ನಾವು ಚಿಕ್ಕವರಿದ್ದಾಗ ನಮ್ಮನ್ನು ಮಗ್ಗಿ ಬರುತ್ತವೊ ಇಲ್ಲವೋ ಎಂದು ಪರೀಕ್ಷಿಸಲು ಕೇಳುತ್ತಿದ್ದ ಹಾಗೆ ‘ಎರಡ ಒಂಬತ್ಳೆ’, ‘ನಾಲ್ಕ್ ಐದ್ಳೆ’, ‘ಹನ್ನೆರಡ ಎರಡ್ಲೆ’ ಎಷ್ಟು ಎಂದು ಕೇಳುತ್ತಿದ್ದ ಹಾಗೆ ಕೇಳಬೇಕಿತ್ತು. ಹಾಗೆ ನಾವು ಕೇಳಿದ್ದೆ ಕಂಪ್ಯೂಟರಿನ ಸಂಗ್ರಹ ಮಾಹಿತಿ ನೀಡುವ ಉತ್ತರದಂತೆ ಪಟಾಪಟ್ ಎಂದು ಉತ್ತರಿಸಿ ಬಿಡುತ್ತಿದ್ದ. ಅಲ್ಲದೆ ಕೇಳುವ ಪ್ರಶ್ನೆಯು ಒಬ್ಬರ ಬಾಯಿಂದಲೇ ಬರುತ್ತಿದ್ದುದಾಗಿರಲಿಲ್ಲ. ಚಿಕ್ಕವರಾದ ನಾವು ಅವನನ್ನು ಹೆಚ್ಚು ಹೆಚ್ಚು ಕೇಳಿ ನನ್ನ ಪ್ರಶ್ನೆಗೂ ಉತ್ತರ ಕೊಟ್ಟ ಎಂದು ಬೀಗಲು ಮತ್ತಷ್ಟು ಅವನನ್ನು ಕಾಡಿ ಕೇಳಲು ಮುಂದಾಗಿ ಎಲ್ಲರ ಬಾಯಿಂದಲೂ ಒಂದೊಂದು ಸಂಖ್ಯೆಯ ಒಂದೊಂದು ಮಗ್ಗಿಯ ಪ್ರಶ್ನೆ ಹೊರ ಬರುತ್ತಿತ್ತು.
ವಿನೋದಕುಮಾರ್ ಕುಲಕರ್ಣಿ ಬರಹ ನಿಮ್ಮ ಓದಿಗೆ

ನಾವು ನಮ್ಮ ಬೇಸಿಗೆ ರಜೆಯಲ್ಲಿ ಹೆಚ್ಚಾಗಿ ಹೋಗುತ್ತಿದ್ದುದು ನಮ್ಮ ತಾಯಿಯ ಊರಾದ ನರಗುಂದಕೆ. ರಜೆ ಸಿಕ್ಕ ಮೇಲೆ ಊರಿಗೆ ಹೋಗುವುದು ಎಂದಿನ ರೂಢಿ. ಬೇಸಿಗೆ ಕಾಲ. ಊರು ಬಿಸಿಲ ಬೇಗೆಗೆ ಕಾಯುವುದಲ್ಲದೆ ಅದರ ಬೆನ್ನಿಗೆ ಅಂಟಿಕೊಂಡಿದ್ದ ಗುಡ್ಡದ ಕಾವಿನಿಂದ ದಗದಗಿಸುತ್ತಿತ್ತು. ಕಾಡಿನ ಹಸಿರ ಪ್ರಕೃತಿಗೆ ಹತ್ತಿರವಲ್ಲದಿದ್ದರೂ ಮನುಷ್ಯ ಪ್ರಕೃತಿಗೆ ಸಹಜವಾಗೆ ಹತ್ತಿರವಾದ ಊರು.

