ಸಂಜೆಯಾಗುತ್ತಿದ್ದಂತೆ, ಹೆಂಡತಿಗೆ ಅದು ಕಾಡತೊಡಗಿತು. ಸಾವಿರಾರು ರೂಪಾಯಿಯ ಮುಖ ನೋಡಿ ಅವಳ ಬಯಕೆಯನ್ನು ಇಲ್ಲ ಮಾಡದೆವಲ್ಲ, ನಾವೇನು ಅಷ್ಟು ದುಡ್ಡಿನಿಂದ ಹಂಚು ಹಾಕುವುದು ಅಷ್ಟರಲ್ಲೆ ಇದೆ ಎಂದೆಲ್ಲ ಗೊಣಗೊಣ ಮಾಡತ್ತಿದ್ದಳು. ನನಗೂ ಹಾಗೇ ಅನಿಸುತ್ತಿತ್ತು. ಆದರೆ ಅದು ಮುಗಿದ ಕತೆ ಎಂದು ನನಗೆ ನಾನೇ ಹೇಳಿಕೊಂಡು ಮರೆಯಲು ಯತ್ನಿಸುತ್ತಿದ್ದೆ. ಮಗಳು, ‘ನಾನು ನನ್ನ ಅಭಿಪ್ರಾಯ ಹೇಳಿದೆ. ಹಾಗೇ ಮಾಡಬೇಕು ಎಂದಲ್ಲ’ ಎಂದು ದುಗುಡ ಹೆಚ್ಚಿಸಿದಳು. ಅನಿಸಲಿಲ್ಲ. ಆದರೆ ಗಟ್ಟಿ ಮನಸ ಮಾಡಿಕೊಂಡು ತಟಸ್ತನಾಗಿದ್ದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ “ಫ್ರಿಜ್ಜು”

ದಿನವೊಂದು ತೆರದುಕೊಂಡರೆ ಮನೆಯಲ್ಲಿ ಎಲ್ಲಿದ ಉದ್ವೇಗ, ಗಡಿಬಿಡಿ. ಐದು ನಿಮಿಷ ಕುಳಿತರೂ ಯಾವುದೊ ಕೆಲಸ ತಡವಾಗಿ ಹೊರಡಲು ಲೇಟಾಗುತ್ತದೆ. ವಾಕಿಂಗು, ಅಡಿಗೆ, ಸ್ನಾನ, ಪೂಜೆ, ತಿಂಡಿ ಎಲ್ಲ ಎಂಟರವೊಳಗೆ ಮುಗಿಯಬೇಕು. ಇದರ ನಡುವೆ ಒಬ್ಬರಿಗೊಬ್ಬರ ನಡುವೆ ಸಿಡಿಮಿಡಿ. ಯಾವುದೊ ಕೆಲಸ ಏರುಪೇರಾದರೆ, ಒಲೆಯ ಮೇಲಿಟ್ಟಿದ್ದು ಕತ್ತಿ ಹೋದರೆ, ಅಲ್ಲಿಡುವುದನ್ನು ಇಲ್ಲಿಟ್ಟರೆ….. ಈ ಎಲ್ಲದರ ನಡುವೆ ಕಲಾವತಿ ಬರುತ್ತಾಳೆ. ಸೀರೆ ಉಡುತ್ತಲೇ ಇವಳು, ‘ನಿ ದಿನಾ ಅವರ ಮನೆಗೆ ಹೋಗಿ ಇಲ್ಲಿ ಬರ್ತೆ. ನಮಗೆ ತಡವಾಗುತ್ತದೆ. ಕಡೆಗೆ ಬಂದು ಗಡಬಿಡಿಯಲ್ಲಿ ಪಾತ್ರೆ ಸರಿಯಾಗಿ ತೊಳೆಯದೆ, ನೆಲ ಒರೆಸದೇ ಹೋಗ್ತಿ. ಎಷ್ಟ ಸಲ ಆಯ್ತು ನಿನಗೆ ಹೇಳಿದ್ದು, ಮತ್ತೆ ಹಾಗೇ ಮಾಡ್ತಿ, ಬೇಕು ಹೇಳೇ ಮಾಡ್ತಿ..’ ಎಂದು ಹರಿಹಾಯುತ್ತಾ ಹೊರಡುತ್ತಾಳೆ. ಅವಳು ಸತ್ಯವೊ ಸುಳ್ಳೊ ಒಂದು ತೆಳುವಾದ ಕಾರಣ ಕೊಡುತ್ತಾಳೆ.

ಇದೆಲ್ಲ ಶುರುವಾದದ್ದು ಹೀಗೆ.

ನಾವು ಇಲ್ಲೇ ಹತ್ತಿರದಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ಕಸ ಮುಸರೆ ಕೆಲಸ ಮಾಡಲು ಒಬ್ಬಳು ಬರುತ್ತಿದ್ದಳು, ಶಾಂತವ್ವ ಎಂದು. ಎಲ್ಲೊ ಬಯಲುಸೀಮೆ ಕಡೆಯವಳು. ಈಗ ಇಲ್ಲೇ ಬಂದು ಖಾಯಂ ಆಗಿ ಉಳಿದಿದ್ದಾಳೆ. ನಿಯತ್ತಿನಿಂದ, ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಳು. ನಂಬಿಕಸ್ಥಳು. ಎಲ್ಲಿ ನಾವು ಯಾವ ಸಾಮಾನು ಹೊತ್ತಾಕಿದ್ದರೂ ಮುಟ್ಟುತ್ತಿರಲಿಲ್ಲ. ಅವಳ ಆ ಗುಣದಿಂದಲೇ ನಾವು ಊರಿಗೆ ಗೀರಿಗೆ ಹೋಗುವಾಗ ರಾತ್ರಿ ಮನೆ ಕಾಯಲು ಚಾವಿ ಕೊಟ್ಟು ಹೋಗುತ್ತಿದ್ದೆವು. ನಮ್ಮನೆಯಿಂದ ಸ್ವಲ್ಪ ದೂರದಲ್ಲೆ ಅವಳ ಮನೆಯಿತ್ತು. ಅವಳಿಗೆ ಒಮ್ಮೆ ಬರಲಾಗದಿದ್ದರೆ ಗಂಡನನ್ನೊ, ಮಗನನ್ನೊ ಕಳಿಸುತ್ತಿದ್ದಳು. ಅವರೂ ಹಾಗೇ ಇದ್ದರು.

