ಹೋದ ಭಾನುವಾರ ಆಸ್ಟ್ರೇಲಿಯಾದ ಎಲ್ಲಾ ರಾಜಧಾನಿ ನಗರಗಳಲ್ಲಿ ಮತ್ತು ಕೆಲ ಮುಖ್ಯ ಪಟ್ಟಣಗಳಲ್ಲಿ ನಡೆದ ವಲಸೆ-ವಿರೋಧ ಪ್ರದರ್ಶನ ಅನೇಕ ಪ್ರಶ್ನೆಗಳನ್ನು ಹೊರಹಾಕಿದೆ. ಆಸ್ಟ್ರೇಲಿಯಾಕ್ಕೆ ಬರುವ ವಲಸೆಗಾರರ ಸಂಖ್ಯೆ ಮಿತಿಮೀರಿದೆಯೆ? ಈ ವಲಸೆಗಾರರಿಂದ ಸ್ಥಳೀಯ ಆಸ್ಟ್ರೇಲಿಯನ್ನರಿಗೆ ಕಷ್ಟವಾಗುತ್ತಿದೆಯೆ? ಮಿತಿಮೀರಿದ ವಲಸೆಗಾರರ ಸಂಖ್ಯೆಯಿಂದ ಹೌಸಿಂಗ್, ಉದ್ಯೋಗದ ಅವಕಾಶ, ಆರೋಗ್ಯ ಮುಂತಾದ ವಿಷಯಗಳಲ್ಲಿ ಸಮಸ್ಯೆ ಉಂಟಾಗಿದೆಯೇ? ಈಗಿರುವ ಲೇಬರ್ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ವಲಸೆಯನ್ನು ಹೆಚ್ಚಿಸಿದೆಯೇ? ಯಾಕೆ? ಇತ್ಯಾದಿ ಪ್ರಶ್ನೆಗಳನ್ನು ಸ್ಥಳೀಯರು ಕೇಳಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಕೆಲ ದಿನಗಳ ಹಿಂದೆ ಸಹೋದ್ಯೋಗಿಯೊಬ್ಬರು ಅಮೆರಿಕೆಯಿಂದ ಬಂದಿರುವ ವಿಸಿಟಿಂಗ್ ಪ್ರೊಫೆಸರ್ ಒಬ್ಬರನ್ನು ಪರಿಚಯಿಸಿದರು. ಮಾತನಾಡುತ್ತಿರುವಾಗ ಆ ಪ್ರೊಫೆಸರ್ ಹೇಳಿದ ಒಂದು ವಿಷಯ ನಮ್ಮಗಳ ಗಮನ ಸೆಳೆಯಿತು. ಅವರು ಕಳೆದ ವಾರಾಂತ್ಯದ ಭಾನುವಾರ ಆಗಸ್ಟ್ ೩೧ ರಂದು ಅವರು ತಮ್ಮ ಆತಿಥೇಯ (host) ಕುಟುಂಬದೊಂದಿಗೆ ಲಾಂಗ್ ವಾಕ್ ಹೋಗಿದ್ದರಂತೆ. ವಾಪಸ್ ಬರುವಾಗ ಆಗಷ್ಟೇ ನಡೆಯುತ್ತಿದ್ದ ಒಂದು rally ಕಾರಣದಿಂದ ಅವರುಗಳು ಸಮಯಕ್ಕೆ ಸರಿಯಾಗಿ ಮನೆ ತಲುಪಲಾಗದೆ ಅವರದೊಂದು ಆನ್ಲೈನ್ ಮೀಟಿಂಗ್ ತಪ್ಪಿಹೋಯಿತಂತೆ. ಅವರಿಗೆ rally ನಡೆಯುವ ಬಗ್ಗೆ ಒಂದಷ್ಟೂ ಕೂಡ ಅಂದಾಜು ಇದ್ದಿರದ ಕಾರಣ ಸ್ವಲ್ಪ ವಿಚಲಿತರಾದರಂತೆ. ‘ವೀ ವೆರ್ ಹೆಲ್ಡ್ ಬ್ಯಾಕ್ ಫಾರ್ ಅವರ್ ಓನ್ ಸೇಫ್ಟಿ’ ಅಂದರು. ಅವರ ಹೋಸ್ಟ್ ಇತ್ತೀಚೆಗೆ ಪ್ಯಾಲೆಸ್ಟೈನ್ ಪರ, ಇಸ್ರೇಲ್ ಪರ, ಯೂಕ್ರೇನ್ ಪರ ಎಂಬಂತೆ ನಡೆಯುವ ಇಂತಹ rally ಗಳು ಹೆಚ್ಚಾಗಿವೆ, ಅಂದು ಹೇಳಿ ಅವರೆಲ್ಲಾ ಮನೆ ಸೇರಿಕೊಂಡರಂತೆ.
