ಪೀಟರ್ ಪೆಟ್ರೊವಿಚ್ ಹ್ಯಾಟನ್ನು ಅತ್ಯಂತ ಅತಿ ಅತಿ ಹುಷಾರಾಗಿ ಹಿಡಿದುಕೊಂಡಿದ್ದ. ಹೊಸ ಬಟ್ಟೆಯನ್ನು ಅವನು ತೊಟ್ಟಿಲ್ಲ, ಬೇರೆಯವರಿಗಾಗಿ ಪ್ರದರ್ಶನಕ್ಕೆ ಇರಿಸಿದ್ದಾನೆ ಅನ್ನುವಂತಿತ್ತು. ಪೀಟರ್ ಪೆಟ್ರೊವಿಚ್ ತೊಟ್ಟಿದ್ದ ಬಟ್ಟೆಗಳಲ್ಲಿ ಯುವಕರು ಇಷ್ಟಪಡುವಂಥ ಬಣ್ಣಗಳೇ ಎದ್ದು ಕಾಣುತ್ತಿದ್ದವು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಐದನೆಯ ಅಧ್ಯಾಯ
ಬಾಗಿಲಲ್ಲಿ ನಿಂತವನು ಯೌವನ ಆಗಲೇ ದಾಟಿದ್ದವನು, ದೊಡ್ಡಸ್ತಿಕೆಯ ಬಿಂಕವನ್ನು ತೋರಿಕೆಯ ವಿನಯದ ಹಿಂದೆ ಅಡಗಿಸಿದ್ದ. ಮುಖದಲ್ಲಿ ಸಿಡುಕಿತ್ತು. ಬಾಗಿಲಲ್ಲೇ ನಿಂತು, ಸುತ್ತಲೂ ಕಣ್ಣಾಡಿಸುತ್ತ, ಇತರರಿಗೆ ಮುಜುಗರವಾಗುವ ಹಾಗೆ ‘ಇಲ್ಲಿಗೆ ಯಾಕಾದರೂ ಬಂದೆನೋ’ ಅನ್ನುವಂಥ ಭಾವವನ್ನು ಕಣ್ಣಲ್ಲಿಟ್ಟುಕೊಂಡು, ‘ಹಡಗಿನ ಕೋಣೆ’ಯಷ್ಟು ಇಕ್ಕಟ್ಟಾದ ರಾಸ್ಕೋಲ್ನಿಕೋವ್ ನ ಕೋಣೆಯನ್ನು ನೋಡಿದ. ಆಮೇಲೆ ಅವನ ಅದೇ ಅಚ್ಚರಿಯ ನೋಟವು ಸರಿಯಾದ ಬಟ್ಟೆ ತೊಟ್ಟಿರದ, ಕೆದರು ತಲೆಯ, ಸ್ನಾನಮಾಡಿರದೆ, ಹಾಗೇ ಕೊಳಕು ಮುರಕಲು ಸೋಫಾ ಮೇಲೆ ಮಲಗಿ ತನ್ನನ್ನೇ ನಿಶ್ಚಲವಾಗಿ ನೋಡುತ್ತಿದ್ದ ರಾಸ್ಕೋಲ್ನಿಕೋವ್ ನ ಮೇಲೆ ನೆಲೆಸಿತು. ಆಮೇಲೆ, ಅಸ್ತವ್ಯಸ್ತ ಉಡುಪಿನ, ಕೆದರುಗೂದಲಿನ, ಕ್ಷೌರ ಕಾಣದ ಮುಖದ, ಮನಸಿನಲ್ಲಿ ಅಪನಂಬಿಕೆ ತುಂಬಿಕೊಂಡು, ಮುಖದ ಮೇಲೆ ಉತ್ಪ್ರೇಕ್ಷಿತ ಆಘಾತದ ಭಾವ ತೋರುತ್ತ ಉದ್ಧಟತನದಿಂದ ಕಣ್ಣಲ್ಲಿ ಕಣ್ಣಿಟ್ಟು ದಿಟ್ಟಿಸುತ್ತಿದ್ದ, ಕೂತ ಜಾಗದಿಂದ ಕದಲದ ರಝುಮಿಖಿನ್ ನನ್ನು ದುರುಗುಟ್ಟಿತು. ಆ ಕೋಣೆಯಲ್ಲಿ ಕೊನೆಯ ಪಕ್ಷ ಒಂದು ನಿಮಿಷದಷ್ಟು ಹೊತ್ತು ಬಿಗುವಿನ ಮೌನ ನಿಶ್ಚಲವಾಗಿತ್ತು. ನಿಧಾನವಾಗಿ ಈ ದೃಶ್ಯದಲ್ಲಿ ಪುಟ್ಟದೊಂದು ಬದಲಾವಣೆ ಕಂಡಿತು. ಹೊಸತಾಗಿ ಬಂದಿದ್ದ ಸಭ್ಯಸ್ಥನು ಸನ್ನಿವೇಶವನ್ನು ಗಮನಿಸಿ, ಈ ‘ಹಡಗಿನ ಕೋಣೆ’ಯಲ್ಲಿ ಬಿಗುಮಾನದಿಂದಿದ್ದರೆ ಏನೂ ಗಿಟ್ಟುವುದಿಲ್ಲವೆಂದು ಅರಿತು ಸ್ವಲ್ಪ ನಯ ತಂದುಕೊಂಡು ಝೋಸ್ಸಿಮೋವ್ ನನ್ನು ಸೌಜನ್ಯದಿಂದ ಮಾತಾಡಿಸಿದ. ಸೌಜನ್ಯವಿದ್ದರೂ ಕಾಠಿಣ್ಯವನ್ನು ಪೂರಾ ಬಿಡದೆ ಒಂದೊಂದು ಅಕ್ಷರವನ್ನೂ ಒತ್ತಿ ಹೇಳುತ್ತ ಪ್ರಶ್ನೆ ಕೇಳಿದ.
‘ಶ್ರೀಯುತ ರೋದಿಯಾನ್ ರೊಮಾನ್ಯಿಚ್ ರಾಸ್ಕೋಲ್ನಿಕೋವ್, ವಿದ್ಯಾರ್ಥಿ ಅಥವಾ ಮಾಜಿ ವಿದ್ಯಾರ್ಥಿ?’
ಝೋಸ್ಸಿಮೋವ್ ಕೂತಲ್ಲೇ ಸರಿದಾಡುತ್ತ ಆ ಪ್ರಶ್ನೆಗೆ ಉತ್ತರ ಕೊಡುವವನಿದ್ದ, ಅಷ್ಟರಲ್ಲಿ ರಝುಮಿಖಿನ್, ತಟ್ಟನೆ
‘ಇಲ್ಲಿ ಸೋಫಾ ಮೇಲೆ ಮಲಗಿದ್ದಾನೆ. ನಿಮಗೇನಾಗಬೇಕಿತ್ತು?’ ಎಂದು ಕೇಳಿದ.
‘ನಿಮಗೇನಾಗಬೇಕಾಗಿತ್ತು,’ ಎಂಬ ಅತಿಪರಿಚಿತರಾಡುವಂಥ ಮಾತು ಬಿಂಕ ಬಡಿವಾರದ ಸಭ್ಯಸ್ಥನನ್ನು ಚಿತ್ತು ಮಾಡಿತ್ತು. ಅವನು ತಟ್ಟನೆ ರಝುಮಿಖಿನ್ ನತ್ತ ತಿರುಗುವವನಿದ್ದ. ಮನಸ್ಸು ಬಿಗಿ ಹಿಡಿದು, ಝೋಸ್ಸಿಮೋವ್ ನನ್ನೇ ಸುಮ್ಮನೆ ನೋಡಿದ. ‘ರಾಸ್ಕೋಲ್ನಿಕೋವ್,’ ಅಕ್ಷರಗಳನ್ನು ನಿಧಾನವಾಗಿ ಎಳೆದೆಳೆದು ಹೇಳುತ್ತ ಝೋಸ್ಸಿಮೋವ್ ಕಾಯಿಲೆ ಮನುಷ್ಯನತ್ತ ಕೊರಳು ಬಾಗಿಸಿ ಬಾಯಿಯನ್ನು ತೀರ ದೊಡ್ಡದಾಗಿ ತೆಗೆದು ಆಕಳಿಸಿದ. ಬಹಳ ಹೊತ್ತು ಅವನ ಬಾಯಿ ತೆರೆದೇ ಇತ್ತು. ವೇಸ್ಟ್ ಕೋಟಿನ ಜೇಬಿನಿಂದ ಚಿನ್ನದ ದೊಡ್ಡ ಉಬ್ಬು ಮುಚ್ಚಳ ಗಡಿಯಾರವನ್ನು ನಿಧಾನವಾಗಿ ತೆಗೆದು ನಿಧಾನವಾಗಿ ಗಡಿಯಾರ ನೋಡಿ ಬೇಕೋ ಬೇಡವೋ ಅನ್ನುವ ಹಾಗೆ ಮತ್ತೆ ಜೇಬಿಗೆ ನಿಧಾನವಾಗಿ ಸೇರಿಸಿದ.
ರಾಸ್ಕೋಲ್ನಿಕೋವ್ ಅಂಗಾತ ಮಲಗಿ, ಒಂದೂ ಮಾತಾಡದೆ, ಹಟಮಾರಿಯ ಹಾಗೆ ಸುಮ್ಮನೆ ನೋಡುತ್ತಲೇ ಇದ್ದ— ಕೋಣೆಗೆ ಹೊಸದಾಗಿ ಬಂದವನನ್ನು. ಅವನ ಮನಸ್ಸಿನಲ್ಲಿ ಮಾತ್ರ ಯಾವ ಆಲೋಚನೆಯೂ ಇರಲಿಲ್ಲ. ವಾಲ್ ಪೇಪರಿನಲ್ಲಿದ್ದ ಹೂವನ್ನೇ ಇಷ್ಟು ಹೊತ್ತೂ ದಿಟ್ಟಿಸುತ್ತಿದ್ದವನು ಹೂವನ್ನು ಬಿಟ್ಟು ಪಕ್ಕಕ್ಕೆ ಹೊರಳಿದ ಮುಖ ತೀರ ಬಿಳಚಿತ್ತು, ಆಪರೇಶನ್ ಮಾಡಿಸಿಕೊಂಡ ರೋಗಿಯ ಮುಖದ ಹಾಗೆ, ಹಿಂಸೆಗೆ ಗುರಿಯಾದವನ ಮುಖದ ಹಾಗಿತ್ತು. ಬಂದಿದ್ದ ಹೊಸಬ ಸಭ್ಯಸ್ಥನು ರಾಸ್ಕೋಲ್ನಿಕೋವ್ ನ ಮುಖದಲ್ಲಿ ಆಸಕ್ತಿ, ಗೊಂದಲ, ಅನುಮಾನ, ಭಯ ಭಾವಗಳು ಒಂದರ ಹಿಂದೆ ಇನ್ನೊಂದು ಮೂಡುವ ಹಾಗೆ ಮಾಡಿದ್ದ. ಡಾಕ್ಟರು ಝೋಸ್ಸಿಮೋವ್ ‘ಇಗೋ ರಾಸ್ಕೋಲ್ನಿಕೋವ್’ ಎಂದು ಹೇಳುವ ಹೊತ್ತಿಗೆ ಅವನು ಕುಪ್ಪಳಿಸಿದ ಹಾಗೆ ದಡಕ್ಕನೆ ಎದ್ದು ಕೂತ. ಬಂದದ್ದು ಬರಲಿ, ಆದದ್ದು ಆಗಲಿ ಅನ್ನುವ ಹಾಗೆ, ತಡವರಿಸುತ್ತ ಕ್ಷೀಣವಾದ ದನಿಯಲ್ಲಿ ಮಾತಾಡಿದ.
‘ಹೌದು! ನಾನೇ ರಾಸ್ಕೋಲ್ನಿಕೋವ್! ಏನು ಬೇಕು ನಿಮಗೆ?’
ಹೊಸಬನು ಹೆಮ್ಮೆ ತುಂಬಿದ ದನಿಯಲ್ಲಿ, ‘ಪೀಟರ್ ಪೆಟ್ರೋವಿಚ್ ಲುಶಿನ್. ನನ್ನ ಹೆಸರು ನಿಮಗೆ ಗೊತ್ತಿದೆ ಅಂದುಕೊಂಡಿದ್ದೇನೆ,’ ಅಂದ.
ಮತ್ತೇನನ್ನೋ ನಿರೀಕ್ಷಿಸಿದ್ದ ರಾಸ್ಕೋಲ್ನಿಕೋವ್ ಚಿಂತೆ ತುಂಬಿದವನ ಹಾಗೆ ಮುಂಕಾಗಿ, ‘ಪೀಟರ್ ಪೆಟ್ರೋವಿಚ್’ ಎಂಬ ಹೆಸರನ್ನು ಅದೇ ಮೊದಲ ಬಾರಿಗೆ ಕೇಳಿದವನ ಹಾಗೆ ನೋಡಿದ.