ಆಮೇಲೆ ನಾವು ಸ್ವಂತ ಮನೆ ಕಟ್ಟಿಸಿದೆವು. ಅಷ್ಟರಲ್ಲಿ ಶಾಂತವ್ವಳಿಗೆ ಏನೊ ಶೀಕಾಗಿ, ಯಾರ ಮನೆ ಕೆಲಸಕ್ಕೂ ಹೋಗಲಾರದ ಸ್ಥಿತಿ ತಲುಪಿದಳು. ಮನೆ ಕಾಯಲು ಮಾತ್ರ, ಹೇಳಿದರೆ ಬರುತ್ತಿದ್ದಳು. ಅವಳಿಗೆ ಆಗಲೇ ಸುಮಾರು ವಯಸ್ಸೂ ಆಗಿತ್ತು. ಗಂಡ ಅಲ್ಲಿ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಮಗ ಗಾರೆ ಗೀರೆ ಕೆಲಸಕ್ಕೆ ಹೋಗಲು ಶುರು ಮಾಡಿದ್ದ. ಜೀವನ ನಡೆಸಲು ಅಂಥ ತೊಂದರೆ ಏನೂ ಇದ್ದಂತಿರಲಿಲ್ಲ. ನಮಗೆ ಮತ್ತೊಬ್ಬಳು ಕೆಲಸದವಳನ್ನು ಹುಡುಕಲೇ ಬೇಕಾಗಿತ್ತು. ಬೆಳಗಾದ ಕೂಡಲೆ ನಾವಿಬ್ಬರೂ ಕೆಲಸಕ್ಕೆ ಹೋಗುವವರಾದ್ದರಿಂದ, ಕಸ ಗುಡಸಿ, ನೆಲ ವರೆಸಿ, ಬಟ್ಟೆ ತೊಳೆದು ಅಡಿಗೆ ಮಾಡಿ ಹೊರಡುವುದು ಕಷ್ಟ ಸಾಧ್ಯವಾಗಿತ್ತು. ಶಾಂತವ್ವಳೇ ಒಬ್ಬಳನ್ನು ಗೊತ್ತು ಮಾಡಿದಳು. ಇವಳೂ ಹಾವೇರಿ ಹಾನಗಲ್ ಬದಿಯವಳು. ಆ ಬದಿಯ ಸುಮಾರು ಕುಟುಂಬಗಳು ಸಿರ್ಸಿ ಕಡೆ ಬಂದಿದೆ ಎಂದು ಕಾಣುತ್ತದೆ. ಇವಳ ಹೆಸರು ಕಲಾವತಿ. ಶಾಂತವ್ವನಿಗಿಂತ ಗಟ್ಟಿಮುಟ್ಟಾಗಿದ್ದಳು. ಆದರೆ ಅವಳ ನಿಯತ್ತು, ಶ್ರದ್ಧೆಯೆಲ್ಲ ಇರಲಿಲ್ಲ. ಹಾಗಂತ ಕಳ್ಳತನ ಗಿಳ್ಳತನ ಮಾಡುವವಳಲ್ಲ. ಕಟಾಕಟಿ ಕೆಲಸ ಮಾಡಿ ನಡದುಬಿಡುತ್ತಿದ್ದಳು.

ನಮ್ಮನೆ ಸೇರಿದ ಮೇಲೆ ಪಕ್ಕದ ಮನೆಯನ್ನೂ ಹಿಡಿದುಕೊಂಡಳು. ಹಾಗೆಯೆ, ಹತ್ತಿರದ ಲಾಜಿಂಗಿಗೂ, ನಮದೆಲ್ಲ ಮುಗಿದ ಮೇಲೆ ಹೋಗುತ್ತಿದ್ದಳು. ಅಲ್ಲೇ ಅವಳಿಗೆ ಹೆಚ್ಚು ಪಗಾರು ಸಿಗ್ತಿತ್ತು ಎಂದು ಕಾಣುತ್ತದೆ. ಜೊತೆಗೆ, ಅಲ್ಲಿ ಮನೆ ಕೆಲಸದ ಹಾಗೆ ಸಣ್ಣ ಹಿಡಿದು ಮಾಡುವುದಲ್ಲ. ಕೋಲಿಗೆ ಬಟ್ಟೆ ಕಟ್ಟಿಕೊಂಡು ಉದ್ದಕೆ ಎಳಕೊಂಡು ಹೋದರಾಯ್ತು. ಯಾವ ಕಿರಕಿರಿ ಇದ್ದಂತಿರಲಿಲ್ಲ. ಆದರೆ ಅಲ್ಲಿ ಈ ಸಂಬಂಧ ಗಿಂಬಂಧ ಇರುವುದಿಲ್ಲ ಅಷ್ಟೆ. ಅವಳ ಕಷ್ಟ ಸುಖವನ್ನೆಲ್ಲ ಹೇಳಿ ಕೇಳಿ ಮಾಡುವ ಹಾಗಿಲ್ಲ. ಅದೂ ಒಂದು ಕಾರಣ ಇರಬಹುದು ನಮ್ಮನೆಗೆ ಬರಲು.

ಕಲಾವತಿಗೆ ಗಂಡ ತೀರಿ ಹೋಗಿದ್ದ. ಸಿಕ್ಕಾಪಟ್ಟೆ ಕುಡಿಯುತ್ತಿದ್ದನಂತೆ. ಇವಳಿಗೆ ಇಬ್ಬರು ಹೆಣ್ಣು ಮಕ್ಕಳು, ಮುದಿಯಾದ ತಾಯಿ, ತಂದೆ. ಇಷ್ಟು ಜನರನ್ನು ನೋಡಿಕೊಳ್ಳಬೇಕಾಗಿತ್ತು. ಊರ ಕಡೆ ಹೊಲ ಮನೆ ಒಂದಿಷ್ಟು ಇದೆ. ಅಲ್ಲಿ ಯಾರ್ಯಾರೊ ಇದ್ದಾರೆ. ಮಕ್ಕಳಿಬ್ಬರು ಶಾಲೆಗೆ ಹೋಗುತ್ತಿದ್ದರು. ಹಿರಿಯವಳು ಕಾಲೇಜಿಗೆ ಹೋಗುವವಳು. ಚೆಂದ ಇದ್ದಳು, ಸೌಮ್ಯ ಸ್ವಭಾವದವಳು. ತಾಯಿಗೆ ಎಲ್ಲಾದರೂ ಲಾಜಿಂಗಿಗೆ ಮುಂಚೆ ಹೋಗುವುದಿದ್ದಾಗ ನಮ್ಮನೆಗೆ ಕೆಲಸಕ್ಕೆ ಬರುತ್ತಿದ್ದಳು. ಯಾವುದಾದರೂ ದೊಡ್ಡವರ ಮನೆಯಲ್ಲಿದ್ದರೆ ದೊಡ್ಡ ರುಬಾಬ್ ಹಾರಿಸುತ್ತ ತಿರುಗಬಹುದಾದ ಅವಳು, ಬಗ್ಗಿ ತಣ್ಣಗೆ ನೆಲ ಒರೆಸುವುದನ್ನು ನೋಡಿದರೆ ಒಂದ ನಮನಿಯಾಗುತ್ತಿತ್ತು.

