Advertisement
ಇನ್ನು ಮೇಲೆ ನಾವು ಮೂವರೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಇನ್ನು ಮೇಲೆ ನಾವು ಮೂವರೇ: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಕೋಮಲ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೆಲ್ವಿ ತನ್ನ ಅತ್ತೆ ಕನಕಳಿಗೆ ಎಲ್ಲವನ್ನೂ ವಿವರಿಸಿ ಹೇಳಿದಳು. ಕನಕ ತನ್ನ ತವರೂರಿಗೆ ತನ್ನ ಮೊಮ್ಮಗಳನ್ನು ಕೊಡುತ್ತಿರುವುದಕ್ಕೆ ಸಂತೋಷವಾಗಿ ಹುಡುಗ ಕೂಡ ಒಳ್ಳೆಯವನು ಎಂದು ಹೇಳಿದಳು. ಅದೇ ಮಾತುಗಳನ್ನು ಮತ್ತೆ ಸೆಲ್ವಿ, ಮಣಿ ಜೊತೆಗೆ ಕನಕಳ ಮುಂದೆ ಇನ್ನೊಂದೆರಡು ಸಲ ಮಾತನಾಡಿದ ಮೇಲೆ ಅಂತಿಮವಾಗಿ ಕೋಮಲಳನ್ನು ಆರ್ಮುಗಮ್ ಕರೆದುಕೊಂಡುಬಂದಿದ್ದ ಯುವಕ ಸಂತೋಷ್‌ಗೆ ಕೊಟ್ಟು ಮದುವೆ ಮಾಡುವುದಾಗಿ ತೀರ್ಮಾನ ತೆಗೆದುಕೊಂಡರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ

ರಾತ್ರಿ ಸೆಲ್ವಿ ಮತ್ತು ಮಣಿ ಊಟ ಆದ ಮೇಲೆ ಮನೆ ಹೊರಗೆ ಕಲ್ಲಿನ ಮೇಲೆ ಕುಳಿತುಕೊಂಡಿದ್ದರು. ಕೋಮಲ ಮನೆ ಒಳಗೆ ಮಲಗಿಕೊಂಡಿದ್ದರೂ ನಿದ್ದೆ ಮಾಡಿರಲಿಲ್ಲ. ಸೆಲ್ವಿ ಬಾಗಿಲಿಗೆ ಚಿಲಕ ಹಾಕಿಕೊಂಡು ಮಣಿಯನ್ನು ಸ್ವಲ್ಪ ಬನ್ನಿ ಅಲ್ಲಿಯವರೆಗೂ ಹೋಗಿ ಬರೋಣ ಎಂದು ಕರೆದಳು. ಇಷ್ಟೊತ್ತಿನಲ್ಲಿ ಸೆಲ್ವಿ ಹಾಗೆ ಕರೆಯುವುದು ಅಪರೂಪ. ಮಣಿ ಏನೂ ಮಾತನಾಡದೆ ಅವಳ ಜೊತೆಗೆ ನಡೆದ. ಸೆಲ್ವಿ, “ಬೆಳಿಗ್ಗೆ ಕೋಮಲ ಹೇಳಿದ ಮಾತು ಕೇಳಿ ನನಗೆ ತುಂಬಾ ಆಶ್ಚರ್ಯ ಆಯಿತು” ಎಂದಳು. ಮಣಿ, “ಏನದು?” ಎಂದ. ಸೆಲ್ವಿ, “ಅಮ್ಮ, ನೀವು ನನ್ನನ್ನು ಯಾರಿಗಾದರೂ ಮದುವೆ ಮಾಡಿಕೊಡಿ. ಆದರೆ ಅಂಡರ್‌ಗ್ರೌಂಡ್‌ನಲ್ಲಿ ಕೆಲಸ ಮಾಡುವವರಿಗೆ ಮಾತ್ರ ಕೊಟ್ಟು ಮದುವೆ ಮಾಡಬೇಡಿ” ಎಂದಳು. ಮಣಿ ಆಶ್ಚರ್ಯದಿಂದ “ಹೌದಾ! ಯಾವ ಮಾತಿಗೆ ಹಾಗೆಂದಳು?” ಕೇಳಿದ. “ಬೆಳಿಗ್ಗೆ ಮನೆಯಲ್ಲಿ ಅಕ್ಕಿ ಕ್ಲೀನ್ ಮಾಡ್ತಾ ಇದ್ದಾಗ ಸುಮ್ಮನೆ ಮಾತಿಗೆ ಆ ವೆಲ್ಲೂರು ಕಡೆ ಹುಡುಗನ್ನ ಮದುವೆ ಮಾಡಿಕೊಳ್ತಿಯಾ ಕೋಮಲ? ಅಂತ ಕೇಳಿದೆ. ಅದಕ್ಕೆ ಹಾಗಂದುಬಿಟ್ಟಳು. ನನಗೆ ಒಂದು ತರಹ ಆಗೋಯಿತು. ಅನಂತರ ನನ್ನಿಂದ ಅವಳ ಜೊತೆಗೆ ಮಾತನಾಡಲು ಆಗಲಿಲ್ಲ” ಎಂದಳು. ಈಗ ಮಣಿಗೂ ಕೂಡ ಹಾಗೇ ಆಗಿತ್ತು.