‘ಏನು? ಇನ್ನೂ ನಿಮಗೆ ಸುದ್ದಿ ಬಂದಿಲ್ಲವೇ?’ ಪೀಟರ್ ಪೆಟ್ರೊವಿಚ್ ಮುಖ ಗಂಟಿಕ್ಕಿಕೊಂಡು ಕೇಳಿದ.
ಅದಕ್ಕೆ ಉತ್ತರ ಅನ್ನುವ ಹಾಗೆ ರಾಸ್ಕೋಲ್ನಿಕೋವ್ ನಿಧಾನವಾಗಿ ಮಲಗಿ, ದಿಂಬಿನ ಮೇಲೆ ಎರಡೂ ಕೈ ಮಡಿಸಿ ಅಂಗೈಯಲ್ಲಿ ತಲೆ ಇಟ್ಟುಕೊಂಡು ಚಾವಣಿ ದಿಟ್ಟಿಸುತ್ತ ಇದ್ದುಬಿಟ್ಟ. ಪೀಟರ್ ಪೆಟ್ರೊವಿಚ್ ನ ಮುಖದ ಮೇಲೆ ಬೇಗುದಿಯ ಭಾವ ಸುಳಿದು ಹೋಯಿತು. ಝೋಸ್ಸಿಮೋವ್, ರಝುಮಿಖಿನ್ ಇಬ್ಬರ ಕುತೂಹಲ ಕೆರಳಿ ಅವನನ್ನೇ ನೋಡುತ್ತಿದ್ದರು. ಪೀಟರ್ ಪೆಟ್ರೊವಿಚ್ ಗೆ ಮುಜುಗರವಾಯಿತು.
‘ಹತ್ತು ದಿನದ ಹಿಂದೆ, ಹದಿನೈದು ದಿನವೇ ಆಗಿರಬಹುದೂ, ಪತ್ರ ಕಳಿಸಿದ್ದೆ, ಇಷ್ಟು ಹೊತ್ತಿಗೆ ಖಂಡಿತ ತಲುಪಿರುತ್ತದೆ ಅಂದುಕೊಂಡಿದ್ದೇ,’ ಪೀಟರ್ ಪೆಟ್ರೊವಿಚ್ ದನಿ ಎಳೆಯುತ್ತ ಅಂದ.
ರಾಸ್ಕೋಲ್ನಿಕೋವ್ ತಟಕ್ಕನೆ, ‘ನೋಡಿ, ಅದು ಯಾಕೆ ಬಾಗಿಲ ಹತ್ತಿರ ನಿಂತಿದ್ದೀರಿ? ಏನಾದರೂ ಹೇಳುವುದಿದ್ದರೆ ಒಳಕ್ಕೆ ಬಂದು ಕುಳಿತುಕೊಳ್ಳಿ. ನಿಮಗೂ ನಸ್ತಾಸ್ಯಾಗೂ ಆಗುವಷ್ಟು ಜಾಗ ಬಾಗಿಲ ಮೂಲೆಯಲ್ಲಿ ಇಲ್ಲ. ಸ್ವಲ್ಪ ಜರುಗು ನಸ್ತಾಸ್ಯಾ, ಅವರು ಒಳಕ್ಕೆ ಬರಲಿ. ಬನ್ನಿ. ಅಲ್ಲಿ, ನಿಮ್ಮ ಬಲಗಡೆಗೆ ಕುರ್ಚಿ ಇದೆ. ಜಾಗ ಮಾಡಿಕೊಂಡು ಕುಳಿತುಕೊಳ್ಳಿ,’ ಅಂದ.
ಕುರ್ಚಿಯನ್ನು ಟೇಬಲ್ಲಿನಿಂದ ಸ್ವಲ್ಪ ಹಿಂದಕ್ಕೆಳೆದ. ಅತಿಥಿಯು ಮೊಳಕಾಲು ಬಗ್ಗಿಸಿಕೊಂಡು ಟೇಬಲ್ಲಿಗೂ ಕುರ್ಚಿಗೂ ನಡುವೆ ನುಸುಳಿ ಜಾಗಮಾಡಿಕೊಳ್ಳುವಷ್ಟು ಅವಕಾಶ ಮಾತ್ರ ಇತ್ತು. ರಾಸ್ಕೋಲ್ನಿಕೋವ್ ಎಂಥ ಹೊತ್ತಿನಲ್ಲಿ ಮಾತಾಡಿದ್ದ ಅಂದರೆ ಬೇಡ ಅನ್ನುವ ಅವಕಾಶವೇ ಇರಲಿಲ್ಲ. ಅತಿಥಿಯು ತಡವರಿಸಿಕೊಂಡು, ಎಡವಿಕೊಂಡು ಹೋಗಿ ಕುರ್ಚಿಯ ಮೇಲೆ ಕೂತ. ಕಣ್ಣಲ್ಲಿ ಸಂಶಯ ತುಂಬಿಕೊಂಡು ರಾಸ್ಕೋಲ್ನಿಕೋವ್ ನನ್ನು ನೋಡಿದ.
ರಝುಮಿಖಿನ್ ದಡಬಡಿಸುತ್ತ, ‘ಮುಜುಗರ ಮಾಡಿಕೊಳ್ಳಬೇಡಿ. ರೋದ್ಯಾ ಹುಷಾರು ತಪ್ಪಿ ಐದು ದಿನ ಆಯಿತು. ಅದರಲ್ಲಿ ಮೂರು ದಿನ ಸನ್ನಿ ಹಿಡಿದಿತ್ತು. ಈಗ ಎಚ್ಚರವಾಗಿದ್ದಾನೆ. ಸ್ವಲ್ಪ ಊಟ ಕೂಡ ಮಾಡಿದ. ಇವರು ರೋದ್ಯಾನ ಡಾಕ್ಟರು. ಇದೇ ಈಗ ಚೆಕಪ್ ಮಾಡಿ ಮುಗಿಸಿದರು. ನಾನು ರೋದ್ಯಾನ ಗೆಳೆಯ, ನಾನೂ ಮಾಜಿ ಸ್ಟೂಡೆಂಟು. ಸದ್ಯಕ್ಕೆ ಇವನ ಸೇವೆ ಮಾಡುತ್ತಿರುವ ನರ್ಸು. ಹಾಗಾಗಿ ನಮ್ಮನ್ನ ಲೆಕ್ಕಕ್ಕೆ ಇಟ್ಟುಕೊಳ್ಳಬೇಡಿ, ಗೊಂದಲ ಮಾಡಿಕೊಳ್ಳಬೇಡಿ. ಏನು ಹೇಳಬೇಕೋ ಅದನ್ನ ಅವನಿಗೆ ಹೇಳಿ,’ ಅಂದ.
‘ಥ್ಯಾಂಕ್ಸ್ ನಾನು ಇಲ್ಲಿದ್ದರೆ ಮಾತಾಡಿಸಿದರೆ ಪೇಶೆಂಟಿಗೆ ತೊಂದರೆ ಆಗಲ್ಲವಾ?’ ಪೀಟರ್ ಪೆಟ್ರೋವಿಚ್ ಝೋಸ್ಸಿಮೋವ್ ನನ್ನು ಕೇಳಿದ.
‘ಇ-ಲ್ಲಾ. ನಿಮ್ಮಿಂದ ಅವನ ಮನಸ್ಸಿಗೆ ಸ್ವಲ್ಪ ಆರಾಮ ಅನ್ನಿಸಬಹುದು,’ ಝೋಸ್ಸಿಮೋವ್ ದನಿ ಎಳೆದು ಹೇಳಿದ, ಮತ್ತೆ ಆಕಳಿಸಿದ.
‘ಓಹೋ, ಬಹಳ ಹೊತ್ತಿನಿಂದ, ಇವತ್ತು ಬೆಳಗ್ಗೆಯಿಂದ ಎಚ್ಚರವಾಗಿದಾನೆ.’ ಅಂದ ರಝುಮಿಖಿನ್. ದೀರ್ಘ ಕಾಲದ ಪರಿಚಿತನ ಹಾಗೆ ಮಾತಾಡುವ ಅವನ ದನಿ, ಅವನಲ್ಲಿದ್ದ ನಿಷ್ಕಪಟ ಸರಳತೆ ಗಮನಿಸಿ ಪೀಟರ್ ಪೆಟ್ರೋವಿಚ್ ಧೈರ್ಯ ತಂದುಕೊಂಡ. ಅವನು ಯಾರನ್ನು ಬೀದಿಯ ಲಫಂಗ ಅಂದುಕೊಂಡಿದ್ದನೋ ಅವನು ವಿದ್ಯಾರ್ಥಿ ಎಂದು ತಿಳಿದದ್ದೂ ಈ ಸಮಾಧಾನಕ್ಕೆ ಕಾರಣವಾಗಿತ್ತು.
‘ನಿಮ್ಮ ತಾಯಿ…’ ಪೀಟರ್ ಪೆಟ್ರೋವಿಚ್ ಶುರುಮಾಡಿದ.
‘ಹ್ಞೂಂ,’ ರಾಸ್ಕೋಲ್ನಿಕೋವ್ ನ ದನಿ ಎಷ್ಟು ಗಟ್ಟಿಯಾಗಿತ್ತೆಂದರೆ ಪೀಟರ್ ಏನು ಅನ್ನುವ ಹಾಗೆ ಅವನನ್ನು ನೋಡಿದ.
‘ಏನಿಲ್ಲ, ಏನಿಲ್ಲ…ಮುಂದುವರೆಸಿ…’
ಪೀಟರ್ ಪೆಟ್ರೋವಿಚ್ ಭುಜ ಹಾರಿಸಿದ.
‘ನಿಮ್ಮ ತಾಯಿ ನಿನಗೆ ಪತ್ರ ಬರೆಯುವಾಗ ಅಲ್ಲೇ ಇದ್ದೆ. ಇಲ್ಲಿಗೆ ಬಂದ ಮೇಲೂ ಒಂದೆರಡು ದಿನ ಕಾದೆ. ನಾನು ಬರುವ ಹೊತ್ತಿಗೆ ಪತ್ರ ನಿನಗೆ ಸಿಕ್ಕಿರಲಿ, ನಿನಗ ಎಲ್ಲ ವಿಷಯ ತಿಳಿದಿರಲಿ ಅನ್ನುವುದು ನನ್ನ ಮನಸಿನಲ್ಲಿತ್ತು. ಆಶ್ಚರ್ಯ…’
‘ಗೊತ್ತು, ನನಗೆ ಗೊತ್ತು,’ ರಾಸ್ಕೋಲ್ನಿಕೋವ್ ತಟ್ಟನೆ ಅಂದ. ಅವನ ದನಿಯಲ್ಲಿ ಅಸಹನೆಯಿತ್ತು, ಅಸಮಾಧಾನವಿತ್ತು.
‘ನೀವೇ ಅಲ್ಲವಾ? ನನ್ನ ತಂಗಿಯ ಭಾವೀ ಪತಿ? ಗೊತ್ತು ನನಗೆ…ಅಷ್ಟು ಸಾಕು!’
ಪೀಟರ್ ಪೆಟ್ರೋವಿಚ್ ನೊಂದುಕೊಂಡ. ಆದರೂ ಏನೂ ಹೇಳದೆ ಸುಮ್ಮನಿದ್ದ. ಯಾಗೆ ಹೀಗೆ ಅನ್ನುವುದನ್ನ ಅರ್ಥ ಮಾಡಿಕೊಳ್ಳಲು ಹೆಣಗುತ್ತಿರುವುದು ಎದ್ದು ಕಾಣುತ್ತಿತ್ತು. ಒಂದು ನಿಮಿಷ ಯಾರೂ ಮಾತಾಡಲಿಲ್ಲ.
