ಸಾಲಿಗೆ ಹೋಗೋ ಮಕ್ಕಳಿಗಂತೂ ಈ ಕೊಲೆ ಸುದ್ದಿ ತಾವು ನೋಡಿದ ಸಿನೆಮಾ ಕಥಿ ಹಂಗ ಕಂಡಿತು. ಕೆಲವೊಬ್ಬರಂತೂ ‘ಪುಟಾಣಿ ಏಜಂಟ್’ ಆಗಿಬಿಟ್ಟರು. ಕೊಲೆಗಾರರನ್ನು ಹಿಡಿಲಿಕ್ಕೆ ಪೊಲೀಸರು ನಾಯಿ ತೊಗೊಂಡು ಬಂದಾರಂತ, ಅವು ಅಪರಾಧಿಗಳ ವಾಸನಿ ಹಿಡಿದು ಹುಡಿಕಿಕೊಂಡು ಊರು ಹೊರಗ ಹರೀತಿದ್ದ ನದಿ ತನಕ ಹೋಗಿ ನಿಂತವು ಅಂತೆಲ್ಲ ಮಾತಾಡಿಕೊಂಡರು. ಅದೇ ಸಾಲಿಯೊಳಗ ಐದನೇತ್ತಿ ಓದ್ತಿದ್ದ ಪುಟ್ಟಿ ಈ ಮಾತುಗಳನ್ನೆಲ್ಲ ಕೇಳಿಸಿಕೊಂಡಾಗ ಆಕಿಗೆ ಹಿಂದಿನ ರಾತ್ರಿ ಸಬ್ ಇನ್ಸಪೆಕ್ಟರ್ ರವಿ ಅವರ ಮನಿಗೆ ಬಂದಿದ್ದು ನೆನಪಾಯಿತು. ಸಾಲಿ ಮುಗಿಸಿಕೊಂಡು ಮನಿಗೆ ಬಂದಕಿನ ಅವರ ಅಮ್ಮನ ಜೋಡಿ ಮಾತಾಡಿದಳು.
ಸರಿತಾ ನವಲಿ ಬರೆದ ಈ ಭಾನುವಾರದ ಕಥೆ “ಶಿಕ್ಷೆ” ನಿಮ್ಮ ಓದಿಗೆ

ಪೊಲೀಸ್ ಠಾಣೆಯಿಂದ ಸಬ್ ಇನ್ಸಪೆಕ್ಟರ್ ರವಿ ತನ್ನ ಮೋಟಾರಸೈಕಲನ್ನು ಏರಿ ಹೊಂಟಾಗ ಕತ್ತಲಾಗಿತ್ತು. ಸಣ್ಣದಾಗಿ ಮಳಿನೂ ಶುರುವಾಗಿತ್ತು. ಹಾದ್ಯಾಗ ಮಳಿ ಜೋರಾಗಿ ತಾನು ಒದ್ದಿ ಆಗಬಾರದು ಅಂತ ಉದ್ದನೆ ರೇನ್ ಕೋಟನ್ನು ಹಾಕಿಕೊಂಡೇ ಗಾಡಿಯನ್ನು ಏರಿದ್ದ ರವಿ, ತಾನು ತೊಗೊಂಡು ಹೊಂಟಿದ್ದ ಫೈಲನ್ನು ನಿಧಿ ಬಚ್ಚಿಡೋ ಹಂಗ ಶರ್ಟಿನ ಒಳಗಡೆ ಜ್ವಾಪಾನ ಆಗಿ ಇಟಗೊಂಡಿದ್ದ. ಚಿಂಚನೂರು ಕ್ರಾಸ್ ರೋಡಿನಿಂದ ಹೈವೇಗೆ ಸೇರಿಕೊಳ್ಳೋ ಹೊತ್ತಿಗೆ ಮಳಿ ಜೋರಾಗಿ ಸುರಿಲಿಕ್ಕೆ ಶುರುವಾಯಿತು. ಮುಂಜಾನೆ ಹೊತ್ತಿನ್ಯಾಗ ಬಸ್ಸು, ಕಾರು, ಲಾರಿಗಳಿಂದ ಗಿಜಿಗುಡುತ್ತಿದ್ದ ಚಿಂಚನೂರು ಸ್ಟೇಟ್ ಹೈವೆ ರಾತ್ರಿ ಹೊತ್ತಿನ್ಯಾಗ ಜಾತ್ರಿ ಮುಗಿದಮ್ಯಾಲಿನ ರಥಬೀದಿಯಾಗಿತ್ತು. ಕತ್ತಲಿನ ದಾರಿಯೊಳಗ ಮೋಟಾರಸೈಕಲ್ ಓಡಿಸಿಕೊಂಡು ಹೊಂಟಿದ್ದ ರವಿ, ತನ್ನಷ್ಟಕ್ಕೇ ಹಾಡೊಂದನ್ನು ಗುನುಗುನಿಸಿದ.

“ಜಿಂದಗೀ… ಹಸನೇ ಗಾನೇ ಕೆ ಲಿಯೆ ಎಕ್ ಪಲ್, ದೋ ಪಲ್…. ಇಸೆ ಖೋನಾ ನಹೀಂ, ಖೋಕೆ ರೋನಾ ನಹೀಂ…”.

ದಾರಿಯ ದೂರದ ಅಂಚಿನ್ಯಾಗ ಫಳ್ಳಂತ ಮಿಂಚಿ ಬರೀ ಕತ್ತಲು ತುಂಬಿಕೊಂಡಿದ್ದ ದಾರಿಯೊಳಗ ಬೆಳಕು ಕಂಡು, ಇನ್ನೇನು ಜೋರಾಗಿ ಗುಡುಗುತದ ಅಂತ ಅಂದುಕೊಂಡವನಿಗೆ ಸಣ್ಣದಾಗಿ ಗುಡುಗಿದ ಸಪ್ಪಳ ಕೇಳಿಸಿತು. ದೀಪಾವಳಿಯ ‘ಲಕ್ಷ್ಮಿಬಾಂಬ್’ “ಢಂ” ಅನ್ನಬಹುದು ಅಂತ ಹೆದರಿ ಘಟ್ಟ್ಯಾಗಿ ಕಿವಿಮುಚ್ಚಿಕೊಂಡು ನಿಂತಿದ್ದಾಗ ಪಟಾಕಿ “ಟುಸು.. ಟುಸು..” ಅಂದು ಬಿಟ್ಟಂಗ ರವಿಗೆ ಅನ್ನಿಸಿತು. ಕಾರು, ಬಸ್ಸು ಅಂತ ಒಂದೂ ಗಾಡಿಗಳು ಓಡಾಡದೇ ಖಾಲಿಯಾಗಿದ್ದ ದಾರಿಯೊಳಗ ಮೋಟಾರುಸೈಕಲ್ ಓಡಿಸಿಕೊಂಡು ಹೊಂಟಿದ್ದವನಿಗೆ ಎದುರಿನಿಂದ ಬರುತ್ತಿದ್ದ ಲಾರಿ ಬಿಟ್ಟ ಹೈಬೀಮ್ ಕಣ್ಣು ಕುಕ್ಕಿ, ಲಾರಿ ಮೈಮ್ಯಾಲೆ ಬಂದಂಗ ಅನಿಸಿ ಅವಸರದಿಂದ ಗಾಡಿ ಹ್ಯಾಂಡಲ್ಲನ್ನು ಎಡಗಡಗೆ ಹೊರಳಿಸಿದ. ಲಾರಿ ಹತ್ತಿರ ಬರ್ತಿದ್ದಂಗ ಹೆಡ್ ಲೈಟನ್ನು ಡಿಪ್ಪು-ಡಿಮ್ಮು ಮಾಡಿ, “ಫಾಂ..ಫ ಫ ಫ ಫಾಂ, ಫ ಫ ಫ ಫಾಂ” ಅಂತ ಹಾರ್ನ್ ಹೊಡಕೋತ ರೊಂಯ್ಯಂತ ಹಾದುಹೋಯಿತು. ಲಾರಿ ತನಗ ತಾಗಿಕೊಂಡೇ ಹೋದ ಸ್ಪೀಡಿಗೆ, “ಓಹ್… ಓಹ್…. ಹೋ…” ಅಂತ ಅನುಕೋತ ಮೋಟಾರುಸೈಕಲ್ಲನ್ನು ದಾರಿಯಿಂದ ಬಾಜೂಕ್ಕ ಇಳಿಸಿದ ರವಿ, ಎಡಗಡೆ ವಾಲಿ ಕಾಲನ್ನು ನೆಲಕ್ಕೆ ಊರಿದ. ಅಲ್ಲೆಲ್ಲ ನಿಂತಿದ್ದ ನೀರಿನ್ಯಾಗ ಕಾಲಿಟ್ಟಾಗ ಬೂಟು ಪಚ್ಚಂತ ಶಬ್ದ ಮಾಡಿತು. ಮಳಿಯೊಳಗ “ಡೊರ್…. ಡೊರ್…” ಅನಕೋತ ಕೂತಿದ್ದ ಒಂದೆರಡು ಕಪ್ಪಿಗೊಳು ಪುಳಕ್ಕಂತ ಬಾಜೂ ಹಾರಿದವು. ರವಿಗೆ ಕೊಳೆತಿದ್ದ ಎಲಿ, ನಿಂತ ನೀರಿನ ವಾಸನಿ ಮೂಗಿಗೆ ಬಡಿದು ಅಲ್ಲಿ ತಗ್ಗಾದ ನೆಲ, ಕುರುಚಲು ಪೊದೆ, ನೀರು ಎಲ್ಲ ಸೇರಿ ಜೊಂಡುಗಟ್ಯದ ಅಂತ ತಿಳಿಯಿತು.

“ಜಲ್ದಿ ಹೋಗಬೇಕು, ರೋಡ್ ಖಾಲಿಯದ ಅಂತ ಜಾಸ್ತಿ ಸ್ಪೀಡಿನ್ಯಾಗಿದ್ದೆ. ಸದ್ಯ ಕೆಳಗ ಬೀಳಲಿಲ್ಲ… ಬಚಾವಾದೆ” ಅಂತ ಅನಕೋತ ಷರ್ಟಿನ್ಯಾಗ ಇಟಗೊಂಡಿದ್ದ ಫೈಲನ್ನೊಮ್ಮೆ ಮುಟ್ಟಿಕೊಂಡು, ಗಾಡಿ ಸೀದಾ ಮಾಡಿಕೊಳ್ಳುತ್ತ ತಾನು ಹಾಡಕೋತಿದ್ದ ಹಾಡನ್ನು ಮುಂದುವರೆಸಿದ.
“ತೇರೆ ಗಿರನೆ ಮೆ ಭಿ, ತೇರಿ ಹಾರ್ ನಹೀಂ….ಕೆ ತು ಆದಮಿ ಹೈ ಅವತಾರ ನಹೀಂ… ಜಿಂದಗೀ….”

