನುಷ್ಯನೊಬ್ಬ ಓಡಿ ಬಂದು ‘ಮದುವೆ ಮನೇಲಿ ಬಾಂಬ್ ಇದೆ’ ಅಂತ ಕಿರುಚುತ್ತಾನೆ. ಆಹ್ವಾನಿತರಂತೆ ಕುಳಿತಿದ್ದ ಕಿರುಪಾತ್ರ ಕಲಾವಿದರೆಲ್ಲ ಎದ್ದು ಚೆದುರಿ ಗದ್ದಲ ಮಾಡುತ್ತ ಓಡಬೇಕು. ಪ್ರತಿ ಬಾರಿ ಕಟ್ ಆಗಿ ಪುನಃ ಆಕ್ಷನ್ ಹೇಳಿದಾಗಲೂ ಹಿಂದಕ್ಕೆ ಬಂದು ಅದೇ ಜಾಗದಲ್ಲಿ ಕುಳಿತು, ಪುನಃ ಅಲ್ಲಿಂದಲೇ ಅದೇ ಬಾಗಿಲಿನ ದಿಕ್ಕಿಗೆ ಓಡಬೇಕು. ಅದಾಯಿತು.

…ಈಗ ದೊಡ್ಡ ಬಂಗಲೆಯೊಂದರ ಮುಂದೆ ಧರಣಿ. ಅಲ್ಲಿ ಯಾರೂ ಬಂದು ಏನೂ ಹೇಳುವುದಿಲ್ಲ. ಕುಳಿತವರಲ್ಲಿ ಒಬ್ಬ ಎದ್ದು ಚಪ್ಪಾಳೆ ತಟ್ಟಬೇಕು. ಆಗ ಉಳಿದವರೆಲ್ಲರೂ ಪ್ರೇರಿತರಾಗಿ ಎದ್ದು ಚಪ್ಪಾಳೆ ತಟ್ಟಬೇಕು. ಮೊದಲು ಎದ್ದು ಚಪ್ಪಾಳೆ ತಟ್ಟಿದಾತ, ‘ಜೀವನ್ ದೇಶಪಾಂಡೆಯವರು ನಮ್ಮ ಪಾಲಿನ ದೇವರಿದ್ದ ಹಾಗೆ. ಜೀವನ್ ದೇಶಪಾಂಡೆಯವರಿಗೇ…’ ಅನ್ನಬೇಕು. ಆಗ ಉಳಿದವರೆಲ್ಲರೂ ‘ಜೈ’ ಎಂದು ಕೈ ಎತ್ತಿ ಒಕ್ಕೊರಲಿನಿಂದ ಕೂಗಬೇಕು. ಹೀಗೆ ನಾಲ್ಕೈದು ಬಾರಿ ಜೈಕಾರ ಹಾಕಬೇಕು. ಇದು ಹೀರೋ ವ್ಯೂ ಪಾಯಿಂಟ್ ಇಂದ… ಬಂಗಲೆಯ ಗೇಟಿನ ಒಳಗೆ ಕ್ಯಾಮೆರಾ ಇಟ್ಟಿದ್ದರು. ಪಕ್ಕದಲ್ಲಿ ಕುರ್ಚಿ ಹಾಕಿ ಕುಳಿತಿದ್ದ ನಿರ್ದೇಶಕರು ಸಹಾಯಕ ನಿರ್ದೇಶಕನನ್ನು ಕರೆದು ಹೇಳಿದರು ‘ಅಲ್ನೋಡು… ಕೂತಿರೋರಲ್ಲಿ ಆ ಮುದುಕಪ್ಪ ಇದ್ದಾನಲ್ಲ… ಅವನಿಗೆ ಹೇಳು ಮೊದಲು ನಿಂತು ಚಪ್ಪಾಳೆ ತಟ್ಟೋಕ್ಕೆ. ಹಾಗೇ ಡೈಲಾಗ್ ಹೇಳಿಕೊಡು…’ ಅಂದರು.

ಸಹಾಯಕ ಗುಂಪನ್ನು ಸಮೀಪಿಸಿ ರಂಗಣ್ಣನಿಗೆ ಹೇಳಿದ., ‘ನೋಡು ಅಜ್ಜ. ಆಕ್ಷನ್ ಹೇಳ್ತಿದ್ದಂತೆ ನೀನು ಎದ್ದು ನಿಂತು ಚಪ್ಪಾಳೆ ತಟ್ಟಬೇಕು. ಆಮೇಲೆ ಉಳಿದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ತಾರೆ. ಆಗ ನೀನು ‘ಜೀವನ್ ದೇಶಪಾಂಡೆಯವರು ನಮ್ಮ ಪಾಲಿನ ದೇವರಿದ್ದ ಹಾಗೆ. ಜೀವನ್ ದೇಶಪಾಂಡೆಯವರಿಗೇ…’ ಅನ್ನಬೇಕು. ಆಗ ಉಳಿದವರೆಲ್ಲ ಅದಕ್ಕೆ ಜೈಕಾರ ಹಾಕ್ತಾರೆ. ನೀನು ನಾಲ್ಕೈದು ಸಲ ‘ಜೀವನ್ ದೇಶಪಾಂಡೆಯವರಿಗೇ…’ ಅಂತ ಕೂಗಬೇಕು. ಆಯ್ತಾ..?’

‘ಮೊದಲು ಏನಂತ ಹೇಳಬೇಕು?’ ರಂಗಣ್ಣ ಕೇಳಿದ.

‘ಜೀವನ್ ದೇಶಪಾಂಡೆಯವರು ನಮ್ಮ ಪಾಲಿನ……..’ ಪೂರ್ತಿ ಸಾಲು ಎರಡೆರಡು ಬಾರಿ ಹೇಳಿಕೊಟ್ಟ.

ರಂಗಣ್ಣ ‘ರೆಡಿ’ ಅಂದ.

