ಹಿಂಗೆಲ್ಲ ನಡೆದಾಗ ನನ್ನ ಅಣ್ಣ ಮಾತ್ರ ಅಂಥ ಮರಿಯನ್ನು ಅಕ್ಕರೆಯಿಂದ ಜೋಪಾನ ಮಾಡುತ್ತಿದ್ದ. ಹಕ್ಕಿ ಮರಿಗೆ ಇಂಕ್ ಫಿಲ್ಲರ್ ನಿಂದ ನೀರು, ಕುಡಿಸಿ, ಕಾಳು ತಿನ್ನಿಸಿ ಅದು ಸುಧಾರಿಸಿಕೊಳ್ಳುವವರೆಗೆ ಆರೈಕೆ ಮಾಡುತ್ತಿದ್ದ. ಅದು ಬೆಳೆದಂತೆ ಅದರ ಗರಿಗಳಿಗೆ ಚಂದನೇ ಬಣ್ಣ ಹಚ್ಚಿ… ನಮಗೆಲ್ಲ ತೋರಿಸಿ ಅದನ್ನು ಮುಚ್ಚಟೆಯಿಂದ ಬೆಳೆಸುತ್ತಿದ್ದ ಚಿತ್ರಣ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ವಿಶ್ವ ಗುಬ್ಬಚ್ಚಿಗಳ ದಿನದ ನಿಮಿತ್ತ ಕೆ.ಎಲ್. ಹೇಮಾವತಿ ಬರೆದ ಬರಹ ನಿಮ್ಮ ಓದಿಗೆ
ನಮ್ಮದೇ ನೆಲದ ಹಕ್ಕಿಗಳಂತೆ ಆಗಿಹೋಗಿರುವ ಗುಬ್ಬಚ್ಚಿಗಳು ಸರಿಸುಮಾರು ಎರಡು ಶತಮಾನಗಳ ಹಿಂದೆಯೇ ಆಂಗ್ಲರ ಮೂಲಕ ನಮ್ಮ ಭಾರತ ದೇಶಕ್ಕೆ ಬಂದವುವಾದರೂ ಇವುಗಳ ಮೂಲ ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ ದೇಶಗಳು. ಹಾಗೆ ಬಂದ ಹಿಡಿ ಗಾತ್ರದಷ್ಟೇ ಪುಟ್ಟದಾದ ಈ ಗುಬ್ಬಚ್ಚಿ ಸಂತತಿ ಏಷ್ಯಾದಲೆಲ್ಲ ವ್ಯಾಪಕವಾಗಿ ಹರಡಿ ಹೋದದ್ದು ಇತಿಹಾಸವಾದರೂ ಈಗ ಅವುಗಳ ಸಂಖ್ಯೆ ಕೇವಲ 15% ಕ್ಕೆ ಇಳಿದುಹೋಗಿರುವುದು ಮಾತ್ರ ನಮ್ಮ ದುರಂತ.
ಮನುಷ್ಯರ ಬದುಕಿನೊಂದಿಗೆ ತಮ್ಮ ಬದುಕನ್ನು ಹೊಂದಿಸಿಕೊಂಡು ಹಾರಾಡಿದ್ದ ಗುಬ್ಬಿ ತನ್ನ ಕುಪ್ಪಳಿಸುವ ಶೈಲಿಗೆ ಹೆಸರುವಾಸಿಯಾಗಿದ್ದರೂ ಈಗ ಅವುಗಳ ಸಂಖ್ಯೆ ಕುಂಟುತ್ತಾ, ಸಾಗುತ್ತಿರುವುದು ಮಾನವನ ಮಿತಿ ಮೀರಿದ ದುರಾಸೆ, ಕಬಳಿಸುವ ಹುನ್ನಾರದ ಗುಣದಿಂದಲೇ.