ಆನಂತರ ಅವರ ಹೋಸ್ಟ್ ಹೇಳಿದ್ದು ಅವತ್ತು ಅವರು ನೋಡಿದ್ದು ಸಂಪೂರ್ಣವಾಗಿ ಬೇರೆಯದು, ಅದು ಇಮಿಗ್ರೇಷನ್-ವಿರೋಧ ಪ್ರತಿಭಟನಾ ಪ್ರದರ್ಶನ, ಅವರೂ ಕೂಡ ಜೀವನದಲ್ಲಿ ಮೊಟ್ಟಮೊದಲ ಬಾರಿ ಇಂತಹುದೊಂದು ವಲಸೆ-ವಿರೋಧ ಪ್ರತಿಭಟನೆಯನ್ನು ನೋಡಿದ್ದು ಅಂದರಂತೆ.
ಅಮೆರಿಕೆಯ ಪ್ರೊಫೆಸರ್ ತಾವು ವಲಸೆ-ವಿರೋಧದ ಪ್ರತಿಭಟನೆಯ ಆ ಕ್ಷಣದಲ್ಲಿ, ‘ಇನ್ ದಿ ಮೊಮೆಂಟ್’ ಇದ್ದದ್ದನ್ನು ನೆನೆಸಿಕೊಂಡು ತಾವೊಂದು ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದದ್ದು ಬಹಳ ವಿಶೇಷ ಅನಿಸಿತಂತೆ. ಆಸ್ಟ್ರೇಲಿಯಾ ಬಹಳ ಶಾಂತಿಯುತ ದೇಶ ಎಂದು ಅವರು ಕೇಳಿದ್ದರಂತೆ. ಈ ರೀತಿ ವಲಸೆಗಾರ ಸಮುದಾಯಗಳನ್ನು ಕೇಂದ್ರೀಕರಿಸಿಕೊಂಡು ವಿರೋಧ ವ್ಯಕ್ತಪಡಿಸಿ ಕೈಕೈ ಮಿಲಾಯಿಸಿದ್ದು ಆಶ್ಚರ್ಯ ತಂದಿದೆ ಎಂದರು. ಆ ಕ್ಷಣ ನನ್ನ ಬಾಯಿಂದ ಬಂದೇ ಬಂತು ಈ ಮಾತು- “ಆಸ್ಟ್ರೇಲಿಯಾ ದೇಶದಲ್ಲಿನ ಐತಿಹಾಸಿಕ ರೇಸಿಸಮ್ ಕುರಿತು ವಿಶ್ವಸಂಸ್ಥೆ ಹೇಳುತ್ತಲೇ ಬಂದಿದೆ.” ನಾನು ಮಾತನ್ನು ಮುಂದುವರೆಸಿ “ಕೇಂದ್ರ ಸರಕಾರದ ಅಂಗವಾದ ಆಸ್ಟ್ರೇಲಿಯನ್ Race Discrimination Commission ರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಕಳೆದ ನವೆಂಬರ್‌ನಲ್ಲಿ ರೇಸ್ ಡಿಸ್ಕ್ರಿಮಿನೇಶನ್ ಕಮಿಷನರ್ ಹೊಸದಾದ ಹತ್ತು-ವರ್ಷ ಯೋಜನೆಯನ್ನು ಬಿಡುಗಡೆ ಮಾಡಿದರು. ನಾವೆಲ್ಲಾ ಕಮಿಷನ್ ಪ್ರಕಟಿಸಿರುವ ಆಂಟಿ ರೇಸಿಸಮ್ ಸರ್ವೆಯ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದೀವಿ” ಎಂದೆ. ಪ್ರೊಫೆಸರ್ “ಹೌದಾ, ಆಸ್ಟ್ರೇಲಿಯಾ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ” ಎಂದರು.