ಶಾಕ್ ಹೊಡೆಸಿಕೊಂಡ ಮಣಿ, “ಈ ಹುಡುಗೀನ ಚೆನ್ನಾಗಿ ಓದಿಸೋಣ ಅಂದರೆ ಎಸ್‌ಎಸ್‌ಎಲ್‌ಯಲ್ಲೇ ಫೇಲ್ ಆಗಿದ್ದಾಳೆ. ಅವಳಿಗೆ ಇನ್ನೂ 18 ವರ್ಷಾನೂ ತುಂಬಿಲ್ಲ. ಅವನು ನಮ್ಮ ಮಾವ ಮಾತನಾಡಿದರೆ ಅದ್ಯಾರೋ ಹುಡುಗನ್ನ ಕರ‍್ಕೊಂಡು ಬಂದು ಮನೆಯಲ್ಲಿ ಕುಳಿತುಕೊಳ್ತಾನೆ. ಏನು ಮಾಡುವುದು?” ಮಣಿ, ಹೇಳಿದ. ಸೆಲ್ವಿ, “ಅದು ಏನಾದರೂ ಆಗ್ಲಿ. ಮೊದಲು ಅವಳಿಗೆ 18 ವರ್ಷ ಆಗಲಿ ಬಿಡು. ಆಮೇಲೆ ನೋಡೋಣ” ಎಂದಳು. ಮಣಿ, “ಅದೇನು ಸೆಲ್ವಿ ಇನ್ನೊಂದು ಆರು ತಿಂಗಳು ಮುಗಿದರೆ ಆಗೋಗುತ್ತೆ. ನಮ್ಮಷ್ಟಿಗೆ ನಾವೇ ಹೋಗಿ ನಮ್ಮ ಹುಡುಗೀನ ಕೊಡ್ತೀವಿ ಮದುವೆ ಮಾಡಿಕೊಳ್ಳಿ ಅಂತ ಯಾರಿಗೆ ಹೇಳುವುದಕ್ಕಾಗುತ್ತೆ? ಇಲ್ಲಿ ನಮ್ಮ ಕಾಲೋನಿಯಲ್ಲಿ ಯಾರೂ ಇಲ್ಲ. ನಿಮ್ಮ ಕಡೇನೂ ಯಾರೂ ಇಲ್ಲ. ಏನು ಮಾಡುವುದು?” ಎಂದ. ಸೆಲ್ವಿ, “ಬೆಮೆಲ್‌ನಲ್ಲಿ ಕೆಲಸ ಮಾಡುವವರು ಯಾರಾದರೂ ಸಿಕ್ಕಿದರೆ ಚೆನ್ನಾಗಿರುತ್ತೆ. ನಮ್ಮ ಅಮ್ಮನಿಗೆ ಹೇಳ್ತೀನಿ ಇರಿ” ಎಂದಳು. ಮುಂದುವರಿಯುತ್ತ “ನಮ್ಮ ಲೈನ್‌ನ ಇಬ್ಬರು ಹುಡುಗರು ಅಲ್ಲಿ ಬೆಮೆಲ್‌ನಲ್ಲಿ ಕೆಲಸ ಮಾಡ್ತಾರೆ. ಆದರೆ ಅವರ ಅಕ್ಕಂದಿರು ಆಗಲೇನೆ ಅವರಿಬ್ಬರನ್ನು ತಮ್ಮ ಕೈಗಳಲ್ಲಿ ಹಿಡಿದಿಟ್ಟುಕೊಂಡಿದ್ದಾರೆ. ನಾವು ಏನಾದರು ಕೇಳಿದರೆ ಜಗಳಕ್ಕೆ ಬಂದುಬಿಡ್ತಾರೆ” ಎಂದಳು.