ಕಲಾವತಿ ಒಂದಿನ ಬಂದು, ಮಗಳಿಗೆ ಗಂಡು ಫಿಕ್ಸ್ ಆಗಿದೆ, ಹಾವೇರಿ ಅವರ ಊರ ಬದಿಯವನೇ, ಕೊಡುವುದು ಏನೂ ವಿಶೇಷವಿಲ್ಲ, ಮದುವೆ ಮಾಡಬೇಕು ಅಂದಳು. ನಮಗೆ ಸ್ವಲ್ಪ ಗಲಿಬಿಲಿ ಆಯಿತು. ಅವಳತ್ತರ ಏನು ಹಣ ಇದ್ದಾಂಗ್ ಇಲ್ಲ, ಈ ಕೆಲಸದವಳಿಗೆ ಮದುವೆಗೆ ಸಾಕಾಗುವಷ್ಟು ದುಡ್ಡು ಕೊಡುವುದು ಹೇಗೆ? ಕೊಟ್ಟರೆ ವಾಪಸ್ ಬರುವುದು ಸಾಧ್ಯವಿಲ್ಲ. ನಾನು ಸಣ್ಣವನಿರುವಾಗ ನೋಡದ್ದೇ ಅದು. ನಮ್ಮನೆ ಒಕ್ಕಲುಗಳು, ಸಂಜೆ ಟೈಮಿಗೆ ಬಾಗಿಲ ಬದಿಗೆ ಕುಳಿತುಕೊಳ್ಳುತ್ತಿದ್ದರು. ಸುಮಾರು ಹೊತ್ತು ಅದು ಇದು ಮಾತಾಡುತ್ತ ಕುಳಿತಿರುತ್ತಿದ್ದರು. ಕಡೆಗೆ ಹೋಗು ವೇಳೆಗೆ ಅಪ್ಪಯ್ಯ, ‘ಏನೊ ಮತೆ ದೇವಪ್ಪ?’ ಎಂದು ಕೇಳಿದಾಗ, ‘ಮಗಗೊಂದು ಮದಿ ಮಾಡ್ಬೇಕು ಮಾಡಿದೆ..’ ಎಂದು ಸಣ್ಣ ಧ್ವನಿಲಿ ಹೇಳುತ್ತಿದ್ದ. ‘ಎಲ್ಲಾ ಕೊಡುಕೆ ಸಾಧ್ಯ ಇಲ್ಲ, ತೆಂಗಿನ ಕಾಯ್ ಅದೆ ತಕಂಡ್ ಹೋಗು’ ಎಂದು ಅಪ್ಪಯ್ಯ ಹೇಳುತ್ತಿದ್ದ. ಆಗ ಅವರು, ‘ಜವಳಿ ಒಂದ್ ತಗಿಸ್ ಕೊಟ್ಟರೆ ಸಾಕಾಗಿತು, ನಾ ಹೆಂಗಾರು ಮಾಡಿ ತೀರಸ್ತೆ’ ಎನ್ನುತ್ತಿದ್ದ. ‘ಮಗಳ ಮದುವೆ ಕೊಟ್ಟದ್ದೇ ಹಾಗೆ ಅದೆ..’ ಎಂದು ಅಪ್ಪಯ್ಯ ಹೇಳಿದರೆ, ‘ಅದ್ ಹೌದ್ರ ಆದರೆ..’ ಎನ್ನುತ್ತ ನಿಲ್ಲುತ್ತಿದ್ದರು. ‘ಸರಿ ನಾಳೆ ಹತ್ತ ಗಂಟೆಗೆ ಹೊನ್ನಾವರ ವಿ ಆರ್ ಕಮ್ತಿರ ಅಂಗಡಿಗೆ ಬನ್ನಿ’ ಎನ್ನುತ್ತಿದ್ದ. ಅದು ಮುಗಿದ ಮೇಲೆ, ‘ಸಾಮಾನಂದೆ ತೊಂದ್ರೆ ಆಗದಿರ, ದಾಸ್ ಪೈರ ಅಂಗಡಿಗೆ ಬಗೀಲಿ ಹೇಳದರೆ ಆಯ್ತಿತು’ ಎನ್ನುತ್ತಿದ್ದರು. ಇದೆಲ್ಲ ರಾಶಿ ಹಳೆ ಕತೆ. ಅದೆಲ್ಲ ಮುಗಿದು ಅಲ್ಲಿ ಈಗ ಎಂತೆಂಥೆದೊ ಆಗಿದೆ. ಕಲಾವತಿಯದೂ ಹಾಗೇ ಆಗಬಹುದೆಂದು ಏನು ಹೇಳಬೇಕು ಗೊತ್ತಾಗದೆ ಸುಮ್ಮನಿದ್ದೆ. ಅಷ್ಟರಲ್ಲಿ ಅವಳೇ ಪರಿಹಾರ ಹೇಳಿದಳು. ‘ನಮ್ಮ ಯಾವುದೊ ಜಮೀನು ಮನೆ ಮಾರಿದ ದುಡ್ಡು ಫೋಸ್ಟಿನಲ್ಲಿದೆ. ಆದರೆ ಅವರು ಹಾಗೆ ತಗೆಯಲು ಬರುವುದಿಲ್ಲ ಅನ್ನುತ್ತಾರೆ’ ಎಂದಳು. ಆಗ ನನಗೆ ಧೈರ್ಯ ಬಂತು. ‘ಸರಿ ನಾ ಹೋಗಿ ವಿಚಾರಿಸ್ತೇನೆ’ ಎಂದೆ.

ಮಾರನೆದಿನ ಫೋಸ್ಟ್‌ ಆಫೀಸಿಗೆ ಹೋಗಿ ವಿಚಾರಿಸಿದೆ. ಅವರು ‘ಅದು ಫಿಕ್ಸ್ ಡಿಪಾಸಿಟ್ ಇಟ್ಟಿದ್ದು, ಈಗ ಕೊಡಲು ಬರುತ್ತದೆ, ಆದರೆ ಬಡ್ಡಿ ಲಾಸ್ ಆಗ್ತದೆ’ ಎಂದರು. ‘ಹಾಗಾದರೆ ತೊಂದರೆ ಏನಿಲ್ಲ ಎನ್ನುತ್ತ ‘ಹಾಗಿದ್ದರೆ ಅವಳ ಕರ್ಕಂಡ್ ಬರ‍್ತೇನೆ’ ಎಂದು ಸೀದ ಅವಳು ಕೆಲಸ ಮಾಡುವ ಲಾಜಿಂಗಿಗೆ ಬಂದೆ. ಮೆನೆಜರ್ ಹತ್ತಿರ ‘ಸ್ವಲ್ಪ ಕಲಾವತಿ ಕರೆಯಬೇಕಾಗಿತ್ತು’ ಎಂದೆ. ಅವನು ‘ಯಾಕೆ? ಏನು?’ ಕೇಳಿದ. ‘ಏನಿಲ್ಲ, ಅವಳು ನಮ್ಮನೆ ಕೆಲಸ ಮಾಡುವವಳು, ಕೆಲಸ ಇತ್ತು, ಸ್ವಲ್ಪ ಹೊತ್ತು ಕರೆದುಕೊಂಡು ಹೋಗ್ತೇನೆ’ ಎಂದೆ. ‘ಸರಿ’ ಅಂದ. ಕಲಾವತಿಯನ್ನು ಬೈಕಿನ ಮೇಲೆ ಕೂಡ್ರಿಸಿಕೊಂಡು ಫೋಸ್ಟ ಆಫೀಸಿಗೆ ಹೋಗಿ ದುಡ್ಡು ತೆಗೆಸಿ ಕೊಟ್ಟೆ. ನಂದೂ ಸ್ವಲ್ಪ ದುಡ್ಡು ಕೊಟ್ಟೆ. ನಾನು ಅವಳ ಕುರಿತು ತಪ್ಪಾಗಿ ಯೋಚಿಸಿದೆನೆಲ್ಲ ಎಂದನಿಸಿದರೂ ಒಂದ ನಮನಿ ಸಮಾಧಾನ ಆಯ್ತು.