ಮುಂದಿನ ಕ್ಷಣದಲ್ಲಿ ಅವರು ತಮ್ಮ hiking ಟ್ರಿಪ್ ಗಳ ಬಗ್ಗೆ ಮಾತನಾಡುತ್ತಾ ಆಸ್ಟ್ರೇಲಿಯಾದ ಅಗಾಧ ಉದ್ದಗಲ, ಒಂದೆಡೆಯಿಂದ ಇನ್ನೊಂದು ರಾಜ್ಯ ರಾಜಧಾನಿಗೆ ಹೋಗಲು ವಿಮಾನ ಹತ್ತಲೇಬೇಕು ಅಷ್ಟು ದೊಡ್ಡದಾದ ವಿಶಾಲ ದೇಶ, ಎಷ್ಟು ಸುಂದರವಾದ ಪಾರ್ಕ್‌ಗಳು, ವಾಕಿಂಗ್ ರೂಟ್, ಎಲ್ಲವೂ ಅದೆಷ್ಟು ಚೊಕ್ಕವಾಗಿದೆ ಎಂದೆಲ್ಲಾ ಹೊಗಳಿದರು. ಪ್ರತಿದಿನವೂ ಆಸ್ಟ್ರೇಲಿಯಾದ ಮ್ಯಾಪ್ ನೋಡುವುದೇ ದೊಡ್ಡ ಕೆಲಸವಾಗಿದೆ ಎಂದರು. ನನ್ನ ಸಹೋದ್ಯೋಗಿಗಳು ಒಂದಷ್ಟು ಪೂರಕ ಮಾಹಿತಿ ಕೊಡುತ್ತಾ ಹೋದರು. ಅಷ್ಟರಲ್ಲಿ ಒಂದು ಗಂಟೆಯ ಮೀಟಿಂಗ್ ಸಮಯ ಕಳೆಯಿತು.
ಹೋದ ಭಾನುವಾರ ಆಸ್ಟ್ರೇಲಿಯಾದ ಎಲ್ಲಾ ರಾಜಧಾನಿ ನಗರಗಳಲ್ಲಿ ಮತ್ತು ಕೆಲ ಮುಖ್ಯ ಪಟ್ಟಣಗಳಲ್ಲಿ ನಡೆದ ವಲಸೆ-ವಿರೋಧ ಪ್ರದರ್ಶನ ಅನೇಕ ಪ್ರಶ್ನೆಗಳನ್ನು ಹೊರಹಾಕಿದೆ. ಆಸ್ಟ್ರೇಲಿಯಾಕ್ಕೆ ಬರುವ ವಲಸೆಗಾರರ ಸಂಖ್ಯೆ ಮಿತಿಮೀರಿದೆಯೆ? ಈ ವಲಸೆಗಾರರಿಂದ ಸ್ಥಳೀಯ ಆಸ್ಟ್ರೇಲಿಯನ್ನರಿಗೆ ಕಷ್ಟವಾಗುತ್ತಿದೆಯೆ? ಮಿತಿಮೀರಿದ ವಲಸೆಗಾರರ ಸಂಖ್ಯೆಯಿಂದ ಹೌಸಿಂಗ್, ಉದ್ಯೋಗದ ಅವಕಾಶ, ಆರೋಗ್ಯ ಮುಂತಾದ ವಿಷಯಗಳಲ್ಲಿ ಸಮಸ್ಯೆ ಉಂಟಾಗಿದೆಯೇ? ಈಗಿರುವ ಲೇಬರ್ ಕೇಂದ್ರ ಸರಕಾರ ಉದ್ದೇಶಪೂರ್ವಕವಾಗಿ ವಲಸೆಯನ್ನು ಹೆಚ್ಚಿಸಿದೆಯೇ? ಯಾಕೆ? ಇತ್ಯಾದಿ ಪ್ರಶ್ನೆಗಳನ್ನು ಸ್ಥಳೀಯರು ಕೇಳಿದ್ದಾರೆ.