ಒಂದು ಬದಿಗೆ ರಿಫ್ಲೆಕ್ಟರ್‌ಗಳನ್ನು ಹಿಡಿದು ಸೂರ್ಯನ ಬೆಳಕಿನ ಪ್ರತಿಫಲನವಾಗುವಂತೆ ಮಾಡಿದ ಮೇಲೆ ಕ್ಯಾಮೆರಾ ರೋಲ್ ಆಗತೊಡಗಿತು. ನಿರ್ದೇಶಕರು ‘ಆಕ್ಷನ್’ ಎಂದರು. ರಂಗಣ್ಣ ನಿಧಾನವಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿದ. ಕೂಡಲೇ ನಿರ್ದೇಶಕರು ಕಟ್ ಹೇಳಿದರು. ‘ನಿಧಾನವಾಗಿ ಎದ್ದು ಅಲ್ಲ. ಆವೇಶಭರಿತವಾಗಿ ಎದ್ದು ಚಪ್ಪಾಳೆ ತಟ್ಟಬೇಕು’ ನಿರ್ದೇಶಕರು ಕುಳಿತಿದ್ದಲ್ಲಿಂದಲೇ ಕೂಗಿ ಹೇಳಿದರು. ರಂಗಣ್ಣ ಆವೇಶಭರಿತನಾಗಿ ಎದ್ದು ಚಪ್ಪಾಳೆ ತಟ್ಟಿದ. ಉಳಿದವರೆಲ್ಲ ಎದ್ದು ತಟ್ಟಿದರು. ನಿರ್ದೇಶಕರು ಕಟ್ ಹೇಳಿದರು. ‘ಈಗ ಮುದುಕನ ಕ್ಲೋಸ್ ತೊಗೋಳಿ…’ ಅಂತ ಕ್ಯಾಮೆರಾದವರಿಗೆ ಹೇಳಿದರು. ಕ್ಲೋಸ್‌ಗೆ ಕ್ಯಾಮೆರಾ ಇಡುತ್ತಿದ್ದಂತೆ ರಂಗಣ್ಣನಿಗೆ ಬವಳಿ ಬಂದಂತೆ ಆಯಿತು. ಸಾವರಿಸಿಕೊಂಡು ನಿಂತ. ಜಿನಿಜಿನಿ ಅಂತ ಮುಖ, ಬೆನ್ನು, ಎದೆಗಳಿಂದ ಬೆವರು ಹರಿಯಲು ಆರಂಭಿಸಿತು. ಸಹಾಯಕ ನಿರ್ದೇಶಕ ಮೇಕಪ್ ನವರಿಗೆ ತೇವದ ಬಟ್ಟೆ ತರೋಕ್ಕೆ ಹೇಳಿದ. ನಿರ್ದೇಶಕರು, ‘ಬೇಡ ಬೇಡ., ನ್ಯಾಚುರಲ್ ಆಗಿದೆ. ಹಾಗೇ ಇರಲಿ’ ಅಂದರು. ‘ಜೀವನ್ ದೇಶಪಾಂಡೆಯವರು ನಮ್ಮ…’ ಅನ್ನುತ್ತಿದ್ದಂತೆ ಆಯಾಸದಿಂದ ರಂಗಣ್ಣ ಸೋತುಹೋದ. ‘ಕಟ್’ ಹೇಳಿ, ಮತ್ತೆ ‘ಆಕ್ಷನ್’ ಅಂದರು. ಮುದುಕಪ್ಪ ಚೇತರಿಸಿಕೊಂಡು ‘ಜೀವನ್…’ ಅಂದು ರಿಫ್ಲೆಕ್ಟರ್ ಬೆಳಕಿಗೆ ಕಣ್ಣುಮುಚ್ಚಿದ. ಪುನಃ ಕಟ್… ಎಷ್ಟು ಸಲ..!? ಏಳು ಸಲವಾಯಿತು. ಜೂನಿಯರ್ ಆರ್ಟಿಸ್ಟ್‌ಗಳಲ್ಲಿಯೇ ಮತ್ತೊಬ್ಬ, ‘ನಂಗೇ ಗ್ರೇ ಹೇರ್ ಮಾಡಿ ಸರ್… ನಾನೇ ಮಾಡ್ತೀನಿ…’ ಅಂದ ಸಹಾಯಕನಿಗೆ ಕಣ್ಣು ಹೊಡೆದು ಹಾಸ್ಯ ದನಿಯಲ್ಲಿ ಕೇಳಿದ. ಅದನ್ನು ಕೇಳಿಸಿಕೊಂಡ ನಿರ್ದೇಶಕರು ‘ಏ ಯಾರದು..?’ ಅಂತ ಕೂಗಿದ ಮೇಲೆ ಕಿರುಕಲಾವಿದರ ಪಿಸುಪಿಸು ನಿಂತಿತು. ಮತ್ತೆ ಮೂರು ಶಾಟ್..! ನಿರ್ದೇಶಕರಿಗೆ ಕೋಪ ಬಂದು, ‘ಏನ್ರೀ ನೀವು ಲಾಯಕ್ಕಿಲ್ಲದವರನ್ನೆಲ್ಲ ಕರೆಸ್ತೀರ?’ ಅಂತ ಪ್ರೊಡಕ್ಷನ್ ಮ್ಯಾನೇಜರ್ ಕಡೆಗೆ ತಿರುಗಿ ಬೈದರು. ‘ಇಲ್ಲ ಸಾರ್… ಮಾಡ್ತಾನೆ. ಇವತ್ತು ಯಾಕೋ…’ ಅಂದು, ‘ಯಾಕ್ರೀ ಯಜಮಾನ್ರೆ’ ಅಂತ ಪಿಸುಮಾತಲ್ಲಿ ಹತ್ತಿರ ಬಂದು ರಂಗಣ್ಣನನ್ನು ಕೇಳಿದ. ಮುದುಕ ತಲೆತಗ್ಗಿಸಿದ. ಕಡೆಗೆ ‘ನಂಗೇ ಗ್ರೇ ಹೇರ್ ಮಾಡಿ, ನಾನೇ ಮಾಡ್ತೀನಿ…’ ಅಂದವನಿಂದಲೇ ‘ಗ್ರೇ ಹೇರ್ ಏನೂ ಬೇಡ… ಹಾಗೇ ಹೇಳಿ’ ಅಂತ ನಿಲ್ಲಿಸಿ ಚಪ್ಪಾಳೆಯಿಂದ ಕಂಟಿನ್ಯುಟಿ ತೊಗೊಂಡು ಮಾಡಿಸಿದರು. ಮುದುಕಪ್ಪನ ಕಣ್ಣಲ್ಲಿ ಸಣ್ಣಗೆ ನೀರು ಜಿನುಗಿತು. ಸಾವರಿಸಿಕೊಂಡು ಜೈಕಾರವನ್ನು ಸರಿಯಾಗಿ ಆರು ಸಲ ಗುಂಪಿನೊಂದಿಗೆ ಕೂಗಿ, ಸೆಟ್ಟಿನವರು ಕೊಟ್ಟ ಉಪ್ಪಿಟ್ಟು ತಿಂದು ಸಾಲಾಗಿ ನಿಂತು ಆ ದಿನದ ಐದುನೂರು ರುಪಾಯಿ ಪಡೆದುಕೊಂಡು ಅಲ್ಲಿಂದ ಬಸ್ ಸ್ಟಾಪಿಗೆ ನಡೆದ.

ಮನೆಯ ಬೀದಿಯ ತಿರುವಿನ ಅಂಗಡಿಯಲ್ಲಿ ಹೆಂಡತಿ ಗಂಗಮ್ಮ ಬರೆದುಕೊಟ್ಟಿದ್ದ ಚೀಟಿ ತೋರಿಸಿ, ಚೀಲಕ್ಕೆ ಅಕ್ಕಿ, ಬೇಳೆ, ಉಪ್ಪು, ಮೆಣಸುಗಳನ್ನು ತುಂಬಿಕೊಂಡು, ಬೀದಿಯ ಕೊಳಾಯಿಯ ಸುತ್ತ ಬಿಂದಿಗೆಗಳನ್ನು ಹಿಡಿದು ನಿಂತಿದ್ದ ನಾರಿಯರ ಮುಂದೆ ಹಾದು ತನ್ನ ವಠಾರದ ಕಡೆಗೆ ನಡೆಯುವಾಗ ‘ಶ್ರೀ ಕರುಣಾಂಬುಧಿಶಯನಂ ಶ್ರೀ ಭಾರದ್ವಾಜ ಮುನಿ ವಂದಿತಂ…’ ಅಂತ ಒಳಗೆ ಯಾರೋ ಹಾಡಿದ ಹಾಗೆ!

ಬಾಗಿಲಲ್ಲಿಯೇ ಕಾದು ನಿಂತಿದ್ದ ಗಂಗಮ್ಮ ಕೈಚೀಲವನ್ನು ಪಡೆದುಕೊಂಡು ಒಳಗೆ ಹೋದಳು. ಬಚ್ಚಲಿಗೆ ಹೋಗಿ ಕಾಲು ತೊಳೆಯುವಾಗ ಮುಂದುವರಿದ ದನಿ…

…ಶ್ರೀ ಕೇಸರಿ ವೇಷಧರಣಂ ಶ್ರೀ ಬಾಲಪ್ರಹ್ಲಾದ ಉದ್ದಾರಕಂ
ಶುಕಚರಿತ ಸ್ತುತಿತಂ ಪಿಕಾದಿ ಪಕ್ಷಿ ಪರಿಪೋಷಕಂ…
ಅನುರಾಗೇಣಭಜಾಮಿ ರಾಮಚಂದ್ರಂ ಅಸುರಾರಿ ಸೀತಾಪತಿಂ
…ಸಾಂಬಶಿವ ತನುಜಾ, ರಜತ ಗಿರಿ
ಶಾಂಭವೀ…….

ಮುಖ ಕೈ ಕಾಲು ತೊಳೆದು, ಕಾಫಿ ಕುಡಿದು, ‘ಸ್ವಲ್ಪ ಮಲಗ್ತೀನಿ’ ಅಂತ ರೂಮಿಗೆ ಹೋಗಿ ಹಾಸಿಗೆಯ ಕಡೆಗೆ ಟೇಬಲ್ ಫ್ಯಾನ್ ತಿರುಗಿಸಿ, ಅದು ಅತ್ತಿತ್ತ ಚಲಿಸದಂತೆ ಒಂದು ದಿಕ್ಕಿಗೆ ಮಾತ್ರ ಗಾಳಿ ಕೊಡುವಂತೆ ನಿರ್ಬಂಧಿಸಿ, ಮಂಚದ ಮೇಲೆ ಹೊರಳಿಕೊಂಡ. ಇದು ತಗ್ಗಾದ ಶೀಟಿನ ಮನೆ ಆಗಿರದಿದ್ದರೆ ಇಷ್ಟು ಶೆಖೆಯಿರುತ್ತಿರಲಿಲ್ಲ… ಮೇಲಾಗಿ ಸೀಲಿಂಗ್ ಫ್ಯಾನ್ ಹಾಕಿಸಬಹುದಾಗಿತ್ತು ಎನ್ನಿಸಿತು. ಅದಿರಲಿ… ಎಲ್ಲಿ ತರುವುದು ಈಗ… ಎಂದುಕೊಂಡು ಕಣ್ಣು ಮುಚ್ಚಿದ.