ಹಾಗೇ ಮಾತನಾಡುತ್ತ ಅವರಿಗೆ ಗೊತ್ತಿಲ್ಲದೆಯೇ ಅವರು ಕತ್ತಲಲ್ಲಿ `ಫೈವ್ ಲೈಟ್ಸ್’ ಸರ್ಕಲ್‌ವರೆಗೂ ಹೋಗಿಬಿಟ್ಟಿದ್ದರು. ಸೆಲ್ವಿ, “ರೀ ಮಣಿ ಇದೇನ್ರಿ ನಾವು ಫೈವ್ ಲೈಟ್ಸ್‌ವರೆಗೂ ಬಂದುಬಿಟ್ಟಿದ್ದೀವಿ” ಎಂದಳು. ಮಣಿ ಮುಂದಿದ್ದ ಸರ್ಕಲ್ ನೋಡಿ “ಹೌದಲ್ಲ! ಹಿಂದಕ್ಕೆ ನಡಿ. ಕಾರ್ತಿಕ್ ಊಟ ಮಾಡಿಹೋದನೊ ಇಲ್ಲವೋ” ಎಂದ. ಸೆಲ್ವಿ, “ಅವನು ಬಂದು ಊಟ ಮಾಡಿ ಹೋಗ್ತಾನೆ ಬಿಡಿ. ಕೋಮಲ ಇದ್ದಾಳಲ್ಲ” ಎಂದಳು. ನಂತರ ಇಬ್ಬರೂ ಹಿಂದಕ್ಕೆ ತಿರುಗಿಕೊಂಡು ಕಾಲೋನಿ ಕಡೆಗೆ ಹೊರಟರು. ಸೆಲ್ವಿ, “ಬೆಮೆಲ್‌ನಲ್ಲಿ ಕೆಲಸ ಮಾಡುವ ಹುಡುಗರು ಯಾರಾದರು ಸಿಕ್ಕಿದರೂ ಅವರು ಕೇಳುವ ರೀತಿಯಲ್ಲಿ ನಾವು ಅವರಿಗೆ ಮದುವೆ ಮಾಡಿಕೊಟ್ಟು ಅವರು ಕೇಳಿದ್ದನೆಲ್ಲ ಕೊಡಲು ಸಾಧ್ಯವಿಲ್ಲ. ಹುಡುಗರು ಒಂದು ಕಡೆಗಿರಲಿ. ಅವರ ಅಕ್ಕಂದಿರು, ಅಮ್ಮಂದಿರು ಸುಮ್ಮನೇ ಇರುವುದಿಲ್ಲ.” ಎಂದಳು.

ಮಣಿ ಏನೂ ಮಾತನಾಡದೇ ಸುಮ್ಮನೇ ಹೆಜ್ಜೆಯಾಕುತ್ತಿದ್ದ. ಸೆಲ್ವಿ, “ಹುಡುಗ ಒಳ್ಳೆಯವನೇ ಅನಿಸುತ್ತೆ” ಎಂದಳು. ಮಣಿ, “ಹ, ಇರಬಹುದು. ಆದರೆ ಆ ಬಿಸಿಲು ನಾಡಿಗೆ ಕೊಟ್ಟರೆ ಹೇಗೆ? ನಾವು ದಿಢೀರನೆ ಹೋಗಬೇಕು! ಬರಬೇಕು! ಕಷ್ಟ ಆಗುವುದಿಲ್ಲವೆ?” ಮಣಿ ಹೇಳಿದ. ಸೆಲ್ವಿ, “ನಾಲ್ಕು ಎಕರೆ ಸ್ವಂತ ನೆಲ ಇದೆ. ಹುಡುಗಿಯರಿಗೆಲ್ಲ ಮದುವೆ ಆಗಿದೆ. ಉಳಿದಿರುವುದು ಅವನೊಬ್ಬನೆ. ಜಮೀನಲ್ಲಿ ಕಷ್ಟಪಟ್ಟು ದುಡಿತಾನೆ. ಕಷ್ಟಪಟ್ಟರೆ ಭೂಮಿ ಯಾರಿಗೂ ಮೋಸ ಮಾಡಲ್ಲ ಅಂತ ಹೇಳ್ತಾರೆ ನಿಮ್ಮತ್ತೆ” ಸೆಲ್ವಿ ಹೇಳುತ್ತಲೇ ಬರುತ್ತಿದ್ದಳು. ಮಣಿ, “ಪರವಾಗಿಲ್ಲ ನಮ್ಮತ್ತೆ ನಿನಗೆ ಚೆನ್ನಾಗಿಯೇ ತಲೆ ಸವರಿದ್ದಾಳೆ” ಎಂದ.