ಪೀಟರ್ ಪೆಟ್ರೊವಿಚ್ ಮಾತು ಶುರುಮಾಡಿದಾಗ ಅವನತ್ತ ಸ್ವಲ್ಪ ತಿರುಗಿದ್ದ ರಾಸ್ಕೋಲ್ನಿಕೋವ್ ಈಗ, ಇದ್ದಕಿದ್ದ ಹಾಗೆ ಏನೋ ವಿಶೇಷ ಕುತೂಹಲ ಹುಟ್ಟಿತೋ ಅನ್ನುವ ಹಾಗೆ, ಅವನನ್ನು ಮತ್ತೆ ತಲೆಯಿಂದ ಕಾಲಿನವರೆಗೆ ನೋಡಿದ—
ಇದುವರೆಗೆ ಅವನನ್ನು ಸರಿಯಾಗಿ ನೋಡೇ ಇರಲಿಲ್ಲವೋ, ಅವನಲ್ಲಿ ಏನೋ ಹೊಸ ಸಂಗತಿ ಕಂಡಿತೋ ಅನ್ನುವ ಹಾಗೆ ರಾಸ್ಕೋಲ್ನಿಕೋವ್ ದಿಂಬಿನಿಂದ ತಲೆಯನ್ನೂ ಸ್ವಲ್ಪ ಮೇಲೆತ್ತಿದ. ಪೀಟರ್ ಪೆಟ್ರೊವಿಚ್ ನಲ್ಲಿ ನಿಜವಾಗಲೂ ಎದ್ದು ಕಾಣುವಂಥದೇನೋ ಇತ್ತು. ಅಂದರೆ, ರಾಸ್ಕೋಲ್ನಿಕೋವ್ ಸುಮ್ಮನೆ ಹಾಗೇ ಹೇಳಿದ ‘ಭಾವೀ ಪತಿ’ ಅನ್ನುವ ಮಾತನ್ನು ಸಮರ್ಥಿಸುವ, ಗಮನ ಸೆಳೆಯುವಂಥ ಸಂಗತಿಗಳಿದ್ದವು. ಮೊದಲನೆಯದಾಗಿ, ಪೀಟರ್ ಪೆಟ್ರೋವಿಚ್ ನಗರಕ್ಕೆ ಬಂದವನೇ ಭಾವೀ ಪತ್ನಿಯ ಮನಸ್ಸು ಸೆಳೆಯುವ ಹಾಗೆ ಸಜ್ಜುಗೊಳ್ಳುವುದಕ್ಕೆ ಹಲವು ದಿನಗಳನ್ನು ಮೀಸಲಾಗಿಟ್ಟಿದ್ದ. ಹಾಗೆ ನೋಡಿದರೆ ಇದು ಮುಗ್ಧವಾದ, ಕ್ಷಮಾರ್ಹವಾದ ಕೆಲಸ. ತಾನು ಒಳ್ಳೆಯ ರೀತಿಯಲ್ಲಿ ಬದಲಾಗಿದ್ದೇನೆ ಎಂಬ ನಚ್ಚನೆಯ ಅರಿವು ಕೂಡ ಮನ್ನಿಸಬಹುದಾದದ್ದೇ. ‘ಭಾವೀ ಪತಿ’ ಎಂಬ ವರ್ಣನೆಗೆ ಪೀಟರ್ ಪೆಟ್ರೋವಿಚ್ ನಿಜವಾಗಲೂ ಅರ್ಹನಾಗಿದ್ದ.
ಅವನು ತೊಟ್ಟಿದ್ದ ಎಲ್ಲ ಬಟ್ಟೆಗಳೂ ಅದೇ ತಾನೇ ದರ್ಜಿಯಂಗಡಿಯಿಂದ ಬಂದಹಾಗೆ ಕಾಣುತ್ತಿದ್ದವು, ತುಂಬ ಚೆನ್ನಾಗಿಯೂ ಇದ್ದವು. ಅವು ತೀರ ತೀರ ಹೊಸವು, ‘ಇದೇ ಕಾರಣಕ್ಕೇ ಹೊಲಿಸಿಕೊಂಡವು’ ಅನ್ನುವುದನ್ನು ಸಾರಿ ಹೇಳುತಿದ್ದವು ಅಷ್ಟೆ. ಹೊಚ್ಚ ಹೊಸತಾಗಿದ್ದ ಹ್ಯಾಟು ಕೂಡ ಅದನ್ನೇ ನುಡಿಯುತ್ತಿತ್ತು. ಲೈಲಾಕ್ ಬಣ್ಣದ ಜೂವಿಯನ್ ಗ್ಲೌಸು ಕೂಡ ಅದನ್ನೇ ಪಲುಕುತ್ತಿತ್ತು. ಪೀಟರ್ ಪೆಟ್ರೊವಿಚ್ ಹ್ಯಾಟನ್ನು ಅತ್ಯಂತ ಅತಿ ಅತಿ ಹುಷಾರಾಗಿ ಹಿಡಿದುಕೊಂಡಿದ್ದ. ಹೊಸ ಬಟ್ಟೆಯನ್ನು ಅವನು ತೊಟ್ಟಿಲ್ಲ, ಬೇರೆಯವರಿಗಾಗಿ ಪ್ರದರ್ಶನಕ್ಕೆ ಇರಿಸಿದ್ದಾನೆ ಅನ್ನುವಂತಿತ್ತು. ಪೀಟರ್ ಪೆಟ್ರೊವಿಚ್ ತೊಟ್ಟಿದ್ದ ಬಟ್ಟೆಗಳಲ್ಲಿ ಯುವಕರು ಇಷ್ಟಪಡುವಂಥ ಬಣ್ಣಗಳೇ ಎದ್ದು ಕಾಣುತ್ತಿದ್ದವು.
ತೆಳು ಕಂದು ಬಣ್ಣದ ಬೇಸಗೆ ಜಾಕೆಟ್, ತೆಳು ಕಂದು ಬಣ್ಣದ ಪ್ಯಾಂಟು ತೊಟ್ಟಿದ್ದ. ಅದಕ್ಕೆ ಮ್ಯಾಚ್ ಆಗುವಂಥ ವೇಸ್ಟ್ ಕೋಟು, ಹೊಸತಾಗಿ ಖರೀದಿ ಮಾಡಿದ್ದ ಅಂಗಿ, ಪಿಂಕು ಬಣ್ಣದ ಗೆರೆಗಳಿರುವ ತೆಳು ಬಣ್ಣದ ಕ್ಯಾಮ್‍ಬ್ರಿಕ್ ಟೈ ಧರಿಸಿದ್ದ. ಎಲ್ಲಕ್ಕಿಂತ ಮಿಗಿಲಾದ ವಿಶೇಷವೆಂದರೆ ಈ ಅಲಂಕಾರ ಪೀಟರ್ ಪೆಟ್ರೋವಿಚ್ ಗೆ ಹೊಂದುತ್ತಿದ್ದವು. ಫ್ರೆಶ್ ಆಗಿ ಕಾಣುತ್ತಿದ್ದ, ಚಂದವಾಗಿ ಕೂಡ ಇದ್ದ ಅವನ ಮುಖವನ್ನು ನೋಡಿದರೆ ಅವನಿಗೆ ನಿಜವಾಗಿ ನಲವತ್ತೈದು ವರ್ಷವಾಗಿದ್ದರೂ ‘ಅಷ್ಟೊಂದು ವಯಸ್ಸಾಗಿಲ್ಲ’ ಅನಿಸುತ್ತಿತ್ತು. ಎರಡೂ ಕೆನ್ನೆಗಳ ಮೇಲಿದ್ದ ಮಟನ್ ಚಾಪ್ ಆಕಾರದ ದಟ್ಟವಾದ ಕೆನ್ನೆಗೂದಲು ನಯವಾಗಿ ಕ್ಷೌರ ಮಾಡಿಕೊಂಡ ಮುಖಕ್ಕೆ ಒಪ್ಪುವ ಹಾಗಿದ್ದವು. ಎಲ್ಲೋ ಒಂದೊಂದು ನೆರೆಗೂದಲಿದ್ದ ಕೇಶರಾಶಿಯನ್ನು ಕ್ಷೌರಿಕ ಬಹಳ ಅಚ್ಚುಕಟ್ಟಾಗಿ ಒತ್ತಿ ಬಾಚಿದ್ದ. ಗುಂಗುರು ಕೂದಲನ್ನು ಹಾಗೆ ಬಾಚಿದರೆ ಎಷ್ಟೋ ಸಾರಿ ಜರ್ಮನರ, ವಿದೇಶೀಯರ ಮುಖದ ಹಾಗೆ ಕಾಣುತ್ತ ಪೆದ್ದು ಕಳೆ ಬಂದುಬಿಡುತ್ತದೆ. ಆದರೆ ಪೆಟ್ರೊವಿಚ್ ನ ಕೇಶಾಲಂಕಾರ ಅವನ ಮುಖಕ್ಕೆ ಒಪ್ಪುತ್ತಿತ್ತು.
ಅವನನ್ನು ಕಂಡರೆ ಅಸಹ್ಯವೋ ಜುಗುಪ್ಸೆಯೋ ಹುಟ್ಟಿದರೆ ಅದಕ್ಕೆ ಅವನ ಉಡುಪೂ ಕಾರಣವಲ್ಲ, ಮುಖಲಕ್ಷಣವೂ ಅಲ್ಲ, ಬೇರೆಯದೇ ಕಾರಣವಿರಬೇಕು ಅನಿಸುತ್ತಿತ್ತು. ಪೀಟರ್ ಪೆಟ್ರೊವಿಚ್ ನನ್ನು ದುರುದುರು ನೋಡಿದ ರಾಸ್ಕೋಲ್ನಿಕೋವ್ ಕಹಿಯಾದ ನಗು ನಕ್ಕು, ಮತ್ತೆ ದಿಂಬಿನ ಮೇಲೆ ತಲೆ ಇರಿಸಿ, ಮತ್ತೆ ಚಾವಣಿ ನೋಡುತ್ತ ಇದ್ದುಬಿಟ್ಟ.. ಪೀಟರ್ ಪೆಟ್ರೊವಿಚ್ ಕಷ್ಟಪಟ್ಟು ಸಿಟ್ಟು ತಡೆದುಕೊಂಡ. ರಾಸ್ಕೋಲ್ನಿಕೋವ್ ನ ವಿಚಿತ್ರ ವರ್ತನೆಯನ್ನು ಸದ್ಯಕ್ಕೆ ನಿರ್ಲಕ್ಷಿಸುವುದು ಸರಿ ಅಂದುಕೊಂಡ.
‘ನಿಮ್ಮನ್ನು ಈ ಸ್ಥಿತಿಯಲ್ಲಿ ನೋಡುವುದಕ್ಕೆ ಬಹಳ, ಬಹಳ ಬೇಸರವಾಗುತ್ತದೆ. ನಿಮಗೆ ಸ್ವಸ್ಥವಿಲ್ಲ ಅನ್ನುವುದು ಗೊತ್ತಿದ್ದರೆ ನಾನು ಇನ್ನೂ ಬೇಗನೆ ಬರುತ್ತಿದ್ದೆ. ಏನೇನೋ ಕೆಲಸ, ಗೊತ್ತಲ್ಲ. ನಾನು ಲಾಯರು. ಸೆನೆಟಿನ ಮುಂದೆ ಬಹಳ ಮುಖ್ಯವಾದ ಕೇಸು ಬರುವುದಿದೆ. ಇಂಥವು ಇನ್ನೂ ಎಷ್ಟು ಕೆಲಸ ಇರುತ್ತವೋ ನೀವೇ ಊಹೆ ಮಾಡಿ. ಹೋಗಬೇಕು ನಾನು…. ನಿಮ್ಮ ನಂಟರು, ಅಂದರೆ ನಿಮ್ಮ ತಾಯಿ ಮತ್ತು ತಂಗಿ, ಯಾವ ಕ್ಷಣವಾದರೂ ಬರಬಹುದು…’
ರಾಸ್ಕೋಲ್ನಿಕೋವ್ ಅಲುಗಾಡಿದ. ಏನೋ ಹೇಳಲು ಹೋದ, ಪೆಟ್ರೋವಿಚ್ ಮಾತು ನಿಲ್ಲಿಸಿ ಕಾದ. ರಾಸ್ಕೋಲ್ನಿಕೋವ್ ಸುಮ್ಮನಿದ್ದ. ಮುಖದಲ್ಲಿ ಕಳವಳವಿತ್ತು.
ಪೀಟರ್ ಪೆಟ್ರೊವಿಚ್ ಮಾತು ಮುಂದುವರೆಸಿದ.
‘…ಯಾವಾಗ ಬೇಕಾದರೂ ಬರಬಹುದು. ಅವರಿಗಾಗಿ ಸದ್ಯಕ್ಕೆ ಒಂದು ಅಪಾರ್ಟ್‍ಮೆಂಟ್ ಗೊತ್ತು ಮಾಡಿದೇನೆ…’
‘ಎಲ್ಲಿ?’ ಕ್ಷೀಣವಾದ ದನಿಯಲ್ಲಿ ರಾಸ್ಕೋಲ್ನಿಕೋವ್ ಕೇಳಿದ.