…. ಶಾಂಭವೀ ಮನೋಹರ, ಧರಧರಾ… ಪರಾನರಾ… ಶ್ರೀ ಸಾಂಬಶಿವಾ…

ಕಣ್ಣು ಎಷ್ಟೇ ಗಟ್ಟಿಯಾಗಿ ಮುಚ್ಚಿದರೂ ಕಿವಿಗೇ ಬಾಯಿಟ್ಟು ಯಾರೋ ಹಾಡುತ್ತಿರುವ ಹಾಗೆ…! ಮತ್ತೆ ಮತ್ತೆ… ಅದೇ ಗದ್ದಲ… ಚಪ್ಪಾಳೆ…! ಹೇಗೆ ಮೆರೆದದ್ದು ಒಂದು ಕಾಲದಲ್ಲಿ..!?

ಬೆಳಗಿನ ಉರಿಬಿಸಿಲ ತಾಪದ ಕಾರಣದೊಂದಿಗೆ, ವಯಸ್ಸಿನ ಕಾರಣವೂ ಸೇರಿಕೊಂಡು ಸಂಜೆಯ ವೇಳೆಗೆ ಸಣ್ಣಗೆ ಜ್ವರ ಕಾಣಿಸಿಕೊಂಡಿತು. ಹಾಸಿಗೆಯಲ್ಲಿ ಸಂಕಟದಿಂದ ಹೊರಳಾಡುತ್ತಿರುವಾಗ, ಹೊರಗೆ ಹೆಂಡತಿಯ ದೈನ್ಯವಾದ ಮಾತುಗಳ ಕೊನೆಗೆ, ‘ಅದಕ್ಕೇ ಅನ್ನೋದು ನಾಟಕದವರಿಗೆ ಮನೆ ಬಾಡಿಗೆಗೆ ಕೊಡಬಾರ್ದು ಅಂತ’ ಎಂಬ ಮನೆ ಮಾಲೀಕಳು ಬೈದುಕೊಂಡು ಹೋದದ್ದು ಕಿವಿಗೆ ಬಿದ್ದು ಕಸಿವಿಸಿಯಾಯಿತು.

ಒಳಗೆ ಬಂದ ಗಂಗಮ್ಮ ಆ ಕುರಿತು ಏನೊಂದೂ ಮಾತಾಡದೆ, ‘ಈಗ ಮಾಡಿ ಮುಚ್ಚಿಟ್ಟಿದೀನಿ… ಅನ್ನ, ತಿಳಿಸಾರು. ಕಲೆಸಿಕೊಡ್ಲಾ? ಹ್ಞಾಂ?’ ಎಂದು ಕೇಳಿದಳು. ಇವನು ‘ಸ್ವಲ್ಪ’ ಎಂದು ಕೈ ಮಾಡಿ ತೋರಿಸಿದ. ಅವಳು ‘ಈಗ ಬಂದೆ’ ಎಂದು ಅಡುಗೆ ಕೋಣೆಗೆ ಹೋದಳು. ರಂಗಣ್ಣ ಎದ್ದು ಸೂರು ನೋಡುತ್ತಾ ಕುಳಿತ. ನಾಟಕದವರಿಗೆ ಮನೆ ಬಾಡಿಗೆಗೆ ಕೊಡಬಾರದಂತೆ! ಹೇಗೆ ಕಿರುಚಾಡಿ, ವಟಾರ ಒಂದು ಮಾಡಿ..! ಛೆ! ನಾಲ್ಕು ತಿಂಗಳ ಬಾಕಿ! ಇನ್ನೇನು ಐದನೇ ತಿಂಗಳೂ ಬಂತು! ಇನ್ನು ಮೂರು ನಾಲ್ಕು ದಿನಗಳಲ್ಲಿ ಹ್ಯಾಗೆ ಹೊಂದಿಸೋದು!? ನಾಟಕದವರಿಗೆ ಮನೆ ಬಾಡಿಗೆಗೆ…..

ಎರಡು ನಿಮಿಷದಲ್ಲಿ ಗಂಗಮ್ಮ ಅನ್ನ ಕಲಸಿದ ಬಟ್ಟಲನ್ನು ತಂದು ಚಮಚ ಹಾಕಿ ಕೊಟ್ಟಳು. ರಂಗಣ್ಣ ನಾಲ್ಕು ಚಮಚ ತಿಂದು ‘ಸಾಕು’ ಎಂದು ಬಟ್ಟಲನ್ನು ಕೆಳಗಿಟ್ಟ. ಗಂಗಮ್ಮ ಅದನ್ನು ಮರುಮಾತಿಲ್ಲದೆ ಒಳಗೆ ತೆಗೆದುಕೊಂಡು ಹೋಗಿ ತೊಳೆದಿಟ್ಟು ಬಂದು ಕೋಣೆಯಲ್ಲಿ ಹಾಸಿಗೆಯನ್ನು ಸರಿಪಡಿಸಿ, ‘ಮಲ್ಕೊಳಿ ಇನ್ನೂ ಸ್ವಲ್ಪ ಹೊತ್ತು, ಬಳಲಿದ್ದೀರ’ ಎಂದಳು. ಮಲಗಲು ಅನುವಾದ. ಅವನಿಗೆ ಹೊದ್ದಿಸುವಾಗ, ಅವಳ ಕೈ ಹಿಡಿದುಕೊಂಡು, ‘ಓನರಮ್ಮ ನೋಡು ಎಲ್ಲರ ಮುಂದೆ ಎಂಥಾ ಮಾತಾಡಿದ್ಲು..?  ನಾಟಕದವರು ಅಂದ್ರೆ ಅಷ್ಟು ಕಡೇನಾ?’ ಎಂದು ತೊದಲಿದ.

‘ಆ ಹೆಂಗಸಿನ ಮಾತನ್ನ ತಲೆಗೆ ಹಚ್ಕೊಂಡು ಕೊರಗ್ಬೇಡಿ. ಬಾಡಿಗೆ ದುಡ್ಡು ಕೊಟ್ಟರೆ ಸುಮ್ಮನೆ ಆಗ್ತಾಳೆ. ಅದಕ್ಕೆ ಇನ್ನು ಮೂರು ನಾಲ್ಕು ದಿವಸದಲ್ಲಿ ಏನಾದ್ರೂ ಏರ್ಪಾಡು ಮಾಡೋಣ. ಅವಳು ನಿಜಕ್ಕೂ ಕಲೆಯ ಗಂಧ ಗಾಳಿ ಇಲ್ಲದೇ ಇರೋಳು. ಬಿಡಿ… ಈಗ ನೀನು ನೆಮ್ಮದಿಯಾಗಿ ಕಣ್ಣು ಮುಚ್ಚಿ ಮಲಗಿ… ಜ್ವರ ಇಳೀಲಿ… ಮತ್ತೆ ಕೆಲ ದಿವಸ ಬಿಸಿಲಿಗೆ ಹೋಗಬೇಡಿ. ಇವತ್ತು ಬಿಸಿಲಿನಲ್ಲಿ ನಿಂತೇ ನಿಮಗೆ ಜ್ವರ ಬಂದಿರೋದು…’ ಎಂದು ಸಮಾಧಾನಪಡಿಸಿ ಹೋದಳು. ರಂಗಣ್ಣ ಕಣ್ಣು ಮುಚ್ಚಿ ಮಲಗಿದ.