ಅಷ್ಟರಲ್ಲಿ ಅವರಿಬ್ಬರೂ ಮನೆ ಹತ್ತಿರಕ್ಕೆ ಬಂದಿದ್ದರು. ಯಾರೋ ಕೂಗಾಡುವ ಸದ್ದು ಕೇಳಿ ಓಡೋಡಿ ಬಂದು ಮನೆ ಹತ್ತಿರ ನಿಂತುಕೊಂಡು ನೋಡುತ್ತಾರೆ. ಅಲ್ಲಿಂದ ಐದನೇ ಮನೆಯ ಹತ್ತಿರ ಜನರು ಗುಂಪು ಸೇರಿಕೊಂಡಿದ್ದಾರೆ. ಮಣಿ ಅಲ್ಲಿಗೆ ಓಡಿಹೋದ. ಸೆಲ್ವಿ ತಮ್ಮ ಮನೆ ಚಿಲಕ ತೆಗೆದು ಒಳಕ್ಕೆ ಇಣಿಕಿ ನೋಡಿದಳು. ಕೋಮಲ ಅಜ್ಜಿಯ ಜೊತೆಗೆ ಮಲಗಿಕೊಂಡು ಇಬ್ಬರೂ ಏನೋ ಮಾತನಾಡುತ್ತಿದ್ದರು. ಸೆಲ್ವಿ, ಚಿಲಕ ಹಾಕಿಕೊಂಡು ಜಗಳ ನಡೆಯುತ್ತಿರುವ ಮನೆ ಹತ್ತಿರಕ್ಕೆ ವೇಗವಾಗಿ ನಡೆದುಹೋದಳು. ಓಡಿಹೋಗಿ ನೋಡಿದರೆ ಕುಡುಕ ರಾಮನ್ ಪ್ರಜ್ಞೆ ಇಲ್ಲದೆ ಕಲ್ಲಿನ ಮೇಲೆ ಬಿದ್ದುಕೊಂಡಿದ್ದಾನೆ. ಆತನ ಪತ್ನಿ ತಲೆ ಹಿಡಿದುಕೊಂಡು ಕುಳಿತಿದ್ದಾಳೆ. ನಿಧಾನವಾಗಿ ಹತ್ತಿರಕ್ಕೆ ಹೋಗಿ ನೋಡಿದರೆ ತಲೆಯಿಂದ ಮುಖದ ಮೇಲೆಲ್ಲ ರಕ್ತ ಬರುತ್ತಿದೆ. ಮಣಿ, “ಯಾಕೆ ಏನಾಯಿತು?” ಎಂದು ಕೇಳಿದಾಗ ರಾಮನ್ ಮಗಳು “ನಮ್ಮ ತಂದೆ ಕುಡಿದು ಬಂದು ಮಾಂಸದ ಸಾರು ಯಾಕೆ ಮಾಡಿಲ್ಲ ಅಂತ ಕೋಲು ತೆಕೊಂಡು ತಾಯಿಗೆ ಹೊಡೆದುಬಿಟ್ಟರು” ಎಂದು ಹೇಳಿದಳು.

ಮಣಿ ಕ್ಯಾಂಪ್‌ನ ಕೊನೆ ಮನೆಯಲ್ಲಿ ಆಟೋ ಇಟ್ಟುಕೊಂಡಿದ್ದ ಯುವಕನನ್ನು ಕರೆಸಿ ಆತ ಆಟೋ ಸಮೇತ ಬಂದ. ಸೆಲ್ವಿ ಕೂಡ ಸೇರಿಕೊಂಡು ರಾಮನ್ ಪತ್ನಿಯನ್ನು ಸಿವಿಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಆಕೆಯ ತಲೆಗೆ ಆಗಿದ್ದ ಗಾಯಕ್ಕೆ ಐದು ಹೊಲಿಗೆಗಳನ್ನು ಹಾಕಿಕೊಂಡು ಮತ್ತೆ ವಾಪಸ್ ತಂದು ಮನೆಯಲ್ಲಿ ಬಿಟ್ಟರು. ಅಷ್ಟರಲ್ಲಿ ಪ್ರಜ್ಞೆ ಬಂದಿದ್ದ ರಾಮನ್ ನನ್ನಿಂದ ತಪ್ಪಾಯಿತು ಎಂದು ಎಲ್ಲರನ್ನೂ ಬೇಡಿಕೊಳ್ಳುತ್ತಿದ್ದ. ಆದರೆ ಯಾರೂ ಆತನ ಕಡೆಗೆ ಗಮನ ಕೊಡಲಿಲ್ಲ. ರಾಮನ್ ಮನೆ ಒಳಗೆ ಬಂದರೆ ಮತ್ತೆ ಜಗಳ ತೆಗೆಯುತ್ತಾನೆಂದು ಪತ್ನಿ, ಮಕ್ಕಳು ಸೇರಿಕೊಂಡು ಬಾಗಿಲು ಮುಚ್ಚಿಕೊಂಡಿದ್ದರು. ರಾತ್ರಿಯೆಲ್ಲ ಚಳಿಯಲ್ಲಿ ಅಂಗಲಾಚುತ್ತಿದ್ದ ರಾಮನ್ ಬಾಗಿಲನ್ನು ಎಷ್ಟೇ ಬಡಿದರೂ ಬಾಗಿಲು ತೆಗೆಯಲಿಲ್ಲ. ಕೊನೆಗೆ ಮಣಿ, ರಾಮನ್‌ನನ್ನು ಕಮ್ಯೂನಿಟಿ ಹಾಲ್ ಹತ್ತಿರಕ್ಕೆ ಕರೆದುಕೊಂಡು ಹೋಗಿ ಪಡಸಾಲೆಯಲ್ಲಿ ಮಲಗಿಸಿ ಬಂದಿದ್ದ. ಕ್ಯಾಂಪ್‌ನಲ್ಲಿ ಕುಡುಕರದ್ದು ಯಾವಾಗಲೂ ಹಾವಳಿ ಇರುವುದೇ. ಇಂತಹ ಸಣ್ಣಪುಟ್ಟ ಜಗಳಗಳಿಗೆ ರಾತ್ರಿಹೊತ್ತು ಪೊಲೀಸರನ್ನು ಕರೆದರೂ ಬರುತ್ತಿರಲಿಲ್ಲ.