‘ಇಲ್ಲೇ ಹತ್ತಿರ, ಬಕಲೇವ್ ಹೌಸ್…’
‘ಅದು ವೋಝ್ನೆಸೆನ್ಸ್ಕಿಯಲ್ಲಿದೆ,’ ರಝುಮಿಖಿನ್ ಬಾಯಿ ಹಾಕಿದ. ‘ಪೂರಾ ಸಜ್ಜಾದ ಕೋಣೆಗಳು ಎರಡು ಮಹಡಿಗಳಲ್ಲಿವೆ. ಯುಶಿನ್ ಅಂತ ವ್ಯಾಪಾರಿ ಇದಾನಲ್ಲ ಅವನ ಕಟ್ಟಡ ಅದು. ಒಂದು ಸಾರಿ ಅಲ್ಲಿಗೆ ಹೋಗಿದ್ದೆ,’ ಅಂದ.
‘ಹೌದು, ಪೂರಾ ಸಜ್ಜಾಗಿರುವ ಕೋಣೆಗಳು, ಇವರೇ…’
‘ತೀರ ಕೆಟ್ಟ, ಕೊಳಕು ಜಾಗ. ಗುಮಾನಿ ಬರುವಂಥ ಜಾಗ. ಅಲ್ಲಿ ಏನೇನೋ ನಡೆದಿದೆ. ಅಲ್ಲಿರುವ ಬಾಡಿಗೆದಾರರು ಎಂಥವರೋ, ಸೈತಾನನಿಗೇ ಗೊತ್ತು….! ಯಾವುದೋ ಕೆಟ್ಟ ಗಳಿಗೆಯಲ್ಲಿ ಒಂದು ಸಾರಿ ಅಲ್ಲಿಗೆ ಹೊಗಿದ್ದೆ. ತುಂಬ ಚೀಪ್ ಜಾಗ.’
‘ನಾನು ಈ ಊರಿಗೆ ಹೊಸಬ, ಅದಕ್ಕೇ ಆ ಜಾಗದ ಬಗ್ಗೆ ಅಷ್ಟೊಂದು ಗೊತ್ತಿಲ್ಲ,’ ಪೀಟರ್ ಪೆಟ್ರೊವಿಚ್ ಸ್ವಲ್ಪ ರೇಗಿದ. ಆದರೂ ಅಲಿ ಎರಡು ಕ್ಲೀನಾಗಿರುವ ಪುಟ್ಟ ರೂಮುಗಳಿವೆ. ಅವರೇನು ಅಲ್ಲೇ ಇರಬೇಕಾ?… ಇನ್ನು ಮುಂದೆ ಅವರಿಗೆ ಬೇಕಾಗತ್ತೆ ಅಂತ ಇನ್ನೊಂದು ಒಳ್ಳೆಯ ಅಪಾರ್ಟ್‍ಮೆಂಟ್ ನೋಡಿದೇನೆ…’ ಅನ್ನುತ್ತ ರಾಸ್ಕೋಲ್ನಿಕೋವ್ ನತ್ತ ತಿರುಗಿದ. ‘ಅದಕ್ಕೆ ಈಗ ಸುಣ್ಣ ಬಣ್ಣ ನಡೀತಿದೆ. ಸದ್ಯಕ್ಕೆ ನಾನು ಇಲ್ಲೇ ಎರಡು ಹೆಜ್ಜೆ ದೂರದಲ್ಲಿರುವ ಲಿಪ್ಪರ್‍ವೆಶ್ಸೆಲ್ ಇದಾಳಲ್ಲ, ಆಕೆಯ ಅಪಾರ್ಟ್‍ಮೆಂಟಿನಲ್ಲಿದ್ದೇನೆ. ಅಲ್ಲಿ ನನ್ನ ಸ್ನೇಹಿತ, ಆಂದ್ರೆ ಸೆಮ್ಯೋವಿಚ್ ಲೆಬೆಝ್ಯತ್ನಿಕೋಯ್ ಇದಾನೆ. ನಿಮ್ಮ ತಾಯಿ, ತಂಗಿಗೆ ಆಗತದೆ ಅಂತ ಬಕಲೇವ್ ಹೌಸ್ ತೋರಿಸಿದ್ದು ಅವನೇ…’
‘ಲೆಬೆಝ್ಯತ್ನಿಕೋವ್?’ ಏನೋ ನೆನಪು ಮಾಡಿಕೊಳ್ಳುವವನ ಹಾಗೆ ರಾಸ್ಕೋಲ್ನಿಕೋವ್ ನಿಧಾನವಾಗಿ ಕೇಳಿದ.
‘ಹೌದು, ಅಂದ್ರೆ ಸೆಮ್ಯೊನೊವಿಚ್ ಲೆಬೊಝ್ಯತ್ನಿಕೋವ್. ಸಚಿವಾಲಯದಲ್ಲಿ ಗುಮಾಸ್ತ. ಅವನೇನಾದರೂ ಗೊತ್ತಾ?’
‘ಹ್ಞೂಂ… ಉಹ್ಞೂಂ,’ ಅಂದ ರಾಸ್ಕೋಲ್ನಿಕೋವ್.
ನೀವು ಕೇಳಿದ ರೀತಿ ನೋಡಿ ನಿಮಗೆ ಅವನು ಗೊತ್ತೇನೋ ಅಂದುಕೊಂಡೆ. ಒಂದು ಕಾಲದಲ್ಲಿ ನಾನು ಅವನ ಪೋಷಕನಾಗಿ ನೋಡಿಕೊಳ್ಳುತ್ತಿದ್ದೆ… ಬಹಳ ಒಳ್ಳೆಯ ಹುಡುಗ… ಈ ಕಾಲಕ್ಕೆ ಬೇಕಾದ್ದನ್ನೆಲ್ಲ ತಿಳಿದುಕೊಂಡಿದಾನೆ… ಯುವಕರನ್ನ ಭೇಟಿ ಮಾಡುವುದಕ್ಕೆ ನನಗೆ ಖುಷಿಯಾಗತ್ತೆ… ಯುವಕರಿಂದ ಹೊಸ ಹೊಸ ವಿಷಯ ತಿಳಿಯಬಹುದು,’ ಸುತ್ತಲೂ ಇದ್ದವರನ್ನೆಲ್ಲ ನೋಡುತ್ತ ಅಂದ.
‘ಅಂದರೆ? ಏನರ್ಥ?’ ರಝುಮಿಖಿನ್ ಕೇಳಿದ.
ಪ್ರಶ್ನೆ ಕೇಳಿದ್ದೇ ಖುಷಿ ಅನ್ನುವ ಹಾಗೆ ಪೀಟರ್ ಪೆಟ್ರೊವಿಚ್ ಹೇಳಿದ: ‘ಮುಖ್ಯವಾದ ವಿಷಯಗಳನ್ನ ಯುವಕರಿಂದ ತಿಳಿಯಬಹುದು, ನೋಡಿ, ಪೀಟರ್ಸ್‍ಬರ್ಗ್ ಗೆ ನಾನು ಕೊನೆಯ ಸಾರಿ ಬಂದದ್ದು ಹತ್ತು ವರ್ಷದ ಹಿಂದೆ. ಹೊಸ ವಿಚಾರಗಳು, ಸುಧಾರಣೆಗಳು ಇವೆಲ್ಲ ನಮ್ಮ ಹಳ್ಳಿ ಊರುಗಳನ್ನೂ ಮುಟ್ಟಿವೆ. ಆದರೂ ಎಲ್ಲವನ್ನೂ ಚೆನ್ನಾಗಿ ನೋಡಿ ತಿಳಿಯಬೇಕು ಅಂದರೆ ಪೀಟರ್ಸ್‍ಬರ್ಗ್ ನಲ್ಲೇ ಇರಬೇಕು. ಹೊಸ ತಲೆಮಾರಿನ ಯುವಕರನ್ನು ಗಮನಿಸುತ್ತಾ ಬಹಳ ವಿಷಯಗಳನ್ನು ತಿಳಿಯಬಹುದು ಅನ್ನತಕ್ಕಂಥಾದ್ದು ನನ್ನ ಅಭಿಪ್ರಾಯ. ನನಗೆ ಬಹಳ ಸಂತೋಷವಾಗಿದೆ ಅಂತ ಹೇಳುವುದಕ್ಕೆ ಇಷ್ಟಪಡತೇನೆ…’
‘ಸಂತೋಷ? ಯಾಕೆ?’
‘ಬಹಳ ದೊಡ್ಡ ಪ್ರಶ್ನೆ. ಸರಿಯಾಗಿ ಹೇಳುವುದು ಕಷ್ಟ. ಒಟ್ಟಾಗಿ ಹೇಳಬೇಕೆಂದರೆ, ಯುವಕರಲ್ಲಿ ಸ್ಪಷ್ಟವಾಗಿ ನೋಡುವ ಶಕ್ತಿ ಇದೆ, ವಿಮರ್ಶೆ ಮಾಡುವ ಬುದ್ಧಿ ಇದೆ, ಅಚ್ಚುಕಟ್ಟಾಟ್ಟಾಗಿ ಕೆಲಸ ಮಾಡುವ ಕೌಶಲ್ಯ ಇದೆ…’
‘ನಿಜ,’ ಅಂದ ಝೋಸ್ಸಿಮೋವ್.
‘ನಾನ್ಸೆನ್ಸ್, ಕೌಶಲ್ಯ ಇಲ್ಲ,’ ರಝುಮಿಖಿನ್ ಆ ಮಾತಿನ ಎಳೆಯನ್ನೇ ಹಿಡಿದು ಹೇಳಿದ. ‘ಕೌಶಲ್ಯ ಅನ್ನುವುದು ಕಷ್ಟಪಟ್ಟು ಸಂಪಾದಿಸಬೇಕಾದದ್ದು. ಅದೇನು ಆಕಾಶದಿಂದ ಬಿಟ್ಟಿಯಾಗಿ ಉದುರಲ್ಲ. ದುಡಿಯುವ ಕೌಶಲವನ್ನು ನಾವು ಇನ್ನೂರು ವರ್ಷದ ಹಿಂದೆಯೇ ಕಳೆದುಕೊಂಡುಬಿಟ್ಟೆವು.’ ಪೀಟರ್ ಪೆಟ್ರೋವಿಚ್ ನತ್ತ ತಿರುಗಿ, ‘ಕೆಲವು ವಿಚಾರಗಳು ಅಲ್ಲಲ್ಲಿ ಸುತ್ತಾಡುತ್ತಾ ಇರಬಹುದು, ಒಳ್ಳೆಯದನ್ನು ಮಾಡಬೇಕು ಅನ್ನುವ ಬಾಲಿಶವಾದ ಆಸೆಯೂ ಇರಬಹುದು. ಎಲ್ಲೆಲ್ಲೂ ಇರುವ ದುಷ್ಟರ ಮಧ್ಯೆ ಒಬ್ಬೊಬ್ಬ ಪ್ರಾಮಾಣಿಕರೂ ಇರಬಹುದು. ಆದರೆ, ಕೌಶಲ್ಯ ಇರುವವರು ಮಾತ್ರ ಈಗ ಇಲ್ಲವೇ ಇಲ್ಲ.’
‘ನಾನು ಒಪ್ಪಲ್ಲ ಈ ಮಾತನ್ನ,’ ಪೀಟರ್ ಪೆಟ್ರೊವಿಚ್ ಆಕ್ಷೇಪಣೆ ಎತ್ತಿದ. ಅವನಿಗೆ ಖುಷಿಯಾದದ್ದು ಎದ್ದು ಕಾಣುತ್ತಿತ್ತು. ‘ನಿಜ, ಅಲ್ಲಲ್ಲಿ ಆವೇಶ ಕಾಣತ್ತೆ, ತಪ್ಪುಗಳೂ ಆಗತವೆ. ಆವೇಶ ಅನ್ನುವುದು ಉತ್ಸಾಹದ ಸೂಚನೆ, ತಪ್ಪುಗಳಾಗುವುದಕ್ಕೆ ಹೊರಗಿನ ಪರಿಸ್ಥಿತಿಗಳು ಕಾರಣ. ಆಗಿರುವ ಕೆಲಸ ಕಡಮೆ, ಇನ್ನೂ ಹೆಚ್ಚು ಕೆಲಸ ಆಗಬೇಕು ಅಂದರೆ ಇನ್ನೂ ಹೆಚ್ಚು ಸಮಯ ಬೇಕು. ಸಂಪನ್ಮೂಲವನ್ನಂತೂ ಹೇಳುವುದೇ ಬೇಡ. ನನ್ನ ಕೇಳಿದರೆ ಏನೋ ಒಂದಷ್ಟು ಆಗಿದೆ, ಹೊಸ ವಿಚಾರಗಳು ಚಾಲ್ತಿಗೆ ಬಂದಿವೆ. ಕನಸುಗಳಲ್ಲಿ ಬೇರುಬಿಟ್ಟ ರೊಮಾಂಟಿಕ್ ಪುಸ್ತಕಗಳಿಗಿಂತ ಉಪಯುಕ್ತ ಪುಸ್ತಕಗಳು ಬಂದಿವೆ. ಸಾಹಿತ್ಯಕ್ಕೆ ಪ್ರಬುದ್ಧತೆಯ ಛಾಯೆ ಬಂದಿದೆ. ಜನಕ್ಕೆ ಅಪಾಯ ತರುವಂಥ ಸಂಪ್ರದಾಯಗಳನ್ನು ಲೇವಡಿ ಮಾಡುವುದಕ್ಕೆ ಸಾಧ್ಯವಾಗಿದೆ… ನಾವು ಭೂತಕಾಲಕ್ಕೆ ಮತ್ತೆ ಮರಳಲು ಆಗದ ಹಾಗೆ ಗತಕಾಲದಿಂದ ಬಿಡಿಸಿಕೊಂಡಿದೇವೆ. ಇದೊಂದೇ ಸಾಕಲ್ಲವೇ ನಮ್ಮ …ʼ
‘ಬಾಯಿಪಾಠ ಮಾಡಿದ ಭಾಷಣ!’ ರಾಸ್ಕೋಲ್ನಿಕೋವ್ ತಟಕ್ಕನೆ ಅಂದ.