…ಡಂಗಡಂಗಡಂಗುಚುಕ್ಕಿ ಅಂತ ತಮಟೆಯವನು ಬಾರಿಸಿಕೊಂಡು ಮುಂದೆ ಹೋಗ್ತಾ ಇದ್ರೆ, ಅವನ ಹಿಂದೆ ಗೋವಿಂದ. ..ಗೋವಿಂದನ ಹಿಂದೆ ನಾನು. ನಾಲ್ಕು ದಾರಿಗಳು ಸೇರೋ ಕಡೆ, ಸಣ್ಣ ಮೈದಾನದಂತಹ ಜಾಗದಲ್ಲಿ ಗೋವಿಂದ ಜೋರಾಗಿ ಸೀಟಿ ಊದಿದ. ತಮಟೆಯ ಸದ್ದು ನಿಂತಿತು. ಅಷ್ಟರಲ್ಲಾಗಲೇ ತಮಟೆ ಸದ್ದಿಗೆ ಕುತೂಹಲದಿಂದ ಜನ ಏನ್ ದಿಬಿದಿಬಿ ಅಂತ… ಸುತ್ತ ಕಿಕ್ಕಿರಿದು ನಿಂತರು… ಕೆಲವರು ಒಳಗಿದ್ರೂ ಅವರ ಕಿವಿ ಮಾತ್ರ ಬಾಗಿಲಿನ ಆಚೆಗಿನ ಸದ್ದಿನ ಮೇಲೇ ಅಲ್ಲವ? ಮೊದಲನೇ ಸಲ ಇಂತಹ ಜಾತ್ರೆ ನೋಡ್ತಾ ನನಗೂ ಒಂದು ಥರ ಸಡಗರ! ಎರಡು ಮೂರು ಬಾರಿ ಸೀಟಿ ಹಾಕಿ ಮುಗಿಸಿದ ಗೋವಿಂದ ಗಟ್ಟಿಯಾಗಿ ಕೂಗ್ತಾ, ‘ಕೇಳ್ರಪ್ಪೋ ಕೇಳ್ರಿ.. ಈ ದಿನ ರಾತ್ರಿ ಹತ್ತು ಘಂಟೆಗೆ ಗರುಡಪ್ಪ ನಾಟಕ ಕಂಪನಿಯವರು ಈ ಊರಿನ ಸಂತೆ ಮೈದಾನದಲ್ಲಿ ಹಾಕಿರುವ ಡೇರಾದಲ್ಲಿ ಸುಭದ್ರಾ ಕಲ್ಯಾಣ ನಾಟಕ ಆಡ್ತಾರೆ. ಟಿಕೇಟು ದರ… ಕುರ್ಚಿ ಎರಡ್ರುಪಾಯಿ, ಬೆಂಚು ಒಂದ್ರುಪಾಯಿ, ಚಾಪೆ ಎಂಟಾಣೆ, ನೆಲ ನಾಲ್ಕಾಣೆ.. ಹೆಂಗಸರಿಗೆ ಬೇರೆ ಸ್ಥಳ ಏರ್ಪಾಟು ಮಾಡಿದಾರಪ್ಪೋ…’ ಎಂದು ಹೇಳಿ ಮತ್ತೆ ಜೋರಾಗಿ ಸೀಟಿ ಊದಿದ. ಆ ಸೀಟಿಯ ಸಂಜ್ಞೆಗೆ ಓಗೊಟ್ಟು ತಮಟೆಯವನ ಸದ್ದು ಪುನಃ ಆರಂಭ… ‘ನಡಿಯೋ ರಂಗ’ ಅಂತ ಹಿಂದೆ ನಿಂತಿದ್ದ ನನ್ನನ್ನ ಹೊರಡಿಸಿಕೊಂಡು ಕೈ ಹಿಡಿದು, ತಮಟೆಯ ಹುಡುಗನನ್ನ ಮುಂದೆ ಬಿಟ್ಟುಕೊಂಡು ನಡೆಯತೊಡಗಿದ. ಜನರೆಲ್ಲ ಗುಜುಗುಜು ಮಾತಾಡಿಕೊಂಡು ಹೋದರು. ಕೆಲವರು ತಮಟೆಯವನೊಂದಿಗೆ ನಾವು ಮರೆಯಾಗುವವರೆಗೂ ನಿಂತು ನೋಡ್ತಾ ಇದ್ದರು. ಎಲ್ಲರ ಮುಖದಲ್ಲಿಯೂ ನಗೆಯ ಹೊಳಪು… ನನಗೋ ಹಿಗ್ಗು… ಮನಸ್ಸುಗಳನ್ನ ಅರಳಿಸೋದು ನಾಟಕ ಅಂದ್ರೆ! ಅಂತಹ ನಾಟಕಾನ ಅವಹೇಳನ ಮಾಡಬಹುದಾ?

…ಹಾಗೇ ಅಲ್ಲಲ್ಲಿ ಜನರನ್ನ ಸೇರಿಸಿ ಕೂಗಿ ಘೋಷಿಸಿ ಊರ ಮೈದಾನದ ಡೇರಾಗೆ ತಲುಪಿದ್ವು. ಇದು ನಾನು ನಾಟಕದ ಕಂಪನಿ ಸೇರಿದ ಮೊದಲ ಸಂಭ್ರಮ! ಕಂಪನಿಯ ಕೆಲಸಗಾರರು ಪ್ರೇಕ್ಷಕರು ಕೂರೋ ಜಾಗವನ್ನ ಗುಡಿಸಿ ಸ್ವಚ್ಛ ಮಾಡ್ತಾ ಇದ್ದರು. ನಾವು ಅಂಕದ ಪರದೆಯ ಹಿಂಭಾಗ ಹೋದೆವು. ಹೋಗುತ್ತಲೇ ಮೂಲೆಯೊಂದರಲ್ಲಿ ಕೂತಿದ್ದ ಅಮ್ಮ, ‘ಬಂದ್ಯಾ ಕಂದಾ’ ಅಂತ ಬಾಚಿ ತಬ್ಬಿಕೊಂಡು ಮುತ್ತಿಟ್ಟಳು. ಅವಳ ಕಣ್ಣುಗಳು ನನ್ನನ್ನ ಕಂಡೊಡನೆ ತುಂಬಿಕೊಂಡು ತೇವವಾಗಿತ್ತು.

‘ಎಲ್ಲಿಗೆ ಕರ್ಕೊಂಡು ಹೋಗಿದ್ರು?’ ಅಂತ ಮೆಲ್ಲನೆ ಪಿಸುಗುಟ್ಟೋ ದನಿಯಲ್ಲಿ ಕೇಳಿದಳು.

‘ಊರ್ ಸುತ್ತಾ’ ಅಂತ ನಾನೂ ಅದೇ ರೀತಿ ದನಿ ತಗ್ಗಿಸಿಯೇ ಉತ್ತರ ಕೊಟ್ಟೆ.

ಅಮ್ಮನಿಂದ ತುಸು ದೂರದಲ್ಲಿ ಸ್ಟೂಲಿನ ಮೇಲೆ ಕೂತಿದ್ದ ಶಂಕರಮಾವ ಮಾಲೀಕರಾದ ಮಲ್ಲಪ್ಪನವರಿಗೆ ಹೇಳ್ತಾ ಇದ್ದರು, ‘ಹುಡುಗನಿಗೆ ಐದು ವರ್ಷ ಇನ್ನು. ಆದ್ರೆ ತುಂಬಾ ಚುರುಕು. ಬೇಗ ಕೆಲಸ ಕಲೀತಾನೆ. ಸಾಲದ್ದಕ್ಕೆ ಈ ಕುಣಿತಗಿಣಿತ ಅಂದ್ರೆ ಬಾಳಾ ಇಷ್ಟ…’

ತಕ್ಷಣವೇ ಮಲ್ಲಪ್ಪನವರು ನನ್ನ ಕಡೆ ತಿರುಗಿ ಕೇಳಿದ್ರು, ‘ಏನಪ್ಪಾ ಹುಡ್ಗಾ, ಹೇಗಿತ್ತು ತಿರುಗಾಟ?’

‘ಚೆನ್ನಾಗಿತ್ತು’

‘ರಂಗ ಅಂತ ಅಲ್ವೆ ನಿನ್ನ ಹೆಸರು?’

‘ಹುಂ..’

‘ಕಾಲು ನೋವೇನೂ ಬರಲಿಲ್ಲವೋ?’

‘ಊಹುಂ..’

‘ಈಗ ಹೊಸತು. ಮುಂದೆ ನೋಡೋವಂತೆ’ ಎಂದು ನಕ್ಕು ಮಾವನಿಗೆ, ’ಅಲ್ಲಾ., ಹುಡ್ಗ ಇನ್ನೂ ಸಣ್ಣವನು. ಆಗ್ಲೇ ತಿಂಗಳಿಗೆ ಇಪ್ಪತ್ತು ರೂಪಾಯಿ ಅಂದ್ರೆ?’ ಅಂದರು.