ದೂರದಾಗ ಮಿಣುಕು-ಮಿಣಕು ದೀಪಗಳು ಕಂಡು ಊರು ಹತ್ತಿರದಾಗ ಅದ ಅಂತ ಅಂದುಕೊಳ್ಳುತ್ತ ಹೊಂಟಿದ್ದ ರವಿಗೆ ಚಕ್ಕಡಿ ಗಾಡಿಯೊಂದು ದಾರಿಯ ನಟ್ಟ ನಡುವೆ ಕಾಣಿಸಿತು. ಕತ್ತಲದಾಗ ಮೋಟಾರ್ ಗಾಡಿಯ ಲೈಟಿಗೆ ಎತ್ತುಗಳ ಕಣ್ಣುಗಳು ಫಳಫಳ ಅಂತ ಹೊಳೆದವು. ಜೋರಾಗಿ ಸುರೀತಿದ್ದ ಮಳಿ, ಎದುರಿನಿಂದ ಬಂದ ಬೆಳಕಿನಿಂದ ಬೆದರಿದ ಎತ್ತುಗಳು ಚಕ್ಕಡಿಯನ್ನು ದಾರಿಯ ಅಂಚಿಗೆ ಎಳಕೊಂಡು ಹೋಗ್ತಾಯಿರೋದನ್ನು ನೋಡಿದ ಗಾಡಿಯವ ಕೈಯಾಗ ಹಿಡಿದಿದ್ದ ಹಗ್ಗವನ್ನು ಬಿಗಿ ಮಾಡಿ, “ಹೋ… ಹೋ… ಹೋಪ… ಹೋಪ..” ಅಂದ. ಬ್ರೇಕ್ ಒತ್ತಿ ಹಿಡಿದು ಚಕ್ಕಡಿ ಗಾಡಿಯನ್ನೊಮ್ಮೆ ತಿರುಗಿ ನೋಡಿ, ಮೋಟಾರಸೈಕಲನ್ನು ಮುಂದಕ್ಕ ಓಡಿಸಿಕೊಂಡು ಹೋದ ಸಬ್ ಇನ್ಸಪೆಕ್ಟರ್ ರವಿಗೆ ದಾರಿಯ ಎಡಗಡೆ ಯಾವುದೇ ಚಲನವಲನಯಿಲ್ಲದೇ ಸ್ಥಬ್ಧ ಆಗಿದ್ದ ಬಸ್ ಸ್ಟ್ಯಾಂಡ್, ಬೀಗ ಹಾಕಿಕೊಂಡು ನಿದ್ದಿ ಮಾಡ್ತಾಯಿದ್ದ ಗೂಡಂಗಡಿಗಳು ಮತ್ತು ಬಲಗಡೆ ದೊಡ್ಡದಾದ ಕೋರ್ಟಿನ ಕಟ್ಟಡ ಕಾಣಿಸಿದವು. ಹೈವೇದಿಂದ ಕೋರ್ಟಿನ ಆವರಣವನ್ನು ಹೊಕ್ಕ ರವಿ ಅಲ್ಲೇ ಬಾಜೂದಾಗ ಇದ್ದ ನ್ಯಾಯಾಧೀಶರ ಸರಕಾರಿ ನಿವೇಶದ ಕಡೆಗೆ ತನ್ನ ಮೋಟಾರಸೈಕಲನ್ನು ಹೊರಳಿಸಿದ. ಮಿಂಚಿನ ಬೆಳಕಿನ್ಯಾಗ ದೊಡ್ಡ ದೊಡ್ಡ ಮಾವಿನ ಮರ, ನೇರಳೆ ಮರ, ಕುರುಚಲು ಪೊದೆಗಳಿದ್ದ ಸುತ್ತಮುತ್ತಲಿನ ಜಾಗ, ಅದರ ನಡುವೆ ಭೂತಬಂಗಲಾದ ಹಂಗ ಮನಿ ಕಂಡು ರವಿಗೆ ಹಾರರ್ ಸಿನೆಮಾದ ದೃಶ್ಯ ನೆನಪಾಯಿತು. ಒಂದೇ ಸಮ ಸುರೀತಿದ್ದ ಮಳಿಯೊಳಗ ಅಲ್ಲೇ ಮಗ್ಗಲದಾಗಿನ ಕುರುಚಲ ಗಿಡದ ಬುಡದಾಗ ಮುದುರಿಕೊಂಡು ಮಲಗಿದ್ದ ಎರಡು ನಾಯಿಗಳು ಮೋಟಾರುಸೈಕಲ್ಲಿನ ಲೈಟ್ ಕಂಡಕೂಡಲೇ ಎದ್ದು ನಿಂತು ಜೋರಾಗಿ ಒದರಲಿಕ್ಕೆ ಶುರು ಮಾಡಿ, ಮಳಿ ಬರ್ತಿದ್ದರೂ ಲೆಕ್ಕಿಸದೇ ಗಾಡಿ ಹಿಂದೆ ಓಡಿ ಬಂದವು.

******

ಟಕ್… ಟಕ್… ಟಕ್…. ಬಾಗಿಲು ಬಡಿದ ಶಬ್ದ. ನಡುರಾತ್ರಿಯ ಹೊತ್ತಾಗಿದ್ರಿಂದ ಬಾಗಿಲ ಬಡಿದ ಕೂಡಲೇ ಒಳಗಿಂದ ಉತ್ತರ ಬರಲಿಲ್ಲ. ಟಕ್… ಟಕ್… ಟಕ್… ಮತ್ತೊಮ್ಮೆ ಮ್ಯಾಜಿಸ್ಟ್ರೇಟ್ ಸಾಹೇಬರ ಮನೆಯ ಬಾಗಿಲು ಬಡಿದ ರವಿ ಮಾತನಾಡಿದ.

“ಸರ್, ನಾನು ಚಿಂಚನೂರು ಪೊಲೀಸ್ ಠಾಣೆಯಿಂದ ಸಬ್ ಇನ್ಸಪೆಕ್ಟರ್ ರವಿ ಬಂದೀನ್ರೀ… ಒಂದು ಎಫ್.ಐ.ಆರ್. ತಂದೀನಿ… ನಿಮ್ಮ ಸಹಿ ತೊಗೋಬೇಕಾಗಿತ್ರಿ ಸರ್…”.

ಒಳಗಡೆ ರೂಮಿನ್ಯಾಗ ಬೆಳಕು ಕಾಣಿಸಿ, ಇಬ್ಬರು ಮಾತನಾಡಿಕೊಳ್ಳೋದು ಕೇಳಿಸಿತು. ಅದರ ಜೊತಿಗೆ ಮೆಲ್ಲಕ ಬಾಗಿಲಿನ ಕಡೆ ನಡಕೊಂಡು ಬರ್ತಾಯಿರೋ ಹೆಜ್ಜಿ ಸಪ್ಪಳನೂ ಸೇರಿಕೊಂಡಿತು.

“ನೀನ್ಯಾಕೆ ಎದ್ದುಬಿಟ್ಟೆ ಪುಟ್ಟಿ… ಮಲಕೊ. ಅಪ್ಪ ಬಾಗಿಲು ತೆಗೀತಾರ, ನಾನು ಇಲ್ಲೇ ನಿಂತಿರ್ತೀನಿ…” ಆಶಾ ಕಾಳಜಿಯಿಂದ ಹೇಳಿದಳು.
“ಚಂದ್ರು ಯಾಕೋ ಎಷ್ಟೊಂದು ಒದರಿಲಿಕ್ಕತ್ಯದ…. ಅಪ್ಪ…. ಬಾಗಿಲು ತೆಗೀಬ್ಯಾಡ….”. ಹಾಸಿಗಿಯಿಂದ ತಲಿಯೆತ್ತಿ, ಕುತ್ತಿಗಿ ಸೊಟ್ಟದಾಗಿಸಿ ಬಾಗಿಲಿನ ಕಡೆ ಹೊಂಟಿದ್ದ ಅಪ್ಪನನ್ನು ನೋಡಿದ ಪುಟ್ಟಿ ಹೇಳಿದಳು. ಪುಟ್ಟಿ ಮಾತು ಮುಗಿಯೋದ್ರಾಗ ಬಾಜೂದಾಗೆ ಇದ್ದ ಗಾಜಿನ ಕಿಟಕಿಯಿಂದ ಹಣ್ಣನ್ನು ಹೋಳು ಮಾಡಿದಂಗ ಆಕಾಶವನ್ನು ಸೀಳಿ, ಫಳ-ಫಳ ಅಂತ ಮಿಂಚಿದ್ದು ಕಾಣಿಸಿ, ಮುಂದಿನ ಕ್ಷಣದೊಳಗ “ಗುಡು…ಗುಡು..” ಅಂತ ಎದಿ ನಡುಗಿಸುವಂತಹ ಗುಡುಗು ಕೇಳಿಸಿತು. “ಅಮ್ಮಾ… ಗುಡುಗು…” ಅಂತ ಚೀರಿದ ಪುಟ್ಟಿ ಹೊದಿಕಿಯಿಂದ ಮುಸುಕು ಹಾಕಿಕೊಂಡು ಹಾಸಿಗಿಗೆ ಒರಗಿದಳು.

ಆಶಾ ತಂದುಕೊಟ್ಟ ಶರ್ಟನ್ನು ಮೈಗೆ ಏರಿಸಿಕೊಂಡು, ಎಡಗೈಯಾಗ ವಾಚು ಕಟ್ಟಿಕೋತ ಜಡ್ಜ್ ಆನಂದ್ ತಮ್ಮ ಆಫೀಸ್ ರೂಮಿನ ಕಡೆ ಹೋದರು. ಆನಂದ್ ಅವರು ಆಫೀಸ ರೂಮಿನ ಹೊರಬಾಗಿಲನ್ನು ತೆಗೆದಾಗ ಉದ್ದನೆಯ ರೇನ್ ಕೋಟ್ ಹಾಕಿಕೊಂಡು, ತಂದಿದ್ದ ಫೈಲ್ ಒದ್ದೆಯಾಗದಂತೆ ಹಿಡಿದು ನಿಂತಿದ್ದ ಸಬ್ ಇನ್ಸಪೆಕ್ಟರ್ ರವಿ ಮೈ ಸೆಟೆಸಿ ಬಲಗೈ ಎತ್ತಿ ಸೆಲ್ಯೂಟ್ ಮಾಡಿದ. ಅದಕ್ಕೆ ಪ್ರತಿಯಾಗಿ “ನಮಸ್ಕಾರ” ಅಂತ ಹೇಳಿದ ಆನಂದ್ ತಮ್ಮ ಕುರ್ಚಿಯಲ್ಲಿ ಕುಳಿತರು. ಮಳಿಯೊಳಗ ತೋಯಿಸಿಕೊಂಡು ನಿಂತಿದ್ದ ಚಂದ್ರು ಬಾಲ ಅಲ್ಲಾಡಿಸುತ್ತ ಬಾಗಿಲಿನ ಹತ್ತಿರ ಬಂದು ತನ್ನ ಮೈಯನ್ನೊಮ್ಮೆ ಝಾಡಿಸಿ ಬಾಗಿಲಿನ ಮುಂದೆ ಮುದುರಿಕೊಂಡಿತು.

“ಸರ್ ಇವತ್ತು ಚಿಂಚನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಬ್ಬ ಹೆಂಗಸಿನ ಕೊಲೆಯಾಗಿದೆ. ಎಫ್.ಐ.ಆರ್. ತಂದೀನ್ರಿ.” ಮಳಿ ನೀರನ್ನು ಜಿನುಗಿಸುತ್ತಿದ್ದ ರೇನ್ ಕೋಟನ್ನು ಬಾಗಿಲಿನ ಹೊರಗಿನ ಮೂಲೆಯಲ್ಲಿ ಮಡಚಿಟ್ಟು ಎಸ್.ಐ. ರವಿ ಒಳಗೆ ಬಂದ.