ಆಸ್ಟ್ರೇಲಿಯಾಕ್ಕೆ ಬರುವ ವಲಸೆಗಾರರಲ್ಲಿ ಸಂಖ್ಯಾಧಾರಿತ ಮೊಟ್ಟಮೊದಲ ಸ್ಥಾನದಲ್ಲಿರುವುದು ಬ್ರಿಟಿಷ್ ಜನರು. ಯಾಕೆಂದರೆ ಇವರಿಗೂ ಸ್ಥಳೀಯ ಬಿಳಿಯ ಆಸ್ಟ್ರೇಲಿಯನ್ನರಿಗೂ ಕುಟುಂಬ-ಆಧರಿತ ನಂಟಿದೆ, ಹಾಗಾಗಿ ಇವರು ಆ ತವರಿನಿಂದ ಈ ತವರಿಗೆ ವಲಸೆ ಬರುತ್ತಾರೆ. ಬಿಸಿಲು ಕಂಡರೆ ಸಾಕು, ಬೀಚ್ ಬಳಿ ಮನೆ ಇದ್ದರೆ ಅದೇ ನಮ್ಮ ಸ್ವರ್ಗ ಎಂದೆಲ್ಲಾ ಕನಸು ಹೊತ್ತು ಬರುತ್ತಾರೆ.
ಅಂದ ಹಾಗೆ ಮುಖ್ಯ ವಿಷಯವೆಂದರೆ ಈ ಬಾರಿ ಭಾರತೀಯರನ್ನು ಗುರಿಯಾಗಿಸಿಕೊಂಡು ಆಂಟಿ-ಇಮಿಗ್ರೇಷನ್ ಪ್ರದರ್ಶನಗಳನ್ನು ನಡೆಸಲಾಯ್ತು. ವಲಸೆಗಾರರ ಪಟ್ಟಿಯ ಎರಡನೆ ಸ್ಥಾನದಲ್ಲಿರುವುದು ಭಾರತೀಯರು. ಇವರಲ್ಲಿ ಬಹುತೇಕ ಮಂದಿ skilled employment ವೀಸಾ ಅಥವಾ ಅಂತಾರಾಷ್ಟ್ರೀಯ ವಿದ್ಯಾರ್ಥಿ ವೀಸಾ ಪಡೆದು ಆಸ್ಟ್ರೇಲಿಯಾಕ್ಕೆ ಬರುತ್ತಾರೆ. ಅಂದರೆ ವೀಸಾ ಪಡೆಯಲು ಅರ್ಜಿ ಸಲ್ಲಿಸಿ, ಸಾವಿರಾರು ಡಾಲರ್ ಹಣ ಖರ್ಚು ಮಾಡಿ ‘ಸರಿಯಾದ’ ಮಾರ್ಗವನ್ನು ಅನುಸರಿಸಿ ಇಲ್ಲಿಗೆ ಬರುತ್ತಾರೆ. ವೀಸಾ ಅರ್ಜಿ ಪರಿಶೀಲಿಸುವಾಗ ಮತ್ತು ಮಂಜೂರು ಮಾಡುವಾಗ ಆಸ್ಟ್ರೇಲಿಯನ್ ಇಮಿಗ್ರೇಷನ್ ಡಿಪಾರ್ಟ್ಮೆಂಟ್ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುತ್ತದೆ. ಆಸ್ಟ್ರೇಲಿಯನ್ Skilled Visa ಪ್ರೋಸೆಸ್ ಬ್ರಿಟನ್ನಿನ ಸರಕಾರಕ್ಕೆ ಮಾದರಿಯಾಗಿದೆ. ಇದೆಲ್ಲದರ ಹಿನ್ನೆಲೆಯನ್ನು ಅವಲೋಕಿಸಿದಾಗ ವಲಸೆ ಬರುವ ಭಾರತೀಯರು ಸಕ್ರಮ ಮಾರ್ಗದಲ್ಲಿ ಸರಕಾರದ ಅನುಮತಿ ಪಡೆದು ಇಲ್ಲಿಗೆ ಬರುತ್ತಾರೆ. ಅವರದ್ದೇನೂ ತಪ್ಪಿಲ್ಲ. ವಿಷಯ ಹೀಗಿರುವಾಗ ಭಾರತೀಯ ವಲಸೆಗಾರರ ವಿರುದ್ಧ ಪ್ರದರ್ಶನ ನಡೆದಿದ್ದು ಚಾಪೆಯಡಿ ಅಡಗಿರುವ ತಾರತಮ್ಯ, ಭೇದ ತೋರುತ್ತಿದೆ.