ಅದಕ್ಕೆ ಶಂಕರಮಾವ ‘ಅಯ್ಯೋ ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅಂತ ತಿಳೀಬೇಕಾದ್ರೆ ಅವನ ಹತ್ರ ಒಂದ್ ಪದ ಹಾಡ್ಸಿ ನೋಡಿ. ಯಾಕೆ ಸುಮ್ನೆ..? ನಾನೇ ನಮ್ಮ ಹುಡ್ಗನ ಬಗ್ಗೆ ಹಾಗೆಲ್ಲ ಹೇಳಬಾರ್ದು. ತಾಳಿ ಸ್ವಲ್ಪ… ಲೇ ರಂಗಣ್ಣ, ಗುಂಡ ಅತ್ತೆ ಊರಿಗ್ ಹೋದ ಹಾಡ್ನ ಹಾಗನ್ನು’ ಅಂದು, ‘ಬಾ ಇಲ್ಲಿ… ಯಜಮಾನ್ರ ಮುಂದೆ ನಿಂತ್ಕೊಂಡ್ ಹಾಡು’ ಎಂದು ತಾವೇ ಎಳೆದು ನಿಲ್ಲಿಸಿದರು.

ಮಲ್ಲಪ್ಪನವರು ಕೇಳಲು ಆಸಕ್ತಿಯಿಂದ ಕುಳಿತುಕೊಂಡಂತೆ ಅಲ್ಲಲ್ಲಿ ಕುಳಿತು ರಾತ್ರಿಯ ನಾಟಕಕ್ಕೆ ಅಲಂಕಾರ ಮಾಡಿಕೊಳ್ಳುತ್ತಿದ್ದ ಕಲಾವಿದರು, ಸ್ವತಃ ಅಮ್ಮ, ಶಂಕರ ಮಾವ ಕೂಡಾ ಕೇಳೋಕ್ಕೆ ಅವರಂತೆ ಉತ್ಸುಕರಾಗಿ ಕೂತರು.

ನಾನು ನಡುವೆ ನಿಂತು ಹಾವಭಾವ ಮಾಡುತ್ತ,

ಗುಂಡ ಅತ್ತೆ ಊರಿಗ್ ಹೋದ

ಚಿಗಳಿ ಉಂಡೆ ಅಂದುಕೊಂಡು

ಸಗಣಿ ಉಂಡೆ ತಿಂದ…

ಗುಂಡ ಅತ್ತೆ ಊರಿಗ್ ಹೋದ…

ಅಂತ ಹಾಡತೊಡಗಿದೆ. ಎಲ್ಲರೂ ಹರ್ಷದಿಂದ ತಲೆದೂಗಿ ಚಪ್ಪಾಳೆ ತಟ್ಟಿದರು. ಮಲ್ಲಪ್ಪನವರಿಗೂ ಹಿಡಿಸಿತು.

‘ಆ ಕಲಾಸರಸ್ವತಿ ನಿನಗೆ ಒಲಿದಿದಾಳೆ ಕಣೋ ಮರಿ. ಬಾರೋ ಇಲ್ಲಿ’ ಎಂದು ಹತ್ತಿರ ಕರೆದರು.

ಅವರ ಹತ್ತಿರ ಹೋಗುತ್ತಿದ್ದಂತೆ ಅಮ್ಮ ‘ನಮಸ್ಕಾರ ಮಾಡು’ ಅಂದದ್ದು ಕಿವಿಗೆ ಬಿತ್ತು. ನಮಸ್ಕಾರ ಮಾಡಿದೆ.

‘ನಮ್ಮ ಕಂಪನಿ ಸೇರೋಕ್ಕಾಗಿಯೇ ತಯಾರಾಗಿ ಬಂದ್ಯೋ ಹೆಂಗೆ? ಆ್ಞಂ..? ಒಳ್ಳೇದು ಒಳ್ಳೇದು…’ ಎಂದು ಆಶೀರ್ವದಿಸಿ, ಆಲಂಗಿಸಿಕೊಂಡು ಜೇಬಿನಿಂದ ಒಂದು ರೂಪಾಯಿ ನೋಟು ತೆಗೆದು ಕೈಲಿಟ್ಟರು. ನಾನು ತಕ್ಷಣ ಅದನ್ನ ಅಮ್ಮನಿಗೆ ಕೊಂಡೊಯ್ದು ಕೊಟ್ಟೆ.

ಆ ಹಾಡಿಗಿಂತ ಹೆಚ್ಚಿನ ಮೆಚ್ಚುಗೆಯನ್ನ ಎಲ್ಲರೂ ಈ ಕ್ರಿಯೆಗೆ ತೋರಿದರು ಅಂತ ಅಸ್ಪಷ್ಟ ನೆನಪು. ಹಿಂದೆ ಯಾರೋ ನಟರು ‘ಭೇಷ್ ಮಗನೇ’ ಅಂದದ್ದೂ ಕಿವಿಗೆ ಬಿತ್ತು.

‘ನನ್ನ ತಂಗೀಗೆ ಇವನೇ ಆಧಾರ. ಗಂಡ, ವರ್ಷದ ಹಿಂದೆ ಚುಂಚಪ್ಪ ಬೆಟ್ಟದ ಇಳಿಜಾರಿನಲ್ಲಿ ನಡ್ಕೊಂಡು ಬರುವಾಗ ಮರ ಉರುಳಿ ಮೇಲೆ ಬಿದ್ದು ತೀರ್ಕೊಂಡುಬಿಟ್ಟ. ಆಗಲಿಂದ ಜೀವನಕ್ಕೆ ಅವರಿವರ ಮನೇಲಿ ಹಿಟ್ಟು ಬೀಸ್ಕೊಂಡು, ಮೆಣಸಿನಪುಡಿ ಕುಟ್ಟಿಕೊಂಡು ಜೀವನ ಮಾಡ್ತಿದಾಳೆ. ಇವನಲ್ದೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಣ್ಣಸಣ್ಣವು. ನನಗೆ ನನ್ನ ಕುಟುಂಬವೇ ದೊಡ್ಡದು. ಕಡೇಪಕ್ಷ ಅವಳ ಮಗನಿಗಾದ್ರೂ ಇಂಥಾ ಒಂದು ಜಾಗಕ್ಕೆ ಸೇರ್ಸಿ ಉಪಕಾರ ಮಾಡೋಣ ಅಂತ ಕರ್ಕೊಂಡು ಬಂದೆ. ಹುಡುಗನಿಗೆ ಕೆಲಸ ಕಲ್ಸಿ, ಒಬ್ಬ ಕಲಾವಿದನ ಹಾಗೆ ಬೆಳೆಸಿಕೊಳ್ಳಿ ನಿಮ್ಮ ಕಂಪನೀಲಿ. ತಿಂಗಳಿಗೆ ಒಂದು ಇಪ್ಪತ್ತುರುಪಾಯಿ ಸಂಬಳ ಅವನ ತಾಯಿಗೆ ತಲುಪಿಸಿಬಿಡಿ. ಅಷ್ಟೇ ನಾನು ಕೇಳ್ಕೊಳೋದು’ ಎಂದು ಮಾವ ಕೈಮುಗಿದರು.

‘ಆಯ್ತು ಬಿಡಿ ಶಂಕರಪ್ಪ. ಕೊಡೋಣ. ನೀವು ಇಷ್ಟು ಹೇಳಿದ ಮೇಲೆ ಇಲ್ಲ ಅನ್ನೋಕ್ಕಾಗುತ್ತಾ?’ ಎಂದು ಮಲ್ಲಪ್ಪನವರೂ ಒಪ್ಪಿಕೊಂಡರು.