ನನ್ನ ಈ ಊರಿನ ಮೇಲೆ ಒಂದು ಬೇಸರ ಮಾತ್ರ ಸದಾ ನನಗೆ ಇದ್ದೇ ಇದೆ. ಹೇಳಿದಂತೆ ಇದು ಮನುಷ್ಯ ಪ್ರಕೃತಿಗೆ ಹತ್ತಿರ ಅದರೂ ನನಗೆ ತುಂಬಾ ದೂರ. ಅಷ್ಟೋ ಇಷ್ಟೋ ಓದಿ ಕಾಡು ಅಲೆಯಬೇಕೆಂಬ ಆಸೆ ಹುಟ್ಟಿಸಿಕೊಂಡವ ನಾನು. ಪುಸ್ತಕ ಒಂದರಲ್ಲಿ ಕಾಡಿನ ಪರಿಸರದ ಮಧ್ಯದಲ್ಲಿ ತಾನು ಲೀನವಾಗುತ್ತಿರುವ ಪಾತ್ರವನ್ನು, ಸಿನೆಮಾದಲ್ಲಿ ಕಾಡಿನ ಸೌಂದರ್ಯವನ್ನು ಸವಿಯಲು ತನ್ನ ಊರಿಗೇ ಹೋಗಿ ಕಾಲ ಕಳೆಯುವುದನ್ನು ನೋಡಿದಾಗ ನಮ್ಮ ಊರು ಹೀಗೇ ಇದ್ದಿದ್ದರೆ? ಎಂಬ ಆಸೆ ಹುಟ್ಟಿಸಿಕೊಂಡಿದ್ದೆ‌.

ಬಹಳ ಈಚಿನವರೆಗೂ ನನಗೆ ನನ್ನ ಬಾಲ್ಯದ ಬಗ್ಗೆಯಾಗಲಿ, ನನ್ನ ಊರಿನ ಬಗ್ಗೆಯಾಗಲಿ ಸಂತಸವಿತ್ತೆ ಹೊರತು ಅದನ್ನು ಬರೆದು ಹಂಚಿಕೊಳ್ಳುವಂತಹ ಯಾವುದೇ ನವಿರಾದ ಸಂಗತಿಗಳು ಇವೆ ಎಂದು ಅನ್ನಿಸಿಯೇ ಇರಲಿಲ್ಲ. ಅಂತಹ ಸವಿಯಾದ ಘಟನೆಗಳು, ಸಂದರ್ಭಗಳು ನನ್ನ ಬಾಲ್ಯದ ದಿನಗಳಲ್ಲಿ ನಡೆದುದರ ಜ್ಞಾಪಕವಿಲ್ಲ.
ಇರಲಿ.

ಈಗ ನಾನು ಹೇಳಬೇಕೆಂದಿರುವ ವಿಷಯ ನನ್ನ ಬಾಲ್ಯದ ದಿನಗಳದ್ದೆ ಆದರೂ ಹೇಳಬೇಕೆಂದಿರುವ ವಿಷಯ ನನ್ನದಲ್ಲ, ನಮ್ಮೂರಿನವರದ್ದು. ನನ್ನ ಜೊತೆ ಮಾತನಾಡಿರದಿದ್ದರೂ ನನಗೆ ಪರಿಚಿತರಾದವರು. ನನಗಷ್ಟೇ ಅಲ್ಲ ಅವರ ಸಂಭಾಷಣೆ ನಡೆಯುತ್ತಿದ್ದುದು ಇಡೀ ಊರಿನ ಜೊತೆಗೆ. ಇಡೀ ಊರನ್ನೆ ತಮ್ಮೊಂದಿಗೆ ಮಾತಿಗೆಳೆದು ಮಾತನಾಡಿಸುವಂತಹವರು ಅವರು. ಮಾತನಾಡಿಸದೇ ಇದ್ದರೂ ತಮ್ಮ ಬಗ್ಗೆ ಮಾತನಾಡುವಂತಿದ್ದವರು.