ಒಂದು ದಿನ ಕೋಮಲ ಮನೆಯಲ್ಲಿ ಇಲ್ಲದ ಸಮಯದಲ್ಲಿ ಸೆಲ್ವಿ ತನ್ನ ಅತ್ತೆ ಕನಕಳಿಗೆ ಎಲ್ಲವನ್ನೂ ವಿವರಿಸಿ ಹೇಳಿದಳು. ಕನಕ ತನ್ನ ತವರೂರಿಗೆ ತನ್ನ ಮೊಮ್ಮಗಳನ್ನು ಕೊಡುತ್ತಿರುವುದಕ್ಕೆ ಸಂತೋಷವಾಗಿ ಹುಡುಗ ಕೂಡ ಒಳ್ಳೆಯವನು ಎಂದು ಹೇಳಿದಳು. ಅದೇ ಮಾತುಗಳನ್ನು ಮತ್ತೆ ಸೆಲ್ವಿ, ಮಣಿ ಜೊತೆಗೆ ಕನಕಳ ಮುಂದೆ ಇನ್ನೊಂದೆರಡು ಸಲ ಮಾತನಾಡಿದ ಮೇಲೆ ಅಂತಿಮವಾಗಿ ಕೋಮಲಳನ್ನು ಆರ್ಮುಗಮ್ ಕರೆದುಕೊಂಡುಬಂದಿದ್ದ ಯುವಕ ಸಂತೋಷ್‌ಗೆ ಕೊಟ್ಟು ಮದುವೆ ಮಾಡುವುದಾಗಿ ತೀರ್ಮಾನ ತೆಗೆದುಕೊಂಡರು. ವೆಲ್ಲೂರಿಗೆ ಹತ್ತಿರದ ಸೇನೂರಿನಿಂದ ಆರ್ಮುಗಮ್, ಅಲಮೇಲು ಮತ್ತು ಸಂತೋಷ್ ತಂದೆ ತಾಯಿಯನ್ನು ಕೆಜಿಎಫ್‌ಗೆ ಕರೆಸಿಕೊಂಡು ಮದುವೆ ಬಗ್ಗೆ ಮಾತನಾಡಿ ಮುಗಿಸಿದರು. ಕೋಮಲಳನ್ನು ಕೇಳಿ, ಆಕೆ ಕೂಡ ಮದುವೆಗೆ ಒಪ್ಪಿಕೊಂಡಳು. ಒಂದು ದಿನ ಸೆಲ್ವಿ, ಮಣಿ, ತನ್ನ ಕುಟುಂಬ ಮತ್ತು ಒಂದಷ್ಟು ಗೆಳೆಯರ ಜೊತೆಗೆ ಸೇನೂರಿಗೆ ಹೋಗಿ ಮದುವೆ ಮಾಡಿ ಮುಗಿಸಿಕೊಂಡು ಬಂದರು.

ಹುಡುಗನ ಕಡೆಯವರು ಕೋಮಲಳಿಗೆ ಬಂಗಾರದ ಓಲೆ ಜುಮಕಿ, ಮೂಗುಬಟ್ಟು, ಕಾಲಿಗೆ ಬೆಳ್ಳಿ ಚೈನುಗಳು, ಕತ್ತಿಗೆ ಒಂದು ಬಂಗಾರದ ಚೈನೂ ಕೂಡ ಮಾಡಿ ಹಾಕಿಸಿದ್ದರು. ಇನ್ನು ಮದುವೆಯನ್ನು ಸಂಪೂರ್ಣವಾಗಿ ಹುಡುಗನ ಕಡೆಯವರೇ ಖರ್ಚು ಮಾಡಿ ಮಾಡಿಕೊಂಡಿದ್ದರಿಂದ ಮಣಿ, ಸೆಲ್ವಿ ಇಬ್ಬರೂ ಸೇರಿಕೊಂಡು ರಾಬರ್ಟ್ಸನ್‌ಪೇಟೆಯ ಸೇಟ್ ಅಂಗಡಿಯೊಂದರಲ್ಲಿ ಬಡ್ಡಿಗೆ ಸ್ವಲ್ಪ ಹಣ ಸಾಲ ಪಡೆದುಕೊಂಡು ಅದರ ಜೊತೆಗೆ ಮದುವೆಗೆಂದು ಕೂಡಿಟ್ಟಿದ್ದ ಅಲ್ಪ ಸ್ವಲ್ಪ ಹಣದಿಂದ ಕೋಮಲ ಕೈಗಳಿಗೆ ಎರಡು ಬಂಗಾರದ ಬಳೆಗಳನ್ನು ಮಾಡಿಸಿ ಹಾಕಿದ್ದರು. ಅದು ಕ್ಯಾಂಪ್‌ನಲ್ಲಿ ಬಹಳ ದೊಡ್ಡ ವಿಷಯವಾಗಿತ್ತು. ಕ್ಯಾಂಪ್‌ಗಳಲ್ಲಿ ನಡೆಯುವ ನೂರಕ್ಕೆ ೯೦ರಷ್ಟು ಮದುವೆಗಳಲ್ಲಿ ಒಂದೆರಡು ಎಳೆ ಚಿನ್ನ ನೋಡುವುದು ತೀರಾ ಅಪರೂಪ. ಕ್ಯಾಂಪ್‌ನಲ್ಲಿ ಕೋಮಲಳನ್ನು ನೋಡಿದ ಮಹಿಳೆಯರು ಆಶ್ಚರ್ಯದೊಂದಿಗೆ ಅಸೂಯೆ ಪಟ್ಟುಕೊಂಡಿದ್ದರು. ಒಟ್ಟಿನಲ್ಲಿ ಕೋಮಲ ಮೈ ಬಂಗಾರದಿಂದ ತುಂಬಿಹೋಗಿದೆ ಎಂಬುದಾಗಿ ಕ್ಯಾಂಪ್ ಮಹಿಳೆಯರು ಬಾಯಿ ತುಂಬಾ ಮಾತನಾಡಿಕೊಳ್ಳುತ್ತಿದ್ದರು.