ನಾನು ಬಣ್ಣ ಹಚ್ತಾ, ಮೊಳೆ ಹೊಡೀತಾ, ಲೈಟು ಕಟ್ತಾ ಬೆಳೆಯತೊಡಗಿದೆ. ಹರಿದ ಒಳ ಅಂಗಿಯ ಮೇಲೆ ರಾಜಕುಮಾರನ ಗರಿಗರಿ ಉಡುಪು..! ತಲ್ಲಣಗಳಲ್ಲಿ ಕುಸಿಯುವ ಮನಸ್ಸನ್ನು ಮೀರಿ ಹೊರಗೆ ಹಾಸ್ಯೋತ್ಸಾಹದ ಸಂಭಾಷಣೆಗಳ ಹೊನಲು..! ಒಮ್ಮೊಮ್ಮೆ ಇದು ತಿರುಗುಮುರುಗೂ ಆಗುವುದುಂಟು..! ನಾಟಕವಲ್ಲವೇ..!? ಎಷ್ಟೋ ಬಾರಿ ನಾನು ವಾಸ್ತವ ಸಂಗತಿಗಳಿಗೆ ಪ್ರತಿಕ್ರಿಯಿಸಿದರೆ, ಅದು ದಿಟವಾ ಅಥವಾ ನಾಟಕ ಆಡುತ್ತಿದ್ದೇನೆಯಾ ಅಂತ ನನಗೇ ಗುಮಾನಿ ಅನ್ನಿಸುವಷ್ಟು ಅಭಿನಯ ಕಲೆ ನನಗೆ ಒಲಿಯಿತು. ನಡೆಯುತ್ತಿದ್ದವನಿಗೆ ಸೈಕಲ್ ಬಂತು. ಸೈಕಲ್ ಹೋಗಿ ಸ್ಕೂಟರ್ ಬಂತು. ಕೇವಲ ನಾಟಕಗಳಲ್ಲಿ ಮಾತ್ರ ಅಭಿನಯಿಸುತ್ತಿದ್ದವನಿಗೆ ಬೆಳ್ಳಿತೆರೆಯ ಮೇಲೆ ಮಿಂಚುವ ಯೋಗ ಲಭಿಸಿತು. ಆ ನಂತರ ಕಾರು ಬಂತು. ಜೊತೆಗೆ ಸ್ವಲ್ಪ ಮದ ಅಹಂಕಾರವೂ…!

ನಾಟಕಗಳಲ್ಲಿ ಬಾಲನಟನಾಗಿ ಅಭಿನಯಿಸುತ್ತಿದ್ದ ನನಗೆ ನಯವಾದ ಚಿಗುರು ಮೀಸೆ ಬರಲು ಆರಂಭಿಸಿದಾಗ, ಮಲ್ಲಪ್ಪನವರು ಅದನ್ನು ಬೋಳಿಸಿ, ಲಂಗ ದಾವಣಿಗಳನ್ನು ಉಡಿಸಿ, ರಾಣಿಯ ಸಖಿಯರ ಗುಂಪಿನಲ್ಲಿ ಒಬ್ಬಳಂತೆ ನಿಲ್ಲಿಸಲು ಆರಂಭಿಸಿದರು. ನಾನೆಷ್ಟು ಅತ್ತು ಕೆಡವಿದ್ದೆನೋ ಆ ದಿನಗಳಲ್ಲಿ..! ಬಾಲನಟನಾಗಿ ಜನರ ಚಪ್ಪಾಳೆ ಗಳಿಸುತ್ತಿದ್ದವನಿಗೆ, ಮೀಸೆ ಬೋಳಿಸಿ ಹೆಣ್ಣು ವೇಷ ತೊಡಿಸಿ ಗುಂಪಿನಲ್ಲಿ ಒಬ್ಬಳಾಗಿ ನಿಲ್ಲಿಸಿದರೆ ಹೇಗೆ ತಡೆಯುವುದು..? ಅಭಿನಯ ಚಾತುರ್ಯವಿದ್ದರೇನು…? ದನಿ ಒಡೆದು ಗಂಟಲಿನಿಂದ ಹೊರಡುವ ಸ್ವರ ಗಡುಸಾಗಿ…! ವಿಚಿತ್ರ ಕರ್ಕಶದ ನನ್ನ ದನಿಯನ್ನು ಕೇಳಲು ನನಗೇ ಕಷ್ಟವೆನಿಸಿದರೆ ಇನ್ನು ಉಳಿದವರ ಪಾಡೇನು..? ಅಂತೂ ಇಂತೂ ಏಳೆಂಟು ತಿಂಗಳ ಒಳಗೆ ಸತತ ಪರಿಶ್ರಮದ ಫಲವಾಗಿ ಆ ಕರ್ಕಶದ ದನಿಯನ್ನು ಸ್ವಲ್ಪ ಮಟ್ಟಿಗೆ ಮಾಧುರ್ಯಗೊಳಿಸಿಕೊಂಡೆ. ಆ ನಂತರ ದ್ರೌಪದಿ, ಸುಭದ್ರೆ, ಸೀತೆಯರೆಲ್ಲ ನಾನೇ…! ಎಷ್ಟೋ ವರ್ಷಗಳ ಕಾಲ ಖಾಯಂ ಆಗಿ ಹೆಣ್ಣು ಪಾತ್ರಗಳನ್ನೇ ಮಾಡುತ್ತಾ ಬಂದೆನಲ್ಲ..? ನನ್ನ ಸುಕುಮಾರವಾಗಿದ್ದ ಶರೀರಕ್ಕೆ, ಮುಖ ಲಕ್ಷಣಕ್ಕೆ ಹೆಣ್ಣು ಪಾತ್ರಗಳೇ ಒಪ್ಪುತ್ತಿದ್ದುದು. ಹೀಗೇ ಒಮ್ಮೆ ಸಾಮಾಜಿಕ ನಾಟಕವೊಂದನ್ನು ತೆಗೆದುಕೊಂಡು ಅದರಲ್ಲಿ ಗೃಹಸ್ಥನ ಗಂಡು ಪಾತ್ರ ಮಾಡಬೇಕಾದ ಅನಿವಾರ್ಯತೆ ಬಂತು! ಆ ಪಾತ್ರವನ್ನು ಎಲ್ಲರೂ ಬಹಳವಾಗಿ ಮೆಚ್ಚಿಕೊಂಡರು. ಅದರ ನಂತರ ದೆಶೆ ಬೇರೆಯ ರೀತಿ ತಿರುಗಿತು… ನಾಜೂಕಿನ ಗಂಡು ಪಾತ್ರಗಳು…! ನನಗೆ ಗಡುಸಿನ ಪಾತ್ರ ಮಾಡೋಕ್ಕೆ ಸಾಧ್ಯವಿಲ್ಲವೇ ಎನ್ನುವ ಸವಾಲಿನೊಂದಿಗೆ ನಾನೇ ಸೂರಪ್ಪನವರಿಗೆ ಹೇಳಿ ಅಂತಹ ವೀರ, ಶೂರನ ಪಾತ್ರ ಬರೆಸಿದೆ. ಆ ವೇಳೆಗಾಗಲೇ ಮಲ್ಲಪ್ಪನವರು ನನ್ನ ಮಾತನ್ನು ಕೇಳುವಷ್ಟು ನನ್ನ ಬಗೆಗೆ ನಂಬಿಕೆ, ವಿಶ್ವಾಸಗಳನ್ನ ಹೊಂದಿದ್ದರು. ವೀರಸೇನ ಮಾಚಪ್ಪನ ಪಾತ್ರದಲ್ಲಿ ಮಿಂಚಿಬಿಟ್ಟೆ! ಆ ತರುವಾಯ ಯಾವುದೇ ಪಾತ್ರಕ್ಕೂ ಸೈ ಎನಿಸಿಕೊಂಡು, ಇಂತಹುದೇ ಅಂತ ಇಲ್ಲದೆ, ವೈವಿಧ್ಯತೆಗಾಗಿ ನಾನೇ ಭಿನ್ನ ಭಿನ್ನ ಆಯ್ಕೆಯ ಪಾತ್ರಗಳಲ್ಲಿ ಅಭಿನಯಿಸತೊಡಗಿದೆ. ನಾಟಕದಲ್ಲಿ ನನ್ನ ಪಾತ್ರ ಯಾವುದೆಂದು ತಿಳಿದುಕೊಂಡು ಜನ ಉತ್ಸಾಹದಿಂದ ನೋಡಲು ಬರುತ್ತಿದ್ದರು. ಆ ಸಿಲ್ಲೆ… ಚಪ್ಪಾಳೆ… ಒನ್ಸ್ ಮೋರ್ ಕೂಗುಗಳು… ಈಗಲೂ ಕಿವಿಯಲ್ಲಿ ಗುಯ್ ಗುಟ್ಟುತ್ತವೆ..! ನಾಟಕದ ನಶೆ ಯಾವ ಹೆಂಡ ಸಾರಾಯಿಗೂ ಇಲ್ಲ..!