ಬೇಸಿಗೆಯ ರಜೆಗೆ ನೆಮ್ಮದಿಯಿಂದ ಕಾಲ ಕಳೆಯಲು ಹೋಗುತ್ತಿದ್ದ ನಮಗೆ ರಾತ್ರಿ ಒಳಗಡೆ ಮಲಗಲು ಮಾತ್ರ ಆಗುತ್ತಲೇ ಇರಲಿಲ್ಲ. ಆಗೆಲ್ಲ ಮನೆಯ ಮಾಳಿಗೆಯ ಮೇಲೋ, ಇಲ್ಲ‌ ಹೊರಗಡೆ ಇದ್ದ ಆಳಿನುದ್ದದ ಜಾಗೆಯಲ್ಲೊ, ಇಲ್ಲ ಮುಂದಿನ ಮನೆಯ ಖಾಲಿ ಹಾಸಿನಲ್ಲೋ ಮಲಗಲು ಮುಂದಾಗುತ್ತಿದ್ದೆವು. ಆದರೆ ಚಿಕ್ಕವರಿದ್ದ ನಮ್ಮನ್ನು ಕಳ್ಳ ಕಾಕರ ಕಾಟಕ್ಕೆ ಹೆದರಿ ಹೊರಗಡೆ ಮಲಗಲು ಬಿಡುತ್ತಿರಲಿಲ್ಲ. ಅದಕ್ಕೆ ದೊಡ್ಡವರೂ ಧೈರ್ಯವಂತರೂ ಆಗಿರಬಹುದಾದ ಒಂದು ಪ್ರೊಮೋಷನ್ ಬೇಕಿತ್ತು. ಆದರೂ ಏನೇ ಹೇಳಿದರೂ ಕೇಳದೆ ನಮ್ಮ ಹಠಕ್ಕೆ ನಾವು ಬಿದ್ದಾಗ ಆಗಿನ್ನು ಚಿಕ್ಕವರಾದ ನಮಗೆ ‘ಹೊರಗಡೆ ಮಕ್ಕೋತಿ ಮಕ್ಕೊ.. ಹುಚ್ಚ ಬಂದ ಎತಕೊಂಡ್ ಹೊಕ್ಕಾನ್’ ಎಂದು ಹೆದರಿಸಿ ಅವನು ಬಂದು ನಮ್ಮನ್ನು ಎತ್ತಿಕೊಂಡು ಹೋಗುವ ವಿಧಾನವನ್ನು ಹೇಳಿ ಹೇಳಿ ನಮ್ಮ ಭಯವನ್ನು ಮತ್ತಷ್ಟು ಉಲ್ಬಣಿಸಿ ಸುಮ್ಮನೆ ಒಳಗಡೆ ಮಲಗುವಂತೆ ಮಾಡಿ ಬಿಡುತ್ತಿದ್ದರು.

ಸುಮ್ಮನೆ ಗಟಾರಿನಿಂದ ಹೊರ ಬರುವ ಸೊಳ್ಳೆಯ ಕಡಿತಕ್ಕೆ ಒಳಗಾಗಬಾರದು ಅಂತಲೋ ಏನೋ ಸುಳ್ಳೊಂದನ್ನು ಹೇಳಿ ಒಳಗಡೆಯೇ ಮಲಗಿಸುತ್ತಿದ್ದರು. ಊರು ತುಂಬ ಹುಚ್ಚರು ಹೆಚ್ಚಾಗಿದ್ದಾರೆ ಅವರು ಮಾಡುತ್ತಿರುವ ಅನಾಹುತಗಳನ್ನು ಕೊಡುತ್ತಿದ್ದ ಕೀಟಲೆಗಳನ್ನು ದಿನವೂ ನಮ್ಮ ಮಾಮನೋ, ಅಜ್ಜನೋ ಊರಿನ ಬಾಯಿಂದ ತಿಳಿದು ಬರುತ್ತಿದ್ದ ಮಾಹಿತಿಯನ್ನೆಲ್ಲ ಸೇರಿಸಿ ನಮ್ಮ ಮುಂದೆಯೇ ವರ್ಣಿಸಿ ಹೇಳುತ್ತಿದ್ದರು. ಬಾಯಿ ತೆರೆದುಕೊಂಡೇ ಎಲ್ಲವನ್ನು ಕೇಳುತ್ತಿದ್ದ ನಮಗೆ ‘ಬಾಯಾಗ್ ನೊಣ ಹೋದಿತು.. ಬಾಯ್ ಮುಚ್ಚು’ ಎಂದು ಹೇಳಿ ಬಾಯಿ ಮುಚ್ಚಿಸಿ ತಮಾಷೆ ಮಾಡುತ್ತಿದ್ದರು.