ಇದೆಲ್ಲಾ ಆಗಿ ನಾಲ್ಕಾರು ವರ್ಷ ಆಗಿದೆ. ಅವಳು ಯಥಾಪ್ರಕಾರ ನಮ್ಮನೆ ಕೆಲಸಕ್ಕೆ ಬರುತ್ತಿದ್ದಳು. ಲಾಜಿಂಗ್‌ನಲ್ಲಿ ಪಗಾರ್ ಹೆಚ್ಚು ಮಾಡಿದರೆಂದು ಕಾಣುತ್ತದೆ, ಎಲ್ಲದಕ್ಕೂ ಕರಕರ ಮಾಡುವ ಪಕ್ಕದ ಮನೆ ಕೆಲಸ ಬಿಟ್ಟಿದ್ದಳು. ಅವಳು ಆ ಮನೆಯ ಕುರಿತು ಆಗಾಗ ನನ್ನ ಹೆಂಡತಿ ಹತ್ತಿರ ಹೇಳುತ್ತಿದ್ದಳು. ‘ಅವರಿಗೆ ಹಾಗೆ ಮಾಡಿದರೆ ಸರಿ ಅಲ್ಲ, ಹೀಗೆ ಮಾಡಿದರೆ ಸರಿ ಅಲ್ಲ, ತಿಂಗಳದಲ್ಲಿ ಎರಡ ದಿನ ಬರದಿದ್ದರೆ ಆ ಎರಡ ದಿನ ಪಗಾರ ಕಟ್ ಮಾಡಿ ಕೊಡುತ್ತಿದ್ದರಂತೆ. ನಮ್ಮನೆಯಲ್ಲಿ ಚಹ, ತಿಂಡಿ, ನಾವು ಮಾಡಿಕೊಂಡ ಪದಾರ್ಥ, ಹಾಗೇಯೆ ಅರ್ಜೆಂಟಿಗೆ ಸಾಲ ಎಲ್ಲ ಸಿಗುತ್ತಿತ್ತು. ಅವಳ ಮುದಿ ತಾಯಿಯೂ ಹೇಳಿದ್ದಾಳಂತೆ, ‘ಯಾರ ಮನೆ ಬಿಟ್ಟರೂ ನಮ್ಮನೆ ಮಾತ್ರ ಬಿಡಬೇಡ’ ಎಂದು. ಅವಳ ತಾಯಿ ಕೂಡ ಒಂದೆರಡು ಬಾರಿ ಪಾತ್ರೆ ತೊಳೆಯಲು ಬಂದಿದ್ದಳು. ಆದರೆ ಅವಳು ಮಾಡುವ ಕೆಲಸ ಹೆಂಡತಿಗೆ ಸರಿ ಬರಲಿಲ್ಲ, ‘ಅವಳು, ಮುಟ್ಟದ ಕೈಲೆ ಇದರ ಮುಟ್ಟತು, ಇದರ ಮುಟ್ಟಿದ ಕೈಲಿ ಅದರ ಮುಟ್ಟತು, ನಂಗೆ ಹೇಸ್ಕತ್ತು’ ಎಂದು….. ಇವಳಿಗೆ ಸುಮಾರಿಕೆ ಯಾರು ಮಾಡಿದರೂ ಪೂರ್ತಿ ಸರಿಯಾಗುವುದಿಲ್ಲ. ‘ಇಲ್ನೋಡು ಪಾತ್ರೆ ಸೋಪ್ ಪೌಡರ ಹಾಗೇ ಇದೆ, ಬಾಗಿಲ ಎಜ್ಜೆಲಿದ್ದ ಕಸ, ಕಿಡಕಿಗೆ ಇರುವ ಬಿಂಜಲು ತಗಿಲೇ ಇಲ್ಲ..’ ಹೀಗೆ ಹೇಳುತ್ತಾ ಬಟ್ಟೆ ತೊಳೆಯುವುದನ್ನು ಬಿಡಿಸಿದ್ದಳು. ಕಲಾವತಿ ಹುಷಾರಿದ್ದಳು, ಇವಳು ಏನು ಹೇಳಿದರೂ ಉತ್ತರ ಕೊಡುತ್ತಿರಲಿಲ್ಲ, ಹೀಗೆ ಕೆಲಸ ಮಾಡಿಸುವವರೆಲ್ಲ ಹೇಳಿದ್ದು ಕೇಳಿ ಅಭ್ಯಾಸವಾದಂತಿದ್ದಳು ಅಥವ ಅವಳ ಪರಿಸ್ಥಿತಿ ಅವಳನ್ನು ತಣ್ಣಗಾಗಿಸಿತ್ತು. ಒಂದೆರಡು ದಿನ ಸರಿ ಮಾಡಿದ ಹಾಗೆ ಮಾಡಿ ಮತ್ತೆ ಯಥಾಪ್ರಕಾರ ಇರುತ್ತಿದ್ದಳು. ಸುಮಾರು ಸಲ ನನ್ನಲ್ಲಿ ಹೇಳಿದ್ದಳು, ‘ಕಲಾವತಿ ಬಿಡಿಸಬುಡ್ತೇನೆ, ಎಷ್ಟ ಹೇಳಿದರೂ ಮತ್ತ ಹಾಗೆ ಮಾಡ್ತು’ ಎಂದು. ‘ಇವಳ ಬಿಟ್ಟು ಮತ್ತೊಬ್ಬರು ಇಟ್ಕಂಡರೆ ಅವರು ಮತ್ತೊಂದ ನಮನಿ ಇರ‍್ತೊ.. ನಮಗೆ ಮಾಡಿಕೊಳ್ಳಲು ಆಗದಿರುವುದರಿಂದ ಎಜ್ಜೆಷ್ಟ್‌ ಮಾಡ್ಕಳೊ’ ಎಂದರೆ, ‘ನೀವು ಅವಳ ಹೋತ್ಕಂಡ ಬತ್ರಿ’ ಎನ್ನುತ್ತಿದ್ದಳು. ನಾನು ಅನಿವಾರ್ಯವಾಗಿ ಸುಮ್ಮನಿರಬೇಕಾಗಿತ್ತು.

ಕೆಲಸದವರನ್ನು ಇಟ್ಟುಕೊಳ್ಳದಿದ್ದರೆ ಏನಾಗುತ್ತದೆ ಎನ್ನುವುದರ ಸ್ಪಷ್ಟ ಅರಿವು ಇದೆ. ಹೆಂಡತಿ ಮುಂಚೆ ಎದ್ದು ಅಡಿಗೆ ಮಾಡಿ ಪಾತ್ರೆ ತೊಳೆದು, ಬಟ್ಟೆ ಒಗೆದು, ನೆಲ ಗುಡಸಿ ಮಾಡಬಹುದು. ಆಗ ನಾನು ಇನ್ನೂ ಹೆಚ್ಚು ಇದರಲ್ಲಿ ಸಹಾಯ ಮಾಡಬೇಕಾಗುತ್ತದೆ. ಮಾಡಿದರೆ ಸರಿ ಆಗುವುದಿಲ್ಲ, ಮಾಡದಿದ್ದರೆ ಅವಳು ತ್ರಾಸ ತೆಗೆದುಕೊಳ್ಳುವುದನ್ನು ನೋಡಿ ಸುಮ್ಮನೆ ಕುಳಿತುಕೊಳ್ಳುವುದು ವಿಚಿತ್ರ ಹಿಂಸೆ. ಅವಳಿಗೂ ಬಗೇಲಿ ಕನ್‌ವಿನ್ಸ ಆಯಿತು ಎಂದು ಕಾಣುತ್ತದೆ. ಗೊಣಗುತ್ತಾ ಸುಮ್ಮನಾದಳು.

ಕಲಾವತಿ ನಾಲ್ಕಾರು ಮನೆ ಕೆಲಸ ಹಿಡಿದಿದ್ದಳು. ಎರಡನೆ ಮಗಳು ಕಾಲೇಜಿಗೆ ಹೋಗುತ್ತಿದ್ದಳು. ಮನೆಯೆಲ್ಲ ಅವರ ಮಟ್ಟದಲ್ಲಿ ಫಾಷ್ ಆಗಿದ್ದರು.
ಇದರ ನಡುವೆ ಇನ್ನೊಂದು ಘಟನೆ ನಡೆಯಿತು. ಅವಳೇ ಆ ಕೆಲಸ ಮಾಡಿದಳೊ ಅಥವ ಅವಳ ಬಯಕೆಯಂತೆ ಕಾಲವೇ ಹಾಗೆ ಮಾಡಿತೊ ಗೊತ್ತಿಲ್ಲ. ಹಿಂದೆಯೇ ಹೇಳಿದ್ದೆನಲ್ಲ, ಅವಳಿಗೆ ಮುದುಕರಾದ ತಾಯಿ ತಂದೆ ಇದ್ದರು ಎಂದು. ತಾಯಿ ಅಷ್ಟು ವರ್ಷವಾದರೂ ಗಟ್ಟಿಮುಟ್ಟಾಗಿದ್ದಳು.