*****

ಈಗ ಕೋಮಲ ಮತ್ತು ಸಂತೋಷ್ ಮದುವೆ ಆಗಿದೆ. ಇಬ್ಬರೂ ಮಣಿ ಮನೆಯಲ್ಲಿ ಕುಳಿತುಕೊಂಡು ಒಂದೇ ತಟ್ಟೆಯಲ್ಲಿ ಮಾಂಸಹಾರ ಊಟ ಮಾಡುತ್ತಿದ್ದಾರೆ. ಸೆಲ್ವಿ ಇಬ್ಬರಿಗೂ ಊಟ ಬಡಿಸುತ್ತಿದ್ದಾಳೆ. ಕನಕ ಮೂಲೆಯಲ್ಲಿ ಕುಳಿತುಕೊಂಡಿದ್ದಾಳೆ. ಮಣಿ ಹೊರಗಡೆ ಕತ್ತಲಲ್ಲಿ ಕುಳಿತುಕೊಂಡಿದ್ದು “ಸೆಲ್ವಿ?” ಎಂದಿದ್ದೆ ಸೆಲ್ವಿ ಹೊರಗೆ ಬಂದು ನಿಂತುಕೊಳ್ಳುತ್ತಾಳೆ. ಮಣಿ, “ಅವರಿಬ್ಬರದೂ ಊಟ ಆದ ಮೇಲೆ ಮಾಣಿಕ್ಯಂ ಗುಡಿಸಿಲು ಖಾಲಿ ಇದೆ. ಅದರಲ್ಲೂ ಮಂಚವೂ ಇದೆ. ಇದೊ ಕೀ ತೆಗೆದುಕೊ. ಅವರಿಬ್ಬರನ್ನು ಅಲ್ಲಿ ಬಿಟ್ಟು ಬಾ. ಏನೇನು ಬೇಕೊ ಎಲ್ಲ ತೆಕೊಂಡು ಹೋಗಿ ಕೊಡು” ಎಂದ. ಸೆಲ್ವಿ ಕೀ ತೆಗೆದುಕೊಂಡು ಒಳಕ್ಕೆ ಹೋದಳು. ಗೋವಿಂದ ಮಣಿ ಹತ್ತಿರಕ್ಕೆ ಬಂದು ಕುಳಿತುಕೊಂಡು ಬೀಡಿ ಕೇಳಿ ಮಣಿ ತೆಗೆದುಕೊಟ್ಟ. ಸಾಮಾನ್ಯವಾಗಿ ಗೋವಿಂದ ಬಂದ ತಕ್ಷಣವೇ ಮಣಿ ಜೇಬಿನಿಂದ ಬೀಡಿ ತೆಗೆದು ಕೊಟ್ಟುಬಿಡುತ್ತಿದ್ದ. ಮಣಿ ಏನೊ ಯೋಚಿಸುತ್ತಿದ್ದನು. ಗೋವಿಂದ, “ಮಾಪಿಳ್ಳೆ ಅಳಿಯ ಮಗಳು ಇದ್ದಾರಾ? ಇಲ್ಲ ಊರಿಗೆ ಹೋದರಾ?” ಎಂದ. ಮಣಿ, “ಒಳಗಡೆ ಊಟ ಮಾಡ್ತಾ ಇದ್ದಾರೆ” ಎಂದ. ಅಷ್ಟರಲ್ಲಿ ಸೆಲ್ವಿ ಅಳಿಯ ಮಗಳನ್ನು ಕರೆದುಕೊಂಡು ಮಲಗಲು ಬಟ್ಟೆ, ಕುಡಿಯಲು ನೀರು ತೆಗೆದುಕೊಂಡು ಮಲಗುವ ಮನೆ ಕಡೆಗೆ ಮೂವರೂ ಹೊರಟರು.