ಇಪ್ಪತ್ತು, ಮೂವತ್ತು ವರುಷಗಳ ಹಿಂದೆ ಬೆಂಗಳೂರಿನಂತಹ ನಗರದಲ್ಲೂ ತಮ್ಮ ನಿರಂತರ ಚಿವ್ ಗುಟ್ಟುವಿಕೆಯಿಂದ, ಮನೆ, ಮಾಡು, ಮರ-ಗಿಡಗಳಲ್ಲಿ ಗುಂಪು ಗುಂಪಾಗಿ ಚಿಲಿಪಿಲಿ ಕಲರವ ಎಬ್ಬಿಸಿ ಕೋಳಿಯ ಕೂಗುವಿಕೆ, ಕಾಗೆಗಳ ಅರಚುವಿಕೆಯನ್ನೂ ಮೀರಿಸಿ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರಿಗೂ ಮೆಚ್ಚುಗೆಯಾಗುತ್ತಿದ್ದ ಸರಳ ಸುಂದರ ಹಕ್ಕಿ ನಮ್ಮ ಗುಬ್ಬಿಯಾಗಿತ್ತು.
ಹಿಂದೆ, ನಾವು ಚಿಕ್ಕವರಿದ್ದಾಗ ಅಮ್ಮನೋ, ಅಜ್ಜಿಯೋ, ಮನೆ ಮುಂದಿನ ಅಂಗಳದಲ್ಲಿ ಅಕ್ಕಿ, ರಾಗಿ, ಗೋಧಿ, ಕಾಳುಗಳನ್ನು ಸ್ವಚ್ಛ ಮಾಡುತ್ತಲೋ, ಅಥವಾ ಸೊಗಡು ಅವರೇಕಾಯಿ ಸುಲಿಯುತ್ತಲೋ ಕೂತರೆ ಅದು ಹೇಗೋ ಅವುಗಳು ಸುಳಿವು ದೊರಕಿಸಿಕೊಂಡು ಪುರ್ ಎಂದು ಹಾರಿಬಂದು, ಆರಿಸಿ ಎಸೆದ ಒಡಕಲು ಧಾನ್ಯಗಳನ್ನೂ, ಅವರೇಕಾಯಿಯಲ್ಲಿ ಅವಿತ ಹುಳುಗಳನ್ನು ಎಗರಿಸಿಕೊಂಡು ಸ್ಪರ್ಧೆಗೆ ಬಿದ್ದಂತೆ ತಿಂದುಬಿಡುತ್ತಿದ್ದವು. ಹಾಗೆ ಬಂದ, ಮನುಷ್ಯಸ್ನೇಹಿ ಗುಬ್ಬಿಗಳನ್ನು ಕಂಡರೆ ಮಕ್ಕಳಿಗೂ ಹಿಗ್ಗಾಗುತ್ತಿತ್ತು.
ಅವುಗಳು ಜೀವನ ನಡೆಸುತ್ತಿದ್ದ ರೀತಿಯೇ ಚಂದವಿರುತ್ತಿತ್ತು. ಹೆಂಚಿನ ಮನೆಗಳ ನಡುವೆ ಇರುವ ಗಳುಗಳಲ್ಲಿ, ಗುಡಿಸಲು ಮನೆಗಳ ಬಿದಿರಿನ ಬೊಂಬುಗಳ ರಂದ್ರಗಳಲ್ಲಿ, ದೇವರ ಪಟಗಳ ಹಿಂದೆ, ಒಣ ಹುಲ್ಲು, ಕಡ್ಡಿ, ಎಲೆಗಳನ್ನು ಹುಡುಕಿ, ಬಾಯಲ್ಲಿ ಕಚ್ಚಿಕೊಂಡು ಬಂದು ಗೂಡು ನಿರ್ಮಿಸಿಕೊಂಡು ಸಂಸಾರ ಹೂಡಿ, ಮೊಟ್ಟೆ ಇಟ್ಟು, ತಮ್ಮ ಮರಿಗಳನ್ನು ಜೋಪಾನವಾಗಿ ಬೆಳೆಸುತ್ತಿದ್ದವು. ಆದರೆ ಇಷ್ಟೆಲ್ಲ ಕಷ್ಟಪಟ್ಟು ಬೆಳೆಸಿದ ಮರಿಗಳೇನಾದರೂ ಮೇಲಿನಿಂದ ಕೆಳಗೆ ಬಿದ್ದಾಗ, ಯಾರಾದರೂ ಅಯ್ಯೋ ಪಾಪ ಎನ್ನಿಸಿ ವಾಪಾಸ್ ಅವುಗಳ ಗೂಡಿಗೆ ಇಡಲಾರದೇ ಇದ್ದಾರೆಯೆ? ಹಾಗೆ ಇಟ್ಟ ಮರಿಗಳನ್ನು ಮಾತ್ರ ವಿಪರ್ಯಾಸವೆಂಬಂತೆ ಮನುಷ್ಯನ ವಾಸನೆ ತಗುಲಿಸಿಕೊಂಡ ಕಾರಣಕ್ಕೆ ಅವುಗಳ ತಂದೆ ತಾಯಿ ಗುಬ್ಬಿಗಳು ಸುತಾರಾಂ ಸ್ವೀಕರಿಸದೆ, ಯಾವುದೇ ಮುಲಾಜೂ ಇಲ್ಲದೇ ಗೂಡಿನಿಂದ ಹೊರ ದಬ್ಬುತ್ತಿದ್ದವು. ಇಲ್ಲವೇ ಕುಕ್ಕಿ ಕುಕ್ಕಿ ಕೊಂದು ಹಾಕುತ್ತಿಬಿಡುತ್ತಿದ್ದವು.