“ಕೊಲೆ ಯಾವಾಗ ನಡೀತು? ಯಾರನ್ನಾದ್ರೂ ಅರೆಸ್ಟ್ ಮಾಡೀರೇನು?” ಸಾಹೇಬರು ಪ್ರಶ್ನೆಗಳನ್ನು ಕೇಳಿದರು.

“ಇಲ್ಲರಿ ಸರ್…. ಮಧ್ಯರಾತ್ರಿ ಕೊಲೆಯಾಗಿದೆ, ಹೆಂಗಸಿನ ಮುಖಕ್ಕೆ ಕಲ್ಲಿನಿಂದ ಜಜ್ಜಿ ಕೊಲೆಮಾಡಿ ಪರಾರಿಯಾಗಿದ್ದಾರೆ. ಗ್ಯಾಂಗ್ ರೇಪ್ ಆಗಿರಬಹುದು ಅನ್ನುವ ಅನುಮಾನ ಅದ. ಮಧ್ಯಾಹ್ನ ಇನ್ಫೊರ್ಮೇಶನ್ ಬಂತು. ಆ ಹೆಣ್ಣುಮಗಳನ್ನು ಸೆಕೆಂಡ್ ಷೋ ಸಿನೆಮಾಗೆ ಕರೆದುಕೊಂಡು ಹೋಗಿದ್ದ ಆಕಿ ಗಂಡ ಮತ್ತು ಸಂಬಂಧಿಕರ ಮ್ಯಾಲೆ ಅನುಮಾನ ಅದ ಸರ್, ಚಾರ್ಜಶೀಟ್ ಹಾಕಿದ್ದೀವಿ…. ಶಂಕಿತ ವ್ಯಕ್ತಿಗಳ ಹುಡುಕಾಟ ನಡೆದಿದೆ”.

“ಮತ್ತೆ ಎಫ್.ಐ.ಆರ್. ತರೋಕೆ ಇಷ್ಟ್ಯಾಕೆ ತಡಮಾಡಿದ್ರಿ?”

“ಸರ್ ಅದು… ಈ ಕೊಲೆ ಚಿಂಚನೂರು ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತೋ… ಇಲ್ಲಾ.. ಬಸಾಪೂರು ಪೊಲೀಸ್ ಠಾಣೆಯ ವ್ಯಾಪ್ತಿಗೆ ಬರುತ್ತೋ ಅಂತ ನಮ್ಮಲ್ಲೇ ಗೊಂದಲ ಇತ್ತರಿ ಸರ್… ಮೊದಲು ಬಸಾಪೂರಿನ ಮ್ಯಾಜಿಸ್ಟ್ರೇಟ್ ಸಾಹೇಬ್ರ ಹತ್ರ ಎಫ್.ಐ.ಆರ್. ಕಳಸೋದು ಅಂದುಕೊಂಡು ಅಲ್ಲಿನ ಠಾಣೆಗೆ ಹೋಗಿದ್ವಿ. ಆದ್ರ ಈ ಕೊಲೆ ನಮ್ಮ ಠಾಣೆಗೆ ಬರ್ತದ ಅಂತ ಗೊತ್ತಾಗಿ ವಾಪಸು ಬಂದ್ವಿ. ಇಲ್ಲಿಗೆ ಬರೋವಾಗ ದಾರಿಯೊಳಗ ಭಾಳ ಜೋರಾಗಿ ಮಳಿ ಬರ್ತಾಯಿತ್ತು, ಅದಕ್ಕ ಬರಲಿಕ್ಕೆ ತಡ ಆತ್ರಿ ಸರ್… ಸಾರಿ”. ಒಂದೇ ಉಸಿರಿನ್ಯಾಗ ರವಿ ಮಾತಾಡಿದ.

“ಇಂತಹ ಸೂಕ್ಷ್ಮದ ಕೇಸ್‌ಗಳಲ್ಲಿ ಹೆಚ್ಚಿನ ಜಾಗ್ರತೆ ಇರಬೇಕಂತ ನಿಮಗ ಗೊತ್ತದಲ್ಲ.. ಪ್ರತಿಯೊಂದು ನಿಮಿಷನೂ ಮುಖ್ಯ ಆಗಿರ್ತದ… ಫೈಲ್ ಕೊಡ್ರಿ…”.

“ಸಾರಿ ಸರ್…” ಜಡ್ಜ್ ಸಾಹೇಬರ ಕೆಲಸದಲ್ಲಿನ ಶಿಸ್ತು, ಸಮಯಪ್ರಜ್ಞೆ, ಕರ್ತವ್ಯನಿಷ್ಠೆಯ ಬಗ್ಗೆ ತಿಳಿದುಕೊಂಡಿದ್ದ ರವಿ ಮತ್ತೊಮ್ಮೆ ಕ್ಷಮೆ ಕೇಳಿ ಫೈಲನ್ನು ಕೊಟ್ಟ.

ಆನಂದ್ ಅವರು ಫೈಲನ್ನು ಓದಿ ಸಹಿ ಹಾಕಿಕೊಟ್ಟಾಗ ರವಿ ಮತ್ತೆ ಮಾತನಾಡಿದ. “ಸರ್… ಇದ್ರಲ್ಲಿ ಇವತ್ತಿನ ದಿನಾಂಕ 21 ಅಂತಾಗಬೇಕಿತ್ರಿ …”.
“ಏನ್ರೀ ಹಂಗಂದ್ರ? ಇವತ್ತಿನ ಡೇಟ್ 22 ಅಲ್ಲೇನ್ರಿ…” ಅಂತ ಅಂದುಕೋತ ಗ್ವಾಡಿ ಮ್ಯಾಲೆ ತೂಗು ಹಾಕಿದ್ದ ಕ್ಯಾಲೆಂಡರಿನ ಸೆಪ್ಟೆಂಬರ್ ತಿಂಗಳಿನ ದಿನಗಳನ್ನು ನೋಡಿದರು ಆನಂದ್. ಅದ್ರ ಜೊತಿಗೆ ತಮ್ಮ ಕೈಯಾಗಿನ ಗಡಿಯಾರವನ್ನು ನೋಡಿದ ಅವರಿಗೆ ಅದರಲ್ಲಿ 12:05, ದಿನಾಂಕ : Sep 22 ಅಂತ ಕಾಣಿಸಿತು.

“ಸರ್…. ಅದು… ಅದು… ಮಳಿಯೊಳಗ ಬರಲಿಕ್ಕೆ ತಡಾ ಆಯ್ತ್ರಿ. ಕೊಲೆ ನಡೆದ 24 ತಾಸಿನೊಳಗ ಸಹಿ ತೊಗೋಬೇಕಾಗಿತ್ತಲ್ರಿ…”. ಧ್ವನಿ ಎಳೆದ ರವಿ.

“ಮರ್ಡರ್ ಕೇಸ್ರಿ ಇದು… ನೀವು ಹೀಂಗ ಕೇರ್ ಲೆಸ್ ಆಗಬಾರದು….” ಸಿಡುಕಿದರು ಆನಂದ್.

ಫೈಲು ತೊಗೊಂಡು ಸೆಲ್ಯೂಟ್ ಮಾಡಿ ಸಬ್ ಇನ್ಸಪೆಕ್ಟರ್ ರವಿ ಹೊಂಟಾಗ ಮತ್ತೊಮ್ಮೆ ಜೋರಾಗಿ ಮಿಂಚು ಫಳಫಳಿಸಿತು.

******

ಹೊಸದಾಗಿ ಮದುವಿಯಾಗಿದ್ದ ಹುಡುಗಿ ರೂಪಾ ತನ್ನ ಗಂಡನ ಜೋಡಿ ಸೆಕೆಂಡ್ ಷೋ ಸಿನೆಮಾ ನೋಡಿಕೊಂಡು ಬರೋವಾಗ, ವಿಕೃತ ಮನಸ್ಸಿನ ಕೆಲವರು ಆಕಿ ಮ್ಯಾಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು. ಕಲಬುರಗಿ ಜಿಲ್ಲಾದಾಗಿನ ಒಂದು ತಾಲ್ಲೂಕಾಗಿದ್ದ ಚಿಂಚನೂರಿನೊಳಗ ಒಬ್ಬ ಹೆಣ್ಣುಮಗಳು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರೋ ಸುದ್ದಿ ಮನಿ ತುಂಬ ಹಬ್ಬುವ ಘಾಟು ವಾಸನಿ ಹಂಗ ಊರಾಗೆಲ್ಲ ಹರಡಿತು. ಊರಾಗಿನ ಮನಿ, ಓಣಿ, ಗುಡಿ, ಬಸ್ ಸ್ಟ್ಯಾಂಡ್ ಅಂತ ಎಲ್ಲಿ ಮಂದಿ ಸೇರಿದ್ರೂ ಇದ ಮಾತ ಆಡಿಕೊಂಡರು. “ಇನ್ನು ಮ್ಯಾಲೆ ನಮ್ಮ ಮನಿ ಹೆಣ್ಣುಮಕ್ಕಳು ಹುಷಾರಾಗಿರಬೇಕು…” ಅನ್ನೋದು ಎಲ್ಲಾರ ಅಭಿಪ್ರಾಯ ಆಗಿತ್ತು.

ಸಾಲಿಗೆ ಹೋಗೋ ಮಕ್ಕಳಿಗಂತೂ ಈ ಕೊಲೆ ಸುದ್ದಿ ತಾವು ನೋಡಿದ ಸಿನೆಮಾ ಕಥಿ ಹಂಗ ಕಂಡಿತು. ಕೆಲವೊಬ್ಬರಂತೂ ‘ಪುಟಾಣಿ ಏಜಂಟ್’ ಆಗಿಬಿಟ್ಟರು. ಕೊಲೆಗಾರರನ್ನು ಹಿಡಿಲಿಕ್ಕೆ ಪೊಲೀಸರು ನಾಯಿ ತೊಗೊಂಡು ಬಂದಾರಂತ, ಅವು ಅಪರಾಧಿಗಳ ವಾಸನಿ ಹಿಡಿದು ಹುಡಿಕಿಕೊಂಡು ಊರು ಹೊರಗ ಹರೀತಿದ್ದ ನದಿ ತನಕ ಹೋಗಿ ನಿಂತವು ಅಂತೆಲ್ಲ ಮಾತಾಡಿಕೊಂಡರು. ಅದೇ ಸಾಲಿಯೊಳಗ ಐದನೇತ್ತಿ ಓದ್ತಿದ್ದ ಪುಟ್ಟಿ ಈ ಮಾತುಗಳನ್ನೆಲ್ಲ ಕೇಳಿಸಿಕೊಂಡಾಗ ಆಕಿಗೆ ಹಿಂದಿನ ರಾತ್ರಿ ಸಬ್ ಇನ್ಸಪೆಕ್ಟರ್ ರವಿ ಅವರ ಮನಿಗೆ ಬಂದಿದ್ದು ನೆನಪಾಯಿತು. ಸಾಲಿ ಮುಗಿಸಿಕೊಂಡು ಮನಿಗೆ ಬಂದಕಿನ ಅವರ ಅಮ್ಮನ ಜೋಡಿ ಮಾತಾಡಿದಳು.