‘ಏನಂದಿರಿ?’ ಪೀಟರ್ ಪೆಟ್ರೋವಿಚ್ ಕೇಳಿದ. ಅವನಿಗೆ ಆ ಮಾತು ಸರಿಯಾಗಿ ಕೇಳಿಸಿರಲಿಲ್ಲ. ಅವನ ಪ್ರಶ್ನೆಗೆ ಉತ್ತರ ಬರಲಿಲ್ಲ.
‘ನೀವು ಹೇಳಿದ್ದೆಲ್ಲ ಸರಿಯಾಗೇ ಇದೆ,’ ಝೋಸ್ಸಿಮೋವ್ ಮಾತು ಸೇರಿಸಿದ.
‘ಅಲ್ಲವಾ ಸಾರ್?’ ಪೀಟರ್ ಪೆಟ್ರೋವಿಚ್ ಗೆಳೆಯನ ಹಾಗೆ ಝೋಸ್ಸಿಮೋವ್ ನನ್ನು ನೋಡಿ, ರಝುಮಿಖಿನ್ ನ ಮೇಲೆ ದೃಷ್ಟಿ ನೆಟ್ಟು ಮುಂದುವರೆಸಿದ. ಈಗ ಅವನ ಮಾತಿನಲ್ಲಿ ಗೆಲುವಿನ, ಮೇಲರಿಮೆಯ ನೆರಳಿದ್ದವು. ‘ನೀನೂ ಒಪ್ಪಬೇಕು, (ಹುಡುಗಾ ಅನ್ನುವ ಮಾತು ನಾಲಗೆಯ ತುದಿಯವರೆಗೆ ಬಂದಿತ್ತು). ‘ಈಗ ಸಮೃದ್ಧಿ ಇದೆ, ಹೊಸ ಮಾತಿನಲ್ಲಿ ಹೇಳುವುದಾದರೆ ವಿಜ್ಞಾನ ಮತ್ತು ಆರ್ಥಿಕ ಪ್ರಗತಿಯಾಗಿದೆ…’
‘ಮಾಮೂಲಿ ಮಾತು.’
‘ಉಹ್ಞೂಂ. ಮಾಮೂಲಿ ಮಾತು ಅಲ್ಲ. ಈಗ ನೋಡಿ, ‘ನೆರೆಹೊರೆಯವರನ್ನು ಪ್ರೀತಿಸು’ ಎಂದು ನನಗೆ ಹೇಳಿಕೊಟ್ಟರು. ನಾನೂ ಹಾಗೇ ಮಾಡಿದೆ. ಅದಕ್ಕೆ ತೆತ್ತ ಬೆಲೆ?’ ಅನಗತ್ಯ ಆತುರ ತೋರುತ್ತ ಪೀಟರ್ ಪೆಟ್ರೊವಿಚ್ ಮಾತಾಡಿದ. ‘ಏನು ಸಿಕ್ಕಿತು ಅದರಿಂದ? ನನ್ನ ಉಡುವ ಬಟ್ಟೆ ಹರಿದು ಅರ್ಧವನ್ನು ನೆರೆಯವನೊಂದಿಗೆ ಹಂಚಿಕೊಂಡೆ. ಅದರಿಂದ ನಾವಿಬ್ಬರೂ ಅರೆಬೆತ್ತಲೆ ಇರುವ ಹಾಗಾಯಿತು. ಹತ್ತು ಮೊಲಗಳನ್ನ ಅಟ್ಟಿಸಿಕೊಂಡು ಹೋದರೆ ಒಂದೂ ಸಿಗಲ್ಲ ಅನ್ನುವ ರಶಿಯನ್ ಗಾದೆ ಇದೆಯಲ್ಲ ಹಾಗೆ. ವಿಜ್ಞಾನ ಹೇಳತ್ತೆ, ಎಲ್ಲಕ್ಕಿಂತ ಮೊದಲು ನಿನ್ನ ನೀನು ಪ್ರೀತಿಸಿಕೊಳ್ಳುವುದನ್ನು ಕಲಿ ಅಂತ. ಜಗತ್ತಿನಲ್ಲಿ ಎಲ್ಲವೂ ಸ್ವಂತದ ಹಿತ ಅನ್ನುವುದರ ಮೇಲೇ ನಿಂತಿದೆ. ನಿಮ್ಮನ್ನ ನೀವು ಪ್ರೀತಿಸಿಕೊಂಡು, ನಿಮ್ಮ ವ್ಯವಹಾರ ನೀವು ಸರಿಯಾಗಿ ನೋಡಿಕೊಂಡರೆ ನಿಮ್ಮ ಉಡುವ ಬಟ್ಟೆ ನಿಮ್ಮ ಹತ್ತಿರವೇ ಇರತ್ತೆ, ಹರಿಯಲ್ಲ.
ಇನ್ನೊಂದು ಆರ್ಥಿಕ ಸತ್ಯವೇನು ಹೇಳುತ್ತದೆಯೆಂದರೆ ನಿಮ್ಮ ನಿಮ್ಮ ಸ್ವಂತದ ವ್ಯವಹಾರ ಅಚ್ಚುಕಟ್ಟಾಗಿಟ್ಟುಕೊಂಡರೆ ಸಮಾಜದಲ್ಲಿ ಎಲ್ಲರ ಉಡುವ ಬಟ್ಟೆಯೂ ಅವರವರ ಹತ್ತಿರವೇ ಇರತ್ತೆ. ತಳಪಾಯ ಭದ್ರವಾಗಿದ್ದರೆ ವ್ವವಹಾರ ವ್ಯವಸ್ಥಿತವಾಗಿದ್ದರೆ ಅದರಿಂದ ಎಲ್ಲರಿಗೂ ಒಳ್ಳೆಯದು. ಅಂದರೆ ನನ್ನ ಪಾಡನ್ನು ಮಾತ್ರ ನಾನು ಅಚ್ಚುಕಟ್ಟಾಗಿ ನೋಡಿಕೊಂಡರೆ ಅದರಿಂದ ಎಲ್ಲಾರಿಗೂ ಲಾಭವೇ ಆಗತ್ತೆ. ನನ್ನ ನೆರೆಯವನಿಗೂ ಉಡುವ ಹರುಕಲು ಅರ್ಧ ಬಟ್ಟೆಗಿಂತ ಹೆಚ್ಚೇ ಸಿಗತ್ತೆ. ಸಹಜವಾಗಿಯೇ ಎಲ್ಲರಿಗೂ ಬೇಕಾದ್ದು ಸಿಗತ್ತೆ. ಯಾರೋ ಒಂದಿಬ್ಬರು ಔದಾರ್ಯ ತೋರಿಸಿದರೆ ಏನೂ ಆಗಲ್ಲ, ಸರಳವಾದ ಯೋಚನೆ. ಆದರೆ ಜಾರಿಗೆ ಬಂದೇ ಇಲ್ಲ. ಕನಸುಗಳನ್ನೇ ಉಣ್ಣುತ್ತ ಪರವಶವಾಗಿಬಿಟ್ಟಿದ್ದೇವೆ. ಈ ಸರಳ ಸತ್ಯ ತಿಳಿಯುವುದಕ್ಕೂ ಬಹಳ ಬುದ್ಧಿವಂತಿಕೆ ಬೇಕೇನೋ ಅನ್ನಿಸತ್ತೆ.’
‘ಕ್ಷಮಿಸಿ, ಅಷ್ಟೊಂದು ಜಾಣತನ ನನಗಿಲ್ಲ,’ ಅನ್ನುತ್ತ ರಾಸ್ಕೋಲ್ನಿಕೊವ್ ಒರಟಾಗಿ ಮಧ್ಯದಲ್ಲೆ ಬಾಯಿ ಹಾಕಿದ. ‘ಈ ವಿಚಾರ ಇಲ್ಲಿಗೆ ಬಿಡೋಣ. ಮಾತು ಶುರುಮಾಡಿದಾಗ ನನ್ನ ಮನಸಿನಲ್ಲಿ ಒಂದು ಉದ್ದೇಶ ಇತ್ತು. ನಿಮ್ಮನ್ನು ನೀವೇ ಮೆಚ್ಚಿಕೊಳ್ಳುವಂಥ ಈ ಹರಟೆ, ಕೊನೆಯಿರದ ಅವವೇ ಮಾತುಗಳ ಪ್ರವಾಹ, ಯಾವಾಗಲೂ ಅವೇ ಮಾತು, ಅವೇ ಮಾತು. ಕೇಳಿದರೆ ಜ್ಚರ ಬಂದ ಹಾಗೆ ತಲೆ ಬಿಸಿಯಾಗತ್ತೆ. ಇಂಥ ಮಾತು ಆಡುವುದಕ್ಕೆ ನನಗೆ ನಾಚಿಕೆ ಆಗತ್ತೆ, ದೇವರೇ! ನನ್ನೆದುರು ಇಂಥ ಮಾತು ಬೇರೆಯವರು ಆಡಿದರೂ ರೇಗತ್ತೆ. ನಿಮ್ಮ ತಿಳಿವಳಿಕೆಗೆ ತಕ್ಕ ಹಾಗೆ ನಿಮ್ಮನ್ನು ನೀವು ಸಮರ್ಥಿಸಿಕೊಳ್ಳಲು ಹೊರಟಿರಿ. ಅದು ಅಂಥ ದೊಡ್ಡ ತಪ್ಪಲ್ಲ, ಅದನ್ನ ನಾನು ಟೀಕೆ ಮಾಡುವವನೂ ಅಲ್ಲ. ನೀವು ಯಾರು, ಎಂಥವರು ಅನ್ನುವುದನ್ನ ತಿಳಿಯಬೇಕಾಗಿತ್ತು. ಯಾಕೆಂದರೆ ನಿಮಗೇ ಗೊತ್ತಲ್ಲಾ ಎಲ್ಲಾ ಥರದ ದಗಲ್ಬಾಜಿಗಳು ಸರ್ವರ ಹಿತ ಅನ್ನತಾರೆ, ತಮ್ಮ ಲಾಭ ಮಾತ್ರ ನೋಡಿಕೊಳ್ಳತಾರೆ. ಅವರು ಮುಟ್ಟಿದ್ದನ್ನೆಲ್ಲ ನಾಶಮಾಡಿ ಸರ್ವರ ಹಿತ ಅನ್ನುವ ಆದರ್ಶವನ್ನೇ ನಾಶಮಾಡಿದಾರೆ. ಅದಕ್ಕೇ ಸಾರ್, ಸಾಕು ಈ ವಿಷಯ!’
ದೀರ್ಘ ಕಾಲದ ಪರಿಚಿತನ ಹಾಗೆ ಮಾತಾಡುವ ಅವನ ದನಿ, ಅವನಲ್ಲಿದ್ದ ನಿಷ್ಕಪಟ ಸರಳತೆ ಗಮನಿಸಿ ಪೀಟರ್ ಪೆಟ್ರೋವಿಚ್ ಧೈರ್ಯ ತಂದುಕೊಂಡ. ಅವನು ಯಾರನ್ನು ಬೀದಿಯ ಲಫಂಗ ಅಂದುಕೊಂಡಿದ್ದನೋ ಅವನು ವಿದ್ಯಾರ್ಥಿ ಎಂದು ತಿಳಿದದ್ದೂ ಈ ಸಮಾಧಾನಕ್ಕೆ ಕಾರಣವಾಗಿತ್ತು.
‘ಸಾರ್, ಅಂದರೆ, ನಾನೂ ಕೂಡಾ ಹಾಗೇ ಅಂತ ನೀವು ಹೇಳುತ್ತಿದ್ದೀರಾ?’ ಪೀಟರ್ ಪೆಟ್ರೊವಿಚ್ ಗೌರವಕ್ಕೆ ಮುಕ್ಕು ಬಂದ ಹಾಗೆ ಮುಖ ಕಿವುಚಿಕೊಂಡು ಕೇಳಿದ.
