ಪ್ರಾಪಂಚಿಕ ಮಟ್ಟದಲ್ಲಿ ನಡೆಯುವ ಮಹಿಳಾ ಫುಟ್ಬಾಲ್ ಈ ಬಾರಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ದೇಶಗಳ ಮಡಿಲು ಸೇರಿದೆ. ವಿಶ್ವ ಕಪ್ ಗೆಲ್ಲಲು ಬರೋಬ್ಬರಿ ೩೨ ತಂಡಗಳು ಸೆಣಸಾಡುತ್ತಿವೆ. ದೇಶದ ಮುಖ್ಯ ರಾಜಧಾನಿ ನಗರಗಳಾದ ಅಡಿಲೈಡ್, ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್, ಪರ್ತ್ ಗಳಲ್ಲಿ ವಿವಿಧ ಗುಂಪುಗಳು ತಮ್ಮ ಕಾಲ್-ಚಳಕ ತೋರಲಿವೆ. ಇದಲ್ಲದೆ ನ್ಯೂಝಿಲ್ಯಾಂಡ್ ದೇಶದ ನಾಲ್ಕು ಕಡೆ ಪಂದ್ಯಗಳು ನಡೆಯಲಿವೆ. ಇತ್ತೀಚೆಗೆ ಅವರ ದೇಶದಲ್ಲಿ ನಡೆದ ಶೂಟಿಂಗ್ ಪ್ರಕರಣ ಮತ್ತು ಮೂರು ಸಾವುಗಳ ವಿಷಯ ಜನರ ಮನಸ್ಸಿನಿಂದ ಮರೆಯಾಗಿದೆ.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ
ಆಸ್ಟ್ರೇಲಿಯಾಕ್ಕೆ ಫುಟ್ಬಾಲ್ ಜ್ವರ ಅಂಟಿಕೊಂಡಿದೆ. ಮಹಿಳಾ ಫುಟ್ಬಾಲ್ ಪಟುಗಳ ಹೆಸರುಗಳು ನಾಲಿಗೆಯ ಮೇಲೆ ಹರಿದಾಡುತ್ತಿವೆ. ಕಾಲೇಜು ಹುಡುಗಿಯರು, ಪದವಿ ಪ್ರವೀಣರು, ತಾಯಂದಿರು, ಬಡತನವನ್ನು ಸೆದೆ ಬಡಿದು ಫುಟ್ಬಾಲ್ ಆಡುವ ಕನಸನ್ನು ನನಸಾಗಿಸಿಕೊಂಡ ಹೆಣ್ಣುಗಳು, ಅನಾರೋಗ್ಯವನ್ನು ಗೆದ್ದು ತಂಡಕ್ಕೆ ಅರ್ಹರಾದವರು… ಯಾವುದಕ್ಕೂ, ಯಾರಿಗೂ ಕಡಿಮೆಯಾಗದ ಹೆಂಗಳೆಯರು ಪ್ರಪಂಚದ ಮೂಲೆಮೂಲೆಗಳಿಂದ ನಮ್ಮ ಆಸ್ಟ್ರೇಲಿಯಾಕ್ಕೆ ಬಂದಿದ್ದಾರೆ. ಸದ್ಯದಲ್ಲೇ ಅವರಲ್ಲಿ ಕೆಲವರು ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರದ ಲ್ಯಾಂಗ್ ಪಾರ್ಕ್ ಸ್ಟೇಡಿಯಂನಲ್ಲಿ ಆಡಲಿದ್ದಾರೆ. ನಮ್ಮ ‘Matilda’ ಪಟುಗಳ ಬಗ್ಗೆ ಇರುವ ಭರವಸೆಯು ಗಗನಕ್ಕೇರಿದೆ. ಫುಟ್ಬಾಲ್ ಜ್ವರದ ತಾಪ ಏರುತ್ತಿದೆ.