ವಿರೋಧಿಗಳ ಪ್ರದರ್ಶನದ ಜೊತೆಜೊತೆಗೆ counter-rally ಕೂಡ ನಡೆದಿವೆ. ಎರಡೂ ಗುಂಪುಗಳ ನಡುವೆ ಕೈಕೈ ಮಿಲಾಯಿಸಿದ್ದು, ಕಪಾಳಮೋಕ್ಷ ನಡೆದಿದ್ದು, ಮೈಕೈ ಹಿಡಿದು ತಳ್ಳಾಡಿದ್ದು, ಬೈಗುಳ, ಎಲ್ಲವೂ ದಾಖಲಾಗಿದ್ದು ಅವುಗಳ ವಿಡಿಯೋಗಳು ಹರಿದಾಡುತ್ತಿವೆ. ಪೊಲೀಸರು ನಿಧಾನವಾಗಿ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಸುದ್ದಿಮಾಧ್ಯಮಗಳು ಹೇಳಿವೆ. SBS ನ್ಯೂಸ್ ಪ್ರಕಾರ ಆಂಟಿ-ಇಮಿಗ್ರೇಷನ್ ಪ್ರದರ್ಶನಕಾರರು ಮತ್ತು ಕೌಂಟರ್-ಪ್ರದರ್ಶನಕಾರರ ಸಂಖ್ಯೆಗಳ ಮಿಲನವಾಗಿ ಒಂದು ಅಂದಾಜಿನ ಪ್ರಕಾರ ಸಿಡ್ನಿ ನಗರದಲ್ಲಿ ಹದಿನೈದು ಸಾವಿರ ಜನರಿದ್ದರಂತೆ. ನಮ್ಮ ಬ್ರಿಸ್ಬೇನ್ ನಗರದಲ್ಲಿ ಸುಮಾರು ಆರು ಸಾವಿರ ಜನರಿದ್ದರಂತೆ. ಪುಟಾಣಿ ಬ್ರಿಸ್ಬೇನ್ ನಗರಕ್ಕೆ ಅದು ದೊಡ್ಡ ಸಂಖ್ಯೆಯೆ ಸರಿ.
ಪ್ರದರ್ಶನಗಳ ಮುನ್ನಾ ಕ್ರಮವಾಗಿ ಬಹುತೇಕ ಎಲ್ಲಾ ಭಾರತೀಯ ಸಮುದಾಯ ಸಂಸ್ಥೆಗಳು ತಂತಮ್ಮ ಸದಸ್ಯರಿಗೆ ಎಚ್ಚರಿಕೆ ಕೊಟ್ಟಿತ್ತು. ‘ಪ್ರದರ್ಶನ ನಡೆಯುವ ಸ್ಥಳದಿಂದ ದೂರವಿರಿ. ಘರ್ಷಣೆಗೆ ಸಿಕ್ಕಿಹಾಕಿಕೊಳ್ಳಬೇಡಿ. ನಿಮ್ಮ ಕ್ಷೇಮಕ್ಕೆ ತೊಂದರೆಯೆನಿಸಿದರೆ ಇಂತಿಂಥ ದೂರವಾಣಿ ಸಂಖ್ಯೆಗಳಿಗೆ ಫೋನ್ ಮಾಡಿ ಸಹಾಯ ಪಡೆಯಿರಿ,’ ಎಂದೆಲ್ಲ ಹೇಳಿದ್ದವು. ವಾಟ್ಸಪ್ ಮತ್ತು ಫೇಸ್‌ಬುಕ್ ಸಾಮಾಜಿಕ ತಾಣಗಳಲ್ಲಿ ಅನೇಕ ಪ್ರತಿಕ್ರಿಯೆಗಳು, ಪರ-ವಿರೋಧ ಅನಿಸಿಕೆಗಳು, ಎಚ್ಚರಿಕೆಯ ಮಾತುಗಳ ಹಂಚಿಕೆಯಾಗಿತ್ತು. ಅನೇಕ ಭಾರತೀಯರು ಮನೆಗಳಲ್ಲೆ ಇದ್ದುಕೊಂಡು ಜಾಗರೂಕತೆ ವಹಿಸಿದ್ದರು. ಹಲವಾರು ಕಡೆ ವ್ಯಾಪಾರ-ವ್ಯವಹಾರ ನಿಂತಿತ್ತು.