‘ಓ, ದೇವರೇ, ದೇವರೇ… ಹೇಗೆ ಸಾಧ್ಯ… ಹಾಗಲ್ಲ ಸಾರ್… ಬಿಡಿ,’ ಅಂದು ರಝುಮಿಖಿನ್ ತಟಕ್ಕನೆ ಝೋಸ್ಸಿಮೋವ್ ನತ್ತ ತಿರುಗಿದ. ತಾವಿಬ್ಬರೂ ಮಾತಾಡುತ್ತಿದ್ದ ಹಳೆಯ ವಿಚಾರ ಮುಂದುವರೆಸಿದ.
ಆ ಮಾತನ್ನು ಹಾಗೇ ನಂಬುವುದು ಒಳ್ಳೆಯದು ಅನ್ನುವಷ್ಟು ಬುದ್ಧಿವಂತಿಕೆ ಪೀಟರ್ ಪೆಟ್ರೊವಿಚ್ ಗೆ ಇತ್ತು. ಹೇಗಿದ್ದರೂ ಇನ್ನೆರಡು ನಿಮಿಷದಲ್ಲಿ ಅಲ್ಲಿಂದ ಹೊರಡಬೇಕು ಅಂದುಕೊಂಡಿದ್ದ.
ರಾಸ್ಕೋಲ್ನಿಕೋವ್ ಕಡೆಗೆ ತಿರುಗಿ, ‘ಇದೀಗ ನಮ್ಮ ಪರಿಚಯವಾಗಿದೆ. ಸಂತೋಷ. ನಿಮ್ಮ ಆರೋಗ್ಯ ಸುಧಾರಿಸಿದ ಮೇಲೆ ನಾವು ಹತ್ತಿರದವರಾಗುತ್ತೇವೆ. ಸಂದರ್ಭ ಹೇಗೆ ಬರತ್ತೆ ನಿಮಗೇ ಗೊತ್ತಿದೆಯಲ್ಲ, ನಮ್ಮ ಸಂಬಂಧ ಗಟ್ಟಿಯಾಗಿ ಬೆಳೆಯಲಿ. ನಿಮ್ಮ ಆರೋಗ್ಯ ಸುಧಾರಿಸಲಿ ಅಂತ ನನ್ನ ಹಾರೈಕೆ,’ ಅಂದ.
ರಾಸ್ಕೋಲ್ನಿಕೋವ್ ಅವನತ್ತ ತಿರುಗಿಯೂ ನೋಡಲಿಲ್ಲ. ಪೀಟರ್ ಪೆಟ್ರೊವಿಚ್ ಕುರ್ಚಿಯಿಂದ ಎದ್ದ.
‘ಕೊಲೆಗಾರ ಖಂಡಿತವಾಗಿಯೂ ಅವಳ ಗಿರಾಕಿಗಳಲ್ಲಿ ಒಬ್ಬ!’ ಝೋಸ್ಸಿಮೋವ್ ಒತ್ತಿ ಹೇಳಿದ.
‘ಖಂಡಿತ ಅವಳ ಗಿರಾಕೀನೇ!’ ರಝುಮಿಖಿನ್ ಅವನ ಮಾತನ್ನ ತಾನೂ ಹೇಳಿದ. ‘ವಿಚಾರಣಾಧಿಕಾರಿ ಪೋರ್ಫಿರಿ ಇದ್ದಾನಲ್ಲಾ ಅವನು ಮನಸ್ಸಿನ ಯೋಚನೆಗಳನ್ನ ಯಾರಿಗೂ ಹೇಳಲ್ಲ. ಅವನು ಮಾತ್ರ ಆ ಮುದುಕಿಯ ಎಲ್ಲ ಗಿರಾಕಿಗಳನ್ನೂ ವಿಚಾರಣೆ ಮಾಡತಿದ್ದಾನೆ.’
‘ಅವಳ ಗಿರಾಕಿಗಳ ವಿಚಾರಣೆ ಮಾಡತಿದ್ದಾನಾ?’ ರಾಸ್ಕೋಲ್ನಿಕೋವ್ ಗಟ್ಟಿದನಿಯಲ್ಲಿ ಕೇಳಿದ.
‘ಹ್ಞೂಂ. ಅದಕ್ಕೇನೀಗ?’
‘ಏನಿಲ್ಲ.’
‘ಅವಳ ಗಿರಾಕಿಗಳನ್ನ ಹೇಗೆ ಪತ್ತೆ ಮಾಡತಾನೆ?’ ಝೋಸ್ಸಿಮೋವ್ ಕೇಳಿದ.
‘ಕೆಲವರನ್ನ ಕೋಚ್ ತೋರಿಸಿಕೊಟ್ಟ. ಅಡವಿಟ್ಟ ವಸ್ತುಗಳನ್ನು ಸುತ್ತಿಟ್ಟ ಪೇಪರಿನ ಮೇಲೆ ಅಡವಿಟ್ಟವರ ಹೆಸರನ್ನ ಮದುಕಿ ಬರೆದಿದ್ದಳು. ಅವಳ ಕೊಲೆ ಆಗಿದೆ ಅನ್ನುವ ಸುದ್ದಿ ತಿಳಿದು ಇನ್ನು ಕೆಲವು ಗಿರಾಕಿಗಳು ತಾವಾಗೇ ಬಂದು ಪೋಲೀಸರನ್ನ ನೋಡಿದರು.’
‘ಎಂಥಾ ಕುತಂತ್ರ, ಅನುಭವಸ್ಥ ಇರಬೇಕು! ಎಂಥಾ ಧೈರ್ಯ, ಎಂಥಾ ಗಟ್ಟಿ ಮನಸ್ಸು ಕೊಲೆಗಾರನದು!’
‘ಹೀಗಂದುಕೊಂಡೇ ನೀವೆಲ್ಲ ದಾರಿ ತಪ್ಪತೀರಿ. ಕೊಲೆಗಾರನಿಗೆ ಈ ಗುಣಗಳು ಒಂದೂ ಇಲ್ಲ ಅನ್ನುವುದು ಮುಖ್ಯ,’ ಎಂದ ರಝುಮಿಖಿನ್. ‘ಅವನು ಕುತಂತ್ರಿಯೂ ಅಲ್ಲ, ಅನುಭವಸ್ಥನೂ ಅಲ್ಲ. ಖಂಡಿತವಾಗಿ ಇದು ಅವನು ಮಾಡಿದ ಮೊದಲನೆಯ ಕೊಲೆ. ಲೆಕ್ಕಾಚಾರದ ಕುತಂತ್ರಿ ಕೊಲೆಗಾರನನ್ನು ಕಲ್ಪನೆ ಮಾಡಿಕೊಳ್ಳಿ, ಆಗ ನಡೆದದ್ದೆಲ್ಲಾ ಅಸಂಭವ ಅನ್ನಿಸತ್ತೆ. ಅನುಭವ ಇಲ್ಲದ ಮನುಷ್ಯ ಕೊಲೆ ಮಾಡಿದ ಅಂತ ಕಲ್ಪಿಸಿಕೊಳ್ಳಿ. ಆಗ ಅವನು ಕೇವಲ ಅಕಸ್ಮಾತ್ತಾಗಿ ಕೈಗೆ ಸಿಗದೆ ತಪ್ಪಿಸಿಕೊಂಡ ಅನ್ನುವುದು ಹೊಳೆಯತ್ತೆ. ಅಕಸ್ಮಾತ್ತಾಗಿ ಏನು ಬೇಕಾದರೂ ಆಗಬಹುದು! ದೇವರೇ! ಏನಾದರೂ ಅಡ್ಡಿ ಆಗಬಹುದು ಅಂತ ಕೂಡ ಅವನು ಯೋಚನೆ ಮಾಡಿಲ್ಲ. ಕೊಲೆ ಮಾಡಿ ಏನು ಮಾಡಿದ? ಹತ್ತೋ ಇಪ್ಪತ್ತೋ ರೂಬಲ್ ಬೆಲೆ ಬಾಳುವ ವಸ್ತುಗಳನ್ನ ಮುದುಕಿಯ ಪೆಟ್ಟಿಗೆಯಿಂದ ಎತ್ತಿಕೊಂಡ. ಜೇಬಿನಲ್ಲಿ ತುರುಕಿಕೊಂಡ. ಅವಳ ಬಟ್ಟೆ ಬರೆ ಇದ್ದ ಟ್ರಂಕು ತಡಕಾಡಿದ. ಆದರೆ, ಬೀರುವಿನಲ್ಲಿ, ಮೇಲಿನ ಡ್ರಾದಲ್ಲಿ ಹುಡುಕಿದ್ದರೆ ಸಾವಿರದೈನೂರು ರೂಬಲ್ ನಗದು ಸಿಕ್ಕಿರುತಿತ್ತು. ಕೊಲೆ ಮಾಡಿದ ಅಷ್ಟೆ, ಏನೂ ದೋಚಲಿಲ್ಲ, ಏನೂ ಗಿಟ್ಟಲಿಲ್ಲ! ಮೊದಲನೆಯ ಪ್ರಯತ್ನ. ಹೇಳ್ತೇನೆ ಕೇಳಿ, ಇದು ಅವನು ಮಾಡಿದ ಮೊದಲನೆಯ ಕೊಲೆ. ಕೊಲೆ ಮಾಡುತಿದ್ದ ಹಾಗೇ ಭಯಬಿದ್ದ. ತಪ್ಪಿಸಿಕೊಂಡ. ಲೆಕ್ಕಾಚಾರ ಹಾಕಿ ಅಲ್ಲ, ಅಕಸ್ಮಾತ್ ತಪ್ಪಿಸಿಕೊಂಡ.’
‘ಮೊನ್ನೆ ಆಫೀಸರನ ವಿಧವೆಯ ಕೊಲೆಯಾಯಿತಲ್ಲ, ಅದರ ಬಗ್ಗೆ ಹೇಳತಾ ಇದೀರಿ ಅಲ್ಲವಾ?’ ಝೋಸ್ಸಿಮೋವ್ ನನ್ನು ಪೀಟರ್ ಪೆಟ್ರೊವಿಚ್ ಕೇಳಿದ. ಆಗಲೇ ಎದ್ದು ನಿಂತಿದ್ದ, ಹ್ಯಾಟು, ಗ್ಲೌಸುಗಳನ್ನು ಕೈಯಲ್ಲಿ ಹಿಡಿದಿದ್ದ. ಆದರೂ ಹೋಗುವುದಕ್ಕೆ ಮೊದಲು ಹತ್ತಾರು ಸುಭಾಷಿತಗಳನ್ನ ಹೇಳಬೇಕು, ಹೇಳಿ ಅವರ ಮನಸ್ಸಿನ ಮೇಲೆ ನನ್ನತನದ ಮುದ್ರೆ ಒತ್ತಬೇಕು ಜಾಣತನ ತೋರಿಸಿಕೊಳ್ಳಬೇಕು ಅನ್ನಿಸಿತ್ತು ಅವನಿಗೆ.
‘ಆ ಸುದ್ದಿ ಕೇಳಿದ್ದೀರಾ?’
‘ಕೇಳದೆ, ಮತ್ತೆ! ಇಲ್ಲೇ ಸುತ್ತಮುತ್ತಲಲ್ಲಿ ಆಗಿದ್ದು, ಅಲ್ಲವಾ?’
‘ವಿವರ ಗೊತ್ತಾ ನಿಮಗೆ?’