“ಅಮ್ಮಾ… ಅವ್ರು… ಅದೇ ಆ ಕೊಲೆ ಮಾಡಿದೋರು ಸಿಕ್ಕಿ ಹಾಕಿಕೊಂಡ್ರ ಪೊಲೀಸರು ಅವರನ್ನು ಮೊದಲಿಗೆ ನಮ್ಮ ಮನಿಗೇ ಕರೆದುಕೊಂಡು ಬರ್ತಾರ ಅಲ್ಲೇನು?”

“ಇದೇನು ಹೊಸ ವಿಷಯನಾ ಪುಟ್ಟ… ನಿಮ್ಮ ಅಪ್ಪನ ಕೆಲಸದಲ್ಲಿ ಇದೆಲ್ಲ ಇದ್ದದ್ದೇ…. ನೋಡು, ನೀನು ಮಾತ್ರ ನಾಳೆಯಿಂದ ಸಾಲಿಗೆ ಒಬ್ಬಕಿನೇ ಹೋಗಬ್ಯಾಡ. ಕೋರ್ಟಿನ ಸಿಪಾಯಿ ಶಂಕ್ರ ನಿನ್ನ ಜೊತೆ ಬರ್ತಾರ”.

“ಯಾಕಮ್ಮಾ…?”

“ಯಾಕಂತ ಕೇಳಬ್ಯಾಡ. ಸುಮ್ಮನೆ ಹೇಳಿದಷ್ಟು ಮಾಡು…. ಚಿನ್ನೂನ ಜೊತಿ ನಿನ್ನನ್ನೂ ಸಾಲಿಗೆ ಬಿಡಲಿಕ್ಕೆ ಶಂಕ್ರಗ ಹೇಳ್ತೀನಿ”. ಒಂದೇ ಸಲಕ್ಕ ಅಮ್ಮನ ಧ್ವನಿ ಬದಲಾಗಿದ್ದು ಕಂಡ ಪುಟ್ಟಿ ಮಾತು ಮುಂದುವರಿಸದೆ ಸುಮ್ಮನಾದಳು.

ರಾತ್ರಿ 9 ಗಂಟಿ ಹೊತ್ತಿಗೆ ಮ್ಯಾಜಿಸ್ಟ್ರೇಟ್ ಸಾಹೇಬರ ಮನಿ ಮುಂದ ಪೊಲೀಸ್ ಜೀಪೊಂದು ಬಂದು ನಿಂತುಕೊಂಡಿತು. ಸಬ್ ಇನ್ಸಪೆಕ್ಟರ್ ರವಿ, ಇಬ್ಬರು ಪೊಲೀಸ್ ಪೇದೆಗಳ ಜೊತಿಗೆ ಕೈಗೆ ಬೇಡಿ ಹಾಕಿಕೊಂಡಿದ್ದ ಮೂರು ಮಂದಿ ಆಪಾದಿತರು ಜೀಪಿನಿಂದ ಇಳಿದು ಬಾಗಿಲಿನ ಕಡೆ ನಡಕೋತ ಬಂದರು. ಚಿಂಚನೂರಿನೊಳಗ ಹುಡುಗಿ ಕೊಲೆ ಮಾಡಿ, ತಲೆಮರೆಸಿಕೊಂಡಿದ್ದ ಆಪಾದಿತರನ್ನು ಹಿಡಿದು ಸಬ್ ಇನ್ಸಪೆಕ್ಟರ್ ರವಿ ನ್ಯಾಯಾಧೀಶರ ಮುಂದ ಹಾಜರು ಪಡಿಸಲು ಕರಕೊಂಡು ಬಂದಿದ್ದ. ಬಾಗಿಲಿಗೆ ಹಾಕಿದ್ದ ಪರದೆಯ ಹಿಂದ ಅಪ್ಪನಿಗೆ ಕಾಣಿಸಲಾರದಂಗ ನಿಂತುಕೊಂಡ ಪುಟ್ಟಿ, ಆಫೀಸ್ ರೂಮಿನ ಬಾಗಿಲಿನ ಹೊರಗಡೆ ನಿಂತಿದ್ದವರನ್ನು ಕುತೂಹಲದಿಂದ ನೋಡಿದಳು. ರವಿ ತಂದಿದ್ದ ಫೈಲನ್ನು ನೋಡಿದ ಆನಂದ್ ಆಪಾದಿತರನ್ನು ಒಬ್ಬೊಬ್ಬರನ್ನಾಗಿ ವಿಚಾರಿಸಿದರು. 21 ವರ್ಷದ ರಾಜಾ, 42 ವರ್ಷದ ಮುದ್ದಪ್ಪ, 24 ವರ್ಷದ ಕುಮಾರ ಆಪಾದಿತರಾಗಿದ್ದರು. ಈ ಕುಮಾರನೇ ಕೊಲೆಯಾದ ಹುಡುಗಿ ರೂಪಾಳ ಗಂಡ, ಉಳಿದವರಿಬ್ಬರು ಅವನ ಸಂಬಂಧಿಗಳು ಅಂತ ಜಡ್ಜ್ ಸಾಹೇಬರಿಗೆ ಗೊತ್ತಾಗಿದ್ದಲ್ಲದೇ, ಶ್ರೀಮಂತರ ಮನಿ ಹುಡುಗನ ಹಂಗ ಕಾಣ್ತಿದ್ದ ಕುಮಾರ ಗಾಬರಿಯಾದಂಗ ಅವರಿಗೆ ಅನ್ನಿಸಿತು.

“ಠಾಣೆಯಲ್ಲಿ ಪೊಲೀಸರೇನಾದ್ರು ತ್ರಾಸ ಕೊಟ್ಟಾರೇನು?” ಆನಂದ್ ಪ್ರಶ್ನಿಸಿದರು.

ಮೊದಲೇ ಹೆದರಿಕೊಂಡು ನಿಂತಿದ್ದ ಕುಮಾರ ಮಾತನಾಡಲಿಕ್ಕೆ ತಡವರಿಸಿ, ರಾಜಾ ಮತ್ತು ಮುದ್ದಪ್ಪನ ಕಡೆ ನೋಡಿದ. ಅವರಿಬ್ಬರೂ ಒಬ್ಬರ ಮಾರಿ ಒಬ್ಬರು ನೋಡಿಕೊಂಡರು. ಸಾಹೇಬರು ತಮ್ಮ ಉತ್ತರಕ್ಕಾಗಿ ಕಾಯ್ತಾಯಿದ್ದಾರ ಅಂತ ತಿಳಿದು ಸಬ್ ಇನ್ಸಪೆಕ್ಟರ್ ರವಿಯನ್ನು ನೋಡಿಕೋತ “ಇಲ್ಲರಿ ಸಾಹೇಬ್ರೇ..” ಅಂದರು.

“ಎರಡು ವಾರದವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಬೇಕಾಗ್ತದ…” ಆಪಾದಿತರನ್ನುದ್ದೇಶಿಸಿ ಹೇಳುತ್ತ, ಸಹಿ ಹಾಕಿದ ಫೈಲನ್ನು ರವಿಗೆ ಕೊಟ್ಟು ಕುರ್ಚಿಯಿಂದೆದ್ದರು ಆನಂದ್. ಬಾಗಿಲಿನ ಪರದೆಯ ಹಿಂದ ನಿಂತುಕೊಂಡಿದ್ದ ಪುಟ್ಟಿ ಅಪ್ಪನನ್ನು ನೋಡಿ ಒಳಗಿನ ರೂಮಿಗೆ ಓಡಿಹೋದಳು. ಆಶಾಳಿಗೆ ತಾನು ಆಫೀಸ್ ರೂಮಿನಲ್ಲಿ ನೋಡಿದ್ದನ್ನು, ಕೇಳಿಸಿಕೊಂಡಿದ್ದನ್ನು ಕುತೂಹಲದಿಂದ ಹೇಳಿದಳು.

“ಅಪ್ಪನ ಕೆಲಸದಲ್ಲಿ ಇದೆಲ್ಲ ಹೀಂಗೆ ಇರ್ತದಲ್ಲ ಪುಟ್ಟಿ… ಇದೇನು ಹೊಸಾದಲ್ಲಲ…”

ಅಮ್ಮನ ಮಾತು ಕೇಳಿ ಪುಟ್ಟಿಗೆ ನಿರಾಸೆಯಾದ್ರೂ ಸಾಲಿಯೊಳಗಿನ ಗೆಳತೇರಿಗೆಲ್ಲ ಈ ಸುದ್ದೀನ ಹೇಳಬಹುದು ಅಂತ ಅಂದುಕೊಂಡಳು.

******

ಹೊಸದಾಗಿ ಮದುವಿಯಾಗಿದ್ದ ಮಗ ತನ್ನ ಹೆಂಡತಿಯನ್ನೇ ಕೊಲೆ ಮಾಡಿದ ಆರೋಪದಾಗ ಪೊಲೀಸ್ ಕಸ್ಟಡಿಯೊಳಗ ಇರೋದನ್ನು ರಂಗಪ್ಪಗೌಡಗ ಸಹಿಸಿಕೊಳ್ಳಲಿಕ್ಕೆ ಆಗಲಿಲ್ಲ.

“ಈ ಪೊಲೀಸ್ನೋರಿಗೆ ನನ್ನ ಮಗನ ಮೇಲೆ ಅದೇನು ದ್ವೇಷನೋ ತಿಳಿವಲ್ಲದು… ಅವನ ಮಾರಿ ನೋಡಿದ್ರೆ ಕೊಲೆ ಮಾಡ್ಯಾನ ಅಂತ ಅನ್ಸತೈತೇನ್ರೀ ವಕೀಲ ಸಾಹೇಬ್ರ? ನಾವೂ ಮನಿ ಸೊಸೀನ ಕಳಕೊಂಡೀವಿ.. ಈಗ ಮಗನೂ ಜೈಲು ಸೇರಿಕೊಂಡರ ನಮ್ಮ ಗತಿ ಏನು?” ಗೋಳಾಡಿದ ರಂಗಪ್ಪಗೌಡ.

“ನೀವ ಹೀಂಗ ಮಾತಾಡಿದರ ಹೇಂಗ? ನೀವೀಗ ಧೈರ್ಯ ತಂದುಕೊಬೇಕ್ರಿ ಗೌಡ್ರ…” ವಕೀಲ ದೊಡ್ಡಣ್ಣ ಸಮಾಧಾನ ಮಾಡಿದರು.

“ತಾನೇ ಪಸಂದ ಮಾಡಿ ಮದುವಿಯಾಗಿದ್ದವಳವನ್ನು ಅಂವ ಯಾಕ್ರೀ ಕೊಲ್ತಾನ?”

“ಅಂದ್ರ ನಿಮ್ಮ ಮಗ ಆ ಹುಡುಗಿನ್ನ ಮದುವಿಯಾಗೋದು ನಿಮಗ ಒಪ್ಪಿಗೆ ಇರಲಿಲ್ಲ ಅಂತಾತು… ಮತ್ತ…?”