ವಲಸೆಗಾರರಿಂದ ತಮಗೆ ಕಷ್ಟವಾಗಿದೆ ಎಂದು ಹೇಳುತ್ತಾ ಆಂಟಿ-ಇಮಿಗ್ರೇಷನ್ rally ನಡೆಸಿದ ಸ್ಥಳೀಯರು ಯಾರು ಎನ್ನುವುದು ಇಲ್ಲಿ ಬಹಳ ಮುಖ್ಯ. ಇವರು ಬಲಪಂಥೀಯರು ಎಂದು ಮಾಧ್ಯಮಗಳು ಹೇಳಿವೆ. ಹೋದ ಭಾನುವಾರದ ಪ್ರದರ್ಶನಗಳಲ್ಲಿ ಪಾಲ್ಗೊಂಡ ಅನೇಕರನ್ನು ನಿಯೋ-ನಾಝಿ ಎಂದು ಮಾಧ್ಯಮಗಳಲ್ಲಿ ಬಣ್ಣಿಸಲಾಗಿದೆ. ಶಾಲಾ ವಯಸ್ಸಿನ ಮಕ್ಕಳು, ಕಾಲೇಜು ಓದುವ ಕಿರಿಯರು, ಯುವಕ-ಯುವತಿಯರು ಮತ್ತು ಹಿರಿಯರು ಎಂಬಂತೆ ಎಲ್ಲಾ ವಯಸ್ಸಿನ ಜನರು ಮೈಕ್ ಹಿಡಿದು ‘ಗೋ ಬ್ಯಾಕ್ ಗೋ ಬ್ಯಾಕ್’ ಎಂದು ಘೋಷಣೆ ಕೂಗಿದ್ದರು. ಹೆಚ್ಚಿನ ಪಕ್ಷ ಎಲ್ಲರೂ ಬಿಳಿಯ ಜನರು. ಕೆಲವರು ರಾಜಕಾರಣಿಗಳು ತಂತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ ವಲಸೆ-ವಿರೋಧ ಹೇಳಿಕೆಗಳನ್ನು ಕೊಟ್ಟು, ಪ್ರದರ್ಶನದಲ್ಲಿ ಭಾಗವಹಿಸಿ ‘ಆಸ್ಟ್ರೇಲಿಯಾ ಈಸ್ ಅವರ್ ಕಂಟ್ರಿ. ನಮ್ಮ ದೇಶಕ್ಕೆ ಯಾರು ಬರಬಹುದು ಎನ್ನುವುದನ್ನು ನಾವು ನಿರ್ಧರಿಸುತ್ತೀವಿ’ ಎಂದಾಗ ನನಗೆ ನಗು ಬಂದಿತ್ತು. ಈ ಬಿಳಿಯ ರಾಜಕಾರಣಿಗಳ ಕುಟುಂಬಗಳು ವಲಸೆಗಾರರಾಗಿಯೇ ಬಂದಿದ್ದು ಅಲ್ಲವೇ. ಅದರಲ್ಲೂ White Australia Policy ಪ್ರಕಾರ ಅನೇಕ ಹಳೆತಲೆಮಾರಿನ ಬ್ರಿಟಿಷರು ಪುಕ್ಕಟೆಯಾಗಿ ಆಹ್ವಾನ ಪಡೆದು ಬಂದವರು. ಬಿಳಿಯರಲ್ಲದ ಇತರರಿಗೆ ಇವರು ‘ಗೋ ಬ್ಯಾಕ್’ ಎನ್ನುವಾಗ ಇವರು ಮೊದಲು ಹೊರನಡೆಯಬೇಕು. ಅವರ ಮೂಲ ದೇಶಗಳಿಗೆ ಹಿಂದಿರುಗಬೇಕು. ಆಗ ಸಲ್ಲುತ್ತದೆ ಅವರ ಮಾತು ಮತ್ತು ನ್ಯಾಯ. ಆಸ್ಟ್ರೇಲಿಯಾ ಬಿಳಿಯ ಆಂಗ್ಲೋ-ಯುರೋಪಿಯನ್ ಜನರಿಗೆ ಸೇರಿದ ದೇಶವಲ್ಲ ಅನ್ನುವ ಸತ್ಯ ಈ ದೇಶದ ಸಮಸ್ತರಿಗೂ ಗೊತ್ತಿರಬೇಕು. ಆಸ್ಟ್ರೇಲಿಯಾದ ಮೂಲಜನರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಇಲ್ಲಿನವರು, ಈ ದೇಶ ಅವರಿಗೆ ಸೇರಿದ್ದು. ಈ truth-telling ಮತ್ತು Treaty ನಡೆಯಬೇಕು.