ಆ ವೇಳೆಗಾಗಲೇ ಇಬ್ಬರು ತಂಗಿಯರಿಗೆ ಮದುವೆ ಮಾಡಿ, ಸ್ವಂತ ಮನೆ ಕಟ್ಟಿಸಿಕೊಂಡು, ಇವಳನ್ನು ಗಂಟು ಹಾಕಿಕೊಂಡು ಸೆಟೆಲ್ ಆಗಿದ್ದೆ. ಆಗ ನಮ್ಮ ಕಾರ್ತೀಕ ಹುಟ್ಟಿದ್ದ… ಅವನಿಗೆ ಎರಡು ವರ್ಷ ಇದ್ದಿರಬಹುದು… ಲಕ್ಷ್ಮಿ ಇನ್ನೂ ಹುಟ್ಟಿರಲಿಲ್ಲ. ಇವಳು ಬಸುರಿಯಾಗಿದ್ದಳು ಹೌದು..! ಲಕ್ಷ್ಮಿ ಇನ್ನೂ ತನ್ನ ತಾಯಿ ಹೊಟ್ಟೆಯಲ್ಲಿದ್ದಳು. ನಾಟಕ ನೋಡೋಕ್ಕೆ ಬಂದಿದ್ದ ಶ್ರೀಗುರು ಸಿನಿಮಾ ಕಂಪನಿಯವರು ನನ್ನ ಪಾತ್ರವನ್ನ ಮೆಚ್ಚಿ, ಮಾರನೆಯ ದಿನ ಫೋನು ಮಾಡಿ ನನ್ನನ್ನು ಅವರ ಸ್ಟುಡಿಯೋಗೆ ಕರೆಸಿಕೊಂಡು ‘ಗುಡಿಗೋಪುರ’ ಸಿನಿಮಾದ ಅನಿಲನ ಪಾತ್ರಕ್ಕೆ ಸ್ಕ್ರೀನ್ ಟೆಸ್ಟ್ ಮಾಡಿಸಿ ನೋಡಿ. ಆ ದಿನವೇ ಕೈಗೆ ಅಡ್ವಾನ್ಸ್ ತುರುಕಿ ಕಳಿಸಿದರು! ಮಲ್ಲಪ್ಪನವರಿಗೆ ಇವನು ಇನ್ನು ಸಿನಿಮಾ ರಂಗದಲ್ಲಿ ಬ್ಯುಸಿ ಆಗಿಬಿಟ್ಟರೆ, ನಾಟಕದ ಕಂಪನಿಯ ಗತಿಯೇನು ಅಂತ! ನಾನು ನಾಟಕದ ಕಂಪನಿಯನ್ನ ಪೂರ್ತಿ ಬಿಡುವುದಿಲ್ಲ, ಎರಡನ್ನೂ ನಿಭಾಯಿಸುತ್ತೇನೆ ಅಂತ ಭರವಸೆ ಕೊಟ್ಟೆ. ಆದರೆ ಸಿನಿಮಾ ಕ್ಷೇತ್ರ ನನ್ನನ್ನು ಹೇಗೆ ಸೆಳೆದುಕೊಂಡು ಬಿಟ್ಟಿತು ಎಂದರೆ, ಇಲ್ಲೊಂದು ಕಾಲು ಅಲ್ಲೊಂದು ಕಾಲು ಸಾಧ್ಯವೇ ಇಲ್ಲ ಅಂತ ನನಗೇ ಅತಿ ಕಡಿಮೆ ಅವಧಿಯೊಳಗೇ ಮನವರಿಕೆಯಾಗಿಬಿಟ್ಟಿತು. ಸಹಜವಾಗಿಯೇ ಹೆಚ್ಚು ಆದಾಯ, ಹೆಸರು, ಕೀರ್ತಿಗಳನ್ನು ಕೊಡಬಲ್ಲ ಸಿನಿಮಾ ಕ್ಷೇತ್ರವೇ ನನ್ನ ಆಯ್ಕೆಯಾಯಿತು. ನಾಟಕದ ಕಂಪನಿ ಬಿಟ್ಟೆ.

‘ಗುಡಿಗೋಪುರ’ ಸಿನಿಮಾದಿಂದ ಆರಂಭವಾದ ನನ್ನ ಸಿನಿಮಾ ಪಯಣದ ಹಾದಿಯಲ್ಲಿ, ‘ಒಲವ ಹೂಬನ’ ಸಿನಿಮಾದ ನಂತರ ಹಿಂದಿರುಗಿ ನೋಡಲೇ ಇಲ್ಲ..! ಎಲ್ಲಿಯೂ ಇಳಿಮುಖ ಇಲ್ಲವೇ ಇಲ್ಲ; ಕೇವಲ ಊರ್ಧ್ವಮುಖದ ಬೆಳವಣಿಗೆ! ಮೊದಲ ಸಿನಿಮಾದಲ್ಲಿ ಪಾದಾರ್ಪಣೆ ಮಾಡುವಾಗಲೇ ರಂಗಣ್ಣ ಎನ್ನುವ ನನ್ನ ಹೆಸರು ಬದಲಿಸಿ ‘ಹೇಮಂತ್ ಕುಮಾರ್’ ಅಂತ ನಿರ್ದೇಶಕರು ಕರೆದದ್ದು, ಹಾಗೇ ನಿಂತಿತು. ಎಲ್ಲಿ ಹೋದರೂ ಬಂದರೂ ಈ ಹೇಮಂತ ಕುಮಾರನ ಸುತ್ತ ಜನ ಗುಂಪುಗಟ್ಟಿಕೊಳ್ಳುತ್ತಿದ್ದರು..! ತಮ್ಮ ಮನೆ ಮಠ ಸಂಸ್ಥೆಗಳಿಗೆ ಕರೆದು ಸನ್ಮಾನ, ಉಡುಗೊರೆ… ಹಾರ ತುರಾಯಿ…! ಅದೆಷ್ಟು ಜನ ಎಳೆ ಕಂದಮ್ಮಗಳಿಗೆ ಅವುಗಳ ತಾಯಂದಿರು ಅಭಿಮಾನದಿಂದ ನನ್ನ ಹೆಸರು ಇಟ್ಟು ಕರೆದಿದ್ದಾರೆಯೋ…! ಎಷ್ಟೇ ತಪ್ಪಿಸಿಕೊಳ್ತೀನಿ ಅಂದುರೂನೂ ತಿಂಗಳಿಗೆ ಹತ್ತಾರು ಸಭೆಸಮಾರಂಭಗಳು ಇರುತ್ತಲೇ ಇದ್ದುವಲ್ಲ..!? ಗಂಗಾ ಬೈಯ್ತಾ ಇದ್ದಳು… ‘ಏನೇ ಕೊಡ್ತೀವಿ ಮಾಡ್ತೀವಿ ಅಂದುರೂನು ಇಂತಹ ಸಭೆ ಸಮಾರಂಭಗಳನ್ನ ಒಪ್ಪಿಕೋಬೇಡಿ… ಬಿಡುವಿನ ವೇಳೆಯನ್ನ ಹೆಂಡತಿ ಮಕ್ಕಳ ಜೊತೆಗೆ ಕಳೆಯೋಕ್ಕೆ ಮಾತ್ರ ಮೀಸಲಾಗಿಡಿ…’ ಅಂತ! ‘ಅಯ್ಯೋ ಹುಚ್ಚಿ, ಜನಪ್ರಿಯತೆ ಇದ್ದಾಗ ಇವೆಲ್ಲಾ ಗಳಿಸಿಕೊಂಡು ಬಿಡಬೇಕು… ಆನಂತರ ಮಕ್ಕಳ ಜೊತೆಗೆ ಸಮಯ ಕಳೆಯೋದು ಇದ್ದೇ ಇದೆ…’ ಅಂತಿದ್ದೆ. ನಾನು ಹೆಚ್ಚು ನಿಗ ಕೊಡದಿದ್ದರೂ ಗಂಗಾ ಎಚ್ಚರಿಕೆ ವಹಿಸಿ ಮಕ್ಕಳ ವಿದ್ಯಾಭ್ಯಾಸ ನೋಡಿಕೊಂಡಳು. ಇಬ್ಬರೂ ಚೆನ್ನಾಗಿ ಓದಿದರು. ಕಾರ್ತೀಕ ಡಾಕ್ಟರ್ ಆದ. ಲಕ್ಷ್ಮೀ ವಕೀಲೆ ಆದಳು. ಲಕ್ಷ್ಮಿಗೆ ಕೊಡೋದೆಲ್ಲ ಕೊಟ್ಟು ದೊಡ್ಡ ಮನೆಗೆ ಸೊಸೆ ಮಾಡಿ ಕಳಿಸಿದೆ. ಕಾರ್ತೀಕ ಅಮೇರಿಕಾಕ್ಕೆ ಹೋದ. ಅಲ್ಲೇ ಯಾರನ್ನೋ ಕಟ್ಟಿಕೊಂಡ. ಅವರವರ ಹಾದಿಯಲ್ಲಿ ಮುಂದುವರೆದುಕೊಂಡು ಹೋದದ್ದೇ ಬಂತು… ಈ ಅಪ್ಪಾ ಅವ್ವೆ ಹೇಗಿದ್ದಾರೆ ಅಂತ ತಿರುಗಿ ನೋಡಲಿಲ್ಲ!