ಮಣಿ ಪಕ್ಕದಲ್ಲಿ ಕುಳಿತಿದ್ದ ಗೋವಿಂದ, “ಹುಡುಗ ಚೆನ್ನಾಗಿದ್ದಾನೆ. ಒಳ್ಳೆಯವನೂ ಕೂಡ ಅನಿಸುತ್ತೆ” ಎಂದ. ಮಣಿ, “ಹುಡುಗ ಒಳ್ಳೆಯವನೇ. ಆದರೆ ಹೋಗಿಹೋಗಿ ಗೊತ್ತಿದ್ದೂ ಗೊತ್ತಿದ್ದೂ ಹುಡುಗೀನ ಗಿಳಿಯಂತೆ ಬೆಳೆಸಿ ಆ ಬಿಸಿಲು ನಾಡಿಗೆ ಕೊಟ್ಟುಬಿಟ್ಟೆನಲ್ಲ ಅಂತ ಕರಳು ಕಿತ್ತುಬರುತ್ತೆ ಮಾವ” ಎಂದ. ಗೋವಿಂದ, “ಎಲ್ಲಾ ಹಣೆಬರಹ ಬಿಡು ಮಣಿ. ಅದನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ತಲೆ ಕೆಡಿಸಿಕೊಳ್ಳಬೇಡ” ಎಂದ. ಮಣಿ, “ಆ ಮುದಿ ನನ್ನ ಮಗ, ನನ್ನ ಮಾವ ಬಂದು ನನ್ನ ಕುಟುಂಬಾನ ಹಾಳು ಮಾಡಿಬಿಟ್ಟ” ಎಂದ. ಗೋವಿಂದ, “ಇಲ್ಲ ಮಣಿ. ನಿನ್ನ ಮಗಳು ಯಾರೋ ಒಬ್ಬ ಹುಡುಗನ ಜೊತೆಗೆ ಮದುವೆ ಮಾಡಿಕೊಂಡು ಹೋಗಲೇ ಬೇಕಾಗಿತ್ತಲ್ಲ?” ಎಂದ. ಮಣಿ, “ಕೆಜಿಎಫ್‌ನಲ್ಲಿದ್ದರೆ ನಮ್ಮ ಕಣ್ಣು ಮುಂದೇ ಇರ್ತಾಇದ್ದಳಲ್ಲ?” ಎಂದ. ಸ್ವಲ್ಪ ಹೊತ್ತು ಸುಮ್ಮನಿದ್ದ ಮಣಿ, “ಗೋವಿಂದ ಮಾವ, ನಮ್ಮ ಇಡೀ ಕಾಲೋನಿಯಲ್ಲಿ ನೀನೊಬ್ಬನೇ ಅದೃಷ್ಟವಂತ” ಎಂದ. ಗೋವಿಂದ, “ಮಣಿ ನೀನು ಏನು ಹೇಳ್ತಿಯಾ ಅಂತ ನನಗೆ ಚೆನ್ನಾಗಿ ಗೊತ್ತು ಬಿಡು. ನಿಮ್ಮಪ್ಪ ಬದುಕಿದ್ದಾಗಲೂ ಅದನ್ನೇ ಹೇಳ್ತಾ ಇದ್ದ. ನೀನೂ ಅದನ್ನೇ ಹೇಳ್ತೀಯ ಬಿಡು” ಎಂದ.

ಗೋವಿಂದನಿಗೆ ಮಕ್ಕಳಿರಲಿಲ್ಲ. ಅದ್ಯಾಕೊ ಏನೋ ಗೊತ್ತಿಲ್ಲ. ಗಣಿ ಕಾಲೋನಿಗಳಲ್ಲಿ ಮಕ್ಕಳಿಲ್ಲದೇ ಇರುವುದೆಂದರೆ ಜಗತ್ತಿನ ಅದ್ಭುತಗಳಲ್ಲಿ ಒಂದು ಎನ್ನುವಂತಿತ್ತು. ಯಾವ ಕಾರ್ಮಿಕನನ್ನೇ ನೋಡಿ ಅವರಿಗೆ ನಾಲ್ಕಾರು ಮಕ್ಕಳು ಇರುತ್ತಿದ್ದರು. ಕೆಲವರಿಗೆ ಅಪರೂಪವೆಂಬಂತೆ ಒಂದೋ ಎರಡೋ ಮಕ್ಕಳಿರುತ್ತಿದ್ದರು. ಮಕ್ಕಳೇ ಇಲ್ಲ ಎಂದರೆ ಗಣಿ ಕಾಲೋನಿಯಲ್ಲಿ ಒಂದು ದೊಡ್ಡ ಅಪಮಾನದ ವಿಷಯವಾಗಿತ್ತು. ಎಷ್ಟೊ ಜನರು ಗೋವಿಂದನನ್ನು ಗೇಲಿ ಮಾಡುತ್ತಿದ್ದರು. ಇನ್ನು ಅವನ ಪತ್ನಿ ಧರಣಿಯನ್ನಂತೂ ಮಹಿಳೆಯರು ಆಕೆಯ ಎದುರಿಗೆ ಕೇಳಿ ಕೇಳಿ ಹಿಯಾಳಿಸುತ್ತಿದ್ದರು. ಆಕೆ ಒಂದಷ್ಟು ಗಯ್ಯಾಳಿಯಾಗಿದ್ದರಿಂದ ಅವಳ ಮುಂದೆ ಹೆಚ್ಚಾಗಿ ಮಹಿಳೆಯರು ಮಾತನಾಡಲು ಹೆದರಿಕೊಳ್ಳುತ್ತಿದ್ದರು. ಮಕ್ಕಳು ಇಲ್ಲದೇ ಇರುವವರದ್ದು ಒಂದು ಸಮಸ್ಯೆಯಾದರೆ, ಮಕ್ಕಳು ಇರುವವರದ್ದು ನೂರಾರು ಸಮಸ್ಯೆಗಳು.