ಪ್ರಾಪಂಚಿಕ ಮಟ್ಟದಲ್ಲಿ ನಡೆಯುವ ಮಹಿಳಾ ಫುಟ್ಬಾಲ್ ಕ್ರೀಡೆ (FIFA) ಈ ಬಾರಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ದೇಶಗಳ ಮಡಿಲು ಸೇರಿದೆ. ವಿಶ್ವ ಕಪ್ ಗೆಲ್ಲಲು ಬರೋಬ್ಬರಿ ೩೨ ತಂಡಗಳು ಸೆಣಸಾಡುತ್ತಿವೆ. ದೇಶದ ಮುಖ್ಯ ರಾಜಧಾನಿ ನಗರಗಳಾದ ಅಡಿಲೈಡ್, ಮೆಲ್ಬೋರ್ನ್, ಸಿಡ್ನಿ, ಬ್ರಿಸ್ಬೇನ್, ಪರ್ತ್ ಗಳಲ್ಲಿ ವಿವಿಧ ಗುಂಪುಗಳು ತಮ್ಮ ಕಾಲ್-ಚಳಕ ತೋರಲಿವೆ. ಇದಲ್ಲದೆ ನ್ಯೂಝಿಲ್ಯಾಂಡ್ ದೇಶದ ನಾಲ್ಕು ಕಡೆ ಪಂದ್ಯಗಳು ನಡೆಯಲಿವೆ. ಇತ್ತೀಚೆಗೆ ಅವರ ದೇಶದಲ್ಲಿ ನಡೆದ ಶೂಟಿಂಗ್ ಪ್ರಕರಣ ಮತ್ತು ಮೂರು ಸಾವುಗಳ ವಿಷಯ ಜನರ ಮನಸ್ಸಿನಿಂದ ಮರೆಯಾಗಿದೆ.
ಮೊನ್ನೆ ಇಪ್ಪತ್ತನೇ ತಾರೀಖು ನ್ಯೂಝಿಲ್ಯಾಂಡ್ ದೇಶದ ಆಕ್ಲ್ಯಾಂಡ್ ನಗರದ ಈಡನ್ ಪಾರ್ಕ್ ಸ್ಟೇಡಿಯಂನಲ್ಲಿ ನ್ಯೂಝಿಲ್ಯಾಂಡ್ ಮತ್ತು ನಾರ್ವೆ ದೇಶಗಳ ತಂಡಗಳು ಮೊದಲ ಪಂದ್ಯವನ್ನಾಡಿ ನಾಂದಿ ಹಾಡಿದವು. ಅದೇ ದಿನ ಆಸ್ಟ್ರೇಲಿಯಾದ ಮೆಲ್ಬೋರ್ನ್ ನಗರದ ಸ್ಟೇಡಿಯಂ ಆಸ್ಟ್ರೇಲಿಯಾದಲ್ಲಿ ನಮ್ಮವರು ರಿಪಬ್ಲಿಕ್ ಆಫ್ ಐರ್ಲ್ಯಾಂಡ್ ತಂಡದ ಜೊತೆ ಆಡಿ ಇಲ್ಲಿ ಆಸ್ಟ್ರೇಲಿಯಾದಲ್ಲಿ ವಿಶ್ವ ಕಪ್ ೨೦೨೩ ಪಂದ್ಯಗಳು ಶುರುವಾದವು. ಆ ಪಂದ್ಯವನ್ನು ಎಪ್ಪತೈದು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು ದಾಖಲೆಯಾಗಿದೆ. ‘Aggressive sport’ ಎಂಬ ಹೆಸರಿರುವ ಫುಟ್ಬಾಲ್ ಪಂದ್ಯವೆಂದರೆ ರಕ್ತದ ಒತ್ತಡ ನಾಗಾಲೋಟದಲ್ಲಿ ಓಡುತ್ತದೆ.