“ಏನ್ರೀ ಹಂಗಂದ್ರ? ಅಂವ ಆ ಹುಡುಗೀನ ಕಾಲೇಜಿನ್ಯಾಗ ನೋಡಿ ಆಕಿನ್ನೇ ಮದುವಿ ಆಗೋದು ಅಂತ ಹಟ ಮಾಡಿದ. ಹೊಲ-ಮನಿ, ಆಳು-ಕಾಳು, ಮೋಟಾರುಗಾಡಿ-ಟ್ರ್ಯಾಕ್ಟರ್ ಗಾಡಿಗಳಿರೋ ಕಮತದ ಮನಿ ನಮ್ಮದು, ಅವರು ಸಾಧಾರಣ ಮಂದಿ. ನಮಗ ಸರಿಹೊಂದಗಿಲ್ಲ ಅಂತ ಹೇಳಿದ್ರ… ಇಲ್ಲ ನನಗ ಆಕಿನೇ ಬೇಕು ಅಂತ ಅಳಕೋತ ಕುಂತ. ಈಗ ನಮಗ ಅದೇ ಮುಳುವಾತು…”. ರಂಗಪ್ಪಗೌಡ ಮಾತು ಮುಂದುವರೆಸಿದ.

“ಅಲ್ರೀ ವಕೀಲ ಸಾಹೇಬ್ರ, ಆ ಸಬ್ ಇನ್ಸಪೆಕ್ಟರ್ ಸಾಹೇಬ ಹೆಂಗ ಅದಾನು? ಇನ್ನೂ ಕಾಲೇಜ್ ಕಲಿತಿರೋ ಹುಡುಗೂರ ಹಂಗ ಹುರುಪಿನಿಂದ ಇರ್ತಾನ… ಮತ್ತ ಈ ಜಡ್ಜ್ ಸಾಹೇಬ್ರು ಹೆಂಗ ಅದಾರು? ಅವರ ಮಕ್ಕಳು-ಮರಿ, ಸಂಸಾರ ಇಲ್ಲೇ ಐತೇನು?”

“ನಿಮ್ಮ ಮಾತಿನ ಅರ್ಥ ಆಗಲಿಲ್ಲರಿ ಗೌಡ್ರ… ಯಾಕ ಈ ಮಾತು ಕೇಳಾಕತ್ತೀರಿ?” ಆಶ್ಚರ್ಯದಿಂದ ಕೇಳಿದ ದೊಡ್ಡಣ್ಣ ಜಡ್ಜ್ ಸಾಹೇಬ್ರು ಎಷ್ಟು ಸ್ಟ್ರಿಕ್ಟ್ ಇದ್ದಾರಂತ ಗೊತ್ತಿದ್ರೂ ಆ ಬಗ್ಗೆ ಮಾತನಾಡಲಿಲ್ಲ.

ರೂಪಾಳ ಮ್ಯಾಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣದಾಗ ಆಪಾದಿತರಿಗೆ ಜಾಮೀನು ಸಿಗಲಿಲ್ಲ. ಕುಮಾರ, ಮುದ್ದಪ್ಪ ಮತ್ತು ರಾಜಾನ ವಿರುದ್ಧ ರೇಪ್ ಮತ್ತು ಮರ್ಡರ್ ಕೇಸ್ ದಾಖಲೆಯಾಗಿ ಚಿಂಚನೂರು ನ್ಯಾಯಾಲಯದಲ್ಲಿ ವಿಚಾರಣೆ ಶುರುವಾಯಿತು. ಸರಕಾರಿ ವಕೀಲರಾದ ಪಾಟೀಲರು ಫಿರ್ಯಾದಿ ಪಕ್ಷದ ಪರವಾಗಿ ವಾದ ಮಾಡೋದು, ಕ್ರಿಮಿನಲ್ ವಕೀಲರಾದ ದೊಡ್ಡಣ್ಣ ಆಪಾದಿತರ ಪರವಾಗಿ ಡಿಫೆನ್ಸ್ ಮಂಡಿಸೋದು, ವಿಚಾರಣೆಗೆ ಮುಂದಿನ ದಿನಾಂಕ ತೊಗೊಳ್ಳೋದು ನಡೀಲಿಕ್ಕತಿತು. ಸಬ್ ಇನ್ಸಪೆಕ್ಟರ್ ರವಿ ಕೊಲೆಗೆ ಸಂಬಂಧಪಟ್ಟ ಸಾಕ್ಷಿಗಳನ್ನು ಹುಡುಕುವ ಪ್ರಯತ್ನವನ್ನು ಜೋರಾಗಿ ನಡೆಸಿದ.

ಮಿಂಚಿನ ಬೆಳಕಿನ್ಯಾಗ ದೊಡ್ಡ ದೊಡ್ಡ ಮಾವಿನ ಮರ, ನೇರಳೆ ಮರ, ಕುರುಚಲು ಪೊದೆಗಳಿದ್ದ ಸುತ್ತಮುತ್ತಲಿನ ಜಾಗ, ಅದರ ನಡುವೆ ಭೂತಬಂಗಲಾದ ಹಂಗ ಮನಿ ಕಂಡು ರವಿಗೆ ಹಾರರ್ ಸಿನೆಮಾದ ದೃಶ್ಯ ನೆನಪಾಯಿತು. ಒಂದೇ ಸಮ ಸುರೀತಿದ್ದ ಮಳಿಯೊಳಗ ಅಲ್ಲೇ ಮಗ್ಗಲದಾಗಿನ ಕುರುಚಲ ಗಿಡದ ಬುಡದಾಗ ಮುದುರಿಕೊಂಡು ಮಲಗಿದ್ದ ಎರಡು ನಾಯಿಗಳು ಮೋಟಾರುಸೈಕಲ್ಲಿನ ಲೈಟ್ ಕಂಡಕೂಡಲೇ ಎದ್ದು ನಿಂತು ಜೋರಾಗಿ ಒದರಲಿಕ್ಕೆ ಶುರು ಮಾಡಿ, ಮಳಿ ಬರ್ತಿದ್ದರೂ ಲೆಕ್ಕಿಸದೇ ಗಾಡಿ ಹಿಂದೆ ಓಡಿ ಬಂದವು.

ಆಶಾ ಅಂದುಕೊಂಡ ಹಂಗ ಪುಟ್ಟಿ ಮತ್ತು ಚಿನ್ನು ಇಬ್ಬರೂ ಸಿಪಾಯಿ ಶಂಕರನನ್ನು ಜೊತಿಗೆ ಕರಕೊಂಡು ಸಾಲಿಗೆ ಹೋಗಿಬರಲಿಕ್ಕೆ ಶುರುಮಾಡಿದ್ರು. ದೊಡ್ಡ ಹಳ್ಳಿ ಹಂಗಿದ್ದ ಚಿಂಚನೂರಿನ್ಯಾಗ ಮಕ್ಕಳಿಬ್ಬರೂ ಸರಕಾರಿ ಸಾಲಿಯೊಳಗ ಓದೋದು ಆಶಾಗ ಒಂದು ಚೂರೂ ಪಸಂದ ಇರಲಿಲ್ಲ. ಊರ ಹೊರಗ ಕಾಡಿನ್ಯಾಗ ಇರೋಹಂಗ, ಗಿಡಮರಗಳ ನಡುವೆ ಇರೋ ಕೋರ್ಟಿನ ಹಳೇ ಬಿಲ್ಡಿಂಗ್, ಅದರ ಹಿಂದ ಒಂದು ಸಣ್ಣ ಜೈಲು, ದೊಡ್ಡ ಕಾಂಪೌಂಡಿನಲ್ಲಿದ್ದ ಹಳೆಯದಾದ ಅವರು ವಾಸ ಮಾಡ್ತಿದ್ದ ಸರಕಾರಿ ಬಂಗಲೆ, ಅದರ ಹಿಂದ ಒಂದು ದೊಡ್ಡ ಭಾವಿ, ಮನಿ ಮುಂದ ನೂರು ಮೀಟರಿನ ದೂರದಾಗ ಇರೋ ಹೈವೆ, ಅಲ್ಲಿ ಓಡಾಡುವ ಲಾರಿಗಳು, ಗಾಡಿಗಳು, ಆ ಕಡೆ ಸರಕಾರಿ ಬಸ್ ಸ್ಟ್ಯಾಂಡ್, ಅಲ್ಲಿಗೆ ಬಂದುಹೋಗೋ ನೂರಾರು ಬಸ್ಸುಗಳು… ಇವೆಲ್ಲದರ ಜೊತಿಗೆ ಕೋರ್ಟಿನ ಕೆಲವು ಸಿಬ್ಬಂದಿಯನ್ನು ಹೊರತುಪಡಿಸಿ ಬ್ಯಾರೆ ಮಂದಿ ಜೊತಿಗೆ ಹೆಚ್ಚಿನ ಸಂಪರ್ಕ ಇಲ್ಲದೇ ಇರೋದು ಆಶಾಗ ಬ್ಯಾಸರ ತರಸ್ತಿತ್ತು. ಮಕ್ಕಳಿಗೆ ಆಟಗಿಸಾಮಾನು, ಬಟ್ಟಿ ಅಂತ ತೊಗೊಬೇಕಂದ್ರ ಚಿಂಚನೂರಿನಲ್ಲಿರೋ ಅಂಗಡಿಗಳಿಗೆ ಹೋಗಲಿಕ್ಕೆ ಬ್ಯಾಡ ಅಂತಿದ್ದ ಜಡ್ಜ್ ಆನಂದ್ ಆಗಾಗ ಜಿಲ್ಲಾಕೇಂದ್ರ ಕಲಬುರಗಿಗೆ ಕರಕೊಂಡು ಹೋಗ್ತಿದ್ದರು. ಇನ್ನು ಚಿಂಚನೂರಿನೊಳಗ ಎಲ್ಲಾರೂ ಹೊರಗ ಹೋಗಬಕಂದ್ರ ಒಬ್ಬ ಪೊಲೀಸ್ ಕಾನಸ್ಟೇಬಲ್ ಯಾವಾಗ್ಲೂ ಜೊತಿಗೆ ಬರ್ತಿದ್ದ. ಪುಟ್ಟಿ ಮತ್ತು ಚಿನ್ನೂರ ಸಾಲಿಗೂ ಹೋಗಲಿಕ್ಕೆ ಆಗದೇ ಆಶಾಳ ಮನಸ್ಸು ಕುಗ್ಗಿ ಹೋಗ್ತಿತ್ತು. “ಇದೇನು ಬದುಕು? ಮಕ್ಕಳ ಜೊತಿಗೆ ಸಾಲಿಗೂ ಹೋಗಿಬರೋ ಸ್ವಾತಂತ್ರ್ಯನೂ ನನಗಿಲ್ಲ….” ಅಂತ ನೊಂದುಕೊಂಡರೂ ಆನಂದ್ ನ್ಯಾಯಾಧೀಶರಾಗಿ ತಮ್ಮ ಕೆಲಸ ನಿರ್ವಹಿಸುವುದರಲ್ಲಿ ಹಾಕಿಕೊಂಡಿದ್ದ ಇಂಥ ಕೆಲವು ನಿಯಮಗಳನ್ನು ಯಾವ ಮಾತೂ ಆಡದೇ ಆಕಿ ಪಾಲಿಸುತ್ತಿದ್ದಳು. ಇಂಥ ನೀರಸ ಬದುಕಿಗೆ ಒಂದಿಷ್ಟು ಪುಸ್ತಕಗಳು ಮತ್ತು ಸಣ್ಣ ಮರಿಗಳಾಗಿದ್ದಾಗ ಮನಿ ಹತ್ತಿರ ಬಂದು ಸೇರಿಕೊಂಡಿದ್ದ ನಾಯಿಗಳೆರಡು, ಚಂದ್ರು ಮತ್ತು ಕಾಳ ಜೊತಿಯಾಗಿದ್ದವು.