‘ಗೊತ್ತು ಅನ್ನಲಾರೆ. ಆದರೆ ಇದರಲ್ಲಿ ಒಂದು ವಿಚಾರ, ವಿಚಾರ ಅನ್ನುವುದಕ್ಕಿಂತ ಪ್ರಶ್ನೆ ಕುತೂಹಲ ಹುಟ್ಟಿಸಿದೆ. ಕೆಳವರ್ಗದವರಲ್ಲಿ ಕಳೆದ ಐದು ವರ್ಷಗಳಲ್ಲಿ ಅಪರಾಧ ಹೆಚ್ಚಿದೆ ಅನ್ನುವ ವಿಷಯ ಹೇಳುತ್ತಿಲ್ಲ. ಎಲ್ಲ ಕಡೆಯೂ ನಡೆಯುತ್ತಿರುವ ದರೋಡೆ, ಬೆಂಕಿ ಹಚ್ಚುವ ಕೆಲಸಗಳ ಬಗ್ಗೆಯೂ ಹೇಳುತ್ತಿಲ್ಲ. ಮೇಲು ವರ್ಗದವರಲ್ಲೂ ಅಪರಾಧ ಹೆಚ್ಚುತ್ತಿದೆ ಅನ್ನುವುದು ವಿಚಿತ್ರವಾಗಿ ಕಾಣತದೆ. ಅಲ್ಲೊಂದು ಕಡೆ ಯಾವುದೋ ಹೆದ್ದಾರಿಯಲ್ಲಿ ವಿದ್ಯಾರ್ಥಿಯೊಬ್ಬ ಅಂಚೆಗಾಡಿಯನ್ನು ಅಡ್ಡಗಟ್ಟಿ ದೋಚಿದ. ಇನ್ನೊಂದು ಕಡೆ ಸಮಾಜದ ಮುಂದುವರೆದ ಜನ ಖೋಟಾ ಬ್ಯಾಂಕ್ ನೋಟು ತಯಾರು ಮಾಡುತ್ತಿದ್ದರು. ಮತ್ತೆ ಮಾಸ್ಕೋದಲ್ಲಿ ಖೋಟಾ ಲಾಟರಿ ಟಿಕೆಟ್ಟು ತಯಾರು ಮಾಡಿ ಮಾರುತ್ತಿದ್ದ ಗುಂಪನ್ನೇ ಹಿಡಿದರು. ವಿಶ್ವ ಚರಿತ್ರೆಯ ಪ್ರಾಧ್ಯಾಪಕ ಆ ಗುಂಪಿನಲ್ಲಿ ಪ್ರಮುಖ ಆರೋಪಿ. ನಮ್ಮ ರಾಯಭಾರ ಕಛೇರಿಯ ಕಾರ್ಯದರ್ಶಿಯೊಬ್ಬ ವಿದೇಶದಲ್ಲಿ ಕೊಲೆಯಾದ, ಹಣವಲ್ಲದೆ ಇನ್ನೂ ನಿಗೂಢವಾದ ಕಾರಣಗಳೂ ಇದ್ದವು. ಈಗ ಲೇವಾದೇವಿ ಮಾಡುತ್ತಿದ್ದ ಮುದುಕಿಯನ್ನು ಅವಳ ಗಿರಾಕಿಯೇ ಕೊಲೆಮಾಡಿದ್ದಾನೆ. ಅವನು ಮೇಲ್ವರ್ಗದವನೇ ಇರಬೇಕು. ಯಾಕೆಂದರೆ ರೈತರು ಹೋಗಿ ಚಿನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರಲ್ಲ. ನಮ್ಮ ನಾಗರಿಕ ಸಮಾಜದಲ್ಲಿರುವ ಈ ಸ್ವಚ್ಛಂದ ಪ್ರವೃತ್ತಿಯನ್ನು ವಿವರಿಸುವುದು ಹೇಗೆ?
‘ಆರ್ಥಿಕ ಬದಲಾವಣೆಗಳು ಬಹಳ ಆಗಿವೆ…’ ಝೋಸ್ಸಿಮೋವ್ ಅಂದ.
‘ಅದರಿಂದ ಏನು ವಿವರಿಸಿದ ಹಾಗಾಯಿತು? ಕೌಶಲ್ಯದಿಂದ ಕೆಲಸ ಮಾಡುವ ಸ್ವಭಾವ ನಮ್ಮದಲ್ಲ. ಈ ಸಂಗತಿ ಮಾತ್ರ ಪರಿಸ್ಥಿತಿಯನ್ನು ವಿವರಿಸಬಲ್ಲುದು,’ ರಝುಮಿಖಿನ್ ಅಂದ.
‘ಅಂದರೆ, ಹೇಗೆ ಸಾರ್?’ ಪೀಟರ್ ಪೆಟ್ರೊವಿಚ್ ಕೇಳಿದ.
‘ನಿಮ್ಮ ಮಾಸ್ಕೋ ಅಧ್ಯಾಪಕ ಇದ್ದಾನಲ್ಲಾ, ಅವನನ್ನ ಯಾಕೆ ಹೀಗೆ ಖೋಟಾ ಲಾಟರಿ ಟಿಕೆಟ್ಟು ಮಾಡುವುದಕ್ಕೆ ಹೋದೆ ಎಂದು ಕೇಳಿದರೆ ‘ಒಂದಲ್ಲ ಒಂದು ದಾರಿ ಹಿಡಿದು ಎಲ್ಲರೂ ಸಾಹುಕಾರರಾಗುತ್ತಿದ್ದಾರೆ. ನಾನೂ ಬೇಗ ಶ್ರೀಮಂತ ಆಗಬೇಕು ಅನಿಸಿತು,’ ಅನ್ನುವ ಉತ್ತರ ಕೊಟ್ಟ. ಇದೇ ಮಾತು ಬಳಸಿದನೋ, ಗೊತ್ತಿಲ್ಲ. ಮಾತಿನ ಅರ್ಥ ಗಮನಿಸಿ. ಬೇಗ, ಶ್ರಮಪಡದೆ, ದುಡಿಯದೆ ದುಡ್ಡು ಮಾಡಬೇಕು ಅನ್ನುವ ಅರ್ಥ ಮಾತ್ರ ಗಮನಿಸಬೇಕು. ಎಲ್ಲಾನೂ ಸುಮ್ಮನೆ ಪಡೆದು ಪಡೆದು ಅಭ್ಯಾಸವಾಗಿದೆ ನಮಗೆ. ಬೇರೆಯವರ ಕಾಲಮೇಲೆ ನಿಲ್ಲುವುದು, ನಮಗಾಗಿ ಬೇರೆ ಯಾರೋ ತುತ್ತನ್ನು ಅಗಿದುಕೊಡುವುದು, ಪುಗಸಟ್ಟೆ ಪಡೆದುಕೊಳ್ಳುವುದು… ಹೊತ್ತು ಬಂದಾಗ ಒಬ್ಬೊಬ್ಬರೂ ತಮ್ಮ ಸ್ವಭಾವ ತೋರಿಸಿಕೊಂಡರು…’
‘ನೈತಿಕತೆ? ಕಾನೂನು?’
‘ಚಿಂತೆ ಯಾಕೆ ಮಾಡುತ್ತೀಯ? ಎಲ್ಲ ನಿನ್ನ ಸಿದ್ಧಾಂತದ ಹಾಗೇ ನಡೆಯುತ್ತಿದೆಯಲ್ಲಾ!’ ರಾಸ್ಕೋಲ್ನಿಕೋವ್ ಅನಿರೀಕ್ಷಿತವಾಗಿ ಮಾತಾಡಿದ.
‘ನನ್ನ ಸಿದ್ಧಾಂತದ ಹಾಗೆ ಅಂದರೆ, ಹೇಗೆ?’ ಪೀಟರ್ ಪೆಟ್ರೊವಿಚ್ ಕೇಳಿದ.
‘ನೀನು ಉಪದೇಶ ಮಾಡುತ್ತಿದ್ದ ಸಿದ್ಧಾಂತದ ಫಲಿತಾಂಶ ಏನೆಂದರೆ ಯಾರು ಬೇಕಾದರೂ ಯಾರನ್ನಾದರೂ ಕೊಲ್ಲುತ್ತ ಹೋಗಬಹುದು.’
‘ಅಯ್ಯೋ ದೇವರೇ!’ ಅಂದ ಪೀಟರ್ ಪೆಟ್ರೊವಿಚ್.
‘ಅದು ಹಾಗಲ್ಲ,’ ಅಂದ ಝೋಸ್ಸಿಮೋವ್.
ರಾಸ್ಕೋಲ್ನಿಕೋವ್ ನ ಮುಖ ಬಿಳಿಚಿತ್ತು. ತುಟಿ ನಡುಗುತ್ತಿತ್ತು. ಏದುಸಿರು ಬಿಡುತ್ತಿದ್ದ.
‘ಎಲ್ಲಾದಕ್ಕೂ ಇತಿಮಿತಿ ಇರತ್ತೆ,’ ಪೀಟರ್ ಪೆಟ್ರೊವಿಚ್ ಹಟಮಾರಿಯ ಹಾಗೆ ಮುಂದುವರೆಸಿದ. ‘ಆರ್ಥಿಕ ವಿಚಾರ ಅನ್ನುವುದು ಕೊಲೆಗೆ ನೀಡುವ ಆಹ್ವಾನವಲ್ಲ. ಸುಮ್ಮನೆ ಏನೇನೋ ಅಂದುಕೊಂಡರೆ…’ ಅಂದ.
ರಾಸ್ಕೋಲ್ನಿಕೋವ್ ಮತ್ತೆ ಮಾತಿನ ನಡುವೆಯೇ ಬಾಯಿ ಹಾಕಿದ. ಕೋಪ ಬಂದಿತ್ತು. ದನಿ ನಡುಗುತ್ತಿತ್ತು. ಸಿಟ್ಟಿನ ಖುಷಿಯನ್ನು ಅನುಭವಿಸುತ್ತಿದ್ದ. ‘ನಿಮ್ಮ ಭಾವೀ ಪತ್ನಿ ಮದುವೆಗೆ ಒಪ್ಪಿಗೆ ಕೊಟ್ಟ ತಕ್ಷಣ ನೀವು ಹೇಳಿದಿರಂತೆ… ಬಡ ಹುಡುಗಿ ಸಿಕ್ಕಿದ್ದು ಒಳ್ಳೆಯದಾಯಿತು… ಬಡತನದಿಂದ ಅವಳನ್ನು ಮೇಲೆತ್ತುವ ಅವಕಾಶ ಸಿಕ್ಕಿತು… ಅವಳ ಮೇಲೆ ಯಜಮಾನಿಕೆ ನಡೆಸಬಹುದು, ನಿನ್ನ ಬಡತನದಿಂದ ಒಳ್ಳೆಯ ಸ್ಥಿತಿಗೆ ತಂದೆ ಅಂತ ಮತ್ತೆ ಮತ್ತೆ ಅವಳಿಗೆ ನೆನಪು ಮಾಡುತ್ತಿರಬಹದು… ಅಂದಿರಂತೆ, ನಿಜವೇ?’
ಪೀಟರ್ ಪೆಟ್ರೊವಿಚ್ ನ ಮುಖ ಕೆಂಪಾಗಿ, ಗೊಂದಲಗೊಂಡು, ರೇಗಿ, ಜೋರಾಗಿ ಚೀರಿದ: ‘ನೋಡಿ, ಇವರೇ! ಹೀಗೆ ಮಾತನ್ನು ತಿರುಚಿ ವಿಕಾರ ಮಾಡುತ್ತಾರಾ ಯಾರಾದರೂ! ನೀವು ಕೇಳಿದ ಗಾಳಿಮಾತು, ಅಥವಾ ನೀವು ಕೇಳಿದ ಮಾತನ್ನ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ನಿಮ್ಮದು ತಲೆ ಬುಡ ಇಲ್ಲದ ಕಲ್ಪನೆ. ನಿಮ್ಮ ತಾಯಿಯಲ್ಲಿ ಅದ್ಭುತವಾದ ಗುಣಗಳಿದ್ದರೂ ಅವರು ಪರವಶವಾಗಿ ಮೈಮರೆಯುವ, ರೊಮ್ಯಾಂಟಿಕ್ ಮನಸ್ಸಿನವರು ಅಂತ ನನಗನ್ನಿಸಿತ್ತು. ನನ್ನ ಮಾತನ್ನ ಮಾತಾಡಿದ ಸಂದರ್ಭವನ್ನ ಹೀಗೆ ನಿಮಗೆ ಹೇಳುತ್ತಾರೆ ಅನ್ನುವ ದೂರದ ಕಲ್ಪನೆ ಕೂಡ ಬಂದಿರಲಿಲ್ಲ. ಅಲ್ಲದೆ… ಅಲ್ಲದೆ…’
ರಾಸ್ಕೋಲ್ನಿಕೋವ್ ದಡಕ್ಕನೆ ಎದ್ದು ಕೂರುತ್ತ, ‘ಗೊತ್ತಾ… ಗೊತ್ತಾ…?’ ಎಂದು ಚೀರಿದ.
‘ಏನು, ಏನು?’ ಪೀಟರ್ ಪೆಟ್ರೊವಿಚ್ ತೊದಲಿದ. ಅನ್ಯಾಯಕ್ಕೆ ಒಳಗಾದವನ ಹಾಗೆ, ಹಟಮಾಡುವವನ ಹಾಗೆ ಅಲ್ಲೇ ನಿಂತ. ಹಲವು ಕ್ಷಣಗಳ ಕಾಲ ಮೌನ ನೆಲೆಸಿತ್ತು.
‘ಎಷ್ಟು ಧೈರ್ಯ… ಇನ್ನೊಂದು ಸಾರಿ ಏನಾದರೂ… ಏನಾದರೂ ನಮ್ಮ ತಾಯಿಯ ಮಾತು ತೆಗೆದರೆ… ಒಂದೇ ಒಂದು ಮಾತಾಡಿದರೆ… ನಿನ್ನ ಮೆಟ್ಟಿಲ ಮೇಲಿಂದ ದಬ್ಬಿಬಿಡತೇನೆ, ಹುಷಾರ್!’ ಅಂದ ರಾಸ್ಕೋಲ್ನಿಕೋವ್.