ರಕ್ತದೊತ್ತಡ ಎಂದರೆ ನೆನಪಿಗೆ ಬಂದದ್ದು ಆಸ್ಟ್ರೇಲಿಯನ್ನರ ಆರೋಗ್ಯ ಮತ್ತು ಸೌಖ್ಯ. ಕೇಂದ್ರ ಸರಕಾರವು ಪ್ರಕಟಿಸಿರುವ ವರದಿಯಂತೆ ಜನರಲ್ಲಿ ಒಟ್ಟಾರೆ ಜೀವನ ತೃಪ್ತಿ (life satisfaction) ಕಡಿಮೆಯಾಗಿದೆಯಂತೆ. ಇದು ಕೋವಿಡ್-೧೯ ಸಮಯದಲ್ಲಿ ಕಲೆಹಾಕಿದ ಮಾಹಿತಿ ಎಂದು ವಿರೋಧಪಕ್ಷಗಳು ಕೂಗಾಡಿವೆ. ಆದರೇನು, ಎಲ್ಲರಿಗೂ ತಿಳಿದಿರುವಂತೆ ಆಸ್ಟ್ರೇಲಿಯಾದಲ್ಲಿನ ನಿತ್ಯಜೀವನ ವೆಚ್ಚವು (cost of living) ಬಲು ದುಬಾರಿ. ಬೆಲೆಗಳು ಏರುತ್ತಿವೆಯೇ ಹೊರತು ಕೆಳಗಿಳಿಯುವ ಮಾತೇ ಇಲ್ಲವಲ್ಲ. ಸರಕಾರವೇನೋ ಬೆಲೆಯೇರಿಕೆ ತಡೆಗಟ್ಟುವುದನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದೀವಿ ಎಂದು ಹೇಳಿದೆಯಾದರೂ ಅದೇನೂ ಕಾರ್ಯದಲ್ಲಿ ಕಾಣಿಸುತ್ತಿಲ್ಲ. ಆರೋಗ್ಯ ಮತ್ತು ಸೌಖ್ಯ ವಿಷಯವು ವೈಯಕ್ತಿಕವೂ ಆದ್ದರಿಂದ ಜನರು ತಂತಮ್ಮ ಮಟ್ಟದಲ್ಲಿ ಎಚ್ಚರ ವಹಿಸಬೇಕು ಎನ್ನುವುದಿದೆ. ಆಹಾರ ಸೇವನೆ ಮತ್ತು ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಗಮನ ಕೊಡಿರಿ ಎಂದು ಆರೋಗ್ಯ ಕಾರ್ಯಕರ್ತರು ಹೇಳಿದರೂ, ನಾವೆಲ್ಲಾ ಇರುವ ಉದ್ಯೋಗಗಳ ಕಾರ್ಯವೈಖರಿ ಅದಕ್ಕೆ ಅನುವು ಮಾಡಿಕೊಡುತ್ತದೆಯೇ ಎನ್ನುವುದು ಯಕ್ಷಪ್ರಶ್ನೆ.
ಆ ಪ್ರಶ್ನೆ ಕೇಳುತ್ತಾ ನಮ್ಮ ರಾಣಿರಾಜ್ಯದ ಸ್ವರ್ಗವೆಂದು ಕರೆಯಲ್ಪಡುವ ಗಾರಿ (K’gari) ದ್ವೀಪಕ್ಕೆ ಬರೋಣವಂತೆ. ಈ ದ್ವೀಪಕ್ಕೆ ಮುಂಚೆ ಇದ್ದ ಹೆಸರು Fraser Island ಎಂದು. ಆಸ್ಟ್ರೇಲಿಯಾಕ್ಕೆ ಬರುವವರೆಲ್ಲರೂ ಈ ಸ್ವರ್ಗಸದೃಶ ಬಿಳಿ ಮರಳು ದ್ವೀಪವನ್ನು ನೋಡಲೇ ಬೇಕು ಎನ್ನುವ ಮಾತಿತ್ತು. ಪ್ರಪಂಚದಲ್ಲಿಯೇ ಇದು ಅತ್ಯಂತ ದೊಡ್ಡ ಮರಳು ದ್ವೀಪ. ಇಲ್ಲಿರುವ ಮಳೆಕಾಡುಗಳು, ಸಿಹಿನೀರಿನ ಸೆಲೆಗಳು, ಸ್ಥಳೀಯ ಕಥೆಗಳು, ದ್ವೀಪಕ್ಕಿರುವ ಇತಿಹಾಸ ಎಲ್ಲವೂ ಸುಂದರ, ಆಸಕ್ತಿಕರ ಮತ್ತು ರೋಚಕವಾಗಿದೆ. ಸ್ಥಳೀಯ ಅಬೊರಿಜಿನಲ್ Butchulla ಜನಪಂಗಡದವರ ಭಾಷೆಯಲ್ಲಿ K’gari ಎಂದರೆ ಸ್ವರ್ಗ ಎಂದು. ಈ ದ್ವೀಪದಲ್ಲಿ ವಾಸಿಸುವ ಡಿಂಗೊ ನಾಯಿಗಳು ದೊಡ್ಡ ಸುದ್ದಿಯಾಗಿವೆ.