*****

ಊರಿನಲ್ಲಿ ನಮ್ಮ ಮನೆ ಇದ್ದುದು ಸಂತೆ ರಸ್ತೆಯಲ್ಲಿ. ನಮ್ಮ ಮನೆಯ ಪಕ್ಕದ ರಸ್ತೆ ಸೀದಾ ಸಂತೆಗೆ ಹೊರಡುವ ರಸ್ತೆಗೆ ಕಿರುದಾರಿಯಾಗಿತ್ತು. ಆದುದರಿಂದಲೇ ಊರಿನ ಜನ ಹಾಗೂ ಬೇರೆ ಊರಿಂದ ಬರುವ ಜನ ಊರಿನ ಮಧ್ಯಭಾಗವೆಂಬಂತೆ ಇದ್ದ ನಮ್ಮ ಮನೆಯ ಮುಂದಿನ ದಾರಿಯಾಗಿ ಸಂತೆಗೆ ಹೋಗುತ್ತಿದ್ದರಿಂದ ಈ ರಸ್ತೆ ಸಂಪೂರ್ಣ ಸಂತೆ ನಾಡಿನಿಂದ ತುಂಬಿ ಹೋಗಿರುತ್ತಿತ್ತು. ಸುತ್ತ ಊರಿನ ಹಲವು ಹಳ್ಳಿಗಳಿಂದ ಈ ತಾಲೂಕು ಸಂತೆಗೆ ಜನ ಹೆಚ್ಚಾಗೆ ಬರುತ್ತಿದ್ದರು. ಇಲ್ಲಿ ನಡೆಯುವುದು ಬುಧವಾರದ ಸಂತೆ. ಬುಧವಾರದಂದು ಹೊಸ ಹೊಸ ವ್ಯವಹಾರಗಳು ಹೊಸ ಹೊಸ ರೂಪ ತಾಳಿ ರಸ್ತೆಯ ಬದಿ ನಿಂತುಕೊಳ್ಳುತ್ತಿದ್ದವು. ಹೀಗೆ ಸಂತೆಗೆ ಬರುವ ಜನರ ಗದ್ದಲದಿಂದಲೋ ಊರಿನ ಜನರ ಎಂದಿನ ಓಡಾಟದಿಂದಲೋ ನಮ್ಮ ಮನೆ ಮುಂದಿನ ರಸ್ತೆ ಸದಾ ತುಂಬಿರುತ್ತಿತ್ತು (ಈಗಲೂ ಕೂಡ).

*****

ಲೌಖಿಕವಾದ, ವಾಸ್ತವಿಕವಾದ ಜಗತ್ತಿನ ಮುನ್ನೆಲೆಯಲ್ಲಿ ಇವರ ಬದುಕನ್ನು ಹೀಗೆ ಎಂದು ಹೇಳುವುದು ಕಷ್ಟ. ಇವರ ಅಂತರಂಗದ ಪ್ರಪಂಚ ನಮಗೆ ಅರಿವಾಗದಂತಹದ್ದು. ಊರಿನ ಮುಂದೆ ಇವರು ತಮ್ಮ ಅಂಕಿತ ನಾಮದೊಂದಿಗೆ ಒಂದು ಬೇರೆಯದೇ ಅನ್ವರ್ಥಕ ನಾಮವನ್ನು ಹೊತ್ತು ಬದುಕುತ್ತಿದ್ದವರು. ಊರಿನ ಪಾಲಿಗೆ ಇವರು ಬುದ್ಧಿ ಭ್ರಮಣೆಯಾದ, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಹುಚ್ಚರು ಮಾತ್ರ ಆಗಿದ್ದರು. ಇಂತಹವರಲ್ಲಿ ಹುಚ್ಚನಂತಿದ್ದು ಬುದ್ದಿವಂತನೇ ಆಗಿದ್ದವ ಸೀಟಿ ಬಾಬು ಒಬ್ಬ.

ಊರು ತುಂಬ ಹುಚ್ಚರು ಹೆಚ್ಚಾಗಿದ್ದಾರೆ ಅವರು ಮಾಡುತ್ತಿರುವ ಅನಾಹುತಗಳನ್ನು ಕೊಡುತ್ತಿದ್ದ ಕೀಟಲೆಗಳನ್ನು ದಿನವೂ ನಮ್ಮ ಮಾಮನೋ, ಅಜ್ಜನೋ ಊರಿನ ಬಾಯಿಂದ ತಿಳಿದು ಬರುತ್ತಿದ್ದ ಮಾಹಿತಿಯನ್ನೆಲ್ಲ ಸೇರಿಸಿ ನಮ್ಮ ಮುಂದೆಯೇ ವರ್ಣಿಸಿ ಹೇಳುತ್ತಿದ್ದರು. ಬಾಯಿ ತೆರೆದುಕೊಂಡೇ ಎಲ್ಲವನ್ನು ಕೇಳುತ್ತಿದ್ದ ನಮಗೆ ‘ಬಾಯಾಗ್ ನೊಣ ಹೋದಿತು.. ಬಾಯ್ ಮುಚ್ಚು’ ಎಂದು ಹೇಳಿ ಬಾಯಿ ಮುಚ್ಚಿಸಿ ತಮಾಷೆ ಮಾಡುತ್ತಿದ್ದರು.

