ನನ್ನನ್ನು ಅನುಕೂಲಕ್ಕೆ ಬಳಸಿಕೊಂಡರೂ, ಅದು ನಾನೆ ಮನಸಾರೆಯಾಗಿ ಕೊಟ್ಟ ಅವಕಾಶ. ನನ್ನ ಮೇಲೆ ಪ್ರೀತಿ ಹೆಚ್ಚಲಿ ಎಂದಿದ್ದ ಸ್ವಾರ್ಥ. ಹಾಗೇನಾದರೂ ಯಾವತ್ತಾದರೂ ಮತ್ತೆ ನನ್ನನ್ನು ನಿನ್ನ ಅನುಕೂಲಕ್ಕೆ ಉಪಯೋಗಿಸಿಕೊಳ್ಳಬೇಕೆನಿಸಿದರೆ ನೆನಪಿಸಿಕೊ. ನನ್ನ ಮನಸ್ಸು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಪ್ರೀತಿ ಎಂದರೆ ಕೊಟ್ಟು ಕೊಳ್ಳುವ ವ್ಯಾಪಾರವಲ್ಲ, ಎಲ್ಲವನ್ನೂ ನೀಡುವ ತ್ಯಾಗವಲ್ಲ, ಕಸಿದುಕೊಳ್ಳುವ ದುರ್ಬುದ್ಧಿಯಲ್ಲ, ನಮಗಾಗಿಯೆ ಕೊಡುವ ಸ್ವಾರ್ಥ. ನೋಡುಗರಿಗೆ ಪ್ರೀತಿಯಲ್ಲಿ ಮೋಸ ಕಾಣಿಸಬಹುದು ಆದರೆ ಪ್ರೀತಿಸುವವರಲ್ಲಿ ಕಾಣಿಸಿದರೆ ಅದು ಪ್ರೀತಿಯೆ ಅಲ್ಲ.
ಪ್ರಶಾಂತ್‌ ಬೀಚಿ ಅಂಕಣ

 

ಫ಼ೆಬ್ರವರಿ 14, ಪ್ರತೀ ವರ್ಷ ಈ ದಿನಕ್ಕಾಗಿ ಕಾಯುವ ಎಷ್ಟೋ ಯುವ ಜೀವಿಗಳಿಗೆ ಒಂದು ರೀತಿಯ ದೀಪಾವಳಿ, ಯುಗಾದಿ, ಕ್ರಿಸ್ಮಸ್, ಈದ್. ಸುಮಾರು ಎರಡು ದಶಕಗಳ ಹಿಂದೆ ಈ ದಿನದ ಮಹತ್ವ ಅಷ್ಟಿರಲಿಲ್ಲ, ಇಪ್ಪತ್ತು ವರ್ಷಗಳಲ್ಲಿ ಒಂದು ತಲಮಾರೆ ಬದಲಾಗುವಾಗ ಒಂದು ತಲೆಮಾರಿನ ಹಿಂದಿನವರಿಗೆ ಈ ದಿನ ಅಂಥಹ ಮಹತ್ವದ್ದಲ್ಲ. ಆದರೆ ಈ ತಲೆಮಾರಿನ ಯುವಕರಿಗೆ ಮತ್ತು ಹದಿ ಹರೆಯವನ್ನು ಕಳೆದು ಹತ್ತಿಪ್ಪತ್ತು ವರ್ಷಗಳಾಗಿರುವ ತಲೆಮಾರಿನವರಿಗೆ ಈ ದಿನ ರೋಮಾಂಚನಗೊಳಿಸದೆ ಇರಲಾರದು.

ಒಂದು ಸಮಯದಲ್ಲಿ ಪ್ರೇಮಿಗಳ ದಿನವೆನ್ನುವ ಈ ದಿನವನ್ನು ಹತ್ತಿಕ್ಕುವ ಎಲ್ಲಾ ಪ್ರಯತ್ನಗಳು ನಡೆದವು ಮತ್ತು ಅದನ್ನು ಬೇರೆ ಬೇರೆ ಸಂದರ್ಭಕ್ಕೆ ವರ್ಗಾಯಿಸುವ ಹುನ್ನಾರ ನಡೆಸಿದರೂ ಅದ್ಯಾವುದೂ ಆಷ್ಟಾಗಿ ಫಲಿಸಲಿಲ್ಲ. ಆಧ್ಯಾತ್ಮಿಕ ಗುರುಗಳಿಂದ ಹಿಡಿದು, ಸಂತ-ಸನ್ಯಾಸಿಗಳ ತನಕ ಪ್ರೇಮವನ್ನು ಅವರದ್ದೇ ರೀತಿಯಲ್ಲಿ ಪರಿಚಯಿಸಿದ್ದಾರೆ. ಪ್ರೇಮಿಗಳಂತೂ ಓಶೋ ರಜನೀಶ್ ರನ್ನು ಮುಂದಕ್ಕಿಡಿದು ಪ್ರೇಮವೆನ್ನುವುದು ದೇವರನ್ನು ತಲುಪುವ ದಾರಿ ಎಂದು ಆಧ್ಯಾತ್ಮಿಗಳಂತೆ ಮಾತನಾಡುತ್ತಾರೆ.

ಇಂತಹ ಪ್ರೇಮಿಗಳ ದಿನದಲ್ಲಿ ಎಂದೋ ಓದಿದ ಅನಾಮಧೇಯ ಪ್ರೇಮ ಪತ್ರ.

ಪ್ರೀತಿಯ _____________,

ಹೇಗೆ ಶುರುಮಾಡಬೇಕೆಂದು ಬಹಳ ಗೊಂದಲದಲ್ಲಿ ಇಲ್ಲ. ನನಗೆ ನಿಖರವಾಗಿ ಗೊತ್ತು ಏನು ಹೇಳಬೇಕೆಂದು. ನಿನಗೇ ಹೇಳಬೇಕು ಎಂದು ಇಷ್ಟು ದಿನ ಕಾದಿದ್ದೇನೆ. ಈಗ ನನ್ನ ನಿವೇದನೆಯನ್ನು ನಿನ್ನ ಮುಂದಿಡಲು ಅರ್ಹನಾಗಿದ್ದೇನೆ ಎನ್ನುವ ಭರವಸೆ ಇದೆ.

ಆರು ವರ್ಷಗಳ ಹಿಂದೆ ನಿನ್ನ ಮೊದಲನೆ ಬಾರಿ ನೋಡಿದ್ದಾಗ ನೀನೇನು ಅಷ್ಟು ಸುಂದರ ಅನಿಸಲಿಲ್ಲ. ಎಲ್ಲಾ ಹುಡುಗಿಯರ ಮಧ್ಯೆ ನೀನು ಒಬ್ಬಳಾಗಿದ್ದೆ. ನಿನ್ನ ಗೆಳತಿಗೆ ಒಮ್ಮೆ ಕಾಲು ಉಳುಕಿ ನಡೆಯಲಾಗದೆ ಇದ್ದಾಗ ನೀನು ಸಹಾಯ ಮಾಡಿದ ರೀತಿ, ಅವಳನ್ನು ಕಾಲೇಜಿನ ಲ್ಯಾಬಿನೊಳಗೆ ಕೂರಿಸಿ ಶುಶ್ರೂಷೆ ನೀಡಿದ ಧೈರ್ಯ ನೋಡಿ, ನೀನು ಬೇರೆಯವರಿಗಿಂತ ಭಿನ್ನವಾಗಿ ಕಂಡೆ. ದಿನಕಳೆದಂತೆ ನೀನು ಹುಡುಗಿಯರ ಗುಂಪಿಗೆ ನಾಯಕಿಯಾದೆ, ನಿಮ್ಮ ಗುಂಪಿನ ಯಾವುದೇ ಹುಡುಗಿಗೆ ಯಾರಾದರೂ ಚುಡಾಯಿಸಿದರೆ, ನೀನು ಹುಡುಗರೊಡನೆ ಜಗಳಕ್ಕೆ ನಿಂತ ಬಗೆಗೆ ಎಲ್ಲಾ ಹುಡುಗರು ಹೆದರುತ್ತಿದ್ದರು. ಯಾವುದೋ ಹುಡುಗನ ಪರ ವಹಿಸಿ ನಾನು ಮಾತನಾಡುವಾಗ, ನನಗೂ ಬೆದರಿಕೆಯಾಗುವಂತೆ ಹೆದರಿಸಿದ ನಿನ್ನ ಧಾಟಿಗೆ ನಾನು ಹೆದರಿದ್ದೆ.

ಮೊದಲನೆ ವರ್ಷದಲ್ಲೆ ನಿನ್ನ ನೋಡುತ್ತಾ ನೋಡುತ್ತ ಮನಸೋತಿದ್ದೆ. ಅದ್ಯಾಕೋ ಮದುವೆ ಆದರೆ ನಿನ್ನಂತ ಹುಡುಗಿಯೇ ಆಗಿರಬೇಕು ಎಂದು ಅನಿಸಿತು. ಆದರೆ ನೀನೆ ಆಗಬೇಕೆಂದು ಅನ್ನಿಸಿರಲಿಲ್ಲ. ನಿನ್ನ ಜೊತೆ ಪರಿಚಯವಿಲ್ಲದಿದ್ದರೂ, ನೀನು ನನ್ನನು ಬೆದರಿಸಿದ ಸಂಗತಿಯ ನಂತರ ನಿನ್ನನ್ನು ಹತ್ತಿರದಿಂದ ಗಮನಿಸಲು ಶುರುಮಾಡಿದೆ.

ಆಧ್ಯಾತ್ಮಿಕ ಗುರುಗಳಿಂದ ಹಿಡಿದು, ಸಂತ-ಸನ್ಯಾಸಿಗಳ ತನಕ ಪ್ರೇಮವನ್ನು ಅವರದ್ದೇ ರೀತಿಯಲ್ಲಿ ಪರಿಚಯಿಸಿದ್ದಾರೆ. ಪ್ರೇಮಿಗಳಂತೂ ಓಶೋ ರಜನೀಶ್ ರನ್ನು ಮುಂದಕ್ಕಿಡಿದು ಪ್ರೇಮವೆನ್ನುವುದು ದೇವರನ್ನು ತಲುಪುವ ದಾರಿ ಎಂದು ಆಧ್ಯಾತ್ಮಿಗಳಂತೆ ಮಾತನಾಡುತ್ತಾರೆ.

ಒಂದು ವರುಷವಾದರೂ, ನಿನ್ನ ಮೇಲಿನ ಆಸಕ್ತಿ ಕಡಿಮೆಯಾಗಲಿಲ್ಲ, ಹಾಗೆ ಜಾಸ್ತಿಯೂ ಆಗಿರಲಿಲ್ಲ. ಅದೇನೋ ಒಂದು ಬಗೆಯ ಆಕರ್ಷಣೆ, ಅದಕ್ಕೆ ಹೆಸರಿಡಲಾಗದ ಸಂಬಂಧ. ಆಗಲೇ ನನಗನ್ನಿಸಿದ್ದು ಅದು ಪ್ರೀತಿಯಿರಬೇಕೆಂದು.

ಶ್ರೀಮಂತಿಕೆಯಿಲ್ಲದ, ಕೆಲಸವಿಲ್ಲದ, ಯಾವುದೇ ಅರ್ಹತೆಯಿಲ್ಲದ ಸಮಯದಲ್ಲಿ ಪ್ರೀತಿಯ ನಿವೇದನೆಗೆ ಧೈರ್ಯ ಬರಲಿಲ್ಲ. ಇನ್ನೆರಡು ವರ್ಷಗಳಲ್ಲಿ ಓದು ಮುಗಿಸಿ, ಕೆಲಸಕ್ಕೆ ಸೇರಿದ ನಂತರ ಪ್ರೀತಿಯ ನಿವೇದನೆ ಮಾಡಿದರೆ ನೀನು ಒಪ್ಪದಿರಲು ಯಾವುದೇ ಕಾರಣವಿರುವುದಿಲ್ಲ ಎನ್ನುವ ಭರವಸೆ ಮೇಲೆ ನಾನು ಸುಮ್ಮನಿದ್ದೆ. ವಯಸ್ಸು ಕೇಳಬೇಕಲ್ಲಾ, ನನ್ನ ಭವಿಷ್ಯದ ಎಲ್ಲಾ ಯೋಜನೆಗಳಲ್ಲಿ ನೀನಿರುತ್ತಿದ್ದೆ. ನಿನ್ನ ಚಲನವಲನದ ಎಲ್ಲಾ ಮಾಹಿತಿ ಇಟ್ಟುಕೊಂಡಿದ್ದೆ, ನೀನು ಬೀಳಿಸಿಕೊಂಡ ಕರ್ಚೀಪು, ಇಂಕು ಖಾಲಿಯಾಗಿ ಬೇಡವೆಂದು ಎಸೆದ ಪೆನ್ನು, ನಿನ್ನ ಬ್ಯಾಗಿನಿಂದ ಕದ್ದ ನಿನ್ನ ಕೀ ಚೈನ್, ಎಲ್ಲವೂ ಜೋಪಾನವಾಗಿ ಇಟ್ಟುಕೊಳ್ಳುವ ಅಭ್ಯಾಸ ಶುರುವಾಗಿತ್ತು. ನಿನಗೆ ಇದ್ಯಾವುದರ ಅರಿವಿಗೆ ಬಾರದಂತೆ ನಿನ್ನ ಸ್ನೇಹವನ್ನು ಗಟ್ಟಿಗೊಳಿಸಿಕೊಂಡೆ, ನಿನ್ನೆಲ್ಲ ತೊಂದರೆಗೆ ಸಹಾಯವಾಗಿ ನಿಂತೆ. ಮೊದಮೊದಲು ನನ್ನ ಸಹಾಯಕ್ಕೆ ಧನ್ಯವಾದಗಳನ್ನು ಹೇಳುತ್ತಾ ಅಭಾರಿಯಾಗಿದ್ದ ನೀನು ನಂತರ ಲಘುವಾಗಿ ಪರಿಗಣಿಸತೊಡಗಿದೆ. ಪ್ರೀತಿಯ ಗುಂಗಿನಲ್ಲಿ ಅಂಧನಾಗಿದ್ದ ನನಗೆ ಇದ್ಯಾವುದೂ ತಿಳಿಯಲಿಲ್ಲ. ಅಷ್ಟರೊಳಗೆ ನನ್ನ ಕಾಲೇಜಿನ ದಿನಗಳು ಮುಗಿದು ಕೆಲಸದ ಹುಡುಕಾಟದಲ್ಲಿ ಬೇರೆ ಊರಿಗೆ ಹೋಗಿದ್ದೆ.

ನಿನ್ನ ಪ್ರೀತಿಯನ್ನು ಪಡೆದು, ನನ್ನವಳನ್ನಾಗಿಸಿಕೊಳ್ಳುವ ಭರದಲ್ಲಿ ಕೆಲಸ ಹುಡುಕಿ, ನನ್ನ ಕಾಲ ಮೇಲೆ ನಿಲ್ಲುವ ನಿರಂತರ ಪ್ರಯತ್ನದಲ್ಲಿದ್ದ ನನಗೆ ನಿನ್ನ ಮದುವೆಯ ವಿಷಯ ತಿಳಿದಿದ್ದು ಕೂಡ ಬೇರೆ ಸ್ನೇಹಿತರಿಂದ. ನಾನು ನಿನ್ನ ಪ್ರೀತಿಸುವ ವಿಷಯ ಸ್ನೇಹಿತರ ಎಲ್ಲರಿಗೂ ತಿಳಿದಿದ್ದರೂ ನಿನಗೆ ತಿಳಿದಿಲ್ಲ ಎಂದು ನಂಬುವಷ್ಟು ಮೂರ್ಖ ನಾಗಿದ್ದೆ. ಸ್ನೇಹಿತರ ಬಳಗದಲ್ಲಿ ಅನೇಕರು ನನಗೆ ಎಚ್ಚರಿಸಿದರೂ ನೀನು ನನ್ನನ್ನು ಅನುಕೂಲಕ್ಕೆ ಉಪಯೋಗಿಸಿಕೊಳ್ಳುತ್ತಿದ್ದೀಯ ಎಂದು ಅರಿಯಲೇ ಇಲ್ಲ. ಇಷ್ಟಾದರೂ ನಿನ್ನ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ನೀನು ಮದುವೆಯಾದ ಸುದ್ದಿ ತಿಳಿದು ಅಭಿನಂದಿಸಲು ಬಂದಿದ್ದೆ. ಅದೇ ನಿನ್ನನ್ನು ನಾನು ನೋಡಿದ ಕೊನೆಯ ದಿನ. ನೀನು ನನ್ನೊಂದಿಗೆ ಮಾತನಾಡಿದ ಕೊನೆಯ ಕ್ಷಣ.

ಇಂದಿಗೂ ನೀನು ಎಲ್ಲಿದ್ದೀಯ ಎಂದು ಗೊತ್ತಿಲ್ಲ, ಹೇಗಿದ್ದೀಯ ಎಂದು ತಿಳಿದಿಲ್ಲ. ನಿನ್ನ ಬಗ್ಗೆ ತಿಳಿಯುವ ಗೋಜಿಗೆ ಹೋಗಿಲ್ಲ. ಆದರೂ ನಿನ್ನ ನೆನಪು ಮಾಸಿಲ್ಲ, ಮನಸ್ಸಿಂದ ದೂರವಾಗಿಲ್ಲ, ಕಾಲೇಜಿನ ಆ ದಿನಗಳು ಹಸಿರಾಗಿದೆ, ಇವತ್ತಲ್ಲ ನಾಳೆ ನನ್ನ ಪ್ರೀತಿಯ ನಿವೇದನೆಯನ್ನು ಮಾಡುತ್ತೀನಿ ಎನ್ನುವ ಊಹೆಯಲ್ಲಿ ಬದುಕುತ್ತಿದ್ದೇನೆ. ಹಣವನ್ನು ಸಾಕು ಎನ್ನುವಷ್ಟು ಗಳಿಸಿದ್ದೇನೆ. ನೀನಿಲ್ಲ ಎನ್ನುವ ಬೇಜಾರಿದ್ದರೂ, ನನ್ನ ಈ ಏಳಿಗೆಗೆ ನೀನೆ ಕಾರಣ ಎಂದು ನಿನ್ನನ್ನು ನೆನಪಿಸಿಕೊಳ್ಳುತ್ತೇನೆ. ಜೊತೆಗೆ ಈಗಲೂ ಹಿಂದಿನಷ್ಟೆ ಪ್ರೀತಿಸುತ್ತೇನೆ. ನೀನು ಎಲ್ಲೆ ಇರು, ಹೇಗೆ ಇರು, ಯಾರ ಜೊತೆಗೆ ಇರು, ಯಾವಾಗಲು ಸಂತೋಷವಾಗಿರು. ನಿನ್ನ ನಿಜವಾದ ಪ್ರೇಮಿಯಾಗಿ, ನಿನ್ನ ಒಳಿತನ್ನೆ ಯಾವಾಗಲೂ ಬಯಸುತ್ತೇನೆ.

ನನ್ನನ್ನು ಅನುಕೂಲಕ್ಕೆ ಬಳಸಿಕೊಂಡರೂ, ಅದು ನಾನೆ ಮನಸಾರೆಯಾಗಿ ಕೊಟ್ಟ ಅವಕಾಶ. ನನ್ನ ಮೇಲೆ ಪ್ರೀತಿ ಹೆಚ್ಚಲಿ ಎಂದಿದ್ದ ಸ್ವಾರ್ಥ. ಹಾಗೇನಾದರೂ ಯಾವತ್ತಾದರೂ ಮತ್ತೆ ನನ್ನನ್ನು ನಿನ್ನ ಅನುಕೂಲಕ್ಕೆ ಉಪಯೋಗಿಸಿಕೊಳ್ಳಬೇಕೆನಿಸಿದರೆ ನೆನಪಿಸಿಕೊ. ನನ್ನ ಮನಸ್ಸು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಪ್ರೀತಿ ಎಂದರೆ ಕೊಟ್ಟು ಕೊಳ್ಳುವ ವ್ಯಾಪಾರವಲ್ಲ, ಎಲ್ಲವನ್ನೂ ನೀಡುವ ತ್ಯಾಗವಲ್ಲ, ಕಸಿದುಕೊಳ್ಳುವ ದುರ್ಬುದ್ಧಿಯಲ್ಲ, ನಮಗಾಗಿಯೆ ಕೊಡುವ ಸ್ವಾರ್ಥ. ನೋಡುಗರಿಗೆ ಪ್ರೀತಿಯಲ್ಲಿ ಮೋಸ ಕಾಣಿಸಬಹುದು ಆದರೆ ಪ್ರೀತಿಸುವವರಲ್ಲಿ ಕಾಣಿಸಿದರೆ ಅದು ಪ್ರೀತಿಯೆ ಅಲ್ಲ.


ಈ ಪ್ರೇಮ ಪತ್ರವನ್ನು ನಿನಗೆ ಕೊಡಲು ಬರೆಯಲಿಲ್ಲ, ಎಂದಾದರೂ ನಿನಗೆ ಸಿಕ್ಕರೆ, ಈಗಲೂ ನಿನ್ನ ಜೊತೆಗೆ ನಾನಿದ್ದೇನೆ ಎಂದು ತಿಳಿ, ಕೇವಲ ನನ್ನ ಸ್ವಾರ್ಥಕ್ಕಾಗಿ.

ಇಂತಿ ನಿನ್ನ ಪ್ರೀತಿಸುವ…