ಸ್ವಲ್ಪ ಮಟ್ಟಿಗೆ ಡಿಂಗೊ ನಾಯಿಗಳು ನಮ್ಮ ಭಾರತದ ಕೆನ್ನಾಯಿಗಳನ್ನು ಹೋಲುತ್ತವೆ. ಆದರೆ ಅವು ಸದಾ ಕಾಲ ತಂಡದೊಳಗೇ ಇದ್ದು ಬದುಕುವುದಿಲ್ಲ. ಒಂಟೊಂಟಿಯಾಗಿಯೂ ಇರುತ್ತವೆ. ಸ್ವಲ್ಪ ಹೆಚ್ಚು ಬುದ್ಧಿವಂತಿಕೆಯಿಂದ ಬೇಟೆಯಾಡುತ್ತವೆ. ವಸಾಹತುಶಾಹಿಗಳಾಗಿ ಬಂದು Fraser Island ಅನ್ನು ಮೋಹಿಸಿದ ಬ್ರಿಟಿಷರಿಗೆ ಡಿಂಗೊ ನಾಯಿಯನ್ನು ಕಂಡರೆ ಮಹಾನ್ ಭಯ. ಅದರ ಕುಲವನ್ನೇ ನಿರ್ನಾಮ ಮಾಡುವ ಪ್ರಯತ್ನಗಳು ನಡೆದರೂ ಅವು ಇನ್ನೂ ಬದುಕುಳಿದಿವೆ. ಅಬೊರಿಜಿನಲ್ ಜನರಿಗೆ ಡಿಂಗೊ ಎಂದರೆ ಅದೊಂದು ನಾಯಿಕುನ್ನಿ. ಅದರ ಸುದ್ದಿಗೆ ಹೋಗದಿದ್ದರೆ ಅದೂ ಕೂಡ ತಣ್ಣಗಿರುತ್ತದೆ ಎನ್ನುತ್ತಾರೆ.
ಹೋದ ವಾರ K’gari ದ್ವೀಪದಲ್ಲಿ ಒಬ್ಬಳು ಪ್ರವಾಸಿಗ ಹೆಂಗಸು ಮನಮೋಹಕ ವಿಶಾಲ ಸಮುದ್ರತೀರದ ಅಂಚಿನಲ್ಲಿ ನಡೆಯುತ್ತಾ ಹೋಗುತ್ತಿದ್ದಾಗ ಕೆಲ ಡಿಂಗೊ ನಾಯಿಗಳು ಅವಳನ್ನು ಸಮೀಪಿಸಿ, ಒಂದು ನಾಯಿ ಆಕ್ರಮಣ ನಡೆಸಿದೆ. ಅಷ್ಟರಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವಳನ್ನು ರಕ್ಷಿಸಿ, ಕಡೆಗೆ ಅವಳನ್ನು ಹೆಲಿಕಾಪ್ಟರಿನಲ್ಲಿ ಆಸ್ಪತ್ರೆಗೆ ಒಯ್ಯಲಾಯಿತು ಎಂದು ಸುದ್ದಿವಾಹಿನಿಗಳು ಹೇಳಿದ್ದವು. ಕೆಲ ವರದಿಗಾರರು ಸ್ಥಳೀಯ ಅಬೊರಿಜಿನಲ್ ಜನರ ಅಭಿಪ್ರಾಯ ಕೇಳಿದರಂತೆ. ಮಾಮೂಲು ಉತ್ತರ ಬಂತು – ಈ ನಾಯಿಗಳು ಸ್ವತಂತ್ರ ನೈಸರ್ಗಿಕ ಕಾಡು ಜೀವಿಗಳು. ಪ್ರವಾಸಿಗರು ಅದನ್ನು ನೋಡಿ ರೋಮಾಂಚನಗೊಂಡು ಸೆಲ್ಫಿ ತೆಗೆದುಕೊಳ್ಳಲು ಹತ್ತಿರ ಹೋಗುವುದು, ಫೋಟೋಗಳಿಗಾಗಿ ಅವು ಹತ್ತಿರ ಬರಲೆಂದು ಅವಕ್ಕೆ ಆಹಾರ ಕೊಡುವುದು ಮಾಡುತ್ತಾರೆ. ಕ್ರಮೇಣ ಅವು ಮನುಷ್ಯರನ್ನು ಸಮೀಪಿಸುವುದು, ಆಹಾರ ಹುಡುಕಿಕೊಂಡು ಅವರ ಕ್ಯಾಂಪ್ ಸೈಟ್ ಗಳಿಗೆ ಹೋಗುವುದು ಆಗುತ್ತಿವೆ. ಪ್ರಾಣಿಗಳನ್ನು ದಾರಿ ತಪ್ಪಿಸುವುದೂ ನಾವೇ, ಕೊಲ್ಲುವುದೂ ನಾವೇ. ಮನುಷ್ಯರು ಅವನ್ನು ಸುಮ್ಮನೆ ಬಿಟ್ಟರೆ ಸಾಕು, ಇವೆಲ್ಲಾ ಆಘಾತಗಳು ನಡೆಯುವುದಿಲ್ಲ.