ರೋಟರಿಯವರು ಮಾಡುವ ಪುಕ್ಕಟೆ ಕಣ್ಣ ಒಪರೇಷನ್ ಮಾಡಸ್ಕಂಡು, ಮನೆ ಕಟ್ಟುವವರ ಜತೆ ಹೆಲ್ಪರ್ ಆಗಿ ಕೆಲಸ ಮಾಡ್ತಿದ್ದಳು. ಒಮ್ಮೊಮ್ಮೆ, ನಾನು ಹೆಂಡತಿ ಬಸ್ಸಿಗೆ ಬಿಡಲು ಹೋಗುವಾಗ, ದಡದಡ ಹೋಗುತ್ತಿರುವುದು ಕಾಣ್ತಿತ್ತು. ಆದರೆ ತಂದೆಗೆ ಆರಾಮ ಇರಲಿಲ್ಲ. ಒಂದಿನ ಬೆಳಿಗ್ಗೆ, ಕಲಾವತಿ ಆ ಗೋಳನ್ನೆಲ್ಲ ಹೇಳಿಕೊಂಡಳು. ‘ಇವನ ಕಾಲ್ದಾಗ ನಮಗ ಬಾಳ ಕಷ್ಟ ಆಗೈತ್ರಿ. ರಾತ್ರಿ ಇಡೀ ಮಲಗುದಿಲ್ಲ, ಕೂಗ್ತಾನೆ ಎಲ್ಲದಕ್ಕೂ ಬಯ್ತಾನೆ. ಒಟ್ಟ ನಿದ್ದಿ ಮಾಡಾಕ ಕೊಡಾಂಗಿಲ್ರಿ. ನಾವ್ ಮುಂಜಾನೆ ಎದ್ದು ಕೆಲಸಕ್ ಹೋಗವ್ರು, ಹೀಂಗ್ ಮಾಡಿದರ ಹೇಂಗ್ರಿ…’ ಎನ್ನುತ್ತ ಪಿಸು ದನಿಯಲ್ಲಿ ಏನನ್ನೊ ಹೇಳಿದಳು. ಹೆಂಡತಿ, ನಂತರ ನನ್ನ ಹತ್ತಿರ, ‘ಅವಳಿಗೆ ಸ್ವಲ್ಪ ವಿಷ ತಂದಕೊಡವಡರಿ!’ ಎಂದಳು. ಇದರ ಹಿಂದಿನ ವಿವರ ಅಷ್ಟು ಸರಿ ಲಕ್ಷವಹಿಸಿ ಕೇಳದ ನಾನು, ಕುಶಾಲು ಮಾಡ್ತು ಎಂದು ತಿಳಿದು ‘ಅದಕೆಂತ ತಂದಕೊಟ್ಟರಾತಪ, ಪ್ರಭು ಡಾಕ್ಟರ ಹತ್ತಿರ ಬರಿಸ್ಕಂಡ ಬತ್ತೆ’ ಎಂದೆ. ‘ಅದು ಎಂತಕೆ ಗುತ್ತಿದ್ದಾ, ಅವಳ ಅಪ್ಪಂಗೆ ಕೊಡುಲೆ’ ಎಂದು ಸಣ್ಣ ದನಿಲಿ ಹೇಳಿದಳು. ಆಗ ನಾ ಕಂಗಾಲಾದೆ. ‘ಎಹೆ ಹಾಗಿದ್ದರೆ ನಾ ತರುವವನಲ್ಲ, ನನ್ನ ಕೈಲಿ ಆಗ್ತಿಲ್ಯಪ ಆ ಕೆಲಸ’ ಎಂದೆ. ಅಷ್ಟರಲ್ಲಿ ಕಲಾವತಿಯೇ ‘ನೀವು ಬರೀ ತಂದಕೊಟ್ಟರ ಸಾಕ್ರಿ..’ ಎಂದಳು. ‘ನಿ ಏನೇ ಹೇಳು, ಅದು ಸಾಧ್ಯವೇ ಇಲ್ಲ. ನಾ ಆ ಕೆಲಸ ಮಾಡುವದಿಲ್ಲ.’ ಎಂದೆ. ‘ತರೂದೂ ಬ್ಯಾಡ್ರಿ, ಡಾಕ್ಟರ ಹತರ‍್ತ ಚೀಟಿನಾದ್ರೂ ಬರೆಸ್ಕಂಡ ಬಂದು ಉಪಕಾರ ಮಾಡ್ರಿ’ ಎಂದಳು. ನಾ ಕಟ್ಟನಿಟ್ಟ ಆಗುವುದಿಲ್ಲ ಎಂದು ಹೇಳಿದೆ.

ಯೋಚನೆ ಮಾಡಿದ ಹಾಗೆ ನನಗೆ ದಿಗಿಲಾಗಿತ್ತು. ಒಂದು ಬೆಕ್ಕಿನ ಮರಿ ದೂರ ಎಲ್ಲಾದರೂ ಬಿಟ್ಟು ಬಂದರೂ ಒಂದ ನಮನಿ ಆಗುತ್ತದೆ. ಮನಷ್ಯರನ್ನ ಅದರಲ್ಲೂ ತಂದೆಯನ್ನು ಕೊಲ್ಲುವ ಮನಸು ಹೇಗೆ ಬರುತ್ತದೆ. ಅದನ್ನು ದಿನಾ ಪೇಪರಿನಲ್ಲಿ ಟೀವಿಲಿ ನೋಡುತ್ತಿದ್ದರೂ, ಅದು ನಮ್ಮ ಹತ್ತಿರ ಬಂದು ಬಾಗಿಲು ಬಡಿದಾಗ ಶೋಕ್ ಆಯ್ತ.

ಕೊನೆಗೆ, ಒಂದು ನಾಲ್ಕ ದಿನ ಬಿಟ್ಟು ರಾತ್ರಿ ಫೋನ್ ಮಾಡಿದಳು, ‘ನಾಳಿಯಿಂದ ಒಂದ್ ವಾರ ಬರಾಂಗಿಲ್ರಿ, ಅಮ್ಮ ಅಪ್ಪ ಹೋಗಬಿಟ್ಟಾನ’ ಎಂದು. ಶಾಸ್ತ್ರ ಮಡಿಯವಳಾದ ಹೆಂಡತಿ ‘ಒಂದು ವಾರ ಅಲ್ಲ, ಹದಿನೈದು ದಿನ ಬರುವುದು ಬೇಡ’ ಎಂದಳು. ಕಲಾವತಿ ಬೇರೆ ಯಾರ ಹತ್ತಿರವಾದರೂ ವಿಷ ತರಿಸಿಕೊಂಡು ಹಾಕಿದಳೆ ಅಥವ ತಾನಾಗಿಯೇ ಅವನು ಸತ್ತನೆ ಎನ್ನುವುದನ್ನು ಕೇಳಲು ಹೋಗಲಿಲ್ಲ.

ಮೊನ್ನೆ ಮೊನ್ನೆ ನಡೆದನ್ನು ಹೇಳಿ ಮುಗಿಸುತ್ತೇನೆ.

ನಮ್ಮ ಮನೆ ಕಟ್ಟಿಸಿ ಸುಮಾರು ವರ್ಷವಾಯಿತು. ಕಟ್ಟಿದಾಗ ಮಾಡಿದ ಪೇಂಟಿಂಗು. ಅದರ ನಂತರ ಮತ್ತೆ ಮಾಡಿಸಿರಲಿಲ್ಲ. ಅದು ಎಲ್ಲಾ ಹಾಳಾಗಿ ಹೋಗಿತ್ತು ಮತ್ತು ಮನೆ ಸರಿ ಇರಬೇಕು ಎಂದಾದರೆ, ಆಗಾಗ ಪೇಂಟ್ ಮಾಡಿಸುತ್ತಿರಬೇಕು ಎಂದು ಕೆಲವರು ಹಗೂರ ಹೆದರಿಕೆ ಹುಟ್ಟಿಸಿದ್ದರು. ನಾವು ಯಾವುಯಾವುದೊ ಕಾರಣಕ್ಕೆ ಎರಡು ಮೂರು ವರ್ಷದಿಂದ ಮುಂದೂಡುತ್ತ ಬಂದಿದ್ದೆವು. ಈ ಸಲ ಹೆಂಡತಿಗೆ ರಜೆಯಲ್ಲಿ ಮನೆಯಲ್ಲಿ ಇರಲು ಆಗಿದ್ದರಿಂದ, ಸರಿ ಮಾಡಿಸುವಾ ಎಂದು ಶುರು ಹಚ್ಕಂಡೆವು. ಎಂಟತ್ತ ದಿನ ನನಗೆ ತಲೆ ಕೆಟ್ಟಾಂಗೆ ಆಗಹೋಗಿತ್ತು. ಎಲ್ಲಿ ನೋಡಿದರೂ ಹೊಲಸು ರಾಡಿ. ಎಲ್ಲೆಲ್ಲೋ ಯಾವಾಗೊ ತಂದ ಹೊತಾಕಿದ ಸಾಮಾನೆಲ್ಲ ಪ್ರತ್ಯಕ್ಷವಾದವು. ಹೆಂಡತಿ ಅದನ್ನೆಲ್ಲ ಭಕ್ತಿಯಿಂದ ಮಾಡುತ್ತಿದ್ದಳು. ‘ಭಕ್ತಿಯಿಂದ’ ಎಂದು ಯಾಕೆ ಹೇಳಿದೆನೆಂದರೆ, ಅವಳು ಅದನ್ನು ಎಂಜೊಯ್ ಮಾಡಿದಂತಿತ್ತು. ಒಂದೊಂದೆ ಸಾಮಾನು ಹೊರ ತೆಗೆದು ‘ಇದೆಂತಕೆ ಬತ್ರಿ, ಎದನ್ನು ಎಲ್ಲಿ ಇಡುದ್ರಿ’ ಎಂದು ವಿವರವಾಗಿ ಚರ್ಚಿಸುತ್ತಿದ್ದಳು. ಪೇಂಟಿನವರು ನನ್ನ ರೂಮನ್ನು ಪ್ರವೇಶಿಸಿದಾಗ, ಆ ಪುಸ್ತಕ ಹಿಡಿದುಕೊಂಡು, ‘ಇದು ಬೇಕಾ, ಇದರಲ್ಲಿ ಎಂತ ಇದ್ದು’ ಎಂದೆಲ್ಲ ಕೇಳತೊಡಗಿದಳು. ನನಗೆ ಮೊದಲೇ ಈ ರಗಳೆ ಮುಗಿದರೆ ಸಾಕಾಗಿತ್ತು. ಇವಳು ಹೀಗೆ! ಇದೊಂದು ಮುಗಿದ ಮೇಲೆ ನಾನು ನನ್ನ ಲೋಕದಲ್ಲಿ ಇರಬಹುದು ಎಂದುಕೊಂಡರೆ ಈ ಸುಟ್ಟ ಮನೆ ಕೆಲಸ ಯಾವಾಗಲೂ ಮುಗಿಯುವ ಆಟದ್ದೇ ಅಲ್ಲ, ಒಂದಾದ ಮೇಲೆ ಒಂದು.