ಸೆಲ್ವಿ, ಅಳಿಯ ಮತ್ತು ಮಗಳನ್ನು ಬೇರೆ ಮನೆಯಲ್ಲಿ ಬಿಟ್ಟು ಬಂದು ಮಣಿಯ ಪಕ್ಕದಲ್ಲಿ ಕುಳಿತುಕೊಂಡಳು. ಗೋವಿಂದ, “ಬರ್ತೀನಿ ಮಣಿ ಎಂದು ಕತ್ತಲಲ್ಲಿ ಎದ್ದುಹೋದ. ಸೆಲ್ವಿ ಮತ್ತು ಮಣಿ ಇಬ್ಬರೂ ಕತ್ತಲಲ್ಲಿ ಪಕ್ಕಪಕ್ಕದಲ್ಲಿ ಕುಳಿತುಕೊಂಡು ಸುಮಾರು ಹೊತ್ತು ಏನೇನೊ ಮಾತನಾಡಿಕೊಂಡರು. ಮಣಿ, “ಮನೆಯಲ್ಲಿ ಇನ್ನು ಮೇಲೆ ನಾವು ಮೂವರೇ ಮಲಗಿಕೊಳ್ಳಬೇಕು. ನಮ್ಮ ಜೊತೆಯಲ್ಲಿ ಕೋಮಲ ಇರುವುದಿಲ್ಲ” ಎಂದ. ಮನೆಯ ಒಳಗಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಕನಕ, “ಸೆಲ್ವಿ ಹೊತ್ತಾಯಿತು ಎದ್ದು ಬಂದು ಮನೆ ಒಳಗೆ ಮಲಗಿಕೊಳ್ಳಿ. ಹೊರಗಡೆ ಚಳಿ ಇದೆ” ಎಂದಳು. ಸೆಲ್ವಿ ಮತ್ತು ಮಣಿ ಇಬ್ಬರೂ ಎದ್ದು ಬಂದು ಮನೆ ಒಳಗೆ ಮಲಗಿಕೊಂಡರು. ಕನಕ, “ಹುಡುಗಿ ಅಂದರೆ ಬೇರೆಯವರ ಮನೆಗೆ ಹೋಗ್ಲೆಬೇಕಲ್ಲಪ್ಪ ಮಣಿ” ಎಂದಳು.

ಮಣಿ ಏನೂ ಮಾತನಾಡಲಿಲ್ಲ. ಆದರೂ ಯಾಕೊ ಮಣಿಗೆ ಎಂದೂ ಇಲ್ಲದ ದುಃಖ ಇಂದು ಒತ್ತರಿಸಿ ಬರುತ್ತಿತ್ತು. ಸೆಲ್ವಿಗೂ ಕೂಡ ಮೊದಲ ಬಾರಿಗೆ ಕೋಮಲ, ಅವರನ್ನು ಬಿಟ್ಟುಹೋಗಿ ಬೇರೆ ಮನೆಯಲ್ಲಿ ತನ್ನ ಗಂಡನ ಜೊತೆಗೆ ಮಲಗಿಕೊಂಡಿದ್ದರಿಂದ ಸ್ವಲ್ಪ ಆತಂಕ ಮತ್ತು ನೋವು ಪ್ರಾರಂಭವಾಗಿತ್ತು. ಅವರ್ಯಾರಿಗೂ ಸುಮಾರು ಹೊತ್ತು ನಿದ್ದೆಯೇ ಬರಲಿಲ್ಲ. ಮದುವೆ ಆಗುವವರೆಗೂ ಏನೂ ಗೊತ್ತಾಗಲಿಲ್ಲ. ಆದರೆ ಈಗ ಯಾಕೊ ಏನೋ ಕಳೆದುಕೊಂಡಂತೆ ತೋರುತ್ತಿತ್ತು.

(ಹಿಂದಿನ ಕಂತು: ಆರಕ್ಕೇರದ ಮೂರಕ್ಕಿಳಿಯದ ಬಡವರ ಬದುಕು)

About The Author

ಡಾ. ಎಂ. ವೆಂಕಟಸ್ವಾಮಿ

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