ಕೆಲ ತಿಂಗಳುಗಳ ಹಿಂದೆ ಇದೇ ನಾಯಿ ಮನುಷ್ಯರ ಮೇಲೆ ಆಕ್ರಮಣ ನಡೆಸಿತ್ತೆಂದು ಹೇಳಲಾಗಿದೆ. ಆಗ ಅದನ್ನು ಹಿಡಿದು ಕಾಲರ್ ಹಾಕುವಾಗ ರೇಂಜರ್ ಗಮನಿಸಿದ್ದು ನಾಯಿಯ ತೂಕ ೧೭ ಕೆಜಿ ಇತ್ತಂತೆ. ಅದು ಅಸ್ವಾಭಾವಿಕ ಮೈತೂಕ, ಮನುಷ್ಯರು ಅದಕ್ಕೆ ಉಣಿಸುತ್ತಿರಬಹುದು. ಅದರಿಂದ ನಾಯಿಯ ವರ್ತನೆ ಕೂಡ ಬದಲಿಸಿತ್ತು. ಇಷ್ಟೆಲ್ಲಾ ಪ್ರಕರಣವಾದ ಮೇಲೆ ಆಕ್ರಮಣ ನಡೆಸಿದ್ದ ಆ ಒಂದು ಡಿಂಗೊ ನಾಯಿಯನ್ನು ಹಿಡಿದು ಜ್ಞಾನತಪ್ಪಿಸಿ ಅದಕ್ಕೆ ಇತಿಶ್ರೀ ಹೇಳಲಾಗಿದೆ. ಅದರಿಂದ ಕಚ್ಚಿಸಿಕೊಂಡಿದ್ದ ಹೆಂಗಸಿನ ಆರೋಗ್ಯ ಸುಧಾರಿಸಿದೆ.
ಒಂದು ಕಾಡು ನಾಯಿಗೂ ಅಷ್ಟು ಗಮನ ಕೊಡುವ ದೇಶದಲ್ಲಿ ಅಚಾನಕ್ಕಾಗಿ ಪಶ್ಚಿಮತೀರದಲ್ಲಿ ಕಾಣಿಸಿಕೊಂಡ ರಾಕೆಟ್ ಮೈತುಂಡೊಂದು ಕೂಡ ಸುದ್ದಿ ಮಾಡಿತ್ತು. ಕಡೆಗೆ ಭಾರತದ ISRO ಸಂಸ್ಥೆಯ ಮುಖ್ಯಸ್ಥರು ಹೇಳಿಕೆ ಕೊಟ್ಟು ಅದು ರಾಕೆಟ್ ಮೈ ಭಾಗವೇನೋ ಹೌದು, ಆದರೆ ಸದ್ಯಕ್ಕೆ ಅದು ನಮ್ಮ ಭಾರತದ ವಸ್ತುವೋ ಅಥವಾ ಬೇರೆಯವರದ್ದೋ ಹೇಳಲಾಗುವುದಿಲ್ಲ, ಎಂದರು. ಅಲ್ಲಿಗೆ ಆ ವಿಷಯ ತಣ್ಣಗಾಗಿ ಮತ್ತೆ ಎಲ್ಲರ ಗಮನ ಆಸ್ಟ್ರೇಲಿಯಾದ Matilda ಮಹಿಳೆಯರು ವಿಶ್ವಕಪ್ ಫುಟ್ಬಾಲ್ ಟ್ರೋಫಿ ಗೆಲ್ಲುತ್ತಾರಾ ಎನ್ನುವುದರ ಕಡೆ ಹೋಗಿದೆ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.