ಮನುಷ್ಯರ ಬದುಕಿನೊಂದಿಗೆ ತಮ್ಮ ಬದುಕನ್ನು ಹೊಂದಿಸಿಕೊಂಡು ಹಾರಾಡಿದ್ದ ಗುಬ್ಬಿ ತನ್ನ ಕುಪ್ಪಳಿಸುವ ಶೈಲಿಗೆ ಹೆಸರುವಾಸಿಯಾಗಿದ್ದರೂ ಈಗ ಅವುಗಳ ಸಂಖ್ಯೆ ಕುಂಟುತ್ತಾ, ಸಾಗುತ್ತಿರುವುದು ಮಾನವನ ಮಿತಿ ಮೀರಿದ ದುರಾಸೆ, ಕಬಳಿಸುವ ಹುನ್ನಾರದ ಗುಣದಿಂದಲೇ.
ಹಿಂಗೆಲ್ಲ ನಡೆದಾಗ ನನ್ನ ಅಣ್ಣ ಮಾತ್ರ ಅಂಥ ಮರಿಯನ್ನು ಅಕ್ಕರೆಯಿಂದ ಜೋಪಾನ ಮಾಡುತ್ತಿದ್ದ. ಹಕ್ಕಿ ಮರಿಗೆ ಇಂಕ್ ಫಿಲ್ಲರ್ ನಿಂದ ನೀರು, ಕುಡಿಸಿ, ಕಾಳು ತಿನ್ನಿಸಿ ಅದು ಸುಧಾರಿಸಿಕೊಳ್ಳುವವರೆಗೆ ಆರೈಕೆ ಮಾಡುತ್ತಿದ್ದ. ಅದು ಬೆಳೆದಂತೆ ಅದರ ಗರಿಗಳಿಗೆ ಚಂದನೇ ಬಣ್ಣ ಹಚ್ಚಿ… ನಮಗೆಲ್ಲ ತೋರಿಸಿ ಅದನ್ನು ಮುಚ್ಚಟೆಯಿಂದ ಬೆಳೆಸುತ್ತಿದ್ದ ಚಿತ್ರಣ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅದೂ ಅಲ್ಲದೇ ಪಕ್ಕದ ಮನೆಯ ಕರಿ ಬೆಕ್ಕು ಆಗಾಗ ನಮ್ಮ ಗುಬ್ಬಿ ಮರಿ ಮೇಲೆ ಕಣ್ಣು ಹಾಕೋದು ನೋಡಿ ಆ ಬೆಕ್ಕು ಕಂಡಾಗಲೆಲ್ಲ ಬೆದರಿಸಿ ಓಡಿಸುತ್ತಿದ್ದದ್ದಲ್ಲೆ ನೆನಪಿಗೆ ಬಂದರೇ ಈಗಲೂ ಜೀವಕ್ಕೆ ತಣ್ಣನೆ ಗಾಳಿ ಬೀಸಿದ ಅನುಭವವಾಗುತ್ತದೆ.