ಸಂಜಿ ಹೊತ್ತಿಗೆ ಆಶಾ ಅಂಗಳದಾಗ ಹಬ್ಬಿಸಿದ್ದ ಮಲ್ಲಿಗೆ ಬಳ್ಳಿಯಿಂದ ಮಲ್ಲಿಗಿ ಹೂವು ಕಿತ್ತು ಪುಟ್ಟಿ ಸಾಲಿಯಿಂದ ಬರೋವಷ್ಟರಲ್ಲಿ ಮಾಲಿ ಕಟ್ಟಿದರಾಯಿತು ಅಂತ ಅಂದುಕೊಂಡಳು. ಗೇಟ್ ತೆಗೆದ ಶಬ್ದ ಕೇಳಿಸಿ ಆ ಕಡೆ ನೋಡಿದ್ರ, ಪುಟ್ಟಿ ಗಾಬರಿಯಾಗಿ ಓಡಿ ಬಂದು ಮಾತಾಡಿದಳು.
“ಅಮ್ಮ… ನಾನು, ಶಂಕರ ಸಾಲಿಯಿಂದ ಬರುವಾಗ ಯಾರೋ ಇಬ್ಬರು ನಮ್ಮ ಹಿಂದನ ಬರ್ತಾಯಿದ್ದರು….”. ಆಶಾಗ ಗಾಬರಿಯಾದರೂ ತೋರಿಸಿಕೊಳ್ಳದೇ, “ಹಾದಿಯೊಳಗ ಎಷ್ಟೋ ಮಂದಿ ಓಡಾಡ್ತಾಯಿರ್ತಾರಲ್ಲ ಪುಟ್ಟಿ…” ಅಂದಳು.

“ಇಲ್ಲಾಮ್ಮಾ… ಅವರಿಬ್ಬರೂ ಸಾಲಿ ಹತ್ತಿರದಿಂದಲೇ ನಮ್ಮ ಹಿಂದನ ಬರ್ತಾಯಿದ್ದರು. ಬೇಕಾದ್ರ ಶಂಕರನನ್ನು ಕೇಳು”. ಓಡಿಕೋತ ಬಂದಿದ್ದರಿಂದ ಪುಟ್ಟಿಗೆ ದಮ್ಮ ಹತ್ತಿತ್ತು.

“ಆಮ್ಯಾಲೆ ಏನಾಯ್ತು?” ಕಾಳಜಿಯಿಂದ ಕೇಳಿದಳು ಆಶಾ.

“ಹೂಂ ಅಮ್ಮ, ಇಬ್ಬರು ಗಂಡಸರು ನಮ್ಮ ಹಿಂದನೇ ಬರ್ತಾಯಿದ್ದರು. ಅಲ್ಲೆ ಬ್ರಿಡ್ಜ್ ಹತ್ತಿರ ಬಂದಾಗ ಮೋಟಾರಬೈಕಿನಲ್ಲಿ ಎಸ್.ಐ. ರವಿ ಹೋಗ್ಲಿಕತ್ತಿದ್ದವರು ನಮ್ಮನ್ನು ನೋಡಿ ಗಾಡಿ ನಿಲ್ಲಿಸಿ ಮಾತನಾಡಿಸಿದ್ರು… ಆಮ್ಯಾಲೆ ಹಿಂದೆ ಬರ್ತಾಯಿದ್ದ ಅವರಿಬ್ಬರೂ ಗಾಯಬ್! ನಾನು ಮತ್ತು ಶಂಕರ ಇಬ್ಬರು ಅಲ್ಲಿಂದ ಮನಿತನಕ ಓಡಿಕೋತನ ಬಂದ್ವಿ…”.

“ಹೌದಾ? ಮತ್ತ ಇದನ್ನು ನೀನು ಎಸ್.ಐ. ರವಿಗೆ ಹೇಳಬೇಕಿತ್ತು?” ಪುಟ್ಟಿ ಮಾತನಾಡಲಿಲ್ಲ. ಅಷ್ಟೊತ್ತಿಗೆ ಕೋರ್ಟಿನಿಂದ ಫೈಲಿನ ಗಂಟು ಹಿಡುಕೊಂಡಿದ್ದ ದಫೇದಾರ, ಪೊಲೀಸ್ ಕಾನಸ್ಟೇಬಲ್ ಹನುಮಂತಪ್ಪ ಮತ್ತು ಅವನ ಹಿಂದ ಆನಂದ್ ಬಂದರು. ಆಶಾ ಮತ್ತು ಪುಟ್ಟಿನ್ನ ನೋಡಿದರೂ ಏನೂ ಮಾತಾಡದೇ ಮನಿಯೊಳಗ ಹೋದದ್ದನ್ನು ನೊಡಿದ ಆಶಾಗ ಯಾಕೋ ಒಂಥರಾ ಅನಿಸಿತು.

ರಾತ್ರಿ ಊಟ ಮುಗಿಸಿ ಮಕ್ಕಳಿಬ್ಬರನ್ನು ಮಲಗಿಸಿದ ಆಶಾ ಆಫೀಸ್ ರೂಮಿನಲ್ಲಿ ಫೈಲುಗಳನ್ನು ನೋಡುತ್ತಿದ್ದ ಆನಂದ ಅವರ ಜೊತಿಗೆ ಮಾತಾಡಿದಳು. ಅವತ್ತು ನಡೆದಿದ್ದ ಘಟನೆಯಿಂದ ಆಕಿಗೆ ಬಹಳ ಹೆದರಿಕೆಯಾಗಿತ್ತು.

“ಮನುಷ್ಯನಿಗೆ ತನ್ನ ಕರ್ತವ್ಯ ನಿಷ್ಠೆಯ ಮುಂದ ಕುಟುಂಬದ ಬಗೆಗಿನ ಜವಾಬ್ದಾರಿನೂ ಮುಖ್ಯ ಆಗೋದಿಲ್ಲೇನು? ಅಪ್ಪನ ಕರ್ತವ್ಯ ನಿರ್ವಹಣೆಗೆ ಮಕ್ಕಳು ಬಲಿಯಾಗಬೇಕೇನು? ಎಲ್ಲರ ಹಂಗ ಮುಕ್ತವಾಗಿ ಬದುಕಲು ಅವರಿಗೆ ಅರ್ಹತೆಯಿಲ್ಲೇನು?”

“ಏನಾಗ್ಯದ ನಿನಗ? ಈ ರೀತಿ ಯಾಕ ಪಶ್ನೆ ಕೇಳಿಕತ್ತೀಯಾ?”

“ಇವತ್ತು ಏನಾಯ್ತು ಅಂತ ನೀವು ಕೇಳಿದ್ರೇನು? ಪುಟ್ಟಿ ಸಾಲಿಯಿಂದ ಬರಬೇಕಾದ್ರ ಯಾರೋ ಇಬ್ಬರು ಹಿಂದಿಂದ ಬಂದರಂತ. ಗಾಬರಿಯಾಗಿ ಮನಿ ತನಕ ಓಡಿಕೊಂಡು ಬಂದಾಳ.” ಆನಂದರಿಗೆ ಮಾತನಾಡಲೂ ಬಿಡದೇ ಆಶಾ ತನ್ನ ಮಾತನ್ನು ಮುಂದುವರೆಸಿದಳು.

“ಇದೂ ಒಂದು ಬದುಕೇನು? ನಿಮ್ಮ ಕೆಲಸದ ವಿಷಯದಾಗ ಮಕ್ಕಳ್ಯಾಕ ಶಿಕ್ಷೆ ಅನುಭವಿಸಬೇಕು? ಇನ್ನು ನಾನೇನು ಜೈಲಿನಲ್ಲಿರೋ ಖೈದಿಯೇನು? ಸ್ವತಂತ್ರವಾಗಿ ಅಡ್ಡಾಗಿ ಬರ್ತೀನಿ ಅಂದ್ರೂ ಆಗಂಗಿಲ್ಲ. ಮನಿ ಮುಂದಿನ ನಾಯಿಗಳ ಬದುಕೇ ಛೊಲೋ ಅದ. ತಮಗ ಬೇಕನಿಸಿದಾಗ ಚಂದ್ರು, ಕಾಳ ಕಾಂಪೌಂಡಿನ ಹೊರಗ ಹೋಗಿ ತಿರುಗಾಡಿಕೊಂಡು ಬರ್ತಾವ. ಇದಕ್ಕೆ ಏನಾದರೂ ಮಾಡ್ರಿ. ನನ್ನ ಕೆಲಸದಾಗ ಇದೆಲ್ಲ ಸಹಜ ಅಂತ ಮಾತ್ರ ಹೇಳಬ್ಯಾಡ್ರಿ…”

“ನೋಡು, ಸಣ್ಣ ಊರಿನ್ಯಾಗ ನಮ್ಮನ್ನು ಎಲ್ಲಾರೂ ಗುರುತು ಹಿಡೀತಾರಂತ ಈ ರೀತಿಯ ಬದುಕನ್ನು ರೂಢಿಸಿಕೊಂಡದ. ಉಳಿದ ಮಂದಿ ಹಂಗ ನಾವು ಅಂಗಡಿ, ಹೊಟೆಲ್, ಸಿನೆಮಾ ಅಂತ ಹೋದ್ರ ಕೋರ್ಟಿನ ಕೆಲಸದ ವಿಷಯಗಳಲ್ಲಿ ಯಾವುದೋ ರೀತಿಯಿಂದ ಸಹಾಯವನ್ನು, ಅನುಕಂಪವನ್ನು ಅಪೇಕ್ಷಿಸಬಹುದು. ದೊಡ್ಡ-ದೊಡ್ಡ ಊರುಗಳಲ್ಲಿ ಇದ್ಯಾವುದೂ ಹೆಚ್ಚಾಗಿ ನಡೆಯುವುದಿಲ್ಲ ಅನ್ನೋದು ನನ್ನ ಅಭಿಪ್ರಾಯ. ಊರು ವಿಶಾಲ ಆದಷ್ಟೂ ಮನುಷ್ಯನ ವಿಚಾರಗಳು ವಿಶಾಲ ಆಗ್ತಾವ.”

“ನೀವು ಏನೋ ಒಂದು ಮಾತು ಹೇಳಿ ನನಗ ಸುಮ್ಮನಾಗಿಸ್ತೀರಿ. ನಾಳಿಂದ ಮಕ್ಕಳನ್ನು ಸಾಲಿಗೆ ಕಳಿಸಲಿಕ್ಕೆ ಹೆದರಿಕೆ ಆಗ್ತದ..”