ಅವರು, ‘ಜವಳಿ ಒಂದ್ ತಗಿಸ್ ಕೊಟ್ಟರೆ ಸಾಕಾಗಿತು, ನಾ ಹೆಂಗಾರು ಮಾಡಿ ತೀರಸ್ತೆ’ ಎನ್ನುತ್ತಿದ್ದ. ‘ಮಗಳ ಮದುವೆ ಕೊಟ್ಟದ್ದೇ ಹಾಗೆ ಅದೆ..’ ಎಂದು ಅಪ್ಪಯ್ಯ ಹೇಳಿದರೆ, ‘ಅದ್ ಹೌದ್ರ ಆದರೆ..’ ಎನ್ನುತ್ತ ನಿಲ್ಲುತ್ತಿದ್ದರು. ‘ಸರಿ ನಾಳೆ ಹತ್ತ ಗಂಟೆಗೆ ಹೊನ್ನಾವರ ವಿ ಆರ್ ಕಮ್ತಿರ ಅಂಗಡಿಗೆ ಬನ್ನಿ’ ಎನ್ನುತ್ತಿದ್ದ. ಅದು ಮುಗಿದ ಮೇಲೆ, ‘ಸಾಮಾನಂದೆ ತೊಂದ್ರೆ ಆಗದಿರ, ದಾಸ್ ಪೈರ ಅಂಗಡಿಗೆ ಬಗೀಲಿ ಹೇಳದರೆ ಆಯ್ತಿತು’ ಎನ್ನುತ್ತಿದ್ದರು. ಇದೆಲ್ಲ ರಾಶಿ ಹಳೆ ಕತೆ.

ನಿಧಾನ ಯೋಚಿಸಿ ನೋಡಿದರೆ ಆ ಸಾಮಾನು ಸಂಗ್ರಹದ ಹಿಂದೆ ಪುಟ್ಟ ಪುಟ್ಟ ಕತೆಯಿರುವುದು ನನ್ನ ವ್ಯಗ್ರ ಮನಸ್ಸು ಗಮನಿಸಲಿಲ್ಲ.

ಅಂತು ಮುಗಿಯಿತು.

ಪೇಂಟಿಂಗ್ ಮುಗಿಯುತ್ತಿದ್ದಂತೆ ದೀಪಾವಳಿ ಬಂದಿತ್ತು. ‘ಈ ಫ್ರಿಜ್ಜು ತಕಂಡು ರಾಶಿ ವರ್ಷಾತು, ಜೊತೆಗೆ ಸೈಜು ಸಣ್ಣ, ದೊಡ್ಡದು ತಕಳ್ಳವು’ ಎಂಬ ಅನೇಕ ದಿನಗಳಿಂದ ಹೊಗೆಯಾಡುತ್ತಿದ್ದ ಬೇಡಿಕೆ ಮೇಲೆದ್ದು ಬಂತು. ಆ ಫ್ರಿಜ್ಜು, ನಾವಿಲ್ಲಿಗೆ ವರ್ಗವಾಗಿ ಬಂದಾಗ ತೆಗೆದುಕೊಂಡಿದ್ದು. ಸುಮಾರು ಹತ್ತು ವರ್ಷದ ಮೇಲಾಗಿರಬಹುದು. ಆದರೆ ಎಂಥ ಹಾಳಾಗಿರಲಿಲ್ಲ. ಒಂದು ಸಲ ಒಳಗಿನ ಬಲ್ಬು ಹೋಗಿತ್ತು, ಹಾಕ್ಸಿದ್ದೊ ಅಷ್ಟೇಯಾ. ಸರಿ ದೀಪಾವಳಿ ಆಫರು ಇರುವದರಿಂದ ಎಕ್ಸಚೇಂಜ್ ಮಾಡಿದರಾಯಿತು ಎಂದು ನಿರ್ಧರಿಸಿದೆವು. ಅದು ಹೇಗೋ ಕಲಾವತಿಯ ಕಿವಿಗೆ ಬಿದ್ದಿತ್ತು. ‘ಹಳೆಯದನ್ನು ನಂಗೆ ಕೊಡರಾ ಅಮ್ಮ ನಂಗೇ ಕೊಡರಾ’ ಎನ್ನುತ್ತಿದ್ದಳು. ಅವಳ ಮನೆಯಲ್ಲಿ ಎರಡನೆ ಮಗಳು ಡಿಗ್ರಿ ಮುಗಿಸಿ ಎಂತದೊ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದಳು. ಹಾಗೆ ಸುಮಾರು ಆದಾಯ ಇತ್ತು. ಆದರೆ ಈ ಆಧುನಿಕ ಬಯಕೆಯ ಮಹಾಪುರಕ್ಕೆ ಯಾರಾದರೂ ತತ್ತರಿಸುದೇ. ಹಾಗಂತ ನಮಗೇನು ಶ್ರೀಮಂತಿಕೆ ಇಲ್ಲದಿದ್ದರೂ ಕಡಿಮೆಯೇನು ಆಗಿಲ್ಲ.