ಸೀಟಿ ಬಾಬು..: ಇಡೀ ಊರನ್ನೆಲ್ಲ ದಿನವೂ ಅಲೆಯುತ್ತಿದ್ದ ಸೀಟಿ ಬಾಬು ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ಖಾಯಂ ಆಗಿ ಹಾದು ಹೋಗುತ್ತಿದ್ದ. ಸೀಟಿ‌ ಬಾಬು ರಸ್ತೆಯಲ್ಲಿ ಬರುತ್ತಿದ್ದುದು ಕಂಡರೆ ಸಾಕು ಅದೇ ರಸ್ತೆಯಲ್ಲಿ ಆಟವಾಡುತ್ತಿದ್ದ ನಮಗೆ ಒಳ್ಳೆಯ ಮಜ.

ಸೀಟಿ ಬಾಬುಗೆ ‘ಸೀಟಿ’ ಎಂಬ ಅನ್ವರ್ಥನಾಮ‌ ಅಂಟಿಕೊಂಡಿದ್ದು ಅವನಿಗೆ ಸೀಟಿ ಹೊಡೆಯುವ ಖಯಾಲಿ ಇದ್ದದರಿಂದ. ಸೀಟಿ ಅಂದರೆ ನಮ್ಮ ಕಡೆಯ ಶಿಳ್ಳೆ. ವಿಜ಼ಲ್. ‘ಸೀಟಿ ಬಾಬು ಸೀಟಿ ಬಾಬು ಸೀಟಿ ಹೊಡಿ..’ ಎಂದರೆ ಮಾತ್ರ ಸೀಟಿ ಹೊಡೆಯುತ್ತಿದ್ದ ಅವನನ್ನು ಸೀಟಿ‌ಹೊಡಿ ಎಂದಿದ್ದೆ ‘ಶಯ್…’ ಎಂದು ಜೋರಾಗಿ ಶಿಳ್ಳೆ ಹೊಡೆದು ನಮ್ಮನ್ನು ನಗಿಸಿಬಿಡುತ್ತಿದ್ದ. ಪದೇ ಪದೇ ಕೇಳಿದರೆ ‘No…ww No…www’ ಎಂದು ಹೇಳಿ ಯಾರ ಮಾತನ್ನು ಕೇಳದೆ ಪಲಾಯನ ಮಾಡಿ ಬೀಡುತ್ತಿದ್ದ.. ಆದರೆ ನಾವೋ ಕೇಳುವುದನ್ನು ಮಾತ್ರ ನಿಲ್ಲಿಸುತ್ತಲೇ ಇರಲಿಲ್ಲ.