‘ಮೈಯ್ಯ ಮೇಲೆ ದೆವ್ವ ಬಂದಿದೆಯಾ!’ ರಝುಮಿಖಿನ್ ಚೀರಿದ.
‘ಹೀಗೋ ಸಮಾಚಾರ!’ ಪೀಟರ್ ಪೆಟ್ರೊವಿಚ್ ತುಟಿ ಕಚ್ಚಿಕೊಂಡ. ಅವನು ಮನಸ್ಸು ಬಿಗಿ ಹಿಡಿದು ಸ್ಪಷ್ಟವಾಗಿ ಮಾತಾಡಿದರೂ ಏದುಸಿರು ಬರುತ್ತಿತ್ತು. ‘ಈ ರೂಮಿಗೆ ಕಾಲಿಟ್ಟಾಗಿನಿಂದಲೂ ನಿನಗೆ ನನ್ನ ಕಂಡರೆ ಆಗಲ್ಲ ಅನ್ನಿಸಿತ್ತು. ನಿನಗೆ ಕಾಯಿಲೆ, ನಿನ್ನ ಬಗ್ಗೆ ಇನ್ನೊಂದಷ್ಟು ತಿಳಿಯೋಣ ಅಂತ ಇಲ್ಲೇ ಕೂತೆ. ಕಾಯಿಲೆಯವರನ್ನ ತಪ್ಪು ತಿಳಿಯಬಾರದು, ಕ್ಷಮಿಸಬೇಕು, ಅಲ್ಲದೆ ನನ್ನ ಭಾವನೆಂಟ ಆಗುವವನು ಅಂದುಕೊಂಡೆ… ಆದರೆ… ಈಗ…’
‘ನನಗೆ ಕಾಯಿಲೆ ಇಲ್ಲಾ!’ ರಾಸ್ಲೋಲ್ನಿಕೋವ್ ಕೂಗಿದ.
‘ಹಾಗಿದ್ದರೆ ಹೀಗೆ ಮಾತಾಡೋದು…;
‘ಏಯ್, ತೊಲಗಯ್ಯಾ ಇಲ್ಲಿಂದ..’
ಪೀಟರ್ ಪೆಟ್ರೊವಿಚ್ ತನ್ನ ಮಾತು ಮುಗಿಸದೆ ಆಗಲೇ ಹೊರಟಿದ್ದ. ಮತ್ತೊಮ್ಮೆ ಟೇಬಲ್ಲು-ಕುರ್ಚಿಗಳ ನಡುವೆ ನುಸುಳಿದ. ಈ ಬಾರಿ ರಝುಮಿಖಿನ್ ಪಕ್ಕಕ್ಕೆ ಸರಿದು ಅವನಿಗೆ ದಾರಿ ಮಾಡಿಕೊಟ್ಟ. ಯಾರನ್ನೂ ತಲೆ ಎತ್ತಿ ನೋಡದೆ, ಕಾಯಿಲೆಯವನನ್ನು ಕೆರಳಿಸಬೇಡ ಸುಮ್ಮನಿರು ಅನ್ನುವ ಹಾಗೆ ಸನ್ನೆ ಮಾಡುತಿದ್ದ ಝೋಸಿಮೋವ್ ನತ್ತಲೂ ನೋಡದೆ, ಪೀಟರ್ ಪೆಟ್ರೊವಿಚ್ ಹ್ಯಾಟನ್ನು ಹುಷಾರಾಗಿ ಭುಜದ ಮಟ್ಟಕ್ಕೆ ಎತ್ತಿ ಹಿಡಿದು, ಬಾಗಿಲು ದಾಟುವಾಗ ಬೆನ್ನೊಂದಿಷ್ಟು ಬಗ್ಗಿಸಿ ಆಚೆಗೆ ಕಾಲಿಟ್ಟ. ಅವನು ಅಪಮಾನದ ಹೊರೆ ಹೊತ್ತಿದ್ದಾನೆ ಅನ್ನುವ ಹಾಗೆ ಬೆನ್ನು ಸ್ವಲ್ಪ ಹೆಚ್ಚಾಗಿಯೇ ಬಗ್ಗಿತ್ತು.
‘ಆಗಲ್ಲಪ್ಪಾ ಆಗಲ್ಲ!’ ತಬ್ಬಿಬ್ಬಾದ ರಝುಮಿಖಿನ್ ತಲೆ ಕೊಡವಿದ.
‘ನನ್ನ ಪಾಡಿಗೆ ನನ್ನ ಬಿಟ್ಟು ಎಲ್ಲಾರೂ ಹೊರಟು ಹೋಗೀ!’ ರಾಸ್ಕೋಲ್ನಿಕೋವ್ ಉದ್ರಿಕ್ತನ ಹಾಗೆ ಚೀರಿದ. ‘ಒಂದು ನಿಮಿಷಾನೂ ಬಿಡದೆ ಹಿಂಸೆ ಕೊಡತಾ ಇದ್ದೀರ! ನಿಮ್ಮನ್ನ ಕಂಡರೆ ನನಗೇನೂ ಭಯ ಇಲ್ಲ! ಯಾರನ್ನ ಬಂದರೂ ಭಯ ಇಲ್ಲ! ಹೋಗಿ, ಎಲ್ಲಾರೂ ಹೋಗಿ! ನನ್ನ ಪಾಡಿಗೆ ನನ್ನ ಬಿಡಿ, ಒಬ್ಬನ್ನೇ ಬಿಡಿ, ಒಬ್ಬನ್ನೇ ಬಿಡಿ, ಒಬ್ಬನನ್ನೇ… ಇರಬೇಕು ನಾನು.’
‘ಬನ್ನಿ!’ ಎಂದು ಝೋಸ್ಸಿಮೋವ್ ರಾಝುಮಿಖಿನ್ ನನ್ನು ಕರೆದ.
‘ಅಯ್ಯೋ ದೇವರೇ! ಇವನನ್ನ ಹೀಗೇ ಬಿಟ್ಟು ಹೋಗುವುದೇ?’
ಬನ್ನಿ ಬನ್ನಿ ಎಂದು ಒತ್ತಾಯಮಾಡುತ್ತ ಝೋಸ್ಸಿಮೋವ್ ಆಚೆಗೆ ಕಾಲಿಟ್ಟ. ರಝುಮಿಕಿನ್ ಸ್ವಲ್ಪ ನಿಂತು ಯೋಚನೆ ಮಾಡಿದ, ಮತ್ತೆ ಅವನೂ ಹೊರಟ.
ಝೋಸ್ಸಿಮೋವ್ ಮೆಟ್ಟಿಲಿಳಿಯುತ್ತಾ ‘ಅವನು ಹೇಳಿದ ಹಾಗೆ ಕೇಳದಿದ್ದರೆ ಪರಿಸ್ಥಿತಿ ಇನ್ನೂ ಕೆಡಬಹುದು, ಅವನನ್ನ ರೇಗಿಸಬಾರು,’ ಅಂದ.
‘ಏನಾಗಿದೆ ಅವನಿಗೆ?’
‘ಅವನ ಆರೋಗ್ಯ ಸುಧಾರಿಸುವುದಕ್ಕೆ ಸಣ್ಣದೊಂದು ಶಾಕ್ ಆಗಬೇಕು. ಸ್ವಲ್ಪ ಹೊತ್ತಿಗೆ ಮೊದಲು ಚೆನ್ನಾಗಿದ್ದ. ಅವನ ಮನಸ್ಸಿನಲ್ಲಿ ಏನೋ ಭಾರವಾಗಿ ಕೂತು ಒತ್ತುತ್ತಾ ಇದೆ. ಕದಲಿಸಲಾಗದಷ್ಟು ಭಾರವಾದದ್ದು ಏನೋ ಇದೆ ಮನಸ್ಸಿನಲ್ಲಿ. ಅದನ್ನ ಹೊರಕ್ಕೆ ದೂಡುವುದಕ್ಕೆ ಯಾರಾದರೂ ಸಹಾಯಮಾಡಬೇಕು. ಖಂಡಿತ, ಇದೇ ಅವನಿಗೆ ಇರುವ ತೊಂದರೆ. ಮನಸ್ಸಿನಲ್ಲಿ ಏನೋ ಕೂತಿದೆ.’
‘ಈಗ ಬಂದಿದ್ದನಲ್ಲ, ಅವನ ವಿಚಾರವೇ ಇರಬೇಕು. ಈ ಪೀಟರ್ ಪೆಟ್ರೊವಿಚ್ ನನಗೆ ಗೊತ್ತಿರುವ ಹಾಗೆ ರೋದ್ಯಾನ ತಂಗಿಯನ್ನ ಮದುವೆ ಆಗತಿದ್ದಾನೆ. ರೋದ್ಯಾಗೆ ಕಾಯಿಲೆ ಆಗುವ ಮೊದಲು ಅವನಿಗೆ ಕಾಗದ ಬಂದಿತ್ತು…’
‘ಹೌದು. ಅವನು ಈಗಲೇ ಬರಬೇಕಾಗಿತ್ತಾ. ಎಲ್ಲ ಹಾಳು ಮಾಡಿದ. ಮತ್ತೆ ನೀನು ಗಮನಿಸಿದೆಯಾ? ರೋದ್ಯಾ ಎಲ್ಲಕ್ಕೂ ಉದಾಸೀನ, ಯಾವುದಕ್ಕೂ ಪ್ರತಿಕ್ರಿಯೆ ಇಲ್ಲ ಅನ್ನುವ ಹಾಗಿರತಾನೆ, ಅವನನ್ನ ಚುರುಕು ಮಾಡತಾ ಇದ್ದದ್ದು ಈ ಕೊಲೆಯ ವಿಷಯ ಒಂದೇ.’
‘ಹ್ಞೂಂ. ನಾನೂ ಗಮನಿಸಿದೆ. ಕೊಲೆಯ ವಿಷಯದಲ್ಲಿ ಅವನಿಗೆ ಆಸಕ್ತಿ ಇತ್ತು, ಭಯ ಇತ್ತು, ಕೊಲೆಯ ವಿಷಯ ಗೊತ್ತಾದ ದಿನ ಅವನು ಪೋಲೀಸ್ ಸ್ಟೇಶನ್ನಿನಲ್ಲೂ ಹೆದರಿಕೊಂಡು ಎಚ್ಚರ ತಪ್ಪಿದ್ದ.’ ಅಂದ ರಝುಮಿಖಿನ್.
‘ಇವತ್ತು ಸಾಯಂಕಾಲ ಈ ವಿಷಯ ನನಗೆ ವಿವರವಾಗಿ ಹೇಳು. ಆಮೇಲೆ ನಾನು ಒಂದೆರಡು ವಿಷಯ ನಿನಗೆ ಹೇಳತೇನೆ. ಈ ರೋದ್ಯಾ ಬಗ್ಗೆ ಆಸಕ್ತಿ ಹುಟ್ಟಿದೆ. ಇನ್ನೊಂದು ಗಂಟೆ ಆದಮೇಲೆ ಬಂದು ಮತ್ತೆ ಪರೀಕ್ಷೆ ಮಾಡಿ ನೋಡತೇನೆ…’
‘ಥ್ಯಾಂಕ್ಸ್. ಅವನ ಮೇಲೆ ಒಂದು ಕಣ್ಣಿಟ್ಟಿರುವುದಕ್ಕೆ ನಸ್ತಾಸ್ಯಾಗೆ ಹೇಳು ಅಂತ ಪಾಶೆನ್ಕಾಗೆ ಹೇಳತೇನೆ.’
ಅವರೆಲ್ಲ ಹೊರಟ ಮೇಲೆ ರಾಸ್ಕೋಲ್ನಿಕೋವ್, ನೋವು, ಅಸಹನೆ ತುಂಬಿಕೊಂಡು ನಸ್ತಾಸ್ಯಳನ್ನ ನೋಡಿದ. ಅವಳು ಇನ್ನೂ ಅಲ್ಲೇ ಇದ್ದಳು, ಹೋಗುವ ಸೂಚನೆಯೇ ಇರಲಿಲ್ಲ.
‘ಸ್ವಲ್ಪ ಟೀ ಕುಡೀತೀಯಾ ಈಗ?’ ಅಂದಳು.
‘ಆಮೇಲೆ! ಈಗ ನಿದ್ದೆ ಮಾಡಬೇಕು! ಹೋಗು ನೀನು’ ಅನ್ನುತ್ತ ಗೋಡೆಯ ಕಡೆ ತಿರುಗಿದ. ನಸ್ತಾಸ್ಯಾ ಹೊರಟು ಹೋದಳು.
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.