“ಅದಕ್ಯಾಕ ಹೆದರಬೇಕು? ನಾಳಿಂದ ಪೊಲೀಸ್ ಕಾನಸ್ಟೇಬಲ್ ಹನುಮಂತಪ್ಪನನ್ನು ಮಕ್ಕಳ ಜೊತಿಗೆ ಕಳಿಸಿದರಾಯಿತು.” ಆನಂದ್ ಅವರ ಮಾತಿನಿಂದ ಸ್ವಲ್ಪ ಸಮಾಧಾನ ಮಾಡಿಕೊಂಡರೂ ಆಶಾ ಮತ್ತೊಂದು ಪ್ರಶ್ನೆ ಕೇಳಿದಳು.

“ಇವತ್ತು ನೀವ್ಯಾಕ ಕೋರ್ಟಿಂದ ಬಂದಾಗಿಂದ ಒಂಥರಾ ಇದ್ದೀರಿ? ಮಕ್ಕಳನ್ನೂ ಸರಿಯಾಗಿ ಮಾತಾಡಿಸಲಿಲ್ಲ.” ಆಶಾಳ ಮಾತಿಗೆ ಆನಂದ್ ಟೇಬಲ್ಲಿನ ಡ್ರಾದಿಂದ ಕಾಗದವೊಂದನ್ನು ತೆಗೆದರು.

“ಇದನ್ನು ನೋಡು… ಇವತ್ತು ನನಗ ಬಂದಿರೋ ಪತ್ರ…” ಅಂತ ಒಂದು ಪತ್ರ ತೆಗೆದು ಆಶಾಳ ಕೈಯಾಗ ಕೊಟ್ಟರು. ಗಾಬರಿಯಾದ ಆಶಾ ಪತ್ರ ಓದಿಲಿಕ್ಕೆ ಶುರು ಮಾಡಿದಳು.

“ಜಡ್ಜ್ ಸಾಹೇಬರಿಗೆ,
ನಿಮಗ ಅಪರಾಧಿ ಯಾರು ಮತ್ತು ನಿರಪರಾಧಿ ಯಾರಂತ ತಿಳಿಯೋದಿಲ್ಲೇನು? ನಮಗ ಅನ್ಯಾಯ ಮಾಡಿದರೆ ನಿಮಗೆ ಒಳ್ಳೆಯದಾಗಂಗಿಲ್ಲ. ನಿರಪರಾಧಿಗೆ ಶಿಕ್ಷೆ ಕೊಟ್ಟರೆ ನಿಮ್ಮ ವಂಶ ನಿರ್ವಂಶ ಆಗ್ತದ. ಆಗ ನಿಮಗೂ ಹೆತ್ತವರ ಸಂಕಟ ಅರ್ಥ ಆಗ್ತದ.”

ಯಾರ ಹೆಸರೂ ಬರೆದಿರದ ಮೂಕರ್ಜಿಯನ್ನು ಓದಿದ ಆಶಾ ನಿಂತಲ್ಲೇ ನಡುಗಿದಳು. ಗಾಬರಿಯಿಂದ ಕಣ್ಣಾಗ ನೀರು ತುಂಬಿಕೊಂಡು ಮಾತಾಡಿದಳು.

“ಇವತ್ತು ಪುಟ್ಟಿನ್ನ ಫಾಲೋ ಮಾಡಿಕೊಂಡು ಬಂದ್ರು. ನಿಮಗ ನೋಡಿದ್ರ ಈ ರೀತಿ ಪತ್ರ ಬರದಾರ… ಹೀಂಗ ಅಂಜಿಸಿಕೋತ ಹೋದ್ರ ನಮಗ ಈ ಕೆಲಸನೂ ಬ್ಯಾಡ, ಕಿರಿಕಿರಿನೂ ಬ್ಯಾಡ… ನಮ್ಮೂರಿಗೆ ನಾವು ಹೋಗೋಣು. ಹೆಂಗೋ ಬದುಕಬಹುದು… ಇಲ್ಲಿದ್ದುಕೊಂಡು ನಮ್ಮ ಮಕ್ಕಳ್ಯಾಕ ಬಲಿಯಾಗಬೇಕು…” ಕೈಯೊಳಗಿದ್ದ ಪತ್ರ ಅಲ್ಲೇ ಒಗದು ಅಳುತ್ತ ಮಕ್ಕಳ ರೂಮಿಗೆ ಓಡಿಹೋದಳು.

ಆಶಾ ಒಗದು ಹೋದ ಪತ್ರವನ್ನು ನೋಡಿಕೋತ ಆನಂದ್ ಯೋಚನಿ ಮಾಡಿದರು. ಸಾಕ್ಷಿಗಳನ್ನಾಧರಿಸಿ ನ್ಯಾಯ ಒದಗಿಸುವ ಕಾನೂನಿನ ವ್ಯವಸ್ಥೆಯಲ್ಲಿ ತಾನು ಏನು ಮಾಡಲು ಸಾಧ್ಯ? ನಮ್ಮ ಸುರಕ್ಷತೆಗಾಗಿ ವಿಚಾರಣೆಗಳನ್ನು ಮುಂದೂಡಿ ತೀರ್ಪುನ್ನು, ನ್ಯಾಯ ಒದಗಿಸುವದನ್ನು ತಡಮಾಡಬೇಕೇನು? ನ್ಯಾಯ ಒದಗಿಸುವ ಕೆಲಸದಲ್ಲಿರುವವನ ತಲಿ ಮ್ಯಾಲೆ ಸದಾ ತೂಗುಗತ್ತಿಯಿದ್ದರೂ ಸಮಾಧಾನದಿಂದ ಜೀವನ ನಡೆಸಬೇಕಾಗುತ್ತದೆ. ಇದೇ ಕಾರಣಕ್ಕೇ ನ್ಯಾಯಾಂಗ ವ್ಯವಸ್ಥೆ ತನ್ನ ಬಗೆಗಿನ ನಂಬಿಕೆಯನ್ನು ಇನ್ನೂ ಉಳಿಸಿಕೊಂಡದ. ತೀರ್ಪು ತನ್ನ ವಿರೋಧವಾಗಬಹುದು ಅಂತ ತಿಳಿದಾಗ ಮನುಷ್ಯ ಸಿಟ್ಟಿಗೇಳ್ತಾನ, ಏನೋನೋ ಕೆಲಸಗಳನ್ನು ಮಾಡಲಿಕ್ಕೆ ಮುಂದಾಗ್ತಾನ. ತೀರ್ಪು ಒಬ್ಬರಿಗೆ ಪರವಾದರೆ ಇನ್ನೊಬ್ಬರಿಗೆ ವಿರೋಧ ಆಗ್ತದಲ್ಲೇನು? ನ್ಯಾಯಕ್ಕ ಪರ-ವಿರೋಧ ಇರ್ತದೇ ಹೊರತು ನ್ಯಾಯಾಧೀಶನಿಗೆ ಅಲ್ಲವಲ್ಲ? ನ್ಯಾಯಾಧೀಶ ಯಾರ ಪರವೂ ಇರುವುದಿಲ್ಲ, ವಿರೋಧವೂ ಇರುವುದಿಲ್ಲ. ಹೆದರಿಕೊಂಡು ಊರಿಗೆ ಹೋಗಿಬಿಡೋಣ ಅನ್ನುವ ಆಶಾಗೆ ಹೆಂಗ ತಿಳಿಸಿ ಹೇಳುವುದು?

******

ರೂಪಾಳ ಕೊಲೆ ಪ್ರಕರಣದಾಗ ಪೊಲೀಸರಿಗೆ ಹೆಚ್ಚಿನ ಸುಳಿವು ಸಿಕ್ಕವು. ಸಿನೆಮಾ ಟಾಕೀಸಿನ ಹತ್ತಿರ ಕುಮಾರನ ಜೀಪಿನ ಚಕ್ರದ ಅಚ್ಚು ಮೂಡಿತ್ತು. ಅದರ ಜಾಡು ಹಿಡಿದುಕೊಂಡು ಸುತ್ತಲಿನ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಅದೇ ಚಕ್ರದ ಅಚ್ಚು ನದಿ ದಂಡೆಯ ಹತ್ತಿರನೂ ಸಿಕ್ಕಿತು. ಕುಮಾರನ ಜೀಪನ್ನು ಹುಡುಕಿಕೊಂಡು ಸಬ್ ಇನ್ಸಪೆಕ್ಟರ್ ರವಿ ಮತ್ತು ತಂಡ ರಂಗಪ್ಪಗೌಡನ ಮನಿಗೆ ಹೋದಾಗ ಜೀಪಿನ ಹಿಂದಿನ ಸೀಟಿನ ಸಂದಿಯಲ್ಲಿ ಸಿಕ್ಕಿದ ನಾಲ್ಕು ಸಿನೆಮಾ ಟಿಕೇಟ್ ಗಳನ್ನು ಎವಿಡೆನ್ಸ್ ಆಗಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಸಾಕ್ಷಿಗಳನ್ನು ಹುಡುಕುವಲ್ಲಿ ಎಸ್.ಐ. ರವಿಯ ಸ್ಪೀಡ್ ನೋಡಿದ ರಂಗಪ್ಪಗೌಡ, “ಜೀವನದಾಗ ಸ್ಪೀಡ್ ಒಳ್ಳೇದಲ್ಲರಿ ಸಾಹೇಬ್ರ…” ಅಂತ ಎಚ್ಚರಿಸಿದ್ದನ್ನು ರವಿ ಕಿವಿಗೆ ಹಾಕಿಕೊಳ್ಳಲಿಲ್ಲ.

ಮುಂದಿನ ವಿಚಾರಣೆಯನ್ನು ನಡೆಸಿದಾಗ ರಾಜಾ ಮತ್ತು ಮುದ್ದಪ್ಪ ಕುಮಾರನ ಜೊತಿಗೆ ಸಿನೆಮಾಗೆ ಹೋಗಿದ್ದನ್ನು ಒಪ್ಪಿಕೊಂಡುಬಿಟ್ಟರು. ಇದರಿಂದ ಕುಮಾರನಿಗೆ ತಲಿಕೆಟ್ಟಂಗ ಆಯಿತು. ಸರಕಾರಿ ವಕೀಲರು ಅವನ ಮತ್ತು ರೂಪಾಳ ವೈವಾಹಿಕ ಜೀವನದ ಬಗ್ಗೆ ವಿಚಾರಣೆ ನಡೆಸಿದಾಗ ಕುಮಾರ ಎಲ್ಲವನ್ನು ಬಾಯಿಬಿಟ್ಟ.

“ನಾನು ರೂಪಾನ್ನ ಮೊದಲಿಗೆ ಚಂದಾಪುರ ಕಾಲೇಜಿನ್ಯಾಗ ನೊಡಿದ್ದೆ. ರೂಪಾ ನೋಡಲಿಕ್ಕೆ ಭಾಳ ಛಂದ ಇದ್ದಳು. ಅದಕ್ಕ ನನಗೆ ಪಸಂದ ಆಗಿಬಿಟ್ಟಳು. ಆದ್ರ ನಾನು ಆಕಿನ್ನ ಮಾತಾಡಿಸಲಿಕ್ಕೆ ಹೋದ್ರೆ ಆಕಿ ಮಾತಾಡಲಿಲ್ಲ… ನಮ್ಮ ಅಪ್ಪ-ಅವ್ವನ್ನ ಅವರ ಮನಿಗೆ ಕರೆಕೊಂಡು ಹೋದೆ. ತಾನಾಗೇ ಮದುವಿಗೆ ಒಪ್ಪಿಕೊಂಡಳು. ಆಕಿನ್ನ ನೋಡಿದಾಗಿನಿಂದ ನನಗೆ ಆಕಿ ಮ್ಯಾಲೆ ಕಣ್ಣಿತ್ತು, ಅದನ್ನ ಮುದ್ದಪ್ಪ ಮಾವ ಮತ್ತು ರಾಜನಿಗೆ ಹೇಳಿದ್ದೆ.”