ಅವನಿಗೆ ಇನ್ನೊಂದು ಪ್ರತಿಭೆಯೂ ಇತ್ತು‌. ಅದು ಅವನಿಗೆ ಬುದ್ಧಿ ಭ್ರಮಣೆಯಾಗಿದೆ ಎಂದು ಹೇಳುವ ಜನರಿಗೆ ಮಂಕು ಬಡಿಸುವಂತಿತ್ತು. ಅದೋ ನೀವು ಯಾವುದೇ ಸಂಖ್ಯೆಯ ಮಗ್ಗಿಯನ್ನು ಕೇಳಿದರೂ ಆತ ತಪ್ಪಿಲ್ಲದೆ ನಿಖರವಾಗಿ ಉತ್ತರಿಸುತ್ತಿದ್ದ. ನಾವು ಚಿಕ್ಕವರಿದ್ದಾಗ ನಮ್ಮನ್ನು ಮಗ್ಗಿ ಬರುತ್ತವೊ ಇಲ್ಲವೋ ಎಂದು ಪರೀಕ್ಷಿಸಲು ಕೇಳುತ್ತಿದ್ದ ಹಾಗೆ ‘ಎರಡ ಒಂಬತ್ಳೆ’, ‘ನಾಲ್ಕ್ ಐದ್ಳೆ’, ‘ಹನ್ನೆರಡ ಎರಡ್ಲೆ’ ಎಷ್ಟು ಎಂದು ಕೇಳುತ್ತಿದ್ದ ಹಾಗೆ ಕೇಳಬೇಕಿತ್ತು. ಹಾಗೆ ನಾವು ಕೇಳಿದ್ದೆ ಕಂಪ್ಯೂಟರಿನ ಸಂಗ್ರಹ ಮಾಹಿತಿ ನೀಡುವ ಉತ್ತರದಂತೆ ಪಟಾಪಟ್ ಎಂದು ಉತ್ತರಿಸಿ ಬಿಡುತ್ತಿದ್ದ. ಅಲ್ಲದೆ ಕೇಳುವ ಪ್ರಶ್ನೆಯು ಒಬ್ಬರ ಬಾಯಿಂದಲೇ ಬರುತ್ತಿದ್ದುದಾಗಿರಲಿಲ್ಲ. ಚಿಕ್ಕವರಾದ ನಾವು ಅವನನ್ನು ಹೆಚ್ಚು ಹೆಚ್ಚು ಕೇಳಿ ನನ್ನ ಪ್ರಶ್ನೆಗೂ ಉತ್ತರ ಕೊಟ್ಟ ಎಂದು ಬೀಗಲು ಮತ್ತಷ್ಟು ಅವನನ್ನು ಕಾಡಿ ಕೇಳಲು ಮುಂದಾಗಿ ಎಲ್ಲರ ಬಾಯಿಂದಲೂ ಒಂದೊಂದು ಸಂಖ್ಯೆಯ ಒಂದೊಂದು ಮಗ್ಗಿಯ ಪ್ರಶ್ನೆ ಹೊರ ಬರುತ್ತಿತ್ತು. ಅದಕ್ಕೆಲ್ಲ ತಾಳ್ಮೆಯಿಂದ ಒಂದೊಂದೇ ತಪ್ಪಿಲ್ಲದೆ ಅಷ್ಟೇ ವೇಗವಾಗಿ ಸೀಟಿ ಬಾಬು ಉತ್ತರಿಸುತ್ತಿದ್ದ. ಅದೇನೊ ಕೇಳಿದ ತಕ್ಷಣ ಮದ ಏರಿದವನ ಹಾಗೆ ಉತ್ತರ ನೀಡುತ್ತಿದ್ದ ಅವನು ನನಗೆ ಈಗ ಈ ಊರು ಮನುಷ್ಯ ಪ್ರಕೃತಿಯಿಂದ ಕಲಿಸಿದ ಒಂದು ಪಾಠಕ್ಕೆ ಅಸಹಜ ಉತ್ತರವಾಗಿದೆ.

ನಗರೇಶಿ: ಇದು ಅವನಿಗೆ ಯಾರಿಟ್ಟ ಹೆಸರೋ, ಅದ್ಯಾವ ಅರ್ಥ ಬರಲಿ ಎಂದು ಇಟ್ಟರೋ ತಿಳಿಯದು, ಆದರೆ ಊರಿನ ಸಕಲರು ಇವನನ್ನು ಕರೆಯುತ್ತಿದ್ದುದು ನಗರೇಶಿ ಎಂದೇ. ಈತ ಎಲ್ಲೆಂದರಾಗಲಿ ಮಲಗುವುದು ತಿರುಗುವುದು ಕಡಿಮೆ ಇದ್ದಂತಿತ್ತು. ಅವನ ಕುಟುಂಬಸ್ಥರೊಂದಿಗೆ ಮನೆಯೊಂದರಲ್ಲಿದ್ದ. ಈತನ ಅಲೆದಾಟ ಕಡಿಮೆ. ಮೌನಿಯಾಗಿದ್ದ‌. ಯಾರಾದರೂ ಏನಾದರೂ ಹೇಳಿ ನಕ್ಕರೆ ತಾನೂ ನಗುತ್ತಿದ್ದ.

ಮೊದಮೊದಲು ನಮಗೆ ಬುದ್ಧಿ ಬರುತ್ತಿದ್ದಂತೆ ಹಾಗೆ ನಗರೇಶಿ ಎಂದು ಹೆಸರಿರುವ ವ್ಯಕ್ತಿತ್ವ ಈ ಭೂಮಿಯ ನೇಲೆ ನಿಜವಾಗಲೂ ಇದೆ ಎಂದು ತಿಳಿದದ್ದು ಆತ ನಮ್ಮ ಮನೆಗೇ ಬಂದಾಗ. ಇಲ್ಲದಿದ್ದರೆ ನಮಗೆ ಕೇವಲ ದೆವ್ವ, ಹುಳ, ಹುಪ್ಪಡಿಯನ್ನು ತೋರಿಸಿ ಹೆದರಿಸುವಂತೆ ‘ತಿನ್ಲಿಲ್ಲ ಅಂದ್ರ ನೋಡ್ ನಗರೇಶಿ ಕೈಯಾಗ್ ಕೊಡ್ತಿನಿ.., ನೋಡ್.. ನಗರೇಶಿ ಕೈಯಾಗ್ ಕೊಡ್ಲಿ..’ ಎಂದು ಹೇಳುವುದನ್ನು ಕೇಳಿ ಮಾತ್ರ ಗೊತ್ತಿತ್ತು.

ಅಜ್ಜನ ಬೆನ್ನು ಹುರಿಯ ನೋವು ಇದ್ದುದರಿಂದ ನೀಲಗಿರಿ ಎಣ್ಣೆ ಹಚ್ಚಿ ತಿಕ್ಕಿ ಮಸಾಜ್ ಮಾಡಿದರೆ ನೋವು ಇಳಿಯತ್ತೆ ಅಂತ ಅವನನ್ನು ನಮ್ಮ ಮನೆಗೆ ಬರ ಹೇಳಿದ್ದರು. ಆಗ ನನಗೆ ತಿಳುವಳಿಕೆ ಬಂದಿದ್ದ ವಯಸ್ಸು. ಅವನನ್ನು ಮೊದಲ ಬಾರಿ ನೋಡುವುದರಲ್ಲಿ ನನಗೆ ಭಯ ಆಗುವುದಕ್ಕಿಂತ ಹೆಚ್ಚಾಗಿ ಹಲವು ದಿನಗಳ ಕಾಲ ನಮ್ಮನ್ನು ಹೆದರಿಸಿ ಬಾಯಿ ಮುಚ್ಚಿಸಲು ಬಳಸುತ್ತಿದ್ದ ಅಸ್ತ್ರವನ್ನು ನೋಡುವ ಕಾತುರದಲ್ಲಿದ್ದೆ. ಕುಳ್ಳನೆ ದೇಹ, ತೆಳ್ಳನೆಯ ದೇಹ. ಚಿಕ್ಕ ಮುಖ ಅಳತೆ ಮೀರಿ ಹೊಲೆಯಲಾಗಿದ್ದ ಕೊಳಕು ಪ್ಯಾಂಟು ಶರ್ಟು. ಮುಂದೆ ಬಂದರೆ ಸರಿದು ನಿಲ್ಲಬೇಕಾಗಿದ್ದ ಅವನ ಆ ಪರಿಸ್ಥಿತಿಯಲ್ಲಿ ಅಜ್ಜ ಅವನನ್ನು ಮನೆಯೊಳಗೆ ಕರೆದು ಎಣ್ಣೆ ಹಚ್ಚಿಸಿಕೊಳ್ಳುತ್ತಿದ್ದುದು ಮನೆಯ ಇತರರಿಗ್ಯಾರಿಗೂ ಸರಿ ಬರುತ್ತಿರಲಿಲ್ಲ. ಆದರೆ ಪೆದ್ದನಂತೆ‌ ಏನು ತಿಳಿಯದವನ ಹಾಗೇ ಇದ್ದ ಇವನು ಎಣ್ಣೆ ಹಚ್ಚಿ ಮಸಾಜ್ ಮಾಡುವುದು ಅದೆಲ್ಲಿ ಕಲಿತನೋ ತಿಳಿಯದು.

ಮನೆಯವರು ಇದೇ ಸಮಯವನ್ನೆ ಬಳಸಿಕೊಂಡು ಇನ್ನೂ ಚಿಕ್ಕವರಾಗಿದ್ದ ನನ್ನ ತಮ್ಮ ತಂಗಿಯರಿಗೆ ‘ಉಢಾಳತನ ಮಾಡಿದ್ರ್ ನೋಡ್ ಇಲ್ಲೇ ಅದಾನ್ ನಗರೇಶಿಗೆ ಕೊಟ್ಟ ಬಿಡ್ತೀವಿ’ ಎಂದು ಹೆದರಿಸಿ ಅವರನ್ನು ಗಾಬರಿಗೊಳಿಸಿ ಬಿಡುತ್ತಿದ್ದರು. ಅದಕ್ಕೆ ಸರಿ ಎಂಬಂತೆ ಅವನಿಗೆ ‘ನಗರೇಶಿ ಇವನ್ ಇಲ್ಲ ಇಕಿನರ ಕರಕೊಂಡ ಹೋಗ್ಬಿಡೊ ಸಾಕಾಗೇತಿ’ ಎಂದಿದ್ದೆ ನಗರೇಶಿ ಕೈ ಮಾಡಿ ಕರೆದುಕೊಂಡು ಹೋಗುವಂತೆ ನಟಿಸಿ ಅಡಿಗೆ ಮನೆಯ ಬಾಗಿಲ ಸಂಧಿಯಲ್ಲಿ ಇಣುಕಿ ನೋಡುತ್ತಿರುತ್ತಿದ್ದವರನ್ನು ಅಳುವಂತೆ ಮಾಡಿ ರಂಪ ರಾಮಾಯಣವಾಗುವಂತೆ ಮಾಡುತ್ತಿದ್ದ‌.

ನಲವತ್ತೊ ನಲವತ್ತೈದೊ ವಯಸ್ಸಿನವನಂತಿದ್ದ ನಗರೇಶಿಯನ್ನ ಅಜ್ಜ ಮನೆಯವರ ಮುಂದೆ ‘ನಗರೇಶಿ ಮದ್ವಿ ಯಾವಾಗ್ ಪಾ’ ಎಂದು ಕೇಳಿ ನಗರೇಶಿ ನಾಚಿಕೊಳ್ಳುವಂತೆ ಮಾಡುತ್ತಿದ್ದ. ಹಾಗೇ ಕೇಳಿದ್ದೆ ‘ಗೊತ್ತಿಲ್ ರೀ’ ಎಂದು ಹೇಳಿ ಹಲ್ಲು ಗಿಂಜುತ್ತಿದ್ದ.

*****

ಇನ್ನೋರ್ವ…: ಹೆಸರು ಉಮೇಶಿಯೋ. ಮಹೇಶಿಯೋ. ಸರಿಯಾಗಿ ತಿಳಿಯದು. ಆದರೆ ಈತ ದಿನವೂ ನಮ್ಮ ಮನೆಯ ಮುಂದೆ ಹಾದು ಹೋಗುತ್ತಿದ್ದುದರ ಚಿತ್ರಣ ನನ್ನ ಕಣ್ಣ ಮುಂದೆ ಹಾಗೆಯೇ ಇದೆ. ಅವನ ಕಾಲಿಗೆ ಅದೇತಕ್ಕೊ ಕಬ್ಬಿಣದ ಸರಳಿನ ಬೇಡಿ ಹಾಕಲಾಗಿತ್ತು. ಊರಿನವರ ಮಾತಿನಲ್ಲಿ ಇವನು ಪ್ರೀತಿಯ ಸುಳಿಯಲ್ಲಿ ಸಿಲುಕಿ ಸೋತು ಶರಣಾಗಿ ಮೌನ ತಾಳಿದವನಾಗಿದ್ದ.

ಈಗ ಇವರೆಲ್ಲ ಒಂದು ಊರಿನ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಅದೆಷ್ಟು ಮುಖ್ಯರಾಗುತ್ತಾರೆ ಎಂದು ಆಶ್ಚರ್ಯವಾಗುತ್ತದೆ. ಆದರೆ, ನಾನು ಕಂಡ ಈ ಹುಚ್ಚರಂತಿದ್ದ ಹುಚ್ಚರು ಅದೇಕೆ ಹುಚ್ಚರಾದರು? ಅವರು ನಿಜವಾಗಲೂ ಹುಚ್ಚರೇ? ಎಂಬ ಪ್ರಶ್ನಾರ್ಥಕ ಚಿಹ್ನೆಯೂ ನನ್ನನ್ನು ಕಾಡುತ್ತದೆ. ಅಥವಾ ಇದಕ್ಕೆ ಬದುಕಿನ ಯಾವುದೋ ಪ್ರಶ್ನೆಗೆ ಉತ್ತರ ದೊರಕಿಯೋ, ದೊರಕದೆಯೋ ಮನುಷ್ಯ ತಾಳುವ ದೀರ್ಘ ಮೌನಕ್ಕೆ ಹುಚ್ಚುತನದ ಲೇಪನ ಹಚ್ಚಲಾಗುತ್ತಿತ್ತೊ ತಿಳಿಯದು. ಇಂತಹ ನನ್ನ ಅನೇಕ ಪ್ರಶ್ನೆಗಳನ್ನು ಇನ್ನೂ ಊಹಾತೀತವಾಗುವಂತೆ ಮಾಡಿದವರಲ್ಲಿ ಇವರುಗಳು ಪ್ರಮುಖರು.