ಆಂಟಿ-ಇಮಿಗ್ರೇಷನ್ ಪ್ರದರ್ಶನಗಳು ನಡೆಯುವ ಮುನ್ನ ಆಸ್ಟ್ರೇಲಿಯನ್ ಪ್ರಧಾನಮಂತ್ರಿ ಅಂತೋನಿ ಆಲ್ಬಾನೀಸಿ ಮತ್ತು ಕೇಂದ್ರ ಮಂತ್ರಿಗಳು ಎಚ್ಚರಿಕೆ ಕೊಟ್ಟಿದ್ದರು. ಪ್ರಧಾನಿ ಆಲ್ಬಾನೀಸಿ ಹೇಳಿದ ಮಾತು ಅಕ್ಷರಶಃ ನಿಜ- “ನೀವು ಈ ನಾಡಿನ ಮೂಲಜನರು ಅಂತಲ್ಲವಾದರೆ ನೀವು ವಲಸೆಗಾರರು ಎಂದರ್ಥ. ಆ ಅರ್ಥದಲ್ಲಿ ನಾನು ಕೂಡ ಒಬ್ಬ ವಲಸೆಗಾರ.” ವಿರೋಧಪಕ್ಷಗಳವರು ಈ ರೀತಿಯ ಸ್ಪಷ್ಟ ಹೇಳಿಕೆಗಳನ್ನು ಕೊಡದೆ ಹೇಡಿಗಳಾಗಿ ನುಣುಚಿಕೊಂಡಿದ್ದಾರೆ. ಹೋದವರ್ಷ ಮತ್ತು ಈ ವರ್ಷ ಚುನಾವಣೆಗಳು ನಡೆಯುವ ಸಂದರ್ಭದಲ್ಲಿ ಇವೇ ವಿರೋಧಪಕ್ಷಗಳ ಅನೇಕ ರಾಜಕಾರಣಿಗಳು ಭಾರತೀಯ ಸಮುದಾಯಗಳನ್ನು, ಭಾರತೀಯರನ್ನು ಹೊಗಳುತ್ತಾ, ಫೋಟೋ ತೆಗೆಸಿಕೊಳ್ಳುತ್ತಾ, ತಲೆಮೇಲೆ ಕೂರಿಸಿಕೊಂಡು ಇಂದ್ರಚಂದ್ರ ಎಂದಿದ್ದರು. ಅವರೆಲ್ಲಾ ಭಾರತೀಯರನ್ನು ಕೇಂದ್ರೀಕರಿಸಿಕೊಂಡು ನಡೆದ ಆಂಟಿ-ಇಮಿಗ್ರೇಷನ್ ಪ್ರದರ್ಶನಗಳ ಸಮಯದಲ್ಲಿ, ಜನರು ಭಾರತೀಯರನ್ನು ಕುರಿತು ಕೇವಲವಾಗಿ ಮಾತನಾಡಿದಾಗ ಎಲ್ಲಿ ಹೋದರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಭಾರತೀಯ ಸಮುದಾಯಗಳ ಮುಖಂಡರಿಗೆ ಇದೊಂದು ಎಚ್ಚರಿಕೆ ಗಂಟೆಯಾಗಲಿ.

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.