ಐವತ್ತರ ಪ್ರಾಯದವರೆಗೂ ನಟಿಸಿದೆ. ಅಲ್ಲಿಯವರೆಗೂ ಎಲ್ಲವೂ ಸುಸೂತ್ರವಾಗಿಯೇ ಇತ್ತು. ಎಂತದ್ದೋ ಅಲರ್ಜಿ ಶುರುವಾಗಿ ಮೈಕೈ ಮುಖವೆಲ್ಲಾ ನವೆ ಶುರುವಾಯಿತು. ಆರಂಭದಲ್ಲಿ ಅದನ್ನ ಉಪೇಕ್ಷೆ ಮಾಡಿದೆ. ಆದರೆ ಬರಬರುತ್ತಾ ಅಲರ್ಜಿಯಾದ ಕಡೆಗಳೆಲ್ಲಾ ಸಣ್ಣ ಸಣ್ಣ ಮಚ್ಚೆಗಳ ಹಾಗೆ ಕಲೆಗಳಂತೆ ನಿಂತುಕೊಳ್ಳತೊಡಗಿತು. ಇಬ್ಬರು ಮೂವರು ನಿರ್ಮಾಪಕರುಗಳು ‘ಮುಖದ ಮೇಲಿನ ಕಲೆಯನ್ನ ಮೇಕಪ್ಪಿನಲ್ಲಿ ಮರೆಸೋಕ್ಕೆ ಆಗೋಲ್ಲ. ಕೆಲ ದಿನಗಳ ಕಾಲ ಚೆನ್ನಾಗಿ ಅದಕ್ಕೆ ಚಿಕಿತ್ಸೆ ತೊಗೊಂಡು ಬನ್ನಿ…’ ಅಂದರು. ನನಗೂ ಅದು ಸರಿ ಅನ್ನಿಸಿತು. ಆದರೆ ಯಾವ ಚಿಕಿತ್ಸೆಯೂ ಫಲ ನೀಡಲಿಲ್ಲ. ಒಂದೊಂದಾಗಿ ಒಪ್ಪಿಕೊಂಡ ಸಿನಿಮಾಗಳೆಲ್ಲ ರದ್ದಾಗ ತೊಡಗಿತು. ಅವರುಗಳಿಂದ ಪಡೆದ ಮುಂಗಡ ಹಣವನ್ನು ಹಿಂದಿರುಗಿಸುವ ಸ್ಥಿತಿ ಒದಗಿತು. ಹೇಗೋ ಹೊಂದಿಸಿ ಮುಂಗಡ ಹಣವನ್ನೆಲ್ಲಾ ಹಿಂದಿರುಗಿಸಿದ್ದಾಯಿತು. ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಸುರಿದದ್ದೂ ಆಯಿತು. ಕೆಲ ಕಾಲ ಕೂತು ಉಂಡದ್ದೂ ಆಯಿತು. ಕೂತು ಉಣ್ಣುವವನಿಗೆ ಕುಡಿಕೆ ಹಣ ಸಾಲದು ಎಂಬ ಮಾತಿದೆಯಲ್ಲ..? ಎಲ್ಲವೂ ತೀರಿಹೋಗಿ, ಒಂದೊಂದಾಗಿ ಮಾರುವ ಗತಿ ಬಂತು. ಕನ್ನಡದ ಸ್ಟಾರ್ ನಟ ಹೇಮಂತ್ ಕುಮಾರ್ ಅವರ ಮಕ್ಕಳು ಅಂತ ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಿದ್ದ ಮಕ್ಕಳಿಗೆ ಈ ಸಾಲಗಾರ ಅಪ್ಪ ಬೇಡವಾದ. ಮಗಳೇನೋ ಇನ್ನೊಂದು ಮನೆಯ ಸೊಸೆ… ಆದರೆ ಮಗನಿಗೇನಾಯಿತು..? ಯಾವುದೋ ತನಗಿಂತ ವಯಸ್ಸಿನಲ್ಲಿ ಹಿರಿಯ ಬಿಳಿಯ ಹೆಂಗಸಿನೊಂದಿಗೆ ಬದುಕುತ್ತಿದ್ದಾನೆ. ಆ ಹೆಂಗಸು ಇವನು ಎಂದಿಗೂ ತಾಯ್ನಾಡಿಗೆ ಹಿಂದಿರುಗಿ ಹೋಗದ ಹಾಗೆ ನಿರ್ಬಂಧಿಸಿದ್ದಾಳೆ. ನಾನೂ ನನ್ನ ಹೆಂಡತಿ ಎಲ್ಲಾ ಮಾರಿಕೊಂಡು ನಿರ್ಗತಿಕರಾದೆವು. ಹೇಮಂತ ಕುಮಾರ್ ಎನ್ನುವ ಹೆಸರನ್ನು ನಾನೇ ಎಲ್ಲಿಯೂ ಹೇಳಿಕೊಳ್ಳದೆ, ನನ್ನ ಹಳೆಯ ರಂಗಣ್ಣನೆನ್ನುವ ಹೆಸರಿನಲ್ಲೇ ವ್ಯವಹರಿಸ ತೊಡಗಿದ. ಅಲ್ಲಲ್ಲಿ ಕಲೆಯಾಗಿರುವುದರೊಂದಿಗೆ, ರೋಗ, ವೃದ್ಧಾಪ್ಯ, ಬವಣೆ ಎಲ್ಲವೂ ಸೇರಿಕೊಂಡು ಯಾರೂ ನಾನು ಹೇಮಂತ್ ಕುಮಾರ್ ಎಂದು ಗುರುತಿಸದಾದರು. ನನಗೂ ಅದೇ ಬೇಕಿತ್ತು. ನನಗೆ ನಟನೆ ಬಿಟ್ಟು ಬೇರೆ ಇನ್ಯಾವ ಉದ್ಯೋಗ ತಿಳಿದಿದೆ..? ಜೂನಿಯರ್ ಆರ್ಟಿಸ್ಟ್‌ಗಳ ಪಟ್ಟಿಯಲ್ಲಿ ಈ ರಂಗಣ್ಣನೂ ಸೇರಿಕೊಂಡ… ಕರೆದಾಗ ಹೋಗೋದು… ಗುಂಪಿನಲ್ಲಿ ಒಬ್ಬನಾಗಿ ನಡೆಯೋದು, ಕೂಗೋದು… ಚೆದುರೋದು… ತಳ್ಳಿಸಿಕೊಂಡು ಬೀಳೋದು… ಹೀಗೆ! ನಾಟಕ ರಂಗದಲ್ಲೂ ಈಗ ಹಿಂದಿನವರು ಯಾರೂ ಇಲ್ಲ, ಹೊಸಬರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆಗೊಂದು ಈಗೊಂದು ಶೋ ನಡೆದರೆ ಹೆಚ್ಚು..! ಈ ಲೋಕ ಎಷ್ಟು ವಿಚಿತ್ರವಾದದ್ದು… ಕಡೆಯಪಕ್ಷ, ಅಷ್ಟೆಲ್ಲಾ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿ, ಚಿತ್ರರಸಿಕರನ್ನು ರಂಜಿಸಿದ ಹೇಮಂತ ಕುಮಾರನೆಂಬುವವನೊಬ್ಬ ಇದ್ದನಲ್ಲಾ… ಅವನೇನಾದ… ಅಂತ ಯಾರೂ ಚಿಂತಿಸರು! ಈ ಮುದುಕ ಯುವ ನಿರ್ದೇಶಕರ ಮುಂದೆ, ಜೂನಿಯರ್ ಆರ್ಟಿಸ್ಟ್‌ಗಳ ಜೊತೆಯಲ್ಲಿ ನಟಿಸಲಾಗದೆ ತೊದಲಿ ಬಳಲಿ ಕುಸಿದು, ಕಣ್ಣೀರು ಗರೆಯುತ್ತಾ ಮೌನವಾಗಿ ನಡೆದುಹೋಗುತ್ತಿದ್ದರೆ ಯಾರೂ ತಿರುಗಿ ನೋಡಲಾರರು..!

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