ಅಮೇರಿಕಾದಲ್ಲಿ ಹಣಕ್ಕೆ ಮಹತ್ವ ಹೆಚ್ಚಿದೆ. ಎಲ್ಲವೂ ದುಬಾರಿ. ಹೋಟೆಲ್‌ನಲ್ಲಿ ಸ್ನೇಹಿತರು ತಿಂಡಿಗೋ, ಊಟಕ್ಕೋ ಹೋದರೆ ಬಿಲ್ಲನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ, ಒಬ್ಬರೇ ಕೊಡಲು ಬಿಡುವುದಿಲ್ಲ. ಯಾವುದೇ ಪ್ರದೇಶಕ್ಕೆ ಹೋದಾಗ, ಪ್ರವಾಸಕ್ಕೆ ಹೋದಾಗ ಖರ್ಚನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಯಾರದಾದರೂ ಮನೆಗೆ ಹೋದಾಗ ಏನಾದರೂ ಉಡುಗೊರೆ ತೆಗೆದುಕೊಂಡು ಹೋಗುತ್ತಾರೆ. ಮಕ್ಕಳು ಹದಿನಾಲ್ಕನೇ ವರ್ಷಕ್ಕೆ ಸಣ್ಣ ಉದ್ಯೋಗ ಮಾಡಲು ತೊಡಗುತ್ತಾರೆ. ಅವರ ಖರ್ಚಿಗೆ ಹಣ ಸಂಪಾದಿಸಿಕೊಳ್ಳುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

ಅಮೇರಿಕ ವ್ಯಕ್ತಿ ಸ್ವಾತಂತ್ರ್ಯಕ್ಕೆ ಮಹತ್ವ ಕೊಡುವ ದೇಶ. ಕಾನೂನಿಗೆ ವಿರುದ್ಧವಾದ ಕೆಲಸಗಳನ್ನು ಮಾಡದೆ ತಮ್ಮ ಸ್ವಂತ ಜೀವನವನ್ನು ಹೇಗೆ ಬೇಕೋ ಹಾಗೆ ಜೀವಿಸಬಹದು. ಇನ್ನೊಬ್ಬರಿಗೆ ತೊಂದರೆ ಕೊಡದೇ, ತಾವು ಇನ್ನೊಬ್ಬರಿಗೆ ತೊಂದರೆ ಆಗದೆ ಇದ್ದಲ್ಲಿ ಅಡ್ಡಿ ಆಂತಕಗಳು ಇಲ್ಲದೆ ಜೀವಿಸಬಹುದು. ಕಷ್ಟಪಡುವ ಮನೋಭಾವ, ಬೆಳೆಯುವ ಇಚ್ಛಾಶಕ್ತಿ ಇದ್ದಲ್ಲಿ ಹಣಕ್ಕೂ ಕೊರತೆ ಇರುವುದಿಲ್ಲ. ಬದ್ಧರಾಗಿ ಕೆಲಸಮಾಡುವವರಿಗೆ ಕೆಲಸಗಳು ಸಿಗುತ್ತವೆ, ಕೆಲಸಕ್ಕೆ ತಕ್ಕ ಸಂಬಳವೂ ಸಿಗುತ್ತದೆ. ಹಣಕ್ಕೆ ತಕ್ಕ ಜೀವನವೂ ಇರುತ್ತದೆ.

ಅಮೇರಿಕಾದಲ್ಲಿ ಯಾರೂ ಇನ್ನೊಬ್ಬರ ಹಂಗಿನಲ್ಲಿ, ಆಶ್ರಯದಲ್ಲಿ ಜೀವನ ನಡೆಸುವುದಿಲ್ಲ. ಹಾಗೆ ಜೀವನ ನಡೆಸಲು ಸಾಧ್ಯವೂ ಇಲ್ಲ. ಮನೆಯಲ್ಲಿ ಎಲ್ಲರೂ ಒಂದಿಲ್ಲೊಂದು ಉದ್ಯೋಗ ಮಾಡುತ್ತಿರುತ್ತಾರೆ. ಹಾಗೆ ಉದ್ಯೋಗಮಾಡುವ ಅನಿವಾರ್ಯತೆಯೂ ಇದೆ. ಬೇರೆ ದೇಶಗಳಂತೆ ಒಬ್ಬರ ದುಡಿಮೆಯಲ್ಲಿ ಅನೇಕರು ಜೀವಿಸುವ ಪರಿಪಾಠ ಅಮೇರಿಕ ದೇಶದಲ್ಲಿ ಇಲ್ಲ. ಇಲ್ಲಿ ಎಲ್ಲರೂ ವೈಯಕ್ತಿಕವಾಗಿ, ಯಾರದೇ, ಯಾವುದೇ ಅಡಚಣೆಯಿಲ್ಲದೆ, ತಮಗೆ ಇಷ್ಟ ಬಂದಂತೆ ಜೀವಿಸಲು ಇಷ್ಟ ಪಡುತ್ತಾರೆ. ಒಂದೇ ಮನೆಯಲ್ಲಿ ಹತ್ತಾರು ಜನ ಜೀವಿಸುವ ಪರಿಪಾಠ ಇಲ್ಲಿ ಇಲ್ಲ. ಮಕ್ಕಳು ಹದಿನೆಂಟು ತುಂಬಿದ ಮೇಲೆ ಕಾಲೇಜಿಗೆ ಹೋಗುವುದರಿಂದ, ಕಾಲೇಜಿನ ಹತ್ತಿರ ವಾಸಿಸಲು ಹೊರಟವರು, ಕಾಲೇಜು ಮುಗಿದಮೇಲೆ ಕೆಲಸಕ್ಕೆ ಸೇರಿಕೊಂಡು ತಮ್ಮದೇ ಮನೆ ಮಾಡಿಕೊಂಡು ಬೇರೆಯಾಗಿ ವಾಸಿಸುತ್ತಾರೆ. ಅಪ್ಪ ಅಮ್ಮ ನಿವೃತ್ತಿ ಹೊಂದಿದರೂ, ಮಕ್ಕಳ ಮನೆಗಳಲ್ಲಿ ಇರುವುದಿಲ್ಲ, ಮಕ್ಕಳು ಅಪ್ಪ ಅಮ್ಮನ ಮನೆಯಲ್ಲಿ ಇರುವುದಿಲ್ಲ. ಇಲ್ಲ ಅಪ್ಪ ಅಮ್ಮ, ಮಕ್ಕಳ ಮನೆಗೆ ಹತ್ತಿರ ಮನೆ ಮಾಡಿಕೊಳ್ಳುತ್ತಾರೆ, ಅಥವಾ ಮಕ್ಕಳೇ ಅಪ್ಪ ಅಮ್ಮನ ಮನೆಯ ಹತ್ತಿರ ಮನೆ ಮಾಡಿಕೊಂಡು ವಾಸಿಸುತ್ತಾರೆ. ಇದು ತುರ್ತು ಸಮಯಗಳಲ್ಲಿ ಸಹಾಯಕ್ಕೆ ಬರುತ್ತದೆ. ಇದು ಮಕ್ಕಳು, ಪೋಷಕರು ಇಬ್ಬರಿಗೂ ಪರ್ಸನಲ್ ಸ್ಪೇಸ್ ಸಿಗುತ್ತದೆ, ಹಾಗೆ ಯಾವುದೇ ಜಗಳಗಳಿಗೆ ಆಸ್ಪದ ಕೊಡುವುದಿಲ್ಲ. ಹತ್ತಿರಕ್ಕಿಂತಲೂ ದೂರ ಇದ್ದರೇನೇ ಪ್ರೀತಿ ಇರುತ್ತದೆ ಎನ್ನುವ ಮಾತು ಇಲ್ಲಿ ನಿಜವಾಗಿದೆ.

ಬೇರೆ ಬೇರೆ ಮನೆಗಳಲ್ಲಿ ವಾಸಿಸಿದರೂ ನೆಂಟರು ಇಷ್ಟರು ಆಗಾಗ ಯಾವುದಾದರೂ ಒಂದು ಮನೆಯಲ್ಲಿ ಸರದಿ ಮಾಡಿಕೊಂಡು ಸೇರುತ್ತಾರೆ. ಗುಡ್ ಫ್ರೈಡೆ, ಥ್ಯಾಂಕ್ಸ್‌ಗಿವಿಂಗ್, ಕ್ರಿಸ್ಮಸ್ ಹಬ್ಬಗಳನ್ನು ಒಂದು ಕಡೆ ಸೇರಿಕೊಂಡು ಆಚರಿಸುತ್ತಾರೆ. ಖರ್ಚನ್ನು ಹಂಚಿಕೊಳ್ಳುತ್ತಾರೆ. ಇಲ್ಲ ಮುಂದಿನ ಹಬ್ಬದ ಸರದಿ ಇನ್ನೊಬ್ಬರದಾಗಿರುತ್ತದೆ.

ಅಮೇರಿಕಾದಲ್ಲಿ ಹಣಕ್ಕೆ ಮಹತ್ವ ಹೆಚ್ಚಿದೆ. ಎಲ್ಲವೂ ದುಬಾರಿ. ಹೋಟೆಲ್‌ನಲ್ಲಿ ಸ್ನೇಹಿತರು ತಿಂಡಿಗೋ, ಊಟಕ್ಕೋ ಹೋದರೆ ಬಿಲ್ಲನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ, ಒಬ್ಬರೇ ಕೊಡಲು ಬಿಡುವುದಿಲ್ಲ. ಯಾವುದೇ ಪ್ರದೇಶಕ್ಕೆ ಹೋದಾಗ, ಪ್ರವಾಸಕ್ಕೆ ಹೋದಾಗ ಖರ್ಚನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಯಾರದಾದರೂ ಮನೆಗೆ ಹೋದಾಗ ಏನಾದರೂ ಉಡುಗೊರೆ ತೆಗೆದುಕೊಂಡು ಹೋಗುತ್ತಾರೆ. ಮಕ್ಕಳು ಹದಿನಾಲ್ಕನೇ ವರ್ಷಕ್ಕೆ ಸಣ್ಣ ಉದ್ಯೋಗ ಮಾಡಲು ತೊಡಗುತ್ತಾರೆ. ಅವರ ಖರ್ಚಿಗೆ ಹಣ ಸಂಪಾದಿಸಿಕೊಳ್ಳುತ್ತಾರೆ.

ಅಮೇರಿಕಾದಲ್ಲಿ ಜನ ಎದುರಿಗೆ ಬಂದಾಗ ಮುಗಳ್ನಗೆ ಬೀರುತ್ತಾರೆ. ಪರಿಚಯ ಇಲ್ಲದಿದ್ದರೂ “ಹೇಗಿದ್ದೀರಿ” ಎನ್ನುತ್ತಾರೆ. ಇಲ್ಲಿನ ಜನಕ್ಕೆ ಮಾತು ಜಾಸ್ತಿ, ಅಪರಿಚಿತರೂ ಒಂದೇ ಕಡೆ ಸೇರಿದರೂ ಕ್ರೀಡೆ, ರಾಜಕೀಯ, ಸಿನಿಮಾ, ವಾತಾವರಣ ಹೀಗೆ ಯಾವುದೋ ವಿಷಯ ತೆಗೆದು ಗಂಟೆಗಟ್ಟಲೆ ಮಾತನಾಡಬಲ್ಲರು. ಸದಾ ಬೇರೆಯವರಿಗೆ ಸಾಮಾನ್ಯವಾಗಿ ಗೌರವ ಕೊಡುತ್ತಾರೆ. ತಮ್ಮ ಆಸ್ತಿ, ಅಂತಸ್ತನ್ನು ತೋರಿಸುವುದಿಲ್ಲ, ಸ್ವಂತ ಜೀವನದ ಬಗ್ಗೆ ಮಾತನಾಡುವುದಿಲ್ಲ, ಬೇರೆಯವರ ಸ್ವಂತ ಜೀವನದ ಬಗ್ಗೆ ಕೇಳುವುದಿಲ್ಲ. ಬೇರೆಯವರ ಜೀವನ ಬಗ್ಗೆ ಅಂತಹ ಆಸಕ್ತಿ ಕುತೂಹಲವೇನೂ ಅಲ್ಲಿನವರಿಗೆ ಇರುವುದಿಲ್ಲ (ಅಲ್ಲಿ ಇಲ್ಲಿ ಅಪವಾದ ಇರಬಹದು ಅಷ್ಟೇ!).

ಅಮೇರಿಕಾದಲ್ಲಿ ಜೀವನ, ಸ್ವಾತಂತ್ರ್ಯ ಮತ್ತು ಸಂತೋಷದ ಅನ್ವೇಷಣೆಯ ತತ್ವಕ್ಕೆ ಬದ್ಧವಾಗಿರುವ ಅಮೇರಿಕನ್ ಜೀವನ ವಿಧಾನ ಅಥವಾ ಅಮೇರಿಕನ್ ಮಾರ್ಗವಾಗಿದೆ. ಅಮೇರಿಕನ್ ಮಾರ್ಗದ ಕೇಂದ್ರದಲ್ಲಿ ಅಮೇರಿಕನ್ ಕನಸಿನ ನಂಬಿಕೆ ಇದೆ, ಅದನ್ನು ಕಠಿಣ ಪರಿಶ್ರಮದ ಮೂಲಕ ಯಾವುದೇ ಅಮೇರಿಕನ್ ಸಾಧಿಸಬಹುದು ಎಂದು ಹೇಳಲಾಗುತ್ತದೆ.

ಅಮೇರಿಕನ್ ಬರಹಗಾರ ಮತ್ತು ಬುದ್ಧಿಜೀವಿ ವಿಲಿಯಂ ಹರ್ಬರ್ಗ್ ಅಮೆರಿಕಾದ ಜೀವನ ವಿಧಾನಕ್ಕೆ ಕೆಳಗಿನ ವ್ಯಾಖ್ಯಾನವನ್ನು ನೀಡುತ್ತಾರೆ:

ಅಮೇರಿಕನ್ ಜೀವನಶೈಲಿಯು ವೈಯಕ್ತಿಕ, ಕ್ರಿಯಾತ್ಮಕ ಮತ್ತು ಪ್ರಾಯೋಗಿಕವಾಗಿದೆ. ಇದು ವ್ಯಕ್ತಿಯ ಅತ್ಯುನ್ನತ ಮೌಲ್ಯ ಮತ್ತು ಘನತೆಯನ್ನು ದೃಢೀಕರಿಸುತ್ತದೆ; ಇದು ಅವನ ಕಡೆಯಿಂದ ನಿರಂತರ ಚಟುವಟಿಕೆಯನ್ನು ಒತ್ತಿಹೇಳುತ್ತದೆ, ಏಕೆಂದರೆ ಅವನು ಎಂದಿಗೂ ವಿಶ್ರಾಂತಿ ಪಡೆಯುವುದಿಲ್ಲ ಆದರೆ ಯಾವಾಗಲೂ “ಮುಂದುವರಿಯಲು” ಪ್ರಯತ್ನಿಸುತ್ತಿರುತ್ತಾನೆ; ಇದು ಸ್ವಾವಲಂಬನೆ, ಅರ್ಹತೆ ಮತ್ತು ಚಾರಿತ್ರ್ಯದ ನೀತಿಯನ್ನು ವ್ಯಾಖ್ಯಾನಿಸುತ್ತದೆ ಮತ್ತು ಸಾಧನೆಯ ಮೂಲಕ ನಿರ್ಣಯಿಸುತ್ತದೆ: ಅಮೆರಿಕನ್ನರು ಸುಲಭವಾಗಿ ಜಗತ್ತಿನಲ್ಲೇ ಅತ್ಯಂತ ಉದಾರ ಮತ್ತು ಪರೋಪಕಾರಿ ಜನರು, ಜಗತ್ತಿನ ಎಲ್ಲಿಯಾದರೂ ಸಂಕಟಗಳಿಗೆ ತಮ್ಮ ಸಿದ್ಧ ಮತ್ತು ನಿಷ್ಠುರ ಪ್ರತಿಕ್ರಿಯೆ ನೀಡುತ್ತಾರೆ. ಅಮೇರಿಕ್ಕನ್ನರು ಪ್ರಗತಿಯಲ್ಲಿ, ಸ್ವಯಂ-ಸುಧಾರಣೆಯಲ್ಲಿ ಮತ್ತು ಶಿಕ್ಷಣದಲ್ಲಿ ನಂಬಿಕೆ ಇರಿಸಿಕೊಂಡಿದ್ದಾರೆ, ಮುಂತಾಗಿ ವಿಶ್ಲೇಷಿಸುತ್ತಾರೆ.

ನ್ಯಾಷನಲ್ ಆರ್ಕೈವ್ಸ್ ಅಂಡ್ ರೆಕಾರ್ಡ್ಸ್ ಅಡ್ಮಿನಿಸ್ಟ್ರೇಷನ್‌ನ 1999 ರ ವಾರ್ಷಿಕ ವರದಿಯಲ್ಲಿ, ರಾಷ್ಟ್ರೀಯ ಆರ್ಕೈವಿಸ್ಟ್ ಜಾನ್ ಡಬ್ಲ್ಯೂ ಕಾರ್ಲಿನ್ ಹೀಗೆ ಬರೆಯುತ್ತಾರೆ, “ನಮ್ಮ ಸರ್ಕಾರ ಮತ್ತು ನಮ್ಮ ಜೀವನ ವಿಧಾನವು ರಾಜರ ದೈವಿಕ ಹಕ್ಕು, ಗಣ್ಯರ ಆನುವಂಶಿಕ ಸವಲತ್ತುಗಳು ಅಥವಾ ಜಾರಿಯನ್ನು ಆಧರಿಸಿಲ್ಲವಾದ್ದರಿಂದ ನಾವು ವಿಭಿನ್ನವಾಗಿದ್ದೇವೆ. ನಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಘೋಷಣೆ, ನಮ್ಮ ಸರ್ಕಾರವನ್ನು ರಚಿಸಿದ ಸಂವಿಧಾನ ಮತ್ತು ನಮ್ಮ ಸ್ವಾತಂತ್ರ್ಯಗಳನ್ನು ಸ್ಥಾಪಿಸಿದ ಹಕ್ಕುಗಳ ಮಸೂದೆಯನ್ನು ಆಧರಿಸಿವೆ.”

ಅಮೇರಿಕಾದ ಬಹುತೇಕ ಜನ ವಲಸಿಗಳು. ಬೇರೆ ಬೇರೆ ದೇಶಗಳಿಂದ, ಬೇರೆ ಬೇರೆ ಕಾರಣಗಳಿಗೆ ಅಮೇರಿಕಾಕ್ಕೆ ಬಂದು ನೆಲೆಸಿದ್ದಾರೆ. ಹಾಗೆ ಬಂದವರು ತಮ್ಮ ತಮ್ಮ, ವಿಭಿನ್ನ ಸಂಸ್ಕೃತಿಗಳನ್ನು ಹೊತ್ತಿ ತಂದಿದ್ದಾರೆ. ತಮ್ಮ ತಮ್ಮ ಧರ್ಮಗಳನ್ನು ಪಾಲಿಸಲು ಅಮೇರಿಕಾದಲ್ಲಿ ಯಾರೂ ಪಡಿಸುವುದಿಲ್ಲ. ಸರ್ಕಾರ ಬಹಿರಂಗವಾಗಿ ಯಾವುದೋ ಒಂದು ಧರ್ಮದ ಜೊತೆ ನಿಲ್ಲುವುದಿಲ್ಲ. ವಲಸಿಗರಿಂದ ಅಮೇರಿಕಾ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ.

ಅಮೇರಿಕನ್ ಸಂಸ್ಕೃತಿಯ ಹಲವು ಪ್ರಮುಖ ಅಂಶಗಳಿವೆ. ಇವುಗಳಲ್ಲಿ ಕೆಲವು ಸ್ವಾತಂತ್ರ್ಯದ ಪ್ರೀತಿ, ಕಠಿಣ ಪರಿಶ್ರಮದ ಗೌರವ, ಸಮಾನತೆಯ ನಂಬಿಕೆ, ಸಮಯೋಚಿತತೆಯ ಗೌರವ ಮತ್ತು ಭವಿಷ್ಯದ ದೃಷ್ಟಿಕೋನ. ಅಮೇರಿಕನ್ ಜೀವನವು ಅಮೇರಿಕಾದಲ್ಲಿ ವಾಸಿಸುವ ವ್ಯಕ್ತಿಗಳ ಸಾಮೂಹಿಕ ಅನುಭವಗಳು, ಮೌಲ್ಯಗಳು ಮತ್ತು ಚಟುವಟಿಕೆಗಳನ್ನು ಸೂಚಿಸುತ್ತದೆ. ಇದು ಸಂಸ್ಕೃತಿ, ರಾಜಕೀಯ, ಸಾಮಾಜಿಕ ರಚನೆಗಳು ಮತ್ತು ಆರ್ಥಿಕ ಪರಿಸ್ಥಿತಿಗಳಂತಹ ವಿವಿಧ ಅಂಶಗಳನ್ನು ಒಳಗೊಂಡಿದೆ.