ಸಾಮಾನ್ಯವಾಗಿ ಗುಬ್ಬಿಗಳದ್ದು ವೇಗದ ಹಾರಾಟ. ಘಂಟೆಗೆ 38.5 ಕಿ. ಮೀ ಕ್ರಮಿಸಬಲ್ಲ ಸಾಮರ್ಥ್ಯವಿರುತ್ತದೆ. ಗಂಡು /ಹೆಣ್ಣು ಹಕ್ಕಿಗಳನ್ನು ಅವುಗಳ ರೆಕ್ಕೆಗಳ ಬಣ್ಣದಿಂದ ಗುರುತಿಸಬಹುದು. ಗಂಡು ಹಕ್ಕಿಗೆ ಕೆಂಪನೇ ಹಿಂಭಾಗವಿದ್ದು, ಹೆಣ್ಣು ಹಕ್ಕಿಯದ್ದು ಕಂದು ಹಿಂಭಾಗದೊಂದಿಗೆ ಬಿಳಿಯ ಪಟ್ಟೆಗಳ ದೇಹ. 14-16 ಸೆ. ಮೀ ಉದ್ದ. ಸರಿಸುಮಾರು 4 -5 ವರ್ಷ ಬದುಕುವ ಗುಬ್ಬಿ ಆಕ್ರಮಣಕಾರಿ ಗುಣ ಹೊಂದಿರುತ್ತದೆ.
ಗಂಡು ಹಕ್ಕಿ, ಚಳಿಗಾಲಗಳಲ್ಲಿ ಹೆಣ್ಣು ಹಕ್ಕಿಯ ಮೇಲೆ ಅಧಿಕಾರ ಚಲಾಯಿಸಿದರೆ, ಹೆಣ್ಣು ಹಕ್ಕಿ ಬೇಸಿಗೆಯಲ್ಲಿ ತನ್ನ ಅಧಿಕಾರವನ್ನು ಗಂಡಿನ ಮೇಲೆ ಹೇರುತ್ತದೆ. ಸೂರ್ಯಕಾಂತಿ ಬೀಜವನ್ನು ಇಷ್ಟಪಡುವ ಇವು ಮೂಲ ಭೂತವಾಗಿ ಸಸ್ಯಾಹಾರಿಗಳಾದರೂ ಧಾನ್ಯಗಳ ಕೊರತೆ ಇದ್ದಾಗ ಕೀಟ, ಸಣ್ಣಕ್ರಿಮಿಗಳನ್ನು ಹಿಡಿದು ಮುಕ್ಕುತ್ತವೆ. ನೀರಿನ ಒಳಗೂ ಈಜುವ ಚಾಕಚಕ್ಯತೆ ಹೊಂದಿರುವ ಇವು ಮರಳುಗಾಡು, ಹಿಮ ಪ್ರದೇಶಗಳಲ್ಲೂ ಜೀವಿಸಬಲ್ಲ ಕ್ಷಮತೆ ಹೊಂದಿವೆ.
ಪುರಾತನ ಗ್ರೀಕ್ ನಲ್ಲಿ ಗುಬ್ಬಿಯನ್ನು ಆಫ್ರೋಡೈಟ್ ದೇವತೆಗೆ ಸಮೀಕರಿಸಲಾಗಿದೆ…. ಅತಿಯಾದ ಮೋಹಕ್ಕೆ ಇದನ್ನು ಗ್ರೀಕ್ ನಲ್ಲಿ ಸಂಕೇತವಾಗಿ ಬಿಂಬಿಸುತ್ತಾರೆ. ಕವಿವರ್ಯರಾದ ಚೌಸರ್ ಮತ್ತು ಶೇಕ್ಸಪಿಯರ್ ತಮ್ಮ ಕೃತಿಗಳಲ್ಲಿ ಗುಬ್ಬಿಯನ್ನು ಹಲವು ರೀತಿಗಳಲ್ಲಿ ಚಿತ್ರಿಸಿದ್ದಾರೆ. ಹಾಗೆಯೇ ಅವುಗಳ ಚಟುವಟಿಕೆಯುಕ್ತ ಜೀವನ ಶೈಲಿ, ಕಠಿಣ ಶ್ರಮ, ಕಾರ್ಯತತ್ಪರತೆ, ಹಾಗು ಅತಿಯಾದ ಕಾಮಕ್ಕೂ ಗುಬ್ಬಿಯನ್ನು ಹೋಲಿಸಲಾಗುತ್ತದೆ.