ಸಬ್ ಇನ್ಸಪೆಕ್ಟರ್ ರವಿ ರೂಪಾಳ ಪೋಸ್ಟ್ ಮಾರ್ಟಮ್ ರಿಪೋರ್ಟ್, ಆಪಾದಿತರ ಮೆಡಿಕಲ್ ರಿಪೋರ್ಟ, ಫಿಂಗರ್ ಪ್ರಿಂಟ್ ರಿಪೋರ್ಟ್, ಕೊಲೆ ನಡೆದ ಜಾಗದ ಕೆಲವು ಫೊಟೋಗಳನ್ನು ಕೋರ್ಟಿಗೆ ಒಪ್ಪಿಸಿದಾಗ, ಎಲ್ಲ ವಿಚಾರಣೆಗಳು ಮತ್ತು ಸಾಕ್ಷಿಗಳನ್ನಾಧರಿಸಿ ಕುಮಾರ, ಮುದ್ದಪ್ಪ ಮತ್ತು ರಾಜಾರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಜಡ್ಜ್ ಆನಂದ್ ತಮ್ಮ ತೀರ್ಪನ್ನು ನೀಡಿದರು. ಮಗನಿಗೆ ಶಿಕ್ಷೆಯಾದ ವಿಷಯದಿಂದ ರೊಚ್ಚಿಗೆದ್ದ ರಂಗಪ್ಪಗೌಡ. ವಕೀಲ ದೊಡ್ಡಣ್ಣ ಹೈಯರ್ ಕೋರ್ಟಿನಲ್ಲಿ ಅಪೀಲು ಮಾಡಬಹುದು ಅಂತ ಹೇಳಿದಾಗ, “ಸುಪ್ರಿಂಕೋರ್ಟವರೆಗೆ ಹೋಗಿಯಾದ್ರೂ ನನ್ನ ಮಗನ್ನ ಬಿಡಿಸಿಕೊಂಡು ಬರ್ತೀನಿ” ಅಂತ ಒದರಾಟ-ಚೀರಾಟ ಮಾಡಿದ.

ರಂಗಪ್ಪಗೌಡ ಅಂದುಕೊಂಡಂಗ ಕಲಬುರಗಿ ಜಿಲ್ಲಾ ನ್ಯಾಯಾಲಯದೊಳಗ ಕುಮಾರನ ಕೇಸಿನ ಹೊಸ ವಿಚಾರಣೆ ಶುರುವಾಯಿತು. ದೊಡ್ಡ ಕ್ರಿಮಿನಲ್ ಲಾಯರ್ ಶೇಖರ್ ತಮ್ಮ ಮೂವತ್ತು ವರ್ಷಗಳ ವಕಾಲತ್ತಿನ ಅನುಭವದೊಂದಿಗೆ ಮೊಕದ್ದಮೆಗೆ ಸಜ್ಜಾದರು. ಕುಮಾರ, ಮುದ್ದಪ್ಪ, ರಾಜಾನ ಪರವಾಗಿ ತಮ್ಮ ಕಡೆಯಿಂದ ಹೊಸ, ಹೊಸ ಸಾಕ್ಷಿಗಳನ್ನು ಕೋರ್ಟಿನ ಮುಂದ ಹಾಜರುಪಡಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್ ಫಿರ್ಯಾದಿ ಪಕ್ಷದ ಪರವಾಗಿ ಮೊಕದ್ದಮೆಗೆ ತಯಾರಿ ನಡೆಸಿದಾಗ, ಸಬ್ ಇನ್ಸಪೆಕ್ಟರ್ ರವಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿ ಎಫ್.ಐ.ಆರ್. ಮಾಹಿತಿಯನ್ನು ಮಾತ್ತೊಮ್ಮೆ ಒಪ್ಪಿಸಿದರು. ಆರು ತಿಂಗಳು ನಡೆದ ವಿಚಾರಣೆಯಲ್ಲಿ ಲಾಯರ್ ಶೇಖರ್ ಒಪ್ಪಿಸಿದ ಸಾಕ್ಷಿಗಳನ್ನು, ರವಿ ಹಾಜರು ಪಡಿಸಿದ ಎಫ್.ಐ.ಆರ್. ಮಾಹಿತಿಯನ್ನು ಪರಿಶೀಲಿಸಿದ ಜಿಲ್ಲಾ ನ್ಯಾಯಾಧೀಶರು ತಮ್ಮ ತೀರ್ಪನ್ನು ನೀಡಿದರು.

******

ಮಕ್ಕಳಿಗೆ ಸಾಲಿ ಸೂಟಿಯಂತ ಆಶಾ ಪುಟ್ಟಿ ಮತ್ತು ಚಿನ್ನೂನ ಕರಕೊಂಡು ತವರುಮನಿಗೆ ಹೋಗಿದ್ದಳು. ತಮ್ಮ ಚೇಂಬರಿನ್ಯಾಗ ಕೂತುಗೊಂಡು ಫೈಲ್ ಓದ್ತಾಯಿದ್ದ ಆನಂದ್ ಅವರಿಗೆ ದಫೇದಾರ್ ಸರಕಾರಿ ಪತ್ರವೊಂದನ್ನು ತಂದುಕೊಟ್ಟು ಹೋದ. ಉಚ್ಚ ನ್ಯಾಯಾಲಯದ ಆಡಳಿತ ವಿಭಾಗದಿಂದ ತಮ್ಮ ಹೆಸರಿಗೆ ಬಂದಿದ್ದ ಪತ್ರವನ್ನು ತೆಗೆದು ಓದಿದರು ಆನಂದ್.

“ವಿಷಯ: ಕೇಸ್ ನಂಬರ್ 120-ರೂಪಾ ಕೊಲೆ ಪ್ರಕರಣ, ಚಿಂಚನೂರು ನ್ಯಾಯಾಲಯ.

ರೂಪಾ ಕೊಲೆ ಪ್ರಕರಣದ ಎಫ್.ಐ.ಆರ್. ದಾಖಲೆಯಲ್ಲಿ ದಿನಾಂಕವನ್ನು ನಮೂದಿಸುವಲ್ಲಿ ಸ್ಪಷ್ಟತೆ ಇಲ್ಲವಾಗಿದ್ದು, ನಿಮ್ಮ ಸಹಿಯೊಂದಿಗೆ ನಮೂದಿಸಿದ ದಿನಾಂಕವನ್ನು ಪರಿಶೀಲಿಸಿದಾಗ ಅದನ್ನು ಸೆಪ್ಟೆಂಬರ್ 22 ರಿಂದ 21 ಕ್ಕೆ ತಿದ್ದಲಾಗಿದೆ ಎಂದು ಕಂಡುಬರುತ್ತದೆ. ಕೊಲೆಯಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಅತಿ ಮುಖ್ಯವಾಗುವ ಎಫ್.ಐ.ಆರ್. ದಾಖಲಿಸುವಲ್ಲಿ ತಪ್ಪಾದಾಗ ನಿರಪರಾಧಿಗಳು ಶಿಕ್ಷೆಯನ್ನು ಪಡೆಯುವ ಸಾಧ್ಯತೆಗಳಿರುತ್ತವೆ. ಉಚ್ಚ ನ್ಯಾಯಾಲಯದ ಆಡಳಿತ ಮಂಡಳಿ ಇದನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ತಮ್ಮಿಂದ ಸ್ಪಷ್ಟೀಕರಣವನ್ನು ಬಯಸುವ ವಿಚಾರಣಾ ಮಂಡಳಿ, ತನ್ನ ಮುಂದಿನ ಆದೇಶದವರೆಗೆ ತಮ್ಮನ್ನು ಅಮಾನತ್ತಿನಲ್ಲಿ ಇಡುವ ನಿರ್ಧಾರವನ್ನು ತೆಗೆದುಕೊಂಡಿದೆ.”

ಪತ್ರವನ್ನು ಕೈಯಾಗ ಹಿಡಿದುಕೊಂಡು ಕೂತ ಆನಂದ್ ಅವರು ಸಬ್ ಇನ್ಸಪೆಕ್ಟರ್ ರವಿಯನ್ನು ಕರೆಸಿ ಮಾತನಾಡಬೇಕು ಅಂದುಕೊಂಡು ಮನಿಗೆ ಹೋಗಬೇಕಂತ ದಫೇದಾರನನ್ನು ಕರೆದಾಗ ಪೊಲೀಸ್ ಕಾನಸ್ಟೇಬಲ್ ಹನುಮಂತಪ್ಪ ಚೇಂಬರಿಗೆ ಬಂದು ಸೆಲ್ಯೂಟ್ ಮಾಡಿ ಮಾತನಾಡಿದ.
“ನಿನ್ನೆ ರಾತ್ರಿ ಚಿಂಚನೂರು ಸ್ಟೇಟ್ ಹೈವೆ ಮ್ಯಾಲೆ ನಮ್ಮ ಸಾಹೇಬ್ರ ಮೋಟಾರಸೈಕಲ್ಲಿಗೆ ಹೈ ಸ್ಪೀಡಿನ್ಯಾಗ ಬಂದ ಲಾರಿ ಡಿಕ್ಕಿ ಹೊಡ್ದಿತ್ರಿ ಸರ್… ಜೊಂಡುಗಟ್ಟಿದ ಕುರುಚಲು ಪೊದಿಯೊಳಗ ಬಿದ್ದ ಅವರಿಗೆ ಭಾಳ ಪೆಟ್ಟಾಗಿತ್ತು. ಅವರು ಅಲ್ಲಿ ಬಿದ್ದಿದ್ದು ಯಾರಿಗೂ ಗೊತ್ತಾಗಿರಲಿಲ್ಲ. ಇವತ್ತು ಮುಂಜಾನೆ ಹೋಗಿ ನೋಡೋದ್ರಾಗ ಸಬ್ ಇನ್ಸಪೆಕ್ಟರ್ ರವಿ ಸಾಹೇಬ್ರು ತೀರಿಕೊಂಡಿದ್ರು…”

******

ಚಿಂಚನೂರಿನ ತುಂಬೆಲ್ಲ ಹೊಸ ಸುದ್ದಿಯೊಂದು ಹರಿದಾಡಿತು. ಊರಾಗಿನ ಮಂದಿಯೆಲ್ಲ ಮತ್ತೆ ಮಾತಾಡಿಕೊಂಡರು, “ರೂಪಾಳ ಕೊಲೆ ನಡೆದ ದಿನ ಕುಮಾರ, ಮುದ್ದಪ್ಪ ಮತ್ತು ರಾಜಾ ಚಿಂಚನೂರಿನೊಳಗ ಇರಲಿಲ್ಲ, ಬಳಗದವರ ಮದುವಿಗೆ ಅಂತ ಹೈದ್ರಾಬಾದಿಗೆ ಹೋಗಿದ್ರು…”.