ಫ್ರಿಜ್ಜ್ ಖರೀದಿ ಮಾಡುವ ದಿನ ಬಂತು. ಕಲಾವತಿ ಗೊಣಗೊಣ ಮಾಡತೊಡಗಿದಳು. ನಾ ಆಗಲೇ ಅಂಗಡಿಗೆ ಹೋಗಿ ಕೇಳಿಕೊಂಡು ಬಂದಿದ್ದೆ. ಇದನ್ನು ಎಕ್ಸಚೇಂಜ್ ಮಾಡಿದರೆ ಹೊಸಾ ಫ್ರಿಜ್ಜಿಗೆ ನಾಲ್ಕು ಸಾವಿರ ಕಡಿಮೆ ಮಾಡ್ತೇವೆ ಎಂದಿದ್ದರು. ನಾಲ್ಕ ಸಾವಿರಗಟ್ಟಲೆ ಹಡೆಯುವುದನ್ನು ಕಲಾವತಿಗೆ ಕೊಡಲು ಮನಸು ಬರಲಿಲ್ಲ. ಅವಳು ಆಗಲೇ ಒಂದು ವರ್ಷದ ಹಿಂದೆ ತೆಗೆದುಕೊಂಡ ಸಾಲವನ್ನು ವಾಪಸ್ ಮಾಡಿಲ್ಲ. ಈ ಪೇಂಟಿಂಗ್ ಶುರುವಾಗುವಾಗ, ಆ ದುಡ್ಡನ್ನು ಕೊಡಲು ಹೇಳು ಎಂದಿದ್ದೆ. ಅದಕೆ ಅವಳು, ‘ನೀವು ಕೊಡುವ ಪಗಾರಿನಲ್ಲಿ ಮುರ‍್ಕಳಿ’ ಎಂದಿದ್ದಳು. ಈಗ ಇದನ್ನು ಕೊಟ್ಟರೂ ಆಗುವ ಕತೆ ಇದೆಯಾ ಅನಿಸಿ, ‘ಆಗುವುದಿಲ್ಲ ಹೇಳು’ ಎಂದೆ. ಇದರಿಂದ ಹೆಂಡತಿಗೆ ಪುಟ್ಟ ಖುಷಿಯೂ ಆಗಬಹುದು ಎಂದುಕೊಂಡಿದ್ದೆ. ಯಾಕೆಂದರೆ, ಹಿಂದೆಲ್ಲ ಕಲಾವತಿ ದುಡ್ಡ ಗಿಡ್ಡನ್ನೆಲ್ಲ ಇವಳ ಮೂಲಕ ಕೇಳಿದಾಗ ‘ಅಡ್ಡಿಲ್ಲೆ ಕೊಡು’ ಹೇಳುತ್ತಿದ್ದೆ. ಅದಕೆ ಇವಳು, ಕಲಾವತಿ ಸರಿಯಾಗಿ ಕೆಲಸ ಮಾಡದಿದ್ದಾಗ, ನಾನೇ ಮುಂದಾಗಿ ದುಡ್ಡು ಕೊಟ್ಟಿದ್ದೆ ಎನ್ನುವಂತೆ, ‘.. ನೋಡಿ ಅವಳಿಗೆ ನೆನಗುಣ ಇಲ್ಲೆ, ಇನ್ನು ಮುಂದೆ ಒಂದ ಪೈಸೆನೂ ಕೊಡುಲಿಲ್ಲೆʼ ಎಂದಿದ್ದಳು. ಆದರೆ ಫ್ರಿಜ್ಜಿನ ವಿಷಯದಲ್ಲಿ ಮಾತ್ರ ಹಾಗಾಗಲಿಲ್ಲ.

‘ಕೊಟ್ಟ ಬುಡುವಾ, ಪಾಪ ಅವಳ ಹತ್ತಿ ತಕಂಬ್ಲ ಆಗ್ತಲ್ಲ್ತೆ. ಆಯಿನೂ ಹಾಗೇ ಹೇಳೀದು.’ ಎಂದು ಹೇಳಿದಳು. ಅತ್ತೆಯೂ ಇಲ್ಲಿ ಬಂದಾಗ ಅವಳನ್ನು ನೋಡಿದ್ದಳು. ಹೀಗಾಗಿ ಈ ವಿಷಯ ಫೋನಿನ ಮೂಲಕ ಚರ್ಚೆಯಾಗಿತ್ತೆಂದು ಕಾಣುತ್ತದೆ. ಆದರೆ ಬಿ.ಕಾಂ. ಓದುತ್ತಿರುವ ನನ್ನ ಮಗಳಿಗೆ ಯಾಕೊ ಅಪೂಟ ಇಷ್ಟವಿರಲಿಲ್ಲ. ಬಹುಶಃ ಅಮ್ಮ ಆಗಾಗ ಕಲಾವತಿಯ ಬಗ್ಗೆ ಹೇಳಿದ್ದನ್ನು ಕೇಳಿ ಕೇಳಿ ಅವಳ ಬಗ್ಗೆ ರೇಜಿಗೆ ಬಂದಿದೆ ಎಂದು ಕಾಣುತ್ತದೆ. ನಾನು, ಮುನ್ನೆಚ್ಚರಿಕಾ ಕ್ರಮವಾಗಿ ಒಮ್ಮೆ ಬೇಡವಾಗಿತ್ತು ಎಂದು ತಟಸ್ತನಾಗಿದ್ದೆ! ಕೊಡಬಾರದು, ಕೊಡಬಹುದು ಎರಡರಲ್ಲಿ ಯಾವುದೇ ತಪ್ಪಾದರೂ ನನ್ನ ಮೇಲೆ ಬರಬಾರದು ಎಂದು. ಜೊತೆಗೆ, ನಾನು ಯಾರನ್ನಾದರೂ ಒಮ್ಮೆ ಹಚ್ಚಿಕೊಂಡರೆ ಸಂಬಂಧ ಇಲ್ಲದಿರುವ ಹಾಗೆ ಇರಲು ಆಗುವುದಿಲ್ಲ. ಹೀಗಾಗಿ ನಿರ್ಲಿಪ್ತವಾಗಿದ್ದೆ. ಹೊಸದನ್ನು ತರಬೇಕು ಎಂದುಕೊಂಡ ಬೆಳಿಗ್ಗೆ ಕಲಾವತಿ ಹಠ ಹಿಡಿದಳು. ‘ನಂಗೇ ಕೊಡರಿ. ಇಷ್ಟ ವರ್ಷ ನಿಮ್ಮನಿ ಕೆಲ್ಸ ಮಾಡಿನಿ. ಹಬ್ಬಕ್ಕೆ ಹೇಳಿ ಗಿಪ್ಟ ಕೊಡರಿ..’ ನಾನು, ಇಲ್ಲ ನಮಗೆ ಈ ಪೇಂಟಿಂಗ್ ಗೇಂಟಿಂಗ್ ಮಾಡಿಸಿ ಸಿಕ್ಕಾಪಟ್ಟೆ ರೊಕ್ಕ ಖರ್ಚಾಗಿದೆ, ನಾಲ್ಕು ಸಾವಿರ ಉಳಿದರೆ ಅಷ್ಟೇ ಆಗ್ತದೆ’ ಎಂದೆ. ‘ನಿಮಗೆ ಎರಡ ಮೂರು ಸಾವಿರವೆಲ್ಲ ಏನ್ರಿ. ದಯತೋರಸ್ರಿ, ನಿಮಗೆ ಎಲ್ಲಾದ್ರೂ ದೇವರು ಕೊಟ್ಟೇ ಕೊಡ್ತಾನ’ ಎಂದಳು. ಅವಳ ಮಾತು ಸ್ವಲ್ಪ ನಾಟಕೀಯ ಅನಿಸಿದರೂ, ‘ನೋಡ್ವೊ, ಅಂಗಡಿಯವರು ಕಡಿಮೆ ದುಡ್ಡಿಗೆ ಕೇಳಿದರೆ ಇವಳಿಗೇ ಕೊಟ್ಟರಾಯಿತು’ ಎಂದು ಹೆಂಡತಿಗೆ ಹೇಳಿದೆ.

ನಾಲ್ಕು ಸಾವಿರ ಡಿಸ್ಕೌಂಟ್ ಕೊಡ್ತೆ ಹೇಳಿದ ಅಂಗಡಿಗೆ ಹೋದರೆ, ಅಲ್ಲಿ ಇವರು ಹೇಳುವ ಕಂಪನಿಯ ಫ್ರಿಜ್ಜಿನ ಕಲರ್ ಸೂಟ್ ಆಗಲಿಲ್ಲ. ಕಲರ್ ಅಡ್ಡಿಲ್ಯಾಗದ್ದು ಇವರು ಹೇಳುವ ಕಂಪನಿದಲ್ಲ. ‘ಹಥ್ ಹಾಳಾಗಿ ಹೋಗಲಿ, ಬೇರೆ ಅಂಗಡಿಗೆ ಹೋಪೊ ನಡೆ’ ಎಂದೆ. ಅಲ್ಲಿ ಅದು ಸಿಕ್ಕಿತು. ಆದರೆ ಅವರು, ನಮದು ಎಕ್ಸಚೇಂಜ್ ಇಲ್ಲ, ಹಳೆದು ನಾವು ತೆಗೆದುಕೊಳ್ಳುವುದಿಲ್ಲ, ಫ್ರಿಜ್ ತಂದಕೊಡುವ ಗಾಡಿಯ ತಗೆದುಕೊಳ್ಳುತ್ತಾನೆ, ಅವನ ಹತ್ತಿರ ಮಾತಾಡಿಕೊಳ್ಳಿ’ ಎಂದರು.

ಅಂತು ಮಧ್ಯಾಹ್ನ ತಂದ ಅವನು.

‘ನಮ್ಮ ಫ್ರಿಜ್ ಎಷ್ಟಕ್ಕೆ ತಕೊಳ್ಳತೀರಿ’ ಎಂದು ಕೇಳಿದೆ. ‘ಒಂದುವರೆಗೆ’ ಎಂದ. ‘ಹಾಗಿದ್ದರೆ ಕಲಾವತಿಗೇ ಕೊಟ್ರಾತಲಿ’ ಎಂದೆ ಹೆಂಡತಿ ಹತ್ತಿರ. ಅವಳೂ ‘ಹಾಗೇ ಮಾಡ್ವೊ’ ಎಂದಳು. ಅಷ್ಟೊತ್ತಿಗೆ ಮಗಳು ಬಂದು, ‘ಬೇಡ, ಅವಳಿಗೆ ಕೊಡುವುದು ಬೇಡ. ಅವಳ ಕೆಲಸ ಬಿಟ್ರೆ ನಾ ಮಾಡ್ಕೊಡ್ತೆ..’ ಎಂದು ಅಬ್ಬರಿಸಿದಳು. ಅವನ ಎದುರು ಎಂಥ ವಾಗ್ವಾದ ಎಂದು, ‘ತಕಂಡು ಹೋಗಿ ನೀವು’ ಎಂದೆ. ಅವನು ಅದೇ ಗಾಡಿ ಮೇಲೆ ಹಾಯ್ಕಂಡು ತಕಂಡ ಹೋದ.

ಪ್ರಕರಣ ಇಲ್ಲಿಗೇ ಮುಗಿಯಲಿಲ್ಲ.

ಸಂಜೆಯಾಗುತ್ತಿದ್ದಂತೆ, ಹೆಂಡತಿಗೆ ಅದು ಕಾಡತೊಡಗಿತು. ಸಾವಿರಾರು ರೂಪಾಯಿಯ ಮುಖ ನೋಡಿ ಅವಳ ಬಯಕೆಯನ್ನು ಇಲ್ಲ ಮಾಡದೆವಲ್ಲ, ನಾವೇನು ಅಷ್ಟು ದುಡ್ಡಿನಿಂದ ಹಂಚು ಹಾಕುವುದು ಅಷ್ಟರಲ್ಲೆ ಇದೆ ಎಂದೆಲ್ಲ ಗೊಣಗೊಣ ಮಾಡತ್ತಿದ್ದಳು. ನನಗೂ ಹಾಗೇ ಅನಿಸುತ್ತಿತ್ತು. ಆದರೆ ಅದು ಮುಗಿದ ಕತೆ ಎಂದು ನನಗೆ ನಾನೇ ಹೇಳಿಕೊಂಡು ಮರೆಯಲು ಯತ್ನಿಸುತ್ತಿದ್ದೆ. ಮಗಳು, ‘ನಾನು ನನ್ನ ಅಭಿಪ್ರಾಯ ಹೇಳಿದೆ. ಹಾಗೇ ಮಾಡಬೇಕು ಎಂದಲ್ಲ’ ಎಂದು ದುಗುಡ ಹೆಚ್ಚಿಸಿದಳು. ನನಗೆ, ಅವಳು, ತಂದೆಗೆ ವಿಷ ಕೊಡಬೇಕು ಎಂದು ವಿಚಾರ ಮಾಡಿದ್ದಕ್ಕೂ ನಾವು ವಿಚಾರ ಮಾಡುವ ಕ್ರಮಕ್ಕೂ ರಾಶಿ ಫರಕ್ ಇದ್ದಾಂಗೆ ಅನಿಸಲಿಲ್ಲ. ಆದರೆ ಗಟ್ಟಿ ಮನಸ ಮಾಡಿಕೊಂಡು ತಟಸ್ತನಾಗಿದ್ದೆ. ಆದರೆ ಮನೆಯಲ್ಲಿ ಹೊಸ ಫ್ರಿಜ್ ತಂದ ಖುಷಿಯೆಲ್ಲ ಮಾಯವಾಗಿ ಒಂದು ನಮನಿ ವಿಷಾದ ಆವರಿಸಿತ್ತು. ‘ಸರಿ ಆ ಗಾಡಿಯವನಿಗೆ ಫೊನ್ ಮಾಡಿ, ಹಿಂದೆ ತಂದು ಕೊಡು ಹೇಳೋಣ, ಅವನ ನಂಬರ್ ತಕೊ’ ಎಂದೆ. ಅವಳು ಕಲೆಕ್ಟ್ ಮಾಡಿದಳು. ಫೋನ್ ಮಾಡಿದೆ. ಅವನು ‘ನಾ ಕೊಟ್ಟ ದುಡ್ಡು ಕೊಟ್ಟು ಮೇಲಿಂದ ಐನೂರು ಹೆಚ್ಚು ಕೊಡಬೇಕಾಗ್ತದೆ’ ಎಂದ. ‘ಅಡ್ಡಿಲ್ಲ, ತಕಂಡ ಬಾ’ ಎಂದೆ. ರಾತ್ರೆ ಮಲಗುವಾಗ ಇವಳು ‘ಬರೀತ್ನೆ ಐನೂರ್ ಹೋತಲ್ರಿ’ ಎಂದಳು. ‘ಹೋಗ್ಲಿ ಬಿಡು’ ಎಂದೆ.

ಆಗ ಸಣ್ಣ ತಂಪು ಗಾಳಿ ಬೀಸಿದ ಹಾಗಾಯ್ತು.

ರಾಜು ಹೆಗಡೆ: ಈ ಕತೆ ತಾನೇ ತಾನಾಗಿ ಎನ್ನುತ್ತಾರಲ್ಲ, ಹಾಗೆ ಬರೆಸಿಕೊಂಡಿತು. ಸುಮ್ಮನೆ ಬರೆಯುತ್ತ ಹೋಗಿದ್ದು, ಕತೆಯಾಗಿದ್ದು. ಜೊತೆಗೆ ನಾನು ಇಷ್ಟು ಹತ್ತಿರದ ವರ್ತಮಾನವನ್ನು ಕತೆಯಾಗಿಸಿದ್ದು ಕಡಿಮೆ. ಎಂದೋ, ಯಾವಾಗಲೋ ಕೇಳಿದ ನಡೆದ ಸಂಗತಿಗಳಿಂದ ಬಂದಿದ್ದವು. ಫ್ರಿಜ್ಜಿಗೆ ಅಂಥ ಮಹತ್ವಾಕಾಂಕ್ಷೆಯೇನೂ ಇರಲಿಲ್ಲ. ಮಧ್ಯಮವರ್ಗ ಎನ್ನುತ್ತಾರಲ್ಲ ಅವರ ಸಣ್ಣತನ ಆಸೆಗಳನ್ನು ಹೇಳುತ್ತಲೇ ಮನುಷ್ಯನ ವಾಸ್ತವವನ್ನು ಕಾಣಿಸುವ ಪ್ರಯತ್ನ ಇಲ್ಲಿದೆ. ಬಹುಶಃ ಇದಕ್ಕಾಗಿ ಈ ಕತೆ ನನಗೆ ಇಷ್ಟವಾಗಿದೆ.