ಇಂತಹ ಪುಟ್ಟ ಜೀವಿಯ ಮೇಲೆ ನಮ್ಮ ಆಧುನಿಕ ಶೈಲಿಯ ಜೀವನ ಕ್ರಮ ಹಲವು ರೀತಿಯಲ್ಲಿ ಮಾರಕವಾಗಿರುವ ಕಾರಣದಿಂದಲೇ, ಇಂದು ಎಲ್ಲೆಡೆ ಸಾಮಾನ್ಯವಾಗಿ ಹಾರಾಡುತ್ತಿದ್ದ ಗುಬ್ಬಚ್ಚಿಗಳು ಬೆಂಗಳೂರನ್ನು ಸಂಪೂರ್ಣವಾಗಿ ತೊರೆದು ಎಲ್ಲಿಗೋ ಹೋಗಿಬಿಟ್ಟಿವೆ. ನಮ್ಮಂತೆ ನಿಸರ್ಗದ ಒಂದು ಭಾಗವೇ ಆಗಿರುವ ಈ ಪುಟ್ಟ ಹಕ್ಕಿಯ ಮೇಲೆ ನಮ್ಮ ಬ್ರಹ್ಮಾಸ್ತ್ರ ಹೂಡದೆ, ಅವೂ ನಮ್ಮ ಜೊತೆಗೆ ಇನ್ನೂ ಹಲವಾರು ವರುಷಗಳ ಕಾಲ ಭೂಮಿಯ ಮೇಲೆ ಚಿವ್ ಗುಡುತ್ತ ಕುಪ್ಪಳಿಸಲು ಅವಕಾಶ ಕೊಟ್ಟರೆ, ನಮ್ಮ ಬಾಲ್ಯಗಳು ಸಂಪನ್ನಗೊಂಡಂತೆ, ನಮ್ಮ ಮುಂದಿನ ಪೀಳಿಗೆಯ ಮಕ್ಕಳ ಬಾಲ್ಯದಲ್ಲೂ ಇವು ತಂಗಾಳಿಯಂತೆ ಸುಳಿದಾಡಿ, ಅವರ ಬಾಲ್ಯವನ್ನೂ ಸಮೃದ್ಧಗೊಳಿಸಲು ಸಾಧ್ಯ.
ಆ ಕಾರಣಕ್ಕಾದರೂ ನಾವು ಇವುಗಳಿಗಾಗಿಯೇ ಇನ್ನೊಂದಷ್ಟು ಮರ, ಗಿಡ ಬೆಳೆಸೋಣ. ನದಿ ತೊರೆ, ಜಲ ಮೂಲಗಳನ್ನು ಮಾಲಿನ್ಯಗೊಳಿಸದೆ, ನಿಸರ್ಗವನ್ನು ಸ್ವಚ್ಛವಾಗಿಡುವುದಕ್ಕೂ, ಹೆಚ್ಚಿನ ಪ್ಲಾಸ್ಟಿಕ್ ಬಳಕೆಗೆ ಸ್ವನಿಯಂತ್ರಣ ಹೇರಿಕೊಂಡು, ಅಪಾರ್ಟ್ಮೆಂಟ್ ಕಲ್ಚರ್ ಗಳನ್ನು ದೂರವಿಟ್ಟು, ಹಕ್ಕಿಗಳು ನಗರದೆಡೆಗೆ ಮತ್ತೆ ಮುಖ ಮಾಡುವತ್ತ ಗಮನ ಹರಿಸೋಣ.
ಕೆಲಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದ ಹೇಮಾವತಿ ಸದ್ಯ ಗೃಹಿಣಿ. ಪಕ್ಷಿಗಳ ಬಗ್ಗೆ, ಬರವಣಿಗೆ, ಕ್ವಿಜ್ ನಲ್ಲಿ ಆಸಕ